Monday, January 18, 2010

ಬೆಳದಿಂಗಳು......


ಬಾಂದಳದ ಚಂದಿರನಂತೆ
ಮನಸು ಒಂಟಿಯಾಗಿತ್ತು .....
ಹೊರಟಿದ್ದೆ ಬೆಳದಿಂಗಳ ಮೆರವಣಿಗೆಯಲ್ಲಿ ..
ಹಾದಿ ಬದಿಯ ಮರಗಳಿಂದ ನೆರಳು ಬೆಳಕಿನಾಟ....
ಪ್ರೇಮಿಗಳ ಪಿಸುಮಾತಿನಂತಿರುವ ಎಲೆಗಳ ಮರ್ಮರ ....
ಹರಿವನದಿಯಲ್ಲೊಂದು ತೇಲುವ ಬೆಳ್ಳಿ ಬಟ್ಟಲು...
ಅದು ಚಂದ್ರ ಬಿಂಬ ..!
ಕನಸಿನ ಮಾಯಲೋಕವಲ್ಲವಿದು ..
ವಾಸ್ತವದ ಪ್ರಕೃತಿ ವೈಭವ ..!!

ಮೂಲೆಯ ಗಂಗವ್ವನ ಜೋಪಡಿಗೂ
ಬೆಳ್ಳಿಯ ಬಣ್ಣ ..
ಸಾಹುಕಾರನ ಮೂರೂ ಅಂತಸ್ತಿನ ಬಂಗಲೆಯೂ
ರಜತಮಯ....
ಬೆಳದಿಂಗಳಿಗಿಲ್ಲವಲ್ಲ ಈ ತಾರತಮ್ಯ ...!!

ಕತ್ತೆತ್ತಿ ನೋಡಿದರೆ
ಬಾಂದಳದ ಚಿಕ್ಕ ಚುಕ್ಕಿಗಳೆಲ್ಲ ಮಾಯ...!
ಅಲ್ಲಲ್ಲಿ ಹರಡಿರುವ ..
ಬೆಳ್ಳಿ ಮೋಡಗಳ ತುಣುಕುಗಳು ಮಾತ್ರ ..

ಸಕಲ ಜೀವರಾಶಿಗೂ
ರಜತಮಯವಾಗುವ ರೋಮಾಂಚನ
ನಿಶೆಯ ಜಡತೆಯಲ್ಲಿ ಚೈತನ್ಯ ತುಂಬುವ ಈ ಬೆಳದಿಂಗಳು ..
ಇರಬಾರದೇ ಅನುದಿನವೂ ..
ಮನವೆಣಿಸುವುದು ಹೀಗೆ..

ಆದರೆ.....
ಆದರೆ ....
ಬಾನ ಸೀರೆಯಲಿ
ಬೆಳ್ಳಿ ತಾರೆಗಳ ಕಸೂತಿ ತುಂಬಲು
ಬರಲೇ ಬೇಕಲ್ಲ ಅಮಾವಾಸ್ಯೆಯು ...!

No comments:

Post a Comment