Wednesday, December 30, 2009

ಭಾವನೆಗಳ ನಡುವೆ... ಒಂದಿಷ್ಟು...




ಹೊಳೆ ದಂಡೆ ಅಂಚಿನಲಿ ಹುಡುಗನ ಭುಜಕ್ಕೊರಗಿ ಕುಳಿತ ಹುದುಗಿಯ ಮನದಲ್ಲೊಂದು ಆಲೋಚನೆಯ ಮಿಂಚು !ಹೇಳಿದಳು ತಲೆಯೆತ್ತಿ ಪ್ರೀತಿ ಒಂದು 'ಕನಸು' ಎಂದು .. ಪ್ರೀತಿ 'ವಾಸ್ತವ' ಕಣೆ ಎಂಬುದು ಅವನ ವಿವರಣೆ ...ಪ್ರೀತಿ 'ಮುಂಗಾರು ಮಳೆ' ಎಂದಳು ಆಕೆ.. ಪ್ರೀತಿ 'ಮುಂಜಾವು' ಅದು ನಿತ್ಯ ನೂತನ ಎಂದ ಆತ..ಅವಳೆಂದಳು ಪ್ರೀತಿ ಸಮುದ್ರದಂತೆ 'ಭೋರ್ಗರೆದರೆ' ಚಂದ. ಮೌನ ನದಿಯಂತೆ ಹರಿದರೆ ಚಂದ ಎಂದನಾತ ..ಪ್ರೀತಿ 'ಹೂವಿನಂತೆ' ಮಘಮಘಿಸುತ್ತದೆ ಎಂದಳು ಹುಡುಗಿ ..ಇಲ್ಲ ಕಣೆ ಪ್ರೀತಿ 'ಹುಲ್ಲಿನಂತೆ' ಎಲ್ಲಾದರೂ ಚಿಗುರುತ್ತದೆ ಎಂದ ಹುಡುಗ ..ಕೊನೆಗೂ "ಪ್ರೀತಿ " ಎಂದರೇನು? ಎನ್ನುವ ಗೊಂದಲದ ನಡುವೆಯೇ ಎದ್ದು ನಡೆದು ಬಿಟ್ಟಳು ಹುಡುಗಿ 'ನೀ ನನ್ನ ಪ್ರೀತ್ಸಲ್ವೋ ...' ಎನ್ನುತ್ತಾ. ಹುಡುಗ ಮುಗುಳ್ನಕ್ಕ "ಉತ್ತರ" ಎಂಬಂತೆ ...
.ಮರುದಿನ..
ಕುಳಿತಿದ್ದರು ಎಂದಿನಂತೆ ಅದೇ ನದಿದಂಡೆ .. ಅದೇ ಹಸಿ ಮರಳು ..ಅದೇ ಮುಸ್ಸಂಜೆ ಸೂರ್ಯ ..ಆದರೆ...ಹುಡುಗ ಹುಡುಗಿಯ ನಡುವೆ ಒಂದಡಿಯ ಅಂತರ ..!ಮೌನವೇ ಸಂಭಾಷಣೆ ..ಹುಡುಗಿ ಥಟ್ಟನೆ ಸರಿದಳು ಅವನಂಚಿಗೆ..! ಭುಜಕ್ಕೊರಗಿ ಕಣ್ಮುಚ್ಚಿ ಅಂದಳು ..ಪ್ರೀತಿ ವಾಸ್ತವದೊಳಗಿನ ಕನಸು, ಮುಂಜಾವಿನ ಮುಂಗಾರು ಮಳೆ, ಸಮುದ್ರ ಸೇರುವ ನದಿ ..ಹುಲ್ಲಿನಲ್ಲಿಯ ಹೂವು, ... ಕೊನೆಗೆ ಪ್ರೀತಿ ಅಂದ್ರೆ ...."ನಾನು - ನೀನು ".... ಅಂದಳು.. ಪಡುವಣದ ಸೂರ್ಯ ನಗುತ್ತಿದ್ದ..ಈ ಹುಡುಗಿಯ ಹುಡುಗ ಕೂಡ...!!!!

ಈ ನೀರು, ಮಜ್ಜಿಗೆ, horlicks, juice....


ಈ ನೀರು, ಮಜ್ಜಿಗೆ, horlicks, juice....
ಎಲ್ಲಾ ಬೋರ್ ಬಂದಿದೆ ಮಾರಾಯ...
ನಿನ್ ಜೊತೆ ಬಾರನಲ್ಲಿ ಕೂತು
ಒಂದು ಪೆಗ್ ಹಾಕಬೇಕು ಅನಿಸ್ತಿದೆ
ಬರ್ತೀಯಾ?? ಪ್ಲೀಸ್ !!

ನೀನಿಲ್ಲದೆ....



ಎಲ್ಲಿಂದಲೋ ಬಂದೆ ಮೇಘಮಾಲೆಯಂತೆ

ಪ್ರೀತಿಯ ಸೋನೆಯಲಿ ..

ಮನವ ತೋಯಿಸಿದೆ..

ಹಸಿಯಾದ ಮನದಲ್ಲಿ

ಹೆಜ್ಜೆಗುರುತು ಮೂಡಿಸಿದೆ..

ಸುಳಿವೊಂದ ನೀಡದೆ

ಹೊರಟು ಹೋದೆಯಲ್ಲ.....

ಬೆತ್ತಲಾಗಿ ನಿಂತಿದೆ ಮನಸು...

ಶಿಶಿರದ ಬೋಳು ಮರದಂತೆ..

ಕಾಯುತಿದೆ ಮನಸು... ನಿನ್ನ..

ಈ ಇಳೆಯು ಆ ಮಳೆಯ ಕಾಯುವಂತೆ.. !

ಒಂಟಿ ಮತ್ತೊಮ್ಮೆ..

ಮಂಗಳೂರಿನ ಜನಜಂಗುಳಿಯ ಮಧ್ಯೆ
ಒಂಟಿ ಎನಿಸುತ್ತಿದ್ದೇನೆ
ಬಂಡೆಗಲ್ಲಿನ ಮೇಲೆ ಕುಳಿತ ಭಗ್ನ ಪ್ರೇಮಿಯಂತೆ ..
ರೋಧಿಸುತಿದೆ ಮನಸು..
ಕಾಲೇಜು ಹುಡುಗಿಯರ ಬಸ್ಸಿನಲ್ಲಿ
ನಾನು ಮತ್ತೊಮ್ಮೆ ಮೌನಿ..
ಕೆಲವರು ಹಾಕುವ ಕಾಲ್ಗೆಜ್ಜೆ, ಕೈ ಬಳೆಗಳ ಸದ್ದುಗಳು
ನನ್ನ ಸಂಗಾತಿಗಳು..




ಕಡಲ ತಡಿಯಲ್ಲಿ ಕುಳಿತು..
ಅಲೆಗಳ ಭೋರ್ಗರೆತದ ನಡುವೆಅಳಬೇಕು ನಾನೊಮ್ಮೆ..
ನನ್ನ ಕಣ್ಣೀರು ಹರಿದು ಸಾಗರದ ನೀರಿನಲ್ಲಿ ಒಂದಾಗಬೇಕು..
ಯಾರು ಹುಡುಕಬಾರದು ನನ್ನ ಕಣ್ಣೀರನ್ನು ..
ಮಾನವ ಸಂಬಂಧಗಳು ಬದುಕಲು ಕಲಿಸುತ್ತವೆ..
ಕೊನೆಗೆ ಒಂಟಿತನವನ್ನೂ..
ಬರುವಾಗ ಹೋಗುವಾಗ ಒಂಟಿ...
ನಡುವೆ ಅರಳುವ ಒಂದಿಷ್ಟು ಭಾವ, ಜೀವಗಳು..


ಸಧ್ಯಕ್ಕೆ ಬದುಕು ಬಟಾ ಬಯಲು..
ಕಾಯುತಿದೆ ಬದುಕು ಮತ್ತೆ ಯಾರದೋ ನೆರಳನ್ನು..
ಸಧ್ಯಕ್ಕೆ ಕತ್ತಲೆ ನನ್ನ ನೆರಳೂ ಕಾಣುತ್ತಿಲ್ಲ..
ಬೆಳಕು ಹರಿಯುವ ವರೆಗೆ ಕಾಯಲೇ ಬೇಕಾದ
ಅನಿವಾರ್ಯತೆ ನನ್ನದು.. !!

ಅದೇನು ಕಾಡ್ತಾಳೆ ಅವಳು...


ಭಾವಗೀತೆಗಳ ಸಾಲುಗಳಲ್ಲಿ
ಇಣುಕುವ ಅವಳ ನೆನಪು..
ನೇರ ಹಾದಿಯ ಕಂಡಾಗ
ಮೂಡುವ ಅವಳ ಹೆಜ್ಜೆ ಗುರುತು ..
ಹರಿವ ನದಿಯ ನಾದದಲ್ಲಿ
ಕೇಳುವ ಅವಳ ಮಾತು, ನಗು..
ಅದೇನು ಕಾಡ್ತಾಳೆ ಅವಳು..?
ಇದ್ಯಾವುದೂ ಬೇಡ ಎಂದು
ಮುಸುಕೆಳೆದು ಮಲಗಿದರೆ ....
ಕನಸಲ್ಲಿ ಬಂದುನಿದ್ದೆ ಯಾಕೆ ಮಾಡಿದ್ಯೋ??
ಎಂದು ಜಗಳ ತೆಗಿಬೇಕೆ?? :)

ಕಣ್ಣೀರು ಉಪ್ಪು ಕಣೋ.... !!


Hello ಕನಸು ಕಣ್ಣುಗಳ ಹುಡುಗ..

ನಿನ್ನ ಪತ್ತೆಯೇ ಇಲ್ಲ... ನಿನ್ನ ನೆನಪಿನ ಹೊತ್ತಿಗೆಯಲ್ಲಿ ನನ್ನ ಪುಟ ಹರಿದಿರಬಹುದು. ಆದರೂ ನಾನು ಕಾಡದೇ ಇರ್ತೆನಾ? atleast jub we met, ಬೊಮ್ಮರಿಲ್ಲು film ನೋಡೋವಾಗ ನಿನ್ನ ಆ ಹೊಸ ಹುಡುಗಿಯ ಜೊತೆ. !!
Mostly ನನ್ನ lifeನಲ್ಲಿ first time ಒಬ್ಬ ಹುಡುಗನಲ್ಲಿ ಜೀವನ ಅಂದ್ರೆ ಏನು ಅಂತ ಕಲ್ತುಕೊಂಡಿದ್ದೆ , ಅವನಲ್ಲಿ ಜೀವನದ ಹಲವು ಸಂಬಂಧಗಳನ್ನು ಹುಡುಕಿದ್ದೆ. ಎಲ್ಲ ವಿಷಯಗಳನ್ನು ನಿನ್ನಹತ್ರ ಹೇಳಿ ತಲೆ ತಿಂತಾ ಇದ್ನಲ್ವಾ?? ಅತಿ ಆದಾಗ ನೀನು ನನ್ನ ತಲೆಗೊಂದು ಮೊಟಕಿ ಸುಮ್ನಿರೇ ಅಂತಿದ್ದೆ ನೋಡು.. !ಆಗ ನಿನ್ನಲ್ಲಿ ಒಬ್ಬ ಆತ್ಮೀಯ ಸ್ನೇಹಿತನನ್ನು ಕಂಡಿದ್ದೆ. ಆ ದಿನ ನನ್ನ ಕೈಹಿಡಿದು road ದಾಟಿಸೋವಾಗ ಯಾಕೋ ನನ್ನ ಪಪ್ಪಾ ಥರ ಅನಿಸಿಬಿಟ್ಟೆ ಮಾರಾಯ. ನೀನು ಕಾಲು ಕೆರೆದು ಜಗಳಕ್ಕೆ ಬರೋವಾಗ ನೆನಪಾಗ್ತಾ ಇದ್ದೋನು ನನ್ನ ಅಣ್ಣ.. !!ಮೊನ್ನೆ ಮೊನ್ನೆ ನಾನು ಮೊಣಕಾಲು ಉದ್ದದ skirt ಹಾಕ್ಕೊಂಡು ಬಂದಾಗ ಅದೇನು ಗುರಾಯಿಸಿ ಬಯ್ದಿದ್ದೆ ..?? ನನ್ನ ಕಣ್ಣಲ್ಲಿ ಜೋಗ ಜಿನುಗುವಸ್ಟು... ಕಣ್ಣೀರು ಒರೆಸುತ್ತ ನಿನ್ನ ನೋಡಿದ್ದೆ ನೆನಪುಂಟಾ? ನನ್ನ ಅಜ್ಜಿ ನೆನಪಾಗಿ , ಕಣ್ಣೀರ ಅಂಚಿನಲ್ಲೂ ನಕ್ಕಿದ್ದೆ ನಾನು . still i don't know who are you for me..?
ದೇವಸ್ಥಾನಕ್ಕೆ ಹೋಗಿ ಸುಮ್ಮನೆ ಪ್ರಸಾದ ತಿನ್ಕೊಂಡು ದೇವರಿಗೆ, ಭಟ್ಟರಿಗೆ ಲೈನ್ ಹೊಡ್ಕೊಂಡು ಬರ್ತಿದ್ದೊಳು ನಾನು.. !ಸುಮ್ಮನೆ ಕೈಮುಗಿದು 'ಎಲ್ಲರಿಗೂ ಒಳ್ಳೇದು ಮಾಡಪ್ಪ ' ಅಂತ ಕೇಳ್ತಾ ಇದ್ದೋಳು. ಮೊನ್ನೆ ಕಣ್ಣಲ್ಲಿ ನೀರು ತುಂಬ್ಕೊಂಡು 'ನಿನ್ನ ಕೊಡು ' ಅಂತ ಕೆಳ್ಬಿಟ್ಟೆ..!! ದೇವರಿಗೆ ನನ್ನಿಂದಾನೆ ಲೈನ್ ಹೊಡಿಸ್ಕೊಬೇಕಗಿತ್ತೋ ಏನೋ . ನಿನ್ನ ದೂರ ಮಾಡ್ಬಿಟ್ಟ. ಕೊನೆಗೂ ನೀ ಹೇಳಲೇ ಇಲ್ಲ ಯಾಕೆ ನೀ ನನ್ನ ಬಿಟ್ ಹೋದೆ ಅಂತ .ನಾನಿನ್ನೂ kidish ಅಂದುಕೊಂಡ್ಯ?? ಅಥವಾ ಇವಳನ್ನು ಕಟ್ಕೊಂಡು ಹೇಗೆ ಬದ್ಕೋದು ಅಂತ ಅನಿಸಿಬಿಡ್ತಾ?
ಪುಟ್ಟ ಮಗು ಅಮ್ಮನ ಪ್ರೀತಿಸಿದ ಹಾಗೆ ಪ್ರೀತಿಸಿಬಿಟ್ಟೆ ನಿನ್ನ. ಮೊನ್ನೆ ಯಾರೋ ನನ್ನ 'ಪುಟ್ಟ' ಅಂದಾಗ ಸಮುದ್ರದಂಚಲಿ ಹೋಗಿ ಅತ್ತಿದ್ದೆ. ನಿನ್ನ ಹೆಜ್ಜೆ ಗುರುತುಗಳಿಗಾಗಿ ಹುಡುಕಾದಿದ್ದೆ, ಅಕ್ಷರಶಃ ಹುಚ್ಚಿಯಂತೆ.ಯಾರದೇ ನೆರಳು ಕಂಡರೂ ನೀ ಬಂದೆ ಎಂದು ತಿರುಗಿ ನೋಡುವಷ್ಟು .ನಿನ್ನ ನೆನಪು ಹಸಿಯಾಗಿಯೇ ಇದೆ, ನೀ ಕಟ್ಟಿಟ್ಟ ಕನಸು ಹಸಿರಾಗೇ ಇದೆ. ಆದರೆ ನೀ ಇಲ್ಲವಷ್ಟೆ .ಇದು ಪ್ರೀತಿ ಅಂತ ಅರ್ಥ ಆಗೋಕೆ ಮುಂಚೆ break-up ಅರ್ಥ ಮಾಡಿಸಿಬಿಟ್ಟೆ. ಇನ್ನು ಕಾಯ್ತಾ ಇದ್ದೇನೆ. ಅಮಾವಾಸ್ಯೆಯ ದಿನದಲ್ಲೂ ಬೆಳಕನ್ನು ಹುಡುಕೊಳು ನಾನು, ಮಿಂಚು ಹುಳುಗಳಿಂದ.!ಹೊರಗೆ ಜೋರು ಮಳೆ . ನನ್ನ ಕಣ್ಣಲ್ಲಿ ನದಿ..ಗಲ್ಲ ಒದ್ದೊದ್ದೆ.. ಕಣ್ಣೀರು ಉಪ್ಪು ಕಣೋ.... !!




ಬೊಗಸೆ ಪ್ರೀತಿಯೊಂದಿಗೆ,
ಪುಟ್ಟ

Tuesday, December 29, 2009

ಹುಡುಕಬೇಕಿದೆ ನನ್ನ ನಾ..



ಕಾಲೇಜು, ಟ್ರಾಫಿಕ್ ಗಳ ನಡುವೆ..
ಲ್ಯಾಬ್, ರೆಕಾರ್ಡ್, ಟೆಸ್ಟ್, examಗಳ ಮಧ್ಯೆ..
ಕಂಪ್ಯೂಟರ್, integreted chipಗಳ ಒಳಗೆ...
ಮರೆತು ಹೋಗಿದ್ದೇನೆ ನಾನು..
ಬಾನಂಗಳದ ಚುಕ್ಕಿಗಳಿಗೆ..
ಸುಪ್ರಭಾತದ ಹಕ್ಕಿಗಳಿಗೆ..
ನನ್ನ ಕವನದ ಅಕ್ಷರಗಳಿಗೆ...
ಕಳೆದುಹೋಗಿದ್ದೇನೆ ನಾನು ಮತ್ತೆ ಹುಡುಕಬೇಕಿದೆ...
ಬೆಳದಿಂಗಳ ನೋಡದೆ..ತಿಂಗಳು ಎರಡಾಯಿತು..
ಸೂರ್ಯೋದಯ ಸವಿಯದೆ..ವರುಷವಾಗಿದೆ..
ಹೊಳದಂಡೆ ಅಂಚಲಿ ಪಾದವ ತೋಯಿಸದೆ...
ಕಾಲು ಒಣಗಿ ಹೋಗಿದೆ....
ಕಳೆದು ಹೋಗಿದ್ದೇನೆ ನಾನು ...
ಮತ್ತೆ ಹುಡುಕಬೇಕಿದೆ....
ಒಮ್ಮೆ ಅಮ್ಮನ ಮಡಿಲಲ್ಲಿ ಮಗುವಾಗಬೇಕು..
ಅಜ್ಜಿಯ ಬಳಿ ಕುಳಿತು ..
ಹಲಸಿನ ಹಪ್ಪಳವ ತಿನ್ನಬೇಕು....
ಮತ್ತೆ ನನ್ನ ಹುಡುಕಬೇಕು...
ಮಾತಾಡಬೇಕು ಬಾನಂಗಳದಹಕ್ಕಿ ಚುಕ್ಕಿಗಳ ಜೊತೆಗೆ..
ಮತ್ತೆ ನಾನು ನಾನಾಗಬೇಕು..

ಇದೇನು...?? ನೀವೇ ಹೇಳಿ ಪ್ಲೀಸ್..


ಎಂದಿನಂತೆ ಇಂದೂ ನನ್ನದು ಬಸ್ಸಿನಲ್ಲಿ ಎಡಗಡೆಯ last but one seat ..ಅದೇ 'ಭಾರತ್ ಮಾಲ್ ' ಬಸ್ ಸ್ಟಾಪ್ ಬಂದೆ ಬಿಟ್ಟಿತು..ನನ್ನ ಕಣ್ಣುಗಳ ಹುಡುಕಾಟ ಶುರು..ಅದೇ ಹಾಲುಗೆನ್ನೆಯ ಪೋರಿಗಾಗಿ ..ಕಾಲೇಜು ಬಸ್ಸಿನ ನಿರೀಕ್ಷೆಯಲಿ ಕುಳಿತಿರುವ ಆ ಪುಟ್ಟ ಕಂಗಳ ಚೆಲುವೆಗಾಗಿ..ಇಲ್ಲ... ಇಲ್ಲನನ್ನ ಹುಡುಗಿಯ ಪತ್ತೆಯೇ ಇಲ್ಲ ಏನೋ ಕಳೆದುಕೊಂದಂತೆ ಆಗ್ತಾ ಇದೆಯಲ್ಲ ..ಅವಳ ಮುಖವನ್ನೊಮ್ಮೆ ನೋಡಿದಾಗ ಮುಗುದೆ ಎನಿಸಿದ್ದಳು ..ಎಂದೋ ಒಮ್ಮೆ ಕಣ್ಣಿಗೆ ಕಣ್ಣು ಸೇರಿಸಿದಾಗ ಹುಡುಗಿ ತುಂಟಿ ಎಂದ್ಕೊಂಡಿದ್ದೆ ..ಅದೆಲ್ಲ ಸರಿ...ಇನ್ನು ಯಾಕೆ ಬಂದಿಲ್ಲ ಅವಳು??ಹುಡುಗಿಗೆ ಹುಶರಿಲ್ವಾ?ಅಥವಾ ?? boy friend ಜೊತೆ .... ಥತ್ ಇಲ್ಲ ಅಂದ್ಬಿಡ್ತು ಮನಸು..ನಾನ್ಯಾಕೆ ಅಸ್ಟೊಂದು ತಲೆ ಕೆಡ್ಸ್ಕೊಂಡಿದೇನೆಅಂತ ಯೋಚಿಸ್ತಾ ಇರೋವಾಗಲೇ..ಹುಡುಗಿ ಪ್ರತ್ಯಕ್ಷ.. watch ನೋಡ್ಕೊಂಡು ಏನೋ ಹುಡ್ಕ್ತಾ ಇದ್ದೋಳು..ನನ್ನ ನೋಡಿದ್ ತಕ್ಷಣ ದ್ರಷ್ಟಿ ಬದಲಾಯಿಸಿ ಬಿಟ್ಟಳಲ್ಲ ಹುಡುಗಿ... ನಿರಾಳ ಭಾವದಿಂದ ..ಈಗ ನೀವೇ ಹೇಳಿ please ...ನಾನೂ ಅವಳಿಗೆ ಕಾಡ್ತಾ ಇರಬಹುದಾ??

ಹುಡುಗೀರ ಬಣ್ಣ ..


ಣ್ಣ ಬಣ್ಣದ dress ಹಾಕೋರು ಹುಡಗೀರೆ..ಉದ್ದನೆಯ ಉಗುರುಗಳಿಗೆ ಬಣ್ಣ ಬಣ್ಣದ nail polish ಹಾಕೋರು ಹುಡಗೀರೆ ..ಹುಡುಗರ ಮನಸ್ಸಲ್ಲಿ ಬಣ್ಣ ಬಣ್ಣದ ಕನಸು ಕಟ್ಟೋರು ಹುಡುಗೀರೆ ...ನಂತರ ...ಯಾಕೆ ಎಲ್ಲ ಬಣ್ಣ ಕದಡಿ ಬಿಡ್ತಾರೆ ?? dress ಥರ ಮನಸನ್ನ ಬದಲಿಸ್ತಾರೆ ??ಸಂಬಂಧಾನ ಉಗುರಿನ ಥರ ಮುರಕೊಂಡು ಬಿಡ್ತಾರೆ ?ಬಣ್ಣ ಬದಲಾಯಿಸುವ ಗೊಸುಂಬೇನಾ ??ಅಥವಾ ಪರಿಸ್ಥಿತಿನಾ ?!!

ನನ್ನ ಕಣ್ಣೀರಿಗೆ ಮುತ್ತನ್ನು ಒರೆಸಲು ಮನಸ್ಸಿಲ್ಲವಂತೆ..

ನದ ಹಾಳೆಯಲಿ ಸುಮ್ಮನೆ ಆಡುತ್ತ
ಒಂದಿಷ್ಟು ಚಿತ್ರಗಳನ್ನು ಬರೆದಿಟ್ಟಿದ್ದೆ ..
ನೀ ಬಂದೆ ಬಣ್ಣ ಹಚ್ಚಿಬಿಟ್ಟೆ.....
ಖುಷಿಯಾಗಿ ಕುಣಿದಿತ್ತು ಮನಸು
ರಸ್ತೆಯ ನೀರಲ್ಲಿ ಆಡುತ್ತ ಸಾಗುವ
ಐದರ ಹುಡುಗಿಯಂತೆ....!!


ರಾತ್ರಿಯಲಿ ಸುಮ್ಮನೆ ತಾರೆಗಳ ನೋಡುತ್ತಾ
ಒಂದಿಷ್ಟು ಕನಸುಗಳ ಮೂಟೆ ಕಟ್ಟಿದ್ದೆ ..
ನೀ ಬಂದೆ ಮೂಟೆ ಹೊತ್ತೊಯ್ದೆ ..
ಸುಮ್ಮನೆ ನೋಡುತ್ತಾ ನಿಂತುಬಿಟ್ಟೆ ನಾನು...!!


ಸಮುದ್ರ ದಂಡೆಯಲಿ ಅಲೆಗಳೊಂದಿಗೆ ಆಡುತ್ತ
ಮರಳ ಗೂಡೊಂದರ ಕಟ್ಟಿದ್ದೆ ..
ನೀ ಬಂದು ಅದರಲ್ಲಿ ಜೋಡಿ ಗೊಂಬೆಗಳ ಇಟ್ಟೆ..
ನಡೆದಿದ್ದೆ ನಾನು ಅದೆಷ್ಟೋ ದೂರ ನಿನ್ನ ಹೆಜ್ಜೆಗಳ ಮೇಲೆ...!!


ಹಾಯಿದೋಣಿ ಹಾಯಾಗಿ ಸಾಗಿತ್ತು ಮನವು
ಮುಸ್ಸಂಜೆಯ ಹೊಳೆದಂಡೆಯ ಅಂಚಿನಲಿ ...
ಪಕ್ಕನೆ ಗಲ್ಲಕ್ಕೆ ಮುತ್ತಿಟ್ಟಿದ್ದೆ ನೀನು ..
ಮೊದಲ ಬಾರಿಗೆ ನಾಚಿದ್ದೆ ನಾನು.. !!


ಅದೇಕೆ ಎದ್ದು ಹೋದೆ ?? ನನ್ನ ಬದುಕಿನ ಮಗ್ಗುಲಿನಿಂದ ...
ಕಾರಣವನ್ನೂ ಹೇಳದೆ..
ಜೋಡಿ ಗೊಂಬೆಯಲ್ಲಿ ಒಂದು ಕಳೆದಿದೆ.!
ಚಿತ್ರಗಳು ಮಸುಕು,
ಹಾಯಿ ದೋಣಿಯೂ ಮಸುಕು
ನನ್ನ ಕಣ್ಣೀರಿಗೆ ..ನೀ ಇತ್ತ ಮುತ್ತನ್ನು ಒರೆಸಲು ಮನಸ್ಸಿಲ್ಲವಂತೆ ...!!!

ಇಲ್ಲೇ ಮಳೆಯಾಗಿದೆ ಇಂದು ...


ಸ್ನೇಹಿತರೆ .....

ಏನಾಗಿದೆ ? ಈ ಪ್ರಕೃತಿಗೆ ?? ಕಾಲಗಳು ಅದಲು ಬದಲಾಗಿವೆ... ಕನಸುಗಳು ಕಂಗಾಲಾಗಿವೆ... ಇಲ್ಲದೆ ಹೋದ್ರೆ.. ಈ December ಕೊನೆಯಲ್ಲಿ ಯಾಕೆ ಮಳೆ ಬರ್ತಿತ್ತು ?? ತಿಂಗಳ ಹಿಂದೆ 2012 film ನೋಡ್ತಾ ಇದ್ದೋಳು ನಗ್ತಾ ಇದ್ದೆ. ಪ್ರಳಯ-ಗಿಳಯ ಏನು ಇಲ್ಲ ಅಂತ. ಆದ್ರೆ ಯಾಕೋ ಕೈಯಲ್ಲಿ 2 ಸಲ್ವಾರ್ setಗಳನ್ನ ಹಿಡ್ಕೊಂಡು ತಮ್ಮನ bikeನ ಹಿಂದಿನ seatನಲ್ಲಿ (ಗಾಡಿ ಸರ್ಯಾಗಿ ಓಡ್ಸೋಕೆ ಬರಲ್ಲ ಅದ್ಕೆ ಹಿಂದೆ ಕೂರ್ಬೇಕಲ್ವಾ?? [:)] ಕೂತೋಳಿಗೆ ಇದ್ದಕ್ಕಿದ್ದಂತೆ ಪ್ರಳಯದ ಯೋಚನೆ ಆವರಿಸಿ ಬಿಟ್ಟಿತು..ಜಲಪ್ರಳಯವೋ,? ಅಗ್ನಿ ಪ್ರಳಯವೋ,? ಎಂದು ಯೋಚಿಸುತ್ತ ಕುಳಿತಿದ್ದವಳಿಗೆ ನೆನಪಾದದ್ದು ಚಿಕ್ಕಂದಿನಲ್ಲಿ ನಾನೇ ಬರೆದ ಒಂದು ಮುಗ್ಧ ಕವನ ...
ಓ ಪ್ರಕೃತಿ ಮಾತೆ ಇನ್ನೆಷ್ಟು ದಿನ ಈ ಮೌನ??
ಹಗಲು ರಾತ್ರಿಗಳೊಡನೆ ಸರಿಯುತಿದೆ ಕಾಲಮಾನ.
ಇದೆ ನಿನ್ನ ಪರಿಸರದಿ ವಿಷಕಾರಿ ಹೊಗೆ
ಇದರಿಂದ ಹೆಚ್ಚಿದೆ ವಾತಾವರಣದ ಧಗೆ !
ನಿನ್ನ ಮೌನವನು ಸಮ್ಮತಿ ಎಂದು
ಮಲಿನಗೊಳಿಸುತಿಹರು ನಿನ್ನ ಜಲಬಿಂದು !
ನೀನು ಸಿಡಿದೆದ್ದರೆ ಜ್ವಾಲಾಮುಖಿಯೋ?
ಅತಿವೃಷ್ಟಿಯ ಜಲಪ್ರಳಯವೋ ??
ಸಿಡಿದೇಳುವ ಮುನ್ನ ಹೇಳಿಬಿಡು ನನಗೆ
ಹಾರಿಬಿಡುವೆನು ನಾನು ಚಂದಿರನ ಮನೆಗೆ !!
ಯಾಕೋ ಅಲ್ಲಿನ ಮುಗುದ ಯೋಚನೆಗೆ ನಗು ಬಂದಿತ್ತು. ಬಾಲ್ಯದಲ್ಲೇ ಹೆಚ್ಚು ಈ ನಿಸರ್ಗ ಪ್ರೇಮ, ದೇಶಭಕ್ತಿ ಎಲ್ಲ ಅನಿಸಿಬಿಡ್ತು ......ಆದರೂ ಮನಸು ಹಗುರಾಗಿ ಗುನುಗುತ್ತಿತ್ತು "ಇಲ್ಲೇ ಮಳೆಯಾಗಿದೆ ಇಂದು ........ ಮಳೆ ಹನಿಯು ಹೇಳುತಿದೆ" ..ಈ ಬಾಲ್ಯದ ನೆನಪುಗಳೇ ಹಾಗೆ ಅಲ್ವಾ?? matter ಎಷ್ಟೇ serious ಆಗಿದ್ದಿರ್ಲಿ ಬಾಲ್ಯದ ಮುಗ್ಧ , ತುಂಟ ನೆನಪುಗಳಿಗೆ ಎಲ್ಲವನ್ನು ಮರೆಸಿ ನಗುವಿನ ಹಾಯಿ ದೋಣಿಯನ್ನು ತೆಲಿಬಿಡೋ ತಾಕತ್ತಿದೆ.