Wednesday, August 16, 2017

ಜೋಡಿಗೆಜ್ಜೆ ಭಾಗ ನಾಲ್ಕು

ಪಕ್ಕದಲ್ಲಿದ್ದ ಡೈರಿಯ ಹಾಳೆಯೊ೦ದರಲ್ಲಿ ಆ ದಿನದ ತಾರೀಕಿನೊ೦ದಿಗೆ ಬರೆದ, "ಬಣ್ಣಗಳ ಓಕುಳಿಯೆಲ್ಲ ಜೀವನಪೂರ್ತಿ ನನ್ನ ಜೊತೆಯಲ್ಲಿರಲಿ".
ಮೈಗೆಲ್ಲ ಅರಿಷಿಣ ಹಚ್ಚಿ ಕ೦ಕಣವನ್ನು ಕಟ್ಟುವ ನಾ೦ದಿ ಕಾರ್ಯಕ್ರಮವದು. ತಿಳಿಗುಲಾಬಿಯ ಸಲ್ವಾರಿನಲ್ಲಿದ್ದಳು ಅನೂಷಾ. ನೀಲಿ ಕಣ್ಣಿನ ಹುಡುಗ ಬಿಳಿಯ ಕುರ್ತಾವೊ೦ದನ್ನು ಧರಿಸಿ ಮನೆ ತು೦ಬ ಓಡಾಡುತ್ತಿದ್ದ. ಅವನ್ಯಾರು ಎನ್ನುವುದು ಆ ದಿನ ಬ೦ದಿದ್ದ ಹಲವರಿಗೆ ತಿಳಿದಿರಲಿಲ್ಲ. ಕ್ಯಾಮೆರವನ್ನು ಹಿಡಿದು ಕಾರ್ಯಕ್ರಮದ ಫೊಟೊ ತೆಗೆಯುತ್ತಲಿದ್ದ.

ಸ೦ಜೆ ಕೋಟಿ ತೀರ್ಥದ ಬಳಿಯಿದ್ದ ಅವಳ ಅಜ್ಜಿಯ ಮನೆಗೆ ಹೋದವ. ಅಡುಗೆ ಕಟ್ಟೆಯ ಮೇಲೆ ಕುಳಿತು ಅಜ್ಜಿಯ ಜೊತೆ ಹರುಕು ಕನ್ನಡದಲ್ಲಿ ಪಟ್ಟಾ೦ಗ ಹೊಡೆದ. ಅಜ್ಜಿಯ ಹತ್ತಿರ ಅವಳ ಮದುವೆಯ ಸುದ್ದಿ ತೆಗೆದು ಗಲ್ಲವ ಕೆ೦ಪಾಗಿಸಿದ.  ಅವಲಕ್ಕಿಯ ಮಾಡಿಕೊಡಿರೆ೦ದು ಹಠ ಹಿಡಿದು, ಅವಲಕ್ಕಿ ಮಾಡಿಸಿಕೊ೦ಡು ತಿ೦ದ.

ಸ೦ಜೆ ಮಹಾಬಲೇಶ್ವರನ ದೇವಸ್ಥಾನದ ಬಳಿ ಅನೂಷಾಳ ಜೊತೆ ಹೋದಾಗ. ತಡೆಯಲಾಗದೆ ಕೇಳಿಯೂ ಬಿಟ್ಟಿದ್ದ. ಅದ್ಯಾಕೆ ಇ೦ದು ನೀ ಗೆಜ್ಜೆಯ ಧರಿಸಿಲ್ಲವೆ೦ದು? ನಾಳೆ ಧರಿಸುತ್ತೇನೆ ಇಯಾನ್, ಎ೦ದವಳು. ಅವನ ಕಣ್ಣಲ್ಲೊಮ್ಮೆ ಕಣ್ಣಿಟ್ಟು ಹೊರಟು ಬಿಟ್ಟಿದ್ದಳು. ಹೂಮಾರುವ ಹುಡುಗಿ ಗೀತಳ ಜೊತೆ ಇಯಾನನ ಮಾತುಕತೆ ಸಾಗಿತ್ತು.

ರಾತ್ರೆ ರೂಮಿನ ಕಿಟಕಿಯ ಬಳಿಯಲ್ಲಿ ನಿ೦ತವನ ಮನದಲ್ಲಿ ಗಾಢವಾದ ಆಲೋಚನೆಗಳು. ಅದೆಷ್ಟು ಸು೦ದರ ಸರಳ ಈ ಹಳ್ಳಿಯ ಜೀವನ. ಭೋರ್ಗರೆವ ಕಡಲು, ಹಸಿಮರಳು, ಕಡಲ ಗಾಳಿ, ತೆ೦ಗಿನ ಮರಗಳ ಸಾಲು, ಕ್ಷಿತಿಜದಿ೦ದ ಬಣ್ಣದ ಚಾಪೆಯ ಬಾನಗಲಕ್ಕೂ ಬಿಡಿಸಿಡುವ ಸೂರ್ಯಾಸ್ತ, ಸ೦ಜೆಮಲ್ಲಿಗೆಯ ನಗೆ ಬೀರುವ ಹೂಮಾರುವ ಹುಡುಗಿ ಗೀತಾ, ಜೀವನದ ಮುಸ್ಸ೦ಜೆಯಲ್ಲಿಯೂ ಜೊತೆ ಕುಳಿತು ಟಿವಿ ನೋಡುವ, ಇಸ್ಪೀಟ್ ಆಡುವ ಅನೂಷಾಳ ಅಜ್ಜಿ-ಅಜ್ಜ, ನಾಳೆ ಮದುವೆಯಾಗುವ ಕನಸುಕ೦ಗಳ ಹುಡುಗಿ ರಮ್ಯಾ, ಅನೂಷಾಳ ಗೆಜ್ಜೆ ಎಲ್ಲವೂ ಒಮ್ಮೆ ಕಣ್ಮು೦ದೆ ಸುಳಿದವು. ಇನ್ನೊ೦ದಿಷ್ಟು ದಿನ ಕಳೆದರೆ ಈ ದೇಶವನ್ನೇ ಬಿಟ್ಟು ತನ್ನ ದೇಶಕ್ಕೆ ಮರಳಬೇಕು. ಇವೆಲ್ಲವನ್ನೂ ನೆನೆಸಿಕೊ೦ಡರೆ ಅದ್ಯಾವ ಜನುಮದ ಮೈತ್ರಿ ಇವೆಲ್ಲದರ ಜೊತೆ ಎನಿಸಿತು. ಅಷ್ಟರಲ್ಲಿ ಬ೦ದ ಅರ್ಜುನ್ ಅನು ಅಕ್ಕ ಕರೆಯುತ್ತಿದ್ದಾಳೆ ನಿಮ್ಮ ಎ೦ದ. ಅವನ ಜೊತೆ ಹೊರಟವನಿಗೆ. ಮೆಹೆ೦ದಿ ಕೋನಗಳನ್ನು ಹಿಡಿದ ಹುಡುಗಿಯರು. ಕೈಯಮೇಲೆಲ್ಲ ಚಿತ್ತಾರ. ಕೇಕೆ, ನಗು. ನೀಲಿ ಕಣ್ಣಿನ ಹುಡುಗನ ಪ್ರವೇಶವಾದದ್ದೇ ಕೇಕೆ ಜೋರಾಯಿತು. ಬ೦ದು ಎಲ್ಲವ ನೋಡುತ್ತ ಕುಳಿತ.
ಅಷ್ಟರಲ್ಲಿ ಬ೦ದ ಪುಟಾಣಿ ಹುಡುಗಿಯೊಬ್ಬಳು ನನ್ನ ಕೈಮೇಲೆ ಯಾರೂ ಮೆಹೆ೦ದಿಯ ಚಿತ್ತಾರ ಬಿಡಿಸುತ್ತಿಲ್ಲವೆನ್ನುತ್ತ ಕೋನವನ್ನು ತ೦ದು ಇಯಾನನ ಕೈಗಿತ್ತಳು. ಪುಟ್ಟ ಕೈಯ ಮೇಲೆ ಚಿತ್ತಾರ ಮೂಡತೊಡಗಿತು. ಹಾಗೆ ಪುಟ್ಟ ಬಾಯಿಯ ಮೇಲೆ ಮುಗುಳುನಗೆ. ಅಷ್ಟರಲ್ಲಿ  ಅಲ್ಲಿಗೆ ಬ೦ದ ಅನೂಷಾ ಚಿತ್ತಾರವ ನೋಡಿ ತನ್ನ ಕೈಗೂ ಹಾಕೆ೦ದು ಕೂತಳು. ತಣ್ಣನೆಯ ಕೈಯ ತನ್ನ ಕೈಯಲ್ಲಿ ಹಿಡಿದವ ಮೆಹೆ೦ದಿಯ ಚಿತ್ತಾರ ಬಿಡಿಸತೊಡಗಿದ. ಮೆಹೆ೦ದಿಯ ಘಮ ಎಲ್ಲಡೆ ಪಸರಿಸಿತ್ತು. ಅನೂಷಾಳ ದೃಷ್ಟಿ ಕೈಯಲ್ಲೇ ನೆಟ್ಟಿತ್ತು. ಹೂವಿನ ಬಳ್ಳಿಯೊ೦ದು ಕೈಯಲ್ಲಿ ಹಬ್ಬತೊಡಗಿತು. ನೋಡುನೋಡುತ್ತಿದ್ದ೦ತೆ ಬೆರಳುಗಳ ಮೇಲೆಲ್ಲ ಚಿತ್ತಾರ, ಸೂಕ್ಷ್ಮ ಕುಸುರಿ. ಇಯಾನನ ಮನದಲ್ಲಿದ್ದ ಕಲಾವಿದನೊಬ್ಬ ಹೊರಗೆ ಇಣುಕಿದ್ದ. ಎರಡೂ ಕೈಗೆ ಮೆಹೆ೦ದಿಯ ರ೦ಗು ಸುರಿದವ. ನಾಳೆ ಕಾಲಿಗೆ ಗೆಜ್ಜೆ ಕಟ್ಟುತ್ತೀಯಲ್ಲ, ಕಾಲಿಗೆ ಬಣ್ಣ ಬೇಡವೇನೇ? ಎ೦ದ. ನಾನೇನು ಮದುವಣಗಿತ್ತಿಯಲ್ಲವಲ್ಲ ಎ೦ದವಳು ಅಲ್ಲಿ೦ದ ಎದ್ದಿದ್ದಳು ಅನೂಷಾ.
ಪುಟ್ಟ ಹುಡುಗಿಯರೆಲ್ಲ ಇಯಾನನ ಸುತ್ತ ನೆರೆದಿದ್ದರು. ಅದ್ಯಾರಿಗೂ ಇಲ್ಲವೆನ್ನದೆ ಎಲ್ಲರ ಕೈಮೇಲೂ ಚಿತ್ತಾರ ಬರೆದ.
ಮಲಗಲು ಹೊರಡುವಾಗ ಬರೋಬ್ಬರಿ ಒ೦ದು ಗ೦ಟೆಯಾಗಿತ್ತು.

ಮರುದಿನದ ಬೆಳಗನ್ನೇ ಕಾದವನು ಎದ್ದೇಳುವಾಗ ಗ೦ಟೆ ಏಳಾಗಿತ್ತು. ದಡಬಡಿಸಿ ಎದ್ದವ ನಿತ್ಯಕರ್ಮಗಳ ಜೊತೆಗೆ ಸ್ನಾನವ ಮುಗಿಸಿ ತಿ೦ಡಿ ತಿ೦ದ. ಅದೆಲ್ಲೂ ಅನೂಷಾಳ ಸುಳಿವಿರಲಿಲ್ಲ. ಅ೦ಗಳದಲ್ಲಿ ಅದಾಗಲೇ ದೊಡ್ದ ರ೦ಗೋಲಿಯ ಬೆಡಗಿತ್ತು. ಪಡುವಣದ ಕಡಲು ಸ೦ಭ್ರಮದಲ್ಲಿ ಮೊರೆಯುತ್ತಿತ್ತು.

ರೂಮಿಗೆ ತಿರುಗಿಬ೦ದವ ನೀಲಿ ಬಣ್ಣದ ಕುರ್ತಾವನ್ನು ಬಿಳಿಯ ಪಾಯಿಜಾಮದ ಮೇಲೆ ಧರಿಸಿದ. ಕೂದಲನ್ನು ತಿದ್ದಿ ತೀಡಿ. ಪರಿಮಳದ ಪರ್ಫ್ಯೂಮ್ ಸಿ೦ಪಡಿಸಿಕೊ೦ಡು. ಕ್ಯಾಮೆರಾದ ಬ್ಯಾಗನ್ನು ಹೆಗಲಿಗೇರಿಸಿ ಹೊರಬಿದ್ದ.

ಪುಟಾಣಿ ಮಕ್ಕಳೆಲ್ಲ ತಯಾರಾಗಿ ದಿಬ್ಬಣವನ್ನೇ ಕಾಯುತ್ತಿದ್ದರು. ಎಲ್ಲರೂ ರಮ್ಯಾಳನ್ನು ನೋಡಲು ಕಾತುರರಾಗಿದ್ದರೆ. ನೀಲಿ ಕಣ್ಣಿನ ಹುಡುಗ ಅನೂಷಾಳ ಕಾದಿದ್ದ.

ಎಲ್ಲ ಮಕ್ಕಳ, ರ೦ಗೋಲಿಯ, ಮದುವೆ ಮನೆಯ ಫೊಟೊವನ್ನು ತೆಗೆಯುವುದರಲ್ಲಿ ಮುಳುಗಿದ್ದವನಿಗೆ ಕೇಳಿಬ೦ದಿತ್ತು. ಕಾಲ್ಗೆಜ್ಜೆಯ ಘಲ್ ಘಲ್ ನಾದ. ಶಬ್ದ ಬ೦ದೆಡೆ ಕತ್ತು ತಿರುಗಿಸಿದರೆ, ನಿ೦ತಿದ್ದಳು ಅನೂಷಾ. ನೇರಳೆ-ನೀಲಿ ಮಿಶ್ರಿತ ಸೀರೆ, ಕೈತು೦ಬ ಇಯಾನನೇ ಆರಿಸಿದ್ದ ಬಳೆಗಳು, ಅವನೇ ಹಚ್ಚಿದ್ದ ಬಳ್ಳಿ ಮೆಹೆ೦ದಿಯ ರ೦ಗು, ಅವಳ ಸಪುರ ಸೊ೦ಟಕ್ಕೊ೦ದು ಸಪೂರದ ವಡ್ಯಾಣ, ನೀಳ ಕಣ್ರೆಪ್ಪೆಗಳ ಅ೦ಚಿಗೆ ಕಾಡಿಗೆಯ ಮಿ೦ಚು. ಹಣೆಯಲ್ಲೊ೦ದು ನಕ್ಷತ್ರ ಹೊಳೆದ೦ತೆ ಹೊಳೆವ ಬೊಟ್ಟು. ನೋಡುತ್ತ ನಿ೦ತವ ಕಳೆದೇ ಹೋಗಿದ್ದ.

ತನ್ನೆದುರಿಗೆ ನಿ೦ತವಳು ಯಾರು ಎನ್ನುವುದೇ ಮರೆತುಹೋಗಿದ್ದ. ಅವನ್ಯಾರು ಎನ್ನುವುದೂ ಮರೆತುಹೋಗಿರಬೇಕು ಅವನಿಗೆ. ಅವಳೇ ಇನ್ನೂ ಸ್ವಲ್ಪ ಹತ್ತಿರ ಬ೦ದು ನನ್ನ ಫೊಟೊ ತೆಗೆಯುವುದಿಲ್ಲವಾ? ಎ೦ದಳು. ಸಾವರಿಸಿಕೊ೦ಡವ. ಕ್ಯಾಮೆರಾದ ಒಳಗೆ ಕಣ್ಣಿಟ್ಟ. ಒ೦ದಿಷ್ಟು ಫೊಟೊ ತೆಗೆದ.

ಕಾಲ್ಗೆಜ್ಜೆಯ ಹುಡುಕಿದ. ಅದನ್ನು ಅರಿತವಳ೦ತೆ ಅನೂಷಾ, ಸೀರೆಯನ್ನು ತುಸುವೇ ಮೇಲೆತ್ತಿ ಕಾಲ್ಗೆಜ್ಜೆಯ ತೋರಿಸಿದಳು. ಅಷ್ಟರಲ್ಲಿ ಅಮ್ಮ ಕರೆದದ್ದಕ್ಕೆ ಓಗುಟ್ಟಿ ಹೊರಟಳು.

ಅವಳ ಕಣ್ಣುಗಳು ಬಿಡದೇ ಕಾಡಿದವು. ಇಯಾನನಿಗೆ ತಾನು ಪ್ರೀತಿಯಲ್ಲಿ ಬಿದ್ದಿರುವುದು ಖಚಿತವಾಯಿತು. ಮಹಾಬಲೇಶ್ವರ ದೇವಳದ ಬಳಿ ಓಡಿದವ ಗೀತಳಿಗಾಗಿ ಹುಡುಕಿದ. ದೂರದಲ್ಲಿದ್ದವಳು ಇವನ ಕ೦ಡು ಹತ್ತಿರ ಬ೦ದಳು.

ಅವಳ ಹತ್ತಿರ ಕರೆದು ಕಿವಿಯಲ್ಲೇನೋ ಪಿಸುಗುಟ್ಟಿದ. ಅವಳು ಸರಿ ಎ೦ಬ೦ತೆ ತಲೆಯಾಡಿಸಿದಳು.
ಮದುಮಗಳ ಜೊತೆ ದಿಬ್ಬಣ ಸಾಗುತ್ತಿದ್ದರೆ. ದೇವಳದ ಮು೦ದಿದ್ದ ಗೀತಾ ಓಡಿಬ೦ದು ಒ೦ದು ಚೆ೦ಗುಲಾಬಿ ಹೂವನ್ನು ಅನೂಷಾಳ ಮು೦ದೆ ಹಿಡಿದಳು. ಒಮ್ಮೆ ಕಕ್ಕಾಬಿಕ್ಕಿಯಾದ ಅನು ಸಾವರಿಸಿಕೊ೦ಡು, ಕೈಗಿತ್ತ ಹೂವನ್ನು ತೆಗೆದು ಮುಡಿದುಕೊ೦ಡಳು. ದೂರದಲ್ಲೆಲ್ಲೋ ಇದ್ದ ನೀಲಿ ಕಣ್ಣಿನ ಹುಡುಗ ನುಸುನಗುತ್ತಿದ್ದ. ಕ್ಯಾಮೆರ ಕೈಯಲ್ಲಿರುವುದನ್ನೂ ಮರೆತಿದ್ದ.

ಅವನೇ ಆರಿಸಿದ್ದ ಬಳೆಗಳನ್ನು ಕೈತು೦ಬ ತೊಟ್ಟುಕೊ೦ಡಿದ್ದಳು ಹುಡುಗಿ. ಅವಳ ಕ೦ಗಳೂ ಅವನ ಹುಡುಕುತ್ತಿದ್ದವು. ನೀಲಿ ಕುರ್ತಾದ ಕೆಳಗೆ ಬಿಳಿಯ ಪೈಜಾಮ ತೊಟ್ಟಿದ್ದ. ಅವನ ಬಿಳಿಯ ಕೋಲು ಮುಖದ ಮೇಲೆ ಚೂರು ಚೂರು ಕಾಣುತ್ತಿದ್ದ ಗಡ್ದ, ಕುರ್ತಾದ ನೀಲಿಯೇ ಕಣ್ಣೊಳಗೆ ಇಣುಕಿವೆಯೇನೋ ಎ೦ಬ೦ಥ ಕಣ್ಣುಗಳು. ಅವಳ ಮನದಾಳವ ಅರಿತವನ೦ತೆ ಅವಳೆದುರು ಬ೦ದು ನಿ೦ತುಬಿಟ್ಟ. ಅವನ ಕಣ್ಣಲ್ಲೊಮ್ಮೆ ಕಣ್ಣಿಟ್ಟು ಮೆಚ್ಚುಗೆಯ ನಗೆ ಸೂಸಿದಳು. ಅವಳ ಹತ್ತಿರ ಬಾಗಿ ನಿನ್ನ ಜೊತೆಯೊ೦ದು ಫೊಟೊ ತೆಗಿಸಿಕೊಳ್ಳಬೇಕು ಎ೦ದ. ಸರಿ ಎ೦ದ ಹುಡುಗಿ ಅವನ ಪಕ್ಕ ನಿ೦ತುಬಿಟ್ಟಳು. ಕ್ಯಾಮೆರಾವನ್ನು ಹಿಡಿದಿದ್ದ ಅರ್ಜುನ್ ಸ್ಮೈಲ್ ಎ೦ದಿದ್ದ. ನೆನಪು ಮನದೊಳಗೆ ಫೊಟೊ ಕ್ಯಾಮೆರಾದೊಳಗೆ ಅಚ್ಚೊತ್ತಿತ್ತು.

ಮದುವೆಯ ಎಲ್ಲ ಸ೦ಭ್ರಮಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವನ ಮನಸ್ಸು ಪೂರ್ತಿಯಾಗಿ ಅನೂಷಾಳ ವಶವಾಗಿತ್ತು. ಅದ್ಯಾವ ಬಗೆಯಲ್ಲಿ ಹೇಳಬೇಕು ಎ೦ದು ತಲೆಬುಡ ತಿಳಿಯುತ್ತಿರಲಿಲ್ಲ ಅವನಿಗೆ. ಭಾವನೆಗಳಿಗೆ ಅದ್ಯಾವ ರೂಪ ಕೊಡಬೇಕೆ೦ದು ಅರ್ಥವಾಗುತ್ತಿರಲಿಲ್ಲ.

ಸ೦ಭ್ರಮದ ಮನೆಯ ಬಿಟ್ಟು ಮ೦ಗಳೂರಿಗೆ ಹೊರಟವನ ಮನಸ್ಸೂ ಕೂಡ ಕಡಲ೦ತೆ ಭೋರ್ಗರೆಯುತ್ತಿತ್ತು. ಅದ್ಯಾವ ಧ್ಯಾನದಿ೦ದಲೂ ಮನಸ್ಸನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿರಲಿಲ್ಲ. ಚ೦ಚಲ ಮನಸ್ಸನ್ನು ಗಟ್ಟಿಗೊಳಿಸುವ ರೀತಿಯೆ೦ಬ೦ತೆ ಒ೦ದು ವಾರ ಅನೂಷಾಳಿಗೆ ಕರೆ ಮೆಸ್ಸೇಜು ಯಾವುದೊ೦ದನ್ನೂ ಮಾಡಲಿಲ್ಲ. ಅನುಷಾಳ ಕರೆಯನ್ನೂ ಸ್ವೀಕರಿಸಲಿಲ್ಲ.

ಇನ್ನೇನು ಅವನು ತಾಯ್ನಾಡಿಗೆ ಹೊರಡುವ ದಿನ ಹತ್ತಿರ ಬರುತ್ತಿತ್ತು. ಅದೇನಾದರಾಗಲಿ ಇ೦ದು ಮನದಾಳವನ್ನೆಲ್ಲ ಅವಳ ಮು೦ದೆ ತೆರೆದಿಡುವುದು ಎ೦ದು ನಿರ್ಧರಿಸಿದ. ಅನೂಷಾಳಿಗೆ ಕರೆ ಮಾಡಿ ಸ೦ಜೆ ಶಿವಾಲಯಕ್ಕೆ ಬಾ ಎ೦ದ. ಸ೦ಜೆ ಐದುವರೆಯ ಹೊತ್ತು. ಅನೂಷಾ ಅದಾಗಲೇ ಶಿವಾಲದ ಜಗುಲಿಯಲ್ಲಿ ಕೂತು ಕಡಲನ್ನು ದಿಟ್ಟಿಸುತ್ತಿದ್ದಳು. ಬ೦ದವ ಅವಳ ಮು೦ದೆ ಪವಡಿಸಿದ. ಅವಳ ಕಾಲಲ್ಲಿ ಅದೇ ಗೆಜ್ಜೆಯಿರುವುದನ್ನೂ ಗಮನಿಸಿದ.
ನೇರವಾಗಿ ಅವಳ ಕ೦ಗಳನ್ನು ದಿಟ್ಟಿಸುತ್ತ " ಅನೂಷಾ, ಕಳೆದ ಒ೦ದುವಾರದಿ೦ದ ನಾನು ನಾನಾಗಿಲ್ಲ. ಇದೇ ಬರುವ ಭಾನುವಾರ ನನ್ನ ತಾಯ್ನಾಡಿಗೆ ನಾನು ಹೋಗುತ್ತಿದ್ದೇನೆ. ನನ್ನಮ್ಮನ್ನ ಬಿಟ್ಟು ಬರುವ೦ತಿಲ್ಲ ನಾನು. ನಾ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಲ್ಲ.
ಭಾರತದೇಶ ನನ್ನ ಸಲುಹಿದ ನಾಡು, ಯಶೋದೆಯ೦ತೆ. ಜೀವನದ ಬಣ್ಣಗಳನ್ನೂ, ಪ್ರೀತಿಯನ್ನೂ ಕಲಿಸಿದೆ ಈ ದೇಶ ನನಗೆ. ನಿನ್ನ೦ಥ ಹುಡುಗಿಯ ಪರಿಚಯ ಈ ಭಾರತ ಪ್ರವಾಸದ ಕೊನೆಯಲ್ಲಿ ಆದದ್ದು ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ನಿನ್ನ ಕ೦ಡ ಮೊದಲ ದಿನವೇ ನನ್ನ ನಾ ಪ್ರೀತಿಸತೊಡಗಿದೆ. ಈ ಭೂಮಿಯಲ್ಲಿನ ಉತ್ಸಾಹವೆಲ್ಲ ಸೇರಿ ನೀನಾಗಿರಬೇಕು ಅನಿಸುತ್ತಿತ್ತು. ನನ್ನ ಜೀವನವ ಪ್ರೀತಿಸುವುದ ಹೇಗೆ೦ದು ಹೇಳಿಕೊಟ್ಟವಳು ನೀನು. ನನಗೆ ಗೊತ್ತಿಲ್ಲದ೦ತೆ ನಿನ್ನ ಪ್ರೀತಿಸಿದ್ದೇನೆ ಅನು. ಜೀವನ ಪೂರ್ತಿ ನಿನ್ನ ಜೊತೆಯಲ್ಲಿರಬೇಕೆ೦ಬ ಹ೦ಬಲ ನನ್ನದು ಜೊತೆಯಾಗುವಿಯಾ?" ಎ೦ದ. ನಿಶ್ಕಲ್ಮಷ, ದೃಢವಾದ ಧ್ವನಿಯಲ್ಲಿ. ಅದ್ಯಾವುದೇ ಕಪಟತೆ ಇಲ್ಲದ ನೀಲ ಕ೦ಗಳು ಅವಳನ್ನೇ ದಿಟ್ಟಿಸುತ್ತಿದ್ದವು.

ಎಲ್ಲ ತನ್ಮಯತೆಯಿ೦ದ ಕೇಳಿದ ಅನೂಷಾ. ನಿಟ್ಟುಸಿರನ್ನು ಬಿಟ್ಟು. "ಇಯಾನ್, ನೀನು ಪ್ರೀತಿಸುತ್ತಿರುವುದು ನನಗೆ ತಿಳಿಯದ ವಿಷಯವೇನಲ್ಲ. ಕ೦ಗಳನ್ನು ಓದಲಾರದಷ್ಟು ಮೂರ್ಖಳೂ ನಾನಲ್ಲ. ಆದರೆ, ನಿನ್ನ ಮೊದಲ ಭೆಟ್ಟಿಯಾದಾಗ ನನ್ನಲ್ಲಿದ್ದದ್ದು ಒ೦ದು ಕುತೂಹಲ. ಆಮೇಲೆ ಒ೦ದು ಶುದ್ಧ ಗೆಳೆತನ. ಗೆಳೆತನಕ್ಕೆ ಅದ್ಯಾವುದೇ ಭೇದ ಇರದೇ ಇರಬಹುದು. ಆದರೆ ಈ ಪ್ರೀತಿ ಅದರಲ್ಲೂ ಮದುವೆಯ ವಿಷಯ ಬ೦ದಾಗ ಎಲ್ಲವೂ ಗ೦ಭೀರವೇ. ನಾನೊಬ್ಬಳು ಪಶ್ಚಿಮ ಘಟ್ಟದ, ಭೋರ್ಗರೆವ ಕಡಲ ನಡುವಿನ ಹುಡುಗಿ. ಎಲ್ಲವ ಬಿಟ್ಟು, ನನ್ನ ದೇಶವ ಬಿಟ್ಟು ಬದುಕುವುದು ದುಸ್ಸಾಧ್ಯ. ಸ೦ಸ್ಕೃತಿ, ಭಾಷೆ, ವಿಚಾರಗಳೆಲ್ಲ ಅದಲು ಬದಲಾಗಿ ನಾನಲ್ಲದ ನಾನಾಗಲು ನನಗಿಷ್ಟವಿಲ್ಲ. ಅತ್ತ ನಿನ್ನ ದೇಶದಲ್ಲಿ ಇರಲೂ ಆಗದೇ, ಇತ್ತ ನಿನ್ನ ಬಿಟ್ಟು ಇಲ್ಲಿ ಬರಲೂ ಆಗದೆ ಜೀವಚ್ಛವವಾದೇನು ನಾನು. ನಿನ್ನ ಗೆಳೆತನದ ನೆನಪು ನನ್ನ ಕೊನೆಯುಸಿರು ಇರುವವರೆಗೂ ಇರುತ್ತದೆ ಬಿಡು. ನಿನ್ನ ಮನಸ್ಸನ್ನು ನಾನು ನೋಯಿಸದ್ದು ಇದ್ದರೆ ದಯವಿಟ್ಟು ಕ್ಷಮಿಸಿಬಿಡು. ಧುಮುಕಲು ತಯಾರಾಗಿದ್ದ ಕಣ್ಣೀರನ್ನು ಕಷ್ಟದಲ್ಲಿ ಸೆರೆಹಿಡಿದಿದ್ದಳವಳು.

ನೀಲ ಕಡಲ ಗಮನಿಸುತ್ತಿದ್ದ ಇಯಾನ. ಒಮ್ಮೆ ಅವಳ ಪಾದವ ನೋಡಿದ. ಎಲ್ಲ ಅರಿತವಳ೦ತೆ ಒ೦ದು ಕಾಲ್ಗೆಜ್ಜೆಯ ಬಿಚ್ಚಿ ಅವನ ಬೊಗಸೆಯಲ್ಲಿತ್ತಳು. ಕೊನೆಯ ಬಾರಿಯೊಮ್ಮೆ ಅವನ ಕ೦ಗಳಲ್ಲಿ ಕಣ್ಣಿಟ್ಟವಳು. ತಿರುಗಿ ಹೊರಟಿಬಿಟ್ಟಿದ್ದಳು.
ಅವನೆಷ್ಟೋ ಹೊತ್ತು ಕುಳಿತಿದ್ದ ಅದೇ ಶಿವಾಲಯದಲ್ಲಿ. ಸ೦ಜೆಗತ್ತಲಲ್ಲಿ ಅವನ ಕಣ್ಣೀರ ಕರೆಯೂ ಕರಗಿಹೋಗಿದ್ದವು.

ಬೆಲಾರಸ್ಸಿಗೆ ಮರಳಿದವನ ಬದುಕಲ್ಲಿ ಹಲವು ಬದಲಾವಣೆಗಳಾಗಿತ್ತು. ಅಲ್ಲಿನ ಪ್ರಸಿದ್ಧ ಆಯುರ್ವೇದದ ವೈದ್ಯನಾಗಿ ಹೊರಹೊಮ್ಮುತ್ತಿದ್ದ. ಕೆ೦ಚುಗೂದಲಿನ ಮಾರಿಯಾಳ ಮದುವೆಯಾಗುವಾಗಲೂ ಮನದಲ್ಲಿ ಅನೂಷಾಳೇ ತು೦ಬಿದ್ದಳು. ಅವನ ಮನೆಯಲ್ಲಿ ಭಾರತೀಯ ಸ೦ಸ್ಕೃತಿಯೆ೦ಬ೦ತೆ ದೀಪವೊ೦ದು ಸದಾ ಬೆಳಗುತ್ತಲಿರುತ್ತದೆ.

ಬರೋಬ್ಬರಿ ಏಳು ವರುಷಗಳ ನ೦ತರ ಭಾರತಕ್ಕೆ ಮರಳಿದವನ ಜೊತೆಯಲ್ಲಿ ಒ೦ದು ಮಗುವೂ ಇತ್ತು. ಮತ್ತೊಮ್ಮೆ ಎಲ್ಲ ನೆನಪುಗಳ ಕೆಣಕಲು ಓಡಿಬ೦ದಿದ್ದ ಶಿವಾಲಯಕ್ಕೆ. ಅಲ್ಲಿನ ಜಗುಲಿಯಲ್ಲಿ ಕುಳಿತಾಗ ಎಲ್ಲವೂ ನೆನಪಾಗಿತ್ತವನಿಗೆ. ಅವನ ಪ್ಯಾ೦ಟಿನ ಜೇಬಿನಲ್ಲಿ ಅನೂಷಾಳ ಒ೦ಟಿ ಗೆಜ್ಜೆಯೂ ಭದ್ರವಾಗಿ ಕುಳಿತಿತ್ತು.

ಅದ್ಯಾವುದೋ ಲೋಕದಲ್ಲಿ ಕಳೆದುಹೋದವನನ್ನು ಘಲ್ ಘಲ್ ಗೆಜ್ಜೆಯ ನಾದ ಎಚ್ಚರಿಸಿತು. ಅವನ ಹೃದಯ ಅವನಿಗೇ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ತಿರುಗಿನೋಡಿದರೆ, ಮಗ ನೀಲ್ ಓಡಿ ಬರುತ್ತಿದ್ದ. ಹತ್ತಿರ ಬ೦ದವ ತನ್ನ ಮುದ್ದಾದ ಮಾತಿನಲ್ಲಿ "ಪಪ್ಪ ಅಲ್ಲಿ ಒ೦ದು ಪುಟ್ಟ ಹುಡುಗಿ ಕುಳಿತಿದ್ದಳು, ಅವಳ ಕಾಲಲ್ಲಿತ್ತು. ಕೊಡುತ್ತೀಯಾ ಎ೦ದು ಕೇಳಿದೆ. ಒ೦ದನ್ನು ತೆಗೆದು ಕೊಟ್ಟಳು ನೋಡು ಎನ್ನುತ್ತ ಬೊಗಸೆಯನ್ನು ಬಿಚ್ಚಿದ."
ಸು೦ದರವಾದ ಪುಟಾಣಿ ಕಾಲ್ಗೆಜ್ಜೆ!! ಇಯಾನನಿಗೆ ಅದೇನು ನಡೆಯುತ್ತಿದೆ ಎ೦ದು ಅರ್ಥಾಅಗುವುದರೊಳಗೆ. ನೀಲ್ ಆ ಗೆಜ್ಜೆಯನ್ನು ಪಪ್ಪನ ಪ್ಯಾ೦ಟಿನ ಜೇಬಿನೊಳಗೆ ಹಾಕಿದ್ದ.

ಅನೂಷಾಳ ಗೆಜ್ಜೆ ಸ೦ಗಾತಿಯೊ೦ದು ಸಿಕ್ಕಿದ ಸ೦ಭ್ರಮದಲ್ಲಿ ಕುಣಿಯುತ್ತಿತ್ತು. ಘಲ್ ಘಲ್.......
(the end )  Saturday, July 8, 2017

ಜೋಡಿಗೆಜ್ಜೆ ೩

ಅಕ್ಕನಿಗೆ ಉಡುಗೊರೆಯ ಹುಡುಕುತ್ತ ಎರಡು ವೀಕೆ೦ಡ್ ಅಲೆದ ಅನೂಷಾ, ಕೊನೆಗೆ ರಾಧೆ-ಕೃಷ್ಣರ ಮರದ ವಿಗ್ರಹವೊ೦ದನ್ನು  ಖರೀದಿಸಿದಳು. ಆ ವಿಗ್ರಹದ ಸೂಕ್ಷ್ಮತೆಯನ್ನು ಗ್ರಹಿಸಿದ್ದ ಹುಡುಗ. "ಇವರಿಬ್ಬರು ಯಾರು ಗೊತ್ತಾ ನಿನಗೆ? ಎ೦ದು ಕೇಳಿದಳು ಅನು. "ಕೈಯಲ್ಲಿ ಸದಾ ಕೊಳಲನ್ನು ಹಿಡಿದಿರುವ ಈ ಸು೦ದರಾ೦ಗ ನನಗೆ ಭಾರತಕ್ಕೆ ಬರುವ ಮೊದಲೇ ಗೊತ್ತು. ನನ್ನ ಅಮ್ಮನ ಅಪ್ಪನ (ಅಜ್ಜನ) ರೂಮಿನಲ್ಲಿ ಇವನದೊ೦ದು ಫೊಟೊವಿತ್ತು. ಅದನ್ನು ನೋಡಿದ ದಿನದಿ೦ದಲೇ ’ಕೃಷ್ಣ’ ಎ೦ಬುದನ್ನು ಸೃಷ್ಟಿಸಿದವ ಮಾತ್ರ ಬಲು ದೊಡ್ಡ ಕಲಾವಿದನಾಗಿರಬೇಕು ಎ೦ದೆನಿಸಿತ್ತು. ತಲೆಯಲ್ಲಿ ನವಿಲುಗರಿ, ಅವನ ಸುತ್ತಲೂ ದನಕರುಗಳು, ಕೈಯಲ್ಲಿ ಬಿದಿರಿನ ಕೊಳಲು. ಈ ಕೃಷ್ಣ ನಿಸರ್ಗಕ್ಕೆ ಅದೆಷ್ಟು ಹತ್ತಿರ ಎ೦ದುಕೊ೦ಡಿದ್ದೆ. ಅವನ ಕಣ್ಣಲ್ಲಿನ ತು೦ಟತನ, ಮೊಗದಲ್ಲಿನ ಪ್ರಸನ್ನತೆ, ತುಟಿಯ೦ಚಿನ ಮುಗುಳುನಗೆಯೆಲ್ಲ ನನ್ನ ರೂಮಿನಲ್ಲೂ ಅವನದೊ೦ದು ಪೋಸ್ಟರನ್ನು ತೂಗುಹಾಕುವ೦ತೆ ಮಾಡಿತ್ತು. ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯದನ್ನು ನೋಡಬೇಕೆ೦ದುಕೊ೦ಡರೆ ಕೃಷ್ಣನ ಫೊಟೊವನ್ನು ನೋಡಿಬಿಡುತ್ತೇನೆ ಎ೦ದವ ಅವಳನ್ನೊಮ್ಮೆ ದಿಟ್ಟಿಸಿದ.

"ಅನು ಒಮ್ಮೆ ಮನೆಯಲ್ಲಿದ್ದಾಗ ನನಗೆ ಅಮ್ಮನ ಡೈರಿ ಸಿಕ್ಕಿಬಿಟ್ಟಿತ್ತು. ಮೊದಲ ಪುಟವನ್ನು ತೆರೆದಾಗ ನನಗೆ ಕ೦ಡದ್ದು ರಾಧೆಯ ಜೊತೆಗಿರುವ ಕೃಷ್ಣನ ಚಿತ್ರ. ನನ್ನ ಅಪ್ಪ ಆಗಾಗ ಚಿತ್ರ ಬಿಡಿಸುತ್ತಿದ್ದರು. ಅವರು ಅಮ್ಮನಿಗೆ ಕೊಟ್ಟಿದ್ದ ಚಿತ್ರವದು. ಅದನ್ನು ಕ೦ಡ ನ೦ತರ ಡೈರಿಯ ಓದಲು ಮನಸ್ಸೇ ಬರಲಿಲ್ಲ. ಅಪ್ಪ-ಅಮ್ಮ  ಅದೇಕೆ ಬೇರೆಯಾದರು ಇ೦ದಿಗೂ ಅದೊ೦ದು ನಿಗೂಢ ನನಗೆ. ಅಮ್ಮ ಇ೦ದಿಗೂ ಒ೦ಟಿಯೇ. ನಾನು ಭಾರತಕ್ಕೆ ಬರುವ ಮೊದಲು ಅಮ್ಮ ಹೇಳಿದ್ದಿಷ್ಟೇ ಕುಟು೦ಬ ವ್ಯವಸ್ಥೆ ಮತ್ತು ಪ್ರೀತಿಯನ್ನು ಭಾರತಿಯರಿ೦ದ ಕಲಿಯಲು ಪ್ರಯತ್ನಿಸು ಎ೦ದು. ರಾಧೆಯ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ನಿನ್ನ ಮಾತಿನಲ್ಲಿ ಕೇಳಲು ಇಷ್ಟ ಎ೦ದ."

ಸುಮ್ಮನೆ ಮುಗುಳುನಕ್ಕು ವಿಗ್ರಹವನ್ನು ತಾನೇ ಗಿಫ್ಟ್ ಪ್ಯಾಕ್ ಮಾಡಿಕೊಳ್ಳುತ್ತೇನೆ ಎ೦ದು ತ೦ದವಳಿಗೆ. "ನೀನೇಕೆ ಒ೦ದು ಜೊತೆ ಬಳೆಯನ್ನು ರಾಧೆಯ ಕೈಗಿಟ್ಟು ಉಡುಗೊರೆ ಪ್ಯಾಕ್ ಮಾಡಬಾರದು?" ಎ೦ಬ ಸಲಹೆಯನ್ನು ಕೊಟ್ಟ. ಅವಳಿಗೂ ಹೌದೆನ್ನಿಸಿ ಸಪುರದ ಎರಡು ಬ೦ಗಾರದ ವರ್ಣದ ಬಳೆಗಳನ್ನು ಆ ವಿಗ್ರಹದ ಜೊತೆಗಿಟ್ಟು ಪ್ಯಾಕ್ ಮಾಡಿದಳು.

"ನನಗೆ ಇಬ್ಬರು ದೊಡ್ಡಮ್ಮ೦ದಿರು. ಎರಡನೇ ದೊಡ್ಡಮ್ಮನ ಮಗಳ ಮದುವೆ, ಅದಿರುವುದು ಗೋಕರ್ಣದಲ್ಲಿ. ನಾನು ನಾಳೆಯೇ ಮನೆಗೆ ಹೊರಟಿದ್ದೇನೆ. ಸ್ವಲ್ಪ ಕೆಲಸಗಳೆಲ್ಲ ಬಾಕಿಯಿದೆ. ನೀನು ಮದುವೆಗೆ ಮೂರು ದಿನವಿದ್ದಾಗ ಬರುವಹಾಗೆ ಎಕ್ಸಪ್ರೆಸ್ ರೈಲಿನ ಟಿಕೆಟ್ ಬುಕ್ ಮಾಡಿಯಾಗಿದೆ. ಟಿಕೆಟ್ ಜೊತೆಗೆ ವಿವರಗಳನ್ನು, ನನ್ನ ತಮ್ಮನ ಮೊಬೈಲ್ ನ೦ಬರನ್ನೂ ನಿನ್ನ ಈಮೇಲ್ ಇನ್ ಬಾಕ್ಸಿಗೆ ಈಗಾಗಲೇ ಕಳುಹಿಸಿದ್ದೇನೆ. ಕುಮಟೆಯ ರೈಲು ನಿಲ್ದಾಣದಲ್ಲಿ ಇಳಿದುಬಿಡು. ಇಳಿವ ಮೊದಲೇ ನನ್ನ ತಮ್ಮ೦ದಿರು ನಿನಗಾಗಿ ಕಾದಿರುತ್ತಾರೆ ಕರೆದೊಯ್ಯಲು. ಡೋ೦ಟ್ ವರಿ. ಟೇಕ್ ಕೇರ್"  ಎ೦ದು ಸೀದ ನಡೆದು ಬಿಟ್ಟಳು.

 ಅವಳ ಊರಲ್ಲಿ ಧರಿಸಲೆ೦ದು ದಟ್ಟ ನೀಲಿ ಬಣ್ಣದ ಕುರ್ತಾವೊ೦ದನ್ನು ಖರೀದಿಸಿದ, ಅವಳಿಗೆ ತಿಳಿಸದೇ. ಅವಳ ಮಾತಿನಲ್ಲಿ ಕ೦ಡಿದ್ದ ಆ ಕಡಲ ತಡಿಯ ಊರಿನತ್ತ ಅವನ ಪಯಣದ ಕನಸನ್ನು ಕಾಣುತ್ತಿದ್ದ ನೀಲಿ ಕಣ್ಣಿನವ. ಅನೂಷಾಳ ಅಕ್ಕಳಿಗೆ೦ದು ಒ೦ದು ಜೊತೆ ಬೆಳ್ಳಿಯ ಪುಟಾಣಿ ಹಣತೆಗಳನ್ನು ಖರೀದಿಸಿದವ ಅದರ ಪ್ಯಾಕಿನ ಮೇಲೆ ತಮಸೋಮಾ ಜ್ಯೋತಿರ್ಗಮಯ ಎ೦ದು ಸ೦ಸ್ಕೃತದಲ್ಲಿ ಬರೆದ. ಅನೂಷಾಳ ಮನೆಗೆ೦ದು ಕಲ್ಲಿನ ಸು೦ದರ ಕುಟ್ಟಾಣಿ (ಕುಟ್ಟಿ ಪುಡಿಮಾಡುವ ಉಪಕರಣ)ಯೊ೦ದನ್ನು ತೆಗೆದುಕೊ೦ಡ. ಮತ್ತೆ ಒ೦ದಿಷ್ಟು ಚಾಕಲೇಟುಗಳನ್ನು ಖರೀದಿಸಿದ. ಬಿಳಿಯ ಪಾಯಿಜಾಮದ೦ಥದ್ದೊ೦ದು ಅದರ ಮೇಲೆ ಖಾದಿಯ ಶರಟೊ೦ದನ್ನು ಧರಿಸಿ. ಕ್ಯಾಮೆರಾದ ಸಮೇತ ಚೀಲವ ಹೆಗಲಿಗೇರಿಸಿ ಮು೦ಜಾನೆಯ ರೈಲನ್ನೇರಿ ತನ್ನ ಸೀಟನ್ನು ಹುಡುಕಿ ಕುಳಿತು ನಿಮಿಷಗಳೈದು ಕಳೆದಿರಲಿಲ್ಲ. ಅವನ ಮೊಬೈಲು ರಿ೦ಗಾಗ ತೊಡಗಿತು. "ಟ್ರೇನಿನಲ್ಲಿ ಇರಬೇಕಲ್ಲ ನೀನು.? ಮನೆಯಲ್ಲಿ ಎಲ್ಲರೂ ನಿನ್ನ ಆಗಮನಕ್ಕಾಗಿ ಕಾದಿದ್ದಾರೆ. ಎಲ್ಲರೂ ದೊಡ್ಡಮ್ಮನ ಮನೆಯಲ್ಲೇ ಇರುವುದರಿ೦ದ ನೀನು ಅಲ್ಲೇ ಬ೦ದುಬಿಡು. ವಿಶ್ ಯು ಅ ಹ್ಯಾಪ್ಪಿ ಜರ್ನಿ ’ಯಾನ್’."

ಕೆಲವೇ ಕೆಲವು ನಿಲ್ದಾಣಗಳಲ್ಲಿ ರೈಲು ನಿ೦ತಿದ್ದರಿ೦ದ ಎರಡುವರೆ ಗ೦ಟೆಯೊಳಗೆ ಅವನ ಪಯಣ ಮುಕ್ತಾಯದ ಹ೦ತವನ್ನು ತಲುಪಿತ್ತು.
ಕುಮಟೆಯ ರೈಲು ನಿಲ್ದಾಣದಲ್ಲಿ ಇಳಿದವನನ್ನು ಕರೆದೊಯ್ಯಲು ಇಬ್ಬರು ಯುವಕರು ಬ೦ದಿದ್ದರು. ನಿಲ್ದಾಣದಲ್ಲಿ ಇಳಿದ ಇಯಾನನ ದೂರದಿ೦ದಲೇ ಕ೦ಡು ಹಿಡಿದು, ಮುಗುಳು ನಗುತ್ತ ಹತ್ತಿರ ಸಾಗಿ. ಕೈಕುಲುಕಿ "ಶಶಾ೦ಕ್, ಅರ್ಜುನ್ ಅನೂಷಾಳ ಕಸಿನ್ಸ್" ಎ೦ದು ತಮ್ಮನ್ನು ಪರಿಚಯಿಸಿಕೊ೦ಡರು.

ನಿಲ್ದಾಣದ ಹೊರಗೆ ಬಿಳಿಯ ಸ್ವಿಫ್ಟ್ ಕಾರೊ೦ದು ಕಾದಿತ್ತು. ಅರ್ಜುನ್ ಡ್ರೈವರ್ ಸೀಟಿನಲ್ಲಿದ್ದರೆ. ಶಶಾ೦ಕ ಹಿ೦ದೆ ಬ೦ದು ಇಯಾನನ ಜೊತೆಗೆ ಕುಳಿತ.
"ಅದೇನು ಓದುತ್ತಿರುವಿರಿ ನೀವಿಬ್ಬರೂ?" ಎ೦ದು ಕೇಳಿದ ಇಯಾನ್. ನಮಗಿಬ್ಬರಿಗೂ ಒ೦ದು ವರ್ಷ ಅ೦ತರ. ನಾನು ಇ೦ಜಿನಿಯರಿ೦ಗ್ ಎರಡನೇ ವರ್ಷದಲ್ಲಿದ್ದೇನೆ. ಶಶಾ೦ಕ್ ಮೊದಲ ವರ್ಷದಲ್ಲಿದ್ದಾನೆ ಎ೦ದ. ರಿಯರ್ ವ್ಯೂವ್ ಮಿರರಿನಲ್ಲಿ ಇಯಾನನ ನೋಡುತ್ತ. "
ಬೆಲಾರಸಿನ ಬಗ್ಗೆ, ಆಯುರ್ವೇದದ ಬಗ್ಗೆ, ಇಯಾನನ ಬಗ್ಗೆ ಮಾತನಾಡುತ್ತ ಅರ್ಧಗ೦ಟೆ ಕಳೆಯುವುದರೊಳಗೆ  ಗೋಕರ್ಣ ಬ೦ದಿತ್ತು. ಸಮುದ್ರ ಹತ್ತಿರವೇ ಇರುವ ಮನೆಯದು. ಬಹಳ ದೊಡ್ಡ ಹಳೆಯ ಮನೆ. ಮನೆಯ ಎದುರಿಗಿದ್ದ ದೊಡ್ಡದಾದ ರ೦ಗೋಲಿ ಅವನನ್ನು ಸ್ವಾಗತಿಸಿತ್ತು. ಅಷ್ಟರಲ್ಲಿ ಅಲ್ಲಿಗೆ ಬ೦ದ ಅನೂಷಾಳ ಅಮ್ಮ ಕೈಕಾಲು ತೊಳೆಯಲು ತ೦ಬಿಗೆಯಲ್ಲಿ ನೀರು ಕೊಟ್ಟು ಸ್ವಾಗತಿಸಿದರು.

ಕೈಕಾಲು ತೊಳೆದು ಅವನ ಎತ್ತರಕ್ಕೆ ಸ್ವಲ್ಪ ಕುಳ್ಳವೇ ಎನಿಸಿದ ಬಾಗಿಲನ್ನು ಕತ್ತು ಬಗ್ಗಿಸಿ ದಾಟಿದ. ಮದುವೆ ಮನೆಯ ಸ೦ಭ್ರಮ ತು೦ಬಿದ ಮನೆಯದು. ಒಳಗೆಲ್ಲೋ ಇದ್ದ ಅನುಷಾ ಓಡಿ ಬ೦ದು ಅವನೆದುರು ನಿ೦ತವಳು. ಪ್ರಯಾಣ ಹೇಗಿತ್ತು ಎ೦ದು ಕೇಳಿದಳು. "ಕೊ೦ಕಣ ರೈಲ್ವೆಯ ಪ್ರಯಾಣವೆ೦ದರೆ ಕೇಳಬೇಕೆ? ಇಟ್ ವಾಸ್ ಜಸ್ಟ್ ಆಸಮ್." ನಡಿ ತಿ೦ಡಿ ತಿನ್ನಲು ಎ೦ದಳು. ಒ೦ದು ಸ್ನಾನ ಮುಗಿಸಿ ಬಟ್ಟೆ ಬದಲಿಸಿ ಬ೦ದುಬಿಡುತ್ತೇನೆ ಎ೦ದವನಿಗೆ. ಮನೆಯ ಕೆಲಸದ ಬೀರ ನಡೆಯಿರಿ ನಿಮ್ಮ ರೂಮಿಗೆ ಕರೆದೊಯ್ಯುತ್ತೇನೆ ಎ೦ದು ಪಕ್ಕದ ತಾರಸಿಯ ಮನೆಗೆ ಕರೆದೊಯ್ದ. ಮನೆಯಲ್ಲಿದ್ದವರಿಗೆಲ್ಲ ಕುತೂಹಲ. ಗೋಕರ್ಣದಲ್ಲಿ ವಿದೇಶಿಗರು ಹೊಸಬರಲ್ಲ. ಅಲ್ಲಿನ ಕೆಲವು ಓಣಿಗಳ ನೋಡಿದರೆ ವಿದೇಶದ ಯಾವುದೋ ಪುಟ್ಟ ಗಲ್ಲಿ ಇರುವ೦ತೆ ಇದೆ.

ಸಾಬೂನು, ಪೇಶ್ಟು, ಟಾವೆಲ್ಲು ಎಲ್ಲ ಇದ್ದ ರೂಮು ಅದು. ಕಿಟಕಿಯ ಬಳಿ ನಿ೦ತರೆ ಆಚೆ ಕಡೆ ಭೋರ್ಗರೆವ ಕಡಲು ಕಾಣುತ್ತಿತ್ತು. ಸ್ನಾನ ಮುಗಿಸಿ. ಕೇಸರಿ ಮಿಶ್ರಿತ ಹಳದಿ ಬಣ್ಣದ ಶರಟು, ನೀಲಿ ಪಾಯಿಜಾಮ ಧರಿಸಿ ಬ೦ದವ. ಮನೆಯಲ್ಲಿ ದೇವರ ಕೋಣೆ ಎಲ್ಲಿದೆ ಎ೦ದು ಕೇಳಿ ಒಳಹೊಕ್ಕ. ಮ೦ದ ನೀಲಾ೦ದ್ರ ಉರಿಯುತ್ತಿತ್ತು. ಕೈಮುಗಿದು, ತಿ೦ಡಿ ತಿನ್ನಲು ಬ೦ದ. ಹಸಿರು ಬಾಳೆ ಎಲೆಯ ನೆಲಕ್ಕೆ ಹಾಕಿದ್ದರು.  ಒ೦ದು ಸಾಲಿನಲ್ಲಿ ಮನೆಯ ಹಿರಿಯರೆಲ್ಲ ಕುಳಿತಿದ್ದರು. ಅಲ್ಲಿಗೆ ಬ೦ದ ಅನುಷಾ. "ಆಯುರ್ವೇದವ ಕಲಿಯಲು, ದೂರದ ಬೆಲಾರಸಿನಿ೦ದ ಭಾರತಕ್ಕೆ ಬ೦ದವನು" ಎ೦ದು ಎಲ್ಲರಿಗೂ ಇಯಾನನ ಪರಿಚಯಿಸಿದಳು. ಎಲ್ಲರಿಗೂ ಕೈಜೋಡಿಸಿ ವ೦ದಿಸುವ ಅವನ ರೀತಿ, ನಯ-ವಿನಯ ಎಲ್ಲರಿಗೂ ಮೆಚ್ಚುಗೆಯಾಯಿತು. ತ೦ದಿದ್ದ ಸ್ವೀಟು, ಕೆಲವು ಚಾಕಲೇಟುಗಳನ್ನು ಅನುಷಾಳ ದೊಡ್ಡಮ್ಮನ ಕೈಗೆ ವರ್ಗಾಯಿಸಿದ. ಮಕ್ಕಳ ಪ೦ಕ್ತಿಯ ಕೊನೆಗೆ ಕೂತವ, ಮಕ್ಕಳ ಜೊತೆ ಮಕ್ಕಳ೦ತೆಯೇ ಬೆರೆತ. ಬಿಸಿ ಬಿಸಿ ಇಡ್ಲಿಯ ಜೊತೆ ಚಟ್ನಿಯ ಹೊಟ್ಟೆ ತು೦ಬ ತಿ೦ದ, ಹೊಗಳಿದ.

ತಿ೦ಡಿ ತಿ೦ದು ಮುಗಿಸಿದವ ಹೆಗಲಮೇಲೊ೦ದು ಟಾವೆಲ್ಲನ್ನು ಧರಿಸಿ ಮನೆಯ ಜನರ೦ತೆ ಮನೆಯ ಕೆಲಸಕ್ಕೆ ನಿ೦ತು ಬಿಟ್ಟ. ಮಿಣಿ ಮಿಣಿ ಬಲ್ಬಿನ ಸರಗಳನ್ನು ಕಟ್ಟುವುದರಿ೦ದ ಹಿಡಿದು, ಬಾಳೆ ಎಲೆ ಒರೆಸುವವರೆಗೆ.

ಸ೦ಜೆ ಐದರ ಸಮಯವಿರಬಹುದು. ಸುಮ್ಮನೆ ಸಮುದ್ರದ ದಡದಗು೦ಟ ನಡೆಯುತ್ತಿದ್ದವನಿಗೆ ಎ೦ಟೊ೦ಭತ್ತು ಹರೆಯದ ಬಾಲೆಯೊಬ್ಬಳು ಎದುರಾದಳು. ಇವನ ಕ೦ಡವಳು ಎ೦ದಿನ ತು೦ಟಾಟದ ತನ್ನ ಹರುಕು "ಇ೦ಗ್ಲಿಷಿನಲ್ಲಿ ವಾಟ್ಸ್ ಯುರ್ ನೇಮ್?" ಎ೦ದು ಕೇಳಿದಳು. ಇವನು ನುಸುನಕ್ಕು ಕನ್ನಡದಲ್ಲಿ "ನಿನ್ನ ಹೆಸರೇನಮ್ಮಾ?" ತಿರುಗಿ ಕೇಳಿದ್ದ. ಅವಳ ಕೈಯಲ್ಲಿ ಖಾಲಿ ಬುಟ್ಟಿಯ ಗಮನಿಸಿದವ. "ಅದೇನು?" ಎ೦ದು ಹುಬ್ಬೇರಿಸಿದ. ತಾನು ದೇವಸ್ಥಾನದ ಎದುರಿಗೆ ಹೂಮಾರುವ ಹುಡುಗಿಯೆ೦ದೂ ಇ೦ದಿನ ವ್ಯಾಪಾರ ಮುಗಿದು ಮನೆಕಡೆಗೆ ಹೊರಟಿದ್ದೇನೆ೦ದು ತನ್ನ ಪರಿಚಯವ ಹೇಳಿಕೊ೦ಡಳು.
"ಅದ್ಯಾಕೆ ಶಾಲೆಗೆ ಹೋಗುವುದಿಲ್ಲ ?" ಎ೦ದು ಅವ ಕೇಳಿದ್ದಕ್ಕೆ."ಅಪ್ಪ ಕುಡ್ಕ೦ಬತ್ಯಾ, ಹೊಡಿತ್ಯಾ. ಪುಸ್ತಕ-ಪಟ್ಟಿ ಎಲ್ಲ ಒಲೆಗೆ ಹಾಕ್ಬಿಟ್ಟಾನೆ. ನಮ್ಮ ಅವಿ (ಅಮ್ಮ) ತಪ್ಸುಕೆ ಹೋದ್ರೆ ಅದ್ಕೂ ಹೊಡಿತಾ" ಎ೦ದು ಅಪ್ಪನ ಕುಡಿತದ ದಾ೦ಧಲೆಯನ್ನೂ, ಅಮ್ಮನ ಅಸಹಾಯಕತೆಯನ್ನು ಮುಗ್ದತೆಯ ಚಿಪ್ಪಿನ ಒಳಗಿದ್ದ, ಅವಳದೇ ಕನ್ನಡದಲ್ಲಿ ವಿವರಿಸಿದ್ದಳು.

ಅವಳ ಜೊತೆ ನಡೆಯುತ್ತಿದ್ದವನಿಗೆ ಕೆಲವು ನಿಮಿಷಗಳಲ್ಲಿಯೇ ಅವಳು ಆತ್ಮೀಯಳೆನಿಸಿದ್ದಳು. ಅವಳ ಪುಟಾಣಿ ಕೈಹಿಡಿದು ನಡೆಯಲಾರಾ೦ಭಿಸಿದ. ಆ ಬಾಲೆ ಸ್ನೇಹವೆ೦ಬುದು ಜಾತಿ, ಭಾಷೆ,ವಯಸ್ಸುಗಳನ್ನು ಮೀರಿದ್ದು ಎನ್ನುವುದನ್ನು ತೋರಿಸಿದ್ದಳು. ಅವಳ ಜೊತೆ ಗೋಕರ್ಣದ ಬೀದಿ ಸುತ್ತಿದ. ತಾನು ಹೂಮಾರಲು ಕುಳಿತುಕೊಳ್ಳುವ ಜಾಗವನ್ನು ತೋರಿಸಿದವಳು. ಅಲ್ಲಿದ್ದ ತನ್ನ ಎರಡು ಗೆಳತಿಯರಿಗೆ ಇಯಾನನ ಪರಿಚಯಿಸಿದಳು ಕೂಡ. ಎರಡು ಐಸ್ಕ್ರೀಮನ್ನು ತೆಗೆದುಕೊ೦ಡವ ಮತ್ತೆ ಕಡಲ ದಡದಲ್ಲಿ ಅವಳ ಜೊತೆ ಕೂತು ಐಸ್ಕ್ರೀಮು ತಿ೦ದ, ಪಾದವ ತೋಯಿಸಿಕೊ೦ಡ. ಮರಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದ.
ಇದೆಲ್ಲವನ್ನು ಅನೂಷಾಳ ದೊಡ್ಡಮ್ಮನ ಮಗಳು ರಮ್ಯಾ ಮನೆಯ ಮಹಡಿಯಲ್ಲಿನ ಅವಳ ರೂಮಿನಿ೦ದ ನೋಡುತ್ತಿದ್ದಳು. ಪಕ್ಕದಲ್ಲಿದ್ದ ಅನೂಷಾ ನೋಡಿಯೂ ನೋಡದ೦ತಿದ್ದಳು.
ಮದುಮಗಳು ರಮ್ಯಾ ಅನೂಷಾಳನ್ನು ಛೇಡಿಸುವ ದನಿಯಲ್ಲಿ "ಇದೆಲ್ಲಿ ಸಿಕ್ಕ ಈ ನೀಲಿ ಕಣ್ಣಿನ ಸು೦ದರಾ೦ಗ? ಸ್ವಲ್ಪ ಮೊದಲೇ ಕ೦ಡಿದ್ದರೆ ಇವನನ್ನೇ ಮದುವೆಯಾಗಿಬಿಡುತ್ತಿದ್ದೆ." ಎ೦ದಳು. "ಇನ್ನೂ ಕಾಲ ಮಿ೦ಚಿಲ್ಲ ರಮ್ಯಾ. ಮಾತಾಡಿಬಿಡಲಾ? ನಾಳೆ ಮ೦ಟಪದಲ್ಲಿ ಮದುಮಗನನ್ನು ಬದಲಾಯಿಸಿದರಾಯಿತು ಅಷ್ಟೆ" ಎ೦ದು ಕಣ್ಣು ಹೊಡೆದಳು.

ಮರುದಿನ ನಾ೦ದಿ ಕಾರ್ಯಕ್ರಮ. ಮನೆಯ ಜನರೆಲ್ಲ ಬೆಳಿಗ್ಗೆ ಬೇಗ ಎದ್ದಿದ್ದರು. ಬೆಳಿಗ್ಗೆಯೇ ಎದ್ದು ಸ್ನಾನ ಮುಗಿಸಿದ ಅನೂಷಾ. ಮನೆಯ೦ಗಳದಲ್ಲಿ ರ೦ಗೋಲಿ ಬಿಡಿಸಿದಳು. ಮರೆತ ಬಣ್ಣಗಳನ್ನು ತಾರೆ೦ದು ಅರ್ಜುನನ ಕೂಗಿದರೆ ಅವ ಸ್ನಾನಕ್ಕೆ ಹೋಗಿದ್ದ. ಇನ್ನೇನು ತಾನೇ ಎದ್ದು ತರಲು ಹೋಗಬೇಕು ಎ೦ದುಕೊ೦ಡವಳ ಎದುರಲ್ಲಿ ನೀಲಿ ಕಣ್ಣಿನ ಹುಡುಗ, ಬಣ್ಣಗಳ ಬುಟ್ಟಿಯ ಹಿಡಿದು ನಿ೦ತಿದ್ದ.
ರ೦ಗೋಲಿಗೆ ಬಣ್ಣ ತು೦ಬಲು ನಾನು ಸಹಕರಿಸಬಹುದೇ ? ಎನ್ನುತ್ತ ಅವಳ ಕೈಯಲ್ಲಿ ಬಣ್ಣಗಳಿದ್ದ ಬುಟ್ಟಿಯಿಟ್ಟ. "ಖ೦ಡಿತ " ಎ೦ದವಳು ಮಾತಿಗೆ ಶುರುವಿಟ್ಟುಕೊ೦ಡಳು. "ಬೋರಾಗುತ್ತಿದೆಯಾ?, ನಿನ್ನ ಹತ್ತಿರ ಮಾತಾಡಲಾಗದಷ್ಟು ಬ್ಯುಸಿಯಾಗಿದ್ದೇನೆ ನೋಡು" ಎನ್ನುತ್ತ ಬಣ್ಣ ತು೦ಬುತ್ತಿದ್ದವಳ ಗಮನಿಸುತ್ತ. ನಿನ್ನ ಮಾತಿನಲ್ಲಿ ಕ೦ಡಿದ್ದೆನಲ್ಲ ನಿನ್ನ ಊರನ್ನು ಅದನ್ನೆಲ್ಲ ಅನುಭವಿಸುತ್ತಿದ್ದೇನೆ. ಬದುಕು ಅನುಭವಗಳನ್ನು ಕಟ್ಟಿಕೊಡುತ್ತ ಹೋಗುತ್ತದೆ ಎ೦ದೆಲ್ಲ ಹೇಳುತ್ತ. ಹೂಮಾರುವ ಹುಡುಗಿ ’ಗೀತಾ’ಳ ಪರಿಚಯವಾದುದನ್ನು ಹೇಳಿದ.
ಅವನು ಬಣ್ಣ ತು೦ಬುತ್ತಿದ್ದ ಬಗೆಯೇ ಅವನೊಬ್ಬ ಕಲಾವಿದನೆ೦ದು ಹೇಳುತ್ತಿತ್ತು.


ದೊಡ್ಡ ರ೦ಗೋಲಿಗೆ ಬಣ್ಣ ತು೦ಬಿ ಇನ್ನೇನು ಮುಗಿಯುತ್ತದೆ ಎನ್ನುವಷ್ಟರಲ್ಲಿ ಅಲ್ಲಿ೦ದೆದ್ದ ಇಯಾನ್, ತನ್ನ ರೂಮಿನತ್ತ ಓಡಿ ಗಲ್ಲ, ಹಣೆಯೆಲ್ಲ ಬಣ್ಣವಾಗಿದ್ದ ಅನೂಷಾಳ ಫೊಟೊವನ್ನು ಮಹಡಿಯಿ೦ದ ತೆಗೆದಿದ್ದ. ತೆಗೆದ ಫೊಟೊವನ್ನು ಮತ್ತೊಮ್ಮೆ ನೋಡಿದ. ಗಲ್ಲಕ್ಕೆ ಹಸಿರು ನೀಲಿ ಬಣ್ಣಗಳು, ಹಣೆಯಲ್ಲಿ ಹಳದಿ ನೀಲಿ, ಮೂಗಿನ ತುದಿಗೆ ಅ೦ಟಿಕೊ೦ಡ ಹಸಿರು ಬಣ್ಣ. ಮೂಗಿನ ತುದಿಯನ್ನೊಮ್ಮೆ ಮುಟ್ಟಿದ ಅದೆಲ್ಲಿ ಅವಳ ಮೂಗಿನ ಹಸಿರು ತನ್ನ ಕೈಬೆರಳ ತುದಿಗೆ ಅ೦ಟಿಕೊ೦ಡಿತೋ ಎ೦ಬ೦ತೆ ತನ್ನ ಕೈ ನೋಡಿಕೊ೦ಡ.
(ಮು೦ದುವರಿಯುವುದು)

Tuesday, July 4, 2017

ಜೋಡಿಗೆಜ್ಜೆ ಭಾಗ ೨

ಅವಳ ಮುಖ ನೋಡಿದವನೊಮ್ಮೆ ನಕ್ಕುಬಿಟ್ಟ. "ಎಲ್ಲವೂ ಸರಿಯಾಗಿದೆ, ಸಮಸ್ಯೆಯೇನಿಲ್ಲ ಅನು" ಎ೦ದವ ತಾನಾಗಿಯೇ ಸ್ಕೂಟಿಯ ಬಳಿ ನಡೆದ. ಅನು ಹೆಲ್ಮೆಟ್ ಹಾಕಿಕೊಳ್ಳುವ ಭರದಲ್ಲಿ ತಲೆಕೂದಲನ್ನೆಲ್ಲ ಬ೦ಧಿಸಿದ ಕ್ಲಿಪ್ಪು ’ಕಟ್’ ಎ೦ದು ಮುರಿದಿತ್ತು. ’ಛೆ’ ಎ೦ದವಳು, ಸ್ವಲ್ಪ ದೂರದಲ್ಲಿದ್ದ ಡಸ್ಟ್ ಬಿನ್ ಗೆ ಎಸೆದು ಬ೦ದಳು.
ಪಯಣ ಮತ್ತೆ ಶುರುವಾಯಿತು. ಗಾಳಿಗೆ ಹಾರುತ್ತಿದ್ದ ಅವಳ ತಲೆಕೂದಲೆಲ್ಲ ಅವನ ಮುಖಕ್ಕೆ ತಾಗುತ್ತಿತ್ತು. ಆಗಾಗ ಕಣ್ಣಿಗೆ ತಾಕುತ್ತಿದ್ದ ಅವಳ ಕೂದಲು ಅವನು ಕಣ್ಣು ತೆರೆಯದ೦ತೆ ಮಾಡಿತ್ತು. ಶಾ೦ಪುವಿನ ಮ೦ದ ಪರಿಮಳವ ಆಘ್ರಾಣಿಸುತ್ತ ಕಣುಮುಚ್ಚಿ ಕುಳಿತುಬಿಟ್ಟಿದ್ದ ಹುಡುಗ. ’ಜ್ಯೋತಿ ಸರ್ಕಲ್’ ನಲ್ಲಿ ಅವನ ಬಿಟ್ಟವಳು, ಸಿಗುವ ಇನ್ಯಾವಾಗಲಾದರೂ ಎ೦ದು ತನ್ನ ಸ್ಕೂಟಿಯನ್ನು ತಿರುಗಿಸಿದಳು.

ರೂಮಿಗೆ ಬ೦ದ ಇಯಾನ್ ಬಟ್ಟೆ ಬದಲಿಸುವಾಗ ಕ೦ಡಿತ್ತು ಒ೦ದು ನೀಳ ಕೂದಲು ಅವನ ಶರಟಿನ ಮೇಲೆ. ತಕ್ಷಣ ಅವನ ಮೊಗದ ಮೇಲೊ೦ದು ಮುಗುಳುನಗೆ ಹಾದು ಹೋಗಿತ್ತು. ಡೈರಿಯ ತೆರೆದವ ಸುಮ್ಮನೆ ಆ ದಿನದ ದಿನಾ೦ಕವ ಬರೆದು ಆ ಕೂದಲನ್ನು ಡೈರಿಯ ಹಾಳೆಯ ಮಧ್ಯೆ ಅ೦ಟಿಸಿದ.

ತಿ೦ಗಳೆರಡು ಕಳೆದವು ಮಧ್ಯೆ ಒಮ್ಮೆ ಸಿಕ್ಕಿದ್ದ ನೀಲಿ ಕಣ್ಣಿನವ.  ಮು೦ದಿನ ವಾರ ವೆ೦ಕಟೇಶ್ವರನ ಜಾತ್ರೆಗೆ, ಅದೇ ಸ೦ಜೆ ದೀಪೋತ್ಸವಕ್ಕೆ ಕರೆದೊಯ್ಯುತ್ತೇನೆ ಎ೦ದಿದ್ದಳು. ಆ ದಿನಕ್ಕಾಗಿ ತನ್ನ ಕ್ಯಾಮೆರಾದೊ೦ದಿಗೆ ಕಾದ.

ನಾಲ್ಕಾರು ಜನ ಗೆಳೆಯ ಗೆಳತಿಯರ ಜೊತೆ ಬ೦ದಿದ್ದಳು ಅನೂಷಾ. ಕಡುನೀಲಿ ಬಣ್ಣದ ಜೊತೆ ಗಿಳಿ ಹಸಿರಿರುವ ಸಲ್ವಾರಿನಲ್ಲಿ. ಗೆಜ್ಜೆ ಧರಿಸಿರಬಹುದೇನೋ ಒಮ್ಮೆ ನೋಡುವ ಪ್ರಯತ್ನ ಮಾಡಿದ . ಗಿಳಿ ಹಸಿರು ಬಣ್ಣದ ಪಟಿಯಾಲಾ ಪ್ಯಾ೦ಟಿನ ಅ೦ಚು ಮಾತ್ರ ಕ೦ಡಿತ್ತು.

ಜಾತ್ರೆಯ ಜ೦ಗುಳಿಯಲ್ಲಿ ಅವಳಿಗೆ ತಿಳಿಯದ೦ತೆ ಅವಳ ಒ೦ದಿಷ್ಟು ಫೊಟೊಗಳನ್ನು ಕ್ಲಿಕ್ಕಿಸಿದ. ಅದೆಷ್ಟು ಸರಳ ಅವಳು ! ಕಾಡಿಗೆಯ ಝಲಕೂ ಇಲ್ಲದ ಅಮಾಯಕ ಕಣ್ಣುಗಳು ಅವಳದ್ದು. ಅವಳೋ ಅವಳ ಸ್ನೇಹಿತರ ಜೊತೆ, ಅದ್ಯಾರ್ಯಾರೋ ಪರಿಚಯದವರ ಜೊತೆ ಮಾತನಾಡುತ್ತಿದ್ದಳು. ಅಷ್ಟೊ೦ದು ಜನರ ಮಧ್ಯದಲ್ಲೂ, ಅವಳ ಗೆಳೆಯ ಗೆಳತಿಯರು ಅವನ ಮಾತನಾಡಿಸುತ್ತಿದ್ದರೂ ತಾನು ಒ೦ಟಿಯೆನಿಸಿತ್ತವನಿಗೆ.
ಸ೦ಜೆ ದೀಪೋತ್ಸವದ ಹೊತ್ತಿಗೆಲ್ಲ ಅವಳ ಕೆಲವು ಗೆಳೆಯರೆಲ್ಲ ಹೊರಟು ಬಿಟ್ಟಿದ್ದರು. ಇಬ್ಬರು ಗೆಳತಿಯರು ಮಾತ್ರ ಇದ್ದರು. ದೀಪಗಳ ಬೆಳಕಿನಾಟ ಶುರುವಾಗಿತ್ತು. ದೇವಸ್ಥಾನದ ಸುತ್ತಲೆಲ್ಲ ದೀಪಗಳು. ಅದೇ ಬೀದಿಯಲ್ಲಿದ್ದ ಗೆಳತಿಯೊಬ್ಬಳ ಮನೆಯ ಜಗುಲಿಯಲ್ಲಿ ಗೆಳತಿಯರ ಜೊತೆ ಹೋಗಿ ಕುಳಿತಳು ಅನುಷಾ. ನೀಲಿ ಕಣ್ಣಿನವ ಫೊಟೊ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದ. ಕಣ್ಣು ಹಾಯಿಸಿದಲ್ಲೆಲ್ಲ ದೀಪಗಳೇ.!

 ಸ್ವಲ್ಪ ಹೊತ್ತಿನಲ್ಲಿ ಇವಳ ಹುಡುಕಿಕೊ೦ಡು ಬ೦ದವ. ದೀಪದ ಬೆಳಕಲ್ಲಿ ಗೆಜ್ಜೆಯ ಹುಡುಗಿಯ ಕ೦ಡ. "ಈ ದೀಪಗಳೆ೦ದರೆ ತು೦ಬ ಪ್ರೀತಿ ನನಗೆ. ಕತ್ತಲೆಯ ಕಳೆದು ಬೆಳಕನ್ನು ಕೊಡುವ ಹಣತೆಗಳು ಅದೆಷ್ಟು ಚ೦ದ ಅಲ್ವಾ? ಗೊತ್ತಲ್ಲವಾ ನಿನಗೆ ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತ೦ಗಮಯ. ಅ೦ದ್ರೆ ನನ್ನ ಅಸತ್ಯದಿ೦ದ ಸತ್ಯದೆಡೆಗೆ, ಕತ್ತಲೆಯಿ೦ದ ಬೆಳಕಿನೆಡೆಗೆ, ಮೃತ್ಯುವಿನಿ೦ದ ಅಮೃತತ್ವದತ್ತ ನಡೆಸು ಎ೦ಬ ಪ್ರಾರ್ಥನೆಯದು. ದೀಪವನ್ನು ಬೆಳಗುವುದೆ೦ದರೆ ಅದೊ೦ದು ಖುಷಿ ನನಗೆ. ನನ್ನ ಹುಟ್ಟು ಹಬ್ಬದ೦ದು ಅದ್ಯಾವಾಗಲೂ ಮೊಬತ್ತಿಯನ್ನು ಆರಿಸುವುದಿಲ್ಲ ನಾನು. ಮನೆಯಲ್ಲಿ ಪುಟ್ಟದೊ೦ದು ಹಣತೆ ಬೆಳಗುತ್ತಿದ್ದರೆ ಅದರ ಖುಷಿಯೇ ಬೇರೆ ಎ೦ದಳು". ಅವಳ ಮಾತಿನಲ್ಲಿ ಮುಳುಗಿಹೋಗಿದ್ದ. ಅವಳು ಹೇಳಿದ್ದೆಲ್ಲ ಸತ್ಯ ಎನಿಸಿತವನಿಗೆ.

ನೀನೊ೦ದು ಹಣತೆಯ ಹಿಡಿದು ನಿಲ್ಲು ಒ೦ದು ಫೊಟೊ ತೆಗೆಯುತ್ತೇನೆ ಎ೦ದ. ಹಣತೆಯ ಹಿಡಿದು ನಿ೦ತಳು. ಕೂದಲನ್ನೆಲ್ಲ ಒ೦ದೇ ಭುಜಕ್ಕೆ ಹಾಕು ಎ೦ದ. ಅವನು ಹೇಳಿದ೦ತೆ ಮಾಡಿ ಎರಡೂ ಕೈಯಲ್ಲಿ ದೀಪವ ಹಿಡಿದು ನಿ೦ತಳು. ನಾಲ್ಕೈದು ಸೆಕೆ೦ಡುಗಳು ಅವಳನ್ನೇ ದಿಟ್ಟಿಸಿದವ ಅವಳ ಬಳಿ ಸಾಗಿ, ಅವಳ ಮು೦ಗುರುಳನ್ನು ಸರಿಮಾಡಿ ಬ೦ದವ ನಾಲ್ಕಾರು ಫೊಟೊ ಕ್ಲಿಕ್ಕಿಸಿದ. ಮತ್ತೆ ಅವಳ ಮೊಗವನ್ನೊಮ್ಮೆ ದಿಟ್ಟಿಸಿದ.

ದೀಪೋತ್ಸವ ಸಾಗಿತ್ತು. ಎಲ್ಲರೂ ದೇವಳದಲ್ಲೇ ಊಟ ಮಾಡಿದರು. ನಾಳೆ ಬೆಳಿಗ್ಗೆ ಬೇಗ ಏಳಬೇಕೆ೦ಬ ನೆಪಹೇಳಿ ತನ್ನ ರೂಮಿಗೆ ಸಾಗಿದ ನೀಲಿ ಕಣ್ಣಿನ ಹುಡುಗ.

ಮಧ್ಯರಾತ್ರಿ ಕಳೆದಿತ್ತು. ಕ್ಯಾಮೆರಾದ ಫೊಟೊಗಳನ್ನೆಲ್ಲ ಲ್ಯಾಪ್ ಟಾಪಿಗೆ ವರ್ಗಾಯಿಸಿದವ ಅವಳ ನೋಡುತ್ತ ಕುಳಿತುಬಿಟ್ಟ. ಅವಳ ಮುಗ್ಧ ಕ೦ಗಳು ಕಾಡಿತ್ತವನನ್ನು. ದೀಪಧಾರಿಣಿಯಾಗಿ ನಿ೦ತ ಫೊಟೊವ೦ತೂ ಅದ್ಭುತವಾಗಿ ಬ೦ದಿತ್ತು. ಅದನ್ನು ದೊಡ್ಡದಾಗಿಸಿ ಫ್ರೇಮು ಹಾಕಿಸಿ ರೂಮಿನಲ್ಲಿ ತೂಗುಹಾಕಬೇಕೆ೦ದುಕೊ೦ಡ.
ಸಧ್ಯಕ್ಕೆ ಅವನ ಸೊನಿ ಎರಿಕ್ಸನ್ ಫೋನಿನ ವಾಲ್ ಪೇಪರ್ ಮಾಡಿಕೊ೦ಡು ಮುಸುಕೆಳೆದುಕೊ೦ಡ.

ಎರಡುಗ೦ಟೆಯ ಹೊತ್ತಿಗೆ ಮಲಗಿದವನ ಕನಸಲ್ಲೆಲ್ಲ ದೀಪಧಾರಿಣಿಯೇ ಕಾಣುತ್ತಿದ್ದಳು. ಕನಸಿನಲ್ಲೂ ಅದೇ ಶಾ೦ಪೂವಿನ ಪರಿಮಳ ಬ೦ದ೦ತಾಗಿ ಎದ್ದು ಕೂತುಬಿಟ್ಟಿದ್ದ.

ಪಕ್ಕದಲ್ಲೇ ಮಲಗಿದ್ದ ಮೊಬೈಲನ್ನು ತೆರೆದು ಆ ಅಪರಾತ್ರಿಯ ಹೊತ್ತಲ್ಲಿ "ಅನು ಅದ್ಯಾವ ಶಾ೦ಪೂ ಬಳಸುವುದು ನೀನು?" ಎ೦ಬ ಮೆಸ್ಸೇಜ್ ಕಳುಹಿಸಿದ.

ಹುಡುಗಿ ಇನ್ನೇನು ಮಲಗುವವಳಿದ್ದಳು, ಬೀಪ್ ಎ೦ದು ಬೆಳಗಿದ ಮೊಬೈಲಿನಲ್ಲಿ ಮೆಸ್ಸೇಜ್ ಓದಿದವಳು. "ಅದ್ಯಾಕೆ? ನಿನಗೂ ಉದ್ದ ಕೂದಲು ಬಿಡಬೇಕಾ? ನಾನು ಶಿಕಾಕಾಯಿ ಪುಡಿ ಬಳಸುವುದು. ಮೀರಾ, ಕಾರ್ತಿಕಾ ಎ೦ದು ಒ೦ದಿಷ್ಟು ಬ್ರಾ೦ಡುಗಳಿವೆ ನೋಡು ಮಾರ್ಕೆಟ್ಟಿನಲ್ಲಿ" ಎ೦ದಳು.

ಆಯುರ್ವೇದ ಕಲಿತವನಿಗೆ ಶಿಕಾಕಾಯಿ(ಸೀಗೆಕಾಯಿ) ಅರ್ಥವಾಗಲು ಸಮಯ ಹಿಡಿಯಲಿಲ್ಲ.

ಮರುದಿನ ಸ೦ಜೆ ಕ್ಲಿನಿಕ್ಕಿನಿ೦ದ ಬರುವಾಗ ಸೀಗೆಪುಡಿಯ ಬಾಟಲಿಯೊ೦ದನ್ನು ತ೦ದು ರೂಮಿನಲ್ಲಿ ಇಟ್ಟಿದ್ದ.
ಅವಳದೇ ಪರಿಮಳ ರೂಮಿನಲ್ಲೆಲ್ಲ ತು೦ಬಿಕೊ೦ಡ ಕಲ್ಪನೆ. ಬ್ಯಾಗಿನಲ್ಲಿದ್ದ ಪುಟಾಣಿ ಹಣತೆಯೊ೦ದನ್ನು ಹೊರತೆಗೆದು ಎಣ್ಣೆ ಸುರಿದು, ಬತ್ತಿ ಇಟ್ಟು ದೀಪ ಹಚ್ಚಿದ. ದೀಪ ಬೆಳಗುವುದನ್ನೇ ನೋಡುತ್ತ ಕುಳಿತ. ಅಸತೋಮಾ ಸದ್ಗಮಯ.... ತನ್ನಿ೦ದ ತಾನೇ ಅವನ್ ಬಾಯಿಯಿ೦ದ ಹೊರಬರುತ್ತಿತ್ತು.

ಅವಳು ಹೇಳಿದ್ದು ಅದೆಷ್ಟು ನಿಜ ಅನಿಸಿತವನಿಗೆ. ಅ೦ದಿನಿ೦ದ ಅವನೂ ದೀಪಗಳನ್ನು, ಹಣತೆಗಳನ್ನು ಪ್ರೀತಿಸಲು ಶುರುಮಾಡಿದ.
ರೂಮಿನಲ್ಲೆಲ್ಲ ಅವಳ ಕ೦ಪು, ಮನದಲ್ಲೂ ಅವಳ ನೆನಪು. ಅವಳ ಫೊಟೊವನ್ನೊಮ್ಮೆ ಮೊಬೈಲಿನಲ್ಲಿ ನೋಡಿದವ ಕಳೆದು ಹೋಗಿದ್ದ. ಅವಳ ಸೆಳೆತ ಇನ್ನೂ ಜೋರಾಗುತ್ತಿದೆ ಅನಿಸಹತ್ತಿತು. ಅತಿ ಕಷ್ಟದಿ೦ದ ಅವಳ ಸೆಳೆತದಿ೦ದ ತಪ್ಪಿಸಿಕೊಳ್ಳಲು ವೀಕೆ೦ಡುಗಳಲ್ಲಿ ಮ೦ಗಳೂರಿನಿ೦ದ ಹೊರಗಿರತೊಡಗಿದ.
ಮನದಲ್ಲಿ ಪೂರ್ತಿ ಅವಳೇ ತು೦ಬಿರಬೇಕಾದರೆ, ಯಾವ ಜಾಗವಾದರೇನು? ಅವಳ ನೆನಪು ಅಯಾಚಿತವಾಗಿ ಧಾಳಿಯಿಡುತ್ತಿತ್ತು.

ಇದೊ೦ದು ಸೆಳೆತವೇ? ಪ್ರೀತಿಯೇ? ಅವನಿಗೇ ತಿಳಿಯಲಿಲ್ಲ. ಮನವ ತಡೆ ಹಿಡಿದಷ್ಟು ಅವಳೆಡೆಗೆ ಓಡುತ್ತಿತ್ತು. ಅದ್ಯಾವ ಖಬರು ಇಲ್ಲದ ಅನು ತನ್ನ ಕಾಲೇಜಿನ ದಿನಚರಿಯಲ್ಲಿ ಮುಳುಗಿದ್ದಳು.
ಇಬ್ಬರಲ್ಲೂ ಅದ್ಯಾವ ಕಾರಣವೂ ಇಲ್ಲದ ಮೌನದಿ೦ದಾಗಿ ಸ೦ಪರ್ಕವೇ ಇರಲಿಲ್ಲ.
ಇಯಾನನ ಮನದಲ್ಲಿ ಧುಮು ಧುಮು, ಒ೦ದು ಬಗೆಯ ಅಸಮಾಧಾನ, ಬೇಸರ ಅವಳ ಮೇಲೆ. ನನ್ನ ನೆನಪೂ ಬರುವುದಿಲ್ಲವಾ ಅವಳಿಗೆ? ಒ೦ದೂ ಮೆಸ್ಸೇಜು ಕೂಡ ಇಲ್ಲ. ಅದ್ಯಾಕೆ ಗಮನವನ್ನು ತನ್ನತ್ತ ಸೆಳೆವ ಮಗುವಿನ೦ತಾಗಿದೆ ಮನಸ್ಸು? ಅದ್ಯಾವ ಧ್ಯಾನ ಮಾಡಲು ಪ್ರಯತ್ನಿಸಿದರೂ ಅವಳದ್ದೇ ಧ್ಯಾನ! ಮನದೊಳಗೊ೦ದು ಬಗೆಯ ಹುಯ್ದಾಟ. ಇನ್ನು ಸ್ವಲ್ಪ ದಿನ ಹೀಗೆ ಬಿಟ್ಟರೆ ಹುಚ್ಚು ಹಿಡಿದುಹೋಗಬಹುದು ಅನಿಸಿಬಿಟ್ಟಿತು. ಅಮ್ಮನಿಗೆ ಫೋನು ಮಾಡಿದ. ಎಲ್ಲವ ಹೇಳಿಬಿಟ್ಟ. ಜೋರಾಗಿ ನಕ್ಕ ಅಮ್ಮ ಅವನಿಗೆ ಕ೦ಗ್ರಾಟ್ಸ್ ಹೇಳಿ "ಮೈ ಸನ್ ಯು ಆರ್ ಇನ್ ಲವ್, ಕೊನೆಗೂ ಒಬ್ಬಳನ್ನು ನೀನು ಪ್ರೀತಿಸಿದೆ ಬಿಡು ನನಗೆ ತು೦ಬ ಖುಷಿಯಾಗುತ್ತಿದೆ" ಎ೦ದಿದ್ದಳು.  ಕೊನೆ ಒಮ್ಮೆ ಅತ್ತು ತನ್ನ ತಾನು ಸಮಾಧಾನಿಸಿಕೊ೦ಡ!
ಒ೦ದು ಗುರುವಾರದ ರಾತ್ರಿ ಒ೦ಭತ್ತು ವರೆಯಾಗಿರಬಹುದು ನೀಲಿ ಕಣ್ಣಿನವನ ಫೋನು ರಿ೦ಗಾಯಿತು. ಬ೦ದು ನೋಡಿದರೆ ಅನೂಷಾ!
ಫೋನು ಎತ್ತಿದವನೇ ’ಹಲೊ’ ಎ೦ದೂ ಅನ್ನಲಿಲ್ಲ. ಅವಳೇ ಶುರು ಮಾಡಿದಳು "ನನ್ನ ಅಕ್ಕ ಅ೦ದರೆ ದೊಡ್ಡಮ್ಮನ ಮಗಳ ನಿಶ್ಚಿತಾರ್ಥವಿತ್ತು ಊರಿಗೆ ಹೋಗಿದ್ದೆ ಮು೦ದಿನ ತಿ೦ಗಳು ಮದುವೆ. ಬರೇ ಇಪ್ಪತ್ತೈದು ದಿನಗಳು ಮಾತ್ರ ಉಳಿದಿದೆ, ತಯಾರಿಗೆ, ನಿನ್ನ ಕರೆದುಕೊ೦ಡು ಹೋಗಬೇಕೆ೦ದಿದ್ದೇನೆ, ಬರ್ತೀಯಲ್ವಾ? " ಎ೦ದಳು. ಅವಳ ಮೇಲಿದ್ದ ಸಿಟ್ಟಿನ೦ಥ ಸಿಟ್ಟೆಲ್ಲ ಇಳಿದು ಹೋಯಿತು.
ಈ ವೀಕೆ೦ಡು ಏನು ನಿನ್ನ ಪ್ಲಾನು? ನಿನಗೆ ಸಿಗಬೇಕು. 
ಓಹ್! ಮದುವೆಗೆ ಬಳೆ ಸರಗಳನ್ನೆಲ್ಲ ಖರೀದಿಸಬೇಕು ಎ೦ದಳು. ನಾನು ನಿನ್ನ ಜೊತೆಗೆ ಬರಬಹುದೇ. "ಖ೦ಡಿತ "
ಶನಿವಾರದ ಸ೦ಜೆ ಶುಭ್ರ ಬಿಳಿಯ ಕುರ್ತಾ ಧರಿಸಿದವ; ಜೋಳಿಗೆ, ಕ್ಯಾಮೆರ ಯಾವುದನ್ನೂ ತೆಗೆದುಕೊಳ್ಳದೇ ಹೊರಬಿದ್ದಿದ್ದ. ಅವಳು ಬಸ್ಸಿನಲ್ಲಿ ಬ೦ದು ಬಾಜಾರಿನಲ್ಲಿ ಇಳಿದಿದ್ದಳು, ಅವನಿಗಾಗಿ ಕಾದಳು. ದೂರದಲ್ಲಿ ಅವಳ ನೋಡುತ್ತಲೇ ಅವನ ಕ೦ಗಳು ಹೊಳೆದವು. ಕೈಬೀಸಿದ ಹತ್ತಿರಕ್ಕೆ ಸಾಗಿದ.
ಬ೦ದವನ ನಡೆ ತು೦ಬ ಹುಡುಕಲಿಕ್ಕಿದೆ ಬಳೆಗಳನ್ನು, ಜೊತೆಗೆ ಅವಳಿಗೊ೦ದು ಉಡುಗೊರೆಯ ಕೊಳ್ಳಬೇಕು ಎ೦ದಳು.

ಅದ್ಯಾವ ಬಣ್ಣದ ಬಳೆಗಳನ್ನು ಹುಡುಕುತ್ತಿರುವೆ?
 ನನಗೆ ಅಮ್ಮ ತೆಗೆದುಕೊ೦ಡಿಟ್ಟಿದ್ದು ಕಡು ನೇರಳೆ ಬಣ್ಣದ ಸೀರೆ ಅದಕ್ಕೆ ಹಸಿರ೦ಚ೦ತೆ.
"ಓಹ್! ನೇರಳೆ ಬಣ್ಣದ ಹಲವು ಶೇಡಿನ ಬಳೆಗಳನ್ನು ಕೊಳ್ಳೋಣ ಸೇರೆಗೆ ತು೦ಬ ಚೆ೦ದ ಕಾಣಬಹುದು". ಅವನ ನೀಲಿ ಕ೦ಗಳನ್ನು ತಲೆಯೆತ್ತಿನೋಡಿದಳೊಮ್ಮೆ.
ಧೃವ ಪ್ರದೇಶದ ಹಿಮವೆಲ್ಲ ಕರಗಿ ಇವನ ಕಣ್ಣಲ್ಲಿ ಪ್ರೀತಿಯಾಗಿವೆಯೋ ಎ೦ಬ ಭಾವ ಸ್ಫುರಿಸುವ ಕ೦ಗಳವು.
ಅದ್ಯಾಕೆ ಅವಳು ಕಣ್ಣ ಭಾಷೆಯ ಓದುತ್ತಿರಲಿಲ್ಲವೋ? ಅಥವಾ ಓದಿಯೂ ಓದಿದವಳ೦ತಿದ್ದಳೋ!
ಬಳೆಗಳ ಘಲ ಘಲದಲ್ಲಿ ಕಳೆದುಹೋಗಿದ್ದರು ಇಬ್ಬರೂ. ಒ೦ದೂವರೆ ಗ೦ಟೆ ಕಳೆದರೂ ಬಳೆಗಳ ಆರಿಸಿಲಾಗಲಿಲ್ಲ. ಒ೦ದೈದು ನಿಮಿಷ ಇಲ್ಲೇ ಇರು, ಇದೀಗ ಬರುವೆ ಇಲ್ಲೇ ಇರು ಎ೦ದವ ಜನ ಜ೦ಗುಳಿಯಲ್ಲಿ ಕರಗಿಹೋದ.

ಅನೂಷಾ, ಬಳೆಗಳ ಹುಡುಕುವುದ ಬಿಟ್ಟು. ದೊಡ್ಡದೆರಡು ಜೊತೆ ಕಿವಿಯೋಲೆಗಳ ಆರಿಸಿದಳು.
ಕೌ೦ಟರಿನಲ್ಲಿದ್ದವಳ ಕೈಯನ್ನು ಅದ್ಯಾರೋ ತಟ್ಟಿದ೦ತಾಗಿ, ತಿರುಗಿ ನೋಡಿದರೆ ಇಯಾನ ನಿ೦ತಿದ್ದ. ಕೈಯಲ್ಲಿ ಕಡು ನೇರಳೆ, ನೀಲಿ ಮಿಶ್ರಿತ ನೇರಳೆ, ತಿಳಿ ನೇರಳೆ ಬಳೆಗಳು!

ಅಲ್ಲೇ ಅ೦ಗಡಿಯ ಹೊರಗೆ ಕೂತವ ಬಳೆಗಳನ್ನು ಮಿಕ್ಸ್ ಮಾಡಲು ಪ್ರಾರ೦ಭಿಸಿದ್ದ. ಅಲ್ಲೊಬ್ಬ ಕಲಾವಿದ ಬಣ್ಣಗಳ ಮಿಶ್ರಣ ಮಾಡುತ್ತಿದ್ದ೦ತೆ ಅನಿಸಿತು. ಅವಳು ನೋಡುತ್ತಿದ್ದಳು, ಅವ ಬಳೆಗಳ ಮಿಶ್ರಣವನ್ನು ಮುಗಿಸಿ ಅ೦ಚಿಗೆ ಎರಡು ಸಪೂರದ ಬ೦ಗಾರದ ವರ್ಣದ ಬಳೆಗಳನ್ನು ಸೇರಿಸಿ, ಅವಳ ಕೈಗಿತ್ತಿದ್ದ. ಬಳೆಗಳನ್ನೇ ನೋಡುತ್ತಿದ್ದವಳು ಈ ಜಗವನ್ನೇ ಮರೆತ೦ತಿದ್ದಳು.
ಅವಳಿಗೆ ಅದ್ಭುತವಾಗಿ ಹೊ೦ದುವ೦ತಿದ್ದ ಬಳೆಗಳ ಅಳತೆಯನ್ನು ಅದು ಹೇಗೆ ಪತ್ತೆ ಹಚ್ಚಿದ್ದ ಎನ್ನುವುದು ಅವಳಿಗೆ ನಿಗೂಢವಾಗಿಯೇ ಉಳಿಯಿತು.

"ನಿನ್ನಲ್ಲಿ ಒಬ್ಬ ಕಲಾವಿದನಿದ್ದಾನೆ ’ಯಾನ್’, ಅದೆಲ್ಲಿ೦ದ ಮಾಯಮಾಡಿ ತ೦ದೆ ಈ ಬಳೆಗಳನ್ನು? ಮಗುವಿನ ಮುಗ್ಧತೆಯಲ್ಲಿ ಕೇಳಿದಳು. ನೂರರ ಎರಡು ನೋಟುಗಳನ್ನು ಅವನಿಗೆ ಕೊಡುತ್ತ. "ಇದ್ಯಾಕೆ?" ಎ೦ದನವ. ಅ೦ಗಡಿಯವನಿಗೆ ಹಣಕೊಡದೇ ಕದ್ದು ತ೦ದೆಯಾ ಈ ಬಳೆಗಳನ್ನು?
ನುಸುನಕ್ಕವ. ನನ್ನ ಕಡೆಯಿ೦ದ ಪುಟ್ಟದೊ೦ದು ಕಾಣಿಕೆ ಎ೦ದುಕೊ೦ಡುಬಿಡು.
"ನೋ ವೇಯ್ಸ್, ಪ್ಲೀಸ್ ಇದಕ್ಕಿ೦ತ ಜಾಸ್ತಿಯಾಗದ್ದಿದ್ದರೆ ಹೇಳು. ನನ್ನ ಜೊತೆ ಬ೦ದು ಇಷ್ಟು ಸಹಾಯ ಮಾಡಿದ್ದೆ ದೊಡ್ದ ವಿಷಯ. ಹಣ ತೆಗೆದುಕೊಳ್ಳದಿದ್ದರೆ ನಿನ್ನ ನಮ್ಮೂರಿಗೆ ಕರೆದೊಯ್ಯುವುದಿಲ್ಲ"
ಅವಳ ಕಣ್ಣಲ್ಲಿ ಒ೦ದು ಮಗುವಿನ ಛಾಯೆಯ ಗಮನಿಸಿದವ. ಮಾತಿಲ್ಲದೇ ನೂರರ ಎರಡು ನೋಟುಗಳ ತೆಗೆದುಕೊ೦ಡ.
(ಮು೦ದುವರಿಯುವುದು)

Thursday, June 29, 2017

ಜೋಡಿಗೆಜ್ಜೆ

ಆ ಪಡುವಣದ ಕಡಲ ಭೋರ್ಗರೆತವ ಕೇಳಿದೊಡನೆ ಹುಚ್ಚೆದ್ದು ಅಲ್ಲೇ ಪಕ್ಕದಲ್ಲಿದ್ದ ಹೆ೦ಡತಿಗೆ "ಹನಿ, ನಾನು ಕಡಲಿಗೆ ಹೋಗುತ್ತಿದ್ದೇನೆ, ಆಮೇಲೆ ನೀನು ’ನೀಲ್’ ಜೊತೆ ಬಾ "ಎ೦ದು ಓಡಿದ್ದನವ, ಸಮುದ್ರ ತೀರಕ್ಕೆ ಬರಿಗಾಲಿನಲ್ಲಿ. ಸರಿಯೆ೦ದ ಅವನ ಹೆ೦ಡತಿ ಮ೦ಚದಲ್ಲಿ ಮಲಗಿದ್ದ ಪುಟಾಣಿ ಮಗನ ಜೊತೆಗೆ ಹೊಟೇಲಿನಲ್ಲಿಯೇ ಉಳಿದಳು. ಅವನ ಬಿಳಿಯ ಉದ್ದುದ್ದ ಪಾದಗಳು ಇನ್ನೂ ಬಿಸಿಯಿದ್ದ ಮರಳ ಕಣಗಳನ್ನು ಸ್ಪರ್ಷಿಸಿ ಪುಳಕಗೊ೦ಡು ಗುಲಾಬಿ ಬಣ್ಣಕ್ಕೆ ತಿರುಗಿದ್ದವು. ಹಾಗೆಯೇ ಸ್ವಲ್ಪ ದೂರ ಸಾಗಿ, ತನ್ನ ಕೆನೆ ಬಣ್ಣದ ಪೈಜಾಮವನ್ನು ಮ೦ಡಿಯವರೆಗೆ ಮಡಿಸಿದವ ಶರಧಿಯ ನೀರಿನಲ್ಲಿ ಪಾದವ ತೋಯಿಸಿಕೊ೦ಡ. ತಿಳಿಗೆ೦ಪು ಬಣ್ಣದ ಸಡಿಲವಾಗಿದ್ದ ಷರಟಿನ ತೋಳನ್ನು ಮಡಿಸಿ ಅದೇ ನೀರಿನಲ್ಲಿ ಮುಖ ತೊಳೆದ ಅವನ ಕಣ್ಣಲ್ಲಿ ನೀರಿತ್ತು. ಅವನ ಕಣ್ಣ ಹನಿಯನ್ನು ಕುಡಿದ ಕಡಲಿಗೂ ತಿಳಿಯಲಿಲ್ಲ ಅದು ದುಃಖಕ್ಕೋ, ಸ೦ತಸಕ್ಕೋ ಎನ್ನುವುದು!
ಅಲ್ಲೇ ಕುಳಿತನವ ಅದೇ ಕಡಲನ್ನು ನೋಡುತ್ತ. ಅವನ ಹೆಸರು ಇಯಾನ್ ದಸ್ಕೆವಿಚ್. ದೂರದ ಯುರೋಪ್ ಖ೦ಡದ ಬೆಲಾರಸ್ ದೇಶದವನು. ಆರಡಿ ಮೂರಿ೦ಚು ಎತ್ತರದ ಆಜಾನುಬಾಹು. ಅವನ ಚುರುಕು ನೀಲಿಕ೦ಗಳು ನಿಜಕ್ಕೂ ಎ೦ಥವರನ್ನಾದರೂ ಆಕರ್ಷಿಸುತ್ತವೆ.  ಈಗ ಹತ್ತಿರ ಹತ್ತಿರ ಮೂವತ್ಮೂರರ ವಯಸ್ಸು ಅವನಿಗೆ. ಭಾರತದೊ೦ದಿಗಿನ ಅವನ ನ೦ಟು ಅನೂಹ್ಯವಾದದ್ದು. ಹನ್ನೆರಡುಷಗಳ ಹಿ೦ದೆ ಅವನ ಅಮ್ಮನ ಆಸೆಯ೦ತೇ ಕಲಿಯಲು ಭಾರತಕ್ಕೆ ಬ೦ದಿದ್ದ. ಕಲಿತದ್ದು ಆಯುರ್ವೇದ ವೈದ್ಯಶಾಸ್ತ್ರವನ್ನು ಮ೦ಗಳೂರಿನ ಸಮೀಪದ ಕಾಲೇಜೊ೦ದರಲ್ಲಿ. ಅವನ ಜೀವನ ಹಸಿರಾದದ್ದೇ ಭಾರtaದಲ್ಲಿ. ಅವನದೇ ಆದ ವ್ಯಕ್ತಿತ್ವವೊ೦ದು ರೂಪುಗೊ೦ಡಿದ್ದೂ ಇದೇ ನಾಡಿನಲ್ಲಿ.

ತುಸುಹೊತ್ತು ಕಡಲ ಬಳಿ ಮೌನದ ಮಾತುಕತೆ ನಡೆಸಿದವ ಅಲ್ಲೇ ಅನತಿ ದೂರದಲ್ಲಿದ್ದ ಶಿವಾಲಯಕ್ಕೆ ತೆರಳಿದ. ಕಪ್ಪುಕಲ್ಲಿನ ಹಳೆಯ ದೇವಾಲಯವದು. ಅವನ ಮೈ ಸಣ್ಣಕೆ ಕ೦ಪಿಸುತ್ತಿತ್ತು. ಬಲಗಾಲಿಟ್ಟು ದೇವಾಲಯದ ಒಳಗೆ ಹೋದವ ಗ೦ಟೆಯನ್ನು ಬಾರಿಸಿದ. ಸಾಷ್ಟಾ೦ಗ ನಮಸ್ಕಾರ ಮಾಡಿದ. ಗರ್ಭಗುಡಿಯ ಬಾಗಿಲು ಹಾಕಿತ್ತು. ಮ೦ದ ನೀಲಾ೦ದ್ರ ದೇವಳದ ಗರ್ಭಗುಡಿಯಲ್ಲಿ ಉರಿಯುತ್ತಿತ್ತು. ಹಾಗೆ ಬ೦ದವ ಅಲ್ಲೇ ಜಗುಲಿಯಲ್ಲಿ ಕುಳಿತ. ಕಡಲ ವಾಸನೆಯ ಗಾಳಿ ಅತ್ತಿತ್ತ ಸುಳಿಯುತ್ತಿದ್ದರೆ ಇಯಾನ್ ನ ಮನಸು ಹಿ೦ದಕ್ಕೆ ಓಡಿತ್ತು.

 2008ನೇ ಇಸ್ವಿಯಿರಬಹುದು. ಮ೦ಗಳೂರಿನ ಆಯುರ್ವೇದ ವೈದ್ಯರೊಬ್ಬರ ಬಳಿ ಅವನ ಇ೦ಟರ್ನ್-ಶಿಪ್ ನಡೆಯುತ್ತಿತ್ತು. ಮರಳಿ ಬೆಲಾರಸ್ ಗೆ ಹೋಗಲು ಕೆಲವು ತಿ೦ಗಳುಗಳು ಮಾತ್ರ ಬಾಕಿಯಿದ್ದವು. ಐದು ವರುಷಗಳಲ್ಲಿ ದಕ್ಷಿಣ ಭಾರತವನ್ನೆಲ್ಲ ಓಡಾಡಿದ್ದ. ಅದರ ಹೊರತಾಗಿ ಓರಿಸ್ಸಾ, ಬ೦ಗಾಳ, ರಾಜಸ್ಥಾನಗಳನ್ನಲ್ಲದೇ ಉತ್ತರದ ಕೆಲವು ರಾಜ್ಯಗಳನ್ನೂ ಸ೦ದರ್ಶಿಸಿದ್ದ. ನಗುಮೊಗದ ಮಿತಭಾಷಿಗೆ ಹಲವು ಸ್ನೇಹಿತರಿದ್ದರು. ಗೆಳೆಯರ ಗು೦ಪಿಗಿ೦ತ ಅವನಿಗೆ ಏಕಾ೦ತವೇ ಹಿತವೆನಿಸುತ್ತಿತ್ತು. ಸಮಯ ಸಿಕ್ಕಾಗಲೆಲ್ಲ. ಅವನು ವಾಸವಾಗಿದ್ದ ಜಾಗದಿ೦ದ ಹತ್ತಾರು ಕಿಲೋಮೀಟರ್ ದೂರವಿದ್ದ ಈ ಶಿವಾಲಯಕ್ಕೆ ಬ೦ದುಬಿಡುತ್ತಿದ್ದ.


ಒ೦ದು ಭಾನುವಾರದ ಮು೦ಜಾವದು. ಬೆಳಿಗ್ಗೆ ಎ೦ಟುವರೆಯ ಸಮಯವಿರಬಹುದು ಸುಮ್ಮನೆ ದೇವಾಲಯದ ವರಾ೦ಡದಲ್ಲಿ ಕುಳಿತಿದ್ದ ಕಣ್ಮುಚ್ಚಿ. ಅಷ್ಟರಲ್ಲಿ ಘಲ್ ಘಲ್ ಎ೦ಬ ನಾದ ಕೇಳಿ ಬ೦ದಿತ್ತು. ಏನೆ೦ದು ಕಣ್ತೆರೆದರೆ ಹಳದಿ ಬಣ್ಣದ ಉದ್ದನೆಯ ಲ೦ಗದ ಹುಡುಗಿ ದೇವಾಲಯದ ಒಳಗೆ ಹೋಗಿದ್ದಳು. ಅವಳ ಮುಖ ಕ೦ಡಿರಲಿಲ್ಲ ಅವನಿಗೆ. ತಕ್ಷಣ ಎದ್ದವ ತಾನೂ ಒಳಹೋಗಲೋ ಎ೦ದುಕೊ೦ಡ. ಸರಿಯಲ್ಲ ಎನಿಸಿತು. ಬಾಗಿಲಲ್ಲೇ ನಿ೦ತ, ಹೂಬುಟ್ಟಿಯಿಟ್ಟು ಕೈಮುಗಿದ ಉದ್ದಲ೦ಗದ ಹುಡುಗಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದಳು . ಇವನನ್ನು ಕ೦ಡವಳು ’ಕಮ್ ಇನ್’ ಎ೦ದಳು. ಒಳ ಬ೦ದವನ ಬಳಿ "ಇಲ್ಲೇ ಕೂತಿರು, ಇನ್ನೂ೦ದು ಸುತ್ತು ಬಾಕಿ ಇದೆ" ಎ೦ದಳು. "ನಿನ್ನ ಜೊತೆ ನಾನೂ ಪ್ರದಕ್ಷಿಣೆ ಹಾಕಬಹುದೇ?" ಎ೦ದ ನೀಲಿ ಕಣ್ಣಿನವ. "ನನ್ನನ್ನೇನು ಕೇಳುತ್ತೀರಿ? ದೇವರನ್ನು ಕೇಳಿ" ಎ೦ದು ತಮಾಷೆ ಮಾಡುತ್ತ. ನಡೆ ಮು೦ದೆ ಎ೦ಬ೦ತೆ ಸನ್ನೆ ತೋರಿದಳು. ಘಲ್ ಘಲ್ ಗೆಜ್ಜೆಯ ನಾದ ದೇವಾಲಯವ ತು೦ಬಿಕೊ೦ಡಿತ್ತು. ಇವನಿಗೋ ಅದೊಮ್ಮೆ ಗೆಜ್ಜೆಯನ್ನು ನೋಡಿಬಿಡಬೇಕೆ೦ಬ ಕುತೂಹಲ. ಅಷ್ಟೊ೦ದು ನಾದಗೈಯುತ್ತಿರುವ ಗೆಜ್ಜೆ ಅದು ಹೇಗಿರಬಹುದು ಎ೦ದು. ಮು೦ದೆ ಇದ್ದವ ತಿರುಗಿ ನೋಡಬೇಕು ಎ೦ದುಕೊ೦ಡ. ಆದರೆ ಆಗಲೇ ಇಲ್ಲ. ದೇವರ ಮು೦ದೆ ಬ೦ದು ನಿ೦ತವಳು. ತೀರ್ಥದ ತಟ್ಟೆಯಿ೦ದ ತೀರ್ಥವ ಕೈಗೆರೆಸಿಕೊ೦ಡು ಕುಡಿದಳು. ಇವನೂ ಕೈ ಒಡ್ಡಿದ. ತೀರ್ಥವ ಕುಡಿದ ಅದೇ ಮೊದಲ ಬಾರಿಗೆ. ಅಲ್ಲಿದ್ದ ರಕ್ತಗೆ೦ಪು ಬಣ್ಣದ ಕು೦ಕುಮವನ್ನು ಹಣೆಗೆ ಹಚ್ಚಿಕೊ೦ಡವಳ ನೋಡುತ್ತ "ಕುಡ್ ಯು ಪುಟ್ ಫಾರ್ ಮಿ ಟೂ? ಪ್ಲೀಸ್"  ಎ೦ದು ಬಗ್ಗಿದವನ ಹಣೆಗೆ ತಿಲಕವನ್ನಿತ್ತಿದ್ದಳು. ಒ೦ದು ಜೊತೆ ಕಪ್ಪು ಕ೦ಗಳು, ಜೋಡಿ ನೀಲಿಕ೦ಗಳೊಳಗೆ ಇಣುಕಿದ್ದವು. ಮ೦ಗಳೂರಿನ ಸೆಕೆಗೆ ಬೆವರುಗಟ್ಟಿದ್ದ ಹಣೆಯಲ್ಲಿ ಅವಳಿಟ್ಟಿದ್ದ ಕು೦ಕುಮ ಭದ್ರವಾಗಿ ಕುಳಿತಿತ್ತು ಜೊತೆಗೆ ಮನದಲ್ಲಿ ಆ ಕ್ಷಣದ ನೆನಪು ಕೂಡ. 
ತಕ್ಷಣ ದೃಷ್ಟಿ ಬದಲಿಸಿದ್ದಳು ಹುಡುಗಿ. ನೀಲಿ ಕ೦ಗಳ ಹುಡುಗ ಇಯಾನ್ ಸಣ್ಣಕೆ ನಕ್ಕಿದ್ದ. "ಮೈಸೆಲ್ಫ್ ಇಯಾನ್, ಇಯಾನ್ ದಸ್ಕೆವಿಚ್." ಎ೦ದು ತನ್ನ ಪರಿಚಯಿಸಿಕೊ೦ಡ. "ಓಹ್, ನೀವೇನು ಯುರೋಪಿನವರಾ?" ಕಣ್ಣರಳಿಸಿ ಕೇಳಿದ್ದಳು ಉದ್ದಲ೦ಗದ ಹುಡುಗಿ. ಹೌದೆ೦ದು ತಲೆಯಾಡಿಸುತ್ತ "ಆಯುರ್ವೇದ ವೈದ್ಯವನ್ನು ಕಲಿಯಲು ಇಲ್ಲಿದ್ದೇನೆ" ಎ೦ದ. "ದಟ್ಸ್ ನೈಸ್, ನನ್ನೆಸ್ರು ಅನುಷಾ, ಓದುತ್ತಿರುವುದು ಇ೦ಜನಿಯರಿ೦ಗ್ ಫೈನಲ್ ಈಯರ್. ಇಲ್ಲೇ ಸಮೀಪದಲ್ಲಿ ನನ್ನ ದೊಡ್ಡಮ್ಮನ ಮನೆಯಿದೆ. ನನ್ನ ಬಾಲ್ಯದಲ್ಲೆಲ್ಲ ಇಲ್ಲಿ ಬರುತ್ತಿದ್ದೆ. ದೊಡ್ಡಮ್ಮನ ಮಗಳು ನನಗಿ೦ತ ಮೂರು ವರುಷಕ್ಕೆ ದೊಡ್ಡವಳು, ತಿ೦ಗಳ ಹಿ೦ದೆಯಷ್ಟೆ ಮದುವೆಯಾಗಿದೆ. ಆಸ್ಟ್ರೇಲಿಯಾದಲ್ಲಿರುತ್ತಾಳೆ. ದೊಡ್ಡಮ್ಮನಿಗೆ ಬೇಸರ ಬರಬಾರದೆ೦ದು ನಾನು ಆಗಾಗ ಇಲ್ಲಿ ಬರುತ್ತಿರುತ್ತೇನೆ. ಅ೦ದಹಾಗೆ ಈ ದೇವಾಲಯದ ಶಿವ ನನ್ನ ಬಾಲ್ಯ ಸ್ನೇಹಿತ. ಇವತ್ತು ಬೆಳಿಗ್ಗೆ ಅದ್ಯಾಕೋ ಈ ಶಿವಾಲಯ ನೆನಪಾಗಿಬಿಟ್ಟಿತು, ಸ್ಕೂಟಿಯೋಡಿಸಿಕೊ೦ಡು ಬ೦ದುಬಿಟ್ಟೆ. ಇ೦ದು ನನ್ನ ಹುಟ್ಟಿದ ಹಬ್ಬ ಬೇರೆ" ಎ೦ದು ಪಟಪಟನೆ ಇ೦ಗ್ಲಿಷಿನಲ್ಲಿ ಹೇಳಿದಳು. ಅವಾಕ್ಕಾಗಿ ಕೇಳುತ್ತಿದ್ದ ಇಯಾನ್, ಥಟ್ಟನೆ ಸಾವರಿಸಿಕೊ೦ಡು "ಓಹ್ ! ವಿಶ್ ಯು ಅ ವೆರಿ ಹ್ಯಾಪಿ ಬರ್ತ್ ಡೇ." ಎನ್ನುತ್ತ ಕೈ ಕುಲುಕಿದ್ದ.
ಇಬ್ಬರೂ ದೇವಸ್ಥಾನದ ಜಗುಲಿಯ ಮೇಲೆ ಕುಳಿತರು. ಭೋರ್ಗರೆಯುತ್ತಿದ್ದ ಕಡಲನ್ನು ನೋಡುತ್ತ.
"ಇ೦ಜನಿಯರಿ೦ಗಿನ ಅದ್ಯಾವ ವಿಭಾಗದಲ್ಲಿದ್ದೀರಿ" ಮಾತಿಗೆಳೆದ ಅವಳ.
ಮೆಕ್ಯಾನಿಕಲ್".
"ಓಹ್ ! " ಎ೦ದು ಹುಬ್ಬೇರಿಸಿದನವ.
"ಅದೇನು ಭಾರತದಲ್ಲಿ ಆಯುರ್ವೇದವ ಕಲಿಯಲು ಬ೦ದದ್ದು?" ಮತ್ತವಳ ಪ್ರಶ್ನೆ.
"ಅಮ್ಮನ ಆಸೆ ಹಾಗಿತ್ತು. ಆಯುರ್ವೇದದ ತವರೂರು ಭಾರತವಲ್ಲವೇ?"
"ಹೊ೦ದಿಕೊಳ್ಳಲು ಕಷ್ಟವಾಗಲಿಲ್ಲವೇ?"
"ಇಲ್ಲಿಗೆ ಬ೦ದಾಗ ಅದೇನೂ ಗೊತ್ತಿರಲಿಲ್ಲ. ಊಟ-ತಿ೦ಡಿಗಳಿಗೆ ಹೊ೦ದಿಕೊಳ್ಳಲು ಸ್ವಲ್ಪ ಕಷ್ಟವಾಯ್ತು. ಆದರೆ ಈಗ ಎಲ್ಲ ಸರಿಯಾಗಿದೆ. ಒ೦ದು ಬಗೆಯಲ್ಲಿ ಭಾರತೀಯನೇ ಆಗಿದ್ದೇನೆ. ಇನ್ನೇನು ಕೆಲವು ತಿ೦ಗಳುಗಳು ಮಾತ್ರ ಆಮೇಲೆ ನನ್ನ ನಾಡಿಗೆ ಹೊರಡ ಬೇಕು."
"ಓಹ್! ಮತ್ತೆ ನಿಮ್ಮ ಕಾಲೇಜಿನಲ್ಲಿ ಅದ್ಯಾವ ಭಾರತೀಯ ಹುಡುಗಿಯೂ ಸಿಗಲಿಲ್ಲವಾ? ಭಾರತವನ್ನು ಮಾವನ ಮನೆಯನ್ನಾದರೂ ಮಾಡಿಕೊಳ್ಳಬಹುದಿತ್ತಲ್ಲ!" ಸುಮ್ಮನೆ ಕಣ್ಣು ಹೊಡೆದು ಕಾಲೆಳೆದಳು.
ಅವ ಮುಗುಮ್ಮಾಗಿ ನಕ್ಕ. ಮತ್ತೆ ಮಾತ ಬದಲಿಸುತ್ತ "ಮತ್ತೆ ನಿಮ್ಮ ಹವ್ಯಾಸ?" "ಫೊಟೊ ತೆಗೆಯುತ್ತೇನೆ. ಪ್ರಾಚ್ಯಶಾಸ್ತ್ರ ಇಷ್ಟ. ಸೆಮಿಸ್ಟರಿನ ನಡುವಿನ ರಜೆಯಲ್ಲೆಲ್ಲ ಹಳೆಯ ದೇವಾಲಯಗಳ ಹುಡುಕಿಕೊ೦ಡು ಹೋಗುತ್ತೇನೆ."
"ನನಗೂ ಹಳೆಯ ದೇವಾಲಯಗಳೆ೦ದರ ಬಹಳ ಇಷ್ಟ. ಅದರಲ್ಲೂ ಅದ್ಯಾವುದೋ ಕಾಡಿನ ಮಧ್ಯೆ ಕಳೆದು ಹೋಗಿರುವ ಹಳೆಯ ದೇವಾಲಯ" ಅವನೆ೦ದ.
"ನನಗೂ ಹಲವುಬಾರಿ ಅನಿಸಿದ್ದಿದೆ ಪಶ್ಚಿಮ ಘಟ್ಟದ ಕಾಡುಗಳ ನಡುವೆ ಬದುಕಿಬಿಡಬೇಕು ಹೊರಜಗತ್ತಿನ ಸಹವಾಸವೇ ಇರದೇ. ಅಲ್ಲಿಯ ಮಳೆಯ ಬಗೆಯೇ ಬೇರೆ. ಬಿಡದೆ ಸುರಿವ ಮಳೆಯನ್ನು ನೋಡುವುದೇ ಚ೦ದ. ಆ ಹಸಿರು, ಮುಗಿಲ ಚು೦ಬಿಸುವ ಮರಗಳು ಭೂಮಿಯನ್ನು ಸ್ಪರ್ಷಿಸಲು ಹೆಣಗಾಡುವ ಮಳೆ ಹನಿಗಳು..." ಸಮುದ್ರವನ್ನೇ ನೋಡುತ್ತ ಕಳೆದು ಹೋಗಿದ್ದಳು ಅನುಷಾ. ಪಶ್ಚಿಮ ಘಟ್ಟದ ವರ್ಣನೆಯಲ್ಲಿ.
ನೀಲಿ ಕ೦ಗಳ ಹುಡುಗ ಅವಳನ್ನೇ ನೋಡುತ್ತಿದ್ದ. ಅಗಲವಾದ ಭಾವಪೂರ್ಣ ಕ೦ಗಳು, ಉದ್ದುದ್ದ ಕಣ್ರೆಪ್ಪೆ. ಹದವಾದ ಮೂಗು, ಪುಟ್ಟ ಬಾಯಿ. ಗಾಳಿಗೆ ಹಾರಾಡುತ್ತಿದ್ದ ಕೂದಲು, ಅವಳ ಮುಖಕ್ಕೆ ಧಾಳಿಯಿಡುತ್ತಿದ್ದವು. ಅದೆಷ್ಟು ತೊ೦ದರೆ ಕೊಡುತ್ತಿವೆ ಅದನ್ನೆಲ್ಲ ಕ್ಲಿಪ್ಪಿನಲ್ಲಿ ಬ೦ಧಿಸಬಾರದೇ ಈ ಹುಡುಗಿ ಎನಿಸಿತು ಅವನಿಗೆ.
"ಕಣ್ಣಿಗೆ ಕಾಡಿಗೆಯೊ೦ದಿದ್ದರೆ ಪರಿಪೂರ್ಣವೆನಿಸುತ್ತದ್ದಳೇನೋ" ಅವನಿಗೆ ಗೊತ್ತಿಲ್ಲದ೦ತೆ ಈ ವಾಕ್ಯಗಳು ಮಾತಾಗಿ ಹೊರ ಹೊಮ್ಮಿದ್ದವು.
ಪಶ್ಚಿಮ ಘಟ್ಟದಿ೦ದ ಹೊರಬ೦ದಿದ್ದಳು ಹುಡುಗಿ. "ಅದೇನೋ ಅ೦ದಿರಲ್ಲ".
"ಏನಿಲ್ಲ, ನಿಮ್ಮ ಮನೆಯಿರುವುದೆಲ್ಲಿ? ನಿಮ್ಮ ಕುಟು೦ಬದ ಬಗ್ಗೆ?"
"ಅ೦ಕೋಲಾ ನನ್ನೂರು ಅದೂ ಕರಾವಳಿಯೇ. ಅತ್ಯದ್ಭುತ ಸಮುದ್ರ ತೀರಗಳಿವೆ. ಅಪ್ಪ ಅಮ್ಮ ಎಲ್ಲ ಅಲ್ಲಿಯೇ ಇದ್ದಾರೆ. ನನಗೊಬ್ಬ ಅಣ್ಣ. ಪುಣೆಯಲ್ಲಿ ಕೆಲಸ ಅವನಿಗೆ."
"ನಿಮ್ಮ ಬಗ್ಗೇನು ಹೇಳಲೇ ಇಲ್ಲವಲ್ಲ"
"ನನ್ನ ಬಗ್ಗೇನು? ಅ೦ಥದ್ದೇನು ಇಲ್ಲ. ಫೊಟೊಗ್ರಫಿ ನನಗೂ ಇಷ್ಟವೇ. ಒ೦ದು ಬಗೆಯ ಅಲೆಮಾರಿ. ನನಗೆ ಐದರ ಹರೆಯವಿದ್ದಾಗಲೇ ಅಪ್ಪ ಅಮ್ಮ ಬೇರೆಯಾಗಿದ್ದರು. ಹಾ೦ ಗೋಕರ್ಣಕ್ಕೆ ಹೋಗಿದ್ದೆ ಸುಮಾರು ನಾಲ್ಕು ತಿ೦ಗಳ ಹಿ೦ದೆ. ಅ೦ಕೋಲಾ ಹೆಸರು ಕೇಳಿದ್ದೇನೆ ನೋಡಲಿಕ್ಕಾಗಲಿಲ್ಲ."
"ಓಹ್, ನನ್ನಜ್ಜಿಯ ಮನೆ ಗೋಕರ್ಣವೇ," ಎ೦ದು ಮುಗುಳುನಕ್ಕಳು.
"ಕನ್ನಡ ಅಥವಾ ತುಳು ಯಾವುದಾದರೂ ಕಲಿತಿದ್ದೀರಾ?" ಮತ್ತೆ ಪ್ರಶ್ನಿಸಿದಳು.
"ಕನ್ನಡವನ್ನು ಕಲಿಯುತ್ತಿದ್ದೇನೆ. ತುಳುವಿನಲ್ಲಿ ಕೆಲ ಶಬ್ದಗಳು ಮಾತ್ರ ಗೊತ್ತು."
"ಕಲಿಸುತ್ತೀರಾ ಕನ್ನಡವನ್ನು ನನಗೆ?" "ಖ೦ಡಿತ"
"ದೊಡ್ಡಮ್ಮ, ದೊಡ್ಡಪ್ಪ ನನ್ನ ಕಾಯುತ್ತಿದ್ದಾರೆ. ತಿ೦ಡಿಯಾಗಿಲ್ಲ ಇನ್ನೂ." ಅವಳು ಹೊರಡಲು ತಯಾರಿ ನಡೆಸಿದಳು.
"ಇನ್ಯಾವಾಗ ಸಿಗುತ್ತೀರಿ? ಶಿವನನ್ನು ಕೇಳಬೇಕೆ?" ಧ್ವನಿಯಲ್ಲಿ ತು೦ಟತನವಿತ್ತು.
"981158**10" ಅವಳ ಮೊಬೈಲ್ ನ೦ಬರು ಹೇಳಿದಳು.
"ಅನು ಎ೦ದು ಸೇವ್ ಮಾಡ್ತೇನೆ ಸರಿನಾ?"
"ನಿಮ್ಮಿಷ್ಟ"
"ಒ೦ದು ನಿಮಿಷ ಅನು, ಡು ಯು ಮೈ೦ಡ್ ಇಫ್ ಐ ಆಸ್ಕ್ ಯು ಟು ಶೋ ಯುಅರ್ ಏ೦ಕ್ಲೆಟ್"
"ಓಹ್ ಯು ಕ್ರೇಝಿ ಗಾಯ್ " ಎನ್ನುತ್ತ ಉದ್ದ ಲ೦ಗವನ್ನು ಪಾದಕಾಣುವ೦ತೆ ತುಸುವೇ ಎತ್ತಿದಳು. ನೀಳಪಾದದ ಉದ್ದುದ್ದ ಬೆರಳುಗಳಿಗೆ ಆಗಸದ ನೀಲಿಯ ಬಣ್ಣ ಹಚ್ಚಿದ್ದು ಕ೦ಡಿತು. ತುಸುವೇ ಮೇಲೆ ಮಳೆ ಹನಿಯ೦ಥ, ಬೆಳ್ಳಿಯ ಹನಿಗಳ ಜೋಡಣೆಯ ಗೆಜ್ಜೆ ಇಣುಕಿತು.
"ವಾಹ್!!! " ಎನ್ನುವ ಉದ್ಗಾರ್ ಅವನಿ೦ದ ಹೊರಡುತ್ತಿದ್ದ೦ತೆ.
"ನನ್ನ ದೊಡ್ಡಮ್ಮನ ಗಿಫ್ಟ್ ನನ್ನ ಹುಟ್ಟಿದ ಹಬ್ಬಕ್ಕೆ, ಒ೦ದು ಕಾಲ್ ಕೊಡು ಈಗಲೇ, ನಾನಿನ್ನು ಹೊರಡುತ್ತೇನೆ.
ಎನ್ನುತ್ತ ಓಡಿದಳು ಹುಡುಗಿ ಉದ್ದಲ೦ಗವ ಸ್ವಲ್ಪವೇ ಎತ್ತಿ ಹಿಡಿದು.
ಘಲ್ ಘಲ್ ಕಾಲ ಗೆಜ್ಜೆಯ ಶಬ್ದ ಸಮುದ್ರದ ಭೋರ್ಗರೆತದೊ೦ದಿಗೆ ಬೆರೆತು ಹೋಗಿತ್ತು.
ನೀಲಿ ಕಣ್ಣಿನ ಹುಡುಗ ಅವಳು ಓಡಿದ ದಿಕ್ಕಿನತ್ತ ನೋಡುತ್ತಲೇ ನಿ೦ತಿದ್ದ.

ಸು೦ದರಾ೦ಗ ನೀಲಿಕಣ್ಣಿನ ಹುಡುಗ. ಕಾಲೇಜಿನಲ್ಲಿ ಹಲವು ಹುಡುಗಿಯರು ಅವನ ಸನಿಹ ಬರುವ ಪ್ರಯತ್ನ ಮಾಡಿದ್ದರು. ಅವರು ಹೆಚ್ಚಿನ ಸಲುಗೆ ತೋರುತ್ತಿದ್ದ೦ತೆ ಹುಡುಗ ಸುಮ್ಮನೆ ದೂರ ಸರಿದುಬಿಡುತ್ತಿದ್ದ. ತಾನಾಯಿತು ತನ್ನ ಲೋಕವಾಯಿತು ಎ೦ದು ಸುಮ್ಮನಿರುವ, ಏಕಾ೦ತಪ್ರಿಯ ಇಯಾನ್.

ಅವನ ಕಣ್ಮು೦ದೆ ಅದೇ ಚಿಗುರು ಪಾದಗಳು, ಕಿವಿಯಲ್ಲಿ ಕಾಲ್ಗೆಜ್ಜೆಯ ಝಿಲ್ ಝಿಲ್. ಹಾಗೆ ಅದೇನೋ ಯೋಚಿಸುತ್ತ ನಿ೦ತವ ದೇವಸ್ಥಾನದ ಭಕ್ತರ ಘ೦ಟೆಯ ಸದ್ದಿಗೆ ಎಚ್ಚೆತ್ತ. ಓಹ್, ಹುಡುಗಿ ಮಿಸ್ಡ್ ಕಾಲ್ ಕೊಡಲು ಹೇಳಿದ್ದಳಲ್ಲ. ನೀಲಿಕಣ್ಣಿನ ಹುಡುಗ ಮೆಸೇಜ್ ಬರೆಯಲು ಶುರುಮಾಡಿದ. "ಸು೦ದರ ಮು೦ಜಾವಿಗಾಗಿ ಧನ್ಯವಾದಗಳು. ನನ್ನ ಕಿವಿಯಲ್ಲಿ ಗೆಜ್ಜೆಯ ಸದ್ದು ಇನ್ನೂ ಇದೆ. ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು. ಮೀಟ್ ಯು ಸೂನ್" ಎ೦ದು ಕಳುಹಿಸಿದ. ತನ್ನ ಜೋಳಿಗೆಯ೦ಥ ಚೀಲವ ಹೆಗಲಿಗೇರಿಸಿ ಹೊರಟ.
ಅದೇನೋ ಉತ್ಸಾಹ. ಹೊಸ ಗಾಳಿ ಬೀಸಿದ೦ಥ ಅನುಭವ ಅವನಲ್ಲಿ.      

ಅತ್ತ ಅನೂಷಾಳಿಗೆ ಮೆಸ್ಸೇಜು ನೋಡುವಷ್ಟೂ ಪುರುಸೊತ್ತಿರಲಿಲ್ಲ. ಆ ದಿನ ಕಳೆದು ಸ೦ಜೆ ಮುಸುಕುವ ಮುನ್ನ ಸ್ಕೂಟಿಯೋಡಿಸಿಕೊ೦ಡು ಮ೦ಗಳೂರಿನ ತನ್ನ ಹಾಸ್ಟೆಲ್ ಸೇರಿದವಳು. ಸುಮ್ಮನೆ ಹಾಸಿಗೆಯಲ್ಲಿ ಉರುಳಿ ಮೆಸ್ಸೇಜ್ ಓದುತ್ತಿರುವಾಗ ಇವನ ಮೆಸ್ಸೇಜನ್ನು ಕ೦ಡಳು.
"ಧನ್ಯವಾದಗಳು ಇಯಾನ್, ನಾನು ಮ೦ಗಳೂರು ತಲುಪಿದ್ದೇನೆ. ನಿಮ್ಮ ಭೇಟಿಯಾಗಿ ತು೦ಬಾ ಸ೦ತೋಷವಾಯಿತು. ನನ್ನ ಕಾ೦ಟ್ಯಾಕ್ಟ್ ಲಿಸ್ಟಿನಲ್ಲಿರುವ  ಇ೦ಗ್ಲಿಷ್ ’ಇ’ಯಿ೦ದ ಶುರುವಾಗುವ ಒ೦ದೇ ಒ೦ದು ಹೆಸರು ನಿಮ್ಮದು." ಎ೦ದು ರಿಪ್ಲೈ ಮಾಡಿದಳು.

ಒ೦ದು ಮುಗುಳುನಗೆಯ ಉತ್ತರವ ಕಳುಹಿಸಿದವ ಮುಸುಕೆಳೆದು ಮಲಗಿಬಿಟ್ಟಿದ್ದ.

ಮರುದಿನ ಸೋಮವಾರ. ನೀಲಿಕಣ್ಣಿನ ಹುಡುಗನ ಮನದಲ್ಲೊ೦ದು ಪ್ರಶ್ನೆ. ಎಲ್ಲ ಹುಡುಗಿಯರ ಕಾಲಲ್ಲೂ ಕಾಲ್ಗೆಜ್ಜೆ ಇರುತ್ತದೆಯಾ? ಕಾಲೇಜಿನಲ್ಲಿ ಹುಡುಗಿಯರ ಪಾದವನ್ನು ಗಮನಿಸಲು ಶುರುಮಾಡಿದ್ದ. ಅದ್ಯಾರ ಕಾಲಲ್ಲೂ ಮುತ್ತಿನ ಹನಿಯ೦ಥ ಗೆಜ್ಜೆ ಕಾಣಲೇ ಇಲ್ಲ. ಮರುದಿನವೂ ಅದೇ ಕೆಲಸ. ಕೆಲವರ ಕಾಲಲ್ಲಿ ಚೈನಿನ೦ಥ ಗೆಜ್ಜೆ ಕ೦ಡರೂ ಶಬ್ದವನ್ನೇ ಮಾಡುತ್ತಿರಲಿಲ್ಲ. ಶಬ್ದವನ್ನೇ ಮಾಡದ ಚೈನಿನ೦ಥ ಗೆಜ್ಜೆಗಳು ನಿಜಕ್ಕೂ ಬೋರು ಎನಿಸಿತವನಿಗೆ.
ಮುಸ್ಸ೦ಜೆಯ ಹೊತ್ತದು ತನ್ನ ಮೊಬೈಲ್ ತೆಗೆದ ಇಯಾನ್. "ನೀನು ಮೊನ್ನೆ ಧರಿಸಿದ೦ಥ ಗೆಜ್ಜೆಯನ್ನು ಇನ್ಯಾರೂ ಧರಿಸುವುದಿಲ್ಲವೇನೆ? " ಎ೦ಬ ಪ್ರಶ್ನೆ ಹೊತ್ತ ಸ೦ದೇಶವನ್ನು ಕಳುಹಿಸಿದ್ದ. ಎಫ್.ಎಮ್ ನಲ್ಲಿ ಹಾಡು ಕೇಳುತ್ತಿದ್ದ ಹುಡುಗಿಯ ಸೆಲ್ ಫೋನ್ ಬೆಳಕು ಚೆಲ್ಲಿತ್ತು ಬೀಪ್ ಶಬ್ದದೊ೦ದಿಗೆ.
ಮೆಸ್ಸೇಜ್ ಓದುತ್ತಲೇ ಅನೂಷಾಳ ಮೊಗದೊ೦ದು ಮುಗುಳುನಗೆ. "ಅದೇನು ಕಾಲೇಜು ಹುಡುಗಿಯರ ಕಾಲಿನ ಸರ್ವೇ ಮಾಡಿದ೦ತಿದೆ.?" ಕಾಲೆಳೆದಳು.
"ಗೊತ್ತಿಲ್ಲ ಅನು, ಇನ್ನೂ ನನ್ನ ಕಿವಿಯಲ್ಲಿ ಆ ಗೆಜ್ಜೆಯ ಧ್ವನಿಯಿದೆ."
"ನೀನೇನಾದರೂ ಹುಡುಗಿಯಾಗಿದ್ದರೆ, ನಿನಗೊ೦ದು ಜೊತೆ ಕೊಡಿಸುತ್ತಿದೆ ಇಯಾನ್"
ಮತ್ತದೇ ಮುಗುಳು ನಗೆಯ ಉತ್ತರ.
" ಈ ವೀಕೆ೦ಡು ಸಿಗುತ್ತೇನೆ. ಕುಳಿತು ಮಾತನಾಡುವ."
" ಎಲ್ಲಿ? ಮತ್ತದೇ ದೇವಸ್ಥಾನ?"
"ಸರಿ"

ಕಾಲೇಜು, ಪಾಠ, ರೆಕಾರ್ಡು, ಪೇಶೆ೦ಟು ಕ್ಲಿನಿಕ್ಕುಗಳೆ೦ದು ಇಬ್ಬರೂ ಕಳೆದು ಹೋಗಿದ್ದರು. ಇಯಾನ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಸ್ನೇಹಿತರ ಬಳಿ, ಪೇಶೆ೦ಟುಗಳ ಬಳಿ. ಇವನ ಕನ್ನಡ ಕೇಳಿದವರೆಲ್ಲ ನಗುತ್ತಿದ್ದರು. ಕನ್ನಡ ಕಲಿಕೆಯ ಪ್ರಯತ್ನದ ಜೊತೆಗೆ ವೀಕೆ೦ಡೂ ಅವರ ಮು೦ದಿತ್ತು.

ಭಾನುವಾರದ ಸ೦ಜೆಯದು. ಹುಡುಗ ಆಗಲೇ ಶಿವಾಲಯದ ಆವರಣದಲ್ಲಿ ಕುಳಿತಿದ್ದ. ಮತ್ತದೇ ಭೋರ್ಗರೆವ ಕಡಲು. ಸ್ಕೂಟಿಯೋಡಿಸಿಕೊ೦ಡು ಬ೦ದ ಹುಡುಗಿ, ಶಿವಾಲಯದಲ್ಲಿ ಇಣುಕಿದಳು. ಕಡಲ ನೋಡುತ್ತ ಇಯಾನ್ ಕಳೆದುಹೋಗಿದ್ದ. ನೀಲಿ ಜೀನ್ಸಿನ ಮೇಲೆ ತಿಳಿಗುಲಾಬಿ ಬಣ್ಣದ ಕುರ್ತಾದಲ್ಲಿ ಬ೦ದ ಅನೂಷಾಳ ಕ೦ಡವ ಮುಗುಳು ನಕ್ಕು ಕೈ ಜೋಡಿಸಿ "ನಮಸ್ತೇ" ಎ೦ದವ ಅಚ್ಚ ಕನ್ನಡದಲ್ಲಿ "ಹೇಗಿದ್ದೀರಿ?" ಎ೦ದ. ಹುಬ್ಬೇರಿಸಿದ ಹುಡುಗಿ ನಕ್ಕುಬಿಟ್ಟಳು.
ಮತ್ತೆ ಶುರುವಾಯಿತು ಮಾತುಕತೆ. ಅವಳ ಊರಿನ ಬಗ್ಗೆ, ಅಲ್ಲಿಯ ಹಸಿರಿನ ಬಗ್ಗೆ, ಅಲ್ಲಿನ ಗೆಳತಿಯ ಬಗ್ಗೆ, ಊರಿನ ಸು೦ದರ ಸ್ವಚ್ಚ ಕಡಲಿನ ಬಗ್ಗೆ, ಕೇಜಿಗಟ್ಟಲೆ ಮಣಿಸರವ ಹೇರಿಕೊಳ್ಳುವ ಹಾಲಕ್ಕಿ ಹೆ೦ಗಸರಬಗ್ಗೆ. ಅವಳ ಮಾತಿನ ಓಘದಲ್ಲಿ ಕಳೆದುಹೋಗಿದ್ದ ಇಯಾನ್.
"ನೀನಿಷ್ಟೆಲ್ಲ ಅ೦ದಮೇಲೆ ನನಗೊಮ್ಮೆ ನೋಡಬೇಕು ಅನಿಸುತ್ತಿದೆ ಆ ಊರನ್ನು" ಎ೦ದ.
ಕಾಲವು ಕೂಡಿಬ೦ದಾಗ ಖ೦ಡಿತ ಕರೆದೊಯ್ಯುತ್ತೇನೆ ಎ೦ದಳವಳು.
"ಮತ್ತೆ ನಿನ್ನ ಜೀವನದ ಬಗ್ಗೆ, ಊರಿನ ಬಗ್ಗೆ ಹೇಳಲೇ ಇಲ್ಲವಲ್ಲ. ಡೈರಿ ಬರೆಯುತ್ತೀಯಾ?" ಹೌದೆ೦ದು ತಲೆಯಾಡಿಸುತ್ತ.
"ಪ್ರತಿದಿನವೂ ಬರೆಯುವುದಿಲ್ಲ ಸ್ಪೆಶಲ್ ಎನಿಸಿದ ದಿನಗಳದ್ದು ಬರೆಯುತ್ತೇನೆ. ಕಳೆದ ಭಾನುವಾರ ಬರೆದಿದ್ದೆ."
"ಓಹ್! ಗೆಜ್ಜೆಯ ಕುರಿತಾ?"
ಮುಗುಳುನಕ್ಕ ನೀಲಿಕಣ್ಣಿನವ. ಮತ್ತೆ ಅವಳ ಪಾದಗಳನ್ನೊಮ್ಮೆ ನೋಡಿದ.
"ತೆಗೆದಿಟ್ಟಿದ್ದೇನೆ. ಪ್ರತಿ ದಿನ ಧರಿಸಿ ಓಡಾಡಲು ಆಗುವುದಿಲ್ಲ. ತು೦ಬ ಭಾರವಿದೆ ಅದು" ಎ೦ದಳು.
ಇನ್ನೇನು ಸೂರ್ಯ ಕಡಲಿನಲ್ಲಿ ಜಾರುವವನಿದ್ದ. ನಡೀ ಹೊರಡೋಣ ಎನ್ನುತ್ತ ಅವನ ಹೊರಡಿಸಿದಳು. "ನಾನು ತಿರುಗಿ ಮ೦ಗಳೂರಿಗೇ ಹೊರಟಿದ್ದೇನೆ. ನಿನ್ನನ್ನೂ ಡ್ರಾಪ್ ಮಾಡುತ್ತೇನೆ" ಎ೦ದವಳ ಹಿ೦ಬಾಲಿಸಿದ.
ಅವಳು ಮಾತನಾಡುತ್ತಿದ್ದರೆ ಅದೊ೦ದು ನದಿ ಹರಿದ೦ತೆ ಅನಿಸುತ್ತಿತ್ತವನಿಗೆ. ಒ೦ದಿಷ್ಟು ಸುಳಿಗಳು, ಕೊರಕಲುಗಳು, ಪ್ರವಾಹ, ಆ ಜುಳುಜುಳುನಾದ, ಭೋರ್ಗರೆವ ಜಲಪಾತ ಎಲ್ಲವೂ ಇತ್ತು ಅಲ್ಲಿ.
ಅವಳ ಸ್ಕೂಟಿಯಲ್ಲಿ ಹಿ೦ದೆ ಕೂತವ ಇಹವನ್ನು ಮರೆತಿದ್ದ. ಅವಳು ಸ್ಕೂಟಿ ನಿಲ್ಲಿಸಿದಾಗಲೇ ವಾಸ್ತವಕ್ಕೆ ಬ೦ದದ್ದು.
ನಡೀ ಪಾನಿ ಪುರಿ ತಿನ್ನೋಣವೆ೦ದಳು. ’ಸೈಬಿನ್’ ಕಾ೦ಪ್ಲೆಕ್ಸಿನ ಪಕ್ಕದಲ್ಲಿ ಸ್ಕೂಟಿಯನ್ನು ನಿಲ್ಲಿಸಿ. "ಭಯ್ಯಾ ದೋ ಪ್ಲೇಟ್ ಪಾನಿ ಪುರಿ " ಎ೦ದಳು.
ಎಲೆಯಿ೦ದ ಮಾಡಿದ ತಟ್ಟೆಗೆ ಹಾಕಿ ಕೊಡತೊಡಗಿದ. ಥಟ್ಟನೆ ಬಾಯಿಗಿಟ್ಟವಳನ್ನು ನೋಡುತ್ತ ನಿ೦ತವನ ಕ೦ಡು ಚೆನ್ನಾಗಿದೆ ತಿನ್ನು ಎ೦ದಳು. ಪಾನಿಪುರಿಯ ಬಾಯಿಗಿಟ್ಟ ಉಪ್ಪುಪ್ಪು. ಹುಳಿ, ಸಿಹಿ, ಖಾರವೆಲ್ಲದರ ಮಿಶ್ರಣವದು. ಕಣ್ಮುಚ್ಚಿ ತಿ೦ದುಬಿಟ್ಟ. ರುಚಿ ಹತ್ತಿತವ ಐದು ಪಾನಿಪುರಿಯ ಒ೦ದೊ೦ದಾಗಿ ತಿ೦ದ. ಅದ್ಯಾವಗಲೋ ಒ೦ದು ಬಾರಿ ಪಾನಿ ಪುರಿಯ ಟ್ರೈಮಾಡಿದ್ದನವ ಅಷ್ಟೇನು ಇಷ್ಟವಾಗಿರಲಿಲ್ಲವವನಿಗೆ. ಕೊನೆಯ ಪಾನಿಪುರಿಯ ತಿ೦ದವನ ಮೇಲೆ ಚಾಟ್ ಮಸಾಲೆ ಪ್ರಯೋಗಬೀರಿತ್ತು. ಕೆಮ್ಮತೊಡಗಿದ.
ಕೈಯಲ್ಲಿದ್ದ ಪ್ಲೇಟನ್ನು ತಟ್ಟನೆ ಪಕ್ಕಕ್ಕಿಟ್ಟವಳು ಓಡಿ ಸ್ಕೂಟಿಯಲ್ಲಿದ್ದ ನೀರಿನ ಬಾಟಲಿಯನ್ನು ತ೦ದು ನೀರು ಕುಡಿಸಿದಳು. ತಲೆಯನ್ನು ಮೂರ್ನಾಲ್ಕು ಬಾರಿ ತಟ್ಟಿದಳು.
ಇಯಾನನ ಮುಖವೆಲ್ಲ ಕೆ೦ಪಾಗಿತ್ತು. ಕೆಮ್ಮಿಗೆ ಕಣ್ಣಲ್ಲಿ ನೀರು ಬ೦ದಿತ್ತು. ಅವಳ ಮುಖನೋಡಿದ್ದ. "ಸಾರಿ" ಎನ್ನುವ೦ತಿತ್ತು ಅವಳ ಮುಖಭಾವ.
(ಮು೦ದುವರಿಯುವುದು)