Monday, September 28, 2020

ನಿಹಾರಿಕಾ ಭಾಗ 4

 

ಮೂರು ದಿನಗಳು ನಿಹಾರಿಕೆಗಾಗಿ ಕಾದ ಜೊ, ಅವನು ಒ೦ಚೂರು ಇಷ್ಟಪಡದ ಬೆ೦ಗಳೂರಿನಲ್ಲಿ. ಹಳೆಯ ಸ್ನೇಹಿತರನ್ನೆಲ್ಲ ಭೇಟಿಯಾದ ಒಮ್ಮೆ. ಅ೦ತೂ ಅವನು ಕಾದೂ ಕಾದ ಭಾನುವಾರ ಬ೦ದಿತ್ತು. ಬೆಳಗ್ಗೆ ಕೆಲಸವಿರುವುದಾಗಿಯೂ ಸ೦ಜೆ ಐದುಗ೦ಟೆಗೆ ಫಿನಿಕ್ಸ್ ಮಾಲ್ ನಲ್ಲಿ ಸಿಗುವುದಾಗಿ ತಿಳಿಸಿದಳು.

ಸೂರ್ಯ ಪಡುವಣದತ್ತ ಮುಖ ಮಾಡಿದ್ದ. ಬೆಳಗಿನಿಂದ ಸಂಜೆಯಾಗುವುದಕ್ಕೆ ಕಾದಿದ್ದ ಜೋವಿಯಲ್. ಬಿಳಿಯ ಟೀಶರ್ಟ್, ಅದರಮೇಲೊಂದು ಕಪ್ಪು ಜಾಕೆಟ್, ತಿಳಿನೀಲಿ ಬಣ್ಣದ ಜೀನ್ಸ್, ಬಿಳಿಯ ಶೂ ಧರಿಸಿದ್ದ. ಕನ್ನಡಕದ ಗಾಜುಗಳನ್ನು ಒರೆಸಿ ಹಾಕಿಕೊಂಡ, ಕನ್ನಡಿಯ ಮುಂದೆ ನಿಂತು ಕೂದಲನ್ನು ಇನ್ನೊಮ್ಮೆ ತೀಡಿ ಸೆಟ್ ಮಾಡಿಕೊಂಡ. ತನ್ನ ಸಣ್ಣ ಕಣ್ಣುಗಳನ್ನು ಇನ್ನೂ ಕಿರಿದುಗೊಳಿಸಿ ಕನ್ನಡಿ ಬಿಂಬವನ್ನು ಇನ್ನೊಮ್ಮೆ ನೋಡಿ, ಸಣ್ಣದಾಗಿ ನಕ್ಕು ಹೊರಟ.

 

 

ಹೇಳಿದ್ದಕ್ಕಿಂತ ಅರ್ಧತಾಸು ಮೊದಲು ಫೀನಿಕ್ಸ್ ಮಾಲ್ ಗೆ ಬಂದ ಜೊ ಒಮ್ಮೆ ಎಲ್ಲ ಕಡೆ ಕಣ್ಣಾಡಿಸಿದ. ಎಷ್ಟೊಂದು ಬಣ್ಣಗಳು ಅಲ್ಲಿ, ಆದರೂ ಅವನು ಅನ್ಯಮನಸ್ಕನಾದಂತಿದ್ದ! ಹುಡುಗಿ ಒಬ್ಬಲೇ ಇರಲಿ ಅಥವ ಹುಡುಗಿಯರು ಗುಂಪಿನಲ್ಲಿರಲಿ ತನ್ನ ನಗೆ ಚಟಾಕಿಗಳಿಂದ, ಹಾಡುಗಳಿಂದ, ಅವರನ್ನು ಕೆಲವು ನಿಮಿಷಗಳಲ್ಲಿ ಇಂಪ್ರೆಸ್ಸ್ ಮಾಡುತ್ತಿದ್ದ ಜೋ ಇಂದು ಅದ್ಯಾವುದೋ ಹುಡುಗಿಯೊಬ್ಬಳಿಗಾಗಿ ದೇವತೆಗಾಗಿ ಕಾದಂತೆ ಕಾಯುತ್ತಿದ್ದ! ಎದ ಬಳಿಯೇ ಬದಿಗಿರಲಿ ಎನಿಸಿ ಮಹಾದ್ವಾರದ ಬಂದು ಅವಳಿಗಾಗಿ ಕಾಯಹತ್ತಿದ ಜೋ, ಅವಳನ್ನಿನ್ನೂ ಸರಿಯಾಗಿ ನೋಡಿಯೇ ಇರಲಿಲ್ಲವಲ್ಲ! ಆಚೀಚೆ ಹೋಗುತ್ತಿದ್ದ ಒಂಟಿ ಹುಡುಗಿಯರನ್ನೆಲ್ಲ ಗಮನಿಸುತ್ತಿದ್ದ ಇವಳಿರಬಹದೊ ಆ ನಕ್ಷತ್ರ ಲೋಕದ ಹುಡುಗಿ? ಎಂದು. 

 

 

 ಸರಿಯಾಗಿ ಐದುಗ೦ಟೆಗೆ ಅವಳು ಹೇಳಿದ್ದ ಜಾಗದಲ್ಲಿದ್ದಳು ಎಂಟ್ರೆನ್ಸ್ ಹತ್ತಿರವೇ ನಿಂತಿದ್ದ ಇವನ ಗುರುತಿಸಿ ಕೈಬೀಸಿದಳು. ಬಂದವಳು ಸೀದ ಇವನ ಎದುರೇ ನಿಂತಳು.

 

ತುಸುವೇ ಕೋಲು ಮುಖ, ಆ ಮುಖಕ್ಕೆ ದೊಡ್ಡದೆನಿಸುವ ಕಣ್ಣುಗಳು, ಆ ಕಣ್ಣುಗಳಿಗೆ ಒಂದೆಳೆಯ ಕಾಡಿಗೆಯ ಮಿಂಚು, ತೆಳುವಾಗಿ,  ದಪ್ಪನೆಯ ಹುಬ್ಬುಗಳು, ಅದರ ಮಧ್ಯಕ್ಕೊಂದು ಬಾನ ತಾರೆಯೊಂದನ್ನು ಕಿತ್ತು ತಂದು ಅಂಟಿಸಿಕೊಂಡಂತ ಬಿಂದಿ, ತುಸುವಾಗಿ ಬಣ್ಣ ಹಚ್ಚಿದ ತುಟಿಗಳು, ಆ ಕೆಳದುಟಿಯ ಎಡಬದಿಗೆ ತುಂಬ ಗಮನಿಸಿದರೆ ಮಾತ್ರ ಕಾಣುವ ಸಣ್ಣ ಎಳ್ಳು, ಭುಜದವರೆಗೂ ಇಳಿಬಿದ್ದ ಕೂದಲು. ತಿಳಿ ನೀಲಿ ಬಣ್ಣದ ಮೇಲೆ ಹಳದಿ, ಬಿಳಿಯ ಹೂವುಗಳಿದ್ದ ಪಟಿಯಾಲ ಪ್ಯಾ೦ಟಿನ ಮೇಲೆ ಶುಭ್ರ ಬಿಳಿಯ ಕುರ್ತಾ ಧರಿಸಿ ಬ೦ದಿದ್ದಳು. ಮುಖ ನೋಡಿದರೆ ಸ್ವಲ್ಪ ಸುಸ್ತಾದ೦ತಿದ್ದಳು ಕೈ ಮುಂದೆ ಚಾಚುತ್ತಾ ?” ಹೇಗಿದ್ದೀರಿ ? “ಎಂದು ಕೇಳಿ ಕೈ ಕುಲುಕಿದಳು.

 

"ನಾನು ಮಸ್ತಾಗಿದ್ದೇನೆ ಹೀಗೆ" ಎ೦ದು ತನ್ನ ತಾನೇ ನೋಡಿಕೊ೦ಡ ಜೊ. ಒ೦ಚೂರು ಅ೦ಕುಡೊ೦ಕಿಲ್ಲದ ಕನ್ನಡವದು. "ನಡೆಯಿರಿ ಅಲ್ಲಿ ಕುಳಿತುಕೊಳ್ಳೋಣವೆ೦ದು" ಬೆ೦ಚೊ೦ದರ ತೋರಿಸಿ ಅದರತ್ತ ಮುನ್ನಡೆದಳು.

"ಬಿಳಿ ಇ೦ಕಿನ ಹುಡುಗಿ ಬಿಳಿಬಟ್ಟೆಯಲ್ಲಿ." ಎ೦ದು ನಕ್ಕ ಜೊ, ತನ್ನ ಪುಟ್ಟ ಪುಟ್ಟ ಕ೦ಗಳನ್ನು ಕಿರಿದಾಗಿಸಿ. ಬೆ೦ಚಿನಲ್ಲಿ ಕುಳಿತವಳು. ಅವನ ದೊಡ್ಡ ಫ್ರೇಮಿನ ಕನ್ನಡಕದೊಳಗಿನ ಕಣ್ಣುಗಳನ್ನೇ ನೋಡುತ್ತ. " "ಅದೆಲ್ಲಿ೦ದ ಕಲಿತಿರಿ ಇಷ್ಟೊಳ್ಳೆ ಕನ್ನಡವ.? ಕರ್ನಾಟಕದವರಿಗೇ ನಾಚಿಕೆಯಾಗುವಷ್ಟು ಚೆನ್ನಾಗಿ ಕನ್ನಡವ ಮಾತನಾಡ್ತೀರಲ್ಲ.! ನಿಜವಾಗಿಯೂ ಅಸ್ಸಾಮಿನ ಆಸಾಮಿಯೇ ಹೌದೋ? ತೆಗೆಯಿರಿ ಸ್ವಲ್ಪ ಆ ಕನ್ನಡಕವ" ಎ೦ದಳು.

 

"ಒ೦ದು ಭಾಷೆಯ ಕಲಿಯುವುದು ಬ್ರಹ್ಮವಿದ್ಯೆಯಲ್ಲ ನಿಹಾರಿಕಾಜೀ, ಒಮ್ಮೆ ನೀವು ನನ್ನ ತೈಲ ಚಿತ್ರವನ್ನು ಬಿಡಿಸುವಿರ೦ತೆ ಆಗ ಕನ್ನಡಕವಿಲ್ಲದೇ ಕೂರುತ್ತೇನೆ ಬಿಡಿ" ಎ೦ದ ಕನ್ನಡಕವ ತೆಗೆಯುತ್ತ.

 

ಅವನೆಡೆಗೆ ಅವನ ಕನ್ನಡದತ್ತ ಅಚ್ಚರಿಯ ನೋಟವ ಬೀರುತ್ತ, "ನಿಮ್ಮ ಆಡಿಯೋ ಮತ್ತು ವಿಡಿಯೋ ಟೋಟಲಿ ಮಿಸ್ ಮ್ಯಾಚ್ ಬಿಡಿ" ಎ೦ದು ಕಣ್ಣು ಮಿಟುಕಿಸಿದಳು.

 

ಕನ್ನಡ ಬರೆಯಲೂ ಬರುತ್ತದೆಯೋ ನಿಮಗೆ ? ಹೌದೆ೦ಬ೦ತೆ ತಲೆಯಾಡಿಸುತ್ತ ನಕ್ಕ. "ಇನ್ನು ಸ್ವಲ್ಪ ಹೊತ್ತಾದರೆ ನೀವು ಈ ಭೂಮಿಯವರೇನಾ? ಎ೦ದು ಮಾತ್ರ ಕೇಳಬೇಡಿ ಪ್ಲೀಸ್" ಎ೦ದ ನಾಟಕೀಯವಾಗಿ ಕೈ ಜೋಡಿಸುತ್ತ.

ಕವನಗಳನ್ನೂ ನೋಡಿದ್ದೇನೆ ನಿಮ್ಮ ವೆಬ್-ಸೈಟಿನಲ್ಲಿ. ತಾರೆ,ಆಕಾಶ, ಮತ್ತು ಪ್ರೀತಿಯ ಬಗ್ಗ೦ತೂ ತೀರ ಸೊಗಸಾಗಿ ಬರೆಯುತ್ತೀರಿ.

 

“ಕನ್ನಡ ಓದಲೂ ಬರುತ್ತದೆ ಎಂದು ಈ ರೀತಿಯಲ್ಲೂ ಹೇಳಬಹುದು ನೋಡಿ” ಎಂದು ಪಕಪಕನೆ ನಕ್ಕಳು.

 

ಅವನಿಗೋ ತಾರೆಯೊಂದು ನಕ್ಕಂತೆ ಅನಿಸಿತು.

 

“ಎಲ್ಲಿಂದ ಶುರುಮಾಡೋಣ ಕಥೆಯನ್ನು? ಮೊದಲಿ೦ದ ಕೊನೆಗೋ ಅಥವಾ ಕೊನೆಯಿ೦ದ ಮೊದಲಿಗೋ." ಎಂದು ಅವನ ನೋಡುತ್ತ ಕೇಳಿದಳು.

 

 ಒಮ್ಮೆ ದೀರ್ಘ ಶ್ವಾಸವ ಎಳೆದುಕೊಂಡ ಜೋ, ನಿಹಾರಿಕಾಳ ಕಣ್ಣುಗಳನ್ನೊಮ್ಮೆ ನೋಡಿ ಮುಗುಳುನಕ್ಕ,

 

"ಫೈನ್, ನಾನು ಜೋವಿಯಲ್ ಉರ್ಫ್ ಜೊ. ಅಮ್ಮ ಅಸ್ಸಾಮಿ, ಅಪ್ಪ ಮಣಿಪುರಿ. ನಾನು ಹುಟ್ಟಿದ್ದು ಅರ್ಧ ಬೆಳೆದಿದ್ದು ಎಲ್ಲ ಈಶಾನ್ಯ ಭಾರತದ ಕಾಡುಗಳ ಮಧ್ಯೆ. ಅಪ್ಪ ಇದ್ದದ್ದು ಆರ್ಮಿಯಲ್ಲಿ, ಒಂದು ಅಪಘಾತದಲ್ಲಿ ಅಪ್ಪ ತೀರಿಕೊಂಡ ನಂತರ, ಅಮ್ಮನಿಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದ್ದು. ಅಮ್ಮನಿಗಾಗ ಮೂವತ್ತರ ವಯಸ್ಸು. ನನಗಾಗ ಹತ್ತರ ಹರೆಯವಿರಬೇಕು. ಅಮ್ಮನಿಗೆ ಹೈದರಾಬಾದಿನಲ್ಲಿ ಕೆಲಸ. ನನ್ನ ಮತ್ತು ತಮ್ಮನನ್ನು

 ಅಸ್ಸಾಮಿನ ಅಜ್ಜಿಮನೆಯಲ್ಲಿ ಬಿಟ್ಟಿದ್ದರು. ಪಪ್ಪನೆ೦ದರೆ ಹೆಮ್ಮೆಯಿತ್ತು ನನಗೆ; ನನ್ನ ಜೊತೆ ಆಟವಾಡುತ್ತಿದ್ದ, ಕಾಡುಮೇಡುಗಳ ಸುತ್ತುತ್ತಿದ್ದ, ಗಿಟಾರ್ ಬಾರಿಸಲು ನನಗೆ ಹೇಳಿಕೊಟ್ಟಿದ್ದ ಅಪ್ಪ, ಒಮ್ಮೆಲೇ ಬದುಕಿನಿಂದ ಎದ್ದುಬಿಟ್ಟರು. ಅಮ್ಮನನ್ನೂ ಕಳೆದುಕೊ೦ಡರೆ ಎ೦ಬ ಭಯ ಕಾಡುತ್ತಿತ್ತು. ಅಮ್ಮನನ್ನು ತು೦ಬ ಮಿಸ್ ಮಾಡುತ್ತಿದ್ದೆ ಹೈಸ್ಕೂಲಿನಲ್ಲಿರುವಾಗ ಕರ್ನಾಟಕಕ್ಕೆ ಬ೦ದುಬಿಟ್ಟೆ. ಆಗ ಅಮ್ಮ ಕರ್ನಾಟಕದ ಶಿವಮೊಗ್ಗೆಯ ಹಳ್ಳಿಯೊ೦ದರಲ್ಲಿದ್ದರು. ಅಲ್ಲಿನ ಶಾಲೆಗೇ ಸೇರಿಕೊ೦ಡೆ. ಕೇ೦ದ್ರೀಯ ವಿದ್ಯಾಲಯದಿ೦ದ ನೇರ ಕರ್ನಾಟಕದ ಸ್ಟೇಟ್ ಸಿಲೇಬಸ್. ಕನ್ನಡ ಎನ್ನುವ ಶಬ್ದವ ಬಿಟ್ಟರೆ ಬೇರೇನೂ ಬರುತ್ತಿರಲಿಲ್ಲ. ಹೈಸ್ಕೂಲಿನ ಕನ್ನಡ ಟೀಚರ್ ತು೦ಬ ಸಹಾಯ ಮಾಡಿದ್ದಾರೆ. ಕನ್ನಡ ಸುಮ್ಮನೆ ಒಲಿದಿಲ್ಲ. ತು೦ಬ ಕಷ್ಟ ಪಟ್ಟಿದ್ದೇನೆ ಕನ್ನಡ ಕಲಿಯಲಿಕ್ಕೆ. ನನ್ನ ಈ ಮ೦ಗೋಲಿಯನ್ ಲುಕ್ಕಿನಿ೦ದಾಗಿ, ರಸ್ತೆಗಿಳಿದರೆ ಸಾಕು ಜನರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಅದೇ ಜನ ನಾನು ಕನ್ನಡ ಕಲಿಯಲು ಪ್ರಯತ್ನಪಟ್ಟಾಗ ಸಹಾಯ ಮಾಡಿದರು. ನಾನು ಹತ್ತನೇ ಕ್ಲಾಸು ಮುಗಿಸುವುದರ ಒಳಗಾಗಿ ಅಮ್ಮ ಇನ್ನೊ೦ದು ಮದುವೆಯಾಗಿದ್ದರು. ತು೦ಬ ಸೂಕ್ಷ್ಮ ಮನಸಾಗಿತ್ತು ನನ್ನದು. ಅನಾಥ ಭಾವ ಇನ್ನಿಲ್ಲದೇ ಕಾಡಿತ್ತು. ಎಲ್ಲವ ಬಿಟ್ಟು ಮತ್ತೆ ಅಸ್ಸಾಮಿಗೆ ಹಿ೦ತಿರುಗಲೋ ಯೋಚಿಸಿದೆ. ನನ್ನ ಬದುಕನ್ನು ನಾನೇ ನೋಡಿಕೊಳ್ಳಬೇಕು ಇನ್ನು ಮು೦ದೆ ಎನ್ನುವುದೂ ಅರಿವಾಗಿತ್ತು. ನ್ಯಾಶನಲ್ ಲೆವೆಲ್ ಅಥ್ಲೀಟ್ ನಾನು, ಕರ್ನಾಟಕವನ್ನು ಪ್ರತಿನಿಧಿಸಿದ್ದೇನೆ ಹಲವು ಸಲ. ಪಿಯುಸಿಗಾಗಿ ಒಳ್ಳೆಯ ಕಾಲೇಜನ್ನೇ ಸೇರಿದೆ. ಹಾಸ್ಟೆಲಿನ ಬದುಕು ನನ್ನಲ್ಲಿ ಸ್ವತ೦ತ್ರ ವ್ಯಕ್ತಿತ್ವವನ್ನು ರೂಪಿಸತೊಡಗಿತ್ತು. ನನ್ನ ಸುತ್ತಲೂ ಇರುತ್ತಿದ್ದದ್ದು ಒ೦ದಿಷ್ಟು ಗೆಳೆಯರು ಮತ್ತು ನಗು. ‘ಎಲ್ಲಿ ನಗುವಿರುತ್ತದೆಯೋ ಅಲ್ಲಿ ಎಲ್ಲರೂ ಇರುತ್ತಾರೆ. ಎಲ್ಲಿ ಅಳುವಿರುತ್ತದೆಯೋ ಅಲ್ಲಿ ನಿಮ್ಮನ್ನು ತೀರ ಪ್ರೀತಿಸುವವರು ಮಾತ್ರ ಇರುತ್ತಾರೆ ನಿಹಾರಿಕಾ’. ಪಿಯುಸಿ ನ೦ತರ ಮು೦ದೇನು ಎ೦ದು ಕಾಡಿತ್ತು. ಆ ಹ೦ತದಲ್ಲೇ ಅಮ್ಮ ನನ್ನಿ೦ದ ತೀರ ದೂರ ಸರಿದುಬಿಟ್ಟಿದ್ದರು......."

(ಮು೦ದುವರಿಯುವುದು)