'ಮಿಶೆಲ್' ಕಾಲ್ ಬಂದಾಗಿನಿಂದ ಏನೋ ಹೇಳಲಾಗದ ಚಡಪಡಿಕೆ. "ಅಮೀನಾಳಿಗೆ ಮದುವೆಯಂತೆ ಕಣೆ... " ಎಂದು ಆಕೆ ಹೇಳಿದಾಗಿನಿಂದ ಈ ಮಳೆಯನ್ನೇ ನೋಡುತ್ತಿದ್ದೇನೆ. ಮಳೆಯ ಹನಿಯ ಚಟಪಟಕ್ಕೆ ಅದ್ಯಾವುದೇ ನೆನಪನ್ನು ಬೇಕಾದರೂ ಮನದ ಬುಟ್ಟಿಯಿಂದ ಹೆಕ್ಕಿ ಹಸಿರಾಗಿಸುವ ತಾಕತ್ತಿದೆ. ಈಗ ನನ್ನ ಮನದ ಓಣಿಯಲ್ಲಿ ಅಮೀನಾಳ ನೆನಪುಗಳದ್ದೆ ಮೆರವಣಿಗೆ... ಮದುವೆಯೇ ಬೇಡ ಎನ್ನುತ್ತಿದ್ದ ಹುಡುಗಿ ಮದುವೆಯಾಗಲು ಹೊರಟಿದ್ದಾಳೆ ಎಂದರೆ...
ಬಿಡದೆ ಚಿಟಿ ಚಿಟಿ ಸುರಿಯುವ ಮಳೆಯ ನೋಡುತ್ತಾ ಆರಾಮ ಖುರ್ಚಿಯಲಿ ಕೂತಿದ್ದೆ. ಹೌದು ಇಂಥದ್ದೇ ಮಳೆಯಲ್ಲಿ ಅವಳೊಂದಿಗೆ ಸುತ್ತುತ್ತಿದ್ದೆ ನಾನು.
ಇನ್ನೂ ನೆನಪಿದೆ ನನಗೆ ಅವಳ ಮೊದಲ ಪರಿಚಯ. ಕ್ಲಾಸಿಗೆ ಹೊಸಬಳಾಗಿ ಸೇರಿಕೊಂಡಿದ್ದ ನಾನು ಅದೇನೋ ಗೀಚುತ್ತ ಸುಮ್ಮನೆ ಹಿಂದಿನ ಬೆಂಚಲ್ಲಿ ಕೂತಿದ್ದೆ. ಥಟ್ಟನೆ ಹೆಗಲ ಮೇಲೆ ಬಿದ್ದ ಯಾರೋ ಕೈ ಇಟ್ಟ ಅನುಭವ. "ಹಾಯ್ ಹೇಗೀದಿಯಾ? ನಾನು ಅಮೀನಾ " ಎಂದು ನಿಷ್ಕಲ್ಮಶ ನಗುವನ್ನು ಬೀರುತ್ತ ಕೈಕುಲುಕಿ ಸ್ನೇಹದ ಹಸ್ತ ಚಾಚಿದ್ದಳು. ಕೈ ಕುಲುಕುತ್ತಲೇ ದಿಟ್ಟಿಸಿದ್ದೆ ಅವಳ. ಅವಳ ಹೆಸರಿಗೆ ಕೊನೆಯ ಪಕ್ಷ ತಲೆಯ ಮೇಲೊಂದು ಶಾಲನ್ನು ನಿರೀಕ್ಷಿಸಿದ್ದ ನನಗೆ. ಕಂಡದ್ದು ಬೆನ್ನಿನವರೆಗೆ ಇಳಿಬಿಟ್ಟಿದ್ದ ನೀಳ ಅರೆಗೆಂಪು ಕೂದಲು, ಕಿವಿಯೋಲೆಗಳೇ ಇಲ್ಲದ ಕಿವಿ, ಕಣ್ಣಿಗೆ ಒಂದೆಳೆಯ ಕಾಡಿಗೆ, ಕೈಯಲ್ಲಿ ಕಾಣುತ್ತಿದ್ದ ದೊಡ್ಡ ಕೈಗಡಿಯಾರ, ಬಿಳಿಯ ಕುರ್ತಾ , ಜೀನ್ಸ್ ತೊಟ್ಟಿದ್ದ ಬಿಂದಾಸ್ ಹುಡುಗಿ. ನನ್ನ ಪಕ್ಕದಲ್ಲೇ ಕೂರಲು ನಿರ್ಧರಿಸಿಯೇ ಬಂದಿದ್ದಳು. ಮಲ್ಲಿಗೆ ಬಿರಿಯುವ ತೆರದಿ ಚಿಕ್ಕಮಂಗಳೂರು ಶೈಲಿಯ ಕನ್ನಡ ಮಾತನಾಡುವ ಹುಡುಗಿ, ಅಪರೂಪಕ್ಕೆ ಕನ್ನಡವ ಕಾಣುವ ಕ್ಲಾಸಿನಲ್ಲಿ ನನಗೆ ವಿಶೇಷವಾಗಿ ಕಂಡಿದ್ದಳು. ಅದೊಂದೇ ಸಾಕಿತ್ತು ನಮ್ಮಿಬ್ಬರ ನಡುವೆ ಸ್ನೇಹವ ಬೆಸೆಯಲು. ಇಡೀ ದಿನ ವಟಗುಡುತ್ತಲೇ ಇರುತ್ತಿದ್ದ, ಬೋರು ಹೊಡೆಸುವ ಕ್ಲಾಸಿನಲ್ಲಿ crossword ತುಂಬುತ್ತಿದ್ದ ನಾವು ಅದೆಷ್ಟೋ ಬಾರಿ ಲೆಕ್ಚರರಿಗೆ 'ಅಪೋಲೋಜಿ ಲೆಟರ್ ' ಕೊಟ್ಟದ್ದಿದೆ.! ಕ್ಲಾಸಿನಿಂದ ಹೊರಗೆ ಹಾಕಿದ ನಂತರ ಕ್ಯಾಂಟೀನಿನಲ್ಲಿ ಕಾಫಿ ಹೀರಿದ್ದಿದೆ.
ಮೆಕೆನಿಕ್ ಬ್ರಾಂಚಿನ ಹುಡುಗರದ್ದೇ ದೋಸ್ತಿ ಅವಳಿಗೆ. 'ರಾಯಲ್ ಮನಸ್ಸು ಕಣೆ ಆ ಹುಡುಗರದ್ದು , ಮೋಟು ಬುದ್ಧಿಯ ಇಡೀ ದಿನ code, software, errors ಅನ್ನೋ ಈ ಕಂಪ್ಯೂಟರ್ ಸೈನ್ಸ್ ಹುಡುಗರ ಹಾಗಲ್ಲ'. ಅನ್ನುವ ಅವಳ ಬಿಂದಾಸ ಹೇಳಿಕೆಗೆ ಬೆರಗಾಗಿದ್ದೆ.ಇಡೀ ಕಾಲೇಜಿಗೆ 'ಗಂಡು ಬೀರಿ ' ಎಂದೇ ಹೆಸರಾದ FZ ಬೈಕ್ ಓಡಿಸುವ ಹುಡುಗಿಯ ipod ತುಂಬೆಲ್ಲ ಜಯಂತ ಕಾಯ್ಕಿಣಿಯ, Bryan Adams ಹಾಡುಗಳು.! ರಮ್ಜಾನಿಗೆ 'ರೋಜಾ' ಇಡುತ್ತಿದ್ದ ಹುಡುಗಿ. ಅದೆಂದೂ ಶಾಲು ಕೂಡ ಹೊದ್ದವಳಲ್ಲ! ಲಾಂಗ್ ರೈಡಿಗೆ ಹುಚ್ಚೆದ್ದು ಹೋಗುತ್ತಿದ್ದ ಹುಡುಗಿ. ಸಮುದ್ರದ ತಟದಲ್ಲಿ ನನ್ನೊಂದಿಗೆ ಕಿಲೋಮೀಟರ್ ಗಟ್ಟಲೆ ನಡೆಯುತ್ತಿದ್ದಳು.! ಹುಡುಗರೊಂದಿಗೆ ಹುಡುಗರ ರೀತಿಯಲ್ಲೇ ಇರುವ ಅಮೀನಾ. ಹುಡುಗಿಯರ ಗುಂಪಿನಲ್ಲಿ ಕಾಣುತ್ತಿದ್ದದ್ದೇ ಅಪರೂಪ. ಸಂಜೆ ಮನೆಯ ಹತ್ತಿರದ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುವ ಅವಳ ಮನಸ್ಸು ಕೆಲವರಿಗಷ್ಟೇ ಗೊತ್ತಿತ್ತು.
ಹುಡುಗಿಯ ನಿಜ ಮನಸ್ಸು ನನಗೆ ತಿಳಿದ ದಿನ ಇನ್ನೂ ನೆನಪಿದೆ .ಇಂಥದ್ದೇ ಮಳೆ ಸುರಿಯುತಿತ್ತು ಆ ದಿನ ಹುಡುಗಿ ಕಾಲೇಜು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು 'ನಿನ್ನಯ ಒಲುಮೆಯ ಲೋಕಕೆ' ಹಾಡುವಾಗಲೇ ಇದೇನಾಗಿದೆ ಈ ಹುಡುಗಿಗೆ ಅಂದುಕೊಂಡಿದ್ದೆ. ವಿಶೇಷವೇನಾದರೂ ಇದ್ದರೆ ಅವಳೇ ಹೇಳಲಿ ಎಂದ ಮನಸ್ಸಿನೊಡನೆ ಸುಮ್ಮನೆ ಕೂತಿದ್ದೆ, ಮಳೆಗೆ ಮಸುಕಾಗುವ ಬಸ್ಸಿನ ಕಿಟಕಿಯ ಗಾಜಿನಲ್ಲಿ ನನ್ನ ಹೆಸರ ಬರೆಯುತ್ತ. ದಾರಿ ಮಧ್ಯದಲ್ಲೇ 'ಇಲ್ಲೇ ಇಳಿಯುವ ಬಾರೆ' ಎನ್ನುತ್ತಲೇ ನನ್ನ ಕೈ ಹಿಡಿದು ಎಳೆದು ಹೊರಟೆ ಬಿಟ್ಟಳು. ಸುರಿವ ಮಳೆಯಲ್ಲಿ ಛತ್ರಿಯ ಕೊನೆಗೆ ಇಳಿಯುವ ಮಳೆಹನಿಗಳ ಜೊತೆ ಆಟವಾಡುತ್ತಲೇ 'ಅವಿ ಅದ್ಯಾವುದೋ ಹುಡುಗಿಯ ಜೊತೆ ಅಲೆಯುತ್ತಿದ್ದಾನಂತೆ ಕಣೆ... ' ಎಂದು ಅವಳಿಷ್ಟಪಡುವ ಅವಿನಾಶನ ಕುರಿತು ಹೇಳಿದಾಗ, ಸುಮ್ಮನೆ ಅವಳತ್ತ ನೋಡಿದ್ದೆ. ' ಯಾರನ್ನೂ ಪ್ರೀತ್ಸೋದೆ ಇಲ್ಲ ಅಂತ ಹೇಳ್ತಾ ಹೇಳ್ತಾ ಅವನನ್ನ ಇಷ್ಟ ಪಟ್ಟೆ. ಅವ್ನು ಸಿಗೋದಿಲ್ಲ ಅಂತ ಗೊತ್ತಿದ್ರೂ.! ಅದ್ಯಾಕೋ ಫೋಟೋಗಳೆಲ್ಲ ರುಕ್ಮಿಣಿ, ಸತ್ಯಭಾಮೆಯರ ಬದಿಗೊತ್ತಿ ಕೃಷ್ಣನ ಹೆಗಲ ಮೇಲೆ ತಲೆ ಇಟ್ಟು ನಿಲ್ಲುವ ರಾಧೆ ತುಂಬಾ ಕಾಡ್ತಾಳೆ ಕಣೆ. . ... " ಎಂದು ಮಳೆಹನಿಗೆ ಮುಖವೊಡ್ಡಿ ಕಣ್ಣೀರು ಅಡಗಿಸುವ ಪ್ರಯತ್ನವನ್ನು ಮಾಡಿದ್ದಳು, ನನ್ನ ಡೈರಿಯ ಕೊನೆಗೆ ಅಂಟಿಸಿಕೊಂಡಿದ್ದ ISKCON ತುಂಟ ಕೃಷ್ಣನ ಫೋಟೋವನ್ನು ಹಠಮಾಡಿ ಕಿತ್ತುಕೊಂಡು ಹೋಗಿದ್ದ ಅಮೀನಾ.! ಸುಮ್ಮನೆ ಅವಳ ಕೈಹಿಡಿದು ಅದೆಷ್ಟು ದೂರ ನಡೆದಿದ್ದೇನೋ.. ಸುರಿವ ಮಳೆಗೆ, ಕಳೆದ ದಾರಿಗೆ ಮಾತ್ರ ತಿಳಿದಿರಬೇಕು ನಾವು ನಡೆದ ದೂರ !
ಹುಡುಗಿಯರು ಕೆಣಕಿದಾಗಲೆಲ್ಲ" ಯಾರಿಗೆ ಬೇಕೇ ಮದುವೆ, ಮಕ್ಕಳು. ನಾನಂತೂ ಒಬ್ಬಳೇ ಆರಾಮಾಗಿ ಇದ್ದೇನೆ ನೋಡು. ಅಡುಗೆ ಮಾಡಿ ಬಡಿಸುತ್ತ, ಮಕ್ಕಳನ್ನು ಹೆರುತ್ತ, ಬುರಖಾ ಹಾಕಿಕೊಂಡು ತಿರುಗಾಡುವ ಬದುಕೇ ಬೇಡ" ಎನ್ನುತ್ತಿದ್ದ ಅಮೀನಾ.ಮದುವೆಯಾಗುವ ಹುಡುಗನ ಬಗ್ಗೆ ಅದ್ಯಾವುದೇ ಕನಸುಗಳೇ ಇಲ್ಲದ ಹುಡುಗಿ, ಸದ್ದಿಲ್ಲದೇ ಮದುವೆಯ ತಯಾರಿಯಲ್ಲಿದ್ದಾಳೆ ಅಂದರೆ..! ಈ ಹುಡುಗಿಯರೇ ಹೀಗೆ ಎನಿಸಿಬಿಡುತ್ತದೆ. ಬಾಲ್ಯದಲ್ಲಿ ಅಡುಗೆ ಆಟ ಆಡುವ ಹುಡುಗಿಯರು ಹದಿಹರೆಯದಲ್ಲಿ ಅಡುಗೆ ಮನೆಯ ಕಡೆಗೆ ತಲೆ ಕೂಡ ಹಾಕದೆ ಅಡುಗೆಯ ಮಾಡಲು ಬರುವುದೇ ಇಲ್ಲ ಎನ್ನುತ್ತಾರೆ. ಆದರೆ ಮದುವೆಯಾಗುತ್ ತಲೇ ಸೇರಿ ಬಿಡುವುದು ಅಡುಗೆ ಮನೆಯನ್ನೇ.! ಬಾಲ್ಯದಲಿ ಗೊಂಬೆಯಾಟವ ಆಡುತ್ತ, ಗೊಂಬೆಗಳಿಗೆ ಮದುವೆ ಮಾಡಿಸುತ್ತ. ಒಂದು ವಯಸ್ಸಿನಲ್ಲಿ ಮದುವೆಯೇ ಬೇಡ ಎನ್ನುತ್ತಲೇ ಹಸೆ ಮಣೆ ಏರಿಬಿಡುತ್ತಾರೆ. ! ಈ ಹುಡುಗಿಯರ ಮನದಲ್ಲಿ, ಜಗದಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ, ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ.
ರಿಂಗಿಣಿಸಿದ ಫೋನಿನ ಕರೆ ನನ್ನ ನೆನಪಿನ ಅಲೆಗಳನ್ನು ತಡೆದು ನಿಲ್ಲಿಸಿತ್ತು. 'ameena calling' ಎಂದು ಬರುತ್ತಿದ್ದ ಕರೆಯನ್ನು ಸ್ವೀಕರಿಸಿದೆ. " breaking news my dear. ನನ್ನ ಮದುವೆ ಕಣೆ, ಬರ್ತೀಯಲ್ವಾ? ಕಾದಿರ್ತೇನೆ details ಎಲ್ಲ ಮೆಸೇಜ್ ಮಾಡ್ತನೇ . "ಎಂದು ನನ್ನ ಉತ್ತರವನ್ನೂ ಕಾಯದೆ ಫೋನಿಟ್ಟು ಬಿಟ್ಟಳು ಹುಡುಗಿ!
ಕಾಲೇಜು 'Annual day'ಗೂ ಸರಳವಾಗಿ ಕುರ್ತಾ ಜೀನ್ಸಿನಲ್ಲಿ ಬಂದಿದ್ದ, ಎಂದೂ ಜರತಾರಿ ಸೀರೆಯ, ಬಂಗಾರವ, ಆಡಂಬರವ ಇಷ್ಟಪಡದ ಅಮೀನಾಳನ್ನು ಜರತಾರಿಯಲ್ಲಿ, ಕುಂದಣದಲ್ಲಿ ನೋಡಲು ಮನಸ್ಸು ತವಕಿಸುತ್ತಿತ್ತು.