ಎರಡು ತಿಂಗಳುಗಳ ಹಿಂದೆ ನಡೆದ ಘಟನೆ ಅದ್ಯಾಕೋ ನೆನಪಾಗಿಬಿಟ್ಟಿದೆ. ಅದೊಂದು ಬುಧವಾರ ಕಾಲೇಜು ಬಸ್ಸು ಮಿಸ್ಸಾಗಿ ಲೋಕಲ್ ಬಸ್ಸಿನಲ್ಲಿ ಹೊರಟಿದ್ದೆ. ಅದೇನೋ ಖುಷಿ ಲೋಕಲ್ ಬಸ್ಸಿನಲ್ಲಿ ಓಡಾಡುವುದೆಂದರೆ . uniform ತೊಟ್ಟ ಹುಡುಗಿಯರಿರುವ ಕಪ್ಪು -ಬಿಳುಪು tvಯಂತೆ ಕಾಣುವ ಕಾಲೇಜು ಬಸ್ಸಿನಲ್ಲಿ ಹೋಗುವುದು ಬೇಜಾರಿನ ಕೆಲಸ. Gossip, ಒಂದಿಷ್ಟು ಅಸೂಯೆ ಬಿಟ್ಟರೆ ಆ ಬಸ್ಸಿನಲ್ಲಿ ಬೇರೇನೂ ಇದ್ದಹಾಗೆ ನನಗೆ ಅನಿಸಿವುದೇ ಇಲ್ಲ..!
ಲೋಕಲ್ ಬಸ್ಸು ಅಷ್ಟೇನೂ rushಇರಲಿಲ್ಲ. ನಿಂತಿದ್ದೆ ನಾನು ಎದುರುಗಡೆ ಬಾಗಿಲಿನ ಹತ್ತಿರವೇ . ಅದೇನೋ ಖುಷಿ ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದೆಂದರೆ . ದಕ್ಷಿಣ ಕನ್ನಡದ ಬಸ್ಸುಗಳ ಕಿಟಕಿಗಳಿಗೆ ಗಾಜುಗಳೇ ಇರುವುದಿಲ್ಲ ಫುಲ್ ಖುಲ್ಲಂ ಖುಲ್ಲ. ಬೇಸಿಗೆಯಲ್ಲಿ ಗಾಳಿ ಬೆಳಕುಗಳೂ , ಮಳೆಗಾಲದಲ್ಲಿ ಮಳೆಹನಿಯೂ ಬಸ್ಸಿನೊಳಗೆ ಚೆನ್ನಾಗಿ ಬರುತ್ತವೆ..! ಬಸ್ ಕ್ಲೀನರ್ ಬಂದು "ಮಿತ್ತ ಪೋಯಿ" (ಮೇಲೆ ಹೋಗಿ ) ಎಂದು ಎಚ್ಚರಿಸಿದಾಗ ಒಳಗೆ ಹೋಗದೆ ವಿಧಿಯಿರಲಿಲ್ಲ. ಹಾಗೆ ನಿಂತ ನನಗೆ ಕಂಡದ್ದು ಡ್ರೈವರನ ಎಡಗಡೆ ಇರುವ ಉದ್ದದ ಸೀಟಿನಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ ಸುಮಾರು ೪ ರ ಹರೆಯದ ಹುಡುಗಿ. ತುಂಬಾ ಮುದ್ದು ಮುದ್ದಾಗಿದ್ದಳು. ಸುಮ್ಮನೆ ಮುಗುಳ್ನಕ್ಕೆ ಕಣ್ಣನ್ನು ಮಿಟುಕಿಸುತ್ತ. (ಪಕ್ಕಾ ಹುಡುಗೀರ style )
ಅವಳನ್ನೇ ಅವಲೋಕಿಸಿದೆ ...ಕೆಂಪು ಬಿಳಿ ಬಣ್ಣಗಳ ಚೆಂದದ ಫ್ರಾಕ್ ತೊಟ್ಟಿದ್ದಳು.ಕೈಗಳಿಗೆ ಕೆಂಪು ಬಿಳಿ ಬಳೆಗಳ ಸಮ್ಮಿಶ್ರಣ. ಪುಟ್ಟ ಪುಟ್ಟ ಕೈಗಳಲ್ಲೂ ಮದರಂಗಿಯ ರಂಗು.ಕಾಲುಗಳಲ್ಲಿ ದಪ್ಪನೆಯ ಗೆಜ್ಜೆಯ ಘಲ ಘಲ. ಕಣ್ಣಿಗೆ ಅಮ್ಮ ಹಚ್ಚಿದ್ದಿರಬೇಕು ಒಂದೆಳೆಯ ಕಾಡಿಗೆ. ಹಣೆಯಲ್ಲಿ ಹೊಳೆಯುವ ಪುಟ್ಟ ಬಿಂದಿ. ರೇಶಿಮೆ ಕೂದಲು ಅದರಲ್ಲಿ ಕುಳಿತು ನನ್ನ ಹೊಟ್ಟೆಯುರಿಸಿದ್ದು ಮಲ್ಲಿಗೆಯ ಉದ್ದನೆಯ ಮಾಲೆ. .!
ಅದ್ಯಾಕೋ ನನ್ನ ಬಾಲ್ಯ ನೆನಪಾಗಿಬಿಟ್ಟಿತ್ತು. ನಾನೂ ಹಾಗೆ ಕೈತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಪುಟ್ಟ ಜುಟ್ಟಿಗೆ ಅದರ ಎರಡರಷ್ಟು ಉದ್ದದ ಹೂ ಮಾಲೆಯನ್ನು ಅಮ್ಮನತ್ರ ಜಗಳವಾಡಿ ಮುಡಿಯುತ್ತಿದ್ದೆ. ಗೋಲಾಕಾರದಲ್ಲಿ ಡಬ್ಬಿಯಲ್ಲಿ ಬರುವ ಆ ಬಣ್ಣಗಳಿಂದ ನನ್ನ ಹಣೆಯ ಮೇಲೆ ಚಿತ್ರ ವಿಚಿತ್ರವಾದ design ಮಾಡುತ್ತಿದ್ದೆ. ಅದೇನೋ ಖುಷಿಯಿತ್ತು ತನ್ಮಯತೆಯಿಂದ ಅಲಂಕರಿಸಿಕೊಳ್ಳುವುದರಲ್ಲಿ , ಆ ಕನ್ನಡಿಯ ಮುಂದೆ ನಾನೇ ಕಿನ್ನರಿ...! ಎಲ್ಲ ಗತವೈಭವ ಅನಿಸಿಬಿಡ್ತು.
ಈಗ ಬಳೆಗಳನ್ನು ಕಂಡರೆ ಒಂದು ರೀತಿಯ ಅಲರ್ಜಿ. ಅದನ್ನು ಕೊಳ್ಳುವ ಮಾತು ಬಿಡಿ ಇರೋದನ್ನೇ ಹಾಕಿಕೊಳ್ಳಲಾಗದ ಮನೋಸ್ಥಿತಿ. ಹಣೆಗೆ ಬೊಟ್ಟು ಇಡದೆ ಅದೆಷ್ಟು ವರುಷಗಳು ಕಳೆದಿತ್ತೋ. ಅಜ್ಜಿಯ ಮನೆಗೆ ಹೋಗುವಾಗ, ಭೂತ ಕನ್ನಡಿಯ ಹಿಡಿದು ಹುಡುಕಿದರೆ ಮಾತ್ರ ಕಾಣುವಂಥ ಒಂದು ಚುಕ್ಕಿಯನ್ನು ಇಡುತ್ತಿದ್ದೆ. .!ಒಂದೇ ಕಾಲಿಗೆ ಒಂದೆಳೆಯ ಬೆಳ್ಳಿ ಚೈನು ಅದೊಂಥರ fashion..! (ಇದರಿಂದ ತುಂಬಾ ಫಚೀತಿ ಅನುಭವಿಸಿದ್ದೇನೆ ಬಿಡಿ ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ ). ಇನ್ನು ಚೋಟುದ್ದದ ಕೂದಲು, ನಾಲ್ಕೈದು ಕ್ಲಿಪ್ ಗಳನ್ನು ಹಾಕಿ ಕಷ್ಟಪಟ್ಟು ಕಟ್ಟುತ್ತಿದ್ದ ಜುಟ್ಟು. ಇನ್ನು ಅದಕ್ಕೆಲ್ಲಿ ಮಲ್ಲಿಗೆಯ ಮಾಲೆ? ನನಗೆ ನಗು ಬಂದಿತ್ತು. ನಾಗರೀಕತೆ, fashion ಎಂದು ನಾವು ಕಳೆದು ಕೊಳ್ಳುತ್ತಿರುವುದೇನು? ನಮ್ಮ ಸಂಸ್ಕೃತಿಯನ್ನೇ ? ಅಥವಾ ನಮ್ಮನ್ನೇ? ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ನಾನು ನನ್ನ ನೆನಪುಗಳ ಮುಸುಕಿನಿದ ಹೊರಬಂದದ್ದು.
ಮತ್ತೊಮ್ಮೆ ಆ ಬಾಲೆಯತ್ತಲೇ ನನ್ನ ನೋಟ ಹರಿಯಿತು ಬೇಡವೆಂದರೂ. ಆಕೆಯೂ ನನ್ನತ್ತಲೇ ನೋಡುತ್ತಿದ್ದಳು. ಅವಳಿಗೆ ನನ್ನ ತುಂಡು ಕೂದಲು ಇಷ್ಟವಾಗಿದ್ದಿರಬೇಕು (ಹಾಗಂತ ನಾನು ಅಂದುಕೊಂಡದ್ದು). ನನ್ನ ಮನದೊಳಗೋ ಹೇಳಿಕೊಳ್ಳಲಾಗದ ಭಾವ. ಅದು ಮೆಚ್ಚುಗೆಯೋ ,ವಿಷಾದವೋ, ಅಸೂಯೆಯೋ ತಿಳಿಯಲಿಲ್ಲ ಆ ಕ್ಷಣಕ್ಕೆ.
ಇಳಿದು ಬಿಟ್ಟಿದ್ದೆ ಅಲ್ಲೇ ಜ್ಯೋತಿ ವೃತ್ತದ ಬಳಿ. ಹೂ ಮಾರುವವನ ಬಳಿ ಒಂದು ಮೊಳ ಹೂವನ್ನು ಕೊಂಡುಕೊಂಡಿದ್ದೆ. ಪಕ್ಕದ ಫ್ಯಾನ್ಸಿ ಅಂಗಡಿಗೆ ನುಗ್ಗಿ ಒಂದು ಡಜನ್ ಬಳೆಗಳನ್ನು, ಬಿಂದಿಗಳನ್ನು ತೆಗೆದುಕೊಂಡಿದ್ದೆ. ಅವೆಲ್ಲ ನನ್ನನ್ನು ಅಲಂಕರಿಸಿದ್ದವು. ನಾನು ಬಸ್ಸಲ್ಲಿರದಿದ್ದನ್ನು ಕಂಡ 'ಶಾಲು' phone ಮಾಡಿದ್ದಳು. "ಬರ್ತೇನೆ" ಎಂದು ಚುಟುಕಾಗಿ ಉತ್ತರಿಸಿ. ನಡೆದಿದ್ದೆ ಕಾಲೇಜಿನತ್ತ .
ಕ್ಲಾಸಿನೊಳಗೆ ಕಾಲಿಡುತ್ತಲೇ ಎಲ್ಲರೂ "ಹೋ " ಎಂದು ಬೊಬ್ಬಿಟ್ಟಿದ್ದರು. ಗೆಳೆಯ 'ಇಮ್ರಾನ್' ಬಂದು "hey sou..... what a cool surprize... looking cute and funny too .!" ಅಂದು ಬಿಟ್ಟಿದ್ದ. ಹುಸಿಕೋಪ ತೋರುತ್ತಲೇ ನನ್ನ ಜಾಗದತ್ತ ತೆರಳಿದ್ದೆ.
ಅವರಿಗೇನು ಗೊತ್ತಿತ್ತು ? ನನಗಾಗುತ್ತಿರುವ ಅನುಭೂತಿ, ಅವರ್ಚನೀಯ ಆನಂದ. ನನಗೋ ನನ್ನ ಬಾಲ್ಯಕ್ಕೆ ಮರಳಿದ ಅನುಭವ. ಓಡಿ ಬಿಟ್ಟಿದ್ದೆ ladies ರೂಮಿಗೆ. ಕನ್ನಡಿಯಲ್ಲಿ ಕಿನ್ನರಿಯಾಗಲು...!