Wednesday, March 9, 2011

ಅಲೆಮಾರಿ ಸಾಲುಗಳು

ಅಲ್ಲಿ ನೀಲಿ ಕಡಲ ಭೋರ್ಗರೆತವಿದೆ, ಕಡಲ ನಿರ್ಭೀತ ಅಲೆಗಳಿಗೆ ದಡದ ಸ್ವಾಗತವಿದೆ. ನೀಲಿ ಕಡಲು ನೀಲ ಆಗಸವ ಸೇರಿದಂತೆ ಭಾಸವಾಗುವ ದೃಶ್ಯವನ್ನು, ಹಲವು ಜೊತೆ ನೀಲಿ 'ಅಮಲು ಕಂಗಳು ನೋಡುತ್ತವೆ. ಅದೇನನ್ನೋ ಯೋಚಿಸಿ ಮುಗುಳು ನಗುತ್ತವೆ.

ಆಗಸದ ನೀಲಿ, ಸುರಗಿ ಮರದ ಹಸಿರು, ಗೌಡರ ಮನೆಯ ಕಂದು ಬಣ್ಣದ ಆಕಳಿನ ಕಣ್ಣ ಕೆಂಪು,  ರಥಬೀದಿಯ ರಂಗೋಲಿಯ ಹಿಟ್ಟಿನ ಬಿಳಿ, ಗುಲ್ಮೊಹರ್ ಗಿಡದ ಹೂವಿನ ಹಳದಿ ಬಣ್ಣಗಳನ್ನೆಲ್ಲ ಹೊತ್ತ ಬಣ್ಣ ಬಣ್ಣದ ಅಂಗಡಿ ಸಾಲುಗಳಿವೆ. ಅಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಅಂಗಿಗಳಿವೆ. 

ಹೌದು ಅದು ಗೋಕರ್ಣ.! 'ದಕ್ಷಿಣ ಕಾಶಿ',' ಹಿಪ್ಪಿಗಳ ಸ್ವರ್ಗ' ಎಂದೆಲ್ಲ ಕರೆಯಿಸಿಕೊಂಡ ಗೋಕರ್ಣ. ಇದೊಂದು ಪುಣ್ಯ ಭೂಮಿ. ಜೊತೆಗೆ ವಿವಾದವನ್ನು ಬೆನ್ನಿಗೆ ಹೊತ್ತುಕೊಂಡಿರುವ ನೆಲ. ಇತ್ತೀಚಿಗೆ ನನ್ನನ್ನು ಪದೇ ಪದೇ ತನ್ನತ್ತ ಸೆಳೆದ ಭೂಮಿ. ಅಲ್ಲೊಂದು ಪ್ರವಾಸಿಯಾಗಿಯೂ ಹೋಗಿಲ್ಲ, ಭಕ್ತಳಾಗಿಯೂ ಹೋಗಿಲ್ಲ. ಸುಮ್ಮನೆ ಕರೆದಿತ್ತು ಗೋಕರ್ಣ,ನಾನೂ ಸುಮ್ಮನೆ  ಹೋಗಿದ್ದೆ, ಅಲೆದೆ. ..ಮುಗುಮ್ಮಾಗಿ ಅಲೆದೆ.

ಹಿಂತಿರುಗಿ ಬರುವಾಗ ನನ್ನಲ್ಲಿ ಇದ್ದದ್ದು ಇಷ್ಟು  ಕ್ಯಾಮೆರಾದಲ್ಲಿ ಒಂದಿಷ್ಟು ಚಿತ್ರಗಳು,ಮನದಲ್ಲಿ ನೆನಪುಗಳು.
ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕಾಗಿ ನೆನಪುಗಳ, 
ನಾ ಕಂಡ ದೃಶ್ಯಗಳ ಒಂದಿಷ್ಟು ಸಾಲುಗಳಾಗಿಸುತ್ತಿದ್ದೇನೆ. ಕೆಲವೊಂದು ಚಿತ್ರಗಳ ನಿಮ್ಮ ಮುಂದೆ ಇಡುತ್ತಿದ್ದೇನೆ.

ಒಂದಕ್ಕೊಂದು ಸಂಬಂಧವಿಲ್ಲದ ಸಾಲುಗಳು ಇವು. ಹಿಪ್ಪಿಗಳಂತೆ ಅಲೆಮಾರಿಗಳು. ಅದಕ್ಕೆ 'ಅಲೆಮಾರಿ ಸಾಲುಗಳು' ಎಂದು ಕರೆಯ ಬೇಕೆನ್ನಿಸಿತು. !
ನೀವು ಒಮ್ಮೆ ಗೋಕರ್ಣದ ಬೀದಿಗಳಲ್ಲಿ ಕಳೆದು ಹೋಗಿ. ಓದಿ ನೋಡಿ ಹೇಗಿದೆ ಹೇಳಿ. **  ಮನಸ್ಸನ್ನು ಹೊಸತೊಂದು ಲೋಕಕ್ಕೆ ಎಳೆದೊಯ್ಯುವ, ಅದ್ಯಾವುದೋ ಕಾದಂಬರಿಯಲ್ಲಿ ವರ್ಣಿಸಿದಂತೆ ಕಾಣುವ ಬೀದಿಗಳು.

**ನನ್ನ ಕಣ್ಣ ಕಾಡಿಗೆಯ ಕಪ್ಪು ಬಣ್ಣ, ಮೂಲಂಗಿ ಎಲೆಯ ಹಸಿರುಬಣ್ಣಗಳ ನಾಚಿಸುವ ಹಾಲಕ್ಕಿ ಹೆಂಗಸರ ಕೊರಳ ಮಣಿಗಳು.

**  ಬದುಕಿನ ಬಗೆಗಿರುವ ದ್ವೇಷವನ್ನು ಕಾರುತ್ತಿರುವಂತೆ ಕಾಣುತ್ತಿದ್ದ ನೀಲಿಕಂಗಳ ಹುಡುಗಿಯ ಸೊಂಟದ ಮೇಲಿದ್ದ 'ಡ್ರ್ಯಾಗನ್ ಹಚ್ಚೆ' !

** ಕಿವಿಗೆ ನಾಲ್ಕಾರು ಆಭರಣಗಳ ಚುಚ್ಚಿಸಿಕೊಂಡು rock singerನಂತೆ ಪೋಸ್ ಕೊಡುತ್ತ . 'garlick' ಬೇಕಾ?  ಎಂದು ಕೇಳುತ್ತಿದ್ದ ಹೋಟೆಲಿನ ಹುಡುಗ..!

**ಅದೇನೋ ತಪಸ್ಸನ್ನು ಮಾಡುತ್ತಿರುವಂತೆ ಕಾಣುತ್ತಿದ್ದ ಸಾಣಿಕಟ್ಟದ ಗದ್ದೆಗಳಲ್ಲಿನ ಉಪ್ಪಿನ ರಾಶಿಗಳು. ನೆನಪಾದ ಗಾಂಧೀಜೀ,ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ.!

** ಮುಟ್ಟಾಟವನಾಡುವ ಅಲೆಗಳ ಮೇಲೆ, ಬಾನಾಡಿಗಳ ನಾಚಿಸುತ್ತ ಹಾರುತ್ತಿದ್ದ ಈ ವಿದೇಶಿ ಸಾಹಸಿಗೆ ಅನಂತ ಕಡಲು ಅದ್ಹೇಗೆ ಕಂಡಿರಬಹುದು?
**ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ.  
**ಜಗತ್ತಿನ ಕುತೂಹಲಗಳೆಲ್ಲವನ್ನೂ ತನ್ನ ಬೊಗಸೆ ಕಂಗಳಲ್ಲಿ ತುಂಬಿಕೊಂಡ೦ತೆ ಕಾಣುತ್ತಿದ್ದ  ಕನ್ನಡಿಯ ಕಿನ್ನರಿ..! 
**ಒಂದು ಪಕ್ಕದಲ್ಲಿ ಮಗು, ಇನ್ನೊಂದು ಪಕ್ಕದಲ್ಲಿ ಮಂಗ. ಮನುಕುಲದ ಮನವ ಕಲಕುವ ಕರಾಳ ಚಿತ್ರ ..!  ಬದುಕಿನ ಕಥೆ ..ಇಲ್ಲೆಲ್ಲವೂ ವ್ಯಥೆ .....
**ಸೂರ್ಯಕಿರಣಗಳಿಗೆ ಪುಳಕಗೊಂಡು ಹೊಳೆದು ಶೋಭಿಸುತ್ತಿರುವ, ವಜ್ರದ ಬೆಳಕನ್ನು ನಾಚಿಸುವ ಸ್ಪಟಿಕದ ಮಣಿಗಳು...
** ಅಲೆಗಳ ಆಟವ ನೋಡುತ್ತ, ವಿಶ್ರಾಂತಿ ಪಡೆಯುತ್ತ ನಿಂತ ಈ ದೋಣಿಯ ಕಂಡಾಗ, ನನ್ನಜ್ಜ ನೆನಪಾಗಿದ್ದ !
**.ತನ್ನದೇ ಲೋಕದಲ್ಲಿ ಇರುವ ಇಹದ ಪರಿವೆ ಇದ್ದಂತಿಲ್ಲದ ಅಲೆಮಾರಿ ....
ಬದುಕನ್ನು ವಿರೋಧಿಸುತ್ತಿರುವಂತೆ ಭಾಸವಾಗುವ ಧರಿಸಿರುವ ಕಪ್ಪು ಬಟ್ಟೆ ... 
**  ವಿದೇಶಿಗರ ನೀಲಿ ಕಂಗಳಿಗೆ ಪೈಪೋಟಿ ಕೊಡುತ್ತಿರುವ, ಕಾಡಿಗೆಯ ಕಪ್ಪು ಕಂಗಳು !

**ಅದೆಷ್ಟೋ ನಿಗೂಢಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಸಮುದ್ರ ಮಾನವನ ಮನಸ್ಸಿನ ಪ್ರತಿರೂಪ..!  ಜೀವನದ ಚೇತನ ಸಿಗುವುದೇ ಈ ಕಡಲಿನಿಂದ. ದಡದ ಮೇಲೆ ಪ್ರೀತಿಯಿದೆ, ಒಂದು ಬಗೆಯ ಹುಚ್ಚಿದೆ. ಮರಳಿ ಯತ್ನವ ಮಾಡು ಎನ್ನುವ ಸಂದೇಶವ ಸಾರುವ ಕಡಲ ಅಲೆಗಳ ಭೋರ್ಗರೆತದಲ್ಲಿ ತನ್ನ ಮೌನದ ದೋಣಿಯ ತೇಲಿ ಬಿಟ್ಟು. ಕುಳಿತಿರುವ ವಿದೇಶಿಗ !

** ಮಮ್ಮಿ- ಅಮ್ಮ
ಒಂದೇ ಬೀದಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು.

** ಬಾಲ್ಯ.... 'ಮುಗ್ಧತೆ' ಎರಡು ಚಿತ್ರಗಳಲ್ಲಿನ ಸಮಾನ ಗುಣವಾದರೆ ... 'ಬದುಕು' ವ್ಯತಾಸ ... 
 
**ಬಣ್ಣ ಬಣ್ಣದ ಚಿತ್ರಗಳನ್ನೆಲ್ಲ ಕ್ಯಾಮೆರಾದ ಕಣ್ಣೊಳಗೆ ಸೆರೆಹಿಡಿಯುತ್ತಿದ್ದ ವಿದೇಶಿಗರು ..!


**ಅದ್ಯಾರದ್ದೋ ಮನೆಯ ಬಾಗಿಲ ರಂಗೋಲಿಗೆ ರಂಗು ತುಂಬಲು ತಯಾರಾಗಿರುವ ಬಣ್ಣಗಳ ರಾಶಿ ..!
**ಸೃಷ್ಟಿ-ಬದುಕು (ಅದೇನು ಸಾಲುಗಳ ಬರೆಯಬೇಕೆಂದು ತೋಚಲಿಲ್ಲ )
** ಭಕ್ತರ ಮನೋ ನಿಗ್ರಹ ಪರೀಕ್ಷಿಸಲೆಂದು ಭಗವಂತ ಈ ರೂಪಿಯೇ ??
**ಬಯಲು ಸೀಮೆಯಲೂ ನಾದ ಹೊರ ಹೊಮ್ಮಿಸಲಿ . ಕೊಳಲ ನಾದಕ್ಕೆ ಎಲ್ಲೆ ಎಲ್ಲಿದೆ ? 
**ನೀನು ಒಂಟೆ, ನಾನು ಒಂಟಿ --ಸಮುದ್ರ ತಟದಲ್ಲಿ ಅದೆಷ್ಟೋ ಹೊತ್ತು ಒಂಟೆಯೊಂದಿಗೆ ಸಂಭಾಷಿಸುತ್ತಿದ್ದ ಹೆಂಗಸು.
**ಎರಡು ತಂತಿಗಳ ನಾದದಿಂದಲೇ ಜನರ ಸೆಳೆಯುತ್ತಿದ್ದ, ಕನಸುಕಂಗಳ ಹುಡುಗ ..!
**ತನ್ನ ಕೆಂಬಣ್ಣವನೆಲ್ಲ ರಥದ ಪತಾಕೆಗಳ ಅಂಚಿಗೆ ಸುರಿದು ಪಡುವಣದ ಕಡಲಿಗೆ ಜಾರಲು ಧಾವಿಸುತ್ತಿದ್ದ ರವಿ.
** ನೀಲ ಕಡಲ ತಡಿಯ ಬಂಡೆಯ ಮೇಲೆ ಕೂತು, ಬಾನಲ್ಲಿ ಮಿನುಗುವ ಹಗಲು ಕನಸು ಕಾಣುತ್ತಿರುವಂತೆ ಕಾಣುವ ನಕ್ಷತ್ರ ಮೀನು.

**ಹಳ್ಳಿ ಹೈದರ ಬಾಯಿಯಲ್ಲೂ ಸಲೀಸಾಗಿ ಆಂಗ್ಲಭಾಷೆ ಅಪಭ್ರ೦ಶವಾಗಿ ನಲಿದಾದುವಷ್ಟು ವಿದೇಶೀಯರ ಛಾಯೆ..!

**ಬೆವರು ಇಳಿಸುವ ಬಿಸಿಲಿದೆ, ಒಣ ಹಸಿ ಮೀನುಗಳ ವಾಸನೆಯಿದೆ,ದುಡ್ಡು ಗೋಚಲು ಹವಣಿಸುತ್ತಿದ್ದವರಿದ್ದಾರೆ. ಅಮಲು ಕಂಗಳ ಅರೆಬರೆ ಬಟ್ಟೆಯ ವಿದೇಶಿಯರಿದ್ದಾರೆ..!
** Study circle Libraryಯ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳ ಒಡೆಯ 81 ರ ಹಿರಿಯ ಚೇತನ, ಜೀವನ ಸ್ಪೂರ್ತಿಯ ಚಿಲುಮೆ ವೇದೆಶ್ವರರಿದ್ದಾರೆ. ಅವರ ಪುಸ್ತಕ, ಅಂಚೆ ಚೀಟಿ, ನಾಣ್ಯ,painting ಅದ್ಭುತ ಸಂಗ್ರಹ ನೋಡಿದಾಗ 'ಹಿತ್ತಲ ಗಿಡ ನಮಗೇಕೆ ಮದ್ದಲ್ಲ?' ಎಂದೂ ಎನಿಸುತ್ತದೆ.


**ಜಗತ್ತಿನ ಎಲ್ಲ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣುವ ಜಾಗ ಗೋಕರ್ಣ. ಬದುಕಿನ ಆದ್ಯಾವುದೋ ತಿರುವಿನಲ್ಲಿ ಏನನ್ನೋ ಕಳೆದುಕೊಂಡು ಹುಡುಕಲು ಬಂದಂತೆ ಕಾಣುವ ಜನರು.
ಹರಕೆಯನ್ನು ಕಟ್ಟಲು ಬಂದವರು ಕೆಲವರು, ಹಿರಿಯ ಆತ್ಮಗಳಿಗೆ ಶಾಂತಿ ಕೊಡಲು ಬಂದವರು ಹಲವರು. ಎಲ್ಲ ಕಳೆದುಕೊಂಡು, ಅದೇನನ್ನೋ ಹುಡುಕಿಕೊಂಡು ನಶೆಯ ಜೀವನವ ಕಂಡುಕೊಂಡವರು ಹಲವರು. ಆಧ್ಯಾತ್ಮ ಚಿಂತನೆಯ ಮೂಲ ತತ್ವಗಳ ಅರಸಿ ಬಂದವರು ಒಂದಿಷ್ಟು ಜನ. ಗೋಕರ್ಣ ಸರಳತೆ, ಜಟಿಲತೆ ಹಾಗೂ ವಿಚಿತ್ರಗಳ ಸಂಗಮ.

**ಅಲ್ಲಿನ ಜನರ ಕಣ್ಣಲ್ಲಿ ಹಣದ ದಾಹವಿದೆ, ಹುಡುಕಾಟವಿದೆ, ಕಣ್ಣೀರಿದೆ, ಕನಸುಗಳಿವೆ, ತುಡಿತಗಳಿವೆ, ಪ್ರೀತಿಯಿದೆ, ನಶೆಯಿದೆ. ಕಣ್ಣಿನ ಬಣ್ಣಗಳನ್ನು ನೋಡುವುದಿದ್ದರೆ ಅಲ್ಲಿಯೇ ಅನಿಸಿದ್ದಿದೆ ನನಗೆ.

**'ಬದುಕು' ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳನ್ನು ಕೊಡುವ ತಾಕತ್ತು ಗೋಕರ್ಣಕ್ಕಿದೆ..!

ಕುಟುಂಬದ ಜೊತೆ ಹೋದರೆ 'ತೀರ್ಥಯಾತ್ರೆ'. ಗೆಳೆಯರ ಗುಂಪಲ್ಲಿ ಹೋದರೆ 'ಮೋಜು ಮಜಾ, ಗಮ್ಮತ್ತು'. ಒಬ್ಬರೇ ಅಡ್ಡಾಡಿದರೆ  ಹೊಸ ಲೋಕದ ದರ್ಶನ. !

ಕೊನೆಯಲ್ಲಿ ರಾಮತೀರ್ಥದ ತುದಿಯಲ್ಲೊಮ್ಮೆ ಕುಳಿತು ಇಹವ ಮರೆತು ನೀಲ ಕಡಲ ಕೊನೆಯ ಹುಡುಕಿ. ಅನಂತ ಕಡಲ ರಾಶಿ, ಮೇಲೆ ನೀಲ ನಭ. ಈ ಜಗದಲ್ಲಿ ನಾವೊಂದು 'ಚುಕ್ಕಿ' ಎನಿಸಿಬಿಡುತ್ತೇವೆ.

ಸಂಜೆಯ ರಂಗು ಕಡಲ ಅಲೆಗಳ ಮೇಲೆ ನರ್ತಿಸುತ್ತಿತ್ತು.  ಒಂದಿಷ್ಟು ನೆನಪುಗಳ, ಕಣ್ಣ ಮುಂದೆ, ಕ್ಯಾಮೆರಾದ ಒಳಗೆ ಇರುವ ಚಿತ್ರಗಳ ಹೊತ್ತು ನಾನು ವಾಹನವನೇರಿದ್ದೆ.

ಆದರೆ ...ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ ಗೋಕರ್ಣ..... ನೀಲಿ ಕಡಲ ನೀಲ ನಭದ.. ಗೋಕರ್ಣ .. !