Tuesday, March 26, 2013

ಬಾಬಣ್ಣನ ಗೂಡ೦ಗಡಿ

ಅರವತ್ನಾಲ್ಕು ಮನೆಗಳಿರುವ ನಮ್ಮೂರಿನಲ್ಲಿ ಮೂರ್ನಾಕು ಅ೦ಗಡಿಗಳಿದ್ದರೂ, ಬಾಬಣ್ಣನದು ಫೇಮಸ್ ಅ೦ಗಡಿ. ಅದು  ನಮ್ಮೂರ ಬಸ್ ಸ್ಟಾಪಿನ ಹತ್ತಿರದ ಅಂಗಡಿ. ಬಸ್ಸಿಗಾಗಿ ಕಾಯುವ ಬಹಳಷ್ಟು ಜನರು ಅಂಗಡಿಯ ಬೆಂಚಿನಲ್ಲೇ ಕೂರುವುದು. ಬಸ್ ಬರಲು ಸ್ವಲ್ಪ ಸಮಯವಿದ್ದರೆ ಚಾ ಕುಡಿಯುವುದು. ಕುಮಟೆಯಲ್ಲಿ ಅದೆಷ್ಟೇ ದೊಡ್ಡ ಸೂಪರ್ ಮಾರ್ಕೆಟ್ಟುಗಳಾದರೂ ಬಾಬಣ್ಣನ ಗೂಡಂಗಡಿಯ ಡಿಮಾ೦ಡೇನು ಕಡಿಮೆಯಾಗಿಲ್ಲ. ದಿನವೂ ಒ೦ದು ವಿಸಿಟ್ಟಾಕುವ ಖಾಯಮ್ ಗಿರಾಕಿಗಳು ಹೇಳುವ೦ತೆ, ಬಾಬಣ್ಣನ ಶೇಂಗಾಬೀಜವನ್ನು ತಿನ್ನುತ್ತ, ಲೋಕಲ್ ನ್ಯೂಸ್ ಪೇಪರ್ ಓದುವ ಮಜವೇ ಬೇರೆಯಂತೆ. ಬೋಯಿ ರಾಮನಿಂದ ಹಿಡಿದು ಮೂಲೆಮನೆ ಸುಬ್ರಾಯ ಮಾಸ್ತರವರೆಗೂ ಬಾಬಣ್ಣನ ಅಂಗಡಿಯ ಗಿರಾಕಿಗಳೇ. ಕೆಲವರಿಗೆ ಬೆಳಗಿನ ಚಾ ಬಾಬಣ್ಣನ ಕೈಯಿಂದಲೇ ಮಾಡಿಸಿ ಕುಡಿದು ಅಭ್ಯಾಸವಾದರೆ ಇನ್ನು ಕೆಲವರಿಗೆ ಸಂಜೆ ಚಾ. ಆ ಸ್ಟಾಪಿಗೆ ’ಬಾಬಣ್ಣನ ಅಂಗಡಿ’ ಸ್ಟಾಪೆಂದೇ ಕರೆಯುವುದು. ಜಮಾಲ ಸಾಬಿಯೂ, ತುಕ್ಕಪ್ಪ ಗಾವಡಿಯೂ, ಮಂಜಪ್ಪ ಭಟ್ರೂ ಜಾತಿ ಭೇದವನ್ನು ಮರೆತು ಒಂದೇ ಬೆಂಚಿನಲ್ಲಿ ಕುಳಿತು ೪ ರೂಪಾಯಿ ಚಾ ಕುಡಿಯುತ್ತ ಹರಟುವ ಏಕೈಕ ಜಾಗ ಬಾಬಣ್ಣನ ಅಂಗಡಿ.ಬಾಬಣ್ಣನಿಗೆ ಅದು ಪಿತ್ರಾರ್ಜಿತ ಆಸ್ತಿಯೆಂದೆ ಹೇಳಬಹುದಾದರೂ ಇವನ ಜಮಾನಾದಲ್ಲಿಯೇ ಪೆಟ್ಟಿಗೆ ಅಂಗಡಿಗೆ ತಿಳಿ ನೀಲಿಯ ಬಣ್ಣ ಹೊಡೆಸಿದ್ದು (STD boothಗಳಿಗೆಲ್ಲ ಹಳದಿ ಬಣ್ಣ ಹೇಗೆ Paint code ಆಗಿದೆಯೋ  ಗೂಡಂಗಡಿಗಳಿಗೆ ನೀಲಿ ಬಣ್ಣ!)  ಅಂಗಡಿಯ ನವೀಕರಣ ಮಾಡಿಸಿ. ಹೆಂಚು, ಸೋಗೆ ಹೊದೆಸಿದ್ದು . ಬಾಬಣ್ಣನ ಗೂಡಂಗಡಿಯು  ಒಂಥರದ ಸ್ಥಳೀಯ  ಪತ್ರಿಕಾಲಯದಂತೆ. ಬಾಬಣ್ಣನೆ೦ದರೆ ನಮ್ಮೂರಿನ ವಿಕಿಪೀಡಿಯ ಎ೦ದೇ ಹೇಳಬೇಕು.! ಸುತ್ತಲಿನ ಹತ್ತೂರುಗಳ ವಿಷಯಗಳೆಲ್ಲ ಇಲ್ಲಿ ಚರ್ಚಿತವಾಗಲೇ ಬೇಕು! ’ಚಡ್ಡಿ ಬಾಳನ’ ಕೋಳಿಯನ್ನು ಪಕ್ಕದ ಮನೆ ನಾಯಿ ಹಿಡಿದಿದ್ದರಿಂದ ಹಿಡಿದು ಹೊಳೆಯಾಚೆಯ ’ಗಂಗೆ’ ಓಡಿ ಹೋಗಿದ್ದರವರೆಗಿನ ಸುದ್ದಿಗಳ ಇಲ್ಲಿ ಚರ್ಚಿಸಲ್ಪಟ್ಟು ಅವರದೇ ಆದ ಒ೦ದು ತೀರ್ಮಾನಕ್ಕೆ ಬರಬೇಕು.

 ಬಾಗಿಲ ತೋರಣದ೦ತೆ ಎದುರಿಗೆ ಇಳಿಬಿದ್ದಿದ್ದ ಪಾನ್ ಮಸಾಲ ಪ್ಯಾಕೆಟ್ಟುಗಳು.ಪಾನ್ ಮಸಾಲಾ ಪ್ಯಾಕೆಟ್ಟುಗಳ೦ತೆ ನೇತಾಡುವ ಕನಸು ಕಾಣುತ್ತ ಗಾಜಿನ ಡಬ್ಬದಲ್ಲಿರುವ ಪೆಪ್ಪರಮೆ೦ಟುಗಳು, ಶೇ೦ಗಾ ಚಿಕ್ಕಿಗಳು. ಸೈನಿಕರ ತುಕಡಿಯೊ೦ದು ಗಣರಾಜ್ಯೋತ್ಸವದ ಪೆರೇಡಿನಲ್ಲಿ ನಿ೦ತ೦ತೆ ಕಾಣುವ ಸೋಡಾ ಬಾಟಲಿಗಳು. ವಿ೦ಡ್ ಬೆಲ್ ನ೦ತೆ ಕಾಣುವ ಕೆ೦ಪು ಹಸಿರು ಬಣ್ಣದ ಕೊಡಗಳು. ಅದೆಷ್ಟೋ ಕಾಲದಿ೦ದ ಗ೦ಟಲಲ್ಲಿ ಏನನ್ನೋ ಸಿಕ್ಕಿಸಿಕೊ೦ಡು ಕಷ್ಟಪಡುವ೦ತಿರುವ ಗೋಲಿ ಸೋಡ ಬಾಟಲಿಗಳು. ಮುಸ್ಸ೦ಜೆಯಲ್ಲಿ ಅ೦ಗಡಿಯ ತು೦ಬ ಬೆಳಕು ಹರಡುವ ಗ್ಯಾಸ್ ಲೈಟ್. ಅ೦ಗಡಿಯ ಎದುರು ಕಟ್ಟಿರುವ ತಟ್ಟಿಗೆ ಗಜಾನನ ಥಿಯೆಟರಿನಲ್ಲಿರುವ ಸಿನೆಮಾದ ಪೋಸ್ಟರು, ಅದರ ಕೆಳಗೊ೦ದು ಬಣ್ಣ ಮಾಸಿದ ಹ್ಯಾ೦ಡಲ್ ಬಳಿ ಸ್ವಲ್ಪ ತುಕ್ಕು ಬ೦ದಿರುವ ಸೈಕಲ್ಲು. ಇವಿಷ್ಟು  ಬಾಬಣ್ಣನ ಅಂಗಡಿಯ ಲಕ್ಷಣಗಳು.

ಬೆಳಿಗ್ಗೆ ಏಳಕ್ಕೆಲ್ಲ ಅ೦ಗಡಿಯ ಬಾಗಿಲು ತೆಗೆದಿರುತ್ತದೆ. ಏಳುವರೆಯ ಬಸ್ಸಿಗೆ ಕುಮಟೆಗೆ ಹೋಗುವ ಕೆಲವರಿಗೆ ಬೆಳಗಾಗುವುದು ಬಾಬಣ್ಣನ ಚಾ ಕುಡಿದಮೇಲೆಯೇ. ಮೇಲಿನಕೇರಿ ಮಾಬ್ಲ ಅ೦ಗಡಿಯ ಮೊದಲ ಗಿರಾಕಿ. ಬಾಬಣ್ಣ ಬಾಗಿಲು ತೆಗೆದು ಸ್ಟವ್ ಉರಿಸುವಾಗಲೇ ಮಾಬ್ಲ ನಾಯ್ಕರ ಆಗಮನ ಆಗಿಯೇ ಬಿಡುತ್ತದೆ. ’ಏನೋ, ಬಾಬು ಚಾಲಿ ಅಡಕಿ ರೇಟು ಹೇ೦ಗದೆ? ಇಪ್ಪತ್ತಾದ್ರೆ ನಮ್ಮನೆ ’ಪದ್ದು’ ಮದ್ವಿ ಮಾಡೇ ಬಿಡತೆ ನೋಡು ಇದೇ ವರ್ಷ.’ ಎನ್ನುತ್ತಲೇ ಬೆ೦ಚಿನ ಕೊನೆಗೆ ಮು೦ಡು ಸರಿ ಮಾಡಿಕೊಳ್ಳುತ್ತ ಕೂತು ಪೇಪರ್ ಹಿಡಿದೇ ಬಿಡುತ್ತಾರೆ.ಬಾಬು ’ಬೇಟೆ ಗೌಡ’ ಬ೦ದಿದ್ನನೊ ನಿನ್ನಾಗೆ ? ಕಾಯಿ ಕೊಯ್ಸುದಿತ್ತು. ಬರ್ತೆ ಹೇಳುಕಣಕಿ ಒ೦ದು ವಾರ ಆಯ್ತು ಬೋ ಮಗ ಬ೦ದೇ ಸಾಯುದಿಲ್ಲ. ಸ೦ಜಿಕಡೆಗೆ ಬ೦ದ್ರೆ ನಾ ಬರೂಕೆ ಹೇಳನೆ ಹೇಳೊ..ನಾಯ್ಕ್ರೆ ಯಾವ ಸರ್ಕಾರ ಬರುದು?’ ಎ೦ದು ಬಾಬಣ್ಣನನ್ನೂ, ಮಾಬ್ಲ ನಾಯ್ಕರನ್ನೂ ಮಾತನಾಡಿಸುತ್ತ ಬರುವ ಮೇಸ್ತ್ರಿ ಮಂಜ ಬಾಬಣ್ಣನ ಚಡ್ಡಿ ದೋಸ್ತ. 

ಇನ್ನು ಈ ಬಾಬಣ್ಣನೋ ಸಕಲ ಕಲಾ ಪ್ರವೀಣ. ಅದ್ಭುತವಾಗಿ ಅಡುಗೆ ಮಾಡುತ್ತಾನಂತೆ. ಹವ್ಯಾಸಿ ಯಕ್ಷಗಾನ ಕಲಾವಿದನೂ ಹೌದು. ಸಾಬರ (ಮುಸ್ಲಿಮರ ) ಬಳಿ  ಅವರ ಕನ್ನಡದಲ್ಲೇ ಮಾತನಾಡುತ್ತಾನೆ. ತನಗೆ ಇಂಗ್ಲಿಷು ಗೊತ್ತೆಂದೂ ಹೇಳುತ್ತಾನೆ.

ಬೋಯಿ ರಾಮನಿಗೆ ಬೀಳುವ ಕನಸುಗಳನ್ನೆಲ್ಲ ಡಿಕೋಡ್ ಮಾಡಿ ಓಸೀ ನ೦ಬರ್ ಹೇಳುವವನೂ ಬಾಬಣ್ಣನೇ. ! ಕನಸಲ್ಲಿ ಬಾವಿಯಲ್ಲಿ ಹಾವು ಕ೦ಡರೆ '01'. ಬಾವಿ ಕ೦ಡರೆ 00. ಹೆಣ್ಣು ಮಕ್ಕಳು ಕ೦ಡರೆ 4 ... ಹೀಗೇ ಸಾಗುತ್ತದೆ ಈ ಪಟ್ಟಿ.

 ಬಾಬಣ್ಣ ಕೋಳಿ ಪ೦ಚಾ೦ಗದ ಪ್ರವೀಣನೂ ಹೌದು.!  ಅ೦ಕದ ಕೋಳಿಯನ್ನು ಅವನಿಗೆ ತೋರಿಸದೆ ಯಾರೂ ಕೋಳಿ ಅ೦ಕಕ್ಕೆ ಹೋಗುವುದೇ ಇಲ್ಲ.! ಮಿಥಿ ನೋಡಿ ಇ೦ಥ ಬಣ್ಣದ ಕೋಳಿಯನ್ನು ಕಟ್ಟಿ ಎ೦ದು ಹೇಳುತ್ತಾನೆ.! ಒಮ್ಮೆ ’ಚಡ್ಡಿ ಬಾಳ’ (’ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ’ ಇದು ಬಾಳನ ಫೆವರೆಟ್ ಡೈಲಾಗು. ಅದಕ್ಕೆ ಅವನಿಗೆ ’ಚಡ್ಡಿ ಬಾಳ’ ಎ೦ಬ ಅಡ್ಡ ಹೆಸರು.! ಇವನ ಬಗ್ಗೆ ಇನ್ನೊ೦ದು ಲೇಖನಕ್ಕಾಗುವಷ್ಟು ಬರೆಯಬಹುದು ಅದನ್ನ ಇನ್ನೊಮ್ಮೆ ಬರೆಯುತ್ತೇನೆ) "ಬಾಬಣ್ಣನತ್ರ ಕೇಳುದೆ೦ತದು? ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ. ಈ ಕೋಳಿ ಯಾವಾರ ಕಟ್ರೂ ಗೆಲ್ತದೆ." ಎ೦ದು ಬಡಾಯಿ ಕೊಚ್ಚಿಕೊ೦ಡು ಹೋದವ 2 ಸಾವಿರ ರೂಪಾಯಿ  ಕಳೆದುಕೊ೦ಡು ಬ೦ದಿದ್ದ..!

ಇನ್ನು ಅವನಿಗೆ ಅವನ ಅಂಗಡಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳಿ :
ಘಟನೆ 1
ಒಮ್ಮೆ ಹೀಗಾಗಿತ್ತು :

ನಮ್ಮೂರಿನ ಹೈಸ್ಕೂಲಿಗೆ ಬರುವ ಕೆಲವು ಹುಡುಗರಿಗೆ ಇ೦ಗ್ಲಿಷೆ೦ದರೆ ಕಬ್ಬಣದೋ, ಉಕ್ಕಿನದೋ ಕಡಲೆಯೇ.! ಅದೂ ಹೊಸತಾಗಿ ಬ೦ದ ಇ೦ಗ್ಲಿಷ್ ಮಾಸ್ತರು ಬೇರೆ ಸಿಕ್ಕಪಟ್ಟೆ ಸ್ಟ್ರಿಕ್ಟು! ಕೋಲನ್ನು ಹಿಡಿಯದೇ ಕ್ಲಾಸಿಗೇ ಬರುತ್ತಿರಲಿಲ್ಲ. ನಮ್ಮ ಮಗಾ ಕನ್ನಡಕ್ಕೆ ಚೊಲೋ ಮಾರ್ಕ್ಸ್ ತಗ೦ಡ್ಯಾ, ಆದ್ರೆ ಇ೦ಗ್ಲಿಷ್ನಲ್ಲಿ ಪೇಲ್ರಾ..ಎನ್ನುವುದು ಸುಮಾರಾಗಿ ಎಲ್ಲ ಪಾಲಕರ ಹಾಡು. ಪ್ರಶ್ನೋತ್ತರಗಳು ಬಾಯಿಪಾಟ ಇರದಿದ್ದರೆ ಕೋಲು ಮುರಿವವರೆಗೆ ಬಡಿಯುತ್ತಿದ್ದರು. ಅದೆಷ್ಟೋ ಜನರಿಗೆ ಅವರ ನೋಡಿಯೇ ಮರೆತು ಹೋಗುತ್ತಿತ್ತು. ಇ೦ತಿಪ್ಪಾಗ ಕೆಲವು ಉಡಾಳ ಹುಡುಗರು ಇ೦ಗ್ಲಿಷು ಕ್ಲಾಸನ್ನು ಬ೦ಕ್ ಮಾಡುವುದನ್ನು ಕಲಿತರು. ಮನೆಕಡೆಗೆ ಹೊರಟರೆ ಮನೆಯವರಿ೦ದ ಬೈಗುಳ, ಕ್ಲಾಸಲ್ಲಿದ್ದರೆ ಮಾಸ್ತರರ ಕೋಲಿನ ಹೆದರಿಕೆ. ಅದಕ್ಕೆ ಹುಡುಗರು ಕ೦ಡುಕೊ೦ಡ ಪರಿಹಾರವೇ ’ಬಾಬಣ್ಣನ ಗೂಡ೦ಗಡಿ’.!
ಮಧ್ಯಾಹ್ನದ ಲಘು ವಿರಾಮದ ವೇಳೆ ನಾಲ್ಕೈದು ಹುಡುಗರು ಶಾಲೆಯಿ೦ದ ಪರಾರಿಯಾಗಿಬಿಡುತ್ತಿದ್ದರು. ಅವರೆಲ್ಲ ನೇರ ಬಾಬಣ್ಣನ ಗೂಡ೦ಗಡಿಗೆ ಹೋಗಿ ಶೇ೦ಗಾ ತಿನ್ನುತ್ತ ಕೂರುತ್ತಿದ್ದರು. ಶಾಲೆ ಬಿಡುವ ಸಮಯಕ್ಕೆ ಸರಿಯಾಗೆ ಮನೆ ಕಡೆ ಹೋಗುತ್ತಿದ್ದರು. ಗೈರು ಹಾಜರಿಯ ಗಮನಿಸಿದ ಇ೦ಗ್ಲಿಷ್ ಮಾಸ್ತರು ವಿಷಯವನ್ನು ಪಾಲಕರ ಗಮನಕ್ಕೂ, ಹೆಡ್ ಮಾಸ್ತರರ ಗಮನಕ್ಕೂ ತ೦ದರು. ಆದರೆ ಮಕ್ಕಳು ಅದೆಲ್ಲಿ ಮಾಯವಾಗುತ್ತಿದ್ದರು ಎ೦ಬುದೇ ತಿಳಿಯದ ವಿಷಯವಾಗಿತ್ತು. ಅದ್ಹೇಗೋ  ವಿಷಯವನ್ನು ತಿಳಿದ ಇ೦ಗ್ಲಿಷ್ ಮಾಸ್ತರು. ಮೂರ್ನಾಲ್ಕು ಪಾಲಕರ ಜೊತೆಗೂಡಿ ಬಾಬಣ್ಣನ ಅ೦ಗಡಿಗೆ ರೈಡ್ ಮಾಡಿಯೇ ಬಿಟ್ಟರು. ದೂರದಲ್ಲಿ ಇ೦ಗ್ಲಿಷ್ ಮಾಸ್ತರರ ಕ೦ಡ ಮಕ್ಕಳು ಅ೦ಗಡಿಯ ಹಿ೦ಬದಿಯ ಗುಡ್ದಕ್ಕೆ ಓಟ ಕಿತ್ತರು.! ಮಾಸ್ತರರು ಹಿ೦ಬದಿಗೆ ಹೋಗಲು ದಾರಿ ಹುಡುಕುತ್ತಿದ್ದಾಗ ಬಾಬಣ್ಣ, "ಮಾಸ್ತರ್ರೆ, ಆತ್ಲಗೆ ಹೋಗ್ಬೆಡ್ರ, ಅಲ್ಲಿ ರಿಸರ್ಚ್ ಮಾಡ್ತ್ರು," ಮಾಸ್ತರರು ಕಕ್ಕಾ ಬಿಕ್ಕಿ. ಎಲ್ಲಿಯ ಬಾಬಣ್ಣ? ಎಲ್ಲಿಯ ರಿಸರ್ಚು? "ಅತ್ಲಗೆ ಹೊಗ್ಬೇಡಿ ಅ೦ದೆ, ರಿಸರ್ಚ್ ಮಾಡ್ತರಲ್ರ, ವಾಸನಿ ಬತ್ತದೆರ". ಮಕ್ಕಳ ವಿಷಯ ಮರೆತ ಮಾಸ್ತರರು ಲ್ಯಾಬೊರೆಟರಿಯನ್ನು ಕಲ್ಪಿಸಿಕೊ೦ಡು, ಹುಡುಕುತ್ತ ಮುನ್ನಡೆದರೆ ಬ೦ದದ್ದು ಮೂತ್ರದ ವಾಸನೆ.! ’ರಿಸೆಸ್’ ಬಾಬಣ್ಣನ ಬಾಯಲ್ಲಿ ’ರಿಸರ್ಚ’ ಆಗಿತ್ತು.!

ಘಟನೆ 2 :

ದಶಕಗಳ ಹಿ೦ದೆ ರೀಲ್ ಕ್ಯಾಮೆರ ಹಿಡಿದು ಮದುವೆ ಮನೆಯಲ್ಲಿ ಫೊಟೊ ಹೊಡೆಯಲು ಹೋಗುತ್ತಿದ್ದ ಪು೦ಡಲೀಕನ ಗುಟ್ಟು ರಟ್ಟಾದದ್ದು ಬಾಬಣ್ಣನಿ೦ದಲೇ. ಟಿಪ್ಪುಟಾಪಾಗಿ ಮದುವೆಮನೆಗಳಿಗೆ ಕ್ಯಾಮೆರದೊ೦ದಿಗೆ ಹೋಗಿ ಫ಼್ಲ್ಯಾಶನ್ನು ಫಳಫಳಿಸುತ್ತಿದ್ದ.  ಹೆ೦ಗಸರು ನಾಚಿಕೆಯಿ೦ದಲೇ ಪೋಸ್ ಕೊಟ್ಟರೆ, ಮಕ್ಕಳು ಅವನ ಸುತ್ತಮುತ್ತಲೇ ಸುಳಿಯುತ್ತಿದ್ದರು. ಮದುಮಕ್ಕಳೋ ಅವನ ಕ್ಯಾಮೆರ ಅವರ ಕಡೆಗೆ ತಿರುಗಿತೆ೦ದರೆ ಅಲರ್ಟ್ ಆಗಿಬಿಡುತ್ತಿದ್ದರು. ಮದುವೆಯ ಕೊನೆಯವರೆಗೂ ಮದುವೆ ಮನೆಯಲ್ಲೇ ಉಳಿದು ಚಹ ಕುಡಿದೇ ಹೊರಬೀಳುತ್ತಿದ್ದ. ಜನರು ಫೊಟೊ ಕೇಳಿದರೆ, " ತೊಳಿಸುಕೆ ಕೊಟ್ಟಾನೆ ಹಾ೦, ಮಸ್ತ್ ಬ೦ದದೆ ನಿಮ್ ಫೊಟೊ" ಎ೦ದು ಹೇಳುತ್ತಿದ್ದ. ಮದುವೆ ಮನೆಯ ಜನ ಅವನ ಹಿ೦ದೆ ಮು೦ದೆ ಕಾಡಹತ್ತಿದಾಗ, " ಫೊಟೊ ತೆಗೀವಾಗ ಕ್ಯಾಮೆರ ಮುಚ್ಚಳ ತೆಗ್ಯುಕೆ ಮರ್ತೊಗಿತ್ತು ನೋಡು, ಎ೦ತಕ್ಕೆನೊ ಮಾರಯ ಫೋಟೊ ಕಪ್ಪಗೆ ಬ೦ದದೆ"  ಎ೦ದೋ ಹೇಳಿ ಸಾಗಾಕುತ್ತಿದ್ದ.! ಹೀಗೇ ಸಾಗಿತ್ತು ಪು೦ಡಲೀಕ ಮತ್ತವನ ಕ್ಯಾಮೆರ ಲೀಲೆ.
 ಪು೦ಡ್ಲೀಕನಿಗೆ ಚಾಪೆ ಕೆಳಗೆ ನುಸುಳಿ ಗೊತ್ತಿದ್ದರೆ, ನಮ್ಮ ಹೀರೊ ಬಾಬಣ್ಣ ಬರೀ ರ೦ಗೋಲಿಯಷ್ಟೇ ಅಲ್ಲ ನೆಲದ ಅಡಿಗೂ ನುಸುಳಿ ಗೊತ್ತಿತ್ತು. ! ಅಸಲಿಗೆ ಪು೦ಡಲೀಕ ಕ್ಯಾಮೆರಾಕ್ಕೆ ರೀಲು ಹಾಕುವುದೇ ಇಲ್ಲವೆ೦ದೂ ಬರೀ ಬ್ಯಾಟರಿ ಸೆಲ್ಲುಗಳನ್ನು ಹಾಕಿ ಫ಼್ಲ್ಯಾಶನ್ನು ಫಳಫಳಿಸುತ್ತಾನೆನ್ನುವ ಗುಟ್ಟನ್ನು ಬಾಬಣ್ಣ, ಒ೦ದು ಮದುವೆಯಲ್ಲಿ ರಟ್ಟು ಮಾಡಿಬಿಟ್ಟಿದ್ದ. !

ಘಟನೆ 3 :

ಸ್ವಲ್ಪ ಹೊಟ್ಟೆಯಿರುವ ಆಚೆ ಕೇರಿಯ ಸುಬ್ರಾಯನಿಗೆ ಆಟದ ಪಾರ್ಟಿನ ಹುಚ್ಚು. ಅದರಲ್ಲೂ ಸ್ತ್ರೀ ವೇಷವೆ೦ದರೆ ಅವ ಸದಾ ಮು೦ದೆ. ಪಾರ್ಟು ಅಷ್ಟೇನು ಒಪ್ಪದಿದ್ದರೂ ಸ೦ಘದ ಅಧ್ಯಕ್ಷನಿಗೆ ಕೋಳಿ ಊಟ ಹಾಕಿಸಿ ಪಾರ್ಟು ಗಿಟ್ಟಿಸಿಕೊಳ್ಳುತ್ತಿದ್ದ. ಮತ್ತೆ ಆಟದ ಮಾರನೇ ದಿನ ಅ೦ಗಡಿಯ ಬಾಗಿಲಲ್ಲಿ ಬ೦ದು, ತನ್ನ ವೇಷ ನೋಡಿ ಗೇರುಬೀಜದ ಫ್ಯಾಕ್ಟ್ರಿಯ  ಹೆಣ್ಣು ಮಕ್ಕಳು ನಿಜವಾದ ಹೆಣ್ಣೆ೦ದೇ ತಿಳಿದಿದ್ದರೆ೦ದೂ. ಸ್ಟೇಜಿನ ಬಳಿ ಇದ್ದ ಹುಡುಗರೆಲ್ಲ ತನಗೆ ಲೈನ್ ಹಾಕುತ್ತಿದ್ದರೆ೦ದೂ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.
ಊರ ಬಯಲಲ್ಲಿ ನಡೆದ ಯಕ್ಷಗಾನದಲ್ಲಿ ಸುಬ್ಬಿತ್ಲಿನ ಶ೦ಕ್ರ ಹಾಗೂ ದೊಳ್ಳು ಸುಬ್ರಾಯ ರಾಮ-ಸೀತೆಯಾಗಿ ಆಡಿದ್ದ ’ಸೀತಾ ಸ್ವಯ೦ವರ’ದಲ್ಲಿ ತನ್ನ ಸೀತೆಯ ಪಾರ್ಟಿನ ಬಗ್ಗೆ ಹೇಳಿಕೊಳ್ಳುತ್ತಿದ್ದ ಸುಬ್ರಾಯನ ಬಾಯಿಗೆ ಬಾಬಣ್ಣ ಬೀಗ ಹಾಕಿ ಬಿಟ್ಟಿದ್ದ.  " ಸುಬ್ರಾಯ ರಾಮಾ ಸೀತೆದು ಲವ್ ಮೆರೆಜೊ ಹ್ಯಾ೦ಗೊ? ಸೀತೆ ಮದ್ವೆಗೆ ಮು೦ಚೆನೆ ಬಸ್ರಾದ೦ಗೆ ಕಾಣತಿತ್ತಲೊ ಮೊನ್ನೆ ಆಟದಾಗೆ.! ಒ೦ಭತ್ತಿ೦ಗಳದ ಬಸ್ರಿಗೆ ಹೊಟ್ಟಿ ಇದ್ದಾ೦ಗಿತ್ತು." ಅ೦ದಾಗ ದೊಳ್ಳು ಸುಬ್ರಾಯ ತನ್ನ ಹೊಟ್ಟೆಯ ಮೇಲೇ ಕೈ ಆಡಿಸುತ್ತಲೇ ಪೆಕರು ಪೆಕರನ೦ತೆ ನಕ್ಕಿದ್ದ.! ಬಹುಶಃ ಇದಾದ ಮೇಲೆ ಸ್ತ್ರೀ ವೇಷವನ್ನು ಹಾಕುವುದೂ ನಿಲ್ಲಿಸಿದ್ದ.!

ಬಸ್ ಬರುವುದು ಗಂಟೆಗಳಷ್ಟು ತಡವಾದರೂ ಬೇಸರವೆನಿಸುವುದೇ ಇಲ್ಲ. ಅಂಗಡಿಯಲ್ಲಿನ ಸಂಭಾಷಣೆಗಳು ಬಹಳ ಮಜಾ ಕೊಡುತ್ತವೆ. ಒಂದು ಊರಿನ ಬಣ್ಣಗಳೆಲ್ಲವನ್ನೂ ಆ ಊರಿನ ಅಂಗಡಿಯಲ್ಲಿ ನೋಡಬಹುದು.

ಚಿಕ್ಕವಳಿರುವಾಗ ಕಡ್ಡಿ (ಬಳಪ ) ತರಲು ಬಾಬಣ್ಣನ ಅಂಗಡಿಗೆ ಹೋಗುತ್ತಿದ್ದೆ. ಚಾಕಲೇಟುಗಳ ನೋಡುತ್ತಾ ನಿಲ್ಲುತ್ತಿದೆ. ಬಾಲ್ಯದ ನೆನಪುಗಳ ಕೆಣಕಲು ಮೊನ್ನೆ ಅತ್ತ ಕಡೆ ಹೋಗಿದ್ದೆ . ಸುಮಾರಾಗಿ ಹಾಗೆ ಇದೆ ಅಂಗಡಿ. ಲೇಯ್ಸ್  ಪ್ಯಾಕೆಟ್ಟುಗಳ ಧಾಳಿಯೇನೂ  ಆದ ಹಾಗೆ ಕಾಣಲಿಲ್ಲ. ಪೆಪ್ಪರಮೆಂಟುಗಳೂ, ಶೇಂಗಾ  ಚಿಕ್ಕಿಗಳೂ, ಚಿಕ್ಕಂದಿನಿಂದಲೂ ನನಗೆ ಬಿಡಿಸಲಾಗದ ಒಗಟಾಗಿ  ಕಾಣುವ  ಗೋಲಿ ಸೋಡದ  ಬಾಟಲಿಗಳೂ ಹಾಗೆ ಇದ್ದವು. ಮೊದಲೆಲ್ಲ 1 ರೂಪಾಯಿಗೆ ಸಿಗುತ್ತಿದ್ದ ಶೇಂಗಾ ಪ್ಯಾಕೆಟ್ಟಿಗೆ 3 ರೂಪಾಯಿ ಆದದ್ದು ಗಮನಕ್ಕೆ ಬಂತುಗ಼ಜಾನನ ಥಿಯೇಟರ್ ಮುಚ್ಚಿದುದರಿಂದ  ಚಿತ್ತರಂಜನ ಥಿಯೇಟರಿನಲ್ಲಿರುವ ಸಿನೆಮಾದ ಪೋಸ್ಟರಿತ್ತು . 
ಸ್ವಲ್ಪ ಹೊತ್ತು ಕುಳಿತಿದ್ದೆ ಬೆಂಚುಗಳ ಮೇಲೆ. ರವಿಯು ಪಶ್ಚಿಮದಲ್ಲಿ ಇಳಿದಿದ್ದ.   ಇಮಾಮ್ ಸಾಬಿಯ ಹೆಂಡತಿ ಬಂದು 'ಬಾಬಣ್ಣ ನಿಮ್ದು ಎತ್ತು ಅಲ್ಲಿ ಗದ್ದೆ ಕೂಡೆ ಮಲಗಾನೇ. ನಮ್ಮನೇಲಿ ಅಡಿಗೆ ರೂಂ ಪೂರ ಇರುವೆ ಬಂದಾರೆ. ಲಕ್ಷಣ ರೇಖೆ ಆದೇ.?  ಇದ್ರೆ ಕೊಡು ನೋಡ್ವ' ಎಂದಳು.ಚಿಟ್ಟೆಮನೆ ಮಾಸ್ತಿ, ಮಾದೇವನ ಜಮೀನಿನ ಮೇಲೆ 'ಇಂಜೆಕ್ಷನ್ ದಾವ' ತಂದಿಟ್ಟಿದ್ದು ಹೇಳುತ್ತಿದ್ದ. ಇಂಜೆಕ್ಷನ್ ಎನ್ನುವ ಪದವೊಂದೆ ಅರ್ಥವಾಗುತ್ತಿದ್ದ ತುಳಸು ಗೌಡ "ಅದೆಂಥ ಇಂಜೆಕ್ಸನ್ ತಂದಿದ್ಯೋ ಮಾಸ್ತಿ, ಡಾಕ್ಟರ ಕೊಡುದು ನೀನೆ ತಂದಿದ್ಯೋ ಹೆಂಗೋ ? " ಎಂದಿದ್ದ.  

 ಗಣಪತಿ ಭಟ್ರ ಮನೇಲಿ ಬೆಂಗಳೂರಲ್ಲಿರುವ ಅವರ ಮಗ ಹತ್ತು ಸಾವಿರ ರೂಪಾಯಿ ಕೊಟ್ಟು ತಂದ ನಾಯಿಯ ಬಗ್ಗೆ. ಗಾಳಿಮನೆ  'ಮಾಚ' ಹೇಳುತ್ತಿದ್ದರೆ, ಚಹ ಬೆರೆಸುತ್ತಲೇ ಬಾಬಣ್ಣ ಒಂದು ಕಿವಿಯನ್ನು ಸಂಭಾಷಣೆಯತ್ತ  ಬಿಟ್ಟಿದ್ದ. 'ಅದೆಂತದ ಬಾಬು ಸಿಂಹದ ನಮನಿ ಆದೇ ಆ ಕುನ್ನಿ, ಕೂಗ್ತದೆ ಹೆಂಗೆ, ದೊಡ್ದಾದ್ಮೇಲೆ ಹದಾ ಗಾವಟಿ ಆಕಳಷ್ಟು ಆಗುದು ನೋಡು. ಹತ್ತ ಸಾವರ ಎಂಥ ಕುಶಾಲು...?" ಎಂದಿದ್ದಕ್ಕೆ " ಅಲ್ಲ ಅದರೂ ನೀ ಎಂಥದೇ ಹೇಳು ಮಾಚ ಅದೆಂಥದೋ ಒಂದು ಎಮ್ಮಿ ರೇಟಾಯ್ತಲೋ ಹೌದೊ ಅಲ್ವೋ ತಂಗಿ" ಎಂದ. ಹೌದೆಂಬಂತೆ  ತಲೆ ಆಡಿಸುತ್ತ ನಾನು ಒಂದು ಚಾ ಕೊಡಲು ಹೇಳಿದೆ. 

ನಗರವು ವೇಗವಾಗಿ ಬದಲಾಗುತ್ತದೆ, ಬೆಳೆಯುತ್ತದೆ. ಹಳ್ಳಿಗಳು ಬಹಳ ನಿಧಾನವಾಗಿ ಬದಲಾಗುತ್ತಿವೆ. ಅಲ್ವಾ? 
ನಮ್ಮ ಹಳ್ಳಿಗಳು ಹಳ್ಳಿಗಳಾಗೆ  ಇರಲಿ. ಗೂಡಂಗಡಿ ಅಲ್ಲಿಯ ಚಾ, ಶೇಂಗಾ ಬೀಜ, ಗೋಲಿಸೋಡಾ-ಶರಬತ್ತು, ತಟ್ಟಿ , ಎಲ್ಲ ಹೀಗೆ   
ಇರಲಿ ಎಂದು ಮನವು ಹಾರೈಸುತ್ತಿತ್ತು.