Sunday, October 9, 2011

ನೋಟ್ ಬುಕ್ಕಿನ ಕೊನೆಯ ಪೇಜು

                                                            (ಚಿತ್ರ ಕೃಪೆ: ಅಂತರ್ಜಾಲ)
'ನೋಟ್ ಬುಕ್ಕಿನ ಕೊನೆಯ ಪೇಜು'  ಇದೊಂದು ತೀರ ಪರಿಚಯದ, ಆದರೆ ಅದೇನೋ ವಿಶಿಷ್ಟ ಎನಿಸುವ ಶಬ್ದ. ಆ ಪೇಜಿನ ಮೇಲೆ  ಅದೊಂಥರದ ಮೋಹ, ಮಮತೆ ಎಲ್ಲ. ! ಪಟ್ಟಿ-ಪುಸ್ತಕಗಳೆಂದ ಮೇಲೆ ಅದಕ್ಕೊಂದು ಮೊದಲನೆಯ ಹಾಗೂ ಕೊನೆಯ ಪೇಜುಗಳೆಂದು ಇರಲೇ ಬೇಕು. ಎಲ್ಲದಕ್ಕೂ ಒಂದು ಆದಿ ಹಾಗು ಅಂತ್ಯ ಎಂದು ಇರುವಂತೆ! ಮೊದಲ ಪೇಜಿನಲ್ಲಿ ಆದಷ್ಟು ಸುಂದರವಾಗಿ ಹೆಸರನ್ನೂ ತರಗತಿಯನ್ನೂ ರೋಲ್ ನಂಬರ್ ಗಳನ್ನೆಲ್ಲ ಬರೆಯುತ್ತಿದ್ದೆವು  ಅಲ್ವಾ? ನಾವು ನಮ್ಮ ಶಾಲಾ ದಿನಗಳಲ್ಲಿ. ಕೊನೆಗೆ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ಆ ಹೆಸರು ಬರೆಯುವ ಹುಮ್ಮಸ್ಸು ಮಾಸುತ್ತ ಸಾಗುತ್ತದೆ. ಥೇಟ್ ನೆನಪುಗಳಂತೆ. !ಕೊನೆಗೆ ಕಾಲೇಜಿನಲ್ಲಿ ನೋಟ್ ಪುಸ್ತಕ ಒಯ್ಯುವುದೇ ಒಂದು ರಗಳೆ ಎನಿಸಿಬಿಡುತ್ತದೆ. (ಅದಕ್ಕೆ ನಮ್ಮ ಹುಡುಗರು folding front page ಇರುವ ನೋಟ್ ಪುಸ್ತಕಗಳನ್ನು ಸುರುಳಿ ಸುತ್ತಿ ಒಯ್ಯುತ್ತಾರೆ.) ನೋಡಿ ಇಂಥ ಹರಟೆ ಹೊಡೆಯುವಾಗಲೇ ನನ್ನ ರೈಲು ಹಳಿ ತಪ್ಪುತ್ತದೆ. ಇರಲಿ ಬಿಡಿ ! ಓಡಿಸಿದ್ದೇನೆ ಓದಿ.
ವಿ.ಸೂ: ಇಲ್ಲಿ ಯಾರದ್ದೇ ಮನ ನೋಯಿಸುವ ಉದ್ದೇಶವಿಲ್ಲ .ಇಲ್ಲಿನ ಹಾಸ್ಯವನ್ನಷ್ಟೇ ಸ್ವೀಕರಿಸಬೇಕಾಗಿ ವಿನಂತಿ .

ನಾನು ಜನರನ್ನು ಎರಡೇ ಎರಡು ವಿಧವಾಗಿ ವಿಂಗಡಿಸುತ್ತೇನೆ.
 ೧. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಬರೆದವರು (ಬರೆಯುವವರು )
೨. ಬರೆಯದೇ ಇರುವವರು.(ಇದ್ದವರು )

ನಿಮ್ಮ ಶಾಲಾ ಕಾಲೇಜು ದಿನಗಳನ್ನು  ಒಮ್ಮೆ ನೆನಪಿಸಿ ಕೊಳ್ಳಿ ಅದರಲ್ಲಿ ಕೊನೆಯ ಪೇಜಿನದೊಂದು ಅಧ್ಯಾಯ ಇದ್ದೇ ಇರುತ್ತದೆ. ಇನ್ನು ಕೆಲವರು 'ನಾನು ಏನು ಬರೆಯುತ್ತಿರಲಿಲ್ಲ ಮಾರಾಯ್ರೆ' ಎನ್ನಬಹುದು. ನಿಮ್ಮ ಬಗ್ಗೆ ಏನೂ ಹೇಳಲೂ ಆಗುವುದಿಲ್ಲ. ಸಿಕ್ಕಾಪಟ್ಟೆ ಪಂಕ್ಚುವಲ್ ನೀವು..! ಈ ಲೇಖನವನ್ನು ಓದುತ್ತ ಹೋಗಿ ನೀವು ಏನನ್ನು ಮಿಸ್ ಮಾಡಿಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.! 


ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ನಮ್ಮ ಮನಸ್ಸಿಗೆ ಪ್ರಬುದ್ಧತೆ ಬರುವುದನ್ನು ಸಲೀಸಾಗಿ ಈ ಕೊನೆಯ ಪೇಜು ಹೇಳಿ ಬಿಡುತ್ತದೆ. ಬೇಕಿದ್ದರೆ ನಿಮ್ಮ ಶಾಲಾ ದಿನಗಳ ಹಾಗೂ ಕಾಲೇಜಿನ ದಿನಗಳ ನೋಟ್ ಬುಕ್ ತೆಗೆದು ನೋಡಿ. ವ್ಯತ್ಯಾಸ ಕಂಡು ಬರುತ್ತದೆ.
ನೋಟ್ ಬುಕ್ಕಿನ ಕೊನೆಯ ಪೇಜನ್ನು ನೋಡಿ ನೀವು ಎಂಥವರು ಎಂಬುದನ್ನು ಹೇಳಬಹುದಂತೆ. ! 

ನನಗಂತೂ ಅದೇನೋ ವಿಚಿತ್ರ ಪ್ರೀತಿ ಈ ಹಾಳೆಯ ಮೇಲೆ. ನೋಟ್ ಬುಕ್ ರದ್ದಿಗೆ ಕೊಡುವಾಗ ಕೊನೆಯ ಹಾಳೆಯನ್ನು ಹರಿದು ಕೊಡುವುದೂ ಇತ್ತು. ಅದೇ ಹಾಳೆಗಳ ಸಂಗ್ರಹ ಮತ್ತೊಂದು ನೋಟ್ ಬುಕ್ ಆಗುವಷ್ಟಿದೆ..!


ಅದೆಷ್ಟೋ ಸಲ ಅಂದು ಕೊಂಡಿದ್ದೆ, ಈ ಸಲ ಕೊನೆಯ ಪೇಜಿನಲ್ಲಿ ಬರೆಯಲೇ ಬಾರದು ಎಂದು. ಆದರೆ ಹಾಳಾದ ಪೆನ್ನು ಕೆಲವೊಮ್ಮೆ ಬರೆಯುವುದೇ ಇಲ್ಲ ನೋಡಿ, ಆಗ ಗೀಚಲು ಹಿಂಬದಿಯ ಪೇಜೇ ಬೇಕು..! ಅದೊಂದು ನೆವದಲ್ಲಿ ಶುರುವಾದ ಬರೆಹ ಅದೊಂದು ಪೇಜು ಮುಗಿದು ಅದರ ಹಿಂಬದಿಯ ಪೇಜಿಗೆ ಬರುತ್ತಿತ್ತು.! ಅದೆಷ್ಟೋ ಸಲ ಕೊನೆಯ ಪೇಜುಗಳ ಸಂಖ್ಯೆಯೇ ನೋಟ್ಸ್ ಬರೆದ ಪುಟಗಳಿಗಿಂತ ಜಾಸ್ತಿ ಆದದ್ದೂ  ಇತ್ತು.!


ಇನ್ನು ಈ ಕೊನೆಯ ಪೇಜಿನಿಂದ ಶುರುವಾದ ಅದೆಷ್ಟೋ love storyಗಳಿವೆ ಮಾರಾಯ್ರೆ. ಆಗಾಗ ನೋಟ್ ಬುಕ್ ತೆಗೆದುಕೊಂಡು ಹೋಗುತ್ತಿದ್ದ ಹುಡುಗ i love you ಎಂದು ಬರೆದು ಕೊಟ್ಟಿದ್ದನಂತೆ ನನ್ನ ಗೆಳತಿ ಒಬ್ಬಳಿಗೆ ಇದೇ  ಕೊನೆಯ ಪೇಜಿನಲ್ಲಿ .! (ಇದೆಲ್ಲ ಮೊಬೈಲ್ ಫೋನ್ ಹಾವಳಿಗಿಂತ ಹಿಂದಿನ ಸುದ್ದಿ. ಈಗೆಲ್ಲ i love you ಎಂದು ಹೇಳಲು ನೋಟ್ ಬುಕ್ಯಾಕೆ ಬೇಕು ಹೇಳಿ? ಪ್ರಪೋಸ್ ಮಾಡೋದ್ರಿಂದ ಹಿಡಿದು ಬ್ರೇಕ್ ಅಪ್ ವರೆಗೂ ಮೆಸ್ಸೇಜಿನಲ್ಲೇ ಆಗೋ ಕಾಲ ಇದು..! ) 


ಸ್ಕೂಲಿನ ದಿನಗಳಲ್ಲಿ ನೋಟ್ ಬುಕ್ ತೆಗೆದುಕೊಂಡು ಹೋದ ಹುಡುಗ ನಿಮ್ಮ ಕೊನೆಯ ಪೇಜಿನಲ್ಲಿ ಚಿತ್ರ ಬರೆದನೋ ಅವನೇನೋ ವಿಶಿಷ್ಟವಾದುದನ್ನು ಹೇಳಲಿದ್ದಾನೆ ಎಂದೇ ಅರ್ಥ..! 'ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ' ... (ಇದನ್ನು ಮುಂದೆ ನಿಮ್ಮ ಮಕ್ಕಳಿಗೆ ಇರಲಿ ಎಂದು ಹೇಳಿದೆ )


ಇನ್ನು ಈ crushಗಳ ಕಥೆ ಕೇಳಿ:  ಹುಡುಗನೊಬ್ಬ ಇಷ್ಟವಾದರೆ ಅವನ ಹೆಸರನ್ನು ಅದ್ಹೇಗೋ ಕದ್ದು ಮುಚ್ಚಿ ಕೊನೆಯ ಪೇಜಿನ ಅಕ್ಷರಗಳ ನಡುವೆ ಬರೆಯುತ್ತಿದ್ದಳು ಹುಡುಗಿ. ಹಾಗೆ ಅಂಥ ಹೆಸರುಗಳ ಬರೆಯಲು ಆ ಹಾಳೆ ಸಾಕಾಗದೆ ಹಿಂದಿನ ಪೇಜಿನಲ್ಲಿ ಶುರುಮಾಡಿದಳಂತೆ..!
ನಾನೂ ನನ್ನ ಹೈಸ್ಕೂಲಿನ ದಿನಗಳಲ್ಲಿ ಕೊನೆಯ ಪೇಜಿನಲ್ಲಿ ಸೌರವ ಗಂಗೂಲಿ ಹೆಸರಿನ ಜೊತೆಗೆ ನನ್ನ ಹೆಸರನ್ನು ಬರೆದಿಡುತ್ತಿದ್ದೆ..!


ಇಂಥದ್ದೇ ಒಂದು ನೈಜ ಘಟನೆ ಕೇಳಿ :
ನಾನು ಕನ್ನಡ ಶಾಲೆಯಲ್ಲಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿ ಡಿಗ್ರೀ ಕೊನೆಯ ವರ್ಷದಲ್ಲಿದ್ದ ಹುಡುಗನೊಬ್ಬನಿದ್ದ, ನಾನು 'ಮಾಧವಣ್ಣ' ಎಂದೇ ಕರೆಯುತ್ತಿದ್ದೆ. ನಮ್ಮ ಮನೆಗೆ ಕ್ರಿಕೆಟ್ ನೋಡಲು ಬರುತ್ತಿದ್ದ ಪರೀಕ್ಷೆಯಿದ್ದರೂ.! ಹೆಸರಿಗೆ ಮಾತ್ರ ನೋಟ್ ಬುಕ್ ಕೈಯಲ್ಲಿ, ಗಮನವೆಲ್ಲ ಟಿವಿಯಲ್ಲಿಯೇ.! ಒಮ್ಮೆ ಸುಮ್ಮನೆ ಅವನ ನೋಟ್ ಬುಕ್ ತೆಗೆದು ನೋಡಿದ್ದೆ. ಹಿಂಬದಿಯ ಪೇಜಿನಲ್ಲಿ ಎಲ್ಲಿ ನೋಡಿದರಲ್ಲಿ shamadhav .. shamadhav ಎಂದು ಬರೆದಿರುತ್ತಿತ್ತು. ಕೊನೆಗೆ ತಿಳಿದದ್ದು, ಅವನು shama (ಶಮಾ) ಎನ್ನುವ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ..!


ನಾವು satellite communication ಪಾಠ ಮಾಡುವ ಸರ್ ಒಬ್ಬರ ಕುರಿತು  pappu can't teach saala ಎಂದು remix ಹಾಡೊಂದನ್ನು ಕೊನೆಯ ಪೇಜಿನಲ್ಲಿ ಬರೆದೂ ಆಗಿತ್ತು. ಈ ಹಾಡು ಭಯಂಕರ ಪ್ರಸಿದ್ಧಿಯಾಗಿತ್ತು ಒಮ್ಮೆ.!


ಇನ್ನು ಕೆಲವರಿರುತ್ತಾರೆ ನೋಡಿ, ಮೊದಲ ಪೇಜಿನಿಂದ ನೋಟ್ಸ್ ಬರೆಯಲು ಶುರು ಮಾಡಿ, ಮಾರ್ಜಿನ್ ಕೂಡ ಬಿಡದೆ. ಕೊನೆಯ ಪೇಜಿನ ಕೊನೆಯ ಸಾಲಿನ ವರೆಗೂ ನೋಟ್ಸ್ ಬರೆಯುವಷ್ಟು ನಿಷ್ಠಾವಂತರು.! ಅವರನ್ನು ಅದ್ಹೇಗೆ ನಮ್ಮ ಸಾಲಿನಲ್ಲಿ ಕೂರಿಸಿಕೊಳ್ಳುವುದು ನೀವೇ ಹೇಳಿ ? 


ಕೆಲವರು ನೋಟ್ ಬುಕ್ಕಿಗೆ ಕವರ್ ಹಾಕಿ. ಹಿಂಬದಿ ಮುಂಬದಿ ತಿಳಿಯದೆ ಎರಡೂ ಕಡೆ ನೋಟ್ಸ್ ಬರೆಯುವ ಪುಣ್ಯಾತ್ಮರೂ ಇದ್ದಾರೆ .! ಅವರದು ಕೊನೆ ಮೊದಲು ಎಲ್ಲೆಲ್ಲೋ ಇರುವ ನೋಟ್ ಬುಕ್ .! ಅಥವಾ ಕೊನೆ ಮೊದಲು ಇದ್ದೂ ಇಲ್ಲದಂತಿರುವ ನೋಟ್ ಬುಕ್ ..!

ಈ ಕೊನೆಯ ಪೇಜಿನಲ್ಲಿ ಬರೆಯುವ ಚಟ assignment ನೋಟ್ ಬುಕ್ ಕೂಡ ಬಿಡಲು ಬಿಡುವುದಿಲ್ಲ..!  assignment ಅದನ್ನು ಅದೇನೋ ನೆನಪಾಗಿ ಹಿಂಬದಿಯ ಪೇಜಿನಲ್ಲಿ ಬರೆದು ಬಿಡುತ್ತೇವೆ. ಅದ್ಯಾವುದೋ ಹಾಡು, ಸಾಲು, ಮೆಸ್ಸೇಜು ಹೀಗೆ ಏನೋ ಒಂದು ನಂತರ ಲೆಕ್ಚರರ್ ಕೇಳಿದಾಗ ಅದನ್ನು ಅಂಟಿಸಿ ತಿಳಿಯದಂತೆ ಮಾಡಲು ಹರ ಹರಿ ಸಾಹಸ ಮಾಡಿದ್ದೂ ಇದೆ .! ಈ ಲೆಕ್ಚರರ್ ಗಳಿಗೂ ಹಿಂಬದಿಯ ಪೇಜು ಓದುವ ಘೀಳು ಇದೆ. ನಂತರ ಕ್ಲಾಸಲ್ಲಿ ಬಂದು ಸುಮ್ಮನೆ ಮರ್ಯಾದೆ ಹರಾಜು ಮಾಡಿಬಿಡುತ್ತಾರೆ ಮಾರಾಯ್ರೆ!

ಹಿಂಬದಿಯ ಪೇಜಿನಲ್ಲಿ ಏನಿರುತ್ತದೆ ?
* ಕೆಲವರು ಹಿಂಬದಿಯ ಪೇಜಿನಲ್ಲಿ ವಿವಿಧ ರೀತಿಯ ಅಕ್ಷರ ವಿನ್ಯಾಸವನ್ನ್ನು practice ಮಾಡುತ್ತಾರೆ. ಕೆಲವರು ಎದುರಿಗೆ ಪಾಠ ಮಾಡುವವರ ಚಿತ್ರ ಬರೆಯುತ್ತಾರೆ .! ಹೊರಗಡೆ ಕಿಟಕಿಯಲ್ಲಿ ಕಂಡಿದ್ದನ್ನೆಲ್ಲ ಚಿತ್ರಿಸುತ್ತಾರೆ. !

ತುಂಬಾ ಜನರು ಅವರವರ signature ಹಾಕಿರುತ್ತಾರೆ. ಮಾರ್ಕ್ಸ್ ಕಮ್ಮಿ ಬಂದರೆ ಇರಲಿ ಎಂದು, ಅಪ್ಪನ ಸಹಿ ನಕಲು ಮಾಡಲೂ ಕಲಿಯುವುದು ಈ ಹಿಂಬದಿಯ ಪೇಜಲ್ಲೇ..!

*ಹುಡುಗಿಯರ ನೋಟ್ ಬುಕ್ ಹಿಂಬದಿಯ ಪೇಜಿನಲ್ಲಿ ರಂಗೋಲಿ, ಬಂಡಿ ಆಟ (ನಾಲ್ಕು ಮನೆಮಾಡಿ ಆಡುತ್ತಾರೆ), ಹಾಡುಗಳ ಸಾಲುಗಳು, ಸಹಿ, ಪ್ರೀತಿಯ ಹುಡುಗನ ಹೆಸರು (ಅಸ್ಪಷ್ಟವಾಗಿ), ಓಂ, ಶ್ರೀ, 687  ಇತ್ಯಾದಿ ಇತ್ಯಾದಿ ಕಂಡು ಬರುತ್ತವೆ..!



*ಇನ್ನು ಹಲವರಿಗೆ ಹಿಂಬದಿಯ ಪೇಜಿನ ಮೇಲೆ ಫೋನ್ ನಂಬರ್ಗಳ ಬರೆದಿಡುವ ಚಟ.! ಅದೂ ಎಲ್ಲೂ ಯಾರ ನಂಬರ್ ಎಂದು ಹೆಸರು ಬರೆಯದೆ..! ಯಾವ್ಯಾವುದೋ ನಂಬರಿಗೆ ಫೋನ್ ಮಾಡಿ ಪೇಚಾಡುತ್ತಾರೆ ಆಮೇಲೆ!

* ಇಬ್ಬರು ಹುಡುಗಿಯರು ಬೆಂಚ್ ಮೇಟ್ಸ್, ಎದುರುಗಡೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಸರ್ ಪಾಠ ಮಾಡುತ್ತಿದ್ದರೂ ಇವರು ಅವರ ಕ್ಲಾಸಿನ chocolate boy ಲುಕ್ಕಿನ ಹುಡುಗನ ಹೊಸ hair style ಕುರಿತು ಮಾತನಾಡುತ್ತಲೇ ಇರುತ್ತಾರೆ. ಅದೂ ಕೊನೆಯ ಪೇಜಿನ ಮೂಲೆಯಲ್ಲಿ ಬರೆದು ..!



*ಇನ್ನು ಕೆಲವರಿಗೆ ಲಾಸ್ಟ್ ಪೇಜ್ ಎಂದರೆ ಅದೊಂದುತರಹದ ರಫ್ ನೋಟ್ ಬುಕ್ ..! ಎಲ್ಲ ವಿಷಯಗಳ ಕಲಸು ಮೇಲೋಗರ ಅಲ್ಲಿ ..!


* ಕೆಲವರು 'ಫಾರ್ಮುಲ' ಬರೆದಿಟ್ಟರೆ ಮತ್ತು ಕೆಲವರು' ಫಾರ್ಮುಲ ಒನ್' ಕಾರ್ ಚಿತ್ರ ಬಿಡಿಸುತ್ತಾರೆ..!


*ಹೈಸ್ಕೂಲಿನ ದಿನಗಳಲ್ಲಿ ಹಿಂಬದಿಯ ಪೇಜಿನಲ್ಲಿ ಭಾರತದ ನಕ್ಷೆ ಇರುತ್ತಿತ್ತು. ಅದೇನು ದೇಶಪ್ರೇಮ ಎನ್ನಬೇಡಿ.ಕೆಲವೊಮ್ಮೆ ಕಾಪಿ ಹೊಡೆಯಲು ಬೇಕಾಗುತ್ತದೆ ಎಂದು .!


*quick referenceಗೆ ಬಳಕೆಯಾಗುವುದು ಈ ಕೊನೆಯ ಪೇಜೆ! ವೆಬ್ ಸೈಟ್ ಗಳ ಹೆಸರುಗಳು, ಮೊಬೈಲ್ ಸೆಟ್ಟಿಂಗ್ ಕೋಡ್ ಇವೆಲ್ಲ ಬರೆಯಲು ಕೊನೆಯ ಪೇಜಿಗೆ ಶರಣಾಗುತ್ತೇವೆ..!


ಕೊನೆಯ ಪೇಜಿನೊಂದಿಗೆ ಸೇರಿಹೋಗಿರುವ ನೆನಪುಗಳು:
ನಮಗೋರ್ವರು ಸರ್ ಇದ್ದರು, in particular cases ಎಂದು ಪ್ರತಿ ವಾಕ್ಯದ ಹಿಂದೆ ಸೇರಿಸುವ ಚಟ ಅವರಿಗೆ.! ಒಮ್ಮೆ ನಾನು ನನ್ನ ಗೆಳತಿ ಒಂದು ಕ್ಲಾಸಿನಲ್ಲಿ ಅವರು ಎಷ್ಟು ಬಾರಿ ಹೇಳಬಹುದೆಂದು ಲೆಕ್ಕ ಹಾಕಲು ಶುರು ಮಾಡಿದೆವು, ಅವರು in particular cases ಎಂದು ಹೇಳಿದಾಗಲೆಲ್ಲ ಒಂದು ಗೀಟು ಹಾಕುತ್ತ ಸಾಗಿದ್ದು ನಮ್ಮ ಕೆಲಸ ! ಕೊನೆಗೆ ಕ್ಲಾಸು ಮುಗಿದು ಲೆಕ್ಕ ಮಾಡಿದರೆ ಬರೋಬ್ಬರಿ 147 ಗೀಟುಗಳು..! ಗೀಟು ಹಾಕಿದ್ದು ಹಿಂಬದಿಯ ಪೇಜಿನಲ್ಲೇ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ ? !


ಕ್ಲಾಸು ನಡೆಯುತ್ತಿರುವಾಗಲೇ ಅದೇನೋ ಒಂದು ವಿಷಯ ಜ್ಞಾಪಕಕ್ಕೆ ಬಂದು ಬಿಡುತ್ತದೆ. (ಅದ್ಯಾಕೆ ಮಾರಾಯ್ರೆ ಕ್ಲಾಸು ನಡೆಯುವಾಗಲೇ ಈ ಅಸಂಬದ್ಧ ವಿಷಯಗಳು ಜ್ಞಾಪಕಕ್ಕೆ ಬರುವುದು?) ಕೊನೆಯ ಬೆಂಚಿನ ಹುಡುಗಿಗೆ ವಿಷಯ ಹೇಳಬೇಕು, ಅದೂ ತುರ್ತಾಗಿ, ಆಗ ನೋಡಿ ಮತ್ತೆ ಹೆಲ್ಪಿಗೆ ಬರುವುದು ಇದೇ ಕೊನೆಯ ಪೇಜು..! ಅದರ ಮೂಲೆಯೊಂದನ್ನು ಹರಿದು ಅದರಲ್ಲಿ ವಿಷಯವ ಬರೆದು ಹಿಂಬದಿಗೆ ಪಾಸು ಮಾಡುವುದು. ಈ ಹುಡುಗಿಯರಿಗೆ ಸಿಕ್ಕಾಪಟ್ಟೆ ಕುತೂಹಲ. ಅದೇನು ಬರೆದಿದೆ ಎಂದು ಓದಿಯೇ ಹಿಂದೆ ಪಾಸ್ ಮಾಡುವುದು..! 
ಒಮ್ಮೆ ಹೀಗಾಗಿತ್ತು:


ನಮಗೆ ಒಂದೇ ಶರ್ಟ್ ಒಂದು ವಾರ ಹಾಕುವ ಸರ್ ಒಬ್ಬರಿದ್ದರು. ಅವರ ಕುರಿತು ಆ ದಿನ ಅವರದ್ದೇ ಕ್ಲಾಸಿನಲ್ಲಿ  ನಾವು (ನಾನು & ಬೆಂಚ್ ಮೇಟ್) ಬರೆದಿದ್ದು ಹೀಗೆ "RDX ಚೆಸ್ ಬೋರ್ಡ್ ಶರ್ಟು ಸತತ 6ನೆಯ ದಿನದ ಯಶಸ್ವೀ ಪ್ರದರ್ಶನದತ್ತ..!" ಇಡೀ ಕ್ಲಾಸಿಗೆ ಅದರ ಸುದ್ದಿಯಾಗಿ,ಅವೈರೂ ತಿಳಿದು..   ಕ್ಲಾಸನ್ನೇ ಸಸ್ಪೆಂಡ್ ಮಾಡಿದ್ದರು ! ಇಂಥ ನೆನಪುಗಳು ಕೊನೆಯ ಪೇಜಿನಲ್ಲಿ ಸೇರಿಕೊಂಡಿವೆ ..!

ಒಬ್ಬ ಸ್ನೇಹಿತನಿದ್ದ ಅವನು autograph ಬರೆದಿದ್ದು ಕೊನೆಯ ಪೇಜಿನಲ್ಲೇ. ಕೇಳಿದರೆ ಹೇಳುತ್ತಿದ್ದ, 'ಜೀವನದ ಕೊನೆಯವರೆಗೂ ಇರಲಿ ಸ್ನೇಹ' ಎಂದು ..! ಅವರವರ ಭಾವಕ್ಕೆ ಅಲ್ಲವೇ ?

ನಾನು, ನನ್ನ ಒಂದಿಷ್ಟು ಕೊನೆಯ ಪೇಜಿನ ಸಾಲುಗಳ ಕುರಿತೇ ಒಂದು ಲೇಖನವನ್ನು ಬರೆದಿದ್ದೆ ಅಲೆಮಾರಿ ಸಾಲುಗಳು ಎಂದು.
ಹೀಗೆ ಸಾಗುತ್ತದೆ ಕೊನೆಯ 'ಪೇಜಾಯಣ'..!


ನೋಡಿ.. ಹುಡುಗಿಗೆ ಹೇಳಲಾಗದ ಮಾತುಗಳನ್ನೆಲ್ಲ ಈ ಕೊನೆಯ ಪೇಜು ಕೇಳಿಸಿಕೊಳ್ಳುತ್ತದೆ, ಸಾಂತ್ವನ ಹೇಳುತ್ತದೆ. ಆ ಪೇಜಿನೊಂದಿಗೆ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ನೀವು ಒಮ್ಮೆ ನಿಮ್ಮ ಹಳೆಯ ನೋಟ್ ಬುಕ್ ತೆಗೆದು ನೋಡಿ.! ನಿಮ್ಮ ನೆನಪುಗಳ ಸುರುಳಿ ಬಿಚ್ಚುತ್ತದೆ....


ನೋಟ್ ಬುಕ್ ಗಳು ಇರುವವರೆಗೂ ಕೊನೆಯ ಪೇಜುಗಳು ಇರುತ್ತವೆ. ಅಲ್ಲಿ ಅಕ್ಷರಗಳ ಚಿತ್ರಗಳ ಮೆರವಣಿಗೆ ಇರುತ್ತದೆ. 
ಶ್ರೀ ಕೃಷ್ಣ ಪ್ರತಿಯೊಂದು ಯುಗದಲ್ಲೂ ಅವತರಿಸಿದರೆ, ಲಾಸ್ಟ್ ಪೇಜ್ ಪ್ರತಿಯೊಂದು ನೋಟ್ ಬುಕ್ ನಲ್ಲೂ ಅವತರಿಸುತ್ತದೆ ..!
ಎಲ್ಲರೂ ಹೇಳಿ ಬಿಡಿ :ಜೈ 'ಲಾಸ್ಟ್ ಪೇಜ್' ..!
ಹಾಗೆ ಬರಹ ಹೇಗಿದೆ ಎಂದೂ ತಿಳಿಸಿರಿ.


40 comments:

  1. ನಿಮ್ಮ ಬರಹದಿಂದ ಲಾಸ್ಟ್ ಪೇಜಿನಲ್ಲಿ ಮೂಡಿಸುತ್ತಿದ್ದ ಪದ್ಯ-ಚಿತ್ರಗಳೆಲ್ಲ ನೆನಪಾದವು.

    ReplyDelete
  2. Super ಆಗಿದೆ. ನಾನು ಹಳೆಯ ದಿನಗಳನ್ನ ತುಂಬ ಹೊತ್ತು fan ನೊಡ್ತಾ ಮಲ್ಕೊಂಡು ನೆನಪ್ಸಿಕೊಳ್ಳೊಹಾಗೆ ಮಾಡಿದ್ದಕ್ಕೆ ತುಂಬ thanks

    ReplyDelete
  3. ಆಹ್... ಸು೦ದರವಾಗಿ ಬರೆದಿದ್ದೀರಿ..
    ನನ್ನ ನೋಟ್ ಪುಸ್ತಕದ ಕೊನೆ ಪೇಜಿನಲ್ಲಿ ಗ್ಯಾರ೦ಟೀ ಒ೦ದು ಚಿತ್ರ ಇದ್ದೇ ಇರುತ್ತಿತ್ತು ಅನ್ನುವುದು ನೆನಪಾಯ್ತು..

    ReplyDelete
  4. ನಿಮ್ಮ ಕಥನ ಶೈಲಿ ತುಂಬಾ ಚೆನ್ನಾಗಿದೆ.
    ನನಗೆ ಮಾತ್ರವೋ ಏನೋ ಕೊನೆಯ ಪುಟ ಯಾವತ್ತೂ ಹಚ್ಚಿಕೊಂಡಿಲ್ಲ..

    ReplyDelete
  5. ಚೆನ್ನಾಗಿ ಬರೀತಿರಿ ನೀವು ... ಇದನ್ನು ಓದಿ ನಮ್ಮ ಕಾಲೇಜ್ ನ ಒಂದು ಘಟನೆ ನೆನಪಾಯ್ತು
    ಫೆವರಿಟ್ ಗುರುಗಳು ಪಾಠ ಮಾಡ್ತಿದ್ರು. ಅದ್ಯಾಕೋ ಅವತ್ತು ಸ್ವಲ್ಪ ಬೋರು ಹೊಡಿತಿತ್ತು.
    ಶುರು ಆಯ್ತು ನೋಡಿ ಚೀಟಿಗಳ (ofcourse , ಕೊನೆ ಪುಟದಿಂದ ಹರಿದಿದ್ದು) ಸುಳಿದಾಟ.
    As usual ಅದ್ರಲ್ಲಿ ಒಂದು ಸರ್ತಿ ನಾನೊಂದು ಘಜಲ್ ಬರ್ದು ಪಕ್ಕದ ಬೆಂಚಲ್ಲಿ ಕುಂತಿದ್ದ ಹುಡುಗಿ ಕೈಗೆ ಪಾಸ್ ಮಾಡ್ತಿದ್ದೆ.
    ತೊಗೊಳ್ಳೋಕೆ ಆಕಡೆ ಅವ್ಳು ಹಿಡ್ಕೊಂದಿದ್ಲು, ಕೊಡೋಕೆ ನಾನು ಈಕಡೆ ಹಿಡ್ಕೊಂಡಿದ್ದೆ.
    ಚೀಟಿ ಇಬ್ಬರ ಕೈಯಲ್ಲೂ ಇತ್ತು, ಅಷ್ಟ್ರಲ್ಲಿ ಗುರುಗಳು ಹಿಂತಿರುಗಿ ನೋಡ್ಬೇಕಾ?
    ಏನು ಮಾಡಲು ಗೊತ್ತಾಗದೆ ಒಂದೆರಡು ಕ್ಷಣ ಹಾಗೆ ಕೈ ಉದ್ದಕ್ಕೆ ಹಿಡ್ಕೊಂಡೆ ಇದ್ದೆ ... ಆಮೇಲೆ ನೋಡಿದ್ರೆ ಆ ಹುಡುಗಿ ಯಾವಾಗ್ಲೋ ಕೈ ಹಿಂದಕ್ಕೆ ತೊಗೊಂಡ್ ಬಿಟ್ಟಿದಾಳೆ!
    ನಾನು ಮಾತ್ರ ಬೆಪ್ಪನಂಗೆ ಅದೇ ಪೋಸ್ ನಲ್ಲಿದ್ದೆ.
    ಗುರುಗಳು ನನ್ನ ಕರದು ಚೀಟಿ ತೊಗೊಂಡು ಓದಿ, ತಮ್ಮ ಪಾಕಿಟಿನಲ್ಲಿ ಇಟ್ಕೊಂಡು, ಪಾಠ ಬೋರ್ ಆಗ್ತಿದೆ ಅಂತ ಅನ್ಸುತ್ತೆ ಬೇಗ ಮುಗ್ಸೋಣ ಎಂದು ಪಾಠ ಮುಂದುವರೆಸಿದರು.
    ಎಷ್ಟೋ ಸರ್ತಿ ಈ ವಿಷಯ ಇಟ್ಕೊಂಡು ಎಲ್ಲರು ನನ್ನ ಕಾಡಿ ತಮಾಷೆ ಮಾಡಿದ್ದೆ ಮಾಡಿದ್ದು.
    ಗುರುಗಳು ಮಾತ್ರ ಎಂದೂ ಈ ವಿಷಯ ಎತ್ತಲೇ ಇಲ್ಲ. ಅವರ ದೊಡ್ಡ ಮನಸ್ಸು ನನ್ನ ಬದಲಾಯಿಸಿ ಬಿಟ್ಟಿತ್ತು.
    ಅದಾದ ನಂತರ ನಾನು ಕೂಡ ಕ್ಲಾಸ್ನಲ್ಲಿ ಎಂದೂ ಕೀಟಲೆ ಮಾಡ್ಲಿಲ್ಲ.

    ReplyDelete
  6. ಮತ್ತೊಮ್ಮೆ highschool ನೋಟಪುಸ್ತಕ ತಿರುವಿ ಹಾಕಿದಂಗಾತು ನೋಡಿ...

    ReplyDelete
  7. ಸೌಮ್ಯ...ಲೇಖನ ಓದಿದಾಗ ನೆನಪುಗಳೆಲ್ಲ ಗರಿ ಬಿಚ್ಚುತ್ತಾ ಇವೆ...ಕೊನೆ ಪೇಜಿನ ಬಗ್ಗೆ ಎಲ್ಲರಿಗೂ ಒಂದು ರೀತಿಯ ವಿಪರೀತ ಲವ್ವು ಇದ್ದಿದ್ದೆ...!!
    ನಿಮ್ಮಲ್ಲಿ ನೋಟ್ ಬೂಕ್ಕಿನ ಕೊನೆ ಪೇಜಿನ ಸಂಗ್ರಹ ಇದೆ ಎಂಬುದನ್ನು ಓದಿದಾಗ...ನನಗೊಂತರ ಜಲಸ್..ನಾನೂ ಕೂಡಿಡಬಹುದಿತ್ತು ಎಂಬುದಾಗಿ..
    ನೆನಪಿನ ಖಜಾನೆಯನ್ನು ಭದ್ರವಾಗಿರಿಸಿದ್ದಿರಿ...
    ಒಳ್ಳೆಯ ಲೇಖನ..

    ReplyDelete
  8. Here the co-incidence is your last article on last page and this article both are written in October only..is there any link for that ??
    And it reminds back the school days...

    ReplyDelete
  9. yavde book sikidre nan nododu last page matra.... chennagide nimma lekhana..:)

    ReplyDelete
  10. nija last page na melina lovve haage....nanna pustakada last page nalli nanna ishtada haadina saalugaliruttiddavu. ega website address, phone number iruttade.
    ee article tumba ishtavaayitu. aadare aa 687 enendu arthavaaagalilla........:)

    ReplyDelete
  11. ನಮಸ್ತೆ...
    ಲಾಸ್ಟ ಪೇಜಿನ ಬಗ್ಗೆ ಲೇಖನ ಒದ್ತಾ ಅದ್ರಲ್ಲೇ ಲಾಸ್ಟ್(lost) ಆದೆ..ನಿಮ್ಮ ಲೇಖನ ಓದ್ತಾ ಇದ್ ಹಾಗೇ ಮನಸ್ಸಿನಲ್ಲಿ ಎನೋ ಹುಳ ಹುಟ್ತು.. ಅದ್ನಾ ನನ್ನ ಮನೆಲ್ಲಿ ಗೀಚಿದೀನಿ... ದಯವಿಟ್ಟು ಅದ್ನಾ ನೋಡಿ ,ನಂಗೆ ಹೇಳಿ.

    ನಮ್ಮನೆ ವಿಳಾಸ,
    http://chinmaysbhat.blogspot.com/

    ಧನ್ಯವಾದ ಒಂದು ಒಳ್ಳೆಯ ಲೇಖನವನ್ನು ಬರೆದದ್ದಕ್ಕಾಗಿ.... ಬರೆಯುತ್ತಿರಿ.

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  12. Last page ಅನ್ನೋದು ಮನುಷ್ಯನ ಒಳಮನಸ್ಸಿನ ಪ್ರತಿಬಿಂಬವಂತೆ....
    ಒಳಮನಸ್ಸಿನಲ್ಲಿ ಹತ್ತಿಕ್ಕಿಕೊಳ್ಳಲಾಗದ ಕೆಲವು ಭಾವನೆಗಳು ಅನ್ಯಾಯವಾಗಿ ಲಾಸ್ಟ್ ಪೇಜ್ ಗೆ ಬಲಿಯಾಗುತ್ವಂತೆ..... ಯಂಡಮೂರಿ ಒಂದ್ ಕಡೆ ತುಂಬಾ ಚನ್ನಾಗಿ ಇದರ ಬಗ್ಗೆ ಹೇಳ್ತಾರೆ.......

    ಕೆಲವೊಬ್ರು last page ನ್ನು ತುಂಬಾ ನೀಟಾಗಿ ಇಟ್ಕೋತಾರೆ......

    ಇನ್ ಕೆಲವು ಜನ ನಿಗೂಢ ಅಂಕೆ ಸಂಖ್ಯರಗಳ ಅಕ್ಷರರಗಳ ಆಳವನ್ನಾಗಿಸಿ ಬಿಟ್ಟಿರ್ತಾರೆ......

    ಮತ್ತೆಷ್ಟೊ ಹುಡುಗರುಗಳು ಅದನ್ನ wonderful fun page ಗಳನ್ನಾಗಿಸಿರ್ತಾರೆ......

    ಸೌಮ್ಯಾ ನಿಜ್ವಾಗ್ಲೂ ಲಾಸ್ಟ್ ಪೇಜ್ ಅನ್ನೋದು ಒಂದು curiasity...
    interesting.....

    ಆರಿಸಿಕೊಂಡ ವಿಷ್ಯ ಚನ್ನಾಗಿದೆ ಹಾಂ......
    ಬರಹದ ಬಗ್ಗೆ ಹೇಳೋಕೇನಿದೆ....
    ತುಂಬಾ ಇಷ್ಟವಾಯ್ತು.....

    ReplyDelete
  13. ಸೌಮ್ಯ,
    ನನ್ನ ಹೈಸ್ಕೂಲ್ ದಿನಗಳು ನೆನಪಾದವು.

    ReplyDelete
  14. ಸೌಮ್ಯ, ಕೊನೆಯಪುಟ ಅನ್ನೋದು ಇರೊಲ್ಲ...ಯಾಕಂದ್ರೆ ಅದನ್ನ ಕೊಂಡ ದಿನವೇ ತುಂಬಿಸಿಬಿಡೋ ಅಪರೂಪದವರು (ನನ್ನಂಥವರೂ ಇರ್ತಾರೆ...) ಹೌದು...ಒಂದು ಪುಟ-ನಿಮಗಾಗಿ ಅನ್ನೋ ಶೀರ್ಷಿಕೆಯಲ್ಲಿ ನಾನೂ ಕಾಲೇಜ್ ಬಿಡುವ ದಿನಗಳಲ್ಲಿ ಎಲ್ಲರ ಹಸ್ತಾಕ್ಷರ ಅನಿಸಿಕೆ ತೆಗೆದುಕೊಂಡಿದ್ದೆ...ಲಾಸ್ಟ್ ಪೇಜ್ ಅನ್ನು ಅದರ ಯಥಾವತ್ ಅರ್ಥಕ್ಕೇ ಅಂಟಿಕೊಳ್ಳದೇ ಒಳ್ಳೆಯ ವಿವರಣಾತ್ಮಕ ಲೇಖನ ಕೊಟ್ಟಿದ್ದೀರಿ,,,

    ReplyDelete
  15. ಹ್ಹ ಹ್ಹ.... ನನ್ನ ಕಾಗದ ಪ್ರೀತಿಗೆ(!) ಮೊದಲು ತುತ್ತಾಗುತ್ತಿದ್ದುದೇ ಕೊನೇ ಪುಟ. ಅದನ್ನೇ ಕಿತ್ತು, ಕತ್ತರಿಸಿ ಒರಿಗಾಮಿಯ ಹೊಸ ಸಾಹಸಗಳಿಗೆ ಸಾಕ್ಷಿಯಾಗಿಸುತ್ತಿದ್ದೆ. ಅಲ್ಲದೆ ನೋಟ್ ಬುಕ್ಕಿನ ಕೊನೆಯಿಂದ, ಹಿಮ್ಮುಖವಾಗಿ ಬಹಳಷ್ಟು ಹಾಳೆಗಳು ನಮ್ಮ ಚೇಷ್ಟೆಯ ವೇದಿಕೆಗಳಾಗಿ ಮಜಾ ಕೊಡುತ್ತಿದ್ದವು.
    - ಪ್ರವೀಣ್

    ReplyDelete
  16. Howdu sowmya neen helid correct evagu saha office diary last page eetaradde tumbkya iddu :):P

    ReplyDelete
  17. sakatagide kaNari. matte haLeddellavanna nenapisidri. nivu baredaddaralli arda naanu madidde aagide. dhanyavaadagaLu

    ReplyDelete
  18. ಸೂಪರಾಗಿದೆ.. ನಾವೂ ಚೀಟಿ ಬರೆದು ಅದನ್ನ ಪಾಸ್ ಮಾಡ್ತಿದ್ದಿದ್ದು ನೆನಪಾಯ್ತು :-)

    ReplyDelete
  19. ಎಲ್ಲರ ನೆನಪುಗಳನ್ನು ಕೆದಕಿದ್ದೇನೆ ಅಂತಾಯ್ತು :)) ಲಾಸ್ಟ್ ಪೇಜಿನ ಜೊತೆಗೆ :)) ಧನ್ಯವಾದಗಳು ಕುಮಾರ ರೈತ ಸರ್, ಅವಿನಾಶ್, ಹಾಗೂ ಚುಕ್ಕಿ ಚಿತ್ತಾರ :)

    ReplyDelete
  20. ಧನ್ಯವಾದಗಳು ಈಶ್ವರ್ ಭಟ್. ಕೆಲವೊಬ್ಬರು ಹಾಗೆ ಕೊನೆಯ ಪೇಜಿನ ಗೋಜಿಗೆ ಹೋಗುವುದಿಲ್ಲ ..!
    ಧನ್ಯವಾದಗಳು ವಿಚಲಿತ :) ಖಂಡಿತ ಬರುತ್ತೇನೆ.
    thank u Hari :)

    ReplyDelete
  21. ಹ್ಹ ಹ್ಹ ಹ್ಹಾ ..... :D :D :D ತುಂಬಾ ಚೆನ್ನಾಗಿದೆ ಮಾರಾಯ್ರೆ ನಿಮ್ಮ ಘಟನೆ... :) ಧನ್ಯವಾದಗಳು Uday :)

    ReplyDelete
  22. ಹೌದೇನ್ರೀ ? ಅಷ್ಟಾದ್ರೆ ಸಾಕ್ರೀ :)) ಬರ್ದದ್ದು ಸಾರ್ಥಕಾರಿ ಪ್ರದೀಪ್ ಅವ್ರೆ :)
    Thank u Adesh :)

    ReplyDelete
  23. ಅದೊಂಥರ ವಿಚಿತ್ರ ಪ್ರೀತಿ ಸುಷ್ಮಾ:) ಅಲ್ವಾ ? ಹೊಟ್ಟೆಕಿಚ್ಚನ್ನು ಹುಟ್ಟಿಸುವಂಥ ಪ್ರೀತಿ.. ಧನ್ಯವಾದಗಳು.

    ReplyDelete
  24. Hey girish ... :) really i didn't observe this.. :) yeah u r right :) this is the co incidence :) thank u so much :)

    ReplyDelete
  25. ಹೌದು ಶ್ರುತಿ. ನಾನೂ ಹಾಡಿನ ಸಾಲುಗಳನ್ನು ಬರೆದಿಡುತ್ತಿದ್ದೆ. ನನ್ನ ಮುಸ್ಲಿಂ ಗೆಳತಿಯೊಬ್ಬಳು ಹಾಗೆ ಬರೆದಿದುತ್ತಿದ್ದಳು. ಲಕ್ಕಿ ನಂಬರ್ ಇರಬೇಕು. thnak u:)

    ReplyDelete
  26. ಚಿನ್ಮಯ್ ನಿನ್ನ ಕವನ ಸೂಪರ್... ಇಷ್ಟಾ ಆಯ್ತು :) ಒಂದು ಲೇಖನ ಕವನಕ್ಕೂ ಸ್ಪೂರ್ತಿ ಕೊಡತ್ತೆ ಅಂತಾಯ್ತು :)) ಧನ್ಯವಾದಗಳು :)

    ReplyDelete
  27. ರಾಘವ ಚೆನ್ನಾಗಿ ಅಂದ್ರಿ :) ಧನ್ಯವಾದಗಳು :)
    ಧನ್ಯವಾದಗಳು ಆಜಾದ್ ಸರ್ :) ಶಿವು ಸರ್ :)

    ReplyDelete
  28. Rasavaththaagide, Aadare school college daysnalli nadeyuvanthadde!

    ReplyDelete
  29. ಇಷ್ಟ ಆಯ್ತು ಈ ಬರಹ... :)
    ನೀವು ಹೇಳಿದ .. in particular cases.. ಓದುವಾಗ ಥಟ್ಟನೆ ನೆನಪಾಯ್ತು:
    ನಮ್ಮ ಸರ್ ಒಬ್ಬರು it is nothing but ಅಂತನೇ definition ಶುರು ಮಾಡ್ತಿದ್ರು.. ಸ್ನೇಹಿತನೊಬ್ಬ ಅದರ ಲೆಕ್ಕನ ಲಾಸ್ಟ್ ಪೇಜ್ ನಲ್ಲಿ ಬರಿತಿದ್ದ. ಈ ಕ್ಲಾಸ್ನಲ್ಲಿ ಹಿಂದಿನದಕ್ಕಿಂತ ಜಾಸ್ತಿ ಕೌಂಟ್ ಬಂತೋ ಕಡಿಮೆನೋ ಅಂತ ಕ್ಲಾಸ್ ಆದ್ಮೇಲೆ compare ಮಾಡಿ ನೋಡೋದು..! :) :)

    ReplyDelete
  30. ಜೈ ಲಾಸ್ಟ್ ಪೇಜ್..

    ಲಾಸ್ಟ್ ಪೇಜಾಯಣ ಅದ್ಭುತವಾಗಿ ಮೂಡಿ ಬಂದಿದೆ..

    ನಮಗೂ ಲಾಸ್ಟ್ ಪೇಜ್ ನೆನಪು ಮರುಕಳಿಸುವಂತೆ ಮಾಡಿಬಿಟ್ಟೆ ನೀನು. ಧನ್ಯವಾದ ಗೆಳತಿ. ಹೀಗೆ ಬೇರೆ ಬೇರೆ ಬರಹಗಳು ಮೂಡಿಬರಲಿ ಎಂದು ಆಶಿಸುವ,


    ಗೆಳೆಯ
    ಅನಂತ್ ಹೆಗಡೆ

    ReplyDelete
  31. Soumya, last page story superb.
    nanagu last page nalli nanna bere bere tarahada signature haakuva chata ittu :)

    ReplyDelete
  32. Nimmudu full katarnak writing style ide.. i liked it... nice writing... superb

    ReplyDelete
  33. ee lekhana odutta odutta nannannu naane maretu, high school haagu college daysgala nenapalli kaledu hode..!:) good one..:)

    ReplyDelete
  34. Waw nimma ea lekhana adbutha, 1sala nan old notes na mathe thagad nodbeku anstide,nalene aa kelsa madtini. Mathe puc alli nam english madam obru yavaglu ALVA anno padana use madtidru, navu nim thara count madiddu untu. Ea 687 andre enu ? mostly adu786 irbodu ankotini. Allari bereyavra note na kaddu nododu thappalva, papa nim madhavanna. . .

    ReplyDelete
  35. hi nan vasanth nimma lekan nodi nangantu tumba kushi aetu, ondsal nanna school nenepu hage pass adahage aetu.

    ReplyDelete