ಮನೆಗೆ ಹೋದರೆ ಹಾಗೆ,ವಾಪಾಸ್ ಮಂಗಳೂರಿಗೆ ಬರಬೇಕೆಂದು ಅನಿಸುವುದೇ ಇಲ್ಲ . ಅಲ್ಲೇ ತೋಟ,ಗದ್ದೆ,ನದಿ,ಬೆಟ್ಟ ಎಂದು ಓಡಾಡಿಕೊಂಡು ಇರಬೇಕು ಎಂದೆನಿಸುತ್ತದೆ .
ಅದ್ಯಾಕೆ ಹಾಗಾಗತ್ತೋ ಗೊತ್ತಿಲ್ಲ ಪ್ರತಿಸಲ ರಜ ಮುಗಿಸಿ ಮಂಗಳೂರಿಗೆ ಹೊರಡುವ ಹಿಂದಿನ ದಿನ ನನ್ನ ರೂಮು,ನನ್ನ ಮನೆ, ನನ್ನೂರು, ಅದೆಲ್ಲವನ್ನು miss ಮಾಡ್ತೇನೆ . ಕೊನೆಗೆ ನನ್ನ ಡ್ರೆಸ್ಸಿಂಗ್ ಟೇಬಲ್ ,ಮಂಚ, PC ಎಲ್ಲವನ್ನೂ ಪ್ರೀತಿಯಿಂದ ಸವರಿ ಮನೆಯ ಮಹಡಿಯ ಗ್ಯಾಲರಿಯಲ್ಲಿರುವನನ್ನ ಆರಾಮ ಖುರ್ಚಿಯಲ್ಲಿ ಕೂತ್ಕೊಂಡು ನಕ್ಷತ್ರಗಳು ತುಂಬಿದ ಆಕಾಶವನ್ನು ನೋಡುತ್ತಿದ್ದರೆ ಮನದೊಳಗೆ ಯೋಚನೆಗಳು ಮೆರವಣಿಗೆ ಹೊರಡುತ್ತವೆ . ಕಣ್ಣೇರು ತುಂಬಿ ನಕ್ಷತ್ರಗಳು ಮಸುಕಾಗಿ ಕಾಣುವಾಗಲೇ ಗೊತ್ತಾಗೋದು ನಾನು ಅಳುತ್ತಿದ್ದೆನೆಂದು. 'ಭಾವನೆಗಳ ಮೂಕ ರೂಪವೇ ಈ ಕಣ್ಣೀರ ಹನಿಗಳು.'! ಸಾವಿರ ಶಬ್ದಗಳಲ್ಲಿ ಹೇಳಲಾಗದ ಮಾತುಗಳನ್ನು ಒಂದು ಹನಿ ಕಣ್ಣೀರು ಹೇಳುತ್ತದೆ ಅಲ್ವಾ?
ನಾಳೆ ಇದೇ ಆಗಸವನ್ನು ಮಂಗಳೂರಿನಲ್ಲಿ ನೋಡಬೇಕಲ್ಲ ಎನ್ನುವ ಯೋಚನೆಗೆ ಕಣ್ಣೀರು ಗಲ್ಲವನ್ನು ತೋಯಿಸಿಬಿಡುತ್ತದೆ. bag pack ಮಾಡಲಂತೂ ಮನಸೇ ಬರುವುದಿಲ್ಲ . ಅದ್ಯಾಕೆ ಮನೆ , ನಮ್ಮೂರು ಅಂದರೆ ಅಷ್ಟೊಂದು attachment ? ಪ್ರಶ್ನೆಯನ್ನು ಕೇಳಿ ನಾನೇ ಉತ್ತರವನ್ನು ನನಗೆ ತೋಚಿದ ರೀತಿಯಲ್ಲಿ ಹೇಳಿ ಬಿಡುತ್ತೇನೆ ಕೇಳಿ.
ಬಾಲ್ಯದಲ್ಲಿ ಆಡಿದ ಮನೆಯಂಗಳ , ಆತ್ಮೀಯವಾಗಿ ಬರಮಾಡಿಕೊಂಡಂತೆ ಕಾಣುವ ನಮ್ಮ ರೂಮು, ನೆಟ್ಟಿ ಬೆಳೆಸಿದ ಹೂಗಿಡಗಳು,ಹೊಳೆದಂಡೆಯ ಅಂಚಿನಲ್ಲಿ ಬಾಗಿರುವ ತೆಂಗಿನ ಮರ, ಕನಸುಗಳ ಕಟ್ಟಿಕೊಂಡ ಜಾಗ, ಗೆಳೆಯರೊಂದಿಗೆ cricket ಆಡಿದ ಬಯಲು, ಬಾಲ್ಯದ ಗೆಳತಿ/ ಗೆಳೆಯರೊಂದಿಗೆ ಅಡ್ಡಾಡಿದ ಜಾಗ, ಹೊಳೆದಂಡೆಯ ಹಸಿಮರಳು , ಗೆಳತಿಯೊಂದಿಗೆ ಬೆಚ್ಚಗೆ ಅಡ್ಡಾಡಿದ ಕಾಲುದಾರಿ , ಗುಡ್ಡದ ಸೂರ್ಯಾಸ್ತ , ಚಳಿಗಾಲದ ಇಬ್ಬನಿಯ ಬಿಂದುಗಳ ಹೊತ್ತ ಜೇಡರ ಬಲೆ ರಕ್ತ ಸಂಬಂಧಗಳು .. ಇನ್ನೂ ಏನೇನೋ ..... ನೆನಪಾಗಿ ನಮ್ಮ ಸುಪ್ತ ಮನಸಿನ ಮೂಲೆಯೊಂದರಲ್ಲಿ ಅಡಗಿ ಕುಳಿತಿರುತ್ತವೆ . ಮನೆಯಿಂದ ಹೊರಡೋದು ಒಂದು ನೆಪವಾಗಿ ಕಾಡುತ್ತವೆ .
ಮೊನ್ನೆ ನನಗಾದದ್ದೂ ಅದೇ ಎಲ್ಲವನ್ನೂ ಬಿಟ್ಟು ಹೊರಡಬೇಕಲ್ಲ ಎಂದು ಮೌನವನ್ನು ಅಪ್ಪಿದ್ದೆ. bustandಗೆ ಬಿಡಲು ಬಂದ ತಮ್ಮನಿಗೆ ಟಾಟಾ ಹೇಳಿ ಬಸ್ ಏರಿ ಕುಳಿತಿದ್ದ ನನಗೆ ಊರನ್ನು ಎಲ್ಲೋ ಖಾಯಂ ಆಗಿ ಬಿಟ್ಟು ಹೋಗೋ ಭಾವನೆ ಆವರಿಸಿಬಿಟ್ಟಿತ್ತು .! ಕಣ್ಣಲ್ಲಿ ಜೋಗ ಜಿನುಗಲು ರೆಡಿ.
ಈ ಭಾವನೆಗಳ ಸುಳಿಯಲ್ಲಿ ಸಿಕ್ಕಿ ಕಂಗಾಲಾಗಿದ್ದ ನನಗೆ ನನ್ನ moible ಕರೆದಾಗಲೇ ಎಚ್ಚರವಾದದ್ದು .! 'chaitu calling' ಎಂದು ತೋರಿಸುತ್ತಿತ್ತು . "ಎಂತಾ ಸೌಮ್ಯ ಯಾವಾಗ ಬರುವುದು ಮಂಗಳೂರಿಗೆ, ನಮ್ಮದೆಲ್ಲ ನೆನೆಪೆ ಇಲ್ಲವಾ ? , ಮರ್ಯಾದೆಯಿಂದ ಬರ್ತೀಯ ಅಥ್ವ ಒದ್ದು ಕರೆದುಕೊಂಡು ಬರಬೇಕಾ?" ಎಂದು ಪ್ರೀತಿಯಿಂದ ಗದರಿದ ಗೆಳತಿಗೆ "ಬರ್ತಿದೇನೆ ಮಾರಾಯ್ತಿ " ಎಂದೆ. ಅಷ್ಟರಲ್ಲಿ ಗೆಳೆಯನೊಬ್ಬನ message "missing u stupid..come soon " ಎಂದು .'ಕಣ್ಣೀರ ಸಿಂಚನವಾದ ಮೊಗದಲ್ಲಿ ನಗೆಯ ಕಾಮನ ಬಿಲ್ಲು !'
ಜೀವನ ಅಂದ್ರೆ ಹೀಗೆ ಅಲ್ವಾ? ಒಂದನ್ನು ಕಿತ್ಕೊಂಡು ಇನ್ನೊಂದನ್ನು ಕೊಡತ್ತೆ .. ಮನೆ ,ಊರನ್ನ ನಾನು miss ಮಾಡೋವಂತೆಮಾಡಿ ಸ್ನೇಹಿತರ ಪ್ರೀತಿಯನ್ನು ಕೊಟ್ಟಿತ್ತು ' कुछ पाने के लिए कुछ खोनातो पड़ेगा ना ?'