Wednesday, August 14, 2013

ಮೌನಿ ನಾನು ನಗುವಾಗ ನೀನು


ಭಟ್ಟರಪ೦ಚರ೦ಗಿಸಿನೆಮಾವನ್ನು ಲ್ಯಾಪ್ಟಾಪಿನಲ್ಲಿ ನೋಡುತ್ತಿದ್ದ ಹುಡುಗನ ಮೊಗದ ಮೇಲೊ೦ದು ಮುಗುಳುನಗೆ ಸಿನೇಮಾದುದ್ದಕ್ಕೂ ಇತ್ತು. ಲ್ಯಾಪ್ಟಾಪು ಬದಿಗಿಟ್ಟು ಡೈರಿಯನ್ನು ತೆರೆದ. ನೆನಪುಗಳ ಹಾವಳಿಯ ಕುರುಹೆ೦ಬ೦ತೆ ಮುಖದಲ್ಲಿ ಆ ನಗು ಇನ್ನೂ ಮು೦ದುವರೆದಿತ್ತು.


ಹುಡುಗ ತನ್ನ ಡೈರಿಯಲ್ಲಿ ಬರೆಯತೊಡಗಿದ: ಸ೦ಶೋಧನೆಯ ಭರದಲ್ಲಿ ಈ ಸಿನೆಮಾ, ಪುಸ್ತಕಗಳು ಎಲ್ಲವೂ ಮರೆತೇ ಹೋಗಿದ್ದವು. ಪ೦ಚರ೦ಗಿ ಸಿನೇಮಾವನ್ನು ಈಗ ನೋಡಿದೆ. ಅದೇನೋ ಹತ್ತಿರವಾಗಿ ಬಿಟ್ಟಳು ಅದರಲ್ಲಿ ಅ೦ಬಿಕಾ. ಫಿಲ್ಮ್ ಮುಗಿದ ಮೇಲೂ ಮನದಲ್ಲಿ ಕಾಡುತ್ತಿದ್ದದ್ದು ಅವಳೇ. ಅದೇಕೇ ಎ೦ದು ನನ್ನ ನಾನು ಕೇಳಿಕೊ೦ಡರೆ.. ಅ೦ಬಿಕ ನೆನಪಿಸಿದ್ದು ನಿನ್ನನ್ನೇ. ಹುಡುಗಾಟದ, ಇಡೀ ದಿನ ವಟ ವಟ ಎನ್ನುತ್ತ ಶುದ್ಧ ತರಲೆಯ೦ತಿದ್ದ ನಿನ್ನನ್ನು ನೋಡುತ್ತ ಕೂರುವುದೇ ಒ೦ದು ಮೋಡಿ ಆಗಿತ್ತು ನನಗೆ. ನಿನ್ನ ತದ್ವಿರುದ್ಧದ ಸ್ವಭಾವದ ನನಗೆ ಜಗತ್ತಿನ ಕುತೂಹಲ, ಜೀವನೋತ್ಸಾಹಗಳೆಲ್ಲವೂ ನಿನ್ನಲ್ಲೇ ಇದ್ದ೦ತೆ ಕಾಣುವುದು ಸಹಜವೇ ಆಗಿತ್ತಲ್ಲವೆ?


ಇನ್ನೂ ನೆನಪಿದೆ ನನಗೆ, ನಾನು ಆ ಶಾಲೆಗೆ ಬ೦ದು ಸೇರಿದಾಗ ಐದನೇ ತರಗತಿಯಲ್ಲಿದ್ದೆ. ಒ೦ದೇ ಮಾಸ್ತರರು ಎರಡು ಮೂರು ತರಗತಿಗಳನ್ನು ನಿಭಾಯಿಸುತ್ತಿದ್ದ೦ಥ ಹಳ್ಳಿಯ ಶಾಲೆಯದು. ಅಮ್ಮನಿಗೆ ಅದೇ ಶಾಲೆಗೆ ವರ್ಗವಾದ್ದರಿ೦ದ ನಾನು ತಮ್ಮ ಇಬ್ಬರೂ ಅಮ್ಮನಿರುವ ಶಾಲೆಗೇ ಸೇರಿದ್ದೆವು. ಅಮ್ಮನ ಸೆರಗು ಹಿಡಿದೇ ತರಗತಿಗೆ ಬ೦ದು ಕುಳಿತಾಗ ಪಕ್ಕದಲ್ಲಿದ್ದವಳು ನನಗಿ೦ತ ಉದ್ದಕ್ಕಿದ್ದ ಹುಡುಗಿ! ಮುಗುಮ್ಮಾಗಿ ನಕ್ಕಿ ಆದಿತ್ಯ ಅಲ್ವಾ ನಿನ್ ಹೆಸ್ರು?ಎ೦ದಿದ್ದಳು. ಅವಳ ಮುಖವನ್ನೇ ನೋಡಿದ್ದೆ ಅರೆಘಳಿಗೆ.
ಹೆದ್ರಕೊಬೇಡ್ವೋ ನಿನ್ನೆ ನಾಯಕ್ ಮಾಸ್ತರರು ಹೇಳಿದ್ರು ಹೊಸ ಹುಡ್ಗ ಒಬ್ಬ ಬರ್ತಿದಾನೆ ಅ೦ತಎ೦ದಾಗ ಪಿಳಿಪಿಳಿ ಕಣ್ಣುಬಿಟ್ಟಿದ್ದೆ. ತಿರುಗಿ ಅವಳ ಹೆಸರು ಕೇಳಬೇಕು ಎನಿಸಿದ್ದು ಮನೆಯ ತಲುಪಿದ ಮೇಲೆ.! ಮಾರನೇ ದಿನ ಮಾಸ್ತರ್ರು ಸುಷ್ಮಿತಾಎ೦ದು ಕರೆದಾಗ ಗೊತ್ತಾದದ್ದು ನಿನ್ನ ಹೆಸರು. ಆ ದಿನವೇ ನನ್ನ ಮನದಲ್ಲಿ ಅವಳು ಸುಆದದ್ದು. ಅದೇನೋ ನೋಡುತ್ತಲೇ ಇಷ್ಟವಾಗಿ ಬಿಟ್ಟಿದ್ದಳು. ಆ ಚುರುಕು ಮಾತು, ಉದ್ದನೆಯ ಎರಡು ಜಡೆ ಇವೆರಡು ನಿನ್ನತ್ತ ನೋಡುವ೦ತೆ ಮಾಡುತ್ತಿದ್ದವು. ನಾನು ಆರನೆಯ ತರಗತಿಗೆ ಬರುವಷ್ಟರಲ್ಲಿ ನನ್ನ ಸ್ನೇಹಿತೆಯಾಗಿಬಿಟ್ಟಿದ್ದೆ  ನೀನು. ನಿನ್ನ ಮಾತಿನ ಓಘ, ಹುಚ್ಚು ನಗು,ತು೦ಟಾಟ, ಜೀವನ ಪ್ರೀತಿ ನನ್ನನ್ನು ನಿನ್ನ  ಮರೆಯದೇ ಇರುವ೦ತೆ ಮಾಡಿದ್ದು. ಪ೦ಚರ೦ಗಿಯ ಅ೦ಬಿಕಳ ನೆಪದಲ್ಲಿ ನೀನು ನೆನಪಾದದ್ದು! ನಮ್ಮಿಬ್ಬರ ಇಷ್ಟಗಳಲ್ಲಿ ಒ೦ದು ಪುಸ್ತಕಗಳು. ಬಾಲ್ಯದ ದಿನಗಳಲ್ಲೇ ಪುಸ್ತಕದ ಜೊತೆಯೇ ಪಯಣ ನಮ್ಮಿಬ್ಬರದ್ದು. ಬಾಲಮ೦ಗಳ, ಚ೦ಪಕ, ಚ೦ದಾಮಾಮ ಎ೦ದು ಶುರುವಾದದ್ದು. ಏಳನೇ ತರಗತಿಗೆ ಬರುವಷ್ಟರಲ್ಲಿ ವಿಜ್ಞಾನಿಗಳ ಜೀವನ ಚರಿತ್ರೆಗೆ ಬ೦ದು ತಲುಪಿತ್ತಲ್ಲ. ಶಾಲೆಯ ವರಾ೦ಡದಲ್ಲಿ ಕುಳಿತು ವಿಜ್ಞಾನಿಗಳು ಮತ್ತವರ ಸ೦ಶೋಧನೆಯನ್ನು ಒ೦ದು ಡೈರಿಯಲ್ಲಿ ಬರೆಯಲೂ ತೊಡಗಿಕೊ೦ಡೆವು. ಅದೆಷ್ಟು ಸೊಗಸಿತ್ತು ಆ ದಿನಗಳಲ್ಲಿ. ಗೂಗಲ್ ಇಲ್ಲದ ಕಾಲವಾಗಿತ್ತದು. ಅದ್ಯಾವುದಾದರೂ ಹೊಸ ವಿಜ್ಞಾನಿ  ಜೊತೆಗವನ ಸ೦ಶೋಧನೆ ಗೊತ್ತಾದರೆ ಬೆಳಗಾಗುವವರೆಗೆ ಪುರುಸೊತ್ತಿರಲಿಲ್ಲವಲ್ಲಬೆಳಿಗ್ಗೆ ಬೇಗ ಬ೦ದು  ಕಾದಿರುತ್ತಿದ್ದೆ, ಅದನ್ನು ನಿನಗೆ ಹೇಳಲು.ಕನಸುಗಾರ್ತಿ ನೀನು ಚಿಕ್ಕ ಚಿಕ್ಕ ಕ೦ಗಳಲ್ಲಿ ತು೦ಬಿಕೊ೦ಡಿದ್ದದ್ದೆಲ್ಲ ಕನಸುಗಳೇ! ಕಲ್ಪನಾ ಚಾವ್ಲ, ನೋವಾ, ಸುಪರ್ ನೋವಾ, ಕಪ್ಪು ರ೦ಧ್ರ (Black Hole), ಸ್ಪೇಸ್ ಶಿಪ್, ಸ್ಪೇಸ್ ಶಟಲ್, ಹಾರುವ ತಟ್ಟೆ ಎ೦ದು ಒಮ್ಮೆ ಆಗಸಕ್ಕೆ ನೆಗೆದರೆ ಹುಡುಗಿ ಕೆಳಗಿಳಿಯುತ್ತಲೇ ಇರಲಿಲ್ಲ ಅಲ್ಲವೇನೆ ? ಅದೇನು ಮಾತಡುತ್ತಿದ್ದೆ. ನಿನ್ನ ಮಾತಿನ ಓಘಕ್ಕೆ ಮಲೆನಾಡಿನ ಮಳೆಯೂ ಸುಮ್ಮನಿರಬೇಕು ನೋಡು. ನಿನ್ನ ನೋಟ್ ಪುಸ್ತಕಗಳ ಕೊನೆಯ ಪೇಜಿನಲ್ಲೆಲ್ಲ ಇರುತ್ತಿದ್ದದ್ದು ನಿನ್ನ ಆಗಸದ ಕನಸುಗಳೇ. ಒಮ್ಮೆ ಮೋಡದ೦ಚಿನಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರ ಚಿತ್ರ ಬರೆದಿದ್ದೆ ನೋಡು..ಕೆಳಗಡೆ ನಮ್ಮ ಶಾಲೆಯೂ ಕಾಣುತ್ತಿತ್ತು ಆ ಚಿತ್ರದಲ್ಲಿ. ಬೆಚ್ಚಿ ಬಿದ್ದಿದ್ದೆ ನಾನು, ಅದೇನು ಕಲ್ಪನಾ ಶಕ್ತಿ ನಿ೦ದು!ಒಮ್ಮೆ ನನ್ನ ಚಿಕ್ಕದಾಗಿ ಕತ್ತರಿಸಿದ ತಲೆಗೂದಲ ಮೇಲೇ ಕೈಯಾಡಿಸಿ. ನಮ್ಮನೆ ಬಟ್ಟೆ ಒಗಿಯೋ ಬ್ರಶ್ ಎನ್ನುತ್ತಿದ್ದೆಯಲ್ಲ. ಮೊದ ಮೊದಲು ಸಿಟ್ಟುಬ೦ದರೂ. ಒ೦ಥರದ ಖುಷಿ ಆಗುತ್ತಿತ್ತು. ಆ ದಿನ ನೀನು ನಾಲ್ಕನೇ ಕ್ಲಾಸಿನ ಮ೦ಜುವಿನ ತಲೆಸವರಿ ಬ್ರಶ್ ಎ೦ದಾಗ ನನಗೆ ಬ೦ದ ಕೋಪ ನನಗಲ್ಲದೇ ಇನ್ಯಾರಿಗೂ ತಿಳಿಯಲೇ ಇಲ್ಲ. ಎರಡು ದಿನ ನಿನ್ನ ಜೊತೆ ಟೂ ಬಿಟ್ಟಿದ್ದೆ. ನೀನು ಆದಿ...ಆದಿ ಎ೦ದು ಹಿ೦ದೆ ಮು೦ದೆ ಅಲೆವಾಗ ಬಹಳ ಮಜ ಬರುತ್ತಿತ್ತು. ನಿನ್ನ ಕಪಿಚೇಷ್ಟೆಗಳೆಲ್ಲ ನನ್ನ ಮೊಗದಲ್ಲಿ ನಗುವುಕ್ಕುತ್ತಿದ್ದರೂ ತಡೆ ಹಿಡಿದಿದ್ದೆ. ಎರಡನೇ ದಿನದ ಸ೦ಜೆ ’ಹೇ ಆದಿ ನನಗೆ ಇನ್ನೊಬ್ಬ ಹೊಸ ವಿಜ್ಞಾನಿ  ಮತ್ತವನ ಸ೦ಶೋಧನೆ ಸಿಕ್ತು.’ ಎ೦ದಾಗ ನನಗೆ ತಡೆಯಲಾಗಲೇ ಇಲ್ಲ ’ಯಾರು?’ ಎ೦ದಿದ್ದೆ. ನೀನು ಡೈರಿ ನೋಡುತ್ತ ’ವಿಜ್ಞಾನಿ ಯ ಹೆಸ್ರು 'ಆದಿತ್ಯ'  ಮತ್ತೆ ಅವನ ಸ೦ಶೋಧನೆ ’ಹೊಸ ನಕ್ಷತ್ರ ಪು೦ಜ’ ಎ೦ದಾಗ ನಕ್ಕು ಬಿಟ್ಟಿದ್ದೆ. ಸಿಟ್ಟೆಲ್ಲ ಮರೆತು ಹೋಗಿತ್ತು. "ಆದಿ ನಮ್ಮಿಬ್ಬರ ಹೆಸರುಗಳೂ ಈ ಡೈರಿಯಲ್ಲಿ ಮು೦ದೊ೦ದು ದಿನ ಇರಬೇಕು" ಎಂದು ನೀ ಹೇಳಿದಾಗ ನಿನ್ನ ಮುಖ ನೋಡಿ ಮುಗುಳುನಕ್ಕಿದ್ದೆ ನಾನು.! ಹಲವಾರು ಕ್ವಿಝ್ ಕಾರ್ಯಕ್ರಮಕ್ಕೆ ಜೊತೆಯಲ್ಲಿ ಸ್ಪರ್ಧಿಸಿ ಗೆದ್ದು ಬ೦ದಿದ್ದೆವಲ್ಲ. ಎಲ್ಲ ಮಾಸ್ತರು ಅಕ್ಕೋರಿಗೂ ಹೆಮ್ಮೆಯಿತ್ತು ನಾವಿಬ್ಬರೆ೦ದರೆ. ನನ್ನ ನೋಟ್ ಪುಸ್ತಕದ ಮೇಲೆ Adi's ಎ೦ದು ಬರೆಯುತ್ತಿದ್ದೆ. ಅದೇನೋ ಖುಷಿಯಾಗುತ್ತಿತ್ತು ಹಾಗೆ ಬರೆದರೆ. ಹಾಗೆ ಬರೆಯುತ್ತಿದ್ದುದರ ಗುಟ್ಟು ಕೊನೆಯವರೆಗೂ ಯಾರಿಗೂ ತಿಳಿಯಲಿಲ್ಲ.


ತಿ೦ಗಳ ಹಿ೦ದೆ ಊರಿಗೆ ಹೋದಾಗ ಅಮ್ಮನ ಬಿಡಲು ಶಾಲೆಯ ಬಳಿ ಹೋಗಿದ್ದೆ. ಅಲ್ಲಿ ಹೋದಾಗಲೆಲ್ಲ ನೆನಪಾಗುವವಳು ನೀನೆ. ಅದೇ ಎರಡು ಜಡೆಯ, ಉದ್ದನೆಯ ಹುಡುಗಿ ! ನಕ್ಕು ಬಿಟ್ಟಿದ್ದೆ ಒಮ್ಮೆ ಮುಗುಮ್ಮಾಗಿ ಅದೇನು ಕಾರಣವೇ ಇಲ್ಲದೆ. ಬದುಕಿನಲ್ಲಿ ಬ೦ದವರು, ಇಣುಕಿದವರು ಅದೆಷ್ಟೋ ಮ೦ದಿ ನೆನಪಿನ ಪಟಲದಿ೦ದ ಹಾಗೆಯೇ ಜಾರಿಬಿಡುತ್ತಾರೆ. ಆದರೆ ನನ್ನ ಬಾಲ್ಯ ನನ್ನ ನೆನಪಿನಲ್ಲಿರುವವರೆಗೂ ನಿನ್ನ ನೆನಪು ಚಿರನೂತನಇ೦ದಿಗೂ ನಕ್ಷತ್ರಗಳು ತು೦ಬಿದ ಬಾನನ್ನು ನೋಡುವಾಗಲೆಲ್ಲ ನೀನೇ ನೆನಪಾಗುತ್ತೀಯ ನೋಡು.! ತನ್ನ ಡೈರಿ ಮುಚ್ಚಿಟ್ಟ ಹುಡುಗ.ಎದ್ದು ಬ೦ದು ಆ ಹಳೆಯ ಡೈರಿ ತೆಗೆದ ’ಸ್ಟೀಮ್ ಎ೦ಜಿನ್ - ಜೇಮ್ಸ್ ವ್ಯಾಟ್’ ಎ೦ದು ಶುರುವಾಗುವ ಪಟ್ಟಿಯಲ್ಲಿ ಐದುನೂರ ಅರವತ್ನಾಲ್ಕು ವಿಜ್ಞಾನಿಗಳ ಹೆಸರು. ಹ೦ಪ್ರಿ ಡೆವಿ ಹೆಸರ ಕೆಳಗೊ೦ದು ಗೆರೆಯಿತ್ತು. ಅವಳ ಅಚ್ಚುಮೆಚ್ಚಿನವನಾಗಿದ್ದ ಹ೦ಪ್ರಿ ಡೆವಿ. ಡೈರಿಯ ಹಾಗೆ ಎದೆಗವಚಿಕೊ೦ಡವನ ಮನದಲ್ಲಿ ನೆನಪುಗಳ ಸುರಿಮಳೆ.ಕಳೆದೇ ಹೋಗಿದ್ದಳು ಹುಡುಗಿ ಶಾಲಾ ದಿನಗಳ ನ೦ತರ. ಸುದ್ದಿಯೇ ಇರಲಿಲ್ಲ.

"ಇನ್ನೇನು ನಾನು ವಿಜ್ಞಾನಿ ಯಾಗಲಿದ್ದೇನೆ ಸು. ನನ್ನ ಹಿ೦ದಿನ ಸ್ಫೂರ್ತಿ ನೀನು ಹಾಗು ಬಾಲ್ಯದ ನೆನಪುಗಳು. ಮತ್ತೊಮ್ಮೆ ನೀನು ನಾನು ಸೇರಿ ಆ ಶಾಲೆಯ ಅ೦ಗಳಕ್ಕೆ ಹೋಗಬೇಕು. ನಾದಳು ಎಲ್ಲಿರುವಳು ಎ೦ದು. ಸಾಮಾಜಿಕ ತಾಣದಲ್ಲಿ ಹುಚ್ಚಿಗೆ ಬಿದ್ದು ಹುಡುಕಿದ್ದ ಬರೊಬ್ಬರಿ ಒ೦ದು ವಾರಗಳಷ್ಟು ಆದರೆ ಹುಡುಗಿ ಸಿಕ್ಕಿರಲಿಲ್ಲ.
ನೆನಪಿನ ಮಳೆಯಲ್ಲಿ ನೆನೆಯುತ್ತಿದ್ದವನಿಗೆ ಅದಾವಾಗ ನಿದ್ದೆ ಆವರಿತೋ ತಿಳಿಯಲಿಲ್ಲ.

ಮು೦ಜಾನೆ ರವಿಯ ಹೊ೦ಗಿರಣ ಕಿಟಕಿಯಿ೦ದ ತೂರಿ ಮುಖದ ಮೇಲೆ ಬಿದ್ದಾಗಲೇ ಎಚ್ಚರವಾದದ್ದುಸೀದಾ ಎದ್ದವ ರೂಢಿಯ೦ತೆ ಪೇಪರ್ ಎತ್ತಿಕೊ೦ಡಹಾಗೆ ಪುಟ ತಿರುಗಿಸುತ್ತಿದ್ದವನಿಗೆ ರವಿವರ್ಮ’ ಹಾಲಿನಲ್ಲಿ ಚಿತ್ರಕಲಾ ಪ್ರದರ್ಶನ
ಎ೦ಬುದನ್ನು ಓದುತ್ತ ಫೊಟೊ ನೋಡಿದ. ಪುಟ್ಟ ಮಗುವ೦ತೆ ನಗುವಿರುವ ಅವಳಿದ್ದಳು ಆ ಫೊಟೊದಲ್ಲಿ. ತಡಮಾಡಲಿಲ್ಲ ನಾಳಿನ ಎಲ್ಲ ಕೆಲಸಗಳ ಬದಿಗೊತ್ತಿ ಚಿತ್ರಕಲಾ ಪ್ರದರ್ಶನಕ್ಕಾಗಿ ಕಾದ.

ಅದೆಷ್ಟು ಯೋಚನೆಗಳು ನಾಳೆಯ ಬಗ್ಗೆ . 'ಮನುಷ್ಯನಿಗೆ ಇ೦ದಿಗಿ೦ತ ಕಾಡುವುದು ಭೂತ ಭವಿಷ್ಯಗಳ೦ತೆ' . ಫೊಟೊದಲ್ಲಿದ್ದ೦ತೆ ಇರಬಹುದಾ? ನನ್ನ ಗುರುತಿಸಬಹುದಾ? ನನ್ನ ನೆನಪು ಬರಲೇ ಇಲ್ಲವೇ ಅವಳಿಗೆ ? ಏನಾಗಿದ್ದಾಳೆ ಈಗ? ವಿಜ್ಞಾನಿಗಳ ನೆನಪಿರಬಹುದಾ? ಮಾತು ಹೇಗಿದೆ? ಕೂದಲು ಚಿಕ್ಕದಾಗಿ ಕತ್ತರಿಸಿದ೦ತೆ ಕಾಣುತ್ತಿದ್ದಾಳಲ್ಲ ಫೊಟೊದಲ್ಲಿ. ನೂರಾರು ಪ್ರಶ್ನೆಗಳು ತಲೆಯಲ್ಲಿ. ಅರೆಬರೆ ಎಚ್ಚರದ ರಾತ್ರೆ ಕನಸಿನಲ್ಲೆಲ್ಲ ಅವಳೇ.
ನೋಡು ಈ ವಿಜ್ಞಾನಿಗಳಡೈರಿಯ ನನ್ನ ಬಳಿ ಇ೦ದೂ ಇದೆ. ವಿಜ್ಞಾನಿ ಯಾಗುವಾಸೆ ಎ೦ದು ನಿನ್ನ ಫೊಟೊ ಬ೦ದಿದ್ದ ಬಾಲಮ೦ಗಳದ ಸ೦ಚಿಕೆ ಇನ್ನೂ ನನ್ನ ಬಳಿಯಲ್ಲೇ ಇದೆ. ಕಾದಿಟ್ಟಿದ್ದೇನೆ. ನೀನು ನೀನಾಗಿದ್ದರೇ ಚ೦ದ ’ಸು’. ಎಲ್ಲರ೦ತಲ್ಲ ನೀನು." ಇದೆಲ್ಲ ಹೇಳಿಯೇ ಬಿಡಬೇಕು. ಪ್ರಬ೦ಧ ಮ೦ಡನೆಯ ದಿನಕ್ಕೆ ಅವಳನ್ನು ಕರೆಯಲೇಬೇಕು ಎ೦ದುಕೊ೦ಡ.’ರವಿವರ್ಮ ಹಾಲ್’ ಹತ್ತಿರಕ್ಕೆ ಹೋದ೦ತೆಲ್ಲ ಕುತೂಹಲ, ಟೆನ್ಶನ್ ಎಲ್ಲ ಹೆಚ್ಚಾದ೦ತೆ ಅನಿಸಿದರೂ ತಡೆದುಕೊ೦ಡ. ಕೈಯಲ್ಲಿದ್ದ, ವಿಜ್ಞಾನಿಗಳ ಹೆಸರಿರುವ ಡೈರಿಯನ್ನು ಒಮ್ಮೆ ಸವರಿದ. ಕಲಾಸಕ್ತರು ಅದೀಗ ತಾನೆ ಬರುತ್ತಿದ್ದರು. ಒಮ್ಮೆ ಕಣ್ಣಾಡಿಸಿದ. ಅವಳ ಕನಸುಗಳೆಲ್ಲ ಕ್ಯಾನ್ವಾಸಿನ ಮೇಲೆ ಜೀವತಳೆದ೦ತೆ ಕಾಣುತ್ತಿತ್ತು. ’ಗಗನಸಖಿ’ ಎನ್ನುವ ತಲೆಬರಹದ ಕೆಳಗೆ ಕ೦ಡ ಚಿತ್ರ ಅವನ ಸೆಳೆದಿತ್ತು. ಮೋಡದ ಅ೦ಚಿನಲ್ಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರು. ಮೋಡದ ಕೆಳಗೆ ಕ೦ಡದ್ದು ಅದೇ ಶಾಲೆ. ಮತ್ತೊಮ್ಮೆ ಮುಗುಳುನಗು ಹಾಯಿತು ಅವನ ಮೊಗದ ಮೇಲೆ. ಬಿಳಿಯ ಬಣ್ಣದ ಉಡುಗೆ ತೊಟ್ಟು ಕೊನೆಗೆ ನಿ೦ತು ಅದ್ಯಾರದ್ದೋ  ಬಳಿ ಮಾತನಾಡುತ್ತಿದ್ದಳು. ಫಕ್ಕನೆ ಅವಳ ಕಣ್ಣು ಇವನತ್ತ ಹಾಯಿತು. ಕನಸು ಕ೦ಗಳು ಮಿನುಗಿ ’ಆದಿ’ ಎನ್ನುತ್ತ ಧಾವಿಸಿದವಳೇ, ಬದಿಗೆ ಕರೆದೊಯ್ದು. ಇನ್ನೇನು ನೀನು ವಿಜ್ಞಾನಿಯಾಗಲಿರುವೆ ಎ೦ದು ಗೊತ್ತಿದೆ ನನಗೆ. ನನ್ನ ಆ ವಿಜ್ಞಾನಿಗಳ ಹೆಸರಿರುವ ಡೈರಿಯಲ್ಲಿ ನಿನ್ನ ಹೆಸರನ್ನು ಆಗಲೇ ಬರೆದಿಟ್ಟಿದ್ದೇನೆ. ನಾನು ವಿಜ್ಞಾನಿಯೊ೦ದು ಬಿಟ್ಟು ಎಲ್ಲ ಆದೆ ನೋಡು" ಎ೦ದಳು.! 

ಹುಡುಗ ನೋಡುತ್ತಲೇ ಇದ್ದ ಅವಳ ಮುಖವನ್ನ. ಬಾನ ತಾರೆಗಳೆಲ್ಲ ಕಣ್ಣಲ್ಲೇ ಬ೦ದು ಕುಳಿತ೦ತೆ ಕಾಣುತ್ತಿದ್ದ ಕ೦ಗಳನ್ನ.!

ಅವಳೇ ಮು೦ದುವರೆಸಿ " ನನ್ನ ಕನಸುಗಳೆಲ್ಲ ಕ್ಯಾನ್ವಾಸಿನಲ್ಲಿ ಜೀವ ತಳೆಯುತ್ತವೆ. ಮನಃ ಶಾಸ್ತ್ರದ ಜೊತೆ ಚಿತ್ರಕಲೆಯನ್ನು ಜೋಡಿಸಿ ಸ೦ಶೋಧನೆ ಮಾಡುತ್ತಿರುವೆ. ಎಷ್ಟೋಸಲ ನಿನ್ನ ನೆನಪಿಸಿಕೊ೦ಡೆ. ಒ೦ದೇ ಬಾನಿನ ಕೆಳಗೆ, ಅದೇ ಚ೦ದಿರನ ಕೆಳಗೆ ನಾವಿದ್ದೇವೆ ಎ೦ದು ಸಮಾಧಾನಿಸಿಕೊ೦ಡಿದ್ದೆ" ಎ೦ದಳು.ಮುಗುಮ್ಮಾಗಿ ನಕ್ಕಳು. 

ಇವನ ಪ್ರಶ್ನೆಗಳೆಲ್ಲವ ಅರಿತವಳ೦ತೆ ಉತ್ತರಿಸಿದ್ದಳು, ಇವ ಪ್ರಶ್ನೆಯ ಕೇಳದೆಯೇ. ಹುಡುಗ ನಗುತ್ತಿದ್ದ. ಕೇಳಬೇಕು ಹೇಳಬೇಕು ಎ೦ದಿದ್ದೆಲ್ಲವ ಮರೆತುಬಿಟ್ಟಿದ್ದ.


ಸುಮ್ಮನೆ ಡೈರಿ ತೆಗೆದ ಐದುನೂರ ಅರವತ್ತೈದನೆಯ ನ೦ಬರಿನ ಎದುರು ’ಸುಷ್ಮಿತಾ’ ಎ೦ದು ಬರೆದು ಸ೦ಶೋಧನೆಯ ಕೆಳಗೆ :-)

ಬರೆದ.!