Friday, September 16, 2011

ಸುಮ್ನೆ ಒಂದು ಸುದ್ದಿ

ಮೊನ್ನೆ ರಸ್ತೆಯಲಿ ಒಬ್ಬಳೇ ಹೊರಟಿದ್ದೆ. ನಡೆವಾಗ ನನ್ನದೇ ಲಹರಿಯಲ್ಲಿರುವುದು ಹೆಚ್ಚು. ಒಮ್ಮೊಮ್ಮೆ ಅದೆಂಥ ಜಾತ್ರೆಯ ಜನ ಜಂಗುಳಿಯಾದರೂ  ಏಕಾಂತವನ್ನುಅನುಭವಿಸಬಲ್ಲ ಪಿಶಾಚಿ ನಾನು.! ನನ್ನ ಕೊಡೆಯ ಚೀಲವ ಹೆಗಲಿಗೇರಿಸಿ, ಪರ್ಸನ್ನು ತೆಗೆದುಕೊಂಡು ಹೊರಟೇ ಬಿಡುತ್ತೇನೆ. (ಅಂದ ಹಾಗೆ ನನ್ನ ಬಣ್ಣದ ಕೊಡೆಗೆ ಹೊಸತಾದ ಚೀಲವನ್ನು ತಯಾರಿಸಿದ್ದೇನೆ. ಕೈಯಲ್ಲಿ ಹಿಡಿಯಬೇಕೆಂಬ ರಗಳೆಯೇ ಇಲ್ಲ. ಹೆಗಲಿಗೆ ಆರಾಮವಾಗಿ ತೂಗಿಬಿಡಬಹುದು. ದೋಸ್ತಿಗಳೆಲ್ಲ 'ಇಂದ್ರ ಧನಸ್ಸು' ಎಂದು ಕಿಚಾಯಿಸುತ್ತಾರೆ. ಹೊಟ್ಟೆ ಕಿಚ್ಚು ಅಲ್ವಾ ?) .


 ಹಾಗೆ ನಡೆದು ಹೋಗುತ್ತಿರುವಾಗ ಹಿಂದಿನಿಂದ ಕೇಳಿದ "ಅಕ್ಕಾ.. "ಎಂಬ ಕೂಗು ನನ್ನನ್ನು ವಾಸ್ತವಕ್ಕೆ ಎಳೆದು ತಂದಿತ್ತು. ತೀರಾ ಪರಿಚಯದ ಧ್ವನಿಯಾಗಿತ್ತದು. ಮನಸ್ಸಿಗೆ ಅದ್ಯಾರದ್ದೆಂದು ಗುರುತು ಸಿಗದೇ ಹೋದಾಗ ಹಿಂದಿರುಗಿ ನೋಡಿದೆ. ಮೊಳಕಾಳುದ್ದದ ಜೀನ್ಸ್ ಧರಿಸಿದ ಪೋರಿಯೋಬ್ಬಳು ನನ್ನತ್ತಲೇ ಓಡಿ ಬರುತ್ತಿದ್ದಳು. "ಓಹ್ ರಶ್ಮಿ..." ಅವಳ ಕಂಡೊಡನೆ ತಾನಾಗಿ ನನ್ನ ಬಾಯಿಯಿಂದ ಬಂದ ಉದ್ಗಾರವಿದು. ಹತ್ತಿರ ಬಂದವಳೇ ನನ್ನ ಕೈಹಿಡಿದುಕೊಂಡಳು. "ಅಕ್ಕಾ ನಿಮ್ಮನ್ನು ಅಲ್ಲೇ ನೋಡ್ದೆ.. ಆದರೆ ನಾನು ಆಟೋದಲ್ಲಿದ್ದೆ. ನಿಲ್ಲಿಸಿ ಹಣ ಕೊಟ್ಟು ಬರೋವಷ್ಟ್ರಲ್ಲಿ ನೀವು ಇಷ್ಟು ದೂರ ಬಂದ್ಬಿಟ್ಟಿದ್ರಿ. ಹೇಗಿದ್ದೀರಿ ? ಡ್ರೆಸ್ ತುಂಬಾ ಚೆನ್ನಾಗಿದೆ.hairstyle ಛೇಂಜ್ ಮಾಡಿಸಿದ್ರಾ ಅಕ್ಕಾ. ನಾನು ಇಲ್ಲೇ ವೈಯೋಲಿನ್ ಕ್ಲಾಸ್ ಗೆ ಹೋಗ್ತಿದೇನೆ. ನಿಮ್ ಜೊತೇನೆ ಬರ್ತೇನೆ..."ಹೀಗೆ ಸಾಗಿತ್ತು ಅವಳ ಮಾತಿನ ಝರಿ. ನಾನು ನಗುತ್ತಲಿದ್ದೆ. ಹೆಚ್ಚಾಗಿ ವಟಗುಡುತ್ತಲೇ  ಇರುವ ನಾನು ಮೌನಿಯಾಗಿದ್ದೆ. 


 ಮಾತು ಕೇಳುತ್ತಲೇ ಒಮ್ಮೆಹೀಗೆ  ಅವಳತ್ತ ದೃಷ್ಟಿ ಹಾಯಿಸಿದೆ. ಗುಲಾಬಿ ಬಣ್ಣದ ಟೀ-ಶರ್ಟ್, ಮೊಳಕಾಲುದ್ದದ ನೀಲಿ ಜೀನ್ಸ್ ಹಾಕಿದ್ದಳು. ಜಗತ್ತಿನ ಕುತೂಹಲಗಳೆಲ್ಲವನ್ನೂ ತುಂಬಿಕೊಂಡ ಜೊತೆ ಬಟ್ಟಲು ಕಂಗಳು. ಕುತ್ತಿಗೆಯವರೆಗೆ ಬಂದು ಕುಣಿಯುತ್ತಿದ್ದ ಜುಟ್ಟು. ನನ್ನ ಭುಜದ ಎತ್ತರಕ್ಕೆ ಬೆಳೆದುಬಿಟ್ಟಿದ್ದಳು ಹುಡುಗಿ. ನನ್ನ ಬಲಗೈಯನ್ನು ಹಿಡಿದಿದ್ದ ಅವಳ ಮೆದುವಾದ ಕೈ. ಅವಳ ಕಂಗಳು, ಕುಣಿಯುತ್ತಲೇ ನಡೆದಂತೆ ಇರುವ ಅವಳ ನಡಿಗೆ. ಅಮಾಯಕ ನಗು.  ಅದೇನೆಲ್ಲ ಬಚ್ಚಿಕೊಂಡಿರುತ್ತದೆ ಈ ಬಾಲ್ಯ ಅಥವಾ ಬಾಲ್ಯದಿಂದ ಯೌವ್ವನ ಮೆಟ್ಟಿಲೇರುವುದರ ನಡುವಿನ ಅವಧಿ ..! ಅನಿಸಿ ಬಿಟ್ಟಿತು..! ಅವಳು ಮಾತನಾಡುತ್ತಲೇ ಇದ್ದಳು ನನ್ನ ಮನಸ್ಸು ಹಿಂದಕ್ಕೆ ಓಡಿತ್ತು.

 ಎರಡು ವರ್ಷಗಳ ಹಿಂದೆ ಹಿಂದಿನ ಮಾತದು . ಸೆಮಿಸ್ಟರ್ ನಡುವಿನ ರಜೆಯಲ್ಲಿ, ನನ್ನ ಪರಿಚಯದವರೊಬ್ಬರು ನನ್ನನ್ನು ಮಕ್ಕಳ ಶಿಬಿರಕ್ಕೆ ಕರೆದಿದ್ದರು. ಒಂಭತ್ತು ದಿನಗಳ ಶಿಬಿರವಾಗಿತ್ತದು. ನಾಲ್ಕರಿಂದ ಐದು ಗಂಟೆ ಮಕ್ಕಳ ಜೊತೆ ಇರುತ್ತಿದ್ದೆ. ಬಾಲ್ಯ ನನ್ನ ಜೊತೆಯಿದ್ದಂತೆ ಅನಿಸಿದ್ದ ದಿನಗಳಾಗಿದ್ದವು ಅವು. ಮಕ್ಕಳಿಗೆ ಕಥೆ ಹೇಳಿ, ಅವರಿಂದ ಹೇಳಿಸಿ, ಕವನ ಬರೆಯಿಸಿ. ಓದಿಸಿ, ಗಾಳಿಪಟ ಮಾಡಿ ಹಾರಿಸಿ. ಮಣ್ಣಿನ ಅದೇನೇನೋ ಗೊಂಬೆ ತಯಾರಿಸಿ, ಬಣ್ಣಗಳಲ್ಲಿ ಅದ್ಭುತವಾಗಿ ಆಟವಾಡುವ ಕೆಲವರನ್ನು ಬೆರಗುಗಣ್ಣಿನಿಂದ ನೋಡಿ ನಕ್ಕಿದ್ದ ದಿನಗಳಲ್ಲೇ ಪರಿಚಯವಾದವಳು ಈ ರಶ್ಮಿ. 

ಶಿಬಿರದಲ್ಲಿ ಹೆಚ್ಚಾಗಿ ಗಂಡು ಮಕ್ಕಳ  ಗುಂಪಲ್ಲೇ ಇರುತ್ತಿದ್ದೆ ನಾನು. ಒಣಗಿದ್ದ ಆಲದೆಲೆಯ  ಹಿಡಿದು ನವಿಲುಗರಿಯಂತೆ ಮಾಡುತ್ತೇನೆ ಎಂದು, ಬಣ್ಣ- ಕುಂಚ ಹಿಡಿದು ಕೂತಿದ್ದ 'ನಿಶಾಂತ' ನ ಎದುರು ಕುಳಿತಿದ್ದೆ. ಅಷ್ಟರಲ್ಲಿ  ಗೆಜ್ಜೆಯ ದನಿ ಕೇಳಿತ್ತು. "ಅಕ್ಕಾ ನಿಮಗೆ ಏನೋ ತೋರಿಸಬೇಕಿತ್ತು....." ಕತ್ತೆತ್ತಿ ನೋಡಿದರೆ, ಕಂಗಳ ತುಂಬಾ ಕನಸನ್ನು ತುಂಬಿಕೊಂಡ ಬಾಲೆ. ತಿಳಿ ನೇರಳೆ ಬಣ್ಣದ frock ಧರಿಸಿ, ಜುಟ್ಟು ಕಟ್ಟಿ, ಮಲ್ಲಿಗೆಯ ಪುಟ್ಟ ದಂಡೆಯೊಂದನ್ನು ಮುಡಿದು ಘಮ ಘಮಿಸುತ್ತಿದ್ದಳು. ಅರೆ ಘಳಿಗೆ ಅವಳನ್ನೇ ನೋಡುತ್ತಿದ್ದಿರಬೇಕು ನಾನು. "ಅಕ್ಕಾ ಬರ್ತೀರಾ .."ಎಂದು ನನ್ನ ಕೈ ಹಿಡಿದಾಗ. ಕಂಡಿದ್ದು.. ಪುಟ್ಟ ಕೈಗಳ ತುಂಬಾ ಬಳೆಗಳು. ಅದೇನೋ ಆಕರ್ಷಣೆಗೆ ಒಳಗಾದವಳಂತೆ ಎದ್ದು ಅವಳ ಜೊತೆ ನಡೆದಿದ್ದೆ. 

ಕರೆದುಕೊಂಡು ಹೋದ ಹುಡುಗಿ ಒಂದು ಹಾಳೆಯನ್ನು ನನ್ನ ಮುಂದೆ ಹಿಡಿದಿದ್ದಳು. ಮುದ್ದಾದ ಅಕ್ಷರದಲ್ಲಿ ಒಂದು ಪುಟ್ಟ ಕವನ "ಛಳಿಯಾದಾಗಲೆಲ್ಲ
 ಮೋಡಗಳ ಚಾದರವ ಹೊದ್ದು
 ಮಲಗಿಬಿಡುವ ತಾರೆಗಳು. 
ಆಗಾಗ ಕಿಟಕಿಯಲ್ಲಿ ಇಣುಕುವ ಚಂದಿರನಿಗೆ ಬೋರು ಬೋರು..."
ಅನಾಯಾಸವಾಗಿ ಮುಗುಳು ನಗೆಯೊಂದು ಹಾದು ಹೋಗಿತ್ತು ನನ್ನ ಮೊಗದಲ್ಲಿ. ಎಂಟರ  ಹರೆಯದ ಹುಡುಗಿಯ ಕವನ. ಅದೇನೋ ಆಕರ್ಷಣೆಯಿತ್ತು, ಮುಗ್ಧತೆಯಿತ್ತು, ಪ್ರೀತಿಯಿತ್ತು,ಸುಂದರ ಕಲ್ಪನೆಯಿತ್ತು  ಆ ಸಾಲುಗಳಲ್ಲಿ..

ಆ ದಿನವೆಲ್ಲ ನೆನಪಾಗಿ ಕಾಡಿದ್ದಳು ಹುಡುಗಿ.ಅಂಥ  ಪೋರಿಯರನ್ನು ಕಂಡಾಗ 'ನನಗೆ ನಾನೇ' ನೆನಪಾಗುತ್ತೇನೆ ಅಥವಾ  ಅಮ್ಮನ ಪುಟ್ಟಿ ನೆನಪಾಗುತ್ತಾಳೆ. ನಾನು ಹಾಗೆಯೇ ಇದ್ದೆ. ಬಣ್ಣ ಬಣ್ಣದ frock ಹಾಕುತ್ತಿದ್ದೆ, ಕೈತುಂಬಾ ಬಳೆ ಹಾಕುತ್ತಿದ್ದೆ, ನಡೆದರೆ 'ಝಿಲ್ ಝಿಲ್' ಎನ್ನುತ್ತಿದ್ದ ಗೆಜ್ಜೆ ಕಟ್ಟುತ್ತಿದ್ದೆ. ಅಮ್ಮನ ಹತ್ತಿರ ಜಗಳವಾಡಿ ಜುಟ್ಟಿಗೆ ಹೂ ಮುಡಿಯುತ್ತಿದ್ದೆ.ನೀ  ಜುಟ್ಟು ಕಟ್ಟಿದ್ದೇ ಸರಿ ಆಗಿಲ್ಲವೆಂದು ಅಮ್ಮನ ಕಾಡುತ್ತಿದ್ದೆ.  

ಕಾಲೇಜಿಗೆ ಹೋಗುವ ಹುಡುಗಿಯರನ್ನು ಕಂಡಾಗಲೆಲ್ಲ ನಾನೂ  ಉದ್ದವಾಗಬೇಕು, ದೊಡ್ಡವಳಾಗಬೇಕು. ಉದ್ದನೆಯ ದುಪಟ್ಟಾ ಇರುವ ಚೂಡಿದಾರ್ ಹಾಕಬೇಕೆಂದು ಅನಿಸುತ್ತಿತ್ತು..! ಹೌದು ಎಲ್ಲ ನೆನಪಿದೆ ನನಗೆ...!


ಆದರೆ ನಾನು ಕಾಲೇಜಿಗೆ ಬರುವ ಹೊತ್ತಿಗೆಉದ್ದನೆಯ ಕೂದಲು ಅದ್ಯಾವ ಯಾವುದೋ ಕಾರಣಗಳಿಗೆ ಸಿಕ್ಕು. ಭುಜದ ವರೆಗೆ ಬ೦ದಿತ್ತು. ಇನ್ನು ಹೂ ಮುಡಿಯುವುದ೦ತೂ ದೂರದ ಮಾತಾಗಿತ್ತು. ಲ್ಯಾಬಿನಲ್ಲಿ ಪ್ರೋಗ್ರಾಮ್ಸ್ ಬರೆಯಲು ಕಷ್ಟ ಎ೦ದು ಬಳೆ ಹಾಕುವುದನ್ನು ಬಿಟ್ಟಿದ್ದೆ. ಒ೦ದು ಕಾಲಿಗೆ ಒ೦ದೆಳೆಯ ಚೈನು ಬ೦ದು ಕೂತಿತ್ತು. ಅಪರೂಪಕ್ಕೆ ಚುಡಿದಾರ್ ಹಾಕುತ್ತಿದ್ದೆ.

ಹುಡುಗಿಯರ ಜೊತೆ ಅಷ್ಟಕ್ಕಷ್ಟೆ ಇರುತ್ತಿದ್ದ ನಾನು. ಅವಳೊ೦ದಿಗೆ ಆತ್ಮೀಯಳಾಗುತ್ತಿದ್ದೆ. ದಿನಗಳೆದ೦ತೆ ಹುಡುಗಿ ಆಪ್ತಳಾಗುತ್ತಲೇ ಹೋದಳು. ಕಾಲು,ಕೈ,ಹಣೆ ಎಲ್ಲ ಬೋಳು ಬೋಳು ಇರುವ, ಜೀನ್ಸ್,ಪುಟ್ಟ ಸ್ಕರ್ಟ್ ತೊಟ್ಟ ಪೋರಿಯರಿಗಿಂತ  ಇವಳು ಭಿನ್ನವಾಗಿ ತೋರುತ್ತಿದ್ದಳು. ಅವರೆಲ್ಲ ಬಾರ್ಬಿ ಗೊಂಬೆಯ೦ತೆ ಕ೦ಡರೆ, ಇವಳು ನನ್ನ ಜುಟ್ಟು ಗೊ೦ಬೆಯ೦ತೆ ಕಾಣುತ್ತಿದ್ದಳು. ಚುರುಕುತನ, ಆತ್ಮೀಯತೆ, ಮುಗ್ಧತೆ. ಕುತೂಹಲ ಎಲ್ಲವೂ ಮೆಳೈಸಿದ ರಶ್ಮಿಯ ಕಂಡರೆ ನನ್ನ ಮನದೊಳಗೆ ಅದೇನೋ ಒಂದು ಬಗೆಯ ಕುತೂಹಲ, ಪ್ರೀತಿ, 'ಒಂದು ಎಳೆಯ ಪಾಕ'ದಂಥ ಸಣ್ಣ ಹೊಟ್ಟೆಕಿಚ್ಚು..! ಇಂದು ಯಾವ ಡ್ರೆಸ್ ಹಾಕಿರಬಹುದು, ಅದ್ಯಾವ ಹೂ ಮುಡಿದಿರಬಹುದು ಎಂದು ಶಿಬಿರದ ಗೇಟಿನ ಒಳಗೆ ಹೋಗುವ ಮೊದಲೇ ಕುತೂಹಲಿಸುತ್ತಿತ್ತು  ಮನಸ್ಸು.!

ಕಳೆದು ಹೋದ ನನ್ನನ್ನು ಅವಳಲ್ಲಿ ಹುಡುಕುತ್ತಿದ್ದೆನೋ ಏನೋ ಗೊತ್ತಿಲ್ಲ. ಶಿಬಿರ ಮುಗಿಯುವಷ್ಟರಲ್ಲಿ ಅವಳ೦ತೂ ಆತ್ಮೀಯವಾಗಿದ್ದಳು. ಜೊತೆಗೆ ಅವಳ ಕವನಗಳು.  ಕೊನೆಯ ದಿನದ ಸಮಾರಂಭಗಳೆಲ್ಲ ಮುಗಿದ ಮೇಲೆ ನನ್ನ ಕೈಹಿಡಿದು ಕೇಳಿದ್ದಳು ಹುಡುಗಿ " ನಾಳೆಯಿಂದ ನೀವು ಸಿಗೋದಿಲ್ಲ ಅಲ್ವಾ? ಅಕ್ಕಾ... ನಮಗೂ ನಿಮ್ಮಂಥ Miss ಬೇಕಿತ್ತು..ಸ್ಕೂಲ್ನಲ್ಲಿ ....ನೀವೇ ಯಾಕೆ ಬರಲ್ಲ? " ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಹುಡುಗಿಯ ಕೆನ್ನೆಯ ಮೇಲೆ ನೀರಿಳಿಯುತ್ತಿತ್ತು.  ಅವಳ ಆ ಪ್ರಶ್ನೆಗೆ ಉತ್ತರ ಇರಲಿಲ್ಲ ನನ್ನ ಬಳಿ. ಕೆನ್ನೆ ತಟ್ಟಿ ಮುಗುಳು ನಕ್ಕಿದ್ದೆ. ಕಣ್ಣಂಚನ್ನು ಒರೆಸಿಕೊಳ್ಳುತ್ತ...!

ಇವೆಲ್ಲ ನಡೆದು ಎರಡು ವರ್ಷಗಳ ನಂತರ ಸಿಕ್ಕಿದ್ದಳು ಹುಡುಗಿ. ಒಂದಿಷ್ಟು ಬದಲಾವಣೆಯೊಂದಿಗೆ. ಕೂದಲು ಚಿಕ್ಕದಾಗಿತ್ತು, ಹೂ ಮುಡಿಯುತ್ತಿರಲಿಲ್ಲ, ಕಾಲಲ್ಲಿ ದಪ್ಪನೆಯ ಗೆಜ್ಜೆಗಳೂ ಇರಲಿಲ್ಲ. ಆದರೆ ಅದೇ ಅಮಾಯಕ ನಗು, ಮಾತು..! ಅದೆಷ್ಟು ಬೇಗ ಬೆಳೆಯುತ್ತಾರೆ ಈ ಹುಡುಗಿಯರು. ಅಡುಗೆ ಆಟ ಆಡುತ್ತಲೇ... ಅಡುಗೆ ಮನೆಕಡೆ ಸೇರಿ ಬಿಡುತ್ತಾರೆ.! ಪಪ್ಪನ ಎದೆಯ ಮೇಲೆ ಮುಗುಮ್ಮಾಗಿ ಮಲಗುತ್ತಿದ್ದ ಹುಡುಗಿ, ಈಗೀಗ ಅಮ್ಮನ ಹಿಂದೆ ಇರುತ್ತಾಳೆ ..! ಸೌಂದರ್ಯ, ನಾಜೂಕುತನ, ಚಾಂಚಲ್ಯ, ಮೃದು ಮನಸ್ಸು, ತಾಳ್ಮೆ ಇವೆಲ್ಲ ದೈವದತ್ತ ಗುಣಗಳು ಪ್ರಕೃತಿಗೆ.. ಹೆಣ್ಣಿಗೆ ...ಅಲ್ವಾ? ಹಾಗೆ ಹೋಲಿಸಿದರೆ ಬದಲಾವಣೆಗಳು ಹೆಣ್ಣಿನಲ್ಲೇ ಜಾಸ್ತಿ. ಹುಟ್ಟಿದಾಗಿನಿಂದ ಅದೆಷ್ಟು ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ನೋಡಿ ಒಂದು ಹೆಣ್ಣಲ್ಲಿ..! ಮಗು- ಹುಡುಗಿ-ಪೋರಿ-ಯುವತಿ- ಹೆಂಗಸು-ಮುದುಕಿ ಇಷ್ಟೆಲ್ಲಾ ಬದಲಾವಣೆಗಳ ಜೊತೆಗೆ ಹೆಣ್ಣು 'ಹೆಣ್ಣೇ' ಆಗಿರುತ್ತಾಳೆ..! ಪ್ರಕೃತಿಯಂತೆ ಹೆಣ್ಣೂ ನಿಘೂಡ, ಪ್ರೇಮಮಯಿ, ಚಂಚಲೆ ..... ಹೀಗೆ ಇನ್ನೂ ಏನೇನೋ.

ಮನಸ್ಸು ಏನೇನೋ ಯೋಚಿಸುತ್ತಿತ್ತು ರಶ್ಮಿಯ ನೆಪದಲ್ಲಿ. ಅಷ್ಟರಲ್ಲಿ "ಅಕ್ಕ ಇಲ್ಲೇ ನನ್ನ ವಯೋಲಿನ್ ಕ್ಲಾಸ್ ಇರೋದು. ಸಿಗ್ತೇನೆ ಮತ್ತೊಮ್ಮೆ.. ಅಂದಹಾಗೆ ನಮಗೆ ಹೊಸ ಮಿಸ್ ಒಬ್ರು ಬಂದಿದ್ದಾರೆ ಅವರ ಹೆಸರೂ ನಿಮ್ಮ ಹೆಸರೂ ಒಂದೇ..." ಅಂದಳು..! ಮತ್ತೊಮ್ಮೆ ನಗುವೊಂದು ಅನಾಯಾಸವಾಗಿ ಬಂದಿತ್ತು. ಅವಳಿಗೆ ಟಾ ಟಾ ಮಾಡುತ್ತಾ ನನ್ನ ನಡಿಗೆಯ ವೇಗವನ್ನು ಹೆಚ್ಚಿಸಿದೆ..!