Tuesday, November 16, 2010

ಬಣ್ಣಗಳ ದೇಶದಲ್ಲಿ.




ಮತ್ತೊಂದು ಕಾಲ್ಪನಿಕ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಹೇಗಿದೆ ಹೇಳಿ

ಸಮುದ್ರ ತೀರದಲ್ಲಿದ್ದ ಆ ದೇವಾಲಯದ ಸುಂದರ ಬೃಹತ್ ಕಂಬವನ್ನು ನೋಡುತ್ತಾ ನಿಂತಿದ್ದ ಆ ನೀಲಿ ಕಂಗಳ ವಿದೇಶಿಗ, ಅದೆಲ್ಲೋ ಕಳೆದು ಹೋಗಿದ್ದ. ನಗರದ ಜೀವನದ ಸೋಂಕಿಲ್ಲದ ದಿವ್ಯ ಮೌನದ ತಾಣವದು. ಅವನ ಹೊಂಗೂದಲಿನ ಜೊತೆಗಾರ್ತಿ ಹಾಗೂ ಐದರ ಮಗುವಿನೊಂದಿಗೆ ಬಂದಿಳಿದಿದ್ದ ಭಾರತಕ್ಕೆ . ಬಂದವನೇ ಧಾವಿಸಿದ್ದ ಆ ಹಳೆಯ ಶಿವಾಲಯದತ್ತ. ಹತ್ತು ವರುಷಗ ಹಿಂದೆ ಹೇಗಿತ್ತೋ ಹಾಗೆ ಇದೆ ದೇವಾಲಯ. ಆದರೆ ದೇವಳದ ಪಕ್ಕದಲ್ಲಿದ್ದ ಗಿಡ ಹೆಮ್ಮರವಾಗಿದೆ. ದೇವಾಲಯದ ಒಳಗಡೆ ಗುಬ್ಬಚ್ಚಿಗಳ ಸುಳಿವಿಲ್ಲ. ಐದರ ಹುಡುಗ ಕಡಲ ತೀರದಲಿ ಭಾರತೀಯ ಮಗುವೊಂದರ ಜೊತೆ ಆಡುತ್ತಿದ್ದರೆ, ಜೊತೆಗಾರ್ತಿ ಅವನಾಟವ ನೋಡುತ್ತಿದ್ದಳು. ನಿಧಾನಕ್ಕೆ ಒಳಗೆ ಅಡಿಯಿಟ್ಟು ಘಂಟೆಯನ್ನೊಮ್ಮೆ ಬಾರಿಸಿ ಪುಳಕಗೊಂಡ ನೀಲಿ ಕಣ್ಣಿನವ. ಆ ಘಂಟಾನಾದಕ್ಕೆ ಹಲವು ನೆನಪುಗಳು ಬಂದು ಮುತ್ತಿದ ಭಾವ ! ಕಣ್ಣುಗಳು ಕಂಬವನ್ನು ನೋಡುತ್ತಿದ್ದರೆ ಮನಸ್ಸು ಹತ್ತು ವರುಷಗಳ ಹಿಂದೆ ಹೋಗಿತ್ತು.




ಹತ್ತು ವರುಷಗಳ ಹಿಂದೆ ಭಾರತದಲ್ಲಿ ಕರಾವಳಿ ತೀರದ ಕಾಲೇಜೊಂದರಲ್ಲಿ ಆಯುರ್ವೇದ ವೈದ್ಯದ ವಿದ್ಯಾರ್ಥಿಯಾಗಿದ್ದ ನೀಲಿ ಕಣ್ಣಿನ ಹುಡುಗ. ಹಲವು ಸಂಸ್ಕೃತಿಗಳ ಬೀಡು ಭಾರತದ ಬೆಡಗು-ಬಿನ್ನಾಣಗಳಿಗೆ, ದಿನ ದಿನವೂ ಹಬ್ಬವಾಚರಿಸುವ ಪರಿಗೆ ಬೆರಗಾಗಿದ್ದ. ಕಾಲೇಜಿನಲ್ಲಿ ತಮಿಳರು, ಮಲಯಾಳಿಗಳು, ಕನ್ನಡಿಗರು, ಹಿಂದಿ ಭಾಷಿಕರು, ಮರಾಠಿ ಜನರೆಲ್ಲರ ತಾಯ್ನಾಡು ಭಾರತವೆಂದು ತಿಳಿದು ಕಂಗಾಲಾಗಿದ್ದ. ತನ್ನ ದೇಶದ ಸ್ನೇಹಿತರ ಬಳಿ ಭಾರತಕ್ಕೆ 'the country of colors' ಎಂದು ಹೇಳಿದ್ದ.


ಸಮಯ ಸಿಕ್ಕಾಗಲೆಲ್ಲ ಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಡುವುದು. ಅಲ್ಲಿನ ಏಕಾಂತವ ಅನುಭವಿಸುತ ಅಲ್ಲೊಂದಿಷ್ಟು ಫೋಟೋ ಕ್ಲಿಕ್ಕಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲೊಂದಾಗಿತ್ತು. ತನ್ನ ದೇಶಕ್ಕೆ ಹೊರಡುವ ಮೊದಲು ಒಂದಿಷ್ಟು ನೆನಪಿನ ಜೊತೆ, ಫೋಟೋಗಳನ್ನು ಒಯ್ಯುವ ಬಯಕೆ ಆತನಿಗೆ.


ಓದು ಮುಗಿಯಲು ಇನ್ನೂ ಆರೇಳು ತಿಂಗಳು ಬಾಕಿಯಿತ್ತು. ಹೀಗೆ ಒಮ್ಮೆ ಅಲೆಯುತ್ತ ಈ ಶಿವಾಲಯದತ್ತ ಬಂದಿದ್ದ. ಸಮುದ್ರ ಮೊರೆತದೊಂದಿಗೆ ಮಿಳಿತಗೊಂಡ ನೀರವ ಮೌನ ಹಿಡಿಸಿತ್ತವನಿಗೆ. ದೇವಾಲಯದ ಕಂಬದ ಮೇಲಿನ ಸುಂದರ ಕೆತ್ತನೆಯನ್ನು ನೋಡುತ್ತಾ ನಿಂತುಬಿಟ್ಟಿದ್ದ. ಅಷ್ಟರಲ್ಲಿ ಇಂಪಾದ ಘಲ್ ಘಲ್ ಶಬ್ದವೊಂದು ಕೇಳಿಬಂದಿತ್ತು, ಹಿಂದಿರುಗಿ ನೋಡಿದರೆ ಉದ್ದನೆಯ ಲಂಗ ತೊಟ್ಟಿರುವ ಸ್ನಿಗ್ಧ ಮುಖದ ಹುಡುಗಿ, ಇವನನ್ನು ನೋಡಿ ಮುಗ್ಧ ನಗೆಯನ್ನು ನಕ್ಕಿದ್ದಳು. ನೋಡುತ್ತಲಿದ್ದುಬಿಟ್ಟ ಅವಳ, ಅವಳ ನಗೆಯ. ಕಂಬದ ಮೇಲಿನ ಕೆತ್ತನೆಯ ವಿಷಯ ಮರೆತುಹೋಗಿತ್ತು ..! ಮುಂದೆ ಸಾಗಿದಳು ಹುಡುಗಿ ಮತ್ತದೇ ಘಲ್ ಘಲ್ ನಾದದೊಂದಿಗೆ. ಇನ್ನೇನು ಫೋಟೋ ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ ಲಂಗವನ್ನು ತುಸುವೇ ಎತ್ತಿ ಮೆಟ್ಟಿಲು ದಾಟುವಾಗ ಅವಳ ನುಣುಪು ಬಿಳಿಯ ಪಾದದ ಮೇಲೆ ದಪ್ಪನೆಯ ಬೆಳ್ಳಿಯ ಆಭರಣವೊಂದು ಕಂಡಿತ್ತು. ಶಬ್ದದ ರಹಸ್ಯ ಬಯಲಾಗಿತ್ತು.


ತನ್ನಷ್ಟಕ್ಕೆ ನಗುತ್ತ ಅವಳ ಹಿಂದೆಯೇ ಸಾಗಿದ ನೀಲಿ ಕಣ್ಣಿನ ಹುಡುಗ ಅವಳನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದ. ಅವಳೂ ಮಾತನಾಡಿದಳು. ದೇವಾಲಯದ ಕುರಿತು ಹೇಳಿದಳು. ತಾನು ಇತಿಹಾಸದ ವಿದ್ಯಾರ್ಥಿನಿ ಎಂದಳು. "ಬೇಡಿಕೆಯನ್ನೆಲ್ಲವನು ಈಡೇರಿಸುವ ಶಿವ ಮಂದಿರವಿದು ಎಂದಿದ್ದಳು". ಅವಳ ಗಾಂಭೀರ್ಯದ ವಿದ್ವತ್ಪೂರ್ಣ ಮಾತಿಗೆ ಬೆರಗಾಗಿದ್ದ ಈ ವಿದೇಶಿ ಹುಡುಗ. ಪೂಜಾರಿಗಳು ಕೊಟ್ಟ ತೀರ್ಥವನ್ನೆಲ್ಲ ಮೂಸಿ ನೋಡಿ ಪೂರ್ತಿಯಾಗಿ ತಲೆಯ ಮೇಲೆ ಸುರುವಿ ಕೊಂಡಿದ್ದ ನೀಲಿ ಕಂಗಳ ಹುಡುಗ, ತಾನೊಬ್ಬ ಭಾರತೀಯ ಎಂಬಂತೆ. ಅವನ ಈ ಪರಿಗೆ ನಕ್ಕಿದ್ದಳು ಉದ್ದ ಲಂಗದ ಹುಡುಗಿ. ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿದ್ದ ಅವಳಲ್ಲಿ ತನ್ನ ಹಣೆಗೂ ಹಚ್ಚು ಎಂದ ನೀಲಿ ಕಂಗಳ ಹುಡುಗನ ಹಣೆಗೆ ಕುಂಕುಮ ಇಟ್ಟಿದ್ದಳು ಹುಡುಗಿ.


ಅಲ್ಲಿಂದ ಆದ ಪರಿಚಯ ಸ್ನೇಹದ ತಿರುವು ಪಡೆಯಲು ಹೆಚ್ಚೇನೂ ಸಮಯ ಹಿಡಿಯಲೇ ಇಲ್ಲ. ಹತ್ತಿರದ ಹಲವು ದೇವಾಲಯಗಳಿಗೆ ಅವಳೊಂದಿಗೆ ಹೋಗಿದ್ದ. ಅಲ್ಲಿಯ ಇತಿಹಾಸ, ಶಿಲ್ಪಕಲೆಯ ಕುರಿತು ಹುಡುಗಿ ವಿವರಿಸುತ್ತಿದ್ದಳು. ಭಾರತದ ಬಗ್ಗೆ ಹಲವು ಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದುಕೊಂಡ ಹುಡುಗ. ಭಾರತೀಯರ ಸಾಮರಸ್ಯ ಹಾಗೂ ಕುಟುಂಬ ಪದ್ಧತಿಯ ಕಂಡು ಅಚ್ಚರಿಗೊಂಡಿದ್ದ. ಅವರಲ್ಲೊಂದು ಸುಂದರ ಸ್ನೇಹವಿತ್ತು ,ಆತ್ಮೀಯತೆ ಇಬ್ಬರಿಗೂ ತಿಳಿಯದೆ ಮೂಡಿತ್ತು. ದೀಪಾವಳಿಯನ್ನು ಅವಳೊಂದಿಗೆ ದೀಪ ಹಚ್ಚಿ ಆಚರಿಸಿದ್ದ. ಹೋಳಿಯಂದು ಅವನ ಕೆನ್ನೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಳು ಹುಡುಗಿ. ಭಾರತೀಯರ ಭಾವುಕತೆಗೆ, ಆಧ್ಯಾತ್ಮ ಜ್ಞಾನಕ್ಕೆ, ಸ್ನೇಹಕ್ಕೆ, ಎಲ್ಲವಕ್ಕೆ ಉದಾಹರಣೆಯಂತಿದ್ದ ಹುಡುಗಿ ಅವನ ಪಾಲಿನ 'ಭಾರತ'ವಾಗಿ ಬಿಟ್ಟಿದ್ದಳು.


'ಪಪ್ಪನಿಗೆ ಡೈವೋರ್ಸ್ ಕೊಟ್ಟು ಬೇರೊಬ್ಬನ ಮದುವೆಯಾದ ತನ್ನ ಅಮ್ಮನ ಮುಂದೆ, ಕುಡುಕ ಗಂಡನ ರಾದ್ಧಾಂತವನ್ನು ಕಣ್ಮುಚ್ಚಿ ಸಹಿಸುವ ಭಾರತೀಯ ಹಳ್ಳಿಯಯೊಂದರ ಹೆಂಗಸಿನ 'ಸಹನೆ ಅದ್ಭುತವಾಗಿ ಕಂಡಿತ್ತವನಿಗೆ. ಭಾರತದ ರಾಜಕೀಯ ಹುಳುಕು, ಲಂಚಾವತಾರದ ಕೊಳಕನ್ನು,ಬಾಲ್ಯ ವಿವಾಹ ಪದ್ಧತಿಯನ್ನು ಅವನ ಮುಂದೆ ಹುಡುಗಿ ಹೇಳಿದಾಗ ತನ್ನ ನೀಲಿ ಕಣ್ಣನ್ನು ಇನ್ನಷ್ಟು ಅರಳಿಸಿದ್ದ ಹುಡುಗ. ಆದರೂ 'ತಾನಿಲ್ಲಿ ಬಂದು ಮಾನವ ಸಂಬಂಧಗಳ ಕುರಿತು ಹೊಸತೊಂದು definition ಕಂಡುಕೊಂಡೆ,ಜೀವನದ ಮೌಲ್ಯಗಳ ಅರಿತೆ, ನನ್ನ ಬಾಳಿಗೆ ಹೊಸತಾದ ತಿರುವೊಂದನ್ನು ಕೊಟ್ಟ ಭಾರತ 'the country of colors ' ಎನ್ನುವುದನು ತನಗೆ ತಿಳಿದಂತೆ ವಿವರಿಸಿದ್ದ.!


ಹಾಗೆ ನೀಲಿ ಕಂಗಳ ಹುಡುಗ ತನ್ನ ದೇಶಕ್ಕೆ ಹೊರಡುವ ದಿನ ಹತ್ತಿರವಾಗುತ್ತಿತು ಒಂದಿಷ್ಟು ಸೂರ್ಯೋದಯ ಚಂದ್ರೋದಯಗಳ ನಡುವೆ. ಅದೇನೋ ಅರ್ಥವಾಗದ ತಳಮಳ ಹುಡುಗನನ್ನು ಆವರಿಸಿತ್ತು. ಅದೇಗೆ ಬಿಟ್ಟು ಹೋಗಲಿ ಈ ದೇಶವನ್ನು, ಸ್ನೇಹಿತರನ್ನು, ಆತ್ಮೀಯ ಸ್ನೇಹಿತೆಯನ್ನು ಎಂಬುದೇ ಕಾಡುತ್ತಿತ್ತು.


ಹೊರಡುವ ದಿನದ ಮುಂಜಾನೆಯದು ದೇವಾಲಯದ ಬಳಿ ಹುಡುಗಿಗಾಗಿ ಕಾದ. ಮತ್ತದೇ ಘಲ್ ಘಲ್ ನಾದ. ಮತ್ತದೇ ಮುಗುಳುನಗೆ, ಅದೇ ಹುಡುಗಿ. ಹುಡುಗನ ನೀಲಿ ಕಂಗಳಲ್ಲಿ ನೀರೂರಿತ್ತು 'ನಿನಗೊಂದಿಷ್ಟು ಹೇಳಬೇಕು ಹುಡುಗೀ' ಎಂದ. ಮತ್ತದೇ ಒಪ್ಪಿಗೆಯ ಮುಗುಳುನಗೆ ಅವಳ ಮೊಗದ ಮೇಲೆ. "ಹೊರಟಿದ್ದೇನೆ ನನ್ನ ತಾಯ್ನಾಡಿಗೆ, ಕನಸಿನ ಲೋಕದಂತೆ ಕಂಡ ನನ್ನ ಭಾರತದ ದೀರ್ಘ ಪ್ರವಾಸದ ಕೊನೆಯ ಚರಣದಲ್ಲಿ ನೀ ಕಂಡದ್ದು ನನಗೆ. ನನ್ನ ಜೀವನಕ್ಕೆ ಹೊಸ ವಸಂತವ ತಂದವಳು ನೀನು. ನಿನ್ನೆಯವರೆಗೂ ನನ್ನಲ್ಲಿ ನಿನ್ನೆಡೆಗೆ ಇದ್ದದ್ದು ಒಂದು ಸ್ನೇಹದ ಭಾವ.ನೀ ಸಿಕ್ಕಾಗಲೆಲ್ಲ ನಾನು ನೋಡುತ್ತಿದ್ದದ್ದು ನಿನ್ನ ಮೊಗ, ಹಾಗೂ ಘಲ್ ಘಲ್ ನಾದದ ನಿನ್ನ ಪಾದ. ನಿನ್ನೆ ರಾತ್ರೆಯ ಚಂದ್ರೋದಯದ ನಂತರ ನನ್ನಲ್ಲಿ ನಾನಿಲ್ಲ. ನಿನ್ನೆಡೆಗೆ ಬೇಡವೆಂದರೂ ಸಾಗುವ ನನ್ನ ಮನಸು, ಬದುಕಿನ ಪಯಣದ ಉದ್ದಕ್ಕೂ ನೀನೆ ಬೇಕೆಂದು ಹೇಳುತ್ತಿದೆ. ನೀ ಒಪ್ಪಿದರೆ ನನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಹಂಬಲ ನನ್ನದು. ಜೊತೆಯಾಗುವಿಯಾ?" ಎಂದು ಸುಮ್ಮನಾದ.


ಒಂದು ಅರ್ಧ ನಿಮಿಷದ ಮೌನವ ಮುರಿದು ಮಾತಾದಳು ಹುಡುಗಿ " ನೀಲಿ ಕಂಗಳ ಹುಡುಗ, ನಿಜ ಹೇಳುತ್ತೇನೆ ಕೇಳು, ಮನದ ಎಲ್ಲೋ ಒಂದು ಮೂಲೆಯಲ್ಲಿ ನಿನ್ನೆಡೆಗೆ ಸ್ನೇಹಕ್ಕಿಂತ ಮಿಗಿಲಾದ ಭಾವವೊಂದಿತ್ತು. ಮೊದಲ ದಿನ ನಿನ್ನ ಹಣೆಗೆ ಕುಂಕುಮ ಇಡುವಾಗ ಕುತೂಹಲವಿತ್ತು. ಸ್ನೇಹಕ್ಕೆ ದೇಶ, ಭಾಷೆ, ಸಂಸ್ಕೃತಿಯ ಹಂಗಿಲ್ಲ. ಒಂದು ಕೋನದಲ್ಲಿ ಪ್ರೀತಿಗೂ ಇದರ ಹಂಗಿಲ್ಲ ಬಿಡು. ಆದರೆ ಸಂಸಾರ ನಡೆಸುವ ವಿಷಯಕ್ಕೆ ಬಂದಾಗ ಮಾತ್ರ ಇದೆಲ್ಲ ಅಡ್ಡ ಬಂದು ಬಿಡುತ್ತದೆ ಅದೂ ವಿಶೇಷವಾಗಿ ಭಾರತೀಯರಿಗೆ. ಕಲ್ಲನ್ನೂ ಪೂಜಿಸುವ ಭಾವಜೀವಿಗಳು ನಾವು. ಕುಟುಂಬವನ್ನು ಬಿಟ್ಟು ಬದುಕಲಾರೆವು. ನಾನು ಭಾರತೀಯ ಹಳ್ಳಿ ಹುಡುಗಿ ಮಾರಾಯ. ಚೌಕಟ್ಟನು ದಾಟಿ ಆಚೆ ಬರಲಾರೆ ನಾನು. ನನ್ನ ಸಂಸ್ಕೃತಿ, ದೇಶಗಳ ಬಿಟ್ಟು ಬದುಕಲಾರೆ. ನಿನ್ನ ದೇಶಕ್ಕೆ ಬಂದು ಅತ್ತ ಅಲ್ಲೂ ಇರಲಾರದ, ಇಲ್ಲೂ ಬರಲಾರದ ಸ್ಥಿತಿಗಿಂತ. ನಿನ್ನ ಮನದಲ್ಲಿ ಒಂದು ನೆನಪಾಗಿ ಇದ್ದು ಬಿಡುವೆ" ಎಂದು ಬಿಟ್ಟಳು. !

"ಸರಿ ನಿನ್ನಿಷ್ಟ ಹುಡುಗಿ" ಎಂದು ಅವಳ ಪಾದವನ್ನೊಮ್ಮೆ ನೋಡಿ ಮುಖವನ್ನು ದಿಟ್ಟಿಸಿದ. ಅವನ ಮನವನ್ನು ಅರಿತವಳಂತೆ ಕಾಲಿನ ಗೆಜ್ಜೆಯೊಂದನ್ನು ಬಿಚ್ಚಿ ಅವನ ಕೈಗಿತ್ತಿದ್ದಳು. ಅವನ ಕಣ್ಣಂಚಿನಿಂದ ಜಾರಿದ ಹನಿಯೊಂದು ಅವನ ಕೈಯಲ್ಲಿದ್ದ ಗೆಜ್ಜೆಯ ಮೇಲೆ ಬಿದ್ದಿತ್ತು. ಅದೇ ಕೊನೆಯ ಬಾರಿ ಎಂಬಂತೆ ಅವಳ ಮುಖ ನೋಡಿ,ನುಸುನಕ್ಕು ಹೊರಟು ಬಿಟ್ಟಿದ್ದ ನೀಲಿ ಕಂಗಳ ಹುಡುಗ. .! ಅವನ ಜೀಬಿನಲ್ಲಿ ಬೆಚ್ಚಗೆ ಕುಳಿತ 'ಒಂಟಿ ಗೆಜ್ಜೆ' ಘಲ್ ಘಲ್ ಎಂದು ಸಣ್ಣಗೆ ಗುನುಗುತ್ತಿತ್ತು. !

ಆ ದಿನ ಅವನು ಡೈರಿಯಲ್ಲಿ ಬರೆದದ್ದಿಷ್ಟು:"ಬಣ್ಣಗಳ ದೇಶದಿಂದ ಮರಳಿದ್ದೇನೆ ಹೊಸ ಹುಡುಗನಾಗಿ.ಒಂದಿಷ್ಟು ನೆನಪು, ಒಡೆದ ಹೃದಯ ಮತ್ತು ಒಂಟಿ ಕಾಲ್ಗೆಜ್ಜೆಗಳೊಂದಿಗೆ."

ಹಾಗೆ ಹಲವು ವಸಂತ-ಶಿಶಿರಗಳು ಉರುಳಿದ್ದವು. ಅವನ ಬದುಕಿನಲ್ಲೂ ಬದಲಾವಣೆಯಾಗಿತ್ತು. ಆಯುರ್ವೇದದ ಪ್ರಸಿದ್ಧ ಯುವ ವೈದ್ಯನಾಗಿದ್ದ ನೀಲಿ ಕಂಗಳ ಹುಡುಗ. ಅವನಲ್ಲಿ ಇನ್ನೂ ಭಾರತೀಯ ಸಂಸ್ಕೃತಿ ಪ್ರತಿಫಲಿಸುತ್ತಿತ್ತು. ಹೊಂಗೂದಲಿನ ಹುಡುಗಿಯೊಬ್ಬಳ ಆಗಮನವಾಗಿತ್ತು ಅವನ ಬದುಕಿನಲ್ಲಿ. ಮದುವೆಯಾಗಿ ಒಂದು ಮಗುವೂ ಆಗಿತ್ತು. ಆದರೂ ಒಂಟಿ ಗೆಜ್ಜೆಯ ನಾದ ಅವನ ಕಿವಿಯಲ್ಲಿ ಅನುರಣಿಸುತ್ತಿತ್ತು .

ಗಡಿಬಿಡಿಯ ಜೀವನದಲ್ಲಿ ಕಳೆದುಹೋದಂತಿದ್ದ ಅವನಿಗೆ, ಮತ್ತೊಮ್ಮೆ ಭಾರತಕ್ಕೆ ಬರಬೇಕೆಂದೆನಿಸಿತ್ತು. ಕುಟುಂಬದೊಂದಿಗೆ ಹೊರಟು ಬಿಟ್ಟಿದ್ದ. ಒಂಟಿ ಗೆಜ್ಜೆಯನ್ನು ಎತ್ತಿ ಜೇಬಿನೊಳಗೆ ಇಟ್ಟಿದ್ದ. ಇಂದು ಮತ್ತದೇ ಶಿವಾಲಯದ ಮುಂದೆ ದಶಕವೊಂದರ ನಂತರ ನಿಂತಿದ್ದವನಿಗೆ ಎಲ್ಲ ನೆನಪಾಯಿತು. ಒಮ್ಮೆ ಜೀಬಲ್ಲಿದ್ದ 'ಒಂಟಿ ಗೆಜ್ಜೆ'ಯನ್ನೊಮ್ಮೆ ಮುಟ್ಟಿ ನೋಡಿದ,ನಕ್ಕು ಬಿಟ್ಟ.

ಅಷ್ಟರಲ್ಲಿ ಹಿಂದಿನಿಂದ ಮತ್ತೆ ತೇಲಿ ಬಂದಿತ್ತು ಘಲ್ ಘಲ್ ನಾದ. ಒಮ್ಮೆ ಹೃದಯ ಸ್ತಭ್ದವಾದ ಅನುಭವ. ನಿಧಾನಕ್ಕೆ ಹಿಂತಿರುಗಿ ನೋಡಿದ. ಅವನ ಐದರ ಹರೆಯದ ಹುಡುಗ ಓಡೋಡಿ ಬರುತ್ತಿದ್ದ . "ಆ ದಡದಂಚಿನ ಪುಟ್ಟ ಹುಡುಗಿಯ ಕಾಲಲ್ಲಿತ್ತು.ಕೇಳಿದೆ ಒಂದನ್ನು ಕೊಟ್ಟು ಬಿಟ್ಟಳು ನನಗೆ. ತುಂಬಾ ಚೆಂದಕಿದೆ. ನಿನ್ನ ಜೇಬಲ್ಲಿ ಇಟ್ಟುಬಿಡು." ಎಂದು ಪುಟ್ಟ ಗೆಜ್ಜೆಯೊಂದನು ಕೊಟ್ಟ. ನೀಲಿ ಕಂಗಳ ವಿದೆಶೀಯನಿಗೆ ಇದು ಕನಸೋ, ನನಸೋ, ಕಾಕತಾಳೀಯವೋ ತಿಳಿಯಲಿಲ್ಲ. ಸುಮ್ಮನೆ ನೋಡಿ ಜೇಬಿನಲ್ಲಿ ಇಟ್ಟ.



ಬಣ್ಣಗಳ ದೇಶ, ಬದುಕಿನ ಹೊಸತನವನ್ನು ಮತ್ತೊಮ್ಮೆ ತಂದು ಕೊಟ್ಟಿತ್ತವನಿಗೆ. ಹೊಸ ಜೀವನೋತ್ಸಾಹದ ಖುಷಿಯಲ್ಲಿ ಸಮುದ್ರದ ದಂಡೆಯಲಿ ಕುಟುಂಬದೊಂದಿಗೆ ನಡೆಯುತ್ತಿದ್ದ ನೀಲಿ ಕಣ್ಣಿನವ . ಜೇಬಿನೊಳಗಿನ ಒಂಟಿ ಗೆಜ್ಜೆಯೂ ಜೊತೆ ಸಿಕ್ಕ ಸಂಭ್ರಮದಲ್ಲಿತ್ತು. ಘಲ್ ಘಲ್.......!

33 comments:

  1. ಘಲ್ಲು ಘಲ್ಲೆನುತಾ ,ಗೆಜ್ಜೆ ಮತ್ತೊಮ್ಮೆ ನಕ್ತಾ?
    ನೀಲಿ ಕಣ್ಣಿನ ಹುಡುಗನ ಎದೆಯಲ್ ,ಒಲವಿನ ಓಕುಳಿಯೋ!!!!

    ಒಲವಿನ ಒಕುಳಿಯೋ ಅಥವಾ ನಲಿವಿನ ಕಚಕುಳಿಯೊ
    ಭಾರತ ವರ್ಷದ ಮಣ್ಣಿನ ಹಿರಿಮೆಯ ಹೇಳುವುದ್ ಈ ಕತೆಯು....

    ಭಾರತದ ಆಕರ್ಷಣೀಯ ಸಂಸ್ಕ್ರತಿಗೆ ಹಿಡಿದ ಕೈಗನ್ನಡಿಯಂತಿದೆ. ಸ್ನೇಹ-ಪ್ರೇಮದ ಪರಿದಿಯನ್ನು ಸಮಾಜದ ಅಭಿವ್ಯಕ್ತಿಗೆ ಹೋಲಿಸಿ,ಹುಡುಗನನ್ನು ನಯವಾಗಿ ತಿರಸ್ಕರಿಸಿ,ಆತನ ಪ್ರೀತಿಯನ್ನೂ ಬದುಕಿಸಿದ ಪರಿ ಅದ್ಭುತ!!!!!!

    ಮೌಲಿಕ ಸಂದೇಶಕ್ಕಾಗಿ ಧನ್ಯವಾದಗಳು..

    ಬನ್ನಿ ನಮ್ಮನೆಗೂ,
    http://chinmaysbhat.blogspot.com

    ReplyDelete
  2. really its very very gud..WRT imagination n WRT writing too..

    ReplyDelete
  3. Hi Soumya,

    tumba chennagiddu kathe.. bannagala desha bharatada kalpane.. neeli kannina hudugana preeti bhavane.. adbhuta.. bannagala vaividyateyannu .. mitiyannu chennagi chitrisidde.. muktayada bhaga hrudaya sparshi.. ondolle kathe .. ista atu

    Pravi

    ReplyDelete
  4. ಸುಂದರವಾಗಿ ಹುಟ್ಟಿರುವ ಭಾವಗಳ ಚೆಂದವಾದ ಅಕ್ಷರಗಳ ರೂಪ

    ReplyDelete
  5. ಅದ್ಭುತ ಕಲ್ಪನೆ... ಇಷ್ಟ ಆಯಿತು...

    ReplyDelete
  6. ಭಾರತದ ದೇಶದ ಸಂಸ್ಕ್ಟುತಿ, ಕಲೆ ಬಣ್ಣಗಳ ಜೊತೆಗೆ ಭಾವನೆಗಳು...ಅದಕ್ಕೆ ತಕ್ಕಂತೆ ಕಲ್ಪನೆ ಚೆಂದದ ಬರಹ...

    ReplyDelete
  7. ವಿನೂತನ ಕಥಾವಸ್ತು, ಕಥೆಯ ನಿರೂಪಣೆಯಲ್ಲಿರುವ ಹೊಸತನ ಮೆಚ್ಚುಗೆಯಾಯಿತು. ಹೀಗೇ ಬರೀತಾ ಇರು..:)

    ReplyDelete
  8. ತುಂಬ ಚಂದದ ಕಥೆ ಸೌಮ್ಯ . ವಿದೇಶೀಯನನ್ನು ನಯವಾಗಿ ತಿರಸ್ಕರಿಸುವುದರ ಹಿಂದಿನ ವಾಸ್ತವಿಕ ಕಾರಣ ಇಷ್ಟವಾಯ್ತು. ಒಳ್ಳೆಯ ನಿರೂಪಣೆ . ಹೀಗೆ ಇನ್ನಷ್ಟು ಕಥೆಗಳು ಹೊರಬರಲಿ.

    ReplyDelete
  9. ಸೌಮ್ಯಾ, ಸುಂದರ ಕಥೆ
    ಹುಡುಗಿಯ ಸಂಸ್ಕೃತಿಗೆ ಹ್ಯಾಟ್ಸ್ ಆಫ್....

    ReplyDelete
  10. Hi ಸೌಮ್ಯಾ, thumba chenage ede ... super full fan agedeve navu eega nimma blog ge ... hats off to u... thumba chennage barethera ... :)

    ReplyDelete
  11. tumba chennagide nin kalpane putti ..

    ReplyDelete
  12. ವಿನೂತನ ಕಥಾಶೈಲಿ ಮನಸ್ಸಿಗೆ ಮುದಗೊಳಿಸಿತು. ಭಾರತೀಯತೆಯ ಸೊಗಡನ್ನು ಸವಿಯಾಗಿ ಹೇಳೋ ಕಥಾವಸ್ತು ಮನಕ್ಕೆ ಆನಂದ ನೀಡಿತು.

    ReplyDelete
  13. ಧನ್ಯವಾದಗಳು ಚಿನ್ಮಯ್, ಸುಂದರವಾದ ಸಾಲುಗಳು :)
    ಕಾಂತೇಶ್, ಪ್ರವೀಣ್, ಮಲ್ಲಿಕಾರ್ಜುನ್, ಶರತ್, ಮಹೇಶ್ ಪ್ರಗತಿಯವರಿಗೂ ಧನ್ಯವಾದಗಳು :)
    thanks a lot shivu sir, Tejakka, sumakka :)

    ReplyDelete
  14. ಧನ್ಯವಾದಗಳು ಜಿತೇಂದ್ರ, ಹರ್ಶು, ವೀರು :)
    thank you Sitaram sir :)

    ReplyDelete
  15. ಚೆನ್ನಾಗಿ ಮೂಡಿಬಂದಿದೆ, ಸರಳ ನಿರೂಪಣೆ- ನೇರ ಕಾರಣಗಳು ಮತ್ತು ನಯವಾಗಿ ತಿರಸ್ಕರಿಸಿದ ಸಂಬಂಧ! ಮುಂದುವರಿಸಿ, ಶುಭಾಶಯಗಳು

    ReplyDelete
  16. ಚೆಂದದ ಕಥೆ..ಭಾವ ಜೀವಿಗಳಿಗೆ ಹತ್ತಿರವಾಗೋ ಹಾಗಿದೆ!

    ನಿನ್ನ ಬರಹದ ವಿಶೇಷತೆ ಅಂದ್ರೆ..ಓದುತ್ತಾ ಇದ್ದ ಹಾಗೆ ನಾನೇ ಅಲ್ಲಿಯ ಪಾತ್ರವೇನೋ ಅಂತ ಭಾಸವಾಗುತ್ತೆ!

    "ಕಲ್ಲನ್ನೂ ಪೂಜಿಸುವ ಭಾವಜೀವಿಗಳು ನಾವು. ಕುಟುಂಬವನ್ನು ಬಿಟ್ಟು ಬದುಕಲಾರೆವು. ನಾನು ಭಾರತೀಯ ಹಳ್ಳಿ ಹುಡುಗಿ ಮಾರಾಯ. ಚೌಕಟ್ಟನು ದಾಟಿ ಆಚೆ ಬರಲಾರೆ ನಾನು. ನನ್ನ ಸಂಸ್ಕೃತಿ, ದೇಶಗಳ ಬಿಟ್ಟು ಬದುಕಲಾರೆ. ನಿನ್ನ ದೇಶಕ್ಕೆ ಬಂದು ಅತ್ತ ಅಲ್ಲೂ ಇರಲಾರದ, ಇಲ್ಲೂ ಬರಲಾರದ ಸ್ಥಿತಿಗಿಂತ. ನಿನ್ನ ಮನದಲ್ಲಿ ಒಂದು ನೆನಪಾಗಿ ಇದ್ದು ಬಿಡುವೆ" ಎಂತಹ ಉತ್ತರ...ಸಮಂಜಸವಾಗಿದೆ, ನಮಗೆ ಸರಿ ಹೊಂದುವಂತಿದೆ!

    ಒಂಟಿ ಕಾಲ್ಗೆಜ್ಜೆಯ ಕಾನ್ಸೆಪ್ಟ್ ಸಖತ್ತಾಗಿದೆ! ನವಿರಾದ ಪ್ರಾಣಯದ ಭಾವನುವ್ಯಕ್ತಿ ಅದು!

    ಕೊನೆಯಲ್ಲಿ ಆ ಉದ್ದ ಲಂಗದ ಹುಡುಗಿ ಸಿಗುತ್ತಾಳೇನೋ ಅಂದ್ಕೊಂಡಿದ್ದೆ..ಹಾಗಾಗ್ಲಿಲ್ಲ!!!

    Keep writing Soumya...

    ReplyDelete
  17. wonderful imagination soumya... ending tumbane ishta aytu.. bharatiya moulyagalannu etti hidididdri.. ennastu kathegalu moodi barali.......

    ReplyDelete
  18. ಸೌಮ್ಯ ನಿಮ್ಮ ಈ ಸುಂದರ ಕಿರು ಕಾಲ್ಪನಿಕ ?/ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ಸಮಯ ಸಿಕ್ಕಾಗಲೆಲ್ಲ ಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಡುವುದು. ಅಲ್ಲಿನ ಏಕಾಂತವ ಅನುಭವಿಸುತ ಅಲ್ಲೊಂದಿಷ್ಟು ಫೋಟೋ ಕ್ಲಿಕ್ಕಿಸುವುದು ಇದು ನನ್ನ ನೆಚ್ಚಿನ ಹವ್ಯಾಸವೂ ಕೂಡ .ಕಥಾ ನಾಯಕನ ತರಹ ಹಲವಾರು ವಿದೇಶಿಯರು ನನಗೆ ಪರಿಚಯವಿದ್ದಾರೆ. ಈ ದೇಶದಲ್ಲಿರುವುದನ್ನು ಮೆಚ್ಚಿಕೊಳ್ಳುವ ಔದಾರ್ಯ ಅವರಲ್ಲಿದೆ. ನಿಮ್ಮ ಕಥೆಗೆ ಜೈ ಹೋ.

    ReplyDelete
  19. thank you V.R Bhat Sir..:)

    ಕೊನೆ ಸ್ವಲ್ಪ unexpected ಇರಲಿ ಅನ್ಸ್ತು ಅದ್ಕೆ :) ಸುಮನಕ್ಕ thank u :)
    thank you Divya and Vani... :)
    ನನ್ನದು ಕಾಲ್ಪನಿಕ ಕಥೆ ಸರ್. ಮೊನ್ನೆ ಒಬ್ಬ ವಿದೇಶಿಯೊಬ್ಬರು ಸಿಕ್ಕಿದ್ದರು . ಅವನ ಒಂದಿಷ್ಟು ಹೇಳಿಕೆಗಳು, ಬರೆಯಲು ಪ್ರೇರೆಪಿಸಿದವು.

    ReplyDelete
  20. Tumba chennagide kathe :) Katheyalli baruva huduga hudugiya bhaavanegalu sundaravada baraha roopa taalide!

    ReplyDelete
  21. ನಿಮ್ಮ ಕಲ್ಪನೆಯ ಕಥೆಗೆ ಹಾಡು ಮತ್ತು ದೃಶ್ಯದ ಜೀವ ತುಂಬಿದಲ್ಲಿ ಒಂದು ಉತ್ತಮ ಆಲ್ಬಮ್ ಸಾಂಗ್ ಮೂಡಿಬರುತ್ತದೆ. ಪ್ರೀತಿಗೆ ಎಲ್ಲೆ ಇಲ್ಲ ಹಾಗೆ ತಿಳಿ ನೀರಿನ ಪ್ರೀತಿಯ ಕೆಳಗೆ ಕೆಸರಿದೆ ಅನ್ನೋ ಒಂದು ಸಣ್ಣ ಸಂದೇಶ ಒಂದರಲ್ಲೇ.

    ReplyDelete
  22. This comment has been removed by the author.

    ReplyDelete
  23. ಆದ್ಭುತವಾದ ಭಾವನಾತ್ಮಕ ಕಥೆ.. ತುಂಬಾ ಇಷ್ಟವಾಯಿತು.. ಎಂಥ ಸ್ಮರಣಾರ್ಹ ಕಥೆ ಬರೆದಿದ್ದೀರಿ! ಧನ್ಯವಾದಗಳು.. ಸಮಯವಾದಾಗ ನನ್ನ blog ಕಡೆಗೂ ಒಮ್ಮೆ ಭೇಟಿ ಕೊಡಿ http://poemsofpradeep.blogspot.com

    ReplyDelete
  24. Good One.... Soumya...

    Good Imagination............!!!
    Keep going Like This.... !!

    ReplyDelete
  25. ಮಧುರ ಕಲ್ಪನೆಗಳನ್ನು ಸುಂದರವಾಗಿ ಸೆರೆಹಿಡಿವ ನಿಮ್ಮ ವಿನೂತನ ಶೈಲಿ ಚೆನ್ನಾಗಿದೆ.
    ಇಷ್ಟವಾಯಿತು.ಅಭಿನಂದನೆಗಳು ಒಂದು ಪ್ರೀತಿಯ ಹಿನ್ನಲೆಯ ಮನಮುಟ್ಟುವ ಕಥೆಗೆ.

    ReplyDelete
  26. ತು೦ಬಾ ಚೆನ್ನಾಗಿದೆ ಸೌಮ್ಯ... ಸದ್ಯ ನಾನು ದೂರದ ಅಮೇರಿಕಾದಲ್ಲಿ ಇದ್ದಿದ್ದಕ್ಕೋ ಏನೋ "ಕುಟುಂಬವನ್ನು ಬಿಟ್ಟು ಬದುಕಲಾರೆವು. ................ನನ್ನ ಸಂಸ್ಕೃತಿ, ದೇಶಗಳ ಬಿಟ್ಟು ಬದುಕಲಾರೆ" ಈ ಸಾಲುಗಳು ಮನಸ್ಸಿಗೆ ತು೦ಬಾ ನಾಟಿದವು. ನೀಲಿ ಕ೦ಗಳ ಹುಡುಗ ಗಲ್ ಗಲ್ ಗೆಜ್ಜೆ ಹುಡುಗಿಯ ನಡುವಿನ ಬಾವನೆಗಳ ಸರಮಾಲೆ ಹೀಗೆ ಮು೦ದುವರಿಯಲಿ ....

    ಶ್ರೀ:-)

    ReplyDelete
  27. ಕಥೆಯ ಸಾಲುಗಳು ಸಾಗಿದಂತೆ,ಗೆಜ್ಜೆಯ ನಾದ ಹೃದಯಕ್ಕೆ ನಾಟಿದೆ.
    ಕಥೆ ಮುಗಿದರೂ ಗೆಜ್ಜೆ ಶಬ್ದ ನಿಂತಿಲ್ಲ.

    ReplyDelete
  28. Thank a lot Kavita, srikanth,pradeep, venkatakrishna, sri and Manju :)

    ReplyDelete
  29. ಸೂಪರ್ ಆಗಿದೆ ಸೌಮ್ಯ......ನೀಲಿ ಕಣ್ಣಿನ ಹುಡುಗ ಮನಸಲ್ಲಿ ಮುದ್ರೆ ಇಟ್ಟು ಹೋದಹಾಗೆ ಅನಿಸುತ್ತಿದೆ.

    ReplyDelete
  30. ಅದ್ಬುತವಾದ ದೇಸಿ ಕಥೆ ನನಗಿಸ್ಟವಾಯಿತು.

    ReplyDelete