Wednesday, December 29, 2010

ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು!'ನಿಮ್ಮ ಬ್ಲಾಗನ್ನು ಪ್ರತಿದಿನವೂ ತೆಗೆದು ನೋಡುತ್ತೇನೆ' 'ಹೊಸ ಲೇಖನವನ್ನು ಪೋಸ್ಟ್ ಮಾಡಿದ ದಿನ ದಯವಿಟ್ಟು ಒಂದು message ಹಾಕಿ' 'ತುಂಬಾ ಸುಂದರವಾದ blog' 'ನೀವು ಪತ್ರಿಕೆಯಲ್ಲಿ ಬರೆಯುತ್ತೀರಾ?' 'ಪ್ರೀತಿಸಿದವರೆಲ್ಲ ಸಿಗಲೇಬೇಕೆ೦ದೇನಿಲ್ಲ ಓದುವಾಗ ಕಣ್ಣು ತುಂಬಿ ಬಂತು' 'ಹೊಸ ಲೇಖನನವುನ್ನು ಅದೇಕೆ ಅಷ್ಟು ಬೇಗ ಮುಗಿಸಿಬಿಟ್ಟಿರಿ ?' ಹೀಗೆ ಸಾಗುತ್ತದೆ ನನ್ನ facebook inbox ನಲ್ಲಿಯ ಮೆಸೇಜುಗಳು. ಖುಷಿಯೂ ಆಗುತ್ತದೆ, ಅಂತಹವುಗಳನ್ನು ಓದುವಾಗ. ಹೊಗಳಿಕೆಗೆ ಖುಷಿಯಾಗುವುದು ಸಾಮಾನ್ಯ ಮನುಷ್ಯರ ಲಕ್ಷಣಗಳಲ್ಲಿ ಒಂದು. ಅಲ್ವಾ? ಇದೆಲ್ಲ ಯಾಕೆ ಹೇಳ್ತಾ ಇದೇನೆ ಅಂದ್ರೆ ನನ್ನ blog ಶುರು ಮಾಡಿ ಇವತ್ತಿಗೆ ಒಂದು ವರ್ಷ ಆತು ನೋಡ್ರಿ.!
ತುಂಬಾ ಜನರು ಕೇಳುತ್ತಿದ್ದರು ಸ್ಪೂರ್ತಿ ಯಾರು? ಬರೆಯಲು ಶುರು ಮಾಡಿದ್ದು ಯಾವಾಗ? ಬಹಳ ಓದುತ್ತೀರಾ? 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು' ಎಂಬ ಹೆಸರು ಯಾಕೆ? ಅವರೆಲ್ಲರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ.

ಒಂದಿಷ್ಟು ವರ್ಷಗಳ ಹಿಂದೆ ಪುಟ್ಟದಾದ ಎರಡು ಜುಟ್ಟು ಕಟ್ಟಿಕೊಂಡು ಆಗಸವ, ತಾರೆಗಳ, ಮೋಡಗಳ ಚಿತ್ತಾರವ ಕುತೂಹಲದ ಕನ್ನಡಕದೊಳಗಿನಿಂದ ನೋಡುತ್ತಿದ್ದ ಹುಡುಗಿ ನಾನಾಗಿದ್ದೆ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಬಾನ ಬೆಳ್ಳಿ ಮೋಡಗಳು ಕೆಂಪು ಕೆಂಪಾದಾಗ ಸಂಸ್ಕೃತ ಹಾಗೂ ಕನ್ನಡ ಕಲಿಸುವ ನನ್ನ 'ಆಯಿ'( ಅಮ್ಮ) "ಪುಟ್ಟಿ ಗಪ್ಪತಿ ಚಾಮಿ ಬಣ್ಣ ಚೆಲ್ಲಿದ್ದ ನೋಡು, ಬಕೆಟ್ ತಗಂಡು ಬಣ್ಣ ತೋಕಿಕಿದ ಆಕಾಶಕ್ಕೆ..! " ಎಂದು ತೋರಿಸಿದಾಗ. ಅದೇನೋ ಸುಳ್ಳು ಸುಳ್ಳೇ ಪದ್ಯಗಳನ್ನು ಹಾಡುತ್ತಿದ್ದೆನಂತೆ ನಾನು ...!

ನನ್ನೊಳಗೆ ಪ್ರಕೃತಿ ಪ್ರೇಮವನ್ನು ಹುಟ್ಟು ಹಾಕಿದವಳು ಹೂವಿನ ಗಿಡಗಳನ್ನು ಅತಿಯಾಗಿ ಪ್ರೀತಿಸುವ ನನ್ನ ಆಯಿ. ಸಾಹಿತ್ಯ ಸ್ಪೂರ್ತಿಯೂ ಅವಳೇ. ನಾಲ್ಕರ ಹರೆಯದಲ್ಲೇ ಸರಾಗವಾಗಿ ಕನ್ನಡವನ್ನು ಓದಿ-ಬರೆದು ಮಾಡುತ್ತಿದ್ದ ನನಗೆ ಪುಸ್ತಕದ ಗೀಳು ಹತ್ತಿಸಿದ್ದವಳೂ ಅವಳೇ. ಮೂರನೇ ತರಗತಿಯಲ್ಲಿ ಇರುವಾಗಲೇ ಅಮ್ಮನ ಬಳಿಯಿದ್ದ 8,9,10 ನೇ ತರಗತಿಗಳ ಕನ್ನಡ ಪುಸ್ತಕಗಳನ್ನು ಓದಿ ಮುಗಿಸಿದ್ದೆ. 'ಜನನಿ ತಾನೇ ಮೊದಲ ಗುರುವು' ನನ್ನ ಪಾಲಿಗೆ ಎಲ್ಲ ರೀತಿಯಲ್ಲೂ ಸತ್ಯ. ಹೌದು! ನಾನು ನನ್ನ ಆಯಿಯ ವಿದ್ಯಾರ್ಥಿನಿ. ಹೈಸ್ಕೂಲಿನ ದಿನಗಳಲ್ಲಿ ನನ್ನ ಆಯಿಯ ಸಂಸ್ಕೃತ,ಕನ್ನಡ ಪಾಠಗಳನ್ನು ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳಿದ್ದೇನೆ. (ಬಹಳ ಉದ್ದಕಿದ್ದೆ ಅದಕ್ಕೆ ಹಿಂದಿನ ಬೆಂಚು). ಅವರು ಕಲಿಸಿದ ಪ್ರತಿಯೊಂದು ಪಾಠವೂ ನೆನಪಿದೆ. ಅವರು ಬೂಟ್ ಪಾಲಿಶ್,ನ್ಯಾಯದ ಬಾಗಿಲಲ್ಲಿ, ಪಾಠಗಳನ್ನು ಕಲಿಸುವಾಗ ಇತರ ವಿದ್ಯಾರ್ಥಿಗಳ ಜೊತೆಗೆ ನನ್ನ ಕಣ್ಣ೦ಚು ಒದ್ದೆಯಾಗಿತ್ತು. ನಾಣಿ, ಕೊಡೆಯ ವಿಚಾರ, ಕಲಿಸುವಾಗ ನಕ್ಕು ನಕ್ಕು ಸುಸ್ತಾಗಿದ್ದೆ. ನಾನು ಬಹುವಾಗಿ ಮೆಚ್ಚುವ ಶಿಕ್ಷಕರಲ್ಲಿ ನನ್ನ ಆಯಿಯೂ ಒಬ್ಬಳು.ಅವಳೊಬ್ಬ ಅಪರೂಪದ ಶಿಕ್ಷಕಿ.!


ಒಂದನೇ ತರಗತಿಗೆ ಹೋಗುವಾಗಿನಿದ ನನ್ನ ಮೆಚ್ಚಿನ ಪಾಕ್ಷಿಕ, ಚಿಣ್ಣರ ಪತ್ರಿಕೆ 'ಬಾಲಮಂಗಳ'ವನ್ನು ಓದುತ್ತಿದ್ದೆ. ಡಿಂಗ, ಲಂಬೋದರ, ಇಲಿ ಮತ್ತು ಬೆಕ್ಕು, ಫಕ್ರು, ನನ್ನ ಗೆಳೆಯರಾಗಿದ್ದರು.ನನ್ನ imagination power ಜಾಸ್ತಿಯಾದದ್ದು, ಬಾಲಮಂಗಳ ಕಾರ್ಟೂನುಗಳನ್ನು, ಕಥೆಗಳನ್ನು ಅದರಲ್ಲಿಯ ಪಾತ್ರವಾಗಿ ಓದುತ್ತಿದ್ದೆನಲ್ಲ ಅದರಿಂದ ! ತನ್ನ ತೊದಲು ನುಡಿಯಲ್ಲಿ "ಅಕ್ಕಾ ....ಬಾಲಮಂಗಲ ಬಂತು ದಿಂಗ ಓದೇ.......ದೊದ್ದಕೆ ಓದೇ.." ಎಂದು ಅರಚುತ್ತಲೇ ನನ್ನ ಪಕ್ಕ ಬಂದು ಕೂರುತ್ತಿದ್ದ ನನ್ನ ತಮ್ಮನಿಗೆ, ದೊಡ್ಡದಾಗಿ ಧ್ವನಿಯ ಏರಿಳಿತದ ಜೊತೆಗೆ ಡಿಂಗ,ಶಕ್ತಿಮದ್ದು ಓದಿ ಹೇಳುತ್ತಿದ್ದೆ. 'ಪುಟ್ಟು ಪಟಾಕಿ', ಚಿತ್ರಬರಹ, ಪದಬಂಧಗಳಲ್ಲಿ ಬಹುಮಾನ ಬಂದಾಗ ಕುಣಿದಾಡಿದ್ದೆ ಹಾರಡಿದ್ದೆ, ಥೇಟ್ ನಮ್ಮನೆಯ ಎದುರಿನ ಗಿಡದಲ್ಲಿ ಬರುವ ಉದ್ದನೆಯ ಬಿಳಿಯ ಬಾಲದ ಹಕ್ಕಿ ಮರಿಯಂತೆ...!ನನ್ನ ಬಳಿ ಹದಿನೈದು ವರುಷಗಳ ಬಾಲಮಂಗಳದ ಬೃಹತ್ ಸಂಗ್ರಹವಿದೆ. 'ಪಪ್ಪ' ಅದನ್ನು ರದ್ದಿಯವನಿಗೆ ಕೊಡುತ್ತೇನೆ ಎಂದರೆ ಸಾಕು,ಈಗಲೂ ನನ್ನ ಕಣ್ಣಲ್ಲಿ ಜೋಗ ಜಿನುಗುತ್ತದೆ. ಈಗಲೂ ಅಪರೂಪಕ್ಕೆ ಅದನ್ನು ಕೊಂಡು ಓದುತ್ತೇನೆ. ಒಂದು ಬಗೆಯ ಆತ್ಮೀಯ ಸಂಬಂಧವದು.!

ಇನ್ನೂ ಸರಿಯಾಗಿ ನೆನಪಿದೆ ನನಗೆ, ಏಳನೇ ತರಗತಿಯ ಅಕ್ಟೋಬರ್ ರಜೆಯದು. ಅಚಾನಕ್ ಆಗಿ ನನ್ನ ಕೈಗೆ ಹಳೆಯ ಸಿಲೆಬಸ್ಸಿನ ಹತ್ತನೇ ತರಗತಿಯ ಕನ್ನಡ-೨ ಪುಸ್ತಕ ಸಿಕ್ಕಿತ್ತು. 'ಗಿರಿ-ಶಿಖರ, ವಿಜ್ಞಾನ-ಶಿಖರ, ಹಾಗೂ ಆಧ್ಯಾತ್ಮ-ಶಿಖರಗಳೆಂದು ತೇನಸಿಂಗ,ಜಗದೀಶಚಂದ್ರ ಬೋಸ್ ಹಾಗೂ ಅರವಿಂದ್ ಘೋಷ್ ಈ ಮೂವರ Biography ಆಗಿತ್ತದು. ಒಂದೇ ದಿನದಲ್ಲಿ ಓದಿ ಮುಗಿಸಿದ್ದೆ. ನನ್ನ ಪುಸ್ತಕ ಸಂಗ್ರಹದಲ್ಲಿ ಇರುವ ಅತ್ಯಮೂಲ್ಯ ಪುಸ್ತಕಗಳಲ್ಲಿ ಅದೂ ಒಂದು.ವರ್ಷಕ್ಕೆ ಒಮ್ಮೆಯಾದರೂ ಅದನ್ನು ಓದುತ್ತೇನೆ, ಅದೇ ಹಳೆಯ ಕುತೂಹಲದಿಂದ,ಪ್ರೀತಿಯಿಂದ..!ವೀನ್-ಡುಪ್ಲಾ ಜೋಡಿ ಹಿಮದಲ್ಲಿ ಕಳೆದು ಹೋಗುವಾಗ ಕಂಗಳು ಈಗಲೂ ಹನಿಗೂಡುತ್ತವೆ. ಅರವಿಂದರು ಧ್ಯಾನದಲ್ಲಿರುವಾಗ ನೆಲವ ಬಿಟ್ಟು ಒಂದು ಅಡಿ ಮೇಲೆ ಏಳುವುದನ್ನು ಓದುವಾಗ ಇನ್ನೂ ಮೈ ರೋಮಾಂಚನವಾಗುತ್ತದೆ. ಇಡೀ ಜೀವನಕ್ಕೆ ಸಾಕಾಗುವಷ್ಟು ಜೀವನ ಪ್ರೀತಿಯನ್ನು ತುಂಬಿಕೊಡುವ ತಾಕತ್ತು ಆ ಒಂದು ಪುಸ್ತಕಕ್ಕಿದೆ.!
ನನ್ನ ಹದಿಮೂರನೆಯ ವಯಸ್ಸಿನಲ್ಲಿ ಚುಟುಕಗಳನ್ನು ಬರೆಯಲು ಆರಂಭಿಸಿದ್ದು. ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಚುಟುಕಗಳ ಪ್ರೇರಣೆಯಿಂದ. ಆಯಿಯ ಪ್ರೋತ್ಸಾಹದಿಂದ.ಆಗ ನನ್ನ ಅಂತ್ಯ ಪ್ರಾಸಗಳ ಜೋಡಣೆ ಹೀಗಿತ್ತು ನೋಡಿ :
ನಮ್ಮೂರ ರಸ್ತೇಲಿ ನೂರಾರು ಹೊಂಡ
ಬೀಳುವರು ಜನ ಕುಡಿಯದಿದ್ದರೂ ಹೆಂಡ
ಇಲ್ಲಿ ವಾಹನವನೋಡಿಸುವುದೊಂದು ಮೋಜು
ಒಮ್ಮೆ ಬಿದ್ದರೆ ಮಾತ್ರ ಗತಿ ಗ್ಯಾರೇಜು..!
ಒಮ್ಮೆ ಬಂದಿದ್ದರೆ ಗಾಂಧೀಜಿ ಈಗ
ಏರುತ್ತಿತ್ತು ಅವರ ಹೃದಯ ಬಡಿತದ ವೇಗ
ಭಾರತದ ಇಂದಿನ ಸ್ಥಿತಿಯನ್ನು ಕಂಡು
ಹೊಡೆದುಕೊಳ್ಳುತ್ತಿದ್ದರು ಅವರೇ ತಲೆಗೆ ಗುಂಡು..!
ಕಂಡ ವಿಷಯಗಳ ಕುರಿತೆಲ್ಲ ನಾಲ್ಕು ಸಾಲುಗಳ ಪ್ರಾಸ ಪದಗಳನ್ನು ಜೋಡಿಸುತ್ತಿದ್ದೆ. ನಂತರ ನಾನು ವಿಜ್ಞಾನ-ತಂತ್ರಜ್ಞಾನಗಳ ವಿದ್ಯಾರ್ಥಿನಿ. ಸಾಹಿತ್ಯ-ವಿಜ್ಞಾನ ಎರಡರಲ್ಲೂ ಸಮಾನ ಆಸಕ್ತಿಯಿದೆ. ನಂತರ ಚುಕ್ಕಿ-ತಾರೆ,ಚಂದ್ರಮರ ಕುರಿತು ಕವನಗಳು, ಕಾಲೇಜಿನಲ್ಲಿ ಆಶು ಕವನ ಸ್ಪರ್ಧೆಯಲ್ಲಿ ಕವನಗಳನ್ನು ರಚಿಸುತ್ತಿದ್ದೆ. ಕುಮಟಾದಿಂದ ಮಂಗಳೂರಿಗೆ ಪಯಣಿಸುವಾಗ ಬೇಸರ ಕಳೆಯಲು ಒಂದಿಷ್ಟು ಸಾಲುಗಳನ್ನು ಗೀಚುತ್ತಿದ್ದೆ.


ಜಯಂತ್ ಕಾಯ್ಕಿಣಿಯವರ ತೂಫಾನ್ ಮೇಲ್, ಬೊಗಸೆಯಲ್ಲಿಮಳೆಹನಿ, ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸು, ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಇವುಗಳನ್ನು ಬಿಟ್ಟರೆ ಪುಸ್ತಕಗಳನ್ನು ಓದಿದ್ದು ಕಡಿಮೆ. ಆದರೆ ಪತ್ರಿಕೆಗಳನ್ನು ಓದುವ ಗೀಳು ಮೊದಲಿನಿಂದಲೂ ಇದೆ. ಸುಧಾ ತರಂಗಗಳಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬಿಟ್ಟರೆ ಇನ್ನೂ ಯಾವ ಕನ್ನಡ ಕಾದಂಬರಿಯನ್ನೂ ಓದಿಲ್ಲ.
orkut ಸೇರಿದಮೇಲೆ 'ರಾಕೇಶ್ ಹೆಗಡೆ' ಒಡೆತನದ 'ಕವನ ಪ್ರಪಂಚ' ಎಂಬ ಕಮ್ಯೂನಿಟಿಯಲ್ಲಿ ಬರೆದ ಕವನಗಳನ್ನು ಹಾಕುತ್ತಿದ್ದೆ.ಬಹಳ ಜನ blog ಶುರು ಮಾಡು ಎಂದರೂ, ತಲೆ ಕೆಡಿಸಿಕೊಂಡಿರಲಿಲ್ಲ.orkut ನಲ್ಲಿ ಪರಿಚಯವಾದ 'ಮನಸಿನ ಮಾತುಗಳು' blog ಒಡತಿ 'ದಿವ್ಯಾ ಹೆಗಡೆ' ನೀನೇಕೆ blog ಶುರು ಮಾಡಬಾರದು? ಎಂದು ಕೇಳಿದಾಗ,ಹೌದೆನಿಸಿತು. ಗೆಳೆಯನೊಬ್ಬ blog ಲೋಕಕ್ಕೆ ಪರಿಚಯಿಸಿದ. ಅವರಿಬ್ಬರಿಗೂ ಮನಃ ಪೂರ್ವಕವಾದ ಧನ್ಯವಾದಗಳು. ಇಲ್ಲಿ ನೋಡಿದರೆ ಅಬ್ಬಬ್ಬಾ .!!! ಎನಿಸುವಷ್ಟು ಕನ್ನಡ ಬ್ಲಾಗುಗಳು..! ಒಂದಕ್ಕಿಂತ ಒಂದು ಸುಂದರ .ಕತ್ತಲೆಯಲ್ಲಿ ಕಣ್ಣು ಬಿಟ್ಟ ಅನುಭವ. ನಿಧಾನಕ್ಕೆ ಅರಿತುಕೊಂಡೆ blog ಲೋಕದ 'ಅ ಆ ಇ ಈ'ಗಳನ್ನು.'ಇಲ್ಲೇ ಮಳೆಯಾಗಿದೆ ಇಂದು' ಎಂಬ ಒಂದು ಲೇಖನವನ್ನು ನನ್ನ ಬ್ಲಾಗಿನ ಮೊದಲ ಪೋಸ್ಟ್ ಮಾಡುತ್ತಿದ್ದೆ ಕಳೆದ ಡಿಸೆಂಬರಿನ ಇದೇ ದಿನ...!
ಪುಟ್ಟ ಪುಟ್ಟ ಕವನಗಳನ್ನು ಬರೆಯುತ್ತಿದ್ದ 'ಪುಟ್ಟಿ' ಲೇಖನಗಳನ್ನು ಬರೆಯಲು ಕಲಿತಿದ್ದು ಬ್ಲಾಗಿನಿಂದಲೇ.! ಬರಹಗಳಿಗೆ ಸಿಕ್ಕ ಅದ್ಭುತ ಎನ್ನುವ ಪ್ರತಿಕ್ರಿಯೆ ನನ್ನನ್ನು ಬರೆಯಲು ಪ್ರಚೋದಿಸಿತು. ಸುಮಕ್ಕ,ತೇಜಕ್ಕ ,ಅಜಾದ್ ಸರ್,ದಿನಕರ್ ಸರ್, ಸುಮನಕ್ಕ, ದಿವ್ಯಾ,ಪ್ರಕಾಶಣ್ಣ,ವಾಣಿ,ಶರತ್,ವನಿತಕ್ಕ,ಸೀತಾರಾಮ್ ಸರ್,ತರುಣ್,ಪ್ರವೀಣ್,ದಿಲೀಪ್,ಪ್ರಗತಿ,ಶ್ರೀ ಇನ್ನೂ ಹಲವಾರು ಜನ ನನ್ನ ತಿದ್ದಿದರು, ಪ್ರೋತ್ಸಾಹಿಸಿದರು.ಅವರಿಗೆಲ್ಲ ನನ್ನ ಮನಃ ಪೂರ್ವಕ ಕೃತಜ್ಞತೆಗಳು. ೫-೬ ಕಥೆಗಳು,ಚಿತ್ರಬರೆಹಗಳು,ಸಾಲುಗಳು,ಕವನಗಳು,ಲೇಖನಗಳು,ಹನಿಗಳು,ಪತ್ರ ಬರೆಹ,ವ್ಯಕ್ತಿಪರಿಚಯ,ಲಹರಿ,ಕಥನ ಕವನ ಹೀಗೆ ಸಾಗುತ್ತದೆ ನನ್ನ ಬ್ಲಾಗು.
ಹುಡುಗಿಯರ ಜೊತೆ ಅಡುಗೆಯಾಟ ಹಾಗೆ ಹುಡುಗರ ಜೊತೆ ಕ್ರಿಕೆಟ್ ಎರಡನ್ನೂ ಆಡುತ್ತ ಬೆಳೆದ ನನಗೆ ಜೀವನದ ಬಗ್ಗೆ ಹುಚ್ಚು ಪ್ರೀತಿಯಿದೆ. ನನ್ನದೇ ಆದ ಜಗತ್ತಿದೆ..I am crazy about life. ಕಂಡ ಎಲ್ಲ ಕನಸುಗಳೂ ನನಸಾಗಲೇ ಬೇಕೆಂದಿಲ್ಲ. ಕನಸ ಕಾಣುವುದನ್ನು ಅದರೆಡೆಗೆ ಸಾಗುವುದನ್ನು ಮಾತ್ರ ನಿಲ್ಲಿಸಲಾರೆ.ಅದಕ್ಕೆ ನನ್ನ ಬ್ಲಾಗಿನ ಹೆಸರು 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು'.
ಒಂದು ವರ್ಷದಲ್ಲಿ 79 ಎಳೆಗಳ ಗೂಡನ್ನು ಹೆಣೆದಾಗಿದೆ, ಕನ್ನಡ ಬ್ಲಾಗ್ ಲೋಕವೆಂಬ ಬೃಹತ್ ಮರದ ಆಶ್ರಯದಲ್ಲಿ.
ಈ ಬ್ಲಾಗ್ ಜಗತ್ತು ವಿಶಿಷ್ಟವಾದ ಜ್ಞಾನವನ್ನು,ಮಾಹಿತಿಗಳನ್ನು ನೀಡಿದೆ. ಅನೇಕ ಸ್ನೇಹಿತರನ್ನು ಕೊಟ್ಟಿದೆ, ಬೆಂಗಳೂರಿಗೆ ಬಂದರೆ ನೆಂಟರ ಮನೆಗಿಂತ, ಸ್ನೇಹಿತರ ಮನೆಯಲ್ಲೇ ಉಳಿಯುವಷ್ಟು ಆತ್ಮೀಯವೆನಿಸುವ ಬೆಚ್ಚನೆಯ ಸಂಬಂಧಗಳನ್ನು ಕೊಟ್ಟಿದೆ. ಪ್ರೀತಿಯನ್ನು ಕೊಟ್ಟಿದೆ. ಸಂಬಂಧದ ನಾಜುಕುತನವನ್ನು ಹೇಳಿದೆ. ಜೀವನದ ಅತ್ಯಮೂಲ್ಯ ಪಾಠಗಳನ್ನು ಕಲಿಸಿದೆ. ಇನ್ನೂ ಏನು ಬಯಸಲಿ ಹೇಳಿ ಇದಕ್ಕಿಂತ ಹೆಚ್ಚಾಗಿ ?

ಜೀವನವನ್ನು ಪುಟ್ಟ ಹುಡುಗಿಯಂತೆ ನೋಡಿ, ಅನುಭವಿಸಿ ಬರೆಯುತ್ತೆನಂತೆ ನಾನು. ಜೀವನದ ಕೆಲವೊಂದು ಸತ್ಯಗಳ ಅನುಭವವೇ ಇಲ್ಲದಂತೆ. !ಕೆಲವು ದಿನಗಳ ಹಿಂದೆ ಅಕ್ಕನಂಥಿರುವ ಗೆಳತಿಯೊಬ್ಬಳು ನನ್ನ face book wall ಮೇಲೆ ಹೀಗೆ ಬರೆದಿದ್ದಳು "ಹಾಯ್, ಸೌಮ್ಯ, ನಿಮ್ಮ ಬ್ಲಾಗ್ ನೋಡ್ತಾ ಇದ್ದೆ. ತುಂಬಾ ಚೆನ್ನಾಗಿದೆ. ಎಸ್ಟೋ ಕಡೆ ನನ್ನ ಬಾವನೆಗಳಿಗೆ ಅಕ್ಷರ ಕೊಟ್ಟಿದ್ದೀರ ಅನ್ನಿಸುತ್ತೆ. ಬದುಕನ್ನು ನೋಡುವ, ಪ್ರೀತಿಸುವ, ಕಳಕಲಿಸುವ ಪರಿ ವಯಸ್ಸಿನ ಜೊತೆಗೆ ಬದಲಾಗುತ್ತೆ, ಆದರೆ ಬದುಕುವ ಹುಮ್ಮಸ್ಸು, ಭಾವಿಸುವ ರೀತಿ ಮಾತ್ರ ಎಂದೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ಜೀವನದ ಕೆಲವೊಂದು ಸತ್ಯಗಳು ನಿನಗೆ ಸೋಕದಿರಲಿ.!"
ಕಣ್ಣಂಚಿನ ಹನಿಯೊಂದಿಗೆ ಮುಖದಲ್ಲೊಂದು ಮುಗುಳುನಗೆ ಹಾಯಿದೋಣಿಯಂತೆ ಹಾದು ಹೋಗಿತ್ತು .ಇಂಥಹ ಒಂದು ಕ್ಷಣಗಳೇ ಅಲ್ಲವೇ ಜೀವನದಲ್ಲಿ ಅತ್ಯಮೂಲ್ಯ ಎನಿಸುವುದು..! ಇಂಥ ಒಂದು ನಿಷ್ಕಲ್ಮಶ ಹಾರೈಕೆಯನ್ನೇ ಅಲ್ಲವೇ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಂದ ಬಯಸುವುದು ?ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ನನ್ನ ಮೇಲೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ.

Monday, December 20, 2010

ಹುಡುಗೀರ ದುನಿಯಾ ......


ನನಗೆ ಗೊತ್ತು ತಲೆ ಬರಹವನ್ನು ನೋಡಿದೊಡನೆಯೇ ನೀವೆಲ್ಲ ಏನೇನು ಕಲ್ಪನೆ ಮಾಡಿಕೊಂಡಿರ್ತೀರ ಅಂತ. ! ಹುಡುಗೀರು ಎಂದೊಡನೆ ಒಂದು ಹತ್ತು ವರುಷಗಳ ಹಿಂದೆ ನೆನಪಿಗೆ ಬರುತ್ತಿದ್ದದ್ದು ಕಾಲ್ಗೆಜ್ಜೆಯ 'ಘಲ್ ಘಲ್',ಉದ್ದದ ಲಂಗ, ಒಂದಿಷ್ಟು ನಾಚಿಕೆಯ ರಂಗು,ಕಿಲ ಕಿಲ ನಗು. ಆದರೆ ಈಗ ? ಪರಿಸ್ಥಿತಿ ಬದಲಾಗಿದೆ ಕಣ್ರೀ low waist ಪ್ಯಾಂಟ್, ಕೃತಕವಾಗಿ straightning ಮಾಡಿಸಿದ ಕೂದಲು, ತುಟಿಯ ತುಂಬಾ ಘಾಡ ವರ್ಣದ lipstick,ಕೃತಕ ನಗುವನ್ನು ಇಟ್ಟುಕೊಂಡು, ತರಹೇವಾರಿ ಉಂಗುರಗಳನ್ನು ಸಿಕ್ಕಿಸಿಕೊಂಡು ತಾವೇನು ಯಾವ ಹುಡುಗರಿಗೆ ಕಮ್ಮಿ ಎನುತ್ತ ಧಂ ಎಳೆಯೋ ಹುಡುಗೀರು. ಪಬ್ಬು-ಕ್ಲಬ್ಬುಗಳಲ್ಲಿ ಮಿನಿ, ಮೈಕ್ರೋ ಮಿನಿಯನ್ನು ಸಿಕ್ಕಿಸಿಕೊಂಡು ನಶೆಯೇರಿ ನಿಶೆಯಲ್ಲಿ ಗಾಡಿ ಚಲಾಯಿಸೋ ಹುಡುಗೀರು. ಏನೇ ಮಾಡಲಿ ಏನೇ ಇರಲಿ ಇದು ಹುಡುಗೀರ ದುನಿಯಾ.


ಇಲ್ಲಿ ನಾನು ಯಾರನ್ನು ದೂಷಿಸುತ್ತಿಲ್ಲ. ಯಾರೆಡೆಗೂ ಬೆರಳು ತೋರಿಸುತ್ತಿಲ್ಲ, ಒಬ್ಬಳು ಹುಡುಗಿಯಾಗಿ ಹುಡುಗಿಯರ ಜಗತ್ತಿನ ಕುರಿತು ನನಗೆ ತಿಳಿದಿದ್ದನ್ನು,ಕಂಡಿದ್ದನ್ನು, ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಾನೂ ಕಾಲೇಜಿನ ಹುಡುಗಿಯರ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಕಂಡಿದ್ದೇನೆ. ಪಕ್ಕದಲ್ಲಿ ಕುಳಿತ ಸ್ವಾತಿಯ ಬಳಿ 'ಅವಳ ಸಲ್ವಾರ್ ಚೆಂದಕಿದೆ ' ಎಂದಿದ್ದೇನೆ. ಉದ್ದ ಕೂದಲಿನ ಹುಡುಗಿಯ ಕಂಡು 'ನನ್ನದೂ ಮೊದಲು ಹೀಗೆ ಇತ್ತು' ಎಂದು ಹೇಳುತ್ತಾ ಈಗಿನ 'ಜುಟ್ಟು' ಕಟ್ಟಿದ್ದೇನೆ. ಕಾಲೇಜಿನ ಆ ಹೊಸ chocolate boy ಲುಕ್ಕಿನ ಹುಡುಗ ಯಾರೆಂದು ಪಿಸುಗುಟ್ಟಿದ್ದೇನೆ. ಹುಡುಗಿಯರ ಜಗತ್ತಿನಲ್ಲಿ ಹುಡುಗಿಯಾಗಿ ಕಂಡದ್ದನ್ನು ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನ.

ಹುಡುಗಿಯರದೊಂದು ಭಾರಿ ಕುತೂಹಲಕಾರಿ ಜಗತ್ತು. ' ಮಾಫಿಯ' ಜಗತ್ತಿಗಿಂತ ಒಂದು ಕೈ ಮೆಲೆಂದೇ ಹೇಳಬಹುದೇನೊ. ನೀವು ಒಂದು ಟ್ರೈನಲ್ಲಿ ಹೊರಟಿರುತ್ತೀರಿ ರೈಲಿನಲ್ಲಿ ನಿಮ್ಮ ಬೋಗಿಯೊಳಗೆ ಒಂದು ೫-೬ ಜನ ಹುಡುಗಿಯರ ಗುಂಪು ಇರುತ್ತದೆ. ಹಾಗೆ ಒಂದು ಹುಡುಗರ ಗುಂಪು ಇದೆ. ಆದರೆ ಆ ಹುಡುಗಿಯರ ಗುಂಪಿಗೇ 'the force of atraction' ಜಾಸ್ತಿ ಇರುತ್ತದೆ. ಆ ಹುಡುಗಿಯರ ಗುಂಪಿನಲ್ಲಿ ಸಿಗರೇಟಿನ ಹೊಗೆಯಿಲ್ಲ, ಹೆಂಡದ ನಶೆಯೂ ಇಲ್ಲ. ಬೊಬ್ಬೆ-ಗಲಾಟೆಯೂ ಇಲ್ಲ. ಆದರೆ ಮಿಂಚು ಕೋಲುಗಳ ನೆನಪಿಸುವ ಒಂದೆಳೆಯ ಕಾಡಿಗೆ ಕಂಗಳ ಹೊಳಪಿದೆ. ಕಿಲ ಕಿಲ ನಗುವಿನ ಕಚಕುಳಿಯಿದೆ.ಒಂದಿಷ್ಟು ಗಾಸಿಪ್ ಇದೆ.ಚಾಂಚಲ್ಯದ ಚಮಕ್ ಇದೆ.

ಮಾನವ ಜೀವಿಗಳಲ್ಲಿ ಗಂಡು -ಹೆಣ್ಣು ಎರಡೂ ಬ್ರಹ್ಮ ಸೃಷ್ಟಿ ಎಂದುಕೊಂಡರೂ.ಈ ಹೆಣ್ಣು ಎಂಬುದನ್ನು ಆ ಬ್ರಹ್ಮ ಬಹಳ ಜತನದಿಂದ , ಸೃಷ್ಟಿಸಿರಬೇಕು. !ಇತಿಹಾಸದಲ್ಲಿ ಬಹು ಚರ್ಚಿತ ವಿಷಯಗಳಲ್ಲಿ ಮುಖ್ಯವಾಗಿರುವುದೇ 'ಧರ್ಮ' ಮತ್ತು 'ಹೆಣ್ಣು'. ಹೆಣ್ಣಿಗಾಗಿ ನಡೆದ ಯುದ್ಧಗಳು ಹಲವು. ಅವಳ ಒಂದು ಕಣ್ಣೋಟ ಹುಡುಗರ ನಿದ್ದೆಗೆಡಿಸಬಹುದು. ಪ್ರೀತಿಯ ಮಾತು ಹುಚ್ಚನಾಗಿಸಬಹುದು.
ಹೆಣ್ಣಿನ ಕುರಿತು ಕವನ ಬರೆಯದ ಕವಿಯೇ ಇಲ್ಲ ಎನ್ನಬಹುದೇನೋ. ಈ ಚಿತ್ರಕಾರರ ಪಾಡೂ ಹಾಗೆ. the world of modeling ನಲ್ಲೂ ಇದೇ ಹಾಡು. ಎಲ್ಲ ವಸ್ತ್ರ ವಿನ್ಯಾಸಗಾರರ,ಮಾರ್ಕೆಟಿಂಗ್ ಗುರುಗಳ ಮುಖ್ಯ ಗುರಿ ಹೆಣ್ಣೇ. ನೋಡಿ ಬೇಕಾದರೆ miss world, miss universe, miss asia-pacific, miss earth,
Miss International, ಹೀಗೆ ಸಾಗುತ್ತದೆ ನೋಡಿ. ಅದೇ Mr.World ಸ್ಪರ್ಧೆ ಹೇಳ ಹೆಸರಿಲ್ಲದೆ ನಡೆದಿರುತ್ತದೆ. ಯಾರು ಗೆದ್ದರೋ ಏನೋ ಗೆದ್ದವರಿಗೂ ನೆನಪಿರುತ್ತದೆಯೋ ಇಲ್ಲವೋ .!

ಸಾನಿಯಾ,ಪ್ರಿಯಾಂಕ , ಕರೀನಾ, ಐಶ್, ಕತ್ರೀನಾ,ಕರೀನಾ ಇವರೆಲ್ಲರ hair style ಬದಲಾದರೂ ಸುದ್ದಿ, ಅವರು ತೆಳ್ಳಗಾದರೂ ಸುದ್ದಿ,ದಪ್ಪಗಾದರೂ ಸುದ್ದಿ. Celebrities ಗಳ ಮಾತು ಬಿಡಿ. ಕಾಲೇಜಿನ ಬ್ಯೂಟಿ ಕ್ವೀನ್ ಗಳ ಸುತ್ತಲೂ ಗಾಸಿಪ್ ಇದ್ದೆ ಇರುತ್ತದೆ. 'she changed her boy friend. she changed her hair style, ಅಯ್ಯೋ ಈ ಸರಣಿಗೆ ಕೊನೆಯೇ ಇಲ್ಲ ಹಿಜುಬುಲ್ ಮುಜಾಹಿದ್ದೀನ್ ಸಂಘಟನೆಗಳ ಸರಣಿ ಬಾಂಬ್ ಸ್ಫೋಟದಂತೆ.

 ಯಾಕೆ ಹೀಗೆ.ಈ ಹುಡುಗಿಯರಲ್ಲಿ ಅಂಥದ್ದೇನಿದೆ ? ಇರುವ ಹುಡುಗಿಯರೆಲ್ಲರೂ ಸುರ ಸುಂದರಿಯರೋ ? ಖಂಡಿತ ಅಲ್ಲ ಮಾರಾಯ್ರೆ. ಸೌಂದರ್ಯವೊಂದೆ ಅವರ ಬಂಡವಾಳ ಅಲ್ಲ. ಅಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ, ಕುತೂಹಲ-ಮನೋನಿಗ್ರಹ, ಪ್ರೀತಿ ವಾತ್ಸಲ್ಯದ ಸೆಳೆತವಿದೆ, ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ.ನಾಜೂಕು-ನಯವಿದೆ. ನಗು-ಅಳುವಿನ ಹುಚ್ಚು ಹೊಳೆಯಿದೆ. ಚಾಣಾಕ್ಷತೆ-ಪೆದ್ದುತನ ಎರಡೂ ಸೇರಿಕೊಂಡಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. ಈ ಹುಡುಗಿಯರ ಬಗ್ಗೆ ಜಗತ್ತಿನ ಜನರೆಲ್ಲಾ ಒಂದೊಂದು Ph.D ಪ್ರಬಂಧ ಮಂಡಿಸಬಹುದೇನೋ. ಒಂದೊಂದು ಹುಡುಗಿಯೂ ಒಂದೊಂದು ಅದ್ಭುತ ಪ್ರಬಂಧಕ್ಕೆ ವಸ್ತುವಾಗಬಹುದು.

ಒಮ್ಮೆ ಒಬ್ಬ ಹುಡುಗ ತಪಸ್ಸಿಗೆ ಕುಳಿತನಂತೆ, ಬೆಂಗಳೂರಿನ ಅದ್ಯಾವ್ದೋ ಬಹುಮಹಡಿ ಕಟ್ಟಡದ ಬಳಿ. ಅಂತೂ ದೇವರು ಪ್ರತ್ಯಕ್ಷನಾಗಿಯೂ ಬಿಟ್ಟನಂತೆ, ದೇವರು ತನ್ನ ಮಾಮೂಲಿ ವರಸೆಯಲ್ಲಿ "ಅದೇನು ವರ ಬೇಕು ಕೇಳೋ ಹುಡುಗ "ಎಂದಾಗ, ಈ ಪುಣ್ಯಾತ್ಮ " ನನಗೆ ಬೆಂಗಳೂರಿನ traffic ನಿಂದ ಬಚಾವು ಮಾಡು " ಎಂದುಬಿಟ್ಟ. ಆಗ ದೇವರು " ಸಾಧ್ಯವಿಲ್ಲ. ಬೇರೆ ಕೇಳು " ಎಂದಾಗ ನಮ್ಮ ಹುಡುಗ "ನನ್ನ ಗರ್ಲ್ ಫ್ರೆಂಡ್ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಸು ಸಾಕು ಎಂದ." ಭಗವಂತ ಕಂಗಾಲಾಗಿ ಮೊದಲಿಗೆ ಕೇಳಿದ್ದನ್ನೇ ಮಾಡುತ್ತೇನೆ ಮಾರಾಯ ಎಂದು ಬೆಂಗಳೂರಿಗೆ 'Metro' ಕೊಟ್ಟ .! 'ಮೀನಿನ ಹೆಜ್ಜೆಯನ್ನಾದರೂ ಹುಡುಕಬಲ್ಲೆ, ಆದರೆ ಹುಡುಗಿಯರ ಮನಸನ್ನು ಅರಿಯಲಾರೆ ' ಎಂದು ಆ ಭಗವಂತನೇ ಹೇಳಿದ್ದನಂತೆ.

ಹುಡುಗಿಯರ ಬಣ್ಣಗಳು :
ಎಲ್ಲರೂ ಹೇಳುವಂತೆ ಹುಡುಗಿಯೆಂದರೆ 'ಅಸೂಯೆ' .! ಇರಬಹುದೇನೋ ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಈ 'ಅಸೂಯೆ' ಜಾಸ್ತಿ ಎಂದೇ ಹೇಳಬೇಕು. ನೀವೆಲ್ಲ ಅನುಭವಿಸಿರಬಹುದು ಅಥವಾ ನೋಡಿರಬಹುದು, ನಿಮ್ಮೆಲ್ಲರ ಶಾಲಾ ದಿನಗಳಲ್ಲಿ ಪರೀಕ್ಷೆಗಳಲ್ಲಿ ತನಗಿಂತ ಒಂದು ಮಾರ್ಕು ಜಾಸ್ತಿ ಬಂದವರ ಪೇಪರ್ ತೆಗೆದು ನೋಡುತ್ತಾ. ಗುಸು ಗುಸು ಪಿಸು ಪಿಸು ಎನ್ನುತ್ತಾ. ಮಾಸ್ತರರಿಗೆ ತನಗಿಂತಾ 'ಆ ಹುಡುಗಿಯ 'ಕಂಡರೆ ಜಾಸ್ತಿ ಇಷ್ಟವೆಂದು ಗೊಣಗುತ್ತ.ಕಣ್ಣಲ್ಲಿ ಜೋಗ ಹರಿಸುತ್ತಿದ್ದ ಹುಡುಗಿಯರನ್ನು. ಈ ಹುಡುಗಿಯರ ಕಂಗಳು ಉತ್ತರ ಭಾರತದ ಜೀವನದಿಗಳಂತೆ!


ಸಿನಿಮಾದಲ್ಲಿ ಒಂದು ಪಾತ್ರದೊಳಗೆ ಪ್ರವೇಶ ಮಾಡಿ ಆ ಸಿನಿಮಾವನ್ನು ಅನುಭವಿಸುವುದರಲ್ಲೂ ಈ ಹುಡುಗಿಯರದ್ದೇ ಮೇಲುಗೈ. ಸಿನಿಮಾವನ್ನು ಭಾವುಕರಾಗಿ ನೋಡುತ್ತಾರವರು. कुच कुच होता है ಸಿನಿಮಾದಲ್ಲಿ ಎಲ್ಲರನ್ನು ಬಿಟ್ಟು ಊರಿಗೆ ಹೊರಟಿರುವ ಕಾಜೋಲ್ ತನ್ನ ಕೆಂಪು ದುಪ್ಪಟ್ಟವನ್ನು ಗಾಳಿಯಲಿ ಹಾರಿ ಬಿಟ್ಟು ರೈಲಿನಲ್ಲಿ ಕೈಬೀಸುತ್ತ ಸಾಗುವಾಗ intermission ಬಿದ್ದಿರುತ್ತದೆ ಆಗಲೇ ಹುಡುಗಿಗೆ ಅರಿವಾಗುತ್ತದೆ ಕಣ್ಣಂಚು ಒದ್ದೆಯಾದದ್ದು. ಹಾಗೆ ತಾನು ಇಪ್ಪತ್ನಾಲ್ಕನೇ ಸಲ ಈ ಫಿಲಂ ನೋಡುತ್ತಾ ಇರುವುದು ಎಂದು .!
ಹುಡುಗಿಯರ ಹಾಸ್ಟೆಲಿನಲ್ಲಿ ಇದ್ದು (ಹುಡುಗರ ಹಾಸ್ಟೆಲಿನಲ್ಲಿ ನನಗೆ ಎಂಟ್ರಿ ಇಲ್ಲವಲ್ಲ ಹ್ಹ ಹ್ಹ ಹ್ಹಾ )ಹುಡುಗಿಯರನ್ನು ಕಂಡಿದ್ದೇನೆ. ಹುಡುಗಿಯರ ಹಾಸ್ಟೆಲಿನ ಎದುರಿನ ರಸ್ತೆಯೆಂದರೆ ಹಾಗೆ, ದಾರಿ ಹೋಕರ ಕಣ್ಣು ಎದುರಿಗಿಂತಲೂ ಜಾಸ್ತಿ ಹಾಸ್ಟೆಲಿನ ಕಡೆಗೆ ನೆಟ್ಟಿರುತ್ತದೆ. ಹುಡುಗನೊಬ್ಬ ಒಂಟಿಯಾಗಿ ಹೋಗುತಿದ್ದರೆ ಸಾಕು ಹಾಸ್ಟೆಲಿನ ಕಿಟಕಿ, ಟೆರೇಸಿನಿಂದಲೇ ಕೇಕೆ, commentsಗಳ ಸರಮಾಲೆ ಹುಡುಗನ ಕೊರಳಿಗೆ ಬಿದ್ದಿರುತ್ತದೆ.

ಸಿನಿಮಾ ತಾರೆಯರನ್ನು ದೂರುತ್ತಲೇ ಅವರ ಅನುಕರಣೆ ಮಾಡುವುದು ಹುಡುಗಿಯರ ಮೂಲ ಗುಣದಲ್ಲೊಂದು. ನಾನು ಹಾಸ್ಟೆಲಿನಲ್ಲಿದ್ದಾಗ , ಮೂಗಿನ ಬೊಟ್ಟು,ಹಾಗು ಕಾಲ್ಗೆಜ್ಜೆಗಳನ್ನು ಬಂಧನದ ಸಂಕೇತವೆಂದು ಕಿತ್ತೆಸೆದಿದ್ದ, ಮಲೆನಾಡಿನ ಮೂಲದ ಬೆಡಗಿಯೊಬ್ಬಳು.ಸಾನಿಯಾಳನ್ನು ನೋಡುತ್ತಲೇ,ಅವಳನ್ನು ಬಯ್ಯುತಲೇ ಅವಳ ಥರದ ಮೂಗುತಿಯನ್ನು ತನ್ನದಾಗಿಸಿಕೊಂಡಳು.


'ಹೆಣ್ಣಿಗೆ ಹೆಣ್ಣೇ ಶತ್ರು' ಎಂದು ಹಿರಿಯರು ಹೇಳಿರಬಹುದು. ಆದರೆ ಅದೇ ಹುಡುಗಿ ಒಬ್ಬ ಹುಡುಗನ ಆತ್ಮೀಯ ಸ್ನೇಹಿತೆಯಾಗಬಲ್ಲಳು. ಅವನನ್ನು ಒಬ್ಬ ಹುಡುಗನಿಗಿಂತ ಜಾಸ್ತಿಯಾಗಿ ಅರಿತುಕೊಳ್ಳಬಲ್ಲಳು. ಪ್ರೀತಿಯನ್ನು ಕಳೆದುಕೊಂಡು ನಲುಗುತ್ತಿರುವ ಹುಡುಗನಿಗೆ,ಗೆಳೆಯನ ಜೊತೆಗಿನ ಬಾರಲ್ಲಿಯ ಹೆಂಡದ ನಶೆಗಿಂತ, ಆತ್ಮೀಯ ಗೆಳತಿಯ ಭುಜ ಅದೆಷ್ಟೋ ಹಿತವಾಗಿರುತ್ತದೆ.!

ಹುಡುಗರ ವಿಷಯದಲ್ಲಾದರೆ ಒಮ್ಮೆ ವೈಮನಸ್ಸು ಬಂದು ಕಿತ್ತಾಡಿದರೆಂದರೆ ಆ ಸಂಬಂಧ ಅಲ್ಲಿಗೆ ಮುಗಿಯಿತೆಂತಲೇ ಅರ್ಥ. ಆದರೆ ಹುಡುಗಿಯರ ವಿಷಯದಲ್ಲಿ ಹಾಗೆ ಎಂದೂ ಯೋಚಿಸಬೇಡಿ. ಜಗಳವಾಡುತ್ತಲೇ ಆತ್ಮೀಯರಾಗಿಬಿಡುವ ಬೇತಾಳಗಳು ಈ ಹುಡುಗಿಯರು.! ಇಡೀದಿನ ಕಿತ್ತಾಡುವ ಹುಡುಗಿಯರೇ ಬಿಟ್ಟಿರದ ಸ್ನೇಹಿತೆಯರಾಗಿಬಿಡುತ್ತಾರೆ.!


 ಸಾಮಾನ್ಯವಾಗಿ ಹುಡುಗರು ಧರಿಸುವ ಧಿರಿಸುಗಳು ಎನಿಸಿಕೊಂಡ pant, T-shirt, formal pants, shirts ಅಲ್ಲದೆ, long skirts, mini skirts micro-mini skirts,shorts, ಸಲ್ವಾರ್, ಸೀರೆ,ಸುಮಾರಾಗಿ ಲುಂಗಿಯನ್ನು ಹೋಲುವ wrap-around, ಇನ್ನೂ ಏನೇನೋ ಹೆಸರು ಇಲ್ಲದ ಉಡುಗೆಗಳು ಹುಡುಗಿಯರ ಸ್ವತ್ತು. ಅದೇ ಒಂದು ಹುಡುಗ ಸೀರೆ ಸುತ್ತಿಕೊಂಡು ಹೊರಟರೆ ಜನ ಏನೆಂದು ಆಡಿಕೊಳ್ಳುವರು ಎಂದು ನಿಮಗೆ ಗೊತ್ತೇ ಇದೇ ಅಲ್ವಾ?ಈ ಹುಡುಗಿಯರು ಏನೇ ಧರಿಸಿದರೂ ಅದೊಂದು ಹೊಸ ಫ್ಯಾಶನ್ ಆಗಿಬಿಡುತ್ತದೆ. !


ಹುಡುಗಿಯರ ನಾಜೂಕುತನ ಅವರಲ್ಲಷ್ಟೇ ಅಲ್ಲ, ಅವರ ನಡಿಗೆಯಲ್ಲಷ್ಟೇ ಅಲ್ಲ, ಅವರು ಸೆಲೆಕ್ಟ್ ಮಾಡುವ gift, ಕಾರ್ಡ್ ಗಳಲ್ಲಿಯೂ ಎದ್ದು ತೋರುತ್ತದೆ. ಅಲ್ಲೊಂದು uniqueness ಇರುತ್ತದೆ ಇದು ಹುಡುಗಿಯದ್ದೇ selection ಎಂದು ತಿಳಿದೇ ಬಿಡುತ್ತದೆ.!

 ಹುಡುಗಿ ಅಲಂಕಾರಪ್ರಿಯೆ. ಒಂದು ರೀತಿಯಲ್ಲಿ 'ಅಲಂಕಾರ' ಹುಡುಗಿಯರ ಮೂಲಭೂತ ಹಕ್ಕುಗಳಲ್ಲಿ ಒಂದು.!'ಅದಾವ ಕನ್ನಡಿಯೂ ಒಂದು ಹುಡುಗಿಯನ್ನು "ನೀ ಸುಂದರಿಯಲ್ಲ ಹುಡುಗಿ.." ಎಂದು ಹೇಳೇ ಇಲ್ಲವಂತೆ'. ಅದಕ್ಕೆ ಕನ್ನಡಿಯ ಮುಂದೆ ಚೂರು ಜಾಸ್ತಿ ಹೊತ್ತು ಕೂರುತ್ತಾರೆ.ಎಲ್ಲರ ಗಮನ ತನ್ನ ಮೇಲಿರಬೇಕು ಎನ್ನುವುದು ಹುಡುಗಿಯರ ಸಹಜ ತುಡಿತ. ಅದಕ್ಕೆಂದೇ ತನ್ನ ಇಷ್ಟದ ಜೊತೆಗೆ, ಪರರ ಮೆಚ್ಚುಗೆಯನ್ನು ಗಳಿಸಲು ತನ್ನ ತಾನು ಅಲಂಕರಿಸಿಕೊಳ್ಳುತ್ತಾರೆ. !

ಪಟಪಟನೆ ಮಾತನಾಡಿ ಮೊದಲ ನೋಟಕ್ಕೆ 'ವಾಚಾಳಿ','ಗಂಡು ಬೀರಿ' ಎನ್ನಿಸಿಕೊಳ್ಳುವ ಹುಡುಗಿಯರದು ಸಾಮಾನ್ಯವಾಗಿ ನಿಷ್ಕಲ್ಮಶ ಹೃದಯ. ಆದರೆ 'Silent water & silent woman are very deep & Dangerous'. ತಣ್ಣಗಿರುವ, ಮೌನಿ ಹುಡುಗಿಯ ಧ್ಯಾನ ಎತ್ತ ಕಡೆಗಿದೆ ಎಂದು ಹೇಳುವುದು, ಯೋಚನಾ ಲಹರಿಯ ಜಾಡು ಹಿಡಿಯುವುದು ಭಾರಿ ಕಷ್ಟ.!

ಹುಡುಗರೇ ನಿಮಗೊಂದು ಕಿವಿಮಾತು ಅಪ್ಪಿ ತಪ್ಪಿಯೂ ನಿಮ್ಮ ಹುಡುಗಿಯ ಬಳಿ ಇನ್ನೊಬ್ಬ ಹುಡುಗಿಯನ್ನು ಹೊಗಳ ಬೇಡಿ. ಕೊನೆಗೆ film actressಗಳನ್ನೂ ಹೋಗಳಬೇಡಿ. ಹೊಗಳಿದಿರೋ ನಿಮಗೆ ಗ್ರಹಚಾರ ಕಾದಿದೆ ಎಂದೇ ಅರ್ಥ. ಅಸೂಯೆಯ ಕೋಳಿಯು ಅಲ್ಲೇ ಮೊಟ್ಟೆ ಇಟ್ಟೇ ಬಿಡುತ್ತದೆ. ಆ ದಿನವೇ ನಿಮ್ಮ ಹತ್ತಿರ ರಂಪಾಟ, ಜಗಳಾಟವಾಡಿ,ಮಾತು ಬಿಟ್ಟು ನಿಮ್ಮ ತಲೆ ಪೂರ್ತಿಯಾಗಿ ಕೆಟ್ಟು ಹೋಗುವಂತೆ ಮಾಡಿ ಬಿಡುತ್ತಾರೆ. ತನ್ನ ಮುಂದೆ ಪರ ಹುಡುಗಿಯ ಹೊಗಳಿಕೆಯನ್ನು ಅವರೆಂದೂ ಸಹಿಸರು. ಅವರ ಮುಂದೆ film actressಗಳನ್ನೋ,ಕಾಲೇಜಿನ beauty-queen ಗಳನ್ನೋ ತೆಗಳಿಬಿಡಿ, ನಿಮ್ಮ ಹುಡುಗಿ ಫುಲ್ ಖುಷ್ ಆಗದಿದ್ದರೆ ಹೇಳಿ.!


ಜೀವನದ ಅದಾವುದೋ ಭಾಗದಲ್ಲಿ ನಿಮಗೆ ಅನಿಸಿರಬಹುದು 'ಈ ಹುಡುಗಿಯರು ಧನಪಿಶಾಚಿಗಳು', ಹಣ ಇರುವವನ ಹಿಂದೆ ಬೀಳುವವರು ಎಂದು. ಇರಬಹುದು ಬದುಕಿನ safty ವಿಚಾರದಲ್ಲೂ ಹುಡುಗಿಯರು ಮುಂದು. ಭವಿಷ್ಯದ ಕನಸುಗಳನ್ನು ವಾಸ್ತವದ ತಳಹದಿ ಮೇಲೆ ಹೆಣೆಯುತ್ತಲೇ ಇರುತ್ತಾರೆ ಈ ಮಿಂಚು ಕಂಗಳ ಹುಡುಗಿಯರು .

ಹುಟ್ಟಿದ ಮನೆಯ ಬೆಸುಗೆ, ಬಾಂಧವ್ಯಕ್ಕೆ , ಮರ್ಯಾದೆಗೆ ಬೆಲೆಕೊಟ್ಟು .. ಮನಸಾರೆ ಪ್ರೀತಿಸಿದ ಹುಡುಗನ ಬಿಟ್ಟು ಇನ್ನೊಬ್ಬನ ತಾಳಿಗೆ ಕೊರಳು ಒಡ್ಡಿಕೊಳ್ಳುವ ಹುಡುಗಿ ಆ ಕ್ಷಣಕ್ಕೆ cheat ಅಂತ ಅನಿಸಬಹುದು..
ಹುಡುಗರಲ್ಲಿ ಆಕಾಂಕ್ಷೆ , ಛಲ ಜಾಸ್ತಿ ಇದ್ರೆ .. ಹುಡುಗೀರು ಹುಟ್ತಾ ಕನಸುಗಾರ್ತಿಯರು..ಭಾವನೆಗಳನ್ನು ಮೂಟೆಕಟ್ಟಿ , ಕನಸುಗಳಿಗೆ ಕೊಳ್ಳಿ ಇಟ್ಟು ಸಪ್ತಪದಿ ತುಳಿಯುವ ಹುಡುಗಿಯ ಮದುವೆಗೆ ಹೋಗಿಬನ್ನಿ ನಿಮಗೂ ಅರ್ಥ ಆಗತ್ತೆ.. ಪಕ್ಕದಲ್ಲಿ ಮುಂದಿನ ಜೀವನದ ಒಡೆಯ... ಎದುರಲ್ಲಿ ಮನದ ಪ್ರೀತಿಯನ್ನೆಲ್ಲಾ ಧಾರೆಯೆರೆದು ಪ್ರೀತಿಸಿಕೊಂಡ ಹುಡುಗ .. ಇದ್ರೆ..?!! ಜೀವನದ ಒಂದು ಹಂತದಲ್ಲಿ ಅವಳ ಗಂಡನಲ್ಲೂ ಒಂದು levelಗೆ ಅವಳ 'ಹುಡುಗನನ್ನ ' ಹುಡುಕೇ ಹುಡುಕುತ್ತಾಳೆ... !

ನಿಮ್ಮನ್ನ ಪ್ರೀತಿಸೋವಾಗ ನಿಮ್ಮ ಡಬಲ್ ಪ್ರೀತಿ ಕೊಟ್ಟಿರ್ತಾಳೆ .. ಅದ್ಕೆ ಅವಳು unforgetable ..!! ಅವಳಲ್ಲಿ ಪ್ರೀತಿಸೋ ಅಮ್ಮ ಇರ್ತಾಳೆ .. ಕಾಲೆಳೆಯೋ ತಂಗಿ ಇರ್ತಾಳೆ.. care ಮಾಡೋ ಅಕ್ಕ ಇರ್ತಾಳೆ .. ಬೇಕಾದಾಗ guide ಮಾಡೋ friend ಇರ್ತಾಳೆ ...ಅದ್ಕೆ ಬಿಟ್ಟು ಹೋಗ್ತಾಳೆ ಅನ್ನೋ ಭಯ ಇದ್ರೂ.. ಗೊತ್ತಿದ್ರೂ ನೀವು ಪ್ರೀತಿಸ್ಬಿಡ್ತೀರಾ ... ಅಲ್ವಾ???

ಹುಡುಗರಿಗಿಂತ ಮಾನಸಿಕವಾಗಿ ಹುಡುಗಿಯರೇ ಗಟ್ಟಿಗಿತ್ತಿಯರು, ಅಥವಾ ನಿಸರ್ಗ, ಅಥವಾ ಪರಿಸ್ಥಿತಿ ಅವರನ್ನು ಹಾಗೆ ಮಾಡಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಇನ್ನೊಬ್ಬನ ಜೊತೆ ಹಾಯಾಗಿ ಹಿಂದಿನದೆಲ್ಲ ಮರೆತು (?) ಇದ್ದುಬಿಡುತ್ತಾರೆ. ಅಥವಾ ಎಂಥದ್ದೋ ಸನ್ನಿವೇಶಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇದು ಅರಿವಾಗಿಯೇ ನಮ್ಮ ಯೋಗರಾಜ ಭಟ್ಟರು "ಹೆಣ್ಣಮಕ್ಳೆ ಸ್ಟ್ರಾಂಗು ಗುರು" ಅಂದು ಹೇಳಿದ್ದಿರಬೇಕು .!

ಜಗತ್ತಿನ ಮನೋವಿಜ್ನಾನಿಗಳೆಲ್ಲ ಇನ್ನೊಂದು P.Hd ಬರೆಯುವಷ್ಟಿರೋ ವಿಷಯದ ಬಗ್ಗೆ 0.01% ಬರೆದಿದ್ದೇನೆ. ಓದಿ ನೋಡಿ 'ನಮ್ಮ ದುನಿಯಾ' ಹೇಗಿದೆ ಹೇಳಿ .


ಓರ್ವ ಹುಡುಗಿಯನ್ನು ಆತ್ಮೀಯ ಸ್ನೇಹಿತೆಯಾಗಿ,ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿ. ಆಗ ನಿಮಗೆ ನಿರ್ಮಲ ಸ್ನೇಹದ ಜೊತೆಗೆ, ಪ್ರೀತಿಯ ಉದ್ದಗಲಗಳ ದರ್ಶನವಾಗುತ್ತದೆ. ಜಗತ್ತಿನ ಜೀವಂತ ವಿಸ್ಮಯಗಳ ದರ್ಶನವಾಗುತ್ತದೆ.!Saturday, December 4, 2010

ಮಾಗಿಯ ಚಿತ್ರಗಳು ಹಾಗೂ ಸಾಲುಗಳು

ಮಳೆಗಾಲ ಮುಗಿದು ಇದೀಗ ಮಾಗಿಯ ಕಾಲ ಬಂದಾಗಿದೆ. ಬದಲಾಗುತ್ತಲೇ ಇರುವ ಪ್ರಕೃತಿ, ಅದರ ಸೌಂದರ್ಯವನ್ನು ಅನುಭವಿಸಿಯೇ ನೋಡಬೇಕು. ಈ ಮಾಗಿಯ ಕಾಲವೇ ಹೀಗೆ ಒಣಗಾಳಿ, ಮುಂಜಾನೆಯ ಮಂಜು, ಇಬ್ಬನಿ, ಒಡೆಯುವ ಕಾಲ ಹಿಮ್ಮಡಿ ,ಬಾನಲ್ಲಿ ಚಿಂದಿ ಚಿಂದಿ ಮೋಡಗಳ ಜಾತ್ರೆ, ತಡವಾಗಿ ಉದಯಿಸುವ ಸೂರ್ಯ, ಶರತ್ಕಾಲದ ಬೆಳದಿಂಗಳು, ಕಾಡು ಹೂಗಳು, ಅದರ ಪರಿಮಳ, ಹಳದಿ ಎಳೆಗಳು, ಪಶ್ಚಿಮದ ಸೂರ್ಯ ಪಡುವಣದ ಮನೆಯನ್ನು ತಲುಪಿದೊಡನೆ ಒಕಳಿಯಾಡುವ ಮೋಡಗಳು ,ಜೇನ್ಮಳೆಯಂತೆ ಸುರಿಯುವ ಬೆಳದಿಂಗಳು ಹೀಗೆ ಮಾಗಿಯ ಜೈತ್ರ ಯಾತ್ರೆ ಮುಂದುವರಿಯುತ್ತದೆ.


ಮೊನ್ನೆ ಹೊಳೆದಂಡೆಯಂಚಿನಲಿ ಹೋಗಿ ಕುಳಿತಿದ್ದಾಗ,ರಾತ್ರಿ ಆರಾಮ ಕುರ್ಚಿಯಲಿ ಕುಳಿತು ಬೆಳದಿಂಗಳನು ಸವಿಯುತ್ತಿದ್ದಾಗ ಕೆಲವು ಸಾಲುಗಳು ಹಾದು ಹೋದವು. ಕೆಲವು ಸಾಲುಗಳು ಮಾಗಿಯ ಮೂಡಣದ ಗಾಳಿಗೆ ಉದುರುವ ಹಾರಾಡುವ ತರಗೆಲೆಗಳಂತೆ ಕಾಣಬಹುದು. ಹಾಗೆ ನಾನು ಸೆರೆ ಹಿಡಿದ ಮಾಗಿಯ ಕೆಲವು ಚಿತ್ರಗಳನ್ನೂ ಹಾಕಿದ್ದೇನೆ ಓದಿ ನೋಡಿ ಹೇಗಿದೆ ಹೇಳಿ.**ಬಾನಲ್ಲಿ ಬಿಳಿಯ ಮೋಡಗಳ ಮೆರವಣಿಗೆ. ಕ್ಷಣಕ್ಕೂ ಬದಲಾಗುವ ಚಿತ್ರಪಟಗಳು.


**ತಿಳಿನೀರ ಹೊಳೆಯಲ್ಲಿ ತನ್ನ ಬಿಂಬವ ನೋಡಿ ಮುಗುಳುನಗುತ್ತಾ ಸಾಗುವ ಹಾಯಿದೋಣಿಗೆ ತೀರವ ಸೇರುವ ಹಂಬಲ.


**ಹಗಲಲ್ಲಿ ಯಾರೋ ಹತ್ತಿಯ ಮೂಟೆಯನ್ನು ಬಾನಿಗೆಸೆದಂತೆ ಚೆಲ್ಲಾಪಿಲ್ಲಿ ಮೋಡಗಳು. ಅದೇ ಆಗಸವು ರಾತ್ರಿಯಾಗುತ್ತಿದ್ದಂತೆ ಅಲೆಗಳ ಅಬ್ಬರವೇ ಇಲ್ಲದ ಶಾಂತ ಸಮುದ್ರ.

**ಇನ್ನೆರಡು ದಿನಗಳಲಿ ಭೂಮಿಗೆ ಬೀಳಲಿರುವ ಹಳದಿ ಎಲೆಯೊಂದಕ್ಕೆ ಬಂಗಾರದ ಬಣ್ಣ ಬಳಿದ ಸಂಭ್ರಮದಲ್ಲಿದ್ದ ಸೂರ್ಯ.


**ಮುಂಜಾವಿನ ಹೊಂಬಿಸಿಲಿಗೆ ವಜ್ರದ ಹರಳುಗಳಂತೆ ಹೊಳೆವ, ಜೇಡರ ಬಲೆಯ ಮೇಲಿನ ಇಬ್ಬನಿ ಹನಿಗಳು.


**ಯಾವುದೊ ಒಬ್ಬ fashion designerನ ಹೊಸ ಸೀರೆಯ ವಿನ್ಯಾಸದಂತೆ ಕಾಣುವ ಬಾನಿಗೆ ಮೋಡ ಹಾಗೂ ನಕ್ಷತ್ರಗಳ ಕಸೂತಿ, ಚಂದಿರನ ಬೆಳದಿಂಗಳ ಜರತಾರಿ.


**ಬಾನಲ್ಲಿ ಮಿನುಗುತ್ತ ಸಾಗಿದ ವಿಮಾನವೊಂದರ ಕಂಡ ಹುಡುಗಿಯೊಬ್ಬಳು ಸ್ತ್ರೀ ವಿಮೋಚನೆಯ ಕವನ ಬರೆದಳು. ವಿಮಾನದ ಗಗನಸಖಿಯ ಕಣ್ಣ ಹನಿ ಕರಗಿ ಕೆನ್ನೆಯ ಮೇಲೆ ಕರೆಯಷ್ಟೇ ಉಳಿದಿತ್ತು.


**ನಕ್ಷತ್ರಗಳ ಮೀರುವ ಹಂಬಲದಲ್ಲಿದ್ದವಳಿಗೆ ಅವಳ ಪ್ರೀತಿ ಉಲ್ಕೆಯಾಗಿ ಉರಿದದ್ದು ತಿಳಿಯಲೇ ಇಲ್ಲ .


**ಹುಡುಗನ ಭುಜಕ್ಕೊರಗಿ ಕುಳಿತ ಹುಡುಗಿಯ ಕಂಡ ಬಾನ ಚಂದಿರ ರೋಹಿಣಿಯ ನೋಡಿ ಮುಗುಳ್ನಕ್ಕ !


**ರಾತ್ರಿಯಲಿ ಮಿನುಗುತ್ತ ಹೊರಟ ವಿಮಾನವೊಂದರ ಕಂಡ ಮೋಡದ ಮರೆಯಲ್ಲಿನ ಚುಕ್ಕಿಯ ಹೊಟ್ಟೆಯೊಳಗೆ ತಣ್ಣನೆಯ ಹೊಟ್ಟೆಕಿಚ್ಚು.


**ಹುಣ್ಣಿಮೆಯ ಚಂದಿರನಲ್ಲಿ ಹುಡುಗಿಯ ಮೊಗ ಕಂಡವನಿಗೆ, ಅಮಾವಾಸ್ಯೆಯ ರಾತ್ರಿ ಆಕೆಯ ಸೆರಗಿನ ಜರತಾರಿ ಕಸೂತಿಯಂತೆ ಕಂಡಿತು.
**ರಾತ್ರಿ ಕಣ್ಣು ಬಿಟ್ಟಾಗಲೆಲ್ಲ ರಸ್ತೆಯ ದೀಪದಂತೆ ಇಣುಕುವ ನಿನ್ನ ನೆನಪುಗಳು..


**ನಿನ್ನ ನೆನಪುಗಳನ್ನು ಬಾನಿಗೆ ಎಸೆದೆ ಚುಕ್ಕಿಗಳಾಗಿ ನನ್ನ ಕಾಡತೊಡಗಿದವು ..


**ನಿನ್ನೆ ಬಿದ್ದ ನಿನ್ನ ಕನಸುಗಳ ಮಳೆಗೆ ನೆನಪುಗಳು ಹಸಿರಾಗಿ ಬಿಟ್ಟಿವೆ.


**ಗಿಡದ ಎಲೆಗಳನ್ನು, ತಾರಸಿಯ ಮೇಲಿನ ಬಟ್ಟೆಗಳನ್ನು ಹಾರಿಸಿಕೊಂಡು ಹೋಗುವ ಮೂಡಣದ ಗಾಳಿಗೆ ನಿನ್ನ ನೆನಪನ್ನು ಮಾತ್ರ ಅಲ್ಲಾಡಿಸುವ ತಾಕತ್ತು ಇಲ್ಲ.


**ನಿನ್ನ ಕಣ್ಣಲ್ಲಿ ತಾರೆಗಳು ಮಿನುಗುತ್ತವೆ, ನಿನ್ನ ನಗೆಗೆ ಕಾಮನಬಿಲ್ಲಿನ ಬಣ್ಣಗಳು, ಮೊಗವು ಚಂದಿರನಂತೆ, ಒಟ್ಟಿನಲ್ಲಿ ನೀನು ಬಾಂದಳದ ಬೆಡಗಿ ಆಗಸದ ಹುಡುಗಿ, ಮಳೆಯಾಗಿ ಸುರಿದರೆ ಮಾತ್ರ ನನ್ನ ಬೊಗಸೆಯಲ್ಲಿ ಬಂಧಿ.

**ಅದ್ಯಾರದ್ದೋ ಮನೆಯ ಸೋರುವ ನಲ್ಲಿಯಲ್ಲಿ ನೀರು ಹನಿಯುವ ಶಬ್ದವ ಹುಡುಕುತ್ತ ಹೊರಟಂತಿದ್ದಾನೆ ಬಾನಲ್ಲಿ ಚಂದಿರ.

**ರಾತ್ರಿ ಬಾಂದಳದಿ ಮಿನುಗುವ ತಾರೆಗಳೇ ನಿಮಗೂ ಆಗುವುದಿಲ್ಲವೇ ಛಳಿ? ಹೊದ್ದು ಮಲಗಿಬಿಡಿ ಬೆಳ್ಳಿ ಮೋಡಗಳ ಕಂಬಳಿ.


**ಸಧ್ಯಕ್ಕೆ ಮನದ ಭಾವನೆಗಳು ಗೋಡೆಯ ಮೇಲಿನ ಚಿತ್ರದಂತೆ ಮನದ ಫ್ರೇಮೊಳಗೆ ಬಂಧಿ.


**ನೀ ಬಂದು ಮನದಲ್ಲಿ ರಂಗೋಲಿಯ ಚುಕ್ಕಿಗಳ ಇಟ್ಟೆ, ಅದಕ್ಕೆ ಬಣ್ಣಗಳ ತುಂಬಿದ್ದು ನನ್ನ ತಪ್ಪೇ ?


**ಗಂಡನ ಭುಜಕ್ಕೊರಗಿ ಧ್ರುವ ನಕ್ಷತ್ರವ ನೋಡುತ್ತಿದ್ದವಳಿಗೆ ನೆನಪಾದವನು, ಹಿಂದೊಮ್ಮೆ ಪ್ರೀತಿಸಿದ್ದ 'ಧ್ರುವ'ನೆಂಬ ಹುಡುಗ.

**ನನ್ನ ಮನದ ನೆರಳು ನಿನ್ನ ನೆನಪು.


**ಮೂಡಣದ ಗಾಳಿಯ ಜೋಗುಳಕೆ ಸೂರ್ಯನಿಗೂ ಎಚ್ಚರವಾಗುವುದು ತಡವಾಗಿಯೇ .!
**ಕಾರಿರುಳ ರಾತ್ರಿಯಲಿ ಬಿದ್ದ ಉಲ್ಕೆಯೊಂದರ ಕಂಡು ಚುಕ್ಕಿಯೊಂದು ನಕ್ಕಿತು.
**ನಿನ್ನ ನಗೆ, ಪ್ರೀತಿ, ಮಾತು, ನೀ ಕೊಟ್ಟ ಕಾಣಿಕೆಗಳು ಯಾವುದು ಬೇಡ ನನಗೆ ನಿನ್ನ ನೆನಪೊಂದರ ಹೊರತು..


**ಕಪಾಟಿನಿಂದ ಇಣುಕುವ ಅಜ್ಜನ ಸ್ವೆಟರ್, ಮಫ್ಲರ್ಗಳು.**ಮುಂಜಾವಿನಲಿ ಮಂಜಿನ ಮುಸುಕೆಳೆದು ಮಲಗಿಬಿಡುವ ಭೂರಮೆ .


ಹೀಗೆ ಸಾಲುಗಳು ಮ್ಯಾರಥಾನ್ ಓಡುತ್ತಲೇ ಇದ್ದವು ಮನಸಿನಲ್ಲಿ. ಆದರೆ ಹಿಡಿದಿಡುವವರು ಬೇಕಲ್ಲ.! ಮಾಗಿಯ ಚಳಿಯನ್ನು ನಡುಗುತ್ತಲೇ, ಹಬೆಯಾಡುವ ಕಾಫಿಯೊಂದಿಗೆ ಸ್ವಾಗತಿಸಿ. Happy winter :)


Tuesday, November 16, 2010

ಬಣ್ಣಗಳ ದೇಶದಲ್ಲಿ.
ಮತ್ತೊಂದು ಕಾಲ್ಪನಿಕ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಹೇಗಿದೆ ಹೇಳಿ

ಸಮುದ್ರ ತೀರದಲ್ಲಿದ್ದ ಆ ದೇವಾಲಯದ ಸುಂದರ ಬೃಹತ್ ಕಂಬವನ್ನು ನೋಡುತ್ತಾ ನಿಂತಿದ್ದ ಆ ನೀಲಿ ಕಂಗಳ ವಿದೇಶಿಗ, ಅದೆಲ್ಲೋ ಕಳೆದು ಹೋಗಿದ್ದ. ನಗರದ ಜೀವನದ ಸೋಂಕಿಲ್ಲದ ದಿವ್ಯ ಮೌನದ ತಾಣವದು. ಅವನ ಹೊಂಗೂದಲಿನ ಜೊತೆಗಾರ್ತಿ ಹಾಗೂ ಐದರ ಮಗುವಿನೊಂದಿಗೆ ಬಂದಿಳಿದಿದ್ದ ಭಾರತಕ್ಕೆ . ಬಂದವನೇ ಧಾವಿಸಿದ್ದ ಆ ಹಳೆಯ ಶಿವಾಲಯದತ್ತ. ಹತ್ತು ವರುಷಗ ಹಿಂದೆ ಹೇಗಿತ್ತೋ ಹಾಗೆ ಇದೆ ದೇವಾಲಯ. ಆದರೆ ದೇವಳದ ಪಕ್ಕದಲ್ಲಿದ್ದ ಗಿಡ ಹೆಮ್ಮರವಾಗಿದೆ. ದೇವಾಲಯದ ಒಳಗಡೆ ಗುಬ್ಬಚ್ಚಿಗಳ ಸುಳಿವಿಲ್ಲ. ಐದರ ಹುಡುಗ ಕಡಲ ತೀರದಲಿ ಭಾರತೀಯ ಮಗುವೊಂದರ ಜೊತೆ ಆಡುತ್ತಿದ್ದರೆ, ಜೊತೆಗಾರ್ತಿ ಅವನಾಟವ ನೋಡುತ್ತಿದ್ದಳು. ನಿಧಾನಕ್ಕೆ ಒಳಗೆ ಅಡಿಯಿಟ್ಟು ಘಂಟೆಯನ್ನೊಮ್ಮೆ ಬಾರಿಸಿ ಪುಳಕಗೊಂಡ ನೀಲಿ ಕಣ್ಣಿನವ. ಆ ಘಂಟಾನಾದಕ್ಕೆ ಹಲವು ನೆನಪುಗಳು ಬಂದು ಮುತ್ತಿದ ಭಾವ ! ಕಣ್ಣುಗಳು ಕಂಬವನ್ನು ನೋಡುತ್ತಿದ್ದರೆ ಮನಸ್ಸು ಹತ್ತು ವರುಷಗಳ ಹಿಂದೆ ಹೋಗಿತ್ತು.
ಹತ್ತು ವರುಷಗಳ ಹಿಂದೆ ಭಾರತದಲ್ಲಿ ಕರಾವಳಿ ತೀರದ ಕಾಲೇಜೊಂದರಲ್ಲಿ ಆಯುರ್ವೇದ ವೈದ್ಯದ ವಿದ್ಯಾರ್ಥಿಯಾಗಿದ್ದ ನೀಲಿ ಕಣ್ಣಿನ ಹುಡುಗ. ಹಲವು ಸಂಸ್ಕೃತಿಗಳ ಬೀಡು ಭಾರತದ ಬೆಡಗು-ಬಿನ್ನಾಣಗಳಿಗೆ, ದಿನ ದಿನವೂ ಹಬ್ಬವಾಚರಿಸುವ ಪರಿಗೆ ಬೆರಗಾಗಿದ್ದ. ಕಾಲೇಜಿನಲ್ಲಿ ತಮಿಳರು, ಮಲಯಾಳಿಗಳು, ಕನ್ನಡಿಗರು, ಹಿಂದಿ ಭಾಷಿಕರು, ಮರಾಠಿ ಜನರೆಲ್ಲರ ತಾಯ್ನಾಡು ಭಾರತವೆಂದು ತಿಳಿದು ಕಂಗಾಲಾಗಿದ್ದ. ತನ್ನ ದೇಶದ ಸ್ನೇಹಿತರ ಬಳಿ ಭಾರತಕ್ಕೆ 'the country of colors' ಎಂದು ಹೇಳಿದ್ದ.


ಸಮಯ ಸಿಕ್ಕಾಗಲೆಲ್ಲ ಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಡುವುದು. ಅಲ್ಲಿನ ಏಕಾಂತವ ಅನುಭವಿಸುತ ಅಲ್ಲೊಂದಿಷ್ಟು ಫೋಟೋ ಕ್ಲಿಕ್ಕಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲೊಂದಾಗಿತ್ತು. ತನ್ನ ದೇಶಕ್ಕೆ ಹೊರಡುವ ಮೊದಲು ಒಂದಿಷ್ಟು ನೆನಪಿನ ಜೊತೆ, ಫೋಟೋಗಳನ್ನು ಒಯ್ಯುವ ಬಯಕೆ ಆತನಿಗೆ.


ಓದು ಮುಗಿಯಲು ಇನ್ನೂ ಆರೇಳು ತಿಂಗಳು ಬಾಕಿಯಿತ್ತು. ಹೀಗೆ ಒಮ್ಮೆ ಅಲೆಯುತ್ತ ಈ ಶಿವಾಲಯದತ್ತ ಬಂದಿದ್ದ. ಸಮುದ್ರ ಮೊರೆತದೊಂದಿಗೆ ಮಿಳಿತಗೊಂಡ ನೀರವ ಮೌನ ಹಿಡಿಸಿತ್ತವನಿಗೆ. ದೇವಾಲಯದ ಕಂಬದ ಮೇಲಿನ ಸುಂದರ ಕೆತ್ತನೆಯನ್ನು ನೋಡುತ್ತಾ ನಿಂತುಬಿಟ್ಟಿದ್ದ. ಅಷ್ಟರಲ್ಲಿ ಇಂಪಾದ ಘಲ್ ಘಲ್ ಶಬ್ದವೊಂದು ಕೇಳಿಬಂದಿತ್ತು, ಹಿಂದಿರುಗಿ ನೋಡಿದರೆ ಉದ್ದನೆಯ ಲಂಗ ತೊಟ್ಟಿರುವ ಸ್ನಿಗ್ಧ ಮುಖದ ಹುಡುಗಿ, ಇವನನ್ನು ನೋಡಿ ಮುಗ್ಧ ನಗೆಯನ್ನು ನಕ್ಕಿದ್ದಳು. ನೋಡುತ್ತಲಿದ್ದುಬಿಟ್ಟ ಅವಳ, ಅವಳ ನಗೆಯ. ಕಂಬದ ಮೇಲಿನ ಕೆತ್ತನೆಯ ವಿಷಯ ಮರೆತುಹೋಗಿತ್ತು ..! ಮುಂದೆ ಸಾಗಿದಳು ಹುಡುಗಿ ಮತ್ತದೇ ಘಲ್ ಘಲ್ ನಾದದೊಂದಿಗೆ. ಇನ್ನೇನು ಫೋಟೋ ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ ಲಂಗವನ್ನು ತುಸುವೇ ಎತ್ತಿ ಮೆಟ್ಟಿಲು ದಾಟುವಾಗ ಅವಳ ನುಣುಪು ಬಿಳಿಯ ಪಾದದ ಮೇಲೆ ದಪ್ಪನೆಯ ಬೆಳ್ಳಿಯ ಆಭರಣವೊಂದು ಕಂಡಿತ್ತು. ಶಬ್ದದ ರಹಸ್ಯ ಬಯಲಾಗಿತ್ತು.


ತನ್ನಷ್ಟಕ್ಕೆ ನಗುತ್ತ ಅವಳ ಹಿಂದೆಯೇ ಸಾಗಿದ ನೀಲಿ ಕಣ್ಣಿನ ಹುಡುಗ ಅವಳನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದ. ಅವಳೂ ಮಾತನಾಡಿದಳು. ದೇವಾಲಯದ ಕುರಿತು ಹೇಳಿದಳು. ತಾನು ಇತಿಹಾಸದ ವಿದ್ಯಾರ್ಥಿನಿ ಎಂದಳು. "ಬೇಡಿಕೆಯನ್ನೆಲ್ಲವನು ಈಡೇರಿಸುವ ಶಿವ ಮಂದಿರವಿದು ಎಂದಿದ್ದಳು". ಅವಳ ಗಾಂಭೀರ್ಯದ ವಿದ್ವತ್ಪೂರ್ಣ ಮಾತಿಗೆ ಬೆರಗಾಗಿದ್ದ ಈ ವಿದೇಶಿ ಹುಡುಗ. ಪೂಜಾರಿಗಳು ಕೊಟ್ಟ ತೀರ್ಥವನ್ನೆಲ್ಲ ಮೂಸಿ ನೋಡಿ ಪೂರ್ತಿಯಾಗಿ ತಲೆಯ ಮೇಲೆ ಸುರುವಿ ಕೊಂಡಿದ್ದ ನೀಲಿ ಕಂಗಳ ಹುಡುಗ, ತಾನೊಬ್ಬ ಭಾರತೀಯ ಎಂಬಂತೆ. ಅವನ ಈ ಪರಿಗೆ ನಕ್ಕಿದ್ದಳು ಉದ್ದ ಲಂಗದ ಹುಡುಗಿ. ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿದ್ದ ಅವಳಲ್ಲಿ ತನ್ನ ಹಣೆಗೂ ಹಚ್ಚು ಎಂದ ನೀಲಿ ಕಂಗಳ ಹುಡುಗನ ಹಣೆಗೆ ಕುಂಕುಮ ಇಟ್ಟಿದ್ದಳು ಹುಡುಗಿ.


ಅಲ್ಲಿಂದ ಆದ ಪರಿಚಯ ಸ್ನೇಹದ ತಿರುವು ಪಡೆಯಲು ಹೆಚ್ಚೇನೂ ಸಮಯ ಹಿಡಿಯಲೇ ಇಲ್ಲ. ಹತ್ತಿರದ ಹಲವು ದೇವಾಲಯಗಳಿಗೆ ಅವಳೊಂದಿಗೆ ಹೋಗಿದ್ದ. ಅಲ್ಲಿಯ ಇತಿಹಾಸ, ಶಿಲ್ಪಕಲೆಯ ಕುರಿತು ಹುಡುಗಿ ವಿವರಿಸುತ್ತಿದ್ದಳು. ಭಾರತದ ಬಗ್ಗೆ ಹಲವು ಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದುಕೊಂಡ ಹುಡುಗ. ಭಾರತೀಯರ ಸಾಮರಸ್ಯ ಹಾಗೂ ಕುಟುಂಬ ಪದ್ಧತಿಯ ಕಂಡು ಅಚ್ಚರಿಗೊಂಡಿದ್ದ. ಅವರಲ್ಲೊಂದು ಸುಂದರ ಸ್ನೇಹವಿತ್ತು ,ಆತ್ಮೀಯತೆ ಇಬ್ಬರಿಗೂ ತಿಳಿಯದೆ ಮೂಡಿತ್ತು. ದೀಪಾವಳಿಯನ್ನು ಅವಳೊಂದಿಗೆ ದೀಪ ಹಚ್ಚಿ ಆಚರಿಸಿದ್ದ. ಹೋಳಿಯಂದು ಅವನ ಕೆನ್ನೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಳು ಹುಡುಗಿ. ಭಾರತೀಯರ ಭಾವುಕತೆಗೆ, ಆಧ್ಯಾತ್ಮ ಜ್ಞಾನಕ್ಕೆ, ಸ್ನೇಹಕ್ಕೆ, ಎಲ್ಲವಕ್ಕೆ ಉದಾಹರಣೆಯಂತಿದ್ದ ಹುಡುಗಿ ಅವನ ಪಾಲಿನ 'ಭಾರತ'ವಾಗಿ ಬಿಟ್ಟಿದ್ದಳು.


'ಪಪ್ಪನಿಗೆ ಡೈವೋರ್ಸ್ ಕೊಟ್ಟು ಬೇರೊಬ್ಬನ ಮದುವೆಯಾದ ತನ್ನ ಅಮ್ಮನ ಮುಂದೆ, ಕುಡುಕ ಗಂಡನ ರಾದ್ಧಾಂತವನ್ನು ಕಣ್ಮುಚ್ಚಿ ಸಹಿಸುವ ಭಾರತೀಯ ಹಳ್ಳಿಯಯೊಂದರ ಹೆಂಗಸಿನ 'ಸಹನೆ ಅದ್ಭುತವಾಗಿ ಕಂಡಿತ್ತವನಿಗೆ. ಭಾರತದ ರಾಜಕೀಯ ಹುಳುಕು, ಲಂಚಾವತಾರದ ಕೊಳಕನ್ನು,ಬಾಲ್ಯ ವಿವಾಹ ಪದ್ಧತಿಯನ್ನು ಅವನ ಮುಂದೆ ಹುಡುಗಿ ಹೇಳಿದಾಗ ತನ್ನ ನೀಲಿ ಕಣ್ಣನ್ನು ಇನ್ನಷ್ಟು ಅರಳಿಸಿದ್ದ ಹುಡುಗ. ಆದರೂ 'ತಾನಿಲ್ಲಿ ಬಂದು ಮಾನವ ಸಂಬಂಧಗಳ ಕುರಿತು ಹೊಸತೊಂದು definition ಕಂಡುಕೊಂಡೆ,ಜೀವನದ ಮೌಲ್ಯಗಳ ಅರಿತೆ, ನನ್ನ ಬಾಳಿಗೆ ಹೊಸತಾದ ತಿರುವೊಂದನ್ನು ಕೊಟ್ಟ ಭಾರತ 'the country of colors ' ಎನ್ನುವುದನು ತನಗೆ ತಿಳಿದಂತೆ ವಿವರಿಸಿದ್ದ.!


ಹಾಗೆ ನೀಲಿ ಕಂಗಳ ಹುಡುಗ ತನ್ನ ದೇಶಕ್ಕೆ ಹೊರಡುವ ದಿನ ಹತ್ತಿರವಾಗುತ್ತಿತು ಒಂದಿಷ್ಟು ಸೂರ್ಯೋದಯ ಚಂದ್ರೋದಯಗಳ ನಡುವೆ. ಅದೇನೋ ಅರ್ಥವಾಗದ ತಳಮಳ ಹುಡುಗನನ್ನು ಆವರಿಸಿತ್ತು. ಅದೇಗೆ ಬಿಟ್ಟು ಹೋಗಲಿ ಈ ದೇಶವನ್ನು, ಸ್ನೇಹಿತರನ್ನು, ಆತ್ಮೀಯ ಸ್ನೇಹಿತೆಯನ್ನು ಎಂಬುದೇ ಕಾಡುತ್ತಿತ್ತು.


ಹೊರಡುವ ದಿನದ ಮುಂಜಾನೆಯದು ದೇವಾಲಯದ ಬಳಿ ಹುಡುಗಿಗಾಗಿ ಕಾದ. ಮತ್ತದೇ ಘಲ್ ಘಲ್ ನಾದ. ಮತ್ತದೇ ಮುಗುಳುನಗೆ, ಅದೇ ಹುಡುಗಿ. ಹುಡುಗನ ನೀಲಿ ಕಂಗಳಲ್ಲಿ ನೀರೂರಿತ್ತು 'ನಿನಗೊಂದಿಷ್ಟು ಹೇಳಬೇಕು ಹುಡುಗೀ' ಎಂದ. ಮತ್ತದೇ ಒಪ್ಪಿಗೆಯ ಮುಗುಳುನಗೆ ಅವಳ ಮೊಗದ ಮೇಲೆ. "ಹೊರಟಿದ್ದೇನೆ ನನ್ನ ತಾಯ್ನಾಡಿಗೆ, ಕನಸಿನ ಲೋಕದಂತೆ ಕಂಡ ನನ್ನ ಭಾರತದ ದೀರ್ಘ ಪ್ರವಾಸದ ಕೊನೆಯ ಚರಣದಲ್ಲಿ ನೀ ಕಂಡದ್ದು ನನಗೆ. ನನ್ನ ಜೀವನಕ್ಕೆ ಹೊಸ ವಸಂತವ ತಂದವಳು ನೀನು. ನಿನ್ನೆಯವರೆಗೂ ನನ್ನಲ್ಲಿ ನಿನ್ನೆಡೆಗೆ ಇದ್ದದ್ದು ಒಂದು ಸ್ನೇಹದ ಭಾವ.ನೀ ಸಿಕ್ಕಾಗಲೆಲ್ಲ ನಾನು ನೋಡುತ್ತಿದ್ದದ್ದು ನಿನ್ನ ಮೊಗ, ಹಾಗೂ ಘಲ್ ಘಲ್ ನಾದದ ನಿನ್ನ ಪಾದ. ನಿನ್ನೆ ರಾತ್ರೆಯ ಚಂದ್ರೋದಯದ ನಂತರ ನನ್ನಲ್ಲಿ ನಾನಿಲ್ಲ. ನಿನ್ನೆಡೆಗೆ ಬೇಡವೆಂದರೂ ಸಾಗುವ ನನ್ನ ಮನಸು, ಬದುಕಿನ ಪಯಣದ ಉದ್ದಕ್ಕೂ ನೀನೆ ಬೇಕೆಂದು ಹೇಳುತ್ತಿದೆ. ನೀ ಒಪ್ಪಿದರೆ ನನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಹಂಬಲ ನನ್ನದು. ಜೊತೆಯಾಗುವಿಯಾ?" ಎಂದು ಸುಮ್ಮನಾದ.


ಒಂದು ಅರ್ಧ ನಿಮಿಷದ ಮೌನವ ಮುರಿದು ಮಾತಾದಳು ಹುಡುಗಿ " ನೀಲಿ ಕಂಗಳ ಹುಡುಗ, ನಿಜ ಹೇಳುತ್ತೇನೆ ಕೇಳು, ಮನದ ಎಲ್ಲೋ ಒಂದು ಮೂಲೆಯಲ್ಲಿ ನಿನ್ನೆಡೆಗೆ ಸ್ನೇಹಕ್ಕಿಂತ ಮಿಗಿಲಾದ ಭಾವವೊಂದಿತ್ತು. ಮೊದಲ ದಿನ ನಿನ್ನ ಹಣೆಗೆ ಕುಂಕುಮ ಇಡುವಾಗ ಕುತೂಹಲವಿತ್ತು. ಸ್ನೇಹಕ್ಕೆ ದೇಶ, ಭಾಷೆ, ಸಂಸ್ಕೃತಿಯ ಹಂಗಿಲ್ಲ. ಒಂದು ಕೋನದಲ್ಲಿ ಪ್ರೀತಿಗೂ ಇದರ ಹಂಗಿಲ್ಲ ಬಿಡು. ಆದರೆ ಸಂಸಾರ ನಡೆಸುವ ವಿಷಯಕ್ಕೆ ಬಂದಾಗ ಮಾತ್ರ ಇದೆಲ್ಲ ಅಡ್ಡ ಬಂದು ಬಿಡುತ್ತದೆ ಅದೂ ವಿಶೇಷವಾಗಿ ಭಾರತೀಯರಿಗೆ. ಕಲ್ಲನ್ನೂ ಪೂಜಿಸುವ ಭಾವಜೀವಿಗಳು ನಾವು. ಕುಟುಂಬವನ್ನು ಬಿಟ್ಟು ಬದುಕಲಾರೆವು. ನಾನು ಭಾರತೀಯ ಹಳ್ಳಿ ಹುಡುಗಿ ಮಾರಾಯ. ಚೌಕಟ್ಟನು ದಾಟಿ ಆಚೆ ಬರಲಾರೆ ನಾನು. ನನ್ನ ಸಂಸ್ಕೃತಿ, ದೇಶಗಳ ಬಿಟ್ಟು ಬದುಕಲಾರೆ. ನಿನ್ನ ದೇಶಕ್ಕೆ ಬಂದು ಅತ್ತ ಅಲ್ಲೂ ಇರಲಾರದ, ಇಲ್ಲೂ ಬರಲಾರದ ಸ್ಥಿತಿಗಿಂತ. ನಿನ್ನ ಮನದಲ್ಲಿ ಒಂದು ನೆನಪಾಗಿ ಇದ್ದು ಬಿಡುವೆ" ಎಂದು ಬಿಟ್ಟಳು. !

"ಸರಿ ನಿನ್ನಿಷ್ಟ ಹುಡುಗಿ" ಎಂದು ಅವಳ ಪಾದವನ್ನೊಮ್ಮೆ ನೋಡಿ ಮುಖವನ್ನು ದಿಟ್ಟಿಸಿದ. ಅವನ ಮನವನ್ನು ಅರಿತವಳಂತೆ ಕಾಲಿನ ಗೆಜ್ಜೆಯೊಂದನ್ನು ಬಿಚ್ಚಿ ಅವನ ಕೈಗಿತ್ತಿದ್ದಳು. ಅವನ ಕಣ್ಣಂಚಿನಿಂದ ಜಾರಿದ ಹನಿಯೊಂದು ಅವನ ಕೈಯಲ್ಲಿದ್ದ ಗೆಜ್ಜೆಯ ಮೇಲೆ ಬಿದ್ದಿತ್ತು. ಅದೇ ಕೊನೆಯ ಬಾರಿ ಎಂಬಂತೆ ಅವಳ ಮುಖ ನೋಡಿ,ನುಸುನಕ್ಕು ಹೊರಟು ಬಿಟ್ಟಿದ್ದ ನೀಲಿ ಕಂಗಳ ಹುಡುಗ. .! ಅವನ ಜೀಬಿನಲ್ಲಿ ಬೆಚ್ಚಗೆ ಕುಳಿತ 'ಒಂಟಿ ಗೆಜ್ಜೆ' ಘಲ್ ಘಲ್ ಎಂದು ಸಣ್ಣಗೆ ಗುನುಗುತ್ತಿತ್ತು. !

ಆ ದಿನ ಅವನು ಡೈರಿಯಲ್ಲಿ ಬರೆದದ್ದಿಷ್ಟು:"ಬಣ್ಣಗಳ ದೇಶದಿಂದ ಮರಳಿದ್ದೇನೆ ಹೊಸ ಹುಡುಗನಾಗಿ.ಒಂದಿಷ್ಟು ನೆನಪು, ಒಡೆದ ಹೃದಯ ಮತ್ತು ಒಂಟಿ ಕಾಲ್ಗೆಜ್ಜೆಗಳೊಂದಿಗೆ."

ಹಾಗೆ ಹಲವು ವಸಂತ-ಶಿಶಿರಗಳು ಉರುಳಿದ್ದವು. ಅವನ ಬದುಕಿನಲ್ಲೂ ಬದಲಾವಣೆಯಾಗಿತ್ತು. ಆಯುರ್ವೇದದ ಪ್ರಸಿದ್ಧ ಯುವ ವೈದ್ಯನಾಗಿದ್ದ ನೀಲಿ ಕಂಗಳ ಹುಡುಗ. ಅವನಲ್ಲಿ ಇನ್ನೂ ಭಾರತೀಯ ಸಂಸ್ಕೃತಿ ಪ್ರತಿಫಲಿಸುತ್ತಿತ್ತು. ಹೊಂಗೂದಲಿನ ಹುಡುಗಿಯೊಬ್ಬಳ ಆಗಮನವಾಗಿತ್ತು ಅವನ ಬದುಕಿನಲ್ಲಿ. ಮದುವೆಯಾಗಿ ಒಂದು ಮಗುವೂ ಆಗಿತ್ತು. ಆದರೂ ಒಂಟಿ ಗೆಜ್ಜೆಯ ನಾದ ಅವನ ಕಿವಿಯಲ್ಲಿ ಅನುರಣಿಸುತ್ತಿತ್ತು .

ಗಡಿಬಿಡಿಯ ಜೀವನದಲ್ಲಿ ಕಳೆದುಹೋದಂತಿದ್ದ ಅವನಿಗೆ, ಮತ್ತೊಮ್ಮೆ ಭಾರತಕ್ಕೆ ಬರಬೇಕೆಂದೆನಿಸಿತ್ತು. ಕುಟುಂಬದೊಂದಿಗೆ ಹೊರಟು ಬಿಟ್ಟಿದ್ದ. ಒಂಟಿ ಗೆಜ್ಜೆಯನ್ನು ಎತ್ತಿ ಜೇಬಿನೊಳಗೆ ಇಟ್ಟಿದ್ದ. ಇಂದು ಮತ್ತದೇ ಶಿವಾಲಯದ ಮುಂದೆ ದಶಕವೊಂದರ ನಂತರ ನಿಂತಿದ್ದವನಿಗೆ ಎಲ್ಲ ನೆನಪಾಯಿತು. ಒಮ್ಮೆ ಜೀಬಲ್ಲಿದ್ದ 'ಒಂಟಿ ಗೆಜ್ಜೆ'ಯನ್ನೊಮ್ಮೆ ಮುಟ್ಟಿ ನೋಡಿದ,ನಕ್ಕು ಬಿಟ್ಟ.

ಅಷ್ಟರಲ್ಲಿ ಹಿಂದಿನಿಂದ ಮತ್ತೆ ತೇಲಿ ಬಂದಿತ್ತು ಘಲ್ ಘಲ್ ನಾದ. ಒಮ್ಮೆ ಹೃದಯ ಸ್ತಭ್ದವಾದ ಅನುಭವ. ನಿಧಾನಕ್ಕೆ ಹಿಂತಿರುಗಿ ನೋಡಿದ. ಅವನ ಐದರ ಹರೆಯದ ಹುಡುಗ ಓಡೋಡಿ ಬರುತ್ತಿದ್ದ . "ಆ ದಡದಂಚಿನ ಪುಟ್ಟ ಹುಡುಗಿಯ ಕಾಲಲ್ಲಿತ್ತು.ಕೇಳಿದೆ ಒಂದನ್ನು ಕೊಟ್ಟು ಬಿಟ್ಟಳು ನನಗೆ. ತುಂಬಾ ಚೆಂದಕಿದೆ. ನಿನ್ನ ಜೇಬಲ್ಲಿ ಇಟ್ಟುಬಿಡು." ಎಂದು ಪುಟ್ಟ ಗೆಜ್ಜೆಯೊಂದನು ಕೊಟ್ಟ. ನೀಲಿ ಕಂಗಳ ವಿದೆಶೀಯನಿಗೆ ಇದು ಕನಸೋ, ನನಸೋ, ಕಾಕತಾಳೀಯವೋ ತಿಳಿಯಲಿಲ್ಲ. ಸುಮ್ಮನೆ ನೋಡಿ ಜೇಬಿನಲ್ಲಿ ಇಟ್ಟ.ಬಣ್ಣಗಳ ದೇಶ, ಬದುಕಿನ ಹೊಸತನವನ್ನು ಮತ್ತೊಮ್ಮೆ ತಂದು ಕೊಟ್ಟಿತ್ತವನಿಗೆ. ಹೊಸ ಜೀವನೋತ್ಸಾಹದ ಖುಷಿಯಲ್ಲಿ ಸಮುದ್ರದ ದಂಡೆಯಲಿ ಕುಟುಂಬದೊಂದಿಗೆ ನಡೆಯುತ್ತಿದ್ದ ನೀಲಿ ಕಣ್ಣಿನವ . ಜೇಬಿನೊಳಗಿನ ಒಂಟಿ ಗೆಜ್ಜೆಯೂ ಜೊತೆ ಸಿಕ್ಕ ಸಂಭ್ರಮದಲ್ಲಿತ್ತು. ಘಲ್ ಘಲ್.......!

Wednesday, November 3, 2010

ಅರಣ್ಯ ಮತ್ತು ನದಿ

ಬಹಳ ದಿನಗಳಿಂದ ನನ್ನ ಮನದಲ್ಲಿ ಕುಳಿತಿದ್ದ ಅನುವಾದಿತ ಕವನವಿದು. Jalal al-Din Rumi ಯವರು ಬರೆದ ಇಂಗ್ಲಿಷ್ ಕವನ 'Forest and River' ಬಹಳ ದಿನದಿಂದ ನನ್ನ ಮನದಲ್ಲಿ ಅಚ್ಚೊತ್ತಿತ್ತು.ರುಮಿ ಓರ್ವ ಪರ್ಷಿಯನ್ ಕವಿ ಹಾಗೂ ಸೂಫಿ ಸಂತ. ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಅವರು ಬರೆದ ಕವನಗಳು ಹಲವು. ಅದೆಲ್ಲೋ ಅಚಾನಕ್ ಆಗಿ ಸಿಕ್ಕ ಈ ಕವನ ಅದೇನೋ ಮೋಡಿ ಮಾಡಿ ಬಿಟ್ಟಿತ್ತು ನನ್ನ ಮೇಲೆ..! ಕವನದ ಭಾವ ನನ್ನನ್ನು ಕಾಡುತ್ತಿತ್ತು. ಅಲ್ಲಮ ಪ್ರಭುಗಳ ವಚನಗಳ ನೆನಪಿಸುವ ಸಾಲುಗಳು, ಪ್ರಕೃತಿಯ ಸುಂದರ ವರ್ಣನೆಯೊಂದಿಗೆ ಮನುಸ್ಯನ ಮನೋ-ಸಹಜ ನಡವಳಿಕೆ ಥಳುಕು ಹಾಕಿ ಕೊಂಡಿರುವುದು ವಿಶೇಷ. ಮೂಲ ಕವಿಗೆ ನಮಿಸುತ್ತಾ, ಅನುವಾದಿಸಿದ್ದೇನೆ. ಓದಿ ಹೇಗಿದೆ ಹೇಳಿ :

ಅರಣ್ಯ ಭೋರ್ಗರೆವ ನದಿಗೆ ಹೇಳಿತು
'ನಾನು ನೀನಾಗಬೇಕಿತ್ತು' ಎಂದು.
"ಸದಾ ಸಾಗುತ ರಮಣೀಯ ದೃಶ್ಯ ಸವಿಯುತ
ಕೊನೆಗೆ ಅಖಂಡ ಜಲರಾಶಿಯನು ಸೇರುವ
ನಿನ್ನ ಪಯಣ ಅದೆಷ್ಟು ಚೆನ್ನ .!
ಲವಲವಿಕೆ, ಉತ್ಸಾಹ ಜೀವ ಚೈತನ್ಯ,
ನಿರಂತರ ಹರಿಯುತ
ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಕಂಗೊಳಿಸುವ ನೀನು ಧನ್ಯ ..!
ನನ್ನ ನೋಡು ನೀನು ಒಮ್ಮೆ
ಭೂಮಿಯ ಬಂಧನದಲ್ಲಿ ಸಿಲುಕಿದ
ಮೌನದಲ್ಲೇ ಮುದಿಯಾಗುವ
ಮೌನದಲ್ಲೇ ಒಣಗಿ ನಶಿಸುವ
ಸತ್ತ ನಂತರ ಬೊಗಸೆ ಬೂದಿಯ ಹೊರತು
ಇನ್ನೇನೂ ಉಳಿಯದ ಬರಡು ನಾನು ..!"

ನದಿಯು ಉತ್ತರಿಸಿತು ಅರಣ್ಯದ ಪ್ರಶ್ನೆಗೆ,
" ಅರ್ಧ ಮಲಗಿ, ಅರ್ಧ ಎಚ್ಚೆತ್ತು
ಏಕಾಂತವ ಅನುಭವಿಸುವ ಅರಣ್ಯವೇ
ನನಗೆ ನಿನ್ನಂತೆ ಇರಬೇಕು ಎಂಬ ಆಸೆ,
ಬೆಳದಿಂಗಳ ರಾತ್ರಿಯಲಿ ಕಂಗೊಳಿಸುವ,
ವಸಂತದ ಚೆಲುವನ್ನು ಪ್ರತಿಫಲಿಸುವ
ಪ್ರೇಮಿಗಳಿಗೆ ನೆರಳಿನ ತಾಣವನ್ನು ನೀಡುವ
ನೀನು ಧನ್ಯ ..!
ಪ್ರತಿ ವರುಷ ಹೊಸ ಚಿಗುರಿನ ಹೊಸತನ,
ನಿನ್ನ ಬದುಕಿನ ಪರಿ ಅನನ್ಯ.
ಜೀವನವೆಲ್ಲ ಬರೀ ಓಟದಲ್ಲೇ ಕಳೆವ ನಾನೆಲ್ಲಿ ?
ನಾನು ನನ್ನಿಂದಲೇ ದೂರ ಓಡುತ್ತೇನೆ..!
ಗೊಂದಲದ ಭಾವದೊಂದಿಗೆ ಸಾಗುತ್ತದೆ ನನ್ನ ಓಟ ..!
ಕೊನೆಗೆ ನಾನು ಪಡೆಯುವುದಾದರೂ ಏನನ್ನು ?
ಒಂದು ಕ್ಷಣವೂ ಬಿಡುವು -ಶಾಂತಿಯಿಲ್ಲದ
ಒಂದು ನಿಷ್ಪ್ರಯೋಜಕ ಓಟದ ಹೊರತು ?"

ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ
'ನದಿ ಮತ್ತು ಅರಣ್ಯ'....!

Thursday, October 21, 2010

ಎರಡು ಧ್ರುವ.
ಬಹಳ ದಿನಗಳಿಂದ ಒಂದು ಸರಳ ಕಥೆ ಮನಸಿನಲ್ಲಿತ್ತು.  ಓದಿ ಹೇಗಿದೆ ಹೇಳಿ :

ಅವರಿಬ್ಬರೂ ಇದ್ದದ್ದೇ ಹಾಗೆ. ಅವನು ಉತ್ತರ ಧ್ರುವವಾದರೆ. ಅವಳು ದಕ್ಷಿಣ. ಅವಳು ಬಾಯಿಬಡುಕಿ ಇಡೀದಿನ ವಟವಟ ಅನ್ನುತ್ತಲೇ ಇರುವವಳಾದರೆ, ಅವನು ಮೌನಿ. ಅವನು ಅಂತರ್ಮುಖಿ, ಅವಳು ಬಹಿರ್ಮುಖಿ. ಅವಳು ಚಂಚಲೆ, ಹುಡುಗಾಟದ ಹುಡುಗಿ ಅವನು ಪ್ರಬುದ್ಧ, ಗಂಭೀರ ಹುಡುಗ...! ತದ್ವಿರುದ್ಧ ಸ್ವಭಾವ.


ಅವರಿಬ್ಬರ ಭೇಟಿ ಆದದ್ದೇ ಅಚಾನಕ್ ಆಗಿ. ಹುಡುಗಿಯರೆಂದರೆ ಮಾರು ದೂರ ಓಡುತ್ತಿದ್ದ ಹುಡುಗ,ಸಮುದ್ರದದ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುತ್ತಿದ್ದ ಹುಡುಗಿಯನ್ನು ಸುಮ್ಮನೆ ಮಾತನಾಡಿಸಿದ್ದ.. ಹಾಗೆ ದಡದತ್ತ ನಡೆದು ಬಂದ ಹುಡುಗಿ ಪಟಪಟನೆ ಮಾತನಾಡಿದ್ದಳು. ಹಳೆಯ ಸ್ನೇಹಿತರ ಆತ್ಮೀಯತೆಯಲ್ಲಿ.ವಾಚಾಳಿ ಹುಡುಗಿಯ ಮಾತಿನ ಮೋಡಿಗೆ,ತೋರಿದ ಆತ್ಮೀಯತೆಗೆ ಬೆರಗಾಗಿದ್ದ ಹುಡುಗ. .! ಅವಳು ಮಾತನಾಡಿದ ಪರಿಗೆ ನಕ್ಕಿದ್ದ, ಮೊದಲ ಬಾರಿಗೆ ಮನದುಂಬಿ ಕಣ್ಣಲ್ಲಿ ನೀರಿಳಿಯುವಷ್ಟು..! ಅದೇನೋ ಆಕರ್ಷಣೆಯಿತ್ತು ಆ ಹುಡುಗಿಯ ಮುಗ್ಧ ಮಾತುಗಳಲ್ಲಿ, ಅವಳ ಆ ಅಮಾಯಕ ಕಣ್ಣುಗಳಲ್ಲಿ.


ಅಂದು ಸಮುದ್ರತೀರ ಬಿಡುವಾಗ ಉಳಿದದ್ದು, ಅವಳ ಒದ್ದೆ ಪಾದಗಳಿಗಂಟಿದ ಮರಳಿನ ಕಣಗಳು, ಜೊತೆಗೆ ಹುಡುಗನ ಮನದಲ್ಲಿ ಆ ಹುಡುಗಿಯ ಜೊತೆ ಕಳೆದ ನೆನಪು.!ಇಬ್ಬರ ಹವ್ಯಾಸಗಳು ಒಂದೇ. ಇಬ್ಬರಿಗೂ ನಿಸರ್ಗ, ಮಳೆ,ಬೆಳದಿಂಗಳು,ಸಂಗೀತ, ಸಾಹಿತ್ಯ ಅಂದರೆ ಇಷ್ಟ. ಹವ್ಯಾಸಗಳು ಇಬ್ಬರನ್ನೂ ಹತ್ತಿರ ತಂದಿದ್ದವು.


ಅವನಿಗೆ ಕೇಳುಗರು ಇಹ ಮರೆಯುವಂತೆ ಕೊಳಲು ನುಡಿಸುವುದು ಗೊತ್ತು. ಅವಳಿಗೆ ಹೃದಯ ಕರಗುವಂತೆ ಹಾಡುವುದು ಗೊತ್ತು. ಇಡೀ ದಿನ ಮಾತಾಡುತ್ತಲೇ ಇರುವ ಹುಡುಗಿ ಹಾಡಿದಳೆಂದರೆ,ಮೋಡವೂ ಕರಗಿ ಮಳೆ ಸುರಿಯಬೇಕು.


ದಿನಗಳೆದಂತೆ ಸ್ನೇಹ ಗಾಢವಾಗುತ್ತಲೇ ಹೋಯಿತು. ವಾರದ ಕೊನೆಯ ಸಂಜೆ ಹೊತ್ತಲ್ಲಿ ಹಾಡು, ಇವಳ ಮಾತು, ಅವನ ಕೊಳಲ ಗಾನ ಇವಿಷ್ಟೇ ಅವರ ಪ್ರಪಂಚ. ಹುಡುಗಿ ಮಾತನಾಡುತ್ತಲೇ ಹೋದರೆ ಹುಡುಗ ಮನದುಂಬಿ ನಗುತ್ತಿದ್ದ. ಅದೇ ಸಮುದ್ರದ ಅಲೆಗಳು,ಹಸಿ ಮರಳು. ಅವಳ ಹೆಜ್ಜೆಗುರುತುಗಳು, ನಗು, ನೋಟ ಎಲ್ಲ ಇಷ್ಟ ಅವನಿಗೆ. ಇವನ ಹೆಜ್ಜೆಯ ಮೇಲೆ ಅವಳು ಕಷ್ಟಪಟ್ಟು ಹೆಜ್ಜೆ ಇಡುತ್ತ ಸಾಗುವ ರೀತಿಗೆ ಶರಣಾಗಿದ್ದ. ಕಂಡೂ ಕಾಣದಂತೆ ಮುಗುಳ್ನಕ್ಕಿದ್ದ .ಮೌನಿ ಹುಡುಗ ಅವಳ ಧ್ಯಾನಿಯಾಗುತ್ತ ಹೋದ. ಅವಳಿಗೂ ಅವನೆಂದರೆ ಇಷ್ಟವೆಂದು ಅವಳ ಕಂಗಳೇ ಹೇಳುತ್ತಿದ್ದವು. ಆದರೆ ಯಾರೊಬ್ಬರೂ ಬಾಯಿ ಬಿಡಲಿಲ್ಲ...!


ಅಂದು ಪೌರ್ಣಿಮೆ. ಬಾನಿನಲ್ಲಿ ಚಂದ್ರ -ಬೆಳದಿಂಗಳು. ಅವನ ಜೊತೆ ಅವಳ ಮೊದಲ ಹುಟ್ಟಿದ ಹಬ್ಬ. ಹುಟ್ಟಿದ ಹಬ್ಬವ ಅದೇ ಸಮುದ್ರ ತಟದಲ್ಲಿ ಆಚರಿಸಿ ಸಂಭ್ರಮಿಸಿದ್ದ. ನಿಶೆಯ ನೀರವವ ಸಮುದ್ರದ ಅಲೆಗಳ ಶಬ್ದಕ್ಕೆ ಕರಗಿತ್ತು. ಮುದ್ದು ಹುಡುಗಿಗೆ ಒಂದು ಚಂದದ Teddyಯ ಜೊತೆ ಸಮುದ್ರದ ಚಿಪ್ಪುಗಳ ಹಾರವನ್ನು ನೀಡಿದ್ದ. ಹುಡುಗಿಯ ಕಣ್ಣಲ್ಲಿದ್ದ ನೀರಿನಲ್ಲಿ ಚಂದಿರ ತನ್ನ ಮುಖ ನೋಡಿ ಮೆಲ್ಲನೆ ಮೋಡದ ಮರೆಗೆ ಸರಿದಿದ್ದ. ಹುಡುಗ ಮುಗುಳ್ನಕ್ಕು "Be happy Dear" ಎಂದು ಹೇಳಿ ನಡೆದು ಬಿಟ್ಟಿದ್ದ.


ಅಲ್ಲಿಂದ ಏನಾಯಿತೋ ಗೊತ್ತಿಲ್ಲ. ಹುಡುಗ ಅವಳನ್ನು ಸುಮ್ಮನೆ avoid ಮಾಡತೊಡಗಿದ. ಅವಳ ಯಾವ ಪ್ರಶ್ನೆಗೂ ಉತ್ತರವೇ ಇರಲಿಲ್ಲ ಅವನ ಬಳಿ. ಕಾಡಿಸಿ ಪೀಡಿಸಿ ಕೇಳಿದಾಗ ಹುಡುಗ ಹೇಳಿದ್ದಿಷ್ಟೇ " ನಾವಿಬ್ಬರೂ ಭೂಮಿಯ ಎರಡು ಧ್ರುವಗಳು ಒಂದಾಗಲು ಸಾಧ್ಯವೇ ಇಲ್ಲ ಹುಡುಗೀ". ಹುಡುಗಿ ಕಂಗಾಲಾದಳು.ಕಣ್ಣೀರಾದಳು ಕೊನೆಗೆ ಸುಮ್ಮನಾದಳು. ವಾರದ ಕೊನೆಗೆ ಭೇಟಿಯಾಗದೆ ತಿಂಗಳುಗಳು ಕಳೆದವು.ಕಡಲ ತಡಿಯಲ್ಲಿ ಕೊಳಲ ಗಾನವಿಲ್ಲ, ಸಮುದ್ರವೇ ಕಂಗಾಲಾಗುವಂತೆ ಮಾತಾಡುವ ಹುಡುಗಿಯೂ ಇಲ್ಲ. ಅವಳ ಭಾವಗೀತೆಯೂ ಇಲ್ಲ.


ಹುಡುಗಿ ನಿರ್ಧರಿಸಿದ್ದಳು. ಅವನ ಕೊನೆಯ ಬಾರಿ ಭೇಟಿ ಮಾಡುವುದೆಂದು. ಮುಂದೆಂದೂ ಸಿಗಲೂ ಬಾರದು ಅವನಿಗೆ. ಅವನು ಕೊಟ್ಟ ಕಾಣಿಕೆಗಳನ್ನೆಲ್ಲ ಅವನಿಗೇ ಒಪ್ಪಿಸಿ ಬಿಡಬೇಕು. ಕರೆದಳು ಅವನ ಕಡಲ ತಡಿಗೆ "ಕೊಳಲಿನೊಂದಿಗೆ ಬಾ " ಎಂದು. ಮತ್ತದೇ ಬೆಳದಿಂಗಳ ರಾತ್ರಿ, ಹಸಿಮರಳು, ಹುಡುಗಿಯ ಕೈಯಲ್ಲಿ ಅದೇ teddy,ಅದರ ಕುತ್ತಿಗೆಯಲ್ಲಿ ಚಿಪ್ಪಿನ ಸರ.!


ಹುಡುಗನೂ ಬಂದ. ಅದೇ ಮುಗುಳುನಗೆ. ಹುಡುಗಿಯ ಪಕ್ಕದಲ್ಲಿ ಕುಳಿತ. ಹುಡುಗಿ ಮೌನಿಯಾಗಿದ್ದಳು. ಮೌನವೇ ಮೇಳೈಸಿತ್ತು ಅವರಿಬ್ಬರ ನಡುವೆ ..! "ಕೊನೆಯ ಬಾರಿ ಒಮ್ಮೆ ಕೊಳಲ ನುಡಿಸ್ತೀಯಾ?, ಇನ್ಯಾವತ್ತು ಕೇಳುವುದಿಲ್ಲ ಕಣೋ " ಅಂದಳು ಹುಡುಗಿ ಮೌನವ ಮುರಿದು. ಹುಡುಗ ಮುಗುಳ್ನಕ್ಕ ಮತ್ತೊಮ್ಮೆ, ಕೊಳಲಿಗೆ ಉಸಿರು ಕೊಟ್ಟ. ಉಸಿರು ದನಿಯಾಗಿ, ನಾದವಾಗಿ ಹೊಮ್ಮಿತು. ಸಮುದ್ರದ ಭೋರ್ಗರೆತವ ಮೀರಿ..!

ಹುಡುಗ ಕೊಳಲು ಊದುವುದನ್ನು ನಿಲ್ಲಿಸಿದ. "ಒಂದು ಹಾಡು ಹೇಳೇ ಎಂದ ". ಹುಡುಗಿ ಮೌನವಬಿಟ್ಟಳು, ಹಾಡಾದಳು. "ನೀನಿಲ್ಲದೆ ನನಗೇನಿದೆ .... ... " ಭಾವನೆಗಳ ಬಿಚ್ಚಿಟ್ಟು ಹಾಡಿದಳು. ಅವಳು ತನ್ಮಯನಾಗಿ ಹಾಡುತ್ತಿದ್ದರೆ, ಹುಡುಗ ಕಣ್ಣೀರಾಗಿದ್ದ. ಬಂದು ಬಿಗಿದಪ್ಪಿದಾಗಲೇ ಹುಡುಗಿಯು ವಾಸ್ತವಕ್ಕೆ ಬಂದದ್ದು. ಇಬ್ಬರ ಕಣ್ಣಲ್ಲೂ ನೀರು... "ಎಲ್ಲೂ ಹೋಗಬೇಡವೇ, ನೀನಿಲ್ಲದೆ ನಾನಿಲ್ಲ ಹುಡುಗೀ .." ಹುಡುಗನೆಂದ. ಹುಡುಗಿ ಮೂಗೊರೆಸುತ್ತ, ಕಣ್ಣಲ್ಲಿ ಮಿಂಚು ತುಳುಕಿಸುತ್ತ ಎಂದಳು, "ನಾವಿಬ್ಬರೂ ಭೂಮಿಯ ಎರಡು ಧ್ರುವಗಳಲ್ಲ ಹುಡುಗ, ಆಯಸ್ಕಾಂತದ ಎರಡು ವಿರುದ್ಧ ಧ್ರುವಗಳು..! "ಹುಡುಗ ನಕ್ಕುಬಿಟ್ಟ ಅದೇ ಅವನ ಹಳೆ ಸ್ಟೈಲಿನಲ್ಲಿ. .! ಬಾನಲ್ಲಿ ಚಂದ್ರ ನಗುತ್ತಿದ್ದ. ಮರಳಲ್ಲಿ ತಣ್ಣಗೆ ಕುಳಿತ ಕೊಳಲಿನ ಕಡೆ ನೋಡಿ, ಚುಕ್ಕಿಯೊಂದು ಕಣ್ಣು ಮಿಟುಕಿಸಿತು ... !

Sunday, October 10, 2010

ಮುರಿದ ಸಾಲುಗಳು ...


ಕಾಲೇಜಿನಲ್ಲಿ ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳಿವು. ಬ್ಲಾಗಿನಲ್ಲಿ ಹಾಕಲೋ ಬೇಡವೋ ಅಂತಿದ್ದೆ. ಮೊನ್ನೆ ನನ್ನ ಹಳೆ note books ಎಲ್ಲ ಜೋಡಿಸಿಡುತ್ತಿರುವಾಗ ಕೊನೆಯ ಪೇಜಿನಲ್ಲಿ ಕಂಡವು. ಅದೇನೋ ಅಕ್ಕರೆ ಈ ಕೊನೆಯ ಹಾಳೆಯ ಮೇಲೆ. ಶಾಲಾ ದಿನದಿಂದಲೂ ಕೊನೆಯ ಪೇಜಿನಲ್ಲಿ ಬರೆಯುವ ಚಟ ಇತ್ತು. ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ತುಂಬಾ ಜನರಿಗೆ ಈ ಹವ್ಯಾಸ ಅಥವಾ ಚಟ ಇದೆ ಅಂದು ಕೊಂಡಿದ್ದೇನೆ. ಶಾಲಾ ದಿನಗಳ stupid crushಗಳ ಹೆಸರನ್ನು ಬರೆಯಲು ಬಳಕೆಯಾಗುತ್ತಿದ್ದ ಆ ಕೊನೆಯ ಹಾಳೆ. ನಂತರ ಮನದ ಭಾವಗಳನ್ನು ಸಾಲಾಗಿ ನಿಲ್ಲಿಸಿ ಅದೇನೋ ಒಂದು ವಿಚಿತ್ರ ರೂಪ ಕೊಟ್ಟು ಬಿಡುವಷ್ಟು ಬೆಳೆದು ನಿಂತಿತ್ತು.


ನಿಮಗೂ ನಿಮ್ಮ note bookನ ಕೊನೆಯ ಪೇಜು ನೆನಪಿಗೆ ಬರಬಹುದು. ಅದರಲ್ಲೂ ಒಂದಿಷ್ಟು ಸಾಲುಗಳಿರಬಹುದು ಅಲ್ವಾ ? ಒಂದೊಂದು ಸಾಲು ವಿಚಿತ್ರ ಎನಿಸಬಹುದು. ಅದಾವ ಭಾವವಿದೆ ಎಂದು ಅರಿಯುವ ಮೊದಲೇ ನಿಮ್ಮ ಹಳೆಯ ಪ್ರೀತಿ ನೆನಪಾಗಬಹುದು. ಕಳೆದು ಹೋದ ಒಂದಿಷ್ಟು ದಿನಗಳು ನೆನಪಾಗಬಹುದು...!
ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಪ್ರತಿಕ್ರಿಯಿಸಿ.


** ಮುರಿದು ಬಿದ್ದ ಹಕ್ಕಿಯ ಗೂಡೊಂದರ ಮೇಲೆ ಮಂಜಿನ ಹನಿಯೊಂದು ಕೂತು ಕನಸು ಕಾಣುತ್ತಿತ್ತು.


**ಅಮಾವಾಸ್ಯೆಯ ಇರುಳಲ್ಲೂ ಶಶಿಗಾಗಿ ಕಾದು ಕುಳಿತಿರುವ ಚುಕ್ಕಿ, ಚುಕ್ಕಿಯ ನೆನಪಲ್ಲೇ ಬೆಳಗುವ ಮಿಂಚು ಹುಳು ..!


**ನಾನು ಕಾಡಿಸಿದೆ, ಪ್ರೀತಿಸಿದೆ, ಕೊನೆಗೆ ನಿನಗಾಗಿ ಕಾದೆ ... ನೀನು ನನ್ನ ಬದುಕಿಂದ ಎದ್ದೆ ...!


**ಮೊನ್ನೆ ಮೊನ್ನೆ, ಕನ್ಯತ್ವ ಕಳೆದುಕೊಂಡೆ, ಎಂದು ಬಿಕ್ಕಿದ ಕನ್ಯಾ ರಾಶಿಯ ಹುಡುಗಿ ...!


** ಹುಡುಗಿಯ ಕೆನ್ನೆ ಮೇಲಿನ ಕಣ್ಣ ಹನಿಯಲಿ ನಕ್ಷತ್ರವೊಂದು ತನ್ನ ಬಿಂಬವ ನೋಡಿ ನಕ್ಕಿತು ..!


** ಒಂದಿಷ್ಟು ನೆನಪುಗಳ ಹೂತು ಗೋರಿ ಮಾಡಿದೆ. ರಾತ್ರೆ ಬಿದ್ದ ಕನಸೊಂದು ಗೋರಿಯೊಳಗಿದ್ದ ನೆನಪುಗಳ ಎಬ್ಬಿಸಿ ಬಿಟ್ಟಿತ್ತು ..!


**ಉಸಿರೊಂದಕ್ಕೆ ತಾನು ದನಿಯಾಗಬಹುದು ಎಂಬುದನ್ನು ಮರೆತು, ದನಗಾಹಿ ಹುಡುಗನೊಬ್ಬನ ಕೊಳಲ ಗಾನವ ಕೇಳುತ್ತ ಮೈಮರೆತ ಬಿದಿರ ಕೋಲು ..!
**ವರ್ತಮಾನದಲಿ ಕುಳಿತ ಮನಸಿಗೆ ಭೂತ-ಭವಿಷ್ಯಗಳ ಚಿಂತೆ ..!


**ಸಂಜೆ ಮುದುಡುವ ಚಿಂತೆ ಇಲ್ಲದೆ, ಅರಳುವ ಹೂಗಳು..!


**ಮುಟ್ಟಿನ ದಿನ ಹತ್ತಿರ ಬಂದ ಶಾಲಾ ಹುಡುಗಿಗೆ. ಶನಿವಾರದ ಬಿಳಿ ಸ್ಕರ್ಟಿನ ಚಿಂತೆ ...!


** ಮನದ ಗೋರಿಯೊಳಗೆ ಹೂತು ಹಾಕಿದ್ದ ಕನಸುಗಳು ಮತ್ತೆ ಎದ್ದು ಬರದಂತೆ ಕಾದು ಕುಳಿತವು ನೆನಪುಗಳು ..

**ಕೆರೆಯ ನೀರಲ್ಲಿ ಕಲ್ಲೆಸೆದು ಅಲೆಯ ಉಂಗುರವನ್ನು ನೋಡುತ್ತಾ ಕುಳಿತ ಹುಡುಗನಿಗೆ, ತನ್ನ ಕೈಯಲ್ಲಿನ ಉಂಗುರ ಕಳೆದದ್ದೇ ಗೊತ್ತಿರಲಿಲ್ಲ .!


**ಭಾವನೆಗಳಿಗೆ ಆಣೆಕಟ್ಟು ಕಟ್ಟಿದೆ ಮನಸು ಮರುಭೂಮಿಯಾಯ್ತು,ಮಾತಿಗೆ ಮೌನದ ಫ್ರೇಮು ಹಾಕಿದೆ ಕಣ್ಣೀರಾಯ್ತು...!
**ಹಸಿ ಮಣ್ಣಿಗೂ,ಹಸಿ ಮನಸಿಗೂ ಎಲ್ಲಿಯ ಸಂಬಂಧ ? ಎರಡರಲ್ಲೂ ಹೆಜ್ಜೆ ಗುರುತುಗಳು ಮೂಡುವುದು ಬೇಗ ..!
**ಅದ್ಯಾರದೋ ಕನಸು ಉರಿದು ಉಲ್ಕೆಯಾಗಿ ಬೀಳುತ್ತಿರುವಾಗ ಹುಡುಗನೊಬ್ಬ ಕನಸೊಂದರ ನನಸಿಗಾಗಿ ಪ್ರಾರ್ಥಿಸುತ್ತಿದ್ದ ..!


**ಪಕ್ಕಾ ಪಾತರಗಿತ್ತಿಯಂತಿರುವ ಈ ಕನಸುಗಳು ..!


** ಅವಳ ನೆನಪಿನ ನಗು-ಅಳುವಿನ ಮೋಡಿಗೆ ಹುಡುಗನ ಮನದಲ್ಲೊಂದು ಕಾಮನ ಬಿಲ್ಲು ...!

** ಅದಾವುದೋ ಹಾಡಿನ ರಾಗದೊಂದಿಗೆ ಹುಡುಗಿ ನೆನಪಾಗುತ್ತಿದ್ದಾಳೆ ಅವನಿಗೆ, ಹಾಡಿನೆ ಸಾಲುಗಳೇ ಮರೆತುಹೋಗಿವೆ ಜೊತೆಗೆ ಹುಡುಗಿಯ ಮುಖವೂ ....!
ಅದ್ಯಾವ ಭಾವದಲ್ಲಿ ಬರೆದಿದ್ದೆ ನನಗೆ ಗೊತ್ತಿಲ್ಲ ಕೆಲವನ್ನು ಈಗ ಓದಿದರೆ ನನಗೆ ಅರ್ಥವಾಗ್ತಾ ಇಲ್ಲ .....!


ಹೆಚ್ಚಿನವು ಕ್ಲಾಸಿನಲ್ಲಿ ಕುಳಿತು ಬರೆದದ್ದು. ಅಷ್ಟೊಂದು ಶಕ್ತಿಯಿದೆಯಾ? ಈ ಬೋರ್ ಹೊಡಿಸೋ subjectsಗಳಿಗೆ? ಲೆಕ್ಚರರುಗಳಿಗೆ??

Monday, October 4, 2010

ಪ್ರೀತಿಸಿಕೊಂಡವರು ಸಿಗಬೇಕೆಂದೆನಿಲ್ಲ...ಮೊನ್ನೆ ಗೆಳೆಯರೆಲ್ಲ ಒಟ್ಟಿಗೆ ಸೇರಿದ್ದವು. ಬರೀ ಹುಡುಗಿಯರೇ ಇದ್ದಿದ್ದರೆ dress,earing,shopping,bollywood gossip ಇವಿಷ್ಟೇ ವಿಷಯವಾಗಿರುತ್ತಿತ್ತೇನೋ, ಒಂದಿಷ್ಟು ಹುಡುಗರೂ ಇದ್ದರಲ್ಲ..ಅಯೋಧ್ಯೆ,ಪಂಚರಂಗಿ, ಎಲ್ಲಾಮುಗಿದಮೇಲೆ ವಿಷಯ ಹೊರಳಿದ್ದು ಪ್ರೀತಿಯ ಕಡೆಗೆ. ನನ್ನ ಆತ್ಮೀಯ ಗೆಳೆಯರೆಲ್ಲಒಂಥರಾ ಭಗ್ನಪ್ರೇಮಿಗಳೇ.!ಹುಡುಗಿಯ ನೆನಪಿನ ನೆಪದಲ್ಲಿ ಬಾರಲ್ಲಿ ಕುಳಿತು ಗುಂಡು ಹಾಕಿದವರೇ ..! ಕೆಲವರು ಹಳೆ ಹುಡುಗಿಯ 'ಹ್ಯಾಂಗ್ಓವರ್'ನಲ್ಲಿ ಇನ್ನೂ ಇದ್ದರೆ, ಇನ್ನು ಕೆಲವರು ಹೊಸ ಹುಡುಗಿಯ ಶೋಧದಲ್ಲಿ ಇರುವವರು..!

ಹಾಗೆ ಪ್ರೀತಿಯ ಬಗ್ಗೆ ಮಾತನಾಡ್ತಾ ಇರೋವಾಗ, 'ಶಿವೂ ಹುಡುಗಿ ಮದ್ವೆ ಅಂತೆ ಮಾರಾಯ್ತೀ...' ಎಂದ ಮನೋಜ್. LICA lab ನಲ್ಲಿ 5V ಶಾಕ್ ಹೊಡೆದ ಅನುಭವ ನನಗೆ...! ಅವರಿಬ್ಬರಿದ್ದದ್ದೇ ಹಾಗೆ, made for each otherಎಂಬಂತೆ. ಇದ್ರೆ ಅವರಿಬ್ರ ಥರ ಇರಬೇಕು ಅನ್ನೋವಷ್ಟು. 'ಹುಡ್ಗ ಕೂಲಾಗಿದಾನೆ .. ಏನು ಬಾಯ್ಬಿಡ್ತಾ ಇಲ್ಲ' ,ಅಂದ್ಬಿಟ್ಟ ಮನು, ಮುಂದೆ ಪ್ರಶ್ನೆಗಳಿಗೆ ಅವಕಾಶ ಕೊಡದೆ...


ಯಾಕೋ ಮಾತನಾಡಬೇಕು 'ಶಿವು' ಹತ್ರ ಅನಿಸಿಬಿಡ್ತು.ಮನೆಗೆ ಬಂದ ತಕ್ಷಣ ಫೋನ್ ಮಾಡಿದೆ."ನಿನ್ನ ಹತ್ರ ಅವತ್ತೇ ಮಾತಾಡಬೇಕು ಅನ್ಸಿತ್ತು sou. ಹುಡುಗಂಗೆ ಈಗನಾವೆಲ್ಲಾ ನೆನಪಾಗಿದೇವೆ ಅಂತ ಅಂದ್ಕೊಳ್ತೀರಾ ಎಂದು ಸುಮ್ನಿದ್ಬಿಟ್ಟೆ"ಅಂದ. "ಅದೆಲ್ಲ ಇರಲಿ ಬಿಡು ಏನಾಯ್ತುಅದನ್ನ ಹೇಳು" ಅಂದೆ. ಹುಡುಗ ಮಾತನಾಡ್ತಾ ಹೋದ..


"ಅವಳು ಬರೀ lover ಆಗಿದ್ದಿದ್ರೆ ಇಷ್ಟು ಹೊತ್ತಿಗೆ 'ಕೈ ಕೊಟ್ಟ ಹುಡುಗಿ' ಅಂತ ಹೇಳ್ಬಿಡ್ತಿದ್ನೇನೋ, she is one my best friends as you know. ನನ್ನ ಅವಳ ನಡುವೆ 'ಪ್ರೇಮ' ಅನ್ನೋದಕ್ಕಿಂತ 'ಪ್ರೀತಿ' ಜಾಸ್ತಿಇತ್ತು.ಜೊತೆಯಾಗಿಬಾಳುವ ಕನಸನ್ನು ಹೆಣೆದಿದ್ದೆವು ಬಿಡು ಅದು ಬೇರೆ ವಿಷಯ. ಮೊನ್ನೆ ಹುಡುಗಿ ಬಂದು ನನ್ನ ಕೈಹಿಡ್ಕೊಂಡು ನನ್ನಮದ್ವೆ ಕಣೋ ಅಂದಾಗ ಏನಂತ ಹೇಳಲಿ ಹೇಳು? she is a matured girl sou ಬದುಕನ್ನುನನಗಿಂತ ಇನ್ನೂಚೆನ್ನಾಗಿ ಅರ್ಥ ಮಾಡಿಕೊಂಡ ಹುಡುಗಿ . ನಾನು ದಾರಿತಪ್ಪಿದಾಗ್ಲೆಲ್ಲ ತಿದ್ದಿದಾಳೆ, ಕ್ಷಣ ಕ್ಷಣಕ್ಕೂಬದಲಾಗುವ ನನ್ನಮನೋಸ್ತಿತಿಯ ಅರ್ಥ ಮಾಡ್ಕೊಂಡು ನನ್ನ ಹತಾಶೆಗೆಲ್ಲ ಆಶಾ ಕಿರಣ ಆಗಿದ್ದಂಥವಳು .ಬದುಕಿನ ಕಷ್ಟಕರತಿರುವುಗಳಲ್ಲಿ ಸಾಥ್ ಕೊಟ್ಟಿದಾಳೆ.ನಂದಿನ್ನು settle ಆಗಿರದ ಬದುಕು. ಇನ್ನೆರಡು ವರ್ಷಕಾಯ್ತೀಯಾ? ಅಂತ ಹೇಗೆಕೇಳಲಿ? ಹೇಳು ... ಅದೆಲ್ಲ ಸರಿ ಕಣೆ ಪ್ರೀತಿ ಮಾಡಿದವರೆಲ್ಲ ಮದ್ವೆ ಆಗ್ಲೇ ಬೇಕು ಅಂತಇದ್ಯಾ? ಕನಸೆಲ್ಲನನಸಾಗಲೇ ಬೇಕಾ? 'ಕೈಗೆಟುಕದ ದ್ರಾಕ್ಷಿ ಹುಳಿ' ಅಂತ ಹೇಳ್ತಿಲ್ಲ..ಮೊದಲಿಂದಾನೂಅನ್ಕೊಂಡಿದ್ದೆ, ಆವಾಗವಾಗನಿನ್ ಹತ್ರಾನೂ ಹೇಳ್ತಿನಲ್ವಾ? ಬೇಜಾನ್ ಪ್ರೀತಿ ಮಾಡಿದವರನ್ನು ಮದ್ವೆ ಆಗ್ಬಾರ್ದೆಅಂತ. ಅವರು ಜೀವನದುದ್ದಕ್ಕೂಸಿಹಿ ನೆನಪಾಗಿ ಕಾಡ್ತಾನೆ ಇರ್ಬೇಕು ಅಂತ. ಅವಳು life ನಲ್ಲಿ ಬಂದಮೇಲೆಮರ್ತೆ ಹೋಗಿತ್ತು ಎಲ್ಲ..ಈಗ life ಮತ್ತೆನೆನಪುಮಾಡಿ ಕೊಟ್ಟಿದೆ ನನ್ನ ಹೇಳಿಕೆನ" ಅಂದ.. ! ಅದೇನೂ ಹೇಳಬೇಕುಅನಿಸಲೇ ಇಲ್ಲ. ಮೌನವಿದ್ದುಸಮ್ಮತಿಸಿದೆನೋ, ಅಥವಾ ಆ ಕ್ಷಣಕ್ಕೆ ಅದೇ ಸರಿಯಾಗಿ ಕಂಡಿತೋ ತಿಳಿಯಲಿಲ್ಲ.ಫೋನಿಟ್ಟ ನನ್ನಲ್ಲಿ ವಿಚಾರಗಳಸರಣಿ.


ಹೌದು ಸ್ನೇಹಿತರೇ ಬದುಕಿನ ವಿವಿಧ ಮಜಲುಗಳಲ್ಲಿ, ವಿವಿಧ ರೂಪಗಳಲ್ಲಿ ಹರಡಿಕೊಂಡಿರುವ 'ಪ್ರೀತಿ' ದೇವರುtimeತಗೊಂಡು ಸೃಷ್ಟಿಸಿದ ಒಂದು masterpiece.ಎಲ್ಲದ್ದಕ್ಕೂ ಒಂದೊಂದು ದೇವರಿರುವ ಗ್ರೀಕರಿಗೆ, 'aphrodite'ಪ್ರೀತಿಗೆ ಅಧಿದೇವತೆ.ಪ್ರೀತಿಗೆ ಅದೇನು ಬೇಕಾದರೂ ಮಾಡಿಸುವ ಶಕ್ತಿ ಇದೆಯಂತೆ (ದೊಡ್ಡೋರುಹೇಳ್ತಾರೆ).ಅಂದರೆ ಪ್ರೀತಿ ಒಂದು ಶಕ್ತಿ.ಸರಿನಾ? ಅಂದರೆ the law of conservation of energy (ಶಕ್ತಿಯಪರಿವರ್ತನೆಯನಿಯಮ)ಇದಕ್ಕೂ ಅನ್ವಯವಾಗಲೇ ಬೇಕು. ನಿಯಮ ಹೇಳುವುದೇನೆಂದರೆ, Energy can neither be created nor destroyed: it can only be transformed from one state to another. (ಶಕ್ತಿಯನ್ನುಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ: ರೂಪವನ್ನು ಬದಲಾಯಿಸಬಹುದಷ್ಟೇ.)


ಶುದ್ಧ ನಿಷ್ಕಲ್ಮಶಪ್ರೀತಿ, ಅದೊಂದು ಅನುಭೂತಿ. ಅನುಭವಿಸಿದವ ಪ್ರೀತಿಯನ್ನು ದೇವರೆಂದ.ಸಿಗದೇ ಇದ್ದವಪ್ರೀತಿ ನರಕವೆಂದ.ನಿಜಕ್ಕೂ ಪ್ರೀತಿಯೆಂದರೆ ಏನು ?ಇದೊಂದು ಉತ್ತರವಿದ್ದೂ ಹೇಳಲಾಗದ ವರ್ಣಿಸಲಾಗದ ಸ್ಥಿತಿ. ಅಥವಾಹಲವಾರುಉತ್ತರಗಳಿದ್ದು ಕೊನೆಗೆ ಶೂನ್ಯವೆನಿಸುವ ಭಾವವೇ ? ಅವರವರ ಭಾವಕ್ಕೆ ತಕ್ಕಂತೆ ಪ್ರೀತಿಯ definition ಬದಲಾಗುತ್ತಲೇ ಹೋಗುತ್ತದೆ.ನವಜಾತ ಮಗುವಿಗೆ ಪ್ರೀತಿಯೆಂದರೆ ಅಮ್ಮ ಅಷ್ಟೇ.! ಅದೇ ಮಗು ಬೆಳೆದಂತೆಲ್ಲಪ್ರೀತಿಯ ವ್ಯಾಖ್ಯಾನ ವಿಸ್ತಾರ ಪಡೆದುಕೊಳ್ಳುತ್ತಾ ಹೋಗುತ್ತದೆ.


ಅದೆಲ್ಲ ಇರಲಿ ಬಿಡಿ ಈಗ ನನ್ನ ಸ್ನೇಹಿತ ನನ್ನಲ್ಲಿ ಕೇಳಿ, ನನ್ನನ್ನು ಮೌನದ ಓಣಿಯಲ್ಲಿ ಬಿಟ್ಟ ಪ್ರಶ್ನೆಗೆ ನನ್ನದೇಆದರೀತಿಯಲ್ಲಿ ಉತ್ತರಿಸುತ್ತಿದ್ದೇನೆ. ಇದೇನು ಅನುಭವ ವಾಣಿಯಲ್ಲ. ನಾನೇನು ಅಷ್ಟು ಪ್ರೌಢಳೂ ಅಲ್ಲ. ಆದರೆಒಬ್ಬರಮನೋಸ್ಥಿತಿಯನ್ನು ಅರ್ಥೈಸಿಕೊಳ್ಳುವ,ಗೌರವಿಸುವ ಶಕ್ತಿಯು ನನ್ನಲ್ಲಿ ಇದೆ ಎಂದಷ್ಟೇ ಹೇಳಬಯಸುತ್ತೇನೆ.

ಪ್ರೀತಿ ಮನಸಿಗೆ ಸಂಬಂಧಿಸಿದ ವಿಷಯ.ಆ ಪ್ರೀತಿಯಲ್ಲಿ ಎಳಸುತನವಿರುತ್ತದೆ,ಮುಂದಿನದರ ಚಿಂತೆ ಮಾಡದೆ, ಈ ಕ್ಷಣಕ್ಕಾಗಿ ಬದುಕುತ್ತಾರೆ.ಆದರೆ ವಿಪರ್ಯಾಸವೆಂದರೆ ಆ ಪ್ರೀತಿ ಎಲ್ಲರಿಗೂ ಅದು ಸಿಗುವುದಿಲ್ಲ.ಸಿಕ್ಕಿದ್ದೇಆದರೆ ಅವನು/ ಅವಳು ಪುಣ್ಯವಂತರು.ಮನಸು ಪ್ರೌಢವಾದಂತೆಲ್ಲ ಚಿಂತೆ,ಚಿಂತನೆಗಳು ಹೆಚ್ಚಾಗಿ ಮುಗ್ಧತೆಯ ಚಿಪ್ಪಿನಿಂದ ಹೊರಬಂದುಜಗವನ್ನುನೋಡಿದಾಗ ಭವಿಷ್ಯದ ಯೋಚನೆಯು ಹೆಚ್ಚಾಗುತ್ತದೆ. ಮನದಲ್ಲಿ ಪ್ರೀತಿಯ ಜೊತೆಗೆ ಇನ್ನೊಂದಿಷ್ಟು ಭಾವಗಳು ಮೊಳೆತು, ಮನಸ್ಸನ್ನು ಕೊಚ್ಚೆಯನ್ನಾಗಿಸುತ್ತದೆ. ಅಲ್ಲಿಗೆ ಒಂದು ಮುಗ್ಧ ಪ್ರೀತಿ ಅನ್ಯಾಯವಾಗಿಸತ್ತಿರುತ್ತದೆ..!


ಒಂದು ಜೋಡಿ ( ಹುಡುಗ- ಹುಡುಗಿ)..! ಬೇಜಾನ ಪ್ರೀತಿಸಿರುತ್ತಾರೆ. ಅವರಿಬ್ಬರು ಅಲೆದಾಡದ ಜಾಗವಿಲ್ಲ,ನೋಡದಸಿನೆಮಾವಿಲ್ಲ, ತಿನ್ನದ ತಿಂಡಿಯಿಲ್ಲ ಮದುವೆಯೂ ನಡೆಯುತ್ತದೆ ಬಿಡಿ.(ಮೊನ್ನೆ ಗೆಳತಿಯೊಬ್ಬಳುಹೇಳುತ್ತಿದ್ದಳುಪ್ರೀತಿಸಿ ಮದುವೆಯಾದರೆ ಅಲ್ಲಿ ಆ ಪ್ರೀತಿಯ ಎಂಬುದರ ಕೊಲೆ ಆಗಿರುತ್ತದೆ ಎಂದು.) ಮೊದಲೆರಡು ವರ್ಷ ಸರಿ.ಅವರಷ್ಟು ಸುಖಿಷ್ಟರು ಯಾರೂ ಇಲ್ಲ ಎಂದರೂ ತಪ್ಪಲ್ಲ. ಪ್ರೀತಿಯ ದ್ಯೋತಕವಾಗಿ ಮಕ್ಕಳೂ ಆಗುತ್ತವೆ.ಮಕ್ಕಳಲಾಲನೆ-ಪೋಷಣೆ. ಅವರ ವಿದ್ಯಾಭ್ಯಾಸ. ಕೊನೆಗೆ ಅನ್ನಿಸಿಬಿಡಲೂಬಹುದು ಲೈಫು ಇಷ್ಟೇನಾ ? ಪ್ರೀತಿಎಂದರೆಇದಿಷ್ಟೇನಾ ?ಎಂದು ..


ಅದೇ ಒಂದು ಹುಡುಗ ಹುಡುಗಿ ಬೇಜಾನ ಪ್ರೀತಿ ಮಾಡಿಯೂ ಮದುವೆ ಆಗಲು ಸಾಧ್ಯವಾಗಲಿಲ್ಲ ಎಂದಿಟ್ಟುಕೊಳ್ಳೋಣ. ಸಿಗದ ಪ್ರೀತಿಯ ಬಗ್ಗೆ ಕನವರಿಕೆ ಜಾಸ್ತಿ ಅಲ್ಲವೇ? ಇರುವುದೆಲ್ಲವ ಬಿಟ್ಟುಸಿಗದಿರುವುದರಕಡೆಯೇ ತುಡಿತ ಹೆಚ್ಚು. (ಇದು ನಾವು normal human beings ಎನ್ನುವುದಕ್ಕೆ ಒಂದು ಪುಟ್ಟconfirmatory test ..! ಹ್ಹ ಹ್ಹ ಹ್ಹಾ ).ಹುಡುಗಿ/ಹುಡುಗ ಸಿಗಲಿಲ್ಲ ಎನ್ನುವುದೊಂದು ಕೊರಗು ಮನದ ಮೂಲೆಯೊಂದರಲ್ಲಿ ಇದ್ದೆ ಇರುತ್ತದೆ ಬಿಡಿ.ಕನಸುಕನಸಾಗಿದ್ದು ಕನವರಿಕೆಯನ್ನು ಬಿಟ್ಟು ಹೋಗಿರುತ್ತದೆ. ಪ್ರೀತಿಯನ್ನು ಪ್ರೀತಿಯಾಗೆ ಇರಲು ಬಿಟ್ಟು ಬಿಡಿ.ಜೀವನದ ಪಯಣದಲ್ಲಿ ಆ ಹುಡುಗ/ಹುಡುಗಿಯ ಹೆಸರನ್ನುಕೇಳಿದಾಗ ಮುಖದಲ್ಲೊಂದು ಮುಗುಳುನಗೆ ತಂತಾನೆಹಾದು ಹೋಗುತ್ತದೆ.

ಮುಂದೊಂದು ದಿನ ಪಾರ್ಕಲ್ಲಿ ಹೋಗಿ ಹಿಂದೆ ಅವಳೊಡನೆ/ಅವನೊಡನೆ ಕುಳಿತ ಕಲ್ಲು ಬೆಂಚುಗಳನ್ನುಸವರಿಬರಬಹುದು, ಅವಳ ಜೊತೆ ice-cream ತಿಂದ ಅಂಗಡಿಗೆ ಹೋಗಿ ನಿಮ್ಮ ಮೊಮ್ಮಕ್ಕಳ ಜೊತೆ, ಅವರಅಜ್ಜಿ/ಅಜ್ಜ(ನಿಮ್ಮ ಹೆಂಡತಿ/ಗಂಡ ) ಜೊತೆ ಹೋಗಿ ತಿಂದು ಬರಬಹುದು..ಅದೇ ಅವಳದ್ದೇ ಪರಿಮಳ ಬಂದಂಥ ಅನುಭವ,ಭ್ರಮೆ...ಎಲ್ಲಿದ್ದಿರಬಹುದು? ಹೇಗಿದ್ದಿರಬಹುದು? ಒಂಥರದ ಕುತೂಹಲ ಥೇಟ್ ನಿಮ್ಮಮೊಮ್ಮಕ್ಕಳಲ್ಲಿರುವಂತೆ .. ..!ನಿಮ್ಮ ಈ ಹೊಸ ಪರಿಗೆ ನಿಮಗೆ ನಗು. ನಿಮ್ಮ ಜೊತೆಗಾರ್ತಿಗೂ ಏನಾಗಿದೆ ಇವರಿಗೆಎಂದು ಒಂದು ಬಗೆಯ possessivness ಮೂಡಿದರೂ ಅಚ್ಚರಿಯಿಲ್ಲ ..!


ನೋಡಿ ಸ್ನೇಹಿತರೆ ನಮ್ಮ ಬದುಕನ್ನು ನಾವು ಹೇಗೆ ಕಾಣುತ್ತೇವೋ ಹಾಗೆ ಇರುತ್ತದೆ ಅಲ್ಲವೇ ? ಅದು ಬಿಟ್ಟುಹುಡುಗಿಸಿಗಲಿಲ್ಲವೆಂದು ''ದೇವದಾಸ್' ಆಗಿ ಬಾರಲ್ಲಿ ಸೆಟ್ಲಾಗಿ ಬಿಟ್ರೆ ಹೇಗೆ ಹೇಳಿ ? ಬದುಕು ತುಂಬಾ ಸುಂದರವಾಗಿದೆ. ನೀವುಪ್ರೀತಿಸಿದ ಹುಡುಗಿ ಸಿಗದಿದ್ದರೆ ಏನಂತೆ ಮನೆಯನ್ನು ಮನವನ್ನು ತುಂಬಲು ಇನ್ನೊಬ್ಬಳುಬಂದೇಬರುತ್ತಾಳೆ.ಎಲ್ಲೋ ಒಂದು ಮೆಸೇಜ್ ಓದಿದ ನೆನಪು 'जब तुम किसी को खुदा से मांगो और वो तुम को ना मिले तो समाज जावो की तुमे खुदा से कोयी ओर मांग चूका है..!'


ಭವಿಷ್ಯದ ಎಲ್ಲೋ ಒಂದು ದಿನ ನಿಮ್ಮ ಪ್ರೀತಿಯನ್ನು ಭೇಟಿಯಾಗುತ್ತೀರಿ ಎಂದಿಟ್ಟುಕೊಳ್ಳೋಣ.ಕೂದಲೆಲ್ಲಬೆಳ್ಳಗಾಗಿದೆ ಆಕೆಯದು, ನಿಮ್ಮ ಗುರ್ತು ಹಿಡಿಯುತ್ತವೆ ಕನ್ನಡಕದೊಳಗಿನ ಆಕೆಯ ಕಂಗಳು. ಅವಳ ಕೃತಕ ಹಲ್ಲುಗಳಲ್ಲಿ ಮಿಂಚುತ್ತದೆ, ಖುಷಿಯ ನಗು. ಮಾತುಗಳೇ ಬರಿದಾದಂತೆ ನಗು. ಕಣ್ಣುಗಳಲ್ಲೇ ಭಾವನೆಗಳವಿನಿಮಯ.ಅಷ್ಟರಲ್ಲಿ ಬಂದ ಹದಿಹರೆಯದ ಹುಡುಗನನ್ನು ಪರಿಚಯಿಸುತ್ತಾಳೆ ನಿಮಗೆ, My grand son.......ಅರೆರೆನಿಮ್ಮದೇ ಹೆಸರು.... ಅಜ್ಜಿ ಮತ್ತೊಮ್ಮೆ ಕಣ್ಣು ಮಿಟುಕಿಸುತ್ತಾಳೆ, ಕಾರಲ್ಲೇರಿ ಟಾ ಟಾ ಹೇಳುತ್ತಾ. ಅಜ್ಜನ ಕಣ್ಣಲ್ಲಿಹೊಸಮಿಂಚು, ತುಟಿಯಲ್ಲೊಂದು ತುಂಟನಗು ಪ್ರೀತಿ ಸಾರ್ಥಕ್ಯವನು ಪಡೆಯುವುದು ಇಲ್ಲೇ ಅಲ್ಲವೇ ?

Friday, October 1, 2010

ಮಾರಾಟಕ್ಕಿಟ್ಟಿರುವ ಕನಸುಗಳು....ಕೆಲವು ದಿನಗಳ ಹಿಂದೆ ಸಿರ್ಸಿಗೆ ಹೊರಟಿದ್ದೆ ಒಬ್ಬಳೆ. ಕುಮಟಾ ಸಿರ್ಸಿ ಬಸ್ಸಿನಲ್ಲಿ. ಬೆಳಗಿನ ಸಮಯ, ಬಲಬದಿಯ ಕಿಟಕಿಯಂಚಿನ ಸೀಟು ಕೇಳಬೇಕೇ? ಪಕ್ಕದಲ್ಲಿ ಯಾರೂ ಇರಲಿಲ್ಲ (ಇದ್ದಿದ್ದರೆ ಮಾತಿರುತ್ತಿತ್ತು ). ಒಬ್ಬಂಟಿಯಾದಾಗ ಭಾವನೆಗಳೇ ನನ್ನ ಸಂಗಾತಿಗಳಾಗುವುದು ಮಾಮೂಲು. ನನಗಿಷ್ಟವಾಗುವ ರಸ್ತೆಗಳಲ್ಲಿ ಕುಮಟಾ-ಸಿರ್ಸಿ ರೋಡ್ ಕೂಡ ಒಂದು (ಮಂಗಳೂರು ವಿಶ್ವಮಂಗಳದ ರಸ್ತೆಯೂ ಬಹಳ ಇಷ್ಟವಾಗುತ್ತದೆ). ದ್ವಿಚಕ್ರ ವಾಹನದಲ್ಲಿ ಬಂದರೆ ಘಟ್ಟ ಇಳಿವಾಗಿನ ಮಜವೇ ಬೇರೆ. ರಸ್ತೆಯೊಂದು ಬಿಟ್ಟರೆ ಅಕ್ಕ ಪಕ್ಕವೆಲ್ಲ ಪ್ರಕೃತಿ ನಿರ್ಮಿತವಾದದ್ದು. ಹಸಿರು, ಮುಂಜಾವಿನ ಮಂಜಿನ ಮುಸುಕು, ಅಂಕು ಡೊಂಕಾಗಿ ಸಾಗುವ ರಸ್ತೆ, ಕನಸಂತೆ ಭಾಸವಾಗುವ ಪ್ರಕೃತಿ. ಮನಸೆಂಬ ಮಾಯವಿಗೆ ಇನ್ನೇನು ಬೇಕು ಕನಸು ಕಾಣಲು ? ಇದೇನು ಪ್ರವಾಸ ಕಥನವಂತೂ ಅಲ್ಲ. ನೀವು ತುಂಬಾ ಸಲ ಓಡಾಡಿರಬಹುದು ಈ ರೋಡಿನಲ್ಲಿ. ಪ್ರಕೃತಿಗೆ ನನ್ನ ಮನದ ಭಾವನೆಗಳ ಫ್ರೇಮು ಹಾಕಿದ್ದೇನೆ. ಕಂಡಂಥ ಮಾಮೂಲು ಘಟನೆಗಳಿಗೆ ಭಾವನೆಗಳದ್ದೆ ಕನ್ನಡಿ ಹಿಡಿದಿದ್ದೇನೆ. ಮನದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಕನಸಿನಂತೆ ಬಿಡಿಬಿಡಿಯಾಗಿ ಕಾಣುವ ಸಾಲುಗಳನ್ನು ಓದಿ ನೋಡಿ:
*ಕುಮಟಾದ ಉಪ್ಪಾರ ಕೇರಿಯ ಗಣಪತಿಯ ಮುಂದೆ ಹಾಕಿದ್ದ ಪೆಂಡಾಲು ಬಿಚ್ಚುತ್ತಿದ್ದ ಮುದುಕ, ಪಕ್ಕದಲ್ಲೇ ನಿಂತು ಸಹಾಯವನ್ನೂ ಮಾಡದೆ ಹುಡುಗಿಯರ ನೋಡುತ್ತಾ ಹಲ್ಲು ಕಿಸಿಯುತ್ತಿದ್ದ ಯುವಕ..!


*ವಾಹನಗಳ ಸದ್ದಿಗೆ ಕಿವಿಮುಚ್ಚಿಕೊಂಡು ಪಕ್ಕಾ ಆಳಸಿಯಂತೆ ಬಿದ್ದಿರುವ ರಸ್ತೆಯನು ಗುಡಿಸುತ್ತಿರುವ ಹೆಂಗಸು, ಅದೀಗ ತಾನೆ ಅಂಗಡಿ ತೆರೆದು ಕಡ್ಡಿ ಗೀರುತ್ತಿರುವ ಗೂಡಂಗಡಿಯ ಮಾಲೀಕ.


*ಬೆಳೆದು ದೊಡ್ಡವಳಾಗಿ ಹಸಿರಾಗುವ ಹಂಬಲದಲ್ಲಿದ್ದಂತೆ ತೋರುವ ರಸ್ತೆಯ ಬದಿಯ ಗಿಡದ ಕೆಂಪು ಚಿಗುರು.


*ಬಟಾ ಬಯಲಾಗಿ ಮಲಗಿದ ಕಳೆ ತುಂಬಿಕೊಂಡು ಅಸ್ತವ್ಯಸ್ತವಾಗಿರುವ ಗದ್ದೆ. ಪಕ್ಕದಲ್ಲೇ ಹಾಳು ಸೋರುತ್ತಿರುವ ಮಾಳ ( ಗದ್ದೆ ಕಾಯಲು ಮಾಡಿರುವ ಸಣ್ಣ ಜೋಪಡಿ). ಮನದೊಳಗೆ ಅದೇನೋ ಕಳವಳದ ಭಾವ.


*ಬೃಹತ್ ಮರದ ಅಗಲ ಉದ್ದಗಳನ್ನು ಅಳೆವಂತೆ ಮರವ ಸುತ್ತಿಕೊಂಡಿರುವ ಅದಾವುದೋ ಕಾಡು ಬಳ್ಳಿ. ಹೂ ಬಳ್ಳಿ ನೀನಾಗು ಅರಳಿ ಮರದಲಿ ತೂಗು, ನಾನೇ ಮಾಮರವಾಗಿ ಮೆರೆಯಲೇನು... ಎಂಬ ಭಾವಗೀತೆಯೊಂದರ ಸಾಲನ್ನು ತಂತಾನೇ ಗುನುಗಿಕೊಂಡ ಮನಸು.


*ಪಕ್ಕದ ಬಂದಳಕ (ಪರಾವಲಂಬಿ ಗಿಡ) ಹಿಡಿದು ಬತ್ತುತ್ತಿರುವ ಮರದ್ದೇ ಚಿಂತೆಯಲ್ಲಿರುವಂತೆ ತೋರುವ ಗೆದ್ದಲು ಹಿಡಿದು ಹಾಳಾದ ಮರದ ಬೊಡ್ಡೆ..!


*ಕಾಡು ಹೂವೊಂದರ ಮಕರಂದವ ಹೀರುವ ಗಡಿಬಿದಿಯಲ್ಲಿರುವ ದುಂಬಿ.


*ಗಿಡಗಳ ಎಲೆಯ ಮೇಲಿರುವ ನೀರಹನಿಯಲ್ಲಿ ತನ್ನ ಬಿಂಬ ನೋಡುವ ಹಂಬಲದಲ್ಲಿರುವ ಸೂರ್ಯ ರಶ್ಮಿ.


*ಹುಚ್ಚು ಮಳೆಗೆ ಹುಚ್ಚೆದ್ದು, ಕಡಲ ಸೇರುವ ಧಾವಂತದಲ್ಲಿ ಬೆಳ್ಳಿ ನೆರಿಗೆಯ ಚಿಮ್ಮಿಸುತ್ತಾ ಸಾಗುತ್ತಿರುವ ಝರಿ ..! ರಸ್ತೆಯ ಬದಿಗೆಲ್ಲ ತಾತ್ಕಾಲಿಕ ಜೋಗವನ್ನು ನಿರ್ಮಿಸುವ ಮಳೆರಾಯನ ಲೀಲೆಗೆ ಮೆಚ್ಚಿಕೊಂಡ ಮನಸು.


*ಕಣ್ಮುಚ್ಚಿ ಸುರಿದ ಮಳೆಗೆ ಚಳಿಯೆದ್ದು, ಹಸಿರ ಚಾದರ ಹೊದ್ದು ಮಲಗಿರುವ ಭೂರಮೆ ..!


*ಅದ್ಯಾವುದೋ ಊರಿಗೆ ಹೋಗುವ ಕಾಲು ಹಾದಿಯಲಿ ದನಗಳ ಹಿಂಡಿನ ಹಿಂದೆ ಹೊರಟ ಪೋರನ ಕೈಯಲ್ಲಿ ಒಡತಿ ಕೊಟ್ಟ ಚಕ್ಕುಲಿ..!


*ಅದೆಲ್ಲಿ ಮಳೆಹನಿಸಲಿ ಎಂಬ confusionನಲ್ಲಿ ಇದ್ದಂತೆ ಕಂಡ, ಘಳಿಗೆಗೊಮ್ಮೆ ವೇಷ ಬದಲಿಸುವ ಕಾರ್ಮೋಡದ ತುಂಡು.


*ದಾರಿ ಪಕ್ಕ ನಿಂತು ವಾಹನಗಳ ಗಣತಿ ಮಾಡುವಂತೆ ಕಾಣುವ OFC (Optical Fiber Cable)ಯ ಬೋರ್ಡುಗಳು.


*ದಟ್ಟ ಕಾನನದಲ್ಲಿ ಹರಿವ ಹಳ್ಳವೊಂದರಲ್ಲಿ ಮೀನು ಹಿಡಿಯಲು ದೃಷ್ಟಿ ನೆಟ್ಟಿರುವ ಮಿಂಚುಳ್ಳಿ(Kingfisher), ಹಿಡಿದಿದ್ದು ನೋಡಬೇಕಿತ್ತು ಅಂದುಕೊಂಡ ಮನಸು, ಬಸ್ಸಿನೊಂದಿಗೆ ಮುಂದೆ ಸಾಗಿದ ದೇಹ..!


*ಬಾನಲ್ಲಿ ಬಿಳಿ-ಕರಿ ಮೋಡಗಳ ತಕಧಿಮಿ, ಅದೆಲ್ಲೋ ಕಾಣುವ ನೀಲಾಕಾಶ ಅದಕ್ಕೆ ಯಾವುದಾದರೊಂದು ಆಕಾರದ ಹೋಲಿಕೆ ಕೊಡುವ ಹಂಬಲದಲ್ಲಿದ್ದ ಮನಸು.


*ಚಪ್ಪಲಿರಹಿತ ಪಾದಗಳ ಹೆಜ್ಜೆ ಗುರುತಿಗಾಗಿ ಕಾದು ಕುಳಿತಂತೆ ಕಾಣುವ ಹಸಿಮಣ್ಣು ..!


*ರೋಡಿನಲ್ಲಿಯ ಹೊಂಡಗಳ ಪ್ರಭಾವದಿಂದ 'Tap dance' ಮಾಡುತ್ತಿರುವ ಬಸ್ಸಿನ ಕಿಟಕಿಯ ಗಾಜುಗಳು.!


*20 ರ ಆಸುಪಾಸಿನ ತರುಣಿ ಅವಳ ಬೆನ್ನಿಗೆ ಆರಾಮವಾಗಿ ಮಲಗಿರುವ ಅವಳ ಉದ್ದನೆಯ ಜಡೆಯ ಮೇಲೆ ನನ್ನ ಕಣ್ಣು. ಕುತ್ತಿಗೆಗೆ ಕಚಕುಳಿಯಿಡುತ್ತಿರುವ ನನ್ನ ಜುಟ್ಟಿನ ಮೇಲೆ ಅವಳ ಕಣ್ಣು ..!*ಅದಾವುದೋ ಅಡ್ರೆಸ್ಸ್ ಹೇಳಲು ತಿಣುಕಾಡುತ್ತಿರುವ ನಿರ್ವಾಹಕ. 'ಗಂಧರ್ವ ಬಾರ್ ' ಎಂದೊಡನೆ ತಿಳಿದುಕೊಂಡ ಪ್ರಯಾಣಿಕ..!


* ತಲೆಯ ಮೇಲಿನ ಖಾಲಿ ಜಾಗವನ್ನು ಮುಚ್ಚಲು. ಮಳೆಗಾಲದಲ್ಲೂ ಡೆನಿಮ್ ಕ್ಯಾಪ್ ಹಾಕಿಕೊಂಡಿದ್ದ ಯುವಕ..!


*ಸರಗೋಲನ್ನು ಅನಾಯಾಸವಾಗಿ ಜಿಗಿದು ತೋಟಕ್ಕೆ ಜಿಗಿದ ದನ. ಎತ್ತು ಇರಬಹುದೆಂದು ಕುತೂಹಲ ತಡೆಯಲಾಗದೆ ತಿರುಗಿ ನೋಡಿದರೆ ಅದು ಆಕಳು..!


*ಹಠ ಮಾಡುತ್ತಾ ಕೆನ್ನೆಯ ಮೇಲೆ ಅಲೆದಾಡುವ ಮುಂಗುರುಳುಗಳು, ಯಾರದೋ ನೆನಪಾಗಿ ನಗುವ ಹುಡುಗಿಯ ಕೆನ್ನೆಯ ಮೇಲೆ ಮೂಡುವ ಗುಳಿ. .!


*ಅಮ್ಮ ಹೆಣೆದುಕೊಟ್ಟ ಎರಡು ಜಡೆಗೆ ಎರಡು ಡೇರೆ ಹೂವು ಮುಡಿದು ಜಂಭದಿಂದ ಹೆಜ್ಜೆ ಹಾಕುತ್ತಿರುವ ಕನ್ನಡ ಶಾಲೆಯ ಹುಡುಗಿ, ನೆನಪಾದ ನನ್ನ ಶಾಲಾ ದಿನಗಳು..!


ಹೀಗೆ ಸಮಯದ ಜೊತೆಗೆ ಓಡುತ್ತಿದ್ದ ಬಸ್ಸಿನಲ್ಲಿ cell phonenalli ನಾನು ಇದೆಲ್ಲ ಬರೆಯುತ್ತಿದ್ದೆ. ಅದೇನು ಅಂದುಕೊಂದರೋ ನೋಡಿದ ಜನರು, ನನಗಾವ ಪರಿವೆಯಿರಲಿಲ್ಲ. ಸುಮ್ಮನೆ ಸುತ್ತಲಿನ ಆಗು ಹೋಗನ್ನು ಕುತೂಹಲದ ಕನ್ನಡಕದೊಳಗೆ ನೋಡುತ್ತಲಿದ್ದರೆ. ಮನಸು ಅದನ್ನು ಶಬ್ದದ ರೂಪದಲ್ಲಿ ಹಿಡಿದಿಡುತ್ತಲಿತ್ತು. ಕೈ ಬರಹಕ್ಕೆ ಇಳಿಸುತ್ತಲಿತ್ತು. ಸಿರ್ಸಿ ಬಸ್ಸ್ಟ್ಯಾಂಡ್ ಬಂದದ್ದೆ ತಿಳಿಯಲಿಲ್ಲ. ನನ್ನಷ್ಟಕ್ಕೆ ನಾನು ನಗುತ್ತಿದ್ದೆ. ನಗುವಿಗೆ ಕಾರಣವೇ ತಿಳಿಯಲಿಲ್ಲ. ಅಥವಾ ಇರಲಿಲ್ಲವೋ ಗೊತ್ತಿಲ್ಲ. .!

Thursday, September 23, 2010

ಬೊಗಸೆ ಪ್ರೀತಿಯೊಂದಿಗೆ ....


ಮುಗ್ಧ ಹುಡುಗಿಯೊಬ್ಬಳ ಪ್ರೀತಿಯ ಕಲ್ಪನೆ, ಅದಕ್ಕೆ ಸಾಥ್ ನೀಡುವ ಒಬ್ಬ ಹುಡುಗ. ಅವನ ನಿಷ್ಕಲ್ಮಶ ಪ್ರೀತಿ ಅವಳ ಅರಿವಿಗೆ ಬರುವುದು ತಡವಾಗಿ. ಮಾಮೂಲಿ ಪ್ರೇಮಕಥೆಯಂತೆ ಕಾಣುವ ಇಂಥದ್ದೊಂದು ಕಥೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅದ್ಯಾಕೋ ಕಥೆ ರೂಪವನ್ನು ಕೊಡಲುಸಾಧ್ಯವಾಗಲೇ ಇಲ್ಲ. ಒಂದು ಪತ್ರದ ರೂಪದಲ್ಲಿ ಆ ಹುಡುಗಿಯ ಮನದಲ್ಲಿ ಪರಕಾಯ ಪ್ರವೇಶ ಮಾಡಿದ್ದೇನೆ. ಓದಿ ನೋಡಿ :
ಕನಸು ಕಂಗಳ ಹುಡುಗ,


ನನ್ನ ಕ್ಷಮಿಸು ಎಂದು ಕೇಳುತ್ತಲೇ, ನನ್ನ ಮನದ ಭಾವನೆಗಳಿಗೆ ಅಕ್ಷರದ ಪ್ರವಾಹ ರೂಪ ಕೊಟ್ಟಿದ್ದೇನೆ. ನಿಜ ಕಣೋ ಅದೆತ್ತಲೋ ಸಾಗಿತ್ತು ನನ್ನ ಮನಸು ನಿನ್ನ ಪ್ರೀತಿಯ ಬಿಟ್ಟು. ನೀನೆಲ್ಲೋ ನಿನ್ನ ಪ್ರಪಂಚದಲ್ಲಿ ಕಳೆದುಹೋಗಿದ್ದೀಯ ಎಂದು ಎಣಿಸಿದ್ದೆ. ನನ್ನೆಡೆಗಿನ ನಿನ್ನ ಪ್ರೀತಿ ಬರಡಾಗಿದೆ ಎಂದುಕೊಂಡಿದ್ದೆ. ಆದರೆ ನಿನ್ನೆ ಅನಿಸಿಬಿಟ್ಟಿತು ನೀನೆಂಥ ಪ್ರೀತಿ ನನಗೆ ಕೊಟ್ಟಿದ್ದು ಎಂದು..! ಅತ್ತುಬಿಟ್ಟಿದ್ದೆ.ನನ್ನ ಮೇಲೆ ನನಗೆ ಸಿಟ್ಟು ಕೂಡ ಬಂದಿತ್ತು. ಮನದಲ್ಲಿ ಪ್ರೀತಿಯೆಂದರೆ ಇದಿಷ್ಟೇ ಎಂದು ಕನಸಿಗೆ ಚೌಕಟ್ಟು ಹಾಕಿಕೊಂಡವಳು ನಾನು. ನೀನು ನನಗೆ ಧಾರೆ ಎರೆದದ್ದು ಅಂಥದ್ದೇ ಪ್ರೀತಿ.


ಚೌಕಟ್ಟಿನ ಒಳಗಿನ ಕನಸನ್ನು ಬಿಚ್ಚಿಟ್ಟರೆ ತಲೆಸರಿಯಿಲ್ಲದ ಹುಡುಗಿ ಎಂದೇ ಹೇಳುತ್ತದೆ ಸಮಾಜ. ನಿನ್ನ ಎದುರಿಗೆ ಹೇಳಿದಾಗ ಅದೆಷ್ಟು ಸಲೀಸಾಗಿ ಒಪ್ಪಿ ಬಿಟ್ಟಿದ್ದೆ ನೀನು.ಇನ್ನೂ ನೆನಪಿದೆ ಆ ದಿನ ನನ್ನ ಮೆಚ್ಚಿನ M.G ರೋಡಿನ ಉದ್ದಕ್ಕೆ ನಡೆಯುತ್ತಿದ್ದಾಗ ನೀ ಅಂದದ್ದು , "ನನಗೆ ನಿನ್ನ ದೇಹ ಮುಖ್ಯವಲ್ಲ, ನೀ ನನ್ನ ಬದುಕು ಪೂರಾ ಜೊತೆಯಿರು, ಜೀವದ ಗೆಳತಿಯಾಗಿ ನೋಡಿಕೊಳ್ಳುತ್ತೇನೆ".ನನ್ನ ಕಣ್ಣಲ್ಲಿ ಅಪರೂಪಕ್ಕೆಂಬಂತೆ ಜೋಗ ಜಿನುಗಿತ್ತು ಅಂದು, ಖುಷಿಯಿಂದ. ಗೊತ್ತಿಲ್ಲದಂತೆ ಆಡಿದ್ದೆ. ಮತ್ತೆ ಪಾನಿಪುರಿ ತಿನ್ನುವ ಅಂಗಡಿಯಲ್ಲಿ ಜಗಳ ತೆಗೆದಿದ್ದೆ ನಾನು .! ಅಕ್ಷರಶಃ ಮಗುವಾಗಿ ಬಿಡುತ್ತಿದ್ದೆ ನಿನ್ನ ಜೊತೆಯಲ್ಲಿರುವಾಗ. ನಮ್ಮಲ್ಲಿಯ ಜಗಳಕ್ಕೆ ಕಾರಣವೇ ಬೇಕಿದ್ದಿರಲಿಲ್ಲ, ಮತ್ತೆ ಜೊತೆಯಾಗಲೂ ಕಾರಣ ಬೇಕಿದ್ದಿರಲಿಲ್ಲ. ಅಂತಹ stupid ಜಗಳಗಳೇ ಇರಬೇಕು ನಮ್ಮಲ್ಲಿ ಒಂದು ಬೆಚ್ಚಗಿನ ಆತ್ಮೀಯತೆಯನ್ನು ಹುಟ್ಟಿಸಿದ್ದು. ನೀನೆ ಹೇಳುವಂತೆ bestest (superlative form of best) friends ನಾವು.

ನಿನ್ನ ಮೊದಲ ಸಲ ಭೆಟ್ಟಿಯಾದಾಗಲೇ ಅದೆಷ್ಟು ನಡೆಸಿದ್ದೆ. ಏನಿಲ್ಲವೆಂದರೂ ಆರು ಕಿಲೋಮೀಟರುಗಳು !ನಾನು ನಿನ್ನ ತಲೆ ತಿನ್ನುತ್ತ ನಡೆದಿದ್ದೆ ..ನೀನೆ ಕೊಡಿಸಿದ ice-cream ಹಿಡಿದು. ಅದು ಖಾಲಿಯಾಗುವ ಹೊತ್ತಿಗೆ ಕೈ, ಮೂಗು ಮುಖವೆಲ್ಲ ರಾಡಿ. ನಿಧಾನಕ್ಕೆ ನಿನ್ನ t-shirt ಗೆ ನನ್ನ ಕೈ ಒರಿಸಿದ್ದೆ. ಅಮ್ಮನ ಸೆರಗಿಗೆ ಕೈ ಒರೆಸುವ ಪುಟ್ಟಿಯಂತೆ.! ನೀ ಎಲ್ಲಿ ಬೈಯುತ್ತೀಯೋ ಎಂದು ಹೆದರಿದ್ದೆ ಕೂಡ. ನೀನು ಭಗವಾನ್ ಬುದ್ಧನಂತೆ ಮುಗುಳ್ನಕ್ಕು ನನ್ನ ತಲೆಯನ್ನೊಮ್ಮೆ ತಟ್ಟಿ stupid ಎಂದಿದ್ದೆ. ನಂತರ ನೀ ice-cream ಕೊಡಿಸಿದಾಗಲೆಲ್ಲ ರಾಡಿಯಾದ ನನ್ನ ಕೈ ತನಗರಿವಿಲ್ಲದಂತೆ ಹೋಗುತ್ತಿದ್ದದ್ದು ನಿನ್ನ t-shirt ಕಡೆಗೇ.!'ಬೊಮ್ಮರಿಲ್ಲು 'ಫಿಲ್ಮಿನಲ್ಲಿ ಹಾಸಿನಿ ರಾತ್ರೆ ice-cream ತಿನ್ನಲು ಎದ್ದು ಹೋಗೋವಾಗ ನನ್ನ ನಿನಪಾಗಿರಬೇಕು ನಿನಗೆ. ಕೇಳುತ್ತಿದ್ದೆನಲ್ವಾ ?ನಾನು ನಿನ್ನ ಹತ್ರ "ಒಂದು ವೇಳೆ ನಿನ್ನ ನಾನು ಮದ್ವೆ ಆಗಿ , ರಾತ್ರೆ 2 ಗಂಟೆಗೆ ಎದ್ದು icecream ಬೇಕು ಅಂತ ಕೇಳಿದ್ರೆ ಏನ್ ಮಾಡ್ತೀಯಾ?" ಅದೆಷ್ಟು ಸಲೀಸಾಗಿ ಉತ್ತರಿಸಿಬಿಟ್ಟಿದ್ದೆ... "ಫ್ರಿಜ್ ನಿಂದ icecream ತಂದು ಅದ್ರ ಮೇಲೆ ಚಾಕಲೇಟ್ ಹಾಕಿ ಕೊಡ್ತೇನೆ.!"

ಸಮುದ್ರದಂಚಿಗೆ ನಾವು ನಿಂತಾಗಲೆಲ್ಲ. ನಾನು ಅಲೆಯ ಜೊತೆಗೆ ಆಡುತ್ತಿದ್ದರೆ. ನೀನು ಹಸಿಮರಳಿನಲ್ಲಿ ಅದೇನೇನೋ ಗೀಚುತ್ತಿದ್ದೆ. ನಾನು ಮರಳಿನಲ್ಲಿ ಮನೆ ಮಾಡಿ ಅಲಂಕರಿಸಲು ಚಿಪ್ಪಿಗಳ ಹುಡುಕಾಟದಲ್ಲಿರುವಾಗಲೇ ನೀನು ಬೊಗಸೆ ತುಂಬಾ ಚಿಪ್ಪಿಯನ್ನು ನನ್ನ ಮುಂದೆ ಹಿಡಿದದ್ದು. ನನಗೆ ನಿನ್ನ ಪಿಂಕಿ ಪಿಂಕಿ ಹಸ್ತಗಳನ್ನು ಕಂಡು " ಹೇಯ್ ನಿನ್ನ ಕೈ ತುಂಬಾ ಚೆನ್ನಾಗಿದೆ" ಎಂದು ಅರಚುತ್ತಲೇ ಚಿಪ್ಪಿಗಳನ್ನೆಲ್ಲ ಕೆಳಹಾಕಿದ್ದು. ಇದನ್ನೆಲ್ಲಾ ನೋಡುತ್ತಿದ್ದ 'ದಿಯಾ' "ಏನಾಯ್ತೇ ?"ಎನ್ನುತ್ತಾ ನೀರಿಗಿಳಿದಿದ್ದು. ನೀನು ಗೀಚಿದ್ದೇನು ಎಂದು ನೋಡುವಷ್ಟರಲ್ಲಿ ನಿನ್ನ ಹೆಸರ ಜೊತೆಗೆ "ಪುಟ್ಟಾ" ಎಂದು ಬರೆದು ಅದೆಲ್ಲ ಕಾಣದಂತೆ ಇನ್ನೊಂದಿಷ್ಟು ಹೆಸರುಗಳನ್ನ ಬರೆದದ್ದು.

ನನ್ನ ಆ ಜೋಡಿ teddyಗಳ ಮದುವೆ ಮಾಡಿ ಸಂಭ್ರಮಿಸಿದ್ದೆ ನೋಡು ..!ನಾನು ಆ ಪಿಂಕಿಯ ಜೊತೆ. ಅದನ್ನು ನಾ ಹೇಳಿದಾಗ ಅದೆಷ್ಟು ಖುಷಿಯಾಗಿತ್ತು ನಿನಗೆ, ನಿನ್ನ ಆ ನಗು ಎಲ್ಲವನ್ನು ಹೇಳಿಬಿಟ್ಟಿತ್ತು ."ಪಿಂಕ್ ಟೆಡ್ಡಿ ಕುತ್ತಿಗೆಗೆ ಆ ಜರಿ ದಾರ ಕಟ್ಟು ಅನ್ನೋ ಸಲಹೆ ಬೇರೆ" ನಿನ್ನಿಂದ.

ಅದೆಷ್ಟು ಸಲ ನಿನ್ನ ಸತಾಯಿಸಿದ್ದೆ ನಾನು.. ನಿನ್ನ 'jyo' ನೆನಪಿನ ನೆಪವ ತೆಗೆದು. ನೀನು ಅತ್ತಿದ್ದು ಅದೆಷ್ಟು ಸಲವೋ ನನ್ನಿಂದ. ನಗುವಿನಷ್ಟೇ ಅಳುವನ್ನು ಕೊಟ್ಟಿದ್ದೇನೆ ಅಲ್ವಾ ?

ಇದೆಲ್ಲ ಈಗ್ಯಾಕೆ ನೆನಪಾಯ್ತು ಗೊತ್ತಾ? ಜೀವನದಲ್ಲಿ ಯಾರದ್ದೆಲ್ಲ ಪ್ರವೇಶವಾಗಿ ಬಿಡುತ್ತದೆ ಹುಡುಗ. ನಾನಂದುಕೊಂಡ ಪ್ರೀತಿಯ ಹುಡುಕಾಟದಲ್ಲಿ ನಿನ್ನ ಮರೆತು ಬಿಟ್ಟಿದ್ದೆ. ಕೈಯಲ್ಲಿ ಸುಂದರ ಹೂ ಹಿಡಿದುಕೊಂಡು ಯಾವುದೋ ಹೂವಿಗಾಗಿ ತೋಟವನ್ನೆಲ್ಲ ಅಲೆದಿದ್ದೆ. 'ಪುಟ್ಟಾ' ಎಂದು ಎಂದೇ ನನ್ನ ಕರೆದು. ಮಗುವಿನಂತೆ ನನ್ನ ನೋಡಿಕೊಂಡ. ನನ್ನ stupid thoughts & stupid ಕೆಲಸಗಳಿಗೆ ಮನಃ ಪೂರ್ತಿ ನಗುತ್ತಿದ್ದ ನಿನ್ನ ನಿಷ್ಕಲ್ಮಶ ಪ್ರೀತಿ ನನಗೇಕೆ ಅರ್ಥವಾಗಲೇ ಇಲ್ಲ. ?

ಇರುವುದೆಲ್ಲವ ಬಿಟ್ಟು ಇರದುದ ನಿನೆದು ತುಡಿವುದೇ ಜೀವನ.. ??ಅದೆಲ್ಲ ಇರಲಿ ಬಿಡು ಈಗ. ಅದೆಲ್ಲ ಓದಿ ಮುಗಿದ ,ಅರ್ಥವಾಗದ ಅಧ್ಯಾಯ. ಸುಖಾ ಸುಮ್ಮನೆ ತಲೆ ಕೆಡಿಸಿಕೊಂಡು ಬಿಟ್ಟೆ.!


ಒಮ್ಮೆ ನಿನ್ನ ಜೊತೆ ಮಾತನಾಡಬೇಕು , ice-cream ತಿನ್ನಬೇಕು( ಎರಡು ಕೈಯಲ್ಲಿ ಎರಡು ice-cream), ಅಪೂರ್ಣ ಕವನಗಳ ಸಾಲುಗಳ ನಿನ್ನ ಮುಂದೆ ಹೇಳಬೇಕು. ಅದನ್ನು ನೀನು ಪೂರ್ತಿ ಮಾಡಬೇಕು. ಒಂದಿಷ್ಟು ದೂರ ನಡೆಯಬೇಕು .ನಿನ್ನ ತಲೆ ತಿನ್ನಬೇಕು, ನೀನು ನನ್ನ ತಲೆಗೊಂದು ಮೊಟಕಬೇಕು. ಸಮುದ್ರದ ಹಸಿಮರಳಲ್ಲಿ ಮನೆಯೊಂದ ಕಟ್ಟಬೇಕು. ಅಬ್ಬಾ !!ಎಷ್ಟೊಂದು ಕೆಲಸಗಳಿವೆ ನಿನ್ನ ಜೊತೆ...! ಬೇಗಬಂದು ಬಿಡು ಮಾರಾಯ.!
ನಿನ್ನ ಹಳೆ ಹುಡುಗಿ 'jyo' ಬಗ್ಗೆ ತಣ್ಣನೆಯ ಹೊಟ್ಟೆ-ಕಿಚ್ಚು ಶುರುವಾಗಿಬಿಟ್ಟಿದೆ. ಆ ದಿನ ಹಸಿಮರಳಲ್ಲಿ ಅವಳದ್ದೂ ಹೆಸರು ಬರೆದಿದ್ಯಾ ?
ಮೋಡಗಳ ಮುಸುಕು..
ಸುರಿಮಳೆ ...
ಅಂಗಳದಲ್ಲಿ ನಿಂತ ನೀರು..
ಹಸಿರು ಹಳದಿ ಬಣ್ಣದ ಕಾಗದದ ದೋಣಿ..
ನನ್ನ ಬಣ್ಣದ ಛತ್ರಿ...
ನಿನ್ನ ಪ್ರೀತಿ .......... !
ಅಪೂರ್ಣ ಕವನವನ್ನು ಪೂರ್ತಿ ಮಾಡ್ತೀಯಲ್ವಾ ?

ಬೊಗಸೆ ಪ್ರೀತಿಯೊಂದಿಗೆ
ಪುಟ್ಟಾ

Tuesday, August 31, 2010

ಹರಟೆ -ಲೈನ್ ಹೊಡ್ಯೋದು ..!
ನನ್ನ ಹಿಂದಿನ ಬ್ಲಾಗ್ ಪೋಸ್ಟ್ ಇದ್ದದ್ದು ಪ್ರೀತಿಯ ಬಗ್ಗೆ. ಸ್ವಲ್ಪ ಸೀರಿಯಸ್ ವಿಷ್ಯ ಆಗಿತ್ತು ಬೇರೆ. ಕೆಲವು ಸ್ನೇಹಿತರು ಕೇಳ್ತಿದ್ರು ಸ್ವಲ್ಪ funny ಆಗಿ ಒಂದು ಪೋಸ್ಟ್ ಹಾಕಬಾರದಾ ? ಅಂತ. ಆದ್ರೆ ಈವಾಗ ಯಾಕೋ ನಿಮ್ಮೆಲ್ಲರ ತಲೆ ಸ್ವಲ್ಪ ತಿನ್ನೋಣ ಅನ್ನಿಸ್ತಿದೆ. (ತಲೆ ತಿನ್ನೋದು ಒಂಥರಾ ನನ್ನ ಜನ್ಮಸಿದ್ದ ಹಕ್ಕು ಇದ್ದಂಗೆ. )ಇದರಿಂದ ಎರಡು ಲಾಭ ಇದೆ 1.ನಂಗೆ ತಲೆ ತಿಂದ ಖುಷಿ ಸಿಗತ್ತೆ 2.ನಿಮಗೆ ತಲೆ ಇದೆ ಅನ್ನೋದು ಗೊತ್ತಾಗತ್ತೆ. ಏನಂತೀರಾ? ನೀವು ಓದ್ತೀರಾ ಅಂದ್ರೆ ನಂಗೇನು ಪ್ರಾಬ್ಲಮ್ ಇಲ್ಲ. ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ.


ಈ ಹುಡುಗೀರನ್ನ ನೋಡೋ ಕ್ರಿಯೆಗೆ (ಕದ್ದುಮುಚ್ಚಿನೋ ನೇರವಾಗೋ ಅದು ಸೆಕೆಂಡರಿ) ನಾವೆಲ್ಲಾ ಮಾಮೂಲಾಗಿ ಕೊಡೊ ಟೈಟಲ್ಲು 'ಲೈನ್ ಹೊಡಿಯೋದು','ಸೈಟ್ ಹೊಯೋದು', 'ಡವ್ ಹೊಡ್ಯೋದು' ಇತ್ಯಾದಿ ಇತ್ಯಾದಿ ಅಲ್ವಾ? ಹುಡುಗ್ರು/ ಹುಡುಗೀರು ನಾವು ಎಷ್ಟೇ ಡೀಸೆಂಟು ಅಂತ ಪೋಸ್ ಕೊಟ್ರೂ ಒಂದಲ್ಲ ಒಂದು ಸಲ ಲೈನ್ ಹೊಡೆದೇ ಇರ್ತಾರೆ. ಇದು ಆ ಸೂರ್ಯ ಚಂದ್ರರ ಆಣೆಗೂ ಸತ್ಯ. ಸೂರ್ಯ ಚಂದ್ರರು ಇರುವಷ್ಟೇ ಸತ್ಯ. (ಅಮಾವಾಸ್ಯೆ ದಿನ ಚಂದ್ರ ಇರೋದಿಲ್ಲ ಮರಿ ಅಂತೀರಾ?) ನಾನು ಈಗ ಕೊರಿಯೋ ವಿಷ್ಯ ಯಾವ್ದು ಅಂತ ಗೊತ್ತಾಯ್ತಲ್ವಾ?


ಈಗ ನಾನು ಕೇಳೋದು ಏನು ಅಂದ್ರೆ.....ಅದ್ಕೆ ಲೈನ್ ಹೊಡಿಯೋದು ಅಂತಾನೆ ಯಾಕೆ ಹೇಳ್ತಾರೆ ? ಎಷ್ಟು ಥರ ಲೈನ್ ಹೊಡೀಬಹುದು? ಹುಡ್ಗೀರು ಲೈನ್ ಹೇಗೆ ಹೊಡೀತಾರೆ? ಸುಲಭವಾದ ವಿಧಾನ ಯಾವುದು ? ಯಾರಿಗೂ ತಿಳಿಯದೆ ಲೈನ್ ಹೊಡಿಯೋದು ಹೇಗೆ ? ಜೊತೆಗೆ ಇಂಥದ್ದೆಲ್ಲ ಪ್ರಶ್ನೆಗಳಿಗೆ ನನ್ನದೇ ಆದ ಉತ್ತರವನ್ನೂ ಕೊಡ್ತಾ ಇದೇನೆ. opinion changes from person to person ಅಲ್ವಾ ? ನಾನಿಲ್ಲಿ ಬರೆದದ್ದು just for entertainment. ಇದರಲ್ಲಿ ಬೇರೆ ಯಾವುದೇ ದುರುದ್ದೇಶಗಳು ಇಲ್ಲ. ಇಲ್ಲಿಬರುವ ಪಾತ್ರಗಳೆಲ್ಲ ಕೇವಲ ಕಾಲ್ಪನಿಕ.ಯಾವುದೇ ವ್ಯಕ್ತಿಯ ಜೊತೆ ಹೋಲುವಂತಿದ್ದರೆ ಅದು ಕಾಕತಾಳೀಯ ಮಾತ್ರ. !ಹೌದು ಲೈನ್ ಹೊಡಿಯೋದು ಅಂತಾನೆ ಅಂತ ಯಾಕೆ ಹೇಳ್ತಾರೆ ? ನಮ್ಮ ಎದುರಲ್ಲಿರೋ ಒಂದು ಸುಂದರ ಹುಡುಗಿ/ ಹುಡುಗ್ರನ್ನ ಮಧ್ಯದಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಿಸಿಕೊಂಡು ನೋಡೋದನ್ನ ಮುಂದುವರಿಸ್ತೇವೆ ಅಲ್ವಾ ?ನೇರವಾಗಿ ನೋಡ್ತಾನೇ ಇರ್ತೇವೆ. ಆ ಕಡೆ ಜನ ಏನೆಂದುಕೊಳ್ಳಬಹುದು ಅನ್ನೋ ಯೋಚನೆ ತಪ್ಪಿ ಕೂಡ ಬರಲಿಕ್ಕಿಲ್ಲ. ಬಂದರೂ ಎದುರಿಗಿರುವ ಆಕರ್ಷಣಾ ಶಕ್ತಿಯೇ, ವಿಚಾರಶಕ್ತಿಗಿಂತ ಬಲಯುತವಾಗಿರುತ್ತದೆ (ನ್ಯೂಟನ್ನನಿಗೆ ಇದ್ಯಾಕೆ ಹೊಳೆಯಲಿಲ್ಲ? ಇಂತದ್ದೊಂದು ವಾದವಿದ್ದರೆ ಪುಸ್ತಕದಲ್ಲಿರೋ ನ್ಯೂಟನ್ನನ ಮೂರು ನಿಯಮಗಳೇನು 10 ನಿಯಮಗಳಿದ್ದರೂ ಬಾಯಲ್ಲೇ ಫಿಲಂ ಹಾಡುಗಳ ತರಹ ನಲಿಯುತ್ತಿದ್ದವೇನೋ) .ಈಗ ಈ ಲೈನ್ ಹೊಡ್ಯೋದ್ರಲ್ಲಿ ಮುಖ್ಯವಾಗಿ ಮೂರು ಥರ ಇದೆ (ನನ್ನದೇ ಸಂಶೋಧನೆ ಇದು, ಉದಾಹರಣೆಯ ಸಹಿತ ವಿವರಿಸುತ್ತೇನೆ ಓದಿ):

1. Direct Lining (Straight Lining )

2.Zigzag Lining

3. Indirect Lining

Illustration1:

ಒಂದು ಸುಮಾರಂಥ ಪಟ್ಟಣದ ಬಸ್ಸು. ಸೀಟುಗಳೆಲ್ಲ ಭರ್ತಿಯಾಗಿ ಕೆಲವರು ನಿಂತಿದ್ದಾರೆ. ಒಂದು stylish ಸುಂದರ ಹುಡುಗಿ ಜೀನ್ಸ್ ತೊಟ್ಟು ಮುಂದೆ(ಡ್ರೈವರ್ ಹಿಂದೆ) ನಿಂತಿದ್ದಾಳೆ. ಒಂಥರಾ attitude ಬೇರೆ ಇರೋ ಹಾಗಿದೆ. ಬಸ್ಸಿನಲ್ಲಿರೋ ಹೆಣ್ಣು ಜಾತಿಗಳಿಗೆಲ್ಲ ಹೊಟ್ಟೆಯಲ್ಲಿ ಹುಣಸೆಹಣ್ಣು ಕಿವುಚಿದ ಭಾವ.ಬಸ್ಸಿನಲ್ಲಿರೋ ಗಂಡು ಜಾತಿಗಳಿಗೆಲ್ಲ (ವಯೋಮಿತಿಯಿಲ್ಲ)ಒಳಗೊಳಗೇ ಪುಳಕ,ಬೇಡವೆಂದರೂ ಕಣ್ಣುಗಳು ಅವಳನ್ನೇ follow ಮಾಡುತ್ತಿವೆ. ನೇರವಾಗಿ ಅವಳನ್ನೇ ನೋಡುತ್ತಿದ್ದಾರೆ, ಕಣ್ಣು ಕೂಡ ಮಿಟುಕಿಸದೆ, ತಿಂದೇ ಬಿಡುವಂತೆ. ಇದು Direct Lining. (ಹುಡುಗಿಯ ಎದುರಿಗೆ ಕೊಂಬುಗಣ್ಣ ಆಸಾಮಿ ಏನಾದರೂ ಇದ್ದು, ಹುಡುಗಿ ಗಟ್ಟಿಗಿತ್ತಿ ಇದ್ದು, ಹುಡುಗಿಗದು ತಿಳಿಯದೆ. ಕಪಾಳ ಮೋಕ್ಷಮಾಡಿ ....ಅದೆಲ್ಲ ಈಗ ಬೇಡ ಬಿಡಿ ).

Illustration 2:

ಮಂಗಳೂರು-ವೆರ್ಣ ಪ್ಯಾಸೆಂಜರ್ ಟ್ರೇನು. ಸಲ್ವಾರ್ ಹಾಕಿಕೊಂಡಿರುವ ಮುದ್ದಾದ ಹುಡುಗಿ (ಹುಡುಗೀರೆ ಮುದ್ದಾಗಿರ್ತಾರಾ?). ಎದುರಿಗೊಬ್ಬ so called ಡೀಸೆಂಟು ಹುಡುಗ.ಒಂದೆಳೆಯ ಕಾಡಿಗೆಯ ಮಿಂಚು ಆ ಹುಡುಗಿಯ ಕಣ್ಣುಗಳಲ್ಲಿ . ಕವಿಗಳು ವರ್ಣಿಸುವ ಕಮಲಲೋಚನೆಯ ಕಣ್ಣೋಟಕ್ಕೆ, ನಮ್ಮ ಡೀಸೆಂಟು ಹುಡುಗ ಕಪಿಯಾಗಿದ್ದಾನೆ. ಸೀದಾ ಡೈರೆಕ್ಟ್ ಲೈನ್ ಹೊಡಿಯೋಕೆ ಪೂರ್ತಿ ಧೈರ್ಯ ಸಾಲುತ್ತಿಲ್ಲ ಪಾಪ. ಒಮ್ಮೆ ಅವಳನ್ನು ನೋಡಿ ಅವಳು ಇವನತ್ತ ನೋಡುವಾಗ ದೃಷ್ಟಿ ಬದಲಿಸುತ್ತಿದ್ದಾನೆ. ಅವಳು ಬೇರೆಕಡೆ ನೋಡುವಾಗ ಅವಳ ಮೊಗದಲ್ಲೇ ಲೀನ ಹುಡುಗ.ಇದು ZIGZAG lining ಗೆ ಉದಾಹರಣೆ.


Illustration 3:
ಇನ್ನು ಕೆಲವು ಹುಡುಗರಿರ್ತಾರೆ ಸ್ವಲ್ಪ ಬಿಗುಮಾನ. ಹುಡುಗೀರೆ ಬೇಕಾದ್ರೆ ನಮ್ಮನ್ನ ನೋಡ್ಬೇಕು.ನಾವು ಅವರತ್ತ ತಿರುಗಿ ಕೂಡ ನೋಡೋದಿಲ್ಲ (ನೆನಪಿಡಿ ಬರೀ ತಿರುಗಿ ನೋಡೋದಿಲ್ಲ ). ಆದರೂ ಮನಸು ಕೇಳಬೇಕಲ್ಲ ? ಬೈಕಿನಲ್ಲಿ ಹೋಗೋವಾಗ ಹಿಂದೆ ಕುಳಿತ ಗೆಳೆಯ ತಿವಿದು ಹೇಳ್ತಾನೆ "ಗುರು ಫಿಗರ್ರೂ ಸುಪರ್ರೋ ".! ಏನ್ ಮಾಡೋದು ? ಬಿಗುಮಾನದ ಹುಡುಗ ಬೈಕ್ ಮಿರರ್ ನಲ್ಲಿ ಹಿಂದೆ ಇರೋ ಹುಡುಗಿನಾ ನೋಡ್ತಾನೆ . ಕಾಲೇಜ್ entrenceನಲ್ಲಿ ಹುಡುಗಿಯರಿಗಿಂತ ಮೊದಲು ಬಂದು notice ಬೋರ್ಡಿನಲ್ಲಿ ತಲೆ ಕೂದಲು ಬಾಚ್ತ ಹಿಂದೆ ಇರೋ ಹುಡ್ಗೀರ್ನ ನೋಡ್ತಾನೆ. ಇದು Indirect Lining ..!


ಇದೇನು ಎಲ್ಲ ಹುಡುಗರ ಬಗ್ಗೆ ಹೇಳ್ತೀರಲ್ಲ ಅಂತೀರಾ ? ನಿಲ್ರೀ ಸ್ವಲ್ಪ.ಒಂದ್ಸಲ ನನ್ನ ಸ್ನೇಹಿತ ಒಬ್ಬ ಕೇಳಿದ್ದ, "ಹುಡುಗಿರೇನು ಲೈನ್ ಹೊಡಿಯೋದೇ ಇಲ್ವಾ ?" ಅಯ್ಯೋ! ಯಾರು ಇಲ್ಲ ಅಂದ್ರು. ಮನುಷ್ಯರಲ್ವಾ ಹುಡುಗೀರು? ಹೊಡಿದೇ ಹೊಡೀತಾರೆ. ಇಲ್ದಿದ್ರೆ ನಮ್ಮ chocolate boys ರಣಭೀರ್, ಇಮ್ರಾನ್ ಖಾನ್ ಇವರಿಗೆಲ್ಲ ಫ್ಯಾನ್ಸ್ ಎಲ್ಲಿರ್ತಿದ್ರು ? (ಮನೇಲಿ ಸೀಲಿಂಗೋ, ಟೆಬಲ್ಲೋ ಫ್ಯಾನ್ಸ್ಇರ್ತಿತ್ತು ಅಷ್ಟೇ).ರೋಡ್ನಲ್ಲಿ ಚೆನ್ನಾಗಿರೋ ಹುಡುಗರು ಹೋದರೆ ನೋಡೇ ಇರ್ತಾರೆ ಬಿಡಿ ಈ ಹುಡುಗೀರು. ಆದ್ರೆ ನಾವು ನೋಡೇ ಇಲ್ಲ ಅನ್ನೋ ಥರ ಆಡ್ತಾರೆ ಅಷ್ಟೇ. .! ಅದ್ಕೆ ನಮ್ಮ ಮಂಗಳೂರು ಹುಡುಗೀರು ಮಳೆಗಾಲದಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡೆ ಇರ್ತಾರೆ .!ಆರ್ದೂ ಹುಡುಗೀರು zigzag lining ಇಷ್ಟ ಪಡ್ತಾರೆ. ನಮ್ಮ ಸಮಾಜ ಹುಡುಗೀರನ್ನ ಬೆಳೆಸಿರೋದೆ ಹಾಗೆ direct line ಏನಾದರೂ ಹೊಡೆದರೆ, ಅವಳಿಗೆ ಇಲ್ಲಸಲ್ಲದ ಪಟ್ಟ ಗ್ಯಾರಂಟೀ.


safe ಆಗಿ ಲೈನ್ ಹೊಡಿಬೇಕೋ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ತಿರುಗಾಡಿ. ಯಾರಿಗೂ ನೀವು ಯಾರನ್ನ ನೋಡ್ತಿದೀರಿ ಅನ್ನೋದೇ ಗೊತ್ತಾಗೋದಿಲ್ಲ. styleಗೆ ಸ್ಟೈಲು ಆಯ್ತು, ಲೈನ್ ಹೊಡೆದಂಗೂ ಆಯ್ತು. ಒಂದೇ ಗುಂಡಿಗೆ ಎರಡು ಹಕ್ಕಿಗಳು.!


ಇಷ್ಟೆಲ್ಲಾ ಹೇಳ್ತೀಯಲ್ಲ ನೀನು ಏನ್ ಮಾಡ್ತಿಯ ಅಂತ ಕೇಳ್ತೀರಾ ? ನಾನು ನೋಡಿ frank ಆಗಿ ಹೇಳ್ಬಿಡ್ತೇನೆ ನಾನು ಹುಡುಗ್ರನ್ನ ನೋಡ್ತೇನೆ , ಆದರೆ ಕೆಟ್ಟ ದೃಷ್ಟಿಯಿಂದ ಅಲ್ಲ .ಸೌಂದರ್ಯ ಇರೋದೇ ನೋಡೋದಿಕ್ಕೆ ಹೊಗಳೋದಿಕ್ಕೆ ಅಲ್ವಾ ? ಗಾಂಧೀಜಿಯವರ 'ಕೆಟ್ಟದ್ದನ್ನು ನೋಡಬೇಡಿ' ಅನ್ನೋದನ್ನು ಅವರ ಕ್ಷಮೆಯೊಂದಿಗೆ 'ಕೆಟ್ಟದಾಗಿ ನೋಡಬೇಡಿ ' ಅಂತ ಸಣ್ಣ ತಿದ್ದುಪಡಿ ಮಾಡಿ. ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. .!


ನಿಮ್ಮ ಸಮಯವನ್ನು ಹಾಳು ಮಾಡಿ, ನಿಮ್ಮಲ್ಲಿ ನಗೆಯ ಹಾಲುಕ್ಕಿದರೆ ನನ್ನ ಮೊದಲ ಹಾಸ್ಯಲೇಖನ ಸಾರ್ಥಕವಾದಂತೆ .!