Tuesday, March 20, 2012

ವಾಲಿ ವಧೆ ಯಕ್ಷಗಾನವೂ..ಕೆಕ್ಕಾರು ಲಕ್ಷ್ಮಣನೂ

ಮೊನ್ನೆ ಬಸ್ಸಿನಲ್ಲಿ ಕುಳಿತಿದ್ದಾಗ ನೆನಪಾಗಿದ್ದ ಅವನು. ಅದೇಕೋ ಗೊತ್ತಿಲ್ಲ. ಮಾಸಲು ಬಣ್ಣದ ಲುಂಗಿ, ತಿಳಿ ಹಳದಿಯ ಷರಟು ಧರಿಸಿ ಬಾಗಿಲ ಬಳಿ ನಿಂತಿದ್ದವನ ಲಕ್ಷಣಗಳನ್ನು ಕಂಡ ತಕ್ಷಣ ನನಗೆ ನೆನಪಾದವನು 'ಕೆಕ್ಕಾರು ಲಕ್ಷ್ಮಣ'.  ಅವನಿದ್ದದ್ದು ಥೇಟ್ ಹಾಗೆಯೇ  ಅದೆಲ್ಲಿಗೆ ಬೇಕಾದರೂ ಹೊರಟುಬಿಡುತ್ತಿದ್ದ  ಮಾಸಲು ಬಣ್ಣದ ಹಳೆಯ ಲುಂಗಿ, ತುಂಬು ತೋಳಿನ ಷರಟು ಹಿಮ್ಮಡುವಿನ ಭಾಗದಲ್ಲಿ ನೆಲ ಕಾಣುತ್ತಿದ್ದ ಹವಾಯಿ ಚಪ್ಪಲಿ ಧರಿಸಿ !  


  ನಮ್ಮ ಸುತ್ತಲಿನ ೩-೪ ಊರುಗಳಲ್ಲಿ ಅದ್ಯಾರದೇ ಮನೆಯಲ್ಲಿ ಸಂಪಿಗೆ ಹೂವಾಗಲಿ ಅದನ್ನು ಕೊಯ್ಯಲು ಲಕ್ಷ್ಮಣನೇ ಆಗಬೇಕು. ತುದಿ ಸೀಳು ಇರುವ ಬಿದಿರಿನ ಕೊಕ್ಕೆಯಲ್ಲಿ, ಒಂದು ಹೂವೂ ಹಾಳಾಗದಂತೆ ಅವನೇ ಕೊಯ್ಯಬೇಕು. ಮರ ಅದೆಷ್ಟೇ ನಾಜೂಕಿನದಾಗಿರಲಿ ಅದರ ತುದಿಯ ಕೊಂಬೆಯ ಹೂವನ್ನೂ ಬಿಡದೆ ಕೊಯ್ಯುತ್ತಿದ್ದ. ಮೂರು ನಾಲ್ಕು ಹೂವನ್ನು, ಮರವಿರುವ ಮನೆಗೆ ಕೊಟ್ಟು ಉಳಿದ ಹೂಗಳನ್ನು ತನ್ನ 'ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಎಳೆಗಳಿಂದ  ಹೆಣೆದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂಭತ್ತು ಘಂಟೆಯ ಬಸ್ಸಿಗೆ ಕುಮಟೆಗೆ ಹೂ ಮಾರಲು ಹೊರಟನೆಂದರೆ ತಿರುಗಿ ಬರುವುದು ಮಧ್ಯಾಹ್ನ ಮೂರುವರೆಗೆ. ಹೋಗುವಾಗ ಬುಟ್ಟಿಯ ತುಂಬಾ ಹೂಗಳಿದ್ದರೆ,.. ಬರುವಾಗ ಬ್ರೆಡ್ಡು, ಬಟರು, ಬಿಸ್ಕೆಟ್, ಹತ್ತು ಪೈಸೆಗೆ ಒಂದರಂತೆ ಸಿಗುತ್ತಿದ್ದ ಲಿಂಬು ಪೆಪ್ಪರಮೆಂಟುಗಳು ಇರುವುದು ಕಡ್ಡಾಯ, ಜೊತೆಗೆ ಹೊಟ್ಟೆಗೆ ಒಂದಿಷ್ಟು 'ಎಣ್ಣೆ'ಯೂ! ಸಂಪಿಗೆ ಹೂಗಳೇ ಅವನ ಜೀವನಕ್ಕೆ ಆಧಾರ.


ಬೀದಿ ನಾಯಿಗಳ ಕಂಡರೆ ಅದೇನೋ ಮಮಕಾರ. ಹಾಗೆ ಭಿಕ್ಷುಕರ ಕಂಡರೂ... ಬುಟ್ಟಿಯಲ್ಲಿದ್ದ ಬ್ರೆಡ್ಡು ಬಟರುಗಳನ್ನು ನೀಡಿಯೇ ಬಿಡುತ್ತಿದ್ದ. ಹತ್ತು ಪೈಸೆಯ ಪೆಪ್ಪರಮೆಂಟುಗಳೆಲ್ಲವೂ ಮನೆಯ ಅಕ್ಕ ಪಕ್ಕದ ಪುಟ್ಟ ಮಕ್ಕಳಿಗೆ. ನಮ್ಮನೆಯ ಕಂಪೌಂಡಿನಲಿ ಒಂದು ಸಂಪಿಗೆ ಮರವಿದೆ. ನಮ್ಮೂರ 'ವೆಂಕಟೇಶ ಶೆಟ್ಟರು' ಬಂಗಾರದ ಆಭರಣ ಮಾಡುವಾಗ ತಾಮ್ರವನ್ನು ಜಾಸ್ತಿ ಮಿಕ್ಸ್ ಮಾಡಿದರೆ ಬರುವಂಥ ಬಣ್ಣದ ಸಂಪಿಗೆ ಹೂಗಳು ಅವು. ಅವನು ಆ ಹೂಗಳನ್ನು ಕೊಯ್ಯಲು ಬರುತ್ತಿದ್ದ . "ರಾಶಿ ಚಂದ ಅದೇರ ಈ ಹೂವು. ಸಿಕ್ಕಾಪಟ್ಟೆ ಡಿಮಾಂಡು ಇದ್ಕೆ.." ಹೇಳುತ್ತಲೇ ಮರ ಹತ್ತುತ್ತಿದ್ದ.ನನ್ನ ಶಾಲಾದಿನಗಳ ಕಾಲವದು. ಬಹುಶಃ ನಾನಾಗ ಎಂಟನೆಯ ತರಗತಿಯಲ್ಲಿದ್ದೆ. ಒಮ್ಮೆ ಪಪ್ಪ ಕೇಳಿದ್ದರು ಅವನ ಕುಟುಂಬದ ಬಗ್ಗೆ. ಅದಕ್ಕೆ ಅವನ ಉತ್ತರವನ್ನು  ಅವನದೇ ಭಾಷೆಯಲ್ಲಿ ಇಡುತ್ತೇನೆ ನೋಡಿ. " ನಾನು, ಅವಿ (ಅಮ್ಮ), ಮತ್ತೆ ತಮ್ಮ ಇರುದ್ರ ಮನೇಲಿ. ನಮ್ಮ ಅವಿ ಒಂದ್ ನಮನೀ ಮಳ್ಳೀರ, ಉಂಡರೆ ಹೊಟ್ಟೆ ತುಂಬ್ತೋ ಇಲ್ವೋ ಗುತ್ತಾಗುದಿಲ್ಲ . ಒಬ್ಬ ತಮ್ಮ ಆವನೆ ಅವಂಗೂ ಸಿಕ್ಕಾಪಟ್ಟಿ  ಮಳ್ಳು, ಮೈಮೇಲೆ ಬಟ್ಟಿ-ಬಿಟ್ಟಿ ಎಂತೂ ಇಲ್ದೆ ತಿರಗ್ತಾ ಊರ್ಮೆಲೆ ..!! ಅವ್ನ ಕೋಣಿಲಿ ಕೂಡಾಕಿ ಬತ್ತನ್ರಾ. ಅಡಗಿ ಎಲ್ಲ ನಂದೇಯಾ ಅನ್ನ ಮಾಡದ್ರೂ ಮಾಡದೆ ಇಲ್ದಿರು ಇಲ್ಲಾ. ಸಾಕಾಗ್ತಾದಲ್ರ ಅದ್ಕಾಗೆಯ ಹನಿ ಹೊಟ್ಟೆಗೆ ಹಾಕ್ಕಂಬರುದು, ಸುಸ್ತು ಹೋಗುಕೆ.... " ಎಂದು ಪೆಕರು ಪೆಕರನಂತೆ ಹಲ್ಲು ಕಿರಿದಿದ್ದ.  ಅಷ್ಟರಲ್ಲಿ "ಹೂವು  ಹೆಂಗೆ ಕೊಟ್ಯೋ ಲಕ್ಷ್ಮಣ ?" ಎಂದು ಹೆಚ್ಚಾಗಿ ಮುಂಗಚ್ಚೆಯಲ್ಲೇ  ಇಡೀ ಊರು ತಿರುಗುವ 'ಬೇಟೆ ಗೌಡ' ಕೇಳಿಬಿಟ್ಟಿದ್ದ . "ನಿಂಗೆ ಅದೆಲ್ಲ ಅಧಿಪ್ರಸಂಗಿತನ ಎಂತಕ್ಕೆ? ನಿಮ್ಮನೆ ಹೂ ಕೊಡ್ಬೇಡ, ಮೇಲಿಂದಾ  ಹೂ ಯಾವ ದರಕ್ಕೆ ಕೊಟ್ಟೆ ಕೇಳು... ಪುಕ್ಸಟ್ಟೆ ಕೊಟ್ಟು ಬಂದಾನೆ ಏನೀಗ ?" ಎಂದೆಲ್ಲ ರೇಗಾಡಿ ಅವರ ಮನೆ ಹೂ ಕೊಡದಿದ್ದುದರ ಸಿಟ್ಟನ್ನೆಲ್ಲಾ ಕಾರಿ ಬಿಟ್ಟಿದ್ದ! 


ದಾರಿಯಲ್ಲಿ ಕಾಣುವ ಎಲ್ಲ ದೇವಳದ ಒಳಗೆ ಹೋಗಿ ಕೈಮುಗಿದು ಬರದಿದ್ದರೆ ಅವನಿಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಒಂದು ಕಲ್ಲಿಗೆ ಹೂ ಹಾಕಿ ಇಟ್ಟರೂ, ಚಪ್ಪಲಿ ತೆಗೆದು ಬದಿಗಿಟ್ಟು ಕೈಮುಗಿದು ಮುಂದೆ ಹೋಗುತ್ತಿದ್ದ. ಜನರೆಲ್ಲಾ 'ಅವನಿಗೆ ಒಂದು ಸುತ್ತು ಲೂಸು' ಎಂದೇ ಆಡಿಕೊಳ್ಳುತ್ತಿದ್ದರು.  ಕೆಲವೊಮ್ಮೆ 'ಎಣ್ಣೆ' ಹೆಚ್ಚಾದಾಗ ಜೋರಾಗಿ ಹಾಡಿಕೊಳ್ಳುತ್ತ, ಒಬ್ಬನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದದೂ ಇತ್ತು. 


ನನ್ನ ಅಮ್ಮ ಅಂದರೆ ಅದೇನೋ ಭಯ ಮಿಶ್ರಿತ ಭಕ್ತಿ ಅವನಿಗೆ. ಆದರೂ ಅದೇನೇ ಸಮಸ್ಯೆಗಳು ಬಂದರೂ ಅಮ್ಮನಲ್ಲಿ ಹೇಳಿಕೊಳ್ಳಲೇ ಬೇಕು."ಅಕ್ಕೋರಲ್ರಾ ಹೆದ್ರಕಿ ಆಗ್ತದೆರ.." ಎಂದು ಅಪ್ಪನತ್ತಿರ ಹೇಳುತ್ತಿದ್ದ.  "ವನ್....ಟು... ತ್ರೀ .. ಎಂದು ಇಂಗ್ಲಿಷಿನಲ್ಲಿ ಹೂಗಳನ್ನು ಲೆಕ್ಕ ಮಾಡುವಾಗ ಅಮ್ಮ ಬಂದದ್ದು ಕಂಡರೆ ಥಟ್ಟನೆ ನಿಲ್ಲಿಸಿಯೇ ಬಿಡುತ್ತಿದ.! ಅಮ್ಮನ ಮುಖ ನೋಡಿ ಜಾಸ್ತಿ ಕಲಿಲಿಲ್ರಾ... ಐದ್ನೆತ್ತಿ ವರೆಗೆ ಹೋಗಾನೆ ನೋಡಿ ಎಂದು ಹಸ್ತವ ತೋರಿಸುತ್ತಿದ್ದ .. " ಹಾಗೆ ಮುಂದುವರೆದು ಸಂಪಿಗೆ ಮರವನ್ನು ನೋಡುತ್ತಲೇ " ಅಲ್ಲೊಂದು ಹೂ ಬಿಟ್ಟೋಗದ್ಯೋ ಏನ್ರೋ ? ಉಳಿಲಿ ಗಿಡದಲ್ಲೆಯ.. ನಿಮ್ಮನೆಗೆ ಎಷ್ಟು ಬೇಕ್ರ ?" ಎಂದು ಕೇಳುತ್ತ ಮಾತು ಮರೆಸುತ್ತಿದ್ದ.!

ನಲವತ್ತರ ಸಮೀಪದ ಹರೆಯವಾದರೂ ಮದುವೆ ಆಗಿದ್ದಿರಲಿಲ್ಲ. ಹುಡುಗಿಯರೆಂದರೆ ಅದೇನೋ ಕುತೂಹಲ, ಒಂದು  ಬಗೆಯ ನಾಚಿಕೆ. ಒಮ್ಮೆ ಅವನೇ ಉತ್ತರಿಸಿದ್ದ  ಅಮ್ಮನ,"ಅದೆಂತಕ್ಕೆ ಮದುವೆ ಆಗಲಿಲ್ವೋ ನೀನು ?" ಎಂಬ ಪ್ರಶ್ನೆಗೆ. "ಮುಂದಾಗಿ ಮಾಡ್ವವ್ರು ಬೇಕಲ್ರಾ. ಇಡಗುಂಜಿ ದೇವಸ್ಥಾನದ ಕೂಡೆ ಒಂದು ಹೆಣ್ಣು ನೋಡಿ ಬಂದಾನ್ರ. ಸುಮಾರು ಚೊಲೋ ಆದೆ. ಉದ್ಕೆ ಲಂಗ ಬ್ಲೋಜು ಹಾಕಂಡು ದೇವಸ್ಥಾನದ ಮುಂದೆ ಹೂ ಮಾರ್ತದೆ ನೋಡಿ. ಅದೇಯ ಹುಡುಗಿ. ನಮ್ಜಾತಿದೇಯ .." ಎಂದು ಹೇಳಿ ನಾಚುತ್ತ ನಕ್ಕಿದ್ದ. ಪಪ್ಪ "ಅದೆಂಗೆ ನಿಂಗೆ ಹೂ ಮಾರುದೇ ಹುಡುಗಿ ಸಿಕ್ತೋ ಮಾರಾಯ ? ಆದರೆ ಲಕ್ಷ್ಮಣ, ನಿನಗಿಂತಾ ಜಾಸ್ತಿ ಅದರದ್ದೇ ಹೂ ಮಾರಾಟ ಆಗ್ತದೆ ಹಾಂ " ಎಂದಿದ್ದಕ್ಕೆ. "ಮದ್ವಿ ಆದಕೂಡಲೇ ಹೂ ಮಾರುಕೆಲ್ಲ ಕಳ್ಸುದಿಲ್ರೋ ನಾನು. ಮನೆ ನೋಡ್ಕಂದ್ರೆ ಸಾಕು. ತಾನು ಸಾಮಾನೆಲ್ಲ ತಂದು ಹಾಕ್ತ್ನಲ್ರ .." ಎಂದು ಹೇಳುತ್ತಾ ಕನಸು ಕಟ್ಟಿದ್ದ.


ಅದೆಷ್ಟೋ ಬಾರಿ ನಮ್ಮನೆಯ ಕೆಲಸದ 'ನಾಗಮ್ಮಕ್ಕ'. ಇಡಗುಂಜಿ ದೇವರ ಕೂಡೆ ಬೇಡ್ಕಂತೆ, ನಿಂಗೆ ಅದೇ ಹುಡುಗಿ ಸಿಗ್ಲಿ ಹೇಳಿ .." ಎಂದು ಹೇಳುತ್ತಲೇ ಎರಡು ಹೂವನ್ನು ಪುಗಸಟ್ಟೆ ತೆಗೆದುಕೊಳ್ಳುತ್ತಿದ್ದಳು. " ತಕ ಎರಡು ಹೂವು, ಅದೇನು(ಆ ಹುಡುಗಿ) ನನ್ನ ನೋಡೂದಿಲ್ಲ.. ನೀ ಈ ನಮನೀ ಹೇಳೂದು ಬಿಡೂದಿಲ್ಲ .." ಹೇಳುತ್ತಲೇ ಎರಡು ಹೂಗಳನ್ನು ತೆಗೆದು ಕೈಗಿಡುತ್ತಿದ್ದ. ಹೂ ಮಾರುವ ಹುಡುಗಿಯ ಮೇಲಿನ ಅವಳ ಒಮ್ಮುಖ ಪ್ರೀತಿಯ ಪರಿ ನನಗೆ ಅರ್ಥವಾದದ್ದು ತೀರ ಇತ್ತೀಚಿಗೆ. ಅಂದಿನಿಂದ ಅವನನ್ನು ಅದ್ಭುತ ಪ್ರೇಮಿಗಳ ಸಾಲಿಗೆ ಸೇರಿಸಿಬಿಟ್ಟಿದ್ದೇನೆ.! 


ಇಂತಿಪ್ಪ ನನ್ನ ಈ ಲೇಖನದ 'ಹೀ'ರೋ ಲಕ್ಷ್ಮಣನಿಗೆ ಯಕ್ಷಗಾನದ ಹುಚ್ಚು ವಿಪರೀತ. ಆಜುಬಾಜಿನ ಊರುಗಳಲ್ಲಿ ಅದೆಲ್ಲೇ ಯಕ್ಷಗಾನವಾದರೂ ಹೊರಟೆ ಬಿಡುತ್ತಿದ್ದ. ಒಂದು ಕವಳದ ಸಂಚಿ ಹಾಗು ಒಂದು ಪಾವು ಎಣ್ಣೆಯ ಜೊತೆಗೆ. ಆ ಪ್ರಸಂಗದ ವಿಮರ್ಶೆಯನ್ನು ಮರುದಿನ ಹೂ ಕೊಯ್ಯಲು ಬಂದಾಗ ಮಾಡುತ್ತಿದ್ದ. ಒಮ್ಮೊಮ್ಮೆ ಮರದ ಮೇಲೇರಿ ಒಬ್ಬೊಬ್ಬನೇ ಮಾತನಾಡುತ್ತಿದ್ದದ್ದೂ ಇತ್ತು.


ಒಮ್ಮೆ ಊರಲ್ಲೇ ಉತ್ಸಾಹಿ ಯುವಕರು ಸೇರಿ ಯಕ್ಷಗಾನ ಮಾಡುವಾಗ, ತನಗೂ ಒಂದು 'ಪಾರ್ಟು' ಬೇಕೆಂದು ಹಠ ಹಿಡಿದು,ಹಣ ಕೊಟ್ಟು 'ವಾಲೀ ವಧೆ' ಪ್ರಸಂಗದಲ್ಲಿ 'ಸುಗ್ರೀವ'ನ ಪಾರ್ಟು ಗಿಟ್ಟಿಸಿಕೊಂಡಿದ್ದ. ಒಂದು ಹಿಡಿ ಹೆಚ್ಚೇ ಉತ್ಸಾಹದಿಂದ ತಾಲೀಮಿನಲ್ಲಿ ಭಾಗವಹಿಸಿದ್ದ. ಕೊನೆಗೂ ಅವನಂದು ಕೊಂಡ ದಿನ ಬಂದೆ ಬಿಟ್ಟಿತ್ತು. ಹೂ ಕೊಯ್ಯುವ ಎಲ್ಲ ಮನೆಗಳಲ್ಲೂ "ಇವತ್ತು ಕೆಕ್ಕಾರಲ್ಲಿ 'ಆಟ' ಆದೇ ಹಾಂ.. ಮುದ್ದಾಮು ಬನ್ನಿ" ಎಂದು ಮದುವೆಯ ಸಡಗರವ ತುಂಬಿಕೊಂಡೇ ಕರೆದಿದ್ದ. 


ಪಪ್ಪನ ಹತ್ತಿರ ಹಠಮಾಡಿ ಮೊದಲ ಬಾರಿಗೆ ಕೆಕ್ಕಾರಿನ ಬಯಲಲ್ಲಿ ನಡೆದ ಆಟವನ್ನು ನೋಡಲು ನಡೆದಿದ್ದೆ ನಾನು . ಒಂದು ಪಾವು ಎಣ್ಣೆ ಹೊಡೆದೇ ಬಂದಿದ್ದ ನಮ್ಮ ಲಕ್ಷ್ಮಣನದು, 'ಭಲೇ ಭಲೇ' ಎನಿಸುವಂಥ ಅಭಿನಯ. ವಾಲೀ ಸುಗ್ರೀವರು ಹೊಡೆದಾಡುವ ದೃಶ್ಯ ಬಂದಾಗ ಪ್ರೇಕ್ಷಕರಿಂದ ಶಿಳ್ಳೆ. ಅಷ್ಟರಲ್ಲಿ ಅದೆಲ್ಲಿಂದ ಬಂತೋ ಆ ಶಕ್ತಿ. ಬಹುಷಃ ಹೊಟ್ಟೆಯೊಳಗಿನ 'ಪರಮಾತ್ಮನ' ಜೊತೆ ಶಿಳ್ಳೆಯ ಶಬ್ದವೂ ಸೇರಿ ಬಂದಿರಬೇಕು..!'ವಾಲಿ'ಯ ಪಾತ್ರಧಾರಿಯನ್ನು ಹಿಡಿದು ಕೆಳಕ್ಕೆ ಉರುಳಿಸಿದ್ದ. ಅವನ ಎದೆಯ ಮೇಲೆ ಕುಳಿತು. ಅವನಿಗೆ ಬಡಿಯುತ್ತ ಗಹಗಹಿಸಿ ನಗುತ್ತಿದ್ದ, ನಮ್ಮ ಸುಗ್ರೀವ ಯಾನೆ ಲಕ್ಷ್ಮಣ.!  ವಾಲಿಯ ಪಾತ್ರಧಾರಿ ನೋವಿನಿಂದ  "ಬೋ.. ಮಗನೆ ನೀ ಸೋಲ್ಬೇಕೋ ..ನೀ ಸೋಲ್ಬೇಕೋ ..." ಎಂದು ಹೇಳುತ್ತಿದ್ದದ್ದು ಎಲ್ಲರಿಗೂ ಕೇಳುತ್ತಿತ್ತು. ಪಡ್ಡೆ ಹುಡುಗರ ಶಿಳ್ಳೆ ಇನ್ನೂ ಜೋರಾದುದ ಕೇಳಿ ನಮ್ಮ ಸುಗ್ರೀವನ ಡೈಲಾಗ್ ಛೇಂಜ್ " ಗುಲಾಂ ನನ್ ಮಗನೆ, ಇಷ್ಟು ಜನರ ಎದ್ರಿಗೆ ನಾ ಸೋಲ್ಬೇಕೋ ? ಎಂತ ಮಾಡ್ಕಂಡಿದೆ ನಾನು ಅಂದ್ರೆ? ಕಾಲೇಜು ಹುಡ್ಗೀರು ಬಂದಾರೆ ನೋಡುಕೆ ಅವ್ರ ಮುಂದೆ ನಾ ಸೋಲ್ಬೇಕೋ ? ನಾನೂ ದುಡ್ ಕೊಟ್ಟಾನೆ, ಪುಕ್ಕಟ್ಟೆ ಪಾರ್ಟು ಕಟ್ಟಲಿಲ್ಲ ..  ನಿನ್ ಸೋಲ್ಸುಕೆ ರಾಮ ಬೇಡ್ವೋ ..ನನ್ ಕೈಯಲ್ ನಿನ್ ಸೋಲ್ಸುಕೆ ಆಗುದಿಲ್ಲಾ ನಿನ್ನ ಅಜ್ಜಿ ಕುಟ್ಟ ಬಂದಿ ? ತಕಾ " ಎನ್ನುತ್ತಲೇ ಇನ್ನೆರಡು ಗುದ್ದಿದ. ಕೊನೆಗೆ ಪರದೆಯ ಹಿಂದಿನಿಂದ ಜನ ಬಂದು ಅವನನ್ನು ಎಳೆದೊಯ್ಯಬೇಕಾಯಿತು.! ಅಲ್ಲಿಗೆ ಸುಗ್ರೀವನೇ ರಾಮನ ಹಂಗಿಲ್ಲದೆ ವಾಲಿಯನ್ನು ಹಣಿದಿದ್ದ.! ಲಕ್ಷ್ಮಣನ ಮೊದಲ ಹಾಗೂ ಕೊನೆಯ ಆಟದ ಪಾರ್ಟಿನ ಹುಚ್ಚು ಇಳಿದಿತ್ತು.!


ಮಾರನೆ ದಿನ ಹೂ ಕೊಯ್ಯಲು ಬಂದವನಲ್ಲಿ ಅಮ್ಮ "ಅದೆಂತದೋ ಲಕ್ಷ್ಮಣ ನಿನ್ನೆ ನೀ ಕಥೆನೇ ಉಲ್ಟಾ ಮಾಡಿದ್ಯಂತೆ ? " ಎಂದಿದ್ದಕ್ಕೆ. ಆಲ್ರ ಆಚೆ ಕೇರಿ 'ಶಾಂತರಾಮ' ಆವನ್ಯಲ್ರಾ. ಅವ ಹೇಳಿದ್ದ ನನ್ನ ಕೂಡೆ, ಲಕ್ಷ್ಮಣ.. ಅಷ್ಟೆಲ್ಲ ಕಾಲೇಜು ಹುಡ್ರು-ಹುಡ್ಗೀರು ಎಲ್ಲಾ  ಇರ್ತ್ರು ನೀನು ಅವ್ರೆಲ್ರ ಮುಂದೆ ಸೋಲ್ತ್ಯಾ ? ಹೇಳಿ.. ಅಲ್ಲ ಆಕ್ಕೋರೆ ಮರ್ವಾದಿ ಪ್ರಶ್ನೆ ಅಲ್ರಾ.. ಅದ ಕಾಗೆಯ ನಾನೂ ಸೋಲಲೇ ಇಲ್ಲ .. " ಎಂದು ಹೆಮ್ಮೆಯ ನಗೆ ನಕ್ಕಿದ್ದ ಅವನ ಕಂಡು ಅಮ್ಮ ನಿಜಕ್ಕೂ confuse ಆಗಿದ್ದರು.. !


ಒಮ್ಮೆ ಸಂಪಿಗೆ ಹೂ ಹೆಕ್ಕಲು ಬಂದ 'ನಾಗಮ್ಮಕ್ಕ'ನ ಬಳಿ . "ನಾಗಮ್ಮಕ್ಕ ಕೆಳಗೆ ಬರ್ಬೆಡವೇ ಕುಂಡಿಮೇಲೆ ಸಣ್ಣ ಕುರ ಎದ್ದದೆ.. ನಾ ಚಡ್ಡಿನೇ ಹಾಕ್ಕಂಡು ಬರಲಿಲ್ಲ ಇವತ್ತು .." ಎಂದು ಯಾವ ಮುಲಾಜು ಇಲ್ಲದೆ ಹೇಳಿದ್ದ. ಅವಳು "ಸಾಯಲ್ರಾ ಈ ಲಕ್ಷ್ಮಣನ ಹೂವು ಸಾಕು ..ಹನೀ ಮರ್ಯಾದಿಲ್ಲ ಬೇವರ್ಸಿಗೆ  " ಎನ್ನುತ್ತಲೇ ಕಸ ಗುಡಿಸಲು ನಡೆದಿದ್ದಳು. ಬಹುಷಃ ಅದಾದಮೇಲೆ ಅವಳು ಇಡಗುಂಜಿಯ ಹುಡುಗಿಯ ಹೆಸರಿನಲ್ಲಿ ಹೂ ಕೇಳುವುದನ್ನು ಬಿಟ್ಟಿದ್ದಳು. !
ಜೀವನದ ದುಃಖಗಳ ಮರೆಯಲು ಹೆಂಡದ ಸಹವಾಸ ಮಾಡಿದರೂ. ಅದೆಂಥದ್ದೋ ಜೀವನ ಪ್ರೀತಿ ಇತ್ತು ಅವನಲ್ಲಿ.! ತನ್ನದೇ ಆದ ಸಂಸಾರ ಕಟ್ಟಿಕೊಳ್ಳುವ ತುಡಿತವೊಂದಿತ್ತು. ಅವನ ಹಾಸ್ಯಪ್ರಜ್ಞೆ, ಕೆಲವೊಮ್ಮೆ ಮರೆಯಿಂದ ಇಣುಕುವ ಮುಗ್ಧತೆ. ಅಮಾಯಕ ಒಲವು. ಇದೆಲ್ಲ ನೆನಪಾಗಿತ್ತು ನನಗೆ. ಮತ್ತೊಮ್ಮೆ ಅವನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಲೂ ಆಗುವುದಿಲ್ಲ. ಅವನು ಇಹಲೋಕ ಯಾತ್ರೆಯ ಮುಗಿಸಿ 3 ವರುಷಗಳೇ ಕಳೆದಿವೆ. ನಮ್ಮನೆ ಸಂಪಿಗೆ ಮರಕ್ಕೆ ಹೂವಾದಾಗೆಲ್ಲ ಅವನೇ ನೆನಪಾಗುತ್ತಾನೆ, ನಮ್ಮನೆಯಲ್ಲಿ ಎಲ್ಲರಿಗೂ. "ವ್ಯಕ್ತಿ ಹೊರಟು ಹೋಗುತ್ತಾನೆ .. ಉಳಿಯುವುದು ಅವನ ನೆನಪುಗಳಷ್ಟೇ.." ಎಂಬ ಮಾತು ಅದೆಷ್ಟು ನಿಜ ಅಲ್ವಾ ?