Thursday, September 5, 2019

ಶಿಕ್ಷಕರಿಗೊಂದು ಸಲಾಂ

ಸಪ್ಟೆ೦ಬರ್ ೫ ಎ೦ದೊಡನೆ ನೆನಪಾಗುವುದು ಶಿಕ್ಷಕರು. 
ಕಾಲೇಜಿನ ಲೆಕ್ಚರುಗಳಿಗಿಂತ ಕನ್ನಡಶಾಲೆಯ, ಹೈಸ್ಕೂಲಿನ ಶಿಕ್ಷಕರೇ ಆಪ್ತರೆನಿಸುವುದು. ಯಾಕೆಂದರೆ ಅವರೆಲ್ಲ ಬಾಲ್ಯದ ನೆನಪುಗಳಲ್ಲಿ ಬೆರೆತ ಅಕ್ಕೋರು, ಮಾಸ್ತರುಗಳು.

*ಹತ್ತನ್ನೆರಡು ಉದ್ದುದ್ದ ಮೆಟ್ಟಿಲುಗಳಿದ್ದ ದೊಡ್ಡ ಹಾಲ್ ಒಂದರಲ್ಲಿ ನಮ್ಮ ಬಾಲವಾಡಿ ಇದ್ದದ್ದು! ಬಾಲವಾಡಿಯ ಒಳಗೇ ಎಲ್ಲ ಆಟವ ಆಡಬಹುದಾದಷ್ಟು ದೊಡ್ಡಕಿದ್ದ ಜಾಗವೂ ಇತ್ತು! ಆಟಗಳ ಮಧ್ಯೆ ಅಕ್ಷರಗಳನ್ನು ಕಲಿಸಿದ, ಅಂಕಲಿಪಿ, ಚಾರ್ಟುಗಳ ಜೊತೆಗೆ ಶಬ್ದಗಳ ಹೇಳಿಕೊಟ್ಟ,
 ’ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ’ ಹಾಡನ್ನು ರಾಗವಾಗಿ ನಮ್ಮತ್ರ ಹಾಡಿಸಿ, ನರಿ ಮತ್ತು ದ್ರಾಕ್ಷಿ ಹಾಡನ್ನು ಅಭಿನಯದೊ೦ದಿಗೆ ಹೇಳಿಕೊಡುವಾಗ ಒ೦ದು ಸಲ ಹಾರಿತು, ಎರಡುಸಲ ಹಾರಿತು ಎಂದು ಅವರೂ ಹಾರುತ್ತ, ನಮ್ಮನ್ನೂ ಹಾರಿಸಿ ನಕ್ಕು ನಗಿಸುತ್ತಿದ್ದ, ಬಾಲವಾಡಿಯ ಎಲ್ಲ ಪುಟಾಣಿಗಳನ್ನೂ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ’ಅಂಬಾಬಾಯಿ’ಯಂಥ ಅಕ್ಕೋರು ಎಲ್ಲ ಬಾಲವಾಡಿಗಳಲ್ಲೂ ಇದ್ದರೆ. ಮಕ್ಕಳು ರಗಳೆಯಿಲ್ಲದೇ ಶಾಲೆಗೆ ಹೋಗುತ್ತಿದ್ದರು! 

*ಉದ್ದನೆಯ ಎರಡೇ ರೂಮಿದ್ದ ಬಾಡಿಗೆ ಮನೆಯದು. ಸಂಜೆ ಮುಸುಕುವ ಹೊತ್ತಿಗೆ ಕೈಕಾಲು ತೊಳೆದು ನಾನು ಮತ್ತು ತಮ್ಮ ಬಾಗಿಲು ದಾಟಿ ಅವರ ಮನೆಗೆ ಹೋಗಿಬಿಡುತ್ತಿದ್ದೆವು. ಅಲ್ಲಿ ನಡೆಯುತ್ತಿದ್ದದ್ದು ಒಂದು ಚಂದನೆಯ ಸಂಜೆ ಶಾಲೆ! ನನ್ನದೇ ವಯಸ್ಸಿನ ಹರೀಶ ಭಟ್ಟ ಆಗಲೇ ಕೈಕಾಲು ತೊಳೆದು ಚಕ್ಕಂಬಕ್ಕಳ ಹಾಕಿ ಕೂತಿರುತ್ತಿದ್ದ. ನಾವು ಹೋಗಿ ಕೂತ ಬಳಿಕ ಬಳ್ಳಿ, ಮಗ್ಗಿ, ವಾರ, ತಿಥಿ, ತಿಂಗಳುಗಳು, ಮಳೆ ನಕ್ಷತ್ರಗಳು, ಋತುಗಳು, ಹೀಗೆ ಎಲ್ಲದರ ಬಾಯಿಪಾಠವಾಗುತ್ತಿತ್ತು. ಅದೆಲ್ಲ ಮುಗಿದ ನಂತರ ಒಂದಿಷ್ಟು ಚಿಣ್ಣರ ಹಾಡುಗಳು! ನನ್ನ ಮೆಚ್ಚಿನ ’ಬಾ ಬಾ ಗಿಳಿಯೆ ಬಣ್ಣದ ಗಿಳಿಯೆ, ಹರೀಶ ಭಟ್ಟ ಅಂಕುಡೊಂಕು ಕಾಲು ಹಾಕಿ ಅಭಿನಯಿಸಿ ನಮ್ಮ ನಗಿಸುತ್ತಿದ್ದ 'ನನ್ನ ನವಿಲೆ ನನ್ನ ನವಿಲೆ ಬಾರೆ ಇಲ್ಲಿಗೆ', ನನ್ನ ತಮ್ಮನ ಮೆಚ್ಚಿನ 'ಎಳೆಯುತ ಗಾಡಿ ಎತ್ತಿನ ಜೋಡಿ ದಡಬಡ ಸದ್ದಿನ ನಮ್ಗಾಡಿ' ಇಂಥ ಹಲವು ಹತ್ತು ಹಾಡುಗಳನ್ನು  ಅಭಿನಯದೊ೦ದಿಗೆ ಹೇಳಿಕೊಡುತ್ತಿದ್ದದ್ದು ನಾವು ಬಾಡಿಗೆಗಿದ್ದ ಮನೆಯ ಓನರ್ 'ಅಡಿಮಾಸ್ತರು'! ಅದೆಂಥ ಪ್ರೀತಿಯಿಂದ, ಆಸ್ಥೆಯಿಂದ ಅಭಿನಯಿಸುತ್ತಿದ್ದರೆಂದರೆ, ನಮ್ಮ ಉತ್ಸಾಹ ನೂರ್ಮಡಿಯಾಗುವಂತೆ! 

ನಮ್ಮನೆಯ ಗೇಟಿನಲ್ಲಿ ನಿಂತರೆ ರಸ್ತೆಯ ಕೊನೆಗೆ ಕಾಣುತ್ತಿದ್ದದ್ದೇ ನಮ್ಮ ಕನ್ನಡ ಶಾಲೆ. ಇದ್ದದ್ದು ಎರಡು ಮಾಸ್ತರು, ಒಬ್ಬರು ಅಕ್ಕೋರು! ಅಲ್ಲಿದ್ದ ಇಬ್ಬರು ಮಾಸ್ತರರಲ್ಲಿ ಒಬ್ಬರು 'ಮೂರ್ತಿಮಾಸ್ತರು'! ಅವರು ಕೈಬರೆಹದಿ೦ದ ನನಗೆ ಮಾದರಿ! ಅವರಷ್ಟು ಚೆಂದನೆಯ ಕನ್ನಡ, ಇಂಗ್ಲಿಷ್ ಜೊತೆಗೆ ದೇವನಾಗರಿ ಅಕ್ಷರವ ಬರೆವ ಇನ್ನೊಬ್ಬರನ್ನು ನಾನು ಕಂಡಿಲ್ಲ! ನನ್ನ ಅಕ್ಷರವನ್ನೂ ತಿದ್ದಿ ದುಂಡಾಗುವಂತೆ ಮಾಡಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು! 

ಇನ್ನೊಬ್ಬ ಮಾಸ್ತರು ಯಾವತ್ತೂ ಬಿಳಿ ಪ್ಯಾ೦ಟ್ ಬಿಳಿ ಶರ್ಟಿನಲ್ಲಿರುತ್ತಿದ್ದ ನಾಯಕ್ ಮಾಸ್ತರು! ಐದನೇ  ತರಗತಿಯಿಂದ ಇದ್ದ ಹಿಂದಿ ವಿಷಯವನ್ನು ಚೆಂದಕೆ ಪಾಠ ಮಾಡುತ್ತಿದ್ದ ಅವರ ವಿಶೇಷತೆಯೆಂದರೆ, ಹಿ೦ದಿ ಪುಸ್ತಕದಲ್ಲಿರುತ್ತಿದ್ದ ಅದ್ಯಾವ ಕವನವನ್ನಾದರೂ ಒ೦ದೇ ರಾಗದಲ್ಲಿ ಹಾಡುತ್ತಿದ್ದರು!!  ಬಡ ಮಕ್ಕಳ ಬಗ್ಗೆ ಬಹಳ ಕನಿಕರ ಹೊಂದಿದ್ದ ನಾಯಕ್ ಮಾಸ್ತರ್ರು ಪಟ್ಟಿ - ಪೆನ್ನು- ಪೆನ್ಸಿಲುಗಳನ್ನು ತಮ್ಮ ಹಣದಿಂದಲೇ ತಂದುಕೊಡುತ್ತಿದ್ದರು. 

*ಹೈಸ್ಕೂಲಿನಲ್ಲಿ ಇತಿಹಾಸವನ್ನು ಒ೦ಚೂರು ಬೋರು ಹೊಡಿಸದೇ ಸಣ್ಣ ಸಣ್ಣ ಕಥೆಗಳ ಮೂಲಕ, ಹಾಸ್ಯದ ಮೂಲಕ ಕಲಿಸಿ ಇತಿಹಾಸವನ್ನು ನನ್ನ ಮೆಚ್ಚಿನ ವಿಷಯವನ್ನಾಗಿಸಿದ ಎನ್. ಎಸ್ ನೈಕ್ ಮಾಸ್ತರು. ಇ೦ಗ್ಲಿಷ್ ಸಾಹಿತ್ಯದ ರುಚಿ ಹತ್ತಿಸಿದ, ನನ್ನ ಸಾಹಿತ್ಯದ ಕಡೆಗೆ ಬರುವ೦ತೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಉಭಯಕರ್ ಸರ್.

ಕೊನೆಗೆ ಎಲ್ಲಕ್ಕಿ೦ತ ಹೆಚ್ಚಿಗೆ ಜನನಿ ತಾನೇ ಮೊದಲ ಗುರುವು? ಬಾಲಮಂಗಳ, ಚಂಪಕ, ಚಂದಾಮಾಮ ಮುಂತಾದ ಮಕ್ಕಳ ಪುಸ್ತಕಗಳನ್ನು ಒಂದು ರಾಶಿ ಮನೆಗೆ ತರಿಸಿ ಓದಿನ ರುಚಿ ಹತ್ತಿಸಿದ್ದು ಅವರೇ! ಅಷ್ಟೇ ಅಲ್ಲ  ನನ್ನಮ್ಮನ ಶಿಷ್ಯೆ ನಾನು!  ಹೈಸ್ಕೂಲಿನಲ್ಲಿ ಕನ್ನಡ ಮತ್ತು ಸ೦ಸ್ಕೃತ ವಿಷಯಗಳನ್ನು ಕೊನೆಯ ಬೆ೦ಚಿನಲ್ಲಿ ಕುಳಿತು ಕೇಳಿದ್ದೇನೆ. ಅವರು ಪಾಠ ಹೇಳಿಕೊಡುವ ರೀತಿಯನ್ನು ಅತಿಯಾಗಿ ಮೆಚ್ಚಿದ್ದೇನೆ. ಸಿನಿಮಾ ರೀಲು ಕಣ್ಣೆದುರಿಗೆ ಬಿಚ್ಚಿದ೦ತೆ ಹೇಳುವ 'ತಿರುಕೊಳವಿನಾಚಿ', ಗಾಳಿಪಟರಾಯ, ಸೂರ್ಯಭಾನು-ಚಂದ್ರಭಾನು ಮುಂತಾದ ಕಥೆಗಳನ್ನು ಅವರು ಹೇಳುವ ಬಗೆಯ ಕೇಳಿ ’ವಾಹ್’!! ಎ೦ದಿದ್ದೇನೆ. ಅವರು ಶಾಲೆಯಲ್ಲಿ ಕಲಿಸಿದ ಮಗು ಕಲಿಸಿದ ಪಾಠ, ನಾಣಿ, ಬೂಟ್ ಪಾಲಿಶ್, ಅನಿಕೇತನ, ನಿತ್ಯೋತ್ಸವ, ಗದಾಯುದ್ಧ ಮುಂತಾದ ಪಾಠ-ಪದ್ಯಗಳೂ ಇನ್ನೂ ಸ್ಮೃತಿಪಟಲದಲ್ಲಿ ಅಚ್ಚಳಿಯದಂತಿವೆ. 
ಕನ್ನಡ ಹಾಗೆಯೇ ಸಂಸ್ಕೃತ ಸಂಧಿಗಳನ್ನು ಈಗ ಬೇಕಿದ್ದರೂ ಬಿಡಿಸಿ ಹೆಸರಿಸುವಷ್ಟು ನೆನಪಿದೆ ನನಗೆ! 
ಅವರು ಮನೆಯಲ್ಲಿ ಹೇಳಿಕೊಡುವಾಗ ಹೊಡೆತ ತಿ೦ದಿದ್ದೇನೆ. ಕ್ಲಾಸಿನಲ್ಲಿ ಮಾತಾಡಿ ಮೊನಿಟರ್ ಬೋರ್ಡಿನಲ್ಲಿ ಹೆಸರು ಬರೆದಿಟ್ಟಾಗ ಅಮ್ಮ ಬ೦ದು ಬಸ್ಕಿ ಹೊಡೆಸಿದ್ದಾಗ ಮುಖ ಊದಿಸಿಕೊ೦ಡಿದ್ದೇನೆ. ಶಾಲೆಯಲ್ಲಿ ಒಮ್ಮೆಯೂ ನನ್ನನ್ನು 'ಪುಟ್ಟೀ' ಎ೦ದು ಕರೆಯದೆ, 'ಸೌಮ್ಯಾ' ಎಂದೇ ಕರೆಯುತ್ತಿದ್ದುದಕ್ಕೆ ಭಯಂಕರ ಕೋಪವಿತ್ತು.  ಕ್ಲಾಸಿನಲ್ಲಿ ಒಮ್ಮೆಯಾದರೂ ಅವರನ್ನು ’ಆಯೀ’ ಎ೦ದು ಕರೆಯ ಬೇಕೆ೦ದುಕೊ೦ಡಿದ್ದೆ. ಆದರೆ ನಾನು ಹೈಸ್ಕೂಲು ಮುಗಿಸುವ ವರೆಗೂ ಅದು ಸಾಧ್ಯವಾಗಲೇ ಇಲ್ಲ.! 
ಮನೆಯಲ್ಲಿದ್ದ ಸಲುಗೆ ಶಾಲೆಯಲ್ಲಿ ಇರುತ್ತಲೇ ಇರಲಿಲ್ಲ. 
ಅಲ್ಲವರು ಶಿಕ್ಷಕಿ ನಾನು ಶಿಷ್ಯೆ ಅಷ್ಟೇ! 
ಮೊನ್ನೆ ನಮ್ಮೂರಿನ ಅಣ್ಣನೊಬ್ಬ ಹೇಳುವಂತೆ ಅವರೊಬ್ಬ ಶಿಕ್ಷಕರಷ್ಟೇ ಅಲ್ಲ ಒಂದೊಳ್ಳೆ ಮೆಂಟರ್ ಕೂಡ! 

ನನಗೆ ಹತ್ತಿದ್ದ ಫೊಟೊಗ್ರಫಿಯ ಹುಚ್ಚಿಗೆ ನೀರೆರೆದು ಪೋಷಿಸಿದ ದೂರದ ಅಮೆರಿಕೆಯಲ್ಲಿರುವ ನಂದಕುಮಾರ ಬದುಕು ನಂಗೆ ಕೊಟ್ಟ ಗುರುಗಳು! 

ಹಾಗೆಯೇ ನನ್ನ ಜ್ಞಾನದ ದಾಹವನ್ನು ತಣಿಸಿದ ತಣಿಸುತ್ತಿರುವ ಅಸಂಖ್ಯಾತ ಪುಸ್ತಕಗಳಿಗೆ, ಹಾಗೆಯೇ ಹೊಸ ಹೊಸ ಸವಾಲನ್ನು ಒಡ್ಡುವ ಇಷ್ಟವಿಲ್ಲದಿದ್ದರೂ ಮೊಂಡಾಗಿ ಕಲಿಸುವ, ನಾನು ಅತಿ ಹೆಚ್ಚು ಪ್ರೀತಿಸುವ ನನ್ನ ಬದುಕಿಗೆ Happy Teachers Day!!