
ಅಮ್ಮನ ಹತ್ರ ತಲೆ ಬಾಚಿಸ್ಕೊಳ್ದೆ ಅದೆಷ್ಟು ದಿನಗಳಾಯ್ತು ಅಂತ ಯೋಚಿಸ್ತಾ ,ನನ್ನ ಒದ್ದೆ ಮೋಟು ಕೂದಲನ್ನು ಹರಡಿಕೊಂಡು ಜಗುಲಿಯ ಮೇಲೆ ಕೂತಿದ್ದೆ ಮೊನ್ನೆ ಜನೆವರಿ ೨೬ರ ಮಧ್ಯಾಹ್ನ .ನನ್ನ high schoolನ ದಿನಗಳಲ್ಲಿ , schoolಗೆ ಹೋಗೋ ಗಡಿಬಿಡಿಯಲ್ಲಿರುತ್ತಿದ್ದ ಅಮ್ಮನ ಹಿಂದೆ ಮುಂದೆ ಓಡಾಡಿ ಬೈಸಿಕೊಳ್ಳುತ್ತ ಜಡೆ ಹಾಕಿಸಿಕೊಳ್ಳುತ್ತಿದ್ದೆ . ತುಂಬಾ ಉದ್ದನೆಯ, ದಪ್ಪಗಿನ ಎರಡು ಜಡೆ.! ಎಷ್ಟೋ ಜನ ಕಣ್ಣು ಹಾಕುತ್ತಿದ್ದರು,ಜಡೆ ತುಂಬಾ ಚೆಂದ ಇದೆ ಎಂದು. ನನಗೆ ಜಡೆ ಹಾಕಿಕೊಳ್ಳಲೂ ಬರುತ್ತಿರಲಿಲ್ಲ. ಅಮ್ಮ ಜಡೆ ಹಾಕಿಕೊಟ್ಟರೂ ಸರಿ ಆಗಲಿಲ್ಲವೆಂಬ ಕಿರಿ ಕಿರಿ ಬೇರೆ. ಮೊದಲೇ ಗಡಿಬಿಡಿಯಲ್ಲಿ ಇರುತ್ತಿದ್ದ ಅಮ್ಮನಿಗೆ ಬೈಯದೆ ವಿಧಿ ಇರಲಿಲ್ಲ.
ಶಾಲಾ ದಿನಗಳ ನಂತರ ನನ್ನ ಉದ್ದನೆಯ ಚಂದದ ಕೂದಲಿಗೆ ಕತ್ತರಿ ಬಿದ್ದಿತ್ತು . ಗೆಳತಿಯರು ಯಾಕೆ cut ಮಾಡಿದೆ ? ಎಂದು ಕೇಳಿದರೆ , ಉದ್ದದ ಕೂದಲನ್ನು maintain ಮಾಡೂದು ಕಷ್ಟ ಎನ್ನೋ ಉತ್ತರ ರೆಡಿ ಇತ್ತು . ತುಂಬಾ comfort ,ಬರೆ ಹತ್ತು ನಿಮಿಷಗಳಲ್ಲಿ ರೆಡಿ ಆಗ್ತೇನೆ ,ಬೇಕೆನಿಸಿದಾಗ ತಲೆ ಸ್ನಾನ ಮಾಡಬಹುದು ಹೀಗೆ ಉದ್ದಕ್ಕೆ ಸಾಗುತ್ತಿತ್ತು ನನ್ನ ಕಾರಣಗಳ ಸಾಲು.
ನಂತರ ನಾನೇ ಬಾಚಿಕೊಳ್ತಿದ್ದೆ, ಜುಟ್ಟು ಹಾಕಿ ಹೋಗುತ್ತಿದ್ದೆ . ಜುಟ್ಟಿನ ಪಕ್ಕ ನನ್ನ dressಗೆ ಮ್ಯಾಚ್ ಆಗೋ ಎರಡು ಕ್ಲಿಪ್ಪುಗಳು . ನನ್ನ ಗೆಳತಿಯೊಬ್ಬಳು ಆ ಕ್ಲಿಪ್ಪುಗಳನ್ನು 'ಜುಟ್ಟು ರಕ್ಷಕರು' ಎಂದು ಕರೆಯುತ್ತಿದ್ದಳು .
ಆದರೆ ಮೊನ್ನೆ ಯಾಕೋ ಅಮ್ಮನಹತ್ರ ಜುಟ್ಟು ಹಾಕಿಸ್ಕೊಳ್ಬೇಕು ಅನಿಸ್ತು. ಅಷ್ಟರಲ್ಲೇ ಅಮ್ಮ "ಎಷ್ಟು ಚಂದಕಿತ್ತು ಜಡೆ ಕತ್ತರಿಸಿ ಈಗ ಕೋಳಿ ಪುಕ್ಕದಂಗೆ ಕಾಣ್ತು ನೋಡು .!" ಎನ್ನುತ್ತಾ ಹತ್ತಿರ ಬಂದರು . " "ನಂಗೆ ಜುಟ್ಟು ಹಾಕ್ಕೊಡು" ಎಂದೆ. ಬಾಚಣಿಗೆ ತಂದೇ ಬಿಟ್ಟರು . ಅವರು ಬಾಚ್ತಿದ್ದಾಗ ಅದೇಕೋ ಸ್ವಲ್ಪ emotional ಆಗ್ಬಿಟ್ಟೆ ಕಣ್ಣೇರು ಕೆನ್ನೆಗೆ ಹರಿಯದಿದ್ದಂತೆ ತಡೆ ಹಿಡಿದಿದ್ದೆ. ಅಮ್ಮ ಎರಡು ಜುಟ್ಟು ಹಾಕಿದ್ದರು. ಅವರಿಗೋ ಅವರ 'ಮುದ್ದು ಪುಟ್ಟಿ' ಕೈಗೆ ಸಿಕ್ಕ ಹಾಗಿತ್ತು , ನಗುತ್ತಿದ್ದರು. ನಾನು ಕನ್ನಡಿಯ ಮುಂದೆ ಓಡಿ ಹೋಗಿದ್ದೆ.
ಅಷ್ಟರಲ್ಲಿ ತಮ್ಮ ಬಂದಿದ್ದ. " "primary schoolಗೆ ಹೋಗಿ ಕೂತ್ಕ , ನೀ ದಿನ ಹೋದಂಗೆ ಸಣ್ಣಾಗು " ಎಂದ .!ಪುಟ್ಟ ಪುಟ್ಟ ಸಂತೋಷಗಳನ್ನು ಸಂಭ್ರಮಿಸುವ ನನಗೆ ಅದಾವುದರ ಪರಿವೆ ಇರಲಿಲ್ಲ, ತಮ್ಮನಿಗೆನು ಅರ್ಥವಾಗಬೇಕು ನನ್ನ ಮತ್ತು ಅಮ್ಮನ ಖುಷಿ. .! ?
ಇಂತಹ ಕ್ಷಣಗಳಲ್ಲೇ ಇರುವುದಲ್ಲವೇ ಜೀವನದ ಖುಷಿ . ಸಂತೋಷ ,ಖುಷಿಗಳು ನಮ್ಮನ್ನು ಹುಡುಕಿ ಬರಲಾರವು ನಾವೇ ಅವುಗಳನ್ನು ಹುಡುಕಿಕೊಂಡು ಹೋಗಬೇಕು ಅಲ್ವಾ?














