Thursday, July 29, 2010

ಜೀವನ್ಮುಖಿ .......!


ಅವನೊಬ್ಬ ಕಲಾವಿದ. ಐವತ್ತರ ಆಸುಪಾಸಿನ ವಯಸ್ಸಿರಬಹುದು ಅವನದು. ನಗರದ ಗಿಜಿಗಿಜಿ ಜನಜೀವನದ ಪರಿಧಿಯಿಂದ ದೂರವಿರುವ ಕಡಲ ತಡಿಯ ಪುಟ್ಟ ಮನೆಯೊಂದರಲ್ಲಿ ವಾಸ. ಜನರ ಮುಖಗಳನ್ನು ಭಾಗಶಃ ಮರೆತಂತಿದ್ದಾನೆ. ಕುಂಚ ಬಣ್ಣಗಳೊಂದಿಗೆ ಆಟ, ಒಡನಾಟ ಎಲ್ಲ. ಹಸಿವಾದದ್ದು ನೆನಪಾದರೆ ಏನಾದರೂ ತಿನ್ನುತ್ತಾನೆ, ಇಲ್ಲದಿದ್ದರೆ ಅದೂ ಇಲ್ಲ.!

ಉದ್ದನೆಯ ಕೋಲು ದೇಹಕ್ಕೆ ತಗುಲುಹಾಕಿದಂತಿರುವ ಬಣ್ಣ ಮಾಸಿದ T-shirt, ನೀರು ಕಂಡು ಅದೆಷ್ಟೋ ತಿಂಗಳಾಗಿರುವ ಒಂದು pant. ಅರೆಬರೆ ಗಡ್ಡದ ಮರೆಯಲ್ಲಿ ಇಣುಕುವ ಹೊಳಪುಳ್ಳ ಎರಡು ಕಂಗಳಲ್ಲಿ ಅದೇನೋ ಚಡಪಡಿಕೆ, ನಿರೀಕ್ಷೆ, ಅಸಹಾಯಕತೆ, ನಶೆ ಎಲ್ಲ ಭಾವಗಳ ಮಿಶ್ರಣ. ಕೆಲವರಿಗೆ ಅವನ ಪರಿಚಯವಿದೆ ನಗರದಲ್ಲಿ ಅದೇನೇನೋ ಕಥೆಗಳು ಅವನಹಿಂದೆ. ಹಿಂದೊಮ್ಮೆ ಪ್ರಖ್ಯಾತನಾಗಿದ್ದ ತನ್ನ ವಿಶಿಷ್ಟ ಶೈಲಿಯ ಚಿತ್ರಗಳಿಂದ.

ಅವನ ಚಿತ್ರಗಳೇ ಹಾಗೆ, ಮಾನವನ ಮನದಾಳದ ಭಾವನೆಗಳನ್ನು ನವರಸಗಳನ್ನು ಪ್ರಕೃತಿಯೊಂದಿಗೆ ಬೆರೆಸುತ್ತಿದ್ದ. ಬಾಡಿದ ಕಮಲಗಳು, ಸೋತ ತಾಳೆಮರ ಅವನ ಮನದ ಬೇಸರದ ಭಾವಗಳಿಗೆ;ಅಸಹಾಯಕತೆಗೆ ಬಲೆಯೊಳಗಿನ ಮೀನು, ಹಕ್ಕಿಗಳು; ಮನದೊಳಗಿನ ಸಿಟ್ಟು ಸೆಡವುಗಳಿಗೆ ಭುಗಿಲೆದ್ದ ಜ್ವಾಲಾಮುಖಿ, ರೌದ್ರಾವತಾರದ ಸಮುದ್ರದಲೆಗಳು;ಒಮ್ಮೊಮ್ಮೆ ಮೂಡುವ ಪ್ರೀತಿಗೆ ಕೊಳದಲ್ಲಿ ಜೊತೆಯಾಗಿ ಈಜುತ್ತಿರುವ ಹಂಸಗಳು ಹೀಗೆ ಹಲವಾರು ಭಾವಗಳು ಕುಂಚದಲ್ಲಿ ಮೂಡುತ್ತಿದ್ದವು.

ಕೆಲವು ಕಲಾಕೃತಿಗಳನ್ನು ಮಾರುತ್ತಿದ್ದ, ಇನ್ನು ಕೆಲವು ಅವನ ನೆಚ್ಚಿನ ಕಲಾಕೃತಿಗಳನ್ನು ಬಚ್ಚಿಟ್ಟಿದ್ದ. ಇತ್ತೀಚಿಗೆ ವಿಪರೀತ ಎನ್ನುವಷ್ಟು ಖಿನ್ನತೆಗೆ ಒಳಗಾಗಿದ್ದ ಅವನಲ್ಲಿ ಜೀವನಪ್ರೀತಿ,ಸ್ಪೂರ್ತಿಯೇ ಕಳೆದುಹೋದಂತಿತ್ತು. ಬಣ್ಣ-ಕುಂಚಗಳ ಜೊತೆಗೆ ಆಟವಾಡದೆ ಹಲವು ಹುಣ್ಣಿವೆಗಳು ಕಳೆದು ಹೋಗಿದ್ದವು. ಬೇಸರದ ಜೀವನಕ್ಕೆ ಒಂದು ಕೊನೆ ಕಾಣಿಸಲು ನಿರ್ಧರಿಸಿದ್ದ. 'ಬಚ್ಚಿಟ್ಟ ಕಲಾಕೃತಿಯಲ್ಲಿ ಒಂದನ್ನು ಮಾರಿ 'ವಿಷವನ್ನು' ತರುವುದೆಂದು'...!
ನಿಧಾನಕ್ಕೆ ಎದ್ದು ಹಳೆಯ ಪೆಟ್ಟಿಗೆಯೊಂದನ್ನು ಹೊರತೆಗೆದ. ಒಂದೊಂದು ಕಲಾಕೃತಿಗಳ ಮೇಲಿನ ಧೂಳನ್ನು ಒರೆಸುತ್ತಾ ಬಂದ. ಅದ್ಭುತ ಕಲಾಕೃತಿಗಳು ಅವು.! ಅವುಗಳ ಮೇಲಿನ ವ್ಯಾಮೋಹದಿಂದ ಮಾರದೆ ಎತ್ತಿಟ್ಟಿದ್ದ . ಈಗ ಯಾವುದನ್ನು ಮಾರುವುದೆಂದೇ ತಿಳಿಯುತ್ತಿರಲಿಲ್ಲ ಅವನಿಗೆ.!

ಗೊಂದಲದಲ್ಲಿರುವಾಗಲೇ ಕಂಡದ್ದು ಪೆಟ್ಟಿಗೆಯಲ್ಲಿ ಇನ್ನೂ ಒಂದು ಬಾಕಿ ಇದ್ದದ್ದು. ಅದನ್ನು ಎತ್ತಿ ಒರೆಸತೊಡಗಿದ." ಅರೆ ಇದರಲ್ಲಿ ನಾನೂ ಇದ್ದೆನಲ್ಲವೇ?" ಮುಖದಲ್ಲಿ ಕಂಡೂ ಕಾಣದಂಥ ಒಂದು ಮುಗುಳ್ನಗು ಹಾದು ಹೋಗಿತ್ತು..!ಮನಸ್ಸು ಹಿಂದೆ ಓಡಿತ್ತು.

ಹಲವು ವರ್ಷಗಳ ಹಿಂದಿನ ಘಟನೆಯದು. ಹೀಗೆ ಒಮ್ಮೆ ಅವನ ಬದುಕಿನಲ್ಲಿ ಕಾಡಿತ್ತು ಅಸಹಾಯಕತೆ, ಭಗ್ನ ಪ್ರೇಮ, ಖಿನ್ನತೆ ಎಲ್ಲ ..! ಒಂದು ಸಂಜೆ ಹೊರಟುಬಿಟ್ಟಿದ್ದ ಕಡಲ ಅಲೆಗಳಲ್ಲಿ ಒಂದಾಗಲು. ದಾಪುಗಾಲು ಹಾಕುತ್ತ ಸಾವನ್ನು ಹುಡುಕಲು ಹೊರಟವನ ಕಣ್ಣಿಗೆ ಅದೇನೋ ಕಂಡಿತ್ತು ದೂರದಲ್ಲಿ. ಅದರ ಹತ್ತಿರ ಸಾಗುತ್ತಿದ್ದಂತೆ ಕಂಡದ್ದಿಷ್ಟು:ಸುಮಾರು ಎಂಟು ಒಂಭತ್ತರ ಹರೆಯದ ಪೋರಿಯೋಬ್ಬಳು ಮರಳಿನಲ್ಲಿ, ಸಮುದ್ರದ ಅಲೆಗಳ ಜೊತೆ ಆಡುತ್ತಿದ್ದಳು.ರಾಶಿ ರಾಶಿ ಮರಳಲ್ಲಿ ಅದೇನೋ ಗೀಚುತ್ತಿದ್ದಳು,ಅಲೆ ಬಂದು ಒರೆಸಿಕೊಂಡು ಹೋದಾಗ ಕೇಕೆ ಹಾಕಿ ನಗುತ್ತಿದ್ದಳು.ಮರಳ ಗೋಪುರವನ್ನು ಕಟ್ಟುತ್ತ ಅದು ಕುಸಿದು ಬಿದ್ದರೂ ನಗುತ್ತಲೇ ತನ್ನ ಆಟವನ್ನು ಮುಂದುವರೆಸಿದ್ದಳು ಹುಡುಗಿ. ಕಲಾವಿದ ನೋಡುತ್ತಲೇ ಇದ್ದ..... ಸಾವಿನ ನೆನಪು ಕಳೆದುಹೋಗಿತ್ತು. ಮನೆಯ ಹಾದಿ ಹಿಡಿದವನ ಮನದಲ್ಲಿ ಅದಾಗಲೇ ಕಲಾಕೃತಿಯೊಂದು ಮೂಡಿತ್ತು. ಮನೆಸೇರುತ್ತಲೇ ಬಣ್ಣಗಳಲ್ಲಿ ಜೀವ ತಳೆದಿತ್ತು ಕೂಡ. ..! ಅದೇ ಮರಳ ರಾಶಿಯಲ್ಲಿ ಆಡುತ್ತಿರುವ ಹುಡುಗಿ ಸಾಗರದ ಹಿನ್ನೆಲೆಯಲ್ಲಿ ಮೂಡಿಬಂದಿದ್ದಳು.ಆಟವನ್ನು ನೋಡುತ್ತಾ ನಿಂತಿದ್ದ ಇನ್ನೊಂದು ಮಾನವಾಕೃತಿಯನ್ನೂ ಮೂಡಿಸಿಬಿಟ್ಟಿದ್ದ ತನಗೆ ಗೊತ್ತಿಲ್ಲದಂತೆ ಕಲಾವಿದ..!

ಅದೇ ಕಲಾಕೃತಿ ಇಂದು ಅವನ ಕೈಯಲ್ಲಿ ಮತ್ತೊಮ್ಮೆ ಬಂದು ಕೂತಿದೆ. ಹಿಂದಿನದೆಲ್ಲ ನೆನಪಾಗಿ ಮನಸಾರೆ ನಕ್ಕುಬಿಟ್ಟ. ಎಲ್ಲ ಚಿತ್ರಗಳನ್ನು ಪುನಃ ಜೋಡಿಸಿ ಮತ್ತದೇ ಹಳೆಯ ಪೆಟ್ಟಿಗೆಯಲ್ಲಿ ಇಟ್ಟುಬಿಟ್ಟ. ಮತ್ತೊಂದು ಚಿತ್ರ ಬರೆಯಲು ಮನಸು ತಯಾರಾಗಿತ್ತು. ಖಿನ್ನತೆ ತಂತಾನೇ ಮಾಯವಾಗಿತ್ತು..! ಮನಸು ಜೀವನ್ಮುಖಿಯಾಗಿತ್ತು ..!

Thursday, July 22, 2010

ಮಳೆಹನಿಗಳ ಜೊತೆಯಲಿ ....


ಭೂಮಿಯಲ್ಲಿನ ನೀರು ಆವಿಯಾಗಿ, ಮೋಡವಾಗಿ ವಿಶ್ವಪರ್ಯಟನೆ ಕೈಗೊಂಡು, ತಂಪು ಸಿಕ್ಕಾಗ ಮಳೆ ಹನಿಯಾಗಿ ಭೂಮಿಗೆ ಮರಳುತ್ತದೆ. ಇದೆಲ್ಲ school daysನಲ್ಲೆ ಗೊತ್ತಿದೆ ಅಂತೀರಾ ? ಇಲ್ಲಿ ನಾನು ಮಳೆಹನಿಗಳಿಗೆ ಭಾವನೆಯನ್ನು ಕೊಡಲು ಹೊರಟಿದ್ದೇನೆ . ನೋಡಿ ....

ಕೆಲವು ಮಳೆಹನಿಗಳು ಸಮುದ್ರ, ನದಿಗಳಲ್ಲೇ ಬಿದ್ದು ಅಖಂಡ ಜಲರಾಶಿಯಲ್ಲಿ ಒಂದಾಗುತ್ತದೆ. ಹನಿ ಹನಿ ಕೂಡಿ ಹಳ್ಳ ಎಂದು ಹೇಳುತ್ತವೆ.ಇನ್ನು ಕೆಲವು ಗುಡ್ಡ, ಬೆಟ್ಟ, ಮಳೆ ಕಾಡುಗಳ ನಡುವೆ ಬಿದ್ದು ಒಂದಾಗಿ ಜಲಪಾತವಾಗಿ ಧುಮ್ಮಿಕ್ಕುತ್ತವೆ. . ಇನ್ನೂ ಕೆಲವು ಮಣ್ಣಲ್ಲಿ ಇಂಗಿಹೋಗುವ ಮೊದಲು, ನಮ್ಮ-ನಿಮ್ಮ ಮನೆಯ ಅಂಗಳದ ಹೂಗಿಡಗಳ ಮೇಲೆ, ಎಲೆಗಳ ಮೇಲೆ ಬಿದ್ದು ನಲಿಯುತ್ತವೆ. ಒಣಗಲು ಹಾಕಿದ ಬಟ್ಟೆಯಮೇಲೆ ಬಿದ್ದು ಗೋಳು ಹೊಯ್ಸುತ್ತವೆ ಅಲ್ವಾ ? ಸೊಕ್ಕು ,ಮುಗ್ಧತೆ, ಅಸಹಾಯಕತೆ , ಅಟ್ಟಹಾಸ, ಅಸೂಯೆ, ಎಲ್ಲ ಭಾವಗಳನ್ನು ಹೊರಸೂಸುವ ಮಳೆಹನಿಗಳು ನನ್ನ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ ...!





ಇನ್ನೂ ಅರಳಬೇಕಿರುವ ಗುಲಾಬಿ ಮೊಗ್ಗಿನ ಮೇಲೆ ಮುಗುಮ್ಮಾಗಿ ಕುಳಿತು ಸುತ್ತಲಿನ ಜಗತ್ತನ್ನು ಕುತೂಹಲದಿಂದ ನೋಡುತ್ತಿರುವ ಪುಟ್ಟ ಮಳೆ ಹನಿ ಆರಿಹೊಯಿತೋ, ಮಣ್ಣು ಸೇರಿತೋ ನೋಡಿದವರಿಲ್ಲ. .!

ಗಿಡವೊಂದರ ಬಣ್ಣದ ಎಳೆಗಳ ಮೇಲೆ ಕುಳಿತಿರುವ ಮಳೆಹನಿಗಳು ಕಾಯುತ್ತಿರುವುದಾದರೂ ಯಾರನ್ನು ?
ಸುಂದರಿಯ ಮೂಗುತಿಯೋ ಇದು.? ಮಣ್ಣು ಸೇರಲು ಕಾತುರದಿಂದ ಕಾಯುತ್ತಿರುವ ಮಳೆಹನಿ ಬಾನಂಚಿನ ಉಲ್ಕೆಯಂತೆ ಜಾರಿ ಬೀಳಬಹುದು ..!

ಅದ್ಯಾವುದೋ ಹಕ್ಕಿಯ ಬಿದ್ದ ರೆಕ್ಕೆಯ ಮೇಲೆ ಬಿದ್ದಿರುವ ಅಸಹಾಯಕ ನೀರಹನಿ... ಇದರ ಗೋಳನ್ನು ಕೇಳುವವರಿಲ್ಲ ..!
ಹೂಗಳ ರಾಣಿ ತಾನೆಂದು ಬೀಗುವ, ಅದೀಗ ಬಿರಿದ ಗುಲಾಬಿ ಪಕಳೆಗಳ ಮಧ್ಯೆ ವಯ್ಯಾರ ತೋರುವ ಮಳೆಹನಿಗಳು..!
ಅಪ್ಸರೆಯೊಬ್ಬಳ ಮುತ್ತಿನ ಹಾರವೆಲ್ಲೋ ಹರಿದು ಮುತ್ತುಗಳೆಲ್ಲ ಚೆಲ್ಲಾಪಿಲ್ಲಿ ಆದಂತೆ ಕಾಣುವ ಕೆಸುವಿನ ಎಲೆಗಳ ಮೇಲೆ ಬಿದ್ದ ನೀರ ಹನಿಗಳು .! ನೀರಲ್ಲಿ ಮುಳುಗಿಸಿದರೆ ಒದ್ದೆಯಾಗದ ಕೆಸುವಿನ ಎಲೆಗಳಿಗೆ ಅದೇನೋ ಪ್ರೀತಿಯಂತೆ ಮಳೆಹನಿಗಳ ಮೇಲೆ ..!


ಹೋಳಿಹಬ್ಬದ ನೆನಪಾಗಿ ಮನೆಯಂಗಳದ ಚೆಂದದ ಬಣ್ಣದ ಕೆಸುವಿನ ಎಲೆಗಳ ಮೇಲೆ ಬಂದು ಬಿದ್ದ ಮಳೆಹನಿಗಳು ..!
ಪುಟ್ಟ ಪುಟ್ಟ ಎಳೆಗಳ ಮೇಲೆ ಹರಡಿರುವ, ಜಾರಿ ಬೀಳುವ ಭಯದಲ್ಲಿರುವ ಮಳೆಹನಿಗಳು ....!
ಮದುಮಗಳ ಬೈತಲೆಯ ಸಿಂಗರಿಸಲು ಹೊರಟ ಮಳೆಹನಿಗಳಿಗೆ ಹೊರಡುವ ತರಾತುರಿ ..!
ಹೂವಿನ ಕೇಸರಗಳ ಮೇಲೆ ಕುಳಿತು ಬೀಗುತ್ತಿರುವ ಮಳೆಹನಿಗಳು ...!
ನಾವೆಲ್ಲಾ ಮುಟ್ಟಿದೊಡನೆ ಮುನಿಯುವ ವಯ್ಯಾರಿಗೆ ಮಳೆಹನಿಗಳು ಮುಟ್ಟಿದರೆ ತೊಂದರೆ ಇಲ್ಲವಂತೆ ..!
ಭಯಂಕರವಾದ ತಪಸ್ಸಿಗೆ ಕುಳಿತಂತೆ ಕಾಣುವ ಮಳೆಹನಿ, ಪರಿಸರ ಮಾಲಿನ್ಯ ತಡೆಗಟ್ಟುವಂತೆ ವರ ಕೇಳಬಹುದೇ ದೇವರು ಪ್ರತ್ಯಕ್ಷನಾದರೆ ...!
ಸ್ಪಟಿಕದ ಹರಳುಗಳಂತೆ ಕಾಣುವ ಮಳೆಹನಿಗಳಿಗೆ ತಮ್ಮ ಬಿಂಬವ ನೋಡುವ ಆಸೆ ಆಗಿದೆಯಂತೆ ..!



ಮಳೆಹನಿಗಳು ಜೀವ ಜಾಲಕ್ಕೆ ಅಮೃತ ಬಿಂದುಗಳು. ದೈತ್ಯಾಕಾರದ ಆ ಕಪ್ಪು ಮೋಡಗಳು ಹೊತ್ತುತರುವ ಕೋಟಿ ಜಲಬಿಂದುಗಳಲ್ಲಿ ಕೇವಲ ಒಂದೇ ಒಂದು ಮಳೆಹನಿಗಾಗಿ ಎಲ್ಲೊ ಒಂದು ಚಾತಕ ಪಕ್ಷಿಯು ಕಾಯ್ದಿರುತ್ತದೆ, ಯಾವುದೋ ಒಂದು ಹೂವು ಆ ಮಳೆಹನಿಗಾಗಿ ತಲೆಬಾಗುತ್ತದೆ. ಭುವಿಯಲ್ಲಿ ಇಳಿಯುವ ಮಳೆಹನಿ ಸುತ್ತಲು ಹಸಿರಿನ ಚಾದರವನ್ನು ಹಾಸುತ್ತದೆ.
ಮಳೆಯಿಲ್ಲದೆ ಬಾಯಾರಿಕೆಯಿಂದ ಸಾಯುವ ಜೀವಗಳು ಅದೆಷ್ಟೋ ..... ಮನೆಯ ನಲ್ಲಿಯನ್ನು ತಿರುಗಿಸಿದೊಡನೆ ನೀರ ಹರಿವನ್ನು ಕಾಣುವ ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೆ ಅಲ್ವಾ ?


Tuesday, July 20, 2010

ಬಾಲ್ಯದ ನೆನಪುಗಳ ಕೆದಕುವ ಮಳೆಹನಿಗಳು





ಮಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದೆ.ಐದು ಗಂಟೆಯ ಪಯಣ.ಪಕ್ಕದ ಸೀಟಿನಲ್ಲಿ ಸಂಭಾವಿತ ಆಸಾಮಿ ಕೂತಿದ್ದರೆ ಅವರನ್ನು ಮಾತಿಗೆಳೆಯುವುದು ನನ್ನ ವಾಡಿಕೆ. ಅದಿಲ್ಲದಿದ್ದರೆ ಯಾವುದಾದರೂ ಪತ್ರಿಕೆಗೆ ಶರಣು ಹೋಗಿರುತ್ತೇನೆ (ಚಲಿಸುವ ಬಸ್ಸಿನಲ್ಲಿ ಓದಬಾರದೆ
ನ್ನುವುದು ಗೊತ್ತಿದೆ, ಆದರೂ ಕೆಲವೊಮ್ಮೆ ಅನಿವಾರ್ಯ).ಮಳೆ ಬಿಡದೆ ಸುರಿಯುತ್ತಿತ್ತು. ಪಕ್ಕದಲ್ಲೂ ಯಾರೂ ಇರಲಿಲ್ಲ. ಪತ್ರಿಕೆಯನ್ನು ಮಡಿಸಿ ಬ್ಯಾಗಿನೊಳಗೆ ಇಡುತ್ತಲೇ, ಕಿಟಕಿಯ ಗಾಜನ್ನು ಸರಿಸಿದೆ. ಅದೆಷ್ಟು ರಸಿಕ ಈ ಮಳೆರಾಯ .!ಚುಂಬಿಸುತ್ತಲೇ ಹಸಿರು ಸೀರೆಯನ್ನು ಉಡಿಸಿಬಿಡುತ್ತಾನೆ ಈ ಭೂಮಿಗೆ.ಎಂದು ಯೋಚಿಸುತ್ತಲೇ ಒಮ್ಮೆ ಬಾನತ್ತ ಕಣ್ಣು ಹಾಯಿಸಿದೆ. ಬಾನಲ್ಲಿ ಕಾರ್ಮೋಡಗಳ ಸಂತೆ, ಕೊಳ್ಳುವವರಿಲ್ಲದೆ ಮಳೆಯಾಗಿ ಸುರಿಯುತಿದೆ ಭೂಮಿಗೆ ಅನ್ನಿಸಿಬಿಟ್ಟಿತು. ಬಸ್ಸಿನ ಕಿಟಕಿಯ ಸರಳುಗಳಲ್ಲಿ ಮುತ್ತಿನಂತೆ ಪೋಣಿಸಿರುವ ಮಳೆಹನಿಗಳನ್ನು ಕಾಣುತ್ತಲೇ ಮನ್ಸಸ್ಸು ಜಾರಿದ್ದು ಬಾಲ್ಯದ ದಿನಗಳತ್ತ. ನೆನಪುಗಳ ಕೆಣಕೋ ತಾಕತ್ತಿರುವುದು ಈ ಮಳೆಹನಿಗಳಿಗೆ ಮಾತ್ರ ..!

ಬಾಲ್ಯದ ಮಳೆಗಾಲವೆಂದರೆ ಅಜ್ಜಿಯ ಮನೆ. ಅದೇನೋ ಅವಿನಾಭಾವ ಸಂಬಂಧ ಅವೆರಡಕ್ಕೆ. ನಾವು ಮಕ್ಕಳೆಲ್ಲ ಒಟ್ಟಿಗೆ ಸೇರುತ್ತಿದ್ದದ್ದು ಮಳೆಗಾಲದಲ್ಲೇ. ಅದೇನು ಮಜಾ ಆ ಮಳೆಗಾಲ. ಮೂಗಿನಲ್ಲಿ ಸಿಂಬಳ ಸೋರುತ್ತಿದ್ದರೂ ಮನೆಯಿಂದ ಕದ್ದು-ಮುಚ್ಚಿ ಪರಾರಿಯಾಗಿ, ಗದ್ದೆಯ ಪಕ್ಕದ ಅವಳೆ(ತೋಡು)ಯ ಹರಿವ ನೀರಲ್ಲಿ ಮೀನನ್ನು ಹಿಡಿಯಲು ನಮ್ಮ ವಾನರ ಸೇನೆ ಹೊರಡುತ್ತಿತ್ತು. ತಳದಲ್ಲಿ ತೂತಾದ ಪಾತ್ರೆಗಳೇ ನಮ್ಮ ಮೀನುಗಾರಿಕಾ ಬಲೆಗಳು !. ನಮ್ಮ ಬಾಲಂಗೋಚಿ ಕೆಂಬಣ್ಣದ ಒಂದು ಬೆಕ್ಕು. ಅದಕ್ಕೋ ಹಸಿ ಮೀನು ಮುಕ್ಕುವ ತರಾತುರಿ. ಗಂಟೆಗಟ್ಟಲೆ ಪ್ರಯಾಸಪಟ್ಟು, ಮೈಪೂರ್ತಿ ಒದ್ದೆಯಾಗಿ,ಅಜ್ಜನ ಹತ್ತಿರ ಬೈಸಿಕೊಂಡು, ಸಿಕ್ಕ ಚಳ್ಳೆ-ಪಿಳ್ಳೆ ಮೀನುಗಳನ್ನು ತಂದು ಮನೆಯ ಮುಂದೆ ಮೊದಲೇ ತಯಾರು ಮಾಡಿಟ್ಟ ಪ್ಲಾಸ್ಟಿಕ್ ಕೊಡದಲ್ಲಿ ಬಿಟ್ಟಾಗ ಸರಳ ಸುಂದರ aquarium ರೆಡಿ.ನಮಗೋಅದೇನೋ ಮಹತ್ಕಾರ್ಯ ಸಾಧಿಸಿದಂಥಹ ಹಮ್ಮು.

ಅವಳೆಯ ಮಧ್ಯದಲ್ಲೇ ಹರಿವ ನೀರನ್ನು ಕಲ್ಲುಗಳಿಂದ ಕಟ್ಟಿಹಾಕಿ ತಯಾರುಗೊಂಡ ಪುಟ್ಟ ಡ್ಯಾಮಿನಂಥ ಡ್ಯಾಮಿನಲ್ಲೇ ನನ್ನ ಅಜ್ಜಿ
ಪಾತ್ರೆಗಳನ್ನು ತೊಳೆಯುತ್ತಿದ್ದುದು. ಅಜ್ಜಿ ಪಾತ್ರೆತೊಳೆಯಲು ಬಂದಾಗಲೆಲ್ಲ ನಾನು ಪಕ್ಕದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಂದು ಕಾಲುಗಳನ್ನು ನೀರಿನಲ್ಲಿ ಬಿಟ್ಟು ಕೂರುತ್ತಿದ್ದೆ. ಕಾಲಿಗೆ ಮುತ್ತಿಕ್ಕುವ ಮೀನುಗಳು ಅದೇನೋ ಕಚಕುಳಿ.ಅಜ್ಜಿ ತೊಳೆದಿಟ್ಟ ಪಾತ್ರೆಗಳು ನನಗೆ ಹರಿಗೋಲು.ಸೌಟುಗಳು ಹರಿಗೋಲ ಹುಟ್ಟುಗಳು. ನಾವಿಕ ನಾನೇ ಅದೂ ದಡದಲ್ಲಿ !


ಚಿಕ್ಕಮ್ಮನನ್ನು ಕಾಡಿ ಬೇಡಿ ಮಾಡಿಸಿಕೊಂಡು ಬಿಟ್ಟ ಕಾಗದದ ದೋಣಿಗಳು. ಕೊನೆಗೆ ಕಾಗದದ ದೋಣಿಯನ್ನು ಸ್ವತಃ ಮಾಡಲು ಕಲಿತಾಗ, ಮೌಂಟ್ ಎವೆರೆಸ್ಟನ್ನು ಏರಿದ ಖುಷಿ. ಆ ಕಾಗದದ ದೋಣಿಯನ್ನು ಬಿಟ್ಟು ಹಾಕಿದ ಕೇಕೆ ಇನ್ನೂ ಕೇಳುತ್ತಿರುವ ಭ್ರಮೆ. ತಳ ಭಾರವಾಗಿ ದೋಣಿ ಮುಳುಗಿದಾಗ ಕಣ್ಣಂಚು ಒದ್ದೆಯಾದದ್ದು ಮಳೆಹನಿಯಿಂದಲೋ, ಕಣ್ಣೀರಿನಿಂದಲೋ ನೆನಪಿಲ್ಲ ..!

ಕೆರೆಯ ಪಕ್ಕದಲ್ಲಿದ್ದ ಲಿಂಬೆ ಹಣ್ಣಿನ ಗಿಡದಲ್ಲಿ ಬಂಗಾರದ ಬಣ್ಣದ ಲಿಂಬೆ ಹಣ್ಣುಗಳು, ಕೆರೆಯ ನೀರಲ್ಲಿ ತಮ್ಮ ಪ್ರತಿಬಿಂಬಕ್ಕೆ ತಾವೇ ನಾಚುತ್ತಿದ್ದವು. ಮಧ್ಯಾಹ್ನದ ಊಟಕ್ಕೆ ನೆಂಜಿಕೊಳ್ಳಲು ಅದರದ್ದೇ ಉಪ್ಪಿನಕಾಯಿ.

ಗದ್ದೆ ಹೂಡುತ್ತಿದ್ದ ಕಟ್ಟುಮಸ್ತಾದ ಆಳು 'ಗಣಪು'. ಅವನ ಬಾಲ ನಾನು.! ಬೇಡ ಎಂದರೂ ಕೇಳದೆ ನೇಗಿಲು ಹಿಡಿದು ನಾನೇ ದೊಡ್ಡ ರೈತನಂತೆ ಪೋಸು ಕೊಡುತ್ತಿದ್ದೆ. ಗದ್ದೆಯ ಕೆಸರರಾಟ ಮುಗಿದು ಮನೆಗೆ ಬಂದು ಅಜ್ಜಿ ಬಿಸಿನೀರ ಸ್ನಾನ ಮಾಡಿಸುವಾಗ ನನ್ನ ಕಾಲಲ್ಲಿ ಒಂದೇ ಗೆಜ್ಜೆ ..!


ಹೊರಗಿನ ಮುಸುರೆ ಒಲೆಯಲ್ಲಿ ಸುಟ್ಟ ಹಲಸಿನ ಹಪ್ಪಳ, ಕೊರ್ಸಗಾಯಿ, ಜೀರಿಗೆ ಅಪ್ಪೆಮಿಡಿ ಉಪ್ಪಿನಕಾಯಿ, ಕುಚ್ಚಲಕ್ಕಿಗೆ ಒಂದಿಷ್ಟು ಮೊಸರು ಇವಿಷ್ಟಿದ್ದರೆ ಅದು ಮೃಷ್ಟಾನ್ನ ಭೋಜನ. ಊಟದ ನಂತರ ಮಾವಿನ ಹಣ್ಣಿನ ಹಪ್ಪಳ. ಈಗಿನ ಯಾವ multi star ಹೋಟೆಲಿನಲ್ಲಿಯೂ ಸಿಗದು ಇಂಥ ಊಟ.

ಹೀಗೆ ಮೆರವಣಿಗೆ ಹೊರಟ ನೆನಪುಗಳ ನಡುವೆಯೇ ಕುಮಟಾ ಬಂದಿತ್ತು.ಮನೆಗೆ ಬಂದ ಮಾರನೆ ದಿನವೇ ಅಜ್ಜಿಯ ಮನೆಗೆ ಹೋಗಿದ್ದೆ. ನಿನ್ನೆ ನೆನಪಾದದ್ದೆಲ್ಲವನ್ನು ಕಣ್ಣು ತುಂಬಿಸಿಕೊಳ್ಳುವ ಹಂಬಲದಿಂದ. ನೋಡಿದರೆ ..ನೀರು ಹರಿಯುತ್ತಿದ್ದ ತೋಡಿನ ಅವಶೇಷ ಮಾತ್ರ ಉಳಿದಿದೆ. ಗದ್ದೆ ಊಳುವವರಿಲ್ಲದೆ ಬರಡಾಗಿದೆ. ಲಿಂಬೆ ಹಣ್ಣಿನ ಗಿಡವಿದ್ದ ಜಾಗದಲ್ಲಿ ಕೆಸುಗಳ ಸಾಮ್ರಾಜ್ಯ.
ಕೆರೆಯು ಹೂಳು ತುಂಬಿಕೊಂಡು ಕಮಲದ ಹೂಗಳ ತಾಣವಾಗಿದೆ.


ಮನಸ್ಸಿಗೆ ಅದೇನೋ ಕಸಿವಿಸಿ, ಕಳವಳ. ಕಣ್ಣಂಚು ಒದ್ದೊದ್ದೆ ಈ ಬಾರಿ ಮಳೆಹನಿಯಿಂದಂತೂ ಅಲ್ಲವೇ ಅಲ್ಲ..! ಅಷ್ಟರಲ್ಲಿ ಅಜ್ಜಿ ಕರೆದದ್ದು ಕೇಳಿಸಿತು "ಊಟಕ್ಕೆ ಬಾರೆ ..ಹೊತ್ತಾತು ಮಳೆ ಬೇರೆ ಸುರೀತಿದ್ದು ." ಕಣ್ಣೊರೆಸುತ್ತಲೇ ಕೈಕಾಲು ತೊಳೆಯಲು ನಡೆದೆ. ಮುಸುರೆ ಒಲೆಯಿಂದ ಹಲಸಿನ ಹಪ್ಪಳ ಸುಟ್ಟ ವಾಸನೆ ಬರುತ್ತಿತ್ತು. ಆಗ ತಿಳಿಯಿತು ಹಸಿವೆ ಆದದ್ದು..! ಕುಚ್ಚಲಕ್ಕಿ ಅನ್ನ, ಮೊಸರು, ಉಪ್ಪಿನಕಾಯಿ, ಹಲಸಿನ ಹಪ್ಪಳ ನನ್ನನ್ನೇ ಕಾಯುತ್ತ ಕುಳಿತಿದ್ದವು. ಜೊತೆಗೆ ಅಜ್ಜಿ- ಅಜ್ಜ ಕೂಡ..!




Sunday, July 18, 2010

ಪ್ರಚಂಡ ಪೋರನೀತ .....



ಅವನ ಹರೆಯದ ಮಕ್ಕಳು ಪೆಪ್ಪರಮೆಂಟು ಚೀಪುತ್ತ, ಗೋಲಿ ಆಡುತ್ತ , ಗಣಿತದ ಕೂಡಿಸುವ,ಕಳೆಯುವ ಲೆಕ್ಕಗಳನ್ನು ಬಿಡಿಸಲು ಪರದಾಡುತ್ತಿದ್ದರೆ,ಅವನು ಸರ್ ಅಲ್ಬರ್ಟ್ ಐನಸ್ಟೀನರ 'photo-electric effect ' ನ ಮೇಲೆ ನಿರರ್ಗಳವಾಗಿ ಭಾಷಣವನ್ನು ಮಾಡುತ್ತಿದ್ದ. ತನ್ನ ಒಂಬತ್ತನೇ ಹರೆಯದಲ್ಲೇ 10ನೆಯ ತರಗತಿ ಪಾಸು ಮಾಡಿದ ಪೋರ, 21ನೆಯ ವಯಸ್ಸಿನಲ್ಲಿ doctorate ಪಡೆದು,ಈಗ ಪ್ರತಿಷ್ಠಿತ IIT ಮುಂಬೈನಲ್ಲಿ ತನಗಿಂತ ದೊಡ್ಡವರಿಗೆ ಮಾರ್ಗದರ್ಶನ ಮಾಡುತ್ತಾನೆ .


ನೀವೆಣಿಸಿದ್ದು ಸರಿ, ಅವನೇ 'ತಥಾಗತ್ ಅವತಾರ್ ತುಳಸಿ' . ಜಗತ್ತು ಕಂಡ ಪ್ರಚಂಡ ಪೋರರಲ್ಲಿ ಇವನೂ ಒಬ್ಬ . ಅದರಲ್ಲೂ ಭಾರತೀಯ..!ಬಿಹಾರದ ಪಾಟ್ನಾದಲ್ಲಿ ಸಪ್ಟೆಂಬರ್ 7,1987 ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ 'ತಥಾಗಥ್' ಹುಟ್ಟಿನಿಂದಲೇ ಅಪ್ರತಿಮ ಬುದ್ಧಿಶಾಲಿ. ಅವನ ಬುದ್ಧಿಮತ್ತೆಗೆ ಬೆಂಬಲವಾಗಿ ನಿಂತವರು ತಂದೆ ಪ್ರೊ. ತುಳಸಿ ನಾರಾಯಣ್ ಪ್ರಸಾದ್. ನ್ಯಾಯಾಲಯದ ಅನುಮತಿ ಪಡೆದು ಅತೀ ಚಿಕ್ಕ ವಯಸ್ಸಿನಲ್ಲೇ (ಹತ್ತನೇ ವಯಸ್ಸಿಗೆ )ಪದವಿಯನ್ನು ಪಡೆದಾಗ ದೇಶವೇ ಬೆರಗಾಗಿ ನಿಂತಿತ್ತು. ಮುಂದೆ ತನ್ನ ಹನ್ನೆರಡನೆಯ ವಯಸ್ಸಿಗೆ ಸ್ನಾತಕೋತ್ತರ ಪದವಿಯನ್ನು ಪಡೆದ ಈತ, doctorate ಪಡೆದದ್ದು 'quantum computing' ವಿಷಯದಲ್ಲಿ .ಪ್ರತಿಷ್ಠಿತ times ಪತ್ರಿಕೆ ಹೊರಡಿಸಿದ ಜಗತ್ತಿನ 7 ವರ ಸಂಭೂತ (most gifted youngsters) ಯುವಕರಲ್ಲಿ ಈತನೂ ಒಬ್ಬ ..!


Waterloo University, ಕೆನಡದಿಂದ ಬಂದ ಆಮಂತ್ರಣವನ್ನು ನಯವಾಗಿಯೇ ತಿರಸ್ಕರಿಸಿಈತ, ಭಾರತದಲ್ಲೇ ಸೇವೆ ಸಲ್ಲಿಸುತ್ತಾನಂತೆ..!ಅದ್ವಿತೀಯವಾದ ಸಾಧನೆಯನ್ನು ಮಾಡಿ ಭಾರತಕ್ಕೆ ಇನ್ನೂ ಒಂದು 'ನೊಬೆಲ್ ' ಪಾರಿತೋಷಕವನ್ನು ಕೊಡಿಸುವ ಮಹದಾಸೆ ಈತನದು ..!


ಇದೇ ದೇಶದ ಅನ್ನವನ್ನು ಉಂಡು, ತಮ್ಮ ನೆಲವನ್ನೇ ದೂರುತ್ತಾ ವಿದೇಶಕ್ಕೆ ಹಾರುವ ಇಂದಿನ ಯುವಜನಾಂಗಕ್ಕೆ ತಥಾಗಥನಂಥವರು 'role model ' ಯಾಕಗಲಾರರು ?

Tuesday, July 13, 2010

To sweet stupid putti ...


ಅದೀಗ ತಾನೇ ಮನೆಗೆ ಮಂಗಳೂರಿನಿದ ಬಂದಿದ್ದೆ ಸಂಜೆ 7ರ ಸಮಯವಾಗಿರಬಹುದು. trainನಲ್ಲಿ ಬಂದ ಕಾರಣ ಅಂಥದ್ದೇನು ಸುಸ್ತಾಗಿರಲಿಲ್ಲ, hallನಲ್ಲಿ ಕುಳಿತು T.V ನೋಡುತ್ತಿದ್ದೆ. ಅಡುಗೆಮನೆಯಲ್ಲಿ ಲಿಂಬೆ ಹಣ್ಣಿನ ಪಾನಕ ಮಾಡುತ್ತಿದ್ದ ಅಮ್ಮ ,ಅಲ್ಲಿಂದಲೇ ಹೇಳಿದರು "ವಿಶಾಲ್ ಬಂದಿದಿದ್ನೆ, ಮದುವೆ ಕರಿಯಲೇ ಅವನ ಮದುವೆನಡ "ಎಂದರು. ಸೀದಾ ಎದ್ದು ಅಡುಗೆಮನೆಯತ್ತ ನಡೆದಿದ್ದೆ ನಾನು "ಯಾವಾಗಲೇ ?" ಎಂದು ಕೇಳುತ್ತ. "ಈ ತಿಂಗಳು 26ಕ್ಕೆ,ನಿನಗೆ ಒಂದು invitation card ಕೊಟ್ಟಿದ್ದ ನಿನ್ ರೂಮಿನಲ್ಲಿದ್ದು ನೋಡು" ಅಂದಿದ್ದರು. ಪಾನಕದ ಗ್ಲಾಸನ್ನು ಹಿಡಿದು ಮೆಟ್ಟಿಲೇರಿ ನನ್ನ ರೂಮು ಸೇರುವುದಕ್ಕೂ ಕರೆಂಟು ಕೈಕೊಡುವುದಕ್ಕೂ ಸರಿ ಆಯಿತು. ಹಾಗೆ ಹೊರಕ್ಕೆ ಬಂದು ಬಾಲ್ಕನಿಯಲ್ಲಿನ ಆರಾಮ ಕುರ್ಚಿಯಲ್ಲಿ ಕುಳಿತ ನನ್ನ ಕಣ್ಣುಗಳು ಆಗಸದಲ್ಲಿ ನಕ್ಷತ್ರಗಳನ್ನು ಹುಡುಕ ತೊಡಗಿದರೆ, ಮನಸ್ಸು ಹಿಂದಕ್ಕೋಡಿತು. ಬೆಳಕಿನ ವೇಗಕ್ಕಿಂತ ಹೆಚ್ಚು ಈ ಹುಚ್ಚು ಮನಸಿನ ವೇಗ ..!


'ವಿಶಾಲ್ ಸರ್ ' ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನಮಗೆ ಕಂಪ್ಯೂಟರ್ ವಿಷಯ ಕಲಿಸಲು ಬರುತ್ತಿದ್ದ tall, dark and handsome ಹುಡುಗ. ನಾನು ಕಲಿಯುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅವರು, ನನ್ನ ಅಮ್ಮನ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪಪ್ಪನಿಗೆ ವಿಚ್ಚೇದನ ಕೊಟ್ಟು ಹೋದ ಅಮ್ಮನ ಹಿಂದೆ ಹೋಗದ ದುರದೃಷ್ಟಕರ ಬಾಲ್ಯವನ್ನು ಕಂಡಿದ್ದ ಅವರು ಬೆಳೆದದ್ದೆಲ್ಲ ಚಿಕ್ಕಮ್ಮನ (ಅಮ್ಮನ ತಂಗಿ)ಅಕ್ಕರೆಯಲ್ಲೇ.



ನಾವು ಬಾಡಿಗೆಗಿದ್ದ ಮನೆಯ ಪಕ್ಕದ ರಸ್ತೆಯಲ್ಲೇ ಹಾದು ಶಾಲೆಗೆ ಹೋಗುವಾಗ ಪ್ರತಿದಿನ ಎಂಬಂತೆ ಮೂರು ಗುಲಾಬಿ ಹೂಗಳ ಗೊಂಚೊಂದನ್ನು ಅಮ್ಮನಿಗೆ ಕೊಟ್ಟು ಹೋಗುತ್ತಿದ್ದ 'ವಿಶಾಲ್'ನನ್ನು 5 ರ ಹರೆಯದ ನಾನು ಪಿಳಿಪಿಳಿ ನೋಡುತ್ತಿದ್ದೆ . ಬಣ್ಣ ಮಾಸಿದ ಆ ಸಮವಸ್ತ್ರ, ನೇರ ಕೂದಲು. ಮುಗ್ಧ ಕಣ್ಣುಗಳ ಮುಖ ನನ್ನ ಮನದಲ್ಲಿ ಅಚ್ಚೊತ್ತಿತ್ತು. 'ಬೂಟ್ ಪಾಲಿಶ್' ಪಾಠವನ್ನು ಅಮ್ಮ ಕಲಿಸುವಾಗ, ಉಳಿದ ಮಕ್ಕಳ ಕಂಗಳಲ್ಲಿ ನೀರಾಡಿದ್ದರೆ, ಈ ಹುಡುಗ ಬಿಕ್ಕಿ ಬಿಕ್ಕಿ ಅತ್ತಿದ್ದೂ , ಅಮ್ಮ ಸಮಾಧಾನಿಸಿದ್ದೂ ಎಲ್ಲವನ್ನೂ ಅಮ್ಮನ ಬಾಯಿಯಿಂದಲೇ ಕೇಳಿದ್ದ ನೆನಪಿತ್ತು.




ಅಂಥ ಹುಡುಗ ತನ್ನ ಶಿಕ್ಷಣವನ್ನು ಮುಗಿಸಿ ತಾತ್ಕಾಲಿಕ ಅವಧಿಗಾಗಿ ನಮಗೆ ಕಂಪ್ಯೂಟರ್ ಹೇಳಿಕೊಡಲು ಬರುತ್ತಿದ್ದ. 'ಅದೇ ಹಳೆಯ ಮುಖದ enlarged version' ಅಂದುಕೊಂಡಿದ್ದೆ ಮೊದಲ ಸಲ ಶಾಲೆಯಲ್ಲಿ ವಿಶಾಲನನ್ನು ಕಂಡಾಗ. ಆ ಕಣ್ಣುಗಳಲ್ಲಿ ಅದೇನೋ ಆಕರ್ಷಣೆಯಿತ್ತು (ಆ ವಯಸ್ಸಿಗೆ ನನಗೆ ಹಾಗನಿಸಿತ್ತೋ). ನಗುನಗುತ್ತಲೇ binary addition & subtraction ಕಲಿಸಲು ಆರಂಭಿಸಿದ ಆತ ನನಗೆ ಜಾಸ್ತಿ ಪ್ರಶ್ನೆಗಳನ್ನು ಕೇಳುತ್ತಿದ್ದ. ನೆಚ್ಚಿನ ಶಿಕ್ಷಕಿಯ ಮಗಳೆಂದೋ ಅಥವಾ ಉದ್ದಕಿದ್ದು ಹಿಂದಿನ ಬೆಂಚಿನಲ್ಲಿ ಕುಳಿತು ಕೀಟಲೆ ಕೊಡುತ್ತಿದ್ದೆ ಎಂದೋ..!



ಪ್ರಶ್ನೆ ಕೇಳಿದಾಗಲೆಲ್ಲ ಅವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸುತ್ತಿದ್ದೆ. ಕುಳಿತ ತಕ್ಷಣ ಮತ್ತೆ ಮಾತು, back bench comments,ಕೀಟಲೆ ಶುರು. ಒಮ್ಮೆ ನನ್ನ ತುಂಟತನ ಮೇರೆ ಮೀರಿದಾಗ "ಸೌಮ್ಯ ನಿಂದು ಜಾಸ್ತಿಯಾಯಿತು madam ಹತ್ರ ಹೇಳ್ತೇನೆ " ಎಂದಿದ್ದರು. ಹಾಗೆ ಅಮ್ಮನ ಹತ್ರ ಹೇಳಿದ್ದರು ಕೂಡ. ಆ ದಿನ ಮನೆಯಲ್ಲಿ ನನಗೆ ಅಮ್ಮನಿಂದ ಗೀತೋಪದೇಶ, ಹಿತೋಪದೇಶ, ಮಂತ್ರೋಪದೇಶ ಎಲ್ಲ ಆಗಿತ್ತು.



ನಂತರದ ದಿನಗಳಲ್ಲಿ ನನ್ನ ತುಂಟತನ ಕಡಿಮೆ ಆಗಿತ್ತು. ಅದೇನೋ ನವಿರಾದ ಭಾವ ಮನದ ಮೂಲೆಯೊಳಗೆ. ಮನಸಿನಲ್ಲೇ ಇಷ್ಟ ಪಡುತ್ತಿದ್ದೆ ಅವರನ್ನು. That was a stupid 'crush'..! ನನ್ನ ಆರಾಧನೆಯ ಭಾವ ಕಣ್ಣಲ್ಲೇ ತಿಳಿಯುತ್ತಿತ್ತೋ ಏನೋ ..! ಅಮ್ಮನಿಗೂ ಗೊತ್ತಿತ್ತು ನನ್ನ crush ಕಥೆ. ಮನದಲ್ಲೇ ನಗುತ್ತಿದ್ದರು ನಾನು 'ವಿಶಾಲ್ ಸರ್ ' ಬಗ್ಗೆ ಮಾತನಾಡುತ್ತಿದ್ದರೆ.



ಹಾಗೆ ನಾನು ಹತ್ತನೇ ತರಗತಿಗೆ ಬರುವ ವೇಳೆ 'ವಿಶಾಲ್ ಸರ್ ' ಮುಂಬೈಗೆ ಹಾರಿದ್ದರು. ಹೋಗುವ ಮೊದಲು ಅಮ್ಮನಿಗೆ ಹೇಳಲು ಬಂದಿದ್ದರು."ಚೆನ್ನಾಗಿ ಓದು ಪುಟ್ಟಿ, ಕವನ, ಕಥೆಗಳನ್ನೂ ಮುಂದುವರೆಸು" ಎಂದು ಹೇಳಿ ಹೊರಟಿದ್ದರು. ಖಾಲಿ ಖಾಲಿ ಆದ ಭಾವ ಕಂಪ್ಯೂಟರ್ ಕ್ಲಾಸ್, ಮನಸು ಎಲ್ಲ. ಅತ್ತು ಬಿಟ್ಟಿದ್ದೆ ಬಿಕಿ ಬಿಕ್ಕಿ . ಕಾಲದ ಹಾದಿಯಲ್ಲಿ ವಿಶಾಲ್ ಸರ್ ನೆನಪು ಹಿಂದೆ ಹೋಗಿತ್ತು. ಸವೆದಿತ್ತು ...ಹೈಸ್ಕೂಲಿನ ಗೇಟು ದಾಟಿದಂತೆಲ್ಲ ಶಾಲಾ ದಿನಗಳ ನೆನಪಿನ ಬಾಗಿಲು ಮುಚ್ಚಿಕೊಂಡಿತ್ತು.
ಕಾಲೇಜು ಜೀವನದ ಗಡಿಬಿಡಿಯಲ್ಲಿ 'ವಿಶಾಲ್ ಸರ್ ' ಮೆಲ್ಲನೆ ಹಿಂದೆ ಸರಿದಿದ್ದರು. ಈಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಧುತ್ತೆಂದು ಪ್ರತ್ಯಕ್ಷವಾಗಿತ್ತು ಅವರ ನೆನಪು. ಅದೂ ಅವರ ಮದುವೆಯ ಜೊತೆಗೆ, ಕರೆಯೋಲೆಯ ಜೊತೆಗೆ. ಶಾಲಾ ದಿನಗಳ flash back ge ಕರೆದುಕೊಂಡು ಹೋಗಿತ್ತು ಅವರ ನೆನಪು. ಎಲ್ಲವನ್ನು ಕತ್ತಲೆಯ ರಾತ್ರಿಯ ತಾರೆಗಳ ಬೆಳಕಲ್ಲಿ ನೆನೆಸಿಕೊಂಡಿದ್ದೆ. ಹದಿಹರೆಯದಲ್ಲಿ ಸಾಮಾನ್ಯ ಈ ಒಂಥರಾ stupid crushಗಳು ಅಲ್ವಾ?. ಉದ್ದ-ನೇರ ಕೂದಲು, ಉದ್ದನೆಯ ದೇಹ ,ಕನಸು ಕಂಗಳು,ನಗು, ಕೂದಲನ್ನು ಹಿಂದಕ್ಕೆ ತೀಡೋ ಸ್ಟೈಲು ಏನೋ ಒಂದು ಇಷ್ಟವಾಗಿ ಬಿಡುತ್ತದೆ . ಮನಸ್ಸು ಅದರತ್ತ ವಾಲುತ್ತದೆ. ನನಗೂ ಆದದ್ದು ಅದೇ ಆಗಿತ್ತು .

ಇಷ್ಟೆಲ್ಲಾ ನೆನಪಾಗೋ ಹೊತ್ತಿಗೆ ನನ್ನ ಮೊಗದಲ್ಲೊಂದು ತುಂಟನಗೆ ಸದ್ದಿಲ್ಲದೇ ಹಾದು ಹೋಗಿರಬೇಕು, ನಮ್ಮನೆಯ ತೋಟದಂಚಿನ ನದಿಯಲ್ಲಿ ಹಾದು ಹೋಗುವ ಹಾಯಿದೋಣಿಯಂತೆ ...!ಅಷ್ಟರಲ್ಲೇ ಕರೆಂಟು ಬಂದಿತ್ತು . ಥಟ್ಟನೆ ಎದ್ದು ನನ್ನ ರೂಮಿಗೆ ಹೋಗಿ ಕರೆಯೋಲೆಯನ್ನು ಕೈಗೆತ್ತಿಕೊಂಡೆ. ವಿಳಾಸ ಬರೆವಲ್ಲಿ ಬರೆದಿತ್ತು : To 'Sweet Stupid Putti' ..!

Saturday, July 3, 2010

ಸಸ್ಯಶಾಸ್ತ್ರಜ್ಞೆ ನನ್ನ ಅಜ್ಜಿ

ನಿನ್ನೆ ಅಜ್ಜಿ ಮನೆಗೆ ಹೋಗಿದ್ದೆ .ಅದೇನೋ ನಂಟು ಈ ಮಳೆಗಾಲಕ್ಕೆಮತ್ತು ಅಜ್ಜಿ ಮನೆಗೆ. ಹೆಚ್ಚೇನು ದೂರವಿಲ್ಲ ನನ್ನ ಅಜ್ಜಿ ಮನೆ, ಹೆಚ್ಚೆಂದರೆ ೧೦ ಕಿಲೋ ಮೀಟರುಗಳು ಇರಬಹುದು ನಮ್ಮ ಮನೆಯಿಂದ.


ಮಧ್ಯಾಹ್ನ ಮೊಸರನ್ನ, ಪಲ್ಯ ಉಪ್ಪಿನಕಾಯಿ,ಹಪ್ಪಳಗಳ ಭರ್ಜರಿ ಊಟ ಆದ ನಂತರ ಅಜ್ಜಿಯ ಹತ್ತಿರ " ಒಂದು ರೌಂಡ್ ಬೆಟ್ಟಕ್ಕೆ ಹೋಗಬಪ್ಪ ಬಾರೆ " ಎಂದೆ. ತುಂತುರು ಮಳೆ ಹನಿಸುತ್ತಲೇ ಇತ್ತು, ಅಜ್ಜಿಗೆ ಎಲ್ಲಿ ಮೊಮ್ಮಗಳಿಗೆ ಶೀತವಾದರೆ ಎಂಬ ಕಾಳಜಿ. " ಇವತ್ತು ಮಳೆನಲೇ , ಜ್ವರ ಬತ್ತು ನೆನೆಯಡ" ಎಂದರು. ಇದೆ ಮಾತನ್ನು ನಿರೀಕ್ಷಿಸುತ್ತಿದ್ದೆ ನಾನು. "ಮಳೆಗಾಲದಲ್ಲಿ ಮಳೆ ಸುರಿಯೋದೆಯ, ಬಾ ನೀನು" ಎನ್ನುತ್ತಲೇ ಅಂಗಳಕ್ಕೆ ಇಳಿದುಬಿಟ್ಟಿದ್ದೆ . ನನ್ನ ಬಣ್ಣದ ಬಂದೂಕನ್ನು (ಕೊಡೆ)ಹಿಡಿದು.







ಬೆಳೆಯನ್ನೇ ಬೆಳೆಯದೆ ಹಾಗೆ ಬಯಲಾದ ಗದ್ದೆಯಲ್ಲಿ ನಮ್ಮನ್ನು ಸ್ವಾಗತಿಸಿದ್ದು 'ಅಲೆ ಹಗ್ಗ' ಹಾಕಿ ಕಟ್ಟಿ ಮೇಯಲು ಬಿಟ್ಟ ಒಂದು ಎಮ್ಮೆ. "ನಿನ್ನ ನೆಮ್ಮದಿಗೆ ಭಂಗವಿಲ್ಲ. ..ಎಮ್ಮೆ ನಿನಗೆ ಸಾಟಿಯಿಲ್ಲ" ಎಂದು ನಾನು ಹಾಡಲು ಶುರುವಿಟ್ಟುಕೊಂಡರೆ. ಅಜ್ಜಿ " ಕೊಡೆ ಬಿಡಸೆ ಮಳೆ ಬತ್ತಿದ್ದು" ಎನ್ನುತ್ತಿದ್ದರು. ನೀರು ಹರಿದಲ್ಲೆಲ್ಲ ಕೆರೆ. ಪುಟ್ಟ ಝರಿ... ಇನ್ನೂ ಹೇಳಬೇಕೆಂದರೆ ನೈಸರ್ಗಿಕ water park.

ಅದೇನೋ ಖುಷಿ ತುಂತುರು ಮಳೆಯಲ್ಲಿ ನೆನೆಯುವುದೆಂದರೆ, ಅಮ್ಮನ ಜೊತೆ ಪೇಟೆಯಲ್ಲಿ ಅಡ್ಡಾಡುವುದೆಂದರೆ,ಅಜ್ಜಿಯ ಜೊತೆ ಬೆಟ್ಟಕ್ಕೆ, ಅಜ್ಜನ ಜೊತೆ ತೋಟಕ್ಕೆ ಹೋಗುವುದೆಂದರೆ. ಅದೊಂಥರ default combination.
ಹಾದಿ ಬದಿಯ ಹೂ ಕಾಯಿಗಳನ್ನು ನೋಡುತ್ತಾ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತ, ಅದರ ಹೆಸರುಗಳನ್ನು ಅಜ್ಜಿಯ ಹತ್ತಿರ ವಿಚಾರಿಸುತ್ತಾ ನಡೆಯುತ್ತಿದ್ದೆ. ಅಜ್ಜಿಯೂ ಉತ್ಸಾಹದಿಂದ ವಿವರಿಸುತ್ತಲೇ ಹೋದರು. ಕೆಲವು ಚಿತ್ರಗಳು ನಿಮಗಾಗಿ.

ಬೇಲಿಬದಿಯ ಮಾಮೂಲಿ ಸುಂದರಿ: ತೇರು ಹೂವು
ಅಂಗಳದ ಅಥಿತಿ: ಅವಲಕ್ಕಿ ಹುಲ್ಲು


ಬೇಲಿಸುಂದರಿ: ನುಕ್ಕಿ ಗಿಡದ ಹೂವು

ಕಾಡು ಲವಂಗ (ಗೆಣಸಲೆ ಎಲೆ )


ಹಾವಿನ ಹಣ್ಣು

ಹಳಚಾರೆ ಹಣ್ಣು ಕೊಂಬ್ಲಾರಜ್ಜಿ (ವಿಷದ ಹೂವು ) ಅದರ ಗಿಡ
ಕಾಡು ಗಿಡಗಳಿಗೆ ಹಿಂದಿನ ತಲೆಮಾರಿನ ಜನರಿಟ್ಟ ಹೆಸರುಗಳೇ ವಿಚಿತ್ರ. ಆದರೆ ಸಸ್ಯಶಾಸ್ತ್ರೀಯ ಹೆಸರುಗಳಿಗಿಂತ ತುಂಬಾ ಇಷ್ಟವೂ, ಅತ್ಮೀಯವೂ ಆಗುವಂತ ಹೆಸರುಗಳು ಅವು. ಅಜ್ಜಿ ಅದರ ಉಪಯೋಗಗಳನ್ನೂ ಹೇಳುತ್ತಿದ್ದರು. ತನ್ಮಯತೆಯಿಂದ ಪಕ್ಕಾ ವಿದ್ಯಾರ್ಥಿಯಾಗಿ ಕೇಳುತ್ತಿದ್ದೆ. ಮಳೆಯ ಹನಿಯಲ್ಲಿ ತೋಯ್ದಿತ್ತು ನೆಲ, ಗಿಡ, ಹೂವು, ಹಣ್ಣು, ನನ್ನ ಮೈ-ಮನಸ್ಸು ಎಲ್ಲ. 'ಮುಂಗಾರು ಮಳೆಯೇ...' ಎಂದು 'ಸೋನು ನಿಗಮ್ ' ಹಾಡಿದಂತೆ ಆಯಿತು.


ನೆಕ್ಕರಕದ ಹೂ

ಬೆಳ್ಳಟ್ಟೆ ಹೂವು

ಕುಸುಮಾಲೆ ಹೂವು
ವಾಪಸ್ ಮನೆಗೆ ಮರಳುವ ಹೊತ್ತಿಗೆ ನನ್ನ ನನಗೆ ಅಜ್ಜಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿ ಕಂಡದ್ದಂತೂ ಸುಳ್ಳಲ್ಲ ...!