ನನ್ನ ಹಿಂದಿನ ಬ್ಲಾಗ್ ಪೋಸ್ಟ್ ಇದ್ದದ್ದು ಪ್ರೀತಿಯ ಬಗ್ಗೆ. ಸ್ವಲ್ಪ ಸೀರಿಯಸ್ ವಿಷ್ಯ ಆಗಿತ್ತು ಬೇರೆ. ಕೆಲವು ಸ್ನೇಹಿತರು ಕೇಳ್ತಿದ್ರು ಸ್ವಲ್ಪ funny ಆಗಿ ಒಂದು ಪೋಸ್ಟ್ ಹಾಕಬಾರದಾ ? ಅಂತ. ಆದ್ರೆ ಈವಾಗ ಯಾಕೋ ನಿಮ್ಮೆಲ್ಲರ ತಲೆ ಸ್ವಲ್ಪ ತಿನ್ನೋಣ ಅನ್ನಿಸ್ತಿದೆ. (ತಲೆ ತಿನ್ನೋದು ಒಂಥರಾ ನನ್ನ ಜನ್ಮಸಿದ್ದ ಹಕ್ಕು ಇದ್ದಂಗೆ. )ಇದರಿಂದ ಎರಡು ಲಾಭ ಇದೆ 1.ನಂಗೆ ತಲೆ ತಿಂದ ಖುಷಿ ಸಿಗತ್ತೆ 2.ನಿಮಗೆ ತಲೆ ಇದೆ ಅನ್ನೋದು ಗೊತ್ತಾಗತ್ತೆ. ಏನಂತೀರಾ? ನೀವು ಓದ್ತೀರಾ ಅಂದ್ರೆ ನಂಗೇನು ಪ್ರಾಬ್ಲಮ್ ಇಲ್ಲ. ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ.
ಈ ಹುಡುಗೀರನ್ನ ನೋಡೋ ಕ್ರಿಯೆಗೆ (ಕದ್ದುಮುಚ್ಚಿನೋ ನೇರವಾಗೋ ಅದು ಸೆಕೆಂಡರಿ) ನಾವೆಲ್ಲಾ ಮಾಮೂಲಾಗಿ ಕೊಡೊ ಟೈಟಲ್ಲು 'ಲೈನ್ ಹೊಡಿಯೋದು','ಸೈಟ್ ಹೊಯೋದು', 'ಡವ್ ಹೊಡ್ಯೋದು' ಇತ್ಯಾದಿ ಇತ್ಯಾದಿ ಅಲ್ವಾ? ಹುಡುಗ್ರು/ ಹುಡುಗೀರು ನಾವು ಎಷ್ಟೇ ಡೀಸೆಂಟು ಅಂತ ಪೋಸ್ ಕೊಟ್ರೂ ಒಂದಲ್ಲ ಒಂದು ಸಲ ಲೈನ್ ಹೊಡೆದೇ ಇರ್ತಾರೆ. ಇದು ಆ ಸೂರ್ಯ ಚಂದ್ರರ ಆಣೆಗೂ ಸತ್ಯ. ಸೂರ್ಯ ಚಂದ್ರರು ಇರುವಷ್ಟೇ ಸತ್ಯ. (ಅಮಾವಾಸ್ಯೆ ದಿನ ಚಂದ್ರ ಇರೋದಿಲ್ಲ ಮರಿ ಅಂತೀರಾ?) ನಾನು ಈಗ ಕೊರಿಯೋ ವಿಷ್ಯ ಯಾವ್ದು ಅಂತ ಗೊತ್ತಾಯ್ತಲ್ವಾ?
ಈಗ ನಾನು ಕೇಳೋದು ಏನು ಅಂದ್ರೆ.....ಅದ್ಕೆ ಲೈನ್ ಹೊಡಿಯೋದು ಅಂತಾನೆ ಯಾಕೆ ಹೇಳ್ತಾರೆ ? ಎಷ್ಟು ಥರ ಲೈನ್ ಹೊಡೀಬಹುದು? ಹುಡ್ಗೀರು ಲೈನ್ ಹೇಗೆ ಹೊಡೀತಾರೆ? ಸುಲಭವಾದ ವಿಧಾನ ಯಾವುದು ? ಯಾರಿಗೂ ತಿಳಿಯದೆ ಲೈನ್ ಹೊಡಿಯೋದು ಹೇಗೆ ? ಜೊತೆಗೆ ಇಂಥದ್ದೆಲ್ಲ ಪ್ರಶ್ನೆಗಳಿಗೆ ನನ್ನದೇ ಆದ ಉತ್ತರವನ್ನೂ ಕೊಡ್ತಾ ಇದೇನೆ. opinion changes from person to person ಅಲ್ವಾ ? ನಾನಿಲ್ಲಿ ಬರೆದದ್ದು just for entertainment. ಇದರಲ್ಲಿ ಬೇರೆ ಯಾವುದೇ ದುರುದ್ದೇಶಗಳು ಇಲ್ಲ. ಇಲ್ಲಿಬರುವ ಪಾತ್ರಗಳೆಲ್ಲ ಕೇವಲ ಕಾಲ್ಪನಿಕ.ಯಾವುದೇ ವ್ಯಕ್ತಿಯ ಜೊತೆ ಹೋಲುವಂತಿದ್ದರೆ ಅದು ಕಾಕತಾಳೀಯ ಮಾತ್ರ. !
ಹೌದು ಲೈನ್ ಹೊಡಿಯೋದು ಅಂತಾನೆ ಅಂತ ಯಾಕೆ ಹೇಳ್ತಾರೆ ? ನಮ್ಮ ಎದುರಲ್ಲಿರೋ ಒಂದು ಸುಂದರ ಹುಡುಗಿ/ ಹುಡುಗ್ರನ್ನ ಮಧ್ಯದಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಿಸಿಕೊಂಡು ನೋಡೋದನ್ನ ಮುಂದುವರಿಸ್ತೇವೆ ಅಲ್ವಾ ?ನೇರವಾಗಿ ನೋಡ್ತಾನೇ ಇರ್ತೇವೆ. ಆ ಕಡೆ ಜನ ಏನೆಂದುಕೊಳ್ಳಬಹುದು ಅನ್ನೋ ಯೋಚನೆ ತಪ್ಪಿ ಕೂಡ ಬರಲಿಕ್ಕಿಲ್ಲ. ಬಂದರೂ ಎದುರಿಗಿರುವ ಆಕರ್ಷಣಾ ಶಕ್ತಿಯೇ, ವಿಚಾರಶಕ್ತಿಗಿಂತ ಬಲಯುತವಾಗಿರುತ್ತದೆ (ನ್ಯೂಟನ್ನನಿಗೆ ಇದ್ಯಾಕೆ ಹೊಳೆಯಲಿಲ್ಲ? ಇಂತದ್ದೊಂದು ವಾದವಿದ್ದರೆ ಪುಸ್ತಕದಲ್ಲಿರೋ ನ್ಯೂಟನ್ನನ ಮೂರು ನಿಯಮಗಳೇನು 10 ನಿಯಮಗಳಿದ್ದರೂ ಬಾಯಲ್ಲೇ ಫಿಲಂ ಹಾಡುಗಳ ತರಹ ನಲಿಯುತ್ತಿದ್ದವೇನೋ) .
ಈಗ ಈ ಲೈನ್ ಹೊಡ್ಯೋದ್ರಲ್ಲಿ ಮುಖ್ಯವಾಗಿ ಮೂರು ಥರ ಇದೆ (ನನ್ನದೇ ಸಂಶೋಧನೆ ಇದು, ಉದಾಹರಣೆಯ ಸಹಿತ ವಿವರಿಸುತ್ತೇನೆ ಓದಿ):
1. Direct Lining (Straight Lining )
2.Zigzag Lining
3. Indirect Lining
Illustration1:ಒಂದು ಸುಮಾರಂಥ ಪಟ್ಟಣದ ಬಸ್ಸು. ಸೀಟುಗಳೆಲ್ಲ ಭರ್ತಿಯಾಗಿ ಕೆಲವರು ನಿಂತಿದ್ದಾರೆ. ಒಂದು stylish ಸುಂದರ ಹುಡುಗಿ ಜೀನ್ಸ್ ತೊಟ್ಟು ಮುಂದೆ(ಡ್ರೈವರ್ ಹಿಂದೆ) ನಿಂತಿದ್ದಾಳೆ. ಒಂಥರಾ attitude ಬೇರೆ ಇರೋ ಹಾಗಿದೆ. ಬಸ್ಸಿನಲ್ಲಿರೋ ಹೆಣ್ಣು ಜಾತಿಗಳಿಗೆಲ್ಲ ಹೊಟ್ಟೆಯಲ್ಲಿ ಹುಣಸೆಹಣ್ಣು ಕಿವುಚಿದ ಭಾವ.ಬಸ್ಸಿನಲ್ಲಿರೋ ಗಂಡು ಜಾತಿಗಳಿಗೆಲ್ಲ (ವಯೋಮಿತಿಯಿಲ್ಲ)ಒಳಗೊಳಗೇ ಪುಳಕ,ಬೇಡವೆಂದರೂ ಕಣ್ಣುಗಳು ಅವಳನ್ನೇ follow ಮಾಡುತ್ತಿವೆ. ನೇರವಾಗಿ ಅವಳನ್ನೇ ನೋಡುತ್ತಿದ್ದಾರೆ, ಕಣ್ಣು ಕೂಡ ಮಿಟುಕಿಸದೆ, ತಿಂದೇ ಬಿಡುವಂತೆ. ಇದು Direct Lining. (ಹುಡುಗಿಯ ಎದುರಿಗೆ ಕೊಂಬುಗಣ್ಣ ಆಸಾಮಿ ಏನಾದರೂ ಇದ್ದು, ಹುಡುಗಿ ಗಟ್ಟಿಗಿತ್ತಿ ಇದ್ದು, ಹುಡುಗಿಗದು ತಿಳಿಯದೆ. ಕಪಾಳ ಮೋಕ್ಷಮಾಡಿ ....ಅದೆಲ್ಲ ಈಗ ಬೇಡ ಬಿಡಿ ).
Illustration 2:ಮಂಗಳೂರು-ವೆರ್ಣ ಪ್ಯಾಸೆಂಜರ್ ಟ್ರೇನು. ಸಲ್ವಾರ್ ಹಾಕಿಕೊಂಡಿರುವ ಮುದ್ದಾದ ಹುಡುಗಿ (ಹುಡುಗೀರೆ ಮುದ್ದಾಗಿರ್ತಾರಾ?). ಎದುರಿಗೊಬ್ಬ so called ಡೀಸೆಂಟು ಹುಡುಗ.ಒಂದೆಳೆಯ ಕಾಡಿಗೆಯ ಮಿಂಚು ಆ ಹುಡುಗಿಯ ಕಣ್ಣುಗಳಲ್ಲಿ . ಕವಿಗಳು ವರ್ಣಿಸುವ ಕಮಲಲೋಚನೆಯ ಕಣ್ಣೋಟಕ್ಕೆ, ನಮ್ಮ ಡೀಸೆಂಟು ಹುಡುಗ ಕಪಿಯಾಗಿದ್ದಾನೆ. ಸೀದಾ ಡೈರೆಕ್ಟ್ ಲೈನ್ ಹೊಡಿಯೋಕೆ ಪೂರ್ತಿ ಧೈರ್ಯ ಸಾಲುತ್ತಿಲ್ಲ ಪಾಪ. ಒಮ್ಮೆ ಅವಳನ್ನು ನೋಡಿ ಅವಳು ಇವನತ್ತ ನೋಡುವಾಗ ದೃಷ್ಟಿ ಬದಲಿಸುತ್ತಿದ್ದಾನೆ. ಅವಳು ಬೇರೆಕಡೆ ನೋಡುವಾಗ ಅವಳ ಮೊಗದಲ್ಲೇ ಲೀನ ಹುಡುಗ.ಇದು ZIGZAG lining ಗೆ ಉದಾಹರಣೆ.
Illustration 3:
ಇನ್ನು ಕೆಲವು ಹುಡುಗರಿರ್ತಾರೆ ಸ್ವಲ್ಪ ಬಿಗುಮಾನ. ಹುಡುಗೀರೆ ಬೇಕಾದ್ರೆ ನಮ್ಮನ್ನ ನೋಡ್ಬೇಕು.ನಾವು ಅವರತ್ತ ತಿರುಗಿ ಕೂಡ ನೋಡೋದಿಲ್ಲ (ನೆನಪಿಡಿ ಬರೀ ತಿರುಗಿ ನೋಡೋದಿಲ್ಲ ). ಆದರೂ ಮನಸು ಕೇಳಬೇಕಲ್ಲ ? ಬೈಕಿನಲ್ಲಿ ಹೋಗೋವಾಗ ಹಿಂದೆ ಕುಳಿತ ಗೆಳೆಯ ತಿವಿದು ಹೇಳ್ತಾನೆ "ಗುರು ಫಿಗರ್ರೂ ಸುಪರ್ರೋ ".! ಏನ್ ಮಾಡೋದು ? ಬಿಗುಮಾನದ ಹುಡುಗ ಬೈಕ್ ಮಿರರ್ ನಲ್ಲಿ ಹಿಂದೆ ಇರೋ ಹುಡುಗಿನಾ ನೋಡ್ತಾನೆ . ಕಾಲೇಜ್ entrenceನಲ್ಲಿ ಹುಡುಗಿಯರಿಗಿಂತ ಮೊದಲು ಬಂದು notice ಬೋರ್ಡಿನಲ್ಲಿ ತಲೆ ಕೂದಲು ಬಾಚ್ತ ಹಿಂದೆ ಇರೋ ಹುಡ್ಗೀರ್ನ ನೋಡ್ತಾನೆ. ಇದು Indirect Lining ..!
ಇದೇನು ಎಲ್ಲ ಹುಡುಗರ ಬಗ್ಗೆ ಹೇಳ್ತೀರಲ್ಲ ಅಂತೀರಾ ? ನಿಲ್ರೀ ಸ್ವಲ್ಪ.ಒಂದ್ಸಲ ನನ್ನ ಸ್ನೇಹಿತ ಒಬ್ಬ ಕೇಳಿದ್ದ, "ಹುಡುಗಿರೇನು ಲೈನ್ ಹೊಡಿಯೋದೇ ಇಲ್ವಾ ?" ಅಯ್ಯೋ! ಯಾರು ಇಲ್ಲ ಅಂದ್ರು. ಮನುಷ್ಯರಲ್ವಾ ಹುಡುಗೀರು? ಹೊಡಿದೇ ಹೊಡೀತಾರೆ. ಇಲ್ದಿದ್ರೆ ನಮ್ಮ chocolate boys ರಣಭೀರ್, ಇಮ್ರಾನ್ ಖಾನ್ ಇವರಿಗೆಲ್ಲ ಫ್ಯಾನ್ಸ್ ಎಲ್ಲಿರ್ತಿದ್ರು ? (ಮನೇಲಿ ಸೀಲಿಂಗೋ, ಟೆಬಲ್ಲೋ ಫ್ಯಾನ್ಸ್ಇರ್ತಿತ್ತು ಅಷ್ಟೇ).ರೋಡ್ನಲ್ಲಿ ಚೆನ್ನಾಗಿರೋ ಹುಡುಗರು ಹೋದರೆ ನೋಡೇ ಇರ್ತಾರೆ ಬಿಡಿ ಈ ಹುಡುಗೀರು. ಆದ್ರೆ ನಾವು ನೋಡೇ ಇಲ್ಲ ಅನ್ನೋ ಥರ ಆಡ್ತಾರೆ ಅಷ್ಟೇ. .! ಅದ್ಕೆ ನಮ್ಮ ಮಂಗಳೂರು ಹುಡುಗೀರು ಮಳೆಗಾಲದಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡೆ ಇರ್ತಾರೆ .!ಆರ್ದೂ ಹುಡುಗೀರು zigzag lining ನ ಇಷ್ಟ ಪಡ್ತಾರೆ. ನಮ್ಮ ಸಮಾಜ ಹುಡುಗೀರನ್ನ ಬೆಳೆಸಿರೋದೆ ಹಾಗೆ direct line ಏನಾದರೂ ಹೊಡೆದರೆ, ಅವಳಿಗೆ ಇಲ್ಲಸಲ್ಲದ ಪಟ್ಟ ಗ್ಯಾರಂಟೀ.
safe ಆಗಿ ಲೈನ್ ಹೊಡಿಬೇಕೋ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ತಿರುಗಾಡಿ. ಯಾರಿಗೂ ನೀವು ಯಾರನ್ನ ನೋಡ್ತಿದೀರಿ ಅನ್ನೋದೇ ಗೊತ್ತಾಗೋದಿಲ್ಲ. styleಗೆ ಸ್ಟೈಲು ಆಯ್ತು, ಲೈನ್ ಹೊಡೆದಂಗೂ ಆಯ್ತು. ಒಂದೇ ಗುಂಡಿಗೆ ಎರಡು ಹಕ್ಕಿಗಳು.!
ಇಷ್ಟೆಲ್ಲಾ ಹೇಳ್ತೀಯಲ್ಲ ನೀನು ಏನ್ ಮಾಡ್ತಿಯ ಅಂತ ಕೇಳ್ತೀರಾ ? ನಾನು ನೋಡಿ frank ಆಗಿ ಹೇಳ್ಬಿಡ್ತೇನೆ ನಾನು ಹುಡುಗ್ರನ್ನ ನೋಡ್ತೇನೆ , ಆದರೆ ಕೆಟ್ಟ ದೃಷ್ಟಿಯಿಂದ ಅಲ್ಲ .ಸೌಂದರ್ಯ ಇರೋದೇ ನೋಡೋದಿಕ್ಕೆ ಹೊಗಳೋದಿಕ್ಕೆ ಅಲ್ವಾ ? ಗಾಂಧೀಜಿಯವರ 'ಕೆಟ್ಟದ್ದನ್ನು ನೋಡಬೇಡಿ' ಅನ್ನೋದನ್ನು ಅವರ ಕ್ಷಮೆಯೊಂದಿಗೆ 'ಕೆಟ್ಟದಾಗಿ ನೋಡಬೇಡಿ ' ಅಂತ ಸಣ್ಣ ತಿದ್ದುಪಡಿ ಮಾಡಿ. ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. .!
ನಿಮ್ಮ ಸಮಯವನ್ನು ಹಾಳು ಮಾಡಿ, ನಿಮ್ಮಲ್ಲಿ ನಗೆಯ ಹಾಲುಕ್ಕಿದರೆ ನನ್ನ ಮೊದಲ ಹಾಸ್ಯಲೇಖನ ಸಾರ್ಥಕವಾದಂತೆ .!