Tuesday, June 7, 2011

ಮತ್ತೆ ನಕ್ಕಳು ರಾಧೆ

ಬೇಸಿಗೆಯ ಬಿರುಬಿಸಿಲು ಮನದ ಭಾವಗಳನ್ನೇ ಬತ್ತಿಸಿತ್ತೋ ಏನೋ ಗೊತ್ತಿಲ್ಲ ? ಮತ್ತೆ ಮಳೆಗಾಲ ಶುರುವಾಗಿದೆ. ಮನದಲ್ಲಿ ಮತ್ತೆ ಭಾವನೆಗಳ ಜಲಪಾತ. ಯಾವುದೋ ಒಂದು ಘಟನೆಯ ಎಳೆ ಹಿಡಿದು   ಬರೆದ ಒಂದು ಕಥೆ. ಓದಿ ನೋಡಿ ಹೇಗಿದೆ ಹೇಳಿ:

ಅವಳ call ಬಂದಾಗಿನಿಂದ ನನ್ನಲ್ಲಿ ನಾನಿಲ್ಲ. ಮನದಲ್ಲಿ ಅದೇನೋ  ಖುಷಿ, ಅವಳನ್ನು ಎಂದು ನೋಡುವೆನೋ ಎಂಬ ಕಾತರ. ಹೌದು ಹೊನ್ನ ಕೂದಲ ಹುಡುಗಿ ಭಾರತಕ್ಕೆ ಪುನಃ ಬರುವವಳಿದ್ದಾಳೆ. 
 ನನ್ನ ಸಂಭ್ರಮಕ್ಕೆ ಇದಕ್ಕಿಂತ ಬೇರೆ ವಿಷಯ ಬೇಕೇ ?


ಅವಳಿಗಾಗಿ ಒಂದು ಗಿಫ್ಟ್ ಹುಡುಕುತ್ತ ಒಬ್ಬಳೇ ಅಲೆಯಬೇಕು ಎಂದೆನಿಸಿತ್ತು. 'ಮನಸಿಗೆ ಒಮ್ಮೊಮ್ಮೆ ಏಕಾಂತವೇ ಆರಾಮ ಎನಿಸುತ್ತದೆ. ಯಾರನ್ನೋ ಕಳೆದುಕೊಂಡಾಗ, ಅದ್ಯಾರೋ ನೆನಪಾಗುತ್ತಿದ್ದಾಗ'. 'ಹಳೆಯ ನೆನಪುಗಳಿಗೆ ಏಕಾಂತದ ಸಾಥ್ ಇದ್ದರೆ ಅದರ ಅನುಭವವೇ ಬೇರೆ'. ಹಾಗೆ ಅಲೆಯುತ್ತಿರುವಾಗ ನನ್ನ ಮನದಲ್ಲಿ ನೆನಪುಗಳ ಜಾತ್ರೆ........

ಅವಳ, ನನ್ನ ಪರಿಚಯವಾದದ್ದೇ ಲೋಕಲ್ ಬಸ್ಸಿನಲ್ಲಿ. ಅರ್ಧ ಗಂಟೆಯ 'ಮೊದಲ ಪರಿಚಯ', ಗಾಢವಾದ ಸ್ನೇಹವಾಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಮೊದಲ ಪರಿಚಯದಲ್ಲಿ ತಿಳಿದದ್ದಿಷ್ಟೇ, ನ್ಯಾಚುರೋಪಥಿಯ ವಿದ್ಯಾರ್ಥಿನಿ ಅವಳು. ಭಾರತೀಯ ಆಯುರ್ವೇದ, ಯೋಗದ ಬಗ್ಗೆ ಕೇಳಿದ್ದ ಅವಳು. ಯೋಗ ವಿಜ್ಞಾನದ ತವರೂರಾದ ಭಾರತಕ್ಕೆ ವಿದ್ಯೆಯನ್ನು ಹುಡುಕಿ ಬಂದಿದ್ದಳು.

ನಾನಿದ್ದ ರೂಮಿನಿಂದ ಹತ್ತು ಕಿಲೋಮೀಟರುಗಳ ದೂರದಲ್ಲಿ ಅವಳ ರೂಮಿತ್ತು.  ಭಾನುವಾರಗಳು ನಮ್ಮ ಹರಟೆಯ ಕಟ್ಟೆಗಳಾಗಿದ್ದವು. ಬೀಚುಗಳಲ್ಲಿ ಉದ್ದಕ್ಕೆ ನಡೆಯುತ್ತಾ ಮಾತನಾಡುತ್ತಾ ಸಾಗುತ್ತಿದ್ದರೆ ಹೊತ್ತು ಕಳೆದದ್ದೇ ತಿಳಿಯುತ್ತಿರಲಿಲ್ಲ. ತಿಂಗಳುಗಳು ಕಳೆಯುತ್ತಲೇ ನಮ್ಮಲ್ಲಿ ಆತ್ಮೀಯತೆಯೊಂದು ಕಟ್ಟಿತ್ತು. ಇಬ್ಬರೂ ಮಾತಿನ ಮಲ್ಲಿಯರೇ. ಮೊದಮೊದಲು ಸರಿಯಾಗಿ ಅರ್ಥವಾಗದ ಅವಳ ಉಚ್ಚಾರ ದಿನ ಕಳೆದಂತೆ ಅರ್ಥವಾಗತೊಡಗಿತು. bollywood, hollywood ಮೂವಿಗಳು, ನಿಸರ್ಗ, ಅದ್ಯಾವುದೋ ಪುಸ್ತಕ, ಸಂಗೀತ,ಸಂಸ್ಕೃತಿ, ಫ್ಯಾಶನ್  ಇವಿಷ್ಟು ನಮ್ಮ ಹರಟೆಯ ವಿಷಯಗಳಾಗಿದ್ದವು. ಚಿತ್ರಗಳ ವಿಮರ್ಶೆಯನ್ನು ಅತ್ಯದ್ಭುತವಾಗಿ ಮಾಡುತ್ತಿದ್ದಳು. ಸೀದಾ ಸಾದಾ ಉಡುಗೆಯಲ್ಲಿರುತ್ತಿದ್ದ ಅವಳದು, ಸರಳ ಬದುಕಾಗಿತ್ತು.


ಅದೆಷ್ಟೋ ಬಾರಿ 'ಅದ್ಯಾವುದೋ ಜನ್ಮದ ನಂಟಿದೆ ನನಗೆ ಈ ಭಾರತದ ಜೊತೆ. ಇಲ್ಲದಿದ್ದರೆ ಅದೇಕೆ ಬರುತ್ತಿದ್ದೆ ಪಶ್ಚಿಮದ ಆ ತುದಿಯಿಂದ ಇಲ್ಲಿಗೆ. ? ಇಲ್ಲಿನ ಹಲವು ದೇವಾಲಯಗಳನ್ನೆಲ್ಲ ಮೊದಲೆಲ್ಲೋ ನೋಡಿದ್ದೇನೆ ಅನಿಸುತ್ತದೆ. ನನ್ನ ಮನೆಯೂ ಇಲ್ಲೆಲ್ಲೋ ಇರಬೇಕು ಎನಿಸುತ್ತದೆ. 
ಪಶ್ಚಿಮದ ಸಂಸ್ಕೃತಿಗಿಂತ  ಇಲ್ಲಿಯೇ ಅದೇನೋ ಅನುಭವಿಸುವಂಥದ್ದಿದೆ. ಮರೆಯಲಾಗದಂಥದ್ದಿದೆ. ಅದ್ಯಾವುದೋ ಶಕ್ತಿ ನನ್ನ ಇಲ್ಲೇ ಹಿಡಿದಿಟ್ಟುಕೊಂಡಿದೆ. ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ ಎಲ್ಲ ಬೇರೆಯದೇ ಆಗಿರುವ ಈ ನಾಡಿನಲ್ಲಿ, ಹಲವು ವಿದೇಶೀ ವಿದ್ಯಾರ್ಥಿಗಳು ಹೊಂದಿಕೊಳ್ಳಲಾಗದೆ ಓಡಿ ಹೋಗುತ್ತಾರೆ. ನನಗೆ ಅದೇನೂ ಹೊಸದು ಎಂದು ಅನಿಸಲೇ ಇಲ್ಲ ನೋಡು' ಎಂದು ಹೇಳಿದ್ದಳು.

ಶನಿವಾರದ ಸಂಜೆಯ ನನ್ನಅದೆಷ್ಟೋ ಅಲೆದಾಟಗಳಿಗೆ ಜೊತೆಯಾಗಿದ್ದಳು.
ಅವಳ ಜೊತೆಯಿದ್ದಾಗಲೆಲ್ಲ ನನ್ನ ಹುಡುಗಾಟವನನೆಲ್ಲ  ಬಿಟ್ಟು ಗಂಭೀರವಾಗುತ್ತಿದ್ದೆ. ಅವಳ ಜೊತೆ ಕೂತು ಅದೆಷ್ಟು ಸೂರ್ಯಾಸ್ತಗಳನ್ನು ನೋಡಿದ್ದೇನೋ ನೆನಪಿಲ್ಲ. ದಿನಗಳೆದಂತೆ ನನಗೊಬ್ಬ ಅಕ್ಕ, ಮಾರ್ಗದರ್ಶಿ, ಮತ್ತು ಓರ್ವ ಆತ್ಮೀಯ ಸ್ನೇಹಿತೆಯನ್ನು ಅವಳಲ್ಲಿ ಕಂಡಿದ್ದೆ. ನನ್ನ ಗಂಭೀರ ಮುಖವಾಡವ ಕಳಚಿ ಮಾಮೂಲಿ ತುಂಟ  ಹುಡುಗಿಯಾಗಿದ್ದೆ.  ಅವಳಲ್ಲಿ  ಹಠ  ಮಾಡುತ್ತಿದ್ದೆ,   ಜಗಳವಾಡುತ್ತಿದ್ದೆ. ಆದರೆ  ಅದೆಲ್ಲೂ ಬೇಸರದ ಛಾಯೆಯೇ ಕಾಣುತ್ತಿರಲಿಲ್ಲ ಅವಳಲ್ಲಿ.


ಒಮ್ಮೆ ಸಮುದ್ರದ ದಡದಲ್ಲಿ ಉದ್ದಕ್ಕೆ ನಡೆವಾಗ ಸುಮ್ಮನೆ "ಅದೆಷ್ಟು  ಕಾಡುತ್ತೇನೆ  ನಾನು  ಆದರೂ ಒಂದು ಚೂರು ಸಿಡುಕುವುದಿಲ್ಲವಲ್ಲೇ ..."ಎಂದಿದ್ದೆ. ಅದಕ್ಕವಳು, ತನ್ನ ಕಡು ಹಸಿರು ಬಣ್ಣದ ಕಣ್ಣುಗಳನ್ನು ಚಿಕ್ಕದಾಗಿಸಿ ನಕ್ಕು ಬಿಟ್ಟಳು. ಮುಂದುವರಿದು .. "ಅದೆಲ್ಲೋ ಇಂಥದ್ದೇ ಸಂಬಂಧಗಳ ಹುಡುಕಿಯೇ ಇರಬೇಕು ನಾನು ಇಲ್ಲಿಯವರೆಗೆ ಬಂದದ್ದು. ಈಗ ಅನಿಸುತ್ತಿದೆ. I love you ಎಂದು ಅದೇನು ಭಾವನೆಗಳೇ ಇಲ್ಲದೇ ಯಾಂತ್ರಿಕವಾಗಿ ಹೇಳುವ ಜನರ ಮಧ್ಯೆ ಇದ್ದು ಅದೇನೆಲ್ಲ ಕಳೆದುಕೊಂಡಿದ್ದೆ ಎಂದು. ನಾವು ಯಾರ ಜೊತೆ ಮಗುವಂತೆ ಹಠ ಮಾಡುತ್ತೇವೆ? ಹೇಳು .. ಯಾರನ್ನು ನಮ್ಮವರೆಂದು ಭಾವಿಸುತ್ತೇವೋ. ಅವರಲ್ಲಿ ಅಲ್ಲವೇನೆ ? ಅದ್ಯಾರೋ ದಾರಿಹೋಕರ ಮೇಲೆ ಯಾರೂ ಸಿಟ್ಟು ಮಾಡುವುದಿಲ್ಲ, ಹುಚ್ಚಿ... ನೀನು ಸಿಟ್ಟು ಮಾಡಿಕೊಂಡಾಗಲೆಲ್ಲ ನನಗೆ ಖುಷಿಯಾಗಿದೆ. ಮನದಲ್ಲಿ ಅದೇನನ್ನೋ ಬಚ್ಚಿಟ್ಟುಕೊಂಡು ಹೊರಗಡೆ ಮುಖವೂದಿಸಿಕೊಂಡಿದ್ದಾಳೆ ಎಂದು ನಕ್ಕಿ ಬಿಟ್ಟಿದ್ದೇನೆ. ನಿಜ ಹೇಳಲಾ ನನ್ನ ಮೇಲೆ ಹೀಗೆ ಯಾರೂ ಮುನಿಸಿಕೊಂಡಿರಲಿಲ್ಲ. 'ಪ್ರೀತಿಯ ಇನ್ನೊಂದು ಮುಖ ಸಿಟ್ಟು' ಗೊತ್ತಿಲ್ಲವೇನೇ ನಿನಗೆ? ತಾನೇ ಸಾಕ್ರಟೀಸನ ಮೊಮ್ಮಗಳೆ೦ಬಂತೆ 
ಬೇರೆಯದಕ್ಕೆಲ್ಲ ಇಷ್ಟುದ್ದದ ಭಾಷಣ ಕೊಡುತ್ತೀಯಲ್ಲ." ಎಂದು ಮತ್ತೊಮ್ಮೆ ತನ್ನ ಹಸಿರು ಕಂಗಳ ಚಿಕ್ಕದಾಗಿಸಿಕೊಂಡಿದ್ದಳು.
 ನನ್ನ ತಲೆಗೊಂದು ಮೊಟಕಿದ್ದಳು. 

ಶಿವರಾಮ ಕಾರಂತ ರಸ್ತೆಯ ಕೊನೆಯಲ್ಲಿದ chats ಅಂಗಡಿಯಲ್ಲಿ ಪಾನಿಪುರಿಯನ್ನು ತಿಂದು. ತಮ್ಮ ತಮ್ಮರೂಮಿಗೆ ಸಾಗುತ್ತಿದ್ದೆವು. ಇವು ನಮ್ಮ ವರ್ಷಗಟ್ಟಲೆ ಭಾನುವಾರದ ರುಟೀನುಗಳಾಗಿದ್ದವು.

 ಹೀಗೆ ಒಮ್ಮೆ ನನ್ನ ರೂಮಿಗೆ ಬಂದಿದ್ದಳು ಹುಡುಗಿ. ನನ್ನ ರೂಮಿನಲ್ಲಿ ISKCON ಬಾಲ ಕೃಷ್ಣನ ಫೋಟೋ ಒಂದಿದೆ. ಕಿಟಕಿಯ ಬಳಿ ಗಲ್ಲಕ್ಕೆ ಕೈ ಹಚ್ಚಿ ಕುಳಿತಿರುವ ತು0ಟ ಕಂಗಳ ಕೃಷ್ಣನ ಫೋಟೋ ಅದು. ರೂಮಿಗೆ ಅಡಿ ಇಟ್ಟವಳೇ. "Hey ..who is this cute guy.. look at his eyes.. so attractive.. " ಎನ್ನುತ್ತಾ ಆ ಫೋಟೋದ ಬಳಿಗೆ ಸಾಗಿದ್ದಳು. ಬಹಳ ಹೊತ್ತು ಅವನನ್ನೇ ನೋಡುತ್ತಿದ್ದಳು. "ಎಲಾ ಇವಳಾ ಭಾರತಕ್ಕೆ ಬಂದು.. ಭಾರತೀಯ ದೇವರಿಗೆ ಲೈನ್ ಹೊಡೀತಾಳಲ್ಲ, ಎಂದು ಮನದಲ್ಲೇ ನಗುತ್ತ. "ಹ್ಞೂ ನಂಗೂ ತುಂಬಾ ಇಷ್ಟ ಈ ಫೋಟೋ, ಕೃಷ್ಣನ ಆ ಕಣ್ಣುಗಳಲ್ಲಿನ ಮುಗ್ಧತೆ ಮತ್ತು ಕುತೂಹಲ ಇರಡೂ
 ಇಷ್ಟ ಎಂದಿದ್ದೆ". ಹೌದೆಂದು ಒಪ್ಪಿಕೊಂಡಿದ್ದಳು.

ಇದರ ನಡುವೆ ನಾನು ಬ್ಯುಸಿಯಾಗಿಬಿಟ್ಟಿದ್ದೆ  ಒಮ್ಮೆ ಸೆಮಿನಾರ್, ಪರೀಕ್ಷೆ  ಹಾಗೂ assignments ಗಳೆಂದು. ಸಿಗದೇ ಹಲವು ಭಾನುವಾರಗಳೇ 
ಕಳೆದು ಹೋಗಿದ್ದವು. ಮೂರ್ನಾಲ್ಕು ಸಲ ಹೊನ್ನ ಕೂದಲ ಹುಡುಗಿಯ 
ನೆನಪಾಗಿ, ಫೋನ್ ಮಾಡಿ ಸಿಗಲು ಹೇಳಿದರೆ, ಹುಷಾರಿಲ್ಲ ಎಂಬ ನೆವ ಹೇಳಿದಳು. ಯಾಕೋ ಏನೋ ಎಲ್ಲ  ಸರಿ ಇಲ್ಲ ಎನಿಸಿತ್ತು.

ಓಣಂ ರಜೆಯ ದಿನಗಳವು. ಇಬ್ಬರಿಗೂ ಮೂರು ದಿನ ರಜೆಯಿತ್ತು. ಫೋನಾಯಿಸಿ "ನಿಮ್ಮ ಊರಿಗೆ ಕರೆದುಕೊಂಡು ಹೋಗೇ" ಎಂದುಬಿಟ್ಟಳು. "ತುಂಬಾ ಮಾತನಾಡಬೇಕು ನಿನ್ನ ಹತ್ರ "ಎಂದವಳಲ್ಲಿ  ಟ್ರೈನ್ ಹತ್ತಿದರೂ ಮಾತಿಗೆ ಬರಗಾಲ. ಕಿಟಕಿಗೆ ಮುಖವಿಟ್ಟು ಕುಳಿತವಳಿಗೆ ಇಹದ ಪರಿವೆ ಇದ್ದ ಹಾಗೆ ಕಾಣಲಿಲ್ಲ. ನಾನೂ ಅದ್ಯಾವುದೋ ಪುಸ್ತಕವ ತೆರೆದು ಓದತೊಡಗಿದ್ದೆ. ಒಂದು ಅರ್ಧ ಗಂಟೆ ಕಳೆದಿರಬೇಕು. ಥಟ್ಟನೆ "ಸು...ರಾಧೇ ಯಾರು?" ಎಂದು ಕೇಳಿದ್ದಳು. "ನನ್ನ ಅತ್ತೆ.." ಅಂದಿದ್ದೆ ನನ್ನ 'ಇಪ್ಪತ್ತೆಂಟು ವರೆ' ಹಲ್ಲುಗಳನ್ನೆಲ್ಲ ತೋರಿಸುತ್ತ. ಹುಡುಗಿ ನಗಲೇ ಇಲ್ಲ.! ವಿಷಯ ಸೀರಿಯಸ್ಸಾಗಿದೆ ಎಂದುಕೊಂಡೆ. ಎದುರಿನ ಸೀಟಿನಿಂದ ಎದ್ದು ಅವಳ ಪಕ್ಕಕ್ಕೆ ಹೋಗಿ ಕುಳಿತೆ. ನನ್ನ ಎಡಗೈ ಕಿರಿಯ ಬೆರಳನ್ನು ತನ್ನ ಬಲಗೈ ಕಿರಿಯ ಬೆರಳಲ್ಲಿ ಹಿಡಿದಳು. "ಮಳೆ ಬರಬೇಕಿತ್ತು ಒಂದು.." ಎಂದಳು. ಅರೆರೆ ಈ ಹುಡುಗಿಗೆ ಏನಾಗಿದೆ?  ಬಿರುಬಿಸಿಲಿನ ಮಧ್ಯಾಹ್ನದಲ್ಲಿ ಮಳೆಯನ್ನೇಕೆ ಕರೆಯುತ್ತಿದ್ದಾಳೆ?


ಅದೇನಾಗಿದೆ? ನಿನಗೆ ಎಂದು ಕೇಳಿದ್ದಕ್ಕೆ "ಮಳೆ ಸುರಿಯಬೇಕು ಸು.... ಭೂಮಿಯೆಲ್ಲ ಒದ್ದೆಯಾಗಬೇಕು, ಜೊತೆಗೆ ಮನಸು ಕೂಡ". ಎಂದಾಗ ಅವಳ ಕಣ್ಣಲ್ಲಿನ ಭಾವನೆಯನ್ನು ಅರಿಯಲು ಹೋಗಿ ವಿಫಲವಾಗಿದ್ದೆ.


ನಮ್ಮ ಮನೆಗೆ ಹೋದ ತಕ್ಷಣ ಉತ್ಸಾಹದ ಚಿಲುಮೆಯಾಗಿದ್ದಳು ಮತ್ತೆ.  ಅದೆಲ್ಲಿಯದೋ ಹಲವು ವರುಷಗಳ  ಪರಿಚಯದವರಂತೆ 
ಅಡುಗೆ ಕಟ್ಟೆಯ ಮೇಲೆ ಕುಳಿತು ಅಮ್ಮನ ಹತ್ತಿರ ಪಟ್ಟಾಂಗ ಹೊಡೆದಳು. ಅಜ್ಜಿಯ ಮನೆಗೆ ಕರೆದು ಕೊಂಡು ಹೋದಾಗ ಅವಳದೇ ಆದ ಹರಕು ಕನ್ನಡದಲ್ಲಿ "ಆಜಿ ನನಗೆ special ಅವಲಕಿ ಬೆಕು" ಎಂದು. ನಾನು ಆಗಾಗ ಹೇಳುತ್ತಿದ್ದ ಒಗ್ಗರಣೆ ಅವಲಕ್ಕಿಯನ್ನು ಮಾಡಿಸಿಕೊಂಡು ಚಪ್ಪರಿಸಿದಳು. ನಾನೂ ಅದೇನನ್ನೂ ಕೇಳಲು ಹೋಗಿರಲಿಲ್ಲ. ಅವಳ ಪಾಡಿಗೆ ಅವಳ ಬಿಟ್ಟುಬಿಟ್ಟಿದ್ದೆ.


ಹೊರಡುವ ಹಿಂದಿನ ದಿನದ ಸಂಜೆ ಹೊಳೆದಂಡೆಯ ಅಂಚಿನಲ್ಲಿ ಕುಳಿತಿದ್ದಾಗ. "ಹೇಳೇ ಸು ...ಅದ್ಯಾರೆ ಆ ರಾಧೇ? ನಿನ್ನ ರೂಮಿನಲ್ಲಿ ಚಿತ್ರದಲ್ಲಿರುವ ಆ ಮುದ್ದು ಪೋರನ girl friend ಅಂತೆ ಹೌದಾ? "ಅಂದಾಗ ನಕ್ಕು ಬಿಟ್ಟಿದ್ದೆ. ಹೌದೆಂದು ತಲೆಯಾಡಿಸಿದ್ದೆ.


ಒಮ್ಮೆ ಆಗಸವ ದಿಟ್ಟಿಸಿ ರಾಧೆಗೆ ದನಿಯಾದೆ, " ರಾಧೇ......ರಾಧೆಯೇ ... ಅವಳಿಗೆ ಉಪಮೆಗಳಿಲ್ಲ. ಹಲವು ಹೆಣ್ಣುಗಳ ಪ್ರತಿರೂಪಿ ಅವಳು,ಅವರ  ಮೌನದ ಮಾತು ಅವಳು. ಅದೆಲ್ಲ ಫೋಟೋಗಳಲ್ಲಿ  
ರುಕ್ಮಿಣಿ ಸತ್ಯ ಭಾಮೆಯರ ಜಾಗವನ್ನು ಕಿತ್ತುಕೊಂಡವಳು. ಕೃಷ್ಣನ ಜೀವದ ಗೆಳತಿ. ಅವರ ಪ್ರೀತಿಗೆ ವಯಸ್ಸಿನ ನಿರ್ಬಂಧವಿರಲಿಲ್ಲ. ಕೃಷ್ಣನೂ ಅವಳ ಕೊಳಲ ಉಸಿರಾಗಿ ಪ್ರೀತಿಸಿದ. ರಾಧೆಯಿಲ್ಲದ ಕೃಷ್ಣ ಅಪೂರ್ಣ. ರಾಧೆಯ ಪ್ರೀತಿ ಕೃಷ್ಣನ ಕೊಳಲ ಧ್ವನಿಯಂತೆ, ನವಿಲ ಗರಿಯಂತೆ. ಅವಳೆಂದೂ ತನ್ನ ಮದುವೆ ಆಗೆಂದು ಕೃಷ್ಣನ ಕೇಳಲಿಲ್ಲ. ಮುಗುಮ್ಮಾಗಿ ಪ್ರೀತಿಸಿದಳು. ಅವನಿಗಾಗಿ ಕಾದಳು. ಜಗದ ಜನರ ಪರಮಾತ್ಮ, ಅವಳ ಪ್ರಿಯತಮ. ಅವನ ಭುಜವೇ ಅವಳ ಜಗತ್ತು. ಅವನ ಕೊಳಲ ಗಾನವೇ ಅವಳ ಉಸಿರು. ಪ್ರೀತಿಯೆಂದರೆ ನನಗೆ ಎಂದೂ ಲೈಲಾ-ಮಜನೂ ನೆನಪಾಗುವುದಿಲ್ಲ. ಹಲವು ಸಾಹಸಗಳ ಮಾಡಿ ಮದುವೆಯಾದವರು ನೆನಪಾಗುವುದಿಲ್ಲ. ನನ್ನ ಪಾಲಿಗೆ ಪ್ರೀತಿಯೆಂದರೆ ನೆನಪಾಗುವುದು ಕೃಷ್ಣ -ರಾಧೆಯರು. ಅವರಿಬ್ಬರ ಪ್ರೀತಿ ಅಗಾಧ ಪ್ರೀತಿಯ ಸಂಕೇತ...." ಹೀಗೆ ಸಾಗಿತ್ತು ನನ್ನ ಮಾತು. ಅದ್ಯಾಕೋ ಹುಡುಗಿಯ ಮುಖವನ್ನೊಮ್ಮೆ ನೋಡಿದ್ದೆ ಮಧ್ಯೆ. ಕಣ್ಣಲ್ಲಿ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು. ನನ್ನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಪುಟ್ಟ ಮಗುವಂತೆ ಅತ್ತು ಬಿಟ್ಟಿದ್ದಳು. ಹದಿನೈದು ನಿಮಿಷಗಳು ಕಳೆದಿರಬೇಕು.


ತಲೆ ಎತ್ತಿದ ಹುಡುಗಿ "ಇನ್ನು ಕೆಲವು ತಿಂಗಳುಗಳು ಸು.. ಕೊನೆಗೆ ನನ್ನ ದೇಶದ ದಾರಿ ಹಿಡಿಯಬೇಕು ನಾನು. ನನಗಾಗಿ ಕಾದ ಅಮ್ಮನಿದ್ದಾಳೆ ಅಲ್ಲಿ. ಇಲ್ಲಿಗೆ ಬಂದ ಮೇಲೆ ನನ್ನ ಅಮ್ಮನ ಬಹಳ ಮಿಸ್ ಮಾಡಿದ್ದೇನೆ" ಎನ್ನುತ್ತಾ ಕಣ್ಣು ಒರೆಸಿಕೊಂಡಳು.


ಥಟ್ಟನೆ ನನ್ನತ್ತ ತಿರುಗಿ "ನನ್ನಲ್ಲೂ ಓರ್ವ ರಾಧೆಯಿದ್ದಾಳೆ ಸು.... ನನಗೂ ಒಬ್ಬ ನನ್ನ ಇಷ್ಟದ ಕೃಷ್ಣ ಸಿಕ್ಕಿದ್ದಾನೆ. ಬಾಯಿ ಬಿಟ್ಟು ಒಮ್ಮೆಯೂ ನನ್ನ ಬಳಿ I love you.. ಎನ್ನದ. ತನ್ನ ಕಣ್ಣಲ್ಲೇ ಪ್ರೀತಿಯ ವರ್ಷಧಾರೆಹರಿಸುವ 
ಹುಡುಗನೊಬ್ಬ ಸಿಕ್ಕಿದ್ದಾನೆ. ನನಗಿಂತ ಸಣ್ಣವ. ನನ್ನದೇ ಜೂನಿಯರ್. 
ಅವನು ನಮ್ಮ ಕಾಲೇಜಿಗೆ ಸೇರಿದಾಗಿನಿಂದ ಸ್ನೇಹಿತರು ನಾವು. 
ಆದರೆ ಇತ್ತೀಚಿಗೆ ಯಾಕೋ ಅವನ ಬಿಟ್ಟಿರುವುದರ ನೆನೆಸಿಕೊಂಡರೆ
 ಕಣ್ಣೀರು ಹರಿಯುತ್ತದಲ್ಲೇ". "ಅದೇ ನೀನು ಆಗಾಗ ಹೇಳುತ್ತಿದ್ದ ಕೊಳಲು 
ಊದುವ  ಕನಸು ಕಂಗಳ ಹುಡುಗನಾ?"  ಎಂದು ಕೇಳಿದ್ದೆ. " ಹ್ಞೂ..... ಅವನೇ....  ಅವನ ಕೊಳಲ ಧ್ವನಿ,  ಅವನ ಕಣ್ಣುಗಳೇ ಹೇಳುತ್ತವೆ ಅವನೆಷ್ಟು ನನ್ನ ಪ್ರೀತಿಸುತ್ತಾನೆ ಎಂದು. ಮೊನ್ನೆ ಮೊನ್ನೆ ಕಾಲೇಜಿನ ವಾರ್ಷಿಕ ಉತ್ಸವಕ್ಕೆ ಸೀರೆ ಉಟ್ಟಿದ್ದೆ. ಮದರಂಗಿಯ ರಂಗು ತುಂಬಿದ್ದ ನನ್ನ ಕೈ ತುಂಬಾ ನವಿಲು ಬಣ್ಣದ ಬಳೆಗಳು.ಅವನೇ ಕೊಡಿಸಿದ್ದು. ಅವನಿದ್ದಲ್ಲಿಗೆ 
ಹೋಗಿ ಹೇಗೆ ಕಾಣುತ್ತಿದ್ದೇನೆ ಎಂದು ಕೇಳಿದರೆ ಕಣ್ಣಲ್ಲಿ ಕಣ್ಣಿಟ್ಟು ಮುಗುಳ್ನಕ್ಕ.
ಸಂಜೆ ಸಿಕ್ಕಿದ್ದ ಹುಡುಗ 'ರಾಧೆ ಯಾರು ಗೊತ್ತೇನೇ? ನಿನ್ನ ನೋಡಿ ರಾಧೇ ನಿನ್ನ ಹಾಗೆ ಇದ್ದಿರಬಹುದು ಎನಿಸಿಬಿಡ್ತು .' ಎಂದಿದ್ದ.

I love you ಅನ್ನುವುದರೊಂದಿಗೆ ಶುರುವಾಗಿ, live- in, ಮಕ್ಕಳು, ಮದುವೆ, ಎಂಬ ಹಂತಗಳನ್ನು ದಾಟಿ divorceನಲ್ಲಿ ಮುಗಿಯುವ ಪ್ರೀತಿ ಸಾಕಾಗಿದೆ ನನಗೆ. ಜೀವನ ಕೊನೆಯವರೆಗೂ ಮಧುರ ಅನುಭವವಾಗಿ ಕಾಣುವ, ಕಾಡುವ ಪ್ರೀತಿಯೊಂದು ಬೇಕೆನಿಸಿದೆ. 

ನನಗೊತ್ತು ಅವನೊಂದಿಗೆ ಮದುವೆಯಾಗುವ, ಜೀವನದ ಕೊನೆಯವರೆಗೂ 
ಬದುಕುವ ಕನಸು ಕಾಣುವಂತಿಲ್ಲ. ಪಕ್ಕಾ ಸಂಪ್ರದಾಯಸ್ತ ಮನೆತನದ 
ಭಾರತೀಯ ಅವನು. ಬಹಳ ಸೂಕ್ಷ್ಮ ಹುಡುಗ ಆತ. ಅವನ ಕೊಳಲ ಧ್ವನಿ. ಅವನ ಪ್ರೀತಿ ಸುರಿಸುವ ಕಂಗಳು ಸಾಕು. ಒಂದಿಷ್ಟು ನೆನಪುಗಳು ಸಾಕು ನನಗೆ. ಈ ಭರತ ಭೂಮಿಗೆ ಬಂದು ನನ್ನ ವೃತ್ತಿಶಿಕ್ಷಣವನ್ನಷ್ಟೇ ಅಲ್ಲ, ಬದುಕಿನ ಬೇಕಾದ ಹಲವು ಪಾಠಗಳನ್ನು ಕಲಿತೆ. 'ಪ್ರೀತಿ' 
ಎನ್ನುವುದಕ್ಕೆ ಹೊಸ ವ್ಯಾಖ್ಯೆ, ಅನುಭವ ಎಲ್ಲವನ್ನು 
ಹುಡುಕಿಕೊಂಡೆ. ಏನನ್ನು ಹುಡುಕಿ ಬಂದಿದ್ದೇನೋ ಅದೆಲ್ಲವನ್ನು ಈ ಭೂಮಿ ಕೊಟ್ಟಿದೆ".  ಎಂದು ತನ್ನ ಉದ್ದದ ಮಾತನ್ನು ಮುಗಿಸುತ್ತಾ ನನ್ನ ಮುಖ ನೋಡಿದ್ದಳು.

ಅದೇನು ಹೇಳಬೇಕೆಂದೇ ತಿಳಿದಿರಲಿಲ್ಲ ಆ ಕ್ಷಣಕ್ಕೆ. ಸುಮ್ಮನೆ  ಮೌನವನ್ನು ನನ್ನ ಮಡಿಲಲ್ಲಿ  ಕೂರಿಸಿಕೊಂಡಿದ್ದೆ. 'ಕೆಲವೊಂದು ಕ್ಷಣಗಳಿಗೆ 
ಮೌನವನ್ನು ಬಿಟ್ಟರೆ ಬೇರೆ ಯಾವುದೂ ಸರಿ ಹೊಂದುವುದಿಲ್ಲ'.

ಅಲ್ಲಿಂದ ಕೆಲವು ತಿಂಗಳುಗಳು ಸರಿದದ್ದೇ  ತಿಳಿಯಲಿಲ್ಲ. ಅವಳು ಹೊರಡುವ ದಿನವೂ ಹತ್ತಿರ ಬಂದಿತ್ತು.

ಕಣ್ಣಲ್ಲಿ ನೀರು ತುಳುಕಿಸುತ್ತ ನಿಂತಿದ್ದ ಹೊನ್ನ ಕೂದಲ ಹುಡುಗಿಗೆ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿದ್ದೆ. " ಜೀವನವು ನಿಂತ ನೀರಲ್ಲ ಗೆಳತೀ, ನಿನ್ನಂತ ಜೀವನ್ಮುಖಿಯ ಕನಸುಗಳೆಲ್ಲ ಅರಳಲಿ." ಎಂದು ವಿದಾಯ ಹೇಳಿದ್ದೆ.

ಈಗ ಬರೋಬ್ಬರಿ ಮೂರು ವರುಷಗಳ ನಂತರ ತಿರುಗಿ ಬರುತ್ತಿದ್ದಾಳೆ. 
ಹೊನ್ನ ಕೂದಲ ಹುಡುಗಿಗಾಗಿ ಕಣ್ಣಂಚಿಗೆ ಕುತೂಹಲದ ಕಾಡಿಗೆಯ ಹಚ್ಚಿ ಕಾದಿದ್ದೆ. ಇಷ್ಟೆಲ್ಲಾ ನೆನಪಾಗುವ ಹೊತ್ತಿಗೆ  ರಸ್ತೆಯಂಚಿನ  ಕ್ರಾಫ್ಟ್ 
ಅಂಗಡಿಯೊಂದರಲ್ಲಿ ನನ್ನ  ಕಣ್ಣಿಗೆ ಚೆಂದ ಅನಿಸುವ ಕಲಾಕೃತಿಯೊಂದು ಕಂಡಿತ್ತು. ಇದೆ ಸರಿ ಎಂದು ಪ್ಯಾಕ್ ಮಾಡಿಸಿದೆ.

ಕೊನೆಗೂ ಅವಳ ಮತ್ತೊಮ್ಮೆ ಕಾಣುವ  ದಿನ ಬಂದೇ ಬಿಟ್ಟಿತು. ಅವಳಿಗಾಗಿ 
ಕಾದಿದ್ದೆ, ಉಡುಗೊರೆಯೊಂದಿಗೆ. ನೀಲಿ ಬಣ್ಣದ ಕುರ್ತಾದಲ್ಲಿದ್ದ ಅವಳು ದೂರದಿಂದಲೇ ಕೈಬೀಸಿ ನಗುತ್ತ ಓಡೋಡಿ ಬರುತ್ತಿದ್ದಳು. ಕೈ ತುಂಬಾ ಬಳೆಗಳು. ಅದೇ ನವಿಲು ಬಣ್ಣದ ಬಳೆಗಳು.  ಓಡಿ ಬಂದು ನನ್ನ ಬಿಗಿದಪ್ಪಿದ್ದಳು. ದೂರದಲ್ಲಿ ಬರುತ್ತಿದ್ದ ಆಜಾನು ಬಾಹುವಿನತ್ತ ತೋರಿಸಿ " ನೋಡು ಅವನು ನನ್ನ ಗಂಡ, ಭಾರತದಲ್ಲೇ ಆಯುರ್ವೇದವ ಕಲಿತದ್ದು. ಕೊಳಲನ್ನು ಅದ್ಭುತವಾಗಿ ಬಾರಿಸುತ್ತಾನೆ. ನೋಡು ನನ್ನ ಕೈಗೆ ಮದರಂಗಿಯನ್ನೂ ಹಚ್ಚಿದ್ದಾನೆ." ಎಂದು ಒಂದೇ ಉಸಿರಲ್ಲಿ ಹೇಳಿ ಬಿಟ್ಟಳು. ಮುಖದಲ್ಲಿ ಸಂತಸ ಹಾಯಿ ದೋಣಿಯಂತೆ ಸಾಗಿತ್ತು.

ಆಜಾನುಬಾಹು ಹತ್ತಿರ ಬಂದು ಕೈಜೋಡಿಸಿ "ನಮಸ್ತೆ" ಎಂದ. ಕುರುಚಲು ಗಡ್ಡದ ಕೋಲು ಮುಖದವನ ನೀಲಿ ಕಂಗಳಲ್ಲಿ ಅದೇನೋ ತೇಜಸ್ಸು ಇದ್ದಂತೆ ಕಂಡಿತು. ಉಡುಗೊರೆಯನ್ನು ಇಬ್ಬರ ಕೈಯಲ್ಲಿಟ್ಟೆ. ಸುಂದರವಾದ ರಾಧ ಕೃಷ್ಣರ ವಿಗ್ರಹ ಅದು. ಆಜಾನುಬಾಹು "ಓಹ್ ರಾಧಾ-ಕೃಷ್ಣ ತುಂಬಾ ಸುಂದರವಾಗಿದೆ. ಪ್ರೀತಿಗೆ ಇನ್ನೊಂದು ಹೆಸರು ಇವರಿಬ್ಬರು ..!"ಎಂದ.

ಹುಡುಗಿ ತನ್ನ ಕೈಯಲ್ಲಿದ್ದ ನವಿಲ ಬಣ್ಣದ ಬಳೆಗಳಲ್ಲಿ ಎರಡು ಬಳೆಗಳನ್ನು ತೆಗೆದು. ವಿಗ್ರಹದಲ್ಲಿದ್ದ ರಾಧೆಯ ಕೈಗಿಟ್ಟಳು. ನನ್ನ ಮುಖ ನೋಡಿದಳು. ಹಸಿರು ಕಣ್ಣುಗಳಲ್ಲಿ ಹಿಂದಿನದೆಲ್ಲ ನೆನಪಾದಂತೆ ಕಂಡಿತು ನನಗೆ.  ಅವಳು "ಹಸಿವಾಗುತ್ತಿದೆ ನಡೀ 'ಪ್ರಿಯದರ್ಶಿನಿ'ಗೆ ಹೋಗೋಣ. ಎಂದು 
ನನ್ನ ಕೈ ಹಿಡಿದು ಎಳೆಯುತ್ತಿದ್ದರೆ. ಆಜಾನುಬಾಹು ಕಣ್ಣಲ್ಲೇ ನಗುತ್ತಿದ್ದ. ರಾಧೆ ನವಿಲು ಬಣ್ಣದ ಬಳೆಗಳನ್ನೇ  ನೋಡುತ್ತಿದ್ದಳು, ನಗುತ್ತಿದ್ದಳು. !

Tuesday, April 19, 2011

ಸಂಜೆ ಏಳರ ಬಸ್ಸು


ಕುಮಟಾದಿಂದ ಹತ್ತು ಕಿಲೋಮೀಟರುಗಳು ದೂರದಲ್ಲಿರುವ ನಮ್ಮೂರಿಗೆ, ದಿನಕ್ಕೆ ಹತ್ತು ಬಸ್ಸುಗಳಿವೆ. ಸುಮಾರಾಗಿ ಡಾಂಬರು ಇರುವ ರಸ್ತೆಯಲ್ಲಿ ಸುತ್ತಲಿನ ಹಸಿರು ಗದ್ದೆಗಳು, ಹಳ್ಳಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಾ ಬಸ್ಸಿನಲ್ಲಿ ಬರುವುದೇ ಒಂಥರದ ಖುಷಿ.

ಮಾಯಾನಗರಿ ಬೆಂಗಳೂರಿನ ಹಳೆಯ ಬಸ್ಸುಗಳೆಲ್ಲ (KA-01 registration)ನಮ್ಮಲ್ಲಿ ಹಳ್ಳಿಗಳಿಗೆ ಓಡಾಡುವ ಪುಷ್ಪಕ ವಿಮಾನಗಳು. ಹೆಚ್ಚಾಗಿ ಜನಸಾಮಾನ್ಯರ ಓಡಾಟ ಆ ಬಸ್ಸುಗಳ ಮೇಲೆ ಅವಲಂಬಿತ. ಇವಿಷ್ಟನ್ನು ನನ್ನ ಬರಹದ ವಿಷಯ ಎನ್ನಬಹುದಾದರೂ. ನನ್ನ ಜನ್ಮಸಿದ್ಧ ಹಕ್ಕನ್ನು ಚಲಾಯಿಸದೇ ಬಹಳ ದಿನಗಳೇ ಕಳೆದವು. (ತಲೆ ತಿನ್ನುವುದು ನನ್ನ ಆ ಜನ್ಮ ಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ.! ಎಂದು ನಾನು ಈ ಭೂಮಿಗೆ ಬಂದಾಗಲೇ ನಿರ್ಧರಿಸಿ ಆಗಿತ್ತು). ವಿಷಯದ ರೈಲು ಅಲ್ಲಲ್ಲಿ ಹಳಿ ತಪ್ಪಿದರೂ ಸರಿಪಡಿಸಿ ಓಡಿಸಿದ್ದೇನೆ ನೀವು ಓದಿ. 

ನಾನು ಬಸ್ಸಿನಲ್ಲಿ ಓಡಾಡುವುದನ್ನೇ ಇಷ್ಟ ಪಡುತ್ತೇನೆ.ಮಂಗಳೂರಿನಲ್ಲಿ  ಗಾಜುಗಳಿಲ್ಲದ ಕಿಟಕಿಗಳ ಬಸ್ಸಿನಲ್ಲಿ ಕೂತು,ಒಂದುಕಾಲದಲ್ಲಿ ಬಾಬ್ ಇದ್ದ 
ಕೂದಲನ್ನು ಜುಟ್ಟಿಗೆ ಸಿಕ್ಕಿಸಲು ಹರಹರಿ ಸಾಹಸ ಮಾಡುತ್ತಾ. 
ಕೊನೆಗೆ 'ಉಪೇಂದ್ರ'ನಿಗೆ ನೀನೇ ಸ್ಫೂರ್ತಿಯೋ ಎಂದೂ ಕೇಳಿಸಿಕೊಂಡಿದ್ದೇನೆ ಬಿಡಿ. ಆದರೂ ಈ ಬಸ್ ಪಯಣದ ಮಜವೇ ಬೇರೆ. ಹಿಂದೆ ಚಿಕ್ಕವಳಿರುವಾಗ ಗಿಡ ಮರಗಳೇ ಓಡುತ್ತವೆ ಎಂದೂ,ರಸ್ತೆಗಳೆಲ್ಲ ಹಿಂದೆ ಗುಡ್ಡದಂತೆ 
ರಾಶಿ ಬೀಳುತ್ತವೆ ಎಂದೂ ಹೊಸ ಒಂದು  ಪ್ರಮೇಯವನ್ನೂ ಹೊಸೆದಿದ್ದೆ.

ಮೊನ್ನೆ ಮಂಗಳೂರಿನಿಂದ ಮತ್ಸ್ಯಗಂಧ ರೈಲಿಗೆ ಬಂದವಳು, ಸೀದಾ ಬಸ್ ನಿಲ್ದಾಣಕ್ಕೆ ಬಂದು ನಮ್ಮೂರಿಗೆ ಕೊನೆಯ ಬಸ್ಸಾದ ಸಂಜೆ ಏಳರ ಬಸ್ಸಿಗೆ ಹತ್ತಿದ್ದೆ. ಈ ಹಳ್ಳಿಗಳ ಬಸ್ಸಿನಲ್ಲಿ ಓಡಾಡುವ ಮಜವೇ ಬೇರೆ. ಅದರಲ್ಲೂ ಹೊತ್ತು ಮುಳುಗಿದ ಮೇಲಿನ ಬಸ್ಸಿನ ಗಮ್ಮತ್ತೆ ಬೇರೆ ಬಿಡಿ. ಮಂಗಳೂರಿನ ಗಾಜುಗಳೇ ಇಲ್ಲದ ಕಿಟಕಿಗಳ ಬಸ್ಸುಗಳಿಗಿಂತ ನಮ್ಮೂರಿನ ಬಸ್ಸುಗಳು ಶ್ರೇಷ್ಠವೆನಿಸುತ್ತವೆ. 'ಹುಟ್ಟೂರು ಸ್ವರ್ಗಕ್ಕಿಂತ ಮಿಗಿಲಾದರೆ ಹುಟ್ಟೂರಿಗೆ ಓಡಾಡುವ ಬಸ್ಸುಗಳು king fisher ವಿಮಾನಗಳಿಗಿಂತಲೂ ಮಿಗಿಲು'.!


ಮೇಲೆ ಹೇಳಿದಂತೆ, ನಮ್ಮೂರಿಗೆ ಇದೇ ಕಡೆಯ ಬಸ್ಸು. ಮನೆಯ 
ಸೇರಬೇಕೆಂದವರೆಲ್ಲ, ರಾತ್ರಿ ಮನೆಯಲ್ಲೇ ಮಲಗಬೇಕೆಂದವರೆಲ್ಲ, ಇದರಲ್ಲಿ ಬರುತ್ತಾರೆ. ಯಾಕೆ ಹೀಗಂದೆ ಎಂದು ಗೊತ್ತಯ್ತಲ್ವಾ ? ಕೆಲವರಿಗೆ ರಸ್ತೆಯ ಪಕ್ಕದ ಗಟಾರಗಳು ಮನೆಯ ಮಲಗುವ  ಕೋಣೆಯಂತೆ 
ಕಾಣುವಂತೆ ಮಾಡಿ  ಅಲ್ಲಿ ಮಲಗಿಸಿ ಬಿಡುತ್ತಾನೆ ಆ 'ಪರಮಾತ್ಮ'..! 
 
ಕಲ್ಲು ಕ್ವಾರೆಯ ಕೆಲಸಕ್ಕೆ,ಟಿಪ್ಪರು, ಲಾರಿಗಳಿಗೆ ಕೆಲಸಕ್ಕೆ ಹೋಗಿ, ಮೈಕೈ ನೋವಿಗೆ ದಿವ್ಯ ಔಷಧವೆಂದು 'ಪರಮಾತ್ಮ'ನನ್ನು ಹೊಟ್ಟೆಗೆ ಇಳಿಸಿಕೊಂಡು ನಶೆಯಲ್ಲಿದ್ದವರೂ, ದೂರದ ಗೋಕರ್ಣ, ಕಾರವಾರ, ಭಟ್ಕಳದಲ್ಲಿ ಕೆಲಸ ಮಾಡುವವರೂ, ಮಂಗಳೂರಿನಿಂದ ಸಂಜೆ ಮತ್ಸ್ಯಗಂಧ  ಟ್ರೈನ್ ಗೆ ಬಂದು ಊರಿಗೆ ಬರಲು ಬಸ್ಸು ಹಿಡಿದ ನನ್ನಂಥವರೂ, ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳೂ, ಖಾಲಿಯಾದ ಮೀನು ಬುಟ್ಟಿಯ ಹಿಡಿದು ಮನೆಗೆ 
ಹೊರಟಿದ್ದ 'ಮತ್ಸ್ಯಗಂಧಿನಿ'ಯರು, 'ಸಂಜೆ ಏಳರ ಬಸ್ಸಿನ ಖಾಯಂ ಪ್ರಯಾಣಿಕರು. ಕಂಡಕ್ಟರುಗಳೆಲ್ಲ ಆಚೀಚೆ ಮನೆಯವರಂತೆ ಪರಿಚಿತರು. (ನೆನಪಿಡಿ ಬೆಂಗಳೂರಿನ ಆಚೀಚೆ ಮನೆಯಲ್ಲ).


 ಬಲಗಾಲನ್ನೋ, ಎಡಗಾಲನ್ನೋ ಮೊದಲಿಟ್ಟು ಬಸ್ಸೇರಿದ್ದೂ 
ಆಯಿತು ನಾನು. ಎಂದೂ ಮಾತನಾಡಿಸದ 'ಗಾಳಿ ಮನೆ' ಮಾಚ. "ತಂಗೀ ಈಗ ಬಂದ್ಯೇ?" ಅಂದಾಗಲೇ ನನಗೆ ಅವನಲ್ಲಿ 'ಪರಮಾತ್ಮ'ನ ಇರುವಿಕೆ ಅರಿವಾದದ್ದು. ಕಿಟಕಿ ಪಕ್ಕದ ಸೀಟು ಹಿಡಿದು ಒಮ್ಮೆ ಆಗಸವ ದಿಟ್ಟಿಸಿದೆ.ಯಾರೋ 'ಕಾಮತ'ರ ಅಂಗಡಿಯಿಂದ ತಂದಿದ್ದ ಚಟ್ಟ೦ಬೊಡೆಯ ಕಂಪು ನನಗೆ ಹಸಿವಾದದ್ದನ್ನು ಮತ್ತೊಮ್ಮೆ ನೆನಪಿಸಿತ್ತು. ಕಲ್ಲು ಕ್ವಾರಿಯವರ ಬೆವರಿನ ವಾಸನೆಯೊಂದಿಗೆ ಆ ಸಾರಾಯಿಯ ವಾಸನೆಯೂ ಸೇರಿ ಹಬ್ಬುವ ಅತಿ ವಿಶಿಷ್ಟವಾದ ಕಮರೊಂದು ಸಂಜೆ ಏಳರ ಬಸ್ಸಿನ ಅತೀ ಮುಖ್ಯವಾದ ಲಕ್ಷಣಗಳಲ್ಲೊಂದು.


ಬಸ್ಸು ಬಿಡಲು ಇನ್ನೂ ಹತ್ತು ನಿಮಿಷಗಳಿದ್ದವು. ಹಾಗೆ ಬಸ್ಸಿನ ಸುತ್ತಲೆಲ್ಲ ಕಣ್ಣು ಹಾಯಿಸಿದೆ.:
ನಾಲ್ಕು ಗಾಲಿಗಳ ಮೇಲೆ ತಗಡಿನ ಹೊದಿಕೆ ಹಾಕಿದಂತಹ ಬಸ್ಸು. ನಿಲ್ದಾಣದಿಂದ ಬಸ್ಸು ಮುಂದೆ ಚಲಿಸಬೇಕಾದರೆ ನಾಲ್ಕು ಜನ ಪ್ರಯಾಣಿಕರು ಕೆಳಗಿಳಿದು ಬಸ್ಸನ್ನು ನೂಕಬೇಕು. ಬಸ್ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಬೇಕಾದರೆ ಗಾಲಿಗೆ ಕಲ್ಲನ್ನು ಕೊಟ್ಟು ನಿಲ್ಲಿಸಬೇಕು. ಇಲ್ಲದಿದ್ದರೆ ನಿಲ್ದಾಣದ ಮುಂದಿನ ಪಾಗಾರ (ಕಂಪೌಂಡ್)ಕ್ಕೆ ಹೋಗಿ ಬಸ್ಸು ಢಿಕ್ಕಿ ಹೊಡೆದುಕೊಳ್ಳುತ್ತದೆ.(ಹೀಗೆ ಹಲವಾರು ಸಲ ನಡೆದು ಕುಮಟೆಯ ಬಸ್ ನಿಲ್ದಾಣದ ಎದುರುಗಡೆ ಕಂಪೌ೦ಡೇ ಇಲ್ಲ .!)


ಬಸ್ಸಿನ ಒಳಗಡೆಯ ದೃಶ್ಯ ಅಪರೂಪವಾದದ್ದು :
 ನಿನ್ನೆ ಸಂತೆಯ ತರಕಾರಿ ಚೀಲದಿಂದ ತಪ್ಪಿ ಬಿದ್ದ ಅರೆ ಬಾಡಿದ ಬೀನ್ಸ್. ಅದ್ಯಾರದೋ ತಲೆಯಿಂದ ಜಾರಿದ ಮುದುಡಿರುವ ಕೆಂಪು ಗುಲಾಬಿ. ಯಾರೋ ಮರೆತು ಹೋದ ಕರವಸ್ತ್ರ. ಪುಟ್ಟ ಪಾಪುವಿನ ಬಲಗಾಲಿನ ಚಪ್ಪಲಿ( ಗಡಿಬಿಡಿಯಲ್ಲಿ ಇಳಿಯುವಾಗ ಬಿದ್ದಿರಬೇಕು). ಒಲ್ಲದ ಮನಸ್ಸಿನಿಂದ ಮಾಸ್ತರರಿಗೆ ಜಾಗ ಬಿಟ್ಟು ಕೊಡುತ್ತಿದ್ದ, ಹುಡುಗಿಯ ಪಕ್ಕದ ಸೀಟಿನಲ್ಲಿ ಕುಳಿತ ಕಾಲೇಜು ಹುಡುಗ. SMS ಲೋಕದಲ್ಲೇ ಕಳೆದು ಹೋಗಿದ್ದ, ಮುಗುಳು ನಗುತ್ತಿದ್ದ ನೀಳ ಜಡೆಯ ಹುಡುಗಿ. ತೂಕಡಿಸುತ್ತಿದ್ದ ಒಂದೆರಡು ಜನರು. ಹೊಸ ಸಿನಿಮಾ ನೋಡಿ ಬಂದ ಹುಡುಗರಿಬ್ಬರು ಅದರ ಕ್ಲೈಮ್ಯಾಕ್ಸನ್ನು ತಮ್ಮದೇ ಆದ ರೀತಿಯಲ್ಲಿ ಕೊಡುತ್ತಿದ್ದರು. ಹಿಂದಿನ ಸೀಟಿನಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿದ್ದ ಜೋಡಿ ಹಕ್ಕಿಗಳು.



ಬಸ್ಸಿನ ಸೀಟುಗಳ0ತೂ ಯಾವುದೋ ಎಕ್ಸಿಬಿಶನ್ ಗಿಂತ ಕಡಿಮೆ ಏನಿರಲಿಲ್ಲ: ಎಲೆ ಅಡಿಕೆ ಹಾಕುವಾಗ ಹೆಚ್ಚಾದ ಸುಣ್ಣವನ್ನು ಅಲ್ಲೇ ಸೀಟಿಗೆ ಒರೆಸಿರುವ  
ಯಾರದ್ದೋ ಬೆರಳ ಗುರುತು. ಒಂದಿಷ್ಟು ಜನರ ಪ್ರೇಮದ ಕುರುಹುಗಳಿಗೆ ಅಮಾಯಕವಾಗಿ ಬಲಿಯಾದ ಸೀಟಿನ ಹಿಂಭಾಗ. I love you 'ಒಂದು ಹುಡುಗಿಯ ಹೆಸರು'. ಮತ್ತೆಲ್ಲೋ ಅದಕ್ಕೆ ಉತ್ತರ. ಸೀಟುಗಳ ಮೇಲೆ ಬರೆದ ಅದೆಷ್ಟೋ ಫೋನ್ ನಂಬರುಗಳು. ಹೃದಯ ಚಿನ್ಹೆಯ(heart shape) ಒಳಗೆ 'ಗೋಪು weds ಪ್ರೀತಿ' ( ಸಂಜು weds ಗೀತಾ ಫಿಲಂ ಪ್ರಭಾವ ಅಂದುಕೊಂಡೆ), ಒಟ್ಟಾರೆ ಹೇಳುವುದಾದರೆ ಸೀಟುಗಳಲ್ಲಿ  ಅಕ್ಷರಗಳ ಜಾತ್ರೆ.!
ಕವಳದ ರಸವನ್ನು ಪಿಚಕಾಯಿಸಿ ಅರೆಗೆಂಪು ಬಣ್ಣಕ್ಕೆ ತಿರುಗಿದ ಕಿಟಕಿಯ ಸರಳುಗಳು. ಬಸ್ಸು ಓಡುವ ಸ್ಪೀಡಿಗೆ Tap dance ಮಾಡುವ ಜೊತೆಗಾರನನ್ನು ಕಳೆದುಕೊಂಡ ಕಿಟಕಿಯ ಗಾಜುಗಳು.


ಈ ಹಳ್ಳಿಯ ಬಸ್ಸಿನಲ್ಲಿಯ ಸಂಭಾಷಣೆಗಳಲ್ಲೂ ಸ್ವಾರಸ್ಯವಿರುತ್ತದೆ, ಜೀವನ ಪ್ರೀತಿ ಇರುತ್ತದೆ.  "ಹಾಲು ಕರದು ಆಯ್ದಿಲ್ಯೇ, ದನ ಕೊಟ್ಗೆಗೆ ಬಂದಿಕಿದೋ ಏನೇನೋ" "ನಮ್ಮನೆ ದನ- ಕರ ಎಲ್ಲ ಕೊಟ್ಟಿಕಿದೋ ನೋಡು ಪುಕ್ಕಟ್ಟೆಯ. ಸಾಕುಲೇ ಆಗ್ತಿಲ್ಯೇ, ದಾಣಿ ತುಟ್ಟಿ ಆಗೊಯ್ದು, ಈಗ ಪೆಕೆಟು ಹಾಲೇಯ ಗತಿ ."
 "ನಂಗೋನು ಹೀಂಗೆ ಮಾಡಕಾತು ಈಗ, ಆದ್ರೆ ಪ್ರೀತಿಂದಾ ಸಾಕಂಡದ್ದಲೇ ಕೊಡೂಲೇ ಮನಸು ಬತ್ತಿಲ್ಲೆ" ಹೀಗೆ ಸಾಗಿತ್ತು ಊರಿನ 'ಸುಬ್ಬತ್ತೆ' ಹಾಗೂ 'ಗಂಗಕ್ಕನ' ಮಾತುಗಳು.


"ಓಪನ್ 08ರ, ಕ್ಲೋಜು(close) ಎಟ್ಟೆನ. ನಾನು ನೋಡ್ರಾ ಮೂರು ನಮನಿ ನಂಬರಿಗೆ ಹತ್ತತ್ತು ಇಟ್ಟು ಬಂದಾನೆ" 'ಬೋಯಿ ರಾಮ' 'ಓಸೀ' ನಂಬರುಗಳ ಬಗ್ಗೆ ತಲೆ ಕೆಡಿಸಿಕೊಂಡು ಹೇಳುತ್ತಿದ್ದರೆ. ಸುಬ್ರಾಯ ಹೆಗಡೇರು ಅಡಿಕೆ ಮಾರ್ಕೆಟ್ಟು ಚಿಗುರಿದ್ದರಿಂದಲೋ ಏನೋ ಬಾಯಲ್ಲಿದ್ದ ರಸಗವಳವನ್ನೆಲ್ಲ ಕಿಟಕಿಯಾಚೆ ಪಿಚಕಾಯಿಸಿ, ಇನ್ನೊಂದು ಎಲೆಯನ್ನು ತಮ್ಮ ಶತಮಾನಗಳಿಂದ ನೀರು ಕಾಣದಂತಿದ್ದ 'ಬಿಳಿ' ಲುಂಗಿಗೆ ಒರೆಸುತ್ತಾ,. "ಅಡಕಿಗೆ ಹನ್ನೊಂದು ಸಾವ್ರ ಆಗದ್ಯಂತೋ ರಾಮ, ನಿಂದು ಎಷ್ಟದೇ ?" ಎಂದು ಕೇಳುತ್ತಿದ್ದರು.

ಹಿಂದೆ ಅದ್ಯಾರದ್ದೋ ಮೂವರ cell phone ಗಳಲ್ಲಿ ಒಂದೊದ್ನು ಹಾಡು.ಒಂದರಲ್ಲಿ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ .... 'ಎಂದು ರಘು ದೀಕ್ಷಿತ್ ಹಾಡುತ್ತಿದ್ದರೆ, ಇನ್ನೊಂದರಲ್ಲಿ "ನೂರು ಜನ್ಮಕೂ "ಎಂದು ರಾಜೇಶ್ ಹಾಡುತ್ತಿದ್ದ". ಮತ್ತೊಂದರಲ್ಲಿ "twist "ಹಾಡು. ಎಲ್ಲ ಹಾಡುಗಳೂ ಗಿರ್ಮಿಟ್ ಆಗಿ, ಅದರ side effect  ಎಂಬಂತೆ ನನಗೆ ಸಣ್ಣಗೆ ತಲೆ ನೋವು ಬಂದಿತ್ತು. !


ಕೊರಳಲ್ಲೆಲ್ಲ ಮಣಿ ಸರಗಳ ತುಂಬಿಕೊಂಡ ಹಾಲಕ್ಕಿ ಅಜ್ಜಿಯೊಬ್ಬಳು lady conductor ಜೊತೆ "ಎಂಟು ರುಪಾಯ್ರ? ಆಗಲ್ರಾ ಐದು ರುಪಾಯಿ ಮಾಡ್ಕಳ್ರ" ಎಂದು KSRTC ಬಸ್ಸಿನಲ್ಲಿ ಟಿಕೆಟ್ ದರಕ್ಕೆ ಚೌಕಾಶಿ ನಡೆಸಿದ್ದಳು.


ತರಕಾರಿ,ಮೀನು ಮಾರಾಟವನ್ನೆಲ್ಲ ಮುಗಿಸಿ ಮನೆ ಕಡೆಗೆ ಹೆಜ್ಜೆ ಹಾಕಿದ್ದ 
ಹೆಂಗಸರು,ಸಂಚಿಯೊಳಗಿನ ದುಡ್ಡನ್ನು ಎಣಿಸುತ್ತಿದ್ದರು.ನಾಳೆ ಬೆಳಗಾದರೆ ಮತ್ತದೇ ಜೀವನ ಅವರದ್ದು. 
 "ಎಲ್ಲಿಂದ ತಂದದ್ದು? ಎಷ್ಟು ಕೊಟ್ಟೆ ?" ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಹೊಸ ಚೂಡಿದಾರದ ಬಟ್ಟೆಯನ್ನು ತಂದ ಹುಡುಗಿ.
'ಹಿರಿಯ ನಾಗರಿಕರಿಗಾಗಿ' ಜಾಗದಲ್ಲಿ ಕೂತಿದ್ದ ದಪ್ಪ ಮೀಸೆಯವ. ಮಹಿಳೆಯರಿಗಾಗಿ ಎಂಬಲ್ಲೆಲ್ಲ ಕುಳಿತ ಗಂಡಸರು.
 (ಅಲ್ಲ, ಅದ್ಯಾಕೆ ಪುರುಷರಿಗಾಗಿ ಎಂಬ ಸೀಟುಗಲಿಲ್ಲ?  ನೋಡಿ ಇದು ತಲೆ ಕೆಡಿಸಿಕೊಳ್ಳುವ ವಿಚಾರವೇ !)

ಒಳಗೆ ಛತ್ರಿಯನ್ನು ಬಿಡಿಸಿ ಕೂರುವಂತೆ ಮಾಡುವ ಈ ಬಸ್ಸಿನ ಮಳೆಗಾಲದ ದಿನಗಳನ್ನು ಮನಸ್ಸು ಮೆಲುಕು ಹಾಕುತ್ತಿದ್ದಂತೆ, ಕಂಡಕ್ಟರಿನ "ಪಿರ್ರ್ಎಂಬ ಸೀಟಿಯ ಶಬ್ದ ಕೇಳಿಬಂತು.  
ಸೀಟಿಯೊಳಗಿನ ಮಣಿ ಕುಣಿದಾಡುವಂತೆ ಊದಿದುದನ್ನು  ಕೇಳಿಯೇ 'ಲೇಡಿ ಕಂಡಕ್ಟರ್' ಎಂದು ಮನಸ್ಸು ನಿರ್ಧರಿಸಿ ಬಿಟ್ಟಿತ್ತು.
ನನ್ನ ವಿಚಾರ ಸರಣಿಗೆ ಕೊನೆ ಬಿದ್ದಿತು.!

Wednesday, March 9, 2011

ಅಲೆಮಾರಿ ಸಾಲುಗಳು

ಅಲ್ಲಿ ನೀಲಿ ಕಡಲ ಭೋರ್ಗರೆತವಿದೆ, ಕಡಲ ನಿರ್ಭೀತ ಅಲೆಗಳಿಗೆ ದಡದ ಸ್ವಾಗತವಿದೆ. ನೀಲಿ ಕಡಲು ನೀಲ ಆಗಸವ ಸೇರಿದಂತೆ ಭಾಸವಾಗುವ ದೃಶ್ಯವನ್ನು, ಹಲವು ಜೊತೆ ನೀಲಿ 'ಅಮಲು ಕಂಗಳು ನೋಡುತ್ತವೆ. ಅದೇನನ್ನೋ ಯೋಚಿಸಿ ಮುಗುಳು ನಗುತ್ತವೆ.

ಆಗಸದ ನೀಲಿ, ಸುರಗಿ ಮರದ ಹಸಿರು, ಗೌಡರ ಮನೆಯ ಕಂದು ಬಣ್ಣದ ಆಕಳಿನ ಕಣ್ಣ ಕೆಂಪು,  ರಥಬೀದಿಯ ರಂಗೋಲಿಯ ಹಿಟ್ಟಿನ ಬಿಳಿ, ಗುಲ್ಮೊಹರ್ ಗಿಡದ ಹೂವಿನ ಹಳದಿ ಬಣ್ಣಗಳನ್ನೆಲ್ಲ ಹೊತ್ತ ಬಣ್ಣ ಬಣ್ಣದ ಅಂಗಡಿ ಸಾಲುಗಳಿವೆ. ಅಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಅಂಗಿಗಳಿವೆ. 

ಹೌದು ಅದು ಗೋಕರ್ಣ.! 'ದಕ್ಷಿಣ ಕಾಶಿ',' ಹಿಪ್ಪಿಗಳ ಸ್ವರ್ಗ' ಎಂದೆಲ್ಲ ಕರೆಯಿಸಿಕೊಂಡ ಗೋಕರ್ಣ. ಇದೊಂದು ಪುಣ್ಯ ಭೂಮಿ. ಜೊತೆಗೆ ವಿವಾದವನ್ನು ಬೆನ್ನಿಗೆ ಹೊತ್ತುಕೊಂಡಿರುವ ನೆಲ. ಇತ್ತೀಚಿಗೆ ನನ್ನನ್ನು ಪದೇ ಪದೇ ತನ್ನತ್ತ ಸೆಳೆದ ಭೂಮಿ. ಅಲ್ಲೊಂದು ಪ್ರವಾಸಿಯಾಗಿಯೂ ಹೋಗಿಲ್ಲ, ಭಕ್ತಳಾಗಿಯೂ ಹೋಗಿಲ್ಲ. ಸುಮ್ಮನೆ ಕರೆದಿತ್ತು ಗೋಕರ್ಣ,ನಾನೂ ಸುಮ್ಮನೆ  ಹೋಗಿದ್ದೆ, ಅಲೆದೆ. ..ಮುಗುಮ್ಮಾಗಿ ಅಲೆದೆ.

ಹಿಂತಿರುಗಿ ಬರುವಾಗ ನನ್ನಲ್ಲಿ ಇದ್ದದ್ದು ಇಷ್ಟು  ಕ್ಯಾಮೆರಾದಲ್ಲಿ ಒಂದಿಷ್ಟು ಚಿತ್ರಗಳು,ಮನದಲ್ಲಿ ನೆನಪುಗಳು.
ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕಾಗಿ ನೆನಪುಗಳ, 
ನಾ ಕಂಡ ದೃಶ್ಯಗಳ ಒಂದಿಷ್ಟು ಸಾಲುಗಳಾಗಿಸುತ್ತಿದ್ದೇನೆ. ಕೆಲವೊಂದು ಚಿತ್ರಗಳ ನಿಮ್ಮ ಮುಂದೆ ಇಡುತ್ತಿದ್ದೇನೆ.

ಒಂದಕ್ಕೊಂದು ಸಂಬಂಧವಿಲ್ಲದ ಸಾಲುಗಳು ಇವು. ಹಿಪ್ಪಿಗಳಂತೆ ಅಲೆಮಾರಿಗಳು. ಅದಕ್ಕೆ 'ಅಲೆಮಾರಿ ಸಾಲುಗಳು' ಎಂದು ಕರೆಯ ಬೇಕೆನ್ನಿಸಿತು. !
ನೀವು ಒಮ್ಮೆ ಗೋಕರ್ಣದ ಬೀದಿಗಳಲ್ಲಿ ಕಳೆದು ಹೋಗಿ. ಓದಿ ನೋಡಿ ಹೇಗಿದೆ ಹೇಳಿ.



 **  ಮನಸ್ಸನ್ನು ಹೊಸತೊಂದು ಲೋಕಕ್ಕೆ ಎಳೆದೊಯ್ಯುವ, ಅದ್ಯಾವುದೋ ಕಾದಂಬರಿಯಲ್ಲಿ ವರ್ಣಿಸಿದಂತೆ ಕಾಣುವ ಬೀದಿಗಳು.

**ನನ್ನ ಕಣ್ಣ ಕಾಡಿಗೆಯ ಕಪ್ಪು ಬಣ್ಣ, ಮೂಲಂಗಿ ಎಲೆಯ ಹಸಿರುಬಣ್ಣಗಳ ನಾಚಿಸುವ ಹಾಲಕ್ಕಿ ಹೆಂಗಸರ ಕೊರಳ ಮಣಿಗಳು.

**  ಬದುಕಿನ ಬಗೆಗಿರುವ ದ್ವೇಷವನ್ನು ಕಾರುತ್ತಿರುವಂತೆ ಕಾಣುತ್ತಿದ್ದ ನೀಲಿಕಂಗಳ ಹುಡುಗಿಯ ಸೊಂಟದ ಮೇಲಿದ್ದ 'ಡ್ರ್ಯಾಗನ್ ಹಚ್ಚೆ' !

** ಕಿವಿಗೆ ನಾಲ್ಕಾರು ಆಭರಣಗಳ ಚುಚ್ಚಿಸಿಕೊಂಡು rock singerನಂತೆ ಪೋಸ್ ಕೊಡುತ್ತ . 'garlick' ಬೇಕಾ?  ಎಂದು ಕೇಳುತ್ತಿದ್ದ ಹೋಟೆಲಿನ ಹುಡುಗ..!

**ಅದೇನೋ ತಪಸ್ಸನ್ನು ಮಾಡುತ್ತಿರುವಂತೆ ಕಾಣುತ್ತಿದ್ದ ಸಾಣಿಕಟ್ಟದ ಗದ್ದೆಗಳಲ್ಲಿನ ಉಪ್ಪಿನ ರಾಶಿಗಳು. ನೆನಪಾದ ಗಾಂಧೀಜೀ,ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ.!

** ಮುಟ್ಟಾಟವನಾಡುವ ಅಲೆಗಳ ಮೇಲೆ, ಬಾನಾಡಿಗಳ ನಾಚಿಸುತ್ತ ಹಾರುತ್ತಿದ್ದ ಈ ವಿದೇಶಿ ಸಾಹಸಿಗೆ ಅನಂತ ಕಡಲು ಅದ್ಹೇಗೆ ಕಂಡಿರಬಹುದು?
**ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ.  
**ಜಗತ್ತಿನ ಕುತೂಹಲಗಳೆಲ್ಲವನ್ನೂ ತನ್ನ ಬೊಗಸೆ ಕಂಗಳಲ್ಲಿ ತುಂಬಿಕೊಂಡ೦ತೆ ಕಾಣುತ್ತಿದ್ದ  ಕನ್ನಡಿಯ ಕಿನ್ನರಿ..! 
**ಒಂದು ಪಕ್ಕದಲ್ಲಿ ಮಗು, ಇನ್ನೊಂದು ಪಕ್ಕದಲ್ಲಿ ಮಂಗ. ಮನುಕುಲದ ಮನವ ಕಲಕುವ ಕರಾಳ ಚಿತ್ರ ..!  ಬದುಕಿನ ಕಥೆ ..ಇಲ್ಲೆಲ್ಲವೂ ವ್ಯಥೆ .....
**ಸೂರ್ಯಕಿರಣಗಳಿಗೆ ಪುಳಕಗೊಂಡು ಹೊಳೆದು ಶೋಭಿಸುತ್ತಿರುವ, ವಜ್ರದ ಬೆಳಕನ್ನು ನಾಚಿಸುವ ಸ್ಪಟಿಕದ ಮಣಿಗಳು...
** ಅಲೆಗಳ ಆಟವ ನೋಡುತ್ತ, ವಿಶ್ರಾಂತಿ ಪಡೆಯುತ್ತ ನಿಂತ ಈ ದೋಣಿಯ ಕಂಡಾಗ, ನನ್ನಜ್ಜ ನೆನಪಾಗಿದ್ದ !
**.ತನ್ನದೇ ಲೋಕದಲ್ಲಿ ಇರುವ ಇಹದ ಪರಿವೆ ಇದ್ದಂತಿಲ್ಲದ ಅಲೆಮಾರಿ ....
ಬದುಕನ್ನು ವಿರೋಧಿಸುತ್ತಿರುವಂತೆ ಭಾಸವಾಗುವ ಧರಿಸಿರುವ ಕಪ್ಪು ಬಟ್ಟೆ ... 
**  ವಿದೇಶಿಗರ ನೀಲಿ ಕಂಗಳಿಗೆ ಪೈಪೋಟಿ ಕೊಡುತ್ತಿರುವ, ಕಾಡಿಗೆಯ ಕಪ್ಪು ಕಂಗಳು !

**ಅದೆಷ್ಟೋ ನಿಗೂಢಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಸಮುದ್ರ ಮಾನವನ ಮನಸ್ಸಿನ ಪ್ರತಿರೂಪ..!  ಜೀವನದ ಚೇತನ ಸಿಗುವುದೇ ಈ ಕಡಲಿನಿಂದ. ದಡದ ಮೇಲೆ ಪ್ರೀತಿಯಿದೆ, ಒಂದು ಬಗೆಯ ಹುಚ್ಚಿದೆ. ಮರಳಿ ಯತ್ನವ ಮಾಡು ಎನ್ನುವ ಸಂದೇಶವ ಸಾರುವ ಕಡಲ ಅಲೆಗಳ ಭೋರ್ಗರೆತದಲ್ಲಿ ತನ್ನ ಮೌನದ ದೋಣಿಯ ತೇಲಿ ಬಿಟ್ಟು. ಕುಳಿತಿರುವ ವಿದೇಶಿಗ !

** ಮಮ್ಮಿ- ಅಮ್ಮ
ಒಂದೇ ಬೀದಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು.

** ಬಾಲ್ಯ.... 'ಮುಗ್ಧತೆ' ಎರಡು ಚಿತ್ರಗಳಲ್ಲಿನ ಸಮಾನ ಗುಣವಾದರೆ ... 'ಬದುಕು' ವ್ಯತಾಸ ... 
 
**ಬಣ್ಣ ಬಣ್ಣದ ಚಿತ್ರಗಳನ್ನೆಲ್ಲ ಕ್ಯಾಮೆರಾದ ಕಣ್ಣೊಳಗೆ ಸೆರೆಹಿಡಿಯುತ್ತಿದ್ದ ವಿದೇಶಿಗರು ..!


**ಅದ್ಯಾರದ್ದೋ ಮನೆಯ ಬಾಗಿಲ ರಂಗೋಲಿಗೆ ರಂಗು ತುಂಬಲು ತಯಾರಾಗಿರುವ ಬಣ್ಣಗಳ ರಾಶಿ ..!
**ಸೃಷ್ಟಿ-ಬದುಕು (ಅದೇನು ಸಾಲುಗಳ ಬರೆಯಬೇಕೆಂದು ತೋಚಲಿಲ್ಲ )
** ಭಕ್ತರ ಮನೋ ನಿಗ್ರಹ ಪರೀಕ್ಷಿಸಲೆಂದು ಭಗವಂತ ಈ ರೂಪಿಯೇ ??
**ಬಯಲು ಸೀಮೆಯಲೂ ನಾದ ಹೊರ ಹೊಮ್ಮಿಸಲಿ . ಕೊಳಲ ನಾದಕ್ಕೆ ಎಲ್ಲೆ ಎಲ್ಲಿದೆ ? 
**ನೀನು ಒಂಟೆ, ನಾನು ಒಂಟಿ --ಸಮುದ್ರ ತಟದಲ್ಲಿ ಅದೆಷ್ಟೋ ಹೊತ್ತು ಒಂಟೆಯೊಂದಿಗೆ ಸಂಭಾಷಿಸುತ್ತಿದ್ದ ಹೆಂಗಸು.
**ಎರಡು ತಂತಿಗಳ ನಾದದಿಂದಲೇ ಜನರ ಸೆಳೆಯುತ್ತಿದ್ದ, ಕನಸುಕಂಗಳ ಹುಡುಗ ..!
**ತನ್ನ ಕೆಂಬಣ್ಣವನೆಲ್ಲ ರಥದ ಪತಾಕೆಗಳ ಅಂಚಿಗೆ ಸುರಿದು ಪಡುವಣದ ಕಡಲಿಗೆ ಜಾರಲು ಧಾವಿಸುತ್ತಿದ್ದ ರವಿ.
** ನೀಲ ಕಡಲ ತಡಿಯ ಬಂಡೆಯ ಮೇಲೆ ಕೂತು, ಬಾನಲ್ಲಿ ಮಿನುಗುವ ಹಗಲು ಕನಸು ಕಾಣುತ್ತಿರುವಂತೆ ಕಾಣುವ ನಕ್ಷತ್ರ ಮೀನು.

**ಹಳ್ಳಿ ಹೈದರ ಬಾಯಿಯಲ್ಲೂ ಸಲೀಸಾಗಿ ಆಂಗ್ಲಭಾಷೆ ಅಪಭ್ರ೦ಶವಾಗಿ ನಲಿದಾದುವಷ್ಟು ವಿದೇಶೀಯರ ಛಾಯೆ..!

**ಬೆವರು ಇಳಿಸುವ ಬಿಸಿಲಿದೆ, ಒಣ ಹಸಿ ಮೀನುಗಳ ವಾಸನೆಯಿದೆ,ದುಡ್ಡು ಗೋಚಲು ಹವಣಿಸುತ್ತಿದ್ದವರಿದ್ದಾರೆ. ಅಮಲು ಕಂಗಳ ಅರೆಬರೆ ಬಟ್ಟೆಯ ವಿದೇಶಿಯರಿದ್ದಾರೆ..!
** Study circle Libraryಯ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳ ಒಡೆಯ 81 ರ ಹಿರಿಯ ಚೇತನ, ಜೀವನ ಸ್ಪೂರ್ತಿಯ ಚಿಲುಮೆ ವೇದೆಶ್ವರರಿದ್ದಾರೆ. ಅವರ ಪುಸ್ತಕ, ಅಂಚೆ ಚೀಟಿ, ನಾಣ್ಯ,painting ಅದ್ಭುತ ಸಂಗ್ರಹ ನೋಡಿದಾಗ 'ಹಿತ್ತಲ ಗಿಡ ನಮಗೇಕೆ ಮದ್ದಲ್ಲ?' ಎಂದೂ ಎನಿಸುತ್ತದೆ.


**ಜಗತ್ತಿನ ಎಲ್ಲ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣುವ ಜಾಗ ಗೋಕರ್ಣ. ಬದುಕಿನ ಆದ್ಯಾವುದೋ ತಿರುವಿನಲ್ಲಿ ಏನನ್ನೋ ಕಳೆದುಕೊಂಡು ಹುಡುಕಲು ಬಂದಂತೆ ಕಾಣುವ ಜನರು.
ಹರಕೆಯನ್ನು ಕಟ್ಟಲು ಬಂದವರು ಕೆಲವರು, ಹಿರಿಯ ಆತ್ಮಗಳಿಗೆ ಶಾಂತಿ ಕೊಡಲು ಬಂದವರು ಹಲವರು. ಎಲ್ಲ ಕಳೆದುಕೊಂಡು, ಅದೇನನ್ನೋ ಹುಡುಕಿಕೊಂಡು ನಶೆಯ ಜೀವನವ ಕಂಡುಕೊಂಡವರು ಹಲವರು. ಆಧ್ಯಾತ್ಮ ಚಿಂತನೆಯ ಮೂಲ ತತ್ವಗಳ ಅರಸಿ ಬಂದವರು ಒಂದಿಷ್ಟು ಜನ. ಗೋಕರ್ಣ ಸರಳತೆ, ಜಟಿಲತೆ ಹಾಗೂ ವಿಚಿತ್ರಗಳ ಸಂಗಮ.

**ಅಲ್ಲಿನ ಜನರ ಕಣ್ಣಲ್ಲಿ ಹಣದ ದಾಹವಿದೆ, ಹುಡುಕಾಟವಿದೆ, ಕಣ್ಣೀರಿದೆ, ಕನಸುಗಳಿವೆ, ತುಡಿತಗಳಿವೆ, ಪ್ರೀತಿಯಿದೆ, ನಶೆಯಿದೆ. ಕಣ್ಣಿನ ಬಣ್ಣಗಳನ್ನು ನೋಡುವುದಿದ್ದರೆ ಅಲ್ಲಿಯೇ ಅನಿಸಿದ್ದಿದೆ ನನಗೆ.

**'ಬದುಕು' ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳನ್ನು ಕೊಡುವ ತಾಕತ್ತು ಗೋಕರ್ಣಕ್ಕಿದೆ..!

ಕುಟುಂಬದ ಜೊತೆ ಹೋದರೆ 'ತೀರ್ಥಯಾತ್ರೆ'. ಗೆಳೆಯರ ಗುಂಪಲ್ಲಿ ಹೋದರೆ 'ಮೋಜು ಮಜಾ, ಗಮ್ಮತ್ತು'. ಒಬ್ಬರೇ ಅಡ್ಡಾಡಿದರೆ  ಹೊಸ ಲೋಕದ ದರ್ಶನ. !

ಕೊನೆಯಲ್ಲಿ ರಾಮತೀರ್ಥದ ತುದಿಯಲ್ಲೊಮ್ಮೆ ಕುಳಿತು ಇಹವ ಮರೆತು ನೀಲ ಕಡಲ ಕೊನೆಯ ಹುಡುಕಿ. ಅನಂತ ಕಡಲ ರಾಶಿ, ಮೇಲೆ ನೀಲ ನಭ. ಈ ಜಗದಲ್ಲಿ ನಾವೊಂದು 'ಚುಕ್ಕಿ' ಎನಿಸಿಬಿಡುತ್ತೇವೆ.

ಸಂಜೆಯ ರಂಗು ಕಡಲ ಅಲೆಗಳ ಮೇಲೆ ನರ್ತಿಸುತ್ತಿತ್ತು.  ಒಂದಿಷ್ಟು ನೆನಪುಗಳ, ಕಣ್ಣ ಮುಂದೆ, ಕ್ಯಾಮೆರಾದ ಒಳಗೆ ಇರುವ ಚಿತ್ರಗಳ ಹೊತ್ತು ನಾನು ವಾಹನವನೇರಿದ್ದೆ.

ಆದರೆ ...ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ ಗೋಕರ್ಣ..... ನೀಲಿ ಕಡಲ ನೀಲ ನಭದ.. ಗೋಕರ್ಣ .. !























Sunday, February 27, 2011

ನನ್ನ ಮರೆತಿರುವ ಹುಡುಗಿಗೆ...



ನನ್ನ ಮರೆತಿರುವ ಹುಡುಗಿಗೆ,


ಹೇಗಿದ್ದೀಯೇ ? ಅದ್ಯಾಕೋ ಗೊತ್ತಿಲ್ಲ ಹುಡುಗೀ ಮತ್ತೆ ಮತ್ತೆ ನಿನ್ನ ನೆನಪುಗಳು ಚಿಗುರುತ್ತಿವೆ, ಕಾಡುತ್ತಿವೆ .  ಮೊನ್ನೆ ಊರಿಗೆ ಹೋಗಿದ್ದಾಗ ನಿನ್ನ ನೆನಪುಗಳು ಹಸಿ ಹಸಿಯಾಗಿ ಕಾಡಿ ಬಿಟ್ಟವು. ಹೇಮಂತದ ಕಾಡು ಹೂಗಳ ಕಂಪಿಗೆ ಮನಸು ನಿನ್ನನ್ನೇ ಅರಸಿತ್ತು . ನೀ ನನ್ನ ಬಿಟ್ಟು ಹೋದಮೇಲೆ ಊರಿನ ಕಡೆ ಸರಿಯಾಗಿ ಹೋಗೇ ಇಲ್ಲ ನೋಡು. ಅದೆತ್ತ ನೋಡಿದರೂ ಕಾಡುವ ನಿನ್ನದೇ ನೆನಪುಗಳು.

ಮನದಾಳದ ಗೋರಿಯಲಿ ಹುಗಿದಿಟ್ಟಿದ್ದ,  ನಿನ್ನ ಜೊತೆ ಬೆಟ್ಟ ಗುಡ್ಡ ಅಲೆಯುವ, ಗುಡ್ಡದ೦ಚಿನ ಸೂರ್ಯಾಸ್ತ ನೋಡುವ, ಗಾಳಿಪಟ ಹಾರಿಸುವ, ಕಾಗದದ ದೋಣಿಯಲ್ಲಿ ನಿನ್ನ- ನನ್ನ ಹೆಸರು ಬರೆದು ತೇಲಿ ಬಿಡುವ, ನದಿಯ ದಡದಲ್ಲಿ ಜೊತೆಯಾಗಿ ಪಾದ ತೋಯಿಸಿಕೊಳ್ಳುವ ಕನಸುಗಳೆಲ್ಲ ಎದ್ದು, ಗೋರಿಯ ಮೇಲೆ ಬಂದು ಕೂತು ಬಿಟ್ಟಿದ್ದವು.ಇಂಚಿಂಚಾಗಿ ಕೊಲ್ಲುವ ನಿನ್ನ ಪ್ರೀತಿಯಷ್ಟೇ ತಾಕತ್ತು ನಿನ್ನ ನೆನಪುಗಳಿಗೂ ಇದೆ, ನಿನಗಾಗಿ ನಾನು ಹೆಣೆದ ಕನಸುಗಳಿಗೂ ಇದೆ ಹುಡುಗೀ.!


ಅದೆಷ್ಟೋ ರಾತ್ರಿಗಳು ಬಿಕ್ಕಳಿಸಿದ್ದೇನೆ ಆ ಚುಕ್ಕಿಗಳ ಜೊತೆಗೆ. .ಸಮಾಧಾನಿಸಲು ಬರುತ್ತಿದ್ದ ನಿನ್ನ ಚಿಗುರು ಬೆರಳುಗಳ ಕಾದು ಬೇಜಾರಾಗಿರಬೇಕು ಕಣ್ಣೀರಿಗೆ, ಇತ್ತೀಚಿಗೆ ಅದೂ ಕಾಣೆಯಾಗಿದೆ!

ನೋಡು ನಾನು ಕಡಲ ತಡಿಗೆ ಬಂದು ಕುಳಿತಿದ್ದೇನೆ. ಸಮುದ್ರದ ಅಲೆಗಳ ಮೊರೆತಕ್ಕೆ ನಿನ್ನದೇ ನೆನಪುಗಳ ಜಾತ್ರೆ. ಆ ಜಾತ್ರೆಯಲಿ ನಿನ್ನ ನಗು,ಮಾತು. ಅದೇ ನಿನ್ನ ನೆಚ್ಚಿನ ಸಮುದ್ರ. 'ಪ್ರೀತಿಯೆಂದರೆ ಸಮುದ್ರದಂತೆ' ಎಂದು ನೀನೇ ಹೋಲಿಕೆ ಕೊಡುತ್ತಿದ್ದ ಸಮುದ್ರ. ನೀನು ಅದೆಷ್ಟೋ ಗುಬ್ಬಚ್ಚಿ ಗೂಡುಗಳ ಕಟ್ಟಿದ್ದ, ಹಸಿಮರಳ ದಂಡೆಯ ಸಮುದ್ರ. ನಮ್ಮ ಅದೆಷ್ಟೋ ಜಗಳಗಳ ಕೇಳಿಸಿಕೊಂಡು ಭೋರ್ಗರೆಯುತ್ತಿರುವ ಸಮುದ್ರ. ನಿನ್ನ ಕೊನೆಯ ಸಲ ಭೇಟಿಯಾದ ಸಮುದ್ರ. !

  ಇದೇ  ಕಡಲ ತಡಿಯಲ್ಲಿ ಅಲ್ಲವೇನೆ?  ನಿನ್ನ ಜೊತೆ ಲೆಕ್ಕವಿಲ್ಲದಷ್ಟು ದೂರ ನಡೆದದ್ದು. ?"ಇನ್ನು ಒಂದೇ ಒಂದು ಚೂರು ಕಣೋ ಪ್ಲೀಸ್, ಆ ತೆಂಗಿನ ಮರದವರೆಗೆ"  ಎಂದು ನನ್ನ ಕಿಲೋಮೀಟರ್ಗಳಷ್ಟು ದೂರ ನೀನು ನಡೆಸುತ್ತಿದ್ದದ್ದು.


ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರೂ ನಮ್ಮ ಸ್ನೇಹ ಪಕ್ವಗೊಂಡದ್ದು ಕಡಲ ತಡಿಯ ಊರಿನಲ್ಲೇ. social network ನಿಂದಾಗಿ ಸಿಕ್ಕಿದ್ದ ಶಾಲಾ ದಿನಗಳ ಸ್ನೇಹಿತರಲ್ಲಿ ನೀನೂ ಒಬ್ಬಳು. ಅದರಲ್ಲೂ ನೀನು 'ಕಡಲ ತಡಿಯ' ಊರಿನಲ್ಲೇ ಇರುವುದೆಂದು ತಿಳಿದಾಗ ಖುಷಿಯಾಗಿತ್ತು. ಮೊದಲ ಭೇಟಿಯಲ್ಲಿಯೇ ಅನಿಸಿತ್ತು, ಶಾಲಾ ದಿನಗಳ  ವಾಚಾಳಿ ಹುಡುಗಿ ಇನ್ನೂ ಬದಲಾಗಿಲ್ಲ ಎನ್ನುವುದು!

ವಾರಾಂತ್ಯದ ಕಡಲ ಕಿನಾರೆಯಲ್ಲಿಯ ನಿನ್ನ ಭೆಟ್ಟಿ ಮುಂದಿನ ವಾರಕ್ಕಾಗುವಷ್ಟು ಹುರುಪನ್ನು ತಂದುಕೊಡುತ್ತಿತ್ತು. ಹೆಚ್ಚಾಗಿ ಮೌನಿಯಾಗಿರುತ್ತಿದ್ದ ನನಗೆ ಮಾತಾಡಲು ಕಲಿಸಿದವಳು ನೀನೇ ಎಂದರೆ ತಪ್ಪಾಗಲಿಕ್ಕಿಲ್ಲ. ನೀ ಕೇಳಿದ್ದಕ್ಕೆಲ್ಲ "ಹ್ಞೂ ಹಾಂ" ಅನ್ನುತ್ತಿದ್ದ ನಾನು. ಒಂದು ವರ್ಷದಲ್ಲಿ 'ನಾನೇ ಸುದ್ದಿ ಹೇಳುವಷ್ಟು', ನಿನ್ನ ಕಾಡುವಷ್ಟು ಮಟ್ಟಕ್ಕೆ ಮಾತು ಕಲಿತಿದ್ದೆ. ಆದರೂ ನನ್ನ ಮನದಾಳದ ಭಾವನೆಗಳಿಗೆ ಮಾತಿನ ರೂಪ ಕೊಡಲಾಗಲೇ ಇಲ್ಲ.

ನೀನು ಆಡುತ್ತಿದ್ದ ಸುಳ್ಳು ಸುಳ್ಳೇ ಜಗಳಗಳು, ನಿನ್ನ ಜೊತೆ ಗುಬ್ಬಚ್ಚಿ ಗೂಡು ಕಟ್ಟಿದ್ದು, ಕಿತ್ತಾಡಿ ಐಸ್ ಕ್ರೀಂ ತಿಂದಿದ್ದು. ಜಗಳವಾದಾಗ ಸಿಟ್ಟಿನಲ್ಲಿ ಅದೆಷ್ಟು ಸಲ ನಿನ್ನ ಫೋನ್ ನಂಬರ್ ಡಿಲೀಟ್ ಮಾಡಿದ್ದೇನೋ. ಆದರೆ ನಿದ್ದೆಯಲಿ ಕೇಳಿದರೂ ನಿನ್ನ ನಂಬರ್ ಒಂದೇ ಉಸುರಿನಲ್ಲಿ ಹೇಳಿ ಬಿಡುತ್ತಿದ್ದೆ. ಒಮ್ಮೆ "ನಿನ್ನೆ ನಿನ್ number delete ಮಾಡಿದ್ದೆ" ಎಂದು ನಾನು ಅಂದಾಗ, "full matured ಅಂತ ದೊಡ್ ಪೋಸ್ ಕೊಡೋದಷ್ಟೇ still you are a kid " ಎಂದು ನೀನು ನಗುತ್ತಿದ್ದರೆ. ನಿನ್ನ ಚಚ್ಚಿ ಬಿಡುವಷ್ಟು ಕೋಪ ನನ್ನಲ್ಲಿ.!

ನೆನಪಿದ್ಯೇನೆ? ಒಮ್ಮೆ ರಾತ್ರೆ ಎರಡು ಗಂಟೆಗೆ ಫೋನ್ ಮಾಡಿ "ಒಂದು doubt ಕಣೋ, ಮೊನ್ನೆಯಿಂದಾ ಕಾಡ್ತಾ ಇದೆ" ಎಂದು ಬೇಜಾರಿನ ಧ್ವನಿಯಲ್ಲಿ ಕೇಳಿದಾಗ ನಾನು ಕಂಗಾಲಾಗಿದ್ದೆ. "ಹೇಳು" ಅಂದಿದ್ದಕ್ಕೆ ಅದೆಷ್ಟು 'ನಕ್ರಾ ' ನಿನ್ನದು?!.ಕೊನೆಗೆ ಕಾಡಿ ಬೇಡಿದಾಗ ನೀ ಕೇಳಿದ್ದಾದರೂ ಏನು ? "Melody chocolaty क्यों है ? !ತಲೆ ಚಚ್ಚಿಕೊಂಡಿದ್ದೆ.ನಿದ್ದೆಯ ಮಂಪರಿನಲ್ಲೂ ನಕ್ಕಿದ್ದೆ. !

ಮನದ ಮೂಲೆಯಲ್ಲೆಲ್ಲೋ ನಿನ್ನ ಬಗೆಗೆಲ್ಲೋ ಒಂದು ಬಗೆಯ ವಿಶೇಷ ಭಾವನೆ ಮೊದಲಿನಿದ ಇತ್ತಾದರೂ  
ಅದು ಪ್ರೀತಿಯಾಗಿ ಬದಲಾಗದ್ದು ಯಾವಾಗ? ಅದೆಷ್ಟೋ ಬಾರಿ ಯೋಚಿಸಿದ್ದಿದ್ದೆ ನಾನು.


face book ನಲ್ಲಿ ನಿನ್ನ photoಗಳಿಗೆ  ಹುಡುಗರು ಕಾಮೆಂಟ್ಸ್ ಹಾಕಿದಾಗೆಲ್ಲ ಅದೇನೋ ಒಂದು ಬಗೆಯ ಭಾವನೆ.  ನಿನ್ನ ಬದುಕಿನಲ್ಲಿ 'ಸಂಭ್ರಮ'ನ ಆಗಮನ ಆದ ಮೇಲಂತೂ ಸುಖಾ ಸುಮ್ಮನೆ ಜಗಳ ಕರೆದು, ನಿನ್ನ ಗಮನವನ್ನೆಲ್ಲ ನನ್ನೆಡೆಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡಿದ್ದೆ. ಇದೆಲ್ಲ ನಿನಗೆ ಅರ್ಥವಾಗಲೇ ಇಲ್ಲವೇನೇ? ಅಥವಾ ಅರ್ಥವಾದರೂ ಸುಮ್ಮನಿದ್ದೆಯಾ? ನನ್ನ ಕಣ್ಣಿನಲ್ಲಿ ನಿನ್ನೆಡೆಗಿದ್ದ ಪ್ರೀತಿ ಅರ್ಥವಾಗಲೇ ಇಲ್ಲ ನಿನಗೆ.


ಪಕ್ಕಾ ಅಂತರ್ಮುಖಿ, ಮನದ ಭಾವಗಳಿಗೆ 'ಮಾತಿನ ರೂಪ' ಕೊಡಲು ಒದ್ದಾಡುವ ಹುಡುಗ ನಾನು. ನಿನಗೆ ನನ್ನ ಪ್ರೀತಿಯ ಹೇಳುವ ಮೊದಲೇ, ನೀನು 'ಸಂಭ್ರಮ'ನ ತೆಕ್ಕೆಗೆ ಜಾರಿಯಾಗಿತ್ತು. ಒಂದು ತಿಂಗಳು ನಾನು ನಾನಾಗಿರಲಿಲ್ಲ. ಹಂತ ಹಂತವಾಗಿ ನಿನ್ನೊಡನೆ ಮಾತು-ಕಥೆಗಳ ನಿಲ್ಲಿಸಿದ್ದೆ.


ಮದುವೆಯ ಕರೆಯೋಲೆಯ ತೋರಿಸಬೇಕು ಬಾ ಎಂದು ಮತ್ತೆ ಇದೇ ಸಮುದ್ರದಂಚಿಗೆ ನೀ ನನ್ನ ಕರೆದದ್ದು. ಅದೆಷ್ಟೇ ಪ್ರಯತ್ನಿಸಿದ್ದರೂ ಸಾಮಾನ್ಯವಾಗಿ ಇರಲು ಸಾಧ್ಯವಾಗಿರಲಿಲ್ಲ. 
 
ಆ ದಿನ ಬಸ್ಸಿನಲ್ಲಿ ಹೊರಟಿದ್ದಾಗ ಅದ್ಯಾಕೆ ನನ್ನ ಭುಜಕ್ಕೆ ನಿನ್ನ ತಲೆಯಿಟ್ಟೆ ಹೇಳು? ಮಗುವಿನಂತೆ ಮಲಗಿದ್ದ ನಿನ್ನ ಮುಖವನ್ನು ಒರೆ ಕಣ್ಣಿನಲ್ಲಿ ನೋಡಿ ಮುಗುಳು ನಕ್ಕಿದ್ದೆ ನಾನು. ನಿನಗೆ ಅದಾವುದರ ಪರಿವೆಯೇ ಇದ್ದಂಗೆ ಕಂಡಿರಲಿಲ್ಲ. ನಿನ್ನ bag ಮೇಲಿದ್ದ ಆ ಮಣಿಗಳನ್ನೆಲ್ಲ ಕಿತ್ತು ನನ್ನ ಕೈಮೇಲೆ ಯಾಕೆ ಇಡುತ್ತಿದ್ದೆಯೇ ಹುಡುಗಿ ? ನಿನಗೆ ಗೊತ್ತೇ ಇಲ್ಲದಂತೆ ಅದನ್ನೆಲ್ಲ ಹೆಕ್ಕಿ ನನ್ನ ಜೇಬಿನೊಳಗೆ ಸೇರಿಸಿದ್ದೆ ನಾನು. ಇನ್ನೂ ಇವೆ ನನ್ನ ಬಳಿ ಅವು.  ನಿನ್ನ ನೆತ್ತಿಯ ಆ ಪರಿಮಳ ಇನ್ನೂ ನೆನಪಲ್ಲಿದೆ.!

ನೋಡು ಎಲ್ಲ ಮೊನ್ನೆ ಮೊನ್ನೆ ನಡೆದಂತಿದೆ ಅಲ್ವಾ ? ದಡಕೆ ಅಪ್ಪಳಿಸಿ ಓಡುವ ಹೊಸ ಹೊಸ ಅಲೆಗಳು. ನನ್ನ ಮನದಲ್ಲಿ ನಿನ್ನದೇ ನೆನಪಿನ ಅಲೆಗಳು . ಹಳೆಯ ನೆನಪುಗಳ ದರ್ಬಾರಿಗೆ ಮನಸ್ಸು ಗುಜರಿ ಅಂಗಡಿ ಆದಂತಿದೆ.  ಕಡಲ ತಡಿಗೆ ಬಂದು ನಿಂತಾಗ ಉಕ್ಕಿದ ಹಸಿ ಹಸಿ ನೆನಪುಗಳು ಇವು.  ಅದೇ ದಡ, ಅಪ್ಪಳಿಸುವ ಹೊಸ ಹೊಸ ಅಲೆಗಳು, ಕೈ ಹಿಡಿದು ಅಡ್ಡಾಡುವ ಜೋಡಿಗಳು. ಪಶ್ಚಿಮಕೆ ಸೂರ್ಯ ಇಳಿದಾಗಿದೆ. ನನ್ನ ನೆರಳು ಮಸುಕಾಗುತಿದೆ. ಆದರೆ ನಿನ್ನ ನೆನಪು ... ??? ಅದೂ ಸಮುದ್ರದಂತೆ ......

                                        
     ಇತಿ
ನಿನ್ನ ಮರೆಯಲಾಗದವ


ಕೂತು ಬರೆದ ಹಾಳೆಯನು ಹರಿದು ಸಮುದ್ರಕ್ಕೆಸೆದು,ಹುಡುಗ ನಡೆಯುತ್ತಿದ್ದ. ಅಲೆಗಳು ಮುಟ್ಟಾಟವ ಆಡುತ್ತ ಕಾಗದದ ಚೂರುಗಳನ್ನು ಮರುಘಳಿಗೆಯೇ ದಡಕ್ಕೆ ತಂದು ಹಾಕುತ್ತಿದ್ದವು ..!



Wednesday, February 9, 2011

ಚುಕ್ಕಿಗಳ ಜಾತ್ರೆಗೆ ಹೋಗಿ ಬನ್ನಿ


                                                   ರವಿ ತನ್ನ ಪಯಣ ಮುಗಿಸಿ ಪಡುವಣಕ್ಕೆ ಜಾರಿ ಸುಮಾರು ಹೊತ್ತಾಗಿತ್ತು. ಅದು ಮುಸ್ಸಂಜೆಯ ಬೆಳಕಿನ (twilight) ಸಮಯ.ಮೊದಲು ಕಾಣಿಸಿಕೊಳ್ಳುವ ಆ ಒಂಟಿ ನಕ್ಷತ್ರ (solitary star) ಆಗಸದಿಂದ ಇಣುಕಿ ನೋಡುತ್ತಿತ್ತು. ಅದೇನೋ ಒಂದು ಬಗೆಯ ವಿಚಿತ್ರ ಪ್ರೀತಿ, ಹೊಟ್ಟೆಕಿಚ್ಚು ಆ ನಕ್ಷತ್ರದ ಮೇಲೆ! ಆ ನಕ್ಷತ್ರ ರಾತ್ರಿಯಾಗುವುದರ ಕುರುಹು, ಹಾಗೆಯೇ ರಾತ್ರಿಯ ನಂತರದ ಮುಂಜಾವಿನ ಇರುವಿಕೆಯನ್ನೂ ಹೇಳುತ್ತದೆ. ಅದೊಂದು ಕವಿಸಮಯ. ಪ್ರಕೃತಿ ನಿಧಾನವಾಗಿ ನಿಶೆಯ ಮುಸುಕೆಳೆದು ಮಲಗಲು ತಯಾರಿ ನಡೆಸಿತ್ತು. ಇನ್ನಷ್ಟು ಹೊತ್ತು ಆಗಸವ ದಿಟ್ಟಿಸಬೇಕು ಎಂದುಕೊಳುತ್ತಲೇ ಇದ್ದೆ, ನನ್ನ ಮನದಿಂಗಿತವ ಅರಿತಂತೆ ಕರೆಂಟು ಹೋಯಿತು. street ಬೆಳಕಿನ ಕಾಟವೂ ಇಲ್ಲದ ನಕ್ಷತ್ರಗಳ ಕ್ಷೀಣ ಬೆಳಕನ್ನು ಹೊತ್ತ ಆಗಸ. ಕೈಕೊಟ್ಟ ಪವರಿಗೆ Thanks ಎನ್ನುತ್ತಲೇ ಗ್ಯಾಲರಿಯಲ್ಲಿನ ನನ್ನ ಆರಾಮ ಖುರ್ಚಿಯತ್ತ ನಡೆದಿದ್ದೆ.



ಕಾಲು ಚಾಚಿ ಕುಳಿತ ನಾನು ದೃಷ್ಟಿಹರಿಸಿದ್ದು ಅನಂತ ಆಗಸದತ್ತ. ಮೋಡಗಳಿಲ್ಲದ ನಿರಭ್ರ ಆಗಸವದು. ಅದೆಷ್ಟು ದಿನವಾಗಿತ್ತು ಹೀಗೆ ಈ ಆಗಸವ ಗಮನಿಸದೆ ಎಂದು ಯೋಚಿಸಿದೆ. ನೆನಪೇ ಇರಲಿಲ್ಲ ಅದ್ಯಾವಾಗ ನೋಡಿದ್ದೆ ಎನ್ನುವುದು. ಒಂದಾದ ಮೇಲೊಂದರಂತೆ ಕಳೆದು ಹೋಗುವ ದಿನಗಳ ಓಘದಲ್ಲಿ ಮರೆತೇ ಹೋಗಿತ್ತು ಈ ಆಕಾಶ ವೀಕ್ಷಣೆ.

ಈ ಸಂಜೆ ಕಳೆದು ರಾತ್ರಿ ಆವರಿಸುವ ಪರಿಯೇ ಅದ್ಭುತ. ನೋಡ ನೋಡುತ್ತಲೇ ಬಾನ ಸೀರೆಗೆ ನಕ್ಷತ್ರಗಳ ಕಸೂತಿಯ ತುಂಬುತ್ತಲೇ ಹೋಗುವ ನಿಶೆ. ಗಾರುಡಿಗನೊಬ್ಬ ಬಾನ ತುಂಬೆಲ್ಲ ಮುತ್ತು, ವಜ್ರಗಳ ಚೆಲ್ಲಿಬಿಡುತ್ತಾನೆ. ಒಂದೊಂದೇ ಚುಕ್ಕಿಗಳು ಪೈಪೋಟಿಗೆ ಬಿದ್ದಂತೆ ಕಾಣಿಸತೊಡಗಿದವು. ramp walk ಮಾಡುವ ಥಳಕು ಬಳುಕಿನ modelಗಳು ನೆನಪಾಗಬೇಕು ಅದೆಷ್ಟೋ ದೂರದಿಂದ ಮಿನುಗುವ ಈ ಚುಕ್ಕಿಗಳ ಕಂಡರೆ. !

ನನ್ನಿಷ್ಟದ ವಿಷಯಗಳಲ್ಲಿ ಖಗೋಳ ವಿಜ್ಞಾನವೂ ಒಂದು. ಸೂರ್ಯನೂ ಒಂದು ನಕ್ಷತ್ರ, ಎಂದೂ ಗೊತ್ತಿದೆ. ನಕ್ಷತ್ರಗಳ ಬಗ್ಗೆ ವೈಜ್ಞಾನಿಕ ಸತ್ಯಗಳೂ ಗೊತ್ತಿವೆ. ಆದರೆ ಒಂದು ಕುತೂಹಲವಿದೆ, ಪ್ರೀತಿಯಿದೆ, ತಣ್ಣನೆಯ ಹೊಟ್ಟೆ ಕಿಚ್ಚೂ ಇದೆ ಆ ಜಗತ್ತಿನ ಬಗ್ಗೆ, ಆ ತಾರೆಗಳ ಬಗ್ಗೆ. ಚಂದಿರನ ಶೀತಲ ಕಿರಣದ ನೆರಳಲಿ ಸರಸವಾಡುವ ಚುಕ್ಕಿಗಳೆಲ್ಲವೂ ಅದಮ್ಯ ಪ್ರೀತಿಯ ಸಂಕೇತದಂತೆ ಭಾಸವಾಗುತ್ತವೆ. ನಿಶೆಯ ಸೆರಗಿಡಿದು ಬಾನಿನಲ್ಲಿ ಪ್ರತ್ಯಕ್ಷವಾಗುವ ಚುಕ್ಕಿಗಳಿಗೆಲ್ಲ ಚಂದಿರನ ಮೇಲೆ ಅದೇನೋ ಪ್ರೀತಿಯಂತೆ.!ದಿನದಿನವು ನಡೆಯುವ 'ಬಾನ ಜಾತ್ರೆ'. ಏನು ಕೊಳ್ಳುವರೋ ಗೊತ್ತಿಲ್ಲ. ಆದರೆ ಕೋಟಿ ನಕ್ಷತ್ರಗಳ ಹಾಜರಾತಿಯಂತೂ ಬೇಕೇ ಬೇಕು. ನಕ್ಷತ್ರಗಳೆಲ್ಲವೂ ಒಂದೊಂದು ಸೂರ್ಯನಂತೆ ಪ್ರಖರವಾದ ಬೆಂಕಿಯ ಚೆಂಡುಗಳು ಎಂದು ಈ ಮನಸ್ಸು ಒಪ್ಪುವುದೇ ಇಲ್ಲ ನೋಡಿ.! ಅದ್ಯಾರದೋ ಮೂಗುತಿಯ೦ತೆ ಕಾಣುವ, ಅಜ್ಜಿಯ ಕಿವಿಯ ಓಲೆಗಳ ನೆನಪಿಸುವ, ಹುಡುಗಿಯರ ಕಣ್ಣ ಹೊಳಪನ್ನು ನಾಚಿಸುವ ನಕ್ಷತ್ರಗಳಿಗೆ 'ಚುಕ್ಕಿ'ಗಳೆಂದೇ ಕರೆಯಬೇಕೆನಿಸುತ್ತದೆ.!



ಈಗ ಆಗಸದೆಡೆಗಿನ ನನ್ನ ಪ್ರೀತಿ ಹಾಗೆ ಇದ್ದರೂ, ಕಾಲದ ಹೊಡೆತಕ್ಕೆ ಸಿಕ್ಕ ಯೋಚನಾ ಧಾಟಿಯಲ್ಲಿ ಸ್ವಲ್ಪ ಏರುಪೇರು. ಇದನ್ನು ಅರಿತ ಮನಸ್ಸು ಹೊಸಯೋಚನೆಗಳ ಮೇಲೊಂದು ಮುಸುಕನ್ನು ಎಳೆದು, ನಿರುಮ್ಮಳವಾದ ಬಾಲ್ಯದ ಯೋಚನಾ ಜಾಡನ್ನು ಹಿಡಿದು ಬಿಟ್ಟಿತ್ತು, ನನಗೇ ಗೊತ್ತಿಲ್ಲದಂತೆ..!



ಹೌದು ತಾರೆಗಳ ನೋಡುತ್ತಾ ಅದೆಷ್ಟೋ ಕನಸುಗಳ ಹೆಣೆದಿದ್ದೆ. ಚಂದಿರನವರೆಗೂ ಉದ್ದದೊಂದು ಏಣಿ ಹಾಕುವ. ಚಂದಿರನ ಮನೆಗೆ ಕನ್ನ ಹಾಕುವ ಅಮೋಘವಾದ ಕನಸು ನನ್ನ ಬಾಲ್ಯದ ದಿನಚರಿಗಳಲ್ಲಿ ಮಾಮೂಲಾಗಿತ್ತು.! ಇನ್ನು ಅನ್ಯಗ್ರಹ ಜೀವಿಗಳು ಬರಬಹುದೆಂದು ಅದೆಷ್ಟೋ ರಾತ್ರಿಗಳ ಬಾನಂಗಳವನ್ನು ಎವೆಯಿಕ್ಕದೆ ವೀಕ್ಷಿಸಿದ್ದೆ, ಹಾರುವ ತಟ್ಟೆಗಳಿಗಾಗಿ ಕಾದಿದ್ದೆ. ಕೊನೆಗೆ ವಾಸ್ತವಗಳ ತಿಳಿದು ಬೇಸರಿಸಿದ್ದೆ. ತಮ್ಮನೊಂದಿಗೆ ಗಂಟೆಗಟ್ಟಲೆ ಕುಳಿತು ನಕ್ಷತ್ರ ಪುಂಜಗಳ ಗುರುತಿಸಿ ಕೇಕೆ ಹಾಕಿದ್ದೆ, ಪುಟ್ಟ ವಿಜ್ಞಾನಿಯೆಂದು ಬೀಗಿದ್ದೆ.! ಉರಿದು ಬೀಳುವ ಉಲ್ಕೆಗಳ ಮೇಲೆ ಹಾರೈಕೆಯೊಂದನ್ನು ಕಟ್ಟಿದ್ದೆ. ಚಂದ್ರಗ್ರಹಣವ ನೋಡಲು, 2 ಗಂಟೆಯ ಅಪರಾತ್ರಿಯಲಿ ಎದ್ದು, ಹೊರಗೆ ಹೋಗಲು ಹೆದರಿ, ಪಪ್ಪನ ಎಬ್ಬಿಸಿ ಬೈಸಿಕೊಂಡಿದ್ದೆ. ಪಪ್ಪನಿಗೆ ಅಂಟಿಕೊಂಡು ಕುಳಿತೇ ಚಂದ್ರಗ್ರಹಣವ ನೋಡಿದ್ದೆ. ಬಾಣ ಬಿರುಸುಗಳ ಉಲ್ಕಾಪಾತವ ಬೆಟ್ಟದ ಮೇಲಿಂದ ನೋಡಿ ಸಂಭ್ರಮಿಸಿದ್ದೆ. ನನ್ನ ಪುಟ್ಟ ಬೊಗಸೆಯಲ್ಲಿ ನೀರು ತುಂಬಿ ಚಂದಿರನ ಬಿಂಬವ ಹಿಡಿದು ಚಂದಿರ ಸಿಕ್ಕಿದಷ್ಟೇ ಸಂಭ್ರಮಿಸಿದ್ದೆ. ಪಪ್ಪನ ಹತ್ತಿರ ಹಠ ಮಾಡಿ telescope ಒಂದನ್ನು ತರಿಸಿಕೊಂಡಿದ್ದೆ. ಕಲ್ಪನಾ ಚಾವ್ಲ ಬಾನಿನಲ್ಲಿ ಬೂದಿಯಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅದೇನೋ ಖುಷಿಯಿತ್ತು ಆ ಕಾಯುವಿಕೆಯಲ್ಲಿ, ಬೇಸರಿಕೆಯಲ್ಲಿ, ಆ ಕೇಕೆಯ ಪ್ರತಿಧ್ವನಿಗಳಲ್ಲಿ, ಆ ಮುಗುದ ಯೋಚನೆಗಳಲ್ಲಿ. ಆದರೆ ನಾವು ಎಲ್ಲವನು ತಿಳಿದುಕೊಳ್ಳುವ ಹಂಬಲದ ಭರದಲ್ಲಿ ಅದೆಷ್ಟೋ ಅಮೂಲ್ಯವಾದದ್ದನ್ನು ಕಳೆದು ಕೊಂಡು ಬಿಡ್ತೇವೆ. ತಿಳುವಳಿಕೆ ಜಾಸ್ತಿಯಾಗುತ್ತ ಹೋದಂತೆ ಮುಗ್ಧತೆ ಮರೆಯಾಗುತ್ತಲೇ ಸಾಗುತ್ತದೆ ಅಲ್ವಾ?



ಪುಟ್ಟ ಮಗುವಾಗಿದ್ದಾಗ 'ಮಾಮ'ನಾಗಿದ್ದ ಚಂದಿರ. ಕನ್ನಡ ಶಾಲೆಗೆ ಹೋಗುತ್ತಿದ್ದಾಗ ರಾತ್ರಿ ಬಾನಲ್ಲಿ ನಡೆಯುವ ಶಾಲೆಯ ಮಾಸ್ತರನಾಗಿದ್ದ. ಹರೆಯಕ್ಕೆ ಕಾಲಿಡುತ್ತಿದ್ದಂತೆ ಚಂದಿರ ಪ್ರೇಮಿಯಂತೆ ಭಾಸನಾಗುತ್ತಾನೆ. ಹುಣ್ಣಿವೆಯ ಹತ್ತಿರದ ದಿನಗಳಲ್ಲೆಲ್ಲ ಚಂದಿರನ ನೋಡಿದಷ್ಟೂ ಸಾಕಾಗುವುದಿಲ್ಲವೆನ್ನುವ ಮನಸ್ಸು. ಒಂದು ಬಗೆಯ possessiveness ಬೇರೆ ಅವನ ಮೇಲೆ!. ಆ ತಾರೆಗಳೆಲ್ಲ ಸವತಿಯರಂತೆ ಕಾಣುತ್ತವೆ. ಅದೆಷ್ಟು ವಿಚಿತ್ರ ನೋಡಿ ...!


ಹೀಗೆ ಕನಸುಗಳು, ನೆನಪುಗಳು ಒಂದೇ ಸಮನಾಗಿ ಸಾಗುತ್ತಲೇ ಇದ್ದವು. ಎರಡರ ನಡುವೆ ಭೇದವೇ ಇಲ್ಲದಂತೆ ಕಳೆದೇ ಹೋಗಿದ್ದೆ ಅಕ್ಷರಶಃ.. ಆ ಬಾನ ತಾರೆಗಳ ನೋಡುತ್ತಾ ಲಹರಿಯಲ್ಲಿ. 'ಬಾನ ಜಾತ್ರೆ'ಗೆ ತಾರೆಗಳು ಸೇರುತ್ತಲೇ ಇದ್ದವು. ತಮ್ಮ ಕೂಗುತ್ತಿದ್ದ "ಅಕ್ಕಾ map ತಗಂಬಾರೆ, ಇದ್ಯಾವ star cluster ಹೇಳೇ ..... " .ಅವನ ಆ ಕೂಗಿಗೆ ವಾಸ್ತವಕ್ಕೆ ಬಂದೆ.

ಅರೆರೆ ಎಲ್ಲಿದ್ದಾನೆ ನಮ್ಮ ಚಂದಿರ.! ಥಟ್ಟನೆ ನೆನಪಾಗಿದ್ದವನ ಪಡುವಣದ ಅಂಚಲ್ಲಿದ್ದ ಕಂಡೆ.! ಮುಗುಳುನಗೆ ತಂತಾನೇ ಮೂಡಿತ್ತು . ಅವನೂ ಕಣ್ಣು ಹೊಡೆದು ಬಿಟ್ಟ ನೋಡಿ "ಈಗ ನನ್ನ ನೆನಪಾಯ್ತಾ?" ಎಂದು ..! ಸಪ್ತರ್ಷಿ ಮಂಡಲ (the great bear) ನೆತ್ತಿಯ ಮೇಲೆ ತೂಗುತ್ತಿತ್ತು . map ತರಲು ರೂಮಿಗೆ ಹೊರಟೆ. ಮನಸ್ಸು ನೆನಪು- ಕನಸುಗಳ ಸೋನೆಮಳೆಯಲ್ಲಿ ಮಿಂದೆದ್ದಿತ್ತು. ಮಧುರಾನುಭೂತಿಯ ಹೊಸ ಲಹರಿಯಲ್ಲಿ ತೇಲುತ್ತಿದ್ದೆ.


ಗೆಳೆಯರೇ,  ನಮ್ಮ ಬಗ್ಗೇ ಯೋಚಿಸಲು ಪುರುಸೊತ್ತಿಲ್ಲದ ಈ ಧಾವಂತದ ದಿನಗಳಲ್ಲಿ, ಒಂದು week endನ ಸಂಜೆ ನಕ್ಷತ್ರಗಳ ಜಾತ್ರೆಗೆ ಹೋಗಿ ಬನ್ನಿ.ನಿಮ್ಮದೇ ಲಹರಿಯಲ್ಲಿ ಕಳೆದು ಹೋಗಿ. ನಿಮಗೆ ನಿಮ್ಮ ಬಾಲ್ಯ ನೆನಪಾದೀತು, ಹಳೆಯ ಮುಗುದ ಕನಸುಗಳು ನೆನಪಾಗಿ ತುಂಟ ನಗೆಯೊಂದು ತುಟಿಯಂಚಲಿ ಮೂಡಬಹುದು,ಯಾರದೋ ನೆನಪು ಧಿಗ್ಗನೆ ಎದ್ದು ಬಂದು ನಕ್ಷತ್ರಗಳು ಮಸುಕಾಗಬಹುದು. ಕೆನ್ನೆ ಮೇಲಿಳಿದ ಕಣ್ಣೀರ ಹನಿಯಲ್ಲಿ ಚುಕ್ಕಿಯೊಂದು ಪ್ರತಿಬಿಂಬವ ನೋಡಿ ನಕ್ಕಂತೆ ಅನಿಸಬಹುದು. ಜಾತ್ರೆ ಮುಗಿಸಿ ಭೂಮಿಗಿಳಿದು ಬಂದಾಗ ನಿಮ್ಮ ಬೇಸರದ ಭಾವವೆಲ್ಲ ಕಳೆದು ಮುಗುಳ್ನಗೆಯೊಂದು ಮೂಡದಿದ್ದರೆ ಆಗ ಹೇಳಿ ..!










































Friday, January 28, 2011

ಸುಮ್ಮನೆ ನಕ್ಕುಬಿಡಿ

ಹಲೋ ಸ್ನೇಹಿತರೆ,
ಪ್ರೀತಿ, ಕಥೆಗಳು, ಗಂಭೀರ ಲೇಖನದತ್ತಲೇ ಗಿರಕಿಹೊಡೆಯುತ್ತಿದ್ದೆ ಅಲ್ವಾ ನಾನು ? But ಇದು ಲಘು ಹಾಸ್ಯದ ಲೇಪನವಿರುವ ಲೇಖನ. ಇತ್ತೀಚಿಗೆ ನನ್ನ ಗಮನಕ್ಕೆ ಬಂದ ಹಾಸ್ಯ ಸಂಗತಿಗಳು, ನಡೆದ ಘಟನೆಗಳನ್ನು ನನ್ನದೇ ಪದಗಳಲ್ಲಿ ಇಡುತ್ತಿದ್ದೇನೆ. ಚಿನಕುರುಳಿ ಉತ್ತರಗಳಿಗೆ, ಹಾಸ್ಯಕ್ಕೆ ತಲೆದೂಗಿದ್ದೇನೆ. ಹಾಗೆ ನಿಮ್ಮ ಮುಂದೆಯೂ  ಇಡುತ್ತಿದ್ದೇನೆ. ಇಲ್ಲಿನ ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಿ. ಯಾರನ್ನೂ ನೋಯಿಸುವ ದುರುದ್ದೇಶವಂತೂ ಇಲ್ಲವೇ ಇಲ್ಲ.  ಈಗ ಓದಿದರೆ ನಗು ಅಷ್ಟು ನಗು ಬರಲಿಕ್ಕಿಲ್ಲ  ಆದರೆ  ಆ  ಚಟಾಕಿಗಳ timing ಇದೆಯಲ್ಲ, ಅದರ ಪರಿಣಾಮ ಮಾತ್ರ ಅದ್ಭುತ ! 

Long skirt ಪಜೀತಿ:
 ನನಗೆ long skirtಗಳ ವಿಪರೀತ ಹುಚ್ಚಿದೆ. ಯಾವುದೇ ಪಟ್ಟಣಗಳಿಗೆ ಹೋದರೂ ಬಟ್ಟೆ ಪ್ರಸಿದ್ಧ ಬಟ್ಟೆ ಅಂಗಡಿಗಳಲ್ಲಿ long skirts ಕೇಳುತ್ತ ನಡೆದು ಬಿಡುತ್ತೇನೆ.ಒಂದು ವಾರದ ಹಿಂದೆ ಹುಬ್ಬಳ್ಳಿಗೆ ಹೋಗಿದ್ದೆ. ದೊಡ್ಡದು ಎನಿಸುವ ಪ್ರಸಿದ್ಧ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ನನ್ನ ಮಾಮೂಲಿ ವರಸೆಯಲ್ಲಿ "Long skirts ತೋರಿಸ್ರಿ" ಎಂದೆ. sales boy ಸರೀ ಎಂದು ಒಂದು ದೊಡ್ಡ box ಎತ್ತಿ ತಂದ. "ಯಾವ ಕಲರ್ರೀ ಅಕ್ಕಾರೆ ?" ಎಂದ. ನೋಡುವ ಎಂದು ಇಣುಕಿದರೆ 'ಸೀರೆಗೆ ಹಾಕುವ ಲಂಗಗಳು' ಯಾವ ಬಣ್ಣದ ಲಂಗಗಳು ಬೇಕಾದರೂ ಇದ್ದಿದ್ದವು.!
         ನಾನು ಕಕ್ಕಾ ಬಿಕ್ಕಿ ನನ್ನ ಗೆಳೆಯ ಗೆಳತಿಯರೆಲ್ಲ ನಗುತ್ತಿದ್ದರು. ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ. ಉದ್ದದ ಲಂಗ, ಉದ್ದನೆಯ skirt, ನೆರಿಗೆ ಇರುವ skirt  ಯಾವ ಬಗೆಯಲ್ಲಿ ಹೇಳಿದರೂ ಅಲ್ಲಿದ್ದ ನಾಲ್ಕಾರು ಜನರಿಗೂ ತಿಳಿಯಲೇ ಇಲ್ಲ. "ಅದಾವಲ್ರೀ ಇಲ್ಲೇ  ಇದಕೂ ಉದ್ದದ್ದು ಬೇಕೆನ್ರೀ ?"ಎಂದು ಸೀರೆಯ ಲಂಗದ ಕಡೆಗೇ ತೋರಿಸುತ್ತಿದ್ದ..! ನನಗೆ ನಗು ತಡೆಯಲಾಗಲೇ ಇಲ್ಲ. "ಈ ಥರದ್ದು ಅಲ್ಲ, ನಾನಿನ್ನು ಬರುತ್ತೇನೆ " ಎಂದು ಹೊರಟವಳಿಗೆ. ನನ್ನ ಕನ್ನಡದ ಮೇಲೆ doubt ಬರುತ್ತಿತ್ತು !


ಸಮಾಜಕ್ಕೆ ಹೆದರುವುದಿಲ್ಲ:
ಮೊನ್ನೆ ಮೊನ್ನೆ ನಾವು ಗೆಳೆಯರೆಲ್ಲ ಸೇರಿ ಮಾತನಾಡುತ್ತಿದ್ದೆವು. ಗುಂಪಿನಲ್ಲಿ ಹುಡುಗಿಯೊಬ್ಬಳು "ನನ್ನ ದಾರಿಯೇ ಬೇರೆ ತಾನು ಸಮಾಜಕ್ಕೆ ಹೆದರುವುದಿಲ್ಲ" ಎಂದು ಉದ್ದುದ್ದ ಭಾಷಣವನ್ನು ಕೊಡುತ್ತಿದ್ದಳು. ಅವಳ ಆವೇಶ ಭರಿತ ಮಾತುಗಳನ್ನು ಕೇಳುತ್ತಿದ್ದ ನನ್ನ ತಮ್ಮ ಮುಗುಮ್ಮಾಗಿ ಉತ್ತರಿಸಿದ "ನನಗೊತ್ತಿದೆ ಬಿಡೆ, ನೀನು ಹೆದರಿದ್ದು ಗಣಿತ ಮತ್ತು Englishಗೆ ಎಂದು...! " ಎಲ್ಲರೂ ಹೋ ಎಂದು ಬೊಬ್ಬಿಟ್ಟೆವು.! ನಾನು ತಮ್ಮನ ಮುಷ್ಟಿಗೆ, ನನ್ನ ಮುಷ್ಟಿಯನ್ನು ಗುದ್ದಿದೆ.    


ಚಿನ್ನ-ರನ್ನ ಈ ಪದದ ಹಿಂದಿನ ಗುಟ್ಟು :
 ನಾವು ಮೂವರು ಗೆಳತಿಯರು ಮಾತನಾಡುತ್ತಿದ್ದೆವು. ಗೆಳತಿಯೊಬ್ಬಳು ಅವಳ ಹುಡುಗನ ಬಗ್ಗೆ ಹೇಳುತ್ತಾ "ನನ್ನ ಹುಡುಗ ನನ್ನ ಚಿನ್ನ, ಬಂಗಾರ ಅಂತ ಕರೀತಾನೆ." ಅದಕ್ಕೆ ಇನ್ನೊಬ್ಬಳ ಉತ್ತರ ನೋಡಿ "KGF ನಲ್ಲಿ ಕೆಲಸ ಮಾಡಿದಾನಾ? ಅಥವಾ ಬಂಗಾರದ ಕೆಲಸ ಮಾಡ್ತಾನಾ ?" ನಾನು ನಗೆ ತಡೆಯಲಾಗದೆ ಆಚೆ ಹೋದೆ.

Album ದರ (Incredible Indians):
ಒಮ್ಮೆ Digital studio ಒಂದಕ್ಕೆ ಹೋಗಿದ್ದೆ ಒಂದಿಷ್ಟು ಫೋಟೋಗಳ ಪ್ರಿಂಟ್ ಹಾಕಿಸಲು. ಅಷ್ಟರಲ್ಲಿ ಬಂದ ಒಬ್ಬ ಆಸಾಮಿಯ ಬಳಿ  ಸ್ಟುಡಿಯೋದವ "ಏನು ಬೇಕು ?" ಎಂದ. ಅದಕ್ಕೆ ಆ ಆಸಾಮಿಯ ಉತ್ತರ  "ಆಲ್ಬಮ್ ಕೊಡಿ". ಸ್ಟುಡಿಯೋದವ ಕೇಳಿದ "ಯಾವ size?". ಆ ಆಸಾಮಿ ಉತ್ತರಿಸಿದ "ಒಂದು ಐವತ್ತು ರೂಪಾಯಿಯೊಳಗೆ ಕೊಡಿ". ನಗುತ್ತ ಮನದೊಳಗೆ ಎಂದುಕೊಂಡೆ incredible Indians...!

ಬೀಗ ಉಂಟಾ ?
ಒಮ್ಮೆ ನನ್ನ ಚಿಕ್ಕಮ್ಮನ ಮಗನ ಜೊತೆ Digital cameraವನ್ನು ಕೇಳಿಕೊಂಡು ಮಂಗಳೂರಿನ ಪ್ರತಿಷ್ಠಿತ ಮಳಿಗೆಯೊಂದಕ್ಕೆ ಹೋಗಿದ್ದೆವು. ನಾಲ್ಕಾರು modelಗಳ ಕ್ಯಾಮೆರಾಗಳನ್ನು ಕೇಳಿದರೂ ಒಂದೂ ಅವರ ಬಳಿ ಇರಲಿಲ್ಲ. ಥಟ್ಟನೆ ನನ್ನ ಚಿಕ್ಕಮ್ಮನ ಮಗ "ನಿಮ್ಮಲ್ಲಿ ಬೀಗ ಸಿಗಬಹುದಾ?" ಎಂದು ಕೇಳಿದ. ಅದಕ್ಕೆ ಆ sales man "ಎದುರಿನ ಅಂಗಡಿಯಲ್ಲಿ ಸಿಗಬಹುದು" ಎಂದ. ತಕ್ಷಣ ನನ್ನ ಚಿಕ್ಕಮ್ಮನ ಮಗ "ಹಾಗಾದರೆ ಒಂದು ಬೀಗ ತಂದು ಈ ಅಂಗಡಿಗೆ ಜಡಿಯಿರಿ.!" ಎಂದ. ! sales man ಕೆಕ್ಕರಿಸಿ ನೋಡುತ್ತಿದ್ದ ನಾವು ನಗುತ್ತ ಕಾಲು ಕಿತ್ತಿದ್ದೆವು..!

But i like you:
ನಾವೆಲ್ಲಾ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಸಂಕ್ರಾಂತಿ ಬಂದರೆ ಸಾಕು greeting cardಗಳ ವಿನಿಮಯ ಶುರುವಾಗುತ್ತಿತ್ತು. ಅದೊಂದು ಬಗೆಯ ಹುಚ್ಚು, ಮಜ. ಮತ್ತೆ ಈಗ ಬರದ ಸುವರ್ಣ ಕಾಲ ಆ ಬಾಲ್ಯ. ಏನೆಂದು ಅರ್ಥಗಳೇ ಗೊತ್ತಿಲ್ಲದ, ವ್ಯತ್ಯಾಸವನ್ನು ಅರಿಯದ ಆ ಮುಗ್ಧ ಮನಸು. ಆ ಬಣ್ಣ ಬಣ್ಣದ card, sheetಗಳ ಒಳಗೆ ಅದೇನೇನೋ ಸಾಲುಗಳು, ಅಂತ್ಯ ಪ್ರಾಸಗಳು. ಎಲ್ಲ ಬಾಲ ಕವಿಗಳಾಗಿ ಬಿಡುತ್ತಿದ್ದರು ಸಂಕ್ರಾಂತಿ ಬಂತೆಂದರೆ. card ಒಳಗಿನ quotesಗಳ sample ಒಂದನ್ನು ನೋಡಿ:
ಭಟ್ಟ like ಜುಟ್ಟ
ಜುಟ್ಟ like ಹೂವು
ಹೂವು like ಪರಿಮಳ
But I like You ..!
ಎತ್ತಣ ಮಾಮರ ಎತ್ತಣ ಕೋಗಿಲೆ? ಎಲ್ಲೆಲ್ಲಿಯ ಸಾಲುಗಳು ನೋಡಿ. ಆಂಗ್ಲ ಭಾಷೆಯನ್ನೂ ಸಲೀಸಾಗಿ ಕೊಲೆ ಮಾಡಿ ಬಿಡುತ್ತಿದ್ದೆವು. ಸಂಕ್ರಾಂತಿಯ ಎಳ್ಳು ಬೆಲ್ಲದ ನಡುವೆ ಬಾಲ್ಯದ ನೆನಪುಗಳು ಕಾಡಿದ್ದವು. ಹಾಗೆ ಒಂದು greeting card ಎತ್ತಿಕೊಂಡು ಬರೆದಿದ್ದೆ ನನ್ನ ಬಾಲ್ಯದ ಗೆಳತಿಗೆ ಹಳೆ quoteನ improved version
ಭಟ್ಟ likes ಜುಟ್ಟ
ಜುಟ್ಟ likes ಹೂವು 
ಹೂವು likes ಪರಿಮಳ 
But I like you  !
greeting card ಗೆಳತಿಗೆ ಕೊಟ್ಟೆ. ಇಬ್ಬರೂ ನಗುತ್ತಿದ್ದೆವು. ಬಾಲ್ಯದ ನೆನಪುಗಳ ಮಳೆಗೆ ಮನಸು ಮತ್ತೊಮ್ಮೆ ಒದ್ದೆಯಾಗಿತ್ತು .!

Tuesday, January 18, 2011

ಅವಳು, ಹುಡುಗ ಮತ್ತು ಇವಳು

ಅವಳು:


Hello ಹುಡುಗ,

ಇವತ್ತು ಬೆಳಗಿನಿದ ಯಾಕೋ ನಿನ್ನ ನೆನಪುಗಳೇ ಕಾಡ್ತಾ ಇವೆ. ನಿನ್ನೆ ನನ್ನ ಹುಟ್ಟಿದ ಹಬ್ಬ. ನೆನಪೂ ಆಗಿಲ್ವೇನೋ ನಿನಗೆ ? ಅಥವಾ ನೆನಪಿದ್ದೂ ಮರೆತುಬಿಟ್ಟೆಯಾ? ನಿನ್ನ ಒಂದು phone callಗಾಗಿ ಕಾದಿದ್ದೆ. ಆದರೆ ನೀನು ನೆನಪಾಗಿ ಕಾಡಿದ್ದೆ. 'ಇವನ' ಜೊತೆ ಮದುವೆಯಾದ ನಂತರದ ನನ್ನ ಮೊದಲನೇ ಹುಟ್ಟಿದ ಹಬ್ಬ. ಮಧ್ಯ ರಾತ್ರಿಯಲಿ ಇವನ ಒಂದು ಹಾರೈಕೆಗಾಗಿ ಹಂಬಲಿಸಿದ್ದೆ. ರಾತ್ರೆ ನನ್ನ ಪಕ್ಕದಲ್ಲಿ ಮಲಗಿ, ಸುಖ ನಿದ್ದೆಯಲಿ ಗೊರಕೆ ಹೊಡೆಯುತ್ತಿದ್ದವನ ಕಂಡು ನನ್ನ ಕಣ್ಣಂಚು ಒದ್ದೆಯಾಗಿ, ಕೆನ್ನೆಗಳೂ ಒದ್ದೆಯಾಗಿದ್ದವು. ಕೊನೆಗೆ ಸೋತು ನೆನಪಿಸಿದ್ದೂ ನಾನೇ. "Oh my Darling I am sorry" ಎಂದು ಹಲ್ಕಿರಿಯುತ್ತಾ wish ಮಾಡಿದವನನ್ನು ನಿನ್ನ ಜೊತೆ ಹೋಲಿಸಿ ತೂಗಿದ್ದೆ ನಾನು. ಹೃದಯ ನಿನ್ನ ಹೆಸರನ್ನೇ ಅರಚುತ್ತಿತ್ತು.ನೀನಿದ್ದಿದ್ದರೆ .... ಥತ್ ಮತ್ತೆ ಜಾರುತ್ತೇನೆ ನೋಡು ಕಲ್ಪನೆಯ ಮಡಿಲಿಗೆ. ಈ ಹುಚ್ಚು ಮನಸೇ ಹೀಗೆ ಅಲ್ವಾ? ಸಿಗದಿದ್ದರ ಕಡೆಗೇ ತುಡಿಯುತ್ತದೆ.!


ಅದೆಷ್ಟು ಖುಷಿಯ ದಿನಗಳು ಅವು,ನಿನ್ನ ಜೊತೆಗೆ ಕಳೆದದ್ದು. ಆ ಭಾನುವಾರಗಳಿಗಾಗಿ ಹಂಬಲಿಸಿದ್ದು. ಗಂಟೆಗಟ್ಟಲೆ ಮಾತನಾಡಿದ್ದು. ಮುಗಿಯದ ರೋಡಿನ ಉದ್ದಕ್ಕೆ ಮುಗುಮ್ಮಾಗಿ ನಡೆದದ್ದು, ನಾವೆಷ್ಟು ನಡೆದಿದ್ದೆವು ಎನ್ನುವುದು, ಪಕ್ಕಾ ಆಳಸಿಯಂತೆ ಬಿದ್ದುಕೊಂಡಿರುವ ಆ ರಸ್ತೆಗೂ ಗೊತ್ತಿರಲಿಕ್ಕಿಲ್ಲ. ನಡೆಯಲಾಗದೆ ನಾನು ಸೋತು ಕುಳಿತದ್ದು, ನೀನು ಕೈಹಿಡಿದು ಎತ್ತಿದ್ದು. ರೋಡಿನ ತಿರುವಲ್ಲಿ ನನ್ನ ಉದ್ದದ ಜಡೆಯ ನೀನು ಹೆಣೆದದ್ದು. "ಜೀವನ ಪೂರ್ತಿ ನಿನ್ನ ಜಡೆ ಹೆಣೆಯುವ ಸೌಭಾಗ್ಯ ನನ್ನದಾಗಲಿ" ಎಂದು ನೀನು ಅಂದಾಗ, ನನ್ನ ಉತ್ತರ ಎರಡು ಹನಿ ಕಣ್ಣೀರಾಗಿತ್ತು.

ಯಾಕೆ ಈ ಜೀವನದಲ್ಲಿ ಯಾರ್ಯಾರದ್ದೋ ಪ್ರವೇಶವಾಗಿ ಬಿಡುತ್ತದೆ ? ಕೊನೆಗೆ ಎಲ್ಲರೂ ಉಳಿಸುವುದು 'ಮನದಲ್ಲಿ ಒಂದು ಹಿಡಿ ನೆನಪು, ಗಲ್ಲದ ಮೇಲೆ ಕಣ್ಣೀರ ಕರೆ'. ಜೀವನವ ನಿನ್ನ ಜೊತೆ ಕಳೆಯಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ,ನಿನ್ನ ಪ್ರೀತಿಸಿದೆ.ವಯಸ್ಸಿನ ಅಂತರ, ಜಾತಿ ಅದಾವುದೂ ಕಾಡಲೇ ಇಲ್ಲ. ನಿನ್ನ ಮುಗ್ಧ ಪ್ರೀತಿಯ ಹೊಳೆಯಲ್ಲಿ ಅಕ್ಷರಶಃ ಕೊಚ್ಚಿ ಹೋಗಿದ್ದೆ ನಾನು.


ಅದೆಷ್ಟು ಸಂಭ್ರಮದಿಂದ ಆಚರಿಸಿದ್ದೆ ನೀನು, ನನ್ನ ಹುಟ್ಟು ಹಬ್ಬವ. ಕಡಲ ತಡಿಯಲ್ಲಿ ನಾನು ಕೇಕ್ ಕತ್ತರಿಸಿದಾಗ ಸುತ್ತಲಿನ ಅಪರಿಚಿತರೆಲ್ಲ "Happy birth day too you" ಅಂದಿದ್ದರಲ್ವಾ ? ನಾನು ಸಣ್ಣಗೆ ನಡುಗುತ್ತಿದ್ದೆ. ಆ ದಿನ ನೀ ಕೊಟ್ಟಿದ್ದ ಕಾರ್ಡ್, ಹಾಗೂ ಗಿಫ್ಟ್ ಇನ್ನೂ ನನ್ನ ಬಳಿ ಭದ್ರವಾಗಿವೆ. ಆ ದಿನ ಅಚ್ಚಳಿಯದ ನೆನಪಾಗಿ, ಬೆಚ್ಚಗೆ ಕುಳಿತಿದೆ ನನ್ನ ಮನಸಿನಲ್ಲಿ.

ಕೊನೆಗೂ ನಾನಂದುಕೊಂಡಂತೆ ಆಯಿತು, ನಿನ್ನ ಜೊತೆಗೆ ಜೀವನವೆಲ್ಲ ಕಳೆಯುವ ಭಾಗ್ಯ ನನ್ನದಾಗಲೇ ಇಲ್ಲ.

ನಾನು ಬೇರೆ ಹುಡುಗರ ಜೊತೆ ಮಾತಾಡಿದ್ದು ಗೊತ್ತಾದರೆ ನಿನ್ನ ಸಿಡುಕು, possessiveness,ಸಿಟ್ಟುಗಳಿಗೆ ನಾನು ಆಗ ಮುಸಿಮುಸಿ ನಗುತ್ತಿದ್ದೆ. ಈಗ ಆ ನೆನಪುಗಳಿಗೆ ಕಣ್ಣುಗಳು ಮಂಜಾಗುತ್ತವೆ.

ಹೌದೇನೋ? ನಿನ್ನ ಬದುಕಿನಲ್ಲಿ ಹೊಸ ಹುಡುಗಿಯೊಬ್ಬಳ ಪ್ರವೇಶವಾಗಿದೆಯಂತೆ. ನೀನು ಸಂಪೂರ್ಣವಾಗಿ ಬದಲಾಗಿದ್ದೀಯ. ಹೊಸ ಹುಡುಗಿ ನಿನ್ನ ಹಳೆಯ ನೆನಪುಗಳ ಮೇಲೆ ಪ್ರೀತಿಯ ಚಾದರವ ಹೊದೆಸಿ, ಹೊಸ ವಸಂತವ ತಂದಿದ್ದಾಳಂತೆ. ಅವಳ ಸುತ್ತಮುತ್ತಲೇ ಇತ್ತಂತೆ ನಿನ್ನ ಮಾತುಕತೆಯೆಲ್ಲ. ವೈಶಾಲಿ ಹೀಗೆಲ್ಲ ಹೇಳುತ್ತಿದ್ದರೆನನ್ನ ಹೊಟ್ಟೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ಆಗುತ್ತಿತ್ತು.

ಯಾಕೋ ಬೇಡವೆಂದರೂ ನಿನ್ನ ನೆನಪುಗಳು ಹುಟ್ಟು ಹಬ್ಬದ ನೆಪದಲ್ಲಿ ಕಾಡುತ್ತಿವೆ. ನಿನ್ನ ಹೊಸ ಹುಡುಗಿಯ ಬಗ್ಗೆ ಸಣ್ಣ ಹೊಟ್ಟೆ ಕಿಚ್ಚೊಂದು ಶುರುವಾಗಿದೆಯಲ್ಲೋ.


ಹುಡುಗ:
ಬಾಳ ಪಯಣದಲ್ಲಿ ಎಲ್ಲ ಜೀವವು ಹಾತೊರೆಯುವುದು ಪ್ರೀತಿಗಾಗಿ. ಅದೆಲ್ಲಿಯ ಮಾಯೆಯೋ ನಿನ್ನ ಪ್ರೀತಿಸಿಬಿಟ್ಟೆ.ಅದೊಂದು ಹುಚ್ಚು ಪ್ರೀತಿ ಬಿಡು.ನಿನ್ನ ಪ್ರೀತಿಸಿದೆ,ಕನಸುಗಳ ಗೂಡು ಕಟ್ಟಿದೆ. ನನಗೆಲ್ಲಿ ಗೊತ್ತಿತ್ತು ನಾ ಕಟ್ಟಿದ್ದು ಸಮುದ್ರದ ಅಂಚಿನ ಮರಳ ಗುಬ್ಬಚ್ಚಿ ಗೂಡೆಂದು? ಕಾಲನ ಅಲೆಗೆ ಸಿಕ್ಕಿ ನುಚ್ಚು ನೂರಾಗುವುದೆಂದು? ಬದುಕು ನಾವಂದುಕೊಂಡಂತೆ ಎಲ್ಲಿರುತ್ತದೆ ಹೇಳು ? ನೀನು ನನ್ನ ಬದುಕಿನಿಂದ ಎದ್ದು ಹೋದೆ. ನಾನು ಕಣ್ಣೀರು ಬತ್ತುವಷ್ಟು ಅತ್ತಿದ್ದೆ. ತಿಂಗಳುಗಳವರೆಗೆ ದಿನವೂ ಕುಡಿದಿದ್ದೆ.

ಯಾವುದಕ್ಕೂ ಬೇಸರವಿಲ್ಲ ಬಿಡು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡವನು ನಾನು. ಅಥವಾ ಬದುಕು ಹಾಗೆ ಅಂದುಕೊಳ್ಳುವಂತೆ ಮಾಡಿದೆ.

ನಿನ್ನ ಪ್ರೀತಿಸಿದೆ, ಕನಸ ಕಟ್ಟಿದೆ, ಅದು ಚೂರಾದಾಗ ಕುಡಿದೆ, ಅಲೆದೆ, ಬಸವಳಿದೆ. ಆದರೆ ಕಾಲಕ್ಕೆ ಎಲ್ಲ ಮರೆಸುವ ಹಕ್ಕು,ತಾಕತ್ತು ಎರಡೂ ಇದೆಯಂತೆ. ಹೌದು ನಿನ್ನ ನೆನಪು ಆಗುವುದೇ ಇಲ್ಲ ಎಂದರೂ ತಪ್ಪಲ್ಲ. ಹಿಂದೆ ನಡೆದಿದ್ದೆಲ್ಲವ ನೆನೆದು ನಕ್ಕು ಬಿಟ್ಟಿದ್ದೇನೆ. ಎಲ್ಲೋ ಒಮ್ಮೊಮ್ಮೆ ನನಗೆ ನಾನೇ ಹುಚ್ಚ ಎನಿಸಿದ್ದೂ ಇದೆ. ನನ್ನ ತಪ್ಪಲ್ಲ ವಯಸ್ಸಿನದು ಎಂದು ನನಗೆ ನಾನೇ ಸಮಾಧಾನಿಸಿಕೊಂಡಿದ್ದೇನೆ.


ಹೌದು ನನ್ನ ಬದುಕಲ್ಲಿ ಹೊಸ ಹುಡುಗಿಯ ಪ್ರವೇಶವಾಗಿದೆ. ಬದುಕು ಬದಲಾಗಿದೆ. ಹುಡುಗತನ ಸುಮಾರಾಗಿ ಕಳೆದು ಹೊಸ ವಸಂತ ಬಂದಿದೆ. ತನ್ನ ಚಿಗುರು ಕಣ್ಣಿನಲ್ಲಿ ನಗುವ. ಮಾತಿನ ಮಲ್ಲಿಗೆ ಶರಣಾಗಿದ್ದೇನೆ. ನನ್ನ ಬದುಕಲ್ಲಿ. ಹೊಸ ಕಿರಣ,ಚೇತನ ಹೊತ್ತು ತಂದ ಕೀರ್ತಿ ಅವಳಿಗೆ. ನಿನ್ನ ಉದ್ದದ ಜಡೆಯನ್ನು ಪ್ರೀತಿಸುತ್ತಿದ್ದೆನಲ್ಲ. ನನ್ನ ಜೀವನದ ಹೊಸ ಚಿಲುಮೆ ತುಂಡು ಕೂದಲಿನ ಹುಡುಗಾಟದ ಹುಡುಗಿ ! ಅದೇ ತುಂಡು ಕೂದಲೇ  ಈಗ ಇಷ್ಟವಾಗಿಬಿಟ್ಟಿದೆ.

ಇವಳು ಸ್ನೇಹಿತೆಯಾಗಿ ಜೀವನವ ಪ್ರವೇಶಿಸಿದವಳು. ತಿಂಗಳೊಳಗೆ ನನ್ನ ಮನದ ಖಾಲಿ ಚುಕ್ಕಿ ರಂಗೋಲಿಗೆ ಬಣ್ಣ ತುಂಬಿ ಬಿಟ್ಟಳು. ನಿನ್ನ ನೆನಪುಗಳ ತೆಕ್ಕೆಯಿಂದ ಹೊರ ಬಂದು ಕಡಲ ತಡಿಯಲ್ಲಿ ಮಂಡಿಯೂರಿ "ನೀ ನನಗೆ ಇಷ್ಟ. ಬದುಕಿನುದ್ದಕ್ಕೆ ಜೊತೆಯಾಗುವಿಯಾ ?"ಎನ್ನಲು, ನಾನು ತೆಗೆದು ಕೊಂಡಿದ್ದು ಬರೋಬ್ಬರಿ ಒಂದುವರೆ ವರುಷ . "ನಿನ್ನ ಹಳೆ ಹುಡುಗಿಗಿಂತ ಜಾಸ್ತಿ ಪ್ರೀತಿಸಿದರೆ ಮಾತ್ರ " ಎಂದು ಮಗುವಿನಂಥ ಸಿಟ್ಟು ತೋರಿದವಳಿಗೆ ಅದೇನು ಹೇಳಲಿ ಹೇಳು? ನಗು ಬಿಟ್ಟರೆ ನನ್ನಲ್ಲಿ ಏನು ಉಳಿಯುವುದೇ ಇಲ್ಲ. ಅವಳ ಜೊತೆ ಇರುವಷ್ಟು ಸಮಯ ಮಗುವಾಗಿಯೇ ಬಿಡುತ್ತೇನೆ. ಉದ್ದ ಜಡೆಯವರು ಕಂಡಾಗಲೆಲ್ಲ ಮೊಣಕೈಯಿಂದ ನನ್ನ ತಿವಿದು "ನೋಡು ನಿನ್ನ ಹಳೆ ಹುಡುಗೀ " ಎಂದು ಕಣ್ಣು ಮಿಟುಕಿಸುವಾಗ. ನನ್ನ ಉತ್ತರ ಮತ್ತೊಮ್ಮೆ ನಗೆಯೇ. !


ನನ್ನದೆಲ್ಲ ವಿಷಯಗಳೂ ಗೊತ್ತು. ಮೊದಲು ನಿನ್ನ-ನನ್ನ ಕಥೆ ಹೇಳಿದಾಗ ನಕ್ಕು "stupid guy" ಎಂದು ತಲೆಗೊಂದು ಮೊಟಕಿದ್ದಳು. ಮೊನ್ನೆ "ನೀನೇಕೆ ಉದ್ದ ಕೂದಲನ್ನು ಬಿಡುವುದಿಲ್ಲವೇ ಹುಡುಗೀ" ಎಂದಿದ್ದೆ. "ಅದ್ಯಾಕೋ? ನಿನ್ನ ಹಳೆ ಹುಡುಗಿಯ ನೆನಪು ಇನ್ನೂ ಬರತ್ತಾ ? ನಾ ಬೇಡ್ವಾ? ಹೋಗ್ತೇನೋ ನಾನೂ, ಸೊಕ್ಕು ನಿಂಗೆ !"ಎಂದು ಹೊಳೆದಂಡೆಯಂಚಿಂದ ಎದ್ದು ನಡೆದು ಬಿಟ್ಟಿದ್ದಳು. ಸಮಾಧಾನಿಸಿ ಕರೆತಂದಾಗ, ಅವಳು ನಿನ್ನ ಬಿಟ್ಟು ಹೋಗಿದ್ದಕ್ಕೆಅಲ್ಲವೇನೋ ನಾನು ನಿನಗೆ ಜೊತೆಯಾದದ್ದು. ಅವಳಿಗೊಂದು thanks ಹೇಳಿ ಬಿಡೋ" ಎಂದಾಗ ನಾ ನಕ್ಕು ನೀನು ಬಿಟ್ಟು ಹೋದದ್ದಕ್ಕೆ Thanks ಎಂದು ಬಿಟ್ಟೆ.!


ಅವಳ ಅದೇ ಆ ಮೊಂಡು ಹಠ, ಮುದ್ದು ಮಾತು, ಮುಗ್ಧ ನಗು, ತುಂಟಾಟ. ಸುಳ್ಳು ಸುಳ್ಳೇ ಆಡುವ ಜಗಳ. ಎಲ್ಲವೂ ನೆನಪಿಸುವುದು ಒಂದು ಮಗುವನ್ನು.! ಅದೇ ನನ್ನನ್ನು ಅವಳ ಹತ್ತಿರಕ್ಕೆ ಎಳೆದು ತಂದದ್ದು. ". ಈಗ ಅನಿಸುತ್ತಿದೆ ಇಂಥದ್ದೇ ಹುಡುಗಾಟದ ಹುಡುಗಿಯನ್ನೇ ನಾನು ಜೀವನದಲ್ಲಿ ಬಯಸಿದ್ದು ಎಂದು. !


ಇವಳು :
Hello Stupid,
ಪ್ರೀತಿಯಲಿ ನಂಬಿಕೆ ಇಲ್ಲದವಳಿಗೆ, ನಿಷ್ಕಲ್ಮಶ ಪ್ರೀತಿಯ ಅರ್ಥ, ಉದ್ದ ಅಗಲ ತಿಳಿಸಿಕೊಟ್ಟಿದ್ದಕ್ಕೆ thanks ಹೇಳುವುದಿಲ್ಲ.! ಬದಲಾಗಿ ಅದೇ ಪ್ರೀತಿಯನ್ನು ಕೊಡುತ್ತೇನೆ.

ನಿನ್ನಲ್ಲಿ ಜೀವನದ ಹಲವು ಸಂಬಂಧಗಳನ್ನು ಹುಡುಕಿದ್ದೇನೆ. ಎಲ್ಲ ವಿಷಯಗಳನ್ನು ನಿನ್ನಹತ್ರ ಹೇಳಿ ತಲೆ ತಿಂತಾ ಇರ್ತೇನೆ ಅಲ್ವಾ ?? ಅತಿ ಆದಾಗ ನೀನು ನನ್ನ ತಲೆಗೊಂದು ಮೊಟಕಿ "ಸುಮ್ನಿರೇ" ಅಂತಿದ್ದೆ ನೋಡು.. !ಆಗ ನಿನ್ನಲ್ಲಿ ಒಬ್ಬ ಆತ್ಮೀಯ ಸ್ನೇಹಿತ ಕಾಣ್ತಾನೆ. ಆ ದಿನ ನನ್ನ ಕೈಹಿಡಿದು road ದಾಟಿಸೋವಾಗ ಯಾಕೋ ನನ್ನ ಪಪ್ಪಾ ಥರ ಅನಿಸಿಬಿಟ್ಟೆ ಮಾರಾಯ. ನೀನು ಕಾಲು ಕೆರೆದು ಜಗಳಕ್ಕೆ ಬರೋವಾಗ ನೆನಪಾಗೋನು ನನ್ನ ಅಣ್ಣ.. !!ಮೊನ್ನೆ ಮೊನ್ನೆ ನಾನು ಮೊಣಕಾಲು ಉದ್ದದ skirt ಹಾಕ್ಕೊಂಡು ಬಂದಾಗ ಅದೇನು ಗುರಾಯಿಸಿ ಬಯ್ದಿದ್ದೆ ..?? ನನ್ನ ಕಣ್ಣಲ್ಲಿ ಜೋಗ ಜಿನುಗುವಷ್ಟು... ಕಣ್ಣೀರು ಒರೆಸುತ್ತ ನಿನ್ನ ನೋಡಿದ್ದೆ ನೆನಪುಂಟಾ? ನನ್ನ ಅಜ್ಜಿ ನೆನಪಾಗಿ , ಕಣ್ಣೀರ ಅಂಚಿನಲ್ಲೂ ನಕ್ಕಿದ್ದೆ ನಾನು.

ಮರೆತೇ ಹೋಗಿತ್ತಲ್ಲೋ, ನಿನ್ನೆ ನಿನ್ನ ಹಳೆ ಹುಡುಗಿಯ ಹುಟ್ಟಿದ ಹಬ್ಬ ಅಲ್ವಾ ? wish ಮಾಡಿದ್ಯಾ? ಇನ್ನೂ ನೆನಪಿಗೆ ಬರ್ತಾಳಾ ? ಗಂಡನ ಜೊತೆ ಆಚರಿಸಿರುತ್ತಾಳೆ ಬಿಡು. ನಿನ್ನ ಮೊಗವೇ ಮರೆತು ಹೋದಂಗಿದೆ ಮಾರಾಯ. ಇವತ್ತು ಸಂಜೆ ಸಿಗ್ತೀಯಾ?

ಇನ್ನೂ ಒಂದು ವಿಷ್ಯ. ನಿನ್ನ ಹಳೆ ಹುಡುಗಿಗಿಂತ ಜಾಸ್ತಿ ನನ್ನ ಪ್ರೀತಿಸ್ತಿದೀಯಾ ಅಲ್ವಾ? ನಂಗೂ ನಿನ್ ಹತ್ರ ಉದ್ದದ ಜಡೆ ಕಟ್ಟಿಸ್ಕೊಬೇಕು ಅನ್ನಿಸ್ತಿದೆ. ಉದ್ದದ ಕೂದಲು ಬಿಡ್ತೇನೆ. ಜಡೆ ಹಾಕ್ಕೊಡ್ತೀಯಲ್ವಾ ?