Sunday, February 27, 2011

ನನ್ನ ಮರೆತಿರುವ ಹುಡುಗಿಗೆ...



ನನ್ನ ಮರೆತಿರುವ ಹುಡುಗಿಗೆ,


ಹೇಗಿದ್ದೀಯೇ ? ಅದ್ಯಾಕೋ ಗೊತ್ತಿಲ್ಲ ಹುಡುಗೀ ಮತ್ತೆ ಮತ್ತೆ ನಿನ್ನ ನೆನಪುಗಳು ಚಿಗುರುತ್ತಿವೆ, ಕಾಡುತ್ತಿವೆ .  ಮೊನ್ನೆ ಊರಿಗೆ ಹೋಗಿದ್ದಾಗ ನಿನ್ನ ನೆನಪುಗಳು ಹಸಿ ಹಸಿಯಾಗಿ ಕಾಡಿ ಬಿಟ್ಟವು. ಹೇಮಂತದ ಕಾಡು ಹೂಗಳ ಕಂಪಿಗೆ ಮನಸು ನಿನ್ನನ್ನೇ ಅರಸಿತ್ತು . ನೀ ನನ್ನ ಬಿಟ್ಟು ಹೋದಮೇಲೆ ಊರಿನ ಕಡೆ ಸರಿಯಾಗಿ ಹೋಗೇ ಇಲ್ಲ ನೋಡು. ಅದೆತ್ತ ನೋಡಿದರೂ ಕಾಡುವ ನಿನ್ನದೇ ನೆನಪುಗಳು.

ಮನದಾಳದ ಗೋರಿಯಲಿ ಹುಗಿದಿಟ್ಟಿದ್ದ,  ನಿನ್ನ ಜೊತೆ ಬೆಟ್ಟ ಗುಡ್ಡ ಅಲೆಯುವ, ಗುಡ್ಡದ೦ಚಿನ ಸೂರ್ಯಾಸ್ತ ನೋಡುವ, ಗಾಳಿಪಟ ಹಾರಿಸುವ, ಕಾಗದದ ದೋಣಿಯಲ್ಲಿ ನಿನ್ನ- ನನ್ನ ಹೆಸರು ಬರೆದು ತೇಲಿ ಬಿಡುವ, ನದಿಯ ದಡದಲ್ಲಿ ಜೊತೆಯಾಗಿ ಪಾದ ತೋಯಿಸಿಕೊಳ್ಳುವ ಕನಸುಗಳೆಲ್ಲ ಎದ್ದು, ಗೋರಿಯ ಮೇಲೆ ಬಂದು ಕೂತು ಬಿಟ್ಟಿದ್ದವು.ಇಂಚಿಂಚಾಗಿ ಕೊಲ್ಲುವ ನಿನ್ನ ಪ್ರೀತಿಯಷ್ಟೇ ತಾಕತ್ತು ನಿನ್ನ ನೆನಪುಗಳಿಗೂ ಇದೆ, ನಿನಗಾಗಿ ನಾನು ಹೆಣೆದ ಕನಸುಗಳಿಗೂ ಇದೆ ಹುಡುಗೀ.!


ಅದೆಷ್ಟೋ ರಾತ್ರಿಗಳು ಬಿಕ್ಕಳಿಸಿದ್ದೇನೆ ಆ ಚುಕ್ಕಿಗಳ ಜೊತೆಗೆ. .ಸಮಾಧಾನಿಸಲು ಬರುತ್ತಿದ್ದ ನಿನ್ನ ಚಿಗುರು ಬೆರಳುಗಳ ಕಾದು ಬೇಜಾರಾಗಿರಬೇಕು ಕಣ್ಣೀರಿಗೆ, ಇತ್ತೀಚಿಗೆ ಅದೂ ಕಾಣೆಯಾಗಿದೆ!

ನೋಡು ನಾನು ಕಡಲ ತಡಿಗೆ ಬಂದು ಕುಳಿತಿದ್ದೇನೆ. ಸಮುದ್ರದ ಅಲೆಗಳ ಮೊರೆತಕ್ಕೆ ನಿನ್ನದೇ ನೆನಪುಗಳ ಜಾತ್ರೆ. ಆ ಜಾತ್ರೆಯಲಿ ನಿನ್ನ ನಗು,ಮಾತು. ಅದೇ ನಿನ್ನ ನೆಚ್ಚಿನ ಸಮುದ್ರ. 'ಪ್ರೀತಿಯೆಂದರೆ ಸಮುದ್ರದಂತೆ' ಎಂದು ನೀನೇ ಹೋಲಿಕೆ ಕೊಡುತ್ತಿದ್ದ ಸಮುದ್ರ. ನೀನು ಅದೆಷ್ಟೋ ಗುಬ್ಬಚ್ಚಿ ಗೂಡುಗಳ ಕಟ್ಟಿದ್ದ, ಹಸಿಮರಳ ದಂಡೆಯ ಸಮುದ್ರ. ನಮ್ಮ ಅದೆಷ್ಟೋ ಜಗಳಗಳ ಕೇಳಿಸಿಕೊಂಡು ಭೋರ್ಗರೆಯುತ್ತಿರುವ ಸಮುದ್ರ. ನಿನ್ನ ಕೊನೆಯ ಸಲ ಭೇಟಿಯಾದ ಸಮುದ್ರ. !

  ಇದೇ  ಕಡಲ ತಡಿಯಲ್ಲಿ ಅಲ್ಲವೇನೆ?  ನಿನ್ನ ಜೊತೆ ಲೆಕ್ಕವಿಲ್ಲದಷ್ಟು ದೂರ ನಡೆದದ್ದು. ?"ಇನ್ನು ಒಂದೇ ಒಂದು ಚೂರು ಕಣೋ ಪ್ಲೀಸ್, ಆ ತೆಂಗಿನ ಮರದವರೆಗೆ"  ಎಂದು ನನ್ನ ಕಿಲೋಮೀಟರ್ಗಳಷ್ಟು ದೂರ ನೀನು ನಡೆಸುತ್ತಿದ್ದದ್ದು.


ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರೂ ನಮ್ಮ ಸ್ನೇಹ ಪಕ್ವಗೊಂಡದ್ದು ಕಡಲ ತಡಿಯ ಊರಿನಲ್ಲೇ. social network ನಿಂದಾಗಿ ಸಿಕ್ಕಿದ್ದ ಶಾಲಾ ದಿನಗಳ ಸ್ನೇಹಿತರಲ್ಲಿ ನೀನೂ ಒಬ್ಬಳು. ಅದರಲ್ಲೂ ನೀನು 'ಕಡಲ ತಡಿಯ' ಊರಿನಲ್ಲೇ ಇರುವುದೆಂದು ತಿಳಿದಾಗ ಖುಷಿಯಾಗಿತ್ತು. ಮೊದಲ ಭೇಟಿಯಲ್ಲಿಯೇ ಅನಿಸಿತ್ತು, ಶಾಲಾ ದಿನಗಳ  ವಾಚಾಳಿ ಹುಡುಗಿ ಇನ್ನೂ ಬದಲಾಗಿಲ್ಲ ಎನ್ನುವುದು!

ವಾರಾಂತ್ಯದ ಕಡಲ ಕಿನಾರೆಯಲ್ಲಿಯ ನಿನ್ನ ಭೆಟ್ಟಿ ಮುಂದಿನ ವಾರಕ್ಕಾಗುವಷ್ಟು ಹುರುಪನ್ನು ತಂದುಕೊಡುತ್ತಿತ್ತು. ಹೆಚ್ಚಾಗಿ ಮೌನಿಯಾಗಿರುತ್ತಿದ್ದ ನನಗೆ ಮಾತಾಡಲು ಕಲಿಸಿದವಳು ನೀನೇ ಎಂದರೆ ತಪ್ಪಾಗಲಿಕ್ಕಿಲ್ಲ. ನೀ ಕೇಳಿದ್ದಕ್ಕೆಲ್ಲ "ಹ್ಞೂ ಹಾಂ" ಅನ್ನುತ್ತಿದ್ದ ನಾನು. ಒಂದು ವರ್ಷದಲ್ಲಿ 'ನಾನೇ ಸುದ್ದಿ ಹೇಳುವಷ್ಟು', ನಿನ್ನ ಕಾಡುವಷ್ಟು ಮಟ್ಟಕ್ಕೆ ಮಾತು ಕಲಿತಿದ್ದೆ. ಆದರೂ ನನ್ನ ಮನದಾಳದ ಭಾವನೆಗಳಿಗೆ ಮಾತಿನ ರೂಪ ಕೊಡಲಾಗಲೇ ಇಲ್ಲ.

ನೀನು ಆಡುತ್ತಿದ್ದ ಸುಳ್ಳು ಸುಳ್ಳೇ ಜಗಳಗಳು, ನಿನ್ನ ಜೊತೆ ಗುಬ್ಬಚ್ಚಿ ಗೂಡು ಕಟ್ಟಿದ್ದು, ಕಿತ್ತಾಡಿ ಐಸ್ ಕ್ರೀಂ ತಿಂದಿದ್ದು. ಜಗಳವಾದಾಗ ಸಿಟ್ಟಿನಲ್ಲಿ ಅದೆಷ್ಟು ಸಲ ನಿನ್ನ ಫೋನ್ ನಂಬರ್ ಡಿಲೀಟ್ ಮಾಡಿದ್ದೇನೋ. ಆದರೆ ನಿದ್ದೆಯಲಿ ಕೇಳಿದರೂ ನಿನ್ನ ನಂಬರ್ ಒಂದೇ ಉಸುರಿನಲ್ಲಿ ಹೇಳಿ ಬಿಡುತ್ತಿದ್ದೆ. ಒಮ್ಮೆ "ನಿನ್ನೆ ನಿನ್ number delete ಮಾಡಿದ್ದೆ" ಎಂದು ನಾನು ಅಂದಾಗ, "full matured ಅಂತ ದೊಡ್ ಪೋಸ್ ಕೊಡೋದಷ್ಟೇ still you are a kid " ಎಂದು ನೀನು ನಗುತ್ತಿದ್ದರೆ. ನಿನ್ನ ಚಚ್ಚಿ ಬಿಡುವಷ್ಟು ಕೋಪ ನನ್ನಲ್ಲಿ.!

ನೆನಪಿದ್ಯೇನೆ? ಒಮ್ಮೆ ರಾತ್ರೆ ಎರಡು ಗಂಟೆಗೆ ಫೋನ್ ಮಾಡಿ "ಒಂದು doubt ಕಣೋ, ಮೊನ್ನೆಯಿಂದಾ ಕಾಡ್ತಾ ಇದೆ" ಎಂದು ಬೇಜಾರಿನ ಧ್ವನಿಯಲ್ಲಿ ಕೇಳಿದಾಗ ನಾನು ಕಂಗಾಲಾಗಿದ್ದೆ. "ಹೇಳು" ಅಂದಿದ್ದಕ್ಕೆ ಅದೆಷ್ಟು 'ನಕ್ರಾ ' ನಿನ್ನದು?!.ಕೊನೆಗೆ ಕಾಡಿ ಬೇಡಿದಾಗ ನೀ ಕೇಳಿದ್ದಾದರೂ ಏನು ? "Melody chocolaty क्यों है ? !ತಲೆ ಚಚ್ಚಿಕೊಂಡಿದ್ದೆ.ನಿದ್ದೆಯ ಮಂಪರಿನಲ್ಲೂ ನಕ್ಕಿದ್ದೆ. !

ಮನದ ಮೂಲೆಯಲ್ಲೆಲ್ಲೋ ನಿನ್ನ ಬಗೆಗೆಲ್ಲೋ ಒಂದು ಬಗೆಯ ವಿಶೇಷ ಭಾವನೆ ಮೊದಲಿನಿದ ಇತ್ತಾದರೂ  
ಅದು ಪ್ರೀತಿಯಾಗಿ ಬದಲಾಗದ್ದು ಯಾವಾಗ? ಅದೆಷ್ಟೋ ಬಾರಿ ಯೋಚಿಸಿದ್ದಿದ್ದೆ ನಾನು.


face book ನಲ್ಲಿ ನಿನ್ನ photoಗಳಿಗೆ  ಹುಡುಗರು ಕಾಮೆಂಟ್ಸ್ ಹಾಕಿದಾಗೆಲ್ಲ ಅದೇನೋ ಒಂದು ಬಗೆಯ ಭಾವನೆ.  ನಿನ್ನ ಬದುಕಿನಲ್ಲಿ 'ಸಂಭ್ರಮ'ನ ಆಗಮನ ಆದ ಮೇಲಂತೂ ಸುಖಾ ಸುಮ್ಮನೆ ಜಗಳ ಕರೆದು, ನಿನ್ನ ಗಮನವನ್ನೆಲ್ಲ ನನ್ನೆಡೆಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡಿದ್ದೆ. ಇದೆಲ್ಲ ನಿನಗೆ ಅರ್ಥವಾಗಲೇ ಇಲ್ಲವೇನೇ? ಅಥವಾ ಅರ್ಥವಾದರೂ ಸುಮ್ಮನಿದ್ದೆಯಾ? ನನ್ನ ಕಣ್ಣಿನಲ್ಲಿ ನಿನ್ನೆಡೆಗಿದ್ದ ಪ್ರೀತಿ ಅರ್ಥವಾಗಲೇ ಇಲ್ಲ ನಿನಗೆ.


ಪಕ್ಕಾ ಅಂತರ್ಮುಖಿ, ಮನದ ಭಾವಗಳಿಗೆ 'ಮಾತಿನ ರೂಪ' ಕೊಡಲು ಒದ್ದಾಡುವ ಹುಡುಗ ನಾನು. ನಿನಗೆ ನನ್ನ ಪ್ರೀತಿಯ ಹೇಳುವ ಮೊದಲೇ, ನೀನು 'ಸಂಭ್ರಮ'ನ ತೆಕ್ಕೆಗೆ ಜಾರಿಯಾಗಿತ್ತು. ಒಂದು ತಿಂಗಳು ನಾನು ನಾನಾಗಿರಲಿಲ್ಲ. ಹಂತ ಹಂತವಾಗಿ ನಿನ್ನೊಡನೆ ಮಾತು-ಕಥೆಗಳ ನಿಲ್ಲಿಸಿದ್ದೆ.


ಮದುವೆಯ ಕರೆಯೋಲೆಯ ತೋರಿಸಬೇಕು ಬಾ ಎಂದು ಮತ್ತೆ ಇದೇ ಸಮುದ್ರದಂಚಿಗೆ ನೀ ನನ್ನ ಕರೆದದ್ದು. ಅದೆಷ್ಟೇ ಪ್ರಯತ್ನಿಸಿದ್ದರೂ ಸಾಮಾನ್ಯವಾಗಿ ಇರಲು ಸಾಧ್ಯವಾಗಿರಲಿಲ್ಲ. 
 
ಆ ದಿನ ಬಸ್ಸಿನಲ್ಲಿ ಹೊರಟಿದ್ದಾಗ ಅದ್ಯಾಕೆ ನನ್ನ ಭುಜಕ್ಕೆ ನಿನ್ನ ತಲೆಯಿಟ್ಟೆ ಹೇಳು? ಮಗುವಿನಂತೆ ಮಲಗಿದ್ದ ನಿನ್ನ ಮುಖವನ್ನು ಒರೆ ಕಣ್ಣಿನಲ್ಲಿ ನೋಡಿ ಮುಗುಳು ನಕ್ಕಿದ್ದೆ ನಾನು. ನಿನಗೆ ಅದಾವುದರ ಪರಿವೆಯೇ ಇದ್ದಂಗೆ ಕಂಡಿರಲಿಲ್ಲ. ನಿನ್ನ bag ಮೇಲಿದ್ದ ಆ ಮಣಿಗಳನ್ನೆಲ್ಲ ಕಿತ್ತು ನನ್ನ ಕೈಮೇಲೆ ಯಾಕೆ ಇಡುತ್ತಿದ್ದೆಯೇ ಹುಡುಗಿ ? ನಿನಗೆ ಗೊತ್ತೇ ಇಲ್ಲದಂತೆ ಅದನ್ನೆಲ್ಲ ಹೆಕ್ಕಿ ನನ್ನ ಜೇಬಿನೊಳಗೆ ಸೇರಿಸಿದ್ದೆ ನಾನು. ಇನ್ನೂ ಇವೆ ನನ್ನ ಬಳಿ ಅವು.  ನಿನ್ನ ನೆತ್ತಿಯ ಆ ಪರಿಮಳ ಇನ್ನೂ ನೆನಪಲ್ಲಿದೆ.!

ನೋಡು ಎಲ್ಲ ಮೊನ್ನೆ ಮೊನ್ನೆ ನಡೆದಂತಿದೆ ಅಲ್ವಾ ? ದಡಕೆ ಅಪ್ಪಳಿಸಿ ಓಡುವ ಹೊಸ ಹೊಸ ಅಲೆಗಳು. ನನ್ನ ಮನದಲ್ಲಿ ನಿನ್ನದೇ ನೆನಪಿನ ಅಲೆಗಳು . ಹಳೆಯ ನೆನಪುಗಳ ದರ್ಬಾರಿಗೆ ಮನಸ್ಸು ಗುಜರಿ ಅಂಗಡಿ ಆದಂತಿದೆ.  ಕಡಲ ತಡಿಗೆ ಬಂದು ನಿಂತಾಗ ಉಕ್ಕಿದ ಹಸಿ ಹಸಿ ನೆನಪುಗಳು ಇವು.  ಅದೇ ದಡ, ಅಪ್ಪಳಿಸುವ ಹೊಸ ಹೊಸ ಅಲೆಗಳು, ಕೈ ಹಿಡಿದು ಅಡ್ಡಾಡುವ ಜೋಡಿಗಳು. ಪಶ್ಚಿಮಕೆ ಸೂರ್ಯ ಇಳಿದಾಗಿದೆ. ನನ್ನ ನೆರಳು ಮಸುಕಾಗುತಿದೆ. ಆದರೆ ನಿನ್ನ ನೆನಪು ... ??? ಅದೂ ಸಮುದ್ರದಂತೆ ......

                                        
     ಇತಿ
ನಿನ್ನ ಮರೆಯಲಾಗದವ


ಕೂತು ಬರೆದ ಹಾಳೆಯನು ಹರಿದು ಸಮುದ್ರಕ್ಕೆಸೆದು,ಹುಡುಗ ನಡೆಯುತ್ತಿದ್ದ. ಅಲೆಗಳು ಮುಟ್ಟಾಟವ ಆಡುತ್ತ ಕಾಗದದ ಚೂರುಗಳನ್ನು ಮರುಘಳಿಗೆಯೇ ದಡಕ್ಕೆ ತಂದು ಹಾಕುತ್ತಿದ್ದವು ..!



39 comments:

  1. ಸುಂದರ ಬರಹ...
    ಪ್ರೀತಿಯ ಬಗ್ಗೆ ಚೆನ್ನಾಗಿ ಬರೆದ್ದಿದ್ದಿರಿ...

    ReplyDelete
  2. ಮನಸ್ಸಿಗೆ ಹತ್ತಿರವಾದ್ ಹುಡುಗಿಯೊಬ್ಬಳು ದೂರದಾಗ .. ಹುಡುಗನ ಮನ್ನಸ್ಸಿನಲ್ಲಿ ನಡೆಯುವ ಕಲಸುಮೇಲೋಗರವನ್ನು
    ಸರಿಯಾಗಿ ಅರ್ಥೈಸಿದ್ದೆ ... ಪ್ರೀತಿಯ ನೆನಪು ಬಹಳ ಚೆನ್ನಾಗಿ ಮೂಡಿ ಬಂದಿದೆ ..
    ಇನ್ನು ನಿನ್ನ " ಬಣ್ಣಗಳ ದೇಶದಲ್ಲಿ " ಕಥೆಯ ನೆನಪು ಮಾಸುವ ಮುನ್ನ ಮತ್ತೊಂದು ಸುಂದರ ಬರಹ ..
    ಯಾಕೊ ಗೊತ್ತಿಲ್ಲ ನಿನ್ನ ಬರಹಗಳು ಬಹಳ ಆಪ್ತವೆನಿಸುತ್ತದೆ ..
    ಮನದ ಮೂಲೆಯಲ್ಲಿ ಎಲ್ಲೋ ನೋಡಿದ, ನಡೆದ ಘಟನೆಗಳು ದುತ್ತೆಂದು ಬಂದು ಬಿಡುತ್ತದೆ ..

    ಹೀಗೆ ಬರೆಯುತ್ತಿರು ...

    ReplyDelete
  3. Sowmya,

    Nimma barahdalli prabhuddhate ide, sundara baraha, bareda vishyagalu ade hale premakatheyadde aadaru niroopana shaili chennagide...Keep writing....

    ReplyDelete
  4. auttama nirooopane........:)..Thanks to social network..!

    ananth

    ReplyDelete
  5. Chennagi bardiddiya...swlpa bere yentha adrru bari maraythi ...manasigge natuvantha baraha but deena onde taste hena

    ReplyDelete
  6. ಸೌಮ್ಯ,
    ಹುಡುಗನ ಮನಸ್ಥಿತಿಯನ್ನು ಅರಿತಾಗಲೇ ಇಂತಹ ಬರಹ ಮೂಡುವುದು...ಸೊಗಸಾಗಿದೆ ಬರಹ...

    ReplyDelete
  7. tumba chennagide soumya:)liked it:)

    ReplyDelete
  8. ಶೈಲಿ, ನಿರೂಪಣೆ ಎಲ್ಲಕ್ಕೂ ಪೂರ್ತಿ ಹತ್ತು ಅಂಕ. ಆದರೆ ಪರಕಾಯ ಪ್ರವೇಶ ಮಾಡಿ ಬರೆದ ಬರಹಗಳು ನನಗೆ ಇಷ್ಟವಾಗುವುದಿಲ್ಲ

    ReplyDelete
  9. ಧನ್ಯವಾದಗಳು ಸುಷ್ಮಾ

    ReplyDelete
  10. ಧನ್ಯವಾದಗಳು ಶ್ರೀ ... e ಸಮುದ್ರ ನಂಗೂ ತುಂಬಾ ಇಷ್ಟ. ಕಥೇಲಿ ಅದು ತಂತಾನೇ ಬಂದು ಕುಳಿತು ಬಿಡುತ್ತದೆ. ಬಣ್ಣಗಳ ದೇಶದಲಿ ನಂದೂ favorite ಕಥೆ. :))

    ReplyDelete
  11. thank u Ashok sir.. :)
    ಹೌದು ಕಥೆ ಹಳೆಯದೇ. ..
    thnak u Anath sir :)) Jai-ho social network :))

    ReplyDelete
  12. ಧನ್ಯವಾದಗಳು ಗಿಳಿಯಾರ್, ಹಿಂದಿನ post full different ಇದೆ .. :))
    Thank u shivu sir .. :)

    ReplyDelete
  13. Thank you Vidya, Ganapathi
    @chukkichandira ಧನ್ಯವಾದಗಳು. ಪರಕಾಯ ಪ್ರವೇಶ ಅಂತಲ್ಲ ಹುಡುಗನ ಮನಸ್ಥಿತಿ ಅಷ್ಟೇ. .ಸಂಪೂರ್ಣ imaginary ಬರಹ ಇದು.

    ReplyDelete
  14. Sowmya -- Brilliant narration. Keep up the good work.

    ReplyDelete
  15. ಹುಡುಗರ ಭಾವನೆಗಳಿಗೆ ತುಂಬಾ ಚೆನ್ನಾಗಿ ರೂಪು ನೀಡಿದ್ದೀರಾ.. Thank you :)

    ReplyDelete
  16. ಮಧುರ ಭಾವನೆಗಳ, ಮಧುರ ನೆನಪುಗಳ ಸುಂದರ ಲೇಖನ! ಮನಸ್ಸಿಗೆ ತಟ್ಟಿತು.

    ReplyDelete
  17. Hey Soumya.. enta patra... kannanchu tevavaguvastu... manassu gujari angadi.. inta salugalu direct touch agutte...

    ಕೂತು ಬರೆದ ಹಾಳೆಯನು ಹರಿದು ಸಮುದ್ರಕ್ಕೆಸೆದು,ಹುಡುಗ ನಡೆಯುತ್ತಿದ್ದ. ಅಲೆಗಳು ಮುಟ್ಟಾಟವ ಆಡುತ್ತ ಕಾಗದದ ಚೂರುಗಳನ್ನು ಮರುಘಳಿಗೆಯೇ ದಡಕ್ಕೆ ತಂದು ಹಾಕುತ್ತಿದ್ದವು ..!

    Wov entaha salugalu..

    ReplyDelete
  18. ಸೌಮ್ಯ...ಚನ್ನಾಗಿದೆ ಭಾವನೆಗಳ ಜೊತೆಗೆ ಪಯಣದ ಚಾರಣ ಕಥನ...ಗುಡ್...

    ReplyDelete
  19. ನೆನಪುಗಳ ಮಾತು ಮಧುರ.... ಅಂತ ಯಾರೊ ಹಾಡಿದ್ದು ಹೌದಾದರೂ, ಕೆಲವೊಮ್ಮೆ ನೆನಪುಗಳು ಅಸ್ಟೆ ಕಹಿಯನ್ನು ತರುತ್ತವೆ.
    "ಹಳೆಯ ನೆನಪುಗಳ ದರ್ಬಾರಿಗೆ ಮನಸ್ಸು ಗುಜರಿ ಅಂಗಡಿ ಆದಂತಿದೆ." ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನನಗೂ ಕೆಲವೊಮ್ಮೆ ಹಾಗೇ ಅನಿಸಿದ್ದಿದೆ. ಮಧುರ ನೆನಪುಗಳಿಗಿಂತ ಕಹಿ ನೆನಪುಗಳು ಮರುಕಳಿಸುವುದೆ ಜಾಸ್ತಿ. "ಹುಡುಗ ಹರಿದೊಗೆದ ಹಾಳೆಯ ಚೂರುಗಳಂತೆ"

    ಎಂದಿನಂತೆ ಇದೂ ಕೂಡ ನಿನ್ನ ಬರವಣಿಗೆಯಲ್ಲಿನ ಪ್ರೌಡತೆಯನ್ನು, ಕಲ್ಪನಾ ಶಕ್ತಿಯನ್ನಾ ಎತ್ತಿ ತೋರಿಸುತ್ತಿದೆ. ಇಂತಹ ಒಂದು ಅದ್ಭುತ ಕಥಾಹಂದರವನ್ನು ನಮ್ಮೆಲ್ಲರ ಮುಂದೆ ಇಟ್ಟಿರುವುದಕ್ಕೆ ಧನ್ಯವಾದ, ಗೆಳತಿ...

    ಇನ್ನು ಮುಂದೆಯೂ ನಿನ್ನ ಬರವಣಿಗೆ ಇದೇ ರೀತಿ ಮೂಡಿಬರಲಿ,
    ಎನ್ನುವ ಆಶಯದೊಂದಿಗೆ,

    ಗೆಳೆಯ,
    ಅನಂತ್ ಹೆಗಡೆ.

    ReplyDelete
  20. ಧನ್ಯವಾದಗಳು ಪ್ರವೀಣ್, ಕಾವ್ಯ, ಅಜಾದ್ ಸರ್, ಹಾಗೂ ಅನಂತ್ :))

    ReplyDelete
  21. ಹುಡುಗನಾಗಿ ನಿರೂಪಿಸಿದ್ದು ಖುಷಿತರುವಂಥದ್ದು, ಚೆನ್ನಾಗಿದೆ, ಶುಭಾಶಯಗಳು

    ReplyDelete
  22. ತುಂಬಾ..ಚೆನ್ನಾಗಿ ಮೂಡಿ ಬಂದಿದೆ..ನನಗೇಕೋ ಅನಿಸಿದ್ದು...ಇದು ನಿನ್ನ ಜೀವನದಲ್ಲಿ ನಡೆದ ಘಟನೆ ಅಂತ.ಮನಸ್ಸಿನ ಭಾವನೆಗಳು ಅಭಿವ್ಯಕ್ತಿಗೊಳ್ಳೋದೇ ಅಲ್ಲಿ.ಪಾತ್ರ ಮಾತ್ರ ಬದಲಾದಂತಿದೆ.ಏನೇ ಇರಲಿ.ಹೃದಯವನ್ನು ಹೊರತೆಗೆಯುವಲ್ಲಿ...ಮೋಡಿ ಮಾಡಿದ್ದೀಯ.ಧನ್ಯವಾದಗಳು..ಸೌಮ್ಯ.

    ReplyDelete
  23. Thanks a lot V.R.Bhat sir :)

    thank u life rocks and Subraymani :)

    ReplyDelete
  24. @ಅನು : ನಾನೊಬ್ಬ ಹುಡುಗನಾಗಿ ಚಿಂತಿಸಿ ಬರೆದದ್ದು. ಇಂಥ ಪತ್ರಗಳನ್ನು ಅದೆಷ್ಟು ಬೇಕಾದರೂ ಬರೆಯಬಲ್ಲೆ.ಆದರೆ ಏಕತಾನತೆ ನನಗೆ ಬೇಜಾರು ಹಿಡಿಸುತ್ತದೆ...
    ಓದುಗರಿಗೆ ಇದು ನನ್ನ ಜೀವದಲ್ಲಿ ನಡೆದದ್ದು ಎಂದು ಎನಿಸಿದರೆ ನನ್ನ imagination powerಗೆ ನಾನೇ ಬೆನ್ನು ಚಪ್ಪರಿಸಿಕೊಳ್ಳಬೇಕು. :)) anyway thanks a lot :))

    ReplyDelete
  25. ಬರಹ ತುಂಬಾ ಚೆನ್ನಾಗಿದೆ , ಭಾವುಕತೆ ಮತ್ತು ಮನದ ತುಮುಲಗಳನ್ನ ಬಹಳ ರಸವತ್ತಾಗಿ ವರ್ಣಿಸಿದ್ದೀರಿ.

    ReplyDelete
  26. ಧನ್ಯವಾದಗಳು ಕೃಷ್ಣಪ್ರಸಾದ್

    ReplyDelete
  27. ಹೇಳೋಕೇನೂ ಇಲ್ಲಾ....
    ಸಕತ್ ಇಷ್ಟಾ ಆಯ್ತು....

    ReplyDelete
  28. ಸುಂದರ ಲೇಖನ,,,,,,ತುಂಬಾ ಚೆನ್ನಾಗಿ ಸೌಮ್ಯರವರೆ.

    ReplyDelete
  29. ಸೌಮ್ಯ ಅವರೆ, ನಿಮ್ಮ ,ಹುಚ್ಚು ಹುಡುಗಿಯ ಹತ್ತೆಂಟು ಪ್ರಶ್ನೆಗಳು, ನಿಜಕ್ಕೂ ಅಥ೯ಪೂಣ೯ವಾದ ಬ್ಲಾಗ್ ಬರೆಯುತಿದ್ದಿರಿ. ಯುವ ಮನಸುಗಳಿಗೆ ಮಾದರಿಯಾಗಿ ನಿಲ್ಲುವ ನಿಮ್ಮ ವಿಚಾರ ಲಹರಿಗಳು ಪ್ರತಿಯೊಬ್ಬ ಸಾಹಿತ್ಯಾಸಕ್ತರಿಗೆ ಇಷ್ಚವಾಗದೇ ಇರಲಾರದು. ನಾನೊಬ್ಬ ಸಾಹಿತ್ಯದ ಹುಚ್ಚು ಪ್ರೇಮಿಯಾಗಿ, ಒಂದಿಷ್ಟು ಕಥೆ, ಕವನಗಳು, ಲೇಖನಗಳು, ಕಾದಂಬರಿ, ಚುಟುಕುಗಳು ಬರೆಯುವ ಆಸಕ್ತಿಯಿಂದ ಐದು ಪುಸ್ತಕಗಳು ಪ್ರಕಟಿಸಿದ್ದೇನೆಂದರೆ ನನಗೆ ನಾನೇ ನಂಬೋಕಾಗ್ತಿಲ್ಲ. ನಿಮ್ಮಂಥ ಸಾಹಿತ್ಯಾಸಕ್ತರು ರಚಿಸುವ ಬ್ಲಾಗ್ ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುವೆ. ಸಾಹಿತ್ಯವೆಂಬ ಸಮುದ್ರದಲ್ಲಿ ಈಜಾಡುವವರಿಗೆ ಈ ಲೋಕ ವಿಭಿನ್ನವಾಗಿ ಕಾಣುತ್ತದೆ ಎಂಬುದಕ್ಕೆ ನಿಮ್ಮ ಬ್ಲಾಗ್ ನೋಡಿದವರಿಗೆ ಗೊತ್ತಾಗುತ್ತದೆ. ಇನ್ನೂ ಹೆಚ್ಚು ಹೆಚ್ಚು ಬರೆಯುತಿರಿ. ನಿಮ್ಮ ಈ ಸಾಧನೆಗೆ ಯಶಸ್ಸು ಖಂಡಿತ. ಬೆಸ್ಟ ಆಫ್ ಲಕ್ ಸೌಮ್ಯ. ನಿಮ್ಮ ಬ್ಲಾಗ್ ನೋಡುವುದಕ್ಕೆ ನಿರಾಳ ಮನಸು, ಒತ್ತಡಗಳಿಲ್ಲದ ಸಮಯದಲ್ಲಿ ನೋಡಿ ಖುಷಿ ಪಡುವಂಥದ್ದು. ನಿತ್ಯವೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

    ವಂದನೆಗಳೊಂದಿಗೆ,

    ವೀರಣ್ಣ ಮಂಠಾಳಕರ್, ಬಸವಕಲ್ಯಾಣ

    ReplyDelete
  30. very good nerration, it is really heart touching

    ReplyDelete
  31. Thanks a lot ವೀರಣ್ಣ ಮಂಠಾಳಕರ್ :)

    ReplyDelete