Tuesday, June 7, 2011

ಮತ್ತೆ ನಕ್ಕಳು ರಾಧೆ

ಬೇಸಿಗೆಯ ಬಿರುಬಿಸಿಲು ಮನದ ಭಾವಗಳನ್ನೇ ಬತ್ತಿಸಿತ್ತೋ ಏನೋ ಗೊತ್ತಿಲ್ಲ ? ಮತ್ತೆ ಮಳೆಗಾಲ ಶುರುವಾಗಿದೆ. ಮನದಲ್ಲಿ ಮತ್ತೆ ಭಾವನೆಗಳ ಜಲಪಾತ. ಯಾವುದೋ ಒಂದು ಘಟನೆಯ ಎಳೆ ಹಿಡಿದು   ಬರೆದ ಒಂದು ಕಥೆ. ಓದಿ ನೋಡಿ ಹೇಗಿದೆ ಹೇಳಿ:

ಅವಳ call ಬಂದಾಗಿನಿಂದ ನನ್ನಲ್ಲಿ ನಾನಿಲ್ಲ. ಮನದಲ್ಲಿ ಅದೇನೋ  ಖುಷಿ, ಅವಳನ್ನು ಎಂದು ನೋಡುವೆನೋ ಎಂಬ ಕಾತರ. ಹೌದು ಹೊನ್ನ ಕೂದಲ ಹುಡುಗಿ ಭಾರತಕ್ಕೆ ಪುನಃ ಬರುವವಳಿದ್ದಾಳೆ. 
 ನನ್ನ ಸಂಭ್ರಮಕ್ಕೆ ಇದಕ್ಕಿಂತ ಬೇರೆ ವಿಷಯ ಬೇಕೇ ?


ಅವಳಿಗಾಗಿ ಒಂದು ಗಿಫ್ಟ್ ಹುಡುಕುತ್ತ ಒಬ್ಬಳೇ ಅಲೆಯಬೇಕು ಎಂದೆನಿಸಿತ್ತು. 'ಮನಸಿಗೆ ಒಮ್ಮೊಮ್ಮೆ ಏಕಾಂತವೇ ಆರಾಮ ಎನಿಸುತ್ತದೆ. ಯಾರನ್ನೋ ಕಳೆದುಕೊಂಡಾಗ, ಅದ್ಯಾರೋ ನೆನಪಾಗುತ್ತಿದ್ದಾಗ'. 'ಹಳೆಯ ನೆನಪುಗಳಿಗೆ ಏಕಾಂತದ ಸಾಥ್ ಇದ್ದರೆ ಅದರ ಅನುಭವವೇ ಬೇರೆ'. ಹಾಗೆ ಅಲೆಯುತ್ತಿರುವಾಗ ನನ್ನ ಮನದಲ್ಲಿ ನೆನಪುಗಳ ಜಾತ್ರೆ........

ಅವಳ, ನನ್ನ ಪರಿಚಯವಾದದ್ದೇ ಲೋಕಲ್ ಬಸ್ಸಿನಲ್ಲಿ. ಅರ್ಧ ಗಂಟೆಯ 'ಮೊದಲ ಪರಿಚಯ', ಗಾಢವಾದ ಸ್ನೇಹವಾಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಮೊದಲ ಪರಿಚಯದಲ್ಲಿ ತಿಳಿದದ್ದಿಷ್ಟೇ, ನ್ಯಾಚುರೋಪಥಿಯ ವಿದ್ಯಾರ್ಥಿನಿ ಅವಳು. ಭಾರತೀಯ ಆಯುರ್ವೇದ, ಯೋಗದ ಬಗ್ಗೆ ಕೇಳಿದ್ದ ಅವಳು. ಯೋಗ ವಿಜ್ಞಾನದ ತವರೂರಾದ ಭಾರತಕ್ಕೆ ವಿದ್ಯೆಯನ್ನು ಹುಡುಕಿ ಬಂದಿದ್ದಳು.

ನಾನಿದ್ದ ರೂಮಿನಿಂದ ಹತ್ತು ಕಿಲೋಮೀಟರುಗಳ ದೂರದಲ್ಲಿ ಅವಳ ರೂಮಿತ್ತು.  ಭಾನುವಾರಗಳು ನಮ್ಮ ಹರಟೆಯ ಕಟ್ಟೆಗಳಾಗಿದ್ದವು. ಬೀಚುಗಳಲ್ಲಿ ಉದ್ದಕ್ಕೆ ನಡೆಯುತ್ತಾ ಮಾತನಾಡುತ್ತಾ ಸಾಗುತ್ತಿದ್ದರೆ ಹೊತ್ತು ಕಳೆದದ್ದೇ ತಿಳಿಯುತ್ತಿರಲಿಲ್ಲ. ತಿಂಗಳುಗಳು ಕಳೆಯುತ್ತಲೇ ನಮ್ಮಲ್ಲಿ ಆತ್ಮೀಯತೆಯೊಂದು ಕಟ್ಟಿತ್ತು. ಇಬ್ಬರೂ ಮಾತಿನ ಮಲ್ಲಿಯರೇ. ಮೊದಮೊದಲು ಸರಿಯಾಗಿ ಅರ್ಥವಾಗದ ಅವಳ ಉಚ್ಚಾರ ದಿನ ಕಳೆದಂತೆ ಅರ್ಥವಾಗತೊಡಗಿತು. bollywood, hollywood ಮೂವಿಗಳು, ನಿಸರ್ಗ, ಅದ್ಯಾವುದೋ ಪುಸ್ತಕ, ಸಂಗೀತ,ಸಂಸ್ಕೃತಿ, ಫ್ಯಾಶನ್  ಇವಿಷ್ಟು ನಮ್ಮ ಹರಟೆಯ ವಿಷಯಗಳಾಗಿದ್ದವು. ಚಿತ್ರಗಳ ವಿಮರ್ಶೆಯನ್ನು ಅತ್ಯದ್ಭುತವಾಗಿ ಮಾಡುತ್ತಿದ್ದಳು. ಸೀದಾ ಸಾದಾ ಉಡುಗೆಯಲ್ಲಿರುತ್ತಿದ್ದ ಅವಳದು, ಸರಳ ಬದುಕಾಗಿತ್ತು.


ಅದೆಷ್ಟೋ ಬಾರಿ 'ಅದ್ಯಾವುದೋ ಜನ್ಮದ ನಂಟಿದೆ ನನಗೆ ಈ ಭಾರತದ ಜೊತೆ. ಇಲ್ಲದಿದ್ದರೆ ಅದೇಕೆ ಬರುತ್ತಿದ್ದೆ ಪಶ್ಚಿಮದ ಆ ತುದಿಯಿಂದ ಇಲ್ಲಿಗೆ. ? ಇಲ್ಲಿನ ಹಲವು ದೇವಾಲಯಗಳನ್ನೆಲ್ಲ ಮೊದಲೆಲ್ಲೋ ನೋಡಿದ್ದೇನೆ ಅನಿಸುತ್ತದೆ. ನನ್ನ ಮನೆಯೂ ಇಲ್ಲೆಲ್ಲೋ ಇರಬೇಕು ಎನಿಸುತ್ತದೆ. 
ಪಶ್ಚಿಮದ ಸಂಸ್ಕೃತಿಗಿಂತ  ಇಲ್ಲಿಯೇ ಅದೇನೋ ಅನುಭವಿಸುವಂಥದ್ದಿದೆ. ಮರೆಯಲಾಗದಂಥದ್ದಿದೆ. ಅದ್ಯಾವುದೋ ಶಕ್ತಿ ನನ್ನ ಇಲ್ಲೇ ಹಿಡಿದಿಟ್ಟುಕೊಂಡಿದೆ. ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ ಎಲ್ಲ ಬೇರೆಯದೇ ಆಗಿರುವ ಈ ನಾಡಿನಲ್ಲಿ, ಹಲವು ವಿದೇಶೀ ವಿದ್ಯಾರ್ಥಿಗಳು ಹೊಂದಿಕೊಳ್ಳಲಾಗದೆ ಓಡಿ ಹೋಗುತ್ತಾರೆ. ನನಗೆ ಅದೇನೂ ಹೊಸದು ಎಂದು ಅನಿಸಲೇ ಇಲ್ಲ ನೋಡು' ಎಂದು ಹೇಳಿದ್ದಳು.

ಶನಿವಾರದ ಸಂಜೆಯ ನನ್ನಅದೆಷ್ಟೋ ಅಲೆದಾಟಗಳಿಗೆ ಜೊತೆಯಾಗಿದ್ದಳು.
ಅವಳ ಜೊತೆಯಿದ್ದಾಗಲೆಲ್ಲ ನನ್ನ ಹುಡುಗಾಟವನನೆಲ್ಲ  ಬಿಟ್ಟು ಗಂಭೀರವಾಗುತ್ತಿದ್ದೆ. ಅವಳ ಜೊತೆ ಕೂತು ಅದೆಷ್ಟು ಸೂರ್ಯಾಸ್ತಗಳನ್ನು ನೋಡಿದ್ದೇನೋ ನೆನಪಿಲ್ಲ. ದಿನಗಳೆದಂತೆ ನನಗೊಬ್ಬ ಅಕ್ಕ, ಮಾರ್ಗದರ್ಶಿ, ಮತ್ತು ಓರ್ವ ಆತ್ಮೀಯ ಸ್ನೇಹಿತೆಯನ್ನು ಅವಳಲ್ಲಿ ಕಂಡಿದ್ದೆ. ನನ್ನ ಗಂಭೀರ ಮುಖವಾಡವ ಕಳಚಿ ಮಾಮೂಲಿ ತುಂಟ  ಹುಡುಗಿಯಾಗಿದ್ದೆ.  ಅವಳಲ್ಲಿ  ಹಠ  ಮಾಡುತ್ತಿದ್ದೆ,   ಜಗಳವಾಡುತ್ತಿದ್ದೆ. ಆದರೆ  ಅದೆಲ್ಲೂ ಬೇಸರದ ಛಾಯೆಯೇ ಕಾಣುತ್ತಿರಲಿಲ್ಲ ಅವಳಲ್ಲಿ.


ಒಮ್ಮೆ ಸಮುದ್ರದ ದಡದಲ್ಲಿ ಉದ್ದಕ್ಕೆ ನಡೆವಾಗ ಸುಮ್ಮನೆ "ಅದೆಷ್ಟು  ಕಾಡುತ್ತೇನೆ  ನಾನು  ಆದರೂ ಒಂದು ಚೂರು ಸಿಡುಕುವುದಿಲ್ಲವಲ್ಲೇ ..."ಎಂದಿದ್ದೆ. ಅದಕ್ಕವಳು, ತನ್ನ ಕಡು ಹಸಿರು ಬಣ್ಣದ ಕಣ್ಣುಗಳನ್ನು ಚಿಕ್ಕದಾಗಿಸಿ ನಕ್ಕು ಬಿಟ್ಟಳು. ಮುಂದುವರಿದು .. "ಅದೆಲ್ಲೋ ಇಂಥದ್ದೇ ಸಂಬಂಧಗಳ ಹುಡುಕಿಯೇ ಇರಬೇಕು ನಾನು ಇಲ್ಲಿಯವರೆಗೆ ಬಂದದ್ದು. ಈಗ ಅನಿಸುತ್ತಿದೆ. I love you ಎಂದು ಅದೇನು ಭಾವನೆಗಳೇ ಇಲ್ಲದೇ ಯಾಂತ್ರಿಕವಾಗಿ ಹೇಳುವ ಜನರ ಮಧ್ಯೆ ಇದ್ದು ಅದೇನೆಲ್ಲ ಕಳೆದುಕೊಂಡಿದ್ದೆ ಎಂದು. ನಾವು ಯಾರ ಜೊತೆ ಮಗುವಂತೆ ಹಠ ಮಾಡುತ್ತೇವೆ? ಹೇಳು .. ಯಾರನ್ನು ನಮ್ಮವರೆಂದು ಭಾವಿಸುತ್ತೇವೋ. ಅವರಲ್ಲಿ ಅಲ್ಲವೇನೆ ? ಅದ್ಯಾರೋ ದಾರಿಹೋಕರ ಮೇಲೆ ಯಾರೂ ಸಿಟ್ಟು ಮಾಡುವುದಿಲ್ಲ, ಹುಚ್ಚಿ... ನೀನು ಸಿಟ್ಟು ಮಾಡಿಕೊಂಡಾಗಲೆಲ್ಲ ನನಗೆ ಖುಷಿಯಾಗಿದೆ. ಮನದಲ್ಲಿ ಅದೇನನ್ನೋ ಬಚ್ಚಿಟ್ಟುಕೊಂಡು ಹೊರಗಡೆ ಮುಖವೂದಿಸಿಕೊಂಡಿದ್ದಾಳೆ ಎಂದು ನಕ್ಕಿ ಬಿಟ್ಟಿದ್ದೇನೆ. ನಿಜ ಹೇಳಲಾ ನನ್ನ ಮೇಲೆ ಹೀಗೆ ಯಾರೂ ಮುನಿಸಿಕೊಂಡಿರಲಿಲ್ಲ. 'ಪ್ರೀತಿಯ ಇನ್ನೊಂದು ಮುಖ ಸಿಟ್ಟು' ಗೊತ್ತಿಲ್ಲವೇನೇ ನಿನಗೆ? ತಾನೇ ಸಾಕ್ರಟೀಸನ ಮೊಮ್ಮಗಳೆ೦ಬಂತೆ 
ಬೇರೆಯದಕ್ಕೆಲ್ಲ ಇಷ್ಟುದ್ದದ ಭಾಷಣ ಕೊಡುತ್ತೀಯಲ್ಲ." ಎಂದು ಮತ್ತೊಮ್ಮೆ ತನ್ನ ಹಸಿರು ಕಂಗಳ ಚಿಕ್ಕದಾಗಿಸಿಕೊಂಡಿದ್ದಳು.
 ನನ್ನ ತಲೆಗೊಂದು ಮೊಟಕಿದ್ದಳು. 

ಶಿವರಾಮ ಕಾರಂತ ರಸ್ತೆಯ ಕೊನೆಯಲ್ಲಿದ chats ಅಂಗಡಿಯಲ್ಲಿ ಪಾನಿಪುರಿಯನ್ನು ತಿಂದು. ತಮ್ಮ ತಮ್ಮರೂಮಿಗೆ ಸಾಗುತ್ತಿದ್ದೆವು. ಇವು ನಮ್ಮ ವರ್ಷಗಟ್ಟಲೆ ಭಾನುವಾರದ ರುಟೀನುಗಳಾಗಿದ್ದವು.

 ಹೀಗೆ ಒಮ್ಮೆ ನನ್ನ ರೂಮಿಗೆ ಬಂದಿದ್ದಳು ಹುಡುಗಿ. ನನ್ನ ರೂಮಿನಲ್ಲಿ ISKCON ಬಾಲ ಕೃಷ್ಣನ ಫೋಟೋ ಒಂದಿದೆ. ಕಿಟಕಿಯ ಬಳಿ ಗಲ್ಲಕ್ಕೆ ಕೈ ಹಚ್ಚಿ ಕುಳಿತಿರುವ ತು0ಟ ಕಂಗಳ ಕೃಷ್ಣನ ಫೋಟೋ ಅದು. ರೂಮಿಗೆ ಅಡಿ ಇಟ್ಟವಳೇ. "Hey ..who is this cute guy.. look at his eyes.. so attractive.. " ಎನ್ನುತ್ತಾ ಆ ಫೋಟೋದ ಬಳಿಗೆ ಸಾಗಿದ್ದಳು. ಬಹಳ ಹೊತ್ತು ಅವನನ್ನೇ ನೋಡುತ್ತಿದ್ದಳು. "ಎಲಾ ಇವಳಾ ಭಾರತಕ್ಕೆ ಬಂದು.. ಭಾರತೀಯ ದೇವರಿಗೆ ಲೈನ್ ಹೊಡೀತಾಳಲ್ಲ, ಎಂದು ಮನದಲ್ಲೇ ನಗುತ್ತ. "ಹ್ಞೂ ನಂಗೂ ತುಂಬಾ ಇಷ್ಟ ಈ ಫೋಟೋ, ಕೃಷ್ಣನ ಆ ಕಣ್ಣುಗಳಲ್ಲಿನ ಮುಗ್ಧತೆ ಮತ್ತು ಕುತೂಹಲ ಇರಡೂ
 ಇಷ್ಟ ಎಂದಿದ್ದೆ". ಹೌದೆಂದು ಒಪ್ಪಿಕೊಂಡಿದ್ದಳು.

ಇದರ ನಡುವೆ ನಾನು ಬ್ಯುಸಿಯಾಗಿಬಿಟ್ಟಿದ್ದೆ  ಒಮ್ಮೆ ಸೆಮಿನಾರ್, ಪರೀಕ್ಷೆ  ಹಾಗೂ assignments ಗಳೆಂದು. ಸಿಗದೇ ಹಲವು ಭಾನುವಾರಗಳೇ 
ಕಳೆದು ಹೋಗಿದ್ದವು. ಮೂರ್ನಾಲ್ಕು ಸಲ ಹೊನ್ನ ಕೂದಲ ಹುಡುಗಿಯ 
ನೆನಪಾಗಿ, ಫೋನ್ ಮಾಡಿ ಸಿಗಲು ಹೇಳಿದರೆ, ಹುಷಾರಿಲ್ಲ ಎಂಬ ನೆವ ಹೇಳಿದಳು. ಯಾಕೋ ಏನೋ ಎಲ್ಲ  ಸರಿ ಇಲ್ಲ ಎನಿಸಿತ್ತು.

ಓಣಂ ರಜೆಯ ದಿನಗಳವು. ಇಬ್ಬರಿಗೂ ಮೂರು ದಿನ ರಜೆಯಿತ್ತು. ಫೋನಾಯಿಸಿ "ನಿಮ್ಮ ಊರಿಗೆ ಕರೆದುಕೊಂಡು ಹೋಗೇ" ಎಂದುಬಿಟ್ಟಳು. "ತುಂಬಾ ಮಾತನಾಡಬೇಕು ನಿನ್ನ ಹತ್ರ "ಎಂದವಳಲ್ಲಿ  ಟ್ರೈನ್ ಹತ್ತಿದರೂ ಮಾತಿಗೆ ಬರಗಾಲ. ಕಿಟಕಿಗೆ ಮುಖವಿಟ್ಟು ಕುಳಿತವಳಿಗೆ ಇಹದ ಪರಿವೆ ಇದ್ದ ಹಾಗೆ ಕಾಣಲಿಲ್ಲ. ನಾನೂ ಅದ್ಯಾವುದೋ ಪುಸ್ತಕವ ತೆರೆದು ಓದತೊಡಗಿದ್ದೆ. ಒಂದು ಅರ್ಧ ಗಂಟೆ ಕಳೆದಿರಬೇಕು. ಥಟ್ಟನೆ "ಸು...ರಾಧೇ ಯಾರು?" ಎಂದು ಕೇಳಿದ್ದಳು. "ನನ್ನ ಅತ್ತೆ.." ಅಂದಿದ್ದೆ ನನ್ನ 'ಇಪ್ಪತ್ತೆಂಟು ವರೆ' ಹಲ್ಲುಗಳನ್ನೆಲ್ಲ ತೋರಿಸುತ್ತ. ಹುಡುಗಿ ನಗಲೇ ಇಲ್ಲ.! ವಿಷಯ ಸೀರಿಯಸ್ಸಾಗಿದೆ ಎಂದುಕೊಂಡೆ. ಎದುರಿನ ಸೀಟಿನಿಂದ ಎದ್ದು ಅವಳ ಪಕ್ಕಕ್ಕೆ ಹೋಗಿ ಕುಳಿತೆ. ನನ್ನ ಎಡಗೈ ಕಿರಿಯ ಬೆರಳನ್ನು ತನ್ನ ಬಲಗೈ ಕಿರಿಯ ಬೆರಳಲ್ಲಿ ಹಿಡಿದಳು. "ಮಳೆ ಬರಬೇಕಿತ್ತು ಒಂದು.." ಎಂದಳು. ಅರೆರೆ ಈ ಹುಡುಗಿಗೆ ಏನಾಗಿದೆ?  ಬಿರುಬಿಸಿಲಿನ ಮಧ್ಯಾಹ್ನದಲ್ಲಿ ಮಳೆಯನ್ನೇಕೆ ಕರೆಯುತ್ತಿದ್ದಾಳೆ?


ಅದೇನಾಗಿದೆ? ನಿನಗೆ ಎಂದು ಕೇಳಿದ್ದಕ್ಕೆ "ಮಳೆ ಸುರಿಯಬೇಕು ಸು.... ಭೂಮಿಯೆಲ್ಲ ಒದ್ದೆಯಾಗಬೇಕು, ಜೊತೆಗೆ ಮನಸು ಕೂಡ". ಎಂದಾಗ ಅವಳ ಕಣ್ಣಲ್ಲಿನ ಭಾವನೆಯನ್ನು ಅರಿಯಲು ಹೋಗಿ ವಿಫಲವಾಗಿದ್ದೆ.


ನಮ್ಮ ಮನೆಗೆ ಹೋದ ತಕ್ಷಣ ಉತ್ಸಾಹದ ಚಿಲುಮೆಯಾಗಿದ್ದಳು ಮತ್ತೆ.  ಅದೆಲ್ಲಿಯದೋ ಹಲವು ವರುಷಗಳ  ಪರಿಚಯದವರಂತೆ 
ಅಡುಗೆ ಕಟ್ಟೆಯ ಮೇಲೆ ಕುಳಿತು ಅಮ್ಮನ ಹತ್ತಿರ ಪಟ್ಟಾಂಗ ಹೊಡೆದಳು. ಅಜ್ಜಿಯ ಮನೆಗೆ ಕರೆದು ಕೊಂಡು ಹೋದಾಗ ಅವಳದೇ ಆದ ಹರಕು ಕನ್ನಡದಲ್ಲಿ "ಆಜಿ ನನಗೆ special ಅವಲಕಿ ಬೆಕು" ಎಂದು. ನಾನು ಆಗಾಗ ಹೇಳುತ್ತಿದ್ದ ಒಗ್ಗರಣೆ ಅವಲಕ್ಕಿಯನ್ನು ಮಾಡಿಸಿಕೊಂಡು ಚಪ್ಪರಿಸಿದಳು. ನಾನೂ ಅದೇನನ್ನೂ ಕೇಳಲು ಹೋಗಿರಲಿಲ್ಲ. ಅವಳ ಪಾಡಿಗೆ ಅವಳ ಬಿಟ್ಟುಬಿಟ್ಟಿದ್ದೆ.


ಹೊರಡುವ ಹಿಂದಿನ ದಿನದ ಸಂಜೆ ಹೊಳೆದಂಡೆಯ ಅಂಚಿನಲ್ಲಿ ಕುಳಿತಿದ್ದಾಗ. "ಹೇಳೇ ಸು ...ಅದ್ಯಾರೆ ಆ ರಾಧೇ? ನಿನ್ನ ರೂಮಿನಲ್ಲಿ ಚಿತ್ರದಲ್ಲಿರುವ ಆ ಮುದ್ದು ಪೋರನ girl friend ಅಂತೆ ಹೌದಾ? "ಅಂದಾಗ ನಕ್ಕು ಬಿಟ್ಟಿದ್ದೆ. ಹೌದೆಂದು ತಲೆಯಾಡಿಸಿದ್ದೆ.


ಒಮ್ಮೆ ಆಗಸವ ದಿಟ್ಟಿಸಿ ರಾಧೆಗೆ ದನಿಯಾದೆ, " ರಾಧೇ......ರಾಧೆಯೇ ... ಅವಳಿಗೆ ಉಪಮೆಗಳಿಲ್ಲ. ಹಲವು ಹೆಣ್ಣುಗಳ ಪ್ರತಿರೂಪಿ ಅವಳು,ಅವರ  ಮೌನದ ಮಾತು ಅವಳು. ಅದೆಲ್ಲ ಫೋಟೋಗಳಲ್ಲಿ  
ರುಕ್ಮಿಣಿ ಸತ್ಯ ಭಾಮೆಯರ ಜಾಗವನ್ನು ಕಿತ್ತುಕೊಂಡವಳು. ಕೃಷ್ಣನ ಜೀವದ ಗೆಳತಿ. ಅವರ ಪ್ರೀತಿಗೆ ವಯಸ್ಸಿನ ನಿರ್ಬಂಧವಿರಲಿಲ್ಲ. ಕೃಷ್ಣನೂ ಅವಳ ಕೊಳಲ ಉಸಿರಾಗಿ ಪ್ರೀತಿಸಿದ. ರಾಧೆಯಿಲ್ಲದ ಕೃಷ್ಣ ಅಪೂರ್ಣ. ರಾಧೆಯ ಪ್ರೀತಿ ಕೃಷ್ಣನ ಕೊಳಲ ಧ್ವನಿಯಂತೆ, ನವಿಲ ಗರಿಯಂತೆ. ಅವಳೆಂದೂ ತನ್ನ ಮದುವೆ ಆಗೆಂದು ಕೃಷ್ಣನ ಕೇಳಲಿಲ್ಲ. ಮುಗುಮ್ಮಾಗಿ ಪ್ರೀತಿಸಿದಳು. ಅವನಿಗಾಗಿ ಕಾದಳು. ಜಗದ ಜನರ ಪರಮಾತ್ಮ, ಅವಳ ಪ್ರಿಯತಮ. ಅವನ ಭುಜವೇ ಅವಳ ಜಗತ್ತು. ಅವನ ಕೊಳಲ ಗಾನವೇ ಅವಳ ಉಸಿರು. ಪ್ರೀತಿಯೆಂದರೆ ನನಗೆ ಎಂದೂ ಲೈಲಾ-ಮಜನೂ ನೆನಪಾಗುವುದಿಲ್ಲ. ಹಲವು ಸಾಹಸಗಳ ಮಾಡಿ ಮದುವೆಯಾದವರು ನೆನಪಾಗುವುದಿಲ್ಲ. ನನ್ನ ಪಾಲಿಗೆ ಪ್ರೀತಿಯೆಂದರೆ ನೆನಪಾಗುವುದು ಕೃಷ್ಣ -ರಾಧೆಯರು. ಅವರಿಬ್ಬರ ಪ್ರೀತಿ ಅಗಾಧ ಪ್ರೀತಿಯ ಸಂಕೇತ...." ಹೀಗೆ ಸಾಗಿತ್ತು ನನ್ನ ಮಾತು. ಅದ್ಯಾಕೋ ಹುಡುಗಿಯ ಮುಖವನ್ನೊಮ್ಮೆ ನೋಡಿದ್ದೆ ಮಧ್ಯೆ. ಕಣ್ಣಲ್ಲಿ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು. ನನ್ನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಪುಟ್ಟ ಮಗುವಂತೆ ಅತ್ತು ಬಿಟ್ಟಿದ್ದಳು. ಹದಿನೈದು ನಿಮಿಷಗಳು ಕಳೆದಿರಬೇಕು.


ತಲೆ ಎತ್ತಿದ ಹುಡುಗಿ "ಇನ್ನು ಕೆಲವು ತಿಂಗಳುಗಳು ಸು.. ಕೊನೆಗೆ ನನ್ನ ದೇಶದ ದಾರಿ ಹಿಡಿಯಬೇಕು ನಾನು. ನನಗಾಗಿ ಕಾದ ಅಮ್ಮನಿದ್ದಾಳೆ ಅಲ್ಲಿ. ಇಲ್ಲಿಗೆ ಬಂದ ಮೇಲೆ ನನ್ನ ಅಮ್ಮನ ಬಹಳ ಮಿಸ್ ಮಾಡಿದ್ದೇನೆ" ಎನ್ನುತ್ತಾ ಕಣ್ಣು ಒರೆಸಿಕೊಂಡಳು.


ಥಟ್ಟನೆ ನನ್ನತ್ತ ತಿರುಗಿ "ನನ್ನಲ್ಲೂ ಓರ್ವ ರಾಧೆಯಿದ್ದಾಳೆ ಸು.... ನನಗೂ ಒಬ್ಬ ನನ್ನ ಇಷ್ಟದ ಕೃಷ್ಣ ಸಿಕ್ಕಿದ್ದಾನೆ. ಬಾಯಿ ಬಿಟ್ಟು ಒಮ್ಮೆಯೂ ನನ್ನ ಬಳಿ I love you.. ಎನ್ನದ. ತನ್ನ ಕಣ್ಣಲ್ಲೇ ಪ್ರೀತಿಯ ವರ್ಷಧಾರೆಹರಿಸುವ 
ಹುಡುಗನೊಬ್ಬ ಸಿಕ್ಕಿದ್ದಾನೆ. ನನಗಿಂತ ಸಣ್ಣವ. ನನ್ನದೇ ಜೂನಿಯರ್. 
ಅವನು ನಮ್ಮ ಕಾಲೇಜಿಗೆ ಸೇರಿದಾಗಿನಿಂದ ಸ್ನೇಹಿತರು ನಾವು. 
ಆದರೆ ಇತ್ತೀಚಿಗೆ ಯಾಕೋ ಅವನ ಬಿಟ್ಟಿರುವುದರ ನೆನೆಸಿಕೊಂಡರೆ
 ಕಣ್ಣೀರು ಹರಿಯುತ್ತದಲ್ಲೇ". "ಅದೇ ನೀನು ಆಗಾಗ ಹೇಳುತ್ತಿದ್ದ ಕೊಳಲು 
ಊದುವ  ಕನಸು ಕಂಗಳ ಹುಡುಗನಾ?"  ಎಂದು ಕೇಳಿದ್ದೆ. " ಹ್ಞೂ..... ಅವನೇ....  ಅವನ ಕೊಳಲ ಧ್ವನಿ,  ಅವನ ಕಣ್ಣುಗಳೇ ಹೇಳುತ್ತವೆ ಅವನೆಷ್ಟು ನನ್ನ ಪ್ರೀತಿಸುತ್ತಾನೆ ಎಂದು. ಮೊನ್ನೆ ಮೊನ್ನೆ ಕಾಲೇಜಿನ ವಾರ್ಷಿಕ ಉತ್ಸವಕ್ಕೆ ಸೀರೆ ಉಟ್ಟಿದ್ದೆ. ಮದರಂಗಿಯ ರಂಗು ತುಂಬಿದ್ದ ನನ್ನ ಕೈ ತುಂಬಾ ನವಿಲು ಬಣ್ಣದ ಬಳೆಗಳು.ಅವನೇ ಕೊಡಿಸಿದ್ದು. ಅವನಿದ್ದಲ್ಲಿಗೆ 
ಹೋಗಿ ಹೇಗೆ ಕಾಣುತ್ತಿದ್ದೇನೆ ಎಂದು ಕೇಳಿದರೆ ಕಣ್ಣಲ್ಲಿ ಕಣ್ಣಿಟ್ಟು ಮುಗುಳ್ನಕ್ಕ.
ಸಂಜೆ ಸಿಕ್ಕಿದ್ದ ಹುಡುಗ 'ರಾಧೆ ಯಾರು ಗೊತ್ತೇನೇ? ನಿನ್ನ ನೋಡಿ ರಾಧೇ ನಿನ್ನ ಹಾಗೆ ಇದ್ದಿರಬಹುದು ಎನಿಸಿಬಿಡ್ತು .' ಎಂದಿದ್ದ.

I love you ಅನ್ನುವುದರೊಂದಿಗೆ ಶುರುವಾಗಿ, live- in, ಮಕ್ಕಳು, ಮದುವೆ, ಎಂಬ ಹಂತಗಳನ್ನು ದಾಟಿ divorceನಲ್ಲಿ ಮುಗಿಯುವ ಪ್ರೀತಿ ಸಾಕಾಗಿದೆ ನನಗೆ. ಜೀವನ ಕೊನೆಯವರೆಗೂ ಮಧುರ ಅನುಭವವಾಗಿ ಕಾಣುವ, ಕಾಡುವ ಪ್ರೀತಿಯೊಂದು ಬೇಕೆನಿಸಿದೆ. 

ನನಗೊತ್ತು ಅವನೊಂದಿಗೆ ಮದುವೆಯಾಗುವ, ಜೀವನದ ಕೊನೆಯವರೆಗೂ 
ಬದುಕುವ ಕನಸು ಕಾಣುವಂತಿಲ್ಲ. ಪಕ್ಕಾ ಸಂಪ್ರದಾಯಸ್ತ ಮನೆತನದ 
ಭಾರತೀಯ ಅವನು. ಬಹಳ ಸೂಕ್ಷ್ಮ ಹುಡುಗ ಆತ. ಅವನ ಕೊಳಲ ಧ್ವನಿ. ಅವನ ಪ್ರೀತಿ ಸುರಿಸುವ ಕಂಗಳು ಸಾಕು. ಒಂದಿಷ್ಟು ನೆನಪುಗಳು ಸಾಕು ನನಗೆ. ಈ ಭರತ ಭೂಮಿಗೆ ಬಂದು ನನ್ನ ವೃತ್ತಿಶಿಕ್ಷಣವನ್ನಷ್ಟೇ ಅಲ್ಲ, ಬದುಕಿನ ಬೇಕಾದ ಹಲವು ಪಾಠಗಳನ್ನು ಕಲಿತೆ. 'ಪ್ರೀತಿ' 
ಎನ್ನುವುದಕ್ಕೆ ಹೊಸ ವ್ಯಾಖ್ಯೆ, ಅನುಭವ ಎಲ್ಲವನ್ನು 
ಹುಡುಕಿಕೊಂಡೆ. ಏನನ್ನು ಹುಡುಕಿ ಬಂದಿದ್ದೇನೋ ಅದೆಲ್ಲವನ್ನು ಈ ಭೂಮಿ ಕೊಟ್ಟಿದೆ".  ಎಂದು ತನ್ನ ಉದ್ದದ ಮಾತನ್ನು ಮುಗಿಸುತ್ತಾ ನನ್ನ ಮುಖ ನೋಡಿದ್ದಳು.

ಅದೇನು ಹೇಳಬೇಕೆಂದೇ ತಿಳಿದಿರಲಿಲ್ಲ ಆ ಕ್ಷಣಕ್ಕೆ. ಸುಮ್ಮನೆ  ಮೌನವನ್ನು ನನ್ನ ಮಡಿಲಲ್ಲಿ  ಕೂರಿಸಿಕೊಂಡಿದ್ದೆ. 'ಕೆಲವೊಂದು ಕ್ಷಣಗಳಿಗೆ 
ಮೌನವನ್ನು ಬಿಟ್ಟರೆ ಬೇರೆ ಯಾವುದೂ ಸರಿ ಹೊಂದುವುದಿಲ್ಲ'.

ಅಲ್ಲಿಂದ ಕೆಲವು ತಿಂಗಳುಗಳು ಸರಿದದ್ದೇ  ತಿಳಿಯಲಿಲ್ಲ. ಅವಳು ಹೊರಡುವ ದಿನವೂ ಹತ್ತಿರ ಬಂದಿತ್ತು.

ಕಣ್ಣಲ್ಲಿ ನೀರು ತುಳುಕಿಸುತ್ತ ನಿಂತಿದ್ದ ಹೊನ್ನ ಕೂದಲ ಹುಡುಗಿಗೆ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿದ್ದೆ. " ಜೀವನವು ನಿಂತ ನೀರಲ್ಲ ಗೆಳತೀ, ನಿನ್ನಂತ ಜೀವನ್ಮುಖಿಯ ಕನಸುಗಳೆಲ್ಲ ಅರಳಲಿ." ಎಂದು ವಿದಾಯ ಹೇಳಿದ್ದೆ.

ಈಗ ಬರೋಬ್ಬರಿ ಮೂರು ವರುಷಗಳ ನಂತರ ತಿರುಗಿ ಬರುತ್ತಿದ್ದಾಳೆ. 
ಹೊನ್ನ ಕೂದಲ ಹುಡುಗಿಗಾಗಿ ಕಣ್ಣಂಚಿಗೆ ಕುತೂಹಲದ ಕಾಡಿಗೆಯ ಹಚ್ಚಿ ಕಾದಿದ್ದೆ. ಇಷ್ಟೆಲ್ಲಾ ನೆನಪಾಗುವ ಹೊತ್ತಿಗೆ  ರಸ್ತೆಯಂಚಿನ  ಕ್ರಾಫ್ಟ್ 
ಅಂಗಡಿಯೊಂದರಲ್ಲಿ ನನ್ನ  ಕಣ್ಣಿಗೆ ಚೆಂದ ಅನಿಸುವ ಕಲಾಕೃತಿಯೊಂದು ಕಂಡಿತ್ತು. ಇದೆ ಸರಿ ಎಂದು ಪ್ಯಾಕ್ ಮಾಡಿಸಿದೆ.

ಕೊನೆಗೂ ಅವಳ ಮತ್ತೊಮ್ಮೆ ಕಾಣುವ  ದಿನ ಬಂದೇ ಬಿಟ್ಟಿತು. ಅವಳಿಗಾಗಿ 
ಕಾದಿದ್ದೆ, ಉಡುಗೊರೆಯೊಂದಿಗೆ. ನೀಲಿ ಬಣ್ಣದ ಕುರ್ತಾದಲ್ಲಿದ್ದ ಅವಳು ದೂರದಿಂದಲೇ ಕೈಬೀಸಿ ನಗುತ್ತ ಓಡೋಡಿ ಬರುತ್ತಿದ್ದಳು. ಕೈ ತುಂಬಾ ಬಳೆಗಳು. ಅದೇ ನವಿಲು ಬಣ್ಣದ ಬಳೆಗಳು.  ಓಡಿ ಬಂದು ನನ್ನ ಬಿಗಿದಪ್ಪಿದ್ದಳು. ದೂರದಲ್ಲಿ ಬರುತ್ತಿದ್ದ ಆಜಾನು ಬಾಹುವಿನತ್ತ ತೋರಿಸಿ " ನೋಡು ಅವನು ನನ್ನ ಗಂಡ, ಭಾರತದಲ್ಲೇ ಆಯುರ್ವೇದವ ಕಲಿತದ್ದು. ಕೊಳಲನ್ನು ಅದ್ಭುತವಾಗಿ ಬಾರಿಸುತ್ತಾನೆ. ನೋಡು ನನ್ನ ಕೈಗೆ ಮದರಂಗಿಯನ್ನೂ ಹಚ್ಚಿದ್ದಾನೆ." ಎಂದು ಒಂದೇ ಉಸಿರಲ್ಲಿ ಹೇಳಿ ಬಿಟ್ಟಳು. ಮುಖದಲ್ಲಿ ಸಂತಸ ಹಾಯಿ ದೋಣಿಯಂತೆ ಸಾಗಿತ್ತು.

ಆಜಾನುಬಾಹು ಹತ್ತಿರ ಬಂದು ಕೈಜೋಡಿಸಿ "ನಮಸ್ತೆ" ಎಂದ. ಕುರುಚಲು ಗಡ್ಡದ ಕೋಲು ಮುಖದವನ ನೀಲಿ ಕಂಗಳಲ್ಲಿ ಅದೇನೋ ತೇಜಸ್ಸು ಇದ್ದಂತೆ ಕಂಡಿತು. ಉಡುಗೊರೆಯನ್ನು ಇಬ್ಬರ ಕೈಯಲ್ಲಿಟ್ಟೆ. ಸುಂದರವಾದ ರಾಧ ಕೃಷ್ಣರ ವಿಗ್ರಹ ಅದು. ಆಜಾನುಬಾಹು "ಓಹ್ ರಾಧಾ-ಕೃಷ್ಣ ತುಂಬಾ ಸುಂದರವಾಗಿದೆ. ಪ್ರೀತಿಗೆ ಇನ್ನೊಂದು ಹೆಸರು ಇವರಿಬ್ಬರು ..!"ಎಂದ.

ಹುಡುಗಿ ತನ್ನ ಕೈಯಲ್ಲಿದ್ದ ನವಿಲ ಬಣ್ಣದ ಬಳೆಗಳಲ್ಲಿ ಎರಡು ಬಳೆಗಳನ್ನು ತೆಗೆದು. ವಿಗ್ರಹದಲ್ಲಿದ್ದ ರಾಧೆಯ ಕೈಗಿಟ್ಟಳು. ನನ್ನ ಮುಖ ನೋಡಿದಳು. ಹಸಿರು ಕಣ್ಣುಗಳಲ್ಲಿ ಹಿಂದಿನದೆಲ್ಲ ನೆನಪಾದಂತೆ ಕಂಡಿತು ನನಗೆ.  ಅವಳು "ಹಸಿವಾಗುತ್ತಿದೆ ನಡೀ 'ಪ್ರಿಯದರ್ಶಿನಿ'ಗೆ ಹೋಗೋಣ. ಎಂದು 
ನನ್ನ ಕೈ ಹಿಡಿದು ಎಳೆಯುತ್ತಿದ್ದರೆ. ಆಜಾನುಬಾಹು ಕಣ್ಣಲ್ಲೇ ನಗುತ್ತಿದ್ದ. ರಾಧೆ ನವಿಲು ಬಣ್ಣದ ಬಳೆಗಳನ್ನೇ  ನೋಡುತ್ತಿದ್ದಳು, ನಗುತ್ತಿದ್ದಳು. !

30 comments:

  1. ELLO ODIDA HAGIDE... IDU MARU PRASAARADA KATHEYEE.... ADARE AVAAGALU ISHTAVAAGITTU MATTU IGALU....

    ReplyDelete
  2. photo da jotege kathe helida reeti ishta ayitu.. nija.. bisilige onagida manasu bhavada maleyalli minda haage ayitu.. cholo baradde soumya

    ReplyDelete
  3. itz nice !!really Indian culture is so good....

    ReplyDelete
  4. Estu chenda baritiri Soumya.. nice

    ReplyDelete
  5. ನಾನಿಷ್ಟ ಪಡುವ ರಾಧಾ ಕೃಷ್ಣರೇ ಲೇಖನದ ತುಂಬೆಲ್ಲಾ ಸುಳಿದರಲ್ಲಾ.....
    ತುಂಬಾ ಖುಷಿಯಾಯ್ತು.....
    ಸಂಸ್ಕೃಯ ಹಿರಿಮೆಯ ಜೊತೆ ಕೊಟ್ಟ ಭಾವದ ರಂಗು ಮನಸ್ಸನ್ನು ಸೇರಿ
    ಏನೋ ಅರಿಯದ ಆನಂದ ನೀಡ್ತು...
    its too good...

    ReplyDelete
  6. very nice lines... good wordings...

    ReplyDelete
  7. ಎಂದಿನಂತೆ ಸೂಪರ್..............

    ReplyDelete
  8. yaavde apekshegalillada nija preetiya prateekave RADHE!! tumba chennaagi bandide baraha Soumya..Keep writing!

    ReplyDelete
  9. 'ಕೆಲವೊಂದು ಕ್ಷಣಗಳಿಗೆ
    ಮೌನವನ್ನು ಬಿಟ್ಟರೆ ಬೇರೆ ಯಾವುದೂ ಸರಿ ಹೊಂದುವುದಿಲ್ಲ'.
    ಇದಕ್ಕಿಂತ ಒಳ್ಳೆಯ comment ನಂಗೆ ಸಿಗ್ತಾ ಇಲ್ಲ...

    ReplyDelete
  10. ಭಾವನೆಗಳನ್ನು ತೀವ್ರವಾಗಿ ಬರೆಯುವ ಕಲೆ, ನಿಮಗೆ ಸಿದ್ಧಿಸಿದೆ ಮೇಡಂ. ಅಂತರಂಗದಲ್ಲಿ ಧ್ಯಾನಿಸುವ ಚಿಂತನೆಯನ್ನು ಅಕ್ಷರಗಳಿಗೆ ಇಳಿಸುವಾಗ, ಇಷ್ಟು ಸ್ಪಷ್ಟತೆ ಬರುವುದು ಅಪರೂಪ. ಶಭಾಷ್!

    ಅಂತ ಸರಳೆ ರಾಧೆಗೂ ಅಷ್ಟು ಕಾಡುವನಲ್ಲ, ಆ ನಲ್ಲ ಪರಮಾತ್ಮ ಕೃಷ್ಣ! ಏನಪ್ಪ ನಿನ್ನ ಲೀಲೆ?

    ReplyDelete
  11. 'ಮನಸಿಗೆ ಒಮ್ಮೊಮ್ಮೆ ಏಕಾಂತವೇ ಆರಾಮ ಎನಿಸುತ್ತದೆ. ಯಾರನ್ನೋ ಕಳೆದುಕೊಂಡಾಗ, ಅದ್ಯಾರೋ ನೆನಪಾಗುತ್ತಿದ್ದಾಗ'. 'ಹಳೆಯ ನೆನಪುಗಳಿಗೆ ಏಕಾಂತದ ಸಾಥ್ ಇದ್ದರೆ ಅದರ ಅನುಭವವೇ ಬೇರೆ'
    really love this line good feel about alone\
    ಯಾಕೋ ಒದುತ್ತಿರುವಾಗ ಕಣ್ಣಂಚಲ್ಲಿ ಸಣ್ಣ ಹನಿ

    ReplyDelete
  12. Nice one..nice narration..

    Nimmava,
    Raghu.

    ReplyDelete
  13. ಬಹಳ ಸುಂದರವಾಗಿತ್ತು, ಆ ಜೀವನ್ಮುಖಿಯ ಹಸಿರು ಕಂಗಳು ಸದಾ ಸಂತೋಷವಾಗಿರಲಿ. ನಮ್ಮ ದೇಶ, ನಮ್ಮ ಭಾಷೆ, ನಮ್ಮ ಸಂಸ್ಕ್ರತಿ ಎಲ್ಲವನ್ನೂ ನೀವು ಹಸಿರ ಕಂಗಳ ಚೆಲುವಿಗೆ ತಿಳಿಸಿಕೊಟ್ಟಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ವಿಶ್ವಮಾನವನಾಗು ಎಂಬ ಕುವೆಂಪುರವರ ಹೇಳಿಕೆಗೆ ನೀವು ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿದ್ದೀರಾ.. ಬಹಳ ಸಂತೋಷ.

    ReplyDelete
  14. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ......ಚೆನ್ನಾಗಿದೆ

    ReplyDelete
  15. radhe krishna preetiya udarane hitkondu kathe annu enediro rithi chennagide.... ನವಿಲು ಬಣ್ಣದ ಬಳೆಗಳ kathe chennagide sou....

    ReplyDelete
  16. ಭಾವನೆಗಳಿಗೆ ಜೀವ ತುಂಬಿ ಅಕ್ಷರೀಕರಿಸಿದ ನಿಮ್ಮ ಬರಹ ಶೈಲಿ ಮನಸಿಗೆ ಮುದ ನೀಡ್ತು.. ನಿಮಗೂ.. ಹೊನ್ನ ಹೆರಳ ಹುಡುಗಿಗೂ.. ಅಭಿನಂದನೆಗಳು.. :)

    ReplyDelete
  17. ಈ ಬರಹ ಓದಿ ನನ್ನ ಮನಸಿನ ಭಾರ ಇಳಿತು ನೋಡು ಸೌಮ್ಯ. ತುಂಬಾ ಚೆನ್ನಾಗಿ ಬರಿದಿದ್ದಿರ:) ನಿಮ್ಮ ಮನಸಿನ ಭಾವನಾ ಲಹರಿ ಹೀಗೆ ಹರಿದು ಬರಲಿ ಸದಾ.

    ReplyDelete
  18. ಸೀತಾರಾಮ್ ಸರ್ ಇದು ಮರುಪ್ರಸಾರದ ಕಥೆಯಲ್ಲ. ಧನ್ಯವಾದಗಳು :)
    ಧನ್ಯವಾದಗಳು ವಾಣಿ,ಗಿರೀಶ್, ದಿವ್ಯಾ, ಸೌಜನ್ಯಾ :)
    thanks a lot raghav :)
    thank u raghu, rakesh :)

    ReplyDelete
  19. ಸುಮನಕ್ಕ, ಸುಮಕ್ಕ, ಕಾಂತಿ thank u :))
    ಭಾವಗಳ ಗೊಂಚಲು thanks a lot :))
    ತುಂಬಾ ಧನ್ಯವಾದಗಳು Badarinath :))

    ReplyDelete
  20. thank you ಗಣಪತಿ, ಮನಮುಕ್ತಾ, ಪ್ರದೀಪ್ shan, and raghu :)

    ReplyDelete
  21. ಧನ್ಯವಾದಗಳು ನಾಗರಾಜ್, ರಾಜ್ ,ಅಡಪೋಟ್ರು, ಅನು ಹಾಗೂ ಬಸು ಅವರಿಗೆ :))

    ReplyDelete
  22. ವಾವ್ ರಾಧೆ.. ನವಿಲು ಬಣ್ಣದ ಬಳೆ, ಹೊನ್ನ ಕೂದಲ ಹುಡುಗಿ.. ಅವಳ ಕೈ ಗಾಢ ಕೆಂಪಿನ ಮದರಂಗಿಯಷ್ಟೆ ಚಂದದ ಕಥೆ..

    ReplyDelete