Showing posts with label ನೆನಪು. Show all posts
Showing posts with label ನೆನಪು. Show all posts

Tuesday, March 20, 2012

ವಾಲಿ ವಧೆ ಯಕ್ಷಗಾನವೂ..ಕೆಕ್ಕಾರು ಲಕ್ಷ್ಮಣನೂ

ಮೊನ್ನೆ ಬಸ್ಸಿನಲ್ಲಿ ಕುಳಿತಿದ್ದಾಗ ನೆನಪಾಗಿದ್ದ ಅವನು. ಅದೇಕೋ ಗೊತ್ತಿಲ್ಲ. ಮಾಸಲು ಬಣ್ಣದ ಲುಂಗಿ, ತಿಳಿ ಹಳದಿಯ ಷರಟು ಧರಿಸಿ ಬಾಗಿಲ ಬಳಿ ನಿಂತಿದ್ದವನ ಲಕ್ಷಣಗಳನ್ನು ಕಂಡ ತಕ್ಷಣ ನನಗೆ ನೆನಪಾದವನು 'ಕೆಕ್ಕಾರು ಲಕ್ಷ್ಮಣ'.  ಅವನಿದ್ದದ್ದು ಥೇಟ್ ಹಾಗೆಯೇ  ಅದೆಲ್ಲಿಗೆ ಬೇಕಾದರೂ ಹೊರಟುಬಿಡುತ್ತಿದ್ದ  ಮಾಸಲು ಬಣ್ಣದ ಹಳೆಯ ಲುಂಗಿ, ತುಂಬು ತೋಳಿನ ಷರಟು ಹಿಮ್ಮಡುವಿನ ಭಾಗದಲ್ಲಿ ನೆಲ ಕಾಣುತ್ತಿದ್ದ ಹವಾಯಿ ಚಪ್ಪಲಿ ಧರಿಸಿ !  


  ನಮ್ಮ ಸುತ್ತಲಿನ ೩-೪ ಊರುಗಳಲ್ಲಿ ಅದ್ಯಾರದೇ ಮನೆಯಲ್ಲಿ ಸಂಪಿಗೆ ಹೂವಾಗಲಿ ಅದನ್ನು ಕೊಯ್ಯಲು ಲಕ್ಷ್ಮಣನೇ ಆಗಬೇಕು. ತುದಿ ಸೀಳು ಇರುವ ಬಿದಿರಿನ ಕೊಕ್ಕೆಯಲ್ಲಿ, ಒಂದು ಹೂವೂ ಹಾಳಾಗದಂತೆ ಅವನೇ ಕೊಯ್ಯಬೇಕು. ಮರ ಅದೆಷ್ಟೇ ನಾಜೂಕಿನದಾಗಿರಲಿ ಅದರ ತುದಿಯ ಕೊಂಬೆಯ ಹೂವನ್ನೂ ಬಿಡದೆ ಕೊಯ್ಯುತ್ತಿದ್ದ. ಮೂರು ನಾಲ್ಕು ಹೂವನ್ನು, ಮರವಿರುವ ಮನೆಗೆ ಕೊಟ್ಟು ಉಳಿದ ಹೂಗಳನ್ನು ತನ್ನ 'ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಎಳೆಗಳಿಂದ  ಹೆಣೆದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂಭತ್ತು ಘಂಟೆಯ ಬಸ್ಸಿಗೆ ಕುಮಟೆಗೆ ಹೂ ಮಾರಲು ಹೊರಟನೆಂದರೆ ತಿರುಗಿ ಬರುವುದು ಮಧ್ಯಾಹ್ನ ಮೂರುವರೆಗೆ. ಹೋಗುವಾಗ ಬುಟ್ಟಿಯ ತುಂಬಾ ಹೂಗಳಿದ್ದರೆ,.. ಬರುವಾಗ ಬ್ರೆಡ್ಡು, ಬಟರು, ಬಿಸ್ಕೆಟ್, ಹತ್ತು ಪೈಸೆಗೆ ಒಂದರಂತೆ ಸಿಗುತ್ತಿದ್ದ ಲಿಂಬು ಪೆಪ್ಪರಮೆಂಟುಗಳು ಇರುವುದು ಕಡ್ಡಾಯ, ಜೊತೆಗೆ ಹೊಟ್ಟೆಗೆ ಒಂದಿಷ್ಟು 'ಎಣ್ಣೆ'ಯೂ! ಸಂಪಿಗೆ ಹೂಗಳೇ ಅವನ ಜೀವನಕ್ಕೆ ಆಧಾರ.


ಬೀದಿ ನಾಯಿಗಳ ಕಂಡರೆ ಅದೇನೋ ಮಮಕಾರ. ಹಾಗೆ ಭಿಕ್ಷುಕರ ಕಂಡರೂ... ಬುಟ್ಟಿಯಲ್ಲಿದ್ದ ಬ್ರೆಡ್ಡು ಬಟರುಗಳನ್ನು ನೀಡಿಯೇ ಬಿಡುತ್ತಿದ್ದ. ಹತ್ತು ಪೈಸೆಯ ಪೆಪ್ಪರಮೆಂಟುಗಳೆಲ್ಲವೂ ಮನೆಯ ಅಕ್ಕ ಪಕ್ಕದ ಪುಟ್ಟ ಮಕ್ಕಳಿಗೆ. 



ನಮ್ಮನೆಯ ಕಂಪೌಂಡಿನಲಿ ಒಂದು ಸಂಪಿಗೆ ಮರವಿದೆ. ನಮ್ಮೂರ 'ವೆಂಕಟೇಶ ಶೆಟ್ಟರು' ಬಂಗಾರದ ಆಭರಣ ಮಾಡುವಾಗ ತಾಮ್ರವನ್ನು ಜಾಸ್ತಿ ಮಿಕ್ಸ್ ಮಾಡಿದರೆ ಬರುವಂಥ ಬಣ್ಣದ ಸಂಪಿಗೆ ಹೂಗಳು ಅವು. ಅವನು ಆ ಹೂಗಳನ್ನು ಕೊಯ್ಯಲು ಬರುತ್ತಿದ್ದ . "ರಾಶಿ ಚಂದ ಅದೇರ ಈ ಹೂವು. ಸಿಕ್ಕಾಪಟ್ಟೆ ಡಿಮಾಂಡು ಇದ್ಕೆ.." ಹೇಳುತ್ತಲೇ ಮರ ಹತ್ತುತ್ತಿದ್ದ.



ನನ್ನ ಶಾಲಾದಿನಗಳ ಕಾಲವದು. ಬಹುಶಃ ನಾನಾಗ ಎಂಟನೆಯ ತರಗತಿಯಲ್ಲಿದ್ದೆ. ಒಮ್ಮೆ ಪಪ್ಪ ಕೇಳಿದ್ದರು ಅವನ ಕುಟುಂಬದ ಬಗ್ಗೆ. ಅದಕ್ಕೆ ಅವನ ಉತ್ತರವನ್ನು  ಅವನದೇ ಭಾಷೆಯಲ್ಲಿ ಇಡುತ್ತೇನೆ ನೋಡಿ. " ನಾನು, ಅವಿ (ಅಮ್ಮ), ಮತ್ತೆ ತಮ್ಮ ಇರುದ್ರ ಮನೇಲಿ. ನಮ್ಮ ಅವಿ ಒಂದ್ ನಮನೀ ಮಳ್ಳೀರ, ಉಂಡರೆ ಹೊಟ್ಟೆ ತುಂಬ್ತೋ ಇಲ್ವೋ ಗುತ್ತಾಗುದಿಲ್ಲ . ಒಬ್ಬ ತಮ್ಮ ಆವನೆ ಅವಂಗೂ ಸಿಕ್ಕಾಪಟ್ಟಿ  ಮಳ್ಳು, ಮೈಮೇಲೆ ಬಟ್ಟಿ-ಬಿಟ್ಟಿ ಎಂತೂ ಇಲ್ದೆ ತಿರಗ್ತಾ ಊರ್ಮೆಲೆ ..!! ಅವ್ನ ಕೋಣಿಲಿ ಕೂಡಾಕಿ ಬತ್ತನ್ರಾ. ಅಡಗಿ ಎಲ್ಲ ನಂದೇಯಾ ಅನ್ನ ಮಾಡದ್ರೂ ಮಾಡದೆ ಇಲ್ದಿರು ಇಲ್ಲಾ. ಸಾಕಾಗ್ತಾದಲ್ರ ಅದ್ಕಾಗೆಯ ಹನಿ ಹೊಟ್ಟೆಗೆ ಹಾಕ್ಕಂಬರುದು, ಸುಸ್ತು ಹೋಗುಕೆ.... " ಎಂದು ಪೆಕರು ಪೆಕರನಂತೆ ಹಲ್ಲು ಕಿರಿದಿದ್ದ.  ಅಷ್ಟರಲ್ಲಿ "ಹೂವು  ಹೆಂಗೆ ಕೊಟ್ಯೋ ಲಕ್ಷ್ಮಣ ?" ಎಂದು ಹೆಚ್ಚಾಗಿ ಮುಂಗಚ್ಚೆಯಲ್ಲೇ  ಇಡೀ ಊರು ತಿರುಗುವ 'ಬೇಟೆ ಗೌಡ' ಕೇಳಿಬಿಟ್ಟಿದ್ದ . "ನಿಂಗೆ ಅದೆಲ್ಲ ಅಧಿಪ್ರಸಂಗಿತನ ಎಂತಕ್ಕೆ? ನಿಮ್ಮನೆ ಹೂ ಕೊಡ್ಬೇಡ, ಮೇಲಿಂದಾ  ಹೂ ಯಾವ ದರಕ್ಕೆ ಕೊಟ್ಟೆ ಕೇಳು... ಪುಕ್ಸಟ್ಟೆ ಕೊಟ್ಟು ಬಂದಾನೆ ಏನೀಗ ?" ಎಂದೆಲ್ಲ ರೇಗಾಡಿ ಅವರ ಮನೆ ಹೂ ಕೊಡದಿದ್ದುದರ ಸಿಟ್ಟನ್ನೆಲ್ಲಾ ಕಾರಿ ಬಿಟ್ಟಿದ್ದ! 


ದಾರಿಯಲ್ಲಿ ಕಾಣುವ ಎಲ್ಲ ದೇವಳದ ಒಳಗೆ ಹೋಗಿ ಕೈಮುಗಿದು ಬರದಿದ್ದರೆ ಅವನಿಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಒಂದು ಕಲ್ಲಿಗೆ ಹೂ ಹಾಕಿ ಇಟ್ಟರೂ, ಚಪ್ಪಲಿ ತೆಗೆದು ಬದಿಗಿಟ್ಟು ಕೈಮುಗಿದು ಮುಂದೆ ಹೋಗುತ್ತಿದ್ದ. ಜನರೆಲ್ಲಾ 'ಅವನಿಗೆ ಒಂದು ಸುತ್ತು ಲೂಸು' ಎಂದೇ ಆಡಿಕೊಳ್ಳುತ್ತಿದ್ದರು.  ಕೆಲವೊಮ್ಮೆ 'ಎಣ್ಣೆ' ಹೆಚ್ಚಾದಾಗ ಜೋರಾಗಿ ಹಾಡಿಕೊಳ್ಳುತ್ತ, ಒಬ್ಬನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದದೂ ಇತ್ತು. 


ನನ್ನ ಅಮ್ಮ ಅಂದರೆ ಅದೇನೋ ಭಯ ಮಿಶ್ರಿತ ಭಕ್ತಿ ಅವನಿಗೆ. ಆದರೂ ಅದೇನೇ ಸಮಸ್ಯೆಗಳು ಬಂದರೂ ಅಮ್ಮನಲ್ಲಿ ಹೇಳಿಕೊಳ್ಳಲೇ ಬೇಕು."ಅಕ್ಕೋರಲ್ರಾ ಹೆದ್ರಕಿ ಆಗ್ತದೆರ.." ಎಂದು ಅಪ್ಪನತ್ತಿರ ಹೇಳುತ್ತಿದ್ದ.  "ವನ್....ಟು... ತ್ರೀ .. ಎಂದು ಇಂಗ್ಲಿಷಿನಲ್ಲಿ ಹೂಗಳನ್ನು ಲೆಕ್ಕ ಮಾಡುವಾಗ ಅಮ್ಮ ಬಂದದ್ದು ಕಂಡರೆ ಥಟ್ಟನೆ ನಿಲ್ಲಿಸಿಯೇ ಬಿಡುತ್ತಿದ.! ಅಮ್ಮನ ಮುಖ ನೋಡಿ ಜಾಸ್ತಿ ಕಲಿಲಿಲ್ರಾ... ಐದ್ನೆತ್ತಿ ವರೆಗೆ ಹೋಗಾನೆ ನೋಡಿ ಎಂದು ಹಸ್ತವ ತೋರಿಸುತ್ತಿದ್ದ .. " ಹಾಗೆ ಮುಂದುವರೆದು ಸಂಪಿಗೆ ಮರವನ್ನು ನೋಡುತ್ತಲೇ " ಅಲ್ಲೊಂದು ಹೂ ಬಿಟ್ಟೋಗದ್ಯೋ ಏನ್ರೋ ? ಉಳಿಲಿ ಗಿಡದಲ್ಲೆಯ.. ನಿಮ್ಮನೆಗೆ ಎಷ್ಟು ಬೇಕ್ರ ?" ಎಂದು ಕೇಳುತ್ತ ಮಾತು ಮರೆಸುತ್ತಿದ್ದ.!

ನಲವತ್ತರ ಸಮೀಪದ ಹರೆಯವಾದರೂ ಮದುವೆ ಆಗಿದ್ದಿರಲಿಲ್ಲ. ಹುಡುಗಿಯರೆಂದರೆ ಅದೇನೋ ಕುತೂಹಲ, ಒಂದು  ಬಗೆಯ ನಾಚಿಕೆ. ಒಮ್ಮೆ ಅವನೇ ಉತ್ತರಿಸಿದ್ದ  ಅಮ್ಮನ,"ಅದೆಂತಕ್ಕೆ ಮದುವೆ ಆಗಲಿಲ್ವೋ ನೀನು ?" ಎಂಬ ಪ್ರಶ್ನೆಗೆ. "ಮುಂದಾಗಿ ಮಾಡ್ವವ್ರು ಬೇಕಲ್ರಾ. ಇಡಗುಂಜಿ ದೇವಸ್ಥಾನದ ಕೂಡೆ ಒಂದು ಹೆಣ್ಣು ನೋಡಿ ಬಂದಾನ್ರ. ಸುಮಾರು ಚೊಲೋ ಆದೆ. ಉದ್ಕೆ ಲಂಗ ಬ್ಲೋಜು ಹಾಕಂಡು ದೇವಸ್ಥಾನದ ಮುಂದೆ ಹೂ ಮಾರ್ತದೆ ನೋಡಿ. ಅದೇಯ ಹುಡುಗಿ. ನಮ್ಜಾತಿದೇಯ .." ಎಂದು ಹೇಳಿ ನಾಚುತ್ತ ನಕ್ಕಿದ್ದ. ಪಪ್ಪ "ಅದೆಂಗೆ ನಿಂಗೆ ಹೂ ಮಾರುದೇ ಹುಡುಗಿ ಸಿಕ್ತೋ ಮಾರಾಯ ? ಆದರೆ ಲಕ್ಷ್ಮಣ, ನಿನಗಿಂತಾ ಜಾಸ್ತಿ ಅದರದ್ದೇ ಹೂ ಮಾರಾಟ ಆಗ್ತದೆ ಹಾಂ " ಎಂದಿದ್ದಕ್ಕೆ. "ಮದ್ವಿ ಆದಕೂಡಲೇ ಹೂ ಮಾರುಕೆಲ್ಲ ಕಳ್ಸುದಿಲ್ರೋ ನಾನು. ಮನೆ ನೋಡ್ಕಂದ್ರೆ ಸಾಕು. ತಾನು ಸಾಮಾನೆಲ್ಲ ತಂದು ಹಾಕ್ತ್ನಲ್ರ .." ಎಂದು ಹೇಳುತ್ತಾ ಕನಸು ಕಟ್ಟಿದ್ದ.


ಅದೆಷ್ಟೋ ಬಾರಿ ನಮ್ಮನೆಯ ಕೆಲಸದ 'ನಾಗಮ್ಮಕ್ಕ'. ಇಡಗುಂಜಿ ದೇವರ ಕೂಡೆ ಬೇಡ್ಕಂತೆ, ನಿಂಗೆ ಅದೇ ಹುಡುಗಿ ಸಿಗ್ಲಿ ಹೇಳಿ .." ಎಂದು ಹೇಳುತ್ತಲೇ ಎರಡು ಹೂವನ್ನು ಪುಗಸಟ್ಟೆ ತೆಗೆದುಕೊಳ್ಳುತ್ತಿದ್ದಳು. " ತಕ ಎರಡು ಹೂವು, ಅದೇನು(ಆ ಹುಡುಗಿ) ನನ್ನ ನೋಡೂದಿಲ್ಲ.. ನೀ ಈ ನಮನೀ ಹೇಳೂದು ಬಿಡೂದಿಲ್ಲ .." ಹೇಳುತ್ತಲೇ ಎರಡು ಹೂಗಳನ್ನು ತೆಗೆದು ಕೈಗಿಡುತ್ತಿದ್ದ. ಹೂ ಮಾರುವ ಹುಡುಗಿಯ ಮೇಲಿನ ಅವಳ ಒಮ್ಮುಖ ಪ್ರೀತಿಯ ಪರಿ ನನಗೆ ಅರ್ಥವಾದದ್ದು ತೀರ ಇತ್ತೀಚಿಗೆ. ಅಂದಿನಿಂದ ಅವನನ್ನು ಅದ್ಭುತ ಪ್ರೇಮಿಗಳ ಸಾಲಿಗೆ ಸೇರಿಸಿಬಿಟ್ಟಿದ್ದೇನೆ.! 


ಇಂತಿಪ್ಪ ನನ್ನ ಈ ಲೇಖನದ 'ಹೀ'ರೋ ಲಕ್ಷ್ಮಣನಿಗೆ ಯಕ್ಷಗಾನದ ಹುಚ್ಚು ವಿಪರೀತ. ಆಜುಬಾಜಿನ ಊರುಗಳಲ್ಲಿ ಅದೆಲ್ಲೇ ಯಕ್ಷಗಾನವಾದರೂ ಹೊರಟೆ ಬಿಡುತ್ತಿದ್ದ. ಒಂದು ಕವಳದ ಸಂಚಿ ಹಾಗು ಒಂದು ಪಾವು ಎಣ್ಣೆಯ ಜೊತೆಗೆ. ಆ ಪ್ರಸಂಗದ ವಿಮರ್ಶೆಯನ್ನು ಮರುದಿನ ಹೂ ಕೊಯ್ಯಲು ಬಂದಾಗ ಮಾಡುತ್ತಿದ್ದ. ಒಮ್ಮೊಮ್ಮೆ ಮರದ ಮೇಲೇರಿ ಒಬ್ಬೊಬ್ಬನೇ ಮಾತನಾಡುತ್ತಿದ್ದದ್ದೂ ಇತ್ತು.


ಒಮ್ಮೆ ಊರಲ್ಲೇ ಉತ್ಸಾಹಿ ಯುವಕರು ಸೇರಿ ಯಕ್ಷಗಾನ ಮಾಡುವಾಗ, ತನಗೂ ಒಂದು 'ಪಾರ್ಟು' ಬೇಕೆಂದು ಹಠ ಹಿಡಿದು,ಹಣ ಕೊಟ್ಟು 'ವಾಲೀ ವಧೆ' ಪ್ರಸಂಗದಲ್ಲಿ 'ಸುಗ್ರೀವ'ನ ಪಾರ್ಟು ಗಿಟ್ಟಿಸಿಕೊಂಡಿದ್ದ. ಒಂದು ಹಿಡಿ ಹೆಚ್ಚೇ ಉತ್ಸಾಹದಿಂದ ತಾಲೀಮಿನಲ್ಲಿ ಭಾಗವಹಿಸಿದ್ದ. ಕೊನೆಗೂ ಅವನಂದು ಕೊಂಡ ದಿನ ಬಂದೆ ಬಿಟ್ಟಿತ್ತು. ಹೂ ಕೊಯ್ಯುವ ಎಲ್ಲ ಮನೆಗಳಲ್ಲೂ "ಇವತ್ತು ಕೆಕ್ಕಾರಲ್ಲಿ 'ಆಟ' ಆದೇ ಹಾಂ.. ಮುದ್ದಾಮು ಬನ್ನಿ" ಎಂದು ಮದುವೆಯ ಸಡಗರವ ತುಂಬಿಕೊಂಡೇ ಕರೆದಿದ್ದ. 


ಪಪ್ಪನ ಹತ್ತಿರ ಹಠಮಾಡಿ ಮೊದಲ ಬಾರಿಗೆ ಕೆಕ್ಕಾರಿನ ಬಯಲಲ್ಲಿ ನಡೆದ ಆಟವನ್ನು ನೋಡಲು ನಡೆದಿದ್ದೆ ನಾನು . ಒಂದು ಪಾವು ಎಣ್ಣೆ ಹೊಡೆದೇ ಬಂದಿದ್ದ ನಮ್ಮ ಲಕ್ಷ್ಮಣನದು, 'ಭಲೇ ಭಲೇ' ಎನಿಸುವಂಥ ಅಭಿನಯ. ವಾಲೀ ಸುಗ್ರೀವರು ಹೊಡೆದಾಡುವ ದೃಶ್ಯ ಬಂದಾಗ ಪ್ರೇಕ್ಷಕರಿಂದ ಶಿಳ್ಳೆ. ಅಷ್ಟರಲ್ಲಿ ಅದೆಲ್ಲಿಂದ ಬಂತೋ ಆ ಶಕ್ತಿ. ಬಹುಷಃ ಹೊಟ್ಟೆಯೊಳಗಿನ 'ಪರಮಾತ್ಮನ' ಜೊತೆ ಶಿಳ್ಳೆಯ ಶಬ್ದವೂ ಸೇರಿ ಬಂದಿರಬೇಕು..!'ವಾಲಿ'ಯ ಪಾತ್ರಧಾರಿಯನ್ನು ಹಿಡಿದು ಕೆಳಕ್ಕೆ ಉರುಳಿಸಿದ್ದ. ಅವನ ಎದೆಯ ಮೇಲೆ ಕುಳಿತು. ಅವನಿಗೆ ಬಡಿಯುತ್ತ ಗಹಗಹಿಸಿ ನಗುತ್ತಿದ್ದ, ನಮ್ಮ ಸುಗ್ರೀವ ಯಾನೆ ಲಕ್ಷ್ಮಣ.!  ವಾಲಿಯ ಪಾತ್ರಧಾರಿ ನೋವಿನಿಂದ  "ಬೋ.. ಮಗನೆ ನೀ ಸೋಲ್ಬೇಕೋ ..ನೀ ಸೋಲ್ಬೇಕೋ ..." ಎಂದು ಹೇಳುತ್ತಿದ್ದದ್ದು ಎಲ್ಲರಿಗೂ ಕೇಳುತ್ತಿತ್ತು. ಪಡ್ಡೆ ಹುಡುಗರ ಶಿಳ್ಳೆ ಇನ್ನೂ ಜೋರಾದುದ ಕೇಳಿ ನಮ್ಮ ಸುಗ್ರೀವನ ಡೈಲಾಗ್ ಛೇಂಜ್ " ಗುಲಾಂ ನನ್ ಮಗನೆ, ಇಷ್ಟು ಜನರ ಎದ್ರಿಗೆ ನಾ ಸೋಲ್ಬೇಕೋ ? ಎಂತ ಮಾಡ್ಕಂಡಿದೆ ನಾನು ಅಂದ್ರೆ? ಕಾಲೇಜು ಹುಡ್ಗೀರು ಬಂದಾರೆ ನೋಡುಕೆ ಅವ್ರ ಮುಂದೆ ನಾ ಸೋಲ್ಬೇಕೋ ? ನಾನೂ ದುಡ್ ಕೊಟ್ಟಾನೆ, ಪುಕ್ಕಟ್ಟೆ ಪಾರ್ಟು ಕಟ್ಟಲಿಲ್ಲ ..  ನಿನ್ ಸೋಲ್ಸುಕೆ ರಾಮ ಬೇಡ್ವೋ ..ನನ್ ಕೈಯಲ್ ನಿನ್ ಸೋಲ್ಸುಕೆ ಆಗುದಿಲ್ಲಾ ನಿನ್ನ ಅಜ್ಜಿ ಕುಟ್ಟ ಬಂದಿ ? ತಕಾ " ಎನ್ನುತ್ತಲೇ ಇನ್ನೆರಡು ಗುದ್ದಿದ. ಕೊನೆಗೆ ಪರದೆಯ ಹಿಂದಿನಿಂದ ಜನ ಬಂದು ಅವನನ್ನು ಎಳೆದೊಯ್ಯಬೇಕಾಯಿತು.! ಅಲ್ಲಿಗೆ ಸುಗ್ರೀವನೇ ರಾಮನ ಹಂಗಿಲ್ಲದೆ ವಾಲಿಯನ್ನು ಹಣಿದಿದ್ದ.! ಲಕ್ಷ್ಮಣನ ಮೊದಲ ಹಾಗೂ ಕೊನೆಯ ಆಟದ ಪಾರ್ಟಿನ ಹುಚ್ಚು ಇಳಿದಿತ್ತು.!


ಮಾರನೆ ದಿನ ಹೂ ಕೊಯ್ಯಲು ಬಂದವನಲ್ಲಿ ಅಮ್ಮ "ಅದೆಂತದೋ ಲಕ್ಷ್ಮಣ ನಿನ್ನೆ ನೀ ಕಥೆನೇ ಉಲ್ಟಾ ಮಾಡಿದ್ಯಂತೆ ? " ಎಂದಿದ್ದಕ್ಕೆ. ಆಲ್ರ ಆಚೆ ಕೇರಿ 'ಶಾಂತರಾಮ' ಆವನ್ಯಲ್ರಾ. ಅವ ಹೇಳಿದ್ದ ನನ್ನ ಕೂಡೆ, ಲಕ್ಷ್ಮಣ.. ಅಷ್ಟೆಲ್ಲ ಕಾಲೇಜು ಹುಡ್ರು-ಹುಡ್ಗೀರು ಎಲ್ಲಾ  ಇರ್ತ್ರು ನೀನು ಅವ್ರೆಲ್ರ ಮುಂದೆ ಸೋಲ್ತ್ಯಾ ? ಹೇಳಿ.. ಅಲ್ಲ ಆಕ್ಕೋರೆ ಮರ್ವಾದಿ ಪ್ರಶ್ನೆ ಅಲ್ರಾ.. ಅದ ಕಾಗೆಯ ನಾನೂ ಸೋಲಲೇ ಇಲ್ಲ .. " ಎಂದು ಹೆಮ್ಮೆಯ ನಗೆ ನಕ್ಕಿದ್ದ ಅವನ ಕಂಡು ಅಮ್ಮ ನಿಜಕ್ಕೂ confuse ಆಗಿದ್ದರು.. !


ಒಮ್ಮೆ ಸಂಪಿಗೆ ಹೂ ಹೆಕ್ಕಲು ಬಂದ 'ನಾಗಮ್ಮಕ್ಕ'ನ ಬಳಿ . "ನಾಗಮ್ಮಕ್ಕ ಕೆಳಗೆ ಬರ್ಬೆಡವೇ ಕುಂಡಿಮೇಲೆ ಸಣ್ಣ ಕುರ ಎದ್ದದೆ.. ನಾ ಚಡ್ಡಿನೇ ಹಾಕ್ಕಂಡು ಬರಲಿಲ್ಲ ಇವತ್ತು .." ಎಂದು ಯಾವ ಮುಲಾಜು ಇಲ್ಲದೆ ಹೇಳಿದ್ದ. ಅವಳು "ಸಾಯಲ್ರಾ ಈ ಲಕ್ಷ್ಮಣನ ಹೂವು ಸಾಕು ..ಹನೀ ಮರ್ಯಾದಿಲ್ಲ ಬೇವರ್ಸಿಗೆ  " ಎನ್ನುತ್ತಲೇ ಕಸ ಗುಡಿಸಲು ನಡೆದಿದ್ದಳು. ಬಹುಷಃ ಅದಾದಮೇಲೆ ಅವಳು ಇಡಗುಂಜಿಯ ಹುಡುಗಿಯ ಹೆಸರಿನಲ್ಲಿ ಹೂ ಕೇಳುವುದನ್ನು ಬಿಟ್ಟಿದ್ದಳು. !




ಜೀವನದ ದುಃಖಗಳ ಮರೆಯಲು ಹೆಂಡದ ಸಹವಾಸ ಮಾಡಿದರೂ. ಅದೆಂಥದ್ದೋ ಜೀವನ ಪ್ರೀತಿ ಇತ್ತು ಅವನಲ್ಲಿ.! ತನ್ನದೇ ಆದ ಸಂಸಾರ ಕಟ್ಟಿಕೊಳ್ಳುವ ತುಡಿತವೊಂದಿತ್ತು. ಅವನ ಹಾಸ್ಯಪ್ರಜ್ಞೆ, ಕೆಲವೊಮ್ಮೆ ಮರೆಯಿಂದ ಇಣುಕುವ ಮುಗ್ಧತೆ. ಅಮಾಯಕ ಒಲವು. ಇದೆಲ್ಲ ನೆನಪಾಗಿತ್ತು ನನಗೆ. ಮತ್ತೊಮ್ಮೆ ಅವನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಲೂ ಆಗುವುದಿಲ್ಲ. ಅವನು ಇಹಲೋಕ ಯಾತ್ರೆಯ ಮುಗಿಸಿ 3 ವರುಷಗಳೇ ಕಳೆದಿವೆ. ನಮ್ಮನೆ ಸಂಪಿಗೆ ಮರಕ್ಕೆ ಹೂವಾದಾಗೆಲ್ಲ ಅವನೇ ನೆನಪಾಗುತ್ತಾನೆ, ನಮ್ಮನೆಯಲ್ಲಿ ಎಲ್ಲರಿಗೂ. "ವ್ಯಕ್ತಿ ಹೊರಟು ಹೋಗುತ್ತಾನೆ .. ಉಳಿಯುವುದು ಅವನ ನೆನಪುಗಳಷ್ಟೇ.." ಎಂಬ ಮಾತು ಅದೆಷ್ಟು ನಿಜ ಅಲ್ವಾ ? 

Friday, January 28, 2011

ಸುಮ್ಮನೆ ನಕ್ಕುಬಿಡಿ

ಹಲೋ ಸ್ನೇಹಿತರೆ,
ಪ್ರೀತಿ, ಕಥೆಗಳು, ಗಂಭೀರ ಲೇಖನದತ್ತಲೇ ಗಿರಕಿಹೊಡೆಯುತ್ತಿದ್ದೆ ಅಲ್ವಾ ನಾನು ? But ಇದು ಲಘು ಹಾಸ್ಯದ ಲೇಪನವಿರುವ ಲೇಖನ. ಇತ್ತೀಚಿಗೆ ನನ್ನ ಗಮನಕ್ಕೆ ಬಂದ ಹಾಸ್ಯ ಸಂಗತಿಗಳು, ನಡೆದ ಘಟನೆಗಳನ್ನು ನನ್ನದೇ ಪದಗಳಲ್ಲಿ ಇಡುತ್ತಿದ್ದೇನೆ. ಚಿನಕುರುಳಿ ಉತ್ತರಗಳಿಗೆ, ಹಾಸ್ಯಕ್ಕೆ ತಲೆದೂಗಿದ್ದೇನೆ. ಹಾಗೆ ನಿಮ್ಮ ಮುಂದೆಯೂ  ಇಡುತ್ತಿದ್ದೇನೆ. ಇಲ್ಲಿನ ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಿ. ಯಾರನ್ನೂ ನೋಯಿಸುವ ದುರುದ್ದೇಶವಂತೂ ಇಲ್ಲವೇ ಇಲ್ಲ.  ಈಗ ಓದಿದರೆ ನಗು ಅಷ್ಟು ನಗು ಬರಲಿಕ್ಕಿಲ್ಲ  ಆದರೆ  ಆ  ಚಟಾಕಿಗಳ timing ಇದೆಯಲ್ಲ, ಅದರ ಪರಿಣಾಮ ಮಾತ್ರ ಅದ್ಭುತ ! 

Long skirt ಪಜೀತಿ:
 ನನಗೆ long skirtಗಳ ವಿಪರೀತ ಹುಚ್ಚಿದೆ. ಯಾವುದೇ ಪಟ್ಟಣಗಳಿಗೆ ಹೋದರೂ ಬಟ್ಟೆ ಪ್ರಸಿದ್ಧ ಬಟ್ಟೆ ಅಂಗಡಿಗಳಲ್ಲಿ long skirts ಕೇಳುತ್ತ ನಡೆದು ಬಿಡುತ್ತೇನೆ.ಒಂದು ವಾರದ ಹಿಂದೆ ಹುಬ್ಬಳ್ಳಿಗೆ ಹೋಗಿದ್ದೆ. ದೊಡ್ಡದು ಎನಿಸುವ ಪ್ರಸಿದ್ಧ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ನನ್ನ ಮಾಮೂಲಿ ವರಸೆಯಲ್ಲಿ "Long skirts ತೋರಿಸ್ರಿ" ಎಂದೆ. sales boy ಸರೀ ಎಂದು ಒಂದು ದೊಡ್ಡ box ಎತ್ತಿ ತಂದ. "ಯಾವ ಕಲರ್ರೀ ಅಕ್ಕಾರೆ ?" ಎಂದ. ನೋಡುವ ಎಂದು ಇಣುಕಿದರೆ 'ಸೀರೆಗೆ ಹಾಕುವ ಲಂಗಗಳು' ಯಾವ ಬಣ್ಣದ ಲಂಗಗಳು ಬೇಕಾದರೂ ಇದ್ದಿದ್ದವು.!
         ನಾನು ಕಕ್ಕಾ ಬಿಕ್ಕಿ ನನ್ನ ಗೆಳೆಯ ಗೆಳತಿಯರೆಲ್ಲ ನಗುತ್ತಿದ್ದರು. ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ. ಉದ್ದದ ಲಂಗ, ಉದ್ದನೆಯ skirt, ನೆರಿಗೆ ಇರುವ skirt  ಯಾವ ಬಗೆಯಲ್ಲಿ ಹೇಳಿದರೂ ಅಲ್ಲಿದ್ದ ನಾಲ್ಕಾರು ಜನರಿಗೂ ತಿಳಿಯಲೇ ಇಲ್ಲ. "ಅದಾವಲ್ರೀ ಇಲ್ಲೇ  ಇದಕೂ ಉದ್ದದ್ದು ಬೇಕೆನ್ರೀ ?"ಎಂದು ಸೀರೆಯ ಲಂಗದ ಕಡೆಗೇ ತೋರಿಸುತ್ತಿದ್ದ..! ನನಗೆ ನಗು ತಡೆಯಲಾಗಲೇ ಇಲ್ಲ. "ಈ ಥರದ್ದು ಅಲ್ಲ, ನಾನಿನ್ನು ಬರುತ್ತೇನೆ " ಎಂದು ಹೊರಟವಳಿಗೆ. ನನ್ನ ಕನ್ನಡದ ಮೇಲೆ doubt ಬರುತ್ತಿತ್ತು !


ಸಮಾಜಕ್ಕೆ ಹೆದರುವುದಿಲ್ಲ:
ಮೊನ್ನೆ ಮೊನ್ನೆ ನಾವು ಗೆಳೆಯರೆಲ್ಲ ಸೇರಿ ಮಾತನಾಡುತ್ತಿದ್ದೆವು. ಗುಂಪಿನಲ್ಲಿ ಹುಡುಗಿಯೊಬ್ಬಳು "ನನ್ನ ದಾರಿಯೇ ಬೇರೆ ತಾನು ಸಮಾಜಕ್ಕೆ ಹೆದರುವುದಿಲ್ಲ" ಎಂದು ಉದ್ದುದ್ದ ಭಾಷಣವನ್ನು ಕೊಡುತ್ತಿದ್ದಳು. ಅವಳ ಆವೇಶ ಭರಿತ ಮಾತುಗಳನ್ನು ಕೇಳುತ್ತಿದ್ದ ನನ್ನ ತಮ್ಮ ಮುಗುಮ್ಮಾಗಿ ಉತ್ತರಿಸಿದ "ನನಗೊತ್ತಿದೆ ಬಿಡೆ, ನೀನು ಹೆದರಿದ್ದು ಗಣಿತ ಮತ್ತು Englishಗೆ ಎಂದು...! " ಎಲ್ಲರೂ ಹೋ ಎಂದು ಬೊಬ್ಬಿಟ್ಟೆವು.! ನಾನು ತಮ್ಮನ ಮುಷ್ಟಿಗೆ, ನನ್ನ ಮುಷ್ಟಿಯನ್ನು ಗುದ್ದಿದೆ.    


ಚಿನ್ನ-ರನ್ನ ಈ ಪದದ ಹಿಂದಿನ ಗುಟ್ಟು :
 ನಾವು ಮೂವರು ಗೆಳತಿಯರು ಮಾತನಾಡುತ್ತಿದ್ದೆವು. ಗೆಳತಿಯೊಬ್ಬಳು ಅವಳ ಹುಡುಗನ ಬಗ್ಗೆ ಹೇಳುತ್ತಾ "ನನ್ನ ಹುಡುಗ ನನ್ನ ಚಿನ್ನ, ಬಂಗಾರ ಅಂತ ಕರೀತಾನೆ." ಅದಕ್ಕೆ ಇನ್ನೊಬ್ಬಳ ಉತ್ತರ ನೋಡಿ "KGF ನಲ್ಲಿ ಕೆಲಸ ಮಾಡಿದಾನಾ? ಅಥವಾ ಬಂಗಾರದ ಕೆಲಸ ಮಾಡ್ತಾನಾ ?" ನಾನು ನಗೆ ತಡೆಯಲಾಗದೆ ಆಚೆ ಹೋದೆ.

Album ದರ (Incredible Indians):
ಒಮ್ಮೆ Digital studio ಒಂದಕ್ಕೆ ಹೋಗಿದ್ದೆ ಒಂದಿಷ್ಟು ಫೋಟೋಗಳ ಪ್ರಿಂಟ್ ಹಾಕಿಸಲು. ಅಷ್ಟರಲ್ಲಿ ಬಂದ ಒಬ್ಬ ಆಸಾಮಿಯ ಬಳಿ  ಸ್ಟುಡಿಯೋದವ "ಏನು ಬೇಕು ?" ಎಂದ. ಅದಕ್ಕೆ ಆ ಆಸಾಮಿಯ ಉತ್ತರ  "ಆಲ್ಬಮ್ ಕೊಡಿ". ಸ್ಟುಡಿಯೋದವ ಕೇಳಿದ "ಯಾವ size?". ಆ ಆಸಾಮಿ ಉತ್ತರಿಸಿದ "ಒಂದು ಐವತ್ತು ರೂಪಾಯಿಯೊಳಗೆ ಕೊಡಿ". ನಗುತ್ತ ಮನದೊಳಗೆ ಎಂದುಕೊಂಡೆ incredible Indians...!

ಬೀಗ ಉಂಟಾ ?
ಒಮ್ಮೆ ನನ್ನ ಚಿಕ್ಕಮ್ಮನ ಮಗನ ಜೊತೆ Digital cameraವನ್ನು ಕೇಳಿಕೊಂಡು ಮಂಗಳೂರಿನ ಪ್ರತಿಷ್ಠಿತ ಮಳಿಗೆಯೊಂದಕ್ಕೆ ಹೋಗಿದ್ದೆವು. ನಾಲ್ಕಾರು modelಗಳ ಕ್ಯಾಮೆರಾಗಳನ್ನು ಕೇಳಿದರೂ ಒಂದೂ ಅವರ ಬಳಿ ಇರಲಿಲ್ಲ. ಥಟ್ಟನೆ ನನ್ನ ಚಿಕ್ಕಮ್ಮನ ಮಗ "ನಿಮ್ಮಲ್ಲಿ ಬೀಗ ಸಿಗಬಹುದಾ?" ಎಂದು ಕೇಳಿದ. ಅದಕ್ಕೆ ಆ sales man "ಎದುರಿನ ಅಂಗಡಿಯಲ್ಲಿ ಸಿಗಬಹುದು" ಎಂದ. ತಕ್ಷಣ ನನ್ನ ಚಿಕ್ಕಮ್ಮನ ಮಗ "ಹಾಗಾದರೆ ಒಂದು ಬೀಗ ತಂದು ಈ ಅಂಗಡಿಗೆ ಜಡಿಯಿರಿ.!" ಎಂದ. ! sales man ಕೆಕ್ಕರಿಸಿ ನೋಡುತ್ತಿದ್ದ ನಾವು ನಗುತ್ತ ಕಾಲು ಕಿತ್ತಿದ್ದೆವು..!

But i like you:
ನಾವೆಲ್ಲಾ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಸಂಕ್ರಾಂತಿ ಬಂದರೆ ಸಾಕು greeting cardಗಳ ವಿನಿಮಯ ಶುರುವಾಗುತ್ತಿತ್ತು. ಅದೊಂದು ಬಗೆಯ ಹುಚ್ಚು, ಮಜ. ಮತ್ತೆ ಈಗ ಬರದ ಸುವರ್ಣ ಕಾಲ ಆ ಬಾಲ್ಯ. ಏನೆಂದು ಅರ್ಥಗಳೇ ಗೊತ್ತಿಲ್ಲದ, ವ್ಯತ್ಯಾಸವನ್ನು ಅರಿಯದ ಆ ಮುಗ್ಧ ಮನಸು. ಆ ಬಣ್ಣ ಬಣ್ಣದ card, sheetಗಳ ಒಳಗೆ ಅದೇನೇನೋ ಸಾಲುಗಳು, ಅಂತ್ಯ ಪ್ರಾಸಗಳು. ಎಲ್ಲ ಬಾಲ ಕವಿಗಳಾಗಿ ಬಿಡುತ್ತಿದ್ದರು ಸಂಕ್ರಾಂತಿ ಬಂತೆಂದರೆ. card ಒಳಗಿನ quotesಗಳ sample ಒಂದನ್ನು ನೋಡಿ:
ಭಟ್ಟ like ಜುಟ್ಟ
ಜುಟ್ಟ like ಹೂವು
ಹೂವು like ಪರಿಮಳ
But I like You ..!
ಎತ್ತಣ ಮಾಮರ ಎತ್ತಣ ಕೋಗಿಲೆ? ಎಲ್ಲೆಲ್ಲಿಯ ಸಾಲುಗಳು ನೋಡಿ. ಆಂಗ್ಲ ಭಾಷೆಯನ್ನೂ ಸಲೀಸಾಗಿ ಕೊಲೆ ಮಾಡಿ ಬಿಡುತ್ತಿದ್ದೆವು. ಸಂಕ್ರಾಂತಿಯ ಎಳ್ಳು ಬೆಲ್ಲದ ನಡುವೆ ಬಾಲ್ಯದ ನೆನಪುಗಳು ಕಾಡಿದ್ದವು. ಹಾಗೆ ಒಂದು greeting card ಎತ್ತಿಕೊಂಡು ಬರೆದಿದ್ದೆ ನನ್ನ ಬಾಲ್ಯದ ಗೆಳತಿಗೆ ಹಳೆ quoteನ improved version
ಭಟ್ಟ likes ಜುಟ್ಟ
ಜುಟ್ಟ likes ಹೂವು 
ಹೂವು likes ಪರಿಮಳ 
But I like you  !
greeting card ಗೆಳತಿಗೆ ಕೊಟ್ಟೆ. ಇಬ್ಬರೂ ನಗುತ್ತಿದ್ದೆವು. ಬಾಲ್ಯದ ನೆನಪುಗಳ ಮಳೆಗೆ ಮನಸು ಮತ್ತೊಮ್ಮೆ ಒದ್ದೆಯಾಗಿತ್ತು .!

Monday, August 16, 2010

ಪ್ರೀತಿ ಪುರಾಣ .............!


ಪ್ರೀತಿಯೆಂದರೆ.......?? ಹೀಗೊಂದು ಯೋಚನೆ ಎಲ್ಲರಿಗೂ ಬಂದಿರಬಹುದು. ಪದಗಳಲ್ಲಿ ಸರಿಯಾಗಿ ವ್ಯಕ್ತಪಡಿಸಲಾಗದ, ಭಾವನೆಗಳ ಮಹಾಪೂರ. ಪಶ್ಚಿಮದ ದೇಶದಲ್ಲಾದರೆ 'i love you' ಅನ್ನುವ ಒಂದೇ ಒಂದು ವಾಕ್ಯದಲ್ಲಿ ಹೇಳಲಾಗುವ ಭಾವನೆ. ಅಪ್ಪ, ಅಮ್ಮ, ತಮ್ಮ, ಗೆಳತಿ, ಹೆಂಡತಿ ಎಲ್ಲ ಸಂಬಂಧಗಳಿಗೂ ಅದೇ ಮೂರು ಶಬ್ದಗಳನು ಉಪಯೋಗಿಸಿ ಬಿಡುತ್ತಾರೆ, ಆ ಮಾಹಾಜನರು. (ರಾಹುಲ್ ಮಹಾಜನನಿಗೆ ಅದರರ್ಥ ಗೊತ್ತಿಲ್ಲ ಬಿಡಿ) ಇಲ್ಲಿ ನಮ್ಮಲ್ಲಾದರೆ ? ಪ್ರೇಮಿಗಳಿಗೆ ತಪ್ಪಿದರೆ ಸ್ನೇಹಿತರಿಗೆ ಮಾತ್ರ ಉಪಯೋಗಿಸಲ್ಪಡುವ ಶಬ್ದ (ನಾನು ಹೇಳ ಹೊರಟಿರುವುದು ಮಾಮೂಲಿ ಪಟ್ಟಣದ ವಿಷಯ). ಹೋಗಿ ಅಜ್ಜನಿಗೋ, ಅಜ್ಜಿಗೋ ಹೇಳಿ ನೋಡೋಣ ' i love you' ಎಂದು....! ಇವಳಿಗೆ ಯಾವಾಗಿಂದ ಹುಚ್ಚು ಅನ್ನಬಹುದು.


Love is blind ಪ್ರೀತಿ ಕುರುಡು ಇದು ಎಲ್ಲರಿಗೂ ಗೊತ್ತಿರೋ ವಿಷಯ. Its deaf and dumb too ಮಾರಾಯರೇ. ಪ್ರೇಮಿಸುತ್ತಿರುವ ಒಂದು ಯುವ ಜೋಡಿಗೆ ನೀವು ಏನು ಹೇಳಿದರೂ ಕೇಳೋದೇ ಇಲ್ಲ,ಅವ್ರು ಅಂದಿದ್ದೆ ಸರಿ ಅಂತಾರೆ. ಇದು deaf ಆಯ್ತು ಇನ್ನು dumb?? ಮೂಕ ಪ್ರೀತಿ ಅಂತ ಕೇಳಿರಬೇಕಲ್ವಾ? ಪ್ರೀತಿಯನ್ನು ಪದಗಳಲ್ಲಿ ಸೆರೆ ಹಿಡಿಯೋಕೆ ಆಗೋದೇ ಇಲ್ಲ. ಅದಕ್ಕೆ 'ಪ್ರೇಮ ಪತ್ರಗಳು' ಇನ್ನು ಜೀವಂತ. ಹುಡುಗ ಯಾವುದೇ ಪುಸ್ತಕ ಓದದಿದ್ದರೂ ಹುಡುಗಿಗೆ ಲವ್ ಲೆಟರ್ ಕೊಡೊ ಸಂದರ್ಭ ಬಂದ್ರೆ 'ಪ್ರೇಮ ಪತ್ರದ link' ಖಂಡಿತ ಹುಡುಕೆ ಹುಡುಕ್ತಾನೆ. !


ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ. ನಾನು ಮೇಲೆ ಹೇಳಿರೋದಕ್ಕೆ, ಈಗ ಬರ್ಯೋದಕ್ಕೆ ಅಷ್ಟೊಂದು ಸಂಬಂಧ ಇಲ್ಲ ಬಿಡಿ. ಆದರೂ ನಿಮ್ ತಲೆ ತಿಂದೆ,.... ಯಾಕೆ ಸುಮ್ನೆ ಒಂದೇ ಸಲ ಸಿರಿಯಸ್ ಯಾಗೋದು ಹೇಳಿ?


ಮೊನ್ನೆ ಅಕ್ಕನ ಜೊತೆ ಚಾಟ್ ಮಾಡ್ತಿದ್ದೆ g-talk ನಲ್ಲಿ ಯಾರೋ ಮಾತಿಗೆ ಎಳೆದರು.ಅಷ್ಟೇನೂ ಗೊತ್ತಿರದ orkut friend. ನನ್ನ ಬಗ್ಗೆ ವಿಚಾರಿಸುತ್ತಲೇ "Do u 've Boy fren?" ಎಂದು ಬಿಟ್ಟಿತ್ತು ಆ ಆಸಾಮಿ. " yup many guy frens are der" ಅನ್ನೋ ಉತ್ತರ ಕೊಟ್ಟೆ. " no no i mean lover"ಅಂದಿತ್ತು ಆ ಕಡೆ ಪಾರ್ಟಿ."nope i don belive in love" ಎನ್ನುತ್ತಲೇ log out ಆಗಿದ್ದೆ.


ಉತ್ತರವೇನೋ ಕೊಟ್ಟಿದ್ದೆ ಆದರೆ ಪ್ರೀತಿ ಎಂದರೇನು ಅನ್ನೋ ವಿಷಯ ಹುಳವಾಗಿ ತಲೆ ಹೊಕ್ಕಿತ್ತು. ಕೆಲವು ಗೆಳೆಯ/ಗೆಳತಿಯರಿಗೆ message ಮಾಡಿಬಿಟ್ಟೆ. ಉತ್ತರ ಬರಲಾರಂಭಿಸಿತು... ಎಲ್ಲರೂ ತತ್ವಜ್ಞಾನವನ್ನೇ ಹೇಳುತ್ತಿದ್ದರೇ ವಿನಃ sweet and simple ಆಗಿ ಹೇಳಲೇ ಇಲ್ಲ ..ಅಥವಾ ನನ್ನ ಮನದೊಳಗಿದ್ದ ಉತ್ತರವನ್ನು ಯಾರೂ ಕೊಡಲೇ ಇಲ್ಲ..!


ಹಾಗೆ ಯೋಚಿಸುತ್ತಲೇ ಇದ್ದ ನನ್ನ ಮನದಲ್ಲಿ ಒಂದಿಷ್ಟು ಘಟನೆಗಳು ಹಾದುಹೋದವು... ಪ್ರೀತಿಯನ್ನು ನಾವು ಶಬ್ದಗಳಲ್ಲಿ ಕಟ್ಟಿಹಾಕಲಾರೆವು ಸರಿ. ಆದರೆ ಇದು ಪ್ರೀತಿ ಎಂದು ಮನಸು ಒಂದು ಘಟನೆಯನ್ನು ನೋಡಿದ ತಕ್ಷಣ ನಿರ್ಧರಿಸಿ ಬಿಡುತ್ತದೆ ಅಲ್ವಾ ? ನನ್ನ ಜೀವನದಲ್ಲಿ ನಡೆದ, ನಾನು ನೋಡಿದ ಘಟನೆಗಳು ಇವು .....


*ಇಸ್ತ್ರಿ ಮಾಡುವಾಗ ತನ್ನ ಅಚ್ಚುಮೆಚ್ಚಿನ ಸೀರೆಯ blouse ಸುಟ್ಟುಕೊಂಡ ಅಮ್ಮ, ದುಃಖ ತಡೆಯಲಾಗದೆ ಜಿನುಗಿದ ಕಣ್ಣೀರು. ಅಮ್ಮ ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಪೇಟೆಗೆ ಹೋಗಿ ಹೊಸ matching blouse ತಂದುಕೊಟ್ಟ ಪಪ್ಪ.


*ದನಗಳನ್ನು ಪ್ರೀತಿಯಿಂದ ಸಾಕಿ ಅವುಗಳಿಗೆ ಹೆಸರಿಟ್ಟು ಕರೆಯುವ ಪಕ್ಕದ ಮನೆಯ ಮುಸ್ಲಿಂ ಕುಟುಂಬ.


*ನಾನು ಮಂಗಳೂರನ್ನು ಬಿಟ್ಟು ಬರುವಾಗ ತನ್ನ ಪ್ರೀತಿಯ teddybearನ್ನುನನ್ನ ಕೈಗಿತ್ತು "ಎಲ್ಲಿ ಹೋದರೂ ಇದನ್ನು ತಗೊಂಡು ಹೋಗು ಸೌಮ್ಯ ನನ್ನ ನೆನಪಿಗೆ" ಎಂದು ಕಣ್ಣೀರಾದ ಗೆಳತಿ.


*ಗೆಳೆಯನ revaluation ಗೋಸ್ಕರ ತನ್ನ ಹೊಸ hand-setನ್ನೇ ಮಾರಿದ ನನ್ನ ಸ್ನೇಹಿತ .!


*ಡೈರಿಯ ಹಾಳೆಗಳ ಮಧ್ಯೆ ಬಣ್ಣಗೆಟ್ಟು ಮುಗುಮ್ಮಾಗಿ ಕುಳಿತಿರುವ ಪ್ರತಿ friendship day & valentines day ಗಳಿಗೆ ಆತ್ಮೀಯ ಗೆಳೆಯ ಕೊಟ್ಟ ಹಳದಿ ಗುಲಾಬಿ ಹೂಗಳು.


*ಬೀದಿ ನಾಯಿ ಬಂದಿಲ್ಲವೆಂದು ತನಗೆ ಹಾಕಿದ ಊಟವನ್ನು ಮುಟ್ಟದೆ ಕುಳಿತಿದ್ದ ಗೆಳತಿಯ ಮನೆಯ ಬೆಕ್ಕು.


*ಕಳೆದು ಹೋದ ಗೆಳತಿಯ ನೆನಪಲ್ಲಿ ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿ ಬಂದು school-book companyಯ ಎದುರಿನ ಜನಜಂಗುಳಿಯಲ್ಲಿ ಅವಳನ್ನು ಹುಡುಕುವ ಕ್ರಿಶ್ಚಿಯನ್ನರ ಹುಡುಗ .!


*ಜೀವದ ಗೆಳೆಯ ಕೊಟ್ಟ chocolateನ್ನು ತಾನೊಬ್ಬಳೆ ತಿಂದು ಉಳಿದ ಗೆಳತಿಯರಿಗೆ ಅಂಥದ್ದೇ ಬೇರೆ chocolate ತಂದು ಕೊಡುವ ನನ್ನ ಗೆಳತಿ ..! (ಅದೇಕೆ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ " ನಾನು ಅವನ ಪ್ರೀತಿಯನ್ನು ಬೇರೆಯವರಿಗೆ ಹಂಚಲಾರೆ..!" )


*ಕೊಟ್ಟಿಗೆಯಲ್ಲಿ ಕಟ್ಟಿ ಹಾಕೆಂದು ಮನೆಯ ವರೆಗೆ ಬಂದು ಅಜ್ಜನನ್ನು ಕರೆದುಕೊಂಡು ಹೋಗುವ ಅಜ್ಜನ ಪ್ರೀತಿಯ ಎಮ್ಮೆ.


*ಶಾಲಾದಿನಗಳಲ್ಲಿ ಉದ್ದಕಿದ್ದ ನನ್ನ ಕೂದಲನ್ನು ಹೆಣೆದು ಜಡೆ ಕಟ್ಟುತ್ತಿದ್ದ, ಈಗಲೂ ಅದೇ ಪ್ರೀತಿಯಂದ ನನ್ನ ಮೋಟು ಕೂದಲಿಗೆ ಜುಟ್ಟು ಹಾಕುವ ನನ್ನ ಅಮ್ಮ.


*ತಟ್ಟೆ ಇಟ್ಟು ಪ್ರೀತಿಯಿಂದ ಬಡಿಸಿ ಊಟ ಮುಗಿಯುವ ವರೆಗೂ ಅದೂ-ಇದೂ ಸುದ್ದಿ ಹೇಳುತ್ತಲೇ ಇದ್ದು ನಂತರ ತಾನು ಉಣ್ಣುವ ನನ್ನ ಅಜ್ಜಿ . ಅದೆಷ್ಟು ಹೊತ್ತಾದರೂ ಸರಿ ಅಜ್ಜ ಬರದೇ ಊಟ ಮಾಡಲೊಲ್ಲದ ನನ್ನ ಅಜ್ಜಿ .

* ಗಿಡಗಳಲ್ಲಿ ಅದೆಷ್ಟೇ ಹೂಗಳಾದರೂ ಅದನ್ನು ಕಿತ್ತು ಮುಡಿಯದ, ಬೇರೆಯವರು ಕೀಳುವುದನ್ನೂ ವಿರೋಧಿಸುವ ಅಮ್ಮ .

*ನಾನು ಜ್ವರ ಬಂದು ಮಲಗಿದಾಗ ರಾತ್ರಿಯೆಲ್ಲಾ ಎಚ್ಚರವಿದ್ದು ನೋಡಿಕೊಂಡ ಹಾಸ್ಟೆಲಿನ ಗೆಳತಿ.

*ಸಾಯುವ ಮೊದಲು ತನ್ನ ಪ್ರೀತಿಯ ಹುಡುಗಿಯ ಹೆಸರನ್ನು ಕನ್ನಡದಲ್ಲಿ ಡೈರಿ ಪೂರ್ತಿ ಬರೆದ ಮಿಜೋರಾಮಿನ ಹುಡುಗ..
*ಬೆಂಗಳೂರಿಗೆ ಬಂದಾಗ ಅದೆಷ್ಟೋ ವರ್ಷದ ಸ್ನೇಹಿತೆಯಂತೆ ಆತ್ಮೀಯತೆಯಿಂದ ನೋಡಿಕೊಂಡ orkut ಗೆಳತಿ, ಹಂಚಿಕೊಂಡ ಸಣ್ಣ ಪುಟ್ಟ ಸಂಗತಿಗಳು. ಅದೆಷ್ಟೋ ವರ್ಷಗಳಿಂದ ಜೊತೆಯಿದ್ದ ಜೋಡಿ ನವಿಲಿನ ಕ್ಲಿಪ್ ಒಂದನ್ನು ನನಗೆ ಕೊಟ್ಟ ಕ್ಷಣ ..!
*ಹಾಸ್ಟೆಲಿನಲ್ಲಿ ಬರೀ ಒಂದು ತಿಂಗಳು ನನ್ನ ಜೊತೆಗಿದ್ದು. CET ಕೋಚಿಂಗ್ ಕ್ಲಾಸ್ ಮುಗಿಸಿ ಹೊರಡುವ ಹಿಂದಿನ ರಾತ್ರಿಯೆಲ್ಲ ನನ್ನ ಕೈ ಹಿಡಿದು ಮಂಚಕ್ಕೆ ಒರಗಿದ್ದ ಪೋರಿ ..!
*ಅಮ್ಮನಂತೆ ಸ್ನೇಹಿತೆಯಂತೆ ನನ್ನ ನೋಡಿಕೊಂಡ PG ಆಂಟಿ .

ಇಂಥಹ ಅದೆಷ್ಟೋ ಘಟನೆಗಳು ನಿಮ್ಮೊಂದಿಗೂ ನಡೆದಿರುತ್ತವೆ. ಆದರೆ ಪ್ರೀತಿ ಎಂದೊಡನೆ ಬರೀ ಹೆಣ್ಣು- ಗಂಡಿನ ನಡುವಣ ಸಂಬಂಧ ಎನ್ನುವುದೇತಕ್ಕೋ ? ಮಮತೆ, ಪ್ರೇಮ, ಪ್ರೀತಿ, ಕಾಮ ಇದೆಲ್ಲರ ವ್ಯತ್ಯಾಸವೇ ಅರಿಯದಂತೆ ಆಡುವುದು ಏತಕ್ಕೆ ?

ಪ್ರೀತಿ ಹುಟ್ಟಿ.. ಸಲ್ಲದ ಸಂಬಂಧ ಬೆಳೆದು. ಮಕ್ಕಳಾಗಿ ..ಮದುವೆಯಾಗಿ ಒಂದೇ ವರುಷಕ್ಕೆ divorce ಗೆ ತಿರುಗುವ ಪಾಶ್ಚಿಮಾತ್ಯ ದೇಶದ ಈ ಒಂದು ಅನುಕರಣೆ ಬೇಕೇ ? ಪ್ರೀತಿ ಪ್ರೀತಿ ಎಂದು ದೈಹಿಕ ಕಾಮನೆಗಳ ತೀಟೆ ತೀರಿಸಿಕೊಳ್ಳುವ ಈ ಜನಕ್ಕೆ 'boy-friend, girl friend' ಎಂದು ಸ್ನೇಹಕ್ಕೆ ಮಸಿಬಳಿಯುವುದು ಯಾಕೆ ?
ಪ್ರೀತಿಗೆ ಕೃಷ್ಣ - ರಾಧೆಯರ ಉದಾಹರಣೆ ಕೊಡುವ ದೇಶ ನಮ್ಮದು. ದೇಶವನ್ನೂ ನಾವು ಮಾತೆಯಾಗಿ ಕಾಣುತ್ತೇವೆ ಅಲ್ವಾ ? ಈ boy friend- girl friend ಸಂಸ್ಕೃತಿ ನಮ್ಮದಲ್ಲ. ಗಂಡು ಹೆಣ್ಣಿನ ನಡುವೆ ನಿಷ್ಕಲ್ಮಶ ಸ್ನೇಹವೂ ಇರುತ್ತದೆ. ಒಂದು ವೇಳೆ ಬರೀ ಸ್ನೇಹಕ್ಕೆ ಬಳಸುತೀರೀ ಆ ಶಬ್ದವನ್ನು ಎಂದಾದರೆ ಸ್ನೇಹದಲ್ಲಿ ಗಂಡು ಹೆಣ್ಣೆಂಬ ಭೇದ ಯಾಕೆ ?


ಪ್ರೀತಿ ಯಾವತ್ತಿದ್ದರೂ ಪ್ರೀತಿಯೇ ಅದಕ್ಕೊಂದು ನಿರ್ಮಲವಾದ ಪರಿಶುದ್ಧವಾದ ಅರ್ಥವಿದೆ. ಅದೊಂದು ಶುದ್ಧ ಸರೋವರ ದಯವಿಟ್ಟು ಅದರಲ್ಲಿ ಅಶ್ಲೀಲತೆಯ ಕಲ್ಲೆಸೆಯಬೇಡಿ .

Tuesday, June 29, 2010

ಕನ್ನಡಿಯಲ್ಲಿನ ಕಿನ್ನರಿ ..!









ಎರಡು ತಿಂಗಳುಗಳ ಹಿಂದೆ ನಡೆದ ಘಟನೆ ಅದ್ಯಾಕೋ ನೆನಪಾಗಿಬಿಟ್ಟಿದೆ. ಅದೊಂದು ಬುಧವಾರ ಕಾಲೇಜು ಬಸ್ಸು ಮಿಸ್ಸಾಗಿ ಲೋಕಲ್ ಬಸ್ಸಿನಲ್ಲಿ ಹೊರಟಿದ್ದೆ. ಅದೇನೋ ಖುಷಿ ಲೋಕಲ್ ಬಸ್ಸಿನಲ್ಲಿ ಓಡಾಡುವುದೆಂದರೆ . uniform ತೊಟ್ಟ ಹುಡುಗಿಯರಿರುವ ಕಪ್ಪು -ಬಿಳುಪು tvಯಂತೆ ಕಾಣುವ ಕಾಲೇಜು ಬಸ್ಸಿನಲ್ಲಿ ಹೋಗುವುದು ಬೇಜಾರಿನ ಕೆಲಸ. Gossip, ಒಂದಿಷ್ಟು ಅಸೂಯೆ ಬಿಟ್ಟರೆ ಆ ಬಸ್ಸಿನಲ್ಲಿ ಬೇರೇನೂ ಇದ್ದಹಾಗೆ ನನಗೆ ಅನಿಸಿವುದೇ ಇಲ್ಲ..!




ಲೋಕಲ್ ಬಸ್ಸು ಅಷ್ಟೇನೂ rushಇರಲಿಲ್ಲ. ನಿಂತಿದ್ದೆ ನಾನು ಎದುರುಗಡೆ ಬಾಗಿಲಿನ ಹತ್ತಿರವೇ . ಅದೇನೋ ಖುಷಿ ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದೆಂದರೆ . ದಕ್ಷಿಣ ಕನ್ನಡದ ಬಸ್ಸುಗಳ ಕಿಟಕಿಗಳಿಗೆ ಗಾಜುಗಳೇ ಇರುವುದಿಲ್ಲ ಫುಲ್ ಖುಲ್ಲಂ ಖುಲ್ಲ. ಬೇಸಿಗೆಯಲ್ಲಿ ಗಾಳಿ ಬೆಳಕುಗಳೂ , ಮಳೆಗಾಲದಲ್ಲಿ ಮಳೆಹನಿಯೂ ಬಸ್ಸಿನೊಳಗೆ ಚೆನ್ನಾಗಿ ಬರುತ್ತವೆ..! ಬಸ್ ಕ್ಲೀನರ್ ಬಂದು "ಮಿತ್ತ ಪೋಯಿ" (ಮೇಲೆ ಹೋಗಿ ) ಎಂದು ಎಚ್ಚರಿಸಿದಾಗ ಒಳಗೆ ಹೋಗದೆ ವಿಧಿಯಿರಲಿಲ್ಲ. ಹಾಗೆ ನಿಂತ ನನಗೆ ಕಂಡದ್ದು ಡ್ರೈವರನ ಎಡಗಡೆ ಇರುವ ಉದ್ದದ ಸೀಟಿನಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ ಸುಮಾರು ೪ ರ ಹರೆಯದ ಹುಡುಗಿ. ತುಂಬಾ ಮುದ್ದು ಮುದ್ದಾಗಿದ್ದಳು. ಸುಮ್ಮನೆ ಮುಗುಳ್ನಕ್ಕೆ ಕಣ್ಣನ್ನು ಮಿಟುಕಿಸುತ್ತ. (ಪಕ್ಕಾ ಹುಡುಗೀರ style )




ಅವಳನ್ನೇ ಅವಲೋಕಿಸಿದೆ ...ಕೆಂಪು ಬಿಳಿ ಬಣ್ಣಗಳ ಚೆಂದದ ಫ್ರಾಕ್ ತೊಟ್ಟಿದ್ದಳು.ಕೈಗಳಿಗೆ ಕೆಂಪು ಬಿಳಿ ಬಳೆಗಳ ಸಮ್ಮಿಶ್ರಣ. ಪುಟ್ಟ ಪುಟ್ಟ ಕೈಗಳಲ್ಲೂ ಮದರಂಗಿಯ ರಂಗು.ಕಾಲುಗಳಲ್ಲಿ ದಪ್ಪನೆಯ ಗೆಜ್ಜೆಯ ಘಲ ಘಲ. ಕಣ್ಣಿಗೆ ಅಮ್ಮ ಹಚ್ಚಿದ್ದಿರಬೇಕು ಒಂದೆಳೆಯ ಕಾಡಿಗೆ. ಹಣೆಯಲ್ಲಿ ಹೊಳೆಯುವ ಪುಟ್ಟ ಬಿಂದಿ. ರೇಶಿಮೆ ಕೂದಲು ಅದರಲ್ಲಿ ಕುಳಿತು ನನ್ನ ಹೊಟ್ಟೆಯುರಿಸಿದ್ದು ಮಲ್ಲಿಗೆಯ ಉದ್ದನೆಯ ಮಾಲೆ. .!




ಅದ್ಯಾಕೋ ನನ್ನ ಬಾಲ್ಯ ನೆನಪಾಗಿಬಿಟ್ಟಿತ್ತು. ನಾನೂ ಹಾಗೆ ಕೈತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಪುಟ್ಟ ಜುಟ್ಟಿಗೆ ಅದರ ಎರಡರಷ್ಟು ಉದ್ದದ ಹೂ ಮಾಲೆಯನ್ನು ಅಮ್ಮನತ್ರ ಜಗಳವಾಡಿ ಮುಡಿಯುತ್ತಿದ್ದೆ. ಗೋಲಾಕಾರದಲ್ಲಿ ಡಬ್ಬಿಯಲ್ಲಿ ಬರುವ ಆ ಬಣ್ಣಗಳಿಂದ ನನ್ನ ಹಣೆಯ ಮೇಲೆ ಚಿತ್ರ ವಿಚಿತ್ರವಾದ design ಮಾಡುತ್ತಿದ್ದೆ. ಅದೇನೋ ಖುಷಿಯಿತ್ತು ತನ್ಮಯತೆಯಿಂದ ಅಲಂಕರಿಸಿಕೊಳ್ಳುವುದರಲ್ಲಿ , ಆ ಕನ್ನಡಿಯ ಮುಂದೆ ನಾನೇ ಕಿನ್ನರಿ...! ಎಲ್ಲ ಗತವೈಭವ ಅನಿಸಿಬಿಡ್ತು.


ಈಗ ಬಳೆಗಳನ್ನು ಕಂಡರೆ ಒಂದು ರೀತಿಯ ಅಲರ್ಜಿ. ಅದನ್ನು ಕೊಳ್ಳುವ ಮಾತು ಬಿಡಿ ಇರೋದನ್ನೇ ಹಾಕಿಕೊಳ್ಳಲಾಗದ ಮನೋಸ್ಥಿತಿ. ಹಣೆಗೆ ಬೊಟ್ಟು ಇಡದೆ ಅದೆಷ್ಟು ವರುಷಗಳು ಕಳೆದಿತ್ತೋ. ಅಜ್ಜಿಯ ಮನೆಗೆ ಹೋಗುವಾಗ, ಭೂತ ಕನ್ನಡಿಯ ಹಿಡಿದು ಹುಡುಕಿದರೆ ಮಾತ್ರ ಕಾಣುವಂಥ ಒಂದು ಚುಕ್ಕಿಯನ್ನು ಇಡುತ್ತಿದ್ದೆ. .!ಒಂದೇ ಕಾಲಿಗೆ ಒಂದೆಳೆಯ ಬೆಳ್ಳಿ ಚೈನು ಅದೊಂಥರ fashion..! (ಇದರಿಂದ ತುಂಬಾ ಫಚೀತಿ ಅನುಭವಿಸಿದ್ದೇನೆ ಬಿಡಿ ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ ). ಇನ್ನು ಚೋಟುದ್ದದ ಕೂದಲು, ನಾಲ್ಕೈದು ಕ್ಲಿಪ್ ಗಳನ್ನು ಹಾಕಿ ಕಷ್ಟಪಟ್ಟು ಕಟ್ಟುತ್ತಿದ್ದ ಜುಟ್ಟು. ಇನ್ನು ಅದಕ್ಕೆಲ್ಲಿ ಮಲ್ಲಿಗೆಯ ಮಾಲೆ? ನನಗೆ ನಗು ಬಂದಿತ್ತು. ನಾಗರೀಕತೆ, fashion ಎಂದು ನಾವು ಕಳೆದು ಕೊಳ್ಳುತ್ತಿರುವುದೇನು? ನಮ್ಮ ಸಂಸ್ಕೃತಿಯನ್ನೇ ? ಅಥವಾ ನಮ್ಮನ್ನೇ? ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ನಾನು ನನ್ನ ನೆನಪುಗಳ ಮುಸುಕಿನಿದ ಹೊರಬಂದದ್ದು.


ಮತ್ತೊಮ್ಮೆ ಆ ಬಾಲೆಯತ್ತಲೇ ನನ್ನ ನೋಟ ಹರಿಯಿತು ಬೇಡವೆಂದರೂ. ಆಕೆಯೂ ನನ್ನತ್ತಲೇ ನೋಡುತ್ತಿದ್ದಳು. ಅವಳಿಗೆ ನನ್ನ ತುಂಡು ಕೂದಲು ಇಷ್ಟವಾಗಿದ್ದಿರಬೇಕು (ಹಾಗಂತ ನಾನು ಅಂದುಕೊಂಡದ್ದು). ನನ್ನ ಮನದೊಳಗೋ ಹೇಳಿಕೊಳ್ಳಲಾಗದ ಭಾವ. ಅದು ಮೆಚ್ಚುಗೆಯೋ ,ವಿಷಾದವೋ, ಅಸೂಯೆಯೋ ತಿಳಿಯಲಿಲ್ಲ ಆ ಕ್ಷಣಕ್ಕೆ.


ಇಳಿದು ಬಿಟ್ಟಿದ್ದೆ ಅಲ್ಲೇ ಜ್ಯೋತಿ ವೃತ್ತದ ಬಳಿ. ಹೂ ಮಾರುವವನ ಬಳಿ ಒಂದು ಮೊಳ ಹೂವನ್ನು ಕೊಂಡುಕೊಂಡಿದ್ದೆ. ಪಕ್ಕದ ಫ್ಯಾನ್ಸಿ ಅಂಗಡಿಗೆ ನುಗ್ಗಿ ಒಂದು ಡಜನ್ ಬಳೆಗಳನ್ನು, ಬಿಂದಿಗಳನ್ನು ತೆಗೆದುಕೊಂಡಿದ್ದೆ. ಅವೆಲ್ಲ ನನ್ನನ್ನು ಅಲಂಕರಿಸಿದ್ದವು. ನಾನು ಬಸ್ಸಲ್ಲಿರದಿದ್ದನ್ನು ಕಂಡ 'ಶಾಲು' phone ಮಾಡಿದ್ದಳು. "ಬರ್ತೇನೆ" ಎಂದು ಚುಟುಕಾಗಿ ಉತ್ತರಿಸಿ. ನಡೆದಿದ್ದೆ ಕಾಲೇಜಿನತ್ತ .


ಕ್ಲಾಸಿನೊಳಗೆ ಕಾಲಿಡುತ್ತಲೇ ಎಲ್ಲರೂ "ಹೋ " ಎಂದು ಬೊಬ್ಬಿಟ್ಟಿದ್ದರು. ಗೆಳೆಯ 'ಇಮ್ರಾನ್' ಬಂದು "hey sou..... what a cool surprize... looking cute and funny too .!" ಅಂದು ಬಿಟ್ಟಿದ್ದ. ಹುಸಿಕೋಪ ತೋರುತ್ತಲೇ ನನ್ನ ಜಾಗದತ್ತ ತೆರಳಿದ್ದೆ.


ಅವರಿಗೇನು ಗೊತ್ತಿತ್ತು ? ನನಗಾಗುತ್ತಿರುವ ಅನುಭೂತಿ, ಅವರ್ಚನೀಯ ಆನಂದ. ನನಗೋ ನನ್ನ ಬಾಲ್ಯಕ್ಕೆ ಮರಳಿದ ಅನುಭವ. ಓಡಿ ಬಿಟ್ಟಿದ್ದೆ ladies ರೂಮಿಗೆ. ಕನ್ನಡಿಯಲ್ಲಿ ಕಿನ್ನರಿಯಾಗಲು...!



Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ