ಮನದ ಹಾಳೆಯಲಿ ಸುಮ್ಮನೆ ಆಡುತ್ತ
ಒಂದಿಷ್ಟು ಚಿತ್ರಗಳನ್ನು ಬರೆದಿಟ್ಟಿದ್ದೆ ..
ನೀ ಬಂದೆ ಬಣ್ಣ ಹಚ್ಚಿಬಿಟ್ಟೆ.....
ಖುಷಿಯಾಗಿ ಕುಣಿದಿತ್ತು ಮನಸು
ರಸ್ತೆಯ ನೀರಲ್ಲಿ ಆಡುತ್ತ ಸಾಗುವ
ಐದರ ಹುಡುಗಿಯಂತೆ....!!
ರಾತ್ರಿಯಲಿ ಸುಮ್ಮನೆ ತಾರೆಗಳ ನೋಡುತ್ತಾ
ಒಂದಿಷ್ಟು ಕನಸುಗಳ ಮೂಟೆ ಕಟ್ಟಿದ್ದೆ ..
ನೀ ಬಂದೆ ಮೂಟೆ ಹೊತ್ತೊಯ್ದೆ ..
ಸುಮ್ಮನೆ ನೋಡುತ್ತಾ ನಿಂತುಬಿಟ್ಟೆ ನಾನು...!!
ಸಮುದ್ರ ದಂಡೆಯಲಿ ಅಲೆಗಳೊಂದಿಗೆ ಆಡುತ್ತ
ಮರಳ ಗೂಡೊಂದರ ಕಟ್ಟಿದ್ದೆ ..
ನೀ ಬಂದು ಅದರಲ್ಲಿ ಜೋಡಿ ಗೊಂಬೆಗಳ ಇಟ್ಟೆ..
ನಡೆದಿದ್ದೆ ನಾನು ಅದೆಷ್ಟೋ ದೂರ ನಿನ್ನ ಹೆಜ್ಜೆಗಳ ಮೇಲೆ...!!
ಹಾಯಿದೋಣಿ ಹಾಯಾಗಿ ಸಾಗಿತ್ತು ಮನವು
ಮುಸ್ಸಂಜೆಯ ಹೊಳೆದಂಡೆಯ ಅಂಚಿನಲಿ ...
ಪಕ್ಕನೆ ಗಲ್ಲಕ್ಕೆ ಮುತ್ತಿಟ್ಟಿದ್ದೆ ನೀನು ..
ಮೊದಲ ಬಾರಿಗೆ ನಾಚಿದ್ದೆ ನಾನು.. !!
ಅದೇಕೆ ಎದ್ದು ಹೋದೆ ?? ನನ್ನ ಬದುಕಿನ ಮಗ್ಗುಲಿನಿಂದ ...
ಕಾರಣವನ್ನೂ ಹೇಳದೆ..
ಜೋಡಿ ಗೊಂಬೆಯಲ್ಲಿ ಒಂದು ಕಳೆದಿದೆ.!
ಚಿತ್ರಗಳು ಮಸುಕು,
ಹಾಯಿ ದೋಣಿಯೂ ಮಸುಕು
ನನ್ನ ಕಣ್ಣೀರಿಗೆ ..ನೀ ಇತ್ತ ಮುತ್ತನ್ನು ಒರೆಸಲು ಮನಸ್ಸಿಲ್ಲವಂತೆ ...!!!
No comments:
Post a Comment