

ಕೆಲವು ದಿನಗಳ ಹಿಂದೆ ಸಿರ್ಸಿಗೆ ಹೊರಟಿದ್ದೆ ಒಬ್ಬಳೆ. ಕುಮಟಾ ಸಿರ್ಸಿ ಬಸ್ಸಿನಲ್ಲಿ. ಬೆಳಗಿನ ಸಮಯ, ಬಲಬದಿಯ ಕಿಟಕಿಯಂಚಿನ ಸೀಟು ಕೇಳಬೇಕೇ? ಪಕ್ಕದಲ್ಲಿ ಯಾರೂ ಇರಲಿಲ್ಲ (ಇದ್ದಿದ್ದರೆ ಮಾತಿರುತ್ತಿತ್ತು ). ಒಬ್ಬಂಟಿಯಾದಾಗ ಭಾವನೆಗಳೇ ನನ್ನ ಸಂಗಾತಿಗಳಾಗುವುದು ಮಾಮೂಲು. ನನಗಿಷ್ಟವಾಗುವ ರಸ್ತೆಗಳಲ್ಲಿ ಕುಮಟಾ-ಸಿರ್ಸಿ ರೋಡ್ ಕೂಡ ಒಂದು (ಮಂಗಳೂರು ವಿಶ್ವಮಂಗಳದ ರಸ್ತೆಯೂ ಬಹಳ ಇಷ್ಟವಾಗುತ್ತದೆ). ದ್ವಿಚಕ್ರ ವಾಹನದಲ್ಲಿ ಬಂದರೆ ಘಟ್ಟ ಇಳಿವಾಗಿನ ಮಜವೇ ಬೇರೆ. ರಸ್ತೆಯೊಂದು ಬಿಟ್ಟರೆ ಅಕ್ಕ ಪಕ್ಕವೆಲ್ಲ ಪ್ರಕೃತಿ ನಿರ್ಮಿತವಾದದ್ದು. ಆ ಹಸಿರು, ಮುಂಜಾವಿನ ಮಂಜಿನ ಮುಸುಕು, ಅಂಕು ಡೊಂಕಾಗಿ ಸಾಗುವ ರಸ್ತೆ, ಕನಸಂತೆ ಭಾಸವಾಗುವ ಪ್ರಕೃತಿ. ಮನಸೆಂಬ ಮಾಯವಿಗೆ ಇನ್ನೇನು ಬೇಕು ಕನಸು ಕಾಣಲು ? ಇದೇನು ಪ್ರವಾಸ ಕಥನವಂತೂ ಅಲ್ಲ. ನೀವು ತುಂಬಾ ಸಲ ಓಡಾಡಿರಬಹುದು ಈ ರೋಡಿನಲ್ಲಿ. ಪ್ರಕೃತಿಗೆ ನನ್ನ ಮನದ ಭಾವನೆಗಳ ಫ್ರೇಮು ಹಾಕಿದ್ದೇನೆ. ಕಂಡಂಥ ಮಾಮೂಲು ಘಟನೆಗಳಿಗೆ ಭಾವನೆಗಳದ್ದೆ ಕನ್ನಡಿ ಹಿಡಿದಿದ್ದೇನೆ. ಮನದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಕನಸಿನಂತೆ ಬಿಡಿಬಿಡಿಯಾಗಿ ಕಾಣುವ ಸಾಲುಗಳನ್ನು ಓದಿ ನೋಡಿ:
*ಕುಮಟಾದ ಉಪ್ಪಾರ ಕೇರಿಯ ಗಣಪತಿಯ ಮುಂದೆ ಹಾಕಿದ್ದ ಪೆಂಡಾಲು ಬಿಚ್ಚುತ್ತಿದ್ದ ಮುದುಕ, ಪಕ್ಕದಲ್ಲೇ ನಿಂತು ಸಹಾಯವನ್ನೂ ಮಾಡದೆ ಹುಡುಗಿಯರ ನೋಡುತ್ತಾ ಹಲ್ಲು ಕಿಸಿಯುತ್ತಿದ್ದ ಯುವಕ..!
*ವಾಹನಗಳ ಸದ್ದಿಗೆ ಕಿವಿಮುಚ್ಚಿಕೊಂಡು ಪಕ್ಕಾ ಆಳಸಿಯಂತೆ ಬಿದ್ದಿರುವ ರಸ್ತೆಯನು ಗುಡಿಸುತ್ತಿರುವ ಹೆಂಗಸು, ಅದೀಗ ತಾನೆ ಅಂಗಡಿ ತೆರೆದು ಕಡ್ಡಿ ಗೀರುತ್ತಿರುವ ಗೂಡಂಗಡಿಯ ಮಾಲೀಕ.
*ಬೆಳೆದು ದೊಡ್ಡವಳಾಗಿ ಹಸಿರಾಗುವ ಹಂಬಲದಲ್ಲಿದ್ದಂತೆ ತೋರುವ ರಸ್ತೆಯ ಬದಿಯ ಗಿಡದ ಕೆಂಪು ಚಿಗುರು.
*ಬಟಾ ಬಯಲಾಗಿ ಮಲಗಿದ ಕಳೆ ತುಂಬಿಕೊಂಡು ಅಸ್ತವ್ಯಸ್ತವಾಗಿರುವ ಗದ್ದೆ. ಪಕ್ಕದಲ್ಲೇ ಹಾಳು ಸೋರುತ್ತಿರುವ ಮಾಳ ( ಗದ್ದೆ ಕಾಯಲು ಮಾಡಿರುವ ಸಣ್ಣ ಜೋಪಡಿ). ಮನದೊಳಗೆ ಅದೇನೋ ಕಳವಳದ ಭಾವ.
*ಬೃಹತ್ ಮರದ ಅಗಲ ಉದ್ದಗಳನ್ನು ಅಳೆವಂತೆ ಮರವ ಸುತ್ತಿಕೊಂಡಿರುವ ಅದಾವುದೋ ಕಾಡು ಬಳ್ಳಿ. ಹೂ ಬಳ್ಳಿ ನೀನಾಗು ಅರಳಿ ಮರದಲಿ ತೂಗು, ನಾನೇ ಮಾಮರವಾಗಿ ಮೆರೆಯಲೇನು... ಎಂಬ ಭಾವಗೀತೆಯೊಂದರ ಸಾಲನ್ನು ತಂತಾನೇ ಗುನುಗಿಕೊಂಡ ಮನಸು.
*ಪಕ್ಕದ ಬಂದಳಕ (ಪರಾವಲಂಬಿ ಗಿಡ) ಹಿಡಿದು ಬತ್ತುತ್ತಿರುವ ಮರದ್ದೇ ಚಿಂತೆಯಲ್ಲಿರುವಂತೆ ತೋರುವ ಗೆದ್ದಲು ಹಿಡಿದು ಹಾಳಾದ ಮರದ ಬೊಡ್ಡೆ..!
*ಕಾಡು ಹೂವೊಂದರ ಮಕರಂದವ ಹೀರುವ ಗಡಿಬಿದಿಯಲ್ಲಿರುವ ದುಂಬಿ.
*ಗಿಡಗಳ ಎಲೆಯ ಮೇಲಿರುವ ನೀರಹನಿಯಲ್ಲಿ ತನ್ನ ಬಿಂಬ ನೋಡುವ ಹಂಬಲದಲ್ಲಿರುವ ಸೂರ್ಯ ರಶ್ಮಿ.
*ಹುಚ್ಚು ಮಳೆಗೆ ಹುಚ್ಚೆದ್ದು, ಕಡಲ ಸೇರುವ ಧಾವಂತದಲ್ಲಿ ಬೆಳ್ಳಿ ನೆರಿಗೆಯ ಚಿಮ್ಮಿಸುತ್ತಾ ಸಾಗುತ್ತಿರುವ ಝರಿ ..! ರಸ್ತೆಯ ಬದಿಗೆಲ್ಲ ತಾತ್ಕಾಲಿಕ ಜೋಗವನ್ನು ನಿರ್ಮಿಸುವ ಮಳೆರಾಯನ ಲೀಲೆಗೆ ಮೆಚ್ಚಿಕೊಂಡ ಮನಸು.
*ಕಣ್ಮುಚ್ಚಿ ಸುರಿದ ಮಳೆಗೆ ಚಳಿಯೆದ್ದು, ಹಸಿರ ಚಾದರ ಹೊದ್ದು ಮಲಗಿರುವ ಭೂರಮೆ ..!
*ಅದ್ಯಾವುದೋ ಊರಿಗೆ ಹೋಗುವ ಕಾಲು ಹಾದಿಯಲಿ ದನಗಳ ಹಿಂಡಿನ ಹಿಂದೆ ಹೊರಟ ಪೋರನ ಕೈಯಲ್ಲಿ ಒಡತಿ ಕೊಟ್ಟ ಚಕ್ಕುಲಿ..!
*ಅದೆಲ್ಲಿ ಮಳೆಹನಿಸಲಿ ಎಂಬ confusionನಲ್ಲಿ ಇದ್ದಂತೆ ಕಂಡ, ಘಳಿಗೆಗೊಮ್ಮೆ ವೇಷ ಬದಲಿಸುವ ಕಾರ್ಮೋಡದ ತುಂಡು.
*ದಾರಿ ಪಕ್ಕ ನಿಂತು ವಾಹನಗಳ ಗಣತಿ ಮಾಡುವಂತೆ ಕಾಣುವ OFC (Optical Fiber Cable)ಯ ಬೋರ್ಡುಗಳು.
*ದಟ್ಟ ಕಾನನದಲ್ಲಿ ಹರಿವ ಹಳ್ಳವೊಂದರಲ್ಲಿ ಮೀನು ಹಿಡಿಯಲು ದೃಷ್ಟಿ ನೆಟ್ಟಿರುವ ಮಿಂಚುಳ್ಳಿ(Kingfisher), ಹಿಡಿದಿದ್ದು ನೋಡಬೇಕಿತ್ತು ಅಂದುಕೊಂಡ ಮನಸು, ಬಸ್ಸಿನೊಂದಿಗೆ ಮುಂದೆ ಸಾಗಿದ ದೇಹ..!
*ಬಾನಲ್ಲಿ ಬಿಳಿ-ಕರಿ ಮೋಡಗಳ ತಕಧಿಮಿ, ಅದೆಲ್ಲೋ ಕಾಣುವ ನೀಲಾಕಾಶ ಅದಕ್ಕೆ ಯಾವುದಾದರೊಂದು ಆಕಾರದ ಹೋಲಿಕೆ ಕೊಡುವ ಹಂಬಲದಲ್ಲಿದ್ದ ಮನಸು.
*ಚಪ್ಪಲಿರಹಿತ ಪಾದಗಳ ಹೆಜ್ಜೆ ಗುರುತಿಗಾಗಿ ಕಾದು ಕುಳಿತಂತೆ ಕಾಣುವ ಹಸಿಮಣ್ಣು ..!
*ರೋಡಿನಲ್ಲಿಯ ಹೊಂಡಗಳ ಪ್ರಭಾವದಿಂದ 'Tap dance' ಮಾಡುತ್ತಿರುವ ಬಸ್ಸಿನ ಕಿಟಕಿಯ ಗಾಜುಗಳು.!
*20 ರ ಆಸುಪಾಸಿನ ತರುಣಿ ಅವಳ ಬೆನ್ನಿಗೆ ಆರಾಮವಾಗಿ ಮಲಗಿರುವ ಅವಳ ಉದ್ದನೆಯ ಜಡೆಯ ಮೇಲೆ ನನ್ನ ಕಣ್ಣು. ಕುತ್ತಿಗೆಗೆ ಕಚಕುಳಿಯಿಡುತ್ತಿರುವ ನನ್ನ ಜುಟ್ಟಿನ ಮೇಲೆ ಅವಳ ಕಣ್ಣು ..!
*ಅದಾವುದೋ ಅಡ್ರೆಸ್ಸ್ ಹೇಳಲು ತಿಣುಕಾಡುತ್ತಿರುವ ನಿರ್ವಾಹಕ. 'ಗಂಧರ್ವ ಬಾರ್ ' ಎಂದೊಡನೆ ತಿಳಿದುಕೊಂಡ ಪ್ರಯಾಣಿಕ..!
* ತಲೆಯ ಮೇಲಿನ ಖಾಲಿ ಜಾಗವನ್ನು ಮುಚ್ಚಲು. ಮಳೆಗಾಲದಲ್ಲೂ ಡೆನಿಮ್ ಕ್ಯಾಪ್ ಹಾಕಿಕೊಂಡಿದ್ದ ಯುವಕ..!
*ಸರಗೋಲನ್ನು ಅನಾಯಾಸವಾಗಿ ಜಿಗಿದು ತೋಟಕ್ಕೆ ಜಿಗಿದ ದನ. ಎತ್ತು ಇರಬಹುದೆಂದು ಕುತೂಹಲ ತಡೆಯಲಾಗದೆ ತಿರುಗಿ ನೋಡಿದರೆ ಅದು ಆಕಳು..!
*ಹಠ ಮಾಡುತ್ತಾ ಕೆನ್ನೆಯ ಮೇಲೆ ಅಲೆದಾಡುವ ಮುಂಗುರುಳುಗಳು, ಯಾರದೋ ನೆನಪಾಗಿ ನಗುವ ಹುಡುಗಿಯ ಕೆನ್ನೆಯ ಮೇಲೆ ಮೂಡುವ ಗುಳಿ. .!
*ಅಮ್ಮ ಹೆಣೆದುಕೊಟ್ಟ ಎರಡು ಜಡೆಗೆ ಎರಡು ಡೇರೆ ಹೂವು ಮುಡಿದು ಜಂಭದಿಂದ ಹೆಜ್ಜೆ ಹಾಕುತ್ತಿರುವ ಕನ್ನಡ ಶಾಲೆಯ ಹುಡುಗಿ, ನೆನಪಾದ ನನ್ನ ಶಾಲಾ ದಿನಗಳು..!
ಹೀಗೆ ಸಮಯದ ಜೊತೆಗೆ ಓಡುತ್ತಿದ್ದ ಬಸ್ಸಿನಲ್ಲಿ cell phonenalli ನಾನು ಇದೆಲ್ಲ ಬರೆಯುತ್ತಿದ್ದೆ. ಅದೇನು ಅಂದುಕೊಂದರೋ ನೋಡಿದ ಜನರು, ನನಗಾವ ಪರಿವೆಯಿರಲಿಲ್ಲ. ಸುಮ್ಮನೆ ಸುತ್ತಲಿನ ಆಗು ಹೋಗನ್ನು ಕುತೂಹಲದ ಕನ್ನಡಕದೊಳಗೆ ನೋಡುತ್ತಲಿದ್ದರೆ. ಮನಸು ಅದನ್ನು ಶಬ್ದದ ರೂಪದಲ್ಲಿ ಹಿಡಿದಿಡುತ್ತಲಿತ್ತು. ಕೈ ಬರಹಕ್ಕೆ ಇಳಿಸುತ್ತಲಿತ್ತು. ಸಿರ್ಸಿ ಬಸ್ಸ್ಟ್ಯಾಂಡ್ ಬಂದದ್ದೆ ತಿಳಿಯಲಿಲ್ಲ. ನನ್ನಷ್ಟಕ್ಕೆ ನಾನು ನಗುತ್ತಿದ್ದೆ. ನಗುವಿಗೆ ಕಾರಣವೇ ತಿಳಿಯಲಿಲ್ಲ. ಅಥವಾ ಇರಲಿಲ್ಲವೋ ಗೊತ್ತಿಲ್ಲ. .!







