Thursday, July 28, 2011

ದೋಸ್ತಿಗೊಂದು hats off

ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಗಳೆಲ್ಲ ಮುಗಿದು, ಬಾರಲ್ಲಿ ಬೀಯರ್, ವೋಡ್ಕಾ, ರಮ್, ಹೀರುತ್ತಿರುವ Final year ಹುಡುಗರ ಗುಂಪು ಅದು . ಮಾಮೂಲಿಯಾಗಿ ಇರುತ್ತಿದ್ದಂತೆ ಗಲಾಟೆಯೇ ಇಲ್ಲ ಅಲ್ಲಿ. ಬದಲಾಗಿ ಅಲ್ಲಿರುವುದು ಕಾಲು ಮುರಿದು ಬಿದ್ದಿರುವ ಮೌನ..! ಗ್ಲಾಸಿನಲ್ಲಿಯ ಕೊನೆಯ ಗುಟುಕನ್ನೂ ಹೀರಿ ಏಳುವಾಗ, ಎಲ್ಲರ ಕಣ್ಣಂಚು ಒದ್ದೊದ್ದೆ. examಗಳೆಲ್ಲ ಮುಗಿದು ಇಂಜಿನಿಯರಿಂಗ್ ಮುಗಿಸಿದ ಖುಷಿಗೋ. ಅಥವಾ ನೆನಪುಗಳ ಮೂಟೆ ಹೊತ್ತು, ಗೆಳೆಯರ ಬಳಗವನ್ನು ಬಿಟ್ಟು 
 ಹೊರಡುವುದಕ್ಕೋ ತಿಳಿಯದ ಭಾವ. ಕಣ್ಣ ಕೊನೆಯ ಹನಿಗೆ ಕಾರಣವೇ ತಿಳಿಯದಂತ ವಿಚಿತ್ರ ಸನ್ನಿವೇಶ.!




ಮೊನ್ನೆ ಬಸ್ಸಿನಲ್ಲಿ ಸಿಕ್ಕ ಗೆಳೆಯನೊಬ್ಬ ಹೀಗೆ ಹೇಳುತ್ತಿದ್ದರೆ, ನನ್ನ ಕಣ್ಣ ಅಂಚು ಒದ್ದೊದ್ದೆ. ಮನದೊಳಗೆ ತಣ್ಣನೆಯ ಹೊಟ್ಟೆಕಿಚ್ಚು. ನಾನು ಹುಡುಗನಾಗಬೇಕಿತ್ತೆಂದು ಆ ಘಳಿಗೆಗೆ ಅನಿಸಿದ್ದಂತೂ ಸುಳ್ಳಲ್ಲ.


ಎಲ್ಲೋ ಇಂಥದ್ದೊಂದು ಘಳಿಗೆಯಲ್ಲೇ ಸ್ನೇಹಕ್ಕೆ ನಾವು hats off ಎನ್ನುವುದು. ಜೊತೆಗೆ 'ಪ್ರೇಮಲೋಕ'ಕ್ಕಿಂತ 'ಸ್ನೇಹಲೋಕ' ಬೇರೆಯಾಗಿ ನಿಲ್ಲುವುದು!
ಈ ಸ್ನೇಹಲೋಕವೇ ತೀರಾ ವಿಚಿತ್ರ. ವಯಸ್ಸು, ಲಿಂಗ, ಜಾತಿ, ಧರ್ಮ ಎಲ್ಲವನ್ನು ಮೀರಿ ಬೆಳೆಯುವ ಗೆಳೆತನಕ್ಕೆ ಸರಿ ಸಾಟಿ ಗೆಳೆತನವೇ.!
ಜೀವನದ ದಾರಿಯ ಅದ್ಯಾವುದೋ ತಿರುವುಗಳಲ್ಲಿ ಸಿಗುವ ಸ್ನೇಹಿತರು ನೆಂಟರಿಗಿಂತ ಆಪ್ತರೆನಿಸಿ ಬಿಡುತ್ತಾರೆ. ಭಾವನಾ ಜೀವಿ ಎನಿಸಿಕೊಳ್ಳುವ ಮನುಷ್ಯ ಹುಟ್ಟಿದಂದಿನಿಂದ ಕೊನೆಯುಸಿರಿರುವ ತನಕವೂ ಸ್ನೇಹಿತರ ತಲಾಶಿನಲ್ಲೇ ಇರುತ್ತಾನಂತೆ.

ಗೆಳೆತನ ಎನ್ನುವುದು ಬಾಲ್ಯದಿಂದಲೇ ಇರುತ್ತದೆಯಾದರೂ.ಅದಕ್ಕೆ ಅರ್ಥ ಬರತೊಡಗುವುದು ಹದಿಹರೆಯದ ಸಮಯದಲ್ಲೇ.ಒಬ್ಬ ಮನುಷ್ಯನ ಏಳ್ಗೆ ಅಥವಾ ಅವನತಿ ಅವನ/ಅವಳ ಹದಿಹರೆಯದಲ್ಲಿ  ಸಿಗುವ ಸ್ನೇಹಿತರ ಮೇಲೆ ಅವಲಂಬಿತ ಎಂದರೆ ಅತಿಶಯೋಕ್ತಿ ಅಲ್ಲ.ಬಾಲ್ಯದಲ್ಲಿ ಆಟಕ್ಕೆ ಜೊತೆಯಾಗುವವರೆಲ್ಲ ಗೆಳೆಯರೇ. ಹೆಣ್ಣು ಮಗುವಿಗಾದರೆ ಅವಳ 'ಜುಟ್ಟು ಗೊಂಬೆ' ಆತ್ಮೀಯ ಗೆಳತಿ ಎನಿಸಿ ಬಿಡುತ್ತಾಳೆ. 'ಮಗುವಿನ ನಿರ್ಜೀವ ಗೊಂಬೆಯೊಂದಿಗಿನ ಸಂಭಾಷಣೆ ಜೀವಕ್ಕೆ ಗೆಳೆತನವೊಂದರ ಮಹತ್ವವನ್ನು ಆಗಲೇ ತಿಳಿಸುತ್ತದೆ'. 


ಒಂದು ಮಗು ಬೆಳೆದು ಹದಿಹರೆಯವನ್ನು ತಲುಪಿದಾಗಲೇ ಒಂದು ಜೀವಕ್ಕೆ ಹತ್ತಿರವಾದ ಗೆಳೆತನದ ಅವಶ್ಯಕತೆ ಬೇಜಾನ್ ಕಾಡುತ್ತದೆ.

ಹುಡುಗರಲ್ಲಿ ಬಯಲಲ್ಲಿ ಕ್ರಿಕೆಟ್ ಆಡುವ,ಚಿನ್ನಿದಾಂಡು ಆಡುವ ಗೆಳೆಯರ ಬಳಗ ಬಾಲ್ಯದಲ್ಲಿ ಸಾಮಾನ್ಯ. ಹುಡುಗಿಯರದಾದರೆ ಅಡುಗೆ ಆಟ, ಕುಂಟು ಬಿಲ್ಲೆಯಾಟದ ಗೆಳತಿಯರು. 'ಬಾಲ್ಯದಲ್ಲಿ 'ಸ್ನೇಹ' ಎಂದರೆ ಆಟಕ್ಕೆ ಜೊತೆಯಾಗುವವರು'. ಜೀವನದ ಆಟದಲ್ಲಿ ಜೊತೆಯಾಗುವವರೆಲ್ಲ ಸ್ನೇಹಿತರು ಎಂಬುದನ್ನು ಬಾಲ್ಯದಲ್ಲಿಯೇ ಬದುಕು ಕಲಿಸುತ್ತದೆ ಎನಿಸಿಬಿಡುತ್ತದೆ.

ಗೆಳೆತನ ಅರಳಿಕೊಳ್ಳುವ ಬಗೆಯೇ ಒಂದು ಗಿಡದಲ್ಲಿ ಮೊಗ್ಗು ಅರಳಿ ಹೂವಾದಂತೆ ನವಿರು. ಕಡಲ ಅಲೆಗಳಿಗೆ ದಡದ ಸಾಂತ್ವನದಂತೆ, ಸಾಂಗತ್ಯದಂತೆ. ಜೀವದ ಭಾವಗಳಿಗೆಲ್ಲ ಜೊತೆ ಗೆಳೆತನ. 'ನೀನು ಅತ್ತಾಗಲೆಲ್ಲ ನಿನಗೆ ಭುಜವಾಗುವೆ. ನೀನು ನಕ್ಕಾಗ ನಿನ್ನ ಕಂಗಳ ಅಂಚಿನಲ್ಲಿ ಮೂಡುವ ಗೆರೆಗಳಾಗುವೆ. ಜೀವನ ಎನ್ನುವುದರಲ್ಲಿ ಇರುವುದು ಮುಖ್ಯವಾಗಿ ಎರಡೇ ಭಾವ ನಗು- ಅಳು. ಅದೆರದಕ್ಕೆ ಜೊತೆಯಾಗುವೆ ಎನ್ನುವ ಸ್ನೇಹವನ್ನು ಜೀವನ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ ಅಲ್ವಾ ?

ಮನುಷ್ಯ ತನ್ನಲ್ಲಿಲ್ಲದ್ದನ್ನು ಹುಡುಕುತ್ತಲೇ ಇರುತ್ತಾನೆ. ಸಿಕ್ಕಾಗ ಅದರೆಡೆಗೆ ಆಕರ್ಷಿತವಾಗುವುದು ಸಹಜ.  ಈ ಸ್ನೇಹ ಬೆಳೆಯುವುದೇ ಪರಸ್ಪರ ವಿರುದ್ಧ ಸ್ವಭಾವದವರೊಂದಿಗೆ.ಅಭಿರುಚಿ,ಆಸಕ್ತಿ,ಹವ್ಯಾಸಗಳು ಒಂದೇ ಬಗೆಯಾಗಿರುವವರು ಒಳ್ಳೆಯ ಸ್ನೇಹಿತರಾಗಬಹುದು. ಆದರೆ ಆತ್ಮೀಯತೆ, ಜೀವದ ಗೆಳೆತನ ಬೆಳೆಯುವುದು ವಿರುದ್ಧ ಸ್ವಭಾವದವರೊಂದಿಗೆ. ಪರಸ್ಪರ ಅಂತರ ಗಳನ್ನು ಗೌರವಿಸಿದಾಗಲೇ ಅಲ್ಲಿ ಆತ್ಮೀಯತೆಯ ಮೊಳಕೆಯೊಂದು ಮೂಡುವುದು. ಜೀವನ 'ಜೀವನ' ಎನಿಸಿಕೊಳ್ಳುವುದೂ   ಕೂಡ ಎಲ್ಲೋ ಅದೇ ಹಂತದಲ್ಲಿ. 

ಜಗಳವಾಡುತ್ತಲೇ ಇರುವ ಗೆಳತಿಯರು ಜೀವದ ಗೆಳತಿಯರು:
ಹುಡುಗಿಯರ ನಡುವಿನ ಸ್ನೇಹದ ಜಗತ್ತೇ ಬೇರೆ.ಆ ಜಗತ್ತಿನಲ್ಲಿ ಗಾಸಿಪ್ ಗಳಿವೆ, ಬಣ್ಣಬಣ್ಣದ ಚಂದನೆಯ ಅಂಗಿಗಳಿವೆ. ಕ್ಲಿಪ್ನಿಂದ ಹಿಡಿದು ಚಪ್ಪಲಿಯವರೆಗಿನ ಮ್ಯಾಚಿಂಗ್ ಸಂಗತಿಗಳಿವೆ. ಅದ್ಯಾವುದೋ ಚಾನೆಲ್ಲಿನ, ಅದ್ಯಾವುದೋ ಧಾರಾವಾಹಿಯ ಕಥೆಯಿದೆ. ನೇರ ಕೂದಲಿನ, ಮೊನಚು ಕಂಗಳ ಹುಡುಗನ ನೋಟದ ಬಗ್ಗೆ 'ಗುಸು ಗುಸು' 'ಪಿಸು ಪಿಸು' ಇದೆ. ಬೆಂಚಿನಲ್ಲಿ ಪಕ್ಕ ಕೂರುವ ಗೆಳತಿಗೆ chemistry  ಪೇಪರಿಗೆ ಹೆಚ್ಚು ಅಂಕ ಬಂದದ್ದಕ್ಕಾಗಿ  ಹೊಟ್ಟೆಯೊಳಗೊಂದು  ತಣ್ಣನೆಯ ಹೊಟ್ಟೆ ಕಿಚ್ಚಿದೆ. ಬಳಸುವ ಶಾಂಪೂ, ನೈಲ್ polishಗಳ ಕುರಿತು ಗಂಭೀರವೆನಿಸುವ ಚರ್ಚೆಯಿದೆ. ಇನ್ನೊಬ್ಬಳ ಸಲ್ವಾರಿನ ಬಗ್ಗೆ, V neck ಟೀಶರ್ಟ್ ಬಗ್ಗೆ, ಹೊಸ hair style ಕುರಿತು ಕಾಮೆಂಟುಗಳಿವೆ. ರಾತ್ರಿ ತಾನು  ಮೆಸೇಜ್ ಮಾಡಿದರೆ ಬೈಯ್ಯುವ, ಅಣ್ಣ ಮಧ್ಯ ರಾತ್ರೆಗೆ ಫೋನ್ ನಲ್ಲಿ ಮಾತನಾಡಿದರೂ ಏನೂ ಹೇಳದ ಅಮ್ಮನ ಬಗ್ಗೆ ಆಕ್ಷೇಪವಿದೆ. ಹುಚ್ಚು ಹಿಡಿಸುವ ಭಾವಗೀತೆಯೊಂದರ ಸಾಲಿದೆ.  

ಈ possessiveness ಕೂಡ ಹುಡುಗಿಯರ ಗುಂಪಿನಲ್ಲೇ ಜಾಸ್ತಿ. ಆತ್ಮೀಯ ಗೆಳತಿ ಇನ್ನೊಬ್ಬರ ಜೊತೆ ಹೊರಟರೆ ಈಕೆಗೆ ಅದೇನೋ ಒಂದು ಬಗೆಯ ಬೇಸರ. ಸಂಜೆ ಒಟ್ಟಾಗಿ ಮನೆಗೆ ಹೋಗುವಾಗ ಮನಸ್ಸಿನಲ್ಲಿಯ ಸಿಟ್ಟು ಮೌನದ ದಾರಿ ಹಿಡಿದಿರುತ್ತದೆ. ಒಮ್ಮೊಮ್ಮೆ ಸಿಟ್ಟು ಜಾಸ್ತಿಯಾಗಿ ಗೆಳತಿಗೂ ಕಾಯದೆ ಬೇರೆ ದಾರಿಯಿಂದ ಮನೆಗೆ ಹೋಗುವುದೂ ಇದೆ. ಪಿಕ್ನಿಕ್ ಗೆಂದು ಹೊರಟ ಗೆಳತಿಯರ ಗುಂಪೊಂದರ ಮಧ್ಯೆ ಜಗಳವಾಗಿ ಎಲ್ಲರೂ ವಾಪಸ್ ಮನೆಗೆ ಮರಳದ್ದೂ ಇರುತ್ತದೆ. ಆದರೂ ಸದಾ ಜಗಳ ಆಡುತ್ತಲೇ ಇರುವ ಗೆಳತಿಯರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತಾರೆ. ಮೆದುವಾಗಿ ಸದ್ದಿಲ್ಲದೇ ಜಗಳದ ಹಂದರದೊಳಗಿನಿಂದಲೇ ಆತ್ಮೀಯತೆಯ ಕುಸುಮವೊಂದು ಸದ್ದಿಲ್ಲದೇ ಮೂಡಿರುತ್ತದೆ. ಕಣ್ಣೀರು, ಜಗಳ ಇವೆಲ್ಲ ಹುಡುಗಿಯರ ದೋಸ್ತಿಯಲ್ಲಿ ಮಾಮೂಲಿಯ ಸಂಗತಿಗಳು.ಒಬ್ಬ ಹುಡುಗಿಗೆ  ಹುಡುಗರಲ್ಲಿ ಅದೆಷ್ಟೇ ಆತ್ಮೀಯ ಗೆಳೆಯರಿರಲಿ ಆದರೆ ಅವಳು ತನ್ನ ಮನದಾಳದ ಭಾವದ ಮಾತುಗಳನ್ನೆಲ್ಲ ಬಿಚ್ಚಿಟ್ಟು 'ಅವಳಾ'ಗುವುದು ಒಬ್ಬ 'ಸ್ತ್ರೀ' ಕುಲಕ್ಕೆ ಸೇರಿದವರ ಬಳಿ ಮಾತ್ರ. ಅದು ಅಮ್ಮನಾಗಿರಬಹುದು, ಅಜ್ಜಿಯಾಗಿರ ಬಹುದು, ಅಕ್ಕ ಅಥವಾ ಗೆಳತಿಯಾಗಿರಬಹುದು. ಹುಡುಗಿಗೆ ಮದುವೆಯಾಗಿ ಸಂಸಾರಿ ಎನಿಸಿದಾಗ ಗೆಳೆತನ ಒಂದು phone callಗೋ, ಮೆಸೇಜಿಗೋ ಸೀಮಿತವಾಗುತ್ತದೆ.

ಒಮ್ಮೆ ಜಗಳವಾಡಿದರೆ ಮತ್ತೆ ಬೆಸೆಯಲು ಕಷ್ಟ ಎನಿಸುವ ಹುಡುಗರ ಸ್ನೇಹ

ಮೊದಲಿನಿಂದಲೂ ನನಗೆ ಹುಡುಗರ ಸ್ನೇಹಲೋಕವೇ ಇಷ್ಟ. ಹೆಗಲಿಗೆ ಹೆಗಲು ಕೊಡುವುದನ್ನೂ, ಆಪತ್ತಿನಲ್ಲಿ ಒಂದಾಗುವುದನ್ನು ಹುಡುಗರ ಬಳಿಯೇ ಕಲಿಯಬೇಕು.

ಅಲ್ಲಿ ಶರಾಬಿನ  ನಶೆಯಿದೆ, ಸಿಗರೇಟಿನ ಹೊಗೆಯಿದೆ, ರಾಜಕೀಯ, ಕ್ರೀಡೆಗಳ ಚರ್ಚೆಯಿದೆ. ಮರಿಯಾ ಶರಪೋವ, ಪ್ರಿಯಾಂಕ ಚೋಪ್ರಳ ಬಗ್ಗೆ 'too hot ಮಗಾ'  ಎಂಬ ಉದ್ಗಾರವಿದೆ ಇದೆ. royal enfield ಬೈಕಿನ ಕಿಕ್ಕಿದೆ. ಮೊನ್ನೆ ಮೊನ್ನೆ ಕಾಲೇಜನ್ನು  ಸೇರಿಕೊಂಡ ಹೊಸ ಹುಡುಗಿಯ ಬಗ್ಗೆ ಕುತೂಹಲವಿದೆ. ರಾತ್ರಿಯ ನೀರವ ರಾತ್ರಿಗಳಲ್ಲಿ ಟೆರೆಸಿನಲ್ಲಿ ಆಡುವ ಇಸ್ಪೀಟಾಟದ ಕಾರ್ಡುಗಳಿವೆ. ನಿರ್ಜನ ರಸ್ತೆಗಳಲ್ಲಿ ಹುಚ್ಚಾಗಿ ಓಡಿಸುವ ಬೈಕಿನ ಸದ್ದಿದೆ. ಕರೆಂಟಿಲ್ಲದ ರಾತ್ರಿಯ ರೂಮಿನಲ್ಲಿ ಯಾರೊಬ್ಬರೂ ದೀಪ ಹಚ್ಚಲು ಹೋಗದೆ ಹಾಡಿದ ಹಾಡಿನ ಸಾಲುಗಳಿವೆ. ಹುಡುಗಿ ಬಿಟ್ಟು ಹೋದದಿನ ಬೇಜಾನ ಕುಡಿದು, ಗೆಳೆಯನ ಹೆಗಲಿಗೆ ತಲೆಯಿಟ್ಟು ಬಿಕ್ಕಳಿಸಿದ ಪ್ರತಿಧ್ವನಿಯಿದೆ. ಸುಮ್ಮನೆ ಔಟ್ ಎಂದು ತೀರ್ಪು ಕೊಟ್ಟ ಅಂಪೈರ್ ಬಗ್ಗೆ ಅಸಮಾಧಾನದ ಮಾತಿದೆ. 

ಆದರೆ ಒಮ್ಮೆ ಜಗಳವಾಗಿ ಮುರಿದು ಹೋದ ಹುಡುಗರ ನಡುವಿನ ಸ್ನೇಹವನ್ನು  ಮೊದಲಿನ ಜಾಡಿಗೆ ತರುವುದು ನಿಜಕ್ಕೂ ಕಷ್ಟ. ಜೀವಕ್ಕೆ ಜೀವ ಕೊಡುವ ಗೆಳೆಯರು ಒಬ್ಬರನ್ನೊಬ್ಬರ ಮುಖ ನೋಡಲು ಇಷ್ಟ ಪಡದವರಾದ ಉದಾಹರಣೆ ಬಹಳಷ್ಟಿದೆ. ಜಗತ್ತ್ನಲ್ಲಿ ನಿಷ್ಕಲ್ಮಶ ಸ್ನೇಹ, ಪ್ರೀತಿ ಸಿಗುವುದು ಬಹಳ ಅಪರೂಪ. 

**misunderstandingನಿಂದಾಗಿ ವರ್ಷಗಟ್ಟಲೆ ಮಾತನಾಡದ, ಆದರೂ ಒಬ್ಬನ್ನೊಬ್ಬರು ಮಿಸ್ ಮಾಡುತ್ತಿದ್ದ ಇಬ್ಬರು ಗೆಳೆಯರು. ಒಬ್ಬ ಕುಡಿದಾಗಲೆಲ್ಲ ಮಾತನಾಡುವುದು ತನ್ನ ಇನ್ನೊಬ್ಬನ(ಮಾತನಾಡದ)ಗೆಳೆಯನ ಬಗ್ಗೆಯೇ, ಅವನ್ನನ್ನು ಮಿಸ್ ಮಾಡುತ್ತಿರುವ ಬಗ್ಗೆಯೇ.  ಇನ್ನೋರ್ವ ego-problemನಿಂದಾಗಿ ನಿರ್ಲಿಪ್ತ. "ನಾನೇಕೆ sorry ಕೇಳಲಿ ?" ಇದು ಇಬ್ಬರ ಮನದ ಪ್ರಶ್ನೆ. ! ಉಳಿದ ಗೆಳೆಯರಿಗೆಲ್ಲ ಅವರಿಬ್ಬರನ್ನು ಒಂದು ಮಾಡಲೇ ಬೇಕೆಂಬ ಹಠ.

ಒಂದು ಮಬ್ಬುಗತ್ತಲಿನ ಸಂಜೆ, ಇಬ್ಬರೂ ಅಕ್ಕ ಪಕ್ಕ ನಿಂತಿದ್ದರೂ ಇಬ್ಬರ ನಡುವೆ ego ಕಂದಕ. ಅವರಲ್ಲೊಬ್ಬ ಸೇತುವೆಯ ಕಟ್ಟಿಯೇ ಬಿಟ್ಟ..! ಮಬ್ಬುಗತ್ತಲಿನಲ್ಲಿಯೇ ಇನ್ನೊಬ್ಬನ ಮುಖವ ನೋಡುತ್ತಾ "sorry ಮಗಾ " ಅಂದ್ಬಿಟ್ಟ..! ಇನ್ನೊಬ್ಬನ ಕಣ್ಣಲ್ಲಿ ನೀರು! ಒರೆಸುತ್ತಾ ಅಂದ  "ನಂದೂ ತಪ್ಪಿದೆ, sorry  ಕಣೋ ". ಕೊನೆಗೆ ತಿಳಿದದ್ದೇನೆಂದರೆ ಅಲ್ಲಿ ಇದ್ದವರೆಲ್ಲ ಅತ್ತಿದ್ದರು! ಇಲ್ಲಿಯೇ ಸ್ನೇಹ ಅಪರೂಪ ಅನಿಸುವುದು.

ಅತಿ ವಿಶಿಷ್ಟ ಹುಡುಗ-ಹುಡುಗಿಯ ಸ್ನೇಹ :
ಅತಿ ನಾಜೂಕಿನ ಸಂಬಂಧ ಇದು. ಪ್ರೇಮ -ಸ್ನೇಹಗಳಿಗೆ ಒಂದು ಹೆಜ್ಜೆಯ ಅಂತರ ಅಷ್ಟೇ. ನಿಜವಾದ ನಿಷ್ಕಲ್ಮಶ ಸ್ನೇಹ ಸಿಕ್ಕಿದ್ದೇ ಆದರೆ ನಿಮ್ಮಂತ ಲಕ್ಕಿಗಳು ಇನ್ಯಾರಿಲ್ಲ.! ಮುಂದೆ ಆಕೆಯ ಗಂಡನಾದವನು ಅರಿಯಬಹುದದಕ್ಕಿಂತ ಚೆನ್ನಾಗಿ ಆ ಹುಡುಗ ಅವಳನ್ನು ಅರ್ಥ ಮಾಡಿಕೊಂಡಿರುತ್ತಾನೆ. ಎಲ್ಲೇ ಅಡ್ಡಾಡುವುದಿದ್ದರೂ  ಅವಳಿಗೆ ಅವನೇ ಬೇಕು. ಸಲ್ವಾರ್ ಸೆಲೆಕ್ಟ್ ಮಾಡುವಾಗಲೂ ಅವನು ಬಾಲಂಗೋಚಿ. "ಇದು ಬೇಡ ಕಣೆ ಆ ನವಿಲ ಬಣ್ಣದ್ದು ತಗೋ ನಿನಗೆ ಒಪ್ಪತ್ತೆ." ಅವಳು ಕೊಂಡಿದ್ದೂ  ಅದೇ ! ಅದೇ ರೋಡಿನ ಕೊನೆಯಲ್ಲಿ ಪಾನಿಪುರಿ ತಿನ್ನುವಾಗ ಜಗಳ. ಇದೆಲ್ಲ ಮಾಮೂಲಿ ಅವರಿಬ್ಬರಲ್ಲಿ. ಜನ ತಲೆಗೊಂದು ಮಾತನಾಡುತ್ತಾರೆ. ಅವನ ಬಗ್ಗೆ ಇಲ್ಲದಿದ್ದನ್ನು ಹೇಳುವ ಗೆಳತಿಯರು. ಹುಡುಗಿ ಅದ್ಯಾವುದಕ್ಕೂ 'ಕ್ಯಾರೆ' ಅನ್ನುವುದಿಲ್ಲ! ಅವನು ಅವಳ ಆತ್ಮೀಯ ಸ್ನೇಹಿತ. ! 

ಅವರಿಬ್ಬರೂ ಕಾಲೇಜಿನ ಎದುರಿನ ಹುಲ್ಲುಹಾಸಿನ ಮೇಲೆ ಕೂತು ಲೈನ್ ಹೊಡೆಯುತ್ತಾರೆ. ಆ ಹಸಿರು ಸಲ್ವಾರಿನ ಹುಡುಗಿ ಚಂದಕಿದ್ದಾಳೆಂದು ತೋರಿಸುತ್ತಾಳೆ. "ನಾನು ನಿನ್ನನ್ನೇ ಮದುವೆ  ಆಗುವುದೆಂದು ಕಿಚಾಯಿಸುತ್ತಾಳೆ." 
ಆದರೆ  ಒಂದು ನಿಷ್ಕಲ್ಮಶ ಸ್ನೇಹ ಒಂದು ಬಿಟ್ಟರೆ ಅದ್ಯಾವ ಭಾವವೂ ಸುಳಿಯುವುದೇ ಇಲ್ಲ.! 

**ಕುಡಿದಾಗಲೆಲ್ಲ ಆತ್ಮೀಯ ಗೆಳತಿಗೆ "ಬಾರಿನಲ್ಲಿದ್ದೇನೆ" ಎಂದು  ಮೆಸೇಜು ಮಾಡುವ ಹುಡುಗ. ಹಾಸ್ಟೆಲಿನ ಹುಡುಗರು 'ಯಾವುದು ಕುಡಿದ್ಯೋ ?' ಎಂದು ಕೇಳಿದರೆ. ಅವನ ಗೆಳತಿ "drive careful, put a message when you reach the hostel". ಆದಷ್ಟು ಹುಡುಗರು ಸುತ್ತಲಿದ್ದರೂ ಅದೇ ಆತ್ಮೀಯ ಗೆಳತಿಯನ್ನು ಮಿಸ್ ಮಾಡುತ್ತಾನೆ ಹುಡುಗ. ಅರೆಬರೆಯ ಮಂಪರಿನಲ್ಲೂ ಹಾಸ್ಟೆಲ್ ತಲುಪಿದ ತಕ್ಷಣ ಮೆಸೇಜ್ ಮಾಡುತ್ತಾನೆ. "reached safe ". ಹುಡುಗಿ ಮುಗುಳ್ನಗುತ್ತಾಳೆ.!

**ಪ್ರೀತಿಸಿಕೊಂಡ ಹುಡುಗಿಯ ಮದುವೆಯ ದಿನ. ಅಕ್ಷರಶಃ ಒಂಟಿ ಆದ ಭಾವನೆ ಹುಡುಗನ ಮನಸ್ಸಿನಲ್ಲಿ. ಆತ್ಮೀಯ ಗೆಳತಿಗೊಂದು ಫೋನ್ ಮಾಡಿ "ಮೈಥಿಲಿ ಮದುವೆ ಕಣೆ ಇವತ್ತು " ಎಂದ. "ನಿನ್ನ ಜೊತೆ ಮಾತಾಡಬೇಕು PG ಹೊರಗಡೆ ಬಾರೋ" ಎಂದಳು ಗೆಳತಿ. ಬಂದವನ ಜೊತೆ ಬರೋಬ್ಬರಿ ಎರಡು ಕಿಲೋ ಮೀಟರುಗಳ ದೂರ ನಡೆದಳು. ಮಾತಿಲ್ಲ ಕಥೆಯಿಲ್ಲ. ಈಗ ಹುಡುಗನಿಗೆ ಒಂಟಿ ಎನಿಸುತ್ತಿಲ್ಲ. "ಥ್ಯಾಂಕ್ಸ್ ಕಣೆ." ನಿಯೋನ್ ದೀಪದ ಬೆಳಕಿನ ಅಡಿಯಲ್ಲಿ ಕಂಡಿದ್ದು ಇಬ್ಬರ ಕಣ್ಣಲ್ಲೂ ನೀರು. ಭುಜತಟ್ಟಿ "everything will be fine " ಎಂದಳು. ಹುಡುಗ ಮುಗುಳ್ನಕ್ಕ.!


ಆತ್ಮೀಯ ಗೆಳತಿಯ  ಮದುವೆಯಲ್ಲಿ ಮನೆಜನರಂತೆ ಓಡಾಡುವ ಹುಡುಗ. ಬದುಕಿನಲ್ಲಿ ಅವಳು ಸುಖವಾಗಿರಲೆಂದು ಮನದುಂಬಿ ಹಾರೈಸುತ್ತಾನೆ. 
ಇಂತಲ್ಲೇ ಗೆಳೆತನ ಪ್ರೇಮಕ್ಕಿಂತ ಭಿನ್ನವಾಗಿ ನಿಲ್ಲುವುದು. ಬದುಕಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನು  ಬಳಿಯುವುದು.

ಕುಟುಂಬದಲ್ಲಿ ಗೆಳೆತನವಿದೆ :
** ಹರೆಯದ ಹುಡುಗಿಗೆ ಅಮ್ಮನೇ ಆತ್ಮೀಯ ಸ್ನೇಹಿತೆ. ದೊಡ್ಡವಳಾಗುವುದಕ್ಕಿಂತ  ಮೊದಲು ಪಪ್ಪನ ಹೆಗಲಿಗೆ ಜೋತು ಬೀಳುವ ಹುಡುಗಿ. ನಂತರ ಅಮ್ಮನಿಗೇ ಆಪ್ತ.! 

**ಒಂದು ಹಂತದ ನಂತರ ಅಕ್ಕ ತಂಗಿಯರು ಜೀವದ ಗೆಳತಿಯರಾಗಿ ಬಿಡುತ್ತಾರೆ. 

**ಅಕ್ಕ, ತಮ್ಮನಿಗೆ ಬರೀ ಸ್ನೇಹಿತೆಯಲ್ಲ. ಎರಡನೇ ಅಮ್ಮನೇ ಆಗಿ ಬಿಡುತ್ತಾಳೆ. ಮಾರ್ಗದರ್ಶನ ಮಾಡುತ್ತಾಳೆ.

**ಅಪ್ಪಮಗ ಒಟ್ಟಿಗೇ barcelona vs real madrid match ನೋಡುತ್ತಾರೆ. ಮಗ barcelona ತಂಡಕ್ಕೆ ಸಪೋರ್ಟ್ ಮಾಡಿದರೆ ಪಪ್ಪನದು real madrid. ಇಬ್ಬರಿಗೂ ಜಗಜಿತ್ ಸಿಂಗ್, ರಫಿ ಇಷ್ಟ. ಮಗನ ಬೆಸ್ಟ್ ಫ್ರೆಂಡ್ ಪಪ್ಪನೆ ಅಲ್ಲಿ. !

ಮುಖ ನೋಡಿರದೆಯೂ ಆತ್ಮೀಯತೆಯ ಗೂಡು ಕಟ್ಟಿಸುವ  ಇಂಟರ್ ನೆಟ್ ಸ್ನೇಹ:

 ಈ social  networkಗಳಿಂದಾಗಿ ಸ್ನೇಹಿತರ ಬಳಗ ಬೆಳೆಯುತ್ತಿದೆ. ಯಾರ್ಯಾರೋ ಮುಖತಃ ಭೇಟಿಯಾಗದವರೂ ಆತ್ಮೀಯರಾಗುತ್ತಾರೆ. ಅದೊಂದು ಬಗೆಯ ಭ್ರಾಮಿಕ ಜಗತ್ತಿನಂತೆ ಅನಿಸಿದರೂ ನಾವು ಅಂತಹ ಸ್ನೇಹಿತರನ್ನೇ ಬಯಸುತ್ತೇವೆ. ಆತ್ಮೀಯತೆ ಬೆಳೆಯುತ್ತದೆ. 'ನಲವತ್ತಾರರ ಜಗತ್ತಿನ ಅದ್ಯಾವುದೋ ಮೂಲೆಯ ವ್ಯಕ್ತಿಗೆ, ಚುರುಕಿನ ಇಪ್ಪತ್ತರ ಹುಡುಗ ಆತ್ಮೀಯ ಸ್ನೇಹಿತ. ತನ್ನ ಹಳೆಯ ಪ್ರೀತಿಯ ಕಥೆಯನೆಲ್ಲ ಹೇಳುವ ಅವರು, ಇವನಿಗೆ ಬರೀ ಸ್ನೇಹಿತರಷ್ಟೆ ಅಲ್ಲ ಉತ್ತಮ ಮಾರ್ಗದರ್ಶಿ ಕೂಡ.   ಆದರೂ ಒಬ್ಬರನ್ನೊಬ್ಬರು ಇನ್ನೂ ಭೇಟಿ ಮಾಡಿಲ್ಲ. 
best friend ಜೀವನ  ಸಂಗಾತಿ  ಆದಾಗ:
 friendship= love-sex+reason
love=friendship+sex-reason
ಕೆಲವೊಮ್ಮೆ ಅದ್ಯಾವುದೋ ಘಳಿಗೆಯಲ್ಲಿ  ಆತ್ಮೀಯ ಸ್ನೇಹಿತೆ/ತ   ಜೀವನ ಸಂಗಾತಿ ಆಗಲಿ ಎಂದೆನಿಸಲೂಬಹುದು. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುವಾಗ, ಪ್ರೀತಿ ಒಡಮೂಡಿ ಜೀವನ ಸಾಥಿ ಯಾಕಾಗಬಾರದು ಎನಿಸಿದರೂ. ಸ್ನೇಹ ಸ್ನೇಹವಾಗಿಯೇ ಇರಲಿ ಎಂದೇ ಮನಸ್ಸು ಹೇಳುತ್ತದೆ. 


ಸ್ನೇಹ ನಿಷ್ಕಲ್ಮಶವಾಗಿ ಪವಿತ್ರವಾಗಿ ಇರಲಿ. ಪ್ರೇಮದಲ್ಲಿ ಸ್ನೇಹ ಇರಲಿ ಆದರೆ ಸ್ನೇಹ ಸ್ನೇಹವಾಗಿಯೇ ಇರಲಿ. ಬದುಕಿನ ಮುಸ್ಸಂಜೆಯಲ್ಲಿ ಈ ಸ್ನೇಹ ಹದವಾಗಿ ಕಾಡುವಂತೆ ಇರಲಿ. railway station ದಾರಿಯ ನೋಡಿದಾಗ ಜಗಳ ವಾಡುವ ಸ್ನೇಹಿತೆ ನೆನಪಾಗಿ ಕಾಡಬಹುದು. ಗೂಡಂಗಡಿಯ ನೋಡಿದಾಗ ಸ್ನೇಹಿತನ ಜೊತೆ ಬೈಟು ಸಿಗರೇಟು ಸೇದಿದ್ದು ನೆನಪಾಗಬಹುದು. ಪಾನಿಪುರಿ ಅಂಗಡಿಯ ನೋಡಿದಾಗ ನಿಮ್ಮ ಪ್ಲೇಟಿನದ್ದೆಲ್ಲವನ್ನು ಕಸಿಯುವ ಗೆಳತಿ ನೆನಪಾಗಬಹುದು. 


ಜೀವನದ ಗಡಿಬಿಡಿಯ ದಿನದ ಓಘದಲ್ಲಿ ಗೆಳೆತನ ಅರ್ಥ ಕಳೆದುಕೊಳ್ಳುತ್ತಿದೆ. ಸ್ವಾರ್ಥದ, ದ್ವೇಷದ,ಇಗೋ , attitude ಗಳ ನಡುವೆ  ನಲುಗುತ್ತಿದೆ. ಎಲ್ಲವನ್ನು ಬದಿಗೊತ್ತಿ. ಅದೆಲ್ಲೋ ಕಳೆದುಹೋದ ದೊಸ್ತಿಯನ್ನೊಮ್ಮೆ ನೆನೆದುಬಿಡಿ. ಅದೇನನ್ನು ಕಳೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ. 

ಅದೆಲ್ಲೋ ಬದುಕಿನ ಮುಸ್ಸಂಜೆಯಲ್ಲಿ ,ಛತ್ರಿಯಡಿಯಲ್ಲಿ  ಮೊಮ್ಮಗಳ ಜೊತೆ ನಡೆದು ಹೋಗುತ್ತಿರುವಾಗ. "ಇಲ್ಲೇ ನಾನು ಪಾನಿ ಪುರಿ ತಿಂತಾ ಇದ್ದದ್ದು" ಎಂದು ಮೊಮ್ಮಗಳನ್ನು ಅದೇ ಅಂಗಡಿಗೆ ಕರೆದೊಯ್ಯುತ್ತೀರಿ. ತುಂತುರು ಮಳೆ, ಕನ್ನಡಕ ಮಸುಕು ಮಸುಕು. ಮಳೆ ನೀರಿನಿಂದಲೋ ಏನೋ ಗೊತ್ತಿಲ್ಲ. ಕಿಸೆಯಿಂದ ಕರವಸ್ತ್ರವ ತೆಗೆದು ಒರೆಸುತ್ತಾ ಮುಗುಳು ನಗುತ್ತೀರಿ. यारो दोस्ती बड़ी ही हँसी है... ये न हो तो क्या फिर बोलो ये ज़िन्दगी है ..ಹಾಡು FM ನಲ್ಲಿ.! 

ಇಂಥ ದೋಸ್ತಿಗೊಂದು hats off ಹೇಳಲೇ ಬೇಕು ಅಲ್ವಾ?

A friend is someone with whom you dare to be yourself.! 





Tuesday, June 7, 2011

ಮತ್ತೆ ನಕ್ಕಳು ರಾಧೆ

ಬೇಸಿಗೆಯ ಬಿರುಬಿಸಿಲು ಮನದ ಭಾವಗಳನ್ನೇ ಬತ್ತಿಸಿತ್ತೋ ಏನೋ ಗೊತ್ತಿಲ್ಲ ? ಮತ್ತೆ ಮಳೆಗಾಲ ಶುರುವಾಗಿದೆ. ಮನದಲ್ಲಿ ಮತ್ತೆ ಭಾವನೆಗಳ ಜಲಪಾತ. ಯಾವುದೋ ಒಂದು ಘಟನೆಯ ಎಳೆ ಹಿಡಿದು   ಬರೆದ ಒಂದು ಕಥೆ. ಓದಿ ನೋಡಿ ಹೇಗಿದೆ ಹೇಳಿ:

ಅವಳ call ಬಂದಾಗಿನಿಂದ ನನ್ನಲ್ಲಿ ನಾನಿಲ್ಲ. ಮನದಲ್ಲಿ ಅದೇನೋ  ಖುಷಿ, ಅವಳನ್ನು ಎಂದು ನೋಡುವೆನೋ ಎಂಬ ಕಾತರ. ಹೌದು ಹೊನ್ನ ಕೂದಲ ಹುಡುಗಿ ಭಾರತಕ್ಕೆ ಪುನಃ ಬರುವವಳಿದ್ದಾಳೆ. 
 ನನ್ನ ಸಂಭ್ರಮಕ್ಕೆ ಇದಕ್ಕಿಂತ ಬೇರೆ ವಿಷಯ ಬೇಕೇ ?


ಅವಳಿಗಾಗಿ ಒಂದು ಗಿಫ್ಟ್ ಹುಡುಕುತ್ತ ಒಬ್ಬಳೇ ಅಲೆಯಬೇಕು ಎಂದೆನಿಸಿತ್ತು. 'ಮನಸಿಗೆ ಒಮ್ಮೊಮ್ಮೆ ಏಕಾಂತವೇ ಆರಾಮ ಎನಿಸುತ್ತದೆ. ಯಾರನ್ನೋ ಕಳೆದುಕೊಂಡಾಗ, ಅದ್ಯಾರೋ ನೆನಪಾಗುತ್ತಿದ್ದಾಗ'. 'ಹಳೆಯ ನೆನಪುಗಳಿಗೆ ಏಕಾಂತದ ಸಾಥ್ ಇದ್ದರೆ ಅದರ ಅನುಭವವೇ ಬೇರೆ'. ಹಾಗೆ ಅಲೆಯುತ್ತಿರುವಾಗ ನನ್ನ ಮನದಲ್ಲಿ ನೆನಪುಗಳ ಜಾತ್ರೆ........

ಅವಳ, ನನ್ನ ಪರಿಚಯವಾದದ್ದೇ ಲೋಕಲ್ ಬಸ್ಸಿನಲ್ಲಿ. ಅರ್ಧ ಗಂಟೆಯ 'ಮೊದಲ ಪರಿಚಯ', ಗಾಢವಾದ ಸ್ನೇಹವಾಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಮೊದಲ ಪರಿಚಯದಲ್ಲಿ ತಿಳಿದದ್ದಿಷ್ಟೇ, ನ್ಯಾಚುರೋಪಥಿಯ ವಿದ್ಯಾರ್ಥಿನಿ ಅವಳು. ಭಾರತೀಯ ಆಯುರ್ವೇದ, ಯೋಗದ ಬಗ್ಗೆ ಕೇಳಿದ್ದ ಅವಳು. ಯೋಗ ವಿಜ್ಞಾನದ ತವರೂರಾದ ಭಾರತಕ್ಕೆ ವಿದ್ಯೆಯನ್ನು ಹುಡುಕಿ ಬಂದಿದ್ದಳು.

ನಾನಿದ್ದ ರೂಮಿನಿಂದ ಹತ್ತು ಕಿಲೋಮೀಟರುಗಳ ದೂರದಲ್ಲಿ ಅವಳ ರೂಮಿತ್ತು.  ಭಾನುವಾರಗಳು ನಮ್ಮ ಹರಟೆಯ ಕಟ್ಟೆಗಳಾಗಿದ್ದವು. ಬೀಚುಗಳಲ್ಲಿ ಉದ್ದಕ್ಕೆ ನಡೆಯುತ್ತಾ ಮಾತನಾಡುತ್ತಾ ಸಾಗುತ್ತಿದ್ದರೆ ಹೊತ್ತು ಕಳೆದದ್ದೇ ತಿಳಿಯುತ್ತಿರಲಿಲ್ಲ. ತಿಂಗಳುಗಳು ಕಳೆಯುತ್ತಲೇ ನಮ್ಮಲ್ಲಿ ಆತ್ಮೀಯತೆಯೊಂದು ಕಟ್ಟಿತ್ತು. ಇಬ್ಬರೂ ಮಾತಿನ ಮಲ್ಲಿಯರೇ. ಮೊದಮೊದಲು ಸರಿಯಾಗಿ ಅರ್ಥವಾಗದ ಅವಳ ಉಚ್ಚಾರ ದಿನ ಕಳೆದಂತೆ ಅರ್ಥವಾಗತೊಡಗಿತು. bollywood, hollywood ಮೂವಿಗಳು, ನಿಸರ್ಗ, ಅದ್ಯಾವುದೋ ಪುಸ್ತಕ, ಸಂಗೀತ,ಸಂಸ್ಕೃತಿ, ಫ್ಯಾಶನ್  ಇವಿಷ್ಟು ನಮ್ಮ ಹರಟೆಯ ವಿಷಯಗಳಾಗಿದ್ದವು. ಚಿತ್ರಗಳ ವಿಮರ್ಶೆಯನ್ನು ಅತ್ಯದ್ಭುತವಾಗಿ ಮಾಡುತ್ತಿದ್ದಳು. ಸೀದಾ ಸಾದಾ ಉಡುಗೆಯಲ್ಲಿರುತ್ತಿದ್ದ ಅವಳದು, ಸರಳ ಬದುಕಾಗಿತ್ತು.


ಅದೆಷ್ಟೋ ಬಾರಿ 'ಅದ್ಯಾವುದೋ ಜನ್ಮದ ನಂಟಿದೆ ನನಗೆ ಈ ಭಾರತದ ಜೊತೆ. ಇಲ್ಲದಿದ್ದರೆ ಅದೇಕೆ ಬರುತ್ತಿದ್ದೆ ಪಶ್ಚಿಮದ ಆ ತುದಿಯಿಂದ ಇಲ್ಲಿಗೆ. ? ಇಲ್ಲಿನ ಹಲವು ದೇವಾಲಯಗಳನ್ನೆಲ್ಲ ಮೊದಲೆಲ್ಲೋ ನೋಡಿದ್ದೇನೆ ಅನಿಸುತ್ತದೆ. ನನ್ನ ಮನೆಯೂ ಇಲ್ಲೆಲ್ಲೋ ಇರಬೇಕು ಎನಿಸುತ್ತದೆ. 
ಪಶ್ಚಿಮದ ಸಂಸ್ಕೃತಿಗಿಂತ  ಇಲ್ಲಿಯೇ ಅದೇನೋ ಅನುಭವಿಸುವಂಥದ್ದಿದೆ. ಮರೆಯಲಾಗದಂಥದ್ದಿದೆ. ಅದ್ಯಾವುದೋ ಶಕ್ತಿ ನನ್ನ ಇಲ್ಲೇ ಹಿಡಿದಿಟ್ಟುಕೊಂಡಿದೆ. ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ ಎಲ್ಲ ಬೇರೆಯದೇ ಆಗಿರುವ ಈ ನಾಡಿನಲ್ಲಿ, ಹಲವು ವಿದೇಶೀ ವಿದ್ಯಾರ್ಥಿಗಳು ಹೊಂದಿಕೊಳ್ಳಲಾಗದೆ ಓಡಿ ಹೋಗುತ್ತಾರೆ. ನನಗೆ ಅದೇನೂ ಹೊಸದು ಎಂದು ಅನಿಸಲೇ ಇಲ್ಲ ನೋಡು' ಎಂದು ಹೇಳಿದ್ದಳು.

ಶನಿವಾರದ ಸಂಜೆಯ ನನ್ನಅದೆಷ್ಟೋ ಅಲೆದಾಟಗಳಿಗೆ ಜೊತೆಯಾಗಿದ್ದಳು.
ಅವಳ ಜೊತೆಯಿದ್ದಾಗಲೆಲ್ಲ ನನ್ನ ಹುಡುಗಾಟವನನೆಲ್ಲ  ಬಿಟ್ಟು ಗಂಭೀರವಾಗುತ್ತಿದ್ದೆ. ಅವಳ ಜೊತೆ ಕೂತು ಅದೆಷ್ಟು ಸೂರ್ಯಾಸ್ತಗಳನ್ನು ನೋಡಿದ್ದೇನೋ ನೆನಪಿಲ್ಲ. ದಿನಗಳೆದಂತೆ ನನಗೊಬ್ಬ ಅಕ್ಕ, ಮಾರ್ಗದರ್ಶಿ, ಮತ್ತು ಓರ್ವ ಆತ್ಮೀಯ ಸ್ನೇಹಿತೆಯನ್ನು ಅವಳಲ್ಲಿ ಕಂಡಿದ್ದೆ. ನನ್ನ ಗಂಭೀರ ಮುಖವಾಡವ ಕಳಚಿ ಮಾಮೂಲಿ ತುಂಟ  ಹುಡುಗಿಯಾಗಿದ್ದೆ.  ಅವಳಲ್ಲಿ  ಹಠ  ಮಾಡುತ್ತಿದ್ದೆ,   ಜಗಳವಾಡುತ್ತಿದ್ದೆ. ಆದರೆ  ಅದೆಲ್ಲೂ ಬೇಸರದ ಛಾಯೆಯೇ ಕಾಣುತ್ತಿರಲಿಲ್ಲ ಅವಳಲ್ಲಿ.


ಒಮ್ಮೆ ಸಮುದ್ರದ ದಡದಲ್ಲಿ ಉದ್ದಕ್ಕೆ ನಡೆವಾಗ ಸುಮ್ಮನೆ "ಅದೆಷ್ಟು  ಕಾಡುತ್ತೇನೆ  ನಾನು  ಆದರೂ ಒಂದು ಚೂರು ಸಿಡುಕುವುದಿಲ್ಲವಲ್ಲೇ ..."ಎಂದಿದ್ದೆ. ಅದಕ್ಕವಳು, ತನ್ನ ಕಡು ಹಸಿರು ಬಣ್ಣದ ಕಣ್ಣುಗಳನ್ನು ಚಿಕ್ಕದಾಗಿಸಿ ನಕ್ಕು ಬಿಟ್ಟಳು. ಮುಂದುವರಿದು .. "ಅದೆಲ್ಲೋ ಇಂಥದ್ದೇ ಸಂಬಂಧಗಳ ಹುಡುಕಿಯೇ ಇರಬೇಕು ನಾನು ಇಲ್ಲಿಯವರೆಗೆ ಬಂದದ್ದು. ಈಗ ಅನಿಸುತ್ತಿದೆ. I love you ಎಂದು ಅದೇನು ಭಾವನೆಗಳೇ ಇಲ್ಲದೇ ಯಾಂತ್ರಿಕವಾಗಿ ಹೇಳುವ ಜನರ ಮಧ್ಯೆ ಇದ್ದು ಅದೇನೆಲ್ಲ ಕಳೆದುಕೊಂಡಿದ್ದೆ ಎಂದು. ನಾವು ಯಾರ ಜೊತೆ ಮಗುವಂತೆ ಹಠ ಮಾಡುತ್ತೇವೆ? ಹೇಳು .. ಯಾರನ್ನು ನಮ್ಮವರೆಂದು ಭಾವಿಸುತ್ತೇವೋ. ಅವರಲ್ಲಿ ಅಲ್ಲವೇನೆ ? ಅದ್ಯಾರೋ ದಾರಿಹೋಕರ ಮೇಲೆ ಯಾರೂ ಸಿಟ್ಟು ಮಾಡುವುದಿಲ್ಲ, ಹುಚ್ಚಿ... ನೀನು ಸಿಟ್ಟು ಮಾಡಿಕೊಂಡಾಗಲೆಲ್ಲ ನನಗೆ ಖುಷಿಯಾಗಿದೆ. ಮನದಲ್ಲಿ ಅದೇನನ್ನೋ ಬಚ್ಚಿಟ್ಟುಕೊಂಡು ಹೊರಗಡೆ ಮುಖವೂದಿಸಿಕೊಂಡಿದ್ದಾಳೆ ಎಂದು ನಕ್ಕಿ ಬಿಟ್ಟಿದ್ದೇನೆ. ನಿಜ ಹೇಳಲಾ ನನ್ನ ಮೇಲೆ ಹೀಗೆ ಯಾರೂ ಮುನಿಸಿಕೊಂಡಿರಲಿಲ್ಲ. 'ಪ್ರೀತಿಯ ಇನ್ನೊಂದು ಮುಖ ಸಿಟ್ಟು' ಗೊತ್ತಿಲ್ಲವೇನೇ ನಿನಗೆ? ತಾನೇ ಸಾಕ್ರಟೀಸನ ಮೊಮ್ಮಗಳೆ೦ಬಂತೆ 
ಬೇರೆಯದಕ್ಕೆಲ್ಲ ಇಷ್ಟುದ್ದದ ಭಾಷಣ ಕೊಡುತ್ತೀಯಲ್ಲ." ಎಂದು ಮತ್ತೊಮ್ಮೆ ತನ್ನ ಹಸಿರು ಕಂಗಳ ಚಿಕ್ಕದಾಗಿಸಿಕೊಂಡಿದ್ದಳು.
 ನನ್ನ ತಲೆಗೊಂದು ಮೊಟಕಿದ್ದಳು. 

ಶಿವರಾಮ ಕಾರಂತ ರಸ್ತೆಯ ಕೊನೆಯಲ್ಲಿದ chats ಅಂಗಡಿಯಲ್ಲಿ ಪಾನಿಪುರಿಯನ್ನು ತಿಂದು. ತಮ್ಮ ತಮ್ಮರೂಮಿಗೆ ಸಾಗುತ್ತಿದ್ದೆವು. ಇವು ನಮ್ಮ ವರ್ಷಗಟ್ಟಲೆ ಭಾನುವಾರದ ರುಟೀನುಗಳಾಗಿದ್ದವು.

 ಹೀಗೆ ಒಮ್ಮೆ ನನ್ನ ರೂಮಿಗೆ ಬಂದಿದ್ದಳು ಹುಡುಗಿ. ನನ್ನ ರೂಮಿನಲ್ಲಿ ISKCON ಬಾಲ ಕೃಷ್ಣನ ಫೋಟೋ ಒಂದಿದೆ. ಕಿಟಕಿಯ ಬಳಿ ಗಲ್ಲಕ್ಕೆ ಕೈ ಹಚ್ಚಿ ಕುಳಿತಿರುವ ತು0ಟ ಕಂಗಳ ಕೃಷ್ಣನ ಫೋಟೋ ಅದು. ರೂಮಿಗೆ ಅಡಿ ಇಟ್ಟವಳೇ. "Hey ..who is this cute guy.. look at his eyes.. so attractive.. " ಎನ್ನುತ್ತಾ ಆ ಫೋಟೋದ ಬಳಿಗೆ ಸಾಗಿದ್ದಳು. ಬಹಳ ಹೊತ್ತು ಅವನನ್ನೇ ನೋಡುತ್ತಿದ್ದಳು. "ಎಲಾ ಇವಳಾ ಭಾರತಕ್ಕೆ ಬಂದು.. ಭಾರತೀಯ ದೇವರಿಗೆ ಲೈನ್ ಹೊಡೀತಾಳಲ್ಲ, ಎಂದು ಮನದಲ್ಲೇ ನಗುತ್ತ. "ಹ್ಞೂ ನಂಗೂ ತುಂಬಾ ಇಷ್ಟ ಈ ಫೋಟೋ, ಕೃಷ್ಣನ ಆ ಕಣ್ಣುಗಳಲ್ಲಿನ ಮುಗ್ಧತೆ ಮತ್ತು ಕುತೂಹಲ ಇರಡೂ
 ಇಷ್ಟ ಎಂದಿದ್ದೆ". ಹೌದೆಂದು ಒಪ್ಪಿಕೊಂಡಿದ್ದಳು.

ಇದರ ನಡುವೆ ನಾನು ಬ್ಯುಸಿಯಾಗಿಬಿಟ್ಟಿದ್ದೆ  ಒಮ್ಮೆ ಸೆಮಿನಾರ್, ಪರೀಕ್ಷೆ  ಹಾಗೂ assignments ಗಳೆಂದು. ಸಿಗದೇ ಹಲವು ಭಾನುವಾರಗಳೇ 
ಕಳೆದು ಹೋಗಿದ್ದವು. ಮೂರ್ನಾಲ್ಕು ಸಲ ಹೊನ್ನ ಕೂದಲ ಹುಡುಗಿಯ 
ನೆನಪಾಗಿ, ಫೋನ್ ಮಾಡಿ ಸಿಗಲು ಹೇಳಿದರೆ, ಹುಷಾರಿಲ್ಲ ಎಂಬ ನೆವ ಹೇಳಿದಳು. ಯಾಕೋ ಏನೋ ಎಲ್ಲ  ಸರಿ ಇಲ್ಲ ಎನಿಸಿತ್ತು.

ಓಣಂ ರಜೆಯ ದಿನಗಳವು. ಇಬ್ಬರಿಗೂ ಮೂರು ದಿನ ರಜೆಯಿತ್ತು. ಫೋನಾಯಿಸಿ "ನಿಮ್ಮ ಊರಿಗೆ ಕರೆದುಕೊಂಡು ಹೋಗೇ" ಎಂದುಬಿಟ್ಟಳು. "ತುಂಬಾ ಮಾತನಾಡಬೇಕು ನಿನ್ನ ಹತ್ರ "ಎಂದವಳಲ್ಲಿ  ಟ್ರೈನ್ ಹತ್ತಿದರೂ ಮಾತಿಗೆ ಬರಗಾಲ. ಕಿಟಕಿಗೆ ಮುಖವಿಟ್ಟು ಕುಳಿತವಳಿಗೆ ಇಹದ ಪರಿವೆ ಇದ್ದ ಹಾಗೆ ಕಾಣಲಿಲ್ಲ. ನಾನೂ ಅದ್ಯಾವುದೋ ಪುಸ್ತಕವ ತೆರೆದು ಓದತೊಡಗಿದ್ದೆ. ಒಂದು ಅರ್ಧ ಗಂಟೆ ಕಳೆದಿರಬೇಕು. ಥಟ್ಟನೆ "ಸು...ರಾಧೇ ಯಾರು?" ಎಂದು ಕೇಳಿದ್ದಳು. "ನನ್ನ ಅತ್ತೆ.." ಅಂದಿದ್ದೆ ನನ್ನ 'ಇಪ್ಪತ್ತೆಂಟು ವರೆ' ಹಲ್ಲುಗಳನ್ನೆಲ್ಲ ತೋರಿಸುತ್ತ. ಹುಡುಗಿ ನಗಲೇ ಇಲ್ಲ.! ವಿಷಯ ಸೀರಿಯಸ್ಸಾಗಿದೆ ಎಂದುಕೊಂಡೆ. ಎದುರಿನ ಸೀಟಿನಿಂದ ಎದ್ದು ಅವಳ ಪಕ್ಕಕ್ಕೆ ಹೋಗಿ ಕುಳಿತೆ. ನನ್ನ ಎಡಗೈ ಕಿರಿಯ ಬೆರಳನ್ನು ತನ್ನ ಬಲಗೈ ಕಿರಿಯ ಬೆರಳಲ್ಲಿ ಹಿಡಿದಳು. "ಮಳೆ ಬರಬೇಕಿತ್ತು ಒಂದು.." ಎಂದಳು. ಅರೆರೆ ಈ ಹುಡುಗಿಗೆ ಏನಾಗಿದೆ?  ಬಿರುಬಿಸಿಲಿನ ಮಧ್ಯಾಹ್ನದಲ್ಲಿ ಮಳೆಯನ್ನೇಕೆ ಕರೆಯುತ್ತಿದ್ದಾಳೆ?


ಅದೇನಾಗಿದೆ? ನಿನಗೆ ಎಂದು ಕೇಳಿದ್ದಕ್ಕೆ "ಮಳೆ ಸುರಿಯಬೇಕು ಸು.... ಭೂಮಿಯೆಲ್ಲ ಒದ್ದೆಯಾಗಬೇಕು, ಜೊತೆಗೆ ಮನಸು ಕೂಡ". ಎಂದಾಗ ಅವಳ ಕಣ್ಣಲ್ಲಿನ ಭಾವನೆಯನ್ನು ಅರಿಯಲು ಹೋಗಿ ವಿಫಲವಾಗಿದ್ದೆ.


ನಮ್ಮ ಮನೆಗೆ ಹೋದ ತಕ್ಷಣ ಉತ್ಸಾಹದ ಚಿಲುಮೆಯಾಗಿದ್ದಳು ಮತ್ತೆ.  ಅದೆಲ್ಲಿಯದೋ ಹಲವು ವರುಷಗಳ  ಪರಿಚಯದವರಂತೆ 
ಅಡುಗೆ ಕಟ್ಟೆಯ ಮೇಲೆ ಕುಳಿತು ಅಮ್ಮನ ಹತ್ತಿರ ಪಟ್ಟಾಂಗ ಹೊಡೆದಳು. ಅಜ್ಜಿಯ ಮನೆಗೆ ಕರೆದು ಕೊಂಡು ಹೋದಾಗ ಅವಳದೇ ಆದ ಹರಕು ಕನ್ನಡದಲ್ಲಿ "ಆಜಿ ನನಗೆ special ಅವಲಕಿ ಬೆಕು" ಎಂದು. ನಾನು ಆಗಾಗ ಹೇಳುತ್ತಿದ್ದ ಒಗ್ಗರಣೆ ಅವಲಕ್ಕಿಯನ್ನು ಮಾಡಿಸಿಕೊಂಡು ಚಪ್ಪರಿಸಿದಳು. ನಾನೂ ಅದೇನನ್ನೂ ಕೇಳಲು ಹೋಗಿರಲಿಲ್ಲ. ಅವಳ ಪಾಡಿಗೆ ಅವಳ ಬಿಟ್ಟುಬಿಟ್ಟಿದ್ದೆ.


ಹೊರಡುವ ಹಿಂದಿನ ದಿನದ ಸಂಜೆ ಹೊಳೆದಂಡೆಯ ಅಂಚಿನಲ್ಲಿ ಕುಳಿತಿದ್ದಾಗ. "ಹೇಳೇ ಸು ...ಅದ್ಯಾರೆ ಆ ರಾಧೇ? ನಿನ್ನ ರೂಮಿನಲ್ಲಿ ಚಿತ್ರದಲ್ಲಿರುವ ಆ ಮುದ್ದು ಪೋರನ girl friend ಅಂತೆ ಹೌದಾ? "ಅಂದಾಗ ನಕ್ಕು ಬಿಟ್ಟಿದ್ದೆ. ಹೌದೆಂದು ತಲೆಯಾಡಿಸಿದ್ದೆ.


ಒಮ್ಮೆ ಆಗಸವ ದಿಟ್ಟಿಸಿ ರಾಧೆಗೆ ದನಿಯಾದೆ, " ರಾಧೇ......ರಾಧೆಯೇ ... ಅವಳಿಗೆ ಉಪಮೆಗಳಿಲ್ಲ. ಹಲವು ಹೆಣ್ಣುಗಳ ಪ್ರತಿರೂಪಿ ಅವಳು,ಅವರ  ಮೌನದ ಮಾತು ಅವಳು. ಅದೆಲ್ಲ ಫೋಟೋಗಳಲ್ಲಿ  
ರುಕ್ಮಿಣಿ ಸತ್ಯ ಭಾಮೆಯರ ಜಾಗವನ್ನು ಕಿತ್ತುಕೊಂಡವಳು. ಕೃಷ್ಣನ ಜೀವದ ಗೆಳತಿ. ಅವರ ಪ್ರೀತಿಗೆ ವಯಸ್ಸಿನ ನಿರ್ಬಂಧವಿರಲಿಲ್ಲ. ಕೃಷ್ಣನೂ ಅವಳ ಕೊಳಲ ಉಸಿರಾಗಿ ಪ್ರೀತಿಸಿದ. ರಾಧೆಯಿಲ್ಲದ ಕೃಷ್ಣ ಅಪೂರ್ಣ. ರಾಧೆಯ ಪ್ರೀತಿ ಕೃಷ್ಣನ ಕೊಳಲ ಧ್ವನಿಯಂತೆ, ನವಿಲ ಗರಿಯಂತೆ. ಅವಳೆಂದೂ ತನ್ನ ಮದುವೆ ಆಗೆಂದು ಕೃಷ್ಣನ ಕೇಳಲಿಲ್ಲ. ಮುಗುಮ್ಮಾಗಿ ಪ್ರೀತಿಸಿದಳು. ಅವನಿಗಾಗಿ ಕಾದಳು. ಜಗದ ಜನರ ಪರಮಾತ್ಮ, ಅವಳ ಪ್ರಿಯತಮ. ಅವನ ಭುಜವೇ ಅವಳ ಜಗತ್ತು. ಅವನ ಕೊಳಲ ಗಾನವೇ ಅವಳ ಉಸಿರು. ಪ್ರೀತಿಯೆಂದರೆ ನನಗೆ ಎಂದೂ ಲೈಲಾ-ಮಜನೂ ನೆನಪಾಗುವುದಿಲ್ಲ. ಹಲವು ಸಾಹಸಗಳ ಮಾಡಿ ಮದುವೆಯಾದವರು ನೆನಪಾಗುವುದಿಲ್ಲ. ನನ್ನ ಪಾಲಿಗೆ ಪ್ರೀತಿಯೆಂದರೆ ನೆನಪಾಗುವುದು ಕೃಷ್ಣ -ರಾಧೆಯರು. ಅವರಿಬ್ಬರ ಪ್ರೀತಿ ಅಗಾಧ ಪ್ರೀತಿಯ ಸಂಕೇತ...." ಹೀಗೆ ಸಾಗಿತ್ತು ನನ್ನ ಮಾತು. ಅದ್ಯಾಕೋ ಹುಡುಗಿಯ ಮುಖವನ್ನೊಮ್ಮೆ ನೋಡಿದ್ದೆ ಮಧ್ಯೆ. ಕಣ್ಣಲ್ಲಿ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು. ನನ್ನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಪುಟ್ಟ ಮಗುವಂತೆ ಅತ್ತು ಬಿಟ್ಟಿದ್ದಳು. ಹದಿನೈದು ನಿಮಿಷಗಳು ಕಳೆದಿರಬೇಕು.


ತಲೆ ಎತ್ತಿದ ಹುಡುಗಿ "ಇನ್ನು ಕೆಲವು ತಿಂಗಳುಗಳು ಸು.. ಕೊನೆಗೆ ನನ್ನ ದೇಶದ ದಾರಿ ಹಿಡಿಯಬೇಕು ನಾನು. ನನಗಾಗಿ ಕಾದ ಅಮ್ಮನಿದ್ದಾಳೆ ಅಲ್ಲಿ. ಇಲ್ಲಿಗೆ ಬಂದ ಮೇಲೆ ನನ್ನ ಅಮ್ಮನ ಬಹಳ ಮಿಸ್ ಮಾಡಿದ್ದೇನೆ" ಎನ್ನುತ್ತಾ ಕಣ್ಣು ಒರೆಸಿಕೊಂಡಳು.


ಥಟ್ಟನೆ ನನ್ನತ್ತ ತಿರುಗಿ "ನನ್ನಲ್ಲೂ ಓರ್ವ ರಾಧೆಯಿದ್ದಾಳೆ ಸು.... ನನಗೂ ಒಬ್ಬ ನನ್ನ ಇಷ್ಟದ ಕೃಷ್ಣ ಸಿಕ್ಕಿದ್ದಾನೆ. ಬಾಯಿ ಬಿಟ್ಟು ಒಮ್ಮೆಯೂ ನನ್ನ ಬಳಿ I love you.. ಎನ್ನದ. ತನ್ನ ಕಣ್ಣಲ್ಲೇ ಪ್ರೀತಿಯ ವರ್ಷಧಾರೆಹರಿಸುವ 
ಹುಡುಗನೊಬ್ಬ ಸಿಕ್ಕಿದ್ದಾನೆ. ನನಗಿಂತ ಸಣ್ಣವ. ನನ್ನದೇ ಜೂನಿಯರ್. 
ಅವನು ನಮ್ಮ ಕಾಲೇಜಿಗೆ ಸೇರಿದಾಗಿನಿಂದ ಸ್ನೇಹಿತರು ನಾವು. 
ಆದರೆ ಇತ್ತೀಚಿಗೆ ಯಾಕೋ ಅವನ ಬಿಟ್ಟಿರುವುದರ ನೆನೆಸಿಕೊಂಡರೆ
 ಕಣ್ಣೀರು ಹರಿಯುತ್ತದಲ್ಲೇ". "ಅದೇ ನೀನು ಆಗಾಗ ಹೇಳುತ್ತಿದ್ದ ಕೊಳಲು 
ಊದುವ  ಕನಸು ಕಂಗಳ ಹುಡುಗನಾ?"  ಎಂದು ಕೇಳಿದ್ದೆ. " ಹ್ಞೂ..... ಅವನೇ....  ಅವನ ಕೊಳಲ ಧ್ವನಿ,  ಅವನ ಕಣ್ಣುಗಳೇ ಹೇಳುತ್ತವೆ ಅವನೆಷ್ಟು ನನ್ನ ಪ್ರೀತಿಸುತ್ತಾನೆ ಎಂದು. ಮೊನ್ನೆ ಮೊನ್ನೆ ಕಾಲೇಜಿನ ವಾರ್ಷಿಕ ಉತ್ಸವಕ್ಕೆ ಸೀರೆ ಉಟ್ಟಿದ್ದೆ. ಮದರಂಗಿಯ ರಂಗು ತುಂಬಿದ್ದ ನನ್ನ ಕೈ ತುಂಬಾ ನವಿಲು ಬಣ್ಣದ ಬಳೆಗಳು.ಅವನೇ ಕೊಡಿಸಿದ್ದು. ಅವನಿದ್ದಲ್ಲಿಗೆ 
ಹೋಗಿ ಹೇಗೆ ಕಾಣುತ್ತಿದ್ದೇನೆ ಎಂದು ಕೇಳಿದರೆ ಕಣ್ಣಲ್ಲಿ ಕಣ್ಣಿಟ್ಟು ಮುಗುಳ್ನಕ್ಕ.
ಸಂಜೆ ಸಿಕ್ಕಿದ್ದ ಹುಡುಗ 'ರಾಧೆ ಯಾರು ಗೊತ್ತೇನೇ? ನಿನ್ನ ನೋಡಿ ರಾಧೇ ನಿನ್ನ ಹಾಗೆ ಇದ್ದಿರಬಹುದು ಎನಿಸಿಬಿಡ್ತು .' ಎಂದಿದ್ದ.

I love you ಅನ್ನುವುದರೊಂದಿಗೆ ಶುರುವಾಗಿ, live- in, ಮಕ್ಕಳು, ಮದುವೆ, ಎಂಬ ಹಂತಗಳನ್ನು ದಾಟಿ divorceನಲ್ಲಿ ಮುಗಿಯುವ ಪ್ರೀತಿ ಸಾಕಾಗಿದೆ ನನಗೆ. ಜೀವನ ಕೊನೆಯವರೆಗೂ ಮಧುರ ಅನುಭವವಾಗಿ ಕಾಣುವ, ಕಾಡುವ ಪ್ರೀತಿಯೊಂದು ಬೇಕೆನಿಸಿದೆ. 

ನನಗೊತ್ತು ಅವನೊಂದಿಗೆ ಮದುವೆಯಾಗುವ, ಜೀವನದ ಕೊನೆಯವರೆಗೂ 
ಬದುಕುವ ಕನಸು ಕಾಣುವಂತಿಲ್ಲ. ಪಕ್ಕಾ ಸಂಪ್ರದಾಯಸ್ತ ಮನೆತನದ 
ಭಾರತೀಯ ಅವನು. ಬಹಳ ಸೂಕ್ಷ್ಮ ಹುಡುಗ ಆತ. ಅವನ ಕೊಳಲ ಧ್ವನಿ. ಅವನ ಪ್ರೀತಿ ಸುರಿಸುವ ಕಂಗಳು ಸಾಕು. ಒಂದಿಷ್ಟು ನೆನಪುಗಳು ಸಾಕು ನನಗೆ. ಈ ಭರತ ಭೂಮಿಗೆ ಬಂದು ನನ್ನ ವೃತ್ತಿಶಿಕ್ಷಣವನ್ನಷ್ಟೇ ಅಲ್ಲ, ಬದುಕಿನ ಬೇಕಾದ ಹಲವು ಪಾಠಗಳನ್ನು ಕಲಿತೆ. 'ಪ್ರೀತಿ' 
ಎನ್ನುವುದಕ್ಕೆ ಹೊಸ ವ್ಯಾಖ್ಯೆ, ಅನುಭವ ಎಲ್ಲವನ್ನು 
ಹುಡುಕಿಕೊಂಡೆ. ಏನನ್ನು ಹುಡುಕಿ ಬಂದಿದ್ದೇನೋ ಅದೆಲ್ಲವನ್ನು ಈ ಭೂಮಿ ಕೊಟ್ಟಿದೆ".  ಎಂದು ತನ್ನ ಉದ್ದದ ಮಾತನ್ನು ಮುಗಿಸುತ್ತಾ ನನ್ನ ಮುಖ ನೋಡಿದ್ದಳು.

ಅದೇನು ಹೇಳಬೇಕೆಂದೇ ತಿಳಿದಿರಲಿಲ್ಲ ಆ ಕ್ಷಣಕ್ಕೆ. ಸುಮ್ಮನೆ  ಮೌನವನ್ನು ನನ್ನ ಮಡಿಲಲ್ಲಿ  ಕೂರಿಸಿಕೊಂಡಿದ್ದೆ. 'ಕೆಲವೊಂದು ಕ್ಷಣಗಳಿಗೆ 
ಮೌನವನ್ನು ಬಿಟ್ಟರೆ ಬೇರೆ ಯಾವುದೂ ಸರಿ ಹೊಂದುವುದಿಲ್ಲ'.

ಅಲ್ಲಿಂದ ಕೆಲವು ತಿಂಗಳುಗಳು ಸರಿದದ್ದೇ  ತಿಳಿಯಲಿಲ್ಲ. ಅವಳು ಹೊರಡುವ ದಿನವೂ ಹತ್ತಿರ ಬಂದಿತ್ತು.

ಕಣ್ಣಲ್ಲಿ ನೀರು ತುಳುಕಿಸುತ್ತ ನಿಂತಿದ್ದ ಹೊನ್ನ ಕೂದಲ ಹುಡುಗಿಗೆ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿದ್ದೆ. " ಜೀವನವು ನಿಂತ ನೀರಲ್ಲ ಗೆಳತೀ, ನಿನ್ನಂತ ಜೀವನ್ಮುಖಿಯ ಕನಸುಗಳೆಲ್ಲ ಅರಳಲಿ." ಎಂದು ವಿದಾಯ ಹೇಳಿದ್ದೆ.

ಈಗ ಬರೋಬ್ಬರಿ ಮೂರು ವರುಷಗಳ ನಂತರ ತಿರುಗಿ ಬರುತ್ತಿದ್ದಾಳೆ. 
ಹೊನ್ನ ಕೂದಲ ಹುಡುಗಿಗಾಗಿ ಕಣ್ಣಂಚಿಗೆ ಕುತೂಹಲದ ಕಾಡಿಗೆಯ ಹಚ್ಚಿ ಕಾದಿದ್ದೆ. ಇಷ್ಟೆಲ್ಲಾ ನೆನಪಾಗುವ ಹೊತ್ತಿಗೆ  ರಸ್ತೆಯಂಚಿನ  ಕ್ರಾಫ್ಟ್ 
ಅಂಗಡಿಯೊಂದರಲ್ಲಿ ನನ್ನ  ಕಣ್ಣಿಗೆ ಚೆಂದ ಅನಿಸುವ ಕಲಾಕೃತಿಯೊಂದು ಕಂಡಿತ್ತು. ಇದೆ ಸರಿ ಎಂದು ಪ್ಯಾಕ್ ಮಾಡಿಸಿದೆ.

ಕೊನೆಗೂ ಅವಳ ಮತ್ತೊಮ್ಮೆ ಕಾಣುವ  ದಿನ ಬಂದೇ ಬಿಟ್ಟಿತು. ಅವಳಿಗಾಗಿ 
ಕಾದಿದ್ದೆ, ಉಡುಗೊರೆಯೊಂದಿಗೆ. ನೀಲಿ ಬಣ್ಣದ ಕುರ್ತಾದಲ್ಲಿದ್ದ ಅವಳು ದೂರದಿಂದಲೇ ಕೈಬೀಸಿ ನಗುತ್ತ ಓಡೋಡಿ ಬರುತ್ತಿದ್ದಳು. ಕೈ ತುಂಬಾ ಬಳೆಗಳು. ಅದೇ ನವಿಲು ಬಣ್ಣದ ಬಳೆಗಳು.  ಓಡಿ ಬಂದು ನನ್ನ ಬಿಗಿದಪ್ಪಿದ್ದಳು. ದೂರದಲ್ಲಿ ಬರುತ್ತಿದ್ದ ಆಜಾನು ಬಾಹುವಿನತ್ತ ತೋರಿಸಿ " ನೋಡು ಅವನು ನನ್ನ ಗಂಡ, ಭಾರತದಲ್ಲೇ ಆಯುರ್ವೇದವ ಕಲಿತದ್ದು. ಕೊಳಲನ್ನು ಅದ್ಭುತವಾಗಿ ಬಾರಿಸುತ್ತಾನೆ. ನೋಡು ನನ್ನ ಕೈಗೆ ಮದರಂಗಿಯನ್ನೂ ಹಚ್ಚಿದ್ದಾನೆ." ಎಂದು ಒಂದೇ ಉಸಿರಲ್ಲಿ ಹೇಳಿ ಬಿಟ್ಟಳು. ಮುಖದಲ್ಲಿ ಸಂತಸ ಹಾಯಿ ದೋಣಿಯಂತೆ ಸಾಗಿತ್ತು.

ಆಜಾನುಬಾಹು ಹತ್ತಿರ ಬಂದು ಕೈಜೋಡಿಸಿ "ನಮಸ್ತೆ" ಎಂದ. ಕುರುಚಲು ಗಡ್ಡದ ಕೋಲು ಮುಖದವನ ನೀಲಿ ಕಂಗಳಲ್ಲಿ ಅದೇನೋ ತೇಜಸ್ಸು ಇದ್ದಂತೆ ಕಂಡಿತು. ಉಡುಗೊರೆಯನ್ನು ಇಬ್ಬರ ಕೈಯಲ್ಲಿಟ್ಟೆ. ಸುಂದರವಾದ ರಾಧ ಕೃಷ್ಣರ ವಿಗ್ರಹ ಅದು. ಆಜಾನುಬಾಹು "ಓಹ್ ರಾಧಾ-ಕೃಷ್ಣ ತುಂಬಾ ಸುಂದರವಾಗಿದೆ. ಪ್ರೀತಿಗೆ ಇನ್ನೊಂದು ಹೆಸರು ಇವರಿಬ್ಬರು ..!"ಎಂದ.

ಹುಡುಗಿ ತನ್ನ ಕೈಯಲ್ಲಿದ್ದ ನವಿಲ ಬಣ್ಣದ ಬಳೆಗಳಲ್ಲಿ ಎರಡು ಬಳೆಗಳನ್ನು ತೆಗೆದು. ವಿಗ್ರಹದಲ್ಲಿದ್ದ ರಾಧೆಯ ಕೈಗಿಟ್ಟಳು. ನನ್ನ ಮುಖ ನೋಡಿದಳು. ಹಸಿರು ಕಣ್ಣುಗಳಲ್ಲಿ ಹಿಂದಿನದೆಲ್ಲ ನೆನಪಾದಂತೆ ಕಂಡಿತು ನನಗೆ.  ಅವಳು "ಹಸಿವಾಗುತ್ತಿದೆ ನಡೀ 'ಪ್ರಿಯದರ್ಶಿನಿ'ಗೆ ಹೋಗೋಣ. ಎಂದು 
ನನ್ನ ಕೈ ಹಿಡಿದು ಎಳೆಯುತ್ತಿದ್ದರೆ. ಆಜಾನುಬಾಹು ಕಣ್ಣಲ್ಲೇ ನಗುತ್ತಿದ್ದ. ರಾಧೆ ನವಿಲು ಬಣ್ಣದ ಬಳೆಗಳನ್ನೇ  ನೋಡುತ್ತಿದ್ದಳು, ನಗುತ್ತಿದ್ದಳು. !

Tuesday, April 19, 2011

ಸಂಜೆ ಏಳರ ಬಸ್ಸು


ಕುಮಟಾದಿಂದ ಹತ್ತು ಕಿಲೋಮೀಟರುಗಳು ದೂರದಲ್ಲಿರುವ ನಮ್ಮೂರಿಗೆ, ದಿನಕ್ಕೆ ಹತ್ತು ಬಸ್ಸುಗಳಿವೆ. ಸುಮಾರಾಗಿ ಡಾಂಬರು ಇರುವ ರಸ್ತೆಯಲ್ಲಿ ಸುತ್ತಲಿನ ಹಸಿರು ಗದ್ದೆಗಳು, ಹಳ್ಳಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಾ ಬಸ್ಸಿನಲ್ಲಿ ಬರುವುದೇ ಒಂಥರದ ಖುಷಿ.

ಮಾಯಾನಗರಿ ಬೆಂಗಳೂರಿನ ಹಳೆಯ ಬಸ್ಸುಗಳೆಲ್ಲ (KA-01 registration)ನಮ್ಮಲ್ಲಿ ಹಳ್ಳಿಗಳಿಗೆ ಓಡಾಡುವ ಪುಷ್ಪಕ ವಿಮಾನಗಳು. ಹೆಚ್ಚಾಗಿ ಜನಸಾಮಾನ್ಯರ ಓಡಾಟ ಆ ಬಸ್ಸುಗಳ ಮೇಲೆ ಅವಲಂಬಿತ. ಇವಿಷ್ಟನ್ನು ನನ್ನ ಬರಹದ ವಿಷಯ ಎನ್ನಬಹುದಾದರೂ. ನನ್ನ ಜನ್ಮಸಿದ್ಧ ಹಕ್ಕನ್ನು ಚಲಾಯಿಸದೇ ಬಹಳ ದಿನಗಳೇ ಕಳೆದವು. (ತಲೆ ತಿನ್ನುವುದು ನನ್ನ ಆ ಜನ್ಮ ಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ.! ಎಂದು ನಾನು ಈ ಭೂಮಿಗೆ ಬಂದಾಗಲೇ ನಿರ್ಧರಿಸಿ ಆಗಿತ್ತು). ವಿಷಯದ ರೈಲು ಅಲ್ಲಲ್ಲಿ ಹಳಿ ತಪ್ಪಿದರೂ ಸರಿಪಡಿಸಿ ಓಡಿಸಿದ್ದೇನೆ ನೀವು ಓದಿ. 

ನಾನು ಬಸ್ಸಿನಲ್ಲಿ ಓಡಾಡುವುದನ್ನೇ ಇಷ್ಟ ಪಡುತ್ತೇನೆ.ಮಂಗಳೂರಿನಲ್ಲಿ  ಗಾಜುಗಳಿಲ್ಲದ ಕಿಟಕಿಗಳ ಬಸ್ಸಿನಲ್ಲಿ ಕೂತು,ಒಂದುಕಾಲದಲ್ಲಿ ಬಾಬ್ ಇದ್ದ 
ಕೂದಲನ್ನು ಜುಟ್ಟಿಗೆ ಸಿಕ್ಕಿಸಲು ಹರಹರಿ ಸಾಹಸ ಮಾಡುತ್ತಾ. 
ಕೊನೆಗೆ 'ಉಪೇಂದ್ರ'ನಿಗೆ ನೀನೇ ಸ್ಫೂರ್ತಿಯೋ ಎಂದೂ ಕೇಳಿಸಿಕೊಂಡಿದ್ದೇನೆ ಬಿಡಿ. ಆದರೂ ಈ ಬಸ್ ಪಯಣದ ಮಜವೇ ಬೇರೆ. ಹಿಂದೆ ಚಿಕ್ಕವಳಿರುವಾಗ ಗಿಡ ಮರಗಳೇ ಓಡುತ್ತವೆ ಎಂದೂ,ರಸ್ತೆಗಳೆಲ್ಲ ಹಿಂದೆ ಗುಡ್ಡದಂತೆ 
ರಾಶಿ ಬೀಳುತ್ತವೆ ಎಂದೂ ಹೊಸ ಒಂದು  ಪ್ರಮೇಯವನ್ನೂ ಹೊಸೆದಿದ್ದೆ.

ಮೊನ್ನೆ ಮಂಗಳೂರಿನಿಂದ ಮತ್ಸ್ಯಗಂಧ ರೈಲಿಗೆ ಬಂದವಳು, ಸೀದಾ ಬಸ್ ನಿಲ್ದಾಣಕ್ಕೆ ಬಂದು ನಮ್ಮೂರಿಗೆ ಕೊನೆಯ ಬಸ್ಸಾದ ಸಂಜೆ ಏಳರ ಬಸ್ಸಿಗೆ ಹತ್ತಿದ್ದೆ. ಈ ಹಳ್ಳಿಗಳ ಬಸ್ಸಿನಲ್ಲಿ ಓಡಾಡುವ ಮಜವೇ ಬೇರೆ. ಅದರಲ್ಲೂ ಹೊತ್ತು ಮುಳುಗಿದ ಮೇಲಿನ ಬಸ್ಸಿನ ಗಮ್ಮತ್ತೆ ಬೇರೆ ಬಿಡಿ. ಮಂಗಳೂರಿನ ಗಾಜುಗಳೇ ಇಲ್ಲದ ಕಿಟಕಿಗಳ ಬಸ್ಸುಗಳಿಗಿಂತ ನಮ್ಮೂರಿನ ಬಸ್ಸುಗಳು ಶ್ರೇಷ್ಠವೆನಿಸುತ್ತವೆ. 'ಹುಟ್ಟೂರು ಸ್ವರ್ಗಕ್ಕಿಂತ ಮಿಗಿಲಾದರೆ ಹುಟ್ಟೂರಿಗೆ ಓಡಾಡುವ ಬಸ್ಸುಗಳು king fisher ವಿಮಾನಗಳಿಗಿಂತಲೂ ಮಿಗಿಲು'.!


ಮೇಲೆ ಹೇಳಿದಂತೆ, ನಮ್ಮೂರಿಗೆ ಇದೇ ಕಡೆಯ ಬಸ್ಸು. ಮನೆಯ 
ಸೇರಬೇಕೆಂದವರೆಲ್ಲ, ರಾತ್ರಿ ಮನೆಯಲ್ಲೇ ಮಲಗಬೇಕೆಂದವರೆಲ್ಲ, ಇದರಲ್ಲಿ ಬರುತ್ತಾರೆ. ಯಾಕೆ ಹೀಗಂದೆ ಎಂದು ಗೊತ್ತಯ್ತಲ್ವಾ ? ಕೆಲವರಿಗೆ ರಸ್ತೆಯ ಪಕ್ಕದ ಗಟಾರಗಳು ಮನೆಯ ಮಲಗುವ  ಕೋಣೆಯಂತೆ 
ಕಾಣುವಂತೆ ಮಾಡಿ  ಅಲ್ಲಿ ಮಲಗಿಸಿ ಬಿಡುತ್ತಾನೆ ಆ 'ಪರಮಾತ್ಮ'..! 
 
ಕಲ್ಲು ಕ್ವಾರೆಯ ಕೆಲಸಕ್ಕೆ,ಟಿಪ್ಪರು, ಲಾರಿಗಳಿಗೆ ಕೆಲಸಕ್ಕೆ ಹೋಗಿ, ಮೈಕೈ ನೋವಿಗೆ ದಿವ್ಯ ಔಷಧವೆಂದು 'ಪರಮಾತ್ಮ'ನನ್ನು ಹೊಟ್ಟೆಗೆ ಇಳಿಸಿಕೊಂಡು ನಶೆಯಲ್ಲಿದ್ದವರೂ, ದೂರದ ಗೋಕರ್ಣ, ಕಾರವಾರ, ಭಟ್ಕಳದಲ್ಲಿ ಕೆಲಸ ಮಾಡುವವರೂ, ಮಂಗಳೂರಿನಿಂದ ಸಂಜೆ ಮತ್ಸ್ಯಗಂಧ  ಟ್ರೈನ್ ಗೆ ಬಂದು ಊರಿಗೆ ಬರಲು ಬಸ್ಸು ಹಿಡಿದ ನನ್ನಂಥವರೂ, ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳೂ, ಖಾಲಿಯಾದ ಮೀನು ಬುಟ್ಟಿಯ ಹಿಡಿದು ಮನೆಗೆ 
ಹೊರಟಿದ್ದ 'ಮತ್ಸ್ಯಗಂಧಿನಿ'ಯರು, 'ಸಂಜೆ ಏಳರ ಬಸ್ಸಿನ ಖಾಯಂ ಪ್ರಯಾಣಿಕರು. ಕಂಡಕ್ಟರುಗಳೆಲ್ಲ ಆಚೀಚೆ ಮನೆಯವರಂತೆ ಪರಿಚಿತರು. (ನೆನಪಿಡಿ ಬೆಂಗಳೂರಿನ ಆಚೀಚೆ ಮನೆಯಲ್ಲ).


 ಬಲಗಾಲನ್ನೋ, ಎಡಗಾಲನ್ನೋ ಮೊದಲಿಟ್ಟು ಬಸ್ಸೇರಿದ್ದೂ 
ಆಯಿತು ನಾನು. ಎಂದೂ ಮಾತನಾಡಿಸದ 'ಗಾಳಿ ಮನೆ' ಮಾಚ. "ತಂಗೀ ಈಗ ಬಂದ್ಯೇ?" ಅಂದಾಗಲೇ ನನಗೆ ಅವನಲ್ಲಿ 'ಪರಮಾತ್ಮ'ನ ಇರುವಿಕೆ ಅರಿವಾದದ್ದು. ಕಿಟಕಿ ಪಕ್ಕದ ಸೀಟು ಹಿಡಿದು ಒಮ್ಮೆ ಆಗಸವ ದಿಟ್ಟಿಸಿದೆ.ಯಾರೋ 'ಕಾಮತ'ರ ಅಂಗಡಿಯಿಂದ ತಂದಿದ್ದ ಚಟ್ಟ೦ಬೊಡೆಯ ಕಂಪು ನನಗೆ ಹಸಿವಾದದ್ದನ್ನು ಮತ್ತೊಮ್ಮೆ ನೆನಪಿಸಿತ್ತು. ಕಲ್ಲು ಕ್ವಾರಿಯವರ ಬೆವರಿನ ವಾಸನೆಯೊಂದಿಗೆ ಆ ಸಾರಾಯಿಯ ವಾಸನೆಯೂ ಸೇರಿ ಹಬ್ಬುವ ಅತಿ ವಿಶಿಷ್ಟವಾದ ಕಮರೊಂದು ಸಂಜೆ ಏಳರ ಬಸ್ಸಿನ ಅತೀ ಮುಖ್ಯವಾದ ಲಕ್ಷಣಗಳಲ್ಲೊಂದು.


ಬಸ್ಸು ಬಿಡಲು ಇನ್ನೂ ಹತ್ತು ನಿಮಿಷಗಳಿದ್ದವು. ಹಾಗೆ ಬಸ್ಸಿನ ಸುತ್ತಲೆಲ್ಲ ಕಣ್ಣು ಹಾಯಿಸಿದೆ.:
ನಾಲ್ಕು ಗಾಲಿಗಳ ಮೇಲೆ ತಗಡಿನ ಹೊದಿಕೆ ಹಾಕಿದಂತಹ ಬಸ್ಸು. ನಿಲ್ದಾಣದಿಂದ ಬಸ್ಸು ಮುಂದೆ ಚಲಿಸಬೇಕಾದರೆ ನಾಲ್ಕು ಜನ ಪ್ರಯಾಣಿಕರು ಕೆಳಗಿಳಿದು ಬಸ್ಸನ್ನು ನೂಕಬೇಕು. ಬಸ್ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಬೇಕಾದರೆ ಗಾಲಿಗೆ ಕಲ್ಲನ್ನು ಕೊಟ್ಟು ನಿಲ್ಲಿಸಬೇಕು. ಇಲ್ಲದಿದ್ದರೆ ನಿಲ್ದಾಣದ ಮುಂದಿನ ಪಾಗಾರ (ಕಂಪೌಂಡ್)ಕ್ಕೆ ಹೋಗಿ ಬಸ್ಸು ಢಿಕ್ಕಿ ಹೊಡೆದುಕೊಳ್ಳುತ್ತದೆ.(ಹೀಗೆ ಹಲವಾರು ಸಲ ನಡೆದು ಕುಮಟೆಯ ಬಸ್ ನಿಲ್ದಾಣದ ಎದುರುಗಡೆ ಕಂಪೌ೦ಡೇ ಇಲ್ಲ .!)


ಬಸ್ಸಿನ ಒಳಗಡೆಯ ದೃಶ್ಯ ಅಪರೂಪವಾದದ್ದು :
 ನಿನ್ನೆ ಸಂತೆಯ ತರಕಾರಿ ಚೀಲದಿಂದ ತಪ್ಪಿ ಬಿದ್ದ ಅರೆ ಬಾಡಿದ ಬೀನ್ಸ್. ಅದ್ಯಾರದೋ ತಲೆಯಿಂದ ಜಾರಿದ ಮುದುಡಿರುವ ಕೆಂಪು ಗುಲಾಬಿ. ಯಾರೋ ಮರೆತು ಹೋದ ಕರವಸ್ತ್ರ. ಪುಟ್ಟ ಪಾಪುವಿನ ಬಲಗಾಲಿನ ಚಪ್ಪಲಿ( ಗಡಿಬಿಡಿಯಲ್ಲಿ ಇಳಿಯುವಾಗ ಬಿದ್ದಿರಬೇಕು). ಒಲ್ಲದ ಮನಸ್ಸಿನಿಂದ ಮಾಸ್ತರರಿಗೆ ಜಾಗ ಬಿಟ್ಟು ಕೊಡುತ್ತಿದ್ದ, ಹುಡುಗಿಯ ಪಕ್ಕದ ಸೀಟಿನಲ್ಲಿ ಕುಳಿತ ಕಾಲೇಜು ಹುಡುಗ. SMS ಲೋಕದಲ್ಲೇ ಕಳೆದು ಹೋಗಿದ್ದ, ಮುಗುಳು ನಗುತ್ತಿದ್ದ ನೀಳ ಜಡೆಯ ಹುಡುಗಿ. ತೂಕಡಿಸುತ್ತಿದ್ದ ಒಂದೆರಡು ಜನರು. ಹೊಸ ಸಿನಿಮಾ ನೋಡಿ ಬಂದ ಹುಡುಗರಿಬ್ಬರು ಅದರ ಕ್ಲೈಮ್ಯಾಕ್ಸನ್ನು ತಮ್ಮದೇ ಆದ ರೀತಿಯಲ್ಲಿ ಕೊಡುತ್ತಿದ್ದರು. ಹಿಂದಿನ ಸೀಟಿನಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿದ್ದ ಜೋಡಿ ಹಕ್ಕಿಗಳು.



ಬಸ್ಸಿನ ಸೀಟುಗಳ0ತೂ ಯಾವುದೋ ಎಕ್ಸಿಬಿಶನ್ ಗಿಂತ ಕಡಿಮೆ ಏನಿರಲಿಲ್ಲ: ಎಲೆ ಅಡಿಕೆ ಹಾಕುವಾಗ ಹೆಚ್ಚಾದ ಸುಣ್ಣವನ್ನು ಅಲ್ಲೇ ಸೀಟಿಗೆ ಒರೆಸಿರುವ  
ಯಾರದ್ದೋ ಬೆರಳ ಗುರುತು. ಒಂದಿಷ್ಟು ಜನರ ಪ್ರೇಮದ ಕುರುಹುಗಳಿಗೆ ಅಮಾಯಕವಾಗಿ ಬಲಿಯಾದ ಸೀಟಿನ ಹಿಂಭಾಗ. I love you 'ಒಂದು ಹುಡುಗಿಯ ಹೆಸರು'. ಮತ್ತೆಲ್ಲೋ ಅದಕ್ಕೆ ಉತ್ತರ. ಸೀಟುಗಳ ಮೇಲೆ ಬರೆದ ಅದೆಷ್ಟೋ ಫೋನ್ ನಂಬರುಗಳು. ಹೃದಯ ಚಿನ್ಹೆಯ(heart shape) ಒಳಗೆ 'ಗೋಪು weds ಪ್ರೀತಿ' ( ಸಂಜು weds ಗೀತಾ ಫಿಲಂ ಪ್ರಭಾವ ಅಂದುಕೊಂಡೆ), ಒಟ್ಟಾರೆ ಹೇಳುವುದಾದರೆ ಸೀಟುಗಳಲ್ಲಿ  ಅಕ್ಷರಗಳ ಜಾತ್ರೆ.!
ಕವಳದ ರಸವನ್ನು ಪಿಚಕಾಯಿಸಿ ಅರೆಗೆಂಪು ಬಣ್ಣಕ್ಕೆ ತಿರುಗಿದ ಕಿಟಕಿಯ ಸರಳುಗಳು. ಬಸ್ಸು ಓಡುವ ಸ್ಪೀಡಿಗೆ Tap dance ಮಾಡುವ ಜೊತೆಗಾರನನ್ನು ಕಳೆದುಕೊಂಡ ಕಿಟಕಿಯ ಗಾಜುಗಳು.


ಈ ಹಳ್ಳಿಯ ಬಸ್ಸಿನಲ್ಲಿಯ ಸಂಭಾಷಣೆಗಳಲ್ಲೂ ಸ್ವಾರಸ್ಯವಿರುತ್ತದೆ, ಜೀವನ ಪ್ರೀತಿ ಇರುತ್ತದೆ.  "ಹಾಲು ಕರದು ಆಯ್ದಿಲ್ಯೇ, ದನ ಕೊಟ್ಗೆಗೆ ಬಂದಿಕಿದೋ ಏನೇನೋ" "ನಮ್ಮನೆ ದನ- ಕರ ಎಲ್ಲ ಕೊಟ್ಟಿಕಿದೋ ನೋಡು ಪುಕ್ಕಟ್ಟೆಯ. ಸಾಕುಲೇ ಆಗ್ತಿಲ್ಯೇ, ದಾಣಿ ತುಟ್ಟಿ ಆಗೊಯ್ದು, ಈಗ ಪೆಕೆಟು ಹಾಲೇಯ ಗತಿ ."
 "ನಂಗೋನು ಹೀಂಗೆ ಮಾಡಕಾತು ಈಗ, ಆದ್ರೆ ಪ್ರೀತಿಂದಾ ಸಾಕಂಡದ್ದಲೇ ಕೊಡೂಲೇ ಮನಸು ಬತ್ತಿಲ್ಲೆ" ಹೀಗೆ ಸಾಗಿತ್ತು ಊರಿನ 'ಸುಬ್ಬತ್ತೆ' ಹಾಗೂ 'ಗಂಗಕ್ಕನ' ಮಾತುಗಳು.


"ಓಪನ್ 08ರ, ಕ್ಲೋಜು(close) ಎಟ್ಟೆನ. ನಾನು ನೋಡ್ರಾ ಮೂರು ನಮನಿ ನಂಬರಿಗೆ ಹತ್ತತ್ತು ಇಟ್ಟು ಬಂದಾನೆ" 'ಬೋಯಿ ರಾಮ' 'ಓಸೀ' ನಂಬರುಗಳ ಬಗ್ಗೆ ತಲೆ ಕೆಡಿಸಿಕೊಂಡು ಹೇಳುತ್ತಿದ್ದರೆ. ಸುಬ್ರಾಯ ಹೆಗಡೇರು ಅಡಿಕೆ ಮಾರ್ಕೆಟ್ಟು ಚಿಗುರಿದ್ದರಿಂದಲೋ ಏನೋ ಬಾಯಲ್ಲಿದ್ದ ರಸಗವಳವನ್ನೆಲ್ಲ ಕಿಟಕಿಯಾಚೆ ಪಿಚಕಾಯಿಸಿ, ಇನ್ನೊಂದು ಎಲೆಯನ್ನು ತಮ್ಮ ಶತಮಾನಗಳಿಂದ ನೀರು ಕಾಣದಂತಿದ್ದ 'ಬಿಳಿ' ಲುಂಗಿಗೆ ಒರೆಸುತ್ತಾ,. "ಅಡಕಿಗೆ ಹನ್ನೊಂದು ಸಾವ್ರ ಆಗದ್ಯಂತೋ ರಾಮ, ನಿಂದು ಎಷ್ಟದೇ ?" ಎಂದು ಕೇಳುತ್ತಿದ್ದರು.

ಹಿಂದೆ ಅದ್ಯಾರದ್ದೋ ಮೂವರ cell phone ಗಳಲ್ಲಿ ಒಂದೊದ್ನು ಹಾಡು.ಒಂದರಲ್ಲಿ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ .... 'ಎಂದು ರಘು ದೀಕ್ಷಿತ್ ಹಾಡುತ್ತಿದ್ದರೆ, ಇನ್ನೊಂದರಲ್ಲಿ "ನೂರು ಜನ್ಮಕೂ "ಎಂದು ರಾಜೇಶ್ ಹಾಡುತ್ತಿದ್ದ". ಮತ್ತೊಂದರಲ್ಲಿ "twist "ಹಾಡು. ಎಲ್ಲ ಹಾಡುಗಳೂ ಗಿರ್ಮಿಟ್ ಆಗಿ, ಅದರ side effect  ಎಂಬಂತೆ ನನಗೆ ಸಣ್ಣಗೆ ತಲೆ ನೋವು ಬಂದಿತ್ತು. !


ಕೊರಳಲ್ಲೆಲ್ಲ ಮಣಿ ಸರಗಳ ತುಂಬಿಕೊಂಡ ಹಾಲಕ್ಕಿ ಅಜ್ಜಿಯೊಬ್ಬಳು lady conductor ಜೊತೆ "ಎಂಟು ರುಪಾಯ್ರ? ಆಗಲ್ರಾ ಐದು ರುಪಾಯಿ ಮಾಡ್ಕಳ್ರ" ಎಂದು KSRTC ಬಸ್ಸಿನಲ್ಲಿ ಟಿಕೆಟ್ ದರಕ್ಕೆ ಚೌಕಾಶಿ ನಡೆಸಿದ್ದಳು.


ತರಕಾರಿ,ಮೀನು ಮಾರಾಟವನ್ನೆಲ್ಲ ಮುಗಿಸಿ ಮನೆ ಕಡೆಗೆ ಹೆಜ್ಜೆ ಹಾಕಿದ್ದ 
ಹೆಂಗಸರು,ಸಂಚಿಯೊಳಗಿನ ದುಡ್ಡನ್ನು ಎಣಿಸುತ್ತಿದ್ದರು.ನಾಳೆ ಬೆಳಗಾದರೆ ಮತ್ತದೇ ಜೀವನ ಅವರದ್ದು. 
 "ಎಲ್ಲಿಂದ ತಂದದ್ದು? ಎಷ್ಟು ಕೊಟ್ಟೆ ?" ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಹೊಸ ಚೂಡಿದಾರದ ಬಟ್ಟೆಯನ್ನು ತಂದ ಹುಡುಗಿ.
'ಹಿರಿಯ ನಾಗರಿಕರಿಗಾಗಿ' ಜಾಗದಲ್ಲಿ ಕೂತಿದ್ದ ದಪ್ಪ ಮೀಸೆಯವ. ಮಹಿಳೆಯರಿಗಾಗಿ ಎಂಬಲ್ಲೆಲ್ಲ ಕುಳಿತ ಗಂಡಸರು.
 (ಅಲ್ಲ, ಅದ್ಯಾಕೆ ಪುರುಷರಿಗಾಗಿ ಎಂಬ ಸೀಟುಗಲಿಲ್ಲ?  ನೋಡಿ ಇದು ತಲೆ ಕೆಡಿಸಿಕೊಳ್ಳುವ ವಿಚಾರವೇ !)

ಒಳಗೆ ಛತ್ರಿಯನ್ನು ಬಿಡಿಸಿ ಕೂರುವಂತೆ ಮಾಡುವ ಈ ಬಸ್ಸಿನ ಮಳೆಗಾಲದ ದಿನಗಳನ್ನು ಮನಸ್ಸು ಮೆಲುಕು ಹಾಕುತ್ತಿದ್ದಂತೆ, ಕಂಡಕ್ಟರಿನ "ಪಿರ್ರ್ಎಂಬ ಸೀಟಿಯ ಶಬ್ದ ಕೇಳಿಬಂತು.  
ಸೀಟಿಯೊಳಗಿನ ಮಣಿ ಕುಣಿದಾಡುವಂತೆ ಊದಿದುದನ್ನು  ಕೇಳಿಯೇ 'ಲೇಡಿ ಕಂಡಕ್ಟರ್' ಎಂದು ಮನಸ್ಸು ನಿರ್ಧರಿಸಿ ಬಿಟ್ಟಿತ್ತು.
ನನ್ನ ವಿಚಾರ ಸರಣಿಗೆ ಕೊನೆ ಬಿದ್ದಿತು.!

Wednesday, March 9, 2011

ಅಲೆಮಾರಿ ಸಾಲುಗಳು

ಅಲ್ಲಿ ನೀಲಿ ಕಡಲ ಭೋರ್ಗರೆತವಿದೆ, ಕಡಲ ನಿರ್ಭೀತ ಅಲೆಗಳಿಗೆ ದಡದ ಸ್ವಾಗತವಿದೆ. ನೀಲಿ ಕಡಲು ನೀಲ ಆಗಸವ ಸೇರಿದಂತೆ ಭಾಸವಾಗುವ ದೃಶ್ಯವನ್ನು, ಹಲವು ಜೊತೆ ನೀಲಿ 'ಅಮಲು ಕಂಗಳು ನೋಡುತ್ತವೆ. ಅದೇನನ್ನೋ ಯೋಚಿಸಿ ಮುಗುಳು ನಗುತ್ತವೆ.

ಆಗಸದ ನೀಲಿ, ಸುರಗಿ ಮರದ ಹಸಿರು, ಗೌಡರ ಮನೆಯ ಕಂದು ಬಣ್ಣದ ಆಕಳಿನ ಕಣ್ಣ ಕೆಂಪು,  ರಥಬೀದಿಯ ರಂಗೋಲಿಯ ಹಿಟ್ಟಿನ ಬಿಳಿ, ಗುಲ್ಮೊಹರ್ ಗಿಡದ ಹೂವಿನ ಹಳದಿ ಬಣ್ಣಗಳನ್ನೆಲ್ಲ ಹೊತ್ತ ಬಣ್ಣ ಬಣ್ಣದ ಅಂಗಡಿ ಸಾಲುಗಳಿವೆ. ಅಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಅಂಗಿಗಳಿವೆ. 

ಹೌದು ಅದು ಗೋಕರ್ಣ.! 'ದಕ್ಷಿಣ ಕಾಶಿ',' ಹಿಪ್ಪಿಗಳ ಸ್ವರ್ಗ' ಎಂದೆಲ್ಲ ಕರೆಯಿಸಿಕೊಂಡ ಗೋಕರ್ಣ. ಇದೊಂದು ಪುಣ್ಯ ಭೂಮಿ. ಜೊತೆಗೆ ವಿವಾದವನ್ನು ಬೆನ್ನಿಗೆ ಹೊತ್ತುಕೊಂಡಿರುವ ನೆಲ. ಇತ್ತೀಚಿಗೆ ನನ್ನನ್ನು ಪದೇ ಪದೇ ತನ್ನತ್ತ ಸೆಳೆದ ಭೂಮಿ. ಅಲ್ಲೊಂದು ಪ್ರವಾಸಿಯಾಗಿಯೂ ಹೋಗಿಲ್ಲ, ಭಕ್ತಳಾಗಿಯೂ ಹೋಗಿಲ್ಲ. ಸುಮ್ಮನೆ ಕರೆದಿತ್ತು ಗೋಕರ್ಣ,ನಾನೂ ಸುಮ್ಮನೆ  ಹೋಗಿದ್ದೆ, ಅಲೆದೆ. ..ಮುಗುಮ್ಮಾಗಿ ಅಲೆದೆ.

ಹಿಂತಿರುಗಿ ಬರುವಾಗ ನನ್ನಲ್ಲಿ ಇದ್ದದ್ದು ಇಷ್ಟು  ಕ್ಯಾಮೆರಾದಲ್ಲಿ ಒಂದಿಷ್ಟು ಚಿತ್ರಗಳು,ಮನದಲ್ಲಿ ನೆನಪುಗಳು.
ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕಾಗಿ ನೆನಪುಗಳ, 
ನಾ ಕಂಡ ದೃಶ್ಯಗಳ ಒಂದಿಷ್ಟು ಸಾಲುಗಳಾಗಿಸುತ್ತಿದ್ದೇನೆ. ಕೆಲವೊಂದು ಚಿತ್ರಗಳ ನಿಮ್ಮ ಮುಂದೆ ಇಡುತ್ತಿದ್ದೇನೆ.

ಒಂದಕ್ಕೊಂದು ಸಂಬಂಧವಿಲ್ಲದ ಸಾಲುಗಳು ಇವು. ಹಿಪ್ಪಿಗಳಂತೆ ಅಲೆಮಾರಿಗಳು. ಅದಕ್ಕೆ 'ಅಲೆಮಾರಿ ಸಾಲುಗಳು' ಎಂದು ಕರೆಯ ಬೇಕೆನ್ನಿಸಿತು. !
ನೀವು ಒಮ್ಮೆ ಗೋಕರ್ಣದ ಬೀದಿಗಳಲ್ಲಿ ಕಳೆದು ಹೋಗಿ. ಓದಿ ನೋಡಿ ಹೇಗಿದೆ ಹೇಳಿ.



 **  ಮನಸ್ಸನ್ನು ಹೊಸತೊಂದು ಲೋಕಕ್ಕೆ ಎಳೆದೊಯ್ಯುವ, ಅದ್ಯಾವುದೋ ಕಾದಂಬರಿಯಲ್ಲಿ ವರ್ಣಿಸಿದಂತೆ ಕಾಣುವ ಬೀದಿಗಳು.

**ನನ್ನ ಕಣ್ಣ ಕಾಡಿಗೆಯ ಕಪ್ಪು ಬಣ್ಣ, ಮೂಲಂಗಿ ಎಲೆಯ ಹಸಿರುಬಣ್ಣಗಳ ನಾಚಿಸುವ ಹಾಲಕ್ಕಿ ಹೆಂಗಸರ ಕೊರಳ ಮಣಿಗಳು.

**  ಬದುಕಿನ ಬಗೆಗಿರುವ ದ್ವೇಷವನ್ನು ಕಾರುತ್ತಿರುವಂತೆ ಕಾಣುತ್ತಿದ್ದ ನೀಲಿಕಂಗಳ ಹುಡುಗಿಯ ಸೊಂಟದ ಮೇಲಿದ್ದ 'ಡ್ರ್ಯಾಗನ್ ಹಚ್ಚೆ' !

** ಕಿವಿಗೆ ನಾಲ್ಕಾರು ಆಭರಣಗಳ ಚುಚ್ಚಿಸಿಕೊಂಡು rock singerನಂತೆ ಪೋಸ್ ಕೊಡುತ್ತ . 'garlick' ಬೇಕಾ?  ಎಂದು ಕೇಳುತ್ತಿದ್ದ ಹೋಟೆಲಿನ ಹುಡುಗ..!

**ಅದೇನೋ ತಪಸ್ಸನ್ನು ಮಾಡುತ್ತಿರುವಂತೆ ಕಾಣುತ್ತಿದ್ದ ಸಾಣಿಕಟ್ಟದ ಗದ್ದೆಗಳಲ್ಲಿನ ಉಪ್ಪಿನ ರಾಶಿಗಳು. ನೆನಪಾದ ಗಾಂಧೀಜೀ,ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ.!

** ಮುಟ್ಟಾಟವನಾಡುವ ಅಲೆಗಳ ಮೇಲೆ, ಬಾನಾಡಿಗಳ ನಾಚಿಸುತ್ತ ಹಾರುತ್ತಿದ್ದ ಈ ವಿದೇಶಿ ಸಾಹಸಿಗೆ ಅನಂತ ಕಡಲು ಅದ್ಹೇಗೆ ಕಂಡಿರಬಹುದು?
**ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ.  
**ಜಗತ್ತಿನ ಕುತೂಹಲಗಳೆಲ್ಲವನ್ನೂ ತನ್ನ ಬೊಗಸೆ ಕಂಗಳಲ್ಲಿ ತುಂಬಿಕೊಂಡ೦ತೆ ಕಾಣುತ್ತಿದ್ದ  ಕನ್ನಡಿಯ ಕಿನ್ನರಿ..! 
**ಒಂದು ಪಕ್ಕದಲ್ಲಿ ಮಗು, ಇನ್ನೊಂದು ಪಕ್ಕದಲ್ಲಿ ಮಂಗ. ಮನುಕುಲದ ಮನವ ಕಲಕುವ ಕರಾಳ ಚಿತ್ರ ..!  ಬದುಕಿನ ಕಥೆ ..ಇಲ್ಲೆಲ್ಲವೂ ವ್ಯಥೆ .....
**ಸೂರ್ಯಕಿರಣಗಳಿಗೆ ಪುಳಕಗೊಂಡು ಹೊಳೆದು ಶೋಭಿಸುತ್ತಿರುವ, ವಜ್ರದ ಬೆಳಕನ್ನು ನಾಚಿಸುವ ಸ್ಪಟಿಕದ ಮಣಿಗಳು...
** ಅಲೆಗಳ ಆಟವ ನೋಡುತ್ತ, ವಿಶ್ರಾಂತಿ ಪಡೆಯುತ್ತ ನಿಂತ ಈ ದೋಣಿಯ ಕಂಡಾಗ, ನನ್ನಜ್ಜ ನೆನಪಾಗಿದ್ದ !
**.ತನ್ನದೇ ಲೋಕದಲ್ಲಿ ಇರುವ ಇಹದ ಪರಿವೆ ಇದ್ದಂತಿಲ್ಲದ ಅಲೆಮಾರಿ ....
ಬದುಕನ್ನು ವಿರೋಧಿಸುತ್ತಿರುವಂತೆ ಭಾಸವಾಗುವ ಧರಿಸಿರುವ ಕಪ್ಪು ಬಟ್ಟೆ ... 
**  ವಿದೇಶಿಗರ ನೀಲಿ ಕಂಗಳಿಗೆ ಪೈಪೋಟಿ ಕೊಡುತ್ತಿರುವ, ಕಾಡಿಗೆಯ ಕಪ್ಪು ಕಂಗಳು !

**ಅದೆಷ್ಟೋ ನಿಗೂಢಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಸಮುದ್ರ ಮಾನವನ ಮನಸ್ಸಿನ ಪ್ರತಿರೂಪ..!  ಜೀವನದ ಚೇತನ ಸಿಗುವುದೇ ಈ ಕಡಲಿನಿಂದ. ದಡದ ಮೇಲೆ ಪ್ರೀತಿಯಿದೆ, ಒಂದು ಬಗೆಯ ಹುಚ್ಚಿದೆ. ಮರಳಿ ಯತ್ನವ ಮಾಡು ಎನ್ನುವ ಸಂದೇಶವ ಸಾರುವ ಕಡಲ ಅಲೆಗಳ ಭೋರ್ಗರೆತದಲ್ಲಿ ತನ್ನ ಮೌನದ ದೋಣಿಯ ತೇಲಿ ಬಿಟ್ಟು. ಕುಳಿತಿರುವ ವಿದೇಶಿಗ !

** ಮಮ್ಮಿ- ಅಮ್ಮ
ಒಂದೇ ಬೀದಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು.

** ಬಾಲ್ಯ.... 'ಮುಗ್ಧತೆ' ಎರಡು ಚಿತ್ರಗಳಲ್ಲಿನ ಸಮಾನ ಗುಣವಾದರೆ ... 'ಬದುಕು' ವ್ಯತಾಸ ... 
 
**ಬಣ್ಣ ಬಣ್ಣದ ಚಿತ್ರಗಳನ್ನೆಲ್ಲ ಕ್ಯಾಮೆರಾದ ಕಣ್ಣೊಳಗೆ ಸೆರೆಹಿಡಿಯುತ್ತಿದ್ದ ವಿದೇಶಿಗರು ..!


**ಅದ್ಯಾರದ್ದೋ ಮನೆಯ ಬಾಗಿಲ ರಂಗೋಲಿಗೆ ರಂಗು ತುಂಬಲು ತಯಾರಾಗಿರುವ ಬಣ್ಣಗಳ ರಾಶಿ ..!
**ಸೃಷ್ಟಿ-ಬದುಕು (ಅದೇನು ಸಾಲುಗಳ ಬರೆಯಬೇಕೆಂದು ತೋಚಲಿಲ್ಲ )
** ಭಕ್ತರ ಮನೋ ನಿಗ್ರಹ ಪರೀಕ್ಷಿಸಲೆಂದು ಭಗವಂತ ಈ ರೂಪಿಯೇ ??
**ಬಯಲು ಸೀಮೆಯಲೂ ನಾದ ಹೊರ ಹೊಮ್ಮಿಸಲಿ . ಕೊಳಲ ನಾದಕ್ಕೆ ಎಲ್ಲೆ ಎಲ್ಲಿದೆ ? 
**ನೀನು ಒಂಟೆ, ನಾನು ಒಂಟಿ --ಸಮುದ್ರ ತಟದಲ್ಲಿ ಅದೆಷ್ಟೋ ಹೊತ್ತು ಒಂಟೆಯೊಂದಿಗೆ ಸಂಭಾಷಿಸುತ್ತಿದ್ದ ಹೆಂಗಸು.
**ಎರಡು ತಂತಿಗಳ ನಾದದಿಂದಲೇ ಜನರ ಸೆಳೆಯುತ್ತಿದ್ದ, ಕನಸುಕಂಗಳ ಹುಡುಗ ..!
**ತನ್ನ ಕೆಂಬಣ್ಣವನೆಲ್ಲ ರಥದ ಪತಾಕೆಗಳ ಅಂಚಿಗೆ ಸುರಿದು ಪಡುವಣದ ಕಡಲಿಗೆ ಜಾರಲು ಧಾವಿಸುತ್ತಿದ್ದ ರವಿ.
** ನೀಲ ಕಡಲ ತಡಿಯ ಬಂಡೆಯ ಮೇಲೆ ಕೂತು, ಬಾನಲ್ಲಿ ಮಿನುಗುವ ಹಗಲು ಕನಸು ಕಾಣುತ್ತಿರುವಂತೆ ಕಾಣುವ ನಕ್ಷತ್ರ ಮೀನು.

**ಹಳ್ಳಿ ಹೈದರ ಬಾಯಿಯಲ್ಲೂ ಸಲೀಸಾಗಿ ಆಂಗ್ಲಭಾಷೆ ಅಪಭ್ರ೦ಶವಾಗಿ ನಲಿದಾದುವಷ್ಟು ವಿದೇಶೀಯರ ಛಾಯೆ..!

**ಬೆವರು ಇಳಿಸುವ ಬಿಸಿಲಿದೆ, ಒಣ ಹಸಿ ಮೀನುಗಳ ವಾಸನೆಯಿದೆ,ದುಡ್ಡು ಗೋಚಲು ಹವಣಿಸುತ್ತಿದ್ದವರಿದ್ದಾರೆ. ಅಮಲು ಕಂಗಳ ಅರೆಬರೆ ಬಟ್ಟೆಯ ವಿದೇಶಿಯರಿದ್ದಾರೆ..!
** Study circle Libraryಯ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳ ಒಡೆಯ 81 ರ ಹಿರಿಯ ಚೇತನ, ಜೀವನ ಸ್ಪೂರ್ತಿಯ ಚಿಲುಮೆ ವೇದೆಶ್ವರರಿದ್ದಾರೆ. ಅವರ ಪುಸ್ತಕ, ಅಂಚೆ ಚೀಟಿ, ನಾಣ್ಯ,painting ಅದ್ಭುತ ಸಂಗ್ರಹ ನೋಡಿದಾಗ 'ಹಿತ್ತಲ ಗಿಡ ನಮಗೇಕೆ ಮದ್ದಲ್ಲ?' ಎಂದೂ ಎನಿಸುತ್ತದೆ.


**ಜಗತ್ತಿನ ಎಲ್ಲ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣುವ ಜಾಗ ಗೋಕರ್ಣ. ಬದುಕಿನ ಆದ್ಯಾವುದೋ ತಿರುವಿನಲ್ಲಿ ಏನನ್ನೋ ಕಳೆದುಕೊಂಡು ಹುಡುಕಲು ಬಂದಂತೆ ಕಾಣುವ ಜನರು.
ಹರಕೆಯನ್ನು ಕಟ್ಟಲು ಬಂದವರು ಕೆಲವರು, ಹಿರಿಯ ಆತ್ಮಗಳಿಗೆ ಶಾಂತಿ ಕೊಡಲು ಬಂದವರು ಹಲವರು. ಎಲ್ಲ ಕಳೆದುಕೊಂಡು, ಅದೇನನ್ನೋ ಹುಡುಕಿಕೊಂಡು ನಶೆಯ ಜೀವನವ ಕಂಡುಕೊಂಡವರು ಹಲವರು. ಆಧ್ಯಾತ್ಮ ಚಿಂತನೆಯ ಮೂಲ ತತ್ವಗಳ ಅರಸಿ ಬಂದವರು ಒಂದಿಷ್ಟು ಜನ. ಗೋಕರ್ಣ ಸರಳತೆ, ಜಟಿಲತೆ ಹಾಗೂ ವಿಚಿತ್ರಗಳ ಸಂಗಮ.

**ಅಲ್ಲಿನ ಜನರ ಕಣ್ಣಲ್ಲಿ ಹಣದ ದಾಹವಿದೆ, ಹುಡುಕಾಟವಿದೆ, ಕಣ್ಣೀರಿದೆ, ಕನಸುಗಳಿವೆ, ತುಡಿತಗಳಿವೆ, ಪ್ರೀತಿಯಿದೆ, ನಶೆಯಿದೆ. ಕಣ್ಣಿನ ಬಣ್ಣಗಳನ್ನು ನೋಡುವುದಿದ್ದರೆ ಅಲ್ಲಿಯೇ ಅನಿಸಿದ್ದಿದೆ ನನಗೆ.

**'ಬದುಕು' ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳನ್ನು ಕೊಡುವ ತಾಕತ್ತು ಗೋಕರ್ಣಕ್ಕಿದೆ..!

ಕುಟುಂಬದ ಜೊತೆ ಹೋದರೆ 'ತೀರ್ಥಯಾತ್ರೆ'. ಗೆಳೆಯರ ಗುಂಪಲ್ಲಿ ಹೋದರೆ 'ಮೋಜು ಮಜಾ, ಗಮ್ಮತ್ತು'. ಒಬ್ಬರೇ ಅಡ್ಡಾಡಿದರೆ  ಹೊಸ ಲೋಕದ ದರ್ಶನ. !

ಕೊನೆಯಲ್ಲಿ ರಾಮತೀರ್ಥದ ತುದಿಯಲ್ಲೊಮ್ಮೆ ಕುಳಿತು ಇಹವ ಮರೆತು ನೀಲ ಕಡಲ ಕೊನೆಯ ಹುಡುಕಿ. ಅನಂತ ಕಡಲ ರಾಶಿ, ಮೇಲೆ ನೀಲ ನಭ. ಈ ಜಗದಲ್ಲಿ ನಾವೊಂದು 'ಚುಕ್ಕಿ' ಎನಿಸಿಬಿಡುತ್ತೇವೆ.

ಸಂಜೆಯ ರಂಗು ಕಡಲ ಅಲೆಗಳ ಮೇಲೆ ನರ್ತಿಸುತ್ತಿತ್ತು.  ಒಂದಿಷ್ಟು ನೆನಪುಗಳ, ಕಣ್ಣ ಮುಂದೆ, ಕ್ಯಾಮೆರಾದ ಒಳಗೆ ಇರುವ ಚಿತ್ರಗಳ ಹೊತ್ತು ನಾನು ವಾಹನವನೇರಿದ್ದೆ.

ಆದರೆ ...ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ ಗೋಕರ್ಣ..... ನೀಲಿ ಕಡಲ ನೀಲ ನಭದ.. ಗೋಕರ್ಣ .. !