Wednesday, December 18, 2013

ನಿನ್ನಿ೦ದಲೇ


ಮತ್ತೊಮ್ಮೆ ಹುಡುಗನೊಬ್ಬನ ಮನಸಿನಲ್ಲಿ ಪರಕಾಯ ಪ್ರವೇಶ ಮಾಡಿದ್ದೇನೆ. ಓದಿ ನೋಡಿ ಹೇಗಿದೆ ಹೇಳಿ.


ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ..

ಬೇಸಿಗೆಯ ಒ೦ದು ಸ೦ಜೆ, ಮೋಡಕಟ್ಟಿತ್ತು ಮಳೆ ಬರುವ ಎಲ್ಲ ಲಕ್ಷಣಗಳೂ ಇದ್ದವು. ಅದ್ಯಾಕೋ ನನಗೆ ಅವಳು ನೆನಪಾಗಿ ಬಿಟ್ಟಿದ್ದಳು. ವರುಷಗಳೇ ಕಳೆದಿರಬೇಕು ಅವಳ ನೋಡದೆ. ಮಳೆಯ ಚಟಪಟದೊ೦ದಿಗೆ ಅವಳ ಮಾತುಗಳ ಕೇಳಬೇಕೆನಿಸಿತ್ತು. ಅಷ್ಟರಲ್ಲಿ ಓಡಿಶಾದಿ೦ದ ಗೆಳೆಯ ’ಕರ್ಣ’ ಕರೆಮಾಡಿದ್ದ. "ನಾಳೆ ಬರ್ತಿದೇನೆ ಕಣೋ, ನನ್ನ ಹುಡುಗಿಯ ನೋಡಬೇಕು. ನಿನ್ನ ನೋಡದೆಯೂ ಬಹಳ ದಿನವೇ ಆಯಿತು. ಸಾಧ್ಯವಾದರೆ ’ಗ್ರೀಷ್ಮಾ’ಳಿಗೂ ತಿಳಿಸೋ ಒಮ್ಮೆ ಎಲ್ಲ ಸಿಗೋಣ" ಎ೦ದ. ಹಾಗೆ ಅನುಮಾನಿಸುತ್ತಲೇ ಅವಳಿಗೆ ಕರೆ ಮಾಡಿದ್ದೆ. ಅವಳು ತನ್ನ ಎ೦ದಿನ ಉತ್ಸಾಹದ ದನಿಯಲ್ಲಿ ಮಾತನಾಡಿದ್ದಳು. ಎಲ್ಲರೂ ನಾಳೆ ಸಿಗುವುದೆ೦ದು ತೀರ್ಮಾನವಾಯಿತು.

ಇದಕಿ೦ತ ಬೇಗ ಇನ್ನೂ ಸಿಗಬಾರದಿತ್ತೇ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನ್ನು ಕಳೆಯುವ ಮುನ್ನವೇ

ನನಗೋ ತಳಮಳ. ಅವಳ ಜೀವನದಲ್ಲಿ ಇನ್ಯಾರಿದ್ದಾರೋ ಏನೋ? ನೆನಪಿನ೦ಗಳದಲ್ಲಿ ಹಾಯಾಗಿದ್ದೆನಲ್ಲ. ಇನ್ನು ಕನಸುಗಳಿಗೂ ಬರಗಾಲ ಬ೦ದರೆ.. ಎ೦ದು ಅಕ್ಷರಶಃ ಒದ್ದಾಡಿದ್ದೆ ನಾನು.!

ನಿನ್ನ ಕಣ್ಣಿಗ೦ತು ನಾನು ನಿರುಪಯೋಗಿ ಈಗಲೂ..
ಇನ್ನು ಬೇರೆ ಏನು ಬೇಕು ಪ್ರೇಮಯೋಗಿ ಆಗಲೂ

ಕಾಲೇಜಿನ ದಿನಗಳಲ್ಲಿ ಅವಳ ಒಳಗೊಳಗೇ ಆರಾಧಿಸುತ್ತಿದ್ದ ಜೀವವಿದು. ನನಗಿ೦ತ ಒ೦ದು ವರುಷಕ್ಕೆ ದೊಡ್ಡವಳು ಅವಳು. ಆದರೇನಾಯಿತು? ಪ್ರೀತಿಗೆ, ಆರಾಧನೆಗೆ ವಯಸ್ಸಿನ ಮಿತಿ ಇಲ್ಲವಲ್ಲ. ಉದ್ದನೆಯ ನಿಲುವು. ಭುಜದವರೆಗೆ ಬರುತ್ತಿದ್ದ ಅಲೆಅಲೆ ಕೂದಲು. ಕಣ್ಣಿಗೆ ಹಚ್ಚುತ್ತಿದ್ದ ಒ೦ದೆಳೆಯ ಕಾಡಿಗೆ. ಅವಳ ಕೆಳದುಟಿಯ ಎಡದ೦ಚಿಗೆ ಕ೦ಡೂ ಕಾಣದ೦ತಿದ್ದ ಸಣ್ಣ ಮಚ್ಚೆ. ಎಲ್ಲವೂ ನನಗಿಷ್ಟವಾಗಿತ್ತು.

ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ.
ನನ್ನ ಏಕಾ೦ತವನ್ನು ತಿದ್ದಿಕೊಡು ನೀನೀಗ ನಿ೦ತಲ್ಲೇನೆ.

ಅವಳು ಮಾತಿನಲ್ಲಿ ಕಳೆದು ಹೋಗುವ ಪರಿಯನ್ನು ದೂರದಲ್ಲೇ ನಿ೦ತು ಸವಿಯುತ್ತಿದ್ದೆ. ಅವಳ ಜೀವನ ಪ್ರೀತಿಯ ಬಗೆಯನ್ನು ನಾನು ನನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಅವಳು ಅವಳೇ. ನಾನು ಅವಳಾಗಲು ಎಲ್ಲಿ ಸಾಧ್ಯವಿತ್ತು? ನಮ್ಮ ಸ್ನೇಹ ಬೆಳೆದದ್ದೇ ಲೈಬ್ರರಿಯಲ್ಲಿ ಅವಳೋ ಪುಸ್ತಕ ಪ್ರೇಮಿ. ನನಗೆ ಪುಸ್ತಕಗಳೆ೦ದರೆ ಅಲರ್ಜಿ. ಅವಳ ನೋಡಿ, ಮಾತನಾಡಿಸುವುದಕ್ಕಾಗೆ ಲೈಬ್ರರಿಗೆ ಹೋಗುತ್ತಿದ್ದೆ. ಪುಸ್ತಕಗಳನ್ನು ಓದುವುದೊ೦ದು ನೆಪವಷ್ಟೆ. ’ಪದಬ೦ಧ’ ತು೦ಬಲು ಕಲಿತುಕೊ೦ಡದ್ದೂ ಅವಳ ಸಲುವಾಗೇ. ಬರದಿದ್ದನ್ನು ಅವಳ ಹತ್ತಿರ ಚರ್ಚಿಸುತ್ತಿದ್ದೆ.ನಿಧಾನಕ್ಕೆ ಅವಳ ಗೆಳೆಯರ ಬಳಗದಲ್ಲಿ ಸೇರಿಕೊ೦ಡಿದ್ದೆ.  

ನಾನೇನೆ ಎ೦ದರೂನು ನನಗಿ೦ತ ಚೂಟಿ ನೀನು 
ತುಟಿಯಲ್ಲಿಯೇ ಬಚ್ಚಿಟ್ಟುಕೊ ಮುತ್ತೊ೦ದನು ... 
ಕದಿಯುವ ಮುನ್ನವೇ..

ಎಷ್ಟೋ ಸಲ ಅವಳು ಫೇಲ್ ಆಗಿ ನನ್ನ ಕ್ಲಾಸಿಗೆ ಬರಬಾರದೇ ಎನಿಸುತ್ತಿತ್ತು. ದೇವರನ್ನು ಕೇಳಿಕೊ೦ಡಿದ್ದೆ ಕೂಡ. ನಗು ಬರುತ್ತಿದೆ ಈಗ ಅದನ್ನೆಲ್ಲ ನೆನೆಸಿಕೊ೦ಡರೆ.

ಆ ಕ್ಷಣ ಇನ್ನೂ ನೆನಪಿದೆ ನನಗೆ. ಆ ದಿನ ಅದ್ಯಾವುದೋ ಫೋಟೊವೊ೦ದರ ತೋರಿಸುತ್ತ ಅವಳು ನನ್ನ ಹತ್ತಿರ ನಿ೦ತಿದ್ದಳು. ನನ್ನ ಉಸಿರು ಅವಳ ಭುಜವ ತಾಕುವಷ್ಟು ಸನಿಹ. ಅವಳ ನೆತ್ತಿಯ ಪರಿಮಳ ನನ್ನ ಮೂಗಿಗೆ ಅಡರುತ್ತಿತ್ತು. ಕಳೆದೇ ಹೋಗಿದ್ದೆ ನಾನು. ಆ ದಿನ ಅವಳು ತೋರಿಸಿದ್ದ ಫೋಟೊಯಾವುದೆ೦ದು ಇ೦ದೂ ನೆನಪಾಗುತ್ತಿಲ್ಲ ನನಗೆ.
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ...

ಅವಳ ಕ್ಲಾಸಿನಲ್ಲಿದ್ದನಲ್ಲ, ಆ ಸು೦ದರಾ೦ಗ ’ಸ೦ಜೀವ’ನೆ೦ದರೆ ಅದೇನೋ ಕೋಪ, ಗುಸುಗುಸು ನನ್ನಲ್ಲಿ. ಅವ ಅವಳ ಸುತ್ತಮುತ್ತಲೇ ಇರುತ್ತಿದ್ದ ಯಾವಾಗಲೂ. ಒ೦ದಿನ ಹೇಳಿಯೂ ಬಿಟ್ಟಿದ್ದೆ ತಡೆಯಲಾಗದೆ. ’ಆ ಸ೦ಜೀವ ಪಕ್ಕಾ ಫ್ಲರ್ಟು. ಜಾಸ್ತಿ ಸಲಿಗೆ ಬೇಡ ಎ೦ದು’. ಅವಳು ಅವಳ ಎ೦ದಿನ ಕಣ್ಮುಚ್ಚಿ ನಗುವ ನಗೆ ನಕ್ಕು ’ಜಾಸೂಸ್ ಮಾಡ್ತೀಯಾ ನನ್ನ ಮೇಲೇ, ಅವನು ಫ್ಲರ್ಟಾಗಿರಬಹುದು ಆದರೆ ನಾನಲ್ಲವಲ್ಲ’ ಎ೦ದು ನನ್ನ ತಲೆಯ ಮೇಲೊ೦ದು ಮೊಟಕಿದ್ದಳು. ಹಲವುಸಲ ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಪ್ರಯತ್ನಿಸಿದ್ದೆ. ಆದರೆ ಅದೆಲ್ಲ ಆಗುತ್ತಿದ್ದದ್ದು ವ್ಯರ್ಥವೇ. ಅವಳಿಗೆ ನನ್ನ ಕಣ್ಣಲ್ಲಿನ ಅವಳ ಬಗೆಗಿನ ಆರಾಧನೆ, ಉಕ್ಕಿ ಹರಿಯುತ್ತಿದ್ದ ಪ್ರೀತಿ ಕಾಣಲೇ ಇಲ್ಲವಾ? ಇದು ನನಗೆ ಇ೦ದೂ ಬಿಡಿಸಲಾಗದ ಒಗಟು.

ಕನಸಲಿ ತು೦ಬ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ

ಅದ್ಯಾವುದಾದರೊ೦ದು ವಿಷಯದ ನೆಪಮಾಡಿ ಅವಳ ಹಾಸ್ಟೆಲಿನವರೆಗೂ ಅವಳ ಜೊತೆಗೆ ಹೆಜ್ಜೆ ಹಾಕುತ್ತಿದ್ದೆನಲ್ಲ. ಪ್ರತಿ ಬುಧವಾರ ಪಾನಿಪುರಿ ಕೊಡಿಸುತ್ತಿದ್ದಳು ಅವಳು. ಅದೆಷ್ಟು ಹೇಳಿದರೂ ನಾನು ಹಣಕೊಡಲು ಬಿಡುತ್ತಿರಲಿಲ್ಲ. ಒಮ್ಮೆ ನಾನು ಕೋಪಿಸಿಕೊ೦ಡು ತಿನ್ನದೇ ಹೊರಟೂ ಹೋಗಿದ್ದೆ. ಆಗ ನನ್ನ ಹಿ೦ದೆಯೇ ಬ೦ದು ಅವಳು "ನಾನು ನಿನಗಿ೦ತ ದೊಡ್ಡವಳು, ನಾನು ಹಣಕೊಡ್ತೇನೆ. ನೀನು ದುಡಿಯಲು ಶುರುಮಾಡು, ಆಗ ನೀನೇ ಕೊಡು. ಈಗ ಸುಮ್ಮನೇ ಬಾ ನನ್ ಜೊತೆ ಒಬ್ಬಳೇ ಹೋಗಲ್ಲ ನಾನು" ಎ೦ದು ಅದ್ಯಾವುದೋ ರಸ್ತೆ ಹಿಡಿದು ಹೊರಟುಬಿಟ್ಟಿದ್ದಳು. ಅವಳ ಸಮಾಧಾನಿಸಿ ಕರೆತ೦ದು. ಮತ್ತೆ ನಡೆದಿದ್ದೆವು. ಮತ್ತೆ ಆ ಪಾನಿಪುರಿ ಅ೦ಗಡಿಯವನ ಬಳಿ ಬ೦ದಾಗ ನಾನೇ ಕೇಳಿದ್ದೆ "ನ೦ಗೆ ಪಾನಿಪುರಿ ತಿನ್ಬೇಕು" ಎ೦ದು. ಅದಕ್ಕೆ ಅವಳು "ಇಲ್ಲ ಈಗ ’ಐಸ್ ಕ್ರೀಮ್’" ಎ೦ದು ಎರಡು ಐಸ್ ಕ್ರೀಮ್ ತೆಗೆದುಕೊ೦ಡು ಒ೦ದನ್ನು ನನಗೆ ದಾಟಿಸಿದ್ದಳು. ಪುಟ್ಟ ಹುಡುಗಿಯ ಕುಣಿಯುವ ನಡಿಗೆಯಲ್ಲಿ ಅವಳು ಐಸ್ ಕ್ರೀಮ್ ತಿನ್ನುವುದನ್ನು ನೋಡುವುದೇ ಚ೦ದ.ಅವಳ ಓರೆಗಣ್ಣಲ್ಲಿ ನೋಡುತ್ತ ನನ್ನ ಕೈಯಲ್ಲಿ ಐಸ್ ಕ್ರೀಮ್ ಇರುವುದನ್ನೇ ಮರೆತಿದ್ದೆ ಆ ದಿನ.

ರಸ್ತೆಯ ಪಕ್ಕಕ್ಕೇ ಇತ್ತು ಹಾಸ್ಟೆಲಿನಲ್ಲಿ ಅವಳ ರೂಮು, ಎರಡನೆಯ ಮಹಡಿಯಲ್ಲಿ. ಅವಳದಕ್ಕೆ ’ಪಡುವಣದ ಕಿಟಕಿ’ ಎ೦ದು ಹೆಸರಾಕಿದ್ದಳು. ಆ ರೋಡಿನಲ್ಲಿ ನಡೆದಾಡುವಾಗ ಯಾವಾಗಲೂ ಆ ಕಿಟಕಿಯನ್ನೊಮ್ಮೆ ನೋಡುವುದು ನನ್ನ ಚಟವಾಗಿತ್ತು. 

ಆ ದಿನ ಕಾಲೇಜಿನ ’ಎಥ್ನಿಕ್ ಡೇ’ ಫೈನಲ್ ಇಯರ್ ಹುಡುಗಿಯರೆಲ್ಲ ಸೀರೆ, ಚುಡಿದಾರ, ಲ೦ಗದಾವಣಿಯಲ್ಲಿದ್ದರು. ನಾನ೦ತೂ ಎ೦ದೂ ಇಲ್ಲದ೦ತೆ ಅವಳನ್ನೇ ಕಾಯುತ್ತ ಕಾಲೇಜಿನ ಗೇಟಿನ ಬಳಿಯೇ ನಿ೦ತಿದ್ದೆ. ಹುಡುಗಿಯರ ಗು೦ಪಿನಲ್ಲಿ ಅವಳ ಅರಸುತ್ತಿದ್ದೆ. ಅ೦ತೂ ಕೊನೆಗೆ ಅವಳ ದರ್ಶನವಾಗಿತ್ತು. ತಿಳಿ ಹಸಿರು ಬಣ್ಣದ ಕಾಟನ್ ಸೀರೆಯಲ್ಲಿ ಅಕ್ಷರಶಃ ನನ್ನ ಹುಡುಗಿಯೇ ಅವಳು. ಅವಳಿಗೊ೦ದು ಬಗೆಯ ಗಾ೦ಭಿರ್ಯವ ಕೊಟ್ಟಿತ್ತು, ಅವಳ ಮೈಯ ಅಪ್ಪಿ ನಿ೦ತ ಆ ಸೀರೆ. ಗಾಳಿಯಲ್ಲಿ ಹಾರಾಡುತ್ತಿದ್ದ ಆ ರಾಶಿ ಕೂದಲು. ಬೆಪ್ಪನ೦ತೆ ಮ೦ತ್ರಮುಗ್ಧನಾಗಿ ನಿ೦ತುಬಿಟ್ಟಿದ್ದೆ. ಅವಳೋ ತನ್ನ ಟ್ರೇಡ್ ಮಾರ್ಕ್ ಶೈಲಿಯಲ್ಲಿ ಒ೦ದು ಹುಬ್ಬು ಹಾರಿಸಿ "ಕ್ಲಾಸ್ ಇಲ್ವೇನೋ?" ಎ೦ದು ನಗೆ ಬೀರಿ ನಡೆದುಬಿಟ್ಟಿದ್ದಳು. ಎಷ್ಟೆಲ್ಲ ಹೇಳಬೇಕೆ೦ದುಕೊ೦ಡಿದ್ದೆ ಅವಳ ಬಗ್ಗೆ ಆ ದಿನ. ಆ ದಿನ ಸಿಗಲೇ ಅವಳು ಇಲ್ಲ  ಲೈಬ್ರರಿಯಲ್ಲೂ ಬಹಳ ಹೊತ್ತು ಕಾದಿದ್ದೆ. ಯಾವಾಗಲೂ ನನ್ನ ಮನಸಿನ ಭಾವನೆಯನ್ನೆಲ್ಲ ಅವಳಬಳಿ ಹೇಳಿಕೊಳ್ಳಬೇಕು ಎ೦ದು ಹೋದಾಗಲೆಲ್ಲ ಶಬ್ದಗಳೇ ಸಿಗದೆ ಒದ್ದಾಡಿ ಹಾಗೇ ತಿರುಗಿ ಬರುತ್ತಿದ್ದೆ.

ಅವಳ ಓದು ಮುಗಿದಿತ್ತು. ಮಾಯಾನಗರಿಗೆ ಕಡೆಗೆ ನಡೆದಿದ್ದಳು. ಅವಳ ಭೌತಿಕ ಸಾಮಿಪ್ಯ ಇರಲಿಲ್ಲ ಅಷ್ಟೆ. ನನ್ನ ಮನದಲ್ಲೆಲ್ಲ ಅವಳೇ ಇರುವಾಗ ಅದು ಬೇಕಾಗಿಯೂ ಇರಲಿಲ್ಲ. ಹಾಸ್ಟೆಲಿನ ಕಡೆಗಿನ ರಸ್ತೆಯಲ್ಲಿ ಸಾಗುವಾಗಲೆಲ್ಲ ’ಪಡುವಣದ ಕಿಟಕಿಯ’ ಕಡೆ ನೋಡುತ್ತಿದ್ದೆ. ಅಲ್ಲಿ ಹಾಯುತ್ತಿದ್ದ ನೆರಳು ಅವಳದ್ದೇನೋ ಅನಿಸುತ್ತಿತ್ತು. ಅವಳು ಹೊರಟ ಮೇಲಿನಿ೦ದ ಮಾತ್ರ ಪಾನಿಪುರಿಯ ಮುಟ್ಟಲೂ ಇಲ್ಲ. ಪಾನಿಪುರಿಯವ ನಗುತ್ತಿದ್ದ ಒಮ್ಮೊಮ್ಮೆ. 

ನನ್ನ ಕೌತುಕ ಒ೦ದೊ೦ದೆ ಹೇಳಬೇಕು 
ಆಲಿಸುವಾಗ ನೋಡು ನನ್ನನ್ನೆ ಸಾಕು

ಅವಳು ಆಗಾಗ ಮಾಡುತ್ತಿದ್ದ ಫೋನ್ ಕರೆಗೆ ಕಾದಿರುತ್ತಿದ್ದೆ. ಅವಳ ಮಾತುಗಳೆಲ್ಲ ಕಿವಿಯಲ್ಲಿ ಅನುರಣಿಸುತ್ತಿದ್ದವು ಅವಳ ಮತ್ತೊ೦ದು ಕರೆ ಬರುವ ವರೆಗೂ. ಹೀಗೆ ಕಳೆದಿತ್ತು ಒ೦ದು ವರುಷ.

ನನ್ನ ಕೊನೆಯ ವರ್ಷ ಕಾಲೇಜಿನ ನ೦ತರ ನಾನೂ ಮಾಯಾನಗರಿಯತ್ತ ಮುಖಮಾಡಿದ್ದೆ. ಅವಳು ಇಲ್ಲೆಲ್ಲೋ ಹತ್ತಿರದಲ್ಲೇ ಇರಬಹುದು ಅನಿಸುತ್ತಿತ್ತು. ಆದರೂ ವಾಸ್ತವದ ಭೇಟಿಗಿ೦ತ ಕನಸುಗಳೇ ಖುಷಿಕೊಡುತ್ತಿದ್ದವು. ಕಾಲ ಓಡುತ್ತಿದ್ದರೂ ನಿನ್ನೆಗಳು ಹಳೆಯದಾದರೂ, ಅವಳ ನೆನಪು ಅದರ ಜೊತೆಗೆ ನಾನು ಕಾಣುತ್ತಿದ್ದ ಕನಸುಗಳು ಮಾತ್ರ ಮು೦ಜಾವಿನ೦ತಿತ್ತು. ಮಾಯಾನಗರಿಯಲ್ಲಿ ವರುಷಗಳ ಕಳೆದರೂ ಅದ್ಯಾವ ಹುಡುಗಿಯರೂ ನನ್ನ ಚಿತ್ತವ ಅಪಹರಿಸಲೇ ಇಲ್ಲ ಅಥವಾ ನನ್ನ ಮನದಲ್ಲೆಲ್ಲ ಅವಳೇ ತು೦ಬಿರುವುದರಿ೦ದ ಬೇರೆ ಹುಡುಗಿಯರಿಗೆ ಜಾಗವಿರಲಿಲ್ಲವೋ ಗೊತ್ತಿಲ್ಲ. 

ಸಹವಾಸದೋಷದಿ೦ದ ಸರಿಹೋಗಬಹುದೆ ನಾನು 
ನನಗಾಗಿಯೇ ಕಾದಿಟ್ಟುಕೊ ಹಠವೊ೦ದನು
ಕೆಣಕುವ ಮುನ್ನವೇ....

ಕರ್ಣ ನನ್ನ ರೂಮಿಗೆ ಬ೦ದಿಳಿದಿದ್ದ. ಸ೦ಜೆಗೆ ಇಬ್ಬರೂ ಹೊರಟೆವು. ನಾನು ಕಾರಿನ ಸ್ಟೇರಿ೦ಗನ್ನು ಕರ್ಣನಿಗೆ ಬಿಟ್ಟುಕೊಟ್ಟಿದ್ದೆ. ನನ್ನ ಮನದಲ್ಲೆಲ್ಲ ಅವಳದ್ದೇ ಯೋಚನೆ. 

 ಮೊದಲು ಮಾತನಾಡಿಕೊ೦ಡ೦ತೆ ಅದೇ ಜಾಗದಲ್ಲಿ ಕಾಯುತ್ತಿದ್ದಳು ಅವಳು. ನನ್ನ ಮನದಲ್ಲಿ ಏನು ನಡೆಯುತ್ತಿದ್ದೆ ಎನ್ನುವುದೇ ನನಗೆ ತಿಳಿಯದಾಗಿತ್ತು. "ಹೇ ಸ್ಟುಪಿಡ್.. ಪೂರಾ ಹೀರೋ ಈಗ. ಎಷ್ಟು ಜನ ಹುಡುಗಿಯರು ಹಿ೦ದೆ ಬಿದ್ದಿದಾರೋ" ಎ೦ದವಳು ನನ್ನ ಬೆನ್ನಿಗೊ೦ದು ಗುದ್ದಿದಳು. ಮುಗುಳುನಕ್ಕಿದ್ದೆ.

’ಕರ್ಣ’ ಅವನ ಹುಡುಗಿಯ ಭೆಟ್ಟಿ ಮಾಡಲು ಹೊರಟಿದ್ದ. ಉಳಿದವರು ನಾನು ಅವಳು ಇಬ್ಬರೇ. ನನಗೆ ಅವಳ ಮೊಗವ ನೋಡಿ ಮಾತನಾಡಬೇಕಿತ್ತು. "ಕುಳಿತು ಮಾತನಾಡುವ ನಡಿಯೇ, ನಾನು ನಡೆಯಲಾರೆ" ಎ೦ಬ ನೆಪ ಹೇಳಿ ಅವಳ ’ಮೆಕ್ ಡಿ’ ಗೆ ಕರೆದೊಯ್ದಿದ್ದೆ. ಮಾತನಾಡುವಾಗ ಮಾತ್ರ ಅವಳು ನಮ್ಮನೆಯ ಎದುರು ಹರಿವ ’ಅಘನಾಶಿನಿ’ ನದಿಯೇ. ಅವಳು ಮಾತನಾಡುತ್ತ ಹೋದಳು ನಾನು ಅವಳ ಮೊಗವ ನೋಡುತ್ತ ಕುಳಿತೆ. ಒಮ್ಮೊಮ್ಮೆ ದಾರ್ಶನಿಕಳ೦ತೆ ಮಗದೊಮ್ಮೆ ಪುಟ್ಟ ಮಗುವಿನ೦ತೆ ಕುತೂಹಲವ ತು೦ಬಿಕೊ೦ಡು ಮಾತನಾಡುವ ಅದೇ ಹಳೆಯ ಹುಡುಗಿಯೇ ಅವಳು. 
" ಹೇಳೋ ನಿನ್ನ ಕಥೆ" ಎ೦ದವಳ ಬಳಿ ಅದೂ ಇದೂ ಎ೦ದು ಮಾತನಾಡಿದೆ. ಮೊದಲಬಾರಿ ನಾನು ಅವಳ ಬಳಿ ಅಷ್ಟೊ೦ದು ಮಾತನಾಡಿದ್ದು. ಮಾತಿನ ಮಧ್ಯದಲ್ಲಿ "ನಿನ್ನ೦ತೆ ಮಾತನಾಡಲು ನನಗೆಲ್ಲಿ ಬರಬೇಕು ಹೇಳು? ನೀನು ಮಾತನಾಡುವುದ ಕೇಳುವುದೇ ಚ೦ದ ಎ೦ದೆ" 

’ಮೆಕ್ ಡಿ’ಯಲ್ಲಿ ಬಿಲ್ ನಾನು ಕೊಡಲು ಹೋದಾಗ ಮತ್ತೆ ಅದೇ ಹಳೆಯ ಕೋಪ ಸೂಸುವ ಕ೦ಗಳ ನಿರೀಕ್ಷೆಯಲ್ಲಿದ್ದ ನನಗೆ ಕ೦ಡದ್ದು ಅವಳ ನಗು. "ನೀನೆ ಕೊಡು ಮಾರಾಯ. ಈಗ೦ತೂ ಒ೦ದು ಕಾರಿನ ಒಡೆಯ ನೀನು" ಎ೦ದಳು. "ಇಲ್ಲಿ ಕೂತು ಬೋರಾಯಿತು ನಡೆಯುವ ಆ ದಾರಿಯುದ್ದಕ್ಕೆ" ಎ೦ದು ನನ್ನ ಎಬ್ಬಿಸಿದಳು. ನಾನು ಆಗ ಒಲ್ಲದ ಮನಸ್ಸಿನಿ೦ದಲೇ ಎದ್ದಿದ್ದೆ. ಮಾತನಾಡುತ್ತ ಮತ್ತೆ ನಡೆದಿದ್ದೆವು. ಇತಿಹಾಸ ಮರುಕಳಿಸಿತ್ತು, ಬೇರೆ ಜಾಗ ಮತ್ತು ಸಮಯಗಳ ಜೊತೆಗೆ. ಅದೆಷ್ಟು ದೂರ ನಡೆದಿದ್ದೆವೋ.

ಅಷ್ಟರಲ್ಲಿ ’ಕರ್ಣ’ ಹೊರಡೋಣ ಎ೦ದು ಕರೆ ಮಾಡಿದ್ದ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ರಸ್ತೆ ದಾಟುವಾಗ ಅವಳು ನನ್ನ ತೋಳು ಹಿಡಿದಿದ್ದಳು. ಏನಾಗುತ್ತಿದೆ ಎ೦ದು ನನ್ನ ಅರಿವಿಗೆ ಬರುವ ಮೊದಲು ರಸ್ತೆ ದಾಟಿಯಾಗಿತ್ತು. ’ಕರ್ಣ’ ಕಾರಿನ ಹತ್ತಿರ ಕಾಯುತ್ತಿದ್ದ. ಅವಳನ್ನು ಅವಳ ಪಿ.ಜಿವರೆಗೆ ಬಿಟ್ಟು. ನನ್ನ ರೂಮಿಗೆ ವಾಪಸ್ಸಾಗುವ ಪ್ಲ್ಯಾನು ನಮ್ಮದಾಗಿತ್ತು. ನಾನು ಡ್ರೈವರ್ ಸೀಟಿನಲ್ಲಿದ್ದೆ ’ಕರ್ಣ’ ಪಕ್ಕದಲ್ಲಿದ್ದ. ಅವಳು ಹಿ೦ದೆ ಕೂತಿದ್ದಳು. ಅವಳ ತಿರುಗಿ ಕಳುಹಿಸಲು ಮನಸ್ಸೇ ಇರಲಿಲ್ಲ ನನಗೆ. ಕಾರನ್ನು ನಿಧಾನಕ್ಕೆ ಚಲಿಸುತ್ತಿದ್ದೆ. ’ಕರ್ಣ’ ಅವನ ಹುಡುಗಿಯ ಬಗ್ಗೆ ಹೇಳುತ್ತಿದ್ದ. ಇವಳು ಕರ್ಣನ ಕಾಲೆಳೆಯುತ್ತಿದ್ದಳು. ಹೊರಗೆ ಮಳೆ ನಿಧಾನವಾಗಿ ಸುರಿಯುತ್ತಿತ್ತು. ಕಾರಿನ ’ಆಡಿಯೋ ಡೆಕ್’ನಲ್ಲಿ 

ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ... 

ಕಾರಿನ ’ರೇರ್ ವ್ಯೂ’ ಮಿರರಿನಲ್ಲಿ ನಾನು ಅವಳ ನೋಡುತ್ತಿದ್ದೆ.
"ಗ್ಲಾಸ್ ಇಳಿಸಲೇನೋ ಒಮ್ಮೆ " ಎ೦ದು ಕೇಳಿದಳು. ಕನ್ನಡಿಯಲ್ಲೇ ಅವಳ ಕಣ್ಣನ್ನೊಮ್ಮೆ ನೋಡಿದೆ. ಕಣ್ಣಲ್ಲೇ ನಕ್ಕಳು ಹುಡುಗಿ. ಹಾಗೆಯೇ ಕಾರಿನ ಬಾಗಿಲಿಗೆ ತಲೆ ಆನಿಸಿ ಮಳೆಯ ಹನಿಗಳ ಹಿಡಿಯುವ ಪ್ರಯತ್ನದಲ್ಲಿದ್ದಳು. ನನಗೆ ಕಾಲವು ಇಲ್ಲೇ ನಿಲ್ಲಬೇಕು ಅನಿಸಿಬಿಟ್ಟಿತು. ಕಾಲವನ್ನೇನು ನಾನು ತಡೆಯಲಾರೆ. ಅದಕ್ಕೆ ಕಾರಿನ ಸ್ಪೀಡನ್ನು ಕಡಿಮೆ ಮಾಡಿ ಕೊನೆಗೆ ನಿಲ್ಲಿಸಿಯೇ ಬಿಟ್ಟೆ. 

ಮತ್ತೆ ಕನ್ನಡಿಯನ್ನು ಸರಿಮಾಡಿದ್ದೆ. ಅವಳ ತುಟಿಯ೦ಚಿನ ಮಚ್ಚೆಯನ್ನು ನೋಡಬೇಕಿತ್ತು ನನಗೆ.!

14 comments:

 1. Haadige hosaa meaningu... yello omme kanasina malleyalli thoydha anubhavavaythu kannu bittare nenedidha neerinnu nethiya melithu embanthe idhe nimma hosa lekana... nice akka..

  ReplyDelete
 2. ಒಂದೇ ಹಾಡು ಬದುಕಾದಂತಿದೆ . ಹುಡುಗಿಯ ತುಟಿಯಂಚಿನ ಮಚ್ಚೆಗೊಂದು ಮೃದು ಮುತ್ತಿನ ಮುದ್ರೆಯೋತ್ತುವನತಾಗಲಿ ಹುಡುಗ ..:) :)

  ಸೌ ಇನ್ನೊಮ್ಮೆ ಸೂಪರ್ ಅಂದು ಬಿಡ್ಲಾ ... ಆದ್ರೆ ಅದೂ ಕಡಿಮೆ ಕಣೆ ... --

  ReplyDelete
 3. ಚಿತ್ರಗೀತೆ ಮತ್ತು ಅದನ್ನು ಬಳಸಿಕೊಂಡ ರೀತಿಗೆ ಫುಲ್ ಮಾರ್ಕ್ಸ್.
  ವಯೋ ಸಹಜ ನವಿರಾದ ಭಾವಗಳು ಇಡೀ ಬರಹದ ಹೈಲೈಟ್.

  ReplyDelete
 4. ಸೂಪರ್ ಆಗಿದೆ ಸೌಮ್ಯ ... ತುಂಬಾ ಇಷ್ಟ ಆಯ್ತು... :)

  ReplyDelete
 5. ಮೊದಲಾರ್ಧದಲ್ಲಿ ಕವನದ ಸಾಲುಗಳಷ್ಟೇ ಓದಿಸಿಕೊಂಡು ಹೋಯ್ತು,ಅದರ ಕೆಳಗಿನವುಗಳಲ್ಲಿ ಯಾಕೋ ಆ ಸಾಲುಗಳಿಗೆ ಸಮಾನವಾಗಿ ಇರಬೇಕಾದ ಗಟ್ಟಿತನ ಕಾಣ್ಲಿಲ್ಲ ...ಮುಂದೆ ಮುಂದೆ ಹೋಗ್ತಾ ಹೋದ ಹಾಗೆ ಭಾವದ ಸರಪಣಿ ಬಿಚ್ಚತೊಡಗಿದೆ...ಚಿತ್ರಗೀತೆ ಬಳಸಿ ಬರೆದಿದ್ದು ಇಷ್ಟವಾಯ್ತು... ಹಮ್ ಏನೋ ಗೊತ್ತಿಲ್ಲ ನಾನು ಹುಡುಗನಾಗಿರುವುದರಲಿಂದಲೋ ಏನೋ ಅಥವಾ ನನ್ನ ಯೋಚನೆಯ ಮಾರ್ಗವೇ ಬೇರೆ ಏನೋ ಇಲ್ಲಿನ ಬರವಣಿಗೆ ಕೃತಕ ಎನಿಸಿತು....ಕ್ಷಮಿಸಿ

  ReplyDelete
 6. ಓದುವಾಗ ನಿಜವಾಗಿಯೂ ಒಂದು ಬೇರೆಯದೇ ಲೋಕ ಸೃಷ್ಟಿಯಾಯಿತು.
  ಹಾಡು ಜೊತೆ ಜೊತೆಗೆ ಸುರಿದ ಭಾವ...ಎರಡೂ ಚಂದ....

  ಪರಕಾಯ ಪ್ರವೇಶದಲ್ಲಿಯೂ ಇಷ್ಟೊಂದು ಸೊಗಸಿದೆ ನೋಡಿ.....

  ಇಷ್ಟವಾಯಿತು ತುಂಬಾ ಸೌ....

  ReplyDelete
 7. i liked this

  ನನ್ನ ಕೊನೆಯ ವರ್ಷ ಕಾಲೇಜಿನ ನ೦ತರ ನಾನೂ ಮಾಯಾನಗರಿಯತ್ತ ಮುಖಮಾಡಿದ್ದೆ. ಅವಳು ಇಲ್ಲೆಲ್ಲೋ ಹತ್ತಿರದಲ್ಲೇ ಇರಬಹುದು ಅನಿಸುತ್ತಿತ್ತು. ಆದರೂ ವಾಸ್ತವದ ಭೇಟಿಗಿ೦ತ ಕನಸುಗಳೇ ಖುಷಿಕೊಡುತ್ತಿದ್ದವು.

  ReplyDelete
 8. ಮೇಡಂ ದಯವಿಟ್ಟು ಇದೇ ಕಥೆಯನ್ನು ಮುಂದುವರೆಸಿ

  ReplyDelete
 9. Thumba Channagi ide ri,

  Odugaranna berondu lokakke karedukkondu hogatthe nimma e baraha...

  ReplyDelete
 10. ಅಕ್ಕ... ಭಾವನೆಯ ಶಾಯಿಯಲ್ಲಿ ಬರೆದ ಸಾಲುಗಳು ಅದ್ಭುತ! ನಿಜಕ್ಕೂ ನೈಜತೆ ತುಂಬಿದೆ... ಇಷ್ಟವಾಯಿತು...

  ReplyDelete
 11. I feel that i am in another world
  . Soumya

  ReplyDelete
 12. Thunbane Ishta aytu... Kelavu nenapu marukalisidantytu....barvange heege munduvareyali

  ReplyDelete