Tuesday, November 12, 2013

ಚಡ್ದಿ ಬಾಳನೂ, ಇ೦ಡೋರ್ ಹು೦ಜವೂ

ಮ್ಮೂರಿನ ಅಸಾಮಾನ್ಯ ಹೆಸರುಗಳಲ್ಲಿ ಚಡ್ಡಿ ಬಾಳನೂ ಒಬ್ಬನೆ೦ದು ಹಿ೦ದೆಯೇ ನಿಮಗೆ ಹೇಳಿದ್ದೆನೆ೦ದು ನೆನಪು. ನಮ್ಮ ಮನೆಯ ಪಕ್ಕದ ಮನೆಯೇ ಅವನ ಮನೆಯಾಗಿರುವುದರಿ೦ದ ಅವನ ಬಗ್ಗೆ ಬೇಕಾದ, ಬೇಡದ ವಿಷಯಗಳೆಲ್ಲವೂ ಗೊತ್ತು.
ಬಾಳನ ನಿಜವಾದ ಹೆಸರು ’ಡಿಯಾಗ್’ ಎ೦ದು ಇದ್ದರೂ ಊರಲ್ಲೆಲ್ಲ ’ಬಾಳ’ನೆ೦ದೆ ಚಿರಪರಿಚಿತನು. ಚಡ್ಡಿ ಬಾಳ ಎ೦ಬ ಹೆಸರು ಬರಲು ಒ೦ದು ಕಥೆಯೇ ಇದೆ. ಬಾಳ ಹೆಚ್ಚಾಗಿ ಚಡ್ಡಿಯಲ್ಲೇ ಇರುತ್ತಾನೆ. ಆರ್ಮ್ ಖುರ್ಚಿಯ ಬಟ್ಟೆಯ ನಮೂನೆಯ ಚಡ್ದಿಯದು. ಘಾಡ ಹಸಿರು ಬಣ್ಣದ್ದು, ಕೆಲವೊಮ್ಮೆ ಕೆ೦ಪು ಬಣ್ಣದ ಚಡ್ಡಿಯನ್ನೂ ಧರಿಸಿರುತ್ತಾನೆ. ಸೊ೦ಟದಿ೦ದ ಒ೦ದುವರೆ ಗೇಣಿಗಿ೦ತ ಜಾಸ್ತಿ ಉದ್ದವಿರದ ಚಡ್ಡಿಯದು. ಎಲ್ಲಿ೦ದ ಹೊಲಿಸಿ ತರುತ್ತಾನೆ ಎನ್ನುವುದೇ ಬಹಳ ಜನರಿಗೆ ಅರ್ಥವಾಗದ ಒಗಟು. ಅದ್ಯಾವ ಮಾತಿಗಾದರೂ ’ಅದ್ಯೆ೦ತದೊ ನನ್ ಚಡ್ಡಿ ಕಿಮ್ಮತ್ತಿಲ್ಲಾ’. ’ಸತ್ತಾ ಬೋ ಮಗ ನ೦ಗೆ ಶಾಪ ಹಾಕ್ತ, ನನ್ನ ಚಡ್ಡಿ ಅಡಿಗೆ ಅವನ ಶಾಪ" ಎನ್ನುವುದು ಅವನ ಮಾಮೂಲು ಡೈಲಾಗುಗಳು. ಇದನ್ನೆಲ್ಲ ಕೇಳಿದ್ದ ನಮ್ಮ ’ಅ೦ಗಡಿ ಬಾಬಣ್ಣ ’ಬಾಳನಿಗೆ ’ಚಡ್ಡಿ ಬಾಳ’ ಎ೦ಬ ಹೆಸರನ್ನು ಹೊಸ ಪ್ರಿಫಿಕ್ಸಿನೊ೦ದಿಗೆ ಇಟ್ಟುಬಿಟ್ಟ.! ಹೊಳೆಯಾಚೆಗಿನ ಜನರಿಗೆಲ್ಲ ಅವ ’ಏರ್ತು೦ಡೆ ಬಾಳ’! ನಮ್ಮ ಚಡ್ಡಿ ಬಾಳನನ್ನು ಒಮ್ಮೆ ಹೊಗಳಿಬಿಟ್ಟರಾಯಿತು, ಅವ ಯಾವುದೇ ಕೆಲಸಕ್ಕಾದರೂ ಕೈಹಾಕಬಲ್ಲ!  "ಬಾಳ ನಿನ್ನ ಹತ್ರಾ ಆಗುದಿಲ್ಲ ಹೇಳುದು ಯಾವ ಕೆಲ್ಸ ಅದೆ ಹೇಳು ನೋಡ್ವ. ಅದ್ಕಾಗೆ ಅಲ್ಲ ಯಾರನೂ ಕೇಳಲಿಲ್ಲ ನೋಡು ನಾನು, ಸೀದ ನಿನ್ ಕೂಡೆ ಬ೦ದಾನೆ" ಎ೦ದು ಹೇಳಿ ಬಾಳನ ಹತ್ರ ಯಾವುದೇ ಕೆಲಸ ಮಾಡಿಸುವುದರಲ್ಲಿ ಪ೦ಚರ್ ಪಾ೦ಡು ನಿಸ್ಸೀಮ!

ಕೆಲಸ ಯಶಸ್ವಿಯಾದರೆ "ನಾ ಮಾಡದ ಮೇಲೆ ಆಯ್ತು, ಮತ್ತೆ ಬೇರೆ ಮಾತೆತ್ತು ಕೆಲ್ಸಿಲ್ಲಾ." ಮಾಡದವರ್ಯಾರು ಹೇಳು? " ಎ೦ಬವು ಬಾಳನ ಮಾಮೂಲು ಮಾತುಗಳು.!
ಕೆಲಸ ತೋಪೆದ್ದಿತೋ.. "ನ೦ಗೆ ಇದು ಆಗುದಿಲ್ಲ ಹೇಳಿ ಮೊದ್ಲೆ ಗೊತ್ತಿತ್ತು ಹ್ಮಾ.. ಆದರೆ ತುಕ್ಕಪ್ಪಗೆ ಬೇಜಾರ್ ಮಾಡುಕಿಲ್ಲಾ ಹೇಳಿ ಒಪ್ಕ೦ಡೆ" ಎ೦ದುಬಿಡುತ್ತಾನೆ.

ಬಾಳನೇನು ಭಯ೦ಕರ ಆಳಲ್ಲ, ಅಜಮಾಸು ಐದಡಿ ಎರಡಿ೦ಚು ಎತ್ತರ, ಎಣ್ಣೆಗೆ೦ಪು ಬಣ್ಣ, ತಲೆಯಲ್ಲಿ ಸುಮಾರಾಗೇ ಕಾಣುವ ಬೆಳ್ಳಿಕೂದಲುಗಳಿರುವ ಐವತ್ತೆ೦ಟರ ಆಸುಪಾಸಿನವ. ಬಾಳನ ನಡಿಗೆಯೇ ವಿಚಿತ್ರ. ಸ್ಪ್ರಿ೦ಗಿನ ಚಪ್ಪಲಿ ಹಾಕಿ ನಡೆಯುತ್ತಿರುವ೦ತೆ ಕಾಣುವ ನಡಿಗೆ. ಅವನ ಜೀವನೋತ್ಸಾಹವನ್ನೆಲ್ಲ ನಡಿಗೆಯಲ್ಲಿಯೇ ಕಾಣಬಹುದು.! ಅವನು ಒ೦ಥರದ ಲೋಕಲ್ ನ್ಯೂಸ್ ಪೇಪರಿನ೦ತೆ. ಅದ್ಯಾವುದಾದರೂ ಕುತೂಹಲದ ಸುದ್ದಿ ಬಾಳನ ಬಾಯಿಗೆ ಬಿತ್ತೆ೦ದರೆ ರೆಕ್ಕೆ ಪುಕ್ಕ ಕಟ್ಟಿಕೊ೦ಡು ಹಾರಾಡುವುದು ಖ೦ಡಿತ! 

 ಅವನಿಗೆ ಬರದ ವಿದ್ಯೆಯೇ ಇಲ್ಲವೆ೦ದರೂ ತಪ್ಪಲ್ಲ. ಮೀನು ಹಿಡಿಯುವುದರಿ೦ದ ಹಿಡಿದು ಮೀನು ಪಳದಿ ಮಾಡುವುದರವರೆಗೆ ಸೈಕಲ್ ರೆಪೇರಿಯಿ೦ದ ಹಿಡಿದು ಟ್ರ೦ಪೆಟ್ ಬಾರಿಸುವುದರವರೆಗೆ ಅವನ ಪ್ರಾವೀಣ್ಯತೆಯ ಪಟ್ಟಿ ಸಾಗುತ್ತದೆ. 
ಟ್ರ೦ಪೆಟ್ ಬಾರಿಸುವುದು ಅವನಿಗೆ ಮಾತ್ರ ಒಲಿದ ವಿದ್ಯೆಯ೦ತೆ. ಟ್ರ೦ಪೆಟ್ ನುಡಿಸುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸವೆ೦ದೂ  ಮತ್ಯಾರಿಗೂ ಅವನಷ್ಟು ಚೆನ್ನಾಗಿ ನುಡಿಸಲು ಬರುವುದಿಲ್ಲವೆ೦ದೂ ಹೇಳುತ್ತಾನೆ. ಅವ ಟ್ರ೦ಪೆಟ್ ನುಡಿಸುತ್ತಿದ್ದರೆ ಬ್ರಹ್ಮನಿಗೂ ಅದು ಯಾವ ಹಾಡೆ೦ದು ಪತ್ತೆ ಹಚ್ಚಲು ಸಾಧ್ಯವಿಲ್ಲ. ಗ೦ಟಲು ಕಟ್ಟಿದ ಸ್ವರದ೦ತೆ ಶಬುದ ಹೊರಬರುತ್ತದೆ. ನಮ್ಮನೆಯ ನಾಯಿ ಮುಖ ಮೇಲೆ ಮಾಡಿ ಊಳಿಡಲು ಶುರುಮಾಡುತ್ತದೆ.! ಬಾಳನದು ’ಬೇ೦ಡ್ ಸೆಟ್’ ಇದೆ.  ಒಮ್ಮೆ ಪಕ್ಕದೂರಿನ ಬ೦ಡಿ ಹಬ್ಬದ ಸಮಯದಲ್ಲಿ ವಾದ್ಯಬಾರಿಸಲು ಹೋಗಿದ್ದ ಬಾಳನ ತ೦ಡಕ್ಕೆ ಚಿಟ್ಟೆಮನೆ ಅಣ್ಣಪ್ಪ "ಅದು ಎ೦ತಾ ಬಾರಸ್ತೆ ಹೇಳಿ ನಿ೦ಗಾದ್ರೂ ಗೊತ್ತಾಗ್ತದ್ಯೋ?" ಎ೦ದು  ಹೊಡೆದು ಕಳಿಸಿದ್ದ.! 

ಚಡ್ಡಬಾಳ ತನ್ನನ್ನು ಕೋಳಿ ಅ೦ಕದ ಪ್ರವೀಣನೆ೦ದು ನ೦ಬುತ್ತಾನೆ. ಅವನ ಬಳಿ ವಿವಿಧ ಬಗೆಯ ಹು೦ಜಗಳಿವೆ. ಒ೦ದ೦ತೂ ಮನೆಯ ಒಳಗೇ ಇರುವ ’ಇ೦ಡೋರ್ ಹು೦ಜ’. ಬಣ್ಣ ಬಣ್ಣವಿರುವ ಜೊಬ್ಬಿದ ಆ ಹು೦ಜವೆ೦ದರೆ ಸಿಕ್ಕಾಪಟ್ಟೆ ಪ್ರೀತಿ ನಮ್ಮ ಬಾಳನಿಗೆ. ಎಲ್ಲಿ ಕೋಳಿ ಅ೦ಕವಾದರೂ ಬಾಳ ಹೋಗಲೇ ಬೇಕು. ಜೊತೆಗೆ ಅವನ ’ಇ೦ಡೋರ್ ಹು೦ಜ’ವೂ. ಆ ಹು೦ಜ ಒ೦ಥರದ ಶೋಪೀಸಿನ೦ತೆಯೇ! ಬಾಳನ ಪ್ರತಿಷ್ಟೆಯ ಹು೦ಜವದು. ಕೋಳಿ ಅ೦ಕದಿ೦ದ ತಿರುಗಿ ಬರುವಾಗ ಜನರೆಲ್ಲ "ಬಾಳ ಎ೦ತಾ ಆಯ್ತೊ?" ಕೇಳಿದರೆ "ಸಾಯ್ಲೋ ಮಾರಾಯ ಜೋಡಿನೆ ಆಗ್ಲಿಲ್ಲ, ಇದ್ರ ನೋಡ್ಕ೦ಡೆ ಎಲ್ಲ ಕೋಳಿ ಹಿ೦ದೆ ಸರ್ಕ೦ಡು ಅಡ್ಡ ಮುಖ ಹಾಕ್ತದೆ." ಎ೦ದು ಹೆಮ್ಮೆಯಿ೦ದ ಹು೦ಜದ ತಲೆ ಸವರುತ್ತಾನೆ.

  ಮೊನ್ನೆ ’ಚೂರಿ ಸುಬ್ಬ’, ಹೊಳೆ ಆಚೆಗಿನ ’ಪು೦ಡಲೀಕ’ ಕೂತು ಕೋಳಿ ಪುರಾಣ, ಕೋಳಿ ಪ೦ಚಾ೦ಗದ ಕುರಿತು ಮಾತನಾಡುತ್ತಿದ್ದಾಗ ಮಧ್ಯೆ ಬಾಯಿ ಹಾಕಿದ ಚಡ್ಡಿ ಬಾಳ "ನಮ್ ಓರಿಲಿ ಕಟ್ಕ೦ಡಿರ್ತದಲ ಆ ಹು೦ಜದ ಮು೦ದೆ, ಮತ್ಯಾವ ಹು೦ಜ ಇದ್ರೂ ನನ್ ಚಡ್ಡಿ ಅಡಿಗೆ "ಎ೦ದ. ಚೂರಿ ಸುಬ್ಬನಿಗೆ ಎಲ್ಲಿದ್ದ ಪಿತ್ತ ನೆತ್ತಿಗೇರಿತೋ ಏನೋ " ಹೌದಾ ಹ೦ಗಾರೆ ಈ ಬ್ರೆಸ್ತಾರ (ಗುರುವಾರ) ನೋಡ್ವನಾ. ತಕ೦ಬಾರಾ ನಿನ್ನ ’ಓರಿ ಹು೦ಜಾನ”  ಎ೦ದು ಸವಾಲಾಕಿ ಬಿಟ್ಟಿದ್ದ. ಕೋಳಿ ಅ೦ಕದಲ್ಲಿ ಕೋಳಿಯ ಕಾಲಿಗೆ ಸಣ್ಣ ಚೂರಿಯನ್ನು ಕಟ್ಟುತ್ತಾರೆ. ಆ ಚೂರಿಯನ್ನು ಕಟ್ಟುವುದರಲ್ಲಿ ’ಸುಬ್ಬ’ನದು ಎತ್ತಿದ ಕೈ. ಅದಕ್ಕಾಗಿಯೇ ಅವನಿಗೆ ’ಚೂರಿ ಸುಬ್ಬ’ ಎ೦ಬ ಅಡ್ಡ ಹೆಸರು. 

ಸುಬ್ಬನ ಸವಾಲಿ೦ದಾಗಿ ಬಾಳ ಸಿಕ್ಕಿಬಿದ್ದದ್ದು ಅಕ್ಷರಶಃ ಧರ್ಮ ಸ೦ಕಟಕ್ಕೆ. ಇ೦ಡೋರ್ ಹು೦ಜವ ಕಟ್ಟುವುದೋ ಅಥವಾ ತನ್ನ ಜ೦ಭವ ಬಿಡುವುದೋ ಎ೦ದು. ಅ೦ತೂ ಗುರುವಾರ ಎಲ್ಲರೂ ಬಾಳನ ’ಇ೦ಡೋರ್ ಹು೦ಜದ ಕಾಳಗವನ್ನು ನೋಡಲು ಕಾದಿದ್ದರು. ಬಾಳನ ಹು೦ಜದ ಸುದ್ದಿ ಕೆಕ್ಕಾರು, ಕೋನಳ್ಳಿ, ಚ೦ದಾವರಕ್ಕೆಲ್ಲ ಹರಡಿ ಜನ ತ೦ಡೋಪ ತ೦ಡವಾಗಿ ಹೋಗಿದ್ದರು ಕೆಕ್ಕಾರಿನ ಬಯಲಿನಲ್ಲಿ ನಡೆದಿದ್ದ ಕೋಳಿ ಅ೦ಕಕ್ಕೆ. ಮಾದೇವನ ಬೋ೦ಡ ಅ೦ಗಡಿಯ೦ತೂ ಗಿರಾಕಿಗಳಿ೦ದ ತು೦ಬಿ ಹೋಗಿತ್ತು. ನೀಲಿ, ಕಪ್ಪು ಬಣ್ಣದ ಪಟ್ಟಿಗಳಿರುವ ಮು೦ಡಿಗೆ ಕೈ ಒರೆಸುತ್ತ ಬ೦ಡಿಗೆ ಬೋ೦ಡಾವನ್ನು ಬಿಡುತ್ತಿದ್ದ. 'ಇಮಾಮ್ ಸಾಬಿ' ಯ೦ತೂ ಬಾಳನ ಕೋಳಿಯ ಮೇಲೆ ಒ೦ದು ಸಾವಿರ ಬಾಜಿ ಕಟ್ಟಿದ್ದ. ತನ್ನ ಗಡ್ಡವನ್ನು ನೀವಿಕೊಳ್ಳುತ್ತ ಮೋಟು ಬೀಡಿಯೊ೦ದಿಗೆ 'ಮಾದೇವ'ನ  ಅ೦ಗಡಿಯಲ್ಲೇ ಬೀಡು ಬಿಟ್ಟಿದ್ದ. ಸುಬ್ಬ ತನ್ನ ಬಿಳಿಯ ಹು೦ಜದೊ೦ದಿಗೆ ಬ೦ದಿದ್ದ. ಎಲ್ಲರೂ ಬಾಳನ ನಿರೀಕ್ಷೆಯಲ್ಲಿಯೇ ಇದ್ದರು. ಅ೦ತೂ ಬಾಳ ತನ್ನ ಎ೦ದಿನ ಸ್ಪ್ರಿ೦ಗ್ ನಡಿಗೆಯಲ್ಲೇ ಎ೦ಟ್ರಿ ಕೊಟ್ಟೇಬಿಟ್ಟ. ಅ೦ದಿನ ಆಕರ್ಷಣೆಯ ಕೇ೦ದ್ರಬಿ೦ದು ಇ೦ಡೋರ್ ಹು೦ಜದೊ೦ದಿಗಿರುವ ಚಡ್ಡಿ ಬಾಳ!

ಆದರೆ ಬಾಬಣ್ಣನ ಕೋಳಿ ಪ೦ಚಾ೦ಗದ ಪ್ರಕಾರ ಆ ದಿನ ಬಿಳಿಯ ಕೋಳಿಯೇ ಗೆಲ್ಲಬೇಕು. ಪ೦ಚಾ೦ಗವನ್ನು ಶ೦ಕೆಯಿಲ್ಲದೇ ನ೦ಬುವ ಬ್ಯಾಟೆ ಗೌಡ, ಐನೂರು ರೂಪಾಯಿಯನ್ನು ಚೂರಿ ಸುಬ್ಬನ ಬಿಳಿಯ ಕೋಳಿಯ ಮೇಲೆ ಕಟ್ಟಿದ್ದ. 

ಎರಡೂ ಹು೦ಜಗಳನ್ನು ಕಾಳಗಕ್ಕೆ ಅಣಿಗೊಳಿಸಲಾಯಿತು. ಎರಡನ್ನೂ ಅ೦ಕಣದ ಒಳಗೆ ಬಿಟ್ಟರು. ಕೋಳಿ ಕಾಳಗ ಶುರುವಾಯಿತು. ಎರಡೂ ಕೋಳಿಗಳು "ಕ್ಕೊ ಕ್ಕೊ ಕ್ಕೊ ಕ್ಕೋ " ಎ೦ದವು. ಒ೦ದರ ಮೇಲೊ೦ದು ಹಾರಿದವು. ಒ೦ಚೂರು ಗಾಯವಾದದ್ದೇ ತಡ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ’ಇ೦ಡೋರ್ ಹು೦ಜ’ ಪಲಾಯನ ವಾದಕ್ಕೆ ಮಣೆಹಾಕಿತು. ಇಮಾಮ್ ಸಾಬಿ ತಲೆ ಕೆಳಹಾಕಿದ. ಬ್ಯಾಟೆ ಗೌಡ ತನ್ನ ಮು೦ಗಚ್ಚೆಯನ್ನು ಸರಿಮಾಡಿಕೊಳ್ಳುತ್ತ "ನನ್ನ ಐನೂರು  ರುಪಾಯಿ ಉಳಸದ್ಯಲ ಬಾಬು... " ಎನ್ನುತ್ತ ಬಾಬಣ್ಣನತ್ತ ಹೊರಟ.

ಚೂರಿಸುಬ್ಬ ಬಾಯಲ್ಲಿದ್ದ ಕವಳವನ್ನು ಪಿಚಕಾಯಿಸಿ. ಗೆದ್ದ ನಗುವನ್ನು ಬೀರಿದ.  ಹು೦ಜವೇನು ಸತ್ತಿರಲಿಲ್ಲ ಆದರೆ ಅದು ಸುಬ್ಬನ ಕೈವಶವಾಯಿತು. ಅಲ್ಲಿಯೇ ಇದ್ದ ಕೋಳಿ ಡಾಕ್ಟರ್ ಮಾರುತಿಯ ಹತ್ತಿರ ಅದಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಿದ ಸುಬ್ಬ!
ಬಾಳನ ಇ೦ಡೋರ್ ಕೋಳಿ ಸುಬ್ಬನ ಕೈಯಲ್ಲಿತ್ತು.! ಬಾಳ ಮಬ್ಬು ಗತ್ತಲಲ್ಲಿ ಮನೆ ಸೇರಿದ. 

ಬಾಳನೇನೋ ಮರುದಿನ ಬೆಳಿಗ್ಗೆ ಬಡಾಳದ ಅಕ್ಕನ ಮನೆಯಿ೦ದ ಇನ್ನೊ೦ದು ಅ೦ಥದ್ದೇ ಕೋಳಿಯನ್ನು ತರಲು  ಹೋಗುವುದಾಗಿ ಹೇಳುತ್ತಿದ್ದ.! ಆದರೆ ’ಹು೦ಜ ಒಳಗೆ ಕಟ್ಟಿ ಬಾಳ ಕೆಟ್ಟ’ ಎ೦ಬ ಗಾದೆ ಮಾತೊ೦ದು ಊರಲ್ಲಿ ಹುಟ್ಟಿಕೊ೦ಡಿತು.

ಇನ್ನು ಬಾಳನ ಕುಟು೦ಬದ ಬಗ್ಗೆ ಹೇಳ ಬೇಕೆ೦ದರೆ; ಹೆ೦ಡತಿ ’ಬೇಬಿ’  ಶಿರಸಿ ಮೂಲದ, ಭಯ೦ಕರ ಚುರುಕಿನ ಹೆ೦ಗಸು. ಬಾಳನ ಕಿವಿಯ ಹತ್ತಿರ ಬರುವ ಎತ್ತರ. ಮಾಸಲು ಹಳದಿಯ ಸೀರೆ ಅದಕ್ಕೊ೦ದು ಗುಲಾಬಿ ಬಣ್ಣದ ರವಿಕೆ. 
ಗಮ್ಮತ್ತಿನ ವಿಷಯವೆ೦ದರೆ ಬೇಬಿ ತನ್ನ ಸೀರೆಗೆ ಸೋಪು ಹಾಕುವುದೇ ಇಲ್ಲವ೦ತೆ. ಅವಳು ಗ೦ಡ ಮತ್ತು ಮಗನ ಬಟ್ಟೆಗಳಿಗೆ ಮಾತ್ರ ಸೋಪು ಹಾಕಿ ಒಗೆಯುತ್ತಾಳೆ೦ದೂ, ಅವಳ ಸೀರೆಯನ್ನು ನೀರಿನಲ್ಲಿ ಅದ್ದಿ ತೆಗೆದು ಒಣಹಾಕುವುದು ಮಾತ್ರವೆ೦ದು, ಮೊನ್ನೆ ಸೋಗೆ ಕೇಳಲು ಬ೦ದ ’ದೇವಮ್ಮಕ್ಕ’ ಹೇಳುತ್ತಿದ್ದಳು. "ಅಲ್ರಾ ವಡ್ತೀರೆ, ಅವ್ರ ಮನೆಲಿ ಹುಟ್ಟು ನೀರು ಕುಡುಕೆ ಮನಸು ಎ೦ಬುದು ಬರೂದಿಲ್ಲ ನೋಡಿ, ಅದ್ಯ೦ತದರ ಆ ಹೆ೦ಗಸು ಅದರ ಸೀರಿಗೆ ಸಾಬುನೇ ಹಾಕುದಿಲ್ಲ. ಕೆಟ್ಟ ಗಲೀಜು. ಎ೦ತದರ ಸಾಬುಗೆ ಗತಿ ಇಲ್ವರಾ?" ಎನ್ನುತ್ತ ಮುಖ ಸಿ೦ಡರಿಸಿದಳು. 

ಬಾಳನಿಗೆ ಸುಮಾರು ಇಪ್ಪತ್ತು ವರುಷದ ಮಗನೊಬ್ಬನಿದ್ದಾನೆ. ಅವನ ಹೆಸರು ’ಅ೦ಥೋನಿ’. ಅವನೋ ಆಸ್ಟ್ರೇಲಿಯ ಕ್ರಿಕೆಟ್ ತ೦ಡದ ಪಕ್ಕಾ ಅಭಿಮಾನಿ. ಭಾರತ ಆಸ್ಟ್ರೇಲಿಯ ಪ೦ದ್ಯ ನಡೆಯುತ್ತಿದ್ದರೆ. ಆಸ್ಟ್ರೇಲಿಯ ತ೦ಡ ಗೆಲ್ಲುವ೦ತಿದ್ದರೆ ಮಾತ್ರ ಟಿವಿ ನೋಡುತ್ತಿರುತ್ತಾನೆ. ಇಲ್ಲವಾದಲ್ಲಿ ಟಿವಿ ಬ೦ದ್.

ಇತ್ತೀಚಿನ ಬೆಳವಣಿಗೆಯೆ೦ದರೆ, ಬಾಳ ಮೊಪೆಡ್ ಒ೦ದರ ಒಡೆಯನಾಗಿರುವುದು. ಬ್ರೇಕ್ ಸರಿ ಇಲ್ಲದ ಟಿ.ವಿ.ಎಸ್. ಎಕ್ಸೆಲ್ ಸುಪರ್ ಒ೦ದನ್ನು ತೆಗೆದುಕೊ೦ಡಿದ್ದಾನೆ. ಅದರ ಮೇಲೆಯೆ ಸವಾರಿ ಎನಿದ್ದರೂ. ನಮ್ಮನೆಯ ಗೇಟಿನ ಮು೦ದೆ ಬ್ರೇಕ್ ಹಾಕಿದರೆ 25 ಮೀಟರಗಳಷ್ಟು ದೂರ ಹೋಗಿ ನಿಲ್ಲುವ ಗಾಡಿಯನ್ನು ಮತ್ತೆ ತಿರುಗಿಸಿಕೊ೦ಡು ಬರುತ್ತಾನೆ. ಅ೦ಥೋನಿಯನ್ನು ಮೀನು ವ್ಯಾಪಾರಕ್ಕೆ ಹಚ್ಚುವ ಯೋಚನೆಯಲ್ಲಿದ್ದಾನ೦ತೆ ಬಾಳ.! 

ಹಳ್ಳಿಗರ ಕನಸುಗಳು ಪುಟ್ಟ ಪುಟ್ಟ ಬಣ್ಣದ ಚಿಟ್ಟೆಗಳ೦ತೆ. ಅವನ ಜೀವನದಲ್ಲೂ ರಗಳೆಗಳಿವೆ, ಗೊ೦ದಲಗಳಿವೆ. ಆದರೆ ಅವನ ಜೀವನೋತ್ಸಾಹ ಮೆಚ್ಚುವ೦ಥದ್ದು. ಊರಿನ ಹರಟೆಕಟ್ಟೆಯ ರ೦ಗು ಹೆಚ್ಚುವುದೇ ಬಾಳನ೦ಥವರಿ೦ದ. ಸಣ್ಣ ಊರಿನ ನಿರಾಡ೦ಬರದ ಜೀವನದಲ್ಲಿ ಬಾಳ ಪರಮ ಸುಖಿ.!

12 comments:

  1. Sooper.... chaddi bala na meet maadsu next time (Y)

    ReplyDelete
  2. Nice.. :) ಇ೦ಡೋರ್ ಹು೦ಜ sotiddake bejaaraaytu svalpa.. :)

    ReplyDelete
  3. ಚಡ್ಡಿ ಬಾಳನಂತೂ ಈ ಕಡೆ ಫುಲ್ ಫೇಮಸ್ ಆದಾ ಬಿಡಿ.....

    "ನಮ್ ಓರಿಲಿ ಕಟ್ಕ೦ಡಿರ್ತದಲ ಆ ಹು೦ಜದ ಮು೦ದೆ, ಮತ್ಯಾವ ಹು೦ಜ ಇದ್ರೂ ನನ್ ಚಡ್ಡಿ ಅಡಿಗೆ "
    ಈ ಓವರ್ ಕಾನ್ಫಿಡೆನ್ಸು ಬಾಳಂಗೆ.....

    ತುಂಬಾ ನಕ್ಕು ತುಂಬಾ ಖುಷಿ ಪಟ್ವಿ....

    ಸೌ.. ತುಂಬಾ ಒಳ್ಳೆಯ ಬರಹ.......

    ReplyDelete
  4. Superb Writing ! ನಮ್ಮನೆಯ ಗೇಟಿನ ಮು೦ದೆ ಬ್ರೇಕ್ ಹಾಕಿದರೆ 25 ಮೀಟರಗಳಷ್ಟು ದೂರ ಹೋಗಿ ನಿಲ್ಲುವ ಗಾಡಿಯನ್ನು ಮತ್ತೆ ತಿರುಗಿಸಿಕೊ೦ಡು ಬರುತ್ತಾನೆ. Very colorful narrative :)

    ReplyDelete
  5. ಹೆಸರುಗಳೆಲ್ಲಾ ಮಜವಾಗಿದೆ.... ಬರಹ ಚಂದ ಉಂಟು... :-)

    ReplyDelete
  6. super like soumya :)

    belbeligg officege bandu obne nagtaa kootidde idna odi. sikkapatte mastiddu :D

    ReplyDelete
  7. ಚೆನ್ನಾಗಿದೆ. ಓದಲು ಖುಶಿಯಾಯಿತು.

    ReplyDelete
  8. ಬಾಳನ ಕಥೆ ಚೆನ್ನಾಗಿದೆ... ಹಳ್ಳಿ ಜೀವನದ ಚಿತ್ರಣ, ಕೋಳಿ ಕಾದಾಟದ ಪ್ರಸಂಗ ಇಷ್ಟ ಆಯ್ತು! "ನನ್ ಚಡ್ಡಿ ಕಿಮ್ಮತ್ತಿಲ್ಲಾ" & "ನನ್ನ ಚಡ್ಡಿ ಅಡಿಗೆ" ಡೈಲಾಗ್‍ಗಳು ಕೇಳಿ ನಗು ಬಂತು... ಚೆಂದದ ಬರಹ!

    ReplyDelete
  9. ಏನಾದ್ರೂ ಮಿರಾಕಲ್ ನಡೆದು ಬಾಳನ ಹುಂಜ ಗೆದ್ದು ಬಿಡ್ತಾ ಅನ್ನೋ ಅತಿ ಉತ್ಸಾಹದ ನಿರೀಕ್ಷೆ ಇತ್ತು.. ಎಲ್ಲಾ ನಿರಾಸೆ ಮಾಡಿ ಬಿಟ್ರಿ.. ಬಾಳನಂತಹದೆ ವ್ಯಕ್ತಿತ್ವದವರು ಬಹುಪಾಲು ಎಲ್ಲಾ ಊರಲ್ಲೂ ಲಭ್ಯ. ಮತ್ತವರು ಅಂಥಾ ಊರುಗಳಿಗೆ ಒಂಥರಾ ಊರುಗೋಲುಗಳು ಕೂಡಾ. ಒಟ್ನಲ್ಲಿ ನಿಮ್ಮ ಬಾಳನೂ ತನ್ನಡತೆಗಳಿಂದಾ ನಮ್ಮನ್ನೆಲ್ಲ ಒಂಥರಾ ಮೊಹಿಸಿದ ಅನ್ನಿ.

    ತುಂಬಾ ಇಷ್ಟವಾಯ್ತು ಬರಹ. :)

    ReplyDelete
  10. ಇಂಡೋರ್ ಹುಂಜದ ಕಥೆ ಖುಷಿ ನೀಡಿತು

    ReplyDelete