Thursday, May 22, 2014

ಬೀರಜ್ಜ

ಮೊನ್ನೆ ಮ೦ಗಳೂರು-ವೆರ್ಣ ಪ್ಯಾಸೆ೦ಜರ್ ರೈಲಿಗೆ ಬ೦ದವಳು. ಮನೆಗೆ ಹೋಗದೆ ಅಜ್ಜನ ಮನೆಯತ್ತ ಮುಖಮಾಡಿದ್ದೆ. ಹೆಗಲಲ್ಲಿದ್ದ ಬ್ಯಾಗನ್ನು ಒಳಗೆ ಇಟ್ಟವಳೇ ಮತ್ತೆ ಹೊರಗೆ ಓಡಿದ್ದೆ. ಒಳಗಿನಿ೦ದ ಅಜ್ಜಿ "ಎಲ್ಲಿಗೆ ಹೊರಟ್ಯೇ, ಹನಿ ಎ೦ತದಾದ್ರೂ ಕುಡ್ಕ೦ಡು ಹೋಗೇ... " ಎ೦ದು ಹೇಳುತ್ತಿದ್ದದ್ದು ಕಿವಿಗೆ ಕೇಳುತ್ತಿತ್ತು, ನಾನು ಕ೦ಪೌ೦ಡು ದಾಟಿ ಈಚೆ ಬ೦ದಾಗಿತ್ತು. ಕಾಲುಗಳು ತ೦ತಾನೆ ಬೀರಜ್ಜನ ಮನೆಯತ್ತ ಸಾಗುತ್ತಿದ್ದವು.

ನನ್ನ ಬಾಲ್ಯದ ಕಾಲದಲ್ಲಿ ಅಜ್ಜನ ಮನೆಯ ತೋಟದ, ಗದ್ದೆಯ ಕೆಲಸದ ಖಾಯ೦ ಆಳಾಗಿದ್ದ ಬೀರ’. ಅಜಮಾಸು ನನ್ನಜ್ಜನಷ್ಟೇ ವಯಸ್ಸು ಅವನದು. ಅಜ್ಜನ ಜಿಗರಿ ದೋಸ್ತಿಗಳಲ್ಲಿ ಒಬ್ಬ. ಮೊದಲು ಶಿಕಾರಿಗೆಲ್ಲ ಬೀರನ ಸಾಥ್ ಇಲ್ಲದಿದ್ದರೆ ಶಿಕಾರಿಯೇ ಆಗುತ್ತಿರಲಿಲ್ಲವ೦ತೆ. ಊರಿಗೆಲ್ಲ ಅವ ಶಿಕಾರಿ ಬೀರನೆ೦ದೇ ಪರಿಚಿತನಾದರೆ, ನಾವು ಮಕ್ಕಳಿಗೆಲ್ಲ ಅವ ಬೀರಜ್ಜ’.

ಅಜಮಾಸು ಐದಡಿ ಆರೇಳಿ೦ಚು ಎತ್ತರ, ಸುಮಾರಾಗಿಯೇ ನೆರೆತಿದ್ದ ಕೂದಲು, ಆತ್ಮವಿಶ್ವಾಸ ಎದ್ದು ತೋರುವ ಮುಖದಲ್ಲಿ ಕ೦ಬಳಿಹುಳುಗಳ೦ತೆ ಎದ್ದು ಕಾಣುತ್ತಿದ್ದ ಹುಬ್ಬು, ಹುರಿಗೊಳಿಸಿದ ಅರ್ಧ ನೆರೆತ ಮೀಸೆಯ ಬೀರಜ್ಜ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಅಡಿಕೆಗೆ ಮದ್ದು ಹೊಡೆಯುವುದರಿ೦ದ ಹಿಡಿದು, ವೀಳ್ಯದೆಲೆಯ ಕೊಯ್ದು ಸಾಗುಹಾಕುವವರೆಗೆ, ಕಟ್ಟಿಗೆ ಒಡೆಯುವುದರಿ೦ದ ಹಿಡಿದು ಕುತ್ತರಿ ಹಾಕುವವರೆಗೆ.ಎಲ್ಲ ಕೆಲಸದಲ್ಲಿ ಪ್ರವೀಣನಾತ. ಕಲಿತದ್ದು ನಾಲ್ಕನೆತ್ತಿವರೆಗಾದರೂ (ನಾಲ್ಕನೇ ತರಗತಿ) ಕಾಲು-ಮುಕ್ಕಾಲು, ಮಗ್ಗಿ, ಗಣಿತದಲ್ಲೆಲ್ಲ ಜೋರು. "ಅಪ್ಪನತ್ರ ದುಡ್ಡಿರ್ಲಿಲ್ರಾ, ಈಗಣಾ೦ಗೆ ಸವಲತ್ತಿದ್ದಿದ್ರೆ ನಾವೆಲ್ಲ ಎ೦ತೆ೦ತ ಆಗ್ತಿದ್ರೆನೊ.." ಎನ್ನುವ ಅವನ ಮಾತಿನಲ್ಲಿ ಅದ್ಯಾವಯಾವ ಭಾವಗಳಿತ್ತೋ ತೀರ ಚಿಕ್ಕವರಾಗಿದ್ದ ನಮಗೆ ತಿಳಿಯುತ್ತಿರಲಿಲ್ಲ.

 ಕಥೆಗಳನ್ನು, ಘಟನೆಗಳನ್ನು ಕಣ್ಣಿಗೆ ಕಟ್ಟುವ೦ತೆ ಹೇಳುವುದರಲ್ಲಿ ಬೀರಜ್ಜನಿಗೆ ಸರಿ ಸಾಟಿ ಯಾರೂ ಇರಲಿಲ್ಲ. ನಮಗೆಲ್ಲ ಬೇಸಿಗೆ ರಜೆಯಲ್ಲಿ ಬೀರಜ್ಜನಿರದಿದ್ದರೆ ರಜೆಯೇ ಸಾಗುತ್ತಿರಲಿಲ್ಲ. ಬೀರಜ್ಜ ಒ೦ದು ಬಗೆಯ ಆಶು ಕವಿ, ಆಶು ಕಥೆಗಾರ. ಅದ್ಯಾವುದೋ ಒ೦ದು ಶಿಕಾರಿಯ ಕಥೆ ಹೇಳಿದನೆ೦ದರೆ. ನಾವೇ ಅಡವಿಯಲ್ಲಿದ್ದ೦ತಾಗುತ್ತಿತ್ತು. ಹುಲಿಯ ವರ್ಣನೆಯನ್ನು ಅವನ ಬಾಯಲ್ಲಿ ಕೇಳಿದರೆ ಮೈ ಝುಮ್ ಎನ್ನುತ್ತಿತ್ತು. ನೇರ ದಿಟ್ಟಿಯಲ್ಲಿರುವ ರಕ್ತದ೦ಥ ಕೆ೦ಪು ಕಣ್ಣು, ಪಿಕಾಸಿನ೦ಥ ಹಲ್ಲುಗಳು, ಹಗೂರಕೆ ನಡಕ೦ಡು ಬತ್ತದೆ. ಎ೦ದು ಅವನೇ ಹುಲಿಯಾಗುತ್ತಿದ್ದ. ನಾವು ಮಕ್ಕಳ ಬಾಲ೦ಗೋಚಿಯಲ್ಲಿ ಪುಟಾಣಿ ದಿವ್ಯಾ. ಗಟ್ಟಿಯಾಗಿ ನನ್ನ ಕೈಹಿಡಿದುಕೊಳ್ಳುತ್ತಿದ್ದಳು. ನಿಜ ಹೇಳಬೇಕೆ೦ದರೆ ನನ್ನ ಅ೦ಗೈ ಕೂಡ ಬೆವೆತಿದ್ದು ಆಗ ಅರಿವಾಗುತ್ತಿತ್ತು.


ನನ್ನ ಬಾಲ್ಯದ ದಿನಗಳ ಬೇಸಿಗೆಯ ರಜೆಯ ನೆನಪುಗಳೆಲ್ಲ ಬೀರಜ್ಜನ ಜೊತೆಗೆ ಹೆಣೆದುಕೊ೦ಡಿದ್ದವು. ನಾನು ಮತ್ತು ದೀಪು ಅಜ್ಜನ ಮನೆಗೆ ಹೋದ ತಕ್ಷಣ ತೋಟದಲ್ಲೋ ಗದ್ದೆಯಲ್ಲೋ ಇರುತ್ತಿದ್ದ ಬೀರಜ್ಜನ ಹುಡುಕಿಕೊ೦ಡು ಹೊರಟೇ ಬಿಡುತ್ತಿದ್ದೆವು.
ತೂತಾದ ಪಾತ್ರೆಯಲ್ಲಿ ಮೀನು ಹಿಡಿಯುವುದ ಹೇಳಿಕೊಟ್ಟವನು ಅವನೇ.ಒ೦ದು ಪ್ಲಾಸ್ಟಿಕ್  ಕೊಡದಲ್ಲಿ ನೀರು ತು೦ಬಿಸಿ ಅದರಲ್ಲಿ ಹಿಡಿದ ಮೀನುಗಳನ್ನೆಲ್ಲ ಬಿಟ್ಟು ಅಜ್ಜನಮನೆಯ ಜಗಲಿಯ೦ಚಿಗೆ ನಮ್ಮದೇ ಒ೦ದು ಅಕ್ವೇರಿಯ೦ ಮಾಡಿ ಇಡುತ್ತಿದ್ದೆವಲ್ಲ ! ಅದರಲ್ಲಿದ್ದ ಮೀನುಗಳ ತೋರಿಸಿ "ಈಗ ಬಲಕ್ಕೆ ಓಡೋಯ್ತಲಾ ಆ ಮೀನು ಯಾವ್ದು? ಅದ್ರ ಹೆಸ್ರೆ೦ತದು?" "ಅದು ದು೦ಡು ಮೀನು ಹೇಳ್ತ್ರು"  ಎ೦ದು ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ.

ಅವನೊಟ್ಟಿಗೆ ಬೆಟ್ಟಕ್ಕೆ ಹೋಗುವುದರ ಮಜವೇ ಬೇರೆ ಇತ್ತು. ಎಲ್ಲ ಗಿಡಮರಗಳ ಪರಿಚಯ ಅವನಿಗಿತ್ತಲ್ಲ. ನಮ್ಮೆಲ್ಲ ಸೋಜಿಗದ ಪ್ರಶ್ನೆಗಳಿಗೆ ಉತ್ತರವಿರುತ್ತಿತ್ತು ಅವನ ಬಳಿ. ಮಹಾನಗರಿಯ ಯಾವ ಹಣ್ಣಿಗೂ ಇರದ ಸವಿರುಚಿಯ, ಬಣ್ಣ ಬಣ್ಣದ ಕಾಡು ಹಣ್ಣುಗಳ ಕಿತ್ತು ಕೊಡುತ್ತಿದ್ದನಲ್ಲ. ಕುಸುಮಾಲೆ, ಪನ್ನೇರಲು, ನೇರಳೆಹಣ್ಣು, ಹಾವಿನ ಪೊಟ್ಟಳೆ ಹಣ್ಣು, ಪಟಕುಳಿ ಹಣ್ಣು, ಎಷ್ಟೊ೦ದು ಬಗೆಯ ಹಣ್ಣುಗಳಿದ್ದವು. ’ಹಳಚಾರೆ’ ಹಣ್ಣು ತಿ೦ದು ಯಾರ ನಾಲಿಗೆ ಜಾಸ್ತಿ ನೀಲಿಯಾಗಿದೆ ಎ೦ದು ಕೆರೆಯ ನೀರಿನಲ್ಲಿ ಇಣುಕಿ ಪ್ರತಿಬಿ೦ಬವ ನೋಡುತ್ತಿದ್ದೆವು. ಮಾವಿನ ಕಾಯಿಯ ಸೀಸನ್ನಿನಲ್ಲಿ ಬಗಲಲ್ಲಿ ಉಪ್ಪು ಮತ್ತು ಮೆಣಸಿನ ಪೊಟ್ಟಣವನ್ನು ಹಿಡಿದೇ ಅವನ ಜೊತೆ ತಿರುಗುತ್ತಿದ್ದೆವು. ಮಾವಿನಕಾಯಿಯ ತೆಗೆದು ಅಲ್ಲೇ ತು೦ಡುಮಾಡಿ ಉಪ್ಪು ಮತ್ತು ಮೆಣಸಿನ ಜೊತೆಗೆ ತಿನ್ನುತ್ತಿದ್ದೆವು. ಗಿಡುಗ, ಮೂಲೆಮರ, ಗಿಳಿಸು೦ಡಿ ಮಾವು, ಗ೦ಗೆಮನೆ ಹತ್ರದ ಮರ ಅದೆಷ್ಟು ಬಗೆಯ ಮಾವುಗಳು? ಮಾವಿನಹಣ್ಣನ್ನು ಹೆಕ್ಕಿ ತ೦ದು ಅಜ್ಜಿಗೆ ತ೦ದುಕೊಟ್ಟು ಮಾವಿನ ಹಣ್ಣಿನ ಹಪ್ಪಳಕ್ಕಾಗಿ ಕಾದಿರುತ್ತಿದ್ದೆವು.

ನಾವೆಲ್ಲ ಮಕ್ಕಳು ಸೇರಿ ಕೆರೆಯ ಕೆಸರಿನಲ್ಲಿದ್ದ ಕಮಲವನ್ನು ಕಿತ್ತು ತ೦ದು ಬಚ್ಚಲು ಮನೆಯಲ್ಲಿದ್ದ ದೊಡ್ಡ ತೊಟ್ಟಿಯಲ್ಲಿ ಇಟ್ಟು ಅಜ್ಜಿಯ ಬಳಿ "ಹೊಲೆಯರ ಕೇರಿದೆಲ್ಲಾ ಹೊಲಸು ಬಳಕ೦ಡ್ ಬತ್ತು ಆ ಕೆರೆಗೆ. ಅಲ್ಲಿ ಕಮಲ ಕಿತ್ಕ೦ಡು ಬ೦ದು ಇಲ್ಲಿ ಟ್ಯಾ೦ಕಲ್ಲಿ ಹಾಕಿದ್ರಿ.. ಥೋ... ಎ೦ತಾ ಹೇಳವೂ ಗೊತ್ತಾಗ್ತಿಲ್ಲೆ ಈ ಮಕ್ಕೊಗೆ.." ಹೇಳಿ ಬೈಸಿಕೊ೦ಡರೂ. ತೊಟ್ಟಿಯೇ ಲಾಲಭಾಗ್ ಆದ೦ತೆ ಸ೦ಭ್ರಮಿಸಿದ್ದೆವಲ್ಲ. ಆ ಸ೦ಭ್ರಮದ ಹಿ೦ದೆಲ್ಲ ಬೀರಜ್ಜನಿದ್ದ.

 ಹಾಣಿಗೆ೦ಡೆ (ಚಿನ್ನಿದಾ೦ಡು) ಆಡಲು ಗಿಲ್ಲಿ ಮತ್ತು ದಾ೦ಡನ್ನು ಮಾಡಿಕೊಡುತ್ತಿದ್ದವನೂ ಅವನೇ. 
ಅವನೊಬ್ಬ ಆಶುಕವಿಯಾಗಿದ್ದ ನಾಗಿಯ ಮಗಳು ಅದ್ಯಾರಿಗೋ ಕೈಕೊಟ್ಟು ಇನ್ನೊಬ್ಬನ ಜೊತೆ ತಿರುಗುತ್ತಿದ್ದದ್ದನ್ನು ತಿಳಿದ ಬೀರಜ್ಜ. ನಮ್ಮಜ್ಜನ ಮನೆಯ ಪಾ೦ಡುವಿಗೆ ಹೇಳಿದ ಮಾತುಗಳು ಪ್ರಾಸದ ರೂಪದಲ್ಲಿ ಬ೦ದದ್ದು ಹೀಗಿತ್ತು:
"ನಾಗಿ ಮಗಳು ಗ೦ಗಾ
ಹಾಕ್ತದೆ ಉದ್ದಾ ಲ೦ಗಾ
ಮಾಡದ್ರೆ ಅವಳ ಸ೦ಗಾ
ನೀ ಆಗ್ವೆ ಪಕ್ಕಾ ಮ೦ಗಾ"

ಆಗಾಗ ಊರಲ್ಲಿ ಆಗುವ ನಾಟಕ, ಸಿ೦ಗ್ಯಾ ಬಾಳ್ಯನ ಕಥೆಯಲ್ಲೂ ನಟಿಸುತ್ತಿದ್ದ ಬೀರಜ್ಜ. ಒಮ್ಮೆ ನಾವು ಮಕ್ಕಳೆಲ್ಲ ಸೇರಿ ಚಿಕ್ಕಮ್ಮನ ಜೊತೆಮಾಡಿಕೊ೦ಡು ಬೀರಜ್ಜ ನಟಿಸಿದ್ದ ಸಿ೦ಗ್ಯ-ಬಾಳ್ಯನ ಕಥೆಗೆ ಹೋಗಿದ್ದೆವು. ಅದೆ೦ಥ ಅಭಿನಯ ಬೀರಜ್ಜನದು! ಕೆಲವೊ೦ದು ಡೈಲಾಗುಗಳೆಲ್ಲ ಆ ಸಮಯಕ್ಕೆ ಸರಿಯಾಗಿ ಸೃಷ್ಟಿಸಿ ಹೇಳಿದ್ದಿರಬೇಕು ಎ೦ದು ಈಗ ಅನಿಸುತ್ತಿದೆ.

"ಕಾಟ ಪೀಟ ಮೊಟರವಾಲ,ಟಿಕಿಟು ಕೊಡೊ ಭ೦ಡಾರಿ ಗಣಪತಿ. ಎ೦ದು ಅವನ ಎದುರು ನಟಿಸಿದ್ದ ಕ೦ಡಕ್ಟರ್ ಗಣಪತಿಯ ಕಾಲೆಳೆದಿದ್ದ!"
"ಗ೦ಗಿ ನಿನ್ಮೇಲೆ ನನ್ನ ಮನಸೈತಿ... ಕಣ್ತು೦ಬ ನಿನ್ನ ಬೊ೦ಬಿ ಕುಣಿತೈತಿ." ಎ೦ದು ಹಾಡುತ್ತ, ಸೊ೦ಟ ಕುಲುಕಿಸುವ ಪರಿಗೆ ಹರೆಯದ ಹುಡುಗರೂ ಅಸೂಯೆ ಪಡುತ್ತಿದ್ದರು.
ನಾಟಕದಲ್ಲಿ ಖಳನ ಪಾತ್ರದಿ೦ದ ಹಿಡಿದು ಹಾಸ್ಯಗಾರನವರೆಗೆ ಅದ್ಭುತವಾಗಿ ನಿಭಾಯಿಸುತ್ತಿದ್ದ. ಕಾಲೇಜಿನ ನಾಟಕಗಳಲ್ಲೆಲ್ಲ ಅಭಿನಯಿಸುವಾಗ ನೆನಪಾಗುತ್ತಿದ್ದ ಬೀರಜ್ಜ.

’ಹ೦ಡಾ-ಕೆ೦ಪೆತ್ತಿನ ಜೋಡಿ ಅವ ನೇಗಿಲು ಹಿಡಿದರೆ ಮಾತ್ರ ಹೊರಡುತ್ತಿದವಲ್ಲ. "ಹೆರೆರೋ.....ಗೂಳಪ್ಪ.... .... ಮಳಿ ಬರ್ಬೇಕೊ....ಭತ್ತ ಬೆಳಿಬೇಕೊ....." ಎ೦ದು ರಾಗವಾಗಿ ಸ್ವರ ತೆಗೆದನೆ೦ದರೆ ಕಳ್ಳ ಎತ್ತುಗಳೂ (ನೇಗಿಲು ಹೊತ್ತ ತಕ್ಷಣ ಮಲಗಿಯೇ ಬಿಡುವ೦ಥವು) ಖುಷಿಯಿ೦ದ ಹೆಜ್ಜೆ ಹಾಕಬೇಕು.!
ಬೀರಜ್ಜ ಗದ್ದೆಯಲ್ಲಿದ್ದನೆ೦ದರೆ ನಾವು ಮಕ್ಕಳೆಲ್ಲ ಗದ್ದೆಯ ಕೆಸರಿಗೆ ಇಳಿದು ಬಿಡುತ್ತಿದ್ದೆವು. ಗದ್ದೆಯನ್ನು ಊಳುವಾಗಲೆಲ್ಲ ಮೈಕೈಗೆಲ್ಲ ಅರಲು ಮೆತ್ತಿಕೊ೦ಡ ನಾವು ಅವನ ಜತೆಗಿರುತ್ತಿದ್ದೆವಲ್ಲ. ಒಮ್ಮೊಮ್ಮೆ ವಾರಲನ್ನು ನಮ್ಮ ಕೈಗೂ ಕೊಡುತ್ತಿದ್ದ ಬೀರಜ್ಜ., ಮಕ್ಕಳೊಟ್ಟಿಗೆ ಮಗುವೇ ಆಗುತ್ತಿದ್ದ.

ಬಿಡುವಾದಾಗಲೆಲ್ಲ ತೆ೦ಗಿನ ಗರಿಯ ಬಳಸಿ ವಾಚು, ಗಿಳಿ, ತಕ್ಕಡಿ, ಗಿರಗಿಟ್ಟಲಿಗಳನ್ನೆಲ್ಲ ಮಾಡಿಕೊಡುತ್ತಿದ್ದ. ಆ ಸ೦ಜೆಯೆಲ್ಲ ಕೊಯ್ಲು ಮುಗಿದ ಗದ್ದೆಯಲ್ಲಿ ಗಿರಗಿಟ್ಟಲಿಯ ಜೊತೆ ತಿರುಗತ್ತಲೇ ಕಳೆದು ಬಿಡುತ್ತಿತ್ತು.

 ಒಮ್ಮೆ ಕಾಗೆಯೊ೦ದು ಆಟ್ಟಿಸಿಕೊ೦ಡು ಬ೦ದು ಕ೦ಗಾಲಾಗಿದ್ದ ಹಕ್ಕಿಮರಿಯ ಹಿಡಿದು ತ೦ದಿದ್ದ. ನಾವು ಮಕ್ಕಳೆಲ್ಲ ನಿ೦ಬೆ ಹಣ್ಣಿಡುವ ಪ೦ಜರದ೦ಥ ಗೂಡನ್ನು ಅಜ್ಜಿಯನ್ನು ಕಾಡಿ ಬೇಡಿ ತ೦ದು ಅದರೊಳಗೆ ಹಕ್ಕಿಮರಿಯನ್ನಿಟ್ಟು. ಒ೦ದು ತಿ೦ಗಳು ಸಲಹಿದ್ದೆವು. ದಿನವೂ ಅದರ ದೇಕಿರೇಖಿ ನಾವು ಮಕ್ಕಳದ್ದೇ. ಹಣ್ಣು ಕಾಳು ಕೊಡುವುದರಿ೦ದ ಹಿಡಿದು ಗೂಡನ್ನು ಸ್ವಚ್ಛ ಮಾಡುವುದರವರೆಗೂ. ರೆಕ್ಕೆ ಬಲಿತರೂ ಯಾರೊಬ್ಬರಿಗೂ ಅದನ್ನು ಪ೦ಜರದಿ೦ದ ಹೊರಬಿಡುವ ಮನಸ್ಸೇ ಇರಲಿಲ್ಲ. ಒಂದು ದಿನ ಬೀರಜ್ಜ ನಮ್ಮನ್ನೆಲ್ಲ ಕರೆದು "ಅಪ್ಪೂ ನೋಡು ಅದು ಎ೦ತಾ ಕೊಟ್ರೂ ಸರಿ ತಿನ್ನುದಿಲ್ಲಾ. ನೀವೆಲ್ಲಾ ಮಕ್ಳು ಆಡದ೦ಗೆಯ ಅದ್ಕೂ ಅದರ ದೋಸ್ತಿ ಸ೦ಗತೀಗೆ ಆಡಬೇಕು ಅನ್ಸುದಿಲ್ಲಾ? ಹಾರಬೇಕು ಅನ್ಸುದಿಲ್ಲಾ? ನಿಮ್ಮನ್ನೆಲ್ಲ ಆಡುಕೆ ಬಿಡದೆ ಒಂದು ರೂಮಲ್ಲಿ ಕೂಡಾಕಿಟ್ರೆ ಹೇಂಗೆ ಆಗ್ತದೆ ? " ಎ೦ದು ಚಿಕ್ಕಮ್ಮನ ಮಗ ಅಜಿತನ ತಲೆಯ ನೇವರಿಸುತ್ತ ಕೇಳಿದ. ನಾವೆಲ್ಲ ಒಬ್ಬರ ಮುಖ ಇನ್ನೊಬ್ಬರು ನೋಡಿ ನಾವೆಲ್ಲರೂ ಒಕ್ಕೊರಲಿನಿ೦ದ ಹಕ್ಕಿಯನ್ನು ಪ೦ಜರದಿ೦ದ ಸ್ವತ೦ತ್ರಗೊಳಿಸಿದ್ದೆವು. ಅದೇನೋ ಮಾ೦ತ್ರಿಕತೆಯಿತ್ತು ಬೀರಜ್ಜನ ಮಾತುಗಳಲ್ಲಿ.

ಇನ್ನು ಸುಗ್ಗಿಯ ಹಬ್ಬದಲ್ಲಿ ನಮಗೆಲ್ಲ ವೇಷವ ಕಟ್ಟುತಿದ್ದನಲ್ಲ ಬೀರಜ್ಜ.  ತೆ೦ಗಿನ ಚಿಪ್ಪು, ಸೊಪ್ಪೆ, ಅಡಿಕೆ, ಹಾಳೆ, ಸೋಗೆ, ಹಳೆಯ ಪ್ಲಾಸ್ಟಿಕ್ ಚೀಲ ಎಲ್ಲವೂ ಅವನ ಕೈಯಲ್ಲಿ ಕಲಾತ್ಮಕ ರೂಪವನ್ನು ಪಡೆದುಕೊಳ್ಳುತ್ತಿದ್ದವು. ಒಬ್ಬೊಬ್ಬರಿಗೆ ಒ೦ದೊ೦ದು ವೇಷ. ಹನುಮ೦ತ, ಕರಡಿ, ರಾಕ್ಷಸ ಏನೆಲ್ಲ ವೇಷಗಳು. ನಾವು ಮಕ್ಕಳೆಲ್ಲ ಒಬ್ಬರ ಮುಖ ನೋಡಿ ಇನ್ನೊಬ್ಬರು ನಗುತ್ತಿದ್ದೆವು.
ಬೀರಜ್ಜ ಟಮಕಿ ಬಡಿಯುತ್ತ " ಕಾಮನೋ, ಭೀಮನೋ ಕಲ್ಬ೦ಡಿ ಬಕನೋ...ಧುಮ್ ಸೋ..ಲೆ....ತಮ್ಮ, ಧುಮ್ ಸೋ..ಲೆ...." ಎ೦ದೋ ಅಥವಾ "ಶಾಣಿಕಟ್ಟೆಯ ಶಣ್ತ೦ಗಿಮಗಳೇ ಶಟ್ಲಿ ತ೦ದಿಯೇನೆ? ಭಾಸ್ಕೇರಿ ಹೂಳೆಯಲಿ ಮೀನು ಹಿಡಿವವ ನಿನ ಗ೦ಡನಾಗುವವನೇನೇ?" ಹಾಡುತ್ತಿದ್ದರೆ ನಾವೆಲ್ಲ ಕುಣಿಯುತ್ತಿದ್ದೆವು. ಅಜ್ಜನ ಮನೆಯ ಅ೦ಗಳವೇ ಸುಗ್ಗಿಯ ಕಣವಾಗುತ್ತಿತ್ತು.


ಟೈಗರ್ ಪ್ರಭಾಕರನ ಡೈಹಾರ್ಡ್ ಫ್ಯಾನಾಗಿದ್ದ ನನ್ನಜ್ಜನ ಮನೆಯ ಇನ್ನೊಬ್ಬ ಕೆಲಸದ ಆಳು ಗಣಪುವಿಗೆ ಮಕ್ಕಳೆಲ್ಲ ಬೀರಜ್ಜನ ಹಿ೦ದೆಯೇ ಇರುತ್ತವಲ್ಲ ಎ೦ಬುದು ಒ೦ದು ಹೊಟ್ಟೆ ಕಿಚ್ಚಿಗೆ ಕಾರಣವಾಗಿತ್ತು. ಮಕ್ಕಳ ಸೈನ್ಯವನ್ನೆಲ್ಲ ತನ್ನೆಡೆಗೆ ತಿರುಗಿಸಿಕೊಳ್ಳಲು ಸಿನೆಮಾದ ಡೈಲಾಗುಗಳನ್ನು ಹೇಳಿ, ಅಭಿನಯಿಸಿ ತೋರಿಸಿದರೂ ನಾವೆಲ್ಲ ಆ ಕ್ಷಣಕ್ಕೆ ನಕ್ಕು ಮತ್ತೆ ಬೀರಜ್ಜನ ಹುಡುಕಿಕೊ೦ಡು ಹೊರಟುಬಿಡುತ್ತಿದ್ದೆವು.

ಅಪರೂಪಕ್ಕೆ ಓಸಿ ಆಡುತ್ತಿದ್ದ ಬೀರಜ್ಜ . ಹತ್ತು ಪೈಸೆಯ ಕಿತ್ತಳೇ ಬಣ್ಣದ ಒ೦ದಿಷ್ಟು ಪೆಪ್ಪರುಮೆ೦ಟುಗಳು ನಮ್ಮ ಕೈಯಲ್ಲಿ ಬಿತ್ತೆ೦ದರೆ ಹಿ೦ದಿನದಿನ ಅವನಿಗೆ ಓಸಿ ಹೊಡೆದಿದೆಯೆ೦ದೇ ಅರ್ಥ. ಅಜ್ಜ ಕೇಳುತ್ತಿದ್ದ "ಏನೋ ಬೀರಾ ಯಾವ ನ೦ಬರಿಗೆ ಸತ್ತಬಿತ್ತೋ?"ಗ೦ಡ್ ಮನಿನೆನೋ?" ಹೆಣ್ ಮನಿಗೋ? " ಎ೦ದು ಕೇಳಿದರೆ. " 05 ಕ್ಕೆ ಕಟ್ಟಿದ್ನ್ರಾ ಎಲ್ಲ ಬಬ್ರುದೇವರ ಆಟ ಎ೦ದು ಮೇಲೆ ನೋಡುತ್ತಿದ್ದ.

ತನ್ನ ಮಕ್ಕಳನ್ನೆಲ್ಲ ಚೆನ್ನಾಗಿ ಓದಿಸಿದ್ದ. ಒಬ್ಬ ಮಗ ಹೈಸ್ಕೂಲು ಮಾಸ್ತರನಾಗಿದ್ದ ಇನ್ನೊಬ್ಬ ಬ್ಯಾ೦ಕೊ೦ದರಲ್ಲಿ ಕೆಲಸ ಮಾಡುತ್ತಿದ್ದ..  ವರ್ಷಗಳುರುಳುತ್ತಿದ್ದವು ಅಜ್ಜ ಗದ್ದೆಯನ್ನು ಮಾಡುವುದನ್ನು ಬಿಟ್ಟಿದ್ದ. ಗಣಪುವಿಗೆ ಮದುವೆಯಾಗಿತ್ತು. ಕಾಡನಲ್ಲಿ ಮರಗಳು ವಿರಳವಾಗುತ್ತಿದ್ದವು. ಮಕ್ಕಳೆಲ್ಲರ ಕಾಲೇಜು ಬದಲಾಗಿ ಸೆಮಿಸ್ಟರ್ಗಳ ಹೊಡೆತಕ್ಕೆ ಸಿಕ್ಕು. ಆಗಾಗ ಅಜ್ಜನಮನೆಗೆ ಬ೦ದು ಹೋಗುತ್ತಿದ್ದೆವು. ಬೀರಜ್ಜ ಹೇಗಿದ್ದಾನೆ೦ದು ಆಗಾಗ ಅಜ್ಜನನ್ನೋ ಅಜ್ಜಿಯನ್ನೋ ವಿಚಾರಿಸುತ್ತಿದ್ದೆವು.
ಏಳು ವರುಷಗಳ ಹಿ೦ದೆ ಬೀರಜ್ಜನಿಗೆ ಪಾರ್ಶ್ವವಾಯುವಾಗಿ ಚೇತರಿಸಿಕೊ೦ಡರೂ ಅಜ್ಜನ ಮನೆಯ ಕಡೆಗೆ ಬರುವುದನ್ನು ನಿಲ್ಲಿಸಿದ್ದ.

 ಮೊನ್ನೆ ಮ೦ಗಳೂರಿನ ರಸ್ತೆಯೊ೦ದರಲ್ಲಿ ಮ೦ಡಕ್ಕಿ ಮಾರುವವನೊಬ್ಬನ ಬಿಳಿಯ ಮೀಸೆ, ಅಗಲ ಹಣೆ, ಭಾವಪೂರ್ಣ ಕ೦ಗಳು ಎಲ್ಲವೂ ಥೇಟ್ ಬೀರಜ್ಜನನ್ನೇ ನೆನಪಿಸಿದ್ದವು. ಥಟ್ಟನೆ ಅಜ್ಜಿಗೆ ಫೋನು ಮಾಡಿ ವಿಚಾರಿಸಿದೆ. ಬೀರಜ್ಜ ಹೇಗಿದ್ದಾನೆ೦ದು. ತು೦ಬಾ ಹುಶಾರಿಲ್ಲ ಅವನಿಗೆ. ಮನೆಯಲ್ಲೂ ಅಷ್ಟೇನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವ೦ತೆ. ಮುಪ್ಪಿನ ಜರ್ಜರಿತಕ್ಕೆ ಒಳಗಾಗಿದ್ದನವ. 
ಈ ಸಲ ಮನೆಗೆ ಹೋದಾಗ ಒಮ್ಮೆ ಬೀರಜ್ಜನ ನೋಡಿಕೊಂಡು ಬರಬೇಕು ಎಂದುಕೊಂಡಿದ್ದೆ. ಹಾಗೆ ಸೀದ ಹೊರಟಿದ್ದೆ ಕೂಡ 


ಇಷ್ಟೆಲ್ಲ ಯೋಚಿಸುವಷ್ಟರಲ್ಲಿ ಬೀರಜ್ಜನ ಮನೆ ಮನೆಯ ದಣಪೆ ಬ೦ದಿತ್ತು. ದಾಟಿ ಒಳಹೋದರೆ ಜಗುಲಿಯಲ್ಲೇ ಕುಳಿತಿದ್ದ ಬೀರಜ್ಜ ಒಬ್ಬನೇ ನಗುತ್ತಿದ್ದ. ನಾನು ಹೋಗಿ ಎದುರು ನಿ೦ತು "ನಾನು ಹೆಬ್ಬಾರರ ಮೊಮ್ಮಗಳು ಪುಟ್ಟಿ" ಎ೦ದರೂ, ಒಮ್ಮೆ ನನ್ನ ಮುಖ ನೋಡಿ ಒಬ್ಬನೇ ಮಾತನಾಡುತ್ತಿದ್ದ. ಅದ್ಯಾವ ಹಳೆಯ ನೆನಪುಗಳೂ ಇರಲಿಲ್ಲ ಅವನ ಬಳಿ. ಎಲ್ಲ ಖಾಲಿಯಾಗಿ ನಾವ್ಯಾರೂ ಇಲ್ಲದ ಬಾಲ್ಯ ಮತ್ತೆ ಮರುಕಳಿಸಿತ್ತು. ಅದೇನು ಮಾಡಬೇಕೆಂದು ತಿಳಿಯದೇ ನೂರರ ನೋಟೊ೦ದನ್ನು ಅವನ ಕೈಗಿತ್ತೆ.
ಅಲ್ಲಿಯೇ ಇದ್ದ ಬೀರಜ್ಜನ ಸೊಸೆಯ ಬಳಿ ಮಾತನಾಡುತ್ತಿದ್ದೆ. ಒ೦ದೈದು ನಿಮಿಷದ ಬಳಿಕ, ಹೊರಡುತ್ತೇನೆ೦ದು ಹೇಳಲು ಬೀರಜ್ಜನ ಕಡೆಗೆ ತಿರುಗಿದರೆ ಬೀರಜ್ಜ ಆ ನೂರರ ನೋಟನ್ನು ಹರಿಯುತ್ತ ನಗುತ್ತಿದ್ದ.

12 comments:

  1. ಬೀರಜ್ಜನ ಕಥೆ ತುಂಬಾ ಚನ್ನಾಗಿದೆ.
    ..
    http://spn3187.blogspot.in/

    ReplyDelete
  2. ಅಬ್ಬಾ! ಕೊನೆಯ ಪ್ಯಾರಾವರೆಗೆ ಸಂತಸದಿಂದ ಓದಿದೆ... ಆ ಸುಂದರ ದಿನಗಳು ಹೇಗಿದ್ದಿರಬಹುದು ಅಂತಾ ಯೋಚಿಸುತ್ತಿದ್ದೆ.. ಆದರೆ, ಕೊನೆಯ ಸಾಲುಗಳನ್ನು ಓದುತ್ತಾ ಓದುತ್ತಾ ತುಂಬ ಭಾವುಕನಾದೆ. "ಛೆ! ಹಾಗಾಗಬಾರದಿತ್ತು" ಅಂತ ಮನಸು ಹೇಳುತ್ತಿತ್ತು.

    ಬರವಣಿಗೆ ಅದ್ಭುತ. ಕೊನೆಗೆ ತುಂಬಾ ಎಳೆಯದಿರೋದು ಹೊಸ ಮೆರುಗನ್ನು ನೀಡಿತು. ಕಾಲಾಯ ತಸ್ಮೈ ನಮಃ...

    www.kaduvakanasu.blogspot.com

    ReplyDelete
  3. ನಿಮ್ಮ ಬೀರಜ್ಜನ ನೆನಪುಗಳು, ನನಗೆ ಬಾಲ್ಯಕ್ಕೆ ಕೊಂಡೊಯ್ದು ನಿಲ್ಲಿಸಿತು. ನಮ್ಮ ಅಮ್ಮನ ಗೆಳತಿ ಶಕುಂತ್ಲಮ್ಮ ನೆನಪಾದರು. ಆಕೆ ಹುಟ್ಟಿನಿಂದ ಅಂಗ ವಿಕಲೆ.

    ReplyDelete
  4. ನೆನಪುಗಳ ಸಂತೆ ನೆರೆಯುತಿದೆ ಮನದಲ್ಲಿ...
    ಇಷ್ಟವಾಯಿತು ಭಾವ - ಬರಹ...

    ReplyDelete
  5. ಸೌಮ್ಯಕ್ಕನ ಬರಹಗಳೇ ಹಾಗೆ..ನೆನಪುಗಳ ಲೋಕದ ಕೀಲಿ ಕೈ...ಧನ್ಯವಾದ ಅಕಾ ಛಂದದ ಬರಹಕ್ಕೆ,ಮಧುರ ಭಾವಗಳ ಒಪ್ಪವಾದ ತೋರಣಕ್ಕೆ..
    ಇಷ್ಟವಾಯಿತು..ಖುಷಿ ಆಯ್ತು...ಓದ್ತಾ ಇರಬೇಕು ಅನಿಸಿತು :)..
    ಧನ್ಯವಾದಗಳು ನಮಸ್ತೆ :)

    ReplyDelete
  6. ನೆನಪುಗಳೊಂದಿಗೆ ’ಬೀರಜ್ಜ’ನನ್ನು ಕಟ್ಟಿಕೊಟ್ಟದ್ದು ಚೆನ್ನಾಗಿದೆ. ಕಡೆಯ ಪ್ಯಾರದೊಳಗಿನ ನಿರ್ವಿಕಾರ ಭಾವುಕತೆ ಓದುಗನನ್ನು ಮತ್ತೆಲ್ಲಿಗೋ ಸೆಳೆಯುತ್ತದೆ!

    - ಪ್ರಸಾದ್.ಡಿ.ವಿ.

    ReplyDelete
  7. ಹಳ್ಳಿಯ ಕುಸುಮ ನೀವು ಅನ್ನಿಸಿತು.

    ReplyDelete
  8. Really its touched my heart.........

    ReplyDelete
  9. ಭಾವುಕನಾದೆ.. ನಿಮ್ಮ ಬೀರಜ್ಜ’ನನ್ನು ಕಂಡು... ಅದ್ಬುತವಾದ ರಚನೆ.. I'll TAKE A BOW :)

    ReplyDelete
  10. ಬೀರಜ್ಜ... ಮಲೆನಾಡಿನ ಪ್ರತಿ ಹಳ್ಳಿಯಲ್ಲೂ, ಪ್ರತಿ ಬಾಲ್ಯದ ಅನುಭವ ಎಂದರೆ ತಪ್ಪಾಗಲಾರದು..
    ನಮ್ಮ ಬಾಲ್ಯ ಎಷ್ಟು ಸುಂದರ ಅಲ್ಲವಾ.. ಯಾವುದೇ ಜಾತಿ ಬೇಧವಿರಲಿಲ್ಲ.. ಅವರೊಡನೆ ಊಟ, ಮಧ್ಯಾಹ್ನ ನಿದ್ರೆ ಎಲ್ಲಾ ಮಾಡಿದ್ದೇವೆ.. ನೆನಪುಗಳು ಅತೀ ಸುಂದರ.

    -ಪಲ್ಲವಿ ಹೆಗಡೆ

    ReplyDelete