Tuesday, July 20, 2010

ಬಾಲ್ಯದ ನೆನಪುಗಳ ಕೆದಕುವ ಮಳೆಹನಿಗಳು





ಮಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದೆ.ಐದು ಗಂಟೆಯ ಪಯಣ.ಪಕ್ಕದ ಸೀಟಿನಲ್ಲಿ ಸಂಭಾವಿತ ಆಸಾಮಿ ಕೂತಿದ್ದರೆ ಅವರನ್ನು ಮಾತಿಗೆಳೆಯುವುದು ನನ್ನ ವಾಡಿಕೆ. ಅದಿಲ್ಲದಿದ್ದರೆ ಯಾವುದಾದರೂ ಪತ್ರಿಕೆಗೆ ಶರಣು ಹೋಗಿರುತ್ತೇನೆ (ಚಲಿಸುವ ಬಸ್ಸಿನಲ್ಲಿ ಓದಬಾರದೆ
ನ್ನುವುದು ಗೊತ್ತಿದೆ, ಆದರೂ ಕೆಲವೊಮ್ಮೆ ಅನಿವಾರ್ಯ).ಮಳೆ ಬಿಡದೆ ಸುರಿಯುತ್ತಿತ್ತು. ಪಕ್ಕದಲ್ಲೂ ಯಾರೂ ಇರಲಿಲ್ಲ. ಪತ್ರಿಕೆಯನ್ನು ಮಡಿಸಿ ಬ್ಯಾಗಿನೊಳಗೆ ಇಡುತ್ತಲೇ, ಕಿಟಕಿಯ ಗಾಜನ್ನು ಸರಿಸಿದೆ. ಅದೆಷ್ಟು ರಸಿಕ ಈ ಮಳೆರಾಯ .!ಚುಂಬಿಸುತ್ತಲೇ ಹಸಿರು ಸೀರೆಯನ್ನು ಉಡಿಸಿಬಿಡುತ್ತಾನೆ ಈ ಭೂಮಿಗೆ.ಎಂದು ಯೋಚಿಸುತ್ತಲೇ ಒಮ್ಮೆ ಬಾನತ್ತ ಕಣ್ಣು ಹಾಯಿಸಿದೆ. ಬಾನಲ್ಲಿ ಕಾರ್ಮೋಡಗಳ ಸಂತೆ, ಕೊಳ್ಳುವವರಿಲ್ಲದೆ ಮಳೆಯಾಗಿ ಸುರಿಯುತಿದೆ ಭೂಮಿಗೆ ಅನ್ನಿಸಿಬಿಟ್ಟಿತು. ಬಸ್ಸಿನ ಕಿಟಕಿಯ ಸರಳುಗಳಲ್ಲಿ ಮುತ್ತಿನಂತೆ ಪೋಣಿಸಿರುವ ಮಳೆಹನಿಗಳನ್ನು ಕಾಣುತ್ತಲೇ ಮನ್ಸಸ್ಸು ಜಾರಿದ್ದು ಬಾಲ್ಯದ ದಿನಗಳತ್ತ. ನೆನಪುಗಳ ಕೆಣಕೋ ತಾಕತ್ತಿರುವುದು ಈ ಮಳೆಹನಿಗಳಿಗೆ ಮಾತ್ರ ..!

ಬಾಲ್ಯದ ಮಳೆಗಾಲವೆಂದರೆ ಅಜ್ಜಿಯ ಮನೆ. ಅದೇನೋ ಅವಿನಾಭಾವ ಸಂಬಂಧ ಅವೆರಡಕ್ಕೆ. ನಾವು ಮಕ್ಕಳೆಲ್ಲ ಒಟ್ಟಿಗೆ ಸೇರುತ್ತಿದ್ದದ್ದು ಮಳೆಗಾಲದಲ್ಲೇ. ಅದೇನು ಮಜಾ ಆ ಮಳೆಗಾಲ. ಮೂಗಿನಲ್ಲಿ ಸಿಂಬಳ ಸೋರುತ್ತಿದ್ದರೂ ಮನೆಯಿಂದ ಕದ್ದು-ಮುಚ್ಚಿ ಪರಾರಿಯಾಗಿ, ಗದ್ದೆಯ ಪಕ್ಕದ ಅವಳೆ(ತೋಡು)ಯ ಹರಿವ ನೀರಲ್ಲಿ ಮೀನನ್ನು ಹಿಡಿಯಲು ನಮ್ಮ ವಾನರ ಸೇನೆ ಹೊರಡುತ್ತಿತ್ತು. ತಳದಲ್ಲಿ ತೂತಾದ ಪಾತ್ರೆಗಳೇ ನಮ್ಮ ಮೀನುಗಾರಿಕಾ ಬಲೆಗಳು !. ನಮ್ಮ ಬಾಲಂಗೋಚಿ ಕೆಂಬಣ್ಣದ ಒಂದು ಬೆಕ್ಕು. ಅದಕ್ಕೋ ಹಸಿ ಮೀನು ಮುಕ್ಕುವ ತರಾತುರಿ. ಗಂಟೆಗಟ್ಟಲೆ ಪ್ರಯಾಸಪಟ್ಟು, ಮೈಪೂರ್ತಿ ಒದ್ದೆಯಾಗಿ,ಅಜ್ಜನ ಹತ್ತಿರ ಬೈಸಿಕೊಂಡು, ಸಿಕ್ಕ ಚಳ್ಳೆ-ಪಿಳ್ಳೆ ಮೀನುಗಳನ್ನು ತಂದು ಮನೆಯ ಮುಂದೆ ಮೊದಲೇ ತಯಾರು ಮಾಡಿಟ್ಟ ಪ್ಲಾಸ್ಟಿಕ್ ಕೊಡದಲ್ಲಿ ಬಿಟ್ಟಾಗ ಸರಳ ಸುಂದರ aquarium ರೆಡಿ.ನಮಗೋಅದೇನೋ ಮಹತ್ಕಾರ್ಯ ಸಾಧಿಸಿದಂಥಹ ಹಮ್ಮು.

ಅವಳೆಯ ಮಧ್ಯದಲ್ಲೇ ಹರಿವ ನೀರನ್ನು ಕಲ್ಲುಗಳಿಂದ ಕಟ್ಟಿಹಾಕಿ ತಯಾರುಗೊಂಡ ಪುಟ್ಟ ಡ್ಯಾಮಿನಂಥ ಡ್ಯಾಮಿನಲ್ಲೇ ನನ್ನ ಅಜ್ಜಿ
ಪಾತ್ರೆಗಳನ್ನು ತೊಳೆಯುತ್ತಿದ್ದುದು. ಅಜ್ಜಿ ಪಾತ್ರೆತೊಳೆಯಲು ಬಂದಾಗಲೆಲ್ಲ ನಾನು ಪಕ್ಕದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಂದು ಕಾಲುಗಳನ್ನು ನೀರಿನಲ್ಲಿ ಬಿಟ್ಟು ಕೂರುತ್ತಿದ್ದೆ. ಕಾಲಿಗೆ ಮುತ್ತಿಕ್ಕುವ ಮೀನುಗಳು ಅದೇನೋ ಕಚಕುಳಿ.ಅಜ್ಜಿ ತೊಳೆದಿಟ್ಟ ಪಾತ್ರೆಗಳು ನನಗೆ ಹರಿಗೋಲು.ಸೌಟುಗಳು ಹರಿಗೋಲ ಹುಟ್ಟುಗಳು. ನಾವಿಕ ನಾನೇ ಅದೂ ದಡದಲ್ಲಿ !


ಚಿಕ್ಕಮ್ಮನನ್ನು ಕಾಡಿ ಬೇಡಿ ಮಾಡಿಸಿಕೊಂಡು ಬಿಟ್ಟ ಕಾಗದದ ದೋಣಿಗಳು. ಕೊನೆಗೆ ಕಾಗದದ ದೋಣಿಯನ್ನು ಸ್ವತಃ ಮಾಡಲು ಕಲಿತಾಗ, ಮೌಂಟ್ ಎವೆರೆಸ್ಟನ್ನು ಏರಿದ ಖುಷಿ. ಆ ಕಾಗದದ ದೋಣಿಯನ್ನು ಬಿಟ್ಟು ಹಾಕಿದ ಕೇಕೆ ಇನ್ನೂ ಕೇಳುತ್ತಿರುವ ಭ್ರಮೆ. ತಳ ಭಾರವಾಗಿ ದೋಣಿ ಮುಳುಗಿದಾಗ ಕಣ್ಣಂಚು ಒದ್ದೆಯಾದದ್ದು ಮಳೆಹನಿಯಿಂದಲೋ, ಕಣ್ಣೀರಿನಿಂದಲೋ ನೆನಪಿಲ್ಲ ..!

ಕೆರೆಯ ಪಕ್ಕದಲ್ಲಿದ್ದ ಲಿಂಬೆ ಹಣ್ಣಿನ ಗಿಡದಲ್ಲಿ ಬಂಗಾರದ ಬಣ್ಣದ ಲಿಂಬೆ ಹಣ್ಣುಗಳು, ಕೆರೆಯ ನೀರಲ್ಲಿ ತಮ್ಮ ಪ್ರತಿಬಿಂಬಕ್ಕೆ ತಾವೇ ನಾಚುತ್ತಿದ್ದವು. ಮಧ್ಯಾಹ್ನದ ಊಟಕ್ಕೆ ನೆಂಜಿಕೊಳ್ಳಲು ಅದರದ್ದೇ ಉಪ್ಪಿನಕಾಯಿ.

ಗದ್ದೆ ಹೂಡುತ್ತಿದ್ದ ಕಟ್ಟುಮಸ್ತಾದ ಆಳು 'ಗಣಪು'. ಅವನ ಬಾಲ ನಾನು.! ಬೇಡ ಎಂದರೂ ಕೇಳದೆ ನೇಗಿಲು ಹಿಡಿದು ನಾನೇ ದೊಡ್ಡ ರೈತನಂತೆ ಪೋಸು ಕೊಡುತ್ತಿದ್ದೆ. ಗದ್ದೆಯ ಕೆಸರರಾಟ ಮುಗಿದು ಮನೆಗೆ ಬಂದು ಅಜ್ಜಿ ಬಿಸಿನೀರ ಸ್ನಾನ ಮಾಡಿಸುವಾಗ ನನ್ನ ಕಾಲಲ್ಲಿ ಒಂದೇ ಗೆಜ್ಜೆ ..!


ಹೊರಗಿನ ಮುಸುರೆ ಒಲೆಯಲ್ಲಿ ಸುಟ್ಟ ಹಲಸಿನ ಹಪ್ಪಳ, ಕೊರ್ಸಗಾಯಿ, ಜೀರಿಗೆ ಅಪ್ಪೆಮಿಡಿ ಉಪ್ಪಿನಕಾಯಿ, ಕುಚ್ಚಲಕ್ಕಿಗೆ ಒಂದಿಷ್ಟು ಮೊಸರು ಇವಿಷ್ಟಿದ್ದರೆ ಅದು ಮೃಷ್ಟಾನ್ನ ಭೋಜನ. ಊಟದ ನಂತರ ಮಾವಿನ ಹಣ್ಣಿನ ಹಪ್ಪಳ. ಈಗಿನ ಯಾವ multi star ಹೋಟೆಲಿನಲ್ಲಿಯೂ ಸಿಗದು ಇಂಥ ಊಟ.

ಹೀಗೆ ಮೆರವಣಿಗೆ ಹೊರಟ ನೆನಪುಗಳ ನಡುವೆಯೇ ಕುಮಟಾ ಬಂದಿತ್ತು.ಮನೆಗೆ ಬಂದ ಮಾರನೆ ದಿನವೇ ಅಜ್ಜಿಯ ಮನೆಗೆ ಹೋಗಿದ್ದೆ. ನಿನ್ನೆ ನೆನಪಾದದ್ದೆಲ್ಲವನ್ನು ಕಣ್ಣು ತುಂಬಿಸಿಕೊಳ್ಳುವ ಹಂಬಲದಿಂದ. ನೋಡಿದರೆ ..ನೀರು ಹರಿಯುತ್ತಿದ್ದ ತೋಡಿನ ಅವಶೇಷ ಮಾತ್ರ ಉಳಿದಿದೆ. ಗದ್ದೆ ಊಳುವವರಿಲ್ಲದೆ ಬರಡಾಗಿದೆ. ಲಿಂಬೆ ಹಣ್ಣಿನ ಗಿಡವಿದ್ದ ಜಾಗದಲ್ಲಿ ಕೆಸುಗಳ ಸಾಮ್ರಾಜ್ಯ.
ಕೆರೆಯು ಹೂಳು ತುಂಬಿಕೊಂಡು ಕಮಲದ ಹೂಗಳ ತಾಣವಾಗಿದೆ.


ಮನಸ್ಸಿಗೆ ಅದೇನೋ ಕಸಿವಿಸಿ, ಕಳವಳ. ಕಣ್ಣಂಚು ಒದ್ದೊದ್ದೆ ಈ ಬಾರಿ ಮಳೆಹನಿಯಿಂದಂತೂ ಅಲ್ಲವೇ ಅಲ್ಲ..! ಅಷ್ಟರಲ್ಲಿ ಅಜ್ಜಿ ಕರೆದದ್ದು ಕೇಳಿಸಿತು "ಊಟಕ್ಕೆ ಬಾರೆ ..ಹೊತ್ತಾತು ಮಳೆ ಬೇರೆ ಸುರೀತಿದ್ದು ." ಕಣ್ಣೊರೆಸುತ್ತಲೇ ಕೈಕಾಲು ತೊಳೆಯಲು ನಡೆದೆ. ಮುಸುರೆ ಒಲೆಯಿಂದ ಹಲಸಿನ ಹಪ್ಪಳ ಸುಟ್ಟ ವಾಸನೆ ಬರುತ್ತಿತ್ತು. ಆಗ ತಿಳಿಯಿತು ಹಸಿವೆ ಆದದ್ದು..! ಕುಚ್ಚಲಕ್ಕಿ ಅನ್ನ, ಮೊಸರು, ಉಪ್ಪಿನಕಾಯಿ, ಹಲಸಿನ ಹಪ್ಪಳ ನನ್ನನ್ನೇ ಕಾಯುತ್ತ ಕುಳಿತಿದ್ದವು. ಜೊತೆಗೆ ಅಜ್ಜಿ- ಅಜ್ಜ ಕೂಡ..!




14 comments:

  1. ಚೆನ್ನಾಗಿ ಬರ್ದಿದಿರಾ,, ನಿಮ್ಮ ಅಜ್ಜಿ ಊರೊಂದೇ ಅಲ್ಲ ಎಲ್ಲ ಹಳ್ಳಿಗಳು ಬಹಳಷ್ಟು ಬದಲಾಗಿ ಹೋಗಿದೆ.

    Nice article :-)

    ReplyDelete
  2. power illa sowamya next time odi coment bruttene
    time sikkaga omme banni

    www.nannavalaloka.blogspot.com

    ReplyDelete
  3. ಚೆನ್ನಾಗಿ ಬರದ್ದೆ ಸೌಮ್ಯ....ನಾನೂ ಒಮ್ಮೆ ಬಾಲ್ಯದ ನೆನಪಲ್ಲಿ ಮುಳುಗೆದ್ದಿ

    ReplyDelete
  4. ಬಾಲ್ಯದ ನೆನಪುಗಳು ಎಂದೂ ಮಾಸದ ಸುಂದರ ಸ್ವಪ್ನಗಳು! ಅದರಲ್ಲೂ ಹಳ್ಳಿಗಳಲ್ಲಿ ಬಾಲ್ಯವನ್ನು ಕಳೆಯುವುದಂತೂ.........
    ಅಂತಹ ಸುಂದರ ಬಾಲ್ಯ ಈಗಲೂ ಯಾಕೆ ಬರುಬಾರದಿತ್ತು?
    ನನ್ನ ಬಾಲ್ಯದ ನೆನಪುಗಳನ್ನು ಕೆದಕಿಬಿಟ್ಟಿರಿ!

    ಒಮ್ಮೆ ನನ್ನ ಬ್ಲಾಗಿಗೂ ಬನ್ನಿ..........

    ReplyDelete
  5. ಹೌದು ಸೌಮ್ಯ , ಸುಮಾರು ಎಲ್ಲರ ಬಾಲ್ಯದ ನೆನಪೂ ಹೀಗೇ ಇರುತ್ತದೇನೋ .ಹಾಗೆ ತುಂಬಿ ಹರಿಯುವ ಹೊಳೆಯ ನೋಡಲು ಹೋಗಿ ಬೈಯಿಸಿ ಕೊಳ್ಳುವುದು ಈಗೊಂದು ನೆನಪೇ , ತುಂಬಾ ಚನ್ನಾಗಿದೆ

    ReplyDelete
  6. it was nice.. chanagiththu... ninna experience odhtha odhtha, i was actualy remembering mine ... allalli kelavu pada over annisthu but yen maadodhu kavigala kelsane compare maadi varnane maadodh alve??... good hold on ur language n memory... good co-ordination...

    ReplyDelete
  7. Thanks for ur Write up....i felt it....

    ReplyDelete
  8. ನೆನಪುಗಳು ಮುಂದೆ ನೆನಪುಗಳು ಮಾತ್ರ
    ಬದಲಾದ ಕಾಲಘಟ್ಟ ದಲ್ಲಿ ಎಲ್ಲವೂ ಅಳಿಯುತ್ತಿವೆ

    ReplyDelete
  9. ಚೆನ್ನಾಗಿ ಬರೆದಿದ್ದೀರಿ... ಮತ್ತೆ ಬರದ ಆ ಬಾಲ್ಯ ಇವಾಗ ಸವಿನೆನಪೇ ಸರಿ...
    ''बार बार आती है मुजको मधुर याद बचपन...''

    ReplyDelete
  10. very well written soumya.. nanagu nan childhod nenapatu.. I realy like ur writing style..keep it up..

    ReplyDelete
  11. ಚೆ೦ದದ ನಿರೂಪಣೆ..ಸೌಮ್ಯ.. ಬಾಲ್ಯದ ನೆನಪುಗಳು ಯಾವತ್ತೂ ಮಧುರ.

    ಶುಭಾಶಯಗಳು
    ಅನ೦ತ್

    ReplyDelete
  12. ನಿಜ .... ಬಾಲ್ಯದ ನೆನೆಪುಗಳೇ ಹಾಗೇ ಕೆದಕಿದಷ್ಟು ..! ಬೆಳದು ಹೆಮ್ಮರವಗುತ್ತವೆ ಆದರೆ ಹಿಗಿನ ಮಕ್ಕಳಿಗೆಲ್ಲಿ ಬಾಲ್ಯದ ನೆನೆಪುಗಳು ಬರೀ....ಬೆಂಗಳೊರೆ.. ಹಾಗಿದೆ
    ಹಾಗೇ ಬಿಡುವು ಮಾಡ್ಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .........
    SATISH N GOWDA
    www.nannavalaloka.blogspot.com

    ReplyDelete