
ಅವನೊಬ್ಬ ಕಲಾವಿದ. ಐವತ್ತರ ಆಸುಪಾಸಿನ ವಯಸ್ಸಿರಬಹುದು ಅವನದು. ನಗರದ ಗಿಜಿಗಿಜಿ ಜನಜೀವನದ ಪರಿಧಿಯಿಂದ ದೂರವಿರುವ ಕಡಲ ತಡಿಯ ಪುಟ್ಟ ಮನೆಯೊಂದರಲ್ಲಿ ವಾಸ. ಜನರ ಮುಖಗಳನ್ನು ಭಾಗಶಃ ಮರೆತಂತಿದ್ದಾನೆ. ಕುಂಚ ಬಣ್ಣಗಳೊಂದಿಗೆ ಆಟ, ಒಡನಾಟ ಎಲ್ಲ. ಹಸಿವಾದದ್ದು ನೆನಪಾದರೆ ಏನಾದರೂ ತಿನ್ನುತ್ತಾನೆ, ಇಲ್ಲದಿದ್ದರೆ ಅದೂ ಇಲ್ಲ.!
ಉದ್ದನೆಯ ಕೋಲು ದೇಹಕ್ಕೆ ತಗುಲುಹಾಕಿದಂತಿರುವ ಬಣ್ಣ ಮಾಸಿದ T-shirt, ನೀರು ಕಂಡು ಅದೆಷ್ಟೋ ತಿಂಗಳಾಗಿರುವ ಒಂದು pant. ಅರೆಬರೆ ಗಡ್ಡದ ಮರೆಯಲ್ಲಿ ಇಣುಕುವ ಹೊಳಪುಳ್ಳ ಎರಡು ಕಂಗಳಲ್ಲಿ ಅದೇನೋ ಚಡಪಡಿಕೆ, ನಿರೀಕ್ಷೆ, ಅಸಹಾಯಕತೆ, ನಶೆ ಎಲ್ಲ ಭಾವಗಳ ಮಿಶ್ರಣ. ಕೆಲವರಿಗೆ ಅವನ ಪರಿಚಯವಿದೆ ಆ ನಗರದಲ್ಲಿ ಅದೇನೇನೋ ಕಥೆಗಳು ಅವನಹಿಂದೆ. ಹಿಂದೊಮ್ಮೆ ಪ್ರಖ್ಯಾತನಾಗಿದ್ದ ತನ್ನ ವಿಶಿಷ್ಟ ಶೈಲಿಯ ಚಿತ್ರಗಳಿಂದ.
ಅವನ ಚಿತ್ರಗಳೇ ಹಾಗೆ, ಮಾನವನ ಮನದಾಳದ ಭಾವನೆಗಳನ್ನು ನವರಸಗಳನ್ನು ಪ್ರಕೃತಿಯೊಂದಿಗೆ ಬೆರೆಸುತ್ತಿದ್ದ. ಬಾಡಿದ ಕಮಲಗಳು, ಸೋತ ತಾಳೆಮರ ಅವನ ಮನದ ಬೇಸರದ ಭಾವಗಳಿಗೆ;ಅಸಹಾಯಕತೆಗೆ ಬಲೆಯೊಳಗಿನ ಮೀನು, ಹಕ್ಕಿಗಳು; ಮನದೊಳಗಿನ ಸಿಟ್ಟು ಸೆಡವುಗಳಿಗೆ ಭುಗಿಲೆದ್ದ ಜ್ವಾಲಾಮುಖಿ, ರೌದ್ರಾವತಾರದ ಸಮುದ್ರದಲೆಗಳು;ಒಮ್ಮೊಮ್ಮೆ ಮೂಡುವ ಪ್ರೀತಿಗೆ ಕೊಳದಲ್ಲಿ ಜೊತೆಯಾಗಿ ಈಜುತ್ತಿರುವ ಹಂಸಗಳು ಹೀಗೆ ಹಲವಾರು ಭಾವಗಳು ಕುಂಚದಲ್ಲಿ ಮೂಡುತ್ತಿದ್ದವು.
ಕೆಲವು ಕಲಾಕೃತಿಗಳನ್ನು ಮಾರುತ್ತಿದ್ದ, ಇನ್ನು ಕೆಲವು ಅವನ ನೆಚ್ಚಿನ ಕಲಾಕೃತಿಗಳನ್ನು ಬಚ್ಚಿಟ್ಟಿದ್ದ. ಇತ್ತೀಚಿಗೆ ವಿಪರೀತ ಎನ್ನುವಷ್ಟು ಖಿನ್ನತೆಗೆ ಒಳಗಾಗಿದ್ದ ಅವನಲ್ಲಿ ಜೀವನಪ್ರೀತಿ,ಸ್ಪೂರ್ತಿಯೇ ಕಳೆದುಹೋದಂತಿತ್ತು. ಬಣ್ಣ-ಕುಂಚಗಳ ಜೊತೆಗೆ ಆಟವಾಡದೆ ಹಲವು ಹುಣ್ಣಿವೆಗಳು ಕಳೆದು ಹೋಗಿದ್ದವು. ಬೇಸರದ ಜೀವನಕ್ಕೆ ಒಂದು ಕೊನೆ ಕಾಣಿಸಲು ನಿರ್ಧರಿಸಿದ್ದ. 'ಬಚ್ಚಿಟ್ಟ ಕಲಾಕೃತಿಯಲ್ಲಿ ಒಂದನ್ನು ಮಾರಿ 'ವಿಷವನ್ನು' ತರುವುದೆಂದು'...!
ನಿಧಾನಕ್ಕೆ ಎದ್ದು ಹಳೆಯ ಪೆಟ್ಟಿಗೆಯೊಂದನ್ನು ಹೊರತೆಗೆದ. ಒಂದೊಂದು ಕಲಾಕೃತಿಗಳ ಮೇಲಿನ ಧೂಳನ್ನು ಒರೆಸುತ್ತಾ ಬಂದ. ಅದ್ಭುತ ಕಲಾಕೃತಿಗಳು ಅವು.! ಅವುಗಳ ಮೇಲಿನ ವ್ಯಾಮೋಹದಿಂದ ಮಾರದೆ ಎತ್ತಿಟ್ಟಿದ್ದ . ಈಗ ಯಾವುದನ್ನು ಮಾರುವುದೆಂದೇ ತಿಳಿಯುತ್ತಿರಲಿಲ್ಲ ಅವನಿಗೆ.!
ಗೊಂದಲದಲ್ಲಿರುವಾಗಲೇ ಕಂಡದ್ದು ಪೆಟ್ಟಿಗೆಯಲ್ಲಿ ಇನ್ನೂ ಒಂದು ಬಾಕಿ ಇದ್ದದ್ದು. ಅದನ್ನು ಎತ್ತಿ ಒರೆಸತೊಡಗಿದ." ಅರೆ ಇದರಲ್ಲಿ ನಾನೂ ಇದ್ದೆನಲ್ಲವೇ?" ಮುಖದಲ್ಲಿ ಕಂಡೂ ಕಾಣದಂಥ ಒಂದು ಮುಗುಳ್ನಗು ಹಾದು ಹೋಗಿತ್ತು..!ಮನಸ್ಸು ಹಿಂದೆ ಓಡಿತ್ತು.
ಹಲವು ವರ್ಷಗಳ ಹಿಂದಿನ ಘಟನೆಯದು. ಹೀಗೆ ಒಮ್ಮೆ ಅವನ ಬದುಕಿನಲ್ಲಿ ಕಾಡಿತ್ತು ಅಸಹಾಯಕತೆ, ಭಗ್ನ ಪ್ರೇಮ, ಖಿನ್ನತೆ ಎಲ್ಲ ..! ಒಂದು ಸಂಜೆ ಹೊರಟುಬಿಟ್ಟಿದ್ದ ಕಡಲ ಅಲೆಗಳಲ್ಲಿ ಒಂದಾಗಲು. ದಾಪುಗಾಲು ಹಾಕುತ್ತ ಸಾವನ್ನು ಹುಡುಕಲು ಹೊರಟವನ ಕಣ್ಣಿಗೆ ಅದೇನೋ ಕಂಡಿತ್ತು ದೂರದಲ್ಲಿ. ಅದರ ಹತ್ತಿರ ಸಾಗುತ್ತಿದ್ದಂತೆ ಕಂಡದ್ದಿಷ್ಟು:ಸುಮಾರು ಎಂಟು ಒಂಭತ್ತರ ಹರೆಯದ ಪೋರಿಯೋಬ್ಬಳು ಮರಳಿನಲ್ಲಿ, ಸಮುದ್ರದ ಅಲೆಗಳ ಜೊತೆ ಆಡುತ್ತಿದ್ದಳು.ರಾಶಿ ರಾಶಿ ಮರಳಲ್ಲಿ ಅದೇನೋ ಗೀಚುತ್ತಿದ್ದಳು,ಅಲೆ ಬಂದು ಒರೆಸಿಕೊಂಡು ಹೋದಾಗ ಕೇಕೆ ಹಾಕಿ ನಗುತ್ತಿದ್ದಳು.ಮರಳ ಗೋಪುರವನ್ನು ಕಟ್ಟುತ್ತ ಅದು ಕುಸಿದು ಬಿದ್ದರೂ ನಗುತ್ತಲೇ ತನ್ನ ಆಟವನ್ನು ಮುಂದುವರೆಸಿದ್ದಳು ಹುಡುಗಿ. ಕಲಾವಿದ ನೋಡುತ್ತಲೇ ಇದ್ದ..... ಸಾವಿನ ನೆನಪು ಕಳೆದುಹೋಗಿತ್ತು. ಮನೆಯ ಹಾದಿ ಹಿಡಿದವನ ಮನದಲ್ಲಿ ಅದಾಗಲೇ ಕಲಾಕೃತಿಯೊಂದು ಮೂಡಿತ್ತು. ಮನೆಸೇರುತ್ತಲೇ ಬಣ್ಣಗಳಲ್ಲಿ ಜೀವ ತಳೆದಿತ್ತು ಕೂಡ. ..! ಅದೇ ಮರಳ ರಾಶಿಯಲ್ಲಿ ಆಡುತ್ತಿರುವ ಹುಡುಗಿ ಸಾಗರದ ಹಿನ್ನೆಲೆಯಲ್ಲಿ ಮೂಡಿಬಂದಿದ್ದಳು.ಆಟವನ್ನು ನೋಡುತ್ತಾ ನಿಂತಿದ್ದ ಇನ್ನೊಂದು ಮಾನವಾಕೃತಿಯನ್ನೂ ಮೂಡಿಸಿಬಿಟ್ಟಿದ್ದ ತನಗೆ ಗೊತ್ತಿಲ್ಲದಂತೆ ಆ ಕಲಾವಿದ..!
ಅದೇ ಕಲಾಕೃತಿ ಇಂದು ಅವನ ಕೈಯಲ್ಲಿ ಮತ್ತೊಮ್ಮೆ ಬಂದು ಕೂತಿದೆ. ಹಿಂದಿನದೆಲ್ಲ ನೆನಪಾಗಿ ಮನಸಾರೆ ನಕ್ಕುಬಿಟ್ಟ. ಎಲ್ಲ ಚಿತ್ರಗಳನ್ನು ಪುನಃ ಜೋಡಿಸಿ ಮತ್ತದೇ ಹಳೆಯ ಪೆಟ್ಟಿಗೆಯಲ್ಲಿ ಇಟ್ಟುಬಿಟ್ಟ. ಮತ್ತೊಂದು ಚಿತ್ರ ಬರೆಯಲು ಮನಸು ತಯಾರಾಗಿತ್ತು. ಖಿನ್ನತೆ ತಂತಾನೇ ಮಾಯವಾಗಿತ್ತು..! ಮನಸು ಜೀವನ್ಮುಖಿಯಾಗಿತ್ತು ..!