ನಾಲ್ಕೈದು ದಿನಗಳ ಹಿಂದೆ ರೈಲ್ವೆ ಸ್ಟೇಶನ್ನಲ್ಲಿ ರೈಲಿಗಾಗಿ ಕಾಯುತ್ತಿದ್ದೆ. (ರೈಲ್ವೆ ನಿಲ್ದಾಣದಲ್ಲಿ ಮತ್ತೇನು ಬಸ್ಸಿಗೆ ಕಾಯ್ತಾರಾ?) ಟ್ರೈನ್ ಬರಲು ಇನ್ನೂ ಇಪ್ಪತ್ತೈದು ನಿಮಿಷಗಳು ಇದ್ದವು. ಹಾಗೆ ನಾನು ಕೂತದ್ದು ಅಲ್ಲಿಯ ಕಲ್ಲು ಬೆಂಚಿನ ಮೇಲೆ. ನಾಲ್ಕು ಹದಿನೈದಿರಬಹುದು ಸಮಯ. ಸೂರ್ಯ ಇನ್ನೂ ಸುಮಾರಾಗಿ ಪ್ರಖರವಾಗಿಯೇ ಇದ್ದ. ಮಾತನಾಡಲು ಪರಿಚಯದವರಾರು ಕಾಣಿಸಲಿಲ್ಲ. ಕೈಯಲ್ಲಿ ಯಾವ ಪುಸ್ತಕವೂ ಇರಲಿಲ್ಲ. ಮುಂದೇನು ಎಂದು ಯೋಚಿಸುವಷ್ಟರಲ್ಲೇ ಪಕ್ಕದಲ್ಲಿ ಒಂದು ಪುಟ್ಟ ಹೆಣ್ಣು ಮಗು ಅದರ ಅಣ್ಣನೊಂದಿಗೆ ಆಡುತ್ತಿದ್ದದ್ದು ಕಂಡಿತು. ಎಲ್ಲೋ ಒಂದು ಒಂದುವರೆ ಹರೆಯದ್ದಿರಬಹುದು. ಚಂದನೆಯ ಫ್ರಿಲ್ ಗಳಿರುವ ಅಂಗಿಯನ್ನು ಹಾಕಿಕೊಂಡು ಅದು ಅಡ್ಡ-ತಿಡ್ದ ವಾಗಿ ಕಾಲು ಎತ್ತಿ ಹಾಕಿ ನಡೆದಾಡುವ ಮೋಡಿಯಿಂದಲೇ ತಿಳಿಯುತ್ತಿತ್ತು, ಅದು ತೀರಾ ಇತ್ತೀಚಿಗೆ ನಡೆಯಲು ಕಲಿತ ಮಗು ಎಂದು. ನನಗೆ ನನ್ನ ಜುಟ್ಟು ಗೊಂಬೆ ಮತ್ತೊಮ್ಮೆ ನೆನಪಾಗಿ ಬಿಟ್ಟಿತ್ತು. ಜಗತ್ತಿನ ಕುತೂಹಲಗಳೆಲ್ಲವನ್ನೂ ಅದರ ಕಣ್ಣಲ್ಲೇ ಕಂಡ ಭಾವನೆ. ಅವರಿಬ್ಬರತ್ತಲೇ ದೃಷ್ಟಿ ನೆಟ್ಟಿದ್ದೆ.
ಆರರ ಹರೆಯವಿರಬಹುದು ಅದರ ಅಣ್ಣನಿಗೆ. ಅದೆಷ್ಟು ಪ್ರೀತಿ ತನ್ನ ತಂಗಿಯೆಂದರೆ ! ಅವಳನ್ನು ನಡೆಯಲು ಬಿಡದೆ, ಆಗದಿದ್ದರೂ ಎತ್ತಿಕೊಂಡೇ ಓಡಾಡುತ್ತಿದ್ದ.ಅದೇನೇನೋ ತಿನ್ನಿಸುತ್ತಿದ್ದ. ತಾನೂ ತಿನ್ನುತ್ತಿದ್ದ . ಅಣ್ಣ ಮರಾಠಿ ಹಾಡುಗಳನ್ನು ಹಾಡುತ್ತಿದ್ದರೆ ತಂಗಿ ಕುಣಿಯುತ್ತಿದ್ದಳು ಬಹಳ ಮುದ್ದಾಗಿ. ಅದೇನು ಬೆಲ್ಲಿ ನೃತ್ಯವೋ , ರಶಿಯನ್ ಬ್ಯಾಲೆಯೋ ? ದೇವನೇ ಬಲ್ಲ ..! ಅವಳು ಕುಣಿಯುವುದ ಕಂಡು ಮತ್ತೆ ಎತ್ತಿ ಮುದ್ದಿಸುತ್ತಿದ್ದ.
ನನಗೂ ಒಬ್ಬ ಅಣ್ಣ ಇರಬೇಕೆನಿಸಿ ಬಿಟ್ಟಿತು. ತುಂಬಾ ಪ್ರೀತಿಸುವ ಜಗಳಾಡುವ, ಹೊಡೆದಾಡುವ ತಮ್ಮನಿದ್ದಾನೆ. ಆದರೂ ಅಣ್ಣನ ಬೈಗುಳವೆಂದರೆ ಅದೇನೋ ಪ್ರೀತಿ. ಆ ವಾತ್ಸಲ್ಯವೇ ಅಂಥದ್ದು. ಅಣ್ಣ ತಂಗಿಯರನ್ನು ನೋಡಿದಾಗ ಹೊಟ್ಟೆಯೊಳಗೊಂದು ತಣ್ಣನೆಯ ಹೊಟ್ಟೆ ಕಿಚ್ಚು ಶುರುವಾಗಿ ಬಿಡುತ್ತದೆ ಮಾರಾಯ್ರೆ ! ಇರುವುದೆಲ್ಲವ ಬಿಟ್ಟು, ಇರದುದನ್ನೇ ನೆನೆಯುತ್ತೇವೆ ಅಲ್ವಾ ?
ಸುಮ್ಮನೆ ಹಾಗೆ ಸುತ್ತಲೂ ಕಣ್ಣಾಡಿಸಿದೆ, ಅವರಿಬ್ಬರ ಅಪ್ಪ ಅಮ್ಮನ ಹುಡುಕಲು. ಅದೊಂದು ಮರಾಠಿಗರ ಕುಟುಂಬವಾಗಿತ್ತು. ಕೊಂಕಣಿಯನ್ನು ಸಲೀಸಾಗಿ ಮಾತನಾಡುವ ನನಗೆ, ಮರಾಠಿ ತಕ್ಕ ಮಟ್ಟಿಗೆ ಅರ್ಥವಾಗುತ್ತದೆ. ಅಜ್ಜಿ ಅಜ್ಜನ ಜೊತೆ ಪಪ್ಪ ಇದ್ದದ್ದು ಕಂಡಿತು. ಅಮ್ಮ ಕಾಣಲಿಲ್ಲ. ತೊದಲು ನುಡಿಯಲ್ಲಿ ಅದೇನೇನೋ ಹೇಳುತ್ತಿತು ಮಗು, ತನ್ನ ಅಜ್ಜಿಯ ಬಳಿ ಬಂದು. ಕುಕ್ಕರಗಾಲಲ್ಲಿ ಕುಳಿತ ಅಜ್ಜಿಯ ಬಳಿ ಅದೇನೇನೋ ತಿನಿಸುಗಳು.
ಪುಟ್ಟ ಹುಡುಗಿ ಅಜ್ಜಿಯ ಬಳಿ ಕುಡಿಯಲು ನೀರು ಕೇಳುತ್ತ, ತನ್ನ ಗೆಜ್ಜೆಕಾಲುಗಳ ಹೆಜ್ಜೆಯನ್ನು ಎರ್ರಾಬಿರ್ರಿ ಹಾಕುತ್ತ ಹೋದರೆ,ಅಣ್ಣ ಅವಳು ತಿಂದು ಬಿಸಾಕಿದ್ದೆಲ್ಲವನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಿದ್ದ. ಮನದಲ್ಲೇ ಹುಡುಗನಿಗೆ 'ಶಹಬ್ಬಾಸ್' ಎಂದುಬಿಟ್ಟೆ. ಮುಖದಮೇಲೊಂದು ಕಿರು ನಗೆ ಅನಾಯಾಸವಾಗಿ ಹಾದು ಹೋಯಿತು.
ಅದೇನೋ ಖುಷಿಯಾಯಿತು ಮನಸ್ಸಿಗೆ. ಅಷ್ಟರಲ್ಲಿ ಟ್ರೇನು ಬಂದಿತ್ತು.ಟ್ರೈನಿನೊಳಗೆ ಜಾಗ ಹಿಡಿದು ಕುಳಿತವಳ ಮನಸಿನಲ್ಲಿ ಮತ್ತದೇ ಪುಟ್ಟ ಹುಡುಗಿಯ ಅಣ್ಣನೇ ಕಾಣುತ್ತಿದ್ದ,ಕಸಗಳನ್ನೆತ್ತಿ ಕಸದ ಬುಟ್ಟಿಗೆ ಹಾಕಿದ ಅವನ ಪುಟ್ಟ ಕೈಗಳೇ ಕಾಣುತ್ತಿದ್ದವು.ಆರರ ಹುಡುಗ ರೈಲ್ವೆ ನಿಲ್ದಾಣದಲ್ಲಿಯ ಹಲವು ಬುದ್ಧಿ ಜೀವಿಗಳಿಗೆ ಮುಗ್ಧವಾಗಿ ಪಾಠ ಕಲಿಸಿ ಬಿಟ್ಟಿದ್ದ. !
ಹೌದು ಸ್ನೇಹಿತರೆ ಚಿಕ್ಕಂದಿನಲ್ಲಿ ನಮ್ಮಲ್ಲಿರುವ ಪ್ರಕೃತಿ ಪ್ರೇಮ, ದೇಶ ಭಕ್ತಿ, ಪರಿಸರದ ಬಗ್ಗಿನ ಕಾಳಜಿ ಎಲ್ಲ ದೊಡ್ದವರಾಗುತ್ತಿದ್ದಂತೆ ಕಳೆದುಹೊಗುತ್ತಿರುವುದೇಕೆ ? ಸ್ವಾರ್ಥತೆಯೇ? ಅಥವಾ ನಮ್ಮನ್ನು ನಾವೇ ಬಂಧಿಸಿಕೊಳ್ಳುವ ಬಗೆಗೋ ?
ನಾವು ವಿದೇಶದಲ್ಲಿ ಅಲ್ಲಿಯ ನಿಯಮಗಳನ್ನು ಪಾಲಿಸುತ್ತೇವೆ. ಅದೇ ಭಾರತದಲ್ಲಾದರೆ ತಿಂಡಿ ತಿನಿಸುಗಳನ್ನು ತಿಂದು ಕಸವನ್ನು ಬೇಕಾಬಿಟ್ಟಿಯಾಗಿ ಬಿಸಾಡುತ್ತೇವೆ. ಹಾಗೆ ಭಾರತದಲ್ಲಿ ಶಿಸ್ತಿಲ್ಲ, ಗಲೀಜು ದೇಶ ಎಂದು ಅದೆಷ್ಟು ನಿರಾಯಾಸವಾಗಿ ಹೇಳುತ್ತೇವೆ ಅಲ್ವಾ ?
ಆದಷ್ಟು Garbage binಗಳಲ್ಲೇ ಕಸವನ್ನು ಹಾಕೋಣ. ನಮ್ಮ ಸುತ್ತಲಿನ ಪರಿಸರದ ಕಾಳಜಿ ನಮ್ಮದು ಅಲ್ವಾ ಸ್ನೇಹಿತರೆ? ಕೊನೆಯ ಪಕ್ಷ ಬುದ್ಧಿಜೀವಿಗಳು ಎನಿಸಿಕೊಳ್ಳುವ ಒಂದಿಷ್ಟು ಜನ ತಮ್ಮ ಜವಾಬ್ದಾರಿಯನ್ನು ಅರಿತರೆ, ಎಲ್ಲೆಲ್ಲೋ ಬೀಳುವ ಕಸ ಒಂದಿಷ್ಟು ಕಡಿಮೆಯಾಡಿತು.
ಇವಿಷ್ಟು ಮನಸಿನಲ್ಲಿ ಮೂಡುವ ಹೊತ್ತಿಗೆ ಉಡುಪಿ ನಿಲ್ದಾಣ ಬಂದಿತ್ತು. ಟ್ರೈನ್ನಿಂದ ಇಳಿಯುತ್ತಿದ್ದೆ. ನನ್ನ ಕುರ್ತಾ ಅದೆಲ್ಲೋ ಸಿಕ್ಕಿ ಹಾಕಿಕೊಂಡಿತ್ತು. ಬಿಡಿಸಲು ಹಿಂತಿರುಗಿದರೆ. ಮುದ್ದಾದ ಪುಟ್ಟ ಮಗುವೊಂದರ ಮುಷ್ಠಿಯೊಳಗೆ ಕುರ್ತಾದ ಅಂಚು ಬಂಧಿಯಾಗಿತ್ತು. ನಿಧಾನಕ್ಕೆ ಬಿಡಿಸಿಕೊಂಡು ಇಳಿದೆ. ಪುಟ್ಟ ಮಗುವಿನ ಕೈಯ ಸ್ಪರ್ಶದ ಅನುಭವ ಮುಖದಲ್ಲೊಂದು ಮುಗುಳುನಗೆಯನ್ನು ಮತ್ತೊಮ್ಮೆ ಮೂಡಿಸಿತ್ತು.