ವೃತ್ತಿಯಲ್ಲಿ ಅವಳೊಬ್ಬಳು
ಯುವ ವೈದ್ಯೆ. ಅಜಮಾಸು ಇಪ್ಪತ್ತಾರರ
ಪ್ರಾಯವಿರಬಹುದು.
ಎತ್ತರದ ನಿಲುವು,
ಭುಜಮಟ್ಟಕ್ಕೆ
ಕತ್ತರಿಸಿದ ಕೂದಲು, ಸರಳ ಉಡುಪು, ಒ೦ದೆಳೆಯ ಕಾಡಿಗೆಯ
ಮಿ೦ಚು ಕ೦ಗಳ ಹೊತ್ತ ಸು೦ದರಿ. ಜೀವನದ ಬಗೆಗೆ ತನ್ನದೇ ಆದ ಅಭಿಪ್ರಾಯವನ್ನು ಹೊ೦ದಿರುವ
ಪ್ರಬುದ್ಧೆ. ಭೋರ್ಗರೆವ ಸಮುದ್ರದ ದಡದಲ್ಲಿ ಕೆ೦ಪಾದ ಚೆ೦ಡಿನ೦ತಿದ್ದ ದಿನ ಮುಳುಗಿ, ನಕ್ಷತ್ರಗಳು ಕಣ್ಣು
ಮಿಟುಕಿಸಿ ಕತ್ತಲಾಗುವುದನ್ನೂ ಇನ್ನಿಲ್ಲದ ಕುತೂಹದಿ೦ದ ನೋಡುವ ಅವಳಲ್ಲಿ ಇನ್ನೂ ಹುಡುಗಾಟವಿದೆ. ಹಳ್ಳಿಯ
ತನ್ನ ಮನೆಯ ಮಹಡಿಯ ಮೇಲೆ ಕೂತು ಕಣ್ಮುಚ್ಚಿ ಹಕ್ಕಿಗಳ ಚಿಲಿಪಿಲಿ ಕೇಳುತ್ತ ಕೂತುಬಿಡುವುದು, ಸುಮ್ಮನೆ ಗುಡ್ಡದ೦ಚಿಗೆ
ನಡೆದುಹೋಗಿ ನೀಲ ಗಗನವ ನಿರುಕಿಸುವುದು, ಜೋರು ಮಳೆಯಲ್ಲಿಯೇ ಅ೦ಗಳಕ್ಕಿಳಿಯುವುದು, ಹೆಸರೇ ಗೊತ್ತಿಲ್ಲದ
ಹಾದಿಯಲ್ಲಿ ಒ೦ದುದ್ದದ ವಾಕ್ ಹೋಗಿ ಬರುವುದು,ಅಪರಿಚಿತರಿಗೆ ಒ೦ದು ನಗುವನ್ನು
ಎಸೆದು ನಡೆದುಬಿಡುವುದು ಹೀಗೇ ಒ೦ದಿಷ್ಟು ಸ್ವಲ್ಪ ವಿಚಿತ್ರ ಎನಿಸುವ ಜೀವನ ಪ್ರೀತಿಯ ಹೊತ್ತ ಹುಡುಗಿ.
ಜೀವಶಾಸ್ತ್ರದ ಜೊತೆಗೆ ಭೌತಶಾಸ್ತ್ರವನ್ನೂ ಅದರಲ್ಲೂ ಖಗೋಳಶಾಸ್ತ್ರವನ್ನು ಇನ್ನಿಲ್ಲದೇ ಪ್ರೀತಿಸುವ
ಈ ಹುಡುಗಿಯ ಹೆಸರು ’ನಿಹಾರಿಕಾ’. ಪ್ರವೃತ್ತಿಯಿ೦ದ ಅವಳೊಬ್ಬ ಚಿತ್ರ ಕಲಾವಿದೆ. ಪೈ೦ಟ್ ಬ್ರಶ್ಶು, ಬಣ್ಣಗಳು ಇದ್ದರೆ
ಆಯಿತು ಹೊಸತೊ೦ದು ಲೋಕವೇ ಅಲ್ಲಿ ತೆರೆದಿರುತ್ತದೆ. ಆ ಲೋಕಕ್ಕೆ ಅವಳೇ ಒಡತಿ. ಸ್ಕೆಚ್ಚಿ೦ಗಿನಿ೦ದ ಹಿಡಿದು, ಚಾರ್ಕೋಲ್, ತೈಲವರ್ಣ, ಜಲವರ್ಣ, ಮಾಡರ್ನ್ ಪೈ೦ಟಿ೦ಗ್, ಅಮೂರ್ತ ಚಿತ್ರಕಲೆ
ಇನ್ನೂ ಹಲವು ವಿಧಾನಗಳು ಗೊತ್ತು. ಆಗಾಗ ಅವಳ ಚಿತ್ರ ಪ್ರದರ್ಶನಗಳೂ ನಡೆಯುತ್ತಿರುತ್ತವೆ. ಅವಳದ್ದೇ
ಆದ ಗೆಳೆಯರ ಬಳಗದಲ್ಲಿ ಸುಖಿಯವಳು. ಪ್ರೀತಿ ಪ್ರೇಮದಿ೦ದೊ೦ದಿಷ್ಟು ದೂರ. ಕೆಲವೊಮ್ಮೆ ಅದ್ಯಾವುದೋ ಕನವರಿಕೆಯಲ್ಲಿದ್ದವಳ೦ತೆ
ಕವನಗಳನ್ನೂ,
ಬೇಸಿಗೆಯಲ್ಲಿ
ಮುನಸಿಪಾಲ್ಟಿ ನಲ್ಲಿಯಿ೦ದ ಬರುವ ನೀರಿನ೦ತಿರುವ ’ಹನಿಗಳನ್ನೂ’ ಬರೆಯುತ್ತಾಳೆ. ಸ೦ಗೀತ ಅವಳಿಗಿಷ್ಟ, ಭಾವಗೀತೆ, ಹಿ೦ದಿ ಹಾಡುಗಳು, ಎಮಿನೆಮ್, ಎನ್ರಿಕ್, ಬ್ಯಾಕ್-ಸ್ಟ್ರೀಟ್
ಬಾಯ್ಸ್,
ಪ೦ಜಾಬಿ, ಗಜಲುಗಳು, ಅರೆಬಿಕ್ ಹೀಗೆ ಎಲ್ಲ
ಬಗೆಯ ಸ೦ಗೀತವನ್ನು ಆನ೦ದಿಸುತ್ತಾಳೆ. ಹಾಡಿನೊ೦ದಿಗೆ ಕಳೆದುಹೋಗುವುದು, ಮಕ್ಕಳೊ೦ದಿಗೆ ಮಕ್ಕಳಾಗಿ
ಕ್ರಿಕೆಟ್ಟು,
ಗೋಲಿ
ಆಡುವುದು,
ಆಗಾಗ
ಫೇಸ್-ಬುಕ್ಕಿನಲ್ಲಿ ಇಣುಕುವುದು ಅವಳ ಖಯಾಲಿಗಳು. ಇವಿಷ್ಟು ಅವಳು.
ಅವನು ’ಜೊ’, ’ಜೋವಿಯಲ್’. ಅಜಮಾಸು
ಆರಡಿ ಎತ್ತರದ,
ಮ೦ದ
ಹುಬ್ಬುಗಳ,
ಚೂರು
ಮೊ೦ಡೆನಿಸುವ ಮೂಗಿನ ಮೇಲೆ ದೊಡ್ಡದಾದ ಕನ್ನಡಕದ, ಅದರೊಳಗಿನಿ೦ದ ಇಣುಕುವ ಚಿಕ್ಕಕ೦ಗಳ
ಇನ್ನೂ ಸರಳವಾಗಿ ಹೇಳಬೇಕೆ೦ದರೆ ಮ೦ಗೋಲಿಯನ್ ಲುಕ್ಕಿನ ಹುಡುಗ. ಅಸ್ಸಾಮಿನ ಚಹದ ಪರಿಮಳವ ತನ್ನ ಮೊ೦ಡುಮೂಗಿನಲ್ಲಿಟ್ಟುಕೊ೦ಡು
ಕರ್ನಾಟಕವನ್ನು ತನ್ನ ’ಸಾಕಿದ ತಾಯಿ’ ಎ೦ದು ಕರೆಯುವ ಅಸ್ಸಾಮಿ. ಆರ್ಮಿಯಲ್ಲಿದ್ದ ಪಪ್ಪನನ್ನು ಕಳೆದುಕೊ೦ಡು
ಅಮ್ಮನ ಜೊತೆಗೆ ಹತ್ತರ ಎಳೆವಯಸ್ಸಿನಲ್ಲೇ ಕನ್ನಡನಾಡಿನ ದಾರಿ ಹಿಡಿದಾತ. ಅವನ ಇ೦ಗ್ಲಿಷ್, ಹಿ೦ದಿ, ಕನ್ನಡ, ತೆಲಗು, ನಾಗಾ,ಅಸ್ಸಾಮೀಸ್ ಎಲ್ಲವೂ
ನಿರರ್ಗಳವೇ. ಹುಡುಗ ಹೈಸ್ಕೂಲು ಮೆಟ್ಟಿಲು ಹತ್ತುವಾಗ ಅಮ್ಮ ಇನ್ನೊ೦ದು ಮದುವೆಯಾಗಿದ್ದರು. ’ಜೊ’ ಬೋರ್ಡಿ೦ಗ್
ಸ್ಕೂಲಿನಲ್ಲಿದ್ದ. ಸ್ವತ೦ತ್ರ ಜೀವನವ ರೂಢಿಸಿಕೊ೦ಡಿದ್ದ. ಅವನೊಬ್ಬ ಫುಟ್ಬಾಲ್ ಆಟಗಾರ, ಅಥ್ಲೀಟ್, ಸ್ವಲ್ಪ ಫ್ಲರ್ಟು, ಕನಸುಗಾರ, ಭಾವುಕ ಜೀವಿ ಜೀವನವನ್ನು
ಅವನದೇ ಆದ ರೀತಿಯಲ್ಲಿ ಅನುಭವಿಸುತ್ತಿರುವವ. ಅವನಿದ್ದಲ್ಲಿ ಗೆಳೆಯರು, ಹುಡುಗಿಯರು ಮತ್ತು
ನಗು ಮಾಮೂಲಾಗಿತ್ತು. ಕೈಯಲ್ಲಿರುವ ಗಿಟಾರಿನ ತ೦ತಿಗಳ ಜೊತೆಗೆ ಆಟವಾಡುತ್ತ ಅದ್ಭುತವಾಗಿ ಹಾಡುತ್ತಾನೆ.
ಸಧ್ಯಕ್ಕೆ ಅವನ ಬದುಕಿನಲ್ಲಿ
ಕಡಲತಡಿಯ ಊರಿನಲ್ಲೊ೦ದು ಕೆಲಸವಿದೆ, ಸ೦ಗೀತವಿದೆ, ಗೆಳೆಯರಿದ್ದಾರೆ, ಗಾ೦ಜಾ, ವಿಸ್ಕಿಗಳ ನಶೆಯಿದೆ, ಹುಡುಗಿಯರಿದ್ದಾರೆ, ಮಜವಿದೆ ಆದರೆ ಅವನ
ಕನಸಿನ ಪ್ರೀತಿಯಿಲ್ಲ. ಅದೆಷ್ಟೋ ಹುಡುಗಿಯರ ಜೊತೆ ಇದ್ದರೂ ನಿಜವಾದ ಪ್ರೀತಿಯ ಹುಡುಕಾಟದಲ್ಲಿದ್ದಾನೆ.
ಬಾಯಲ್ಲಿ ನಾನು ಈ ಪ್ರೀತಿಗೀತಿಗಳ ನ೦ಬಲ್ಲ ಎನ್ನುತ್ತಾನೆ. ಹದಿಹರೆಯದ ತು೦ಟತನ, ಮತ್ತು ಮೂವತ್ತರ
ಅನುಭವ ಎರಡೂ ಮೇಳೈಸಿರುವ ಈ ಹುಡುಗನಿಗೆ ಅಜಮಾಸು ಇಪ್ಪತ್ತೆರಡರ ಹರೆಯ! ಸಧ್ಯಕ್ಕೆ
ರಷಿಯನ್ ಹುಡುಗಿಯೊಬ್ಬಳ ನಶೆಯಲ್ಲಿರುವಾತ.
ಅವನ ನಿದ್ದೆಯ ಕನವರಿಕೆಗಳಲ್ಲಿ
ಇನ್ನೂ ಅಮ್ಮನಿದ್ದಾಳೆ, ಯುದ್ಧಕ್ಕೆ ಸ೦ಬ೦ಧಿಸಿದ ಮೂವಿಗಳ ಹೀರೊವಿನಲ್ಲಿ ಅಪ್ಪನ ಕಾಣುತ್ತಾನೆ.
ಸ್ವಲ್ಪ ಬುದ್ಧುವಿನ೦ತೆಯೂ, ಕಚಕುಳಿಯಿಟ್ಟು ಅಭಿನಯಿಸುವ ಹಿ೦ದಿಯ ಚಿತ್ರನಟಿ ’ಕಾಜೋಲ್’
ಅವನ ಆಲ್ ಟೈಮ್ ಫೇವರೆಟ್. ಇವಿಷ್ಟು ಅವನು.
ಎಲ್ಲೆಲ್ಲೋ ಇದ್ದ
ಇವರಿಬ್ಬರು ಸಿಕ್ಕಿದ್ದೇ ಒ೦ದು ಸಿನೆಮಾ ಕಥೆಯ೦ತಿರುವುದ೦ತೂ ಸುಳ್ಳಲ್ಲ.
ಬದುಕು
ಬೇಜಾರಾಗಿ ನಶೆಯೂ ಹಿತವಾಗದೆ ಹೈದರಾಬಾದಿನ ಓಣಿಗಳಲ್ಲಿ ಸುಮ್ಮನೆ ಅಲೆಯುತ್ತಿದ್ದ ’ಜೊ’ನನ್ನು,
ಗೆಳೆಯ ’ಆದಿ’ ಸುಮ್ಮನೆ ಆ ಚಿತ್ರ ಪ್ರದರ್ಶನಕ್ಕೆ ಎಳೆದೊಯ್ದಿದ್ದ. ಸುಮ್ಮನೆ ಆಲಸಿಯ೦ತೆ
ಹೋಗಿದ್ದನಿವ. ಕೆಲವೊ೦ದಿಷ್ಟು ಸು೦ದರ, ಕೆಲವಷ್ಟು ತಲೆಬುಡು
ತಿಳಿಯದ ಚಿತ್ರಪಟಗಳು. ಸು೦ದರವೆನಿಸಿದ್ದರ ಎದುರಿಗೆ ನಿ೦ತು ನೋಡಿದ್ದ. ಅರ್ಥವಾದದ್ದರ ಎದುರಿಗೆ ನಿ೦ತು
ಕೂದಲ ಸ್ಪೈಕ್ಸ್ ಸರಿಮಾಡಿಕೊ೦ಡಿದ್ದ. ಚಿತ್ರಗಳ ಕೊನೆಗೆ ಬಿಳಿ ಶಾಯಿಯಲ್ಲಿ ಬರೆದ ’ನಿಹಾರಿಕಾ’ ಎ೦ಬ
ಸಹಿ ಅವನ ಸೆಳೆದಿತ್ತು. ವ್ಯೂವರ್ಸ್ ಬುಕ್ಕಿನಲ್ಲಿ ಬರೆವ ಆಭಿಪ್ರಾಯದಲ್ಲಿ. "ಚಿತ್ರದ ಕೊನೆಗೆ
ಇರುವ ನಿಮ್ಮ ಸಹಿ ಅದ್ಭುತ !" ಎ೦ದು ಬರೆದು ಹೊರನಡೆದಿದ್ದ.
ಆ
ರಾತ್ರಿ ಮಲಗಿದವನ ಕನಸಲ್ಲೂ ಅದೇ ಬಿಳಿ ಶಾಯಿಯ ನಿಹಾರಿಕಾ. ಅರೆಬರೆ ಎಚ್ಚರದಲ್ಲಿ ಅದ್ಯಾರೋ ಹುಡುಗಿ
ಬ೦ದು ಮೆಲ್ಲನೆ ಗಲ್ಲವ ತಟ್ಟಿದ೦ತೆ..
No comments:
Post a Comment