Wednesday, May 13, 2020

ಮಂದಾರದ ಮಂದ್ರ

ಬೆಂಗಳೂರಿನ ನಾವಿರುವ ಮನೆಯಿಂದ ಅನತಿದೂರದಲ್ಲಿ ಮೈದಾನವೊಂದಿದೆ. ಮೈದಾನಕ್ಕೆ ಹೋಗುವ ರಸ್ತೆಯ ಬಲಬದಿಯಲ್ಲಿರುವ ಮನೆಯ ಒಡತಿ ಚಂದನೆಯ ಹೂದೋಟವನ್ನು ಮಾಡಿಕೊಂಡಿದ್ದಾರೆ. ಪಾಗಾರಕ್ಕೆ ಚೌಕಾಕಾರದ ಕುಂಡಗಳನ್ನು ಜೋಡಿಸಿ ಅದರಲ್ಲಿ ಬಣ್ಣ ಬಣ್ಣದ ಹೂಬಿಡುವ ಗಿಡಗಳನ್ನು ಹಾಕಿಕೊಂಡಿದ್ದಾರೆ. ಪ್ರತಿನಿತ್ಯ ಆ ರಸ್ತೆಯಲ್ಲಿ ಹೋಗುವಾಗ ಮನೆಯ ಹೂದೋಟದ ಕಡೆಗೆ ಕಣ್ಣು ಹರಿಸುವುದು ಒಂಥರದ ಅಭ್ಯಾಸವಾಗಿದೆ ನನಗೆ. ಹಲವು ಬಣ್ಣದ ಸೇವಂತಿಗೆ, ಗುಲಾಬಿ, ಅಂಥೋರಿಯಮ್, ಬೋಗನ್ವಿಲ್ಲಾಗಳ ಜೊತೆಗೆ ಹೊತ್ತು ಮುಳುಗಿದ ನಂತರ ಘಮಘಮಿಸುವ ಪಾರಿಜಾತ, ರಾತ್ರಿರಾಣಿ, ಬ್ರಹ್ಮಕಮಲಗಳೆಲ್ಲ ಇವೆ ಅಲ್ಲಿ.

ನಿನ್ನೆ ಬೆಳಿಗ್ಗೆ ಎಂದಿನಂತೆ ಆ ಹೂದೋಟದ ಕಡೆಗೊಮ್ಮೆ ಇಣುಕಿದಾಗ ಕಂಡಿದ್ದು ಕನ್ನಡ ವರ್ಣಮಾಲೆಯ ’ದ’ ಅಕ್ಷರಕ್ಕೆ ಹಸಿರು ಬಣ್ಣ ಬಳಿದಂತೆ ಕಾಣುವ ಎಲೆಗಳಿರುವ ಪುಟಾಣಿ ಗಿಡದಲ್ಲಿ ಬೊಗಸೆ ಹಿಡಿದಂತೆ ಬಿರಿದಿರುವ ’ಮಂದಾರ’ ಹೂಗಳು. ಬಾನಲ್ಲಿ ತೇಲುವ ಬೆಳ್ಮೋಡಗಳೇ ಧರೆಗೆ ಬಂದು ಹೂವಾದವೇನೋ ಎನ್ನುವಂಥ ಐದು ಪಕಳೆಗಳ ಎರಡು ಬಿಳಿ ಹೂಗಳು! ಅದರ ಮಧ್ಯದಲ್ಲಿ ರವಿಕಿರಣಗಳು ಹೊಮ್ಮುತ್ತಿರುವಂತೆ ಕಾಣುತ್ತಿರುವ ಕೇಸರಗಳು. ಆ ಹೂವುಗಳು ನನ್ನ ನೋಡುತ್ತಿರುವಂತೆ ಭಾಸವಾಯಿತು ನನಗೆ! ಆ ಗಿಡದಲ್ಲಿ ಹೂಗಳು ಅರಳಿಕೊಂಡರೆ, ನನ್ನ ತಲೆಯಲ್ಲಿ ನೆನಪುಗಳು ಬಿರಿದುಕೊಂಡವು.

ನಾನಾಗ ಬಹುಶಃ ಮೂರನೆಯ ತರಗತಿಯಲ್ಲಿದ್ದೆ. ಒಂದು ಸಂಜೆ ಅಮ್ಮ ಒಂದಿಷ್ಟು ಬರಹಗಳಿರುವ ಹಾಳೆಗಳನ್ನು ತನ್ನ ಪರ್ಸು ಮತ್ತು ಕೊಡೆಯ ಜೊತೆಯಲ್ಲಿ ಹಿಡಿದು ತಂದಿದ್ದರು.  ಕುತೂಹಲದಿಂದ ಅಮ್ಮನ ಬಳಿ ಅದೇನೆಂದು? ಕೇಳಿದ್ದೆ." ’ಮಂದಾರ’ ಹಸ್ತ ಪತ್ರಿಕೆಗೆ ಲೇಖನ ಬರ್ಕೊಟ್ಟಿದ್ದೊ ಮಕ್ಕೊ, ಅದನ್ನ ಆರಸವು." ಎಂದರು. ನನಗೆ ಅರ್ಥವಾಗಲಿಲ್ಲ. "ಅಂದ್ರೆಂತದು?" ಮತ್ತೊಂದು ಪ್ರಶ್ನೆ ನನ್ನಿಂದ. ಅದಕ್ಕೆ ಉತ್ತರವಾಗಿ ಅವರು, "ನಿನ್ನ ಬಾಲಮಂಗಳ ಇದ್ದಲಿ, ಹಂಗೆಯ ಇದು ಒಂದು ಪತ್ರಿಕೆ. ಆದ್ರೆ ಪ್ರಿಂಟ್ ಹಾಕ್ಸುದು ಅಲ್ಲ. ನಂಗಳ ಶಾಲೆ ಮಕ್ಕೊನೇ ಅವರ ಕೈಯಿಂದ ಬರೀತೋ, ಕಥೆಗೆ ಬೇಕಾದ ಚಿತ್ರ ಸಮೇತ ಮಕ್ಕೋನೇ ಬಿಡಸ್ತೊ. ನೀನು ಹೈಸ್ಕೂಲಿಗೆ ಬಂದಮೇಲೆ ಬರೀಲಕ್ಕು, ಅಕ್ಷರ ಚಂದಕೆ ಬರೂದು ರೂಢಿ ಮಾಡ್ಕೊ" ಎಂದು ಹೇಳಿದ್ದು ನನಗೆ ಇನ್ನೂ ಸರಿಯಾಗಿ ನೆನಪಿದೆ.

ವಿದ್ಯಾರ್ಥಿಗಳು ಬಿಳಿಯ ಹಾಳೆಗಳ ಮೇಲೆ ಬರೆದು ತಂದಿರುವ ಲೇಖನಗಳನ್ನು ಆರಿಸಿ ಅದನ್ನು ಅಮ್ಮ ತಿದ್ದುತ್ತಿದ್ದರು. ನಾನು ಕುತೂಹಲದಿಂದ ಇಣುಕಿ ನೋಡಿದ್ದೆ. ಕೆಲವು ಕಥೆಗಳಾದರೆ, ಇನ್ನೂ ಕೆಲವು ಸ್ವರಚಿತ ಲೇಖನಗಳು, ಕವನಗಳು-ಚುಟುಕುಗಳು, ಇನ್ನು ಕೆಲವು ಸಂಗ್ರಹದ ಹಾಸ್ಯದ ತುಣುಕು, ಔಷಧೀಯ ಸಸ್ಯಗಳ ಕುರಿತು ಮಾಹಿತಿಗಳು. ಇಂಥ ಲೇಖನಗಳನ್ನು ಆರಿಸಿ, ತಿದ್ದಿದ ಬರಹಗಳನ್ನು ವಿದ್ಯಾರ್ಥಿಗಳಿಗೆ ಬಣ್ಣದ ಹಾಳೆಗಳ ಮೇಲೆ ಬರೆಯಲು ಕೊಡುತ್ತಿದರು. ಆ ಹಾಳೆಗಳೋ ತಿಳಿಗುಲಾಬಿ, ಆಗಸದ ನೀಲಿ ಮತ್ತು ತುಸು ಹಳದಿ ಬಣ್ಣದವು. ಆ ಹಾಳೆಯ ನಾಲ್ಕೂ ಬದಿಯಲ್ಲಿ ಸ್ವಲ್ಪ ಜಾಗ ಬಿಟ್ಟು ಬಳ್ಳಿರಂಗೋಲಿಯೋ ಅಥವಾ ಆಗಸದ ನಕ್ಷತ್ರಗಳ ಕಿತ್ತು ಸಾಲಾಗಿ ಇಟ್ಟಂಥ ಬಾರ್ಡರು. ಬಣ್ಣದ ಹಾಳೆಗಳ ಮೇಲೆ ಬರೆಯುವುದೇ ಒಂದು ಬೆರಗಾಗಿತ್ತು ಆ ವಯಸ್ಸಿಗೆ! ಆ ಲೇಖನಗಳಿಗೆ ಸೂಕ್ತವಾದ ಚಿತ್ರಗಳನ್ನು ಸುಂದರವಾಗಿ ಚಿತ್ರ ಬಿಡಿಸುವ ವಿದ್ಯಾರ್ಥಿಗಳ ಬಳಿ ಡ್ರಾಯಿಂಗ್ ಹಾಳೆಗಳ ಕೊಟ್ಟು ಅದರಲ್ಲಿ ಚಿತ್ರಬರೆಯಿಸುತ್ತಿದ್ದರು. ಆಮೇಲೆ ಅದಕ್ಕೊಂದು ಅಂದದ ಮುಖಪುಟ! ಎಲ್ಲವನ್ನೂ ಸೇರಿಸಿ ಬುಕ್-ಬೈಂಡಿಂಗ್ ಮಾಡಿಸುತ್ತಿದ್ದರು! ಆ ವರ್ಷದ ಮಂದಾರದ ಜವಾಬ್ದಾರಿ ಹೊತ್ತಿದ್ದ ನನ್ನ ಅಮ್ಮ, ನನ್ನ ಕುತೂಹಲವ ನೋಡಿ, ’ಮಂದಾರ’ ಹೂವಾಗಿ ಅರಳುವ ರೀತಿಯನ್ನು ಹಂತಹಂತವಾಗಿ ತೋರಿಸಿದ್ದರು! "ಕೈಬರಹದ ಹಾಳೆಗಳೆಲ್ಲ ಸೇರಿ ಆದ ಮಂದಾರ ಪುಸ್ತಕವನ್ನು ನೋಡಬೇಕು" ಎಂದು ನಾನು ಹಠ ಹಿಡಿದಾಗ, ಬಿಡುಗಡೆಯಾದ ಮೇಲೆ ಒಮ್ಮೆ ತಂದು ತೋರಿಸಿದ್ದರು ಕೂಡ. ಮೊದಲ ಬಾರಿಗೆ ’ಮಂದಾರ’ವ ಕೈಯಲ್ಲಿ ಹಿಡಿದಾಗ ಆದ ಆನಂದ ಅಷ್ಟಿಷ್ಟಲ್ಲ! ಹಳದಿ ಬಣ್ಣದ ಬೇಗಡೆಯ ಒಳಗಿನಿಂದ ’ಮಂದಾರ’ ತನ್ನ ಕಂಪ ಬೀರುತ್ತಿತ್ತು! ಬಣ್ಣದ ಹಾಳೆಗಳ ಮೇಲೆ ಬರೆಯಲ್ಪಟ್ಟ ಒಂದಕ್ಕಿಂತ ಒಂದು ಚಂದಕಿದೆ ಅನಿಸುವ ಮುದ್ದು ಮುದ್ದಾದ ಅಕ್ಷರಗಳು. ಗೆರೆಯೇ ಇಲ್ಲದ ಹಾಳೆಯಲ್ಲಿ ಹೇಗೆ ಅದೆಷ್ಟು ನೇರವಾಗಿ ಬರೆಯುತ್ತಾರೆ ಎನ್ನುವುದೂ ಒಂದು ಸೋಜಿಗವಾಗಿತ್ತು! ಎಡಭಾಗದಲ್ಲಿ ಆ ಲೇಖನಗಳಿಗೆ ಹೊಂದುವ ಬಣ್ಣ ಬಣ್ಣದ ಸುಂದರ ಚಿತ್ರಗಳು! ಕಳೆದೇ ಹೋಗಿದ್ದೆ ಕೆಲಹೊತ್ತು ನಾನು ಮಂದಾರದ ಮಂದ್ರದಲ್ಲಿ. ನಾನು ಕನ್ನಡ ಅಕ್ಷರಗಳನ್ನು ಜೋಡುಗೆರೆಯ ಪಟ್ಟಿಯಲ್ಲಿ ಆಸ್ಥೆಯಿಂದ ಬರೆಯಲು ಶುರುಮಾಡಿದ್ದೆ! ’ಮಂದಾರ’ದ ಒಂದು ಪಕಳೆಯಾಗುವುದು ನನ್ನ ಆ ಕ್ಷಣದ ಕನಸಾಗಿತ್ತು! 

ಹೈಸ್ಕೂಲಿಗೆ ಬರುವ ಹೊತ್ತಿಗೆ ನನ್ನ ಅಕ್ಷರಗಳು ಸಾಕಷ್ಟು ಸುಂದರವಾಗಿದ್ದವು. ’ಮಂದಾರ’ಕ್ಕೆ ಲೇಖನವನ್ನು ಬರೆಯುವ ಅವಕಾಶವೂ ಬಂತು! ನಾನು ತಿಳಿಗುಲಾಬಿ, ಆಗಸದ ನೀಲಿ ಬಣ್ಣದ ಹಾಳೆಗಳ ಮೇಲೆ ನನ್ನ ಅಕ್ಷರಗಳನ್ನು ಮುದ್ರಿಸಿದ್ದೆ. ಗೆರೆಯಿರುವ ಹಾಳೆಯ ಗೆರೆಗಳ ಮೇಲೆ ಇನ್ನೊಮ್ಮೆ ಗೆರೆ ಎಳೆದು ಅದನ್ನು ಇನ್ನೂ ದಟ್ಟವಾಗಿಸಿ, ಆ ಹಾಳೆಯನ್ನು ತಿಳಿಗುಲಾಬಿ ಬಣ್ಣದ ಹಾಳೆಯ ಕೆಳಗಿಟ್ಟು, ಡೊಂಕಾಗದಂತೆ ಅಕ್ಷರಗಳ ಸಾಲು ಬರೆದಿದ್ದೆ. ಖುಷಿಪಟ್ಟಿದ್ದೆ. ಒಂಭತ್ತನೆಯ ತರಗತಿಯಲ್ಲಿ ನಾನೇ ರಚಿಸಿದ ಕವನವೊಂದನ್ನೂ ಮಂದಾರದಲ್ಲಿ ಸೇರಿಸಿದ್ದರು ಕೂಡ. ಅತಿ ಸುಂದರವಾದ ಅಕ್ಷರಗಳ ಬರೆಯುವ ಕಿಶೋರ, ದಾಮೋದರ, ರವಿಶಂಕರ, ಬಷೀರ, ಪ್ರತಿಭಾ, ನಾಝನೀನ್ ಹೀಗೆ ಎಷ್ಟೆಲ್ಲ ವಿದ್ಯಾರ್ಥಿಗಳು ’ಮಂದಾರ’ದ ಮಂಡಲಿಯಲ್ಲಿದ್ದರು! ನನ್ನ ಕ್ಲಾಸಿನಲ್ಲಿದ್ದ ನಾರಯಣ ತಿಮ್ಮು ಗೌಡ (ಎನ್.ಟಿ ಎಂದೇ ಖ್ಯಾತನಾಗಿದ್ದ) ಮಂದಾರದ ಮುಖಪುಟಕ್ಕೆ ಫೊಟೊ ಇರಬಹುದಾ ?ಎನ್ನುವ ಸಂಶಯ ಹುಟ್ಟಿಸುವಷ್ಟು ಚಂದದ ಸೂರ್ಯಾಸ್ತದ ಚಿತ್ರ ಬಿಡಿಸಿ, ಅದರ ಮೇಲೆ ’ಮಂದಾರ’ ಎನ್ನುವುದನ್ನು ತ್ರೀಡಿಯಲ್ಲಿ ಬರೆದಿದ್ದ!

ಈಗ ಯೋಚಿಸಿದರೆ ಅನಿಸುತ್ತದೆ, ಹಲವು ವರ್ಷಗಳ ಕಾಲ ನಿರಂತರ ಅರಳಿದ ’ಮಂದಾರ’ ಅದೆಷ್ಟು ಚಂದನೆಯ ಕನಸಾಗಿತ್ತು!  ಹಳ್ಳಿ ಶಾಲೆಯ ಮಕ್ಕಳಲ್ಲಿ ಸುಪ್ತವಾಗಿರುವ ಚಿತ್ರಬಿಡಿಸುವುದೋ, ಕವನ ರಚಿಸುವುದೋ, ಕಥೆ ಹೆಣೆಯುವುದೋ ಇಂಥದ್ದೆಲ್ಲ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿತ್ತು ’ಮಂದಾರ’! ಅದರಲ್ಲಿ ಒಂದು ಲೇಖನವನ್ನು ಬರೆಯುವುದೋ, ಅಥವಾ ಚಿತ್ರವನ್ನು ಬಿಡಿಸುವುದೋ ಕುತೂಹಲವಿರುವ ಎಲ್ಲ ವಿದ್ಯಾರ್ಥಿಗಳ ಕನಸಾಗಿರುತ್ತಿತ್ತು. ಇಂಗ್ಲಿಷೆಂದರೆ ಕಬ್ಬಿಣದ ಕಡಲೆಯಾಗಿದ್ದ ಒಬ್ಬ ವಿದ್ಯಾರ್ಥಿಗೆ ಅಕ್ಷರ ಲೇಖನ ನೀರು ಕುಡಿದಷ್ಟೇ ಸಲೀಸು, ಚಕಚಕನೆ ಬರೆದುಬಿಡಬಲ್ಲ! ಗಣಿತವೆಂದರೆ ಆಗದ ಮತ್ತೊಬ್ಬನಿಗೆ ವ್ಯಕ್ತಿ ಚಿತ್ರ ಬಿಡಿಸುವುದೆಂದರೆ ಎಲ್ಲಿಲ್ಲದ ಉಮೇದು! ಕ್ರೀಡೆಯಲ್ಲಿ ಅಷ್ಟಾಗಿ ಪಾಲ್ಗೊಳ್ಳದ ನನಗೆ ಕವನ- ಕಥೆ ರಚಿಸುವುದೆಂದರೆ ಪ್ರೀತಿ! ಇಂಥವರೆಲ್ಲರ ಪ್ರತಿಭೆಗಳ ಸೇರಿಸಿ ಒಂದು ಮಂದಾರವ ಅರಳಿಸುತ್ತಿದ್ದರು, ಅದರ ಬಿಡುಗಡೆಯ ಸಮಾರಂಭವನ್ನು ಮಾಡುತ್ತಿದ್ದರು, ನನ್ನ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಉಭಯಕರ್ ಸರ್ ಮತ್ತು ಶಿಕ್ಷಕರ ವೃಂದ!

ಹೈಸ್ಕೂಲಿನ ನಂತರ ಎರಡ್ಮೂರು ಕಾಲೇಜಿನ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿದ್ದೆ. ಹಲವು ಲೇಖನಗಳನ್ನು ಅದರಲ್ಲಿ ಬರೆದಿದ್ದೆ. ಆದರೆ, ಅವು ಯಾವವೂ ’ಮಂದಾರ’ದಷ್ಟು ಆಪ್ತವೆನಿಸಲೇ ಇಲ್ಲ! ಮಂದಾರವೇಕೆ ಅಷ್ಟು ಆಪ್ತ? ಅದು ಬಾಲ್ಯದ ಕನಸಾಗಿದ್ದಕ್ಕೋ? ಅಥವಾ ಬಣ್ಣಬಣ್ಣವಾಗಿರುವುದಕ್ಕೋ? ಅಥವಾ ವಿದ್ಯಾರ್ಥಿಗಳ ಕೈಬರಹದಲ್ಲಿರುವುದಕ್ಕೋ? ಅಥವಾ ಇನ್ಯಾವುದೋ ಅವ್ಯಕ್ತ ಭಾವಕ್ಕೋ ನಾನು ಇನ್ನೂ ತಿಳಿಯೆ.

ಇಂತಹ ’ಮಂದಾರವನ್ನು ಒಂದು ಕನಸಾಗಿಸಿ, ನನಸಾಗಿಸಿ, ಅಚ್ಚಳಿಯದ ನೆನಪಾಗಿಸಿ, ನಮ್ಮ ಹೈಸ್ಕೂಲು ಜೀವನಕ್ಕೆ ಇನ್ನೊಂದಿಷ್ಟು ಬಣ್ಣಗಳ ಬಳಿದುಕೊಟ್ಟ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಗುರುಪ್ರಸಾದ ಪ್ರೌಢಶಾಲೆಗೆ ಎಂದೆಂದೂ ಋಣಿ!


ನೀಲಾಕಾಶವನ್ನು ಯಾವಾಗ ನಿರುಕಿಸಿದರೂ, ಕಳೆದ ತಿಂಗಳು ಹಿಮಾಚಲದ ಮಕ್ಕಳ ಕೆನ್ನೆಯ ರಂಗು ಕಂಡಾಗಲೂ ನನಗೆ ನೆನಪಾದದ್ದು ಮಂದಾರದ ಬಣ್ಣದ ಹಾಳೆಗಳೇ!
ಮಂದಾರದ ಹೂಗಳನ್ನು ಅದೆಲ್ಲಿ ನೋಡಿದರೂ ಸಾಕು ಶಾಲೆಯ ’ಮಂದಾರ’ ಹಸ್ತಪತ್ರಿಕೆ ನೆನಪಾಗಿ, ಮುಖದ ಮೇಲೊಂದು ಮುಗುಳುನಗೆ ಅಘನಾಶಿನಿ ನದಿಯಲ್ಲಿ ಹಾಯಿದೋಣಿ ಹಾದಂತೆ ಹಾಯುತ್ತದೆ.

No comments:

Post a Comment