ನನ್ನ ಮರೆತಿರುವ ಹುಡುಗಿಗೆ,
ಹೇಗಿದ್ದೀಯೇ ? ಅದ್ಯಾಕೋ ಗೊತ್ತಿಲ್ಲ ಹುಡುಗೀ ಮತ್ತೆ ಮತ್ತೆ ನಿನ್ನ ನೆನಪುಗಳು ಚಿಗುರುತ್ತಿವೆ, ಕಾಡುತ್ತಿವೆ . ಮೊನ್ನೆ ಊರಿಗೆ ಹೋಗಿದ್ದಾಗ ನಿನ್ನ ನೆನಪುಗಳು ಹಸಿ ಹಸಿಯಾಗಿ ಕಾಡಿ ಬಿಟ್ಟವು. ಹೇಮಂತದ ಕಾಡು ಹೂಗಳ ಕಂಪಿಗೆ ಮನಸು ನಿನ್ನನ್ನೇ ಅರಸಿತ್ತು . ನೀ ನನ್ನ ಬಿಟ್ಟು ಹೋದಮೇಲೆ ಊರಿನ ಕಡೆ ಸರಿಯಾಗಿ ಹೋಗೇ ಇಲ್ಲ ನೋಡು. ಅದೆತ್ತ ನೋಡಿದರೂ ಕಾಡುವ ನಿನ್ನದೇ ನೆನಪುಗಳು.
ಮನದಾಳದ ಗೋರಿಯಲಿ ಹುಗಿದಿಟ್ಟಿದ್ದ, ನಿನ್ನ ಜೊತೆ ಬೆಟ್ಟ ಗುಡ್ಡ ಅಲೆಯುವ, ಗುಡ್ಡದ೦ಚಿನ ಸೂರ್ಯಾಸ್ತ ನೋಡುವ, ಗಾಳಿಪಟ ಹಾರಿಸುವ, ಕಾಗದದ ದೋಣಿಯಲ್ಲಿ ನಿನ್ನ- ನನ್ನ ಹೆಸರು ಬರೆದು ತೇಲಿ ಬಿಡುವ, ನದಿಯ ದಡದಲ್ಲಿ ಜೊತೆಯಾಗಿ ಪಾದ ತೋಯಿಸಿಕೊಳ್ಳುವ ಕನಸುಗಳೆಲ್ಲ ಎದ್ದು, ಗೋರಿಯ ಮೇಲೆ ಬಂದು ಕೂತು ಬಿಟ್ಟಿದ್ದವು.ಇಂಚಿಂಚಾಗಿ ಕೊಲ್ಲುವ ನಿನ್ನ ಪ್ರೀತಿಯಷ್ಟೇ ತಾಕತ್ತು ನಿನ್ನ ನೆನಪುಗಳಿಗೂ ಇದೆ, ನಿನಗಾಗಿ ನಾನು ಹೆಣೆದ ಕನಸುಗಳಿಗೂ ಇದೆ ಹುಡುಗೀ.!
ಅದೆಷ್ಟೋ ರಾತ್ರಿಗಳು ಬಿಕ್ಕಳಿಸಿದ್ದೇನೆ ಆ ಚುಕ್ಕಿಗಳ ಜೊತೆಗೆ. .ಸಮಾಧಾನಿಸಲು ಬರುತ್ತಿದ್ದ ನಿನ್ನ ಚಿಗುರು ಬೆರಳುಗಳ ಕಾದು ಬೇಜಾರಾಗಿರಬೇಕು ಕಣ್ಣೀರಿಗೆ, ಇತ್ತೀಚಿಗೆ ಅದೂ ಕಾಣೆಯಾಗಿದೆ!
ನೋಡು ನಾನು ಕಡಲ ತಡಿಗೆ ಬಂದು ಕುಳಿತಿದ್ದೇನೆ. ಸಮುದ್ರದ ಅಲೆಗಳ ಮೊರೆತಕ್ಕೆ ನಿನ್ನದೇ ನೆನಪುಗಳ ಜಾತ್ರೆ. ಆ ಜಾತ್ರೆಯಲಿ ನಿನ್ನ ನಗು,ಮಾತು. ಅದೇ ನಿನ್ನ ನೆಚ್ಚಿನ ಸಮುದ್ರ. 'ಪ್ರೀತಿಯೆಂದರೆ ಸಮುದ್ರದಂತೆ' ಎಂದು ನೀನೇ ಹೋಲಿಕೆ ಕೊಡುತ್ತಿದ್ದ ಸಮುದ್ರ. ನೀನು ಅದೆಷ್ಟೋ ಗುಬ್ಬಚ್ಚಿ ಗೂಡುಗಳ ಕಟ್ಟಿದ್ದ, ಹಸಿಮರಳ ದಂಡೆಯ ಸಮುದ್ರ. ನಮ್ಮ ಅದೆಷ್ಟೋ ಜಗಳಗಳ ಕೇಳಿಸಿಕೊಂಡು ಭೋರ್ಗರೆಯುತ್ತಿರುವ ಸಮುದ್ರ. ನಿನ್ನ ಕೊನೆಯ ಸಲ ಭೇಟಿಯಾದ ಸಮುದ್ರ. !
ಇದೇ ಕಡಲ ತಡಿಯಲ್ಲಿ ಅಲ್ಲವೇನೆ? ನಿನ್ನ ಜೊತೆ ಲೆಕ್ಕವಿಲ್ಲದಷ್ಟು ದೂರ ನಡೆದದ್ದು. ?"ಇನ್ನು ಒಂದೇ ಒಂದು ಚೂರು ಕಣೋ ಪ್ಲೀಸ್, ಆ ತೆಂಗಿನ ಮರದವರೆಗೆ" ಎಂದು ನನ್ನ ಕಿಲೋಮೀಟರ್ಗಳಷ್ಟು ದೂರ ನೀನು ನಡೆಸುತ್ತಿದ್ದದ್ದು.
ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರೂ ನಮ್ಮ ಸ್ನೇಹ ಪಕ್ವಗೊಂಡದ್ದು ಕಡಲ ತಡಿಯ ಊರಿನಲ್ಲೇ. social network ನಿಂದಾಗಿ ಸಿಕ್ಕಿದ್ದ ಶಾಲಾ ದಿನಗಳ ಸ್ನೇಹಿತರಲ್ಲಿ ನೀನೂ ಒಬ್ಬಳು. ಅದರಲ್ಲೂ ನೀನು 'ಕಡಲ ತಡಿಯ' ಊರಿನಲ್ಲೇ ಇರುವುದೆಂದು ತಿಳಿದಾಗ ಖುಷಿಯಾಗಿತ್ತು. ಮೊದಲ ಭೇಟಿಯಲ್ಲಿಯೇ ಅನಿಸಿತ್ತು, ಶಾಲಾ ದಿನಗಳ ವಾಚಾಳಿ ಹುಡುಗಿ ಇನ್ನೂ ಬದಲಾಗಿಲ್ಲ ಎನ್ನುವುದು!
ವಾರಾಂತ್ಯದ ಕಡಲ ಕಿನಾರೆಯಲ್ಲಿಯ ನಿನ್ನ ಭೆಟ್ಟಿ ಮುಂದಿನ ವಾರಕ್ಕಾಗುವಷ್ಟು ಹುರುಪನ್ನು ತಂದುಕೊಡುತ್ತಿತ್ತು. ಹೆಚ್ಚಾಗಿ ಮೌನಿಯಾಗಿರುತ್ತಿದ್ದ ನನಗೆ ಮಾತಾಡಲು ಕಲಿಸಿದವಳು ನೀನೇ ಎಂದರೆ ತಪ್ಪಾಗಲಿಕ್ಕಿಲ್ಲ. ನೀ ಕೇಳಿದ್ದಕ್ಕೆಲ್ಲ "ಹ್ಞೂ ಹಾಂ" ಅನ್ನುತ್ತಿದ್ದ ನಾನು. ಒಂದು ವರ್ಷದಲ್ಲಿ 'ನಾನೇ ಸುದ್ದಿ ಹೇಳುವಷ್ಟು', ನಿನ್ನ ಕಾಡುವಷ್ಟು ಮಟ್ಟಕ್ಕೆ ಮಾತು ಕಲಿತಿದ್ದೆ. ಆದರೂ ನನ್ನ ಮನದಾಳದ ಭಾವನೆಗಳಿಗೆ ಮಾತಿನ ರೂಪ ಕೊಡಲಾಗಲೇ ಇಲ್ಲ.
ನೀನು ಆಡುತ್ತಿದ್ದ ಸುಳ್ಳು ಸುಳ್ಳೇ ಜಗಳಗಳು, ನಿನ್ನ ಜೊತೆ ಗುಬ್ಬಚ್ಚಿ ಗೂಡು ಕಟ್ಟಿದ್ದು, ಕಿತ್ತಾಡಿ ಐಸ್ ಕ್ರೀಂ ತಿಂದಿದ್ದು. ಜಗಳವಾದಾಗ ಸಿಟ್ಟಿನಲ್ಲಿ ಅದೆಷ್ಟು ಸಲ ನಿನ್ನ ಫೋನ್ ನಂಬರ್ ಡಿಲೀಟ್ ಮಾಡಿದ್ದೇನೋ. ಆದರೆ ನಿದ್ದೆಯಲಿ ಕೇಳಿದರೂ ನಿನ್ನ ನಂಬರ್ ಒಂದೇ ಉಸುರಿನಲ್ಲಿ ಹೇಳಿ ಬಿಡುತ್ತಿದ್ದೆ. ಒಮ್ಮೆ "ನಿನ್ನೆ ನಿನ್ number delete ಮಾಡಿದ್ದೆ" ಎಂದು ನಾನು ಅಂದಾಗ, "full matured ಅಂತ ದೊಡ್ ಪೋಸ್ ಕೊಡೋದಷ್ಟೇ still you are a kid " ಎಂದು ನೀನು ನಗುತ್ತಿದ್ದರೆ. ನಿನ್ನ ಚಚ್ಚಿ ಬಿಡುವಷ್ಟು ಕೋಪ ನನ್ನಲ್ಲಿ.!
ನೆನಪಿದ್ಯೇನೆ? ಒಮ್ಮೆ ರಾತ್ರೆ ಎರಡು ಗಂಟೆಗೆ ಫೋನ್ ಮಾಡಿ "ಒಂದು doubt ಕಣೋ, ಮೊನ್ನೆಯಿಂದಾ ಕಾಡ್ತಾ ಇದೆ" ಎಂದು ಬೇಜಾರಿನ ಧ್ವನಿಯಲ್ಲಿ ಕೇಳಿದಾಗ ನಾನು ಕಂಗಾಲಾಗಿದ್ದೆ. "ಹೇಳು" ಅಂದಿದ್ದಕ್ಕೆ ಅದೆಷ್ಟು 'ನಕ್ರಾ ' ನಿನ್ನದು?!.ಕೊನೆಗೆ ಕಾಡಿ ಬೇಡಿದಾಗ ನೀ ಕೇಳಿದ್ದಾದರೂ ಏನು ? "Melody chocolaty क्यों है ? !ತಲೆ ಚಚ್ಚಿಕೊಂಡಿದ್ದೆ.ನಿದ್ದೆಯ ಮಂಪರಿನಲ್ಲೂ ನಕ್ಕಿದ್ದೆ. !
ಮನದ ಮೂಲೆಯಲ್ಲೆಲ್ಲೋ ನಿನ್ನ ಬಗೆಗೆಲ್ಲೋ ಒಂದು ಬಗೆಯ ವಿಶೇಷ ಭಾವನೆ ಮೊದಲಿನಿದ ಇತ್ತಾದರೂ
ಮನದ ಮೂಲೆಯಲ್ಲೆಲ್ಲೋ ನಿನ್ನ ಬಗೆಗೆಲ್ಲೋ ಒಂದು ಬಗೆಯ ವಿಶೇಷ ಭಾವನೆ ಮೊದಲಿನಿದ ಇತ್ತಾದರೂ
ಅದು ಪ್ರೀತಿಯಾಗಿ ಬದಲಾಗದ್ದು ಯಾವಾಗ? ಅದೆಷ್ಟೋ ಬಾರಿ ಯೋಚಿಸಿದ್ದಿದ್ದೆ ನಾನು.
face book ನಲ್ಲಿ ನಿನ್ನ photoಗಳಿಗೆ ಹುಡುಗರು ಕಾಮೆಂಟ್ಸ್ ಹಾಕಿದಾಗೆಲ್ಲ ಅದೇನೋ ಒಂದು ಬಗೆಯ ಭಾವನೆ. ನಿನ್ನ ಬದುಕಿನಲ್ಲಿ 'ಸಂಭ್ರಮ'ನ ಆಗಮನ ಆದ ಮೇಲಂತೂ ಸುಖಾ ಸುಮ್ಮನೆ ಜಗಳ ಕರೆದು, ನಿನ್ನ ಗಮನವನ್ನೆಲ್ಲ ನನ್ನೆಡೆಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡಿದ್ದೆ. ಇದೆಲ್ಲ ನಿನಗೆ ಅರ್ಥವಾಗಲೇ ಇಲ್ಲವೇನೇ? ಅಥವಾ ಅರ್ಥವಾದರೂ ಸುಮ್ಮನಿದ್ದೆಯಾ? ನನ್ನ ಕಣ್ಣಿನಲ್ಲಿ ನಿನ್ನೆಡೆಗಿದ್ದ ಪ್ರೀತಿ ಅರ್ಥವಾಗಲೇ ಇಲ್ಲ ನಿನಗೆ.
face book ನಲ್ಲಿ ನಿನ್ನ photoಗಳಿಗೆ ಹುಡುಗರು ಕಾಮೆಂಟ್ಸ್ ಹಾಕಿದಾಗೆಲ್ಲ ಅದೇನೋ ಒಂದು ಬಗೆಯ ಭಾವನೆ. ನಿನ್ನ ಬದುಕಿನಲ್ಲಿ 'ಸಂಭ್ರಮ'ನ ಆಗಮನ ಆದ ಮೇಲಂತೂ ಸುಖಾ ಸುಮ್ಮನೆ ಜಗಳ ಕರೆದು, ನಿನ್ನ ಗಮನವನ್ನೆಲ್ಲ ನನ್ನೆಡೆಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡಿದ್ದೆ. ಇದೆಲ್ಲ ನಿನಗೆ ಅರ್ಥವಾಗಲೇ ಇಲ್ಲವೇನೇ? ಅಥವಾ ಅರ್ಥವಾದರೂ ಸುಮ್ಮನಿದ್ದೆಯಾ? ನನ್ನ ಕಣ್ಣಿನಲ್ಲಿ ನಿನ್ನೆಡೆಗಿದ್ದ ಪ್ರೀತಿ ಅರ್ಥವಾಗಲೇ ಇಲ್ಲ ನಿನಗೆ.
ಪಕ್ಕಾ ಅಂತರ್ಮುಖಿ, ಮನದ ಭಾವಗಳಿಗೆ 'ಮಾತಿನ ರೂಪ' ಕೊಡಲು ಒದ್ದಾಡುವ ಹುಡುಗ ನಾನು. ನಿನಗೆ ನನ್ನ ಪ್ರೀತಿಯ ಹೇಳುವ ಮೊದಲೇ, ನೀನು 'ಸಂಭ್ರಮ'ನ ತೆಕ್ಕೆಗೆ ಜಾರಿಯಾಗಿತ್ತು. ಒಂದು ತಿಂಗಳು ನಾನು ನಾನಾಗಿರಲಿಲ್ಲ. ಹಂತ ಹಂತವಾಗಿ ನಿನ್ನೊಡನೆ ಮಾತು-ಕಥೆಗಳ ನಿಲ್ಲಿಸಿದ್ದೆ.
ಮದುವೆಯ ಕರೆಯೋಲೆಯ ತೋರಿಸಬೇಕು ಬಾ ಎಂದು ಮತ್ತೆ ಇದೇ ಸಮುದ್ರದಂಚಿಗೆ ನೀ ನನ್ನ ಕರೆದದ್ದು. ಅದೆಷ್ಟೇ ಪ್ರಯತ್ನಿಸಿದ್ದರೂ ಸಾಮಾನ್ಯವಾಗಿ ಇರಲು ಸಾಧ್ಯವಾಗಿರಲಿಲ್ಲ.
ಆ ದಿನ ಬಸ್ಸಿನಲ್ಲಿ ಹೊರಟಿದ್ದಾಗ ಅದ್ಯಾಕೆ ನನ್ನ ಭುಜಕ್ಕೆ ನಿನ್ನ ತಲೆಯಿಟ್ಟೆ ಹೇಳು? ಮಗುವಿನಂತೆ ಮಲಗಿದ್ದ ನಿನ್ನ ಮುಖವನ್ನು ಒರೆ ಕಣ್ಣಿನಲ್ಲಿ ನೋಡಿ
ನೋಡು ಎಲ್ಲ ಮೊನ್ನೆ ಮೊನ್ನೆ ನಡೆದಂತಿದೆ ಅಲ್ವಾ ? ದಡಕೆ ಅಪ್ಪಳಿಸಿ ಓಡುವ ಹೊಸ ಹೊಸ ಅಲೆಗಳು. ನನ್ನ ಮನದಲ್ಲಿ ನಿನ್ನದೇ ನೆನಪಿನ ಅಲೆಗಳು . ಹಳೆಯ ನೆನಪುಗಳ ದರ್ಬಾರಿಗೆ ಮನಸ್ಸು ಗುಜರಿ ಅಂಗಡಿ ಆದಂತಿದೆ. ಕಡಲ ತಡಿಗೆ ಬಂದು ನಿಂತಾಗ ಉಕ್ಕಿದ ಹಸಿ ಹಸಿ ನೆನಪುಗಳು ಇವು. ಅದೇ ದಡ, ಅಪ್ಪಳಿಸುವ ಹೊಸ ಹೊಸ ಅಲೆಗಳು, ಕೈ ಹಿಡಿದು ಅಡ್ಡಾಡುವ ಜೋಡಿಗಳು. ಪಶ್ಚಿಮಕೆ ಸೂರ್ಯ ಇಳಿದಾಗಿದೆ. ನನ್ನ ನೆರಳು ಮಸುಕಾಗುತಿದೆ. ಆದರೆ ನಿನ್ನ ನೆನಪು ... ??? ಅದೂ ಸಮುದ್ರದಂತೆ ......
ಇತಿ
ನಿನ್ನ ಮರೆಯಲಾಗದವ
ಕೂತು ಬರೆದ ಹಾಳೆಯನು ಹರಿದು ಸಮುದ್ರಕ್ಕೆಸೆದು,ಹುಡುಗ ನಡೆಯುತ್ತಿದ್ದ. ಅಲೆಗಳು ಮುಟ್ಟಾಟವ ಆಡುತ್ತ ಕಾಗದದ ಚೂರುಗಳನ್ನು ಮರುಘಳಿಗೆಯೇ ದಡಕ್ಕೆ ತಂದು ಹಾಕುತ್ತಿದ್ದವು ..!