'ನಿಮ್ಮ ಬ್ಲಾಗನ್ನು ಪ್ರತಿದಿನವೂ ತೆಗೆದು ನೋಡುತ್ತೇನೆ' 'ಹೊಸ ಲೇಖನವನ್ನು ಪೋಸ್ಟ್ ಮಾಡಿದ ದಿನ ದಯವಿಟ್ಟು ಒಂದು message ಹಾಕಿ' 'ತುಂಬಾ ಸುಂದರವಾದ blog' 'ನೀವು ಪತ್ರಿಕೆಯಲ್ಲಿ ಬರೆಯುತ್ತೀರಾ?' 'ಪ್ರೀತಿಸಿದವರೆಲ್ಲ ಸಿಗಲೇಬೇಕೆ೦ದೇನಿಲ್ಲ ಓದುವಾಗ ಕಣ್ಣು ತುಂಬಿ ಬಂತು' 'ಹೊಸ ಲೇಖನನವುನ್ನು ಅದೇಕೆ ಅಷ್ಟು ಬೇಗ ಮುಗಿಸಿಬಿಟ್ಟಿರಿ ?' ಹೀಗೆ ಸಾಗುತ್ತದೆ ನನ್ನ facebook inbox ನಲ್ಲಿಯ ಮೆಸೇಜುಗಳು. ಖುಷಿಯೂ ಆಗುತ್ತದೆ, ಅಂತಹವುಗಳನ್ನು ಓದುವಾಗ. ಹೊಗಳಿಕೆಗೆ ಖುಷಿಯಾಗುವುದು ಸಾಮಾನ್ಯ ಮನುಷ್ಯರ ಲಕ್ಷಣಗಳಲ್ಲಿ ಒಂದು. ಅಲ್ವಾ? ಇದೆಲ್ಲ ಯಾಕೆ ಹೇಳ್ತಾ ಇದೇನೆ ಅಂದ್ರೆ ನನ್ನ blog ಶುರು ಮಾಡಿ ಇವತ್ತಿಗೆ ಒಂದು ವರ್ಷ ಆತು ನೋಡ್ರಿ.!
ತುಂಬಾ ಜನರು ಕೇಳುತ್ತಿದ್ದರು ಸ್ಪೂರ್ತಿ ಯಾರು? ಬರೆಯಲು ಶುರು ಮಾಡಿದ್ದು ಯಾವಾಗ? ಬಹಳ ಓದುತ್ತೀರಾ? 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು' ಎಂಬ ಹೆಸರು ಯಾಕೆ? ಅವರೆಲ್ಲರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ.
ಒಂದಿಷ್ಟು ವರ್ಷಗಳ ಹಿಂದೆ ಪುಟ್ಟದಾದ ಎರಡು ಜುಟ್ಟು ಕಟ್ಟಿಕೊಂಡು ಆಗಸವ, ತಾರೆಗಳ, ಮೋಡಗಳ ಚಿತ್ತಾರವ ಕುತೂಹಲದ ಕನ್ನಡಕದೊಳಗಿನಿಂದ ನೋಡುತ್ತಿದ್ದ ಹುಡುಗಿ ನಾನಾಗಿದ್ದೆ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಬಾನ ಬೆಳ್ಳಿ ಮೋಡಗಳು ಕೆಂಪು ಕೆಂಪಾದಾಗ ಸಂಸ್ಕೃತ ಹಾಗೂ ಕನ್ನಡ ಕಲಿಸುವ ನನ್ನ 'ಆಯಿ'( ಅಮ್ಮ) "ಪುಟ್ಟಿ ಗಪ್ಪತಿ ಚಾಮಿ ಬಣ್ಣ ಚೆಲ್ಲಿದ್ದ ನೋಡು, ಬಕೆಟ್ ತಗಂಡು ಬಣ್ಣ ತೋಕಿಕಿದ ಆಕಾಶಕ್ಕೆ..! " ಎಂದು ತೋರಿಸಿದಾಗ. ಅದೇನೋ ಸುಳ್ಳು ಸುಳ್ಳೇ ಪದ್ಯಗಳನ್ನು ಹಾಡುತ್ತಿದ್ದೆನಂತೆ ನಾನು ...!
ನನ್ನೊಳಗೆ ಪ್ರಕೃತಿ ಪ್ರೇಮವನ್ನು ಹುಟ್ಟು ಹಾಕಿದವಳು ಹೂವಿನ ಗಿಡಗಳನ್ನು ಅತಿಯಾಗಿ ಪ್ರೀತಿಸುವ ನನ್ನ ಆಯಿ. ಸಾಹಿತ್ಯ ಸ್ಪೂರ್ತಿಯೂ ಅವಳೇ. ನಾಲ್ಕರ ಹರೆಯದಲ್ಲೇ ಸರಾಗವಾಗಿ ಕನ್ನಡವನ್ನು ಓದಿ-ಬರೆದು ಮಾಡುತ್ತಿದ್ದ ನನಗೆ ಪುಸ್ತಕದ ಗೀಳು ಹತ್ತಿಸಿದ್ದವಳೂ ಅವಳೇ. ಮೂರನೇ ತರಗತಿಯಲ್ಲಿ ಇರುವಾಗಲೇ ಅಮ್ಮನ ಬಳಿಯಿದ್ದ 8,9,10 ನೇ ತರಗತಿಗಳ ಕನ್ನಡ ಪುಸ್ತಕಗಳನ್ನು ಓದಿ ಮುಗಿಸಿದ್ದೆ. 'ಜನನಿ ತಾನೇ ಮೊದಲ ಗುರುವು' ನನ್ನ ಪಾಲಿಗೆ ಎಲ್ಲ ರೀತಿಯಲ್ಲೂ ಸತ್ಯ. ಹೌದು! ನಾನು ನನ್ನ ಆಯಿಯ ವಿದ್ಯಾರ್ಥಿನಿ. ಹೈಸ್ಕೂಲಿನ ದಿನಗಳಲ್ಲಿ ನನ್ನ ಆಯಿಯ ಸಂಸ್ಕೃತ,ಕನ್ನಡ ಪಾಠಗಳನ್ನು ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳಿದ್ದೇನೆ. (ಬಹಳ ಉದ್ದಕಿದ್ದೆ ಅದಕ್ಕೆ ಹಿಂದಿನ ಬೆಂಚು). ಅವರು ಕಲಿಸಿದ ಪ್ರತಿಯೊಂದು ಪಾಠವೂ ನೆನಪಿದೆ. ಅವರು ಬೂಟ್ ಪಾಲಿಶ್,ನ್ಯಾಯದ ಬಾಗಿಲಲ್ಲಿ, ಪಾಠಗಳನ್ನು ಕಲಿಸುವಾಗ ಇತರ ವಿದ್ಯಾರ್ಥಿಗಳ ಜೊತೆಗೆ ನನ್ನ ಕಣ್ಣ೦ಚು ಒದ್ದೆಯಾಗಿತ್ತು. ನಾಣಿ, ಕೊಡೆಯ ವಿಚಾರ, ಕಲಿಸುವಾಗ ನಕ್ಕು ನಕ್ಕು ಸುಸ್ತಾಗಿದ್ದೆ. ನಾನು ಬಹುವಾಗಿ ಮೆಚ್ಚುವ ಶಿಕ್ಷಕರಲ್ಲಿ ನನ್ನ ಆಯಿಯೂ ಒಬ್ಬಳು.ಅವಳೊಬ್ಬ ಅಪರೂಪದ ಶಿಕ್ಷಕಿ.!
ಒಂದನೇ ತರಗತಿಗೆ ಹೋಗುವಾಗಿನಿದ ನನ್ನ ಮೆಚ್ಚಿನ ಪಾಕ್ಷಿಕ, ಚಿಣ್ಣರ ಪತ್ರಿಕೆ 'ಬಾಲಮಂಗಳ'ವನ್ನು ಓದುತ್ತಿದ್ದೆ. ಡಿಂಗ, ಲಂಬೋದರ, ಇಲಿ ಮತ್ತು ಬೆಕ್ಕು, ಫಕ್ರು, ನನ್ನ ಗೆಳೆಯರಾಗಿದ್ದರು.ನನ್ನ imagination power ಜಾಸ್ತಿಯಾದದ್ದು, ಬಾಲಮಂಗಳ ಕಾರ್ಟೂನುಗಳನ್ನು, ಕಥೆಗಳನ್ನು ಅದರಲ್ಲಿಯ ಪಾತ್ರವಾಗಿ ಓದುತ್ತಿದ್ದೆನಲ್ಲ ಅದರಿಂದ ! ತನ್ನ ತೊದಲು ನುಡಿಯಲ್ಲಿ "ಅಕ್ಕಾ ....ಬಾಲಮಂಗಲ ಬಂತು ದಿಂಗ ಓದೇ.......ದೊದ್ದಕೆ ಓದೇ.." ಎಂದು ಅರಚುತ್ತಲೇ ನನ್ನ ಪಕ್ಕ ಬಂದು ಕೂರುತ್ತಿದ್ದ ನನ್ನ ತಮ್ಮನಿಗೆ, ದೊಡ್ಡದಾಗಿ ಧ್ವನಿಯ ಏರಿಳಿತದ ಜೊತೆಗೆ ಡಿಂಗ,ಶಕ್ತಿಮದ್ದು ಓದಿ ಹೇಳುತ್ತಿದ್ದೆ. 'ಪುಟ್ಟು ಪಟಾಕಿ', ಚಿತ್ರಬರಹ, ಪದಬಂಧಗಳಲ್ಲಿ ಬಹುಮಾನ ಬಂದಾಗ ಕುಣಿದಾಡಿದ್ದೆ ಹಾರಡಿದ್ದೆ, ಥೇಟ್ ನಮ್ಮನೆಯ ಎದುರಿನ ಗಿಡದಲ್ಲಿ ಬರುವ ಉದ್ದನೆಯ ಬಿಳಿಯ ಬಾಲದ ಹಕ್ಕಿ ಮರಿಯಂತೆ...!ನನ್ನ ಬಳಿ ಹದಿನೈದು ವರುಷಗಳ ಬಾಲಮಂಗಳದ ಬೃಹತ್ ಸಂಗ್ರಹವಿದೆ. 'ಪಪ್ಪ' ಅದನ್ನು ರದ್ದಿಯವನಿಗೆ ಕೊಡುತ್ತೇನೆ ಎಂದರೆ ಸಾಕು,ಈಗಲೂ ನನ್ನ ಕಣ್ಣಲ್ಲಿ ಜೋಗ ಜಿನುಗುತ್ತದೆ. ಈಗಲೂ ಅಪರೂಪಕ್ಕೆ ಅದನ್ನು ಕೊಂಡು ಓದುತ್ತೇನೆ. ಒಂದು ಬಗೆಯ ಆತ್ಮೀಯ ಸಂಬಂಧವದು.!
ಇನ್ನೂ ಸರಿಯಾಗಿ ನೆನಪಿದೆ ನನಗೆ, ಏಳನೇ ತರಗತಿಯ ಅಕ್ಟೋಬರ್ ರಜೆಯದು. ಅಚಾನಕ್ ಆಗಿ ನನ್ನ ಕೈಗೆ ಹಳೆಯ ಸಿಲೆಬಸ್ಸಿನ ಹತ್ತನೇ ತರಗತಿಯ ಕನ್ನಡ-೨ ಪುಸ್ತಕ ಸಿಕ್ಕಿತ್ತು. 'ಗಿರಿ-ಶಿಖರ, ವಿಜ್ಞಾನ-ಶಿಖರ, ಹಾಗೂ ಆಧ್ಯಾತ್ಮ-ಶಿಖರಗಳೆಂದು ತೇನಸಿಂಗ,ಜಗದೀಶಚಂದ್ರ ಬೋಸ್ ಹಾಗೂ ಅರವಿಂದ್ ಘೋಷ್ ಈ ಮೂವರ Biography ಆಗಿತ್ತದು. ಒಂದೇ ದಿನದಲ್ಲಿ ಓದಿ ಮುಗಿಸಿದ್ದೆ. ನನ್ನ ಪುಸ್ತಕ ಸಂಗ್ರಹದಲ್ಲಿ ಇರುವ ಅತ್ಯಮೂಲ್ಯ ಪುಸ್ತಕಗಳಲ್ಲಿ ಅದೂ ಒಂದು.ವರ್ಷಕ್ಕೆ ಒಮ್ಮೆಯಾದರೂ ಅದನ್ನು ಓದುತ್ತೇನೆ, ಅದೇ ಹಳೆಯ ಕುತೂಹಲದಿಂದ,ಪ್ರೀತಿಯಿಂದ..!ವೀನ್-ಡುಪ್ಲಾ ಜೋಡಿ ಹಿಮದಲ್ಲಿ ಕಳೆದು ಹೋಗುವಾಗ ಕಂಗಳು ಈಗಲೂ ಹನಿಗೂಡುತ್ತವೆ. ಅರವಿಂದರು ಧ್ಯಾನದಲ್ಲಿರುವಾಗ ನೆಲವ ಬಿಟ್ಟು ಒಂದು ಅಡಿ ಮೇಲೆ ಏಳುವುದನ್ನು ಓದುವಾಗ ಇನ್ನೂ ಮೈ ರೋಮಾಂಚನವಾಗುತ್ತದೆ. ಇಡೀ ಜೀವನಕ್ಕೆ ಸಾಕಾಗುವಷ್ಟು ಜೀವನ ಪ್ರೀತಿಯನ್ನು ತುಂಬಿಕೊಡುವ ತಾಕತ್ತು ಆ ಒಂದು ಪುಸ್ತಕಕ್ಕಿದೆ.!
ನನ್ನ ಹದಿಮೂರನೆಯ ವಯಸ್ಸಿನಲ್ಲಿ ಚುಟುಕಗಳನ್ನು ಬರೆಯಲು ಆರಂಭಿಸಿದ್ದು. ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಚುಟುಕಗಳ ಪ್ರೇರಣೆಯಿಂದ. ಆಯಿಯ ಪ್ರೋತ್ಸಾಹದಿಂದ.ಆಗ ನನ್ನ ಅಂತ್ಯ ಪ್ರಾಸಗಳ ಜೋಡಣೆ ಹೀಗಿತ್ತು ನೋಡಿ :
ನಮ್ಮೂರ ರಸ್ತೇಲಿ ನೂರಾರು ಹೊಂಡ
ಬೀಳುವರು ಜನ ಕುಡಿಯದಿದ್ದರೂ ಹೆಂಡ
ಇಲ್ಲಿ ವಾಹನವನೋಡಿಸುವುದೊಂದು ಮೋಜು
ಒಮ್ಮೆ ಬಿದ್ದರೆ ಮಾತ್ರ ಗತಿ ಗ್ಯಾರೇಜು..!
ಒಮ್ಮೆ ಬಂದಿದ್ದರೆ ಗಾಂಧೀಜಿ ಈಗ
ಏರುತ್ತಿತ್ತು ಅವರ ಹೃದಯ ಬಡಿತದ ವೇಗ
ಭಾರತದ ಇಂದಿನ ಸ್ಥಿತಿಯನ್ನು ಕಂಡು
ಹೊಡೆದುಕೊಳ್ಳುತ್ತಿದ್ದರು ಅವರೇ ತಲೆಗೆ ಗುಂಡು..!
ಕಂಡ ವಿಷಯಗಳ ಕುರಿತೆಲ್ಲ ನಾಲ್ಕು ಸಾಲುಗಳ ಪ್ರಾಸ ಪದಗಳನ್ನು ಜೋಡಿಸುತ್ತಿದ್ದೆ. ನಂತರ ನಾನು ವಿಜ್ಞಾನ-ತಂತ್ರಜ್ಞಾನಗಳ ವಿದ್ಯಾರ್ಥಿನಿ. ಸಾಹಿತ್ಯ-ವಿಜ್ಞಾನ ಎರಡರಲ್ಲೂ ಸಮಾನ ಆಸಕ್ತಿಯಿದೆ. ನಂತರ ಚುಕ್ಕಿ-ತಾರೆ,ಚಂದ್ರಮರ ಕುರಿತು ಕವನಗಳು, ಕಾಲೇಜಿನಲ್ಲಿ ಆಶು ಕವನ ಸ್ಪರ್ಧೆಯಲ್ಲಿ ಕವನಗಳನ್ನು ರಚಿಸುತ್ತಿದ್ದೆ. ಕುಮಟಾದಿಂದ ಮಂಗಳೂರಿಗೆ ಪಯಣಿಸುವಾಗ ಬೇಸರ ಕಳೆಯಲು ಒಂದಿಷ್ಟು ಸಾಲುಗಳನ್ನು ಗೀಚುತ್ತಿದ್ದೆ.
ಜಯಂತ್ ಕಾಯ್ಕಿಣಿಯವರ ತೂಫಾನ್ ಮೇಲ್, ಬೊಗಸೆಯಲ್ಲಿಮಳೆಹನಿ, ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸು, ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಇವುಗಳನ್ನು ಬಿಟ್ಟರೆ ಪುಸ್ತಕಗಳನ್ನು ಓದಿದ್ದು ಕಡಿಮೆ. ಆದರೆ ಪತ್ರಿಕೆಗಳನ್ನು ಓದುವ ಗೀಳು ಮೊದಲಿನಿಂದಲೂ ಇದೆ. ಸುಧಾ ತರಂಗಗಳಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬಿಟ್ಟರೆ ಇನ್ನೂ ಯಾವ ಕನ್ನಡ ಕಾದಂಬರಿಯನ್ನೂ ಓದಿಲ್ಲ.
orkut ಸೇರಿದಮೇಲೆ 'ರಾಕೇಶ್ ಹೆಗಡೆ' ಒಡೆತನದ 'ಕವನ ಪ್ರಪಂಚ' ಎಂಬ ಕಮ್ಯೂನಿಟಿಯಲ್ಲಿ ಬರೆದ ಕವನಗಳನ್ನು ಹಾಕುತ್ತಿದ್ದೆ.ಬಹಳ ಜನ blog ಶುರು ಮಾಡು ಎಂದರೂ, ತಲೆ ಕೆಡಿಸಿಕೊಂಡಿರಲಿಲ್ಲ.orkut ನಲ್ಲಿ ಪರಿಚಯವಾದ 'ಮನಸಿನ ಮಾತುಗಳು' blog ಒಡತಿ 'ದಿವ್ಯಾ ಹೆಗಡೆ' ನೀನೇಕೆ blog ಶುರು ಮಾಡಬಾರದು? ಎಂದು ಕೇಳಿದಾಗ,ಹೌದೆನಿಸಿತು. ಗೆಳೆಯನೊಬ್ಬ blog ಲೋಕಕ್ಕೆ ಪರಿಚಯಿಸಿದ. ಅವರಿಬ್ಬರಿಗೂ ಮನಃ ಪೂರ್ವಕವಾದ ಧನ್ಯವಾದಗಳು. ಇಲ್ಲಿ ನೋಡಿದರೆ ಅಬ್ಬಬ್ಬಾ .!!! ಎನಿಸುವಷ್ಟು ಕನ್ನಡ ಬ್ಲಾಗುಗಳು..! ಒಂದಕ್ಕಿಂತ ಒಂದು ಸುಂದರ .ಕತ್ತಲೆಯಲ್ಲಿ ಕಣ್ಣು ಬಿಟ್ಟ ಅನುಭವ. ನಿಧಾನಕ್ಕೆ ಅರಿತುಕೊಂಡೆ blog ಲೋಕದ 'ಅ ಆ ಇ ಈ'ಗಳನ್ನು.'ಇಲ್ಲೇ ಮಳೆಯಾಗಿದೆ ಇಂದು' ಎಂಬ ಒಂದು ಲೇಖನವನ್ನು ನನ್ನ ಬ್ಲಾಗಿನ ಮೊದಲ ಪೋಸ್ಟ್ ಮಾಡುತ್ತಿದ್ದೆ ಕಳೆದ ಡಿಸೆಂಬರಿನ ಇದೇ ದಿನ...!
ಪುಟ್ಟ ಪುಟ್ಟ ಕವನಗಳನ್ನು ಬರೆಯುತ್ತಿದ್ದ 'ಪುಟ್ಟಿ' ಲೇಖನಗಳನ್ನು ಬರೆಯಲು ಕಲಿತಿದ್ದು ಬ್ಲಾಗಿನಿಂದಲೇ.! ಬರಹಗಳಿಗೆ ಸಿಕ್ಕ ಅದ್ಭುತ ಎನ್ನುವ ಪ್ರತಿಕ್ರಿಯೆ ನನ್ನನ್ನು ಬರೆಯಲು ಪ್ರಚೋದಿಸಿತು. ಸುಮಕ್ಕ,ತೇಜಕ್ಕ ,ಅಜಾದ್ ಸರ್,ದಿನಕರ್ ಸರ್, ಸುಮನಕ್ಕ, ದಿವ್ಯಾ,ಪ್ರಕಾಶಣ್ಣ,ವಾಣಿ,ಶರತ್,ವನಿತಕ್ಕ,ಸೀತಾರಾಮ್ ಸರ್,ತರುಣ್,ಪ್ರವೀಣ್,ದಿಲೀಪ್,ಪ್ರಗತಿ,ಶ್ರೀ ಇನ್ನೂ ಹಲವಾರು ಜನ ನನ್ನ ತಿದ್ದಿದರು, ಪ್ರೋತ್ಸಾಹಿಸಿದರು.ಅವರಿಗೆಲ್ಲ ನನ್ನ ಮನಃ ಪೂರ್ವಕ ಕೃತಜ್ಞತೆಗಳು. ೫-೬ ಕಥೆಗಳು,ಚಿತ್ರಬರೆಹಗಳು,ಸಾಲುಗಳು,ಕವನಗಳು,ಲೇಖನಗಳು,ಹನಿಗಳು,ಪತ್ರ ಬರೆಹ,ವ್ಯಕ್ತಿಪರಿಚಯ,ಲಹರಿ,ಕಥನ ಕವನ ಹೀಗೆ ಸಾಗುತ್ತದೆ ನನ್ನ ಬ್ಲಾಗು.
ಹುಡುಗಿಯರ ಜೊತೆ ಅಡುಗೆಯಾಟ ಹಾಗೆ ಹುಡುಗರ ಜೊತೆ ಕ್ರಿಕೆಟ್ ಎರಡನ್ನೂ ಆಡುತ್ತ ಬೆಳೆದ ನನಗೆ ಜೀವನದ ಬಗ್ಗೆ ಹುಚ್ಚು ಪ್ರೀತಿಯಿದೆ. ನನ್ನದೇ ಆದ ಜಗತ್ತಿದೆ..I am crazy about life. ಕಂಡ ಎಲ್ಲ ಕನಸುಗಳೂ ನನಸಾಗಲೇ ಬೇಕೆಂದಿಲ್ಲ. ಕನಸ ಕಾಣುವುದನ್ನು ಅದರೆಡೆಗೆ ಸಾಗುವುದನ್ನು ಮಾತ್ರ ನಿಲ್ಲಿಸಲಾರೆ.ಅದಕ್ಕೆ ನನ್ನ ಬ್ಲಾಗಿನ ಹೆಸರು 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು'.
ಒಂದು ವರ್ಷದಲ್ಲಿ 79 ಎಳೆಗಳ ಗೂಡನ್ನು ಹೆಣೆದಾಗಿದೆ, ಕನ್ನಡ ಬ್ಲಾಗ್ ಲೋಕವೆಂಬ ಬೃಹತ್ ಮರದ ಆಶ್ರಯದಲ್ಲಿ.
ಈ ಬ್ಲಾಗ್ ಜಗತ್ತು ವಿಶಿಷ್ಟವಾದ ಜ್ಞಾನವನ್ನು,ಮಾಹಿತಿಗಳನ್ನು ನೀಡಿದೆ. ಅನೇಕ ಸ್ನೇಹಿತರನ್ನು ಕೊಟ್ಟಿದೆ, ಬೆಂಗಳೂರಿಗೆ ಬಂದರೆ ನೆಂಟರ ಮನೆಗಿಂತ, ಸ್ನೇಹಿತರ ಮನೆಯಲ್ಲೇ ಉಳಿಯುವಷ್ಟು ಆತ್ಮೀಯವೆನಿಸುವ ಬೆಚ್ಚನೆಯ ಸಂಬಂಧಗಳನ್ನು ಕೊಟ್ಟಿದೆ. ಪ್ರೀತಿಯನ್ನು ಕೊಟ್ಟಿದೆ. ಸಂಬಂಧದ ನಾಜುಕುತನವನ್ನು ಹೇಳಿದೆ. ಜೀವನದ ಅತ್ಯಮೂಲ್ಯ ಪಾಠಗಳನ್ನು ಕಲಿಸಿದೆ. ಇನ್ನೂ ಏನು ಬಯಸಲಿ ಹೇಳಿ ಇದಕ್ಕಿಂತ ಹೆಚ್ಚಾಗಿ ?
ಜೀವನವನ್ನು ಪುಟ್ಟ ಹುಡುಗಿಯಂತೆ ನೋಡಿ, ಅನುಭವಿಸಿ ಬರೆಯುತ್ತೆನಂತೆ ನಾನು. ಜೀವನದ ಕೆಲವೊಂದು ಸತ್ಯಗಳ ಅನುಭವವೇ ಇಲ್ಲದಂತೆ. !ಕೆಲವು ದಿನಗಳ ಹಿಂದೆ ಅಕ್ಕನಂಥಿರುವ ಗೆಳತಿಯೊಬ್ಬಳು ನನ್ನ face book wall ಮೇಲೆ ಹೀಗೆ ಬರೆದಿದ್ದಳು "ಹಾಯ್, ಸೌಮ್ಯ, ನಿಮ್ಮ ಬ್ಲಾಗ್ ನೋಡ್ತಾ ಇದ್ದೆ. ತುಂಬಾ ಚೆನ್ನಾಗಿದೆ. ಎಸ್ಟೋ ಕಡೆ ನನ್ನ ಬಾವನೆಗಳಿಗೆ ಅಕ್ಷರ ಕೊಟ್ಟಿದ್ದೀರ ಅನ್ನಿಸುತ್ತೆ. ಬದುಕನ್ನು ನೋಡುವ, ಪ್ರೀತಿಸುವ, ಕಳಕಲಿಸುವ ಪರಿ ವಯಸ್ಸಿನ ಜೊತೆಗೆ ಬದಲಾಗುತ್ತೆ, ಆದರೆ ಬದುಕುವ ಹುಮ್ಮಸ್ಸು, ಭಾವಿಸುವ ರೀತಿ ಮಾತ್ರ ಎಂದೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ಜೀವನದ ಕೆಲವೊಂದು ಸತ್ಯಗಳು ನಿನಗೆ ಸೋಕದಿರಲಿ.!" ಕಣ್ಣಂಚಿನ ಹನಿಯೊಂದಿಗೆ ಮುಖದಲ್ಲೊಂದು ಮುಗುಳುನಗೆ ಹಾಯಿದೋಣಿಯಂತೆ ಹಾದು ಹೋಗಿತ್ತು .ಇಂಥಹ ಒಂದು ಕ್ಷಣಗಳೇ ಅಲ್ಲವೇ ಜೀವನದಲ್ಲಿ ಅತ್ಯಮೂಲ್ಯ ಎನಿಸುವುದು..! ಇಂಥ ಒಂದು ನಿಷ್ಕಲ್ಮಶ ಹಾರೈಕೆಯನ್ನೇ ಅಲ್ಲವೇ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಂದ ಬಯಸುವುದು ?ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ನನ್ನ ಮೇಲೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ.
ಜೀವನವನ್ನು ಪುಟ್ಟ ಹುಡುಗಿಯಂತೆ ನೋಡಿ, ಅನುಭವಿಸಿ ಬರೆಯುತ್ತೆನಂತೆ ನಾನು. ಜೀವನದ ಕೆಲವೊಂದು ಸತ್ಯಗಳ ಅನುಭವವೇ ಇಲ್ಲದಂತೆ. !ಕೆಲವು ದಿನಗಳ ಹಿಂದೆ ಅಕ್ಕನಂಥಿರುವ ಗೆಳತಿಯೊಬ್ಬಳು ನನ್ನ face book wall ಮೇಲೆ ಹೀಗೆ ಬರೆದಿದ್ದಳು "ಹಾಯ್, ಸೌಮ್ಯ, ನಿಮ್ಮ ಬ್ಲಾಗ್ ನೋಡ್ತಾ ಇದ್ದೆ. ತುಂಬಾ ಚೆನ್ನಾಗಿದೆ. ಎಸ್ಟೋ ಕಡೆ ನನ್ನ ಬಾವನೆಗಳಿಗೆ ಅಕ್ಷರ ಕೊಟ್ಟಿದ್ದೀರ ಅನ್ನಿಸುತ್ತೆ. ಬದುಕನ್ನು ನೋಡುವ, ಪ್ರೀತಿಸುವ, ಕಳಕಲಿಸುವ ಪರಿ ವಯಸ್ಸಿನ ಜೊತೆಗೆ ಬದಲಾಗುತ್ತೆ, ಆದರೆ ಬದುಕುವ ಹುಮ್ಮಸ್ಸು, ಭಾವಿಸುವ ರೀತಿ ಮಾತ್ರ ಎಂದೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ಜೀವನದ ಕೆಲವೊಂದು ಸತ್ಯಗಳು ನಿನಗೆ ಸೋಕದಿರಲಿ.!" ಕಣ್ಣಂಚಿನ ಹನಿಯೊಂದಿಗೆ ಮುಖದಲ್ಲೊಂದು ಮುಗುಳುನಗೆ ಹಾಯಿದೋಣಿಯಂತೆ ಹಾದು ಹೋಗಿತ್ತು .ಇಂಥಹ ಒಂದು ಕ್ಷಣಗಳೇ ಅಲ್ಲವೇ ಜೀವನದಲ್ಲಿ ಅತ್ಯಮೂಲ್ಯ ಎನಿಸುವುದು..! ಇಂಥ ಒಂದು ನಿಷ್ಕಲ್ಮಶ ಹಾರೈಕೆಯನ್ನೇ ಅಲ್ಲವೇ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಂದ ಬಯಸುವುದು ?ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ನನ್ನ ಮೇಲೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ.