


ಕುಮಟಾದಿಂದ ಮಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಹೋಗುವುದು ವಾಡಿಕೆ. ಬರುವಾಗ ಟ್ರೈನಲ್ಲಿ ಬಂದಿರುತ್ತೇನೆ. ಐದು ಗಂಟೆಗಳನ್ನು ಕಳೆಯುವುದು ತುಂಬಾ ಬೇಸರ ತರಿಸುತ್ತದೆ . ಪಕ್ಕದಲ್ಲೆನಾದರೂ ಒಳ್ಳೆಯ ಆಸಾಮಿ ಕುಳಿತಿದ್ದರೆ ಮಾತಿಗೆ ಇಳಿದಿರುತ್ತೇನೆ ಇಲ್ಲದಿದ್ದರೆ? ಮನದ ಸರೋವರದಲ್ಲಿ ಕಲ್ಪನೆಗಳ ದೋಣಿ ಏರುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನನ್ನದೇ ಕಲ್ಪನೆಗಳ ದೋಣಿಯಲ್ಲಿ ನಾನೇ ನಾವಿಕ , ನಾನೇ ಪ್ರಯಾಣಿಕ ..! ಕಲ್ಪನಾ ಲೋಕದಲ್ಲಿ ನಾನು ಕಿನ್ನರಿ , ಗಾಳಿಪಟ, ಗುಬ್ಬಚ್ಚಿ , ಮೋಡ, ಹೀಗೆ ... ಆದರೆ ಮರವಂತೆಯ ಸಮುದ್ರದ ಹತ್ತಿರ ಬಸ್ಸು ಹಾಯುವಾಗ ನನ್ನ ಕಲ್ಪನಾ ಸರಣಿಯು ಕಳಚಿ ಬಿದ್ದಿರುತ್ತದೆ . ಕಣ್ಣೆವೆಯಿಕ್ಕದೆ ಸಮುದ್ರವನ್ನು ನೋಡುತ್ತಿರುತ್ತೇನೆ. ಸುಮಾರು ಮೂರು ಕಿಲೋಮೀಟರುಗಳಷ್ಟು ದೂರದವರೆಗೂ ಸಮುದ್ರ ನಮ್ಮ ಕಣ್ಣೆದುರಿಗೆ ಭೋರ್ಗರೆಯುತ್ತಿರುತ್ತದೆ . .ಪಕ್ಕದಲ್ಲಿ ಸೌಪರ್ಣಿಕ ನದಿ ಸದ್ದಿಲ್ಲದೇ ಹರಿಯುತ್ತಿರುತ್ತದೆ . ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೧೭ ಪಕ್ಕಾ ಆಲಸಿಯಂತೆ ಹಗಲು ಕನಸು ಕಾಣುತ್ತ ಕಾಲು ಚಾಚಿ ಬಿದ್ದುಕೊಂಡಿರುತ್ತದೆ .
ಮೊದಲಿನಿಂದಲೂ ಕವಿಗಳು ಸಮುದ್ರಕ್ಕೆ ಪುರುಷನ ಹೋಲಿಕೆ ಕೊಟ್ಟಿದ್ದಾರೆ , ನದಿ ಹೆಣ್ಣು. .! ಬಾಗಿ, ಬಳುಕಿ, ಜೀವ ವಾಹಿನಿಯಾಗಿ ಹರಿಯುವ ನದಿ ಕೊನೆಗೆ ಸೇರುವುದು ಸಮುದ್ರವನ್ನು . ಅದಿಕ್ಕೆ ಇರಬೇಕು ಸಮುದ್ರ ಭೋರ್ಗರೆಯುವುದು. ಆ ಪುರುಷತ್ವದ ಹಮ್ಮು ಅದಕ್ಕೆ ..!
ಒಂದು ಪಾಲು ಭೂಮಿಯನ್ನು ಕ್ಷಣಾರ್ಧದಲ್ಲಿ ನುಂಗಿ ಬಿಡುವ ಭೀಬತ್ಸ ಸಮುದ್ರ . ದಿನವೂ ಬೆಂಕಿಯನ್ನುಗುಳುವ ಸೂರ್ಯನನ್ನು ನುಂಗಿದರೂ ಶಾಂತ . ಮಕ್ಕಳ ಮುಟ್ಟಾಟವನ್ನು ನೆನಪಿಸುವ ಅಲೆಗಳ ಆಟ . ಯಾರಿಗೆ ಯಾರು ಸಿಕ್ಕಿದರೋ ಯಾರಿಗೂ ಗೊತ್ತಿಲ್ಲ. ಛಲಬಿಡದ ವಿಕ್ರಮನಂತೆ ಮರಳಿ ಯತ್ನವ ಮಾಡು ಎನ್ನುವ ಸಂದೇಶವನ್ನು ನೀಡುವ ಅಲೆಗಳು .
ಅಷ್ಟೊಂದು ಜಲರಾಶಿಯಿದ್ದರೂ ಒಂದು ತೊಟ್ಟು ಸಿಹಿ ನೀರಿಲ್ಲದ ಸಮುದ್ರ . ಸೂರ್ಯ ಮೊಗೆಮೊಗೆದು ಕುಡಿದರೂ ಆರಲೊಲ್ಲದ ಸಮುದ್ರ. ಚುಕ್ಕಿ ಚಂದ್ರಮರಿಗೆ ತಮ್ಮ ಬಿಂಬವ ನೋಡಲು ಕೊಡದ, ಮಾತ್ಸರ್ಯದ ಮೂಟೆ ಈ ಸಮುದ್ರ, ಪ್ರತಿಫಲಿಸುವುದು ಆಗಸದ ನೀಲಿ ಬಣ್ಣವನ್ನೇ ..!ಕಳೆದುಹೋದ ಹುಡುಗನನ್ನು ಹುಡುಕುತ್ತ ಅಲೆಯುತ್ತಿರುವ ನೀಳ ಕೂದಲಿನ ಹುಡುಗಿಯಂತೆ ಕಾಣುವುದು ಈ ಸಮುದ್ರ . ಹವಳ ಮುತ್ತುಗಳನ್ನು ತನ್ನೊಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಕಳ್ಳ ಸಮುದ್ರ. ಜಲಚರಗಳ ತವರೂರು. ಹೀಗೆ ಅದೇನೇನೋ ಭಾವ ಆ ಮೂರುವರೆ ಕಿಲೋಮೀಟರುಗಳನ್ನು ಕ್ರಮಿಸುವಷ್ಟರಲ್ಲಿ ..! ನಕ್ಕುಬಿಟ್ಟಿದ್ದೆ ನನ್ನ ಯೋಚನೆಗೆ ನಾನೇ.. !
ಆಗಸದಲ್ಲಿ ಚಿಕ್ಕಿಗಳಂತೆ ಚಿಕ್ಕದಾಗಿ ಕಾಣುತ್ತಿರುವ ಹಡಗು ಯಾವದೇಶದ್ದೋ ಏನೋ? ಆದರೂ ಅದೇನೋ ಕುತೂಹಲ,ಮನದಲ್ಲಿ ಭಾವನೆಗಳ ಮರ್ಮರ . ಹಡಗು ಸಾಗುತ್ತಿತ್ತು ನೀರಲ್ಲಿ ಅಲೆಗಳ ಮೇಲೆ . ನಮ್ಮ ಬಸ್ಸು ಓಡುತ್ತಿತ್ತು . ಕಾಲವೂ ಉರುಳುತ್ತಿತ್ತು . ಮರವಂತೆಯ ಕಡಲ ತೀರದ ದಾರಿ ಮುಗಿದರೂ ಸಮುದ್ರ ಕಾಡುತ್ತಿತ್ತು ನನ್ನ . ಕಣ್ಣ ಕೊನೆಯವರೆಗೂ ಕಾಣುವ ಆ ಅಖಂಡ ಜಲರಾಶಿಯ ಇನ್ನೊಂದು ತೀರವನ್ನು ನೋಡಬೇಕು ಎನ್ನುವ ಚಿಕ್ಕಂದಿನ ನನ್ನ ಹಂಬಲ ಮತ್ತೊಮ್ಮೆ ಧಿಡೀರನೆ ಎದುರಾಗಿತ್ತು .ಕಣ್ಮುಚ್ಚಿ world map ಕಲ್ಪಿಸಿಕೊಂಡೆ. ಅರಬ್ಬೀ ಸಮುದ್ರದ ಮರವಂತೆಯನ್ನು ಗುರುತಿಸಿಕೊಂಡೆ . ಇನ್ನೊಂದು ತೀರಕ್ಕಾಗಿ ತಡಕಾಡಿದೆ . ಎಲ್ಲಿದೆ ಇನ್ನೊಂದು ತೀರ ? ಆಫ್ರಿಕ ಖಂದದಲ್ಲೆಲ್ಲೋ ಇದ್ದಂತೆ ಅನಿಸುತ್ತಿದೆ ಅಲ್ವಾ?