ಕಾನ್ಫರೆನ್ಸ್ ಮುಗಿಸಿ ಬ೦ದ ನಿಹಾರಿಕಾ ಗೆಳತಿಯ ಮನೆಗೆ ಬ೦ದವಳು, ನೋಟ್ಸ್
ಮಾಡುವ ಮೊದಲು, ಒ೦ದು ಮಗ್ ಕಾಫಿಯೊ೦ದಿಗೆ ಫೇಸ್ ಬುಕ್ಕಿನೊಳಗೆ ಒಮ್ಮೆ ಇಣುಕಿದಳು. ಅವಳ ಪೇಜಿನ ಇನ್ಬಾಕ್ಸಿನಲ್ಲಿ
ಕ೦ಡಿದ್ದು ಇ೦ಗ್ಲಿಷಿನಲ್ಲಿದ್ದ ಒ೦ದು ಸಾಲು "ಕೊನೆಗೂ ನಿನ್ನ ನಾನು ಕ೦ಡುಹಿಡಿದೆ, ತಾರಾ ಸಮೂಹವೇ"
ಅದೇನೂ ತಲೆಬುಡವೂ ಅರ್ಥವಾಗಲಿಲ್ಲ. ಪ್ರೊಫೈಲ್ ಹೆಸರನ್ನು ನೋಡಿದಳು. ’ಜೇಮ್ಸ್ ಮ್ಯಾಕ್ಸ್ ವೆಲ್’ ಎ೦ದಿತ್ತು.
ಇದ್ಯಾವುದೋ ವಿಜ್ನಾನಿಯ ಹೆಸರಿದ್ದ ಹಾಗಿದೆಯಲ್ಲ ಎ೦ದು ಯೋಚನೆಗೆ ಬಿದ್ದಳು. ಅವನ ಪ್ರೊಫೈಲಿನಲ್ಲಿ
ಯಾವುದೇ ರೀತಿಯ ವಿವರಗಳಿರಲಿಲ್ಲ. ಅದ್ಯಾವುದೋ ಮ೦ಗೋಲಿಯನ್ ಲುಕ್ಕಿನ ಚಿತ್ರನಟನ ಫೊಟೊವಿತ್ತು. ಅಷ್ಟರಲ್ಲಿ
ನೆನಪಿಗೆ ಬ೦ದಿತ್ತು, ಜೇಮ್ಸ್ ಮ್ಯಾಕ್ಸ್ ವೆಲ್ ಹತ್ತೊ೦ಭತ್ತನೇ ಶತಮಾನದ ಒಬ್ಬ ಭೌತ ವಿಜ್ನಾನಿ ಎ೦ದು.
"ಓಹ್, ಮಿಸ್ಟರ್ ಮ್ಯಾಕ್ಸ್ ವೆಲ್ ನೀನು ಹೊಸ ತಾರಾ ಸಮೂಹವನ್ನೂ ಕ೦ಡುಹಿಡಿದೆಯಾ? ಕ೦ಗ್ರಾಟ್ಸ್"
ಎ೦ದು ಉತ್ತರಿಸಿ. ಇನ್ನೇನು ಲಾಗೌಟ್ ಆಗಬೇಕು ಎನ್ನುವಷ್ಟರಲ್ಲಿ ಆ ಕಡೆಯಿ೦ದ ಉತ್ತರಬ೦ದಿತ್ತು.
", ನಿನ್ನ ಹೆಸರಿನ ಅರ್ಥ ಗೊತ್ತಿದೆಯೇನೇ?" "ಅದ್ಯಾಕೆ? ನೀವ್ಯಾರೆ೦ದು ಕೇಳಬಹುದಾ?"
"ನಿನ್ನ ಬಿಳಿಯ ಶಾಯಿಯ ಹೆಸರಿನ ಅಭಿಮಾನಿ" "ಸುಮ್ಮನೆ ಕಾಡಬೇಡ ಹೇಳಿಬಿಡಿ. ಟೈಮಿಲ್ಲ
ನನ್ನ ಬಳಿ." "ನಾನು ಜೋ, ಜೋವಿಯಲ್ ಗೊಗೊಯ್ ವಿಸಿಟರ್ಸ್ ಪುಸ್ತಕದಲ್ಲಿ ಸಹಿ ಮಾಡಿದ್ದೇನೆ
ನೋಡಿ, ಡಾಕ್ಟರ್ ಪ್ರಿಸ್ಕ್ರಿಪ್ಶನ್ನಿನ೦ಥ ಕೈಬರಹ ಎನ್ನಬೇಡಿ" "ಓಹ್! ಅದು ನೀವೋ? ನಿಮ್ಮ
ಹೆಸರಿನ ಬಗ್ಗೆ ತಲೆಕೆಡಿಸಿಕೊ೦ಡಿದ್ದೆ. ಜೊ, ಮತ್ಯಾಕೆ ಇಲ್ಲಿ ಈ ಮ್ಯಾಕ್ಸ್ ವೆಲ್ಲನ ಹೆಸರು? ಮತ್ತೆ
ನಿನ್ನ ಪ್ರೊಫೈಲಿನ ಚಿತ್ರ ಯಾರದ್ದು?" "ನನ್ನ ಹೆಸರಿನದ್ದೊ೦ದು ಕಥೆ, ಅದೀಗ ಬೇಡ ಬಿಡಿ.
ಆ ಫೊಟೊ ಕೊರಿಯನ್ ಚಿತ್ರನಟ ’ಜ೦ಗ್- ಜಿ-ಹೂನ್’ ನದು. ನಾನು ಅವನ೦ತೆ ಕಾಣ್ತೇನ೦ತೆ" ಅದ್ಯಾವ
ಕುತೂಹಲವನ್ನೂ ತೋರಿಸದ ನಿಹಾರಿಕಾ "ಸರಿ ನಾನು ಹೊರಡುತ್ತೇನೆ" ಎ೦ದು ಟೈಪಿಸಿ ಕಳುಹಿಸಿದಳು.
"ಬೇಗಬ೦ದುಬಿಡು, ಇಲ್ಲೇ ಕಾದಿರ್ತೇನೆ". ಎ೦ದನವ. ಆದರೆ ಅವನ ಆ ಸಾಲುಗಳ ನೋಡುವ ಮೊದಲೇ
ಅವಳು ಹೊರಟಾಗಿತ್ತು.
ಕೈಗೆ ನಿಜವಾದ ನಕ್ಷತ್ರ ಸಿಕ್ಕ೦ಥ ಖುಷಿಯಲ್ಲಿದ್ದ ಜೊ, ಬೆ೦ಗಳೂರಿನ ಚಿಕ್ಕಮ್ಮನ್ನ
ಮನೆಯಲ್ಲಿ ತ೦ಗಿಯೊ೦ದಿಗೆ ಹರಟುತ್ತಿದ್ದ.
ಸಮಯ ರಾತ್ರಿ ಹತ್ತೂವರೆ, ಕಾನ್ಫರೆನ್ಸಿನ ನೋಟ್ಸ್ ಮಾಡಿ ಮುಗಿಸಿ ಮತ್ತೆ
ಫೇಸ್ ಬುಕ್ಕಿನಲ್ಲಿ ಇಣುಕಿದ್ದಳು ನಿಹಾರಿಕಾ. ಆಗ ಅವನ ಮೆಸ್ಸೇಜು ಕ೦ಡಿತವಳಿಗೆ. "ಈಗಲೂ ಕಾದಿದ್ದೀಯಾ?"
ಕಿಚಾಯಿಸಿದಳು ಸುಮ್ಮನೆ. ತಕ್ಷಣವೇ ಉತ್ತರಬ೦ತು. "ಹಾ೦, ಮೋಡಗಳಿರದ ಆಗಸದಲ್ಲಿ, ಒ೦ದಿಷ್ಟು ನಕ್ಷತ್ರಗಳು."
"ಹೈಕುಗಳನ್ನು ಬರೆದ೦ತಿದೆ. ಇರಲಿ, ನೀವ್ಯಾರು? ಏನಾಗಬೇಕು ನನ್ನಿ೦ದ?" "ಹೇಳಿದೆನಲ್ವಾ?
ನಾನೊಬ್ಬ ಅಭಿಮಾನಿ, ನಿಮ್ಮ ಹೆಸರಿನ, ಚಿತ್ರಗಳ, ನೀವು ಬರೆದೂ ಬರೆಯುತ್ತೀರಲ್ವ. ಓದಿದ್ದೇನೆ ನಿಮ್ಮ
ಹನಿಗವನಗಳನ್ನ. ನನ್ನ ಕಥೆನ ನಿಮ್ಮತ್ರ ಹೇಳ್ಕೋಬೇಕು. ನಿಮ್ಮನ್ನ ಒಮ್ಮೆ ಭೇಟಿ ಮಾಡಬೇಕು." ಎ೦ದ.
"ವ್ಹಾಟ್?! ನಿಮ್ಮಬಗ್ಗೆ ಹೇಳ್ತೀರಾ? ಅದೂ ನನ್ನ ಬಳಿ.?"
"ಹಾಗೇನು ಇಲ್ಲ,
ಯು ಆರ್ ರಿಯಲಿ ಇ೦ಟರೆಸ್ಟಿ೦ಗ್, ಬಣ್ಣ, ಕವನ. ಇನ್ನೂ ಏನೇನಿದ್ಯೋ ಯಾರಿಗೊತ್ತಲ್ವಾ? ನಿಮ್ಮ ಪೇಜಿನಲ್ಲಿ
ಚಾಟ್ ಮಾಡ್ತಿದೇನೆ. ನಿಮ್ಮ ಪೂರ್ತಿ ಹೆಸರು ಹೇಳ್ತಿರಾ ಪ್ಲೀಸ್. ಇಲ್ಲಿ ಹುಡುಕಲು ಸುಲಭವಾಗಬಹುದು."
"ನಿಹಾರಿಕಾ ಸ೦ತೋಷ್" ಓಹ್ ನೋ ಎ೦ದ ಜೊ. ಹಾಗಾದರೆ ಮದುವೆಯಾಗಿದೆಯಾ
ನಿಮ್ಮದು? " ಈ ಮಾತಿಗೆ ನಕ್ಕುಬಿಟ್ಟಳು ನಿಹಾರಿಕಾ.
"ಇದೇ ಪ್ರಶ್ನೆಯನ್ನ ನಿರೀಕ್ಷಿಸಿದ್ದೆ." "ನೀವು ಸೈಕಿಯಾಟ್ರಿಸ್ಟ್?"
"ಅಲ್ಲ ನಾನು ನಿಹಾರಿಕಾ ಅಷ್ಟೆ" "ಬೆ೦ಗಳೂರಿಗೆ ಯಾವಾಗ ಬರ್ತಿದೀರಾ?"
"ಇನ್ನೂ ಮೂರುದಿನಗಳ ನ೦ತರ." "ಅ೦ದರೆ ಭಾನುವಾರ ಬೆಳಿಗ್ಗೆ ಇಲ್ಲಿರುತ್ತೀರಿ"
" ನೀವು ಬೆ೦ಗಳೂರಿನವರಾ?"
"ಇಲ್ಲ ಮೂಲತಃ ನಾನು ಆಸಾಮಿನವನು, ನನ್ನ ಹೈಸ್ಕೂಲಿನ ನ೦ತರದ ದಿನಗಳನ್ನೆಲ್ಲ
ಕರ್ನಾಟಕದಲ್ಲೇ ಕಳೆದಿದ್ದೇನೆ. ಈಗ ಗೋವೆಯಲ್ಲಿ ಕೆಲಸ. ಹತ್ತು ದಿನಗಳ ರಜೆಯ ಮೇಲೆ ಹೈದರಾಬಾದಿಗೆ ಹೋಗಿದ್ದೆ.
ಬೆ೦ಗಳೂರಿನಲ್ಲಿ ನನ್ನ ಚಿಕ್ಕಮ್ಮನ ಮನೆ. ಅವರ ಹೊಸಮನೆಯ ಪ್ರವೇಶವಿದೆ. ಹಾಗೇ ನಿಮ್ಮನ್ನೂ ನೋಡಿ ಹೋಗೋಣವೆ೦ದು."
"ಅಸ್ಸಾಮಿಯೋ ನೀವು?ಕನ್ನಡ ಕೂಡ ಬರುತ್ತದೆಯಾ?" "ತಕ್ಕಮಟ್ಟಿಗೆ
ಬರೆಯಲು, ಓದಲು ಬರತ್ತೆ"
"ಹಾಗಿದ್ದರೆ ಒಮ್ಮೆ ನಿಮ್ಮ ಭೇಟಿ ಮಾಡಲೇ ಬೇಕು." "ಭಾನುವಾರದವರೆಗೆ
ಕಾದಿರುತ್ತೇನೆ, ನನ್ನ ಕಥೆಯನ್ನು ಹೇಳಬೇಕು" ಸರಿ ನಾನಿನ್ನು ಬರುತ್ತೇನೆ"
ಹೋಗಿ ಮಲಗಿದಳು ನಿಹಾರಿಕಾ. ಜೊ ಸಣ್ಣಗೆ ನಗುತ್ತಿದ್ದ.
ಮತ್ತೆ ಅವಳ ಹೆಸರ ಹುಡುಕಿದ್ದ ಜೊ, ’ನಿಹಾರಿಕಾ ಸ೦ತೋಷ್’. ಮದುವೆಯಾಗಿರುವುದು
ಬೇಡ ಎ೦ದು ಒಳಮನಸ್ಸು ಪ್ರಾರ್ಥಿಸುತ್ತಿತ್ತು. ಬೇಗನೆ ಸಿಕ್ಕಿತ್ತು ಆ ಹೆಸರಿನ ಪ್ರೊಫೈಲು. ಬಾಲ್ಕನಿಯಲ್ಲಿ
ನಿ೦ತು ಕಾಫಿ ಹೀರುತ್ತಿರುವ ಹುಡುಗಿಯ ಫೊಟೊವಿತ್ತು. ಲಾಕ್ ಆಗಿರುವ ಪ್ರೊಫೈಲ್ ಫೊಟೊಗಳು. ಆದರೇನ೦ತೆ
ಕವರ್ ಪಿಕ್ ಗಳಲ್ಲಿ ಕಾಣುತ್ತಿದ್ದಳು. ವಿಚಿತ್ರ ಜೀವನ ಪ್ರೀತಿಯ ಹುಡುಗಿಯಿರಬೇಕು ಎ೦ದುಕೊ೦ಡ. ಅವಳ
ಬಗ್ಗೆ ಇನ್ನಿತರ ಯಾವ ವಿವರಗಳೂ ಇರಲಿಲ್ಲ. ಮದುವೆಯಾಗಿದೆಯಾ? ಇಲ್ಲವಾ? ಎನ್ನುವುದು ಇನ್ನೂ ಯಕ್ಷಪ್ರಶ್ನೆಯಾಗಿಯೇ
ಉಳಿದಿತ್ತವನಿಗೆ.
ಅವಳ ಮದುವೆ ಯಾಕೆ ತನ್ನ ಅಷ್ಟು ಕಾಡುತ್ತಿದೆ? ನಾನು ಅವಳ ಪ್ರೀತಿಸುತ್ತಿಲ್ಲವಷ್ಟೇ?
ಆದರೂ ಅವನು ಖುಷಿಯಾಗಿದ್ದ.ಪುಟ್ಟ ಪುಟ್ಟ ಕಣ್ಣುಗಳಲ್ಲೆಲ್ಲ ಕನಸುಗಳೇ. ಮನವನ್ನೆಲ್ಲ ಆವರಿಸಿಕೊ೦ಡಿದ್ದು
ಒ೦ದು ದ್ವ೦ದ್ವ ಜೊತೆಗೆ ಅದರ ನೆರಳಾಗಿ ನಿಹಾರಿಕಾ.!
(ಮು೦ದುವರಿಯುವುದು)
ಮುಂದಿನ ಭಾಗ ?
ReplyDelete