
ಅದೆನಾಗಿತ್ತೋ.. ಕಳೆದ ಐದಾರು ದಿನಗಳಿಂದ ನಾನು ನಾನಾಗಿರಲಿಲ್ಲ. ಮನಸು ತಳಮಳದಲ್ಲಿತ್ತು.. ಹಗ್ಗ ಹರಿದ ನಾವೆಯಂತಾಗಿತ್ತು. ಪರೀಕ್ಷೆಯನ್ನು ಮುಗಿಸಿ ಬಂದ ನಾನು ಖುಷಿಯಿಂದಿರುವ ಬದಲು ಖಿನ್ನತೆಗೆ ಒಳಗಾಗಿದ್ದೆ . ಹೆಚ್ಚಾಗಿ 'ವಟವಟ' ಎನ್ನುತ್ತಲೇ ಇರುವ ನಾನು ಮೌನಿಯಾಗಿದ್ದೆ. ಮಳೆಯ 'ಚಟಪಟ' ನನ್ನ 'ವಟವಟ'ವನ್ನು ನಿಲ್ಲಿಸಿಬಿಟ್ಟಿತ್ತು. ನನ್ನ ಮನದೊಳಗಿದ್ದ ಒಂದು ಪುಟ್ಟ ಐದರ ಮಗುವೊಂದು ಕಳೆದು ಹೋಗಿತ್ತು. ಸ್ನೇಹಿತರ phone call ಗಳನ್ನೂ ಅಲಕ್ಷಿಸಿದ್ದೆ. ಕೊನೆಗೆ ಸ್ನೇಹಿತರಿಬ್ಬರು ಬೈದೂ ಆಗಿತ್ತು. ಏನಾಗಿದೆ ನಿನಗೆ ಎಂದರೆ ನನ್ನಲ್ಲಿ ಉತ್ತರವಿರಲಿಲ್ಲ. "nothing man, i'll be alright" ಎಂಬ ಹಾರಿಕೆಯ ಉತ್ತರ ಬೇರೆ ನನ್ನಿಂದ. ಅರ್ಧದಲ್ಲಿ ಬಿದ್ದ ಒಂದು stupid painting ಪ್ರಯತ್ನ, ಮುಗಿಸಲಾರದೆ ಹಾಗೆ ಅರ್ಧದಲ್ಲಿ ಬಿಟ್ಟ ೨ ಲೇಖನಗಳು, ಯಾಕೋ ನನ್ನೊಳಗಿದ್ದ ಒಂದು ಪುಟ್ಟ ಹುಡುಗಿ ಕಳೆದೆ ಹೋಗಿದ್ದಳು ಎಂದುಕೊಂಡಿದ್ದೆ, ಕಂಗಾಲೂ ಆಗಿದ್ದೆ.
ಏನಾಗಿತ್ತು ನನಗೆ ?? ಸಂಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೆ? ಒಟ್ಟಿನಲ್ಲಿ ಇಲ್ಲಸಲ್ಲದ್ದಕ್ಕೆ ಸುಖಾಸುಮ್ಮನೆ ತಲೆ ಕೆಡಿಸಿಕೊಂಡಿದ್ದೆ . . ನಗು ಮರೆತು ಹೋದಂತಿತ್ತು. ಭಾವನೆಗಳು ಎಲ್ಲೋ ನಿಯಂತ್ರಣ ತಪ್ಪಿದಂತಿತ್ತು . ಮನಃ ಪೂರ್ತಿಯಾಗಿ ಅಳಲೂ ಆಗುತ್ತಿರಲಿಲ್ಲ. ನನ್ನನ್ನು ನಾನು ಹೊರಗೆಳೆಯಬೇಕಿತ್ತು. ನನ್ನ ಆರಾಮ ಖುರ್ಚಿಯಲ್ಲಿ ಕುಳಿತು ನೀಲಾಕಾಶವನ್ನು ದಿಟ್ಟಿಸುತ್ತಿದ್ದೆ. ..
ಮತ್ತೆ ಕರೆಯತೊಡಗಿತು ನನ್ನ phone, ನೋಡಿದರೆ ನನ್ನ ಆತ್ಮೀಯ ಗೆಳೆಯ. ವಿಧಿಯಿಲ್ಲದೇ recieve ಮಾಡಿದೆ. "ಏನಾಗಿದ್ಯೇ ನಿಂಗೆ ? ಬ್ಲಾಗ್ ನಲ್ಲಿ ಏನೇನೋ ಬರೆದಿದೀಯ ಅಷ್ಟೊಂದು ಸೀರಿಯಸ್ಸಾಗಿ "ಎಂದ." ಏನಿಲ್ವೋ ಸುಮ್ಮನೆ " ಎಂದುತ್ತರಿಸಿದೆ . "ನಿನ್ನ 'ಏನಿಲ್ಲ' ಅಂದ್ರೆ ತುಂಬಾ ವಿಷ್ಯ ಇದೆ ಅಂತಾನೆ ಅರ್ಥ ಹೇಳೇ ಮಹಾರಾಯ್ತೀ " ಎಂದ.
ನಾನು ಪಕ್ಕಾ ಬಹಿರ್ಮುಖಿ. ಖುಷಿಯಾದರೆ ಕುಣಿದು ಕೇಕೆ ಹಾಕಿಬಿಡುತ್ತೇನೆ. ಬೇಸರವಾದರೆ ಕಣ್ಣೀರು ಹರಿಯದೆ ಸಮಾಧಾನವಿಲ್ಲ. ಅದು -ಇದು ಮಾತನಾಡುತ್ತಲೇ ವಿಷಯವನ್ನೆಲ್ಲ ಹೇಳಿದ್ದೆ .ಮನಸಿಗೆ ಆದ ಬೇಸರದ ಭಾವಗಳೆಲ್ಲ ಮಾತಿನ ಮೂಲಕ ಹೊರಬಿದ್ದಿದ್ದವು. ನಾನು ತಡೆಯಿಲ್ಲದೆ ಮಾತನಾಡುತ್ತಿದ್ದೆ ಆತ 'ನಂತ್ರ', 'ಹೂಂ', 'ಸರಿ' ಎಂದಷ್ಟೇ ಹೇಳುತ್ತಿದ್ದ. ವಿಷಯ ಮುಗಿವ ಹೊತ್ತಿಗೆ ನನ್ನ ಕಣ್ಣ ಅಂಚೂ ಒದ್ದೆಯಾಗಿ ಆಗಿತ್ತು. ಆದರೂ ಮಾತಾಡುತ್ತಿದೆ. ಮನಸು ಬೇಸರದ ಮೋಡವನ್ನು ಬಿಟ್ಟು ಆಚೆ ಬಂದಿತ್ತು. FIFA WC ಸುದ್ದಿ. ಮತ್ತದೇ ಮೆಸ್ಸಿ, ಕ್ರಿಸ್ಟಿಯಾನೋ ರೋನಲ್ದೋ, ಕಾಕಾ,ರೂನಿ ಎಲ್ಲರಿಗೂ ನನ್ನ ಮಾಮೂಲಿ ಸ್ಟೈಲಿನಲ್ಲಿ ಲೈನ್ ಹೊಡೆಯ ತೊಡಗಿದೆ. ಅವನ ತಲೆ ತಿನ್ನತೊಡಗಿದೆ. ಗೆಳೆಯ ನಗುತ್ತಿದ್ದ ಜೋರಾಗಿ "ಅದ್ಯಾಕೋ ಹಲ್ಕಿರೀತಿಯಾ ನೀನೊಬ್ನೇ brush ಮಾಡ್ತೀಯ ಅನ್ನೋ ಥರ" ಎಂದಿದ್ದೆ. ನಗುವಿನ ಅಲೆ ಇನ್ನೂ ಜೋರಾಯ್ತು . ಜೊತೆಗೆ ಇನ್ನೊಂದು ಪರಿಚಯದ ಧ್ವನಿ.
"ನೀನು ಹೀಗೆ ತಲೆ ತಿಂತಾ ಇದ್ರೇನೆ ಚಂದ ನಮಗೆ .ನಿನ್ನ ಮೌನ ಸಹಿಸಲು ಅಸಾಧ್ಯ ಗೆಳತೀ " ಎಂದು ನಾಟಕೀಯವಾಗಿ ಎಂದಿದ್ದಳು ನನ್ನೊಲವಿನ ಗೆಳತಿ 'ಸಂಧ್ಯಾ'. "ಹೇಯ್ ಕತ್ತೆ ನೀನೆಲ್ಲೇ ಇದೀಯಾ.. ?" ಎಂದೆ. icecream ತಿನ್ತಿದೇನೆ ಬೇಕಾ ?"ಎಂದಳು. "ಪಿಶಾಚೀ ನನ್ನ ಬಿಟ್ಟು ತಿಂದರೆ ನೀ ಉದ್ಧಾರ ಆಗೋದಿಲ್ಲ ಎನ್ನುತ್ತಲೇ " ಅಕ್ಷರಶಃ ಕೂಗಿಬಿಟ್ಟಿದ್ದೆ ನಾನು ..! "ಅಂತೂ ನಮ್ ಟ್ರೈನ್ track ಗೆ ಬಂದು speed pick up ಮಾಡ್ತು "ಅಂದಳು ಅವಳು. ನಕ್ಕು ಬಿಟ್ಟಿದ್ದೆ . " ನಿನ್ನನ್ನೇ ಕಾಯ್ತಾ ಇದ್ದೇವೆ stupid ಬೇಗ ಹೊರಡು.. ಹೋಗಿ ಮುಖ ತೊಳ್ಕೋ. ಬರೋವಾಗ ನಿನ್ನ ಗುಳ್ಳೆ (bubbler) ಬಾಟಲಿ ತಗೊಂಡು ಬಾರೆ " ಅಂದಿದ್ದಳು. ಮನಸು ಸುಟ್ಟ ಬೂದಿಯಿಂದೆದ್ದು ಬರುವ 'ಫೀನಿಕ್ಸ್' ಪಕ್ಷಿಯಂತೆ ಹಾರುತ್ತಿತ್ತು ಮುಗಿಲೆತ್ತರಕ್ಕೆ..!
ಸಂಬಂಧಗಳ ಜಂಜಾಟವಿಲ್ಲದೆ ಬೆಳೆಯುವ ಸ್ನೇಹಕ್ಕೆ ಅದೆಷ್ಟು ಶಕ್ತಿ ?ಅದಕ್ಕೆ ನಾನು ಸಂಬಂಧಗಳಿಗಿಂತ ಸ್ನೇಹಿತರನ್ನೇ ಹೆಚ್ಚು ನಂಬುವುದು. ಬರೋಬ್ಬರಿ ಐದಡಿ ಎಂಟು ಇಂಚು ಎತ್ತರದ ನನ್ನಲ್ಲಿ ಪುಟ್ಟ ಹುಡುಗಿಯನ್ನೇ ಹುಡುಕುವ ನನ್ನ ಆ ಎರಡು ಸ್ನೇಹಿತರಿಗೆ ಮನದಲ್ಲಿ ಥ್ಯಾಂಕ್ಸ್ ಹೇಳುತ್ತಲೇ ನನ್ನ 'ಗುಳ್ಳೆ ಬಾಟಲಿಯನ್ನು' ಹುಡುಕಲು ಕುಣಿಯುತ್ತಲೇ ಸಾಗಿದ್ದೆ ...! ಮತ್ತೆ ನಾನು ನಾನಾದೆ.. !