Thursday, March 3, 2022

ಮೊಲದ ಹಲ್ಲಿನ ಪೋರಿ

 



ಕುಮಟೆಯಲ್ಲಿ ಇದ್ದಾಗಲೆಲ್ಲ ಗೋಕರ್ಣಕ್ಕೆ ಅಲೆಮಾರಿಯಂತೆ ಹೋಗುವುದು ನನ್ನ ಖಯಾಲಿ. ಒಮ್ಮೊಮ್ಮೆ ಪೈ ರೆಸ್ಟೊರಂಟಿನ ಈರುಳ್ಳಿ ಭಜೆ ಮತ್ತು ವಡಾಪಾವ್ ಸವಿಯುವುದು ನೆಪವಾದರೆ, ಕೆಲವೊಮ್ಮೆ ತದಡಿಯ ಬಂದರಿನ ಹತ್ತಿರ ಅಘನಾಶಿನಿ ನದಿಯ ನೋಡಲು ಹೋಗುವುದು ಕಾರಣವಾಗುತ್ತದೆ, ಅಪರೂಪಕ್ಕೆ ಕೋಟಿ ತೀರ್ಥದಲ್ಲಿರುವ ಗೆಳತಿಯ ನೋಡಲು ಹೋಗುವ ನೆಪ. ಅಲ್ಲಿಯ ಗಲ್ಲಿಗಳ, ಸಮುದ್ರ ತೀರದ ಜನಜಂಗುಳಿಯ ಉತ್ಸಾಹವನ್ನು ಮೊಗೆದು ನನ್ನ ಮನಸ್ಸಿಗೆ ಹೊಯ್ದುಕೊಳ್ಳುವ ತಲುಬು ಬಂದಾಗಲೆಲ್ಲ ಗೋಕರ್ಣಕ್ಕೆ ಹೊರಟುಬಿಡುತ್ತೇನೆ.

ನೀಲಿ ಬಾನು ಬಾಗಿ ಮುತ್ತಿಡುವ ನೀಲಿ ಕಡಲು, ಸೂರ್ಯಾಸ್ತವಾಗುತ್ತಿದ್ದಂತೆಯೇ ದಿಗಂತದ ಅಂಚಲ್ಲಿ ಹಣತೆ ಹಚ್ಚಿದಂತೆ ಕಾಣುವ ಬೋಟುಗಳು, ಮೂರ್ನಾಲ್ಕು ಸೆಕೆಂಡುಗಳಿಗೆ ಒಮ್ಮೆ ನಕ್ಷತ್ರದಂತೆಯೇ ಮಿನುಗುವ ಬೇಲೆಕಾನಿನ ಲೈಟೌಸಿನ ದೀಪ. ಇಂಥವುಗಳನ್ನೆಲ್ಲ ಬೆನ್ನಲ್ಲಿ ಕಟ್ಟಿಕೊಂಡಿರುವ  ಗೋಕರ್ಣವು ಪ್ರತಿದಿನವೂ. ವಿವಿಧ ಬಣ್ಣಗಳಲ್ಲಿ ಮಿಂದೇಳುತ್ತ ಓಕಳಿಯಾಡುತ್ತದೆ.

ಚಿತ್ರ ವಿಚಿತ್ರವಾಗಿರುವ ಒಂದಿಷ್ಟು ವಿದೇಶಿಯರು; ತೀರಿಹೋದವರ ಕಾರ್ಯಮುಗಿಸಲು ಬಂದ ಒಂದಿಷ್ಟು ಜನರು; ದೇವಳದ ಎದುರಿಗೆ ದೂರ್ವೆ, ಕಮಲ, ಬಿಲ್ಪತ್ರೆ, ದಾಸಾಳ, ಕೋಟೆ ಹೂ, ಎಕ್ಕ ಮುಂತಾದವುಗಳನ್ನು ಚಂದಕ್ಲ ಎಲೆಯಲ್ಲಿ ಹಿಡಿದು ನಿಲ್ಲುವ ಹೆಂಗಸರು; ಬಣ್ಣದ ಪತಾಕೆಗಳಿಂದ ಸಿಂಗರಿಸಿಕೊಂಡು ಗೋಕರ್ಣದ ಗಣಪತಿ ದೇವಸ್ಥಾನದ ಎದುರಿಗೆ ಅಮಾವಾಸ್ಯೆಯ ಕಾದು ನಿಂತಿರುವ ರಥ; ಅಪರೂಪಕ್ಕೆ ಕಾಣುವ 'ಜೇಟಿ' ಕಟ್ಟಿರುವ ಹಾಲಕ್ಕಿ ಹೆಂಗಸರು; ಕೋಟಿ ತೀರ್ಥದ ಗಲ್ಲಿಗಳು, ರಸ್ತೆಯ ಇಕ್ಕೆಲಗಳಲ್ಲಿ ಬಗೆಬಗೆಯ ಕನಸುಗಳನ್ನು ಮಾರುವ ವ್ಯಾಪಾರಸ್ಥರು‌ ಮತ್ತು ಇದೆಲ್ಲವನ್ನು ನೋಡುತ್ತ ಆಕಳಿಸುವ ಕಡಲು!


ಅಪ್ಪ- ಅಮ್ಮನ ಜೊತೆಗೆ ಗಣಪತಿ ಮತ್ತು ಮಹಾಬಲನ ದರ್ಶನ ಮುಗಿಸಿ ವಾಡಿಕೆಯಂತೆ ಗೋಕರ್ಣದ ಮೇನ್ ಬೀಚಿಗೆ ಹೋಗಿದ್ದೆ. ಪಡುವಣದತ್ತ ಮುಖ ಮಾಡಿದ್ದ ಸೂರ್ಯ.  'ನೀರಿಗೆ ಇಳಿಯಡದೇ ಎಂದು ಹೇಳುತ್ತಲೆ' ಇದ್ದ ಅಮ್ಮನ ಬಗಲಲ್ಲೇ ನಡೆಯುತ್ತಿದ್ದೆ ನಾನು. ನನಗೆ ಈ ಸಮುದ್ರದ ನೀರಲ್ಲಿ ಮೈ ಒದ್ದೆ ಮಾಡಿಕೊಳ್ಳುವ ಎಂದು ಅನಿಸುವುದೇ ಇಲ್ಲ. ಆದರೆ ಪಾದ ತೋಯಿಸಿಕೊಂಡು ದಂಡೆಯುದ್ದಕ್ಕೂ ನಡೆಯುವುದು ಬಹಳ ಪ್ರೀತಿ.


ಒಂಟೆಯೊಂದಿಗೆ ಸಂಭಾಷಿಸುತ್ತಿರುವ ವಿದೇಶಿ ಮಹಿಳೆ, ತಲೆಗೊಂದು ಕೇಸರಿ ಮುಂಡಾಸು, ಕಾವಿ ಬಟ್ಟೆ ತೊಟ್ಟು ಎದೆಗೆ ತಾಗುವಷ್ಟು ಉದ್ದದ ಬಿಳಿಯ ಹತ್ತಿಯ ಗಡ್ಡವ ಬಿಟ್ಟ ನೀಲಿ ಕಣ್ಣಿನವ, ಸೆಲ್ಫಿ ತೆಗೆಯುವುದರಲ್ಲಿ ನಿರತಳಾಗಿರುವ ಮರಾಠಿ ಮಾತನಾಡುತ್ತಿದ್ದ ಹೆಂಗಸರು, ಮರಳಲ್ಲಿ ಮನೆಯ ಕಟ್ಟುತ್ತ ಇಹವ ಮರೆತಿರುವ ಮಕ್ಕಳು, ಬಾಂಬೆ ಮಿಠಾಯಿಯ ಗುಲಾಬಿ ಸೆರಗನ್ನು ಉದ್ದಕೆ ಬಿಟ್ಟು ನಡೆಯುತ್ತಿರುವವ, ಕ್ಯಾಂಡಿಯೊಂದನ್ನು ಮೆಲ್ಲುತ್ತ ಕುಳಿತಿರುವ ಮಗು, ಸೂರ್ಯಮುಳುಗುವುದರ 'time lapse' ತೆಗೆಯಲು ಹವಣಿಸಿರುವ ಟ್ರೈಪಾಡಿನ ಹುಡುಗ.

ಹೀಗೆ ದಡದಲ್ಲಿ ನೆರೆದಿದ್ದ ವಿವಿಧ ಬಗೆಯ ಜನರನ್ನು ಗಮನಿಸುತ್ತಿದ್ದವಳನ್ನು ಸೆಳೆದವಳು ದೊಡ್ಡ ಚೌಕವಿದ್ದ ಮಾಸಲು ಅಂಗಿ, ಅರೆಗೆಂಪು ಬಣ್ಣದ ಲಂಗ ಧರಿಸಿದ್ದ ಅಜಮಾಸು 8-9 ವರ್ಷದ ಬಾಲೆ. ಸೀದಾ ಬಂದವಳೇ ಕೈಯಲ್ಲಿದ್ದ ಟಮಕಿಯನ್ನು ಬಡಿಯುತ್ತ, ನನ್ನ ಕೈ ಹಿಡಿದು ಎಳೆಯ ತೊಡಗಿದಳು. ಸಿಗ್ನಲ್ಲಿನಲ್ಲಿ, ಬಸ್ಸಿನಲ್ಲಿ, ರಸ್ತೆಯಲ್ಲಿ ಹೀಗೆ ಮೈ ಮುಟ್ಟಿ ಹಣ ಕೇಳುವವರ ಕಂಡರೆ ಸರ್ರನೆ ಸಿಟ್ಟು ನೆತ್ತಿಗೇರಿಬಿಡ್ತದೆ ನನಗೆ. ಇನ್ನೇನು ಗದರಿಸಬೇಕು ಅಂದುಕೊಳ್ಳುವಷ್ಟರಲ್ಲಿ ತನ್ನೆರಡು ಮೊಲದ ಹಲ್ಲುಗಳನ್ನು ತೋರಿಸಿ ನಕ್ಕಳು. ಕಡಿಮೆಯೆಂದರೂ ಐದಾರು ಬಣ್ಣಗಳಿದ್ದ ನನ್ನ  ಅಂಗಿಯ ಮೇಲಿತ್ತು ಆಕೆಯ ಕಣ್ಣು. ನಾನೂ ಬಿಡಲಿಲ್ಲ ಫೊಟೊ ತೆಗಿತೇನೆ ಎಂದು ಕ್ಯಾಮೆರ ರೆಡಿ ಮಾಡಿಕೊಂಡೆ ತಕ್ಷಣ ಮುಖಕ್ಕೆ  ಕೈ ಅಡ್ಡ ಹಿಡಿದುಕೊಂಡಳು. ಅಪ್ಪ ಅವರ ಜೇಬಿಗೆ ಕೈ ಹಾಕಿ ಒಮ್ಮೆ ಜಾಲಾಡಿಸಿ ಸಿಕ್ಕ ಚಿಲ್ಲರೆಯನ್ನು ಅವಳಿಗೆ ಕೊಟ್ಟಿದ್ದರು. ಆದರೂ ಅವಳ ಕಣ್ಣು ನನ್ನ ಮೇಲೇಯೇ. ನನ್ನ ಚೋಟುದ್ದ ಕೂದಲು, ನನ್ನ ಕ್ಯಾಮೆರದ ಬಗ್ಗೆ ಒಂದಿಷ್ಟು ವಯೋಸಹಜ ಕುತೂಹಲ! ನಾನು ನನ್ನ ಹೆಗಲಿಗಿದ್ದ  ಜೋಳಿಗೆಯೊಳಗೆ ಕೈಹಾಕಿದೆ. ಸಿಕ್ಕಿದ್ದು pendent ಕಳೆದು ಹೋಗಿದ್ದ ಬೆಳ್ಳಿಯ ಬಣ್ಣದ ಚೈನು !

ನಾನು ಸ್ವಲ್ಪ ಹಿಂದೆಯೇ ಉಳಿದು ಈ ಪೋರಿಯನ್ನು 'ಇಲ್ಲಿ ಬಾ' ಎಂಬಂತೆ ಸನ್ನೆ ಮಾಡಿದೆ. ತಕ್ಷಣ ಓಡಿ ಬಂದಳು. ಅವಳ ಕೈಯನ್ನು ತೆಗೆದುಕೊಂಡು ಆ ಚೈನು ಅವಳ ಕೈಗಿತ್ತು ಮುಷ್ಟಿ ಕಟ್ಟಿ, ಮೆಲ್ಲನೆ ಉಸುರಿದೆ " ಯಾರಿಗೂ ತೋರಿಸಬೇಡ, ಕಂಡರೆ ನನಗೆ ಬೈಯುತ್ತಾರೆ ".  ನನ್ನ ಕಣ್ಣನ್ನೇ ಎರಡು ಸೆಕೆಂಡುಗಳಷ್ಟು ನೋಡಿದವಳು ತಲೆ ಆಡಿಸಿದಳು. ಅಷ್ಟರಲ್ಲಿ ತಿರುಗಿ ಬಂದ ಅಮ್ಮ 'ಇದಿನ್ನೂ ನಿನ್ನ ಬಿಟ್ಟಿದಿಲ್ಯನೇ' ಎನ್ನುತ್ತ ಬಂದ ಅಮ್ಮ ಐದು ರುಪಾಯಿಯ ನಾಣ್ಯವೊಂದನ್ನು ಕೊಡಲು ಕೈಚಾಚಿದರು.‌ ಬೊಗಸೆ ಬಿಡಿಸಲೇ ಇಲ್ಲ ಪೋರಿ!!

ಕಟ್ಟಿದ ಮುಷ್ಟಿ ಮತ್ತು ಹೆಬ್ಬೆರಳಿನ ಸಹಾಯದಿಂದಲೇ  5 ರೂಪಾಯಿಯ ತೆಗೆದುಕೊಂಡವಳು ಅಲ್ಲಿಂದ  ಓಡಿದಳು. ಅಲ್ಲೇ ಅನತಿ ದೂರದಲ್ಲಿ ದಂಡೆಯ ಮೇಲೆ ಕುಳಿತು ನಿಧಾನಕ್ಕೆ ಮುಷ್ಟಿ ಬಿಚ್ಚಿದವಳ ಕಂಗಳಲ್ಲಿ ದೀಪಗಳು ಹೊತ್ತಿಕೊಂಡವು. ಮೆಲ್ಲನೆ ಚೈನಿನ ಕೊಂಡಿ ಬಿಡಿಸಿಕೊಂಡು ಕುತ್ತಿಗೆಗೆ ಚೈನನ್ನು ಹಾಕಿಕೊಂಡಳು ನನ್ನತ್ತ ನೋಡಿದವಳಿಗೆ ನಾನು ಸೂಪರ್ ಎಂಬಂತೆ ಕೈಸನ್ನೆ ಮಾಡಿದೆ. ಮತ್ತೊಮ್ಮೆ ಆ ಮೊಲದ ಹಲ್ಲುಗಳ ತೋರಿಸಿ ನಕ್ಕ ಪೋರಿ ನಾಚಿಕೊಂಡು ಸಮುದ್ರದತ್ತ ಓಡಿದಳು.

ನಾವೂ ಹೀಗೆ ಬದುಕಿನ ಸಣ್ಣ ಸಣ್ಣ ಅಚ್ಚರಿಗಳನ್ನೂ ಸಂಭ್ರಮಿಸಿಬಿಡಬೇಕು, ಘಳಿಗೆಗಳ ಸವಿದುಬಿಡಬೇಕು.‌ ದ್ವೇಷಿಸುವುದಕ್ಕೆ, ಹಳಿಯುವುದಕ್ಕೆ , ಕೊರಗುವುದಕ್ಕೆ ಸಮಯವೆಲ್ಲಿದೆ ಹೇಳಿ?

1 comment: