Sunday, March 14, 2010

ನದಿಯ ತೀರದಲ್ಲೊಂದು ಒಂಟಿ ದೋಣಿ ..




ಮಂಗಳೂರಿನಿಂದ ಕುಮಟಾಕ್ಕೆ ಬರುವ ಹಾದಿಯಲ್ಲಿ ಏನಿಲ್ಲವೆಂದರೂ ಹನ್ನೆರಡು ನದಿ-ತೊರೆಗಳು ಸಿಗುತ್ತವೆ. ನದಿ ಎಂದಮೇಲೆ ಅದಕ್ಕೆರಡು ದಡಗಳು ಇರಲೇಬೇಕಲ್ಲವೇ ? ಆ ನದಿಗಳ ದಡದಲ್ಲಿ ಲಂಗರು ಹಾಕಿರುವ ಬೆಸ್ತರ ದೋಣಿಗಳು ನನ್ನನ್ನು ಬಹುವಾಗಿ ಕಾಡುತ್ತಿದ್ದವು. ಚಿಕ್ಕಂದಿನಿದಲೂ ಪ್ರಕೃತಿ ದ್ರಶ್ಯವಿರುವ ಚಿತ್ರ ಪಟಗಳು ನನ್ನನ್ನು ಸೆಳೆಯುತ್ತಿದ್ದವು. ಅದರಲ್ಲೂ ನದಿದಂಡೆ, ಅಲ್ಲೊಂದು ದೋಣಿ , ನದಿಯಲ್ಲಿ ಸಾಗುತ್ತಿರುವ ಹಾಯಿದೋಣಿ ಇರುವ ಚಿತ್ರಗಳೆಂದರೆ ಇದೇನೋ ಇಷ್ಟ. ಆ ಒಂಟಿ ದೋಣಿಗಳು ಅದೇನೇನೋ ಹೇಳುತ್ತಿರುವಂತೆ ಭಾಸವಾಗುತ್ತದೆ ನನಗೆ. ಅದಕ್ಕೆ ಜೀವವಿಲ್ಲ ಸರಿ, ಆದರೆ ನಮಗೆ ಜೀವವೂ ಇದೆ,ಭಾವವೂ ಇದೆ ಅಲ್ಲವೇ.?
ಒಂದು ಬಗೆಯ ಕುತೂಹಲ, ಒಂದು ಬಗೆಯ ಕಾಯುವಿಕೆ, ಒಂದು ಬಗೆಯ ಹತಾಶೆ , ಒಂದು ಬಗೆಯ ನಿರೀಕ್ಷೆ, ಒಂದು ಬಗೆಯ ನೆಮ್ಮದಿ ,ಏನೋ ಒಂದು ಖುಷಿ, ಮನದೊಳಗಿನ ಸಣ್ಣ ಭಯ.. ಹೀಗೆ ಹಲವು ಭಾವಗಳ ಸಮ್ಮಿಶ್ರಣ. ನವರಸಗಳ ಕೂಟ . ಆ ಒಂಟಿದೋಣಿ.


ಕಾಲಿಗೆ ಹಗ್ಗ ಹಾಕಿ ಮಂಚಕ್ಕೆ ಕಟ್ಟಿದ ತುಂಟ ಮಗುವಿನ ಸ್ಥಿತಿ ಆ ದೋಣಿಯದು .!ಒಂದು ಬಗೆಯ ಸ್ವಾತಂತ್ರ್ಯ , ಒಂದು ಬಗೆಯ ಬಂಧನವನ್ನು ಅನುಭವಿಸುವ ತ್ರಿಶಂಕು ಮನೋಸ್ಥಿತಿ . ಮಲೆನಾಡಿನ ತೋಟಗಳ ಮಧ್ಯದಲ್ಲಿರುವ ತೋಡುಗಳ ಮಧ್ಯ ಮಗುವೊಂದು ತನ್ನ ಅಂಗಿಯನ್ನು ಎತ್ತಿ ನಿಂತಂತೆ ಕಾಣುತ್ತದೆ ಆ ಒಂಟಿ ದೋಣಿ. ಒಂದೆಡೆ ನೀರಾಟದ ಮಜವಾದರೆ ಅಮ್ಮ ಎಲ್ಲಿ ಬೈಯ್ಯುವಳೋ ಎಂಬ ಸಣ್ಣ ಭಯ. ತನ್ನ ಹುಡುಗಿಯ ಜೊತೆ ಜಗಳವಾಡಿ ಬಂದು ಸಮುದ್ರದ ಅಂಚಿನಲ್ಲಿ ಸೂರ್ಯಾಸ್ತ ನೋಡುತ್ತಾ 'ಅವಳನ್ನು'miss ಮಾಡುತ್ತಿರುವ ಹುಡುಗನಂತೆ ಕಾಣುತ್ತದೆ ಒಮ್ಮೆ. ಮಗದೊಮ್ಮೆ ವೃದ್ಧಾಶ್ರಮದ ಮುಂದಿರುವ ಪುಟ್ಟ ಹೂದೋಟದ ಕೊನೆಯಲ್ಲಿರುವ ಹಳದಿ 'ಗುಲ್ಮೊಹರ್' ಗಿಡದ ಕೆಳಗೆ ಕಲ್ಲು ಬೆಂಚಿನಲ್ಲಿ ಕುಳಿತು ನೆನಪಿಗೆ ಬಾರದ ನೆನಪುಗಳ ಹುಡುಕಾಟದಲ್ಲಿರುವ ಅಜ್ಜನಂತೆ .!ಕೆಲವೊಮ್ಮೆ ಹೊಳೆಯಂಚಲಿ ಕುಳಿತು ತನ್ನ ಮುಂಗುರುಳುಗಳ ಜೊತೆ ಆಟವಾಡುತ್ತ ಇನಿಯನ ನೆನೆಯುತ್ತಿರುವ ಹುಡುಗಿಯಂತೆ. ಒಮ್ಮೊಮ್ಮೆ ಘೋರ ತಪಸ್ಸಿನಲ್ಲಿರುವ ಋಷಿಯಂತೆ. ವಿದೇಶಕ್ಕೆ ಹೋದ ಗಂಡ ವಾಪಸ್ಸಾಗುವ ಹಡಗಿನ ನಿರೀಕ್ಷೆಯಲ್ಲಿರುವ ರವೀಂದ್ರರ ಕಾದಂಬರಿಯ ಹೆಣ್ಣಂತೆ ಕಾಣುತ್ತದೆ .ಕೋಟಿ ಜನರ ನಡುವೆ ಇದ್ದರೂ ಕಾಣುವ ಆ ಏಕಾಂಗಿತನದ ಛಾಯೆ ಹೊತ್ತ ವ್ಯಕ್ತಿಯಂತೆ ಕಾಣುತ್ತಿದೆ, ಸಾವಿರ ಪುಟ್ಟ ಪುಟ್ಟ ಅಲೆಗಳ ಜೊತೆ ನಿಂತ ಆ ಒಂಟಿ ದೋಣಿ .ಕೆಲವೊಮ್ಮೆ ಕನ್ನಡ ಶಾಲೆ (ನಮ್ಮ ಕಡೆ primary ಸ್ಕೂಲ್) ಮೇಷ್ಟ್ರು ಹೊರ ಹಾಕಿದ ಹುಡುಗನಂತೆ ಭಾಸವಾಗುತ್ತದೆ . ಗಡಿ ಕಾಯುತ್ತಿರುವ ಯೋಧನಂತೆ ಕಂಡರೂ ಅಚ್ಚರಿಯಿಲ್ಲ .ಅಥವಾ ನಾವಿಕನಿಲ್ಲದೆ ಬದುಕಿಲ್ಲ ಎಂದು ಸಾರುತ್ತಾ ಶೂನ್ಯವನು ದಿಟ್ಟಿಸುತ್ತ ನಿಂತ ಬೈರಾಗಿ ಯಾಗಿಕಾಣುತ್ತಿದೆ . ಅಥವಾ ಅನಂತತೆಯಲ್ಲಿ ಒಂದಾಗುವ ವಿಶ್ವ ಮಾನವ ಸಂದೇಶವನ್ನು ಹೇಳುತ್ತಿದೆಯೋ?
ಕೊನೆಗೆ ಅಂದುಕೊಂಡೆ ಈ ಎಲ್ಲ ಕಾರಣಗಳಿಗೆ ಬೆಸ್ತರ ಜೀವನ ನೌಕೆ, ಕಲಾವಿದರಿಗೆ ಒಂಟಿ ದೋಣಿಯಾಗಿ ಕಾಡುತ್ತಿರಬೇಕು. ಜಡತೆಯಲ್ಲಿ ಚೇತನ ತುಂಬಲು, ಕಾಣಲು ಸೃಜನ ಶೀಲ ಮನಸೊಂದು ಬೇಕಷ್ಟೇ.. !