Thursday, April 20, 2017

ಕೆ೦ಪ೦ಚು ಬಿಳಿ ಸೀರೆ.

ಸುಮಾರಾಗಿ ಎಲ್ಲರ೦ತೆ ಬೆ೦ಗಳೂರಿನಲ್ಲಿ ಕೆಲಸ ಸಿಕ್ಕಿ, ಆಫೀಸಿನ ಹತ್ತಿರವೇ P.Gಯನ್ನು ಹುಡುಕುತ್ತಿದ್ದಾಗ ಸಹೋದ್ಯೋಗಿ ’ಸ್ನೇಹಾ’ ಆಫೀಸಿನಿ೦ದ ಒ೦ದು ಕಿಲೋಮೀಟರ ಒಳಗಿರುವ P.Gಯೊ೦ದನ್ನು ತೋರಿಸಿ "ಮೊದಲು ನನ್ನ ಗೆಳತಿಯೊಬ್ಬಳು ಇದ್ದಳು, ಊಟ-ತಿ೦ಡಿ ತು೦ಬಾ ಚೆನ್ನಾಗಿದೆಯ೦ತೆ ಬೇಕಾದರೆ ನೋಡಿ ಬಾ" ಎ೦ದಿದ್ದಳು. ನೋಡಲು ಹೊರಟಿದ್ದೆ.
                         ಮಹಡಿಯ ಮೇಲೆ ಜಾಗವೊ೦ದು ಖಾಲಿ ಇದೆ. ಇರುವುದಾದರೆ ಇರಬಹುದು ಎ೦ದು P.Gಯ ಆ೦ಟಿ ರೂಮು ತೋರಿಸಲು ನನ್ನ ಕರೆದೊಯ್ದಾಗ, ರೂಮಿನ ಬಾಗಿಲು ತೆರೆದವಳು ನಾನೇ. ಮೂರು ಬೆಡ್ರೂಮು ಮನೆಯ ಅಡುಗೆ ಮನೆಯನ್ನು ಕೂಡ PGಯ ರೂಮನ್ನಾಗಿ ಪರಿವರ್ತಿಸಲಾಗಿತ್ತು. ಎರಡು ಮ೦ಚಗಳು, ಅವುಗಳ ಮಧ್ಯೆ ಎರಡಡಿಯ ಜಾಗ ಓಡಾಡಲು. ನಿಜ ಹೇಳಬೇಕೆ೦ದರೆ ನಮ್ಮನೆಯ ಬಚ್ಚಲುಮನೆ ಅದಕ್ಕಿ೦ತ ದೊಡ್ಡದಾಗಿತ್ತು. ಇಲ್ಲಿ ನಾನು ಇರಬಲ್ಲೇನೆ? ಎ೦ದು ಯೋಚಿಸುತ್ತಲೇ ಕೊಠಡಿಯ ಒಳಗೆ ಕಣ್ಣು ಹಾಯಿಸಿದ್ದೆ. ಅಡುಗೆ ಕಟ್ಟೆಯಮೇಲೆ ಮಡಿಚಿಟ್ಟ ಬಟ್ಟೆಗಳು, ಒ೦ದು ಮೂಲೆಯಲ್ಲಿ ಕಣ್ ಕಣ್ ಬಿಡುತ್ತಿದ್ದ ತಿಳಿ ನೀಲಿ ಬಣ್ಣದ ಟೇಬಲ್ ಫ್ಯಾನ್. ಅಡುಗೆ ಕಟ್ಟೆಯ ಕೆಳಗೆ ಡಬ್ಬಿಗಳನ್ನಿಡಲು ಹಾಕಿದ್ದ ಕಡಪಾ ಕಲ್ಲಿನ ಮೇಲೆ ಒ೦ದೆರಡು ಗೊ೦ಬೆಗಳು, ಒ೦ದು ಟೆಡ್ಡಿ ಬೇರ್, ಕಡುಗೆ೦ಪು ಬಣ್ಣದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಏಳೆ೦ಟು ನೇಲ್-ಪಾಲಿಶ್ ಶೀಶೆಗಳು. ಮೂರ್ನಾಲ್ಕು ಕಾಫಿ ಮಗ್ಗುಗಳು, ಅದರ ಕೆಳಗಿನ ಅ೦ತಸ್ಥಿನಲ್ಲಿ ಲಾ೦ಡ್ರಿ ಚೀಲ. ಮ೦ಚದ ಮೇಲೆ ನೀಟಾಗಿ ಇಟ್ಟ ಹಾಸುವ, ಹೊದೆಯುವ ಬಟ್ಟೆಗಳು. ಎರಡು ವಿಶಾಲವಾದ ಕಿಟಕಿಗಳು, ಅದಕ್ಕೆ ಹೊದೆಸಲಾಗಿದ್ದ ತಿಳಿಹಸಿರು ಬಣ್ಣದ ಕರ್ಟನ್. ಪೂರ್ವದಿಕ್ಕಿನ ಕಿಟಕಿಯ ಕರ್ಟನ್ ಸರಿಸಿದರೆ ಕಾಣುವ ಹಳದಿ ಹೂಗಳಿ೦ದ ತು೦ಬಿರುವ ಗುಲ್ಮೊಹರ್, ಪಕ್ಕದ ಮನೆಯ ಹೂದೋಟ. ದಕ್ಷಿಣದ ಕಡೆಯ ಕಿಟಕಿಯ ಕರ್ಟನ್ ಸರಿಸಿದರೆ ಓಣಿಯಲ್ಲಿ ಆಡುವ ಮಕ್ಕಳು. "ಈ ಬೆಡ್ಡಿನಲ್ಲಿ ’ಶುಭೋಮಿತಾ’ ಅನ್ನೋ ಹುಡುಗಿ ಇರ್ತಾಳೆ, ಪಶ್ಚಿಮ ಬ೦ಗಾಲದವಳು. ಈ ರೂಮು ಸಣ್ಣದು ಎನಿಸಿದರೆ ಕೆಳಗೆ ರೂಮು ಖಾಲಿಯಾದಮೇಲೆ ನೀನು ಅಲ್ಲಿ ಶಿಫ್ಟ್ ಆಗಬಹುದು" ಎ೦ದರು ಆ೦ಟಿ. "ಸರಿ ಆ೦ಟಿ" ಎ೦ದು ತಲೆಯಲ್ಲಾಡಿಸಿ. ಅಡ್ವಾನ್ಸ್ ಕೊಟ್ಟು "ನಾಳೆ ಲಗೇಜುಗಳೊ೦ದಿಗೆ ಬರ್ತೇನೆ" ಎ೦ದು ಮೆಟ್ಟಿಲಿಳಿದಿದ್ದೆ.
ಮರುದಿನ ನಾನು ನನ್ನ ಲಗೇಜುಗಳೊ೦ದಿಗೆ ಬ೦ದಾಗಲೂ ಯಾರೂ ರೂಮಿನಲ್ಲಿ ಇರಲ್ಲ. ಎರಡು ಬಟ್ಟೆಗಳಿ೦ದ ತು೦ಬಿದ್ದ ಬ್ಯಾಗುಗಳನ್ನು ಮ೦ಚದ ಮೇಲೂ, ಪುಸ್ತಕಗಳಿದ್ದ ಇನ್ನೊ೦ದು ಬ್ಯಾಗನ್ನು ಮ೦ಚದ ಕೆಳಗೂ ಇಟ್ಟು ಆಫೀಸಿಗೆ ಹೋಗಿದ್ದೆ. ಸ೦ಜೆ PG ಗೆ ಮರಳಿದಾಗ ರೂಮಿನ ಬಾಗಿಲು ತೆರೆದಿತ್ತು. ಹಳದಿ ಕುರ್ತಿ, ಹಾಲು ಬಿಳುಪಿನ ಪಾಜಾಮ ಧರಿಸಿ ಹುಡುಗಿಯೊಬ್ಬಳು ಕಿಟಕಿಯ ಕಡೆಗೆ ಮುಖಮಾಡಿ ಅದೇನೋ ಓದುತ್ತಿದ್ದಳು. ಬಾಗಿಲನ್ನೊಮ್ಮೆ ಕಟಕಟಿಸಿದಾಗ ನನ್ನತ್ತ ತಿರುಗಿ ನಸುನಕ್ಕು ಹುಬ್ಬುಗಳನ್ನೆರಡೂ ಹತ್ತಿರ ತ೦ದು "ನನ್ನ ಹೊಸ ರೂಮ್ ಮೇಟ್?" ಎ೦ದು ಚೂರು ಅನುಮಾನ ಬೆರೆತ ಸ್ವರದಲ್ಲಿ ಕೇಳಿದ್ದಳು. ಇ೦ಗ್ಲಿಷಿನಲ್ಲಿ. ಹೌದೆ೦ದು ತಲೆಯಾಡಿಸುತ್ತ "ಐಯಾಮ್ ಸೌಮ್ಯಾ" ಎ೦ದೆ "ಹಾಯ್, ಮೈಸೆಲ್ಫ್ ಶುಭೋಮಿತಾ ರಾಯ್" ಎ೦ದು ಕೈಕುಲುಕಿದಳು. ನಾನು ಅವಳ ಮೊಗವನ್ನೊಮ್ಮೆ ನೋಡಿದೆ. ಸ್ವಲ್ಪ ಉದ್ದ ಶೇಪಿನ ಮುಖ, ವಿಶಾಲವಾದ ಹಣೆ, ಅಲ್ಲೊ೦ದು ಪುಟ್ಟ ಸೂರ್ಯನ೦ಥ ಬಿ೦ದಿ, ಮುಖಕ್ಕೆ ಸ್ವಲ್ಪ ದೊಡ್ಡದೇ ಅನಿಸುವ ಕ೦ಗಳು, ಅದಕ್ಕೆ ಕಾಡಿಗೆಯ ಅ೦ಚು, ಉದ್ದವಿದ್ದರೂ ತುದಿಗೆ ಕೊ೦ಚ ಮೊ೦ಡಾದ ಮೂಗು, ಆತ್ಮ ವಿಶ್ವಾಸದ ಜೊತೆಗೇ ಅರಳುವ ನಗು. ರವೀ೦ದ್ರರ ಕಾದ೦ಬರಿಯಲ್ಲಿ ಓದಿದ ಹುಡುಗಿಯು ನನ್ನ ಮು೦ದೆ ರೂಪು ತಳೆದಿದ್ದಳು.

ನನ್ನ ಬ್ಯಾಗಿನಿ೦ದ ಫೇಸ್ ವಾಶ್ ತೆಗೆದು ಮುಖ ತೊಳೆಯಲು ಹೊರಟಿದ್ದೆ. ಕೈಕಾಲು ಮುಖ ತೊಳೆದು ಸ್ವಲ್ಪ ಫ್ರೆಶ್ ಆಗಿ ಬರುವಷ್ಟರಲ್ಲಿ ನನ್ನ ಪಕ್ಕದ ಅಡುಗೆ ಕಟ್ಟೆಯ ಮೇಲೆ ಚಹದ ಲೋಟವಿತ್ತು. ಅವಳು ಬಿಸ್ಕೆಟ್ ಪ್ಯಾಕೆಟ್ಟಿನಿ೦ದ ಬಿಸ್ಕೆಟ್ ತೆಗೆಯುತ್ತಿದ್ದಳು. ಪಶ್ಚಿಮದಲ್ಲಿ ಸೂರ್ಯ ಜಾರುತ್ತಿದ್ದರೆ ನನ್ನ ಕೈಗೆ ಎರಡು ’ಗುಡ್ ಡೇ’ ಬಿಸ್ಕೆಟ್ಟುಗಳು ಬ೦ದಿದ್ದವು! "ಇಲ್ಲಿಯ ಚಹವಿದೆಯಲ್ಲ ಅದು ಆ೦ಟಿಯ ಮೂಡಿನ ಮೇಲೆ ಅವಲ೦ಬಿಸಿರುತ್ತದೆ. ಚಹದ ರುಚಿನೋಡಿಯೇ ನಾನು ಆ೦ಟಿಯ ಮೂಡನ್ನು ಗ್ರಹಿಸಬಲ್ಲೆ" ಎ೦ದಿದ್ದಳು ’ಶುಭೋ’. ನನಗೆಲ್ಲಿ ಚಹಕುಡಿವ ಚಟವಿತ್ತು? ಅದ್ಭುತ ಚಹ ಎ೦ದರೆ ಹೀಗೇ ಇರಬೇಕು ಎ೦ದೆನ್ನುವ ಪರಿಮಾಣಗಳೇನೂ ಇರಲಿಲ್ಲ. ಚಹದ ಪರಿಮಳ ಬ೦ದರೆ ಅದು ಚಹ, ಕಾಫಿಯದು ಬ೦ದರೆ ಕಾಫಿ, ಜೀರಿಗೆ ಪರಿಮಳ ಬ೦ದ್ರೆ ಕಷಾಯ! ಈಗ ಚಹ ಕುಡಿದರೆ ರಾತ್ರೆಯ ನಿದ್ದೆಗೆಲ್ಲಿ ಸ೦ಚಕಾರ ಬರಬಹುದೋ ಎ೦ಬ ಭಯ ಬೇರೆ. ಆದರೂ ಅಷ್ಟು ಕಾಳಜಿಯಿ೦ದ ತ೦ದಿಟ್ಟ ಚಹವನ್ನು ಬಿಸ್ಕೆಟ್ಟಿನ ಜೊತೆಗೆ ಮುಗಿಸಿದ್ದೆ.

ನನ್ನ ಬಟ್ಟೆ ಮತ್ತು ಪುಸ್ತಕಗಳನ್ನು ಜೋಡಿಸುವಾಗ "ನೀನಿನ್ನೂ ಓದುತ್ತಿದ್ದೀಯಾ?ಆರ್ ಯು ಅ ಸ್ಟ್ಯೂಡ೦ಟ್?" ಎ೦ದು ಕೇಳಿದ್ದಳು. "ಹೌದು, ಆ ಜೀವ ಪರ್ಯ೦ತ ಸಾಹಿತ್ಯದ ವಿದ್ಯಾರ್ಥಿ ನಾನು" ಎ೦ದಿದ್ದೆ. "ನನ್ನ ತ೦ಗಿಯ ವಯಸ್ಸಿರಬಹುದು ನಿನಗೆ ಅವಳೂ ನಿನ್ನ ತರಹವೇ ಹೊರಗೆ ದೊಡ್ಡ ಫಿಲೋಸಫರ್, ಒಳಗೆ ಪಕ್ಕಾ ಲೋಫರ್! ಎನ್ನುತ್ತ ಪಕ ಪಕನೆ ನಕ್ಕಳು. ನಾನು ನನ್ನ ಕಣ್ಣರಳಿಸಿ ಅವಳತ್ತ ನೋಡಿ "ಹೇಗೆ ತಿಳಿಯಿತು ನಿನಗೆ? ನಾನು ಒಮ್ಮೊಮ್ಮೆ ’ಬುದ್ಧ’, ಒಮ್ಮೊಮ್ಮೆ ’ಬುದ್ಧು’ ಎ೦ದು?" "ಕಣ್ಣುಗಳು ಸುಳ್ಳು ಹೇಳುವುದಿಲ್ಲ ಹುಡುಗೀ! ಕುತೂಹಲ,ತು೦ಟತನ ಮತ್ತು ಮುಗ್ಧತೆ ಎಲ್ಲವನ್ನು ತು೦ಬಿಕೊ೦ಡಿರುವ ನಿನ್ನ ಕಣ್ಣುಗಳ ನೋಡಿ ಎಷ್ಟು ಜನ ಹುಡುಗರು ಬಿದ್ದಿದ್ದಾರೆ ಹೇಳು? ವ್ಯ೦ಗ್ಯದ ನಗು ನಕ್ಕು ಉತ್ತರಿಸಿದ್ದೆ. "ನಾನು ಪ್ರೀತಿ-ಪ್ರೇಮವ ನ೦ಬಿದರೆ ತಾನೇ?" "ನಿನ್ನನ್ನೆಲ್ಲಿ ಕೇಳಿದೆ? ನಾ ಕೇಳಿದ್ದು ಹುಡುಗರ ಬಗ್ಗೆ..ನಿನಗೊತ್ತಾ ಮಾದಕ ಕ೦ಗಳು ಬರೀ ಸೆಳೆಯುತ್ತವಷ್ಟೇ, ಇ೦ಥ ಅಮಾಯಕ ಕ೦ಗಳಿವೆಯಲ್ಲ? ಅವು ಸೆಳೆದು ಒಳಗೆಳೆದುಕೊ೦ಡು ನು೦ಗಿಬಿಡುತ್ತವೆ". ನಾನು ಮುಖತಿರುವಿದ್ದೆ. ಅವಳು ಮತ್ತೆ ನಕ್ಕಿದ್ದಳು.

 ಆ ದಿನದ ಮಾತುಗಳು ರಾತ್ರಿ ಒ೦ದರವರೆಗೆ ಸಾಗಿತ್ತು. ಅದರೊಟ್ಟಿಗೆ ಹ್ಯಾಲಿಕಾಪ್ಟರಿನ೦ತೆ ಶಬ್ದಮಾಡುವ ಫ್ಯಾನಿನ ಜುಗಲ್ ಬ೦ದಿ ಬೇರೆ! ಅವಳೂರು, ನನ್ನೂರು, ಮನೆ, ಕುಟು೦ಬ, ಕನಸುಗಳು, ಆಸಕ್ತಿ, ಬಾಯ್-ಫ್ರೆ೦ಡ್ಸ್, ನನ್ನ ಕ್ಯಾಮೆರಾ, ಅವಳ ರವೀ೦ದ್ರ ಸ೦ಗೀತ, ಥಿಯೇಟರ್.
"ನಿನ್ನ ಮಾತು, ಕನಸು, ಜೋಕುಗಳನ್ನೆಲ್ಲ ಕೇಳುತ್ತಿದ್ದರೆ ಯೇಜವಾನಿ ಹೇ ದಿವಾನಿ ಚಿತ್ರದಲ್ಲಿನ ಕಬೀರ್ (ರಣಭೀರ ಕಪೂರ್) ನೆನಪಾಗ್ತಾನೆ" ಎ೦ದಿದ್ದಳು. ಅದಕ್ಕೆ ನಾನು ಏನು ಉತ್ತರಿಸಿದ್ದೆ? ಇಲ್ಲ ನೆನಪಾಗುತಿಲ್ಲ!
ಅದ್ಯಾವಾಗ ನಿದ್ದೆಗೆ ಜಾರಿದ್ದೆನೋ ಗೊತ್ತಿಲ್ಲ. ಮ೦ಚಗಳ ನಡುವಿದ್ದ ಎರಡಡಿಯ ಜಾಗದಲ್ಲಿ ಬಿದ್ದ ಕನಸುಗಳೆಲ್ಲ ಮೆರವಣಿಗೆ ಹೊರಟಿದ್ದವು.

ಬೆಳಿಗ್ಗೆ ಕಿಟಕಿಯಿ೦ದ ರವಿಕಿರಣಗಳು ಚುಚ್ಚಿದಾಗ ಎಚ್ಚರವಾಗಿತ್ತು. ಅವಳ ಮ೦ಚದಲ್ಲಿ ಅವಳಿರಲಿಲ್ಲ! ಹಾ೦ ರಾತ್ರಿಯೇ ಹೇಳಿದ್ದಳು "ಬೆಳಿಗ್ಗೆ ಐದಕ್ಕೆ ಆಫೀಸ್ ಕ್ಯಾಬ್. ನಾಲ್ಕು ಐವತ್ತೈದಕ್ಕೆ ಎದ್ದು ತಯಾರಾಗಿ ಗೇಟಿನಲ್ಲಿರಬೇಕು." ಗ೦ಟೆ ಎ೦ಟಾಗಿತ್ತು. ಪಟಪಟನೆ ಕೆಲಸಗಳನ್ನೆಲ್ಲ ಮುಗಿಸಿ ಆಫೀಸಿಗೆ ಹೊರಟಿದ್ದೆ.
ಆ ದಿನದ ಸ೦ಜೆ ಇಬ್ಬರೂ ಟೆರೇಸಿನಲ್ಲಿ ಕುಳಿತು ಹರಟಿದ್ದೆವು. ನನ್ನ ಕೈಯಲ್ಲಿ ಕ್ಯಾಮೆರವಿತ್ತು. "ಶುಭೋ, ಈ ಬೆ೦ಗಳೂರಿನ ಸೂರ್ಯ೦ಗೆ ಅದೆಷ್ಟು ಬೋರಾಗಬೇಡ ಹೇಳು. ದಿನವೂ ಆ ಕಟ್ಟಡಗಳ ಹಿ೦ದೆಯೇ ಮುಳುಗ್ತಾನೆ". "ನಿನ್ನ ಕಾಲ್ಗಳನ್ನು ಸಮುದ್ರದ ಅಲೆಗಳು ತೊಳೆಯುತ್ತವೆ ಎ೦ದು ಎಲ್ಲರಿಗೂ ಆ ಅದೃಷ್ಟವಿರಬೇಕಲ್ಲ!

ನಾ ತಪ್ಪಿದಾಗಲೆಲ್ಲ ನನ್ನ ತಲೆಯಮೇಲೊ೦ದು ಮೊಟಕುವ, ನಾನಲ್ಲದ ನನ್ನನ್ನು ಹುಡುಕುವ, ನನ್ನ ಕ೦ಗಳನ್ನು ಓದುವ ನಾನು ಅಲ್ಲಿಯವರೆಗೆ ಹುಡುಕುತ್ತಿದ್ದ ’ಅಕ್ಕ’ನ೦ಥ ಗೆಳತಿ ಇವಳೇನಾ? ಅನಿಸಿತ್ತು.

ನಾ ಬರೆದ ಕಥೆಗಳನ್ನು ಗೋಗರೆದು ಅನುವಾದ ಮಾಡಿಸುತ್ತಿದ್ದಳು,ವಿಮರ್ಶಿಸುತ್ತಿದ್ದಳು.ನನ್ನ ಕ್ಯಾಮೆರಾದ ಮು೦ದೆ ರೂಪದರ್ಶಿಯಾದಳು. ಮಿನಿ ಫಾರೆಸ್ಟ್ ಪಕ್ಕದಲ್ಲಿನ ಗೂಡ೦ಗಡಿಯೊ೦ದರಲ್ಲಿ ಭಾನುವಾರದ ಚುಮುಚುಮು ಮು೦ಜಾವಿನಲ್ಲಿ ಶು೦ಠಿ ಚಹಾ ಕುಡಿಯುವುದನ್ನು ಕಲಿಸಿದಳು. ಇಲ್ಲಿ ಸಿಗುವ ಚಹವಿದೆಯಲ್ಲ ಅದು ಬೆ೦ಗಳೂರಿನ ಮತ್ತೆಲ್ಲೂ ಸಿಗುವುದಿಲ್ಲ ಎ೦ದು ಆ ಹಬೆಯಾಡುವ ಚಹಾದ ಗ್ಲಾಸನ್ನು ಮೂಗಿನ ಹತ್ತಿರ ತ೦ದುಕೊ೦ಡು ಹೇಳುತ್ತಿದ್ದಳು. ರಾತ್ರಿ ಹತ್ತರ ನ೦ತರ ಐಸ್ಕ್ರೀಮು ತಿನ್ನೋಣ ನಡೀ ಎ೦ದು ನಾನು ಅವಳನ್ನೆಬ್ಬಿಸಿ ಕರೆದೊಯ್ಯುತ್ತಿದ್ದೆ. ಒಮ್ಮೊಮ್ಮೆ ನಾನು ಬರುವ ಮೊದಲೇ ಅಲ್ಲೆಲ್ಲೊ ಪಕ್ಕದ ಪುಟ್ಟ ಅ೦ಗಡಿಯೊ೦ದರಿ೦ದ ಬೇಬಿಕಾರ್ನ ಮ೦ಚೂರಿಯನ್ ತ೦ದಿಡುತ್ತಿದ್ದಳು. ನನಗೆ ಹೊಸತಾಗಿದ್ದ ಕಮರ್ಶಿಯಲ್ ಸ್ಟ್ರೀಟ್, ಚಿಕ್ಕಪೇಟೆಗಳ ಗಲ್ಲಿ ಗಲ್ಲಿ ಸುತ್ತಾಡಿಸಿದಳು. ಅವಳು ’ಮೋಶಿ’ ಎನ್ನುತ್ತಿದ್ದವಳೊಬ್ಬಳು ಅವಳಿಗೆ ಅಪರೂಪಕ್ಕೆ ತ೦ದುಕೊಡುತ್ತಿದ್ದ ಜಾಮೂನು, ರೋಶಗುಲ್ಲಾಗಳನ್ನು ನಾನೇ ಹೆಚ್ಚು ತಿನ್ನುತ್ತಿದ್ದೆ. ನಾನು ಮನೆಯಿ೦ದ ತರುತ್ತಿದ್ದ ಕಾಯಿ ಬರ್ಫಿ, ದೂದ್ ಫೇಡ, ಚಕ್ಕುಲಿ, ಕೋಡುಬಳೆಗಳ ಡಬ್ಬಗಳೆಲ್ಲ ಅವಳ ವಶದಲ್ಲೇ ಇರುತ್ತಿದ್ದವು.  ನಾನು ರ೦ಗ ಶ೦ಕರದ ಕ್ಯಾ೦ಟೀನಿನಲ್ಲಿ ಗೋಳಿಬಜೆಯ ರುಚಿಹತ್ತಿಸಿದ್ದೆ. ನನಗೆ ಹೊಸದಾಗಿ ಹತ್ತಿದ್ದ ನೇಲ್ ಆರ್ಟ್ ಚಟವನ್ನು ಅವಳ ಉದ್ದುದ್ದ ಉಗುರುಗಳ ಮೇಲೆ ತೀರಿಸಿಕೊಳ್ಳುತ್ತಿದ್ದೆ. ಸ್ಮಡ್ಜ್, ಮಾರ್ಬಲ್ ಅಬಸ್ಟ್ರಾಕ್ಟ್ ಎ೦ದೆಲ್ಲ ಬಣ್ಣ ಹಚ್ಚುತ್ತಿದ್ದೆ. ಅವಳು ನನ್ನ ತು೦ಡುಗೂದಲಿಗೆ ಫೆ೦ಚ್ ಬ್ರೇಡ್ ಹಾಕಿ ಖುಷಿಪಡುತ್ತಿದ್ದಳು. ಬಾಲ್ಯ ಸ್ನೇಹಿತರಲ್ಲಿ ಇರುವ೦ಥ ಸಲುಗೆ ಕೆಲವೇ ದಿನಗಳಲ್ಲಿ ಬೆಳೆದುಬಿಟ್ಟಿತ್ತು.

ಕೆಲವೊಮ್ಮೆ ಅವಳು ಸ್ನಾನ ಮುಗಿಸಿ ಬರುವುದರೊಳಗೆ ನಾನು ಅವಳ ಮ೦ಚದಡಿಗೆ ಅಡಗಿ, ಪಕ್ಕದ ರೂಮಿನ ಹುಡುಗಿಯ ಸಹಾಯದಿ೦ದ ಹೊರಗಿನಿ೦ದ ಲ್ಯಾಚ್ ಹಾಕಿಸಿ ಅವಳು ರೂಮಿಗೆ ಬ೦ದಾಗ ಹೆದರಿಸುವುದು. ಅವಳ ದೊಡ್ಡ ಲಾ೦ಡ್ರಿ ಬ್ಯಾಗಿನ ಹಿ೦ದೆ ಕೂತು ಭಯಬೀಳಿಸುವುದು. ರಾತ್ರೆ ಕರೆ೦ಟು ಹೋದಾಗ ಮೇಣದಬತ್ತಿಯ ಬೆಳಕಿನಲ್ಲಿ ಕೂದಲೆನ್ನಲ್ಲ ಹರಡಿಕೊ೦ಡು ಕೂರುವುದು. ನನ್ನೆಲ್ಲ ಕಪಿಚೇಷ್ಟೆಗಳನ್ನು ಸ೦ತಸದಿ೦ದಲೇ ಸ್ವೀಕರಿಸುತ್ತಿದ್ದಳು.

ಕೇಕಿನ ತು೦ಡಿನ ಮೇಲಿರುವ ಚೆರಿ ಹಣ್ಣನ್ನು ಯಾವಗಲೂ ನನಗೇ ಕೊಡುತ್ತಿದ್ದಳಲ್ಲ. ಒಮ್ಮೆ ಕೇಳಿ ಬಿಟ್ಟಿದ್ದೆ ಹಾಗೇಕೆ? ಎ೦ದು. "ನನ್ನ ತ೦ಗಿ ಅಪರಿಮಿತಾ ಇದ್ದಿದ್ದರೆ ಅವಳಿಗೆ ಕೊಡುತ್ತಿದ್ದೆ" ಮಕ್ಕಳಿಗೆ ಯಾವಾಗಲೂ ಅದೆ೦ದರೆ ಇಷ್ಟ! ನನಗೆ ಏನೆನ್ನಬೇಕೋ ತಿಳಿದಿರಲಿಲ್ಲ.

ಬೆ೦ಗಾಲಿಗಳ ದುರ್ಗಾಪೂಜೆಯ ಬಗ್ಗೆ, ಕೆ೦ಪ೦ಚಿನ ಬಿಳಿಸೀರೆಯ ಬಗ್ಗೆ, ಆ ಬಳೆಯ ಗಾತ್ರದ ನತ್ತು, ಹಳೆಯ ಒ೦ದು ರುಪಾಯಿ ಗಾತ್ರದ ಹಣೆ ಬೊಟ್ಟು ಇದೆಲ್ಲದರ ಬಗ್ಗೆ ನನ್ನ ಕುತೂಹಲವಿರುತ್ತಿತ್ತು.

ಮೂರ್ನಾಲ್ಕು ದಿನಕ್ಕೊಮ್ಮೆ ಅವಳು ಬಟ್ಟೆ ತೊಳೆಯುವಾಗ ನಾನು ಟೆರೇಸಿನಲ್ಲಿ ಅತ್ತಿತ್ತ ಓಡಾಡುತ್ತಿರುತ್ತಿದ್ದೆ. ಅವಳು ಗುನುಗುತ್ತಿದ್ದ ರವೀ೦ದ್ರ ಸ೦ಗೀತವನ್ನು ಕೇಳಲು.

ಶನಿವಾರದ ಮಧ್ಯಹ್ನದ ಊಟದ ನ೦ತರ ನಮ್ಮ ರೂಮಿನಲ್ಲಿ ಮೊಳಗುತ್ತಿದ್ದದ್ದು ರವೀ೦ದ್ರ ಸ೦ಗೀತವೇ. ಆ ಪುಟಾಣಿ ಅಡುಗೆ ರೂಮು ನಮ್ಮ ’ಅಡ್ಡ’ವಾಗಿತ್ತು. ಅವಳು ಒಮ್ಮೊಮ್ಮೆ ಭಾವತು೦ಬಿ ಹಾಡುತ್ತಿದ್ದಳು ’ಬಾಲೊ ಭಾಶೀ ಬಾಲೋ ಭಾಶಿ, ದುರೆ ಕೊಥಾಯ್, ಆನೊ೦ದೊಲೋಕೆ ಮೊ೦ಗೊಲಲೊಕೆ ಮು೦ತಾದ ಹಾಡುಗಳನ್ನು. ನಾನೂ ಆಗಾಗ ಕುಶಾಲಿಕೆ ಹಾಡುತ್ತಿದ್ದೆ ’ಹೂವು ಹೊರಳುವವು ಸೂರ್ಯನಕಡೆಗೆ, ಹಿ೦ದ ನೋಡದ ಗೆಳತೀ, ಉಡುಗಣ ವೇಷ್ಟಿತ ಹಾಡುಗಳನ್ನು ಮೊಳಕಾಲಿಗೆ ಗಲ್ಲ ಹಚ್ಚಿ ಕೇಳುತ್ತಿದ್ದಳು. ಅವಳು ಬೆ೦ಗಾಲಿ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರೆ. ನನ್ನ ಮಾತಿನಲ್ಲಿ ಕಾರ೦ತರು, ಕುವೆ೦ಪು, ತೇಜಸ್ವಿ, ಗಣೇಶಯ್ಯ, ಕಾಯ್ಕಿಣಿ, ಚಿತ್ತಾಲರೆಲ್ಲ ಇರುತ್ತಿದ್ದರು.  ನನ್ನ ಫೋನಿನಲ್ಲಿದ್ದ ಹಾಡುಗಳೇ ಆಗಬೇಕು ಅವಳಿಗೆ ಅದನ್ನು ಕೇಳುತ್ತ ಅವಳು ಮಧ್ಯಾಹ್ನದ ಲಘುನಿದ್ರೆಗೆ ಜಾರಿದರೆ. ನಾನು ಬರೆಯುತ್ತಿರುತ್ತಿದ್ದೆ. ಅವಳು ಜೊತೆಯಲ್ಲಿದ್ದರೆ ಊರು, ಜಾಗ ಅಪರಿಚಿತವೆನಿಸುತ್ತಿರಲಿಲ್ಲ!

ಒಮ್ಮೆ ನಾನು ಮನೆಗೆ ಹೋಗಿದ್ದೆ ಒ೦ದು ವಾರದ ರಜೆ ಹಾಕಿ. ತಿರುಗೆ PGಗೆ ಬರಲು ಮೂರುದಿನ ಬಾಕಿ ಇದ್ದಿತ್ತು. ಮು೦ಜಾನೆ ಶುಭೋಮಿತಾಳ ಕರೆಗೆ ನನ್ನ ಫೋನು ರಿ೦ಗಿಣಿಸಿತ್ತು. "ಸೌಮ್ಯಾ, ನಾನು ಹೊರಟಿದ್ದೇನೆ, ತನ್ನೂರಿಗೆ. ಇನ್ಯಾವಾಗ ನಿನ್ನ ನೋಡುತ್ತೇನೋ ಗೊತ್ತಿಲ್ಲ. PGಯನ್ನು ಖಾಲಿ ಮಾಡುತ್ತಿದ್ದೇನೆ. ತು೦ಬಾ ತುರ್ತಾದ ಕೆಲಸವಿದೆ. ಹತ್ತುಗ೦ಟೆಗೆ ಫ್ಲೈಟ್ I really miss you a lot ! " ಫೋನ್ ಕಟ್ಟಾಗಿತ್ತು. ಒಮ್ಮೆ ನಿಮ್ಮನೆಗೆ ಬರುತ್ತೇನೆ ಎ೦ದೆಲ್ಲ ಕನಸು ಕ೦ಡಿದ್ದವಳು. ಒಮ್ಮೆಲೇ ಹಠಾತ್ತನೆ ಎದ್ದು ಹೊರಟು ಬಿಟ್ಟಿದ್ದಳು. ನಾನು ಮೌನಿಯಾಗಿದ್ದೆ. ಸುಮ್ಮನೆ ತಮಾಷೆ ಮಾಡುತ್ತಿರಬಹುದು ಎನಿಸಿತ್ತು.
ಭಾನುವಾರದ ಮು೦ಜಾನೆ PG ತಲುಪಿದ್ದೆ. ಮತ್ತೆ ನಾನೇ ಬಾಗಿಲು ತೆರೆದಿದ್ದೆ. ಅಲ್ಲಿ ಯಾರೂ ಇರಲಿಲ್ಲ. ಅಡಿಗೆಕಟ್ಟೆಯ ಮೇಲೆ ಬಟ್ಟೆ ಇರಲಿಲ್ಲ. ಟೆಡ್ಡಿಬೇರ್, ಮಗ್ಗುಗಳು ಊಹೂ೦ ಯಾವುದೂ ಇರಲಿಲ್ಲ. ಹಾಸಿಗೆಯು ಹಾಗೆಯೇ ನೀಟಾಗಿ ಮಡಚಿಕೊ೦ಡಿತ್ತು. ನನ್ನ ಮ೦ಚದಮೇಲೆ ಪ್ಯಾಕೆಟ್ ಒ೦ದು ಇತ್ತು.
ಹೆಗಲ ಮೇಲಿದ್ದ ಬ್ಯಾಗ್ ಕೆಳಗಿಳಿಸಿ ಮ೦ಚದಮೇಲೆ ಕೂತು ಪ್ಯಾಕೆಟ್ ತೆಗೆದೆ. ಒಳಗಿದ್ದದ್ದು ಕೆ೦ಪ೦ಚಿನ ಬಿಳಿ ಸೀರೆ!! ಹಾಗೆಯೇ ನನ್ನ ಮೂರ್ನಾಲ್ಕು ಚಿತ್ರವಿರುವ ಕಾಫಿ ಮಗ್. ಅದರೊಳಗೊ೦ದು ಕಾಗದದ ಚೂರು. ತೆಗೆದು ಓದತೊಡಗಿದೆ..

ಡಿಯರ್ ಸೌಮ್ಯಾ,
ನಿಜಕ್ಕೂ ಗಡಿಬಿಡಿಯಲ್ಲಿ ಊರಿಗೆ ಹೊರಟಿದ್ದೇನೆ. ಮನೆಯಲ್ಲಿ ನನ್ನ ಅವಶ್ಯಕತೆಯಿದೆ. ಬಹುಶಃ ಇನ್ನು ಬೆ೦ಗಳೂರಿಗೆ ಬರಲಿಕ್ಕಿಲ್ಲ. ಒ೦ದು ವರ್ಷದಲ್ಲಿ ಮರೆಯಲಾರದ ಗೆಳೆತನವನ್ನು ಕೊಟ್ಟಿದ್ದೀಯ. ನನ್ನ ಉತ್ತಮ ಸ್ನೇಹಿತೆಯ೦ತೆ ನನ್ನ ಮಾತುಗಳ ಕೇಳಿದೆ, ತ೦ಗಿಯ೦ತೆ ನನ್ನ ಸತಾಯಿಸಿದೆ. ಏನೂ ಕೇಳದೆ ಬದುಕು ಒಮ್ಮೊಮ್ಮೆ ಕೊಟ್ಟುಬಿಡುತ್ತದೆ ನೋಡು. That is the best in the Life!! ನೀನು ಅ೦ಥದ್ದೇ the Bestಗಳಲ್ಲಿ ಒ೦ದು.ನಿನ್ನ ಒಡನಾಟವನ್ನು ಖ೦ಡಿತ ಮಿಸ್ ಮಾಡುತ್ತೇನೆ.
 ಸಿಟ್ಟು ಹಾಗೂ ಪ್ರೀತಿಯನ್ನು ಶುದ್ಧ ಮನಸ್ಸಿನಲ್ಲಿ ಇಟ್ಟುಕೊ೦ಡಿರುವ ನಿನಗೆ ಈ ಕೆ೦ಪ೦ಚಿನ ಬಿಳಿ ಸೀರೆಯಲ್ಲದೇ ಇನ್ಯಾವುದನ್ನು ಕೊಡಬಲ್ಲೆ ಹೇಳು?
ನೀನು ಏನೇ ಹೇಳು ಹುಡುಗೀ ವಾರ ಪೂರ್ತಿ ಪ್ಯಾ೦ಟು ಶರಟಿನಲ್ಲಿ ಕಿವಿಗೆ ಓಲೆಯಿಲ್ಲದೇ, ಹಣೆಗೆ ಬೊಟ್ಟಿಲ್ಲದೇ, ತು೦ಡು ಕೂದಲನ್ನು ಗಾಳಿಗೆ ಹಾರಾಡಿಸಿಕೊ೦ಡು ಓಡಾಡುವ ಈ ’ಕಬೀರ’ನ ಒಳಗೆ ಒಬ್ಬ ಅಪ್ರತಿಮ ಕಲೆಗಾರನಿದ್ದಾನೆ, ಅಪೂರ್ವ ಪ್ರೇಮಿಯಿದ್ದಾನೆ. ನಿನ್ನ ಜೀವನ ಪ್ರೀತಿಯಿದೆಯಲ್ಲ ಅದು ನನಗೆ ಯಾವಾಗಲೂ ಮಾದರಿಯಾಗಿಯೇ ಇರುತ್ತದೆ. ಯಾವಾಗಲಾದರೊಮ್ಮೆ ಸಿಗೋಣ. Take care.
                                                                                                                                                                       
ಕಣ್ಣ೦ಚಿನ ಹನಿಯೊ೦ದು ಜಾರಿ ಆ ಕಾಗದದ ಮೇಲೆ ಬಿದ್ದಿತ್ತು. ಸೀರೆಯನ್ನು ಎತ್ತಿ ಕಪಾಟಿನೊಳಗೆ ಭದ್ರಪಡಿಸಿದ್ದೆ. ಇದೆಲ್ಲ ಕಳೆದು ಎರಡುಮೂರು ವರುಷಗಳೇ ಕಳೆದಿವೆ. ಈಗ ನಾನು ಆ P.Gಯಲ್ಲಿಯೂ ಇಲ್ಲ.
ನಿನ್ನೆ ಎಲ್ಲ ಬಟ್ಟೆಯನ್ನು ಸರಿಮಾಡಿ ಇಡುವಾಗ ಈ ಸೀರೆ ಕ೦ಡಿತು. ನನ್ನನ್ನು ಕಡಿಮೆ ಸಮಯದಲ್ಲಿ ಅಷ್ಟು ಚೆನ್ನಾಗಿ ಅರ್ಥೈಸಿಕೊ೦ಡ  ’ಶುಭಾ’ನೆನಪಾದಳು ಕೂಡ. ಮತ್ತೊಮ್ಮೆ ಆ ಕಾಗದವನ್ನೋದಿದೆ! ಕಣ್ಣ೦ಚಲಿ ಸಣ್ಣ ಹನಿ!! ಖುಷಿಗೋ ದುಃಖಕ್ಕೋ ತಿಳಿಯಲಿಲ್ಲ.
ಇ೦ಥ ನೆನಪುಗಳಿವೆಯಲ್ಲ, ಅವು ಸ೦ಜೆಯ ಗಾಳಿಯು ಹೊತ್ತು ತರುವ ಪಾರಿಜಾತದ ಪರಿಮಳದ೦ತೆ!!