Monday, February 13, 2012

ದೊಡ್ಮನೆ ಘಟ್ಟದಲ್ಲಿಯ ಸಂಜೆಯ ಸಾಲುಗಳು


ಅದೇನೋ ಸೆಳೆತ ಮೊದಲಿ೦ದಲೂ ನೀಲಿ ಬೆಟ್ಟಗಳೆ೦ದರೆ, ಅ೦ಕುಡೊ೦ಕಾಗಿ ಬೆಟ್ಟ ಗುಡ್ಡ ಗಳ ಬಳಸಿ ಸಾಗುವ ಹಾದಿಗಳೆ೦ದರೆ. ಗಗನಚು೦ಬಿ ಮರಗಳ ತುದಿಯನ್ನು ನೋಡುತ್ತ  ನನ್ನದೇ ಲೋಕದಲ್ಲಿ ಸ೦ಚರಿಸುವುದೆ೦ದರೆ. ಮೊನ್ನೆ ಆದದ್ದು ಹಾಗೆಯೇ ಶಿವಮೊಗ್ಗೆಯಿ೦ದ ಕುಮಟೆಗೆ ಬರುತ್ತಿರುವಾಗ ಸಿದ್ದಾಪುರದ ದೊಡ್ಮನೆ ಘಟ್ಟದ ಸೊಗಸನ್ನು ಸವಿಯುವ ಅವಕಾಶವೊ೦ದು ಅನಾಯಾಸವಾಗಿ ಒದಗಿ ಬ೦ದಿತ್ತು. ಅದರಲ್ಲೂ ಹೊತ್ತು ಮುಳುಗುವ ಸಮಯದ ಪಯಣ. ತಾಳಗುಪ್ಪದಿ೦ದ- ಮೇಧಿನಿ ಗುಡ್ಡದ ತಪ್ಪಲ ವರೆಗಿನ ಪಯಣದ ದೃಶ್ಯಗಳು. ನೀಳವಾದ ಲೇಖನದಲ್ಲಿ ಆ ಘಟ್ಟದ ಸೌ೦ದರ್ಯವನ್ನು ಹಿಡಿದಿಡಲಾರೆ ಅನಿಸಿ. ಬಿಡಿಬಿಡಿಯಾದ ಸಾಲುಗಳಲ್ಲಿ ಹಿಡಿದಿಡುವ ಒ೦ದು ಪ್ರಯತ್ನ. ನಿಮಗೆ ಈ ಸಾಲುಗಳು ಮಾಸ್ತಿಮನೆಯ ಗೂಡ೦ಗಡಿಯಲ್ಲಿಯ ಗಾಜಿನ ಡಬ್ಬಗಳ ಒಳಗಿರುವ ಬಣ್ಣ ಬಣ್ಣದ ಪೆಪ್ಪರಮೆ೦ಟುಗಳ೦ತೆ ಕಾಣಬಹುದು. ದೊಡ್ಮನೆ ಘಟ್ಟದ ನೆತ್ತಿಯ ಮೇಲೆ ಹರಡಿರುವ ಬೆಳ್ಳಿ ಮೋಡಗಳ ಚೂರುಗಳಂತೆ ಕಾಣಬಹುದು. ಅಥವಾ ಅಲೆಮಾರಿಯೊಬ್ಬನ ಮನದ ಭಾವನೆಗಳ, ಅಲೆಗಳು ಪ್ರಕೃತಿಯ ದಡಕ್ಕೆ ಬಂದಂತೆ ಕಾಣಬಹುದು. ಕಲ್ಪಿಸಿಕೊಂಡರೆ ಪ್ರಕೃತಿಯೆಂಬ ಕಲಾವಿದೆಯ ಕಲಾಕೃತಿಯಂತೆ ಕಂಡರೆ ಅಚ್ಚರಿಯೇನಿಲ್ಲ.! 


 ಮುಂಜಾವಿಗಿಂತ ಸಂಜೆಯೇ ಹಿತವೆನಿಸುತ್ತದೆ ನನಗೆ. ಏಕೆಂದರೆ ಅದರೊಳಗೆ ಒಂದು ನೀರವ ರಾತ್ರಿಯಿರುತ್ತದೆ ಜೊತೆಗೆ ಮತ್ತೊಂದು ಮುಂಜಾವಿನ ನಿರೀಕ್ಷೆಯೂ ಸೇರಿಬಿಡುತ್ತದೆ. ಸಂಜೆಯ ಸೆರಗಲ್ಲಿದ್ದ ಸಾಲುಗಳು ಇವು . ಓದಿ ನೋಡಿ ಹೇಗಿದೆ ಹೇಳಿ.


** ಕೊಳವೊಂದರ ತಿಳಿ ನೀರಿನಲ್ಲಿ ಪ್ರತಿಬಿಂಬವ ನೋಡುವ ಹಂಬಲದಲ್ಲಿದ್ದಂತೆ ತೋರುವ ಶಿಶಿರದ ಚಳಿಗೆ ಬೆತ್ತಲಾಗಿ ನಿಂತ ಬೋಳು ಮರ. 


** ಅದ್ಯಾವುದೋ ಊರಿಗೆ ಸಾಗುವ ಗಡಿಬಿಡಿಯಲ್ಲೇ, ಮುಂಜಾವಿನ ಇಬ್ಬನಿಯಲ್ಲಿ ತೋಯುವ ಕನಸು ಕಾಣುತ್ತಿದ್ದ ಮಣ್ಣ ದಾರಿ. 


** ಬೆಳಗಿನ ಇಬ್ಬನಿಯ ಸಿಂಗಾರಕ್ಕಾಗಿ ಕಾದು ಕುಳಿತಂತಿದ್ದ ಹೊಸಚಿಗುರು .


** ಪಡುವಣದ ರವಿಯ ಎಳೆಕಿರಣಗಳ ಹೊದ್ದು ಬಂಗಾರದ ವರ್ಣದಲಿ ಮೆರೆಯುವ ಹಂಬಲದಲ್ಲಿದ್ದ ಬಯಲಿನಲ್ಲಿ ಮುಗುಮ್ಮಾಗಿ ಕುಳಿತಿದ್ದ ಜೋಡಿ ಕುತ್ತರಿ.


** ಆಗಸದ ನೀಲಿಗೆ ಸ್ಪರ್ಧೆಯೊಡ್ಡುವಂತಿದ್ದ ಅಂಗಿ, ಕಡು ನೀಲಿ ಬಣ್ಣದ ಲಂಗ ಹಾಕಿ, ಕೈಯಲ್ಲಿ ಬಣ್ಣದ ಕ್ಯಾಂಡಿ ಹಿಡಿದು ಮನೆಯ ಕಡೆಗೆ ಕುಣಿಯುವ ನಡಿಗೆಯಲ್ಲೇ ಹೊರಟಿದ್ದ ಕನ್ನಡ ಶಾಲೆಯ ಮಕ್ಕಳು.


** ಅದೀಗತಾನೆ ಮಿಡಿಗಳ ಕಚ್ಚಿಕೊಂಡಿರುವ ಗೇರುಮರದತ್ತ ಕಲ್ಲು ಹೊಡೆಯುವ ತರಾತುರಿಯಲ್ಲಿದ್ದ ಹುಡುಗರು .


** ಮೈತುಂಬ ಬಿಳಿಯ ಬಣ್ಣ ಬಳಿದುಕೊಂಡು ಶ್ವೇತಾಂಬರರಂತೆ ರಸ್ತೆ ಬದಿಗೆ ಸಾಲಾಗಿ ನಿಂತಿದ್ದ ಕಲ್ಲುಗಳು. 


**ತಾರಸಿಯ ಮನೆಗಳಿಗೆಲ್ಲ ಸೆಡ್ಡು ಹೊಡೆದು, ಭಿನ್ನವಾಗಿ ಬಯಲ ಕೊನೆಗೆ ನಿಂತ ಹುಲ್ಲು ಜೋಪಡಿ. 


**ಸೂರ್ಯಾಸ್ತದ ಸೊಬಗಲ್ಲಿ ಮೆಲುಕಾಡಿಸುತ್ತ ನಿಂತಿದ್ದ ಜೋಡಿ ಎತ್ತುಗಳು. ಪಕ್ಕದಲ್ಲಿ ಬೀಡಿ ಎಳೆಯುತ್ತಿದ್ದ ಎತ್ತಿನ ಗಾಡಿಯ ಮುದುಕ.


**ಮಳೆಗಾಲದ ಹಸಿರ ಗತ ವೈಭವವನ್ನು ಸಾರುತ್ತ ನಿಂತಿದ್ದ ಒಣ ಜೊಂಜು ಹುಲ್ಲುಗಳು .


**ಹಳೆಯ ನೆನಪುಗಳ ಕೆಣಕುವ ತಾಕತ್ತಿರುವ, ದಾರಿಯುದ್ದಕ್ಕೂ ಕಂಪು ಬೀರುತ್ತಲೇ ಇದ್ದ ಗುರಾಣಿ ಹೂವು. 


** ಹಸಿರು ನೀರ ಕೆರೆಯಲ್ಲಿ ದಿನದ ಬಟ್ಟೆಯ ಒಗೆಯುವ ಗಡಿಬಿದಿಯಲ್ಲಿದ್ದ ಹೆಂಗಸರು. ಜೊತೆಯಲ್ಲಿದ್ದ ಪುಟ್ಟಿಗೆ ನೀರಾಟವಾಡುವ ಸಂಭ್ರಮ.


**ಅದೆಷ್ಟೋ ಸೂರ್ಯಾಸ್ತಗಳ ಕಂಡ ಒಂಟಿಮನೆಯ ಅಟ್ಟದ ಮೇಲಿನ, ಕೆಂಪು ಹಸಿರು ಬಣ್ಣದ 'ಪಡುವಣದ ಕಿಟಕಿ'. 


** ಗದ್ದೆಯ ಬದಿಯ ಜೋಪಡಿಯ ಒಲೆಯಿಂದ ಅಲೆಅಲೆಯಾಗಿ ಬರುತ್ತಿದ್ದ 'ಸಂಜೆ ಆರರ ಹೊಗೆ', ಹೊಗೆಯ ಉಂಗುರವ ಧರಿಸಿ ನಿಂತ ಹಸಿರು ಗದ್ದೆ.


** ಬಯಲಲ್ಲಿ ಮೇಯುತ್ತಿದ್ದ ದನಕರುಗಳ ದೋಸ್ತಿ ಮಾಡಿಕೊಂಡು, ಬೆನ್ನ ಮೇಲೆ ಸವಾರಿ ಮಾಡುತ್ತಿದ್ದ ಕೊಕ್ಕರೆಗಳು.

** ಸೂರ್ಯನ ಸಿಟ್ಟನ್ನೆಲ್ಲಾ ಕುಡಿದು ಕೆಂಪಾಗಿ ಕುಳಿತಿದ್ದ ಎಲೆಯ ಮರೆಯಲ್ಲಿ  ಕುಳಿತಿದ್ದ ಕಾಡು ಹೂವು .

** ಕರುಗಳ ಕೊರಳ ಗಂಟೆಯಲ್ಲಿ ಪ್ರತಿಫಲಿಸುತ್ತಿದ್ದ ರವಿ ಕಿರಣ .

** ಭುವನಗಿರಿಯ ನೋಡುವ ಹಂಬಲದಿ ಎಡ ಸೀಟಿನಿಂದ ಬಲ ಪಕ್ಕದ ಸೀಟಿಗೆ ಹಾರಿದ್ದ ನಾನು.

**ಒಣಗಿ ಬಯಲಾದ ಗದ್ದೆಯನ್ನು ಕಾಯುತ್ತಿರುವ ಬೆಚ್ಚಪ್ಪನಿಗೆ ಅರಳು ಮರಳು ..! ಮಳೆಗಾಲದ ಕನಸನ್ನು ಕಾಣುತ್ತಿರಬಹುದು ಎಂದುಕೊಂಡ ನನ್ನ ಮನಸು.

** ಅರೆ ಬತ್ತಿದ ಕೊಳ್ಳದಲ್ಲಿ ಧ್ಯಾನಿಸುತ್ತ ನಿಂತ ಒಂಟಿ ಕಾಲ ಕೊಕ್ಕರೆ.


** ಮೂಗರಳಿಸುವಂತೆ ಮಾಡುವ ಅಡಿಕೆ ಸಿಂಗಾಗರದ ಅಲರು. 


** ದೊಡ್ಮನೆ ಘಟ್ಟ ಸಮೀಪಿಸುತ್ತಿರುವುದನ್ನು ಹೇಳುತ್ತಿದ್ದ ಕಾಡ ಸುಮಗಳ ಕಂಪು. ಕಣ್ಮುಚ್ಚಿ ಆ ಕಂಪ ಅನುಭವಿಸಬೇಕು ಎಂದು ಕೊಂಡೆ ಒಮ್ಮೆ... ಆದರೆ ಅದೆಲ್ಲಿ ಒಂದು ಸುಂದರ ದೃಶ್ಯ ತಪ್ಪಿ ಹೋಗುವುದೋ ಎಂದು ಕಣ್ಣ ಮುಚ್ಚಲೇ ಇಲ್ಲ. 


**ಮರೆಯಾಗಿ ಹೋಗಿದ್ದ ನೇಸರ,  ಸುವರ್ಣ ಬಣ್ಣಗಳ ಹೊದ್ದುಕೊಂಡ ತುಂಡು ಮೋಡಗಳು. ಅದೇನೋ ಮುದ ಕೊಡುತ್ತಿದ್ದ, ಯಾರನ್ನೋ ನೆನಪಿಸುತ್ತಿದ್ದ ಮಾಗಿಯ ಗಾಳಿ. ಜೊತೆಗೆ ಬಂದಿತ್ತು ಬಹಳ ಹೊತ್ತಿನಿಂದ ಕುತೂಹಲದಿಂದ ಕಾಯುತ್ತಿದ್ದ ದೊಡ್ಮನೆ ಘಟ್ಟ.ಘಟ್ಟ  ಮುಗಿಯುವ ಮೊದಲೇ ಬೆಳಕು ಆರಿ ಬಿಡುವುದಲ್ಲ ಎಂಬ ಬೇಸರ ನನ್ನ ಮನಸನ್ನು ಆವರಿಸಿಕೊಂಡು ಬಿಟ್ಟಿತ್ತು. ಮನುಷ್ಯನನ್ನು ವರ್ತಮಾನಕ್ಕಿಂತ ತೀವ್ರವಾಗಿ ಕಾಡುವುದು ಭೂತ ಭವಿಷ್ಯಗಳಂತೆ ..!


** ಸಂಜೆ ಏಳರ ಹೊಗೆ ಮುಸುಕಿಕೊಂಡ ದೊಡ್ಮನೆ ಘಟ್ಟದ ನೆತ್ತಿಗೆ ಕಿರೀಟ ಕಟ್ಟಿದ್ದ ಕೆಂಬಣ್ಣದ ಮೋಡಗಳು. ಆ ವೈಭವವನ್ನು ನೋಡಲೋ ಎಂಬಂತೆ ಸಾಗಿ ಹೋಗಿತ್ತು ಒಂದು ಹೊಗೆ ವಿಮಾನ.


**ಘಟ್ಟದ ತುಂಬೆಲ್ಲ, ನೀರಪಸೆಯ ತಂಪು - ಕಾಡು ಹೂಗಳ ಕಂಪಿನ ಜುಗಲ್ ಬಂಧಿ.
 ಹೊತ್ತು ಮುಳುಗಿತ್ತು. ಸಂಜೆ ಮತ್ತು ರಾತ್ರಿಯ ನಡುವಿನ ಅವಧಿಯದು ( the dusk it was ). ಈ ಕತ್ತಲಾವರಿಸುವುದ  ನೋಡುವುದೇ ಒಂದು ಚಂದ. ಥೇಟ್ ನಮ್ಮನೆಯ ಅಂಗಳದ ಕೊನೆಗಿರುವ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಬಿರಿದ ಹಾಗೆ. ಮದುವೆ ಸೀರೆಯನ್ನು ಅಮ್ಮ ಜತನದಿಂದ ಮಡಿಸಿಟ್ಟ ಹಾಗೆ. ಅಷ್ಟೇ ನಾಜೂಕು, ಅದೇ ಪ್ರೀತಿ.  ಕ್ಷಣ ಕ್ಷಣಕ್ಕೂ ಬದಲಾಗುವ ಆಗಸದ ಬಣ್ಣ. ನೆರಳಿನಂತೆ ಗೋಚರವಾಗುವ ಗಿಡ ಮರಗಳು. ನಿಶೆಯು ನಿಧಾನಕ್ಕೆ ಮುಸುಕೆಳೆದುಕೊಳ್ಳುತ್ತಿತ್ತು. ಕಿಟಕಿಯನ್ನು ತೆರೆದೇ ಇಟ್ಟಿದ್ದೆ, ಮೈಮೇಲೆ ಮುಳ್ಳುಗಳ ಎಬ್ಬಿಸುವ ಶೀತಗಾಳಿಯನ್ನೂ ಲೆಕ್ಕಿಸದೆ.! ಕಿಟಕಿಯಾಚೆಯ ಅಂಧಕಾರದ ಜಗತ್ತಿನಲಿ ಅದೇನೋ ಹುಡುಕುವ ಹಂಬಲದಿ ಇಣುಕುತ್ತಿದ್ದ ನನಗೆ ಕಂಡದ್ದು 'ಮೊದಲ ಚುಕ್ಕಿ' (the solitary star). 
ಅಷ್ಟರಲ್ಲಿ ಮಾಸ್ತಿಮನೆಯ ಅಂಗಡಿಯಲ್ಲಿ ಚಿಮಣಿಯ ಮಿಣಿ ಮಿಣಿ ದೀಪ ಬೆಳಗುತ್ತಿತ್ತು. ಇನ್ನೇನು ನಾನು ಇಳಿಯುವ ಜಾಗ ಬಂತೆಂಬ ಸೂಚನೆಯಂತೆ...!