Saturday, May 22, 2010

ಕಾಡಿಸಿತ್ತು ಬೇಸಿಗೆ ಮಳೆ ...




ಮೊನ್ನೆ ಇಡೀ, ಏಕತಾನತೆಯಿಂದ ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತಿತ್ತು ನನಗೆ . ಒಂದು ಮಳೆಯಾದರೂ ಬರಬಾರದೇ . ಭೂಮಿ, ವಾತಾವರಣ, ಕೊನೆಗೆ ಮನಸ್ಸು, ಎಲ್ಲ ಒಮ್ಮೆ ತಂಪಾಗಬಾರದೆ ಎಂದುಕೊಳ್ಳುತ್ತಿದ್ದೆ .
ಬೇಸಿಗೆ ಮಳೆಯ ಮಜವೇ ಬೇರೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ಕಾದ ಭೂಮಿಗೆ, ಮಳೆಯ ಸಿಂಚನವಾದೊಡನೆ, ಪ್ರಕೃತಿಯಲ್ಲೆಲ್ಲ ಘಮ ಘಮ. ಮಣ್ಣ ಕಂಪು, ಮಳೆಯ ತಂಪುಗಳ wonderful combination.! ಆಗ ಕೈಯಲ್ಲೊಂದು icecream ಇದ್ದರಂತೂ ಅದೇ ಸ್ವರ್ಗ. ಅಂತದ್ದೇ ಒಂದು ಮಳೆಗೆ, ಒಂದು ಕಾಮನಬಿಲ್ಲಿಗೆ ಮನಸು ಕಾದಿತ್ತು.
ನನ್ನ ತಳಮಳ ಅರ್ಥವಾಗಿರಬೇಕು ಮೇಘ ರಾಜನಿಗೆ . ಪೂರ್ವ ದಿಕ್ಕಿನಲ್ಲಿ ಮೇಘ ಸಂದೇಶ, ಕಾಳಿದಾಸನ ಮೇಘದೂತ ಮನದ ಪಟದಲ್ಲಿ ಹಾದು ಹೋಗಿದ್ದ . ಸಂಜೆ ೬-೭ರ ಸುಮಾರಿಗೆ ಮಳೆ ಸುರಿಯಬಹುದೆಂದು ಎಣಿಸಿದ್ದೆ, ಬರಲೇ ಇಲ್ಲ ಮಳೆ. ಮಳೆ ಕಾಡಿತ್ತು , ಕಂಗೆಡಿಸಿತ್ತು.
ರಾತ್ರಿಯ ಊಟ ಮುಗಿಸಿ ರೂಮಿಗೆ ಬರುವಾಗಲೇ ಮಿಂಚುತ್ತಿತ್ತು ಬಾನು. 'ಆಂಟೀ ಮಳೆ ಬಂದ್ರೆ ಸಾಕು' ಎಂದು PG ಆಂಟೀ ಹತ್ರ ಹೇಳಿ, ರೂಮಿಗೆ ನಡೆದಿದ್ದೆ. ರಾತ್ರಿ ಕರೆಂಟು ಕೈ ಕೊಟ್ಟಾಗಲೇ ನನಗೆ ಎಚ್ಚರವಾದದ್ದು . ನನ್ನ ರೂಮಿನಲ್ಲಿದ್ದ ಕತ್ತೆಲೆಗೆ ಸೆಡ್ಡು ಹೊಡೆಯುತ್ತಿದ್ದ ಮಿಂಚು ಬಳ್ಳಿಗಳು. ಪಕ್ಕದ ಗುಡ್ಡಗಳಿಗೆ ಬಡಿದು ಪ್ರತಿಧ್ವನಿಸಿ ನನ್ನ ರೂಮಿನಲ್ಲೇ ಕೊನೆಯಾದಂತೆ ಭಾಸವಾಗುವ ಗುಡುಗು.ತರಗೆಲೆಗಳ ಶಬ್ದದೊಂದಿಗೆ ಬೀಸುತ್ತಿದ್ದ ಗಾಳಿ. ಹಾಗೆ ಪಟ ಪಟನೆ ಮಳೆ ಹನಿಗಳು ಬೀಳತೊಡಗಿದವು. ಮಳೆ ಭೋರೆಂದು ಸುರಿಯ ತೊಡಗಿತು. ಬಿಟ್ಟು ಹೋದ ಹುಡುಗನನ್ನು ನೆನೆದು ಅಳುತ್ತಿದ್ದ ಹುಡುಗಿಯಂತೆ ರೋಧಿಸುತ್ತಿತ್ತು ಬಾನು.
ಹೊರಗಡೆ ಮಳೆ ಹನಿಯ ಅದೇ ಚಟಪಟ..ನನ್ನ ರೂಮಿನ ಹೊರಗೆ ಹಾಕಿರುವ ನೀಲಿ ಬಣ್ಣದ ತಾಡಪತ್ರೆಯ (plastic sheet) ಮೇಲೆ. ಪಕ್ಕದ ಮನೆಯ ಹಲವು ಮಳೆಗಾಲಗಳನ್ನು ಕಂಡಿರುವ ಅರೆ ಕಪ್ಪು ಬಣ್ಣದ ಹೆಂಚುಗಳ ಮೇಲೆ,ಎದುರಿಗಿರುವ ಹಳದಿ ಗುಲ್ ಮೊಹರ್ ಗಿಡದ ಮೇಲೆ, ಕೆಸುವಿನ ಎಳೆಗಳ ಮೇಲೆ , ಅಂಗಳಕ್ಕೆ ಹಾಸಿರುವ ಕಲ್ಲಿನ ಮೇಲೆ ಬೀಳುವ ಮಳೆಹನಿಗಳ ಸದ್ದು ಬೇರೆ ಬೇರೆ ಇದ್ದಂತ ಭಾವ,ನನ್ನದೇ ಕಲ್ಪನೆಯ ಲೋಕ.
ಮನೆ,ಅಮ್ಮ ಎಲ್ಲವೂ ನೆನಪಾಗಿದ್ದವು. ನನ್ನ ಪುಟ್ಟ ರೂಮಿನ, ಪುಟ್ಟ ಮಂಚದ ಮೂಲೆಯಲ್ಲಿ ಅಮ್ಮನ ನೈಟಿಯನ್ನು ಹಿಡಿದು ಮುದುರಿ ಕುಳಿತಿದ್ದೆ. ಮಳೆಯ ಚಟಪಟಕ್ಕೆ ಮನದಲ್ಲಿ ನೆನಪುಗಳ ಜಾತ್ರೆ . ಜಾತ್ರೆಯಲ್ಲಿ ಇರುವವರು ಯಾರು ಎಂದು ಪತ್ತೆ ಹಚ್ಚುವುದರ ಒಳಗೆ ಬಂದ ಕರೆಂಟು, ಕಟ ಕಟ ಸದ್ದಿನೊಂದಿಗೆ ತಿರುಗಲು ಶುರುವಿಟ್ಟುಕೊಂಡ ಫ್ಯಾನು.ನೆನಪುಗಳ ಸರೋವರದಲ್ಲಿ ಯಾರೋ ಕಲ್ಲೆಸೆದ ಭಾವನೆ. ಮನದಲ್ಲೇನೋ ಕಸಿವಿಸಿ. ನೆನಪುಗಳ ಪ್ರವಾಹಕ್ಕೆ ತಡೆಯೊಡ್ಡಿ ಕಿಟಕಿ ತೆರೆದೆ...
ಕಾದ ಮಣ್ಣಿನಲ್ಲಿ ಮಳೆಹನಿ ಇಳಿವ ಭರಕ್ಕೆ ಎದ್ದ ಮಣ್ಣ ಕಂಪು. ಆ ಕಂಪಿಗೆ ಸಣ್ಣಕೆ ರೋಮಾಂಚಿತಗೊಂಡಿತ್ತು ಮನಸು. ಕಿಟಕಿಯಿಂದಲೇ ಮಳೆಹನಿಯನ್ನು ಹಿಡಿಯುವ ಪುಟ್ಟ ಪ್ರಯತ್ನವನ್ನೂ ಮಾಡಿದ್ದೆ. ಆಗಲೇ ನೆನಪಾಗಿತ್ತು. ಅಮ್ಮ ಜೋರು ಮಳೆ ಸುರಿಯುತ್ತಿರುವಾಗ ದೋಸೆ ಎರೆಯುತ್ತ, ಅಥವಾ ಮಳೆಗಾಲದಲ್ಲಿ ಕರೆಂಟು ಕೈಕೊಟ್ಟಾಗ ತನ್ಮಯಳಾಗಿ ಹಾಡುತ್ತಿದ್ದ ಮಳೆ ಹಾಡು. ಕವಿ ಸಿದ್ದಯ್ಯ ಪುರಾಣಿಕರು ಬರೆದ ಭಾವಗೀತೆಗೆ ಅಮ್ಮ ಜೀವ ತುಂಬಿ ಹಾಡುತ್ತಾಳೆ. ಆ ಕವನದ ಸಾಲುಗಳು ಹೀಗಿವೆ. :
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನವೆನ್ನುವುದು ಮಳೆಯ ಲೀಲೆ
ಮಳೆಯ ಹನಿ ಮಧು ನೆಲಕೆ ಈ ಜಗದ ಮೃತ್ತಿಕೆಯ
ಕಣಕಣವು ಮಧುವ್ರತವು ಸೃಷ್ಟಿಯೆಂಬ
ಹುಟ್ಟಿನಲಿ ಶೇಖರಿತವಾಗುತಿದೆ ಮಧುಕೋಶ
ಮಾಧುರ್ಯ ಪಸರಿಸಿದೆ ತಿರೆಯ ತುಂಬ
ಹುಲ್ಲ ಹಾಸಿನ ಮೇಲೆ ಮಳೆವನಿಯ ಸೇಸೆಯಿದು
ಯಾರ ಪರಿಣಯಕಾಗಿ ? ಹೇಳು ಕವಿಯೇ!
ಆಗಸದ ಹಂದರಕೆ ಮಳೆಯ ಮುತ್ತಿನ ಸರವು
ಆಗಿಹುದು ಮದುವೆಮನೆ ಬುವಿಗೆ ಬುವಿಯೇ
ನೆಲಮುಗಿಲನಪ್ಪಿದುದೋ ಮುಗಿಲೆ ನೆಲನಪ್ಪಿದುದೋ
ಮಳೆಯಲ್ಲಿ ಬದಲಾಯ್ತು ಬಯಲಿನಂತರವು ;
ಎಲ್ಲ ನೆಲ ಎಲ್ಲ ಜಲ, ಎಲ್ಲ ಅಂಬರ ತಲವು
ನೆಲ ಮುಗಿಲು ಬಯಲೆಂಬ ಭೇದ ಆವಾಂತರವು
ಜಗದ ಪೀಠದ, ಬಯಲ ಗೋಲಕದ ಮಿಂಚುಗಳ
ಪಂಚ ಸೂತ್ರದ ಲಿಂಗ-ಮಳೆಯ ಅಭಿಷೇಕ !
ನೀರಲ್ಲ ಇದು ತೀರ್ಥ, ವಿಶ್ವ ಲಿಂಗೋದಕವು
ಆಗಲಿನ್ನಾದರೂ ನರಕ ನಾಕ .
ಅರ್ಥ ಪೂರ್ಣ ಕವನ ಅಲ್ವಾ ? ಕವಿಯ ಕಲ್ಪನೆಗೊಮ್ಮೆ hats off ಎಂದಿದ್ದೆ . ಇದೇ ಹಾಡು ಗುಮ್ಮನಂತೆ ಕಾಡಿತ್ತು .ಫೋನ್ ಮಾಡಿ ಅಮ್ಮನನ್ನು ಹಾಡೆಂದು ಕೇಳಲು ಗಂಟೆ ೧೨.೪೫ .! ಅದೇ ಹಾಡು ಗುಯ್ಯ್ ಗುಡುತ್ತಿತ್ತು ಕಿವಿಯಲ್ಲಿ . ಹಾಗೆ ಮುಸುಕೆಳೆದು ಮಲಗಿದ್ದೆ. ಭರ್ರ್ಎಂದು ತಿರುಗುತ್ತಿದ್ದ ಫ್ಯಾನ್ ಸದ್ದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓದುತ್ತಿದ್ದ ವಾಹನಗಳ ಸದ್ದಿಗೆ ಮಳೆಯ ಚಟಪಟ ಅಡಗಿಕೊಂಡಿತ್ತು. ಅರೆ ಮಂಪರು... ಕಿವಿಯಲ್ಲಿ ಯಾರೋ ಅದೇ ಹಾಡನ್ನು ಗುನುಗಿದಂತೆ. ಹಾಗೆ ನಿದ್ದೆ ಹೋಗಿದ್ದೆ .
ಬೆಳಿಗ್ಗೆ ಎಚ್ಚರವಾದಾಗ ಭರ್ತಿ ೭ ಗಂಟೆ. ದಡಬಡಿಸಿ ಎದ್ದಿದ್ದೆ ,.. ಬಾಗಿಲು ತೆರೆಯುತ್ತಿದ್ದಂತೆ ನಗು ಚೆಲ್ಲಿದ ಬೆಳಕು .ಹಾಗೆ ಬರಿಗಾಲಲ್ಲೇ ಗುಲ್ ಮೊಹರ್ ಗಿಡದತ್ತ ಓಡಿದ್ದೆ . ತಂಗಾಳಿ ಹೊಂಬೆಳಕುಗಳ ಸುಂದರ ಸಮಾಗಮ. ಗಿಡದಲ್ಲಿ ಕೂತಿದ್ದ ಮಿಂಚುಳ್ಳಿಯೊಂದು ನನ್ನ ನೋಡುತ್ತಲೇ ಹಾರಿತ್ತು.ಗುಲ್ಮೊಹರ ಗಿಡದಿಂದ ಹೂ-ಮಳೆಹನಿ ಎರಡೂ ನನ್ನ ಮೇಲೆ ಉದುರುತ್ತಿತ್ತು . ಮನಸ್ಸಿಗೆ ಅದೇನೋ ಅವ್ಯಕ್ತ ಆನಂದ.. ನನಗೆ ಅರಿವಿಲ್ಲದಂತೆ ಗುನುಗುತ್ತಿದ್ದೆ 'ಮುಂಜಾವಿನಲಿ ತುಂತುರಿನ ಸೋನೆ ಮಳೆ ..'
ಬೇಸಿಗೆಯ ಒಂದು ಮಳೆ ಅದೆಷ್ಟು ಅಪ್ಯಾಯಮಾನ. ಮನೆಯ ನೆನಪನ್ನು ಗುಮ್ಮನಂತೆ ಕಾಡಿಸಿ. ಬೆಳಿಗ್ಗೆ ಹೊಸ ಜಗತ್ತನ್ನು ತೋರಿಸಿದ ಮಳೆಗೆ ಮನದಲ್ಲೇ thanks ಎಂದಿದ್ದೆ

Monday, May 17, 2010

ಚಂದಿರನ ಮೇಲೆ ಮನೆಯ ಕಟ್ಟುವರಂತೆ ...


ಅಜ್ಜ ಮೊಮ್ಮಗನ ಸಂಬಂಧವನ್ನು ಕಥನ ಕವನದಲ್ಲಿ ಹಿಡಿದಿಡುವ ಒಂದು ಸಣ್ಣ ಮುಗ್ಧ ಪ್ರಯತ್ನ ಚಂದ್ರಯಾನದ ಕುರಿತು ಅದೆಲ್ಲೋ ಕೇಳಿದ್ದ ಪುಟ್ಟನ ಮುಗ್ಧ ಕಲ್ಪನೆ ಅದಕ್ಕೆ ಮಾತಿನ ರೂಪ ..ಉತ್ತರವಾಗಿ ಭಾವಗಳನ್ನು ಹೊರಸೂಸುವ ಅಜ್ಜಾ :
ದಶಕಗಳ ನೆರಿಗೆಯಿರುವ ಅಜ್ಜನ ಕೈಹಿಡಿದು
ರಾತ್ರಿಯ ವಿಹಾರಕ್ಕೆ ಹೊರಟಿರುವ ಪುಟ್ಟ ....
ಬಾನಲ್ಲಿ ನಗುತ್ತಿರು ಚಂದಿರನ ಕಂಡ ಪುಟ್ಟನ
ಮನದಲ್ಲೊಂದು ದೊಡ್ಡ ಪ್ರಶ್ನೆ ...
ಚಂದಿರನ ಮೇಲೆ ಮನೆಯ ಕಟ್ಟುವರಂತೆ
ಭುವಿಯಿಂದ ಬಾನಿಗೆ ಏಣಿ ಹಾಕುವರಂತೆ
ಹೌದಾ ಅಜ್ಜಾ?? ....
ಮುಗುಳ್ನಕ್ಕ ಅಜ್ಜನ ಉತ್ತರಕ್ಕೂ ಕಾಯದೆ ಪುಟ್ಟ ಮುಂದುವರೆದ ..
ಅಮ್ಮ ಹೊಡೆಯಲು ಬಂದಾಗ ಸರಸರನೆ ಏಣಿ ಏರಿ
ಚಂದಿರನ ಮನೆಯಲ್ಲಿ ಅಡಗಿಕೊಂಡರಾಯಿತು
ಅಮ್ಮ ಡುಮ್ಮಿ ಬೇಗ ಏರಲಾರಳು ಅಲ್ವಾ?
ಚಂದಿರನ ಮೇಲಿಂದ ಇಣುಕಬೇಕು...
ನಮ್ಮ ಮನೆಯ ಪತ್ತೆ ಹಚ್ಚಿ ಕೂಗಬೇಕು
ಹಾರುವ ವಿಮಾನಗಳ ಹಿಡಿಯಬೇಕು
ಹಕ್ಕಿಗಳ ಜೊತೆ ಮಾತನಾಡಬೇಕು
ಬಾನೇರಿ ಮಿನುಗುವ ತಾರೆಗಳ ಸೊಕ್ಕು ಮುರಿಯಬೇಕು
ಮೊನ್ನೆ ಅಕ್ಕನ ಜೊತೆ ಸೇರಿ ಹಾರಿಸುತ್ತಿದಾಗ ಕಳೆದ
ಗಾಳಿಪಟವನು ಹುಡುಕಬೇಕು ..
ಚಂದಿರನಿಂದ ಭೂಮಿಗೆ ಕಾಗದದ ರಾಕೆಟ್ ಉಡಾಯಿಸಬೇಕು
ಮಾಡಿಕೊಡ್ತಿಯ ಅಲ್ವಾ ಅಜ್ಜಾ ? ಎಂದ ಪುಟ್ಟ
ಕಾಲೇಜಿನ ದಿನಗಳಲ್ಲಿ ಅಜ್ಜಿಗೆ ಕಾಗದದ ರಾಕೆಟ್ ಬಿಟ್ಟ
ನೆನಪಾಗಿರಬೇಕು ಅಜ್ಜನಿಗೆ .
ಕೃತಕ ಹಲ್ಲುಗಳಿಗೆ ಜೀವ ತುಂಬಿಸಿಬಿಟ್ಟ ತನ್ನ ನಗೆಯಿಂದ ..
ತಾರಸಿಯ ಮನೆ ಬೇಡ ಅಜ್ಜಾ ...
ಹಳ್ಳಿಯ ಸೋಗೆಮನೆಯಂತೆ ಇರುವ ಮನೆಯೊಂದನ್ನು ಕಟ್ಟಿಬಿಡುವ
ಇಡೀ ದಿನ ಆಫೀಸು ಕೆಲಸವೆನ್ನುವ ಪಪ್ಪನೂ ಬೇಡ
ಕ್ಲಬ್ಬು-ಪಾರ್ಟಿ ಎಂದು ನನ್ನ ಕೈಗೆ ಸಿಗದ ಮಮ್ಮಿಯೂ ಬೇಡ
ನೀನು ವೃದ್ಧಾಶ್ರಮವನ್ನು ಸೇರುವುದೂ ಬೇಡ
ನಾನು-ನೀನು ಇಬ್ಬರೇ ಅಲ್ಲಿ ..
ಆಯ್ತಾ ಅಜ್ಜಾ ?ಎಂದ ಪುಟ್ಟನ ಮುಗ್ಧ ಪ್ರಶ್ನೆಗೆ
ಉತ್ತರವಾಗಿ ಅಜ್ಜನ ಕಣ್ಣುಗಳಿಂದ ನೀರಿಳಿಯುತ್ತಿತ್ತು ..!