Thursday, April 15, 2010

ಜುಟ್ಟು ಗೊಂಬೆ ನೆನಪಾಗಿ ಕಾಡುತಿದೆ....




ನಿನ್ನೆ ನನ್ನ ರೂಮ್ clean ಮಾಡ್ತಾ ಇದ್ದೆ . ಕಣ್ಣು albumಗಳ ಸಾಲಿನತ್ತ ಹಾಯಿತು . ಯಾಕೋ ನನ್ನ ಬಾಲ್ಯದ ಫೋಟೋಗಳನ್ನು ನೋಡಬೇಕು ಅನಿಸಿಬಿಡ್ತು. album ತೆರೆದು ನೋಡತೊಡಗಿದೆ . ಅದೆಷ್ಟು ಮುದ್ದಾಗಿದ್ದೆ ನಾನು ..! ನೋಡಿದ ತಕ್ಷಣವೇ ಎಲ್ಲರೂ ನನ್ನ nick-name 'ಪುಟ್ಟಿ' ಎಂದು ಕರೆಯುವಷ್ಟು ..! ಹಾಗೇ ಪುಟಗಳನ್ನೂ ತಿರುವುತ್ತಿದ್ದ ನಾನು, ಒಂದು ಕಡೆ ನಿಂತುಬಿಟ್ಟಿದ್ದೆ . ಆ ಫೋಟೋದಲ್ಲಿ ನನ್ನ ಕೈಯಲ್ಲಿದ್ದ ಎರಡು ಗೊಂಬೆಗಳು ನನ್ನನ್ನು ಸೆಳೆದಿದ್ದವು ಮತ್ತೊಮ್ಮೆ. ಸುಮಾರಾಗಿ ನನ್ನನ್ನೇ ಹೋಲುತ್ತಿದ್ದ 'ಜುಟ್ಟು ಗೊಂಬೆಗಳು' ಅವು ನಾನು ಅವುಗಳನ್ನು ಕರೆಯುತ್ತಿದ್ದದ್ದೂ ಅದೇ ಹೆಸರಿನಿಂದಲೇ. ಪುಟ್ಟದಾದ ಅಂಗಿ, ಕಪ್ಪನೆಯ ಒಂದು ಜುಟ್ಟು ಇದ್ದು ,ಲಕ್ಷಣವಾಗಿದ್ದ ಪುಟ್ಟ ಹೆಣ್ಣು ಗೊಂಬೆಗಳು ಅವು . .! ಫೋಟೋದಲ್ಲಿ ಪುಟ್ಟಿಯ ಪುಟ್ಟ ಪುಟ್ಟ ಕೈಗಳಲ್ಲಿ ಕಂಗೊಳಿಸುತ್ತಿದ್ದವು .


ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಡುವುದನ್ನು ಹಾಗೂ ಅಡುಗೆ ಆಟವನ್ನು ಇಷ್ಟ ಪಡುತ್ತಾರೆ ಇದನ್ನು ನೀವೂ ನೋಡಿರಬಹುದು. ಒಂದು ಮಗು ಅನುಕರಣೆಯ ಮೂಲಕವೇ ಎಲ್ಲವನ್ನು ಕಲಿಯುವುದಲ್ಲವೇ ? ಹೆಣ್ಣು ಮಗುವಿಗೆ ತನ್ನ ಹಾಗೇ ಇರುವ ಅಮ್ಮ role model ಆಗಿ ಬಿಡುತ್ತಾರೆ. ಅವರನ್ನೇ ಅನುಕರಿಸುತ್ತದೆ ಅದು . ಅಮ್ಮ ಅಡುಗೆಮನೆಯಲ್ಲಿ ಅಡುಗೆ ಮಾಡುವುದನ್ನು, ಪುಟ್ಟ ಪಾಪುವನ್ನು ಮಲಗಿಸುವುದನ್ನು ನೋಡುತ್ತಾ ಹೆಣ್ಣು ಮಗು ಅದರದೇ ಜಗತ್ತಿನಲ್ಲಿ,ಅದರದೇ ಆದ ರೀತಿಯಲ್ಲಿ ಅಮ್ಮನನ್ನು ಅನುಕರಿಸುತ್ತದೆ . ಅಮ್ಮ ತನ್ನ ಉದ್ದನೆಯ ಜಡೆಗೆ ಮೊಳ ಉದ್ದದ ಹೂ ಮಾಲೆ ಮುಡಿದರೆ, 'ಪುಟ್ಟಿ' ತನ್ನ ಬಾಬ್ ಕೂದಲಿಗೂ ಅಷ್ಟೇ ಉದ್ದದ ಹೂ ಬೇಕೆಂದು ಹಠ ಮಾಡುತ್ತಾಳೆ. ಗೊಂಬೆಗಳನ್ನು ಮಗುವಿನ ತರಹ ಜೋಪಾನ ಮಾಡುತ್ತದೆ . ಆ ಹೆಣ್ಣು ಮಗು ಆ ಗೊಂಬೆಗೆ ಪುಟ್ಟ ಅಮ್ಮನೇ ಆಗಿಬಿಡುತ್ತಾಳೆ.


ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ ? ನಾನು ನನ್ನ ಬಾಲ್ಯದಲ್ಲಿ (ಸುಮಾರು ೩-೪ ತರಗತಿಯವರೆಗೂ ) ಗೊಂಬೆಗಳ ಜೊತೆ ಆಡಿದ್ದೆ, ಅವುಗಳಿಗೆ ಊಟ ಮಾಡಿಸಿದ್ದೆ, ಸ್ನಾನ ಮಾಡಿಸಿದ್ದೆ ಮಲಗಿಸಿದ್ದೆ (ನಂತರ ಕ್ರಿಕೆಟ್ ಆಡುತ್ತಿದ್ದೆ ಆ ಮಾತು ಬೇರೆ ). ಹೂ ಮುಡಿಯಲು ಅಮ್ಮನೊಂದಿಗೆ ಜಗಳವಾಡಿದ್ದೆ . ಗೊಂಬೆಗೂ ಹೂ ಮುಡಿಸಿದ್ದೆ, ಅವುಗಳೊಂದಿಗೆ ಮಾತನಾಡಿದ್ದೆ. ನನ್ನದೇ ಲೋಕದಲ್ಲಿ ಆ 'ನಿರ್ಜೀವ ಗೊಂಬೆಗಳ ಜೊತೆ ಜೀವಂತ ಗೊಂಬೆ ನಾನಾಗಿದ್ದೆ ..!' ಒಟ್ಟಿನಲ್ಲಿ ಅವು ನನ್ನ ನೆಚ್ಚಿನ ಗೊಂಬೆಗಳಾಗಿದ್ದವು. ಮೌನವಾಗಿ ನನ್ನ ಜೊತೆ ಸಂಭಾಷಿಸುತ್ತಿದ್ದವು.


ನಂತರದ ದಿನಗಳಲ್ಲಿ ಹೊನ್ನಿನ ಕೂದಲಿನ ವಿದೇಶಿ ಗೊಂಬೆಯೊಂದು ನನ್ನ ಕೈಸೇರಿತ್ತು . ನಾವು ಬಾಡಿಗೆ ಮನೆಯಿಂದ ಸ್ವಂತ ಮನೆಗೆ shift ಆಗುವಾಗ. ನನ್ನ ಜುಟ್ಟು ಗೊಂಬೆಗಳು ಕಳೆದು ಹೋಗಿದ್ದವು, ಮರೆತು ಹೋಗಿದ್ದವು .


ಮತ್ತೆ ನಿನ್ನೆ ಯಾಕೋ ನೆನಪಾಗಿ ಕಾಡಿದ್ದವು . ಆಲ್ಬಮ್ ತೆಗೆದಿಟ್ಟು ಸೀದಾ ಅಮ್ಮನ ಬಳಿ ಓಡಿದ್ದೆ "ಆಯಿ, ನನ್ನತ್ರ ಎರಡು ಜುಟ್ಟು ಗೊಂಬೆ ಇದ್ದಿತ್ತು ನೆನಪಿದ್ದಾ ?" ಎಂದೆ . "ರಾಶಿ ಚಂದಕಿದ್ದಿತ್ತು ಅಲ್ದಾ ?" ಎಂಬುದು ಅಮ್ಮನ reply.ನಾನು ಮುಂದುವರೆದು "ಈಗ ಸಿಕ್ತಿಲ್ಯಾ ಅದು? ನಂಗೆ ಬೇಕಾಗಿತ್ತು " ಎಂದು ಕೇಳಿದ್ದೆ. ಅಮ್ಮ ನಕ್ಕು "ಸಿಕ್ಕಗು ಜಾತ್ರೇಲಿ, ಕುಮಟಾದಲ್ಲಿ ಕೇಳಿ ನೋಡು " ಎಂದರು . ಸಂಜೆ ತಮ್ಮನ ಜೊತೆ ಕುಮಟ ಸುತ್ತುತ್ತ ಎಲ್ಲ fancy ಅಂಗಡಿಗಳನ್ನು ಕೇಳಿದ್ದೆ . ಎಲ್ಲ ಕಡೆ ಹೊನ್ನ ಕೂದಲ ಗೊಂಬೆಗಳದ್ದೇ ಕಾರುಬಾರು . ಅದು ಬಿಟ್ಟರೆ sexy lookನ ಬಾರ್ಬಿ ಗೊಂಬೆಗಳು, teddy bear ಗಳು. ಯಾವುದೂ ಇಷ್ಟ ಆಗಲೇ ಇಲ್ಲ. ಅದೆಲ್ಲ ಚಿಕ್ಕ ಮಕ್ಕಳು ಆಡೋದು ಅನಿಸಿ ಬಿಡ್ತು . ನನ್ನ ಕಂಗಳು ನನ್ನ 'ಜುಟ್ಟು ಗೊಂಬೆಯನ್ನು ' ಹುಡುಕುತ್ತಿದ್ದವು. ಎಲ್ಲೋ ಸಿಗಲೇ ಇಲ್ಲ . ಸಿಗಬಹುದೆಂಬ ಆಸೆಯಿಂದ ತಮ್ಮನ ಬೈಕ್ ಏರಿದವಳಿಗೆ ನಿರಾಸೆ ಕಾಡಿತ್ತು .


ವಾಪಸ್ ಮನೆಗೆ ಬಂದವಳಿಗೆ ಬಾಗಿಲು ದಾಟುತ್ತಲೇ ಅಮ್ಮನ ಪ್ರಶ್ನೆ "ಸಿಕ್ತನೆ ಜುಟ್ಟು ಗೊಂಬೆ ?" ನನ್ನ ಮುಖದಲ್ಲಿನ ನಿರಾಸೆ, ಧುಮುಕಲು ರೆಡಿ ಆಗಿರುವ ಜೋಗವನ್ನು ಕಂಡೇ ಅಮ್ಮನಿಗೆ ತಿಳಿದಿರಬೇಕು "don't worry ಪುಟ್ಟಿ,paper evaluation ಗೆ ಹೋದಾಗ ಅಲ್ಲಿ ಸಿಕ್ರೆ ತರ್ತೆ ಅಥವಾ ಮತ್ತೆಲ್ಲಿನ್ದಾರೂ ತರಿಸುವಾ "ಎಂದಾಗ ಒಂದು ಬಗೆಯ ನಿರಾಳ ಭಾವ . ಗಂಟಿಕ್ಕಿದ್ದ ಹುಬ್ಬು ಸಡಿಲವಾಗಿತ್ತು.


ಇನ್ನೂ ನೆನಪಾಗಿ ಕಾಡುತ್ತಿದ್ದೆ ಆ 'ಜುಟ್ಟುಗೊಂಬೆ'. ಯಾವಾಗ ನನ್ನ ಕೈಗೆ ಸಿಗುತ್ತದೋ ಕಾದು ಕುಳಿತಿದ್ದೇನೆ . ನಿಮಗೆಲ್ಲಿಯಾದರೂ ಸಿಕ್ಕರೆ ಪ್ಲೀಸ್ ತಿಳಿಸ್ತೀರಾ?

Saturday, April 3, 2010

ಯಾರನ್ನು ಯಾರು ಹಿಡಿದರೋ ಯಾರಿಗೆ ಗೊತ್ತು?







ಕುಮಟಾದಿಂದ ಮಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಹೋಗುವುದು ವಾಡಿಕೆ. ಬರುವಾಗ ಟ್ರೈನಲ್ಲಿ ಬಂದಿರುತ್ತೇನೆ. ಐದು ಗಂಟೆಗಳನ್ನು ಕಳೆಯುವುದು ತುಂಬಾ ಬೇಸರ ತರಿಸುತ್ತದೆ . ಪಕ್ಕದಲ್ಲೆನಾದರೂ ಒಳ್ಳೆಯ ಆಸಾಮಿ ಕುಳಿತಿದ್ದರೆ ಮಾತಿಗೆ ಇಳಿದಿರುತ್ತೇನೆ ಇಲ್ಲದಿದ್ದರೆ? ಮನದ ಸರೋವರದಲ್ಲಿ ಕಲ್ಪನೆಗಳ ದೋಣಿ ಏರುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನನ್ನದೇ ಕಲ್ಪನೆಗಳ ದೋಣಿಯಲ್ಲಿ ನಾನೇ ನಾವಿಕ , ನಾನೇ ಪ್ರಯಾಣಿಕ ..! ಕಲ್ಪನಾ ಲೋಕದಲ್ಲಿ ನಾನು ಕಿನ್ನರಿ , ಗಾಳಿಪಟ, ಗುಬ್ಬಚ್ಚಿ , ಮೋಡ, ಹೀಗೆ ... ಆದರೆ ಮರವಂತೆಯ ಸಮುದ್ರದ ಹತ್ತಿರ ಬಸ್ಸು ಹಾಯುವಾಗ ನನ್ನ ಕಲ್ಪನಾ ಸರಣಿಯು ಕಳಚಿ ಬಿದ್ದಿರುತ್ತದೆ . ಕಣ್ಣೆವೆಯಿಕ್ಕದೆ ಸಮುದ್ರವನ್ನು ನೋಡುತ್ತಿರುತ್ತೇನೆ. ಸುಮಾರು ಮೂರು ಕಿಲೋಮೀಟರುಗಳಷ್ಟು ದೂರದವರೆಗೂ ಸಮುದ್ರ ನಮ್ಮ ಕಣ್ಣೆದುರಿಗೆ ಭೋರ್ಗರೆಯುತ್ತಿರುತ್ತದೆ . .ಪಕ್ಕದಲ್ಲಿ ಸೌಪರ್ಣಿಕ ನದಿ ಸದ್ದಿಲ್ಲದೇ ಹರಿಯುತ್ತಿರುತ್ತದೆ . ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೧೭ ಪಕ್ಕಾ ಆಲಸಿಯಂತೆ ಹಗಲು ಕನಸು ಕಾಣುತ್ತ ಕಾಲು ಚಾಚಿ ಬಿದ್ದುಕೊಂಡಿರುತ್ತದೆ .
ಮೊದಲಿನಿಂದಲೂ ಕವಿಗಳು ಸಮುದ್ರಕ್ಕೆ ಪುರುಷನ ಹೋಲಿಕೆ ಕೊಟ್ಟಿದ್ದಾರೆ , ನದಿ ಹೆಣ್ಣು. .! ಬಾಗಿ, ಬಳುಕಿ, ಜೀವ ವಾಹಿನಿಯಾಗಿ ಹರಿಯುವ ನದಿ ಕೊನೆಗೆ ಸೇರುವುದು ಸಮುದ್ರವನ್ನು . ಅದಿಕ್ಕೆ ಇರಬೇಕು ಸಮುದ್ರ ಭೋರ್ಗರೆಯುವುದು. ಆ ಪುರುಷತ್ವದ ಹಮ್ಮು ಅದಕ್ಕೆ ..!

ಒಂದು ಪಾಲು ಭೂಮಿಯನ್ನು ಕ್ಷಣಾರ್ಧದಲ್ಲಿ ನುಂಗಿ ಬಿಡುವ ಭೀಬತ್ಸ ಸಮುದ್ರ . ದಿನವೂ ಬೆಂಕಿಯನ್ನುಗುಳುವ ಸೂರ್ಯನನ್ನು ನುಂಗಿದರೂ ಶಾಂತ . ಮಕ್ಕಳ ಮುಟ್ಟಾಟವನ್ನು ನೆನಪಿಸುವ ಅಲೆಗಳ ಆಟ . ಯಾರಿಗೆ ಯಾರು ಸಿಕ್ಕಿದರೋ ಯಾರಿಗೂ ಗೊತ್ತಿಲ್ಲ. ಛಲಬಿಡದ ವಿಕ್ರಮನಂತೆ ಮರಳಿ ಯತ್ನವ ಮಾಡು ಎನ್ನುವ ಸಂದೇಶವನ್ನು ನೀಡುವ ಅಲೆಗಳು .

ಅಷ್ಟೊಂದು ಜಲರಾಶಿಯಿದ್ದರೂ ಒಂದು ತೊಟ್ಟು ಸಿಹಿ ನೀರಿಲ್ಲದ ಸಮುದ್ರ . ಸೂರ್ಯ ಮೊಗೆಮೊಗೆದು ಕುಡಿದರೂ ಆರಲೊಲ್ಲದ ಸಮುದ್ರ. ಚುಕ್ಕಿ ಚಂದ್ರಮರಿಗೆ ತಮ್ಮ ಬಿಂಬವ ನೋಡಲು ಕೊಡದ, ಮಾತ್ಸರ್ಯದ ಮೂಟೆ ಈ ಸಮುದ್ರ, ಪ್ರತಿಫಲಿಸುವುದು ಆಗಸದ ನೀಲಿ ಬಣ್ಣವನ್ನೇ ..!ಕಳೆದುಹೋದ ಹುಡುಗನನ್ನು ಹುಡುಕುತ್ತ ಅಲೆಯುತ್ತಿರುವ ನೀಳ ಕೂದಲಿನ ಹುಡುಗಿಯಂತೆ ಕಾಣುವುದು ಈ ಸಮುದ್ರ . ಹವಳ ಮುತ್ತುಗಳನ್ನು ತನ್ನೊಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಕಳ್ಳ ಸಮುದ್ರ. ಜಲಚರಗಳ ತವರೂರು. ಹೀಗೆ ಅದೇನೇನೋ ಭಾವ ಆ ಮೂರುವರೆ ಕಿಲೋಮೀಟರುಗಳನ್ನು ಕ್ರಮಿಸುವಷ್ಟರಲ್ಲಿ ..! ನಕ್ಕುಬಿಟ್ಟಿದ್ದೆ ನನ್ನ ಯೋಚನೆಗೆ ನಾನೇ.. !

ಆಗಸದಲ್ಲಿ ಚಿಕ್ಕಿಗಳಂತೆ ಚಿಕ್ಕದಾಗಿ ಕಾಣುತ್ತಿರುವ ಹಡಗು ಯಾವದೇಶದ್ದೋ ಏನೋ? ಆದರೂ ಅದೇನೋ ಕುತೂಹಲ,ಮನದಲ್ಲಿ ಭಾವನೆಗಳ ಮರ್ಮರ . ಹಡಗು ಸಾಗುತ್ತಿತ್ತು ನೀರಲ್ಲಿ ಅಲೆಗಳ ಮೇಲೆ . ನಮ್ಮ ಬಸ್ಸು ಓಡುತ್ತಿತ್ತು . ಕಾಲವೂ ಉರುಳುತ್ತಿತ್ತು . ಮರವಂತೆಯ ಕಡಲ ತೀರದ ದಾರಿ ಮುಗಿದರೂ ಸಮುದ್ರ ಕಾಡುತ್ತಿತ್ತು ನನ್ನ . ಕಣ್ಣ ಕೊನೆಯವರೆಗೂ ಕಾಣುವ ಆ ಅಖಂಡ ಜಲರಾಶಿಯ ಇನ್ನೊಂದು ತೀರವನ್ನು ನೋಡಬೇಕು ಎನ್ನುವ ಚಿಕ್ಕಂದಿನ ನನ್ನ ಹಂಬಲ ಮತ್ತೊಮ್ಮೆ ಧಿಡೀರನೆ ಎದುರಾಗಿತ್ತು .ಕಣ್ಮುಚ್ಚಿ world map ಕಲ್ಪಿಸಿಕೊಂಡೆ. ಅರಬ್ಬೀ ಸಮುದ್ರದ ಮರವಂತೆಯನ್ನು ಗುರುತಿಸಿಕೊಂಡೆ . ಇನ್ನೊಂದು ತೀರಕ್ಕಾಗಿ ತಡಕಾಡಿದೆ . ಎಲ್ಲಿದೆ ಇನ್ನೊಂದು ತೀರ ? ಆಫ್ರಿಕ ಖಂದದಲ್ಲೆಲ್ಲೋ ಇದ್ದಂತೆ ಅನಿಸುತ್ತಿದೆ ಅಲ್ವಾ?

Friday, April 2, 2010

ನನ್ನ ಕಿವಿಯೋಲೆಗಳ ಸಂಗ್ರಹ ....






ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಕಿವಿಯೋಲೆಗಳ (ear-rings) ಸಂಗ್ರಹವೂ ಕೂಡ ಒಂದು. dressಗೆ ಹೊಂದುವ matching ಕಿವಿಯೋಲೆಗಳು, ಬಣ್ಣಬಣ್ಣದ matching ಕ್ಲಿಪ್ಪುಗಳು ನನ್ನ ಮಾಮೂಲಿ style. ಒಂದೊಂದು ಕಿವಿಯೋಲೆಗಳ ಹಿಂದೆಯೂ ಒಂದಿಷ್ಟು ನೆನಪುಗಳು ಭದ್ರ . ಮನಸೆಂಬ ಈ ವಸ್ತುವಿದೆಯಲ್ಲ ಬಹಳ ವಿಚಿತ್ರ ಅದು .ಅದಕ್ಕೆ ಯಾವಾಗ ಖುಷಿಯಾಗುತ್ತದೆ, ಯಾವಾಗ ಬೇಸರವಾಗುತ್ತದೆ ಎಂಬುದೇ ಅರ್ಥವಾಗಲೋಲ್ಲದು . ಒಮ್ಮೊಮ್ಮೆ ಕಾರಣವಿಲ್ಲದೆ ಬೇಜಾರಾಗುತ್ತದೆ , ಆಗ ನನ್ನ ಎಲ್ಲ ಕಿವಿಯೋಲೆಗಳ ಸಂಗ್ರಹವನ್ನು ತೆರೆದು ಕೂರುತ್ತೇನೆ . ಮೊದಲು ಚಿಕ್ಕ ಚಿಕ್ಕ ಕಿವಿಯೋಲೆಗಳ (studs)ಹುಚ್ಚಿತ್ತು .ನಂತರ hangingsಗಳ ಶೋಕಿ ಹೆಚ್ಚಿದೆ.

ನಾನು ೫ನೆಯ ತರಗತಿಯಲ್ಲಿರುವವರೆಗೂ ನನ್ನ ಕಿವಿಗೆ ಫಿಕ್ಸ್ ಆದ, ತೆಗೆಯಲು ಬಾರದ ring ಇತ್ತು, ನಂತರ ಅಮ್ಮ ರಿಂಗ್ ತೆಗೆದು stud ಮಾಡಿಸಿ ಹಾಕಿದರು. ನಂತರ ನನ್ನ artificial ಕಿವಿಯೋಲೆಗಳ ಸಂಗ್ರಹ ಶುರುವಾಯಿತು. ಮೊದಲು ಜಾತ್ರೆಯ ಪೇಟೆಗಳಲ್ಲಿ ಕೊಳ್ಳುತ್ತಿದ್ದೆ, ಅಮ್ಮ, ಚಿಕ್ಕಮ್ಮ ಎಲ್ಲ ತಂದು ಕೊಡುತ್ತಿದ್ದರು. ಗೆಳತಿಯರು ಅವರೂರ ಜಾತ್ರೆಗೆ, ತಮ್ಮನಿಗೆ ರಾಖಿ ಕಟ್ಟಿದಾಗ ಅವನು ತಂದು ಕೊಟ್ಟ ಪುಟ್ಟ ಹರಳುಗಳ ಕಿವಿಯೋಲೆ , ನನ್ನ ಗೆಳೆಯನೊಬ್ಬ ಸಿಂಗಾಪುರದಿಂದ ತಂದ ಕಿವಿಯೋಲೆ , ಎಲ್ಲೋ ಪ್ರವಾಸಕ್ಕೆ ಹೋದಾಗ ಅಜ್ಜಿ ತಂದು ಕೊಟ್ಟ ಸಾಂಪ್ರದಾಯಿಕ ear-rings ಇನ್ನೂ ಹೊಸತೆಂಬಂತೆ ಇವೆ. ಮತ್ತೆ ನಾನು fancy-storesಗಳಿಗೆ ಹೋದಾಗ ಚಂದವೆಂದು ಕೊಂಡುಕೊಂಡ ಬಗೆಬಗೆಯ ಕಿವಿಯೋಲೆಗಳಿವೆ . ೫ ರೂಪಾಯಿಗಳಿಂದ ಹಿಡಿದು ೪೦೦ ರೂಪಾಯಿಗಳ ವರೆಗಿನ ಕಿವಿಯೋಲೆಗಳೂ ಇವೆ ನಾನು ಕೊಂಡುಕೊಂಡ ಸಂಗ್ರಹದಲ್ಲಿ ಮನಕ್ಕೆ ಬೇಸರವಾದಾಗ ತೆಗೆದು ನೋಡಿದರೆ ಬಾನ ತಾರೆಗಳಂತೆ ಮಿನುಗುತ್ತವೆ ಆ ಕಿವಿಯೋಲೆಗಳ ಜೊತೆ ನೆನಪುಗಳೂ ಕೂಡ .


ತಮ್ಮ ಯಾವತ್ತೂ ತಮಾಷೆ ಮಾಡ್ತಾನೆ ನಿನ್ನ ಕಿವಿಯೋಲೆಗಳಿಗೆ ಸುರಿಯುವ ಹಣದಿಂದ ಇನ್ನೊಂದು ಮನೆ ಕಟ್ಟಬಹುದಿತ್ತು ಎಂದು.. ! ಕಳ್ಳರು ಮನೆಗೆ ಕನ್ನ ಹಾಕಿದರೆ ನಿನ್ನ ಕಿವಿಯೋಲೆಗಳ ಸಂಗ್ರಹದ box ಎತ್ತಿ ಒಯ್ಯುತ್ತಾರೆ ನೋಡು ಎನ್ನುತ್ತಾ ಯಾವಾಗಲೂ ಕಿಚಾಯಿಸುತ್ತಾನೆ. ಅವನಿಗೆಲ್ಲಿ ಅರ್ಥ ಆಗ್ಬೇಕು ಹೇಳಿ ?


ಇಲ್ಲಿ ನನ್ನ ಸಂಗ್ರಹದ ನಾಲ್ಕನೆ ಒಂದು ಭಾಗದ ಫೋಟೋಗಳನ್ನ ಇಟ್ಟಿದೇನೆ.