Monday, December 10, 2012

ಮಾಗಿಯೆ೦ದರೆ.........

ಮಾಗಿಯೆ೦ದರೆ....
ಮಧ್ಯಾಹ್ನ ಹನ್ನೆರಡಾದರೂ ಮೈ ಬಿಡದ ಸ್ವೆಟರು
ಕೊರಳ ಸುತ್ತದ ಮಫ಼್ಲರು 
ತಲೆಯ ಮೇಲೆ ಸ್ಕಲ್ ಕ್ಯಾಪಿನ ದರ್ಬಾರು 

ಮಾಗಿಯೆಂದರೆ......
ಊರ ಹೊರಗಿನ ಕಟ್ಟೆಯ ಮೇಲಿನ ಹರಟೆ
ಶೀತ ಕೆಮ್ಮುಗಳೊ೦ದಿಗೆ ಕರಾಟೆ
ಕ೦ಬಳಿ ರಗ್ಗುಗಳ ಭರಾಟೆ
ಮಾಗಿಯೆಂದರೆ......
ತಡವಾಗಿ ಎದ್ದೇಳುವ ಸೂರ್ಯ 
ಅದೆಷ್ಟು ಸಲ ಒದ್ದರೂ ಚಾಲೂ ಆಗದೆ ಹಠ ಮಾಡುವ ಗಾಡಿ
ಮಧ್ಯಾಹ್ನ ಸಮೀಪಿಸಿದರೂ ಉರಿಯುತ್ತಲೇ ಇರುವ ಹೆಡ್ ಲೈಟ್

ಮಾಗಿಯೆ೦ದರೆ.........
ಗೂಡ೦ಗಡಿಯ ಮು೦ದೆ ನಿ೦ತಿರುವ 
ಹರಕು ಜೀನ್ಸಿನ ಹುಡುಗನು ಬಿಡುತ್ತಿರುವ ಸಿಗರೇಟಿನ ಸುರುಳಿ ಹೊಗೆ
ಗರ೦ ಆಗಲು ಗುಟುಕರಿಸುವ ರ೦ 
ರಸ್ತೆ ದೀಪದಡಿ ಹದವಾಗಿ ಬೇಯುತ್ತಿರುವ ಜೋಳದ ತೆನೆ 

ಮಾಗಿಯೆ೦ದರೆ.........
ಮೈ ಮೇಲೆ ಗೀರಿದರೆ ಮೂಡುವ ಗೀರುಬಳ್ಳಿಯ ರ೦ಗೋಲಿ
ವ್ಯಾಸಲೀನು,ಕೋಲ್ಡ್ ಕ್ರೀಮು, ಗಟ್ಟಿಯಾಗುವ ಎಣ್ಣೆ, ತುಪ್ಪ
Saggittariusಗಳ ಹುಟ್ಟು ಹಬ್ಬ
ಮಾಗಿಯೆ೦ದರೆ.........
ಕಾಲ ಮೇಲೆ ಸುರಿದುಕೊ೦ಡರೆ ಹಿತವೆನಿಸುವ ಹ೦ಡೆಯೊಳಗಿನ ಬೆಚ್ಚನೆಯ ನೀರು
ಹಿತ್ತಲ ಸ೦ದಿಯಿ೦ದ ಏಳುವ ಕುಚ್ಚಲಕ್ಕಿಯ ಕ೦ಪು
ಕಾರಗದ್ದೆಯಲಿ ಇಳಿದ ಜೋಡಿ ಎತ್ತು
ಮಾಗಿಯೆ೦ದರೆ......
ಹೊಸ ಉಡುಗೆಯ ಹ೦ಬಲದಿ, ಎಲೆ ಉದುರಿಸಿ ನಿ೦ತ ಬೋಳು ಮರ
ಹಸಿರು ಗದ್ದೆಯ ಮೇಲೆ ಹಿತ್ತಲ ಹೊಗೆಯ ಉ೦ಗುರ 
ಜೇಡರ ಬಲೆಯ ಮೇಲಿನ ಇಬ್ಬನಿಯ ಚಿತ್ತಾರ
ಮಾಗಿಯೆ೦ದರೆ........
ಮಾಗಿಯೆ೦ದರೆ ......
ಮನೆಯ ಮೂಲೆಯಲ್ಲಿ ಮುಗುಮ್ಮಾಗಿ ಬ೦ದು ಕುಳಿತ ಹೊಸ ವರುಷದ ಕ್ಯಾಲೆ೦ಡರ್
   






Thursday, July 26, 2012

ಅಮೀನಾಳಿಗೆ ಮದುವೆಯಂತೆ ...

 'ಮಿಶೆಲ್' ಕಾಲ್ ಬಂದಾಗಿನಿಂದ ಏನೋ ಹೇಳಲಾಗದ ಚಡಪಡಿಕೆ. "ಅಮೀನಾಳಿಗೆ ಮದುವೆಯಂತೆ ಕಣೆ... " ಎಂದು ಆಕೆ ಹೇಳಿದಾಗಿನಿಂದ ಈ ಮಳೆಯನ್ನೇ ನೋಡುತ್ತಿದ್ದೇನೆ. ಮಳೆಯ ಹನಿಯ ಚಟಪಟಕ್ಕೆ ಅದ್ಯಾವುದೇ ನೆನಪನ್ನು ಬೇಕಾದರೂ ಮನದ ಬುಟ್ಟಿಯಿಂದ ಹೆಕ್ಕಿ ಹಸಿರಾಗಿಸುವ ತಾಕತ್ತಿದೆ. ಈಗ ನನ್ನ ಮನದ ಓಣಿಯಲ್ಲಿ ಅಮೀನಾಳ ನೆನಪುಗಳದ್ದೆ ಮೆರವಣಿಗೆ... ಮದುವೆಯೇ ಬೇಡ ಎನ್ನುತ್ತಿದ್ದ ಹುಡುಗಿ ಮದುವೆಯಾಗಲು ಹೊರಟಿದ್ದಾಳೆ ಎಂದರೆ...  

ಬಿಡದೆ ಚಿಟಿ ಚಿಟಿ ಸುರಿಯುವ ಮಳೆಯ ನೋಡುತ್ತಾ ಆರಾಮ ಖುರ್ಚಿಯಲಿ ಕೂತಿದ್ದೆ. ಹೌದು ಇಂಥದ್ದೇ ಮಳೆಯಲ್ಲಿ ಅವಳೊಂದಿಗೆ ಸುತ್ತುತ್ತಿದ್ದೆ ನಾನು.
ಇನ್ನೂ ನೆನಪಿದೆ  ನನಗೆ ಅವಳ ಮೊದಲ ಪರಿಚಯ. ಕ್ಲಾಸಿಗೆ ಹೊಸಬಳಾಗಿ ಸೇರಿಕೊಂಡಿದ್ದ ನಾನು ಅದೇನೋ ಗೀಚುತ್ತ ಸುಮ್ಮನೆ ಹಿಂದಿನ ಬೆಂಚಲ್ಲಿ ಕೂತಿದ್ದೆ. ಥಟ್ಟನೆ ಹೆಗಲ ಮೇಲೆ ಬಿದ್ದ ಯಾರೋ ಕೈ ಇಟ್ಟ ಅನುಭವ. "ಹಾಯ್ ಹೇಗೀದಿಯಾ? ನಾನು ಅಮೀನಾ " ಎಂದು ನಿಷ್ಕಲ್ಮಶ ನಗುವನ್ನು ಬೀರುತ್ತ ಕೈಕುಲುಕಿ ಸ್ನೇಹದ ಹಸ್ತ ಚಾಚಿದ್ದಳು. ಕೈ ಕುಲುಕುತ್ತಲೇ ದಿಟ್ಟಿಸಿದ್ದೆ ಅವಳ. ಅವಳ ಹೆಸರಿಗೆ ಕೊನೆಯ ಪಕ್ಷ ತಲೆಯ ಮೇಲೊಂದು ಶಾಲನ್ನು ನಿರೀಕ್ಷಿಸಿದ್ದ ನನಗೆ. ಕಂಡದ್ದು ಬೆನ್ನಿನವರೆಗೆ ಇಳಿಬಿಟ್ಟಿದ್ದ ನೀಳ ಅರೆಗೆಂಪು ಕೂದಲು, ಕಿವಿಯೋಲೆಗಳೇ ಇಲ್ಲದ ಕಿವಿ, ಕಣ್ಣಿಗೆ ಒಂದೆಳೆಯ ಕಾಡಿಗೆ, ಕೈಯಲ್ಲಿ ಕಾಣುತ್ತಿದ್ದ ದೊಡ್ಡ ಕೈಗಡಿಯಾರ, ಬಿಳಿಯ ಕುರ್ತಾ , ಜೀನ್ಸ್ ತೊಟ್ಟಿದ್ದ ಬಿಂದಾಸ್ ಹುಡುಗಿ. ನನ್ನ ಪಕ್ಕದಲ್ಲೇ ಕೂರಲು ನಿರ್ಧರಿಸಿಯೇ ಬಂದಿದ್ದಳು. ಮಲ್ಲಿಗೆ ಬಿರಿಯುವ ತೆರದಿ  ಚಿಕ್ಕಮಂಗಳೂರು ಶೈಲಿಯ ಕನ್ನಡ ಮಾತನಾಡುವ ಹುಡುಗಿ, ಅಪರೂಪಕ್ಕೆ ಕನ್ನಡವ ಕಾಣುವ ಕ್ಲಾಸಿನಲ್ಲಿ ನನಗೆ ವಿಶೇಷವಾಗಿ ಕಂಡಿದ್ದಳು. ಅದೊಂದೇ ಸಾಕಿತ್ತು ನಮ್ಮಿಬ್ಬರ ನಡುವೆ ಸ್ನೇಹವ ಬೆಸೆಯಲು. ಇಡೀ ದಿನ ವಟಗುಡುತ್ತಲೇ ಇರುತ್ತಿದ್ದ, ಬೋರು ಹೊಡೆಸುವ ಕ್ಲಾಸಿನಲ್ಲಿ crossword ತುಂಬುತ್ತಿದ್ದ ನಾವು ಅದೆಷ್ಟೋ ಬಾರಿ ಲೆಕ್ಚರರಿಗೆ 'ಅಪೋಲೋಜಿ ಲೆಟರ್ ' ಕೊಟ್ಟದ್ದಿದೆ.! ಕ್ಲಾಸಿನಿಂದ ಹೊರಗೆ ಹಾಕಿದ ನಂತರ ಕ್ಯಾಂಟೀನಿನಲ್ಲಿ ಕಾಫಿ ಹೀರಿದ್ದಿದೆ. 
 
ಮೆಕೆನಿಕ್ ಬ್ರಾಂಚಿನ ಹುಡುಗರದ್ದೇ ದೋಸ್ತಿ ಅವಳಿಗೆ. 'ರಾಯಲ್ ಮನಸ್ಸು ಕಣೆ ಆ ಹುಡುಗರದ್ದು , ಮೋಟು ಬುದ್ಧಿಯ ಇಡೀ ದಿನ code, software, errors ಅನ್ನೋ ಈ ಕಂಪ್ಯೂಟರ್ ಸೈನ್ಸ್ ಹುಡುಗರ ಹಾಗಲ್ಲ'. ಅನ್ನುವ ಅವಳ ಬಿಂದಾಸ ಹೇಳಿಕೆಗೆ ಬೆರಗಾಗಿದ್ದೆ.ಇಡೀ ಕಾಲೇಜಿಗೆ 'ಗಂಡು ಬೀರಿ ' ಎಂದೇ ಹೆಸರಾದ  FZ ಬೈಕ್  ಓಡಿಸುವ ಹುಡುಗಿಯ ipod ತುಂಬೆಲ್ಲ ಜಯಂತ ಕಾಯ್ಕಿಣಿಯ, Bryan Adams ಹಾಡುಗಳು.! ರಮ್ಜಾನಿಗೆ 'ರೋಜಾ' ಇಡುತ್ತಿದ್ದ ಹುಡುಗಿ. ಅದೆಂದೂ ಶಾಲು ಕೂಡ ಹೊದ್ದವಳಲ್ಲ!  ಲಾಂಗ್ ರೈಡಿಗೆ ಹುಚ್ಚೆದ್ದು ಹೋಗುತ್ತಿದ್ದ ಹುಡುಗಿ. ಸಮುದ್ರದ ತಟದಲ್ಲಿ ನನ್ನೊಂದಿಗೆ ಕಿಲೋಮೀಟರ್ ಗಟ್ಟಲೆ ನಡೆಯುತ್ತಿದ್ದಳು.! ಹುಡುಗರೊಂದಿಗೆ ಹುಡುಗರ ರೀತಿಯಲ್ಲೇ ಇರುವ ಅಮೀನಾ. ಹುಡುಗಿಯರ ಗುಂಪಿನಲ್ಲಿ ಕಾಣುತ್ತಿದ್ದದ್ದೇ ಅಪರೂಪ. ಸಂಜೆ ಮನೆಯ ಹತ್ತಿರದ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುವ ಅವಳ ಮನಸ್ಸು ಕೆಲವರಿಗಷ್ಟೇ ಗೊತ್ತಿತ್ತು.

ಹುಡುಗಿಯ ನಿಜ ಮನಸ್ಸು ನನಗೆ ತಿಳಿದ ದಿನ ಇನ್ನೂ ನೆನಪಿದೆ .ಇಂಥದ್ದೇ ಮಳೆ ಸುರಿಯುತಿತ್ತು ಆ ದಿನ ಹುಡುಗಿ ಕಾಲೇಜು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು 'ನಿನ್ನಯ ಒಲುಮೆಯ ಲೋಕಕೆ' ಹಾಡುವಾಗಲೇ ಇದೇನಾಗಿದೆ ಈ ಹುಡುಗಿಗೆ ಅಂದುಕೊಂಡಿದ್ದೆ. ವಿಶೇಷವೇನಾದರೂ ಇದ್ದರೆ ಅವಳೇ ಹೇಳಲಿ ಎಂದ ಮನಸ್ಸಿನೊಡನೆ ಸುಮ್ಮನೆ ಕೂತಿದ್ದೆ, ಮಳೆಗೆ ಮಸುಕಾಗುವ ಬಸ್ಸಿನ ಕಿಟಕಿಯ ಗಾಜಿನಲ್ಲಿ ನನ್ನ ಹೆಸರ ಬರೆಯುತ್ತ. ದಾರಿ ಮಧ್ಯದಲ್ಲೇ 'ಇಲ್ಲೇ ಇಳಿಯುವ ಬಾರೆ' ಎನ್ನುತ್ತಲೇ ನನ್ನ ಕೈ ಹಿಡಿದು ಎಳೆದು ಹೊರಟೆ ಬಿಟ್ಟಳು. ಸುರಿವ ಮಳೆಯಲ್ಲಿ ಛತ್ರಿಯ ಕೊನೆಗೆ ಇಳಿಯುವ ಮಳೆಹನಿಗಳ ಜೊತೆ ಆಟವಾಡುತ್ತಲೇ 'ಅವಿ ಅದ್ಯಾವುದೋ ಹುಡುಗಿಯ ಜೊತೆ ಅಲೆಯುತ್ತಿದ್ದಾನಂತೆ ಕಣೆ... ' ಎಂದು ಅವಳಿಷ್ಟಪಡುವ ಅವಿನಾಶನ ಕುರಿತು ಹೇಳಿದಾಗ, ಸುಮ್ಮನೆ ಅವಳತ್ತ ನೋಡಿದ್ದೆ. ' ಯಾರನ್ನೂ ಪ್ರೀತ್ಸೋದೆ ಇಲ್ಲ ಅಂತ ಹೇಳ್ತಾ ಹೇಳ್ತಾ ಅವನನ್ನ ಇಷ್ಟ ಪಟ್ಟೆ. ಅವ್ನು ಸಿಗೋದಿಲ್ಲ ಅಂತ ಗೊತ್ತಿದ್ರೂ.! ಅದ್ಯಾಕೋ  ಫೋಟೋಗಳೆಲ್ಲ ರುಕ್ಮಿಣಿ, ಸತ್ಯಭಾಮೆಯರ ಬದಿಗೊತ್ತಿ ಕೃಷ್ಣನ ಹೆಗಲ ಮೇಲೆ ತಲೆ ಇಟ್ಟು ನಿಲ್ಲುವ ರಾಧೆ ತುಂಬಾ ಕಾಡ್ತಾಳೆ ಕಣೆ. .   ... " ಎಂದು ಮಳೆಹನಿಗೆ ಮುಖವೊಡ್ಡಿ ಕಣ್ಣೀರು ಅಡಗಿಸುವ ಪ್ರಯತ್ನವನ್ನು ಮಾಡಿದ್ದಳು, ನನ್ನ ಡೈರಿಯ ಕೊನೆಗೆ ಅಂಟಿಸಿಕೊಂಡಿದ್ದ ISKCON ತುಂಟ ಕೃಷ್ಣನ ಫೋಟೋವನ್ನು ಹಠಮಾಡಿ ಕಿತ್ತುಕೊಂಡು ಹೋಗಿದ್ದ ಅಮೀನಾ.! ಸುಮ್ಮನೆ ಅವಳ ಕೈಹಿಡಿದು ಅದೆಷ್ಟು ದೂರ ನಡೆದಿದ್ದೇನೋ.. ಸುರಿವ ಮಳೆಗೆ, ಕಳೆದ ದಾರಿಗೆ ಮಾತ್ರ ತಿಳಿದಿರಬೇಕು ನಾವು ನಡೆದ ದೂರ ! 

 ಹುಡುಗಿಯರು ಕೆಣಕಿದಾಗಲೆಲ್ಲ" ಯಾರಿಗೆ ಬೇಕೇ ಮದುವೆ, ಮಕ್ಕಳು. ನಾನಂತೂ ಒಬ್ಬಳೇ ಆರಾಮಾಗಿ ಇದ್ದೇನೆ ನೋಡು.  ಅಡುಗೆ ಮಾಡಿ ಬಡಿಸುತ್ತ, ಮಕ್ಕಳನ್ನು ಹೆರುತ್ತ, ಬುರಖಾ ಹಾಕಿಕೊಂಡು ತಿರುಗಾಡುವ ಬದುಕೇ ಬೇಡ" ಎನ್ನುತ್ತಿದ್ದ ಅಮೀನಾ.ಮದುವೆಯಾಗುವ ಹುಡುಗನ ಬಗ್ಗೆ ಅದ್ಯಾವುದೇ ಕನಸುಗಳೇ ಇಲ್ಲದ ಹುಡುಗಿ, ಸದ್ದಿಲ್ಲದೇ ಮದುವೆಯ ತಯಾರಿಯಲ್ಲಿದ್ದಾಳೆ ಅಂದರೆ..! ಈ ಹುಡುಗಿಯರೇ ಹೀಗೆ ಎನಿಸಿಬಿಡುತ್ತದೆ. ಬಾಲ್ಯದಲ್ಲಿ ಅಡುಗೆ ಆಟ ಆಡುವ ಹುಡುಗಿಯರು ಹದಿಹರೆಯದಲ್ಲಿ ಅಡುಗೆ ಮನೆಯ ಕಡೆಗೆ ತಲೆ ಕೂಡ ಹಾಕದೆ ಅಡುಗೆಯ ಮಾಡಲು ಬರುವುದೇ ಇಲ್ಲ ಎನ್ನುತ್ತಾರೆ. ಆದರೆ ಮದುವೆಯಾಗುತ್ತಲೇ ಸೇರಿ ಬಿಡುವುದು ಅಡುಗೆ ಮನೆಯನ್ನೇ.! ಬಾಲ್ಯದಲಿ ಗೊಂಬೆಯಾಟವ ಆಡುತ್ತ, ಗೊಂಬೆಗಳಿಗೆ ಮದುವೆ ಮಾಡಿಸುತ್ತ. ಒಂದು ವಯಸ್ಸಿನಲ್ಲಿ ಮದುವೆಯೇ ಬೇಡ ಎನ್ನುತ್ತಲೇ ಹಸೆ ಮಣೆ ಏರಿಬಿಡುತ್ತಾರೆ. ! ಈ ಹುಡುಗಿಯರ ಮನದಲ್ಲಿ, ಜಗದಲ್ಲಿ  ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ,  ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. 

 ರಿಂಗಿಣಿಸಿದ ಫೋನಿನ ಕರೆ ನನ್ನ ನೆನಪಿನ ಅಲೆಗಳನ್ನು ತಡೆದು ನಿಲ್ಲಿಸಿತ್ತು. 'ameena calling' ಎಂದು ಬರುತ್ತಿದ್ದ ಕರೆಯನ್ನು ಸ್ವೀಕರಿಸಿದೆ. " breaking news my dear. ನನ್ನ ಮದುವೆ ಕಣೆ, ಬರ್ತೀಯಲ್ವಾ? ಕಾದಿರ್ತೇನೆ details ಎಲ್ಲ ಮೆಸೇಜ್ ಮಾಡ್ತನೇ . "ಎಂದು ನನ್ನ ಉತ್ತರವನ್ನೂ ಕಾಯದೆ ಫೋನಿಟ್ಟು ಬಿಟ್ಟಳು ಹುಡುಗಿ!

ಕಾಲೇಜು 'Annual day'ಗೂ ಸರಳವಾಗಿ ಕುರ್ತಾ ಜೀನ್ಸಿನಲ್ಲಿ ಬಂದಿದ್ದ, ಎಂದೂ ಜರತಾರಿ ಸೀರೆಯ, ಬಂಗಾರವ, ಆಡಂಬರವ ಇಷ್ಟಪಡದ ಅಮೀನಾಳನ್ನು ಜರತಾರಿಯಲ್ಲಿ, ಕುಂದಣದಲ್ಲಿ ನೋಡಲು ಮನಸ್ಸು ತವಕಿಸುತ್ತಿತ್ತು. 

Friday, July 13, 2012

ಚಿಕನ್ ಪಾಕ್ಸೂ, ನನ್ನ ಮಿನಿ ಮಜ್ಜನವೂ ...



Blog ನಲ್ಲಿ ಏನೂ ಬರೆಯದೆ ಬಹಳ ದಿನಗಳೇ ಕಳೆದು ಹೋದವು. ನನಗೆ ಬರೆಯಲು ವಿಷಯಗಳು ನೆನಪಾಗುವುದು ಬಚ್ಚಲ ಮನೆಯಲ್ಲಿ ಸ್ನಾನ ಮಾಡುವಾಗಲೇ..! ತಲೆಯ ಮೇಲೆ ನೀರು ಬಿದ್ದಾಗಲೇ ಹೊಸ ವಿಷಯಗಳು ತಲೆಯೊಳಗೆ ಬರುವುದು..! ಇಂತಿಪ್ಪಾಗ ಹದಿನೆಂಟು ದಿನಗಳ ಕಾಲ ಸ್ನಾನವೇ ಇಲ್ಲದಿದ್ದಾಗ ಬರೆಯುವುದಾದರೂ ಹೇಗೆ ನೀವೇ ಹೇಳಿ ? ಇರಲಿ ಬಿಡಿ ವಿಷಯಕ್ಕೆ ಬರುತ್ತೇನೆ.


ಪರೀಕ್ಷೆಯ ಮುಗಿಸಿಕೊಂಡು ಬಂದ ಖುಷಿಯಲ್ಲಿ ಅಜ್ಜಿಮನೆಗೆ ನನ್ನ boy friend (ಕ್ಯಾಮೆರ) ಜೊತೆ ಹೋಗಿ ಮನೆಗೆ ಬಂದ ನನಗೆ ಸಣ್ಣಗೆ ತಲೆ ನೋವು, ಜ್ವರ . (ಹಾಗೆಲ್ಲ ಸುಮ್ಮನೆ ತಲೆ ನೋವು ಬರುವುದಿಲ್ಲ ಮಾರಾಯ್ರೆ. 'ತಲೆ' ಇದ್ದವರಿಗೆ ಮಾತ್ರ ತಲೆನೋವು ಬರುವುದಂತೆ.!).  ಮಲೆನಾಡಿನ ಮಳೆಯಂತೆ ಮಾತನಾಡುವವಳು ಬಯಲು ಸೀಮೆಯ ಮಳೆಯಾಗಿಬಿಟ್ಟಿದ್ದೆ. ಕ್ಯಾಮೆರಾದ ಜೊತೆ ಅಲೆದದ್ದು ಜಾಸ್ತಿಯಾಯಿತೆಂದು ಪಪ್ಪ ಗೊಣಗುತ್ತಲೇ 'ಚಂದ್ರು' ಡಾಕ್ಟರರ ಬಳಿ ನನ್ನ ಕರೆದೊಯ್ಯಲು ತಯಾರಾದರು.  ಅದೇನೋ ಒಂದು ಬಗೆಯ ಅಲರ್ಜಿ ಈ ಡಾಕ್ಟರಗಳೆಂದರೆ, ಅವರ ಗುಳಿಗೆಗಳೆಂದರೆ, ಚುಚ್ಚುವ ಸೂಜಿಗಳ ಕಂಡರೆ.! ಬಟ್ಟೆ ಬದಲಿಸಲು ಹೊರಟಾಗಲೇ ನನ್ನ ಎಡಗೈ ತೋಳಮೇಲೆ ಕಂಡದ್ದು ಸುಟ್ಟ ಗುಳ್ಳೆ.! ನಾನೆಲ್ಲಿ ಬಿಸಿ ಎಣ್ಣೆಯ ಸಿಡಿಸಿಕೊಂಡಿದ್ದೇನೆ ಎಂದು ಯೋಚಿಸುತ್ತಲೇ ಅಮ್ಮನಿಗೆ ತೋರಿಸಿದರೆ ಅಮ್ಮ  "ಅಯ್ಯೋ ನಿನಗೆಲ್ಲಿಂದ ಬಂತೇ ಇದು.! chickenpox ಗುಳ್ಳೆ ಇದು "ಎಂದು declare ಮಾಡಿಬಿಟ್ಟರು..! 


ಡಾಕ್ಟರರು chickenpox ಎಂದು confirm ಮಾಡಿ 3 ಇಂಜೆಕ್ಷನ್ ಚುಚ್ಚಿದರು.( ಹತ್ತನೇ ತರಗತಿಯಲ್ಲಿ TT ಇಂಜೆಕ್ಷನ್ ತೆಗೆದುಕೊಂಡ ನಂತರ ತೆಗೆದುಕೊಂಡ ಹ್ಯಾಟ್ರಿಕ್ ಇಂಜೆಕ್ಷನ್ಸ್ ಇವು). ಅದೃಷ್ಟ ಬಂದರೆ ಒದ್ದು ಬರುವುದಂತೆ ಹಾಗೆ ದುರಾದೃಷ್ಟವು ಕೂಡ.!.(chickenpox ನಿನ್ನ ವೇದಾಂತಿಯನ್ನಾಗಿ ಮಾಡಿದೆ ಅಂತೀರಾ? ) ಅಷ್ಟಕ್ಕೇ ಸುಮ್ಮನಿರದ ಚಂದ್ರು ಡಾಕ್ಟರರು ಪಥ್ಯವನ್ನು ಹೇಳಿಯೇ ಬಿಟ್ಟರು. "ನಂಜಿನದನ್ನೇನು ಕೊಡಬೇಡಿ, ಚಪ್ಪೆ ಊಟ, ಹಣ್ಣುಗಳನ್ನು ತಿನ್ನಬಹುದು."  "ಮಾವಿನ ಹಣ್ಣು ತಿನ್ನಬಹುದಾ ?" ಇಂಜೆಕ್ಷನ್ ತೆಗೆದುಕೊಂಡ ನೋವಿನ ಎಡೆಯಲ್ಲೂ ನನ್ನ ಪ್ರಶ್ನೆ. "ಏನು ಮಾವಿನ ಹಣ್ಣಾ? " ಎನ್ನುತ್ತಾ ಇಲ್ಲ ಎಂದು ತಲೆ ಆಡಿಸಿ ಬಿಟ್ಟಿದ್ದರು.! ಮನೆಯಲ್ಲಿ ನನ್ನ ರೂಮಿನ ಪಕ್ಕದ ರೂಮಿನಲ್ಲಿ ನನಗಾಗಿ ಕಾಯುತ್ತಿರುವ ಬಂಗಾರದ ಬಣ್ಣದ ಮಾವಿನ ಹಣ್ಣುಗಳು ನನ್ನ ಅವಸ್ಥೆಯ ನೋಡಿ ಕಣ್ಣೀರಿಟ್ಟ೦ತೆ ಅನಿಸಿತು ನನಗೆ.! ಮಳೆಗಾಲದಲ್ಲಿ ಸುರಿಯುವ ಮಳೆಯನ್ನೂ ಕಿಟಕಿಯಿಂದ ನೋಡುತ್ತಾ ಹಲಸಿನ ಚಿಪ್ಸ್, ಹಲಸಿನ ಹಪ್ಪಳ-ಕಾಯಿಬೆಲ್ಲ ತಿನ್ನುವ ನನ್ನ ಕನಸಿನೆ ಬಲೂನಿಗೆ ಸೂಜಿ ಚುಚ್ಚಿದ ಅನುಭವ.!




ಈ ಪ್ರಸಂಗದ ಎರಡನೇ ಅಧ್ಯಾಯ ಶುರುವಾದದ್ದು ಮನೆಗೆ ಬಂದಮೇಲೆ. ರಾತ್ರಿಯಾಗುವುದರೊಳಗೆ ಆಗಸದಲ್ಲಿ ನಕ್ಷತ್ರಗಳು ತುಂಬಿಕೊಂಡಂತೆ ನನ್ನ ಮುಖದಮೇಲೆ ಸೂಜಿಯ ಮೊನೆಯಿಡಲೂ ಆಗದ ಹಾಗೆ ಗುಳ್ಳೆಗಳು ತುಂಬಿ ಹೋದವು.! ಒಂದುಬಗೆಯ ಉರಿ,  ತುರಿಕೆ ಬೇರೆ. ಹೇಳಲಸಧ್ಯಾವಾಗದ ವೇದನೆ.ಅಷ್ಟರಲ್ಲಿ "ಉಪ್ಪು ಹಾಕಡ, ಚಪ್ಪೆ ಗಂಜಿ, ಹೆಸರು ಕಟ್ಟು (ಬೇಯಿಸಿದ ಹೆಸರು ಬೇಳೆ), ನಂಜಿನ ವಸ್ತು ಬದಿಗೂ ತಕಹೋಗಡ" ಅಜ್ಜ-ಅಜ್ಜಿ ಇಬ್ಬರಿಂದಲೂ ಕಟ್ಟಪ್ಪಣೆ ನನ್ನ ಅಮ್ಮನಿಗೆ.! ಸ್ನೇಹಿತರಿಗೆಲ್ಲ ಫೋನು ಮಾಡಿ ಸಾರಿಯಾಯಿತು. "ನಂಗೆ chickenpox.... ".  ಒಬ್ಬ ಗೆಳತಿ " ಕೋಳಿಯನ್ನು, ಕೋಳಿ ಮೊಟ್ಟೆಯನ್ನು ಬಿಡು, ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನದ ನಿನ್ನಂಥ ಆಸಾಮಿಗೆ ಅದೆಲ್ಲಿಂದ 'chickenpox' ಬಂತೇ? " ಹೌದು ಎಲ್ಲ ಗೆಳೆಯರೆದುರಿಗೂ ನಾನು '200% ವೆಜಿಟೇರಿಯನ್ ' ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನೋದಿಲ್ಲ. ಎಂದು ಹೇಳುತ್ತಿದ್ದೆ. ಸ್ನೇಹಿತರ ಹುಟ್ಟು ಹಬ್ಬಕ್ಕೆ ಎಲ್ಲರಿಗೂ ಕೇಕ್ ಆದರೆ ನನಗೆ ಚಾಕಲೇಟ್ ಇರುತ್ತಿತ್ತು.! ಹೀಗಿದ್ದ ನನಗೆ ಮಾಂಸಹಾರಿ ಹೆಸರಿನ ಖಾಯಿಲೆ..! ಇದಕ್ಕೇ ಹೇಳುವುದಿರಬೇಕು ವಿಪರ್ಯಾಸ ಎಂದು !!ಫೋನ್ ಮಾಡಿದ ಒಬ್ಬ ಗೆಳೆಯನಂತೂ "ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಬರೋ ಖಾಯಿಲೆ ಕಣೆ ಇದು, ನಿನಗೆಲ್ಲಿಂದ? ಆ varicella zoster virus (VZV) ಗೆ confuse ಆಗಿರಬೇಕು. ಅದರಲ್ಲೂ ನಿಂಗೆ wisdom tooth ಬೇರೆ ಬಂದಿಲ್ಲ. (wisdom toothಗೆ  ನಾನು 'ಬುದ್ಧಿವಂತ' ಹಲ್ಲು ಎಂದೇ ಹೇಳುವುದು. ಅದಕ್ಕೆ ಗೆಳೆಯರೆಲ್ಲ. ನಿಂಗೆ wisdom tooth ಬರೋಕೆ ಚಾನ್ಸೇ ಇಲ್ಲ ಬುದ್ಧಿ ಇರೋರಿಗೆ ಮಾತ್ರ ಅದು ಬರೋದು ಎಂದು ಯಾವಾಗಲೂ ಹೇಳ್ತಿರ್ತಾರೆ ) ಅಂದುಬಿಟ್ಟ.! ಇನ್ನೊಬ್ಬರು ಫೋನ್ ಮಾಡಿ ಹದಿನೈದು ದಿನ ಸ್ನಾನವಿಲ್ಲ ನೋಡು, ಪಾರ್ವತಿ ದೇವಿಯಂತೆ ಮಣ್ಣಿನ ವಿಗ್ರಹವನ್ನೆನಾದರೂ ಮಾಡುವ ಇರಾದೆ ಇದೆಯೋ ಎಂದೂ ಕೇಳಿ ಬಿಟ್ಟರು!ಆ ನೋವಿನಲ್ಲೂ ನಕ್ಕಿದ್ದೆ.
calamine ಹಚ್ಚಿದ ಮೇಲೆ ಉರಿಯ ಅನುಭವ ಶಮನವಾದಂತೆ ಅನಿಸಿದರೂ ಭಯಂಕರ ಎನಿಸುವ ನಿಶ್ಯಕ್ತಿ. ಹಾಸಿಗೆ ಬಿಟ್ಟು ನಾನು ಏಳದಂತೆ ಮಾಡಿತ್ತು. ಮಲಗಿದ್ದಾಗಲೂ ಸುತ್ತಲಿನ ಜಗತ್ತೆಲ್ಲ ತಿರುಗಿದಂತೆ ಕಂಡಾಗ, 'ಭೂಮಿ ತನ್ನ ಕಕ್ಷದ ಮೇಲೆ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತದೆ' ಎಂದು ಶಾಲಾ ದಿನಗಳಲ್ಲಿ ಓದಿದ್ದು confirm ಆಯಿತು.! ತಲೆಯ ಮೇಲೆಲ್ಲಾ ಎದ್ದಿದ್ದ ಗುಳ್ಳೆಗಳು ರಾತ್ರಿ ನಿದ್ದೆ ಮಾಡಲು ಬಿಡಬೇಕಲ್ಲ.! ಬುದ್ಧನ ಕುರಿತು ಹೇಳಿದ್ದ 'ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದಿದ್ದ' ನೆನಪಾಗಿ. ಬುದ್ಧನಿಗೂ chickenpox ಆಗಿತ್ತಾ ಅನ್ನೋ ಯೋಚನೆ ಬಂದು ಬಿಟ್ಟಿತ್ತು.! ಮಲಗಿದಲ್ಲೇ ಇದಕ್ಕೇ chickenpox ಎಂಬ ಹೆಸರು ಏಕೆ ಎಂಬ ಪ್ರಶ್ನೆ ಕೊರೆಯುತ್ತಿತ್ತು. ಅಮ್ಮನಲ್ಲಿ ಕೇಳಿದಾಗ. ಅಲ್ಲೇ ನೆಲ ಒರೆಸುತ್ತಿದ್ದ ನಾಗಮ್ಮಕ "ಇದು ಕೋಳಿಗೆ ಬತ್ತದೆರ, ಇದು ಬಂದಾಗ ಕೋಳಿ ಕೂರತೆ ಕೂತ್ಕತ್ತದೆ. ಎಂತದೂ ತಿನ್ನುದಿಲ್ಲ, ಗೋಧಿ ಹಾಕ್ಬೇಕು ಆಗ" ಎಂದಾಗ ನಾಗಮ್ಮಕ್ಕನ GK ಗೆ ಮನದಲ್ಲೇ ತಲೆದೂಗಿದ್ದೆ.


ಬೆಳಿಗ್ಗೆ ತಿಂಡಿಗೆ ಗೋಧಿಯ ದೋಸೆ ಅಥವಾ ಚಪಾತಿ, ಸಪ್ಪೆ ಊಟ, ಬೇಯಿಸಿದ ತರಕಾರಿಯ ಹೋಳುಗಳು, ಹಣ್ಣುಗಳು ಇವಿಷ್ಟೇ ನನ್ನ ಆಹಾರ. ಹಿಂದೆ ಕಾಮಾಲೆಯಾಗಿದ್ದಾಗ ತಿಂದು ತಿಂದು ಬೇಜಾರು ಹಿಡಿಸಿದ್ದ 'ಗೋಧಿ ದೋಸೆಯನ್ನು ಇನ್ನು ಜೀವನದಲ್ಲಿ ಮುಟ್ಟುವುದಿಲ್ಲ' ಎನ್ನುವ ಶಪಥವನ್ನು.chickenpox ಒಂದೂವರೆ ವರ್ಷದಲ್ಲಿ ಅಳಿಸಿ ಹಾಕಿತ್ತು.! ಸ್ನಾನಕ್ಕೂ ಕೊಕ್ ಬೇರೆ.


ಹೀಗೆ 'ಸಪ್ಪೆ ದಿನಗಳು' ಕಳೆದು ಹದಿನೈದು ದಿನಗಳಾದಾಗ ಶುರುವಾಯಿತು ನೋಡಿ ಅಮೋಘವಾದ ಮೂರನೇ ಅಧ್ಯಾಯ!  ಪರೀಕ್ಷೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, 7 aum arivu ಚಿತ್ರದಿಂದ ಸ್ಪೂರ್ತಿ ಪಡೆದಿದ್ದ ಪುಣ್ಯಾತ್ಮ,! ಬಂದವನೇ "ಅಕ್ಕಾ, ಚಂದ್ರನ ಮೇಲಿನ ಕಲೆಯನ್ನು ತೆಗೆಯಲಾಗದಿದ್ದರೆನಂತೆ? ನಿನ್ನ ಮುಖದ ಮೇಲಿನ ಕಲೆಯನ್ನೆಲ್ಲ ನಾನು ಕಳೆಯುತ್ತೇನೆ.." ಎಂದ ಒಮ್ಮೆ ನಾಟಕೀಯವಾಗಿ. ಆ ಡೈಲಾಗ್ ಕೇಳಿಯೇ ಒಮ್ಮೆ ಭಯವಾಗಿತ್ತು ನನಗೆ. ಅದ್ಯಾವುದೋ ಪುಸ್ತಕವನ್ನು ಓದಿ .ಅವನ ಇದ್ದು ಬಿದ್ದ ಆಯುರ್ವೇದ ಜ್ಞಾನವನ್ನೆಲ್ಲಾ ಸೇರಿಸಿ.  ಏನೇನೋ ಎಲೆ, ಬೇರುಗಳನ್ನೆಲ್ಲ ತಂದು. ಕಹಿ ಕಷಾಯ ಮಾಡಿಸಿ ಕುಡಿಸಿಯೇ ಬಿಟ್ಟ ಭೂಪ..!  ಚಂದ್ರು ಡಾಕ್ಟರರ ಸಣ್ಣ ಸೂಜಿಯ ಇಂಜೆಕ್ಷನ್ ಆದರೂ ಬೇಕಿತ್ತು. ಆದರೆ ಈ ಕಷಾಯ ಮಾತ್ರ ಯಾರಿಗೂ ಬೇಡ.! ಏನು ನೈವೇದ್ಯಕ್ಕಿಟ್ಟರೂ ಚಕಾರವೆತ್ತದೆ ಸೇವಿಸುವ ಆ ದೇವರೂ ಈ ಕಷಾಯವ ನೈವೇದ್ಯಕ್ಕೆ ಇಟ್ಟಿದ್ದರೆ ಮುಖ ತಿರುಗಿಸಿ ಕೂತುಬಿಡುತ್ತಿದ್ದನೇನೋ..! ಒಟ್ಟಿನಲ್ಲಿ ನನ್ನ ತಮ್ಮನ ಆಯುರ್ವೇದ ಪ್ರಯೋಗಕ್ಕೆ ನಾನು 'ಬಲಿಪಶು' ಆದೆ ಅನ್ನುವುದಕ್ಕಿಂತ. ಯಾವ್ಯಾವುದೋ ಸೊಪ್ಪುಗಳನ್ನು ತಿಂದು ಬಲಿಯಾಗಿ 'ಪಶು'ವಾದೆ.! 


ಏನೆಲ್ಲಾ ಅನುಭವಸಿ ಹದಿನೇಳು ದಿನ ಕಳೆವಷ್ಟರಲ್ಲಿ 'ನಾಳೆ ನಿನೆಗೆ ಸ್ನಾನ' ಎನ್ನುವ ಖುಷಿಯ ವಾರ್ತೆ ಅಮ್ಮನಿಂದ.! ಅಂತೂ ಹದಿನೆಂಟನೆಯದಿನದ ಮಿನಿ-  ಮಜ್ಜನಕ್ಕೆ ತಯಾರಾದೆ. ಅದೇನು ಖುಷಿ ಆ ಸ್ನಾನದಲ್ಲಿ. ಏನೀ ಮಹಾನಂದವೇ....! ಅಮ್ಮ ಬಂದು ತಲೆಯ ಮೇಲೆ ನೀರೆರೆದು ಹೋದ ನಂತರ ಭರ್ಜರಿ ಸ್ನಾನವಾಯಿತು.ರಸ್ತೆಯಲಿ ಮಳೆ ಸುರಿದಾಗ ಹರಿಯುವ ನೀರಿನಂತೆ ಕೊಳೆ ಹೋಗುತ್ತದೆ ಎಂದುಕೊಂಡಿದ್ದ  ನನಗೆ ಭಾರೀ ನಿರಾಸೆ. ದಿನವೂ ತಲೆ ಸ್ನಾನ ಮಾಡುತ್ತಿದ್ದ ನಾನು ಹದಿನೆಂಟು ದಿನಗಳ ನಂತರ ಮಾಡಿದರೂ ಕೊಳೆ ನಾನು ಎಣಿಸಿದ್ದ ಪ್ರಮಾಣದಲ್ಲಿ ಇರಲೇ ಇಲ್ಲ..! 
ನನ್ನ ಮಿನಿ ಮಜ್ಜನದ ನಂತರ 'ಹೊಗೆ ಹಾಕುವ' ಕಾರ್ಯಕ್ರಮ. ನನ್ನ ತಮ್ಮ ಇದ್ದಿಲನು ತಂದು ಸಾ0ಭ್ರಾಣಿಯ ಹೊಗೆಯ ತಯಾರು ಮಾಡಿಯೇ ಬಿಟ್ಟ.! ಅದರ ಜೊತೆಗೆ ಬೇವಿನ ಸೊಪ್ಪು ಬೇರೆ. ಆ ಪರಿಮಳದ ಹೊಗೆಯನ್ನು ಆಸ್ವಾದಿಸಲು ತಯಾರಾಗಿ ಕುಳಿತ ನನ್ನ ಮೂಗಿಗೆ ಬಡಿದದ್ದು ಸೀಮೆಯೆಣ್ಣೆಯ ಹೊಗೆ..!  ಕೆಂಡವ ಉರಿಸಲು ಸೀಮೆಯೆಣ್ಣೆಯ ಸುರಿದು ತಂದು ಬಿಟ್ಟಿದ್ದ ಭೂಪ.! ಆ ವಾಸನೆ ನನ್ನ ಮೂಗಿಗೆ ರಾಚಿ. ಕೆಮ್ಮು ಸೀನು ಎಲ್ಲ ಒಟ್ಟಿಗೆ ಬಂದು ನಾನು 'ಹೊಗೆ ಹಾಕಿಸಿ ಕೊಳ್ಳುವುದೊಂದು' ಬಾಕಿ..!  
ಏನೆಲ್ಲಾ ಅನುಭವವನ್ನು ಕಟ್ಟಿಕೊಟ್ಟ . ಅಳು ನಗು ಎರಡನ್ನು ಒಟ್ಟಿಗೆ ತಂದಿಟ್ಟ ಈ chickenpox ಜೀವಿತದಲ್ಲಿ ಒಮ್ಮೆ ಮಾತ್ರ ಆಗುವುದು ಎಂದು ಅಜ್ಜಿ ಹೇಳಿದಾಗ ನೆಮ್ಮದಿಯ ನಿಟ್ಟುಸಿರು ! 
ಇತಿ chickenpox ಪರ್ವಃ  ಸಮಾಪ್ತಿ:  .




Monday, May 7, 2012

ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ..

ತ್ತದೇ ಬೀದಿಯಲ್ಲಿ ಇಳಿದಿದ್ದ ಚಿಕ್ಕ ಚಿಕ್ಕ ಕಂಗಳ ಮಂದ ಹುಬ್ಬುಗಳ ಹುಡುಗ , ಬರೋಬ್ಬರಿ ಮೂರು ವರುಷಗಳ ನಂತರ. ಅವನ ಕಾಲುಗಳು ತಂತಾನೇ ಅವನ ಎಳೆದು ಹೊರಟಿದ್ದವು ಅದೇ ಆಂಜನೇಯ ದೇವಸ್ತಾನಕ್ಕೆ. ಸುತ್ತಲೂ ಕಣ್ಣಾಡಿಸುತ್ತ,ಮನದಲ್ಲೇ ನಗುತ್ತ  ಸಾಗಿದ್ದ ಅವನು.  ದೇವಸ್ಥಾನದ ಎದುರಲ್ಲೇ ಇದ್ದ  ಮಂಡಕ್ಕಿಹಾಗೂ ಭಜ್ಜಿಯ ಅಂಗಡಿ ಬೇರೆಡೆಗೆ ಸ್ಥಳಾಂತರವಾದದ್ದು ಬಿಟ್ಟರೆ, ಅದೇನು ಅಂಥ ಬದಲಾವಣೆ ಏನಿರಲಿಲ್ಲ  ಆ   ಬೀದಿಯಲ್ಲಿ. !


ಬೊಂಡದಂಗಡಿಯ ಅಜ್ಜ ಪರಿಚಯದ ನಗೆಯನ್ನು ಬೀರಿದಾಗಲೇ ಅವನಿಗೆ ಅನಿಸಿದ್ದು ತಾನು ಮತ್ತದೇ ಬೀದಿಯಲ್ಲಿದ್ದೇನೆ ಎ ನ್ನುವುದು. ಚಪ್ಪಲಿ ಕಳಚಿಟ್ಟು ದೇವಳದ ಒಳಹೊಕ್ಕು ಕೈಮುಗಿದ. ಕಣ್ಣುಗಳು ಅದೇನನ್ನೋ ಹುಡುಕುತ್ತಲೇ ಇದ್ದವು. ಅದೇ ಕನಸುಕಂಗಳು, ಅಮಲು ಕಂಗಳು. ಥಟ್ಟನೆ ಎಚ್ಚೆತ್ತ "ಅದೇನು ಹುಚ್ಚು ತನಗೆ, ಇನ್ನೆಲ್ಲಿ ಬರುತ್ತಾಳೆ ಅವಳು ಇಲ್ಲಿ?". ಎಂದು ತನ್ನಷ್ಟಕ್ಕೆ ನಕ್ಕು ಹೊರನಡೆದ. ಅವಳೊಂದು ಮಾಯೆಯೆ? ಅಲ್ಲ.. ತಾಯೆ ? ಯಾರವಳು ತನಗೇನಾಗಿದೆ? ಅವಳನೇಕೆ ಮರೆಯಲಾಗುತ್ತಿಲ್ಲ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತ್ತೊಮ್ಮೆ ಬಂದಿದ್ದ ದೂರದ ಮಿಜೋರಾಂನಿಂದ. ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯಲಿ ಅನಿಸಿತ್ತವನಿಗೆ ಇಲ್ಲಿಗೆ ಬಂದಮೇಲೆ.


ನಾಲಕ್ಕು ವರ್ಷಗಳ ಹಿಂದಿನ ಮಾತದು. ಇದೇ ಊರಿನಲ್ಲಿ ಕಲಿಯುತ್ತಿದ್ದ ಹುಡುಗ. .


 ಅವನಿಗೆ ಅವಳ ಪರಿಚಯ ಆದದ್ದೇ ಅಚಾನಕ್ಕಾಗಿ..3 ದಿನದ ದೀಪಾವಳಿಯ ರಜೆಗೆಂದು ಗೋವೆಯ ಚಿಕ್ಕಮ್ಮನ ಮನೆಗೆ ಹೊರಟಿದ್ದ. ಅವನ ಎದುರಿನ ಸೀಟಿನಲ್ಲಿ ಅವಳೂ ಇದ್ದಳು. ಅವಳ ಪಾಡಿಗವಳು ಅದ್ಯಾವುದೋ ಪುಸ್ತಕವನ್ನೋದುವುದರಲ್ಲಿ ಮಗ್ನಳಾದವನ್ನು ಕದ್ದು ದಿಟ್ಟಿಸಿದ್ದ ಹುಡುಗ. ನೀಳ ಕಣ್ರೆಪ್ಪೆಯ, ಉದ್ದನೆಯ ಕೂದಲ, ಶಾಂತ ಮುಖ ಮುದ್ರೆಯ ಹುಡುಗಿ. ಇನ್ನೂ ಮಾಸದ ಮುಗ್ಧತೆ ಮೊಗದಲ್ಲಿ. ಥಟ್ಟನೆ ಪುಸ್ತಕದಿಂದ ತಲೆಯೆತ್ತಿ ನೋಡಿದಳು ಮುಗುಳ್ನಕ್ಕಳು. ಅಲ್ಲಿಂದ ಶುರುವಾಯಿತು ಮಾತುಕತೆ. ಹುಡುಗ ಸಂಕೋಚದ ಪೊರೆಯಲ್ಲಿದ್ದುಕೊಂಡೇ ಮಾತಾಡುತ್ತಿದ್ದ. ಅವಳೋ ಮಳೆಗಾಲದ ಅರಬ್ಬೀ ಸಮುದ್ರಕ್ಕಿಂತ ಒಂದು ಪಟ್ಟು ಹೆಚ್ಚೇ ಎನಿಸುವ ಭೋರ್ಗರೆತದ ಮಾತು. ಮಾತುಕತೆಯಲ್ಲಿ ತಿಳಿದಿದ್ದು ಇಷ್ಟು ಇಬ್ಬರದ್ದೂ ಒಂದೇ ಆಯ್ಕೆಯ ವಿಷಯ. ಅವಳಿರುವುದೂ ಅವನ ರೂಮಿಗಿಂತ ೩ ಕಿಲೋಮೀಟರು ದೂರದಲ್ಲಿ. ಅವಳಿಗಿಂತ ಎರಡು ವರ್ಷಕ್ಕೆ ಕಿರಿಯ ಆತ.  


ಹೀಗೆ ಮಾತಿನ ನಡುವೆ ಅವಳು ಅವನಿಷ್ಟವ ಕೇಳಿದಾಗ. "ಏನಿಲ್ಲ" ಎಂದು ಅಮಾಯಕ ನಗು ನಕ್ಕಿದ್ದ. ಅವಳು ಕಣ್ಣರಳಿಸಿ "ಏನೂ ಇಷ್ಟ ಇಲ್ಲವಾ ?" ಎಂದಾಗ . "ಗಿಟಾರ್ ಇಷ್ಟವಿತ್ತು " ಎಂದು ಮಾತು ತಿರುಗಿಸಿದ್ದ. ಅದೇನೋ ಆತ್ಮೀಯತೆ ಮೂಡಿ ಬಿಟ್ಟಿತ್ತು ಅವರಿಬ್ಬರ ನಡುವೆ.ಅವಳು ಇಳಿವ station ಬರುವುದರೊಳಗೆ. 
 "ನಾನು ನಿನಗಿಂತ ಎರಡು ವರ್ಷಕ್ಕೆ ದೊಡ್ಡವಳು, ಅಕ್ಕಾ ಎಂದುಕೊಂಡು ಬಿಡು. ವಿಷಯಗಳಲ್ಲಿ ಅದ್ಯಾವುದೂ ತಲೆಗೆ ಹತ್ತದಿದ್ದರೂ ಕೇಳು. ನನಗೆ ತಿಳಿದಷ್ಟು ಹೇಳಿ ಕೊಡುತ್ತೇನೆ." ಅದೆಷ್ಟು ಸಲೀಸಾಗಿ ಸ್ನೇಹದ ಹಸ್ತ ಚಾಚಿಬಿಟ್ಟಳು ಹುಡುಗಿ ಎಂದು ಅವಾಕ್ಕಾದ. ಯಾರನ್ನೂ ಹಚ್ಚಿಕೊಳ್ಳದ ಅಂತರ್ಮುಖಿ, ಮುಗುಳು ನಗುತ್ತಿದ್ದ. ಎಂದೂ ತಾನಾಗಿ ಮಾತನಾಡದ ಹುಡುಗ. " may i have your contact number please.. ಎಂದಿದ್ದ. sure... ಎಂದೆನ್ನುತ್ತ ಅವಳು ಉಲಿದ ನಂಬರನ್ನು 'Dragon' ಎಂದು save ಮಾಡಿದ್ದ.! 

ನಂತರದ್ದೆಲ್ಲ ಇತಿಹಾಸವೀಗ. ಅವನ ನೆನಪಿನ ಹಂದರದೊಳಗೆ ಎಂದೂ ಬಾಡದ ಹೂಗಳು ಅವಳ ಜೊತೆಗೆ ಕಳೆದ ಕೆಲವು ಸಂಜೆಗಳು.!ಅವಳ  ಶನಿವಾರದ ಆಂಜನೇಯ ದೇವಸ್ಥಾನದ ಅಲೆದಾಟಕ್ಕೆ ಜೊತೆಯಾದ. ಬರುವಾಗ ಮಸಾಲೆ ಮಂಡಕ್ಕಿ , ಭಜ್ಜಿ, ಎಳನೀರು. ಅವರು ಮಾತನಾಡುತ್ತಿದ್ದ ವಿಷಯಗಳಲ್ಲಿ ಮುಖ್ಯವಾಗಿರುತ್ತಿದ್ದುದೇ ಆಧ್ಯಾತ್ಮ. ಪ್ಲಾಂಚೆಟ್, ಪುನರ್ಜನ್ಮ, ಎಂದು ಅವಳು ಅವನ ತಲೆ ತಿನ್ನುತ್ತಿದ್ದರೆ. ಅವನು ನಗುತ್ತಲೇ ತನಗೆ ಗೊತ್ತಿರುವುದನ್ನು ಹೇಳುತ್ತಿದ್ದ. ಅನಂತ ಆಗಸವ ದಿಟ್ಟಿಸಿ ಅನ್ಯಗ್ರಹ ಜೀವಿಗಳ ಬಗ್ಗೆ, ಹಾರುವ ತಟ್ಟೆಗಳ ಬಗ್ಗೆ  ಅವಳು ಹೇಳುತ್ತಿದ್ದರೆ ಥೇಟ್ ಮಗುವೆ ಅವಳು.. ಹುಡುಗ ನಕ್ಕು "hey a am gonna change your name to Kiddu " ಎಂದಿದ್ದ . ಅವಳು ಥಟ್ಟನೆ ವಿಷಯಪಲ್ಲಟ ಮಾಡಿ "Adam is like Brahma right ? " ಎಲ್ಲ ತನಗೆ ಗೊತ್ತು ಎಂಬಂತೆ ಕೇಳಿದ್ದಳು.!  "Not exactly, he is like Manu." ಎಂದಿದ್ದ ಅವ !.  ಕ್ರೈಸ್ತ ಹುಡುಗನಾದರೂ. ಅದೇಕೆ ಕೊರಳಲ್ಲಿ ಮಣಿ ಸರವಿಲ್ಲ. ? .ಕೈ ಮೇಲೆ cross ಚಿಹ್ನೆಯಿಲ್ಲ ಎಂದು ಮಗುವಿನ ಮುಗ್ಧತೆಯಲ್ಲಿ ಕೇಳಿದ ಅವಳಿಗೆ, " ಅದನ್ನು ಧರಿಸಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಹುಡುಗೀ, ನಾನೇನು ಅಷ್ಟು ಶುದ್ಧನೆಂದು ನನಗೆ ಅನಿಸುವುದಿಲ್ಲ, ಜೊತೆಗೆ ನಾನು ಕ್ರೈಸ್ತನೆಂದು ಜಗತ್ತಿಗೇನು ಹೇಳಬೇಕಾಗಿಲ್ಲವಲ್ಲೆ " ಎಂದಿದ್ದ. ಎಲ್ಲ ಧರ್ಮಗಳ ಕುರಿತು ಆಳ ಜ್ಞಾನವ  ಕಂಡು ಸಣ್ಣಗೆ ಬೆಚ್ಚಿ ಬಿದ್ದಿದ್ದಳವಳು.!

ಮ್ಮೆ ಜಾತ್ರೆಯಲಿ ಸಿಗುವ  ಎರಡು ತಂತಿಯ ಮರದ ವಾದ್ಯವೊಂದನು ತಂದು ತನಗೆ ಕಲಿಸೆಂದು ಹಠ ಹಿಡಿದುಕೂತಿದ್ದಳು  "ಇದೆಲ್ಲ ನುಡಿಸಲು ತನಗೆ ಬರುವುದಿಲ್ಲವೆಂದು ಹೇಳಿದರೂ ಕೇಳುತ್ತಿರಲಿಲ್ಲ.  "You are a Kid ..and you have proved it  " ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ.ಬಂದ ಕೋಪಕ್ಕೆ ಬೆನ್ನ ಮೇಲೆ ಗುದ್ದಿದ್ದಳು. ಹಠ ಹಿಡಿದು ಒತ್ತಾಯಿಸಿ ಮತ್ತೆ ಗಿಟಾರ್  ಹಿಡಿಸಿದವಳೂ ಅದೇ ಹುಡುಗಿಯೇ . ಅಮ್ಮ ಹೋದಮೇಲಿಂದ ಹುಡುಗ  ಗಿಟಾರ್ ಹಿಡಿದಿರಲಿಲ್ಲ. ಅವನ ಅಂತರ್ಮುಖ ಭಾವನೆಗಳೆಲ್ಲ ತಂತಿಯ ಮೇಲೆ ದನಿಯಾಗುತ್ತಿತ್ತು. ಸಮುದ್ರದ  ದಡದಲ್ಲಿ ಅವನ  ಹಾಡಿಗೆ ಅವಳೊಬ್ಬಳೇ ಪ್ರೇಕ್ಷಕಳು.! ಸಮುದ್ರದ ಅಲೆಗಳ ಭೋರ್ಗರೆತವೇ drum, rhythm pad ಎಲ್ಲ !  ಇಂಥ ಅದೆಷ್ಟೋ ಸಂಜೆಯ ನೆನಪುಗಳು ಅವನ ಮನದ ಜೋಳಿಗೆಯಲ್ಲಿ  ಇದ್ದವು .!

 ಒಮ್ಮೆ ಅದ್ಯಾವುದೋ ಹಬ್ಬವನ್ನು ಮುಗಿಸಿಕೊಂಡು ಬರುತ್ತಿದ್ದ ಗೆಳೆಯರ ಗುಂಪುಗಳಲ್ಲಿ ಅವರಿಬ್ಬರೂ ಇದ್ದರು. ಅವಳ ಬಳಿ ಇದ್ದದ್ದು ಬಣ್ಣಬಣ್ಣದ ಬೆಳಕು ಚೆಲ್ಲುವ ಆಟಿಕೆ. ಅದನ್ನು ಕಸಿದುಕೊಂಡು, ಗುಂಪಿನಿಂದ ಬೇರೆಯಾಗಿ ಹೊರಟುಬಿಟ್ಟ ಹುಡುಗ.!ಅವಳು ಅದೆಷ್ಟು ಗೋಗರೆದರೂ ತಿರುಗಿ ನೋಡಲೂ ಇಲ್ಲ. ರೂಮಿಗೆ ಬಂದು ಜೀವದ ಗೆಳತಿಯ ಬಳಿ ಅವಳು ನಡೆದುದ್ದೆಲ್ಲವ ಅರುಹಿದಾಗ ಗೆಳತಿಯೆಂದದ್ದು "ಅವ ನಿನ್ನ ಪ್ರೀತಿಸುತ್ತಿದ್ದಾನೆ ಹುಚ್ಚಿ.. " ಹುಡುಗಿ ವಿರೋಧಿಸಿದ್ದಳು. ತಕ್ಷಣವೇ cell phone ಕೈಗೆತ್ತಿಕೊಂಡು  "ನೀನೆಂದರೆ ಒಬ್ಬ ಒಳ್ಳೆಯ ಗೆಳೆಯ.. ಜೊತೆಗೆ ನನ್ನ ತಮ್ಮನಂತೆ. ನಿನ್ನ ಮೇಲೆ ವಾತ್ಸಲ್ಯ ಹೆಚ್ಚಾದದ್ದು ನಿನಗೆ ಅಮ್ಮನಿಲ್ಲ ಎಂದು " ಮೆಸೇಜ್ ಮಾಡಿಯೂ ಬಿಟ್ಟಳು.!
ಹುಡುಗನ ಮನದಲ್ಲಿ ತಳಮಳ. ಅವಳ್ಯಾರು ತನಗೆ ? ಎಂದು ಭೂತವನ್ನೆಲ್ಲ ತಡಕಾಡಿದಾಗ ಸಿಕ್ಕ ಉತ್ತರ "ಪ್ರೀತಿ ". ಮನದಲ್ಲಿ ಅವಳ ಅಕ್ಷರಶಃ ಆರಾಧಿಸುತ್ತಿದ್ದ. ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡವ. ಇಂಚಿಂಚಾಗಿ ಪ್ರೀತಿಯ ಸುಳಿಗೆ ಸಿಲುಕಿದ್ದ ಸಣ್ಣ ಸುಳಿವೂ ಇಲ್ಲದೆ..! 

ಮರುದಿನ ಭಾನುವಾರ ಬೆಳಿಗ್ಗೆ ಆರರ ಹೊತ್ತಿಗೆ ಬಾಗಿಲು  ಬಡಿದ ಶಬ್ದಕ್ಕೆ ಎಚ್ಚರವಾಗಿ ಹುಡುಗಿ ಬಾಗಿಲು ತೆರೆದರೆ ಬಣ್ಣದ  ಆಟಿಕೆಯೊಂದಿಗೆ ಹುಡುಗ ನಿಂತಿದ್ದ. ಆಟಿಕೆಯ  ಜೊತೆಗೊಂದು ಮಡಿಸಿದ  ಹಾಳೆಯ  ನೀಡಿ ಹೊರಟು  ಹೋಗಿದ್ದ. ನಿದ್ದೆಗಣ್ಣಿನಲ್ಲಿ ಹಾಳೆಯ ಬಿಡಿಸಿದರೆ ಅದರಲ್ಲಿ ಇದ್ದದ್ದಿಷ್ಟು:

My little princess,

ಅದೀಗ ತಾನೇ ಎದ್ದ ನಿನ್ನ ಮೊಗವನ್ನೊಮ್ಮೆ ನೋಡಬೇಕು ಎಂದುಕೊಂಡಿದ್ದೆ ಅದೆಷ್ಟೋ ದಿನಗಳಿಂದ. ಇವತ್ತು ಈ ಆಟಿಕೆಯ ಹಿಂತಿರುಗಿಸುವ ನೆಪವೂ ಸಿಕ್ಕಿಬಿಟ್ಟಿತು ನೋಡು .ಬೆಳಿಗ್ಗೆ ಎದ್ದು ಬಂದುಬಿಟ್ಟೆ.  ಜೀವನದಲ್ಲಿ ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ ಹುಡುಗೀ ಈಗ ನೋಡು ನಿನ್ನ ಪ್ರೀತಿಯ ಸುಳಿಯಲ್ಲಿ ಸುಳಿವಿಲ್ಲದೆ ಸಿಕ್ಕಿಬಿದ್ದಿದ್ದೇನೆ. ಮೊದಲ ಬಾರಿಗೆ ನನ್ನ ಅಮ್ಮನ ಬಿಟ್ಟು ಇನ್ನೊಬ್ಬರನ್ನು ಹಚ್ಚಿಕೊಂಡಿದ್ದೇನೆ. ಅಮ್ಮ ಮಗುವನ್ನು ಪ್ರೀತಿಸಿದಂತೆ ನಿನ್ನ ಪ್ರೀತಿಸುತ್ತೇನೆ ಎಂದು ಸುಳ್ಳು ಹೇಳಲಾರೆ. ಆದರೂ ನೀನೊಂದು ಮಗುವೆ. ನಿನ್ನನ್ನು ಪ್ರೀತಿಸುತ್ತೇನೆ.. ಆರಾಧಿಸುತ್ತೇನೆ. ನೀ ತೋರುವ  ಕಾಳಜಿಗೆ, ಹುಷಾರಿಲ್ಲದೆ ಇದ್ದಾಗ ತಂದುಕೊಟ್ಟ ಕಷಾಯಕ್ಕೆ,ದೂರದ ಊರಿನಲ್ಲಿ ಅನಾಥ ಎಂಬ ಭಾವ ಕಾಡಿದಾಗ ನೀ ತೋರಿದ ವಾತ್ಸಲ್ಯಕ್ಕೆ,  ಕಬ್ಬಿಣದ ಕಡಲೆಯಂಥ ವಿಷಯಗಳ ನೀ ಮನದಟ್ಟು ಮಾಡಿಸುವ ಬಗೆಗೆ ಶರಣಾಗಿದ್ದೇನೆ. ಒಮ್ಮೊಮ್ಮೆ ನೀನು ಸಾಕ್ರಟಿಸ್ ನ ಮೀರಿಸುವ ತತ್ವಜ್ಞಾನಿ ಮತ್ತೊಮ್ಮೆ ಐದರ ಹರೆಯದ ನನ್ನ ಅಕ್ಕನ ಮಗಳು 'ರಿನಿ'ಯಂಥ ಮಗು.!  ಭೂಮಿ ಬಾನಿನ ವ್ಯತ್ಸಾಸ ನಿನ್ನೊಬ್ಬಳಲ್ಲೇ ..!  ಅಮ್ಮ ಭೌತಿಕವಾಗಿ ನನ್ನ ಜೊತೆ ಇಲ್ಲ ಅಷ್ಟೇ. ನನ್ನ ಮನದಲ್ಲಿ, ನೆನಪುಗಳಲ್ಲಿ ಇನ್ನೂ ಅವಳಿದ್ದಾಳೆ. ನೀನು ನನ್ನ ಬಾಳಿಗೆ  ಜೊತೆಯಾಗುತ್ತೀಯಾ   ಎಂದೆಣಿಸಿ ನಿನ್ನ ಪ್ರೀತಿಸಿದೆ ಎಂದುಕೊಂಡೆಯ ? ಅದು ಈ ಜನುಮದಲ್ಲಿ ಸಾಧ್ಯವಿಲ್ಲ. ನಿನಗೆ ನನ್ನೆಡೆಗೆ ಒಂದು ಸೋದರ ಭಾವವ ಬಿಟ್ಟರೆ ಬೇರೇನೂ ಇಲ್ಲ ಎಂದೂ ಗೊತ್ತಿದೆ. ನಿನ್ನ ನಿಷ್ಕಲ್ಮಶ ಸ್ನೇಹಕ್ಕೆ ದ್ರೋಹವೆಸಗಲಾ ? ಅಥವಾ ನನ್ನ ಆತ್ಮವ ವಂಚಿಸಲಾ.? ಒದ್ದಾಡಿದ್ದೇನೆ ಅಕ್ಷರಶಃ ಅತ್ತ ಬಾನಲ್ಲೂ ಇರದೇ..  ಭೂಮಿಗೆ ಬೀಳಲೂ ಆಗದೆ ಉರಿಯುವ ಉಲ್ಕೆಯಂತೆ. ನೀನು ಅದ್ಯಾವ ಹುಡುಗನ ಬಾಳಿನಲ್ಲಿ ಹೋಗುತ್ತೀಯೋ ಗೊತ್ತಿಲ್ಲ. ಆದರೆ ಆ ಹುಡುಗ ಮಾತ್ರ ಪುಣ್ಯವಂತ ಎಂದು ಮಾತ್ರ ಹೇಳಬಲ್ಲೆ. ! ಆದರೆ ನಾನು ಪ್ರೀತಿಸಿದಂತೆ ಇನ್ಯಾರೂ ನಿನ್ನ ಪ್ರೀತಿಸಲು ಸಾಧ್ಯವಿಲ್ಲವೇ ಹುಡುಗೀ ... ನನ್ನ ಫೋನಿನ್ನಲ್ಲಿ ನಿನ್ನ ಹೆಸರು Dragon - kiddu- lil princess ಎಂದು ಬದಲಾವಣೆ ಆಗುತ್ತಲೇ ಇದೆ ಥೇಟ್ ನಿನ್ನ ಮನಸಿನಂತೆ.! ನೀನಿಲ್ಲದೆ ಬದುಕಲಾರೆ ಎಂದೆಲ್ಲ ಸುಳ್ಳು ಹೇಳಲಾರೆ. ಆದರೆ ನಿನ್ನ ನೆನಪು ಚಿರನೂತನ, ನಿರಂತರ...ನಿನ್ನ ಮಾತು, ನಗು, ಪ್ರಶ್ನೆಗಳ ನೆನಪುಗಳನ್ನು ಈ ಜನುಮಕೆ ಸಾಕಾಗುವಷ್ಟು ತುಂಬಿಕೊಂಡಿದ್ದೇನೆ..... ಅಮ್ಮ ಈ ಜಗವ ಬಿಟ್ಟು ಹೋದಾಗಲೂ ಕಣ್ಣಲ್ಲಿ ನೀರು ಹನಿಸಿರಲಿಲ್ಲ..  ಅದ್ಯಾಕೋ ಇಂದು ಜಗವೆಲ್ಲ ಮುಂಜು ಮಂಜು... "

ಜೊತೆಗಿದ್ದ ಜೀವದ ಗೆಳತಿ ಬೇಡ ಹುಡುಗೀ ಅವನ ಭಾವನೆಗಳ ಜೊತೆಗಿನ ಆಟ ಬೇಡ. ನಿನ್ನ ಪಾಡಿಗೆ  ನೀನಿದ್ದುಬಿಡು  ಎಂದಿದ್ದಳು. ಅಂದಿನಿಂದ ಹುಡುಗಿ ವನ ಜೊತೆಗಿನ ಒಡನಾಟವನ್ನು  ಕಡಿಮೆ ಮಾಡಿದ್ದಳು. 
ಶನಿವಾರದ ಆಂಜನೇಯ ದೇವಸ್ಥಾನದ ಓಡಾಟವನ್ನೂ ನಿಲ್ಲಿಸಿಬಿಟ್ಟಿದ್ದಳು. ಹುಡುಗನೊಬ್ಬನೇ ದೇವಳಕ್ಕೆ ಹೋಗಿ ಬಂದು ಆ ಬೀದಿಯಲ್ಲೇ ಕಾದು ನಿಂತಿರುತ್ತಿದ್ದ ಅದೆಷ್ಟೋ ಶನಿವಾರದ  ಸಂಜೆಗಳಲ್ಲಿ..! 

 ಓದು ಮುಗಿದ ತಕ್ಷಣ ಕೆಲಸ ಹುಡುಕಿ ದೂರದ ಊರೊಂದ ಸೇರಿ ಬಿಟ್ಟಿದ್ದಳು  ಹುಡುಗಿ. ಮಾತೊಂದನ್ನೂ ಹೇಳದೆ...! ದಿನವೂ ಬರುತ್ತಿದ್ದ, ಅವನ  ಮೆಸೇಜುಗಳನ್ನು ಸದ್ದಿಲ್ಲದೇ ಅಳಿಸಿಬಿಡುತ್ತಿದ್ದಳು. ಅದೆಷ್ಟು ಭಾವುಕನಾಗಿ ಮೆಸೇಜು ಮಾಡಿದರೂ ಉತ್ತರ ಇರುತ್ತಿರಲಿಲ್ಲ. ತನ್ನ ಸೋದರ ಭಾವಕ್ಕೆ ಅವ ಮೋಸ ಮಾಡಿದ ಕೋಪ ಹುಡುಗಿಯಲ್ಲಿ..! ಒಮ್ಮೊಮ್ಮೆ ಅದ್ಯಾವ್ಯಾವುದೋ ನಂಬರಿನಿಂದ call ಮಾಡಿ ಮಾತನಾಡದೆ, ಅವಳ ಧ್ವನಿಯನ್ನಷ್ಟೇ ಆಲಿಸುತ್ತ ಕುಳಿತುಬಿಡುತ್ತಿದ್ದ ಹುಡುಗ .! unknown ನಂಬರಿನ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿಬಿಟ್ಟಿದ್ದಳು ಹುಡುಗಿ.

ವರ್ಷಗಳೆರಡು ಉರುಳಿ ಅವನೂ ಆ  ಊರ  ಬಿಟ್ಟು ತನ್ನೂರಿಗೆ ಹೊರಟಿದ್ದ  ಅವಳ  ನೆನಪಿನ  ಮೂಟೆಯೊಂದಿಗೆ. ಅಲ್ಲೇ ಕೆಲಸ  ಮಾಡಲೂ ಶುರು ಮಾಡಿದ್ದ . 

ಅಲ್ಲಿ ಪರಿಚಯವಾದ, ಸ್ನೇಹಿತೆಯಾದ  ಚಿಕ್ಕ ಕಂಗಳ ಚೋರಿ ಒಂದು ವರುಷದ ಬಳಿಕ "ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುತ್ತೇನೆ ನಿನ್ನ " ಅಂದಾಗ ಹುಡುಗ ಗೊಂದಲಕ್ಕೆ ಬಿದ್ದಿದ್ದ.! ಸ್ವಲ್ಪ ಸಮಯ ಬೇಕು ನನಗೆ ಅಂದಿದ್ದ. "ಯಾಕೋ ಮತ್ತೆ ಹಳೆಯ ನೆನಪಾ ? "ಎಂದು ಅವಳು ಉಸುರಿದಾಗ ಅಲ್ಲಿ ನಿಲ್ಲಲಾಗದೆ. ಇಲ್ಲಿ ಬಂದುಬಿಟ್ಟಿದ್ದ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕಿ.. 
ಬೀದಿಯಲಿ ಹಳೆಯದೆಲ್ಲವೂ ನೆನಪಾಗಿತ್ತು.. 
ದಾರಿ ಮಸುಕಾಗಿ ಕಣ್ಣೊರೆಸುತ್ತ  ಒಮ್ಮೆ ತಲೆ ಎತ್ತಿ ಆಗಸವ ದಿಟ್ಟಿಸಿದ್ದ. ಪಡುವಣದಲ್ಲಿ ಬೆಳ್ಳಿ ಚುಕ್ಕಿಯೊಂದು ಕಂಡಿತ್ತವನಿಗೆ. ಅದರ ಕುರಿತೇ ಅದೆಷ್ಟು ಮಾತನಾಡುತ್ತಿದ್ದಳು ಆ ಹುಡುಗಿ. ಕಳೆದೇ ಹೋಗುತ್ತಿದ್ದಳು ಆಗಸದಲ್ಲಿ. ಅರೆರೆ ಅದರ ಜೊತೆ ಇನ್ನೊಂದು ಚುಕ್ಕಿಯೂ ಇದೆಯಲ್ಲ ಇಂದು. ಇನ್ಯಾವುದೋ ಗ್ರಹ ಇರಬೇಕೆಂದುಕೊಂಡ. ತಡೆಯಲಾಗಲಿಲ್ಲ ಅವನಿಗೆ. cell phone ತೆಗೆದು ಅದೇನೋ ಬರೆದು ಕಳುಹಿಸಿದ. ಚಿಕ್ಕ ಚಿಕ್ಕ ಕಂಗಳಲ್ಲಿಯ ನೀರಿನಲ್ಲಿ ಪಡುವಣದ ಚುಕ್ಕಿ ಬಿಂಬ ನೋಡಿಕೊಳ್ಳುತ್ತಿತ್ತು.

ಮದರಂಗಿಯ ಬಣ್ಣದಲ್ಲಿ ಕೈಯ ತುಂಬಿಸಿಕೊಂಡ ಹುಡುಗಿ. ಮೊಬೈಲ್ ಫೋನ್ ಬೀಪ್ ಕೇಳಿ ಕೈಗೆತ್ತಿಕೊಂಡಳು. ಮತ್ತದೇ ನಂಬರಿನಿಂದ  ಮೆಸೇಜ್ "Missing you my little angel.. "  ಉತ್ತರಿಸಿದಳು ಹೀಗೆ.. "ನಾಳೆ ಬೆಳಗಾದರೆ ನನ್ನ ಮದುವೆ ಪೋರ, ನಿನ್ನ ಪ್ರೀತಿಯ ಬಗೆಗೊಂದು ಸಲಾಂ. ಎಲ್ಲೋ ನೀನಂದಿದ್ದು ನಿಜ್ಜ..ನಿನ್ನ ಬಗೆಯಲ್ಲಿ ಅದ್ಯಾರೂ ಪ್ರೀತಿಸಲಾರರು ನನ್ನ. ಸಾಧ್ಯವಾದರೆ ಕ್ಷಮಿಸಿಬಿಡು ಒಮ್ಮೆ. ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...i'll miss you forever .... " send option ಒತ್ತಿದಾಗ ಮೊಬೈಲ್ ಪರದೆ ಮಸುಕಾಗುತ್ತಿತ್ತು . ಅವಳ ಮುಂಗೈ ಮೇಲೊಂದು ಕಣ್ಣ ಹನಿಯು ಜಾರಿ ಬಿತ್ತು ಸದ್ದಿಲ್ಲದೇ...





Tuesday, March 20, 2012

ವಾಲಿ ವಧೆ ಯಕ್ಷಗಾನವೂ..ಕೆಕ್ಕಾರು ಲಕ್ಷ್ಮಣನೂ

ಮೊನ್ನೆ ಬಸ್ಸಿನಲ್ಲಿ ಕುಳಿತಿದ್ದಾಗ ನೆನಪಾಗಿದ್ದ ಅವನು. ಅದೇಕೋ ಗೊತ್ತಿಲ್ಲ. ಮಾಸಲು ಬಣ್ಣದ ಲುಂಗಿ, ತಿಳಿ ಹಳದಿಯ ಷರಟು ಧರಿಸಿ ಬಾಗಿಲ ಬಳಿ ನಿಂತಿದ್ದವನ ಲಕ್ಷಣಗಳನ್ನು ಕಂಡ ತಕ್ಷಣ ನನಗೆ ನೆನಪಾದವನು 'ಕೆಕ್ಕಾರು ಲಕ್ಷ್ಮಣ'.  ಅವನಿದ್ದದ್ದು ಥೇಟ್ ಹಾಗೆಯೇ  ಅದೆಲ್ಲಿಗೆ ಬೇಕಾದರೂ ಹೊರಟುಬಿಡುತ್ತಿದ್ದ  ಮಾಸಲು ಬಣ್ಣದ ಹಳೆಯ ಲುಂಗಿ, ತುಂಬು ತೋಳಿನ ಷರಟು ಹಿಮ್ಮಡುವಿನ ಭಾಗದಲ್ಲಿ ನೆಲ ಕಾಣುತ್ತಿದ್ದ ಹವಾಯಿ ಚಪ್ಪಲಿ ಧರಿಸಿ !  


  ನಮ್ಮ ಸುತ್ತಲಿನ ೩-೪ ಊರುಗಳಲ್ಲಿ ಅದ್ಯಾರದೇ ಮನೆಯಲ್ಲಿ ಸಂಪಿಗೆ ಹೂವಾಗಲಿ ಅದನ್ನು ಕೊಯ್ಯಲು ಲಕ್ಷ್ಮಣನೇ ಆಗಬೇಕು. ತುದಿ ಸೀಳು ಇರುವ ಬಿದಿರಿನ ಕೊಕ್ಕೆಯಲ್ಲಿ, ಒಂದು ಹೂವೂ ಹಾಳಾಗದಂತೆ ಅವನೇ ಕೊಯ್ಯಬೇಕು. ಮರ ಅದೆಷ್ಟೇ ನಾಜೂಕಿನದಾಗಿರಲಿ ಅದರ ತುದಿಯ ಕೊಂಬೆಯ ಹೂವನ್ನೂ ಬಿಡದೆ ಕೊಯ್ಯುತ್ತಿದ್ದ. ಮೂರು ನಾಲ್ಕು ಹೂವನ್ನು, ಮರವಿರುವ ಮನೆಗೆ ಕೊಟ್ಟು ಉಳಿದ ಹೂಗಳನ್ನು ತನ್ನ 'ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಎಳೆಗಳಿಂದ  ಹೆಣೆದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂಭತ್ತು ಘಂಟೆಯ ಬಸ್ಸಿಗೆ ಕುಮಟೆಗೆ ಹೂ ಮಾರಲು ಹೊರಟನೆಂದರೆ ತಿರುಗಿ ಬರುವುದು ಮಧ್ಯಾಹ್ನ ಮೂರುವರೆಗೆ. ಹೋಗುವಾಗ ಬುಟ್ಟಿಯ ತುಂಬಾ ಹೂಗಳಿದ್ದರೆ,.. ಬರುವಾಗ ಬ್ರೆಡ್ಡು, ಬಟರು, ಬಿಸ್ಕೆಟ್, ಹತ್ತು ಪೈಸೆಗೆ ಒಂದರಂತೆ ಸಿಗುತ್ತಿದ್ದ ಲಿಂಬು ಪೆಪ್ಪರಮೆಂಟುಗಳು ಇರುವುದು ಕಡ್ಡಾಯ, ಜೊತೆಗೆ ಹೊಟ್ಟೆಗೆ ಒಂದಿಷ್ಟು 'ಎಣ್ಣೆ'ಯೂ! ಸಂಪಿಗೆ ಹೂಗಳೇ ಅವನ ಜೀವನಕ್ಕೆ ಆಧಾರ.


ಬೀದಿ ನಾಯಿಗಳ ಕಂಡರೆ ಅದೇನೋ ಮಮಕಾರ. ಹಾಗೆ ಭಿಕ್ಷುಕರ ಕಂಡರೂ... ಬುಟ್ಟಿಯಲ್ಲಿದ್ದ ಬ್ರೆಡ್ಡು ಬಟರುಗಳನ್ನು ನೀಡಿಯೇ ಬಿಡುತ್ತಿದ್ದ. ಹತ್ತು ಪೈಸೆಯ ಪೆಪ್ಪರಮೆಂಟುಗಳೆಲ್ಲವೂ ಮನೆಯ ಅಕ್ಕ ಪಕ್ಕದ ಪುಟ್ಟ ಮಕ್ಕಳಿಗೆ. 



ನಮ್ಮನೆಯ ಕಂಪೌಂಡಿನಲಿ ಒಂದು ಸಂಪಿಗೆ ಮರವಿದೆ. ನಮ್ಮೂರ 'ವೆಂಕಟೇಶ ಶೆಟ್ಟರು' ಬಂಗಾರದ ಆಭರಣ ಮಾಡುವಾಗ ತಾಮ್ರವನ್ನು ಜಾಸ್ತಿ ಮಿಕ್ಸ್ ಮಾಡಿದರೆ ಬರುವಂಥ ಬಣ್ಣದ ಸಂಪಿಗೆ ಹೂಗಳು ಅವು. ಅವನು ಆ ಹೂಗಳನ್ನು ಕೊಯ್ಯಲು ಬರುತ್ತಿದ್ದ . "ರಾಶಿ ಚಂದ ಅದೇರ ಈ ಹೂವು. ಸಿಕ್ಕಾಪಟ್ಟೆ ಡಿಮಾಂಡು ಇದ್ಕೆ.." ಹೇಳುತ್ತಲೇ ಮರ ಹತ್ತುತ್ತಿದ್ದ.



ನನ್ನ ಶಾಲಾದಿನಗಳ ಕಾಲವದು. ಬಹುಶಃ ನಾನಾಗ ಎಂಟನೆಯ ತರಗತಿಯಲ್ಲಿದ್ದೆ. ಒಮ್ಮೆ ಪಪ್ಪ ಕೇಳಿದ್ದರು ಅವನ ಕುಟುಂಬದ ಬಗ್ಗೆ. ಅದಕ್ಕೆ ಅವನ ಉತ್ತರವನ್ನು  ಅವನದೇ ಭಾಷೆಯಲ್ಲಿ ಇಡುತ್ತೇನೆ ನೋಡಿ. " ನಾನು, ಅವಿ (ಅಮ್ಮ), ಮತ್ತೆ ತಮ್ಮ ಇರುದ್ರ ಮನೇಲಿ. ನಮ್ಮ ಅವಿ ಒಂದ್ ನಮನೀ ಮಳ್ಳೀರ, ಉಂಡರೆ ಹೊಟ್ಟೆ ತುಂಬ್ತೋ ಇಲ್ವೋ ಗುತ್ತಾಗುದಿಲ್ಲ . ಒಬ್ಬ ತಮ್ಮ ಆವನೆ ಅವಂಗೂ ಸಿಕ್ಕಾಪಟ್ಟಿ  ಮಳ್ಳು, ಮೈಮೇಲೆ ಬಟ್ಟಿ-ಬಿಟ್ಟಿ ಎಂತೂ ಇಲ್ದೆ ತಿರಗ್ತಾ ಊರ್ಮೆಲೆ ..!! ಅವ್ನ ಕೋಣಿಲಿ ಕೂಡಾಕಿ ಬತ್ತನ್ರಾ. ಅಡಗಿ ಎಲ್ಲ ನಂದೇಯಾ ಅನ್ನ ಮಾಡದ್ರೂ ಮಾಡದೆ ಇಲ್ದಿರು ಇಲ್ಲಾ. ಸಾಕಾಗ್ತಾದಲ್ರ ಅದ್ಕಾಗೆಯ ಹನಿ ಹೊಟ್ಟೆಗೆ ಹಾಕ್ಕಂಬರುದು, ಸುಸ್ತು ಹೋಗುಕೆ.... " ಎಂದು ಪೆಕರು ಪೆಕರನಂತೆ ಹಲ್ಲು ಕಿರಿದಿದ್ದ.  ಅಷ್ಟರಲ್ಲಿ "ಹೂವು  ಹೆಂಗೆ ಕೊಟ್ಯೋ ಲಕ್ಷ್ಮಣ ?" ಎಂದು ಹೆಚ್ಚಾಗಿ ಮುಂಗಚ್ಚೆಯಲ್ಲೇ  ಇಡೀ ಊರು ತಿರುಗುವ 'ಬೇಟೆ ಗೌಡ' ಕೇಳಿಬಿಟ್ಟಿದ್ದ . "ನಿಂಗೆ ಅದೆಲ್ಲ ಅಧಿಪ್ರಸಂಗಿತನ ಎಂತಕ್ಕೆ? ನಿಮ್ಮನೆ ಹೂ ಕೊಡ್ಬೇಡ, ಮೇಲಿಂದಾ  ಹೂ ಯಾವ ದರಕ್ಕೆ ಕೊಟ್ಟೆ ಕೇಳು... ಪುಕ್ಸಟ್ಟೆ ಕೊಟ್ಟು ಬಂದಾನೆ ಏನೀಗ ?" ಎಂದೆಲ್ಲ ರೇಗಾಡಿ ಅವರ ಮನೆ ಹೂ ಕೊಡದಿದ್ದುದರ ಸಿಟ್ಟನ್ನೆಲ್ಲಾ ಕಾರಿ ಬಿಟ್ಟಿದ್ದ! 


ದಾರಿಯಲ್ಲಿ ಕಾಣುವ ಎಲ್ಲ ದೇವಳದ ಒಳಗೆ ಹೋಗಿ ಕೈಮುಗಿದು ಬರದಿದ್ದರೆ ಅವನಿಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಒಂದು ಕಲ್ಲಿಗೆ ಹೂ ಹಾಕಿ ಇಟ್ಟರೂ, ಚಪ್ಪಲಿ ತೆಗೆದು ಬದಿಗಿಟ್ಟು ಕೈಮುಗಿದು ಮುಂದೆ ಹೋಗುತ್ತಿದ್ದ. ಜನರೆಲ್ಲಾ 'ಅವನಿಗೆ ಒಂದು ಸುತ್ತು ಲೂಸು' ಎಂದೇ ಆಡಿಕೊಳ್ಳುತ್ತಿದ್ದರು.  ಕೆಲವೊಮ್ಮೆ 'ಎಣ್ಣೆ' ಹೆಚ್ಚಾದಾಗ ಜೋರಾಗಿ ಹಾಡಿಕೊಳ್ಳುತ್ತ, ಒಬ್ಬನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದದೂ ಇತ್ತು. 


ನನ್ನ ಅಮ್ಮ ಅಂದರೆ ಅದೇನೋ ಭಯ ಮಿಶ್ರಿತ ಭಕ್ತಿ ಅವನಿಗೆ. ಆದರೂ ಅದೇನೇ ಸಮಸ್ಯೆಗಳು ಬಂದರೂ ಅಮ್ಮನಲ್ಲಿ ಹೇಳಿಕೊಳ್ಳಲೇ ಬೇಕು."ಅಕ್ಕೋರಲ್ರಾ ಹೆದ್ರಕಿ ಆಗ್ತದೆರ.." ಎಂದು ಅಪ್ಪನತ್ತಿರ ಹೇಳುತ್ತಿದ್ದ.  "ವನ್....ಟು... ತ್ರೀ .. ಎಂದು ಇಂಗ್ಲಿಷಿನಲ್ಲಿ ಹೂಗಳನ್ನು ಲೆಕ್ಕ ಮಾಡುವಾಗ ಅಮ್ಮ ಬಂದದ್ದು ಕಂಡರೆ ಥಟ್ಟನೆ ನಿಲ್ಲಿಸಿಯೇ ಬಿಡುತ್ತಿದ.! ಅಮ್ಮನ ಮುಖ ನೋಡಿ ಜಾಸ್ತಿ ಕಲಿಲಿಲ್ರಾ... ಐದ್ನೆತ್ತಿ ವರೆಗೆ ಹೋಗಾನೆ ನೋಡಿ ಎಂದು ಹಸ್ತವ ತೋರಿಸುತ್ತಿದ್ದ .. " ಹಾಗೆ ಮುಂದುವರೆದು ಸಂಪಿಗೆ ಮರವನ್ನು ನೋಡುತ್ತಲೇ " ಅಲ್ಲೊಂದು ಹೂ ಬಿಟ್ಟೋಗದ್ಯೋ ಏನ್ರೋ ? ಉಳಿಲಿ ಗಿಡದಲ್ಲೆಯ.. ನಿಮ್ಮನೆಗೆ ಎಷ್ಟು ಬೇಕ್ರ ?" ಎಂದು ಕೇಳುತ್ತ ಮಾತು ಮರೆಸುತ್ತಿದ್ದ.!

ನಲವತ್ತರ ಸಮೀಪದ ಹರೆಯವಾದರೂ ಮದುವೆ ಆಗಿದ್ದಿರಲಿಲ್ಲ. ಹುಡುಗಿಯರೆಂದರೆ ಅದೇನೋ ಕುತೂಹಲ, ಒಂದು  ಬಗೆಯ ನಾಚಿಕೆ. ಒಮ್ಮೆ ಅವನೇ ಉತ್ತರಿಸಿದ್ದ  ಅಮ್ಮನ,"ಅದೆಂತಕ್ಕೆ ಮದುವೆ ಆಗಲಿಲ್ವೋ ನೀನು ?" ಎಂಬ ಪ್ರಶ್ನೆಗೆ. "ಮುಂದಾಗಿ ಮಾಡ್ವವ್ರು ಬೇಕಲ್ರಾ. ಇಡಗುಂಜಿ ದೇವಸ್ಥಾನದ ಕೂಡೆ ಒಂದು ಹೆಣ್ಣು ನೋಡಿ ಬಂದಾನ್ರ. ಸುಮಾರು ಚೊಲೋ ಆದೆ. ಉದ್ಕೆ ಲಂಗ ಬ್ಲೋಜು ಹಾಕಂಡು ದೇವಸ್ಥಾನದ ಮುಂದೆ ಹೂ ಮಾರ್ತದೆ ನೋಡಿ. ಅದೇಯ ಹುಡುಗಿ. ನಮ್ಜಾತಿದೇಯ .." ಎಂದು ಹೇಳಿ ನಾಚುತ್ತ ನಕ್ಕಿದ್ದ. ಪಪ್ಪ "ಅದೆಂಗೆ ನಿಂಗೆ ಹೂ ಮಾರುದೇ ಹುಡುಗಿ ಸಿಕ್ತೋ ಮಾರಾಯ ? ಆದರೆ ಲಕ್ಷ್ಮಣ, ನಿನಗಿಂತಾ ಜಾಸ್ತಿ ಅದರದ್ದೇ ಹೂ ಮಾರಾಟ ಆಗ್ತದೆ ಹಾಂ " ಎಂದಿದ್ದಕ್ಕೆ. "ಮದ್ವಿ ಆದಕೂಡಲೇ ಹೂ ಮಾರುಕೆಲ್ಲ ಕಳ್ಸುದಿಲ್ರೋ ನಾನು. ಮನೆ ನೋಡ್ಕಂದ್ರೆ ಸಾಕು. ತಾನು ಸಾಮಾನೆಲ್ಲ ತಂದು ಹಾಕ್ತ್ನಲ್ರ .." ಎಂದು ಹೇಳುತ್ತಾ ಕನಸು ಕಟ್ಟಿದ್ದ.


ಅದೆಷ್ಟೋ ಬಾರಿ ನಮ್ಮನೆಯ ಕೆಲಸದ 'ನಾಗಮ್ಮಕ್ಕ'. ಇಡಗುಂಜಿ ದೇವರ ಕೂಡೆ ಬೇಡ್ಕಂತೆ, ನಿಂಗೆ ಅದೇ ಹುಡುಗಿ ಸಿಗ್ಲಿ ಹೇಳಿ .." ಎಂದು ಹೇಳುತ್ತಲೇ ಎರಡು ಹೂವನ್ನು ಪುಗಸಟ್ಟೆ ತೆಗೆದುಕೊಳ್ಳುತ್ತಿದ್ದಳು. " ತಕ ಎರಡು ಹೂವು, ಅದೇನು(ಆ ಹುಡುಗಿ) ನನ್ನ ನೋಡೂದಿಲ್ಲ.. ನೀ ಈ ನಮನೀ ಹೇಳೂದು ಬಿಡೂದಿಲ್ಲ .." ಹೇಳುತ್ತಲೇ ಎರಡು ಹೂಗಳನ್ನು ತೆಗೆದು ಕೈಗಿಡುತ್ತಿದ್ದ. ಹೂ ಮಾರುವ ಹುಡುಗಿಯ ಮೇಲಿನ ಅವಳ ಒಮ್ಮುಖ ಪ್ರೀತಿಯ ಪರಿ ನನಗೆ ಅರ್ಥವಾದದ್ದು ತೀರ ಇತ್ತೀಚಿಗೆ. ಅಂದಿನಿಂದ ಅವನನ್ನು ಅದ್ಭುತ ಪ್ರೇಮಿಗಳ ಸಾಲಿಗೆ ಸೇರಿಸಿಬಿಟ್ಟಿದ್ದೇನೆ.! 


ಇಂತಿಪ್ಪ ನನ್ನ ಈ ಲೇಖನದ 'ಹೀ'ರೋ ಲಕ್ಷ್ಮಣನಿಗೆ ಯಕ್ಷಗಾನದ ಹುಚ್ಚು ವಿಪರೀತ. ಆಜುಬಾಜಿನ ಊರುಗಳಲ್ಲಿ ಅದೆಲ್ಲೇ ಯಕ್ಷಗಾನವಾದರೂ ಹೊರಟೆ ಬಿಡುತ್ತಿದ್ದ. ಒಂದು ಕವಳದ ಸಂಚಿ ಹಾಗು ಒಂದು ಪಾವು ಎಣ್ಣೆಯ ಜೊತೆಗೆ. ಆ ಪ್ರಸಂಗದ ವಿಮರ್ಶೆಯನ್ನು ಮರುದಿನ ಹೂ ಕೊಯ್ಯಲು ಬಂದಾಗ ಮಾಡುತ್ತಿದ್ದ. ಒಮ್ಮೊಮ್ಮೆ ಮರದ ಮೇಲೇರಿ ಒಬ್ಬೊಬ್ಬನೇ ಮಾತನಾಡುತ್ತಿದ್ದದ್ದೂ ಇತ್ತು.


ಒಮ್ಮೆ ಊರಲ್ಲೇ ಉತ್ಸಾಹಿ ಯುವಕರು ಸೇರಿ ಯಕ್ಷಗಾನ ಮಾಡುವಾಗ, ತನಗೂ ಒಂದು 'ಪಾರ್ಟು' ಬೇಕೆಂದು ಹಠ ಹಿಡಿದು,ಹಣ ಕೊಟ್ಟು 'ವಾಲೀ ವಧೆ' ಪ್ರಸಂಗದಲ್ಲಿ 'ಸುಗ್ರೀವ'ನ ಪಾರ್ಟು ಗಿಟ್ಟಿಸಿಕೊಂಡಿದ್ದ. ಒಂದು ಹಿಡಿ ಹೆಚ್ಚೇ ಉತ್ಸಾಹದಿಂದ ತಾಲೀಮಿನಲ್ಲಿ ಭಾಗವಹಿಸಿದ್ದ. ಕೊನೆಗೂ ಅವನಂದು ಕೊಂಡ ದಿನ ಬಂದೆ ಬಿಟ್ಟಿತ್ತು. ಹೂ ಕೊಯ್ಯುವ ಎಲ್ಲ ಮನೆಗಳಲ್ಲೂ "ಇವತ್ತು ಕೆಕ್ಕಾರಲ್ಲಿ 'ಆಟ' ಆದೇ ಹಾಂ.. ಮುದ್ದಾಮು ಬನ್ನಿ" ಎಂದು ಮದುವೆಯ ಸಡಗರವ ತುಂಬಿಕೊಂಡೇ ಕರೆದಿದ್ದ. 


ಪಪ್ಪನ ಹತ್ತಿರ ಹಠಮಾಡಿ ಮೊದಲ ಬಾರಿಗೆ ಕೆಕ್ಕಾರಿನ ಬಯಲಲ್ಲಿ ನಡೆದ ಆಟವನ್ನು ನೋಡಲು ನಡೆದಿದ್ದೆ ನಾನು . ಒಂದು ಪಾವು ಎಣ್ಣೆ ಹೊಡೆದೇ ಬಂದಿದ್ದ ನಮ್ಮ ಲಕ್ಷ್ಮಣನದು, 'ಭಲೇ ಭಲೇ' ಎನಿಸುವಂಥ ಅಭಿನಯ. ವಾಲೀ ಸುಗ್ರೀವರು ಹೊಡೆದಾಡುವ ದೃಶ್ಯ ಬಂದಾಗ ಪ್ರೇಕ್ಷಕರಿಂದ ಶಿಳ್ಳೆ. ಅಷ್ಟರಲ್ಲಿ ಅದೆಲ್ಲಿಂದ ಬಂತೋ ಆ ಶಕ್ತಿ. ಬಹುಷಃ ಹೊಟ್ಟೆಯೊಳಗಿನ 'ಪರಮಾತ್ಮನ' ಜೊತೆ ಶಿಳ್ಳೆಯ ಶಬ್ದವೂ ಸೇರಿ ಬಂದಿರಬೇಕು..!'ವಾಲಿ'ಯ ಪಾತ್ರಧಾರಿಯನ್ನು ಹಿಡಿದು ಕೆಳಕ್ಕೆ ಉರುಳಿಸಿದ್ದ. ಅವನ ಎದೆಯ ಮೇಲೆ ಕುಳಿತು. ಅವನಿಗೆ ಬಡಿಯುತ್ತ ಗಹಗಹಿಸಿ ನಗುತ್ತಿದ್ದ, ನಮ್ಮ ಸುಗ್ರೀವ ಯಾನೆ ಲಕ್ಷ್ಮಣ.!  ವಾಲಿಯ ಪಾತ್ರಧಾರಿ ನೋವಿನಿಂದ  "ಬೋ.. ಮಗನೆ ನೀ ಸೋಲ್ಬೇಕೋ ..ನೀ ಸೋಲ್ಬೇಕೋ ..." ಎಂದು ಹೇಳುತ್ತಿದ್ದದ್ದು ಎಲ್ಲರಿಗೂ ಕೇಳುತ್ತಿತ್ತು. ಪಡ್ಡೆ ಹುಡುಗರ ಶಿಳ್ಳೆ ಇನ್ನೂ ಜೋರಾದುದ ಕೇಳಿ ನಮ್ಮ ಸುಗ್ರೀವನ ಡೈಲಾಗ್ ಛೇಂಜ್ " ಗುಲಾಂ ನನ್ ಮಗನೆ, ಇಷ್ಟು ಜನರ ಎದ್ರಿಗೆ ನಾ ಸೋಲ್ಬೇಕೋ ? ಎಂತ ಮಾಡ್ಕಂಡಿದೆ ನಾನು ಅಂದ್ರೆ? ಕಾಲೇಜು ಹುಡ್ಗೀರು ಬಂದಾರೆ ನೋಡುಕೆ ಅವ್ರ ಮುಂದೆ ನಾ ಸೋಲ್ಬೇಕೋ ? ನಾನೂ ದುಡ್ ಕೊಟ್ಟಾನೆ, ಪುಕ್ಕಟ್ಟೆ ಪಾರ್ಟು ಕಟ್ಟಲಿಲ್ಲ ..  ನಿನ್ ಸೋಲ್ಸುಕೆ ರಾಮ ಬೇಡ್ವೋ ..ನನ್ ಕೈಯಲ್ ನಿನ್ ಸೋಲ್ಸುಕೆ ಆಗುದಿಲ್ಲಾ ನಿನ್ನ ಅಜ್ಜಿ ಕುಟ್ಟ ಬಂದಿ ? ತಕಾ " ಎನ್ನುತ್ತಲೇ ಇನ್ನೆರಡು ಗುದ್ದಿದ. ಕೊನೆಗೆ ಪರದೆಯ ಹಿಂದಿನಿಂದ ಜನ ಬಂದು ಅವನನ್ನು ಎಳೆದೊಯ್ಯಬೇಕಾಯಿತು.! ಅಲ್ಲಿಗೆ ಸುಗ್ರೀವನೇ ರಾಮನ ಹಂಗಿಲ್ಲದೆ ವಾಲಿಯನ್ನು ಹಣಿದಿದ್ದ.! ಲಕ್ಷ್ಮಣನ ಮೊದಲ ಹಾಗೂ ಕೊನೆಯ ಆಟದ ಪಾರ್ಟಿನ ಹುಚ್ಚು ಇಳಿದಿತ್ತು.!


ಮಾರನೆ ದಿನ ಹೂ ಕೊಯ್ಯಲು ಬಂದವನಲ್ಲಿ ಅಮ್ಮ "ಅದೆಂತದೋ ಲಕ್ಷ್ಮಣ ನಿನ್ನೆ ನೀ ಕಥೆನೇ ಉಲ್ಟಾ ಮಾಡಿದ್ಯಂತೆ ? " ಎಂದಿದ್ದಕ್ಕೆ. ಆಲ್ರ ಆಚೆ ಕೇರಿ 'ಶಾಂತರಾಮ' ಆವನ್ಯಲ್ರಾ. ಅವ ಹೇಳಿದ್ದ ನನ್ನ ಕೂಡೆ, ಲಕ್ಷ್ಮಣ.. ಅಷ್ಟೆಲ್ಲ ಕಾಲೇಜು ಹುಡ್ರು-ಹುಡ್ಗೀರು ಎಲ್ಲಾ  ಇರ್ತ್ರು ನೀನು ಅವ್ರೆಲ್ರ ಮುಂದೆ ಸೋಲ್ತ್ಯಾ ? ಹೇಳಿ.. ಅಲ್ಲ ಆಕ್ಕೋರೆ ಮರ್ವಾದಿ ಪ್ರಶ್ನೆ ಅಲ್ರಾ.. ಅದ ಕಾಗೆಯ ನಾನೂ ಸೋಲಲೇ ಇಲ್ಲ .. " ಎಂದು ಹೆಮ್ಮೆಯ ನಗೆ ನಕ್ಕಿದ್ದ ಅವನ ಕಂಡು ಅಮ್ಮ ನಿಜಕ್ಕೂ confuse ಆಗಿದ್ದರು.. !


ಒಮ್ಮೆ ಸಂಪಿಗೆ ಹೂ ಹೆಕ್ಕಲು ಬಂದ 'ನಾಗಮ್ಮಕ್ಕ'ನ ಬಳಿ . "ನಾಗಮ್ಮಕ್ಕ ಕೆಳಗೆ ಬರ್ಬೆಡವೇ ಕುಂಡಿಮೇಲೆ ಸಣ್ಣ ಕುರ ಎದ್ದದೆ.. ನಾ ಚಡ್ಡಿನೇ ಹಾಕ್ಕಂಡು ಬರಲಿಲ್ಲ ಇವತ್ತು .." ಎಂದು ಯಾವ ಮುಲಾಜು ಇಲ್ಲದೆ ಹೇಳಿದ್ದ. ಅವಳು "ಸಾಯಲ್ರಾ ಈ ಲಕ್ಷ್ಮಣನ ಹೂವು ಸಾಕು ..ಹನೀ ಮರ್ಯಾದಿಲ್ಲ ಬೇವರ್ಸಿಗೆ  " ಎನ್ನುತ್ತಲೇ ಕಸ ಗುಡಿಸಲು ನಡೆದಿದ್ದಳು. ಬಹುಷಃ ಅದಾದಮೇಲೆ ಅವಳು ಇಡಗುಂಜಿಯ ಹುಡುಗಿಯ ಹೆಸರಿನಲ್ಲಿ ಹೂ ಕೇಳುವುದನ್ನು ಬಿಟ್ಟಿದ್ದಳು. !




ಜೀವನದ ದುಃಖಗಳ ಮರೆಯಲು ಹೆಂಡದ ಸಹವಾಸ ಮಾಡಿದರೂ. ಅದೆಂಥದ್ದೋ ಜೀವನ ಪ್ರೀತಿ ಇತ್ತು ಅವನಲ್ಲಿ.! ತನ್ನದೇ ಆದ ಸಂಸಾರ ಕಟ್ಟಿಕೊಳ್ಳುವ ತುಡಿತವೊಂದಿತ್ತು. ಅವನ ಹಾಸ್ಯಪ್ರಜ್ಞೆ, ಕೆಲವೊಮ್ಮೆ ಮರೆಯಿಂದ ಇಣುಕುವ ಮುಗ್ಧತೆ. ಅಮಾಯಕ ಒಲವು. ಇದೆಲ್ಲ ನೆನಪಾಗಿತ್ತು ನನಗೆ. ಮತ್ತೊಮ್ಮೆ ಅವನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಲೂ ಆಗುವುದಿಲ್ಲ. ಅವನು ಇಹಲೋಕ ಯಾತ್ರೆಯ ಮುಗಿಸಿ 3 ವರುಷಗಳೇ ಕಳೆದಿವೆ. ನಮ್ಮನೆ ಸಂಪಿಗೆ ಮರಕ್ಕೆ ಹೂವಾದಾಗೆಲ್ಲ ಅವನೇ ನೆನಪಾಗುತ್ತಾನೆ, ನಮ್ಮನೆಯಲ್ಲಿ ಎಲ್ಲರಿಗೂ. "ವ್ಯಕ್ತಿ ಹೊರಟು ಹೋಗುತ್ತಾನೆ .. ಉಳಿಯುವುದು ಅವನ ನೆನಪುಗಳಷ್ಟೇ.." ಎಂಬ ಮಾತು ಅದೆಷ್ಟು ನಿಜ ಅಲ್ವಾ ? 

Monday, February 13, 2012

ದೊಡ್ಮನೆ ಘಟ್ಟದಲ್ಲಿಯ ಸಂಜೆಯ ಸಾಲುಗಳು


ಅದೇನೋ ಸೆಳೆತ ಮೊದಲಿ೦ದಲೂ ನೀಲಿ ಬೆಟ್ಟಗಳೆ೦ದರೆ, ಅ೦ಕುಡೊ೦ಕಾಗಿ ಬೆಟ್ಟ ಗುಡ್ಡ ಗಳ ಬಳಸಿ ಸಾಗುವ ಹಾದಿಗಳೆ೦ದರೆ. ಗಗನಚು೦ಬಿ ಮರಗಳ ತುದಿಯನ್ನು ನೋಡುತ್ತ  ನನ್ನದೇ ಲೋಕದಲ್ಲಿ ಸ೦ಚರಿಸುವುದೆ೦ದರೆ. ಮೊನ್ನೆ ಆದದ್ದು ಹಾಗೆಯೇ ಶಿವಮೊಗ್ಗೆಯಿ೦ದ ಕುಮಟೆಗೆ ಬರುತ್ತಿರುವಾಗ ಸಿದ್ದಾಪುರದ ದೊಡ್ಮನೆ ಘಟ್ಟದ ಸೊಗಸನ್ನು ಸವಿಯುವ ಅವಕಾಶವೊ೦ದು ಅನಾಯಾಸವಾಗಿ ಒದಗಿ ಬ೦ದಿತ್ತು. ಅದರಲ್ಲೂ ಹೊತ್ತು ಮುಳುಗುವ ಸಮಯದ ಪಯಣ. ತಾಳಗುಪ್ಪದಿ೦ದ- ಮೇಧಿನಿ ಗುಡ್ಡದ ತಪ್ಪಲ ವರೆಗಿನ ಪಯಣದ ದೃಶ್ಯಗಳು. ನೀಳವಾದ ಲೇಖನದಲ್ಲಿ ಆ ಘಟ್ಟದ ಸೌ೦ದರ್ಯವನ್ನು ಹಿಡಿದಿಡಲಾರೆ ಅನಿಸಿ. ಬಿಡಿಬಿಡಿಯಾದ ಸಾಲುಗಳಲ್ಲಿ ಹಿಡಿದಿಡುವ ಒ೦ದು ಪ್ರಯತ್ನ. ನಿಮಗೆ ಈ ಸಾಲುಗಳು ಮಾಸ್ತಿಮನೆಯ ಗೂಡ೦ಗಡಿಯಲ್ಲಿಯ ಗಾಜಿನ ಡಬ್ಬಗಳ ಒಳಗಿರುವ ಬಣ್ಣ ಬಣ್ಣದ ಪೆಪ್ಪರಮೆ೦ಟುಗಳ೦ತೆ ಕಾಣಬಹುದು. ದೊಡ್ಮನೆ ಘಟ್ಟದ ನೆತ್ತಿಯ ಮೇಲೆ ಹರಡಿರುವ ಬೆಳ್ಳಿ ಮೋಡಗಳ ಚೂರುಗಳಂತೆ ಕಾಣಬಹುದು. ಅಥವಾ ಅಲೆಮಾರಿಯೊಬ್ಬನ ಮನದ ಭಾವನೆಗಳ, ಅಲೆಗಳು ಪ್ರಕೃತಿಯ ದಡಕ್ಕೆ ಬಂದಂತೆ ಕಾಣಬಹುದು. ಕಲ್ಪಿಸಿಕೊಂಡರೆ ಪ್ರಕೃತಿಯೆಂಬ ಕಲಾವಿದೆಯ ಕಲಾಕೃತಿಯಂತೆ ಕಂಡರೆ ಅಚ್ಚರಿಯೇನಿಲ್ಲ.! 


 ಮುಂಜಾವಿಗಿಂತ ಸಂಜೆಯೇ ಹಿತವೆನಿಸುತ್ತದೆ ನನಗೆ. ಏಕೆಂದರೆ ಅದರೊಳಗೆ ಒಂದು ನೀರವ ರಾತ್ರಿಯಿರುತ್ತದೆ ಜೊತೆಗೆ ಮತ್ತೊಂದು ಮುಂಜಾವಿನ ನಿರೀಕ್ಷೆಯೂ ಸೇರಿಬಿಡುತ್ತದೆ. ಸಂಜೆಯ ಸೆರಗಲ್ಲಿದ್ದ ಸಾಲುಗಳು ಇವು . ಓದಿ ನೋಡಿ ಹೇಗಿದೆ ಹೇಳಿ.


** ಕೊಳವೊಂದರ ತಿಳಿ ನೀರಿನಲ್ಲಿ ಪ್ರತಿಬಿಂಬವ ನೋಡುವ ಹಂಬಲದಲ್ಲಿದ್ದಂತೆ ತೋರುವ ಶಿಶಿರದ ಚಳಿಗೆ ಬೆತ್ತಲಾಗಿ ನಿಂತ ಬೋಳು ಮರ. 


** ಅದ್ಯಾವುದೋ ಊರಿಗೆ ಸಾಗುವ ಗಡಿಬಿಡಿಯಲ್ಲೇ, ಮುಂಜಾವಿನ ಇಬ್ಬನಿಯಲ್ಲಿ ತೋಯುವ ಕನಸು ಕಾಣುತ್ತಿದ್ದ ಮಣ್ಣ ದಾರಿ. 


** ಬೆಳಗಿನ ಇಬ್ಬನಿಯ ಸಿಂಗಾರಕ್ಕಾಗಿ ಕಾದು ಕುಳಿತಂತಿದ್ದ ಹೊಸಚಿಗುರು .


** ಪಡುವಣದ ರವಿಯ ಎಳೆಕಿರಣಗಳ ಹೊದ್ದು ಬಂಗಾರದ ವರ್ಣದಲಿ ಮೆರೆಯುವ ಹಂಬಲದಲ್ಲಿದ್ದ ಬಯಲಿನಲ್ಲಿ ಮುಗುಮ್ಮಾಗಿ ಕುಳಿತಿದ್ದ ಜೋಡಿ ಕುತ್ತರಿ.


** ಆಗಸದ ನೀಲಿಗೆ ಸ್ಪರ್ಧೆಯೊಡ್ಡುವಂತಿದ್ದ ಅಂಗಿ, ಕಡು ನೀಲಿ ಬಣ್ಣದ ಲಂಗ ಹಾಕಿ, ಕೈಯಲ್ಲಿ ಬಣ್ಣದ ಕ್ಯಾಂಡಿ ಹಿಡಿದು ಮನೆಯ ಕಡೆಗೆ ಕುಣಿಯುವ ನಡಿಗೆಯಲ್ಲೇ ಹೊರಟಿದ್ದ ಕನ್ನಡ ಶಾಲೆಯ ಮಕ್ಕಳು.


** ಅದೀಗತಾನೆ ಮಿಡಿಗಳ ಕಚ್ಚಿಕೊಂಡಿರುವ ಗೇರುಮರದತ್ತ ಕಲ್ಲು ಹೊಡೆಯುವ ತರಾತುರಿಯಲ್ಲಿದ್ದ ಹುಡುಗರು .


** ಮೈತುಂಬ ಬಿಳಿಯ ಬಣ್ಣ ಬಳಿದುಕೊಂಡು ಶ್ವೇತಾಂಬರರಂತೆ ರಸ್ತೆ ಬದಿಗೆ ಸಾಲಾಗಿ ನಿಂತಿದ್ದ ಕಲ್ಲುಗಳು. 


**ತಾರಸಿಯ ಮನೆಗಳಿಗೆಲ್ಲ ಸೆಡ್ಡು ಹೊಡೆದು, ಭಿನ್ನವಾಗಿ ಬಯಲ ಕೊನೆಗೆ ನಿಂತ ಹುಲ್ಲು ಜೋಪಡಿ. 


**ಸೂರ್ಯಾಸ್ತದ ಸೊಬಗಲ್ಲಿ ಮೆಲುಕಾಡಿಸುತ್ತ ನಿಂತಿದ್ದ ಜೋಡಿ ಎತ್ತುಗಳು. ಪಕ್ಕದಲ್ಲಿ ಬೀಡಿ ಎಳೆಯುತ್ತಿದ್ದ ಎತ್ತಿನ ಗಾಡಿಯ ಮುದುಕ.


**ಮಳೆಗಾಲದ ಹಸಿರ ಗತ ವೈಭವವನ್ನು ಸಾರುತ್ತ ನಿಂತಿದ್ದ ಒಣ ಜೊಂಜು ಹುಲ್ಲುಗಳು .


**ಹಳೆಯ ನೆನಪುಗಳ ಕೆಣಕುವ ತಾಕತ್ತಿರುವ, ದಾರಿಯುದ್ದಕ್ಕೂ ಕಂಪು ಬೀರುತ್ತಲೇ ಇದ್ದ ಗುರಾಣಿ ಹೂವು. 


** ಹಸಿರು ನೀರ ಕೆರೆಯಲ್ಲಿ ದಿನದ ಬಟ್ಟೆಯ ಒಗೆಯುವ ಗಡಿಬಿದಿಯಲ್ಲಿದ್ದ ಹೆಂಗಸರು. ಜೊತೆಯಲ್ಲಿದ್ದ ಪುಟ್ಟಿಗೆ ನೀರಾಟವಾಡುವ ಸಂಭ್ರಮ.


**ಅದೆಷ್ಟೋ ಸೂರ್ಯಾಸ್ತಗಳ ಕಂಡ ಒಂಟಿಮನೆಯ ಅಟ್ಟದ ಮೇಲಿನ, ಕೆಂಪು ಹಸಿರು ಬಣ್ಣದ 'ಪಡುವಣದ ಕಿಟಕಿ'. 


** ಗದ್ದೆಯ ಬದಿಯ ಜೋಪಡಿಯ ಒಲೆಯಿಂದ ಅಲೆಅಲೆಯಾಗಿ ಬರುತ್ತಿದ್ದ 'ಸಂಜೆ ಆರರ ಹೊಗೆ', ಹೊಗೆಯ ಉಂಗುರವ ಧರಿಸಿ ನಿಂತ ಹಸಿರು ಗದ್ದೆ.


** ಬಯಲಲ್ಲಿ ಮೇಯುತ್ತಿದ್ದ ದನಕರುಗಳ ದೋಸ್ತಿ ಮಾಡಿಕೊಂಡು, ಬೆನ್ನ ಮೇಲೆ ಸವಾರಿ ಮಾಡುತ್ತಿದ್ದ ಕೊಕ್ಕರೆಗಳು.

** ಸೂರ್ಯನ ಸಿಟ್ಟನ್ನೆಲ್ಲಾ ಕುಡಿದು ಕೆಂಪಾಗಿ ಕುಳಿತಿದ್ದ ಎಲೆಯ ಮರೆಯಲ್ಲಿ  ಕುಳಿತಿದ್ದ ಕಾಡು ಹೂವು .

** ಕರುಗಳ ಕೊರಳ ಗಂಟೆಯಲ್ಲಿ ಪ್ರತಿಫಲಿಸುತ್ತಿದ್ದ ರವಿ ಕಿರಣ .

** ಭುವನಗಿರಿಯ ನೋಡುವ ಹಂಬಲದಿ ಎಡ ಸೀಟಿನಿಂದ ಬಲ ಪಕ್ಕದ ಸೀಟಿಗೆ ಹಾರಿದ್ದ ನಾನು.

**ಒಣಗಿ ಬಯಲಾದ ಗದ್ದೆಯನ್ನು ಕಾಯುತ್ತಿರುವ ಬೆಚ್ಚಪ್ಪನಿಗೆ ಅರಳು ಮರಳು ..! ಮಳೆಗಾಲದ ಕನಸನ್ನು ಕಾಣುತ್ತಿರಬಹುದು ಎಂದುಕೊಂಡ ನನ್ನ ಮನಸು.

** ಅರೆ ಬತ್ತಿದ ಕೊಳ್ಳದಲ್ಲಿ ಧ್ಯಾನಿಸುತ್ತ ನಿಂತ ಒಂಟಿ ಕಾಲ ಕೊಕ್ಕರೆ.


** ಮೂಗರಳಿಸುವಂತೆ ಮಾಡುವ ಅಡಿಕೆ ಸಿಂಗಾಗರದ ಅಲರು. 


** ದೊಡ್ಮನೆ ಘಟ್ಟ ಸಮೀಪಿಸುತ್ತಿರುವುದನ್ನು ಹೇಳುತ್ತಿದ್ದ ಕಾಡ ಸುಮಗಳ ಕಂಪು. ಕಣ್ಮುಚ್ಚಿ ಆ ಕಂಪ ಅನುಭವಿಸಬೇಕು ಎಂದು ಕೊಂಡೆ ಒಮ್ಮೆ... ಆದರೆ ಅದೆಲ್ಲಿ ಒಂದು ಸುಂದರ ದೃಶ್ಯ ತಪ್ಪಿ ಹೋಗುವುದೋ ಎಂದು ಕಣ್ಣ ಮುಚ್ಚಲೇ ಇಲ್ಲ. 


**ಮರೆಯಾಗಿ ಹೋಗಿದ್ದ ನೇಸರ,  ಸುವರ್ಣ ಬಣ್ಣಗಳ ಹೊದ್ದುಕೊಂಡ ತುಂಡು ಮೋಡಗಳು. ಅದೇನೋ ಮುದ ಕೊಡುತ್ತಿದ್ದ, ಯಾರನ್ನೋ ನೆನಪಿಸುತ್ತಿದ್ದ ಮಾಗಿಯ ಗಾಳಿ. ಜೊತೆಗೆ ಬಂದಿತ್ತು ಬಹಳ ಹೊತ್ತಿನಿಂದ ಕುತೂಹಲದಿಂದ ಕಾಯುತ್ತಿದ್ದ ದೊಡ್ಮನೆ ಘಟ್ಟ.ಘಟ್ಟ  ಮುಗಿಯುವ ಮೊದಲೇ ಬೆಳಕು ಆರಿ ಬಿಡುವುದಲ್ಲ ಎಂಬ ಬೇಸರ ನನ್ನ ಮನಸನ್ನು ಆವರಿಸಿಕೊಂಡು ಬಿಟ್ಟಿತ್ತು. ಮನುಷ್ಯನನ್ನು ವರ್ತಮಾನಕ್ಕಿಂತ ತೀವ್ರವಾಗಿ ಕಾಡುವುದು ಭೂತ ಭವಿಷ್ಯಗಳಂತೆ ..!


** ಸಂಜೆ ಏಳರ ಹೊಗೆ ಮುಸುಕಿಕೊಂಡ ದೊಡ್ಮನೆ ಘಟ್ಟದ ನೆತ್ತಿಗೆ ಕಿರೀಟ ಕಟ್ಟಿದ್ದ ಕೆಂಬಣ್ಣದ ಮೋಡಗಳು. ಆ ವೈಭವವನ್ನು ನೋಡಲೋ ಎಂಬಂತೆ ಸಾಗಿ ಹೋಗಿತ್ತು ಒಂದು ಹೊಗೆ ವಿಮಾನ.


**ಘಟ್ಟದ ತುಂಬೆಲ್ಲ, ನೀರಪಸೆಯ ತಂಪು - ಕಾಡು ಹೂಗಳ ಕಂಪಿನ ಜುಗಲ್ ಬಂಧಿ.
 ಹೊತ್ತು ಮುಳುಗಿತ್ತು. ಸಂಜೆ ಮತ್ತು ರಾತ್ರಿಯ ನಡುವಿನ ಅವಧಿಯದು ( the dusk it was ). ಈ ಕತ್ತಲಾವರಿಸುವುದ  ನೋಡುವುದೇ ಒಂದು ಚಂದ. ಥೇಟ್ ನಮ್ಮನೆಯ ಅಂಗಳದ ಕೊನೆಗಿರುವ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಬಿರಿದ ಹಾಗೆ. ಮದುವೆ ಸೀರೆಯನ್ನು ಅಮ್ಮ ಜತನದಿಂದ ಮಡಿಸಿಟ್ಟ ಹಾಗೆ. ಅಷ್ಟೇ ನಾಜೂಕು, ಅದೇ ಪ್ರೀತಿ.  ಕ್ಷಣ ಕ್ಷಣಕ್ಕೂ ಬದಲಾಗುವ ಆಗಸದ ಬಣ್ಣ. ನೆರಳಿನಂತೆ ಗೋಚರವಾಗುವ ಗಿಡ ಮರಗಳು. ನಿಶೆಯು ನಿಧಾನಕ್ಕೆ ಮುಸುಕೆಳೆದುಕೊಳ್ಳುತ್ತಿತ್ತು. ಕಿಟಕಿಯನ್ನು ತೆರೆದೇ ಇಟ್ಟಿದ್ದೆ, ಮೈಮೇಲೆ ಮುಳ್ಳುಗಳ ಎಬ್ಬಿಸುವ ಶೀತಗಾಳಿಯನ್ನೂ ಲೆಕ್ಕಿಸದೆ.! ಕಿಟಕಿಯಾಚೆಯ ಅಂಧಕಾರದ ಜಗತ್ತಿನಲಿ ಅದೇನೋ ಹುಡುಕುವ ಹಂಬಲದಿ ಇಣುಕುತ್ತಿದ್ದ ನನಗೆ ಕಂಡದ್ದು 'ಮೊದಲ ಚುಕ್ಕಿ' (the solitary star). 
ಅಷ್ಟರಲ್ಲಿ ಮಾಸ್ತಿಮನೆಯ ಅಂಗಡಿಯಲ್ಲಿ ಚಿಮಣಿಯ ಮಿಣಿ ಮಿಣಿ ದೀಪ ಬೆಳಗುತ್ತಿತ್ತು. ಇನ್ನೇನು ನಾನು ಇಳಿಯುವ ಜಾಗ ಬಂತೆಂಬ ಸೂಚನೆಯಂತೆ...!