Saturday, November 26, 2011

ಜೋಡಿ ನಕ್ಷತ್ರಗಳ ಕಿವಿಯೋಲೆಯ ಹುಡುಗಿಗೆ,

 ಸೀದಾ ಸಾದಾ ಹುಡುಗನೊಬ್ಬನ ಮನದ ತಳಮಳ ಪ್ರೀತಿಯ ಕಲರವ . ಓದಿ ನೋಡಿ ಹೇಗಿದೆ ಹೇಳಿ.




ಜೋಡಿ ನಕ್ಷತ್ರಗಳ ಕಿವಿಯೋಲೆಯ ಹುಡುಗಿಗೆ,


ಹೇಗಿದೀಯೇ ? ಚಿಕ್ಕ ಚಿಕ್ಕ ಮೊನಚು ಕಂಗಳ ಇನ್ನೂ ಕಿರಿದಾಗಿಸಿ ನಗುತ್ತಿರಬೇಕು. ಈ ಸ್ನೇಹ ಅದ್ಯಾವಾಗ ಪ್ರೀತಿಯಾಗಿ ಬದಲಾಗುತ್ತದೆ ಎಂದೆ ತಿಳಿಯುವುದಿಲ್ಲವಂತೆ ಹೌದೇನೆ ? ಸಾಹಿತ್ಯದ ಗಂಧ ಗಾಳಿ ಇಲ್ಲದ ಹುಡುಗ ಮನದ ಭಾವನೆಗಳಿಗೆ ಅಕ್ಷರ ರೂಪ ಕೊಡುವಷ್ಟರ ಮಟ್ಟಿಗೆ ಬಂದಿದ್ದಾನೆ ಎಂದರೆ. ಅದೆಂಥ ಪ್ರೀತಿಯ ಅನುಭೂತಿಯಲ್ಲಿರಬೇಕು ಆತ ಅಲ್ವಾ ?

ಹೌದೇ ಹುಡುಗಿ ಮೊನ್ನೆ ಬಸ್ಸಿನಲ್ಲಿ ಶಿರಾಡಿ ಘಟ್ಟವಿಳಿವಾಗ ನನ್ನೆದೆಯೊಳಗೆ ನಿನ್ನದೇ ನೆನಪುಗಳ ವರ್ಷಧಾರೆ. ನೆನಪುಗಳ ಮೆರವಣಿಗೆಯಲ್ಲಿ ನಿನ್ನದೇ ಅಂಬಾರಿ.!

ಎಳೆ ಬಿಸಿಲ ಕೋಲಿಗೆ ಮಿರುಗುತ್ತಿರುವ ಚಿಗುರುಗಳು, ನೀಲ ಗಗನವ ಮುಟ್ಟಲು ತವಕಿಸುವ ಎತ್ತರದ ಮರಗಳು. ಆ ನೀರ ಪಸೆ, ಮಣ್ಣ ಕಂಪು, ನೀಲಿ ಬೆಟ್ಟ, ಬೆಳ್ಳಿ ಮೋಡಗಳು, ಥೇಟ್  ನಿನ್ನ ಮಾತುಗಳಂತೆ ಕೇಳುವ, ರಸ್ತೆಯುದ್ದಕ್ಕೂ ಪಕ್ಕದಲ್ಲೇ ಹರಿಯುವ ನದಿಯ ನಾದ. ಇವೆಲ್ಲವೂ ರಾಡಿ ರಾಡಿಯಾದ ಶಿರಾಡಿಯ ರಸ್ತೆಯ ಪರಿವೆಯೇ ಇಲ್ಲದಂತೆ ಮಾಡಿ ಬಿಟ್ಟಿದ್ದವು ನನಗೆ.!

 ಶಿರಾಡಿ ಘಟ್ಟದಲ್ಲಿ ದ್ವಿಚಕ್ರ ವಾಹನವೋಡಿಸುವ ಮಜವನ್ನು ಅನುಭವಿಸುತ್ತಿದ್ದ ಹುಡುಗ  ಬಸ್ಸಿನಲ್ಲಿ ಕುಳಿತು ಕವಿಯಂತೆ ಆಲೋಚಿಸುತ್ತಿದ್ದನೆಂದರೆ ?! ಪ್ರಕೃತಿಯನ್ನು ಮಗುವಿನ ಕುತೂಹಲದಲ್ಲಿ ನೋಡುತ್ತಿದ್ದನೆಂದರೆ ? ಅದ್ಯಾವ ಮಟ್ಟಕ್ಕೆ ಬದಲಾಗಿರಬೇಡ ಹೇಳು ನಾನು? 'ಪ್ರೀತಿ ಪ್ರಕೃತಿಯಂತೆ. ಅಲ್ಲಿ ಸೌಂದರ್ಯವಿದೆ, ನವನವೀನತೆಯಿದೆ, ದುರಂತವಿದೆ', ಎಂದೆಲ್ಲ ಅನಿಸುತ್ತಿತ್ತು.  Bike rideನ ಥ್ರಿಲ್ಲಿಗಿಂತ ಆ ಶಿರಾಡಿ ಘಟ್ಟದಲ್ಲಿ ನಿನ್ನ ನೆನಪುಗಳ ಮಳೆಯಲ್ಲಿ ಮಿಂದೇಳುವುದು ಹಿತವೆನಿಸುತ್ತಿತ್ತು. 

ಇನ್ನೂ ನೆನಪಿದೆ ಹುಡುಗಿ ನನ್ನ ಬಲಗೈ ಹಿಡಿದು ನನ್ನ ಹೆಗಲಿಗೆ ನೀನು ಒರಗಿದ್ದ ದಿನ, ಅದೇ ಶಿರಾಡಿ ಘಟ್ಟದಲ್ಲಿ. ತೊಟ್ಟಿಲಿನಂತೆ ತೂಗುತ್ತಿದ್ದ ಬಸ್ಸು ನಿನ್ನ ನಿದ್ದೆಯ ಲೋಕಕ್ಕೆ ಜಾರಿಸಿ ಬಿಟ್ಟಿತ್ತು. ಒಮ್ಮೆ ದಿಟ್ಟಿಸಿದ್ದೆ ನಿನ್ನ. ನಿದ್ರಾದೇವಿಯ ಮಡಿಲಲ್ಲಿ ಥೇಟ್ ಮಗುವೇ ನೀನು.! ನಿನ್ನ ನೀಳ ಕಣ್ರೆಪ್ಪೆಗಳು, ನನ್ನ ಬಲ ಕೈಯನ್ನು ಮಗುವಿನಂತೆ ಹಿಡಿದಿದ್ದ ನೀಳ ಚಿಗುರು ಬೆರಳುಗಳ ನಿನ್ನ ಆ ಕೈ. ಅಲೆ ಅಲೆಯಾಗಿ ಮುಖದ ಮೇಲೆಲ್ಲಾ  ಹರಡಿದ್ದ ತಲೆಗೂದಲು, ಆ ಕೂದಲ ರಾಶಿಯಿಂದ ಇಣುಕುತ್ತಿದ್ದ, ರಾತ್ರಿಯಾಗಸದಲ್ಲಿ ತಾರೆಗಳ ನೆನಪಿಸುವ , ಜೋಡಿ ನಕ್ಷತ್ರಗಳ ಕಿವಿಯೋಲೆ. ಅದನೊಮ್ಮೆ ಸ್ಪರ್ಶಿಸುವ ಹಂಬಲವನ್ನು ಅದ್ಹೇಗೋ ತಡೆ ಹಿಡಿದಿದ್ದೆ.  ಮೊದಲ ಬಾರಿಗೆ ಹುಡುಗಿಯೊಬ್ಬಳ ಮೊಗವನ್ನು ಹೀಗೆ ದಿಟ್ಟಿಸಿದ್ದಿರಬೇಕು. ಅದೆಷ್ಟು ತೊಂದರೆ ಕೊಡುತ್ತಿತ್ತು ನಿನ್ನ ಮೊಗದ ಮೇಲೆ ಹಾರಾಡುತ್ತಿದ್ದ ಕೂದಲ ರಾಶಿ. ಅದರಿಂದಲೇ ಅಲ್ಲವೇನೆ ನಿನ್ನ ನಿದ್ದೆಗೆ ಭಂಗವಾಗಿ, ಎಚ್ಚೆತ್ತು. 'ನಿದ್ದೆಗಣ್ಣಿನ ನಗು' ನಕ್ಕು. ತುಸು ಆಚೆ ಜರುಗಿ ಕಿಟಕಿಯತ್ತ ಮುಖ ಮಾಡಿ ಪ್ರಕೃತಿಯ ಹಂದರದಲ್ಲಿ ಜಾರಿದ್ದು. ಜಗತ್ತಿನ ಕುತೂಹಲವನ್ನೆಲ್ಲ ತುಂಬಿಕೊಂಡ ಬೊಗಸೆ ಕಂಗಳಲ್ಲಿ ಶಿರಾಡಿ ಘಟ್ಟದ ಪ್ರತಿಬಿಂಬವನ್ನು ಕಾಣಬೇಕೊಮ್ಮೆ ಅನಿಸಿತ್ತು.!

ಬೈಕ್ ಇರುವುದೇ ಓಡಿಸಲಿಕ್ಕೆ ಎಂದುಕೊಂಡು, ಕೂದಲನ್ನು ಬೇಕಾಬಿಟ್ಟಿ ತಿದ್ದಿಕೊಂಡು, ಮಣಿಸರಗಳನ್ನು  ಸಿಕ್ಕಿಸಿಕೊಂಡು, heavy metal music ಕೇಳಿಕೊಂಡು, messi- football ಅಂತ ಆರಾಮಾಗಿ ಇದ್ದ ನನ್ನಲ್ಲಿ ಅದೆಂಥ ಬದಲಾವಣೆ ನೋಡು..!

 ಈಗ ನನ್ನ ಐಪಾಡ್ ತುಂಬೆಲ್ಲ ಭಾವಗೀತೆಗಳೇ! ನೀಲಿ ಬೆಟ್ಟ, ಕೊನೆಯಿಲ್ಲದ ಗಗನ, 
ಬೋರ್ಘರೆವ ಸಮುದ್ರ.ಮುಂಜಾನೆಯ ಮಂಜು, ಸೂರ್ಯೋದಯ ಎಲ್ಲವೂ ಇಷ್ಟ 
ಆಗಲಿಕ್ಕೆ ಶುರುವಾಗಿದೆ ನೋಡು.!  ನಾನು ನೀನಾಗುತ್ತಿದ್ದೆನಾ ? ಅದೆಲ್ಲಿ ಸಾಧ್ಯ? ನಿನ್ನ ಆ ಮಗುವಿನಂಥ ನಗು, ಮನಸು ನನಗೆಲ್ಲಿಂದ ಬರಬೇಕು ಹೇಳು?
ಪಕ್ಕಾ practical ಸ್ವಭಾವದ, ಭಾವನೆಗಳೇ ಇಲ್ಲದಿದ್ದಂಥ ಹುಡುಗನ ಮನದಲ್ಲೀಗ ಭಾವನೆಗಳ ಮುಂಜಾವು. ನಿನ್ನ ನೆನಪುಗಳ ಕಚಕುಳಿ. ನಿನ್ನ ಹುಸಿಮುನಿಸು, ಮುಖವೂದಿಸುವ ಪರಿ, ಕಣ್ಣುಗಳಲ್ಲೇ ಕೊಲ್ಲುವ ದಾಟಿಗೆ ಸೋತು ಹೋಗಿದ್ದೇನೆ. ಮನಸು ಸ್ನೇಹದಿಂದ ಪ್ರೀತಿಯ ಕಡೆಗೇ ಜಾರುತ್ತಿದೆಯಲ್ಲೇ..!

ಹೌದು ಆ ದಿನವೇ ಕೇಳಬೇಕು ಅಂದು ಕೊಂಡಿದ್ದೆ ಅದ್ಯಾಕೆ ಕಾಡಿಗೆಯ ಹಚ್ಚುತ್ತೀಯೇ ನೀನು ? ನಿಜ್ಜ ಹೇಳಲಾ? ಯಾಕೋ ಗೊತ್ತಿಲ್ಲ ನಿನ್ನ ಕಾಡಿಗೆಯ ಕಂಗಳಿಗಿಂತ. ಆ ಮುಗ್ಧ ಅಬೋಧ ಕಂಗಳೇ ಇಷ್ಟ ಮಾರಾಯ್ತಿ.!


ಕಾಡು ಹೂಗಳ ಕಂಪಿಗೆ  ನಿನ್ನ ನೆತ್ತಿಯ ಘಮದ ನೆನಪು.! ನನ್ನ ಭುಜಕ್ಕೂ

 ನಿನ್ನದೇ ತಲೆ ಬೇಕಂತೆ ನೋಡು.


ಕೊನೆಗೂ ಶಿರಾಡಿ ಘಟ್ಟದ ಆರ್ದ್ರತೆಗೆ ನನ್ನ ಮನದಲ್ಲೂ ಪ್ರೀತಿಯ ಬೀಜ ಮೊಳೆತಿದೆ. ಜೋಡಿ ಕಿವಿಯೋಲೆಗಳ ಮೇಲೆ ಇಳಿಬೀಳುವ ನಿನ್ನ ಜೊಂಪೆ ಕೂದಲುಗಳ ಸರಿಸಬೇಕಿದೆ. ಜೀವನ ಪೂರ್ತಿ ನಿನ್ನದೇ ಜೊತೆ ಬೇಕು ಅನಿಸುತ್ತಿದೆಯಲ್ಲೇ. ಅರ್ಥ ಮಾಡ್ಕೊತೀಯ ಅಲ್ವಾ ? 


                                       ನಿನ್ನ ಪ್ರೀತಿಯ ಮಳೆಯಲ್ಲಿ ನೆನೆಯ ಬಯಸುವ 
                                                         ಒರಟ