Sunday, February 27, 2011

ನನ್ನ ಮರೆತಿರುವ ಹುಡುಗಿಗೆ...



ನನ್ನ ಮರೆತಿರುವ ಹುಡುಗಿಗೆ,


ಹೇಗಿದ್ದೀಯೇ ? ಅದ್ಯಾಕೋ ಗೊತ್ತಿಲ್ಲ ಹುಡುಗೀ ಮತ್ತೆ ಮತ್ತೆ ನಿನ್ನ ನೆನಪುಗಳು ಚಿಗುರುತ್ತಿವೆ, ಕಾಡುತ್ತಿವೆ .  ಮೊನ್ನೆ ಊರಿಗೆ ಹೋಗಿದ್ದಾಗ ನಿನ್ನ ನೆನಪುಗಳು ಹಸಿ ಹಸಿಯಾಗಿ ಕಾಡಿ ಬಿಟ್ಟವು. ಹೇಮಂತದ ಕಾಡು ಹೂಗಳ ಕಂಪಿಗೆ ಮನಸು ನಿನ್ನನ್ನೇ ಅರಸಿತ್ತು . ನೀ ನನ್ನ ಬಿಟ್ಟು ಹೋದಮೇಲೆ ಊರಿನ ಕಡೆ ಸರಿಯಾಗಿ ಹೋಗೇ ಇಲ್ಲ ನೋಡು. ಅದೆತ್ತ ನೋಡಿದರೂ ಕಾಡುವ ನಿನ್ನದೇ ನೆನಪುಗಳು.

ಮನದಾಳದ ಗೋರಿಯಲಿ ಹುಗಿದಿಟ್ಟಿದ್ದ,  ನಿನ್ನ ಜೊತೆ ಬೆಟ್ಟ ಗುಡ್ಡ ಅಲೆಯುವ, ಗುಡ್ಡದ೦ಚಿನ ಸೂರ್ಯಾಸ್ತ ನೋಡುವ, ಗಾಳಿಪಟ ಹಾರಿಸುವ, ಕಾಗದದ ದೋಣಿಯಲ್ಲಿ ನಿನ್ನ- ನನ್ನ ಹೆಸರು ಬರೆದು ತೇಲಿ ಬಿಡುವ, ನದಿಯ ದಡದಲ್ಲಿ ಜೊತೆಯಾಗಿ ಪಾದ ತೋಯಿಸಿಕೊಳ್ಳುವ ಕನಸುಗಳೆಲ್ಲ ಎದ್ದು, ಗೋರಿಯ ಮೇಲೆ ಬಂದು ಕೂತು ಬಿಟ್ಟಿದ್ದವು.ಇಂಚಿಂಚಾಗಿ ಕೊಲ್ಲುವ ನಿನ್ನ ಪ್ರೀತಿಯಷ್ಟೇ ತಾಕತ್ತು ನಿನ್ನ ನೆನಪುಗಳಿಗೂ ಇದೆ, ನಿನಗಾಗಿ ನಾನು ಹೆಣೆದ ಕನಸುಗಳಿಗೂ ಇದೆ ಹುಡುಗೀ.!


ಅದೆಷ್ಟೋ ರಾತ್ರಿಗಳು ಬಿಕ್ಕಳಿಸಿದ್ದೇನೆ ಆ ಚುಕ್ಕಿಗಳ ಜೊತೆಗೆ. .ಸಮಾಧಾನಿಸಲು ಬರುತ್ತಿದ್ದ ನಿನ್ನ ಚಿಗುರು ಬೆರಳುಗಳ ಕಾದು ಬೇಜಾರಾಗಿರಬೇಕು ಕಣ್ಣೀರಿಗೆ, ಇತ್ತೀಚಿಗೆ ಅದೂ ಕಾಣೆಯಾಗಿದೆ!

ನೋಡು ನಾನು ಕಡಲ ತಡಿಗೆ ಬಂದು ಕುಳಿತಿದ್ದೇನೆ. ಸಮುದ್ರದ ಅಲೆಗಳ ಮೊರೆತಕ್ಕೆ ನಿನ್ನದೇ ನೆನಪುಗಳ ಜಾತ್ರೆ. ಆ ಜಾತ್ರೆಯಲಿ ನಿನ್ನ ನಗು,ಮಾತು. ಅದೇ ನಿನ್ನ ನೆಚ್ಚಿನ ಸಮುದ್ರ. 'ಪ್ರೀತಿಯೆಂದರೆ ಸಮುದ್ರದಂತೆ' ಎಂದು ನೀನೇ ಹೋಲಿಕೆ ಕೊಡುತ್ತಿದ್ದ ಸಮುದ್ರ. ನೀನು ಅದೆಷ್ಟೋ ಗುಬ್ಬಚ್ಚಿ ಗೂಡುಗಳ ಕಟ್ಟಿದ್ದ, ಹಸಿಮರಳ ದಂಡೆಯ ಸಮುದ್ರ. ನಮ್ಮ ಅದೆಷ್ಟೋ ಜಗಳಗಳ ಕೇಳಿಸಿಕೊಂಡು ಭೋರ್ಗರೆಯುತ್ತಿರುವ ಸಮುದ್ರ. ನಿನ್ನ ಕೊನೆಯ ಸಲ ಭೇಟಿಯಾದ ಸಮುದ್ರ. !

  ಇದೇ  ಕಡಲ ತಡಿಯಲ್ಲಿ ಅಲ್ಲವೇನೆ?  ನಿನ್ನ ಜೊತೆ ಲೆಕ್ಕವಿಲ್ಲದಷ್ಟು ದೂರ ನಡೆದದ್ದು. ?"ಇನ್ನು ಒಂದೇ ಒಂದು ಚೂರು ಕಣೋ ಪ್ಲೀಸ್, ಆ ತೆಂಗಿನ ಮರದವರೆಗೆ"  ಎಂದು ನನ್ನ ಕಿಲೋಮೀಟರ್ಗಳಷ್ಟು ದೂರ ನೀನು ನಡೆಸುತ್ತಿದ್ದದ್ದು.


ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರೂ ನಮ್ಮ ಸ್ನೇಹ ಪಕ್ವಗೊಂಡದ್ದು ಕಡಲ ತಡಿಯ ಊರಿನಲ್ಲೇ. social network ನಿಂದಾಗಿ ಸಿಕ್ಕಿದ್ದ ಶಾಲಾ ದಿನಗಳ ಸ್ನೇಹಿತರಲ್ಲಿ ನೀನೂ ಒಬ್ಬಳು. ಅದರಲ್ಲೂ ನೀನು 'ಕಡಲ ತಡಿಯ' ಊರಿನಲ್ಲೇ ಇರುವುದೆಂದು ತಿಳಿದಾಗ ಖುಷಿಯಾಗಿತ್ತು. ಮೊದಲ ಭೇಟಿಯಲ್ಲಿಯೇ ಅನಿಸಿತ್ತು, ಶಾಲಾ ದಿನಗಳ  ವಾಚಾಳಿ ಹುಡುಗಿ ಇನ್ನೂ ಬದಲಾಗಿಲ್ಲ ಎನ್ನುವುದು!

ವಾರಾಂತ್ಯದ ಕಡಲ ಕಿನಾರೆಯಲ್ಲಿಯ ನಿನ್ನ ಭೆಟ್ಟಿ ಮುಂದಿನ ವಾರಕ್ಕಾಗುವಷ್ಟು ಹುರುಪನ್ನು ತಂದುಕೊಡುತ್ತಿತ್ತು. ಹೆಚ್ಚಾಗಿ ಮೌನಿಯಾಗಿರುತ್ತಿದ್ದ ನನಗೆ ಮಾತಾಡಲು ಕಲಿಸಿದವಳು ನೀನೇ ಎಂದರೆ ತಪ್ಪಾಗಲಿಕ್ಕಿಲ್ಲ. ನೀ ಕೇಳಿದ್ದಕ್ಕೆಲ್ಲ "ಹ್ಞೂ ಹಾಂ" ಅನ್ನುತ್ತಿದ್ದ ನಾನು. ಒಂದು ವರ್ಷದಲ್ಲಿ 'ನಾನೇ ಸುದ್ದಿ ಹೇಳುವಷ್ಟು', ನಿನ್ನ ಕಾಡುವಷ್ಟು ಮಟ್ಟಕ್ಕೆ ಮಾತು ಕಲಿತಿದ್ದೆ. ಆದರೂ ನನ್ನ ಮನದಾಳದ ಭಾವನೆಗಳಿಗೆ ಮಾತಿನ ರೂಪ ಕೊಡಲಾಗಲೇ ಇಲ್ಲ.

ನೀನು ಆಡುತ್ತಿದ್ದ ಸುಳ್ಳು ಸುಳ್ಳೇ ಜಗಳಗಳು, ನಿನ್ನ ಜೊತೆ ಗುಬ್ಬಚ್ಚಿ ಗೂಡು ಕಟ್ಟಿದ್ದು, ಕಿತ್ತಾಡಿ ಐಸ್ ಕ್ರೀಂ ತಿಂದಿದ್ದು. ಜಗಳವಾದಾಗ ಸಿಟ್ಟಿನಲ್ಲಿ ಅದೆಷ್ಟು ಸಲ ನಿನ್ನ ಫೋನ್ ನಂಬರ್ ಡಿಲೀಟ್ ಮಾಡಿದ್ದೇನೋ. ಆದರೆ ನಿದ್ದೆಯಲಿ ಕೇಳಿದರೂ ನಿನ್ನ ನಂಬರ್ ಒಂದೇ ಉಸುರಿನಲ್ಲಿ ಹೇಳಿ ಬಿಡುತ್ತಿದ್ದೆ. ಒಮ್ಮೆ "ನಿನ್ನೆ ನಿನ್ number delete ಮಾಡಿದ್ದೆ" ಎಂದು ನಾನು ಅಂದಾಗ, "full matured ಅಂತ ದೊಡ್ ಪೋಸ್ ಕೊಡೋದಷ್ಟೇ still you are a kid " ಎಂದು ನೀನು ನಗುತ್ತಿದ್ದರೆ. ನಿನ್ನ ಚಚ್ಚಿ ಬಿಡುವಷ್ಟು ಕೋಪ ನನ್ನಲ್ಲಿ.!

ನೆನಪಿದ್ಯೇನೆ? ಒಮ್ಮೆ ರಾತ್ರೆ ಎರಡು ಗಂಟೆಗೆ ಫೋನ್ ಮಾಡಿ "ಒಂದು doubt ಕಣೋ, ಮೊನ್ನೆಯಿಂದಾ ಕಾಡ್ತಾ ಇದೆ" ಎಂದು ಬೇಜಾರಿನ ಧ್ವನಿಯಲ್ಲಿ ಕೇಳಿದಾಗ ನಾನು ಕಂಗಾಲಾಗಿದ್ದೆ. "ಹೇಳು" ಅಂದಿದ್ದಕ್ಕೆ ಅದೆಷ್ಟು 'ನಕ್ರಾ ' ನಿನ್ನದು?!.ಕೊನೆಗೆ ಕಾಡಿ ಬೇಡಿದಾಗ ನೀ ಕೇಳಿದ್ದಾದರೂ ಏನು ? "Melody chocolaty क्यों है ? !ತಲೆ ಚಚ್ಚಿಕೊಂಡಿದ್ದೆ.ನಿದ್ದೆಯ ಮಂಪರಿನಲ್ಲೂ ನಕ್ಕಿದ್ದೆ. !

ಮನದ ಮೂಲೆಯಲ್ಲೆಲ್ಲೋ ನಿನ್ನ ಬಗೆಗೆಲ್ಲೋ ಒಂದು ಬಗೆಯ ವಿಶೇಷ ಭಾವನೆ ಮೊದಲಿನಿದ ಇತ್ತಾದರೂ  
ಅದು ಪ್ರೀತಿಯಾಗಿ ಬದಲಾಗದ್ದು ಯಾವಾಗ? ಅದೆಷ್ಟೋ ಬಾರಿ ಯೋಚಿಸಿದ್ದಿದ್ದೆ ನಾನು.


face book ನಲ್ಲಿ ನಿನ್ನ photoಗಳಿಗೆ  ಹುಡುಗರು ಕಾಮೆಂಟ್ಸ್ ಹಾಕಿದಾಗೆಲ್ಲ ಅದೇನೋ ಒಂದು ಬಗೆಯ ಭಾವನೆ.  ನಿನ್ನ ಬದುಕಿನಲ್ಲಿ 'ಸಂಭ್ರಮ'ನ ಆಗಮನ ಆದ ಮೇಲಂತೂ ಸುಖಾ ಸುಮ್ಮನೆ ಜಗಳ ಕರೆದು, ನಿನ್ನ ಗಮನವನ್ನೆಲ್ಲ ನನ್ನೆಡೆಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡಿದ್ದೆ. ಇದೆಲ್ಲ ನಿನಗೆ ಅರ್ಥವಾಗಲೇ ಇಲ್ಲವೇನೇ? ಅಥವಾ ಅರ್ಥವಾದರೂ ಸುಮ್ಮನಿದ್ದೆಯಾ? ನನ್ನ ಕಣ್ಣಿನಲ್ಲಿ ನಿನ್ನೆಡೆಗಿದ್ದ ಪ್ರೀತಿ ಅರ್ಥವಾಗಲೇ ಇಲ್ಲ ನಿನಗೆ.


ಪಕ್ಕಾ ಅಂತರ್ಮುಖಿ, ಮನದ ಭಾವಗಳಿಗೆ 'ಮಾತಿನ ರೂಪ' ಕೊಡಲು ಒದ್ದಾಡುವ ಹುಡುಗ ನಾನು. ನಿನಗೆ ನನ್ನ ಪ್ರೀತಿಯ ಹೇಳುವ ಮೊದಲೇ, ನೀನು 'ಸಂಭ್ರಮ'ನ ತೆಕ್ಕೆಗೆ ಜಾರಿಯಾಗಿತ್ತು. ಒಂದು ತಿಂಗಳು ನಾನು ನಾನಾಗಿರಲಿಲ್ಲ. ಹಂತ ಹಂತವಾಗಿ ನಿನ್ನೊಡನೆ ಮಾತು-ಕಥೆಗಳ ನಿಲ್ಲಿಸಿದ್ದೆ.


ಮದುವೆಯ ಕರೆಯೋಲೆಯ ತೋರಿಸಬೇಕು ಬಾ ಎಂದು ಮತ್ತೆ ಇದೇ ಸಮುದ್ರದಂಚಿಗೆ ನೀ ನನ್ನ ಕರೆದದ್ದು. ಅದೆಷ್ಟೇ ಪ್ರಯತ್ನಿಸಿದ್ದರೂ ಸಾಮಾನ್ಯವಾಗಿ ಇರಲು ಸಾಧ್ಯವಾಗಿರಲಿಲ್ಲ. 
 
ಆ ದಿನ ಬಸ್ಸಿನಲ್ಲಿ ಹೊರಟಿದ್ದಾಗ ಅದ್ಯಾಕೆ ನನ್ನ ಭುಜಕ್ಕೆ ನಿನ್ನ ತಲೆಯಿಟ್ಟೆ ಹೇಳು? ಮಗುವಿನಂತೆ ಮಲಗಿದ್ದ ನಿನ್ನ ಮುಖವನ್ನು ಒರೆ ಕಣ್ಣಿನಲ್ಲಿ ನೋಡಿ ಮುಗುಳು ನಕ್ಕಿದ್ದೆ ನಾನು. ನಿನಗೆ ಅದಾವುದರ ಪರಿವೆಯೇ ಇದ್ದಂಗೆ ಕಂಡಿರಲಿಲ್ಲ. ನಿನ್ನ bag ಮೇಲಿದ್ದ ಆ ಮಣಿಗಳನ್ನೆಲ್ಲ ಕಿತ್ತು ನನ್ನ ಕೈಮೇಲೆ ಯಾಕೆ ಇಡುತ್ತಿದ್ದೆಯೇ ಹುಡುಗಿ ? ನಿನಗೆ ಗೊತ್ತೇ ಇಲ್ಲದಂತೆ ಅದನ್ನೆಲ್ಲ ಹೆಕ್ಕಿ ನನ್ನ ಜೇಬಿನೊಳಗೆ ಸೇರಿಸಿದ್ದೆ ನಾನು. ಇನ್ನೂ ಇವೆ ನನ್ನ ಬಳಿ ಅವು.  ನಿನ್ನ ನೆತ್ತಿಯ ಆ ಪರಿಮಳ ಇನ್ನೂ ನೆನಪಲ್ಲಿದೆ.!

ನೋಡು ಎಲ್ಲ ಮೊನ್ನೆ ಮೊನ್ನೆ ನಡೆದಂತಿದೆ ಅಲ್ವಾ ? ದಡಕೆ ಅಪ್ಪಳಿಸಿ ಓಡುವ ಹೊಸ ಹೊಸ ಅಲೆಗಳು. ನನ್ನ ಮನದಲ್ಲಿ ನಿನ್ನದೇ ನೆನಪಿನ ಅಲೆಗಳು . ಹಳೆಯ ನೆನಪುಗಳ ದರ್ಬಾರಿಗೆ ಮನಸ್ಸು ಗುಜರಿ ಅಂಗಡಿ ಆದಂತಿದೆ.  ಕಡಲ ತಡಿಗೆ ಬಂದು ನಿಂತಾಗ ಉಕ್ಕಿದ ಹಸಿ ಹಸಿ ನೆನಪುಗಳು ಇವು.  ಅದೇ ದಡ, ಅಪ್ಪಳಿಸುವ ಹೊಸ ಹೊಸ ಅಲೆಗಳು, ಕೈ ಹಿಡಿದು ಅಡ್ಡಾಡುವ ಜೋಡಿಗಳು. ಪಶ್ಚಿಮಕೆ ಸೂರ್ಯ ಇಳಿದಾಗಿದೆ. ನನ್ನ ನೆರಳು ಮಸುಕಾಗುತಿದೆ. ಆದರೆ ನಿನ್ನ ನೆನಪು ... ??? ಅದೂ ಸಮುದ್ರದಂತೆ ......

                                        
     ಇತಿ
ನಿನ್ನ ಮರೆಯಲಾಗದವ


ಕೂತು ಬರೆದ ಹಾಳೆಯನು ಹರಿದು ಸಮುದ್ರಕ್ಕೆಸೆದು,ಹುಡುಗ ನಡೆಯುತ್ತಿದ್ದ. ಅಲೆಗಳು ಮುಟ್ಟಾಟವ ಆಡುತ್ತ ಕಾಗದದ ಚೂರುಗಳನ್ನು ಮರುಘಳಿಗೆಯೇ ದಡಕ್ಕೆ ತಂದು ಹಾಕುತ್ತಿದ್ದವು ..!



Wednesday, February 9, 2011

ಚುಕ್ಕಿಗಳ ಜಾತ್ರೆಗೆ ಹೋಗಿ ಬನ್ನಿ


                                                   ರವಿ ತನ್ನ ಪಯಣ ಮುಗಿಸಿ ಪಡುವಣಕ್ಕೆ ಜಾರಿ ಸುಮಾರು ಹೊತ್ತಾಗಿತ್ತು. ಅದು ಮುಸ್ಸಂಜೆಯ ಬೆಳಕಿನ (twilight) ಸಮಯ.ಮೊದಲು ಕಾಣಿಸಿಕೊಳ್ಳುವ ಆ ಒಂಟಿ ನಕ್ಷತ್ರ (solitary star) ಆಗಸದಿಂದ ಇಣುಕಿ ನೋಡುತ್ತಿತ್ತು. ಅದೇನೋ ಒಂದು ಬಗೆಯ ವಿಚಿತ್ರ ಪ್ರೀತಿ, ಹೊಟ್ಟೆಕಿಚ್ಚು ಆ ನಕ್ಷತ್ರದ ಮೇಲೆ! ಆ ನಕ್ಷತ್ರ ರಾತ್ರಿಯಾಗುವುದರ ಕುರುಹು, ಹಾಗೆಯೇ ರಾತ್ರಿಯ ನಂತರದ ಮುಂಜಾವಿನ ಇರುವಿಕೆಯನ್ನೂ ಹೇಳುತ್ತದೆ. ಅದೊಂದು ಕವಿಸಮಯ. ಪ್ರಕೃತಿ ನಿಧಾನವಾಗಿ ನಿಶೆಯ ಮುಸುಕೆಳೆದು ಮಲಗಲು ತಯಾರಿ ನಡೆಸಿತ್ತು. ಇನ್ನಷ್ಟು ಹೊತ್ತು ಆಗಸವ ದಿಟ್ಟಿಸಬೇಕು ಎಂದುಕೊಳುತ್ತಲೇ ಇದ್ದೆ, ನನ್ನ ಮನದಿಂಗಿತವ ಅರಿತಂತೆ ಕರೆಂಟು ಹೋಯಿತು. street ಬೆಳಕಿನ ಕಾಟವೂ ಇಲ್ಲದ ನಕ್ಷತ್ರಗಳ ಕ್ಷೀಣ ಬೆಳಕನ್ನು ಹೊತ್ತ ಆಗಸ. ಕೈಕೊಟ್ಟ ಪವರಿಗೆ Thanks ಎನ್ನುತ್ತಲೇ ಗ್ಯಾಲರಿಯಲ್ಲಿನ ನನ್ನ ಆರಾಮ ಖುರ್ಚಿಯತ್ತ ನಡೆದಿದ್ದೆ.



ಕಾಲು ಚಾಚಿ ಕುಳಿತ ನಾನು ದೃಷ್ಟಿಹರಿಸಿದ್ದು ಅನಂತ ಆಗಸದತ್ತ. ಮೋಡಗಳಿಲ್ಲದ ನಿರಭ್ರ ಆಗಸವದು. ಅದೆಷ್ಟು ದಿನವಾಗಿತ್ತು ಹೀಗೆ ಈ ಆಗಸವ ಗಮನಿಸದೆ ಎಂದು ಯೋಚಿಸಿದೆ. ನೆನಪೇ ಇರಲಿಲ್ಲ ಅದ್ಯಾವಾಗ ನೋಡಿದ್ದೆ ಎನ್ನುವುದು. ಒಂದಾದ ಮೇಲೊಂದರಂತೆ ಕಳೆದು ಹೋಗುವ ದಿನಗಳ ಓಘದಲ್ಲಿ ಮರೆತೇ ಹೋಗಿತ್ತು ಈ ಆಕಾಶ ವೀಕ್ಷಣೆ.

ಈ ಸಂಜೆ ಕಳೆದು ರಾತ್ರಿ ಆವರಿಸುವ ಪರಿಯೇ ಅದ್ಭುತ. ನೋಡ ನೋಡುತ್ತಲೇ ಬಾನ ಸೀರೆಗೆ ನಕ್ಷತ್ರಗಳ ಕಸೂತಿಯ ತುಂಬುತ್ತಲೇ ಹೋಗುವ ನಿಶೆ. ಗಾರುಡಿಗನೊಬ್ಬ ಬಾನ ತುಂಬೆಲ್ಲ ಮುತ್ತು, ವಜ್ರಗಳ ಚೆಲ್ಲಿಬಿಡುತ್ತಾನೆ. ಒಂದೊಂದೇ ಚುಕ್ಕಿಗಳು ಪೈಪೋಟಿಗೆ ಬಿದ್ದಂತೆ ಕಾಣಿಸತೊಡಗಿದವು. ramp walk ಮಾಡುವ ಥಳಕು ಬಳುಕಿನ modelಗಳು ನೆನಪಾಗಬೇಕು ಅದೆಷ್ಟೋ ದೂರದಿಂದ ಮಿನುಗುವ ಈ ಚುಕ್ಕಿಗಳ ಕಂಡರೆ. !

ನನ್ನಿಷ್ಟದ ವಿಷಯಗಳಲ್ಲಿ ಖಗೋಳ ವಿಜ್ಞಾನವೂ ಒಂದು. ಸೂರ್ಯನೂ ಒಂದು ನಕ್ಷತ್ರ, ಎಂದೂ ಗೊತ್ತಿದೆ. ನಕ್ಷತ್ರಗಳ ಬಗ್ಗೆ ವೈಜ್ಞಾನಿಕ ಸತ್ಯಗಳೂ ಗೊತ್ತಿವೆ. ಆದರೆ ಒಂದು ಕುತೂಹಲವಿದೆ, ಪ್ರೀತಿಯಿದೆ, ತಣ್ಣನೆಯ ಹೊಟ್ಟೆ ಕಿಚ್ಚೂ ಇದೆ ಆ ಜಗತ್ತಿನ ಬಗ್ಗೆ, ಆ ತಾರೆಗಳ ಬಗ್ಗೆ. ಚಂದಿರನ ಶೀತಲ ಕಿರಣದ ನೆರಳಲಿ ಸರಸವಾಡುವ ಚುಕ್ಕಿಗಳೆಲ್ಲವೂ ಅದಮ್ಯ ಪ್ರೀತಿಯ ಸಂಕೇತದಂತೆ ಭಾಸವಾಗುತ್ತವೆ. ನಿಶೆಯ ಸೆರಗಿಡಿದು ಬಾನಿನಲ್ಲಿ ಪ್ರತ್ಯಕ್ಷವಾಗುವ ಚುಕ್ಕಿಗಳಿಗೆಲ್ಲ ಚಂದಿರನ ಮೇಲೆ ಅದೇನೋ ಪ್ರೀತಿಯಂತೆ.!ದಿನದಿನವು ನಡೆಯುವ 'ಬಾನ ಜಾತ್ರೆ'. ಏನು ಕೊಳ್ಳುವರೋ ಗೊತ್ತಿಲ್ಲ. ಆದರೆ ಕೋಟಿ ನಕ್ಷತ್ರಗಳ ಹಾಜರಾತಿಯಂತೂ ಬೇಕೇ ಬೇಕು. ನಕ್ಷತ್ರಗಳೆಲ್ಲವೂ ಒಂದೊಂದು ಸೂರ್ಯನಂತೆ ಪ್ರಖರವಾದ ಬೆಂಕಿಯ ಚೆಂಡುಗಳು ಎಂದು ಈ ಮನಸ್ಸು ಒಪ್ಪುವುದೇ ಇಲ್ಲ ನೋಡಿ.! ಅದ್ಯಾರದೋ ಮೂಗುತಿಯ೦ತೆ ಕಾಣುವ, ಅಜ್ಜಿಯ ಕಿವಿಯ ಓಲೆಗಳ ನೆನಪಿಸುವ, ಹುಡುಗಿಯರ ಕಣ್ಣ ಹೊಳಪನ್ನು ನಾಚಿಸುವ ನಕ್ಷತ್ರಗಳಿಗೆ 'ಚುಕ್ಕಿ'ಗಳೆಂದೇ ಕರೆಯಬೇಕೆನಿಸುತ್ತದೆ.!



ಈಗ ಆಗಸದೆಡೆಗಿನ ನನ್ನ ಪ್ರೀತಿ ಹಾಗೆ ಇದ್ದರೂ, ಕಾಲದ ಹೊಡೆತಕ್ಕೆ ಸಿಕ್ಕ ಯೋಚನಾ ಧಾಟಿಯಲ್ಲಿ ಸ್ವಲ್ಪ ಏರುಪೇರು. ಇದನ್ನು ಅರಿತ ಮನಸ್ಸು ಹೊಸಯೋಚನೆಗಳ ಮೇಲೊಂದು ಮುಸುಕನ್ನು ಎಳೆದು, ನಿರುಮ್ಮಳವಾದ ಬಾಲ್ಯದ ಯೋಚನಾ ಜಾಡನ್ನು ಹಿಡಿದು ಬಿಟ್ಟಿತ್ತು, ನನಗೇ ಗೊತ್ತಿಲ್ಲದಂತೆ..!



ಹೌದು ತಾರೆಗಳ ನೋಡುತ್ತಾ ಅದೆಷ್ಟೋ ಕನಸುಗಳ ಹೆಣೆದಿದ್ದೆ. ಚಂದಿರನವರೆಗೂ ಉದ್ದದೊಂದು ಏಣಿ ಹಾಕುವ. ಚಂದಿರನ ಮನೆಗೆ ಕನ್ನ ಹಾಕುವ ಅಮೋಘವಾದ ಕನಸು ನನ್ನ ಬಾಲ್ಯದ ದಿನಚರಿಗಳಲ್ಲಿ ಮಾಮೂಲಾಗಿತ್ತು.! ಇನ್ನು ಅನ್ಯಗ್ರಹ ಜೀವಿಗಳು ಬರಬಹುದೆಂದು ಅದೆಷ್ಟೋ ರಾತ್ರಿಗಳ ಬಾನಂಗಳವನ್ನು ಎವೆಯಿಕ್ಕದೆ ವೀಕ್ಷಿಸಿದ್ದೆ, ಹಾರುವ ತಟ್ಟೆಗಳಿಗಾಗಿ ಕಾದಿದ್ದೆ. ಕೊನೆಗೆ ವಾಸ್ತವಗಳ ತಿಳಿದು ಬೇಸರಿಸಿದ್ದೆ. ತಮ್ಮನೊಂದಿಗೆ ಗಂಟೆಗಟ್ಟಲೆ ಕುಳಿತು ನಕ್ಷತ್ರ ಪುಂಜಗಳ ಗುರುತಿಸಿ ಕೇಕೆ ಹಾಕಿದ್ದೆ, ಪುಟ್ಟ ವಿಜ್ಞಾನಿಯೆಂದು ಬೀಗಿದ್ದೆ.! ಉರಿದು ಬೀಳುವ ಉಲ್ಕೆಗಳ ಮೇಲೆ ಹಾರೈಕೆಯೊಂದನ್ನು ಕಟ್ಟಿದ್ದೆ. ಚಂದ್ರಗ್ರಹಣವ ನೋಡಲು, 2 ಗಂಟೆಯ ಅಪರಾತ್ರಿಯಲಿ ಎದ್ದು, ಹೊರಗೆ ಹೋಗಲು ಹೆದರಿ, ಪಪ್ಪನ ಎಬ್ಬಿಸಿ ಬೈಸಿಕೊಂಡಿದ್ದೆ. ಪಪ್ಪನಿಗೆ ಅಂಟಿಕೊಂಡು ಕುಳಿತೇ ಚಂದ್ರಗ್ರಹಣವ ನೋಡಿದ್ದೆ. ಬಾಣ ಬಿರುಸುಗಳ ಉಲ್ಕಾಪಾತವ ಬೆಟ್ಟದ ಮೇಲಿಂದ ನೋಡಿ ಸಂಭ್ರಮಿಸಿದ್ದೆ. ನನ್ನ ಪುಟ್ಟ ಬೊಗಸೆಯಲ್ಲಿ ನೀರು ತುಂಬಿ ಚಂದಿರನ ಬಿಂಬವ ಹಿಡಿದು ಚಂದಿರ ಸಿಕ್ಕಿದಷ್ಟೇ ಸಂಭ್ರಮಿಸಿದ್ದೆ. ಪಪ್ಪನ ಹತ್ತಿರ ಹಠ ಮಾಡಿ telescope ಒಂದನ್ನು ತರಿಸಿಕೊಂಡಿದ್ದೆ. ಕಲ್ಪನಾ ಚಾವ್ಲ ಬಾನಿನಲ್ಲಿ ಬೂದಿಯಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅದೇನೋ ಖುಷಿಯಿತ್ತು ಆ ಕಾಯುವಿಕೆಯಲ್ಲಿ, ಬೇಸರಿಕೆಯಲ್ಲಿ, ಆ ಕೇಕೆಯ ಪ್ರತಿಧ್ವನಿಗಳಲ್ಲಿ, ಆ ಮುಗುದ ಯೋಚನೆಗಳಲ್ಲಿ. ಆದರೆ ನಾವು ಎಲ್ಲವನು ತಿಳಿದುಕೊಳ್ಳುವ ಹಂಬಲದ ಭರದಲ್ಲಿ ಅದೆಷ್ಟೋ ಅಮೂಲ್ಯವಾದದ್ದನ್ನು ಕಳೆದು ಕೊಂಡು ಬಿಡ್ತೇವೆ. ತಿಳುವಳಿಕೆ ಜಾಸ್ತಿಯಾಗುತ್ತ ಹೋದಂತೆ ಮುಗ್ಧತೆ ಮರೆಯಾಗುತ್ತಲೇ ಸಾಗುತ್ತದೆ ಅಲ್ವಾ?



ಪುಟ್ಟ ಮಗುವಾಗಿದ್ದಾಗ 'ಮಾಮ'ನಾಗಿದ್ದ ಚಂದಿರ. ಕನ್ನಡ ಶಾಲೆಗೆ ಹೋಗುತ್ತಿದ್ದಾಗ ರಾತ್ರಿ ಬಾನಲ್ಲಿ ನಡೆಯುವ ಶಾಲೆಯ ಮಾಸ್ತರನಾಗಿದ್ದ. ಹರೆಯಕ್ಕೆ ಕಾಲಿಡುತ್ತಿದ್ದಂತೆ ಚಂದಿರ ಪ್ರೇಮಿಯಂತೆ ಭಾಸನಾಗುತ್ತಾನೆ. ಹುಣ್ಣಿವೆಯ ಹತ್ತಿರದ ದಿನಗಳಲ್ಲೆಲ್ಲ ಚಂದಿರನ ನೋಡಿದಷ್ಟೂ ಸಾಕಾಗುವುದಿಲ್ಲವೆನ್ನುವ ಮನಸ್ಸು. ಒಂದು ಬಗೆಯ possessiveness ಬೇರೆ ಅವನ ಮೇಲೆ!. ಆ ತಾರೆಗಳೆಲ್ಲ ಸವತಿಯರಂತೆ ಕಾಣುತ್ತವೆ. ಅದೆಷ್ಟು ವಿಚಿತ್ರ ನೋಡಿ ...!


ಹೀಗೆ ಕನಸುಗಳು, ನೆನಪುಗಳು ಒಂದೇ ಸಮನಾಗಿ ಸಾಗುತ್ತಲೇ ಇದ್ದವು. ಎರಡರ ನಡುವೆ ಭೇದವೇ ಇಲ್ಲದಂತೆ ಕಳೆದೇ ಹೋಗಿದ್ದೆ ಅಕ್ಷರಶಃ.. ಆ ಬಾನ ತಾರೆಗಳ ನೋಡುತ್ತಾ ಲಹರಿಯಲ್ಲಿ. 'ಬಾನ ಜಾತ್ರೆ'ಗೆ ತಾರೆಗಳು ಸೇರುತ್ತಲೇ ಇದ್ದವು. ತಮ್ಮ ಕೂಗುತ್ತಿದ್ದ "ಅಕ್ಕಾ map ತಗಂಬಾರೆ, ಇದ್ಯಾವ star cluster ಹೇಳೇ ..... " .ಅವನ ಆ ಕೂಗಿಗೆ ವಾಸ್ತವಕ್ಕೆ ಬಂದೆ.

ಅರೆರೆ ಎಲ್ಲಿದ್ದಾನೆ ನಮ್ಮ ಚಂದಿರ.! ಥಟ್ಟನೆ ನೆನಪಾಗಿದ್ದವನ ಪಡುವಣದ ಅಂಚಲ್ಲಿದ್ದ ಕಂಡೆ.! ಮುಗುಳುನಗೆ ತಂತಾನೇ ಮೂಡಿತ್ತು . ಅವನೂ ಕಣ್ಣು ಹೊಡೆದು ಬಿಟ್ಟ ನೋಡಿ "ಈಗ ನನ್ನ ನೆನಪಾಯ್ತಾ?" ಎಂದು ..! ಸಪ್ತರ್ಷಿ ಮಂಡಲ (the great bear) ನೆತ್ತಿಯ ಮೇಲೆ ತೂಗುತ್ತಿತ್ತು . map ತರಲು ರೂಮಿಗೆ ಹೊರಟೆ. ಮನಸ್ಸು ನೆನಪು- ಕನಸುಗಳ ಸೋನೆಮಳೆಯಲ್ಲಿ ಮಿಂದೆದ್ದಿತ್ತು. ಮಧುರಾನುಭೂತಿಯ ಹೊಸ ಲಹರಿಯಲ್ಲಿ ತೇಲುತ್ತಿದ್ದೆ.


ಗೆಳೆಯರೇ,  ನಮ್ಮ ಬಗ್ಗೇ ಯೋಚಿಸಲು ಪುರುಸೊತ್ತಿಲ್ಲದ ಈ ಧಾವಂತದ ದಿನಗಳಲ್ಲಿ, ಒಂದು week endನ ಸಂಜೆ ನಕ್ಷತ್ರಗಳ ಜಾತ್ರೆಗೆ ಹೋಗಿ ಬನ್ನಿ.ನಿಮ್ಮದೇ ಲಹರಿಯಲ್ಲಿ ಕಳೆದು ಹೋಗಿ. ನಿಮಗೆ ನಿಮ್ಮ ಬಾಲ್ಯ ನೆನಪಾದೀತು, ಹಳೆಯ ಮುಗುದ ಕನಸುಗಳು ನೆನಪಾಗಿ ತುಂಟ ನಗೆಯೊಂದು ತುಟಿಯಂಚಲಿ ಮೂಡಬಹುದು,ಯಾರದೋ ನೆನಪು ಧಿಗ್ಗನೆ ಎದ್ದು ಬಂದು ನಕ್ಷತ್ರಗಳು ಮಸುಕಾಗಬಹುದು. ಕೆನ್ನೆ ಮೇಲಿಳಿದ ಕಣ್ಣೀರ ಹನಿಯಲ್ಲಿ ಚುಕ್ಕಿಯೊಂದು ಪ್ರತಿಬಿಂಬವ ನೋಡಿ ನಕ್ಕಂತೆ ಅನಿಸಬಹುದು. ಜಾತ್ರೆ ಮುಗಿಸಿ ಭೂಮಿಗಿಳಿದು ಬಂದಾಗ ನಿಮ್ಮ ಬೇಸರದ ಭಾವವೆಲ್ಲ ಕಳೆದು ಮುಗುಳ್ನಗೆಯೊಂದು ಮೂಡದಿದ್ದರೆ ಆಗ ಹೇಳಿ ..!