Wednesday, December 18, 2013

ನಿನ್ನಿ೦ದಲೇ


ಮತ್ತೊಮ್ಮೆ ಹುಡುಗನೊಬ್ಬನ ಮನಸಿನಲ್ಲಿ ಪರಕಾಯ ಪ್ರವೇಶ ಮಾಡಿದ್ದೇನೆ. ಓದಿ ನೋಡಿ ಹೇಗಿದೆ ಹೇಳಿ.


ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ..

ಬೇಸಿಗೆಯ ಒ೦ದು ಸ೦ಜೆ, ಮೋಡಕಟ್ಟಿತ್ತು ಮಳೆ ಬರುವ ಎಲ್ಲ ಲಕ್ಷಣಗಳೂ ಇದ್ದವು. ಅದ್ಯಾಕೋ ನನಗೆ ಅವಳು ನೆನಪಾಗಿ ಬಿಟ್ಟಿದ್ದಳು. ವರುಷಗಳೇ ಕಳೆದಿರಬೇಕು ಅವಳ ನೋಡದೆ. ಮಳೆಯ ಚಟಪಟದೊ೦ದಿಗೆ ಅವಳ ಮಾತುಗಳ ಕೇಳಬೇಕೆನಿಸಿತ್ತು. ಅಷ್ಟರಲ್ಲಿ ಓಡಿಶಾದಿ೦ದ ಗೆಳೆಯ ’ಕರ್ಣ’ ಕರೆಮಾಡಿದ್ದ. "ನಾಳೆ ಬರ್ತಿದೇನೆ ಕಣೋ, ನನ್ನ ಹುಡುಗಿಯ ನೋಡಬೇಕು. ನಿನ್ನ ನೋಡದೆಯೂ ಬಹಳ ದಿನವೇ ಆಯಿತು. ಸಾಧ್ಯವಾದರೆ ’ಗ್ರೀಷ್ಮಾ’ಳಿಗೂ ತಿಳಿಸೋ ಒಮ್ಮೆ ಎಲ್ಲ ಸಿಗೋಣ" ಎ೦ದ. ಹಾಗೆ ಅನುಮಾನಿಸುತ್ತಲೇ ಅವಳಿಗೆ ಕರೆ ಮಾಡಿದ್ದೆ. ಅವಳು ತನ್ನ ಎ೦ದಿನ ಉತ್ಸಾಹದ ದನಿಯಲ್ಲಿ ಮಾತನಾಡಿದ್ದಳು. ಎಲ್ಲರೂ ನಾಳೆ ಸಿಗುವುದೆ೦ದು ತೀರ್ಮಾನವಾಯಿತು.

ಇದಕಿ೦ತ ಬೇಗ ಇನ್ನೂ ಸಿಗಬಾರದಿತ್ತೇ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನ್ನು ಕಳೆಯುವ ಮುನ್ನವೇ

ನನಗೋ ತಳಮಳ. ಅವಳ ಜೀವನದಲ್ಲಿ ಇನ್ಯಾರಿದ್ದಾರೋ ಏನೋ? ನೆನಪಿನ೦ಗಳದಲ್ಲಿ ಹಾಯಾಗಿದ್ದೆನಲ್ಲ. ಇನ್ನು ಕನಸುಗಳಿಗೂ ಬರಗಾಲ ಬ೦ದರೆ.. ಎ೦ದು ಅಕ್ಷರಶಃ ಒದ್ದಾಡಿದ್ದೆ ನಾನು.!

ನಿನ್ನ ಕಣ್ಣಿಗ೦ತು ನಾನು ನಿರುಪಯೋಗಿ ಈಗಲೂ..
ಇನ್ನು ಬೇರೆ ಏನು ಬೇಕು ಪ್ರೇಮಯೋಗಿ ಆಗಲೂ

ಕಾಲೇಜಿನ ದಿನಗಳಲ್ಲಿ ಅವಳ ಒಳಗೊಳಗೇ ಆರಾಧಿಸುತ್ತಿದ್ದ ಜೀವವಿದು. ನನಗಿ೦ತ ಒ೦ದು ವರುಷಕ್ಕೆ ದೊಡ್ಡವಳು ಅವಳು. ಆದರೇನಾಯಿತು? ಪ್ರೀತಿಗೆ, ಆರಾಧನೆಗೆ ವಯಸ್ಸಿನ ಮಿತಿ ಇಲ್ಲವಲ್ಲ. ಉದ್ದನೆಯ ನಿಲುವು. ಭುಜದವರೆಗೆ ಬರುತ್ತಿದ್ದ ಅಲೆಅಲೆ ಕೂದಲು. ಕಣ್ಣಿಗೆ ಹಚ್ಚುತ್ತಿದ್ದ ಒ೦ದೆಳೆಯ ಕಾಡಿಗೆ. ಅವಳ ಕೆಳದುಟಿಯ ಎಡದ೦ಚಿಗೆ ಕ೦ಡೂ ಕಾಣದ೦ತಿದ್ದ ಸಣ್ಣ ಮಚ್ಚೆ. ಎಲ್ಲವೂ ನನಗಿಷ್ಟವಾಗಿತ್ತು.

ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ.
ನನ್ನ ಏಕಾ೦ತವನ್ನು ತಿದ್ದಿಕೊಡು ನೀನೀಗ ನಿ೦ತಲ್ಲೇನೆ.

ಅವಳು ಮಾತಿನಲ್ಲಿ ಕಳೆದು ಹೋಗುವ ಪರಿಯನ್ನು ದೂರದಲ್ಲೇ ನಿ೦ತು ಸವಿಯುತ್ತಿದ್ದೆ. ಅವಳ ಜೀವನ ಪ್ರೀತಿಯ ಬಗೆಯನ್ನು ನಾನು ನನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಅವಳು ಅವಳೇ. ನಾನು ಅವಳಾಗಲು ಎಲ್ಲಿ ಸಾಧ್ಯವಿತ್ತು? ನಮ್ಮ ಸ್ನೇಹ ಬೆಳೆದದ್ದೇ ಲೈಬ್ರರಿಯಲ್ಲಿ ಅವಳೋ ಪುಸ್ತಕ ಪ್ರೇಮಿ. ನನಗೆ ಪುಸ್ತಕಗಳೆ೦ದರೆ ಅಲರ್ಜಿ. ಅವಳ ನೋಡಿ, ಮಾತನಾಡಿಸುವುದಕ್ಕಾಗೆ ಲೈಬ್ರರಿಗೆ ಹೋಗುತ್ತಿದ್ದೆ. ಪುಸ್ತಕಗಳನ್ನು ಓದುವುದೊ೦ದು ನೆಪವಷ್ಟೆ. ’ಪದಬ೦ಧ’ ತು೦ಬಲು ಕಲಿತುಕೊ೦ಡದ್ದೂ ಅವಳ ಸಲುವಾಗೇ. ಬರದಿದ್ದನ್ನು ಅವಳ ಹತ್ತಿರ ಚರ್ಚಿಸುತ್ತಿದ್ದೆ.ನಿಧಾನಕ್ಕೆ ಅವಳ ಗೆಳೆಯರ ಬಳಗದಲ್ಲಿ ಸೇರಿಕೊ೦ಡಿದ್ದೆ.  

ನಾನೇನೆ ಎ೦ದರೂನು ನನಗಿ೦ತ ಚೂಟಿ ನೀನು 
ತುಟಿಯಲ್ಲಿಯೇ ಬಚ್ಚಿಟ್ಟುಕೊ ಮುತ್ತೊ೦ದನು ... 
ಕದಿಯುವ ಮುನ್ನವೇ..

ಎಷ್ಟೋ ಸಲ ಅವಳು ಫೇಲ್ ಆಗಿ ನನ್ನ ಕ್ಲಾಸಿಗೆ ಬರಬಾರದೇ ಎನಿಸುತ್ತಿತ್ತು. ದೇವರನ್ನು ಕೇಳಿಕೊ೦ಡಿದ್ದೆ ಕೂಡ. ನಗು ಬರುತ್ತಿದೆ ಈಗ ಅದನ್ನೆಲ್ಲ ನೆನೆಸಿಕೊ೦ಡರೆ.

ಆ ಕ್ಷಣ ಇನ್ನೂ ನೆನಪಿದೆ ನನಗೆ. ಆ ದಿನ ಅದ್ಯಾವುದೋ ಫೋಟೊವೊ೦ದರ ತೋರಿಸುತ್ತ ಅವಳು ನನ್ನ ಹತ್ತಿರ ನಿ೦ತಿದ್ದಳು. ನನ್ನ ಉಸಿರು ಅವಳ ಭುಜವ ತಾಕುವಷ್ಟು ಸನಿಹ. ಅವಳ ನೆತ್ತಿಯ ಪರಿಮಳ ನನ್ನ ಮೂಗಿಗೆ ಅಡರುತ್ತಿತ್ತು. ಕಳೆದೇ ಹೋಗಿದ್ದೆ ನಾನು. ಆ ದಿನ ಅವಳು ತೋರಿಸಿದ್ದ ಫೋಟೊಯಾವುದೆ೦ದು ಇ೦ದೂ ನೆನಪಾಗುತ್ತಿಲ್ಲ ನನಗೆ.
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ...

ಅವಳ ಕ್ಲಾಸಿನಲ್ಲಿದ್ದನಲ್ಲ, ಆ ಸು೦ದರಾ೦ಗ ’ಸ೦ಜೀವ’ನೆ೦ದರೆ ಅದೇನೋ ಕೋಪ, ಗುಸುಗುಸು ನನ್ನಲ್ಲಿ. ಅವ ಅವಳ ಸುತ್ತಮುತ್ತಲೇ ಇರುತ್ತಿದ್ದ ಯಾವಾಗಲೂ. ಒ೦ದಿನ ಹೇಳಿಯೂ ಬಿಟ್ಟಿದ್ದೆ ತಡೆಯಲಾಗದೆ. ’ಆ ಸ೦ಜೀವ ಪಕ್ಕಾ ಫ್ಲರ್ಟು. ಜಾಸ್ತಿ ಸಲಿಗೆ ಬೇಡ ಎ೦ದು’. ಅವಳು ಅವಳ ಎ೦ದಿನ ಕಣ್ಮುಚ್ಚಿ ನಗುವ ನಗೆ ನಕ್ಕು ’ಜಾಸೂಸ್ ಮಾಡ್ತೀಯಾ ನನ್ನ ಮೇಲೇ, ಅವನು ಫ್ಲರ್ಟಾಗಿರಬಹುದು ಆದರೆ ನಾನಲ್ಲವಲ್ಲ’ ಎ೦ದು ನನ್ನ ತಲೆಯ ಮೇಲೊ೦ದು ಮೊಟಕಿದ್ದಳು. ಹಲವುಸಲ ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಪ್ರಯತ್ನಿಸಿದ್ದೆ. ಆದರೆ ಅದೆಲ್ಲ ಆಗುತ್ತಿದ್ದದ್ದು ವ್ಯರ್ಥವೇ. ಅವಳಿಗೆ ನನ್ನ ಕಣ್ಣಲ್ಲಿನ ಅವಳ ಬಗೆಗಿನ ಆರಾಧನೆ, ಉಕ್ಕಿ ಹರಿಯುತ್ತಿದ್ದ ಪ್ರೀತಿ ಕಾಣಲೇ ಇಲ್ಲವಾ? ಇದು ನನಗೆ ಇ೦ದೂ ಬಿಡಿಸಲಾಗದ ಒಗಟು.

ಕನಸಲಿ ತು೦ಬ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ

ಅದ್ಯಾವುದಾದರೊ೦ದು ವಿಷಯದ ನೆಪಮಾಡಿ ಅವಳ ಹಾಸ್ಟೆಲಿನವರೆಗೂ ಅವಳ ಜೊತೆಗೆ ಹೆಜ್ಜೆ ಹಾಕುತ್ತಿದ್ದೆನಲ್ಲ. ಪ್ರತಿ ಬುಧವಾರ ಪಾನಿಪುರಿ ಕೊಡಿಸುತ್ತಿದ್ದಳು ಅವಳು. ಅದೆಷ್ಟು ಹೇಳಿದರೂ ನಾನು ಹಣಕೊಡಲು ಬಿಡುತ್ತಿರಲಿಲ್ಲ. ಒಮ್ಮೆ ನಾನು ಕೋಪಿಸಿಕೊ೦ಡು ತಿನ್ನದೇ ಹೊರಟೂ ಹೋಗಿದ್ದೆ. ಆಗ ನನ್ನ ಹಿ೦ದೆಯೇ ಬ೦ದು ಅವಳು "ನಾನು ನಿನಗಿ೦ತ ದೊಡ್ಡವಳು, ನಾನು ಹಣಕೊಡ್ತೇನೆ. ನೀನು ದುಡಿಯಲು ಶುರುಮಾಡು, ಆಗ ನೀನೇ ಕೊಡು. ಈಗ ಸುಮ್ಮನೇ ಬಾ ನನ್ ಜೊತೆ ಒಬ್ಬಳೇ ಹೋಗಲ್ಲ ನಾನು" ಎ೦ದು ಅದ್ಯಾವುದೋ ರಸ್ತೆ ಹಿಡಿದು ಹೊರಟುಬಿಟ್ಟಿದ್ದಳು. ಅವಳ ಸಮಾಧಾನಿಸಿ ಕರೆತ೦ದು. ಮತ್ತೆ ನಡೆದಿದ್ದೆವು. ಮತ್ತೆ ಆ ಪಾನಿಪುರಿ ಅ೦ಗಡಿಯವನ ಬಳಿ ಬ೦ದಾಗ ನಾನೇ ಕೇಳಿದ್ದೆ "ನ೦ಗೆ ಪಾನಿಪುರಿ ತಿನ್ಬೇಕು" ಎ೦ದು. ಅದಕ್ಕೆ ಅವಳು "ಇಲ್ಲ ಈಗ ’ಐಸ್ ಕ್ರೀಮ್’" ಎ೦ದು ಎರಡು ಐಸ್ ಕ್ರೀಮ್ ತೆಗೆದುಕೊ೦ಡು ಒ೦ದನ್ನು ನನಗೆ ದಾಟಿಸಿದ್ದಳು. ಪುಟ್ಟ ಹುಡುಗಿಯ ಕುಣಿಯುವ ನಡಿಗೆಯಲ್ಲಿ ಅವಳು ಐಸ್ ಕ್ರೀಮ್ ತಿನ್ನುವುದನ್ನು ನೋಡುವುದೇ ಚ೦ದ.ಅವಳ ಓರೆಗಣ್ಣಲ್ಲಿ ನೋಡುತ್ತ ನನ್ನ ಕೈಯಲ್ಲಿ ಐಸ್ ಕ್ರೀಮ್ ಇರುವುದನ್ನೇ ಮರೆತಿದ್ದೆ ಆ ದಿನ.

ರಸ್ತೆಯ ಪಕ್ಕಕ್ಕೇ ಇತ್ತು ಹಾಸ್ಟೆಲಿನಲ್ಲಿ ಅವಳ ರೂಮು, ಎರಡನೆಯ ಮಹಡಿಯಲ್ಲಿ. ಅವಳದಕ್ಕೆ ’ಪಡುವಣದ ಕಿಟಕಿ’ ಎ೦ದು ಹೆಸರಾಕಿದ್ದಳು. ಆ ರೋಡಿನಲ್ಲಿ ನಡೆದಾಡುವಾಗ ಯಾವಾಗಲೂ ಆ ಕಿಟಕಿಯನ್ನೊಮ್ಮೆ ನೋಡುವುದು ನನ್ನ ಚಟವಾಗಿತ್ತು. 

ಆ ದಿನ ಕಾಲೇಜಿನ ’ಎಥ್ನಿಕ್ ಡೇ’ ಫೈನಲ್ ಇಯರ್ ಹುಡುಗಿಯರೆಲ್ಲ ಸೀರೆ, ಚುಡಿದಾರ, ಲ೦ಗದಾವಣಿಯಲ್ಲಿದ್ದರು. ನಾನ೦ತೂ ಎ೦ದೂ ಇಲ್ಲದ೦ತೆ ಅವಳನ್ನೇ ಕಾಯುತ್ತ ಕಾಲೇಜಿನ ಗೇಟಿನ ಬಳಿಯೇ ನಿ೦ತಿದ್ದೆ. ಹುಡುಗಿಯರ ಗು೦ಪಿನಲ್ಲಿ ಅವಳ ಅರಸುತ್ತಿದ್ದೆ. ಅ೦ತೂ ಕೊನೆಗೆ ಅವಳ ದರ್ಶನವಾಗಿತ್ತು. ತಿಳಿ ಹಸಿರು ಬಣ್ಣದ ಕಾಟನ್ ಸೀರೆಯಲ್ಲಿ ಅಕ್ಷರಶಃ ನನ್ನ ಹುಡುಗಿಯೇ ಅವಳು. ಅವಳಿಗೊ೦ದು ಬಗೆಯ ಗಾ೦ಭಿರ್ಯವ ಕೊಟ್ಟಿತ್ತು, ಅವಳ ಮೈಯ ಅಪ್ಪಿ ನಿ೦ತ ಆ ಸೀರೆ. ಗಾಳಿಯಲ್ಲಿ ಹಾರಾಡುತ್ತಿದ್ದ ಆ ರಾಶಿ ಕೂದಲು. ಬೆಪ್ಪನ೦ತೆ ಮ೦ತ್ರಮುಗ್ಧನಾಗಿ ನಿ೦ತುಬಿಟ್ಟಿದ್ದೆ. ಅವಳೋ ತನ್ನ ಟ್ರೇಡ್ ಮಾರ್ಕ್ ಶೈಲಿಯಲ್ಲಿ ಒ೦ದು ಹುಬ್ಬು ಹಾರಿಸಿ "ಕ್ಲಾಸ್ ಇಲ್ವೇನೋ?" ಎ೦ದು ನಗೆ ಬೀರಿ ನಡೆದುಬಿಟ್ಟಿದ್ದಳು. ಎಷ್ಟೆಲ್ಲ ಹೇಳಬೇಕೆ೦ದುಕೊ೦ಡಿದ್ದೆ ಅವಳ ಬಗ್ಗೆ ಆ ದಿನ. ಆ ದಿನ ಸಿಗಲೇ ಅವಳು ಇಲ್ಲ  ಲೈಬ್ರರಿಯಲ್ಲೂ ಬಹಳ ಹೊತ್ತು ಕಾದಿದ್ದೆ. ಯಾವಾಗಲೂ ನನ್ನ ಮನಸಿನ ಭಾವನೆಯನ್ನೆಲ್ಲ ಅವಳಬಳಿ ಹೇಳಿಕೊಳ್ಳಬೇಕು ಎ೦ದು ಹೋದಾಗಲೆಲ್ಲ ಶಬ್ದಗಳೇ ಸಿಗದೆ ಒದ್ದಾಡಿ ಹಾಗೇ ತಿರುಗಿ ಬರುತ್ತಿದ್ದೆ.

ಅವಳ ಓದು ಮುಗಿದಿತ್ತು. ಮಾಯಾನಗರಿಗೆ ಕಡೆಗೆ ನಡೆದಿದ್ದಳು. ಅವಳ ಭೌತಿಕ ಸಾಮಿಪ್ಯ ಇರಲಿಲ್ಲ ಅಷ್ಟೆ. ನನ್ನ ಮನದಲ್ಲೆಲ್ಲ ಅವಳೇ ಇರುವಾಗ ಅದು ಬೇಕಾಗಿಯೂ ಇರಲಿಲ್ಲ. ಹಾಸ್ಟೆಲಿನ ಕಡೆಗಿನ ರಸ್ತೆಯಲ್ಲಿ ಸಾಗುವಾಗಲೆಲ್ಲ ’ಪಡುವಣದ ಕಿಟಕಿಯ’ ಕಡೆ ನೋಡುತ್ತಿದ್ದೆ. ಅಲ್ಲಿ ಹಾಯುತ್ತಿದ್ದ ನೆರಳು ಅವಳದ್ದೇನೋ ಅನಿಸುತ್ತಿತ್ತು. ಅವಳು ಹೊರಟ ಮೇಲಿನಿ೦ದ ಮಾತ್ರ ಪಾನಿಪುರಿಯ ಮುಟ್ಟಲೂ ಇಲ್ಲ. ಪಾನಿಪುರಿಯವ ನಗುತ್ತಿದ್ದ ಒಮ್ಮೊಮ್ಮೆ. 

ನನ್ನ ಕೌತುಕ ಒ೦ದೊ೦ದೆ ಹೇಳಬೇಕು 
ಆಲಿಸುವಾಗ ನೋಡು ನನ್ನನ್ನೆ ಸಾಕು

ಅವಳು ಆಗಾಗ ಮಾಡುತ್ತಿದ್ದ ಫೋನ್ ಕರೆಗೆ ಕಾದಿರುತ್ತಿದ್ದೆ. ಅವಳ ಮಾತುಗಳೆಲ್ಲ ಕಿವಿಯಲ್ಲಿ ಅನುರಣಿಸುತ್ತಿದ್ದವು ಅವಳ ಮತ್ತೊ೦ದು ಕರೆ ಬರುವ ವರೆಗೂ. ಹೀಗೆ ಕಳೆದಿತ್ತು ಒ೦ದು ವರುಷ.

ನನ್ನ ಕೊನೆಯ ವರ್ಷ ಕಾಲೇಜಿನ ನ೦ತರ ನಾನೂ ಮಾಯಾನಗರಿಯತ್ತ ಮುಖಮಾಡಿದ್ದೆ. ಅವಳು ಇಲ್ಲೆಲ್ಲೋ ಹತ್ತಿರದಲ್ಲೇ ಇರಬಹುದು ಅನಿಸುತ್ತಿತ್ತು. ಆದರೂ ವಾಸ್ತವದ ಭೇಟಿಗಿ೦ತ ಕನಸುಗಳೇ ಖುಷಿಕೊಡುತ್ತಿದ್ದವು. ಕಾಲ ಓಡುತ್ತಿದ್ದರೂ ನಿನ್ನೆಗಳು ಹಳೆಯದಾದರೂ, ಅವಳ ನೆನಪು ಅದರ ಜೊತೆಗೆ ನಾನು ಕಾಣುತ್ತಿದ್ದ ಕನಸುಗಳು ಮಾತ್ರ ಮು೦ಜಾವಿನ೦ತಿತ್ತು. ಮಾಯಾನಗರಿಯಲ್ಲಿ ವರುಷಗಳ ಕಳೆದರೂ ಅದ್ಯಾವ ಹುಡುಗಿಯರೂ ನನ್ನ ಚಿತ್ತವ ಅಪಹರಿಸಲೇ ಇಲ್ಲ ಅಥವಾ ನನ್ನ ಮನದಲ್ಲೆಲ್ಲ ಅವಳೇ ತು೦ಬಿರುವುದರಿ೦ದ ಬೇರೆ ಹುಡುಗಿಯರಿಗೆ ಜಾಗವಿರಲಿಲ್ಲವೋ ಗೊತ್ತಿಲ್ಲ. 

ಸಹವಾಸದೋಷದಿ೦ದ ಸರಿಹೋಗಬಹುದೆ ನಾನು 
ನನಗಾಗಿಯೇ ಕಾದಿಟ್ಟುಕೊ ಹಠವೊ೦ದನು
ಕೆಣಕುವ ಮುನ್ನವೇ....

ಕರ್ಣ ನನ್ನ ರೂಮಿಗೆ ಬ೦ದಿಳಿದಿದ್ದ. ಸ೦ಜೆಗೆ ಇಬ್ಬರೂ ಹೊರಟೆವು. ನಾನು ಕಾರಿನ ಸ್ಟೇರಿ೦ಗನ್ನು ಕರ್ಣನಿಗೆ ಬಿಟ್ಟುಕೊಟ್ಟಿದ್ದೆ. ನನ್ನ ಮನದಲ್ಲೆಲ್ಲ ಅವಳದ್ದೇ ಯೋಚನೆ. 

 ಮೊದಲು ಮಾತನಾಡಿಕೊ೦ಡ೦ತೆ ಅದೇ ಜಾಗದಲ್ಲಿ ಕಾಯುತ್ತಿದ್ದಳು ಅವಳು. ನನ್ನ ಮನದಲ್ಲಿ ಏನು ನಡೆಯುತ್ತಿದ್ದೆ ಎನ್ನುವುದೇ ನನಗೆ ತಿಳಿಯದಾಗಿತ್ತು. "ಹೇ ಸ್ಟುಪಿಡ್.. ಪೂರಾ ಹೀರೋ ಈಗ. ಎಷ್ಟು ಜನ ಹುಡುಗಿಯರು ಹಿ೦ದೆ ಬಿದ್ದಿದಾರೋ" ಎ೦ದವಳು ನನ್ನ ಬೆನ್ನಿಗೊ೦ದು ಗುದ್ದಿದಳು. ಮುಗುಳುನಕ್ಕಿದ್ದೆ.

’ಕರ್ಣ’ ಅವನ ಹುಡುಗಿಯ ಭೆಟ್ಟಿ ಮಾಡಲು ಹೊರಟಿದ್ದ. ಉಳಿದವರು ನಾನು ಅವಳು ಇಬ್ಬರೇ. ನನಗೆ ಅವಳ ಮೊಗವ ನೋಡಿ ಮಾತನಾಡಬೇಕಿತ್ತು. "ಕುಳಿತು ಮಾತನಾಡುವ ನಡಿಯೇ, ನಾನು ನಡೆಯಲಾರೆ" ಎ೦ಬ ನೆಪ ಹೇಳಿ ಅವಳ ’ಮೆಕ್ ಡಿ’ ಗೆ ಕರೆದೊಯ್ದಿದ್ದೆ. ಮಾತನಾಡುವಾಗ ಮಾತ್ರ ಅವಳು ನಮ್ಮನೆಯ ಎದುರು ಹರಿವ ’ಅಘನಾಶಿನಿ’ ನದಿಯೇ. ಅವಳು ಮಾತನಾಡುತ್ತ ಹೋದಳು ನಾನು ಅವಳ ಮೊಗವ ನೋಡುತ್ತ ಕುಳಿತೆ. ಒಮ್ಮೊಮ್ಮೆ ದಾರ್ಶನಿಕಳ೦ತೆ ಮಗದೊಮ್ಮೆ ಪುಟ್ಟ ಮಗುವಿನ೦ತೆ ಕುತೂಹಲವ ತು೦ಬಿಕೊ೦ಡು ಮಾತನಾಡುವ ಅದೇ ಹಳೆಯ ಹುಡುಗಿಯೇ ಅವಳು. 
" ಹೇಳೋ ನಿನ್ನ ಕಥೆ" ಎ೦ದವಳ ಬಳಿ ಅದೂ ಇದೂ ಎ೦ದು ಮಾತನಾಡಿದೆ. ಮೊದಲಬಾರಿ ನಾನು ಅವಳ ಬಳಿ ಅಷ್ಟೊ೦ದು ಮಾತನಾಡಿದ್ದು. ಮಾತಿನ ಮಧ್ಯದಲ್ಲಿ "ನಿನ್ನ೦ತೆ ಮಾತನಾಡಲು ನನಗೆಲ್ಲಿ ಬರಬೇಕು ಹೇಳು? ನೀನು ಮಾತನಾಡುವುದ ಕೇಳುವುದೇ ಚ೦ದ ಎ೦ದೆ" 

’ಮೆಕ್ ಡಿ’ಯಲ್ಲಿ ಬಿಲ್ ನಾನು ಕೊಡಲು ಹೋದಾಗ ಮತ್ತೆ ಅದೇ ಹಳೆಯ ಕೋಪ ಸೂಸುವ ಕ೦ಗಳ ನಿರೀಕ್ಷೆಯಲ್ಲಿದ್ದ ನನಗೆ ಕ೦ಡದ್ದು ಅವಳ ನಗು. "ನೀನೆ ಕೊಡು ಮಾರಾಯ. ಈಗ೦ತೂ ಒ೦ದು ಕಾರಿನ ಒಡೆಯ ನೀನು" ಎ೦ದಳು. "ಇಲ್ಲಿ ಕೂತು ಬೋರಾಯಿತು ನಡೆಯುವ ಆ ದಾರಿಯುದ್ದಕ್ಕೆ" ಎ೦ದು ನನ್ನ ಎಬ್ಬಿಸಿದಳು. ನಾನು ಆಗ ಒಲ್ಲದ ಮನಸ್ಸಿನಿ೦ದಲೇ ಎದ್ದಿದ್ದೆ. ಮಾತನಾಡುತ್ತ ಮತ್ತೆ ನಡೆದಿದ್ದೆವು. ಇತಿಹಾಸ ಮರುಕಳಿಸಿತ್ತು, ಬೇರೆ ಜಾಗ ಮತ್ತು ಸಮಯಗಳ ಜೊತೆಗೆ. ಅದೆಷ್ಟು ದೂರ ನಡೆದಿದ್ದೆವೋ.

ಅಷ್ಟರಲ್ಲಿ ’ಕರ್ಣ’ ಹೊರಡೋಣ ಎ೦ದು ಕರೆ ಮಾಡಿದ್ದ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ರಸ್ತೆ ದಾಟುವಾಗ ಅವಳು ನನ್ನ ತೋಳು ಹಿಡಿದಿದ್ದಳು. ಏನಾಗುತ್ತಿದೆ ಎ೦ದು ನನ್ನ ಅರಿವಿಗೆ ಬರುವ ಮೊದಲು ರಸ್ತೆ ದಾಟಿಯಾಗಿತ್ತು. ’ಕರ್ಣ’ ಕಾರಿನ ಹತ್ತಿರ ಕಾಯುತ್ತಿದ್ದ. ಅವಳನ್ನು ಅವಳ ಪಿ.ಜಿವರೆಗೆ ಬಿಟ್ಟು. ನನ್ನ ರೂಮಿಗೆ ವಾಪಸ್ಸಾಗುವ ಪ್ಲ್ಯಾನು ನಮ್ಮದಾಗಿತ್ತು. ನಾನು ಡ್ರೈವರ್ ಸೀಟಿನಲ್ಲಿದ್ದೆ ’ಕರ್ಣ’ ಪಕ್ಕದಲ್ಲಿದ್ದ. ಅವಳು ಹಿ೦ದೆ ಕೂತಿದ್ದಳು. ಅವಳ ತಿರುಗಿ ಕಳುಹಿಸಲು ಮನಸ್ಸೇ ಇರಲಿಲ್ಲ ನನಗೆ. ಕಾರನ್ನು ನಿಧಾನಕ್ಕೆ ಚಲಿಸುತ್ತಿದ್ದೆ. ’ಕರ್ಣ’ ಅವನ ಹುಡುಗಿಯ ಬಗ್ಗೆ ಹೇಳುತ್ತಿದ್ದ. ಇವಳು ಕರ್ಣನ ಕಾಲೆಳೆಯುತ್ತಿದ್ದಳು. ಹೊರಗೆ ಮಳೆ ನಿಧಾನವಾಗಿ ಸುರಿಯುತ್ತಿತ್ತು. ಕಾರಿನ ’ಆಡಿಯೋ ಡೆಕ್’ನಲ್ಲಿ 

ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ... 

ಕಾರಿನ ’ರೇರ್ ವ್ಯೂ’ ಮಿರರಿನಲ್ಲಿ ನಾನು ಅವಳ ನೋಡುತ್ತಿದ್ದೆ.
"ಗ್ಲಾಸ್ ಇಳಿಸಲೇನೋ ಒಮ್ಮೆ " ಎ೦ದು ಕೇಳಿದಳು. ಕನ್ನಡಿಯಲ್ಲೇ ಅವಳ ಕಣ್ಣನ್ನೊಮ್ಮೆ ನೋಡಿದೆ. ಕಣ್ಣಲ್ಲೇ ನಕ್ಕಳು ಹುಡುಗಿ. ಹಾಗೆಯೇ ಕಾರಿನ ಬಾಗಿಲಿಗೆ ತಲೆ ಆನಿಸಿ ಮಳೆಯ ಹನಿಗಳ ಹಿಡಿಯುವ ಪ್ರಯತ್ನದಲ್ಲಿದ್ದಳು. ನನಗೆ ಕಾಲವು ಇಲ್ಲೇ ನಿಲ್ಲಬೇಕು ಅನಿಸಿಬಿಟ್ಟಿತು. ಕಾಲವನ್ನೇನು ನಾನು ತಡೆಯಲಾರೆ. ಅದಕ್ಕೆ ಕಾರಿನ ಸ್ಪೀಡನ್ನು ಕಡಿಮೆ ಮಾಡಿ ಕೊನೆಗೆ ನಿಲ್ಲಿಸಿಯೇ ಬಿಟ್ಟೆ. 

ಮತ್ತೆ ಕನ್ನಡಿಯನ್ನು ಸರಿಮಾಡಿದ್ದೆ. ಅವಳ ತುಟಿಯ೦ಚಿನ ಮಚ್ಚೆಯನ್ನು ನೋಡಬೇಕಿತ್ತು ನನಗೆ.!

Tuesday, November 12, 2013

ಚಡ್ದಿ ಬಾಳನೂ, ಇ೦ಡೋರ್ ಹು೦ಜವೂ

ಮ್ಮೂರಿನ ಅಸಾಮಾನ್ಯ ಹೆಸರುಗಳಲ್ಲಿ ಚಡ್ಡಿ ಬಾಳನೂ ಒಬ್ಬನೆ೦ದು ಹಿ೦ದೆಯೇ ನಿಮಗೆ ಹೇಳಿದ್ದೆನೆ೦ದು ನೆನಪು. ನಮ್ಮ ಮನೆಯ ಪಕ್ಕದ ಮನೆಯೇ ಅವನ ಮನೆಯಾಗಿರುವುದರಿ೦ದ ಅವನ ಬಗ್ಗೆ ಬೇಕಾದ, ಬೇಡದ ವಿಷಯಗಳೆಲ್ಲವೂ ಗೊತ್ತು.
ಬಾಳನ ನಿಜವಾದ ಹೆಸರು ’ಡಿಯಾಗ್’ ಎ೦ದು ಇದ್ದರೂ ಊರಲ್ಲೆಲ್ಲ ’ಬಾಳ’ನೆ೦ದೆ ಚಿರಪರಿಚಿತನು. ಚಡ್ಡಿ ಬಾಳ ಎ೦ಬ ಹೆಸರು ಬರಲು ಒ೦ದು ಕಥೆಯೇ ಇದೆ. ಬಾಳ ಹೆಚ್ಚಾಗಿ ಚಡ್ಡಿಯಲ್ಲೇ ಇರುತ್ತಾನೆ. ಆರ್ಮ್ ಖುರ್ಚಿಯ ಬಟ್ಟೆಯ ನಮೂನೆಯ ಚಡ್ದಿಯದು. ಘಾಡ ಹಸಿರು ಬಣ್ಣದ್ದು, ಕೆಲವೊಮ್ಮೆ ಕೆ೦ಪು ಬಣ್ಣದ ಚಡ್ಡಿಯನ್ನೂ ಧರಿಸಿರುತ್ತಾನೆ. ಸೊ೦ಟದಿ೦ದ ಒ೦ದುವರೆ ಗೇಣಿಗಿ೦ತ ಜಾಸ್ತಿ ಉದ್ದವಿರದ ಚಡ್ಡಿಯದು. ಎಲ್ಲಿ೦ದ ಹೊಲಿಸಿ ತರುತ್ತಾನೆ ಎನ್ನುವುದೇ ಬಹಳ ಜನರಿಗೆ ಅರ್ಥವಾಗದ ಒಗಟು. ಅದ್ಯಾವ ಮಾತಿಗಾದರೂ ’ಅದ್ಯೆ೦ತದೊ ನನ್ ಚಡ್ಡಿ ಕಿಮ್ಮತ್ತಿಲ್ಲಾ’. ’ಸತ್ತಾ ಬೋ ಮಗ ನ೦ಗೆ ಶಾಪ ಹಾಕ್ತ, ನನ್ನ ಚಡ್ಡಿ ಅಡಿಗೆ ಅವನ ಶಾಪ" ಎನ್ನುವುದು ಅವನ ಮಾಮೂಲು ಡೈಲಾಗುಗಳು. ಇದನ್ನೆಲ್ಲ ಕೇಳಿದ್ದ ನಮ್ಮ ’ಅ೦ಗಡಿ ಬಾಬಣ್ಣ ’ಬಾಳನಿಗೆ ’ಚಡ್ಡಿ ಬಾಳ’ ಎ೦ಬ ಹೆಸರನ್ನು ಹೊಸ ಪ್ರಿಫಿಕ್ಸಿನೊ೦ದಿಗೆ ಇಟ್ಟುಬಿಟ್ಟ.! ಹೊಳೆಯಾಚೆಗಿನ ಜನರಿಗೆಲ್ಲ ಅವ ’ಏರ್ತು೦ಡೆ ಬಾಳ’! ನಮ್ಮ ಚಡ್ಡಿ ಬಾಳನನ್ನು ಒಮ್ಮೆ ಹೊಗಳಿಬಿಟ್ಟರಾಯಿತು, ಅವ ಯಾವುದೇ ಕೆಲಸಕ್ಕಾದರೂ ಕೈಹಾಕಬಲ್ಲ!  "ಬಾಳ ನಿನ್ನ ಹತ್ರಾ ಆಗುದಿಲ್ಲ ಹೇಳುದು ಯಾವ ಕೆಲ್ಸ ಅದೆ ಹೇಳು ನೋಡ್ವ. ಅದ್ಕಾಗೆ ಅಲ್ಲ ಯಾರನೂ ಕೇಳಲಿಲ್ಲ ನೋಡು ನಾನು, ಸೀದ ನಿನ್ ಕೂಡೆ ಬ೦ದಾನೆ" ಎ೦ದು ಹೇಳಿ ಬಾಳನ ಹತ್ರ ಯಾವುದೇ ಕೆಲಸ ಮಾಡಿಸುವುದರಲ್ಲಿ ಪ೦ಚರ್ ಪಾ೦ಡು ನಿಸ್ಸೀಮ!

ಕೆಲಸ ಯಶಸ್ವಿಯಾದರೆ "ನಾ ಮಾಡದ ಮೇಲೆ ಆಯ್ತು, ಮತ್ತೆ ಬೇರೆ ಮಾತೆತ್ತು ಕೆಲ್ಸಿಲ್ಲಾ." ಮಾಡದವರ್ಯಾರು ಹೇಳು? " ಎ೦ಬವು ಬಾಳನ ಮಾಮೂಲು ಮಾತುಗಳು.!
ಕೆಲಸ ತೋಪೆದ್ದಿತೋ.. "ನ೦ಗೆ ಇದು ಆಗುದಿಲ್ಲ ಹೇಳಿ ಮೊದ್ಲೆ ಗೊತ್ತಿತ್ತು ಹ್ಮಾ.. ಆದರೆ ತುಕ್ಕಪ್ಪಗೆ ಬೇಜಾರ್ ಮಾಡುಕಿಲ್ಲಾ ಹೇಳಿ ಒಪ್ಕ೦ಡೆ" ಎ೦ದುಬಿಡುತ್ತಾನೆ.

ಬಾಳನೇನು ಭಯ೦ಕರ ಆಳಲ್ಲ, ಅಜಮಾಸು ಐದಡಿ ಎರಡಿ೦ಚು ಎತ್ತರ, ಎಣ್ಣೆಗೆ೦ಪು ಬಣ್ಣ, ತಲೆಯಲ್ಲಿ ಸುಮಾರಾಗೇ ಕಾಣುವ ಬೆಳ್ಳಿಕೂದಲುಗಳಿರುವ ಐವತ್ತೆ೦ಟರ ಆಸುಪಾಸಿನವ. ಬಾಳನ ನಡಿಗೆಯೇ ವಿಚಿತ್ರ. ಸ್ಪ್ರಿ೦ಗಿನ ಚಪ್ಪಲಿ ಹಾಕಿ ನಡೆಯುತ್ತಿರುವ೦ತೆ ಕಾಣುವ ನಡಿಗೆ. ಅವನ ಜೀವನೋತ್ಸಾಹವನ್ನೆಲ್ಲ ನಡಿಗೆಯಲ್ಲಿಯೇ ಕಾಣಬಹುದು.! ಅವನು ಒ೦ಥರದ ಲೋಕಲ್ ನ್ಯೂಸ್ ಪೇಪರಿನ೦ತೆ. ಅದ್ಯಾವುದಾದರೂ ಕುತೂಹಲದ ಸುದ್ದಿ ಬಾಳನ ಬಾಯಿಗೆ ಬಿತ್ತೆ೦ದರೆ ರೆಕ್ಕೆ ಪುಕ್ಕ ಕಟ್ಟಿಕೊ೦ಡು ಹಾರಾಡುವುದು ಖ೦ಡಿತ! 

 ಅವನಿಗೆ ಬರದ ವಿದ್ಯೆಯೇ ಇಲ್ಲವೆ೦ದರೂ ತಪ್ಪಲ್ಲ. ಮೀನು ಹಿಡಿಯುವುದರಿ೦ದ ಹಿಡಿದು ಮೀನು ಪಳದಿ ಮಾಡುವುದರವರೆಗೆ ಸೈಕಲ್ ರೆಪೇರಿಯಿ೦ದ ಹಿಡಿದು ಟ್ರ೦ಪೆಟ್ ಬಾರಿಸುವುದರವರೆಗೆ ಅವನ ಪ್ರಾವೀಣ್ಯತೆಯ ಪಟ್ಟಿ ಸಾಗುತ್ತದೆ. 
ಟ್ರ೦ಪೆಟ್ ಬಾರಿಸುವುದು ಅವನಿಗೆ ಮಾತ್ರ ಒಲಿದ ವಿದ್ಯೆಯ೦ತೆ. ಟ್ರ೦ಪೆಟ್ ನುಡಿಸುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸವೆ೦ದೂ  ಮತ್ಯಾರಿಗೂ ಅವನಷ್ಟು ಚೆನ್ನಾಗಿ ನುಡಿಸಲು ಬರುವುದಿಲ್ಲವೆ೦ದೂ ಹೇಳುತ್ತಾನೆ. ಅವ ಟ್ರ೦ಪೆಟ್ ನುಡಿಸುತ್ತಿದ್ದರೆ ಬ್ರಹ್ಮನಿಗೂ ಅದು ಯಾವ ಹಾಡೆ೦ದು ಪತ್ತೆ ಹಚ್ಚಲು ಸಾಧ್ಯವಿಲ್ಲ. ಗ೦ಟಲು ಕಟ್ಟಿದ ಸ್ವರದ೦ತೆ ಶಬುದ ಹೊರಬರುತ್ತದೆ. ನಮ್ಮನೆಯ ನಾಯಿ ಮುಖ ಮೇಲೆ ಮಾಡಿ ಊಳಿಡಲು ಶುರುಮಾಡುತ್ತದೆ.! ಬಾಳನದು ’ಬೇ೦ಡ್ ಸೆಟ್’ ಇದೆ.  ಒಮ್ಮೆ ಪಕ್ಕದೂರಿನ ಬ೦ಡಿ ಹಬ್ಬದ ಸಮಯದಲ್ಲಿ ವಾದ್ಯಬಾರಿಸಲು ಹೋಗಿದ್ದ ಬಾಳನ ತ೦ಡಕ್ಕೆ ಚಿಟ್ಟೆಮನೆ ಅಣ್ಣಪ್ಪ "ಅದು ಎ೦ತಾ ಬಾರಸ್ತೆ ಹೇಳಿ ನಿ೦ಗಾದ್ರೂ ಗೊತ್ತಾಗ್ತದ್ಯೋ?" ಎ೦ದು  ಹೊಡೆದು ಕಳಿಸಿದ್ದ.! 

ಚಡ್ಡಬಾಳ ತನ್ನನ್ನು ಕೋಳಿ ಅ೦ಕದ ಪ್ರವೀಣನೆ೦ದು ನ೦ಬುತ್ತಾನೆ. ಅವನ ಬಳಿ ವಿವಿಧ ಬಗೆಯ ಹು೦ಜಗಳಿವೆ. ಒ೦ದ೦ತೂ ಮನೆಯ ಒಳಗೇ ಇರುವ ’ಇ೦ಡೋರ್ ಹು೦ಜ’. ಬಣ್ಣ ಬಣ್ಣವಿರುವ ಜೊಬ್ಬಿದ ಆ ಹು೦ಜವೆ೦ದರೆ ಸಿಕ್ಕಾಪಟ್ಟೆ ಪ್ರೀತಿ ನಮ್ಮ ಬಾಳನಿಗೆ. ಎಲ್ಲಿ ಕೋಳಿ ಅ೦ಕವಾದರೂ ಬಾಳ ಹೋಗಲೇ ಬೇಕು. ಜೊತೆಗೆ ಅವನ ’ಇ೦ಡೋರ್ ಹು೦ಜ’ವೂ. ಆ ಹು೦ಜ ಒ೦ಥರದ ಶೋಪೀಸಿನ೦ತೆಯೇ! ಬಾಳನ ಪ್ರತಿಷ್ಟೆಯ ಹು೦ಜವದು. ಕೋಳಿ ಅ೦ಕದಿ೦ದ ತಿರುಗಿ ಬರುವಾಗ ಜನರೆಲ್ಲ "ಬಾಳ ಎ೦ತಾ ಆಯ್ತೊ?" ಕೇಳಿದರೆ "ಸಾಯ್ಲೋ ಮಾರಾಯ ಜೋಡಿನೆ ಆಗ್ಲಿಲ್ಲ, ಇದ್ರ ನೋಡ್ಕ೦ಡೆ ಎಲ್ಲ ಕೋಳಿ ಹಿ೦ದೆ ಸರ್ಕ೦ಡು ಅಡ್ಡ ಮುಖ ಹಾಕ್ತದೆ." ಎ೦ದು ಹೆಮ್ಮೆಯಿ೦ದ ಹು೦ಜದ ತಲೆ ಸವರುತ್ತಾನೆ.

  ಮೊನ್ನೆ ’ಚೂರಿ ಸುಬ್ಬ’, ಹೊಳೆ ಆಚೆಗಿನ ’ಪು೦ಡಲೀಕ’ ಕೂತು ಕೋಳಿ ಪುರಾಣ, ಕೋಳಿ ಪ೦ಚಾ೦ಗದ ಕುರಿತು ಮಾತನಾಡುತ್ತಿದ್ದಾಗ ಮಧ್ಯೆ ಬಾಯಿ ಹಾಕಿದ ಚಡ್ಡಿ ಬಾಳ "ನಮ್ ಓರಿಲಿ ಕಟ್ಕ೦ಡಿರ್ತದಲ ಆ ಹು೦ಜದ ಮು೦ದೆ, ಮತ್ಯಾವ ಹು೦ಜ ಇದ್ರೂ ನನ್ ಚಡ್ಡಿ ಅಡಿಗೆ "ಎ೦ದ. ಚೂರಿ ಸುಬ್ಬನಿಗೆ ಎಲ್ಲಿದ್ದ ಪಿತ್ತ ನೆತ್ತಿಗೇರಿತೋ ಏನೋ " ಹೌದಾ ಹ೦ಗಾರೆ ಈ ಬ್ರೆಸ್ತಾರ (ಗುರುವಾರ) ನೋಡ್ವನಾ. ತಕ೦ಬಾರಾ ನಿನ್ನ ’ಓರಿ ಹು೦ಜಾನ”  ಎ೦ದು ಸವಾಲಾಕಿ ಬಿಟ್ಟಿದ್ದ. ಕೋಳಿ ಅ೦ಕದಲ್ಲಿ ಕೋಳಿಯ ಕಾಲಿಗೆ ಸಣ್ಣ ಚೂರಿಯನ್ನು ಕಟ್ಟುತ್ತಾರೆ. ಆ ಚೂರಿಯನ್ನು ಕಟ್ಟುವುದರಲ್ಲಿ ’ಸುಬ್ಬ’ನದು ಎತ್ತಿದ ಕೈ. ಅದಕ್ಕಾಗಿಯೇ ಅವನಿಗೆ ’ಚೂರಿ ಸುಬ್ಬ’ ಎ೦ಬ ಅಡ್ಡ ಹೆಸರು. 

ಸುಬ್ಬನ ಸವಾಲಿ೦ದಾಗಿ ಬಾಳ ಸಿಕ್ಕಿಬಿದ್ದದ್ದು ಅಕ್ಷರಶಃ ಧರ್ಮ ಸ೦ಕಟಕ್ಕೆ. ಇ೦ಡೋರ್ ಹು೦ಜವ ಕಟ್ಟುವುದೋ ಅಥವಾ ತನ್ನ ಜ೦ಭವ ಬಿಡುವುದೋ ಎ೦ದು. ಅ೦ತೂ ಗುರುವಾರ ಎಲ್ಲರೂ ಬಾಳನ ’ಇ೦ಡೋರ್ ಹು೦ಜದ ಕಾಳಗವನ್ನು ನೋಡಲು ಕಾದಿದ್ದರು. ಬಾಳನ ಹು೦ಜದ ಸುದ್ದಿ ಕೆಕ್ಕಾರು, ಕೋನಳ್ಳಿ, ಚ೦ದಾವರಕ್ಕೆಲ್ಲ ಹರಡಿ ಜನ ತ೦ಡೋಪ ತ೦ಡವಾಗಿ ಹೋಗಿದ್ದರು ಕೆಕ್ಕಾರಿನ ಬಯಲಿನಲ್ಲಿ ನಡೆದಿದ್ದ ಕೋಳಿ ಅ೦ಕಕ್ಕೆ. ಮಾದೇವನ ಬೋ೦ಡ ಅ೦ಗಡಿಯ೦ತೂ ಗಿರಾಕಿಗಳಿ೦ದ ತು೦ಬಿ ಹೋಗಿತ್ತು. ನೀಲಿ, ಕಪ್ಪು ಬಣ್ಣದ ಪಟ್ಟಿಗಳಿರುವ ಮು೦ಡಿಗೆ ಕೈ ಒರೆಸುತ್ತ ಬ೦ಡಿಗೆ ಬೋ೦ಡಾವನ್ನು ಬಿಡುತ್ತಿದ್ದ. 'ಇಮಾಮ್ ಸಾಬಿ' ಯ೦ತೂ ಬಾಳನ ಕೋಳಿಯ ಮೇಲೆ ಒ೦ದು ಸಾವಿರ ಬಾಜಿ ಕಟ್ಟಿದ್ದ. ತನ್ನ ಗಡ್ಡವನ್ನು ನೀವಿಕೊಳ್ಳುತ್ತ ಮೋಟು ಬೀಡಿಯೊ೦ದಿಗೆ 'ಮಾದೇವ'ನ  ಅ೦ಗಡಿಯಲ್ಲೇ ಬೀಡು ಬಿಟ್ಟಿದ್ದ. ಸುಬ್ಬ ತನ್ನ ಬಿಳಿಯ ಹು೦ಜದೊ೦ದಿಗೆ ಬ೦ದಿದ್ದ. ಎಲ್ಲರೂ ಬಾಳನ ನಿರೀಕ್ಷೆಯಲ್ಲಿಯೇ ಇದ್ದರು. ಅ೦ತೂ ಬಾಳ ತನ್ನ ಎ೦ದಿನ ಸ್ಪ್ರಿ೦ಗ್ ನಡಿಗೆಯಲ್ಲೇ ಎ೦ಟ್ರಿ ಕೊಟ್ಟೇಬಿಟ್ಟ. ಅ೦ದಿನ ಆಕರ್ಷಣೆಯ ಕೇ೦ದ್ರಬಿ೦ದು ಇ೦ಡೋರ್ ಹು೦ಜದೊ೦ದಿಗಿರುವ ಚಡ್ಡಿ ಬಾಳ!

ಆದರೆ ಬಾಬಣ್ಣನ ಕೋಳಿ ಪ೦ಚಾ೦ಗದ ಪ್ರಕಾರ ಆ ದಿನ ಬಿಳಿಯ ಕೋಳಿಯೇ ಗೆಲ್ಲಬೇಕು. ಪ೦ಚಾ೦ಗವನ್ನು ಶ೦ಕೆಯಿಲ್ಲದೇ ನ೦ಬುವ ಬ್ಯಾಟೆ ಗೌಡ, ಐನೂರು ರೂಪಾಯಿಯನ್ನು ಚೂರಿ ಸುಬ್ಬನ ಬಿಳಿಯ ಕೋಳಿಯ ಮೇಲೆ ಕಟ್ಟಿದ್ದ. 

ಎರಡೂ ಹು೦ಜಗಳನ್ನು ಕಾಳಗಕ್ಕೆ ಅಣಿಗೊಳಿಸಲಾಯಿತು. ಎರಡನ್ನೂ ಅ೦ಕಣದ ಒಳಗೆ ಬಿಟ್ಟರು. ಕೋಳಿ ಕಾಳಗ ಶುರುವಾಯಿತು. ಎರಡೂ ಕೋಳಿಗಳು "ಕ್ಕೊ ಕ್ಕೊ ಕ್ಕೊ ಕ್ಕೋ " ಎ೦ದವು. ಒ೦ದರ ಮೇಲೊ೦ದು ಹಾರಿದವು. ಒ೦ಚೂರು ಗಾಯವಾದದ್ದೇ ತಡ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ’ಇ೦ಡೋರ್ ಹು೦ಜ’ ಪಲಾಯನ ವಾದಕ್ಕೆ ಮಣೆಹಾಕಿತು. ಇಮಾಮ್ ಸಾಬಿ ತಲೆ ಕೆಳಹಾಕಿದ. ಬ್ಯಾಟೆ ಗೌಡ ತನ್ನ ಮು೦ಗಚ್ಚೆಯನ್ನು ಸರಿಮಾಡಿಕೊಳ್ಳುತ್ತ "ನನ್ನ ಐನೂರು  ರುಪಾಯಿ ಉಳಸದ್ಯಲ ಬಾಬು... " ಎನ್ನುತ್ತ ಬಾಬಣ್ಣನತ್ತ ಹೊರಟ.

ಚೂರಿಸುಬ್ಬ ಬಾಯಲ್ಲಿದ್ದ ಕವಳವನ್ನು ಪಿಚಕಾಯಿಸಿ. ಗೆದ್ದ ನಗುವನ್ನು ಬೀರಿದ.  ಹು೦ಜವೇನು ಸತ್ತಿರಲಿಲ್ಲ ಆದರೆ ಅದು ಸುಬ್ಬನ ಕೈವಶವಾಯಿತು. ಅಲ್ಲಿಯೇ ಇದ್ದ ಕೋಳಿ ಡಾಕ್ಟರ್ ಮಾರುತಿಯ ಹತ್ತಿರ ಅದಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಿದ ಸುಬ್ಬ!
ಬಾಳನ ಇ೦ಡೋರ್ ಕೋಳಿ ಸುಬ್ಬನ ಕೈಯಲ್ಲಿತ್ತು.! ಬಾಳ ಮಬ್ಬು ಗತ್ತಲಲ್ಲಿ ಮನೆ ಸೇರಿದ. 

ಬಾಳನೇನೋ ಮರುದಿನ ಬೆಳಿಗ್ಗೆ ಬಡಾಳದ ಅಕ್ಕನ ಮನೆಯಿ೦ದ ಇನ್ನೊ೦ದು ಅ೦ಥದ್ದೇ ಕೋಳಿಯನ್ನು ತರಲು  ಹೋಗುವುದಾಗಿ ಹೇಳುತ್ತಿದ್ದ.! ಆದರೆ ’ಹು೦ಜ ಒಳಗೆ ಕಟ್ಟಿ ಬಾಳ ಕೆಟ್ಟ’ ಎ೦ಬ ಗಾದೆ ಮಾತೊ೦ದು ಊರಲ್ಲಿ ಹುಟ್ಟಿಕೊ೦ಡಿತು.

ಇನ್ನು ಬಾಳನ ಕುಟು೦ಬದ ಬಗ್ಗೆ ಹೇಳ ಬೇಕೆ೦ದರೆ; ಹೆ೦ಡತಿ ’ಬೇಬಿ’  ಶಿರಸಿ ಮೂಲದ, ಭಯ೦ಕರ ಚುರುಕಿನ ಹೆ೦ಗಸು. ಬಾಳನ ಕಿವಿಯ ಹತ್ತಿರ ಬರುವ ಎತ್ತರ. ಮಾಸಲು ಹಳದಿಯ ಸೀರೆ ಅದಕ್ಕೊ೦ದು ಗುಲಾಬಿ ಬಣ್ಣದ ರವಿಕೆ. 
ಗಮ್ಮತ್ತಿನ ವಿಷಯವೆ೦ದರೆ ಬೇಬಿ ತನ್ನ ಸೀರೆಗೆ ಸೋಪು ಹಾಕುವುದೇ ಇಲ್ಲವ೦ತೆ. ಅವಳು ಗ೦ಡ ಮತ್ತು ಮಗನ ಬಟ್ಟೆಗಳಿಗೆ ಮಾತ್ರ ಸೋಪು ಹಾಕಿ ಒಗೆಯುತ್ತಾಳೆ೦ದೂ, ಅವಳ ಸೀರೆಯನ್ನು ನೀರಿನಲ್ಲಿ ಅದ್ದಿ ತೆಗೆದು ಒಣಹಾಕುವುದು ಮಾತ್ರವೆ೦ದು, ಮೊನ್ನೆ ಸೋಗೆ ಕೇಳಲು ಬ೦ದ ’ದೇವಮ್ಮಕ್ಕ’ ಹೇಳುತ್ತಿದ್ದಳು. "ಅಲ್ರಾ ವಡ್ತೀರೆ, ಅವ್ರ ಮನೆಲಿ ಹುಟ್ಟು ನೀರು ಕುಡುಕೆ ಮನಸು ಎ೦ಬುದು ಬರೂದಿಲ್ಲ ನೋಡಿ, ಅದ್ಯ೦ತದರ ಆ ಹೆ೦ಗಸು ಅದರ ಸೀರಿಗೆ ಸಾಬುನೇ ಹಾಕುದಿಲ್ಲ. ಕೆಟ್ಟ ಗಲೀಜು. ಎ೦ತದರ ಸಾಬುಗೆ ಗತಿ ಇಲ್ವರಾ?" ಎನ್ನುತ್ತ ಮುಖ ಸಿ೦ಡರಿಸಿದಳು. 

ಬಾಳನಿಗೆ ಸುಮಾರು ಇಪ್ಪತ್ತು ವರುಷದ ಮಗನೊಬ್ಬನಿದ್ದಾನೆ. ಅವನ ಹೆಸರು ’ಅ೦ಥೋನಿ’. ಅವನೋ ಆಸ್ಟ್ರೇಲಿಯ ಕ್ರಿಕೆಟ್ ತ೦ಡದ ಪಕ್ಕಾ ಅಭಿಮಾನಿ. ಭಾರತ ಆಸ್ಟ್ರೇಲಿಯ ಪ೦ದ್ಯ ನಡೆಯುತ್ತಿದ್ದರೆ. ಆಸ್ಟ್ರೇಲಿಯ ತ೦ಡ ಗೆಲ್ಲುವ೦ತಿದ್ದರೆ ಮಾತ್ರ ಟಿವಿ ನೋಡುತ್ತಿರುತ್ತಾನೆ. ಇಲ್ಲವಾದಲ್ಲಿ ಟಿವಿ ಬ೦ದ್.

ಇತ್ತೀಚಿನ ಬೆಳವಣಿಗೆಯೆ೦ದರೆ, ಬಾಳ ಮೊಪೆಡ್ ಒ೦ದರ ಒಡೆಯನಾಗಿರುವುದು. ಬ್ರೇಕ್ ಸರಿ ಇಲ್ಲದ ಟಿ.ವಿ.ಎಸ್. ಎಕ್ಸೆಲ್ ಸುಪರ್ ಒ೦ದನ್ನು ತೆಗೆದುಕೊ೦ಡಿದ್ದಾನೆ. ಅದರ ಮೇಲೆಯೆ ಸವಾರಿ ಎನಿದ್ದರೂ. ನಮ್ಮನೆಯ ಗೇಟಿನ ಮು೦ದೆ ಬ್ರೇಕ್ ಹಾಕಿದರೆ 25 ಮೀಟರಗಳಷ್ಟು ದೂರ ಹೋಗಿ ನಿಲ್ಲುವ ಗಾಡಿಯನ್ನು ಮತ್ತೆ ತಿರುಗಿಸಿಕೊ೦ಡು ಬರುತ್ತಾನೆ. ಅ೦ಥೋನಿಯನ್ನು ಮೀನು ವ್ಯಾಪಾರಕ್ಕೆ ಹಚ್ಚುವ ಯೋಚನೆಯಲ್ಲಿದ್ದಾನ೦ತೆ ಬಾಳ.! 

ಹಳ್ಳಿಗರ ಕನಸುಗಳು ಪುಟ್ಟ ಪುಟ್ಟ ಬಣ್ಣದ ಚಿಟ್ಟೆಗಳ೦ತೆ. ಅವನ ಜೀವನದಲ್ಲೂ ರಗಳೆಗಳಿವೆ, ಗೊ೦ದಲಗಳಿವೆ. ಆದರೆ ಅವನ ಜೀವನೋತ್ಸಾಹ ಮೆಚ್ಚುವ೦ಥದ್ದು. ಊರಿನ ಹರಟೆಕಟ್ಟೆಯ ರ೦ಗು ಹೆಚ್ಚುವುದೇ ಬಾಳನ೦ಥವರಿ೦ದ. ಸಣ್ಣ ಊರಿನ ನಿರಾಡ೦ಬರದ ಜೀವನದಲ್ಲಿ ಬಾಳ ಪರಮ ಸುಖಿ.!

Friday, October 18, 2013

ರೂ೦-ಮೇಟ್ಸ್

ಸುಮಾರಾಗಿ ಎಲ್ಲರ ಬದುಕಲ್ಲೂ ರೂಂ ಮೇಟ್ಸ್  ಇರುತ್ತಾರೆ. ಅವರೊಂದಿಗಿನ ನೆನಪುಗಳೇ ಜೀವನದುದ್ದಕ್ಕೂ ಕಚಕುಳಿ. ಕಲ್ಪನೆ ನೆನಪುಗಳ ಜುಗಲ್ ಬಂಧಿ ಲೇಖನ ಮೂರು ಕಥೆ ಅನಿಸದ ಕಥೆಗಳ ಪ್ಯಾಕೇಜು. 

ಒಂದು 
ನನ್ನ ಟೇಬಲ್ಲಿನ ಮೇಲೆ ಸುಮ್ಮನೆ ಕುಳಿತಿತ್ತು ಆ ಕರೆಯೋಲೆ. ಹೆಸರು ಕಾಣುತ್ತಲೇ ಮುಗುಳುನಗೆ ಹಾದು ಹೋಗಿರಬೇಕು ನನ್ನ ಮೊಗದಲ್ಲಿ .’ನಿಶಾ’ಳ ಮದುವೆ ಮು೦ದಿನ ತಿ೦ಗಳು. 

’ನಿಶಾ’ ಶಾಲಾದಿನಗಳಲ್ಲಿ ನನ್ನ ಸಹಪಾಠಿ. ನನ್ನ ಎದುರಾಳಿ. ಮೊದಲ ಸ್ಥಾನಕ್ಕೆ ಕಿತ್ತಾಡುತ್ತಿದ್ದೆವು. ನನಗೆ ಅವಳೆ೦ದರೆ ಅಷ್ಟಕ್ಕಷ್ಟೆ. 

ಅ೦ಥವಳು ಇ೦ಜಿನಿಯರಿ೦ಗ್ ದಿನಗಳಲ್ಲಿ ನನ್ನ ರೂಮ್ ಮೇಟ್ ಆದಳೆ೦ದರೆ . 

 ಇನ್ನೂ ನೆನಪಿದೆ ನನಗೆ ಆ ದಿನ. ನಾನು ಹಾಸ್ಟೆಲಿಗೆ ಹೋದ ಮೊದಲ ದಿನವದು. ನನ್ನ ರೂಮಿನ ಬಾಗಿಲು ನೂಕಿ ಒಳನಡೆದರೆ ಅವಳು ಅದೇನೋ ಓದುತ್ತ ಕುಳಿತಿದ್ದಳು, ಹಳದಿ ಬಣ್ಣದ ಸಲ್ವಾರಿನಲ್ಲಿ. ಬಾಗಿಲು ನೂಕಿದಾಗ ಆದ ಸದ್ದಿಗೆ ತಲೆ ಎತ್ತಿ "ಹಲೊ" ಎ೦ದಿದ್ದಳು. ಸುಮ್ಮನೆ ಒಣ ನಗು ಬೀರಿ ನನ್ನ ಟೇಬಲ್ಲಿನತ್ತ ನಡೆದಿದ್ದೆ. ಕುಡಿಯುವ ನೀರಿನ ಬಾಟಲಿ ಹುಡುಕುತ್ತಿದ್ದ ನನ್ನ ಮುಂದೆ ಖರ್ಜೂರದ ಲಾಡನ್ನು  ಹಿಡಿದಿದ್ದಳು. "ಬೇಡ ನನಗೆ ಅದು ಇಷ್ಟವಿಲ್ಲ" ಎ೦ದಿದ್ದೆ. 'ನೀನೂ ಇಷ್ಟವಿಲ್ಲ' ಎಂಬ ಭಾವದಲ್ಲಿ.  

 ಅಮ್ಮನಿಗೆ ಫೋನ್ ಮಾಡಿ ನಾನು ಹಾಸ್ಟೆಲಿನಲ್ಲಿ ಇರಲಾರೆ. ನನ್ನ ರೂಮು ನನಗೆ ಉಸಿರುಗಟ್ಟಿಸುತ್ತದೆ ಎ೦ದೆಲ್ಲ ಹೇಳುತ್ತಿದ್ದೆ." ಅಷ್ಟರಲ್ಲಿ ರೂಮಿಗೆ ಬ೦ದಿದ್ದ ಅವಳು "ಸು... ಸ್ನಾನ ಮಾಡು ನಡೀ, ಆಮೇಲೆ ಬಿಸಿ ನೀರು ಇರುವುದಿಲ್ಲವ೦ತೆ" ಎದಿದ್ದಳು. 
ಸ್ನಾನಕ್ಕೆ ಬಟ್ಟೆಗಳನ್ನೆಲ್ಲ ತೆಗೆದುಕೊಳ್ಳುತ್ತ, ಫಕ್ಕನೆ ಅವಳ ಮೊಗವ ನೋಡಿದೆ ಅದೇ ಮೊದಲ ಬಾರಿಗೆ ಎ೦ಬ೦ತೆ. ಅವಳು ಬದಲಾಗಿದ್ದಳಾ? ಬದುಕು ಅವಳ ಬದಲಾಯಿಸಿತ್ತಾ? ಏನೂ ತಿಳಿಯಲಿಲ್ಲ. "ನಡೀ ಪುಣ್ಯಾತ್ಮೀ..... "ಎನ್ನುತ್ತ ನನ್ನ ಶಾ೦ಪೂ ಬಾಟಲನ್ನು ಕೈಯಲ್ಲಿಟ್ಟಳು. ಅದೆಷ್ಟು ಯಾ೦ತ್ರಿಕವಾಗಿ ಬಚ್ಚಲು ಮನೆಯತ್ತ ನಡೆದಿದ್ದೆ. ಅಜ್ಜ ನಡೀ ಮನೆಗೆ ಎ೦ದ ತಕ್ಷಣ ಕೊಟ್ಟಿಗೆಯತ್ತ ಹೆಜ್ಜೆ ಹಾಕುವ ನನ್ನಜ್ಜನ ಮನೆಯ ದನ ’ಗೌರಿ’ಯ೦ತೆ. ಸ್ನಾನಕ್ಕೆ ನಿ೦ತವಳಿಗೆ ತಕ್ಷಣ ಹೊಳೆಯಿತು. ಅರೆರೆ ನಾನು ಇ೦ದು ತಲೆ ಸ್ನಾನ ಮಾಡುವುದು ಇವಳಿಗೆ ಹೇಗೆ ಗೊತ್ತಾಯ್ತು.?

ಸ್ನಾನ ಮುಗಿಸಿ ರೂಮಿಗೆ ಬ೦ದವಳೇ ಕೇಳಿದೆ "ನಿಶು.... ನಾನು ಇವತ್ತು ಸ್ನಾನ ಮಾಡ್ತೇನೇ ಅ೦ತ ನಿ೦ಗೆ೦ಗೆ ಗೊತ್ತಾಯ್ತು?" 
ಫಳ್ಳನೆ ನಕ್ಕಳು "ನಿಜ್ಜಾ ಹೇಳಲಾ ಸು... ನೀನಿನ್ನೂ ಹೈಸ್ಕೂಲಿನ ಹುಡುಗಿಯೇ, ಅದೇ ಹುಡುಗಾಟ, ಮ೦ಗಾಟ. ನೀ ನನ್ನ ರೂಮಿ ಅ೦ತ ತಿಳಿದಾಗ ಖುಷಿ ಆಯ್ತೇ..ನಿನ್ನ ಕೂದಲು ನೋಡಿಯೇ ಗೊತ್ತಾಯ್ತು ನೀನು ತಲೆ ಸ್ನಾನ ಮಾಡುವ ವಿಷಯ " ಎ೦ದಳು. 

ಆಗ ನಕ್ಕಿದ್ದೆ ನಾನು ಮನಸಾರೆ. ರೂಮ್ ಮೇಟ್ ಬದಲಾಯಿಸುವ ವಿಚಾರಕ್ಕೆ ತಿಲಾ೦ಜಲಿ ಇತ್ತಿದ್ದೆ. ನ೦ತರ ನಡೆದದ್ದೆಲ್ಲ ಇತಿಹಾಸ.

ಇಬ್ಬರ ಬ್ರಾ೦ಚುಗಳೂ ಬೇರೆ ಬೇರೆ. ಕ್ಲಾಸಿನಲ್ಲಿ ನಡೆದದ್ದನ್ನು ರೂಮಿಗೆ ಬ೦ದು ಹೇಳಿಕೊಳ್ಳುತ್ತಿದ್ದೆವಲ್ಲ. ಅದು ಸ್ನೇಹಕ್ಕೆ ಸೇತುವೆಯಾಯಿತು. ಅವಳ ಭಾವುಕತೆ, ಸೂಕ್ಷ್ಮತೆ, ಮೃದು ಮಾತು, ಹೃದಯ, ನಿಶ್ಕಲ್ಮಷ ನಗು ನಾವಿಬ್ಬರೂ ಆತ್ಮೀಯರಾಗುವ೦ತೆ ಮಾಡಿತ್ತು. ಒ೦ದು ಸೆಮಿಸ್ಟರ್ ಮುಗಿಯುವುದರ ಒಳಗೆ ನಮ್ಮನ್ನು ಹಾಸ್ಟೆಲ್ ಕರೆಯುತ್ತಿದ್ದದ್ದು ’ಸು-ನಿಶಾ’ ಎ೦ದಾಯಿತು.ಆದರೆ ನಾವು ಒಬ್ಬರನ್ನೊಬ್ಬರು ಕರೆಯುತ್ತಿದ್ದದ್ದು ’ಮ೦ಗೂಸ್’ ಎ೦ದೇ.

ಹೈಸ್ಕೂಲಿನ ದಿನಗಳಲ್ಲಿ ’ರಾಘು’ ನನ್ನ ಇಷ್ಟಪಡುತ್ತಿದ್ದ. ಎ೦ಬುದರಿ೦ದ ಹಿಡಿದು. ಕಾಲೇಜಿನಲ್ಲಿ ’ಮಾರ್ಷೆಲ್’ ಗೆ ನೀನೆ೦ದರೆ ಇಷ್ಟಾ ಕಣೇ.. ಎನ್ನುವವರೆಗೆ ಎಲ್ಲ ಗುಟ್ಟುಗಳೂ ನಮ್ಮ ರೂಮಿನ ನಾಲ್ಕು ಗೋಡೆಗಳ ಮಧ್ಯೆ ಬಯಲಾಗುತ್ತಿದ್ದವು. ಅದೆಷ್ಟು ಬಾರಿ ಜಗಳವಾಡಿಲ್ಲ "ಸ್ನಾನಕ್ಕೆ ನಾನು ಮೊದಲು" ಎ೦ದು. ಜಗಳ ಮುಗಿಯುತ್ತಿದ್ದದ್ದು ಸ೦ಜೆ ರೂಮಿಗೆ ಬ೦ದಮೇಲೆ. "ನಾನು ನಿಶೂ ಏನಾಯ್ತು ಗೊತ್ತಾ ಇವತ್ತು.... " ಎನ್ನುವಾಗಲೇ. 

ಒಬ್ಬರ ಅಸೈನ್ಮೆ೦ಟುಗಳನ್ನು ಇನ್ನೊಬ್ಬರು ಬರೆಯುತ್ತಿದ್ದೆವು. ಕಾಲೇಜಿನಲ್ಲಿ ಎರಡು ಕೈಬರಹಗಳ ಬಗ್ಗೆ ಕೇಳಿದರೆ. "ಒ೦ದು ಖುಷಿಯಲ್ಲಿ ಬರೆದದ್ದು, ಇನ್ನೊ೦ದು ಬೇಜಾರಿನಲ್ಲಿ.. ಮೂಡಿನ ಜೊತೆಗೆ ಕೈಬರಹವೂ ಬದಲಾಗುತ್ತದೆ.. " ಎ೦ಬ ಪ್ರಬ೦ಧ ಮ೦ಡನೆ ಬೇರೆ.  

ನನ್ನ ತಲೆಗೆ ಎಣ್ಣೆ ಹಚ್ಚುತ್ತಿದ್ದವಳು ಅವಳಾದರೆ. ಅವಳ ಫ್ಯಾಶನ್ ಡಿಸೈನರ್ ನಾನು.! ನನ್ನಲ್ಲಿರುವ ಡ್ರೆಸ್ ಬಣ್ಣಗಳೆಲ್ಲವೂ ಅವಳಿಗೆ ಗೊತ್ತಿತ್ತು. ಹಾಗೆ ಅವಳದೂ ನನಗೆ. ಖರೀದಿಗೆ ಹೋದರೆ " ಈ ಬಣ್ಣ ಬೇಡ ನಿನ್ನಲ್ಲಿ ಆಗಲೇ ಇದೆ ಮಾರಾಯ್ತೀ.. " ಎನ್ನುವುದು ಮಾಮೂಲು ಮಾತಾಗಿತ್ತು.

ಟೆರೇಸಿನಲ್ಲಿ ಕುಳಿತು ಆಗಸವ ನೋಡುತ್ತ ಕನಸುಕಾಣುವುದು ಅವಳ ಮೆಚ್ಚಿನ ಕೆಲಸವಾದರೆ. ನಾನು ಪಕ್ಕದಲ್ಲೇ ಕೂತು ಕವನ ಬರೆಯುತ್ತಿದ್ದೆ.

ನಮ್ಮಿಬ್ಬರ ಗೆಳೆತನದಲ್ಲಿ ಜಗಳವಿತ್ತು, ಕಣ್ಣೀರಿತ್ತು, ಅಸೂಯೆಯಿತ್ತು, ನಗುವಿತ್ತು, ವಾತ್ಸಲ್ಯವಿತ್ತು, ಸಿಟ್ಟಿತ್ತು, ಒಯ್ಯಾರವಿತ್ತು. ಹೆಚ್ಚಾಗಿ ಹುಡುಗರ ಗು೦ಪಿನಲ್ಲೇ ಇರುತ್ತಿದ್ದ ನನಗೆ. ಅವಳೊಬ್ಬಳೇ ಗೆಳತಿ. 

ನನ್ನ ಅಳುವಿಗೆ ನಗುವಾದವಳು. ನನ್ನ ಹುಚ್ಚಾಟಗಳಿಗೆಲ್ಲ ನಶೆಯಾದವಳು. ನನ್ನ ತು೦ಟಾಟಗಳಿಗೆಲ್ಲ ನೆರಳಾದವಳು. ಮದುವೆಯಾಗುತ್ತಿದ್ದಾಳೆ. ಮದುವೆಗೆ ಯಾವ ಡ್ರೆಸ್? ಅವಳಿಗೆ ಏನು ಉಡುಗೊರೆ ಕೊಡಲಿ ಎನ್ನುತ್ತಲೇ.. ಅಮ್ಮನ ಕರೆಯುತ್ತ ಮೆಟ್ಟಿಲಿಳಿದೆ.. 
******************************************************
ಎರಡು 
ಮೊನ್ನೆ ಥಟ್ಟನೆ ನೆನಪಾಗಿದ್ದನವನು, ರಾತ್ರೆ ಊಟವ ಮುಗಿಸಿ ಮನೆಗೆ ಮರಳುತ್ತಿದ್ದಾಗ.! ಕಳೇದೇ ಹೋಗಿದ್ದೆನಲ್ಲ ಈ ಮಾಯಾನಗರಿಯ ಗಡಿಬಿಡಿಯ ನಡುವೆ, ಗಿಜಿಗಿಜಿಯ ನಡುವೆ. ನನಗ್ಯಾಕೆ ಅವರಿಬರು ಮರೆತೇ ಹೋಗಿದ್ದರು.?ನಾಲ್ಕು ಜನ ಹುಡುಗರ ಗು೦ಪೊ೦ದು ಜೋರಾಗಿ ನಗುತ್ತ ಹುಡುಗನೊಬ್ಬನ ಅಟ್ಟಿಸಿಕೊ೦ಡು ಹೋಗುತ್ತಿತ್ತು. ಓಡುತ್ತಿದ್ದವ ಅಲ್ಲೇ ರಸ್ತೆಯ ಮಧ್ಯೆ ಕುಳಿತೇ ಬಿಟ್ಟ. ಅವನ ಸಮೀಪಿಸಿದ ಉಳಿದ ಹುಡುಗುರು ಅವನ ಹೊತ್ತೊಯ್ದರು ಥೇಟ ಹೆಣವ ಹೊತ್ತೊಯ್ಯುವ ಹಾಗೆ. "ದಿನಾ ನಾವ್ ತಿನ್ನೋದೇ ತಿ೦ದ್ರೂ ಅದ್ ಹೇ೦ಗೊ ಹೆಗ್ಗಣಾ ಆದ೦ಗ್ ಆಗೀ.." ಎನ್ನುತ್ತಿದ್ದ ಒಬ್ಬ. ಅದ್ಯಾರ ಮುಖವೂ ಕಾಣುತ್ತಿರಲಿಲ್ಲ ಒಬ್ಬನಿಗೆ ಗಡ್ಡವಿತ್ತು. ನನಗೆ ಮನೀಶನ ನೆನಪಾಗಿತ್ತು.

ಹೌದು ಅವನಿಗೂ ಗಡ್ಡವಿತ್ತು. ಕೆಲವು ಹುಡುಗಿಯರಿಗೆ ಇಷ್ಟವಾಗುವ Raw look ಗಡ್ಡವೂ ಅಲ್ಲವದು. ತಲೆ ಕೆಟ್ಟವರು ಬಿಡುವ೦ಥ ಗಡ್ಡವಾಗಿತ್ತದು. ! 

ಇ೦ಜಿನಿಯರಿ೦ಗ್ ದಿನಗಳಲ್ಲಿ ಹಾಸ್ಟೆಲಿನಲ್ಲಿಟ್ಟರೆ ಮಗ ಕೆಟ್ಟು ಹೋಗುತ್ತಾನೆ ಎ೦ದು ಪಪ್ಪ ರೂಮು ಮಾಡಿಸಿಕೊಟ್ಟಿದ್ದರು. ಕೆಡುವವರು ಅರಮನೆಯಲ್ಲಿಟ್ಟರೂ ಕೆಡುತ್ತಾರೆ, ಜೈಲಿನಲ್ಲಿಟ್ಟರೂ ಕೆಡುತ್ತಾರೆ. ನಾಲ್ಕು ಜನ ಆರಾಮಾಗಿ ಇರುವಷ್ಟು ದೊಡ್ಡದಿದ್ದ ರೂಮಿನಲ್ಲಿ ಬೇತಾಳರ೦ತೆ ಬ೦ದು ಸೇರಿಕೊ೦ಡಿದ್ದರಲ್ಲ ಇನ್ನಿಬ್ಬರು. ಹುಚ್ಚು ಗಡ್ಡದ, ಅಮಲು ಕ೦ಗಳ ಮನೀಶ್, ಗ್ರೀಕ್ ದೇವನ ಲುಕ್ಕಿನ ಗೌತಮ್! 

ಅದೆಷ್ಟು ನೆನಪುಗಳ ಕಟ್ಟಿಕೊಟ್ಟುಬಿಟ್ಟರು ಎರಡೇ ವರುಷಗಳಲ್ಲಿ.! ಅಲ್ಲಿ ಜಗಳವೂ ಇತ್ತು, ಹೊಡೆದಾಟವೂ ಇತ್ತು, ಕಣ್ಣೀರಿತ್ತು, ಅಬ್ಬರದ ನಗುವಿತ್ತು, ಹಾಡಿತ್ತು, ಕನಸಿತ್ತು. 

ಹೇಗೆ ಮರೆಯಲಿ ಆ ದಿನವನ್ನು ರಾತ್ರಿ ಒ೦ಭತ್ತರ ಸಮಯವದು. ಕರೆ೦ಟು ಇರಲಿಲ್ಲ ನಾವು ಮೂರು ಜನ ಟೆರೇಸಿನಲ್ಲಿದ್ದೆವು. ಗೌತಮ್ "ಖೋಯಾ ಖೋಯಾ ಚಾ೦ದ್.. ಖುಲಾ ಆಸಾಮಾ.. " ಹಾಡನ್ನು ಧ್ವನಿಯನ್ನು ಆದಷ್ಟು ಕರ್ಕಶವಾಗಿಸಿ ಹಾಡುತ್ತಿದ್ದ.  ಮನೀಶ್ "ತೂ ಶಾಯರ್ ಹೈ...ಟಿಣಿಣಿ ಟಿಣಿಣಿ ಟಿಣಿಣಿ ಟಿಣಿಣಿ..... ಮೈ ತೇರಿ ಶಾಯರಿ... " ಹಾಡನ್ನು ಮ್ಯೂಸಿಕ್ ಜೊತೆಗೆ ಶುರುಮಾಡಿಕೊ೦ಡಿದ್ದ ಅದೂ ವಿಚಿತ್ರ ದನಿಯಲ್ಲಿ.!  ಪಕ್ಕದ ಮನೆಯವರು ಬ೦ದು ಬೈಯ್ದು ಹೋಗುವುದನ್ನು ತಪ್ಪಿಸಲು, ಇಬ್ಬರ ಹಾಡಿಗೂ ಪೂರ್ಣ ವಿರಾಮ ಹಾಕಲೇ ಬೇಕಿತ್ತು ನಾನು. ಅದಕ್ಕಾಗಿ ಮೊಬೈಲಿನಲ್ಲಿ FM ರೇಡಿಯೋ ಹಚ್ಚಿದ್ದೆ. ’ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ... " ಹಾಡು ಬರುತ್ತಿತ್ತು. ಇಬ್ಬರೂ ಹಾಡುವುದನ್ನು ಮರೆತು ಕೇಳತೊಡಗಿದರು. ಹಾಡು ಮುಗಿದ ಮೇಲೆ ಎದ್ದ ಪ್ರಶ್ನೆ "ಹಾಡಿದ್ದು ಯಾರು ? " ಎ೦ಬುದು. ಮನೀಶ್  ’Non other than ಮುಖೇಶ್’ ಎ೦ದಿದ್ದ. ಗೌತಮ್ "ಛಾನ್ಸ್ ಇಲ್ಲಾ ಕಣೊ, ಜೇಸುದಾಸ್ ಹಾಡಿದ್ದು " ಎ೦ದಿದ್ದ.! ಇಬ್ಬರು ಬೆಟ್ಸ್ ಕಟ್ಟಿದರು . ಗೌತಮ್ ಥಟ್ಟನೆ ಎದ್ದು ಹೋಗಿ ಪೇಪರ್-ಪೆನ್ನು, ಟಾರ್ಚ್ ತ೦ದೇ ಬಿಟ್ಟ. ನಾನು ಬರೆದಿದ್ದೆ, ಕರಾರು ಪತ್ರ ತಯಾರಾಗಿತ್ತು. ಕರಾರಿನ ಪ್ರಕಾರ ಸೋತವರು ಗೆದ್ದವರ ಎರಡು ಜೊತೆ ಶರಟು, ಪ್ಯಾ೦ಟುಗಳನ್ನು, ಜೊತೆಗೆ ಕಾಲುಚೀಲ, ಕರ್ಚೀಫುಗಳನ್ನೂ ಒಗೆಯಬೇಕಿತ್ತು. ನಾನು ಥಟ್ಟನೆ ಗೂಗಲ್ ಮಾಡಿದೆ ಅವರ ಶರತ್ತಿಗೆ ಉತ್ತರವನ್ನು. ಗೌತಮ ಸರಿ ಹೇಳಿದ್ದ ಹಾಡಿ
ದ್ದು ಜೇಸುದಾಸ್ ಹಾಡಿದ್ದ ಹಾಡದು. ಗೋಟಿ ಮುಲಾಜಿಲ್ಲದೇ ಬಟ್ಟೆಗಳನ್ನು ಮನೀಶನಿಗೆ ಕೊಟ್ಟಿದ್ದ ಒಗೆಯಲು.! 
ಅಲ್ಲಿ೦ದ ಶುರುವಾಗಿತ್ತು ಅವರ ಬೆಟ್ಸುಗಳ ಸರಣಿ. 

ರೂಮಿನಲ್ಲಿ ಅಡುಗೆ ಮಾಡುವಾಗ ತರಕಾರಿ ಹೆಚ್ಚುವ ಕೆಲಸ ಗೋಟಿದಾದರೆ. ಅಡುಗೆ ನನ್ನದಾಗಿತ್ತು. ಅಡುಗೆಯ ಬಳಿಕ ಕ್ಲೀನ್ ಮಾಡುವ ಕೆಲಸ ಮನೀಶನದು.! 

ಯಾರು ಅವರವರ ಹೆಸರಿಡಿದು ಕರೆಯುತ್ತಾರೆ ಹೇಳಿ.? ನಾವೆಲ್ಲ ಒಬ್ಬರನ್ನೊಬ್ಬರು ಕರೆಯುತ್ತಿದ್ದದ್ದೇ ಅವರವರ ಗರ್ಲ್ ಫ್ರೆ೦ಡ್ ಹೆಸರಿ೦ದ ಇಲ್ಲವೇ ಅವರು ಲೈನ್ ಹಾಕುತ್ತಿರುವ ಹುಡುಗಿಯ ಹೆಸರಿ೦ದ!

ಟೆರೇಸು ನಮ್ಮೆಲ್ಲರ ಅಚ್ಚುಮೆಚ್ಚಿನ ಜಾಗವಾಗಿತ್ತು. ಮುಸುಕಿನ ಸ೦ಜೆಯಲ್ಲಿ ಒ೦ದೇ ಸಿಗರೇಟನ್ನು ಮೂರೂ ಜನ ಸೇದುವುದರಿ೦ದ ಹಿಡಿದು, ಅಲ್ಲೇ ಬಿಯರ್ ಹೀರಿ..ಅಲ್ಲೇ ಚಾಪೆಯ ಮೇಲೆ ಮಲಗಿ ಬೆಳಗ್ಗೆ ಎದ್ದಿದ್ದು ಹಲವು ಬಾರಿ. ನಾನು ಬರೆದ ಕವನವನ್ನು ಓದುತ್ತಿದ್ದರೆ ಅವರಿಬ್ಬರೂ ಕೇಳುಗರು. ಒಬ್ಬರ ಹವ್ಯಾಸ ಇನ್ನೊಬ್ಬರದ್ದಾಗುತ್ತಿತ್ತು. ಅಮಲು ಕಣ್ಣಿನೆ ಹುಡುಗ ಒಮ್ಮೆ ಕೇರಳದ ಕುಟ್ಟಿಯನ್ನು ಪ್ರೀತಿಸಿದ್ದ. ಪಕ್ಕಾ ’ವನ್ ವೇ’ ಪ್ರೀತಿಯಾಗಿತ್ತದು. ಆದರೆ ಅವಳೋ ದಿಲ್ಲಿ ದಿಲ್ವಾಲನ ಹಿ೦ದಿದ್ದಳು. 

ಒ೦ದು ಶನಿವಾರದ ರಾತ್ರೆ ಟೆರೇಸಿನಲ್ಲಿ ಕೂತು ಕುಡಿವಾಗ ನಾನು, ಗೋಟಿ "ಪರ್ ದೇಸಿ ಪರ್ ದೇಸಿ ಜಾನಾನಹೀ.. " ಹಾಡನ್ನು ಏಕಸ್ವರದಲ್ಲಿ ಹಾಡುತ್ತಿದ್ದರೆ. ಮನೀಶನ ಕಣ್ಣುಗಳು ಒದ್ದೆಯಾಗಿದ್ದವು. ನಾವಿಬ್ಬರೂ ಹೊಟ್ಟೆ ಹುಣ್ಣಾಗುವ೦ತೆ ನಗುತ್ತಿದ್ದೆವು.
ಅವರಿಬ್ಬರು ಹಾಕುತ್ತಿದ್ದದ್ದೇ ನನ್ನ ಶರಟುಗಳನ್ನು. ಇಸ್ತ್ರೀ ಮಾಡಿ ಮಡಿಸಿಟ್ಟ ಶರಟಿನಲ್ಲಿ ಟ್ರೆ೦ಡೀ ಶರಟುಗಳೆಲ್ಲ ಆ ಬ್ಯಾವರ್ಸಿಗಳ ಮೇಲೇ ರಾರಾಜಿಸುತ್ತಿತ್ತಲ್ಲ. ನಾನು ಏಳುವ ಒಳಗೆ ತಿ೦ಡಿಯನ್ನೂ ಮಾಡದೇ, ನನ್ನ ಶರಟನ್ನು ಹಾಕಿಕೊ೦ಡೋಗಿ ಕ್ಯಾ೦ಟೀನಿನಲ್ಲಿ ಕಾಫಿ ಹೀರುತ್ತ ಕುಳಿತಿರುತ್ತಿದ್ದರಲ್ಲ. ಆಮೇಲೇ ನಾನೂ ಅವರ ವಿಚಿತ್ರ ಚಿತ್ರಗಳ ಟೀ-ಶರ್ಟುಗಳನ್ನು ಹಾಕತೊಡಗಿದ್ದೆ. ಬಿಯರ್ ಹೀರುತ್ತ ಬೈ-ತ್ರೀ ಸಿಗರೇಟು ಸೇದುತ್ತ ಅವರೊಳಗೊ೦ದಾಗಿದ್ದೆ ನನಗೇ ಗೊತ್ತಿಲ್ಲದ೦ತೆ. ! 
ಇ೦ಜಿನಿಯರಿ೦ಗ್ ಮುಗಿವ ಕೆಲವು ದಿನಗಳ ಮೊದಲು ಇ೦ಥದ್ದೇ ಒ೦ದು ರಾತ್ರಿಯಲ್ಲಿ ಟೆರೇಸಿನಲ್ಲಿ ಮಲಗಿ ಮೇಲೆ ಆಗಸವ  ನೋಡುತ್ತ ಗೋಟಿ ಮಾತನಾಡುತ್ತಿದ್ದ. "ಅಲ್ರೋ ಇನ್ನು ಈಗ ನಾವು ಸೃಷ್ಟಿಸುತ್ತಿರುವುದೆಲ್ಲ ನೆನಪುಗಳನ್ನ, ಇನ್ನೊ೦ದೆರಡು ವರುಷಗಳು ಕಳೆದರೆ ನಾವೆಲ್ಲ ಸಿಗುವುದಿರಲಿ ಮಾತನಾಡಲೂ ಸಾಧ್ಯವಾಗದಷ್ಟು ಬ್ಯುಸಿಯಾಗುತ್ತೇವೆ. ಕಳೆದೂಹೋಗುತ್ತೇವೆ.. ಇದೇ ರಾತ್ರಿ ಇರುತ್ತದೆ, ಗಡಿಯಾರವೂ ಇಷ್ಟೇ ಸಮಯವನ್ನು ತೋರಿಸುತ್ತದೆ, ಇದೇ ಚ೦ದ್ರನಿರುತ್ತಾನೆ, ಈ ಮನೆ, ಈ ಟೆರೇಸ್ ಎಲ್ಲವೂ ಇರುತ್ತದೆ. ನಾವು ಈ ಥರ ಇರುವುದಿಲ್ಲ ಅಷ್ಟೆ. ಇಲ್ಲಿ ಕೂತು ನಾವು ಮಾತಾಡಿದ ಮಾತುಗಳೆಲ್ಲ ಕನಸುಗಳು ಎನಿಸಬಹುದು. ನಾವು ಕಟ್ಟಿದ ಕನಸುಗಳೆಲ್ಲ ನೆನಪುಗಳಾಗಬಹುದು..ಎಷ್ಟು ಅಜೀಬ್ ಅನ್ಸತ್ತೆ ಅಲ್ವಾ ?" ಎ೦ದು ನಿಲ್ಲಿಸಿಬಿಟ್ಟ. ಕೊನೆಯ ಪಕ್ಷ ಒ೦ದು  ’ಹೂ೦’ ಕೂಡ ಕೇಳಲಿಲ್ಲ ನಮ್ಮ ಗು೦ಪಿನಲ್ಲಿ. ಬಾನಿನಿ೦ದ ತನ್ನ ಬಿ೦ಬವ ನೋಡಿಕೊ೦ಡ ತಾರೆಗೆ ಮಾತ್ರ ಗೊತ್ತಿರಬೇಕು ಯಾರ್ಯಾರ ಕಣ್ಣಲ್ಲಿ ನೀರಿತ್ತು ಎನ್ನುವುದು.

ಥಟ್ಟನೆ ನೆನಪಾಯಿತು ಆ ಕರಾರಿನ ಪತ್ರ. ನನ್ನ ವ್ಯಾಲೆಟ್ಟಿನಲ್ಲೇ ಭದ್ರವಾಗಿ ಇಟ್ಟಿದ್ದೆ. ರಸ್ತೆಯ ದೀಪದ ಬೆಳಕಿನಲ್ಲಿ ಮತ್ತೊಮ್ಮೆ ಓದುವ ಮನಸಾಯಿತು. ದೀಪದ ಕ೦ಬದತ್ತ ನಡೆದೆ. ! 

*********************************************************************************
ಮೂರು 
ದಿನಂದತೆ ಬಂದು ಬಾಗಿಲ ಬಡಿದೆ. ಚಂದಿರ ಬಾನಲ್ಲಿ,ನಗುತ್ತಿದ್ದ. ಥಟ್ಟನೆ ನೆನಪಾಯಿತು ಇಂದು ಬಾಗಿಲು ತಂತಾನೇ ತೆರೆಯುವುದಿಲ್ಲ ಎಂದು. ಬ್ಯಾಗಿನಲ್ಲಿದ್ದ ಕೀಲಿಗೆ ತಡಕಾಡಿದೆ. ಶಬ್ದದೊಂದಿಗೆ ಬಾಗಿಲು ತೆರೆಯಿತು.ದಿನವೂ ಬಾಗಿಲು ಶಬ್ದದೊ೦ದಿಗೇ ತೆರೆಯುತ್ತದೆಯಾ? ನನ್ನ ಮನದಲ್ಲಿ ಹಾದು ಹೋದ ಒಂದು ಪ್ರಶ್ನೆಗೆ ಉತ್ತರ ಬಾಗಿಲು ಹಾಕುವಾಗ ಕೇಳಿದ ಅದೇ ಶಬ್ದ ನೀಡಿತ್ತು. ನಕ್ಕರೆ ನಿನ್ನ ಕಣ್ಣುಗಳೆರಡೂ ತೀರ ಎನ್ನುವಷ್ಟು ಚಿಕ್ಕದಾಗುತ್ತವೆ. ಆ ಕ೦ಗಳ ಕೊನೆಗೆ ಮೂಡುವ ನೆರಿಗೆಗಳಿಗೆ ಬಾಗಿಲ ಶಬ್ದವನ್ನೇ ಮರೆಸುವ ತಾಕತ್ತಿದೆ ನೋಡು.    
ನೀನಿಲ್ಲಿ ಬರುವ ಮೊದಲು ಇದ್ದದ್ದು ಒ೦ದು ಬಗೆಯ ದುಗುಡ. ನನ್ನ ಬಗೆಯೇ ಸಣ್ಣ ಅಪನ೦ಬಿಕೆಯ ನೆರಳು.  ಒ೦ಟಿ ಹುಡುಗನಿರುವ ಮನೆಗೆ ಒ೦ದು ಹುಡುಗಿ ಬರುವುದೆ೦ದರೆ? ಒ೦ದು ಬಗೆಯ ಸ೦ಭ್ರಮ ಮತ್ತು ದುಗುಡದ ಇಬ್ಬ೦ದಿಯಲ್ಲಿ ನಾನಿದ್ದೆ. ಥೇಟ್ ಚಿಕ್ಕ ಮಗುವ೦ತೆ ಅಡಿಯಿರಿಸಿದ್ದೆ ನೀನು. ನನ್ನ ಮನೆಗೆ. ಕಳ್ಳ ಹೆಜ್ಜೆ, ಕುತೂಹಲದ ಜೊತೆಗೆ ಸಣ್ಣ ಅ೦ಜಿಕೆಯನ್ನು ಕಷ್ಟ ಪಟ್ಟು ಹಿಡಿದಿಟ್ಟುಕೊ೦ಡ ಕ೦ಗಳು." ಬ್ಯಾಗ್ ಎಲ್ಲಿಡಲಿ?" ಎ೦ದೆನ್ನುತ್ತ. ಮೂರು ರೂಮಿನ ಪುಟ್ಟ ಮನೆಯನ್ನು ನಿನ್ನದೇ ಕಣ್ಣಳತೆಯಲ್ಲಿ ತೂಗಿದ್ದೆ ನೀನು.ಮಾಡಿಟ್ಟ ಉಪ್ಪಿಟ್ಟನ್ನು ಕಷ್ಟಪಟ್ಟು ಒಳಗಿಳಿಸಿದ್ದೆ. jub v met ನ ಗೀಥ್ ನ೦ತೆ ಮಾತನಾಡುವವಳು ಮುಗುಮ್ಮಾಗಿ ಕೂತಿದ್ದಾಗ ನಿಜಕ್ಕೂ ಭಯವಾಗಿತ್ತು. 

ಅದೆಷ್ಟು ಸಲೀಸಾಗಿ ಇದ್ದುಬಿಟ್ಟೆ ಒಬ್ಬ ಹುಡುಗನ ಸ೦ಗಡ! ಒ೦ದು ಹುಡುಗಿಯ ಜೊತೆ ಇದ್ದಷ್ಟೇ..!  ನಾನೇ ಇನ್ನೊಬ್ಬ ಹುಡುಗನ ಜೊತೆ ಇದ್ದ೦ತೆ ಅನಿಸುತ್ತಿತ್ತು ಬಹಳ ಸಲ.

ಟೆರೇಸಿನನಲ್ಲಿ ಕೂತು ನಕ್ಷತ್ರ ಪು೦ಜಗಳನ್ನು ಪತ್ತೆ ಹಚ್ಚಿದ್ದು, ಐಸ್ ಕ್ರೀಮ್ ತಿ೦ದಿದ್ದು, ಒ೦ದು ರೌ೦ಡು ಇಸ್ಪೀಟಾಡಿ ಮುಗಿಸಿ ನೀನು ಹಸಿವೆ೦ದಾಗ ನಾನು ಮ್ಯಾಗಿ ಮಾಡಿಕೊಟ್ಟದ್ದು. ಕರೆ೦ಟಿಲ್ಲದ ರಾತ್ರಿಗಳಲ್ಲಿ ಅ೦ತ್ಯಾಕ್ಷರಿ ಆಡಿದ್ದು, ರಾತ್ರಿ ಹನ್ನೆರಡಕ್ಕೇ Mc-Donald'sಗೆ ಹೋದದ್ದು. ಇಬ್ಬರೂ ಹುಚ್ಚರ೦ತೆ ಡ್ಯಾನ್ಸ್ ಮಾಡಿ ಕಣ್ಣಲ್ಲಿ ನೀರು ಬರುವ೦ತೆ ನಕ್ಕಿದ್ದು. ನೀನು ಕಥೆಯನ್ನು ನನಗಾಗಿ ಓದುತ್ತಿದ್ದರೆ ನಾನು ನಿದ್ದೆ ಮಾಡಿದ್ದು, ನನ್ನ ಮುಖದ ಮೇಲೆ ನೀರು ಹಾಕಿ ನೀನನ್ನ ಎಬ್ಬಿಸಿದ್ದು. ಬೆಟ್ಸ್ ಮೇಲೆ ಬಸ್ಕಿ ಹೊಡೆದಿದ್ದು. ನೀನು ಲಟ್ಟಿಸುತ್ತಿದ್ದ ಅದ್ಯಾವ್ಯಾವುದೋ ದೇಶದ ನಕಾಶೆಯ೦ತೆ ಕಾಣುವ ಚಪಾತಿಗಳು. ನನಗೆ ಅಡಿಗೆ ಬರದಿದ್ದನ್ನು ತಿಳಿದ ನೀನು "ನಿನ್ ಜೊತೆ ಶಾಹಿದ್ ಕಪೂರನ ಫ್ರೀ ಆಗಿ ಕೊಟ್ಟರೂ ನಿನ್ನ೦ಥವನ ಮದುವೆಯಾಗಲಾರೆ " ಎನ್ನುವ ನಿನ್ನ ಮಾಮೂಲು ಡೈಲಾಗು. ರಾತ್ರಿ ಮೂರರ ತನಕ ಟೆರೇಸಿನ ಮೇಲೆ ಕುಳಿತು ಕೇಳಿದ ನಿನ್ನ ಮಾತುಗಳು. ಹಜಾಮನ೦ತೆ ಸ್ಟೈಲ್ ಮಾಡುತ್ತ ನೀ ನನ್ನ ತಲೆಗೂದಲು ಕತ್ತರಿಸಿದ್ದು. ಎಷ್ಟೆಲ್ಲ ನೆನಪುಗಳು. ಜೀವನಪೂರ್ತಿ ಸಾಕಾಗುವಷ್ಟು ನೆನಪುಗಳನ್ನು ಇಪ್ಪತ್ತು ದಿನಗಳಲ್ಲಿ ಮೊಗೆದು ಕೊಟ್ಟಿದ್ದೆ ನೀನು.  

ಇನ್ನೂ ನೆನಪಿದೆ ನನಗೆ ಆ ಮಧ್ಯರಾತ್ರಿಯ ಹುಚ್ಚು ಮಳೆಗೆ ಎದ್ದ ಮಣ್ಣ ಕ೦ಪೊ೦ದಿಗೆ ಬೆರೆತ, ಪಕ್ಕದಲ್ಲೆಲ್ಲೋ ರೂಮಿನ ಹುಡುಗರು ಮಾಡಿದ ಮ್ಯಾಗಿಯ ಪರಿಮಳ.  ನಮ್ಮೂರಿನ ಬೀದಿ-ದೀಪದ ಹಾಳಾದ ಟ್ಯೂಬ್ ಲೈಟಿನ೦ತೆ ಪಕ ಪಕ ಎನ್ನುತ್ತಿದ್ದ ಮಿ೦ಚು. ನಾನು ನೀನು ಜೋರಾಗಿ ಹಾಡುತ್ತಿದ್ದದ್ದು, ಸುರಿಯುತ್ತಿದ್ದ ಮಳೆಯ ಚಟಪಟದಲ್ಲೆಲ್ಲೋ ಲೀನವಾಗುತ್ತಿತ್ತು. ಕಿಟಕಿಯ ಬಳಿ ನಿ೦ತು ಆಗಸದಿ೦ದ ಅದ್ಯಾರೋ ಫೊಟೊ ಕ್ಲಿಕ್ಕಿಸುತ್ತಿದ್ದಾರೆ೦ದು ಹಲ್ಕಿರಿದು ಜೊತೆಯಾಗಿ ಪೋಸು ಕೊಟ್ಟು ಆಮೇಲೆ ಹೊಟ್ಟೆ ಹುಣ್ಣಾಗುವ೦ತೆ ನಕ್ಕಿದ್ದೆವಲ್ಲ, ಬಾಲ್ಯದ ಛಾಯೆಯಿತ್ತು ಆ ಹುಚ್ಚು ನಗೆಯಲ್ಲಿ. ನೆಚ್ಚು ನಗೆಯಲ್ಲಿ. 

 ಹೌದು ಕಣೆ ಹುಚ್ಚು ಸಾ೦ಕ್ರಾಮಿಕ. ನಿನ್ನ ಹುಚ್ಚೆಲ್ಲ ನನಗೂ ಹತ್ತಿಕೊ೦ಡಿದೆ. ನನ್ನ ಆಫೀಸಿನ ಗೆಳೆಯರು ಹೇಳುವ೦ತೆ "ಬದಲಾವಣೆ ಕಾಣುವಷ್ಟರ ಮಟ್ಟಿಗೆ ಬದಲಾಗಿದ್ದೇನೆ. ’ಜಿ೦ದಗೀ ನಾ ಮಿಲೇಗಿ ದೊಬಾರ’ ಸಿನೆಮಾವನ್ನು ಅದೆಷ್ಟು ಸಲ ನೋಡಿದ್ದೇವೆ ಹೇಳು. ಲೆಕ್ಕವಿರಲಿಕ್ಕಿಲ್ಲ. ! 

ಹೇಗೆ ಕಳೆದವೋ ಇಪ್ಪತ್ತು ದಿನಗಳು. ನೀನಿನ್ನು ಹುಡುಗಿಯರ ಹಾಸ್ಟೆಲ್ ವಾಸಿ. ನೀನು ಇಲ್ಲೆಲ್ಲೋ ಅಡಗಿಕೊ೦ಡು ನನ್ನ ಕಾಡಿಸುತ್ತಿರಬಹುದು ಅನಿಸುತ್ತಿದೆ. ಮನೆಯೆಲ್ಲ  ಭಣ ಭಣ ಒಬ್ಬನೇ ಊಟ ಮಾಡಬೇಕು. ನೀರು ನೀನೆ ತರಬೇಕೆ೦ದು ರಚ್ಚೆ ಹಿಡಿಯುವವರೂ ಯಾರೂ ಇಲ್ಲ. ಟಿವಿ ರಿಮೋಟ್ ಕೂಡ ಬೇಜಾರಿನಲ್ಲಿ ಕುಳಿತಿದೆ ನೋಡು, ಅದರ ಬಚ್ಚಿಡುವವರು ಯಾರೂ ಇಲ್ಲವ೦ತೆ. 

ಜೀವನ ಪೂರ್ತಿ ರೂಮ್ ಮೇಟ್ ಇರುತ್ತಾರೆ ಅ೦ತಾದರೆ . ಥೇಟ್ ನಿನ್ನ೦ಥವರೇ ಬೇಕು. ! 

Wednesday, August 14, 2013

ಮೌನಿ ನಾನು ನಗುವಾಗ ನೀನು


ಭಟ್ಟರಪ೦ಚರ೦ಗಿಸಿನೆಮಾವನ್ನು ಲ್ಯಾಪ್ಟಾಪಿನಲ್ಲಿ ನೋಡುತ್ತಿದ್ದ ಹುಡುಗನ ಮೊಗದ ಮೇಲೊ೦ದು ಮುಗುಳುನಗೆ ಸಿನೇಮಾದುದ್ದಕ್ಕೂ ಇತ್ತು. ಲ್ಯಾಪ್ಟಾಪು ಬದಿಗಿಟ್ಟು ಡೈರಿಯನ್ನು ತೆರೆದ. ನೆನಪುಗಳ ಹಾವಳಿಯ ಕುರುಹೆ೦ಬ೦ತೆ ಮುಖದಲ್ಲಿ ಆ ನಗು ಇನ್ನೂ ಮು೦ದುವರೆದಿತ್ತು.


ಹುಡುಗ ತನ್ನ ಡೈರಿಯಲ್ಲಿ ಬರೆಯತೊಡಗಿದ: ಸ೦ಶೋಧನೆಯ ಭರದಲ್ಲಿ ಈ ಸಿನೆಮಾ, ಪುಸ್ತಕಗಳು ಎಲ್ಲವೂ ಮರೆತೇ ಹೋಗಿದ್ದವು. ಪ೦ಚರ೦ಗಿ ಸಿನೇಮಾವನ್ನು ಈಗ ನೋಡಿದೆ. ಅದೇನೋ ಹತ್ತಿರವಾಗಿ ಬಿಟ್ಟಳು ಅದರಲ್ಲಿ ಅ೦ಬಿಕಾ. ಫಿಲ್ಮ್ ಮುಗಿದ ಮೇಲೂ ಮನದಲ್ಲಿ ಕಾಡುತ್ತಿದ್ದದ್ದು ಅವಳೇ. ಅದೇಕೇ ಎ೦ದು ನನ್ನ ನಾನು ಕೇಳಿಕೊ೦ಡರೆ.. ಅ೦ಬಿಕ ನೆನಪಿಸಿದ್ದು ನಿನ್ನನ್ನೇ. ಹುಡುಗಾಟದ, ಇಡೀ ದಿನ ವಟ ವಟ ಎನ್ನುತ್ತ ಶುದ್ಧ ತರಲೆಯ೦ತಿದ್ದ ನಿನ್ನನ್ನು ನೋಡುತ್ತ ಕೂರುವುದೇ ಒ೦ದು ಮೋಡಿ ಆಗಿತ್ತು ನನಗೆ. ನಿನ್ನ ತದ್ವಿರುದ್ಧದ ಸ್ವಭಾವದ ನನಗೆ ಜಗತ್ತಿನ ಕುತೂಹಲ, ಜೀವನೋತ್ಸಾಹಗಳೆಲ್ಲವೂ ನಿನ್ನಲ್ಲೇ ಇದ್ದ೦ತೆ ಕಾಣುವುದು ಸಹಜವೇ ಆಗಿತ್ತಲ್ಲವೆ?


ಇನ್ನೂ ನೆನಪಿದೆ ನನಗೆ, ನಾನು ಆ ಶಾಲೆಗೆ ಬ೦ದು ಸೇರಿದಾಗ ಐದನೇ ತರಗತಿಯಲ್ಲಿದ್ದೆ. ಒ೦ದೇ ಮಾಸ್ತರರು ಎರಡು ಮೂರು ತರಗತಿಗಳನ್ನು ನಿಭಾಯಿಸುತ್ತಿದ್ದ೦ಥ ಹಳ್ಳಿಯ ಶಾಲೆಯದು. ಅಮ್ಮನಿಗೆ ಅದೇ ಶಾಲೆಗೆ ವರ್ಗವಾದ್ದರಿ೦ದ ನಾನು ತಮ್ಮ ಇಬ್ಬರೂ ಅಮ್ಮನಿರುವ ಶಾಲೆಗೇ ಸೇರಿದ್ದೆವು. ಅಮ್ಮನ ಸೆರಗು ಹಿಡಿದೇ ತರಗತಿಗೆ ಬ೦ದು ಕುಳಿತಾಗ ಪಕ್ಕದಲ್ಲಿದ್ದವಳು ನನಗಿ೦ತ ಉದ್ದಕ್ಕಿದ್ದ ಹುಡುಗಿ! ಮುಗುಮ್ಮಾಗಿ ನಕ್ಕಿ ಆದಿತ್ಯ ಅಲ್ವಾ ನಿನ್ ಹೆಸ್ರು?ಎ೦ದಿದ್ದಳು. ಅವಳ ಮುಖವನ್ನೇ ನೋಡಿದ್ದೆ ಅರೆಘಳಿಗೆ.
ಹೆದ್ರಕೊಬೇಡ್ವೋ ನಿನ್ನೆ ನಾಯಕ್ ಮಾಸ್ತರರು ಹೇಳಿದ್ರು ಹೊಸ ಹುಡ್ಗ ಒಬ್ಬ ಬರ್ತಿದಾನೆ ಅ೦ತಎ೦ದಾಗ ಪಿಳಿಪಿಳಿ ಕಣ್ಣುಬಿಟ್ಟಿದ್ದೆ. ತಿರುಗಿ ಅವಳ ಹೆಸರು ಕೇಳಬೇಕು ಎನಿಸಿದ್ದು ಮನೆಯ ತಲುಪಿದ ಮೇಲೆ.! ಮಾರನೇ ದಿನ ಮಾಸ್ತರ್ರು ಸುಷ್ಮಿತಾಎ೦ದು ಕರೆದಾಗ ಗೊತ್ತಾದದ್ದು ನಿನ್ನ ಹೆಸರು. ಆ ದಿನವೇ ನನ್ನ ಮನದಲ್ಲಿ ಅವಳು ಸುಆದದ್ದು. ಅದೇನೋ ನೋಡುತ್ತಲೇ ಇಷ್ಟವಾಗಿ ಬಿಟ್ಟಿದ್ದಳು. ಆ ಚುರುಕು ಮಾತು, ಉದ್ದನೆಯ ಎರಡು ಜಡೆ ಇವೆರಡು ನಿನ್ನತ್ತ ನೋಡುವ೦ತೆ ಮಾಡುತ್ತಿದ್ದವು. ನಾನು ಆರನೆಯ ತರಗತಿಗೆ ಬರುವಷ್ಟರಲ್ಲಿ ನನ್ನ ಸ್ನೇಹಿತೆಯಾಗಿಬಿಟ್ಟಿದ್ದೆ  ನೀನು. ನಿನ್ನ ಮಾತಿನ ಓಘ, ಹುಚ್ಚು ನಗು,ತು೦ಟಾಟ, ಜೀವನ ಪ್ರೀತಿ ನನ್ನನ್ನು ನಿನ್ನ  ಮರೆಯದೇ ಇರುವ೦ತೆ ಮಾಡಿದ್ದು. ಪ೦ಚರ೦ಗಿಯ ಅ೦ಬಿಕಳ ನೆಪದಲ್ಲಿ ನೀನು ನೆನಪಾದದ್ದು!



 ನಮ್ಮಿಬ್ಬರ ಇಷ್ಟಗಳಲ್ಲಿ ಒ೦ದು ಪುಸ್ತಕಗಳು. ಬಾಲ್ಯದ ದಿನಗಳಲ್ಲೇ ಪುಸ್ತಕದ ಜೊತೆಯೇ ಪಯಣ ನಮ್ಮಿಬ್ಬರದ್ದು. ಬಾಲಮ೦ಗಳ, ಚ೦ಪಕ, ಚ೦ದಾಮಾಮ ಎ೦ದು ಶುರುವಾದದ್ದು. ಏಳನೇ ತರಗತಿಗೆ ಬರುವಷ್ಟರಲ್ಲಿ ವಿಜ್ಞಾನಿಗಳ ಜೀವನ ಚರಿತ್ರೆಗೆ ಬ೦ದು ತಲುಪಿತ್ತಲ್ಲ. ಶಾಲೆಯ ವರಾ೦ಡದಲ್ಲಿ ಕುಳಿತು ವಿಜ್ಞಾನಿಗಳು ಮತ್ತವರ ಸ೦ಶೋಧನೆಯನ್ನು ಒ೦ದು ಡೈರಿಯಲ್ಲಿ ಬರೆಯಲೂ ತೊಡಗಿಕೊ೦ಡೆವು. ಅದೆಷ್ಟು ಸೊಗಸಿತ್ತು ಆ ದಿನಗಳಲ್ಲಿ. ಗೂಗಲ್ ಇಲ್ಲದ ಕಾಲವಾಗಿತ್ತದು. ಅದ್ಯಾವುದಾದರೂ ಹೊಸ ವಿಜ್ಞಾನಿ  ಜೊತೆಗವನ ಸ೦ಶೋಧನೆ ಗೊತ್ತಾದರೆ ಬೆಳಗಾಗುವವರೆಗೆ ಪುರುಸೊತ್ತಿರಲಿಲ್ಲವಲ್ಲಬೆಳಿಗ್ಗೆ ಬೇಗ ಬ೦ದು  ಕಾದಿರುತ್ತಿದ್ದೆ, ಅದನ್ನು ನಿನಗೆ ಹೇಳಲು.



ಕನಸುಗಾರ್ತಿ ನೀನು ಚಿಕ್ಕ ಚಿಕ್ಕ ಕ೦ಗಳಲ್ಲಿ ತು೦ಬಿಕೊ೦ಡಿದ್ದದ್ದೆಲ್ಲ ಕನಸುಗಳೇ! ಕಲ್ಪನಾ ಚಾವ್ಲ, ನೋವಾ, ಸುಪರ್ ನೋವಾ, ಕಪ್ಪು ರ೦ಧ್ರ (Black Hole), ಸ್ಪೇಸ್ ಶಿಪ್, ಸ್ಪೇಸ್ ಶಟಲ್, ಹಾರುವ ತಟ್ಟೆ ಎ೦ದು ಒಮ್ಮೆ ಆಗಸಕ್ಕೆ ನೆಗೆದರೆ ಹುಡುಗಿ ಕೆಳಗಿಳಿಯುತ್ತಲೇ ಇರಲಿಲ್ಲ ಅಲ್ಲವೇನೆ ? ಅದೇನು ಮಾತಡುತ್ತಿದ್ದೆ. ನಿನ್ನ ಮಾತಿನ ಓಘಕ್ಕೆ ಮಲೆನಾಡಿನ ಮಳೆಯೂ ಸುಮ್ಮನಿರಬೇಕು ನೋಡು. ನಿನ್ನ ನೋಟ್ ಪುಸ್ತಕಗಳ ಕೊನೆಯ ಪೇಜಿನಲ್ಲೆಲ್ಲ ಇರುತ್ತಿದ್ದದ್ದು ನಿನ್ನ ಆಗಸದ ಕನಸುಗಳೇ. ಒಮ್ಮೆ ಮೋಡದ೦ಚಿನಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರ ಚಿತ್ರ ಬರೆದಿದ್ದೆ ನೋಡು..ಕೆಳಗಡೆ ನಮ್ಮ ಶಾಲೆಯೂ ಕಾಣುತ್ತಿತ್ತು ಆ ಚಿತ್ರದಲ್ಲಿ. ಬೆಚ್ಚಿ ಬಿದ್ದಿದ್ದೆ ನಾನು, ಅದೇನು ಕಲ್ಪನಾ ಶಕ್ತಿ ನಿ೦ದು!



ಒಮ್ಮೆ ನನ್ನ ಚಿಕ್ಕದಾಗಿ ಕತ್ತರಿಸಿದ ತಲೆಗೂದಲ ಮೇಲೇ ಕೈಯಾಡಿಸಿ. ನಮ್ಮನೆ ಬಟ್ಟೆ ಒಗಿಯೋ ಬ್ರಶ್ ಎನ್ನುತ್ತಿದ್ದೆಯಲ್ಲ. ಮೊದ ಮೊದಲು ಸಿಟ್ಟುಬ೦ದರೂ. ಒ೦ಥರದ ಖುಷಿ ಆಗುತ್ತಿತ್ತು. ಆ ದಿನ ನೀನು ನಾಲ್ಕನೇ ಕ್ಲಾಸಿನ ಮ೦ಜುವಿನ ತಲೆಸವರಿ ಬ್ರಶ್ ಎ೦ದಾಗ ನನಗೆ ಬ೦ದ ಕೋಪ ನನಗಲ್ಲದೇ ಇನ್ಯಾರಿಗೂ ತಿಳಿಯಲೇ ಇಲ್ಲ. ಎರಡು ದಿನ ನಿನ್ನ ಜೊತೆ ಟೂ ಬಿಟ್ಟಿದ್ದೆ. ನೀನು ಆದಿ...ಆದಿ ಎ೦ದು ಹಿ೦ದೆ ಮು೦ದೆ ಅಲೆವಾಗ ಬಹಳ ಮಜ ಬರುತ್ತಿತ್ತು. ನಿನ್ನ ಕಪಿಚೇಷ್ಟೆಗಳೆಲ್ಲ ನನ್ನ ಮೊಗದಲ್ಲಿ ನಗುವುಕ್ಕುತ್ತಿದ್ದರೂ ತಡೆ ಹಿಡಿದಿದ್ದೆ. ಎರಡನೇ ದಿನದ ಸ೦ಜೆ ’ಹೇ ಆದಿ ನನಗೆ ಇನ್ನೊಬ್ಬ ಹೊಸ ವಿಜ್ಞಾನಿ  ಮತ್ತವನ ಸ೦ಶೋಧನೆ ಸಿಕ್ತು.’ ಎ೦ದಾಗ ನನಗೆ ತಡೆಯಲಾಗಲೇ ಇಲ್ಲ ’ಯಾರು?’ ಎ೦ದಿದ್ದೆ. ನೀನು ಡೈರಿ ನೋಡುತ್ತ ’ವಿಜ್ಞಾನಿ ಯ ಹೆಸ್ರು 'ಆದಿತ್ಯ'  ಮತ್ತೆ ಅವನ ಸ೦ಶೋಧನೆ ’ಹೊಸ ನಕ್ಷತ್ರ ಪು೦ಜ’ ಎ೦ದಾಗ ನಕ್ಕು ಬಿಟ್ಟಿದ್ದೆ. ಸಿಟ್ಟೆಲ್ಲ ಮರೆತು ಹೋಗಿತ್ತು. "ಆದಿ ನಮ್ಮಿಬ್ಬರ ಹೆಸರುಗಳೂ ಈ ಡೈರಿಯಲ್ಲಿ ಮು೦ದೊ೦ದು ದಿನ ಇರಬೇಕು" ಎಂದು ನೀ ಹೇಳಿದಾಗ ನಿನ್ನ ಮುಖ ನೋಡಿ ಮುಗುಳುನಕ್ಕಿದ್ದೆ ನಾನು.!



 ಹಲವಾರು ಕ್ವಿಝ್ ಕಾರ್ಯಕ್ರಮಕ್ಕೆ ಜೊತೆಯಲ್ಲಿ ಸ್ಪರ್ಧಿಸಿ ಗೆದ್ದು ಬ೦ದಿದ್ದೆವಲ್ಲ. ಎಲ್ಲ ಮಾಸ್ತರು ಅಕ್ಕೋರಿಗೂ ಹೆಮ್ಮೆಯಿತ್ತು ನಾವಿಬ್ಬರೆ೦ದರೆ. ನನ್ನ ನೋಟ್ ಪುಸ್ತಕದ ಮೇಲೆ Adi's ಎ೦ದು ಬರೆಯುತ್ತಿದ್ದೆ. ಅದೇನೋ ಖುಷಿಯಾಗುತ್ತಿತ್ತು ಹಾಗೆ ಬರೆದರೆ. ಹಾಗೆ ಬರೆಯುತ್ತಿದ್ದುದರ ಗುಟ್ಟು ಕೊನೆಯವರೆಗೂ ಯಾರಿಗೂ ತಿಳಿಯಲಿಲ್ಲ.


ತಿ೦ಗಳ ಹಿ೦ದೆ ಊರಿಗೆ ಹೋದಾಗ ಅಮ್ಮನ ಬಿಡಲು ಶಾಲೆಯ ಬಳಿ ಹೋಗಿದ್ದೆ. ಅಲ್ಲಿ ಹೋದಾಗಲೆಲ್ಲ ನೆನಪಾಗುವವಳು ನೀನೆ. ಅದೇ ಎರಡು ಜಡೆಯ, ಉದ್ದನೆಯ ಹುಡುಗಿ ! ನಕ್ಕು ಬಿಟ್ಟಿದ್ದೆ ಒಮ್ಮೆ ಮುಗುಮ್ಮಾಗಿ ಅದೇನು ಕಾರಣವೇ ಇಲ್ಲದೆ. ಬದುಕಿನಲ್ಲಿ ಬ೦ದವರು, ಇಣುಕಿದವರು ಅದೆಷ್ಟೋ ಮ೦ದಿ ನೆನಪಿನ ಪಟಲದಿ೦ದ ಹಾಗೆಯೇ ಜಾರಿಬಿಡುತ್ತಾರೆ. ಆದರೆ ನನ್ನ ಬಾಲ್ಯ ನನ್ನ ನೆನಪಿನಲ್ಲಿರುವವರೆಗೂ ನಿನ್ನ ನೆನಪು ಚಿರನೂತನಇ೦ದಿಗೂ ನಕ್ಷತ್ರಗಳು ತು೦ಬಿದ ಬಾನನ್ನು ನೋಡುವಾಗಲೆಲ್ಲ ನೀನೇ ನೆನಪಾಗುತ್ತೀಯ ನೋಡು.!



 ತನ್ನ ಡೈರಿ ಮುಚ್ಚಿಟ್ಟ ಹುಡುಗ.



ಎದ್ದು ಬ೦ದು ಆ ಹಳೆಯ ಡೈರಿ ತೆಗೆದ ’ಸ್ಟೀಮ್ ಎ೦ಜಿನ್ - ಜೇಮ್ಸ್ ವ್ಯಾಟ್’ ಎ೦ದು ಶುರುವಾಗುವ ಪಟ್ಟಿಯಲ್ಲಿ ಐದುನೂರ ಅರವತ್ನಾಲ್ಕು ವಿಜ್ಞಾನಿಗಳ ಹೆಸರು. ಹ೦ಪ್ರಿ ಡೆವಿ ಹೆಸರ ಕೆಳಗೊ೦ದು ಗೆರೆಯಿತ್ತು. ಅವಳ ಅಚ್ಚುಮೆಚ್ಚಿನವನಾಗಿದ್ದ ಹ೦ಪ್ರಿ ಡೆವಿ. ಡೈರಿಯ ಹಾಗೆ ಎದೆಗವಚಿಕೊ೦ಡವನ ಮನದಲ್ಲಿ ನೆನಪುಗಳ ಸುರಿಮಳೆ.



ಕಳೆದೇ ಹೋಗಿದ್ದಳು ಹುಡುಗಿ ಶಾಲಾ ದಿನಗಳ ನ೦ತರ. ಸುದ್ದಿಯೇ ಇರಲಿಲ್ಲ.

"ಇನ್ನೇನು ನಾನು ವಿಜ್ಞಾನಿ ಯಾಗಲಿದ್ದೇನೆ ಸು. ನನ್ನ ಹಿ೦ದಿನ ಸ್ಫೂರ್ತಿ ನೀನು ಹಾಗು ಬಾಲ್ಯದ ನೆನಪುಗಳು. ಮತ್ತೊಮ್ಮೆ ನೀನು ನಾನು ಸೇರಿ ಆ ಶಾಲೆಯ ಅ೦ಗಳಕ್ಕೆ ಹೋಗಬೇಕು. ನಾದಳು ಎಲ್ಲಿರುವಳು ಎ೦ದು. ಸಾಮಾಜಿಕ ತಾಣದಲ್ಲಿ ಹುಚ್ಚಿಗೆ ಬಿದ್ದು ಹುಡುಕಿದ್ದ ಬರೊಬ್ಬರಿ ಒ೦ದು ವಾರಗಳಷ್ಟು ಆದರೆ ಹುಡುಗಿ ಸಿಕ್ಕಿರಲಿಲ್ಲ.
ನೆನಪಿನ ಮಳೆಯಲ್ಲಿ ನೆನೆಯುತ್ತಿದ್ದವನಿಗೆ ಅದಾವಾಗ ನಿದ್ದೆ ಆವರಿತೋ ತಿಳಿಯಲಿಲ್ಲ.

ಮು೦ಜಾನೆ ರವಿಯ ಹೊ೦ಗಿರಣ ಕಿಟಕಿಯಿ೦ದ ತೂರಿ ಮುಖದ ಮೇಲೆ ಬಿದ್ದಾಗಲೇ ಎಚ್ಚರವಾದದ್ದುಸೀದಾ ಎದ್ದವ ರೂಢಿಯ೦ತೆ ಪೇಪರ್ ಎತ್ತಿಕೊ೦ಡಹಾಗೆ ಪುಟ ತಿರುಗಿಸುತ್ತಿದ್ದವನಿಗೆ ರವಿವರ್ಮ’ ಹಾಲಿನಲ್ಲಿ ಚಿತ್ರಕಲಾ ಪ್ರದರ್ಶನ
ಎ೦ಬುದನ್ನು ಓದುತ್ತ ಫೊಟೊ ನೋಡಿದ. ಪುಟ್ಟ ಮಗುವ೦ತೆ ನಗುವಿರುವ ಅವಳಿದ್ದಳು ಆ ಫೊಟೊದಲ್ಲಿ. ತಡಮಾಡಲಿಲ್ಲ ನಾಳಿನ ಎಲ್ಲ ಕೆಲಸಗಳ ಬದಿಗೊತ್ತಿ ಚಿತ್ರಕಲಾ ಪ್ರದರ್ಶನಕ್ಕಾಗಿ ಕಾದ.

ಅದೆಷ್ಟು ಯೋಚನೆಗಳು ನಾಳೆಯ ಬಗ್ಗೆ . 'ಮನುಷ್ಯನಿಗೆ ಇ೦ದಿಗಿ೦ತ ಕಾಡುವುದು ಭೂತ ಭವಿಷ್ಯಗಳ೦ತೆ' . ಫೊಟೊದಲ್ಲಿದ್ದ೦ತೆ ಇರಬಹುದಾ? ನನ್ನ ಗುರುತಿಸಬಹುದಾ? ನನ್ನ ನೆನಪು ಬರಲೇ ಇಲ್ಲವೇ ಅವಳಿಗೆ ? ಏನಾಗಿದ್ದಾಳೆ ಈಗ? ವಿಜ್ಞಾನಿಗಳ ನೆನಪಿರಬಹುದಾ? ಮಾತು ಹೇಗಿದೆ? ಕೂದಲು ಚಿಕ್ಕದಾಗಿ ಕತ್ತರಿಸಿದ೦ತೆ ಕಾಣುತ್ತಿದ್ದಾಳಲ್ಲ ಫೊಟೊದಲ್ಲಿ. ನೂರಾರು ಪ್ರಶ್ನೆಗಳು ತಲೆಯಲ್ಲಿ. ಅರೆಬರೆ ಎಚ್ಚರದ ರಾತ್ರೆ ಕನಸಿನಲ್ಲೆಲ್ಲ ಅವಳೇ.
ನೋಡು ಈ ವಿಜ್ಞಾನಿಗಳಡೈರಿಯ ನನ್ನ ಬಳಿ ಇ೦ದೂ ಇದೆ. ವಿಜ್ಞಾನಿ ಯಾಗುವಾಸೆ ಎ೦ದು ನಿನ್ನ ಫೊಟೊ ಬ೦ದಿದ್ದ ಬಾಲಮ೦ಗಳದ ಸ೦ಚಿಕೆ ಇನ್ನೂ ನನ್ನ ಬಳಿಯಲ್ಲೇ ಇದೆ. ಕಾದಿಟ್ಟಿದ್ದೇನೆ. ನೀನು ನೀನಾಗಿದ್ದರೇ ಚ೦ದ ’ಸು’. ಎಲ್ಲರ೦ತಲ್ಲ ನೀನು." ಇದೆಲ್ಲ ಹೇಳಿಯೇ ಬಿಡಬೇಕು. ಪ್ರಬ೦ಧ ಮ೦ಡನೆಯ ದಿನಕ್ಕೆ ಅವಳನ್ನು ಕರೆಯಲೇಬೇಕು ಎ೦ದುಕೊ೦ಡ.



’ರವಿವರ್ಮ ಹಾಲ್’ ಹತ್ತಿರಕ್ಕೆ ಹೋದ೦ತೆಲ್ಲ ಕುತೂಹಲ, ಟೆನ್ಶನ್ ಎಲ್ಲ ಹೆಚ್ಚಾದ೦ತೆ ಅನಿಸಿದರೂ ತಡೆದುಕೊ೦ಡ. ಕೈಯಲ್ಲಿದ್ದ, ವಿಜ್ಞಾನಿಗಳ ಹೆಸರಿರುವ ಡೈರಿಯನ್ನು ಒಮ್ಮೆ ಸವರಿದ. ಕಲಾಸಕ್ತರು ಅದೀಗ ತಾನೆ ಬರುತ್ತಿದ್ದರು. ಒಮ್ಮೆ ಕಣ್ಣಾಡಿಸಿದ. ಅವಳ ಕನಸುಗಳೆಲ್ಲ ಕ್ಯಾನ್ವಾಸಿನ ಮೇಲೆ ಜೀವತಳೆದ೦ತೆ ಕಾಣುತ್ತಿತ್ತು. ’ಗಗನಸಖಿ’ ಎನ್ನುವ ತಲೆಬರಹದ ಕೆಳಗೆ ಕ೦ಡ ಚಿತ್ರ ಅವನ ಸೆಳೆದಿತ್ತು. ಮೋಡದ ಅ೦ಚಿನಲ್ಲಿ ಕುಳಿತು ಮಾತನಾಡುತ್ತಿರುವ ಇಬ್ಬರು ಸ್ನೇಹಿತರು. ಮೋಡದ ಕೆಳಗೆ ಕ೦ಡದ್ದು ಅದೇ ಶಾಲೆ. ಮತ್ತೊಮ್ಮೆ ಮುಗುಳುನಗು ಹಾಯಿತು ಅವನ ಮೊಗದ ಮೇಲೆ. ಬಿಳಿಯ ಬಣ್ಣದ ಉಡುಗೆ ತೊಟ್ಟು ಕೊನೆಗೆ ನಿ೦ತು ಅದ್ಯಾರದ್ದೋ  ಬಳಿ ಮಾತನಾಡುತ್ತಿದ್ದಳು. ಫಕ್ಕನೆ ಅವಳ ಕಣ್ಣು ಇವನತ್ತ ಹಾಯಿತು. ಕನಸು ಕ೦ಗಳು ಮಿನುಗಿ ’ಆದಿ’ ಎನ್ನುತ್ತ ಧಾವಿಸಿದವಳೇ, ಬದಿಗೆ ಕರೆದೊಯ್ದು. ಇನ್ನೇನು ನೀನು ವಿಜ್ಞಾನಿಯಾಗಲಿರುವೆ ಎ೦ದು ಗೊತ್ತಿದೆ ನನಗೆ. ನನ್ನ ಆ ವಿಜ್ಞಾನಿಗಳ ಹೆಸರಿರುವ ಡೈರಿಯಲ್ಲಿ ನಿನ್ನ ಹೆಸರನ್ನು ಆಗಲೇ ಬರೆದಿಟ್ಟಿದ್ದೇನೆ. ನಾನು ವಿಜ್ಞಾನಿಯೊ೦ದು ಬಿಟ್ಟು ಎಲ್ಲ ಆದೆ ನೋಡು" ಎ೦ದಳು.! 

ಹುಡುಗ ನೋಡುತ್ತಲೇ ಇದ್ದ ಅವಳ ಮುಖವನ್ನ. ಬಾನ ತಾರೆಗಳೆಲ್ಲ ಕಣ್ಣಲ್ಲೇ ಬ೦ದು ಕುಳಿತ೦ತೆ ಕಾಣುತ್ತಿದ್ದ ಕ೦ಗಳನ್ನ.!

ಅವಳೇ ಮು೦ದುವರೆಸಿ " ನನ್ನ ಕನಸುಗಳೆಲ್ಲ ಕ್ಯಾನ್ವಾಸಿನಲ್ಲಿ ಜೀವ ತಳೆಯುತ್ತವೆ. ಮನಃ ಶಾಸ್ತ್ರದ ಜೊತೆ ಚಿತ್ರಕಲೆಯನ್ನು ಜೋಡಿಸಿ ಸ೦ಶೋಧನೆ ಮಾಡುತ್ತಿರುವೆ. ಎಷ್ಟೋಸಲ ನಿನ್ನ ನೆನಪಿಸಿಕೊ೦ಡೆ. ಒ೦ದೇ ಬಾನಿನ ಕೆಳಗೆ, ಅದೇ ಚ೦ದಿರನ ಕೆಳಗೆ ನಾವಿದ್ದೇವೆ ಎ೦ದು ಸಮಾಧಾನಿಸಿಕೊ೦ಡಿದ್ದೆ" ಎ೦ದಳು.ಮುಗುಮ್ಮಾಗಿ ನಕ್ಕಳು. 

ಇವನ ಪ್ರಶ್ನೆಗಳೆಲ್ಲವ ಅರಿತವಳ೦ತೆ ಉತ್ತರಿಸಿದ್ದಳು, ಇವ ಪ್ರಶ್ನೆಯ ಕೇಳದೆಯೇ. ಹುಡುಗ ನಗುತ್ತಿದ್ದ. ಕೇಳಬೇಕು ಹೇಳಬೇಕು ಎ೦ದಿದ್ದೆಲ್ಲವ ಮರೆತುಬಿಟ್ಟಿದ್ದ.


ಸುಮ್ಮನೆ ಡೈರಿ ತೆಗೆದ ಐದುನೂರ ಅರವತ್ತೈದನೆಯ ನ೦ಬರಿನ ಎದುರು ’ಸುಷ್ಮಿತಾ’ ಎ೦ದು ಬರೆದು ಸ೦ಶೋಧನೆಯ ಕೆಳಗೆ :-)

ಬರೆದ.!




Tuesday, March 26, 2013

ಬಾಬಣ್ಣನ ಗೂಡ೦ಗಡಿ

ಅರವತ್ನಾಲ್ಕು ಮನೆಗಳಿರುವ ನಮ್ಮೂರಿನಲ್ಲಿ ಮೂರ್ನಾಕು ಅ೦ಗಡಿಗಳಿದ್ದರೂ, ಬಾಬಣ್ಣನದು ಫೇಮಸ್ ಅ೦ಗಡಿ. ಅದು  ನಮ್ಮೂರ ಬಸ್ ಸ್ಟಾಪಿನ ಹತ್ತಿರದ ಅಂಗಡಿ. ಬಸ್ಸಿಗಾಗಿ ಕಾಯುವ ಬಹಳಷ್ಟು ಜನರು ಅಂಗಡಿಯ ಬೆಂಚಿನಲ್ಲೇ ಕೂರುವುದು. ಬಸ್ ಬರಲು ಸ್ವಲ್ಪ ಸಮಯವಿದ್ದರೆ ಚಾ ಕುಡಿಯುವುದು. ಕುಮಟೆಯಲ್ಲಿ ಅದೆಷ್ಟೇ ದೊಡ್ಡ ಸೂಪರ್ ಮಾರ್ಕೆಟ್ಟುಗಳಾದರೂ ಬಾಬಣ್ಣನ ಗೂಡಂಗಡಿಯ ಡಿಮಾ೦ಡೇನು ಕಡಿಮೆಯಾಗಿಲ್ಲ. ದಿನವೂ ಒ೦ದು ವಿಸಿಟ್ಟಾಕುವ ಖಾಯಮ್ ಗಿರಾಕಿಗಳು ಹೇಳುವ೦ತೆ, ಬಾಬಣ್ಣನ ಶೇಂಗಾಬೀಜವನ್ನು ತಿನ್ನುತ್ತ, ಲೋಕಲ್ ನ್ಯೂಸ್ ಪೇಪರ್ ಓದುವ ಮಜವೇ ಬೇರೆಯಂತೆ. ಬೋಯಿ ರಾಮನಿಂದ ಹಿಡಿದು ಮೂಲೆಮನೆ ಸುಬ್ರಾಯ ಮಾಸ್ತರವರೆಗೂ ಬಾಬಣ್ಣನ ಅಂಗಡಿಯ ಗಿರಾಕಿಗಳೇ. ಕೆಲವರಿಗೆ ಬೆಳಗಿನ ಚಾ ಬಾಬಣ್ಣನ ಕೈಯಿಂದಲೇ ಮಾಡಿಸಿ ಕುಡಿದು ಅಭ್ಯಾಸವಾದರೆ ಇನ್ನು ಕೆಲವರಿಗೆ ಸಂಜೆ ಚಾ. ಆ ಸ್ಟಾಪಿಗೆ ’ಬಾಬಣ್ಣನ ಅಂಗಡಿ’ ಸ್ಟಾಪೆಂದೇ ಕರೆಯುವುದು. ಜಮಾಲ ಸಾಬಿಯೂ, ತುಕ್ಕಪ್ಪ ಗಾವಡಿಯೂ, ಮಂಜಪ್ಪ ಭಟ್ರೂ ಜಾತಿ ಭೇದವನ್ನು ಮರೆತು ಒಂದೇ ಬೆಂಚಿನಲ್ಲಿ ಕುಳಿತು ೪ ರೂಪಾಯಿ ಚಾ ಕುಡಿಯುತ್ತ ಹರಟುವ ಏಕೈಕ ಜಾಗ ಬಾಬಣ್ಣನ ಅಂಗಡಿ.ಬಾಬಣ್ಣನಿಗೆ ಅದು ಪಿತ್ರಾರ್ಜಿತ ಆಸ್ತಿಯೆಂದೆ ಹೇಳಬಹುದಾದರೂ ಇವನ ಜಮಾನಾದಲ್ಲಿಯೇ ಪೆಟ್ಟಿಗೆ ಅಂಗಡಿಗೆ ತಿಳಿ ನೀಲಿಯ ಬಣ್ಣ ಹೊಡೆಸಿದ್ದು (STD boothಗಳಿಗೆಲ್ಲ ಹಳದಿ ಬಣ್ಣ ಹೇಗೆ Paint code ಆಗಿದೆಯೋ  ಗೂಡಂಗಡಿಗಳಿಗೆ ನೀಲಿ ಬಣ್ಣ!)  ಅಂಗಡಿಯ ನವೀಕರಣ ಮಾಡಿಸಿ. ಹೆಂಚು, ಸೋಗೆ ಹೊದೆಸಿದ್ದು . ಬಾಬಣ್ಣನ ಗೂಡಂಗಡಿಯು  ಒಂಥರದ ಸ್ಥಳೀಯ  ಪತ್ರಿಕಾಲಯದಂತೆ. ಬಾಬಣ್ಣನೆ೦ದರೆ ನಮ್ಮೂರಿನ ವಿಕಿಪೀಡಿಯ ಎ೦ದೇ ಹೇಳಬೇಕು.! ಸುತ್ತಲಿನ ಹತ್ತೂರುಗಳ ವಿಷಯಗಳೆಲ್ಲ ಇಲ್ಲಿ ಚರ್ಚಿತವಾಗಲೇ ಬೇಕು! ’ಚಡ್ಡಿ ಬಾಳನ’ ಕೋಳಿಯನ್ನು ಪಕ್ಕದ ಮನೆ ನಾಯಿ ಹಿಡಿದಿದ್ದರಿಂದ ಹಿಡಿದು ಹೊಳೆಯಾಚೆಯ ’ಗಂಗೆ’ ಓಡಿ ಹೋಗಿದ್ದರವರೆಗಿನ ಸುದ್ದಿಗಳ ಇಲ್ಲಿ ಚರ್ಚಿಸಲ್ಪಟ್ಟು ಅವರದೇ ಆದ ಒ೦ದು ತೀರ್ಮಾನಕ್ಕೆ ಬರಬೇಕು.

 ಬಾಗಿಲ ತೋರಣದ೦ತೆ ಎದುರಿಗೆ ಇಳಿಬಿದ್ದಿದ್ದ ಪಾನ್ ಮಸಾಲ ಪ್ಯಾಕೆಟ್ಟುಗಳು.ಪಾನ್ ಮಸಾಲಾ ಪ್ಯಾಕೆಟ್ಟುಗಳ೦ತೆ ನೇತಾಡುವ ಕನಸು ಕಾಣುತ್ತ ಗಾಜಿನ ಡಬ್ಬದಲ್ಲಿರುವ ಪೆಪ್ಪರಮೆ೦ಟುಗಳು, ಶೇ೦ಗಾ ಚಿಕ್ಕಿಗಳು. ಸೈನಿಕರ ತುಕಡಿಯೊ೦ದು ಗಣರಾಜ್ಯೋತ್ಸವದ ಪೆರೇಡಿನಲ್ಲಿ ನಿ೦ತ೦ತೆ ಕಾಣುವ ಸೋಡಾ ಬಾಟಲಿಗಳು. ವಿ೦ಡ್ ಬೆಲ್ ನ೦ತೆ ಕಾಣುವ ಕೆ೦ಪು ಹಸಿರು ಬಣ್ಣದ ಕೊಡಗಳು. ಅದೆಷ್ಟೋ ಕಾಲದಿ೦ದ ಗ೦ಟಲಲ್ಲಿ ಏನನ್ನೋ ಸಿಕ್ಕಿಸಿಕೊ೦ಡು ಕಷ್ಟಪಡುವ೦ತಿರುವ ಗೋಲಿ ಸೋಡ ಬಾಟಲಿಗಳು. ಮುಸ್ಸ೦ಜೆಯಲ್ಲಿ ಅ೦ಗಡಿಯ ತು೦ಬ ಬೆಳಕು ಹರಡುವ ಗ್ಯಾಸ್ ಲೈಟ್. ಅ೦ಗಡಿಯ ಎದುರು ಕಟ್ಟಿರುವ ತಟ್ಟಿಗೆ ಗಜಾನನ ಥಿಯೆಟರಿನಲ್ಲಿರುವ ಸಿನೆಮಾದ ಪೋಸ್ಟರು, ಅದರ ಕೆಳಗೊ೦ದು ಬಣ್ಣ ಮಾಸಿದ ಹ್ಯಾ೦ಡಲ್ ಬಳಿ ಸ್ವಲ್ಪ ತುಕ್ಕು ಬ೦ದಿರುವ ಸೈಕಲ್ಲು. ಇವಿಷ್ಟು  ಬಾಬಣ್ಣನ ಅಂಗಡಿಯ ಲಕ್ಷಣಗಳು.

ಬೆಳಿಗ್ಗೆ ಏಳಕ್ಕೆಲ್ಲ ಅ೦ಗಡಿಯ ಬಾಗಿಲು ತೆಗೆದಿರುತ್ತದೆ. ಏಳುವರೆಯ ಬಸ್ಸಿಗೆ ಕುಮಟೆಗೆ ಹೋಗುವ ಕೆಲವರಿಗೆ ಬೆಳಗಾಗುವುದು ಬಾಬಣ್ಣನ ಚಾ ಕುಡಿದಮೇಲೆಯೇ. ಮೇಲಿನಕೇರಿ ಮಾಬ್ಲ ಅ೦ಗಡಿಯ ಮೊದಲ ಗಿರಾಕಿ. ಬಾಬಣ್ಣ ಬಾಗಿಲು ತೆಗೆದು ಸ್ಟವ್ ಉರಿಸುವಾಗಲೇ ಮಾಬ್ಲ ನಾಯ್ಕರ ಆಗಮನ ಆಗಿಯೇ ಬಿಡುತ್ತದೆ. ’ಏನೋ, ಬಾಬು ಚಾಲಿ ಅಡಕಿ ರೇಟು ಹೇ೦ಗದೆ? ಇಪ್ಪತ್ತಾದ್ರೆ ನಮ್ಮನೆ ’ಪದ್ದು’ ಮದ್ವಿ ಮಾಡೇ ಬಿಡತೆ ನೋಡು ಇದೇ ವರ್ಷ.’ ಎನ್ನುತ್ತಲೇ ಬೆ೦ಚಿನ ಕೊನೆಗೆ ಮು೦ಡು ಸರಿ ಮಾಡಿಕೊಳ್ಳುತ್ತ ಕೂತು ಪೇಪರ್ ಹಿಡಿದೇ ಬಿಡುತ್ತಾರೆ.



ಬಾಬು ’ಬೇಟೆ ಗೌಡ’ ಬ೦ದಿದ್ನನೊ ನಿನ್ನಾಗೆ ? ಕಾಯಿ ಕೊಯ್ಸುದಿತ್ತು. ಬರ್ತೆ ಹೇಳುಕಣಕಿ ಒ೦ದು ವಾರ ಆಯ್ತು ಬೋ ಮಗ ಬ೦ದೇ ಸಾಯುದಿಲ್ಲ. ಸ೦ಜಿಕಡೆಗೆ ಬ೦ದ್ರೆ ನಾ ಬರೂಕೆ ಹೇಳನೆ ಹೇಳೊ..ನಾಯ್ಕ್ರೆ ಯಾವ ಸರ್ಕಾರ ಬರುದು?’ ಎ೦ದು ಬಾಬಣ್ಣನನ್ನೂ, ಮಾಬ್ಲ ನಾಯ್ಕರನ್ನೂ ಮಾತನಾಡಿಸುತ್ತ ಬರುವ ಮೇಸ್ತ್ರಿ ಮಂಜ ಬಾಬಣ್ಣನ ಚಡ್ಡಿ ದೋಸ್ತ. 

ಇನ್ನು ಈ ಬಾಬಣ್ಣನೋ ಸಕಲ ಕಲಾ ಪ್ರವೀಣ. ಅದ್ಭುತವಾಗಿ ಅಡುಗೆ ಮಾಡುತ್ತಾನಂತೆ. ಹವ್ಯಾಸಿ ಯಕ್ಷಗಾನ ಕಲಾವಿದನೂ ಹೌದು. ಸಾಬರ (ಮುಸ್ಲಿಮರ ) ಬಳಿ  ಅವರ ಕನ್ನಡದಲ್ಲೇ ಮಾತನಾಡುತ್ತಾನೆ. ತನಗೆ ಇಂಗ್ಲಿಷು ಗೊತ್ತೆಂದೂ ಹೇಳುತ್ತಾನೆ.

ಬೋಯಿ ರಾಮನಿಗೆ ಬೀಳುವ ಕನಸುಗಳನ್ನೆಲ್ಲ ಡಿಕೋಡ್ ಮಾಡಿ ಓಸೀ ನ೦ಬರ್ ಹೇಳುವವನೂ ಬಾಬಣ್ಣನೇ. ! ಕನಸಲ್ಲಿ ಬಾವಿಯಲ್ಲಿ ಹಾವು ಕ೦ಡರೆ '01'. ಬಾವಿ ಕ೦ಡರೆ 00. ಹೆಣ್ಣು ಮಕ್ಕಳು ಕ೦ಡರೆ 4 ... ಹೀಗೇ ಸಾಗುತ್ತದೆ ಈ ಪಟ್ಟಿ.

 ಬಾಬಣ್ಣ ಕೋಳಿ ಪ೦ಚಾ೦ಗದ ಪ್ರವೀಣನೂ ಹೌದು.!  ಅ೦ಕದ ಕೋಳಿಯನ್ನು ಅವನಿಗೆ ತೋರಿಸದೆ ಯಾರೂ ಕೋಳಿ ಅ೦ಕಕ್ಕೆ ಹೋಗುವುದೇ ಇಲ್ಲ.! ಮಿಥಿ ನೋಡಿ ಇ೦ಥ ಬಣ್ಣದ ಕೋಳಿಯನ್ನು ಕಟ್ಟಿ ಎ೦ದು ಹೇಳುತ್ತಾನೆ.! ಒಮ್ಮೆ ’ಚಡ್ಡಿ ಬಾಳ’ (’ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ’ ಇದು ಬಾಳನ ಫೆವರೆಟ್ ಡೈಲಾಗು. ಅದಕ್ಕೆ ಅವನಿಗೆ ’ಚಡ್ಡಿ ಬಾಳ’ ಎ೦ಬ ಅಡ್ಡ ಹೆಸರು.! ಇವನ ಬಗ್ಗೆ ಇನ್ನೊ೦ದು ಲೇಖನಕ್ಕಾಗುವಷ್ಟು ಬರೆಯಬಹುದು ಅದನ್ನ ಇನ್ನೊಮ್ಮೆ ಬರೆಯುತ್ತೇನೆ) "ಬಾಬಣ್ಣನತ್ರ ಕೇಳುದೆ೦ತದು? ನನ್ನ ಚಡ್ಡಿ ಕಿಮ್ಮತ್ತಿಲ್ಲ ಅವ್ನಿಗೆ. ಈ ಕೋಳಿ ಯಾವಾರ ಕಟ್ರೂ ಗೆಲ್ತದೆ." ಎ೦ದು ಬಡಾಯಿ ಕೊಚ್ಚಿಕೊ೦ಡು ಹೋದವ 2 ಸಾವಿರ ರೂಪಾಯಿ  ಕಳೆದುಕೊ೦ಡು ಬ೦ದಿದ್ದ..!

ಇನ್ನು ಅವನಿಗೆ ಅವನ ಅಂಗಡಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳಿ :
ಘಟನೆ 1
ಒಮ್ಮೆ ಹೀಗಾಗಿತ್ತು :

ನಮ್ಮೂರಿನ ಹೈಸ್ಕೂಲಿಗೆ ಬರುವ ಕೆಲವು ಹುಡುಗರಿಗೆ ಇ೦ಗ್ಲಿಷೆ೦ದರೆ ಕಬ್ಬಣದೋ, ಉಕ್ಕಿನದೋ ಕಡಲೆಯೇ.! ಅದೂ ಹೊಸತಾಗಿ ಬ೦ದ ಇ೦ಗ್ಲಿಷ್ ಮಾಸ್ತರು ಬೇರೆ ಸಿಕ್ಕಪಟ್ಟೆ ಸ್ಟ್ರಿಕ್ಟು! ಕೋಲನ್ನು ಹಿಡಿಯದೇ ಕ್ಲಾಸಿಗೇ ಬರುತ್ತಿರಲಿಲ್ಲ. ನಮ್ಮ ಮಗಾ ಕನ್ನಡಕ್ಕೆ ಚೊಲೋ ಮಾರ್ಕ್ಸ್ ತಗ೦ಡ್ಯಾ, ಆದ್ರೆ ಇ೦ಗ್ಲಿಷ್ನಲ್ಲಿ ಪೇಲ್ರಾ..ಎನ್ನುವುದು ಸುಮಾರಾಗಿ ಎಲ್ಲ ಪಾಲಕರ ಹಾಡು. ಪ್ರಶ್ನೋತ್ತರಗಳು ಬಾಯಿಪಾಟ ಇರದಿದ್ದರೆ ಕೋಲು ಮುರಿವವರೆಗೆ ಬಡಿಯುತ್ತಿದ್ದರು. ಅದೆಷ್ಟೋ ಜನರಿಗೆ ಅವರ ನೋಡಿಯೇ ಮರೆತು ಹೋಗುತ್ತಿತ್ತು. ಇ೦ತಿಪ್ಪಾಗ ಕೆಲವು ಉಡಾಳ ಹುಡುಗರು ಇ೦ಗ್ಲಿಷು ಕ್ಲಾಸನ್ನು ಬ೦ಕ್ ಮಾಡುವುದನ್ನು ಕಲಿತರು. ಮನೆಕಡೆಗೆ ಹೊರಟರೆ ಮನೆಯವರಿ೦ದ ಬೈಗುಳ, ಕ್ಲಾಸಲ್ಲಿದ್ದರೆ ಮಾಸ್ತರರ ಕೋಲಿನ ಹೆದರಿಕೆ. ಅದಕ್ಕೆ ಹುಡುಗರು ಕ೦ಡುಕೊ೦ಡ ಪರಿಹಾರವೇ ’ಬಾಬಣ್ಣನ ಗೂಡ೦ಗಡಿ’.!
ಮಧ್ಯಾಹ್ನದ ಲಘು ವಿರಾಮದ ವೇಳೆ ನಾಲ್ಕೈದು ಹುಡುಗರು ಶಾಲೆಯಿ೦ದ ಪರಾರಿಯಾಗಿಬಿಡುತ್ತಿದ್ದರು. ಅವರೆಲ್ಲ ನೇರ ಬಾಬಣ್ಣನ ಗೂಡ೦ಗಡಿಗೆ ಹೋಗಿ ಶೇ೦ಗಾ ತಿನ್ನುತ್ತ ಕೂರುತ್ತಿದ್ದರು. ಶಾಲೆ ಬಿಡುವ ಸಮಯಕ್ಕೆ ಸರಿಯಾಗೆ ಮನೆ ಕಡೆ ಹೋಗುತ್ತಿದ್ದರು. ಗೈರು ಹಾಜರಿಯ ಗಮನಿಸಿದ ಇ೦ಗ್ಲಿಷ್ ಮಾಸ್ತರು ವಿಷಯವನ್ನು ಪಾಲಕರ ಗಮನಕ್ಕೂ, ಹೆಡ್ ಮಾಸ್ತರರ ಗಮನಕ್ಕೂ ತ೦ದರು. ಆದರೆ ಮಕ್ಕಳು ಅದೆಲ್ಲಿ ಮಾಯವಾಗುತ್ತಿದ್ದರು ಎ೦ಬುದೇ ತಿಳಿಯದ ವಿಷಯವಾಗಿತ್ತು. ಅದ್ಹೇಗೋ  ವಿಷಯವನ್ನು ತಿಳಿದ ಇ೦ಗ್ಲಿಷ್ ಮಾಸ್ತರು. ಮೂರ್ನಾಲ್ಕು ಪಾಲಕರ ಜೊತೆಗೂಡಿ ಬಾಬಣ್ಣನ ಅ೦ಗಡಿಗೆ ರೈಡ್ ಮಾಡಿಯೇ ಬಿಟ್ಟರು. ದೂರದಲ್ಲಿ ಇ೦ಗ್ಲಿಷ್ ಮಾಸ್ತರರ ಕ೦ಡ ಮಕ್ಕಳು ಅ೦ಗಡಿಯ ಹಿ೦ಬದಿಯ ಗುಡ್ದಕ್ಕೆ ಓಟ ಕಿತ್ತರು.! ಮಾಸ್ತರರು ಹಿ೦ಬದಿಗೆ ಹೋಗಲು ದಾರಿ ಹುಡುಕುತ್ತಿದ್ದಾಗ ಬಾಬಣ್ಣ, "ಮಾಸ್ತರ್ರೆ, ಆತ್ಲಗೆ ಹೋಗ್ಬೆಡ್ರ, ಅಲ್ಲಿ ರಿಸರ್ಚ್ ಮಾಡ್ತ್ರು," ಮಾಸ್ತರರು ಕಕ್ಕಾ ಬಿಕ್ಕಿ. ಎಲ್ಲಿಯ ಬಾಬಣ್ಣ? ಎಲ್ಲಿಯ ರಿಸರ್ಚು? "ಅತ್ಲಗೆ ಹೊಗ್ಬೇಡಿ ಅ೦ದೆ, ರಿಸರ್ಚ್ ಮಾಡ್ತರಲ್ರ, ವಾಸನಿ ಬತ್ತದೆರ". ಮಕ್ಕಳ ವಿಷಯ ಮರೆತ ಮಾಸ್ತರರು ಲ್ಯಾಬೊರೆಟರಿಯನ್ನು ಕಲ್ಪಿಸಿಕೊ೦ಡು, ಹುಡುಕುತ್ತ ಮುನ್ನಡೆದರೆ ಬ೦ದದ್ದು ಮೂತ್ರದ ವಾಸನೆ.! ’ರಿಸೆಸ್’ ಬಾಬಣ್ಣನ ಬಾಯಲ್ಲಿ ’ರಿಸರ್ಚ’ ಆಗಿತ್ತು.!

ಘಟನೆ 2 :

ದಶಕಗಳ ಹಿ೦ದೆ ರೀಲ್ ಕ್ಯಾಮೆರ ಹಿಡಿದು ಮದುವೆ ಮನೆಯಲ್ಲಿ ಫೊಟೊ ಹೊಡೆಯಲು ಹೋಗುತ್ತಿದ್ದ ಪು೦ಡಲೀಕನ ಗುಟ್ಟು ರಟ್ಟಾದದ್ದು ಬಾಬಣ್ಣನಿ೦ದಲೇ. ಟಿಪ್ಪುಟಾಪಾಗಿ ಮದುವೆಮನೆಗಳಿಗೆ ಕ್ಯಾಮೆರದೊ೦ದಿಗೆ ಹೋಗಿ ಫ಼್ಲ್ಯಾಶನ್ನು ಫಳಫಳಿಸುತ್ತಿದ್ದ.  ಹೆ೦ಗಸರು ನಾಚಿಕೆಯಿ೦ದಲೇ ಪೋಸ್ ಕೊಟ್ಟರೆ, ಮಕ್ಕಳು ಅವನ ಸುತ್ತಮುತ್ತಲೇ ಸುಳಿಯುತ್ತಿದ್ದರು. ಮದುಮಕ್ಕಳೋ ಅವನ ಕ್ಯಾಮೆರ ಅವರ ಕಡೆಗೆ ತಿರುಗಿತೆ೦ದರೆ ಅಲರ್ಟ್ ಆಗಿಬಿಡುತ್ತಿದ್ದರು. ಮದುವೆಯ ಕೊನೆಯವರೆಗೂ ಮದುವೆ ಮನೆಯಲ್ಲೇ ಉಳಿದು ಚಹ ಕುಡಿದೇ ಹೊರಬೀಳುತ್ತಿದ್ದ. ಜನರು ಫೊಟೊ ಕೇಳಿದರೆ, " ತೊಳಿಸುಕೆ ಕೊಟ್ಟಾನೆ ಹಾ೦, ಮಸ್ತ್ ಬ೦ದದೆ ನಿಮ್ ಫೊಟೊ" ಎ೦ದು ಹೇಳುತ್ತಿದ್ದ. ಮದುವೆ ಮನೆಯ ಜನ ಅವನ ಹಿ೦ದೆ ಮು೦ದೆ ಕಾಡಹತ್ತಿದಾಗ, " ಫೊಟೊ ತೆಗೀವಾಗ ಕ್ಯಾಮೆರ ಮುಚ್ಚಳ ತೆಗ್ಯುಕೆ ಮರ್ತೊಗಿತ್ತು ನೋಡು, ಎ೦ತಕ್ಕೆನೊ ಮಾರಯ ಫೋಟೊ ಕಪ್ಪಗೆ ಬ೦ದದೆ"  ಎ೦ದೋ ಹೇಳಿ ಸಾಗಾಕುತ್ತಿದ್ದ.! ಹೀಗೇ ಸಾಗಿತ್ತು ಪು೦ಡಲೀಕ ಮತ್ತವನ ಕ್ಯಾಮೆರ ಲೀಲೆ.
 ಪು೦ಡ್ಲೀಕನಿಗೆ ಚಾಪೆ ಕೆಳಗೆ ನುಸುಳಿ ಗೊತ್ತಿದ್ದರೆ, ನಮ್ಮ ಹೀರೊ ಬಾಬಣ್ಣ ಬರೀ ರ೦ಗೋಲಿಯಷ್ಟೇ ಅಲ್ಲ ನೆಲದ ಅಡಿಗೂ ನುಸುಳಿ ಗೊತ್ತಿತ್ತು. ! ಅಸಲಿಗೆ ಪು೦ಡಲೀಕ ಕ್ಯಾಮೆರಾಕ್ಕೆ ರೀಲು ಹಾಕುವುದೇ ಇಲ್ಲವೆ೦ದೂ ಬರೀ ಬ್ಯಾಟರಿ ಸೆಲ್ಲುಗಳನ್ನು ಹಾಕಿ ಫ಼್ಲ್ಯಾಶನ್ನು ಫಳಫಳಿಸುತ್ತಾನೆನ್ನುವ ಗುಟ್ಟನ್ನು ಬಾಬಣ್ಣ, ಒ೦ದು ಮದುವೆಯಲ್ಲಿ ರಟ್ಟು ಮಾಡಿಬಿಟ್ಟಿದ್ದ. !

ಘಟನೆ 3 :

ಸ್ವಲ್ಪ ಹೊಟ್ಟೆಯಿರುವ ಆಚೆ ಕೇರಿಯ ಸುಬ್ರಾಯನಿಗೆ ಆಟದ ಪಾರ್ಟಿನ ಹುಚ್ಚು. ಅದರಲ್ಲೂ ಸ್ತ್ರೀ ವೇಷವೆ೦ದರೆ ಅವ ಸದಾ ಮು೦ದೆ. ಪಾರ್ಟು ಅಷ್ಟೇನು ಒಪ್ಪದಿದ್ದರೂ ಸ೦ಘದ ಅಧ್ಯಕ್ಷನಿಗೆ ಕೋಳಿ ಊಟ ಹಾಕಿಸಿ ಪಾರ್ಟು ಗಿಟ್ಟಿಸಿಕೊಳ್ಳುತ್ತಿದ್ದ. ಮತ್ತೆ ಆಟದ ಮಾರನೇ ದಿನ ಅ೦ಗಡಿಯ ಬಾಗಿಲಲ್ಲಿ ಬ೦ದು, ತನ್ನ ವೇಷ ನೋಡಿ ಗೇರುಬೀಜದ ಫ್ಯಾಕ್ಟ್ರಿಯ  ಹೆಣ್ಣು ಮಕ್ಕಳು ನಿಜವಾದ ಹೆಣ್ಣೆ೦ದೇ ತಿಳಿದಿದ್ದರೆ೦ದೂ. ಸ್ಟೇಜಿನ ಬಳಿ ಇದ್ದ ಹುಡುಗರೆಲ್ಲ ತನಗೆ ಲೈನ್ ಹಾಕುತ್ತಿದ್ದರೆ೦ದೂ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.
ಊರ ಬಯಲಲ್ಲಿ ನಡೆದ ಯಕ್ಷಗಾನದಲ್ಲಿ ಸುಬ್ಬಿತ್ಲಿನ ಶ೦ಕ್ರ ಹಾಗೂ ದೊಳ್ಳು ಸುಬ್ರಾಯ ರಾಮ-ಸೀತೆಯಾಗಿ ಆಡಿದ್ದ ’ಸೀತಾ ಸ್ವಯ೦ವರ’ದಲ್ಲಿ ತನ್ನ ಸೀತೆಯ ಪಾರ್ಟಿನ ಬಗ್ಗೆ ಹೇಳಿಕೊಳ್ಳುತ್ತಿದ್ದ ಸುಬ್ರಾಯನ ಬಾಯಿಗೆ ಬಾಬಣ್ಣ ಬೀಗ ಹಾಕಿ ಬಿಟ್ಟಿದ್ದ.  " ಸುಬ್ರಾಯ ರಾಮಾ ಸೀತೆದು ಲವ್ ಮೆರೆಜೊ ಹ್ಯಾ೦ಗೊ? ಸೀತೆ ಮದ್ವೆಗೆ ಮು೦ಚೆನೆ ಬಸ್ರಾದ೦ಗೆ ಕಾಣತಿತ್ತಲೊ ಮೊನ್ನೆ ಆಟದಾಗೆ.! ಒ೦ಭತ್ತಿ೦ಗಳದ ಬಸ್ರಿಗೆ ಹೊಟ್ಟಿ ಇದ್ದಾ೦ಗಿತ್ತು." ಅ೦ದಾಗ ದೊಳ್ಳು ಸುಬ್ರಾಯ ತನ್ನ ಹೊಟ್ಟೆಯ ಮೇಲೇ ಕೈ ಆಡಿಸುತ್ತಲೇ ಪೆಕರು ಪೆಕರನ೦ತೆ ನಕ್ಕಿದ್ದ.! ಬಹುಶಃ ಇದಾದ ಮೇಲೆ ಸ್ತ್ರೀ ವೇಷವನ್ನು ಹಾಕುವುದೂ ನಿಲ್ಲಿಸಿದ್ದ.!

ಬಸ್ ಬರುವುದು ಗಂಟೆಗಳಷ್ಟು ತಡವಾದರೂ ಬೇಸರವೆನಿಸುವುದೇ ಇಲ್ಲ. ಅಂಗಡಿಯಲ್ಲಿನ ಸಂಭಾಷಣೆಗಳು ಬಹಳ ಮಜಾ ಕೊಡುತ್ತವೆ. ಒಂದು ಊರಿನ ಬಣ್ಣಗಳೆಲ್ಲವನ್ನೂ ಆ ಊರಿನ ಅಂಗಡಿಯಲ್ಲಿ ನೋಡಬಹುದು.

ಚಿಕ್ಕವಳಿರುವಾಗ ಕಡ್ಡಿ (ಬಳಪ ) ತರಲು ಬಾಬಣ್ಣನ ಅಂಗಡಿಗೆ ಹೋಗುತ್ತಿದ್ದೆ. ಚಾಕಲೇಟುಗಳ ನೋಡುತ್ತಾ ನಿಲ್ಲುತ್ತಿದೆ. ಬಾಲ್ಯದ ನೆನಪುಗಳ ಕೆಣಕಲು ಮೊನ್ನೆ ಅತ್ತ ಕಡೆ ಹೋಗಿದ್ದೆ . ಸುಮಾರಾಗಿ ಹಾಗೆ ಇದೆ ಅಂಗಡಿ. ಲೇಯ್ಸ್  ಪ್ಯಾಕೆಟ್ಟುಗಳ ಧಾಳಿಯೇನೂ  ಆದ ಹಾಗೆ ಕಾಣಲಿಲ್ಲ. ಪೆಪ್ಪರಮೆಂಟುಗಳೂ, ಶೇಂಗಾ  ಚಿಕ್ಕಿಗಳೂ, ಚಿಕ್ಕಂದಿನಿಂದಲೂ ನನಗೆ ಬಿಡಿಸಲಾಗದ ಒಗಟಾಗಿ  ಕಾಣುವ  ಗೋಲಿ ಸೋಡದ  ಬಾಟಲಿಗಳೂ ಹಾಗೆ ಇದ್ದವು. ಮೊದಲೆಲ್ಲ 1 ರೂಪಾಯಿಗೆ ಸಿಗುತ್ತಿದ್ದ ಶೇಂಗಾ ಪ್ಯಾಕೆಟ್ಟಿಗೆ 3 ರೂಪಾಯಿ ಆದದ್ದು ಗಮನಕ್ಕೆ ಬಂತುಗ಼ಜಾನನ ಥಿಯೇಟರ್ ಮುಚ್ಚಿದುದರಿಂದ  ಚಿತ್ತರಂಜನ ಥಿಯೇಟರಿನಲ್ಲಿರುವ ಸಿನೆಮಾದ ಪೋಸ್ಟರಿತ್ತು . 




ಸ್ವಲ್ಪ ಹೊತ್ತು ಕುಳಿತಿದ್ದೆ ಬೆಂಚುಗಳ ಮೇಲೆ. ರವಿಯು ಪಶ್ಚಿಮದಲ್ಲಿ ಇಳಿದಿದ್ದ.   ಇಮಾಮ್ ಸಾಬಿಯ ಹೆಂಡತಿ ಬಂದು 'ಬಾಬಣ್ಣ ನಿಮ್ದು ಎತ್ತು ಅಲ್ಲಿ ಗದ್ದೆ ಕೂಡೆ ಮಲಗಾನೇ. ನಮ್ಮನೇಲಿ ಅಡಿಗೆ ರೂಂ ಪೂರ ಇರುವೆ ಬಂದಾರೆ. ಲಕ್ಷಣ ರೇಖೆ ಆದೇ.?  ಇದ್ರೆ ಕೊಡು ನೋಡ್ವ' ಎಂದಳು.



ಚಿಟ್ಟೆಮನೆ ಮಾಸ್ತಿ, ಮಾದೇವನ ಜಮೀನಿನ ಮೇಲೆ 'ಇಂಜೆಕ್ಷನ್ ದಾವ' ತಂದಿಟ್ಟಿದ್ದು ಹೇಳುತ್ತಿದ್ದ. ಇಂಜೆಕ್ಷನ್ ಎನ್ನುವ ಪದವೊಂದೆ ಅರ್ಥವಾಗುತ್ತಿದ್ದ ತುಳಸು ಗೌಡ "ಅದೆಂಥ ಇಂಜೆಕ್ಸನ್ ತಂದಿದ್ಯೋ ಮಾಸ್ತಿ, ಡಾಕ್ಟರ ಕೊಡುದು ನೀನೆ ತಂದಿದ್ಯೋ ಹೆಂಗೋ ? " ಎಂದಿದ್ದ.  

 ಗಣಪತಿ ಭಟ್ರ ಮನೇಲಿ ಬೆಂಗಳೂರಲ್ಲಿರುವ ಅವರ ಮಗ ಹತ್ತು ಸಾವಿರ ರೂಪಾಯಿ ಕೊಟ್ಟು ತಂದ ನಾಯಿಯ ಬಗ್ಗೆ. ಗಾಳಿಮನೆ  'ಮಾಚ' ಹೇಳುತ್ತಿದ್ದರೆ, ಚಹ ಬೆರೆಸುತ್ತಲೇ ಬಾಬಣ್ಣ ಒಂದು ಕಿವಿಯನ್ನು ಸಂಭಾಷಣೆಯತ್ತ  ಬಿಟ್ಟಿದ್ದ. 'ಅದೆಂತದ ಬಾಬು ಸಿಂಹದ ನಮನಿ ಆದೇ ಆ ಕುನ್ನಿ, ಕೂಗ್ತದೆ ಹೆಂಗೆ, ದೊಡ್ದಾದ್ಮೇಲೆ ಹದಾ ಗಾವಟಿ ಆಕಳಷ್ಟು ಆಗುದು ನೋಡು. ಹತ್ತ ಸಾವರ ಎಂಥ ಕುಶಾಲು...?" ಎಂದಿದ್ದಕ್ಕೆ " ಅಲ್ಲ ಅದರೂ ನೀ ಎಂಥದೇ ಹೇಳು ಮಾಚ ಅದೆಂಥದೋ ಒಂದು ಎಮ್ಮಿ ರೇಟಾಯ್ತಲೋ ಹೌದೊ ಅಲ್ವೋ ತಂಗಿ" ಎಂದ. ಹೌದೆಂಬಂತೆ  ತಲೆ ಆಡಿಸುತ್ತ ನಾನು ಒಂದು ಚಾ ಕೊಡಲು ಹೇಳಿದೆ. 

ನಗರವು ವೇಗವಾಗಿ ಬದಲಾಗುತ್ತದೆ, ಬೆಳೆಯುತ್ತದೆ. ಹಳ್ಳಿಗಳು ಬಹಳ ನಿಧಾನವಾಗಿ ಬದಲಾಗುತ್ತಿವೆ. ಅಲ್ವಾ? 
ನಮ್ಮ ಹಳ್ಳಿಗಳು ಹಳ್ಳಿಗಳಾಗೆ  ಇರಲಿ. ಗೂಡಂಗಡಿ ಅಲ್ಲಿಯ ಚಾ, ಶೇಂಗಾ ಬೀಜ, ಗೋಲಿಸೋಡಾ-ಶರಬತ್ತು, ತಟ್ಟಿ , ಎಲ್ಲ ಹೀಗೆ   
ಇರಲಿ ಎಂದು ಮನವು ಹಾರೈಸುತ್ತಿತ್ತು.