Tuesday, November 16, 2010

ಬಣ್ಣಗಳ ದೇಶದಲ್ಲಿ.




ಮತ್ತೊಂದು ಕಾಲ್ಪನಿಕ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಹೇಗಿದೆ ಹೇಳಿ

ಸಮುದ್ರ ತೀರದಲ್ಲಿದ್ದ ಆ ದೇವಾಲಯದ ಸುಂದರ ಬೃಹತ್ ಕಂಬವನ್ನು ನೋಡುತ್ತಾ ನಿಂತಿದ್ದ ಆ ನೀಲಿ ಕಂಗಳ ವಿದೇಶಿಗ, ಅದೆಲ್ಲೋ ಕಳೆದು ಹೋಗಿದ್ದ. ನಗರದ ಜೀವನದ ಸೋಂಕಿಲ್ಲದ ದಿವ್ಯ ಮೌನದ ತಾಣವದು. ಅವನ ಹೊಂಗೂದಲಿನ ಜೊತೆಗಾರ್ತಿ ಹಾಗೂ ಐದರ ಮಗುವಿನೊಂದಿಗೆ ಬಂದಿಳಿದಿದ್ದ ಭಾರತಕ್ಕೆ . ಬಂದವನೇ ಧಾವಿಸಿದ್ದ ಆ ಹಳೆಯ ಶಿವಾಲಯದತ್ತ. ಹತ್ತು ವರುಷಗ ಹಿಂದೆ ಹೇಗಿತ್ತೋ ಹಾಗೆ ಇದೆ ದೇವಾಲಯ. ಆದರೆ ದೇವಳದ ಪಕ್ಕದಲ್ಲಿದ್ದ ಗಿಡ ಹೆಮ್ಮರವಾಗಿದೆ. ದೇವಾಲಯದ ಒಳಗಡೆ ಗುಬ್ಬಚ್ಚಿಗಳ ಸುಳಿವಿಲ್ಲ. ಐದರ ಹುಡುಗ ಕಡಲ ತೀರದಲಿ ಭಾರತೀಯ ಮಗುವೊಂದರ ಜೊತೆ ಆಡುತ್ತಿದ್ದರೆ, ಜೊತೆಗಾರ್ತಿ ಅವನಾಟವ ನೋಡುತ್ತಿದ್ದಳು. ನಿಧಾನಕ್ಕೆ ಒಳಗೆ ಅಡಿಯಿಟ್ಟು ಘಂಟೆಯನ್ನೊಮ್ಮೆ ಬಾರಿಸಿ ಪುಳಕಗೊಂಡ ನೀಲಿ ಕಣ್ಣಿನವ. ಆ ಘಂಟಾನಾದಕ್ಕೆ ಹಲವು ನೆನಪುಗಳು ಬಂದು ಮುತ್ತಿದ ಭಾವ ! ಕಣ್ಣುಗಳು ಕಂಬವನ್ನು ನೋಡುತ್ತಿದ್ದರೆ ಮನಸ್ಸು ಹತ್ತು ವರುಷಗಳ ಹಿಂದೆ ಹೋಗಿತ್ತು.




ಹತ್ತು ವರುಷಗಳ ಹಿಂದೆ ಭಾರತದಲ್ಲಿ ಕರಾವಳಿ ತೀರದ ಕಾಲೇಜೊಂದರಲ್ಲಿ ಆಯುರ್ವೇದ ವೈದ್ಯದ ವಿದ್ಯಾರ್ಥಿಯಾಗಿದ್ದ ನೀಲಿ ಕಣ್ಣಿನ ಹುಡುಗ. ಹಲವು ಸಂಸ್ಕೃತಿಗಳ ಬೀಡು ಭಾರತದ ಬೆಡಗು-ಬಿನ್ನಾಣಗಳಿಗೆ, ದಿನ ದಿನವೂ ಹಬ್ಬವಾಚರಿಸುವ ಪರಿಗೆ ಬೆರಗಾಗಿದ್ದ. ಕಾಲೇಜಿನಲ್ಲಿ ತಮಿಳರು, ಮಲಯಾಳಿಗಳು, ಕನ್ನಡಿಗರು, ಹಿಂದಿ ಭಾಷಿಕರು, ಮರಾಠಿ ಜನರೆಲ್ಲರ ತಾಯ್ನಾಡು ಭಾರತವೆಂದು ತಿಳಿದು ಕಂಗಾಲಾಗಿದ್ದ. ತನ್ನ ದೇಶದ ಸ್ನೇಹಿತರ ಬಳಿ ಭಾರತಕ್ಕೆ 'the country of colors' ಎಂದು ಹೇಳಿದ್ದ.


ಸಮಯ ಸಿಕ್ಕಾಗಲೆಲ್ಲ ಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಡುವುದು. ಅಲ್ಲಿನ ಏಕಾಂತವ ಅನುಭವಿಸುತ ಅಲ್ಲೊಂದಿಷ್ಟು ಫೋಟೋ ಕ್ಲಿಕ್ಕಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲೊಂದಾಗಿತ್ತು. ತನ್ನ ದೇಶಕ್ಕೆ ಹೊರಡುವ ಮೊದಲು ಒಂದಿಷ್ಟು ನೆನಪಿನ ಜೊತೆ, ಫೋಟೋಗಳನ್ನು ಒಯ್ಯುವ ಬಯಕೆ ಆತನಿಗೆ.


ಓದು ಮುಗಿಯಲು ಇನ್ನೂ ಆರೇಳು ತಿಂಗಳು ಬಾಕಿಯಿತ್ತು. ಹೀಗೆ ಒಮ್ಮೆ ಅಲೆಯುತ್ತ ಈ ಶಿವಾಲಯದತ್ತ ಬಂದಿದ್ದ. ಸಮುದ್ರ ಮೊರೆತದೊಂದಿಗೆ ಮಿಳಿತಗೊಂಡ ನೀರವ ಮೌನ ಹಿಡಿಸಿತ್ತವನಿಗೆ. ದೇವಾಲಯದ ಕಂಬದ ಮೇಲಿನ ಸುಂದರ ಕೆತ್ತನೆಯನ್ನು ನೋಡುತ್ತಾ ನಿಂತುಬಿಟ್ಟಿದ್ದ. ಅಷ್ಟರಲ್ಲಿ ಇಂಪಾದ ಘಲ್ ಘಲ್ ಶಬ್ದವೊಂದು ಕೇಳಿಬಂದಿತ್ತು, ಹಿಂದಿರುಗಿ ನೋಡಿದರೆ ಉದ್ದನೆಯ ಲಂಗ ತೊಟ್ಟಿರುವ ಸ್ನಿಗ್ಧ ಮುಖದ ಹುಡುಗಿ, ಇವನನ್ನು ನೋಡಿ ಮುಗ್ಧ ನಗೆಯನ್ನು ನಕ್ಕಿದ್ದಳು. ನೋಡುತ್ತಲಿದ್ದುಬಿಟ್ಟ ಅವಳ, ಅವಳ ನಗೆಯ. ಕಂಬದ ಮೇಲಿನ ಕೆತ್ತನೆಯ ವಿಷಯ ಮರೆತುಹೋಗಿತ್ತು ..! ಮುಂದೆ ಸಾಗಿದಳು ಹುಡುಗಿ ಮತ್ತದೇ ಘಲ್ ಘಲ್ ನಾದದೊಂದಿಗೆ. ಇನ್ನೇನು ಫೋಟೋ ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ ಲಂಗವನ್ನು ತುಸುವೇ ಎತ್ತಿ ಮೆಟ್ಟಿಲು ದಾಟುವಾಗ ಅವಳ ನುಣುಪು ಬಿಳಿಯ ಪಾದದ ಮೇಲೆ ದಪ್ಪನೆಯ ಬೆಳ್ಳಿಯ ಆಭರಣವೊಂದು ಕಂಡಿತ್ತು. ಶಬ್ದದ ರಹಸ್ಯ ಬಯಲಾಗಿತ್ತು.


ತನ್ನಷ್ಟಕ್ಕೆ ನಗುತ್ತ ಅವಳ ಹಿಂದೆಯೇ ಸಾಗಿದ ನೀಲಿ ಕಣ್ಣಿನ ಹುಡುಗ ಅವಳನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದ. ಅವಳೂ ಮಾತನಾಡಿದಳು. ದೇವಾಲಯದ ಕುರಿತು ಹೇಳಿದಳು. ತಾನು ಇತಿಹಾಸದ ವಿದ್ಯಾರ್ಥಿನಿ ಎಂದಳು. "ಬೇಡಿಕೆಯನ್ನೆಲ್ಲವನು ಈಡೇರಿಸುವ ಶಿವ ಮಂದಿರವಿದು ಎಂದಿದ್ದಳು". ಅವಳ ಗಾಂಭೀರ್ಯದ ವಿದ್ವತ್ಪೂರ್ಣ ಮಾತಿಗೆ ಬೆರಗಾಗಿದ್ದ ಈ ವಿದೇಶಿ ಹುಡುಗ. ಪೂಜಾರಿಗಳು ಕೊಟ್ಟ ತೀರ್ಥವನ್ನೆಲ್ಲ ಮೂಸಿ ನೋಡಿ ಪೂರ್ತಿಯಾಗಿ ತಲೆಯ ಮೇಲೆ ಸುರುವಿ ಕೊಂಡಿದ್ದ ನೀಲಿ ಕಂಗಳ ಹುಡುಗ, ತಾನೊಬ್ಬ ಭಾರತೀಯ ಎಂಬಂತೆ. ಅವನ ಈ ಪರಿಗೆ ನಕ್ಕಿದ್ದಳು ಉದ್ದ ಲಂಗದ ಹುಡುಗಿ. ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿದ್ದ ಅವಳಲ್ಲಿ ತನ್ನ ಹಣೆಗೂ ಹಚ್ಚು ಎಂದ ನೀಲಿ ಕಂಗಳ ಹುಡುಗನ ಹಣೆಗೆ ಕುಂಕುಮ ಇಟ್ಟಿದ್ದಳು ಹುಡುಗಿ.


ಅಲ್ಲಿಂದ ಆದ ಪರಿಚಯ ಸ್ನೇಹದ ತಿರುವು ಪಡೆಯಲು ಹೆಚ್ಚೇನೂ ಸಮಯ ಹಿಡಿಯಲೇ ಇಲ್ಲ. ಹತ್ತಿರದ ಹಲವು ದೇವಾಲಯಗಳಿಗೆ ಅವಳೊಂದಿಗೆ ಹೋಗಿದ್ದ. ಅಲ್ಲಿಯ ಇತಿಹಾಸ, ಶಿಲ್ಪಕಲೆಯ ಕುರಿತು ಹುಡುಗಿ ವಿವರಿಸುತ್ತಿದ್ದಳು. ಭಾರತದ ಬಗ್ಗೆ ಹಲವು ಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದುಕೊಂಡ ಹುಡುಗ. ಭಾರತೀಯರ ಸಾಮರಸ್ಯ ಹಾಗೂ ಕುಟುಂಬ ಪದ್ಧತಿಯ ಕಂಡು ಅಚ್ಚರಿಗೊಂಡಿದ್ದ. ಅವರಲ್ಲೊಂದು ಸುಂದರ ಸ್ನೇಹವಿತ್ತು ,ಆತ್ಮೀಯತೆ ಇಬ್ಬರಿಗೂ ತಿಳಿಯದೆ ಮೂಡಿತ್ತು. ದೀಪಾವಳಿಯನ್ನು ಅವಳೊಂದಿಗೆ ದೀಪ ಹಚ್ಚಿ ಆಚರಿಸಿದ್ದ. ಹೋಳಿಯಂದು ಅವನ ಕೆನ್ನೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಳು ಹುಡುಗಿ. ಭಾರತೀಯರ ಭಾವುಕತೆಗೆ, ಆಧ್ಯಾತ್ಮ ಜ್ಞಾನಕ್ಕೆ, ಸ್ನೇಹಕ್ಕೆ, ಎಲ್ಲವಕ್ಕೆ ಉದಾಹರಣೆಯಂತಿದ್ದ ಹುಡುಗಿ ಅವನ ಪಾಲಿನ 'ಭಾರತ'ವಾಗಿ ಬಿಟ್ಟಿದ್ದಳು.


'ಪಪ್ಪನಿಗೆ ಡೈವೋರ್ಸ್ ಕೊಟ್ಟು ಬೇರೊಬ್ಬನ ಮದುವೆಯಾದ ತನ್ನ ಅಮ್ಮನ ಮುಂದೆ, ಕುಡುಕ ಗಂಡನ ರಾದ್ಧಾಂತವನ್ನು ಕಣ್ಮುಚ್ಚಿ ಸಹಿಸುವ ಭಾರತೀಯ ಹಳ್ಳಿಯಯೊಂದರ ಹೆಂಗಸಿನ 'ಸಹನೆ ಅದ್ಭುತವಾಗಿ ಕಂಡಿತ್ತವನಿಗೆ. ಭಾರತದ ರಾಜಕೀಯ ಹುಳುಕು, ಲಂಚಾವತಾರದ ಕೊಳಕನ್ನು,ಬಾಲ್ಯ ವಿವಾಹ ಪದ್ಧತಿಯನ್ನು ಅವನ ಮುಂದೆ ಹುಡುಗಿ ಹೇಳಿದಾಗ ತನ್ನ ನೀಲಿ ಕಣ್ಣನ್ನು ಇನ್ನಷ್ಟು ಅರಳಿಸಿದ್ದ ಹುಡುಗ. ಆದರೂ 'ತಾನಿಲ್ಲಿ ಬಂದು ಮಾನವ ಸಂಬಂಧಗಳ ಕುರಿತು ಹೊಸತೊಂದು definition ಕಂಡುಕೊಂಡೆ,ಜೀವನದ ಮೌಲ್ಯಗಳ ಅರಿತೆ, ನನ್ನ ಬಾಳಿಗೆ ಹೊಸತಾದ ತಿರುವೊಂದನ್ನು ಕೊಟ್ಟ ಭಾರತ 'the country of colors ' ಎನ್ನುವುದನು ತನಗೆ ತಿಳಿದಂತೆ ವಿವರಿಸಿದ್ದ.!


ಹಾಗೆ ನೀಲಿ ಕಂಗಳ ಹುಡುಗ ತನ್ನ ದೇಶಕ್ಕೆ ಹೊರಡುವ ದಿನ ಹತ್ತಿರವಾಗುತ್ತಿತು ಒಂದಿಷ್ಟು ಸೂರ್ಯೋದಯ ಚಂದ್ರೋದಯಗಳ ನಡುವೆ. ಅದೇನೋ ಅರ್ಥವಾಗದ ತಳಮಳ ಹುಡುಗನನ್ನು ಆವರಿಸಿತ್ತು. ಅದೇಗೆ ಬಿಟ್ಟು ಹೋಗಲಿ ಈ ದೇಶವನ್ನು, ಸ್ನೇಹಿತರನ್ನು, ಆತ್ಮೀಯ ಸ್ನೇಹಿತೆಯನ್ನು ಎಂಬುದೇ ಕಾಡುತ್ತಿತ್ತು.


ಹೊರಡುವ ದಿನದ ಮುಂಜಾನೆಯದು ದೇವಾಲಯದ ಬಳಿ ಹುಡುಗಿಗಾಗಿ ಕಾದ. ಮತ್ತದೇ ಘಲ್ ಘಲ್ ನಾದ. ಮತ್ತದೇ ಮುಗುಳುನಗೆ, ಅದೇ ಹುಡುಗಿ. ಹುಡುಗನ ನೀಲಿ ಕಂಗಳಲ್ಲಿ ನೀರೂರಿತ್ತು 'ನಿನಗೊಂದಿಷ್ಟು ಹೇಳಬೇಕು ಹುಡುಗೀ' ಎಂದ. ಮತ್ತದೇ ಒಪ್ಪಿಗೆಯ ಮುಗುಳುನಗೆ ಅವಳ ಮೊಗದ ಮೇಲೆ. "ಹೊರಟಿದ್ದೇನೆ ನನ್ನ ತಾಯ್ನಾಡಿಗೆ, ಕನಸಿನ ಲೋಕದಂತೆ ಕಂಡ ನನ್ನ ಭಾರತದ ದೀರ್ಘ ಪ್ರವಾಸದ ಕೊನೆಯ ಚರಣದಲ್ಲಿ ನೀ ಕಂಡದ್ದು ನನಗೆ. ನನ್ನ ಜೀವನಕ್ಕೆ ಹೊಸ ವಸಂತವ ತಂದವಳು ನೀನು. ನಿನ್ನೆಯವರೆಗೂ ನನ್ನಲ್ಲಿ ನಿನ್ನೆಡೆಗೆ ಇದ್ದದ್ದು ಒಂದು ಸ್ನೇಹದ ಭಾವ.ನೀ ಸಿಕ್ಕಾಗಲೆಲ್ಲ ನಾನು ನೋಡುತ್ತಿದ್ದದ್ದು ನಿನ್ನ ಮೊಗ, ಹಾಗೂ ಘಲ್ ಘಲ್ ನಾದದ ನಿನ್ನ ಪಾದ. ನಿನ್ನೆ ರಾತ್ರೆಯ ಚಂದ್ರೋದಯದ ನಂತರ ನನ್ನಲ್ಲಿ ನಾನಿಲ್ಲ. ನಿನ್ನೆಡೆಗೆ ಬೇಡವೆಂದರೂ ಸಾಗುವ ನನ್ನ ಮನಸು, ಬದುಕಿನ ಪಯಣದ ಉದ್ದಕ್ಕೂ ನೀನೆ ಬೇಕೆಂದು ಹೇಳುತ್ತಿದೆ. ನೀ ಒಪ್ಪಿದರೆ ನನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಹಂಬಲ ನನ್ನದು. ಜೊತೆಯಾಗುವಿಯಾ?" ಎಂದು ಸುಮ್ಮನಾದ.


ಒಂದು ಅರ್ಧ ನಿಮಿಷದ ಮೌನವ ಮುರಿದು ಮಾತಾದಳು ಹುಡುಗಿ " ನೀಲಿ ಕಂಗಳ ಹುಡುಗ, ನಿಜ ಹೇಳುತ್ತೇನೆ ಕೇಳು, ಮನದ ಎಲ್ಲೋ ಒಂದು ಮೂಲೆಯಲ್ಲಿ ನಿನ್ನೆಡೆಗೆ ಸ್ನೇಹಕ್ಕಿಂತ ಮಿಗಿಲಾದ ಭಾವವೊಂದಿತ್ತು. ಮೊದಲ ದಿನ ನಿನ್ನ ಹಣೆಗೆ ಕುಂಕುಮ ಇಡುವಾಗ ಕುತೂಹಲವಿತ್ತು. ಸ್ನೇಹಕ್ಕೆ ದೇಶ, ಭಾಷೆ, ಸಂಸ್ಕೃತಿಯ ಹಂಗಿಲ್ಲ. ಒಂದು ಕೋನದಲ್ಲಿ ಪ್ರೀತಿಗೂ ಇದರ ಹಂಗಿಲ್ಲ ಬಿಡು. ಆದರೆ ಸಂಸಾರ ನಡೆಸುವ ವಿಷಯಕ್ಕೆ ಬಂದಾಗ ಮಾತ್ರ ಇದೆಲ್ಲ ಅಡ್ಡ ಬಂದು ಬಿಡುತ್ತದೆ ಅದೂ ವಿಶೇಷವಾಗಿ ಭಾರತೀಯರಿಗೆ. ಕಲ್ಲನ್ನೂ ಪೂಜಿಸುವ ಭಾವಜೀವಿಗಳು ನಾವು. ಕುಟುಂಬವನ್ನು ಬಿಟ್ಟು ಬದುಕಲಾರೆವು. ನಾನು ಭಾರತೀಯ ಹಳ್ಳಿ ಹುಡುಗಿ ಮಾರಾಯ. ಚೌಕಟ್ಟನು ದಾಟಿ ಆಚೆ ಬರಲಾರೆ ನಾನು. ನನ್ನ ಸಂಸ್ಕೃತಿ, ದೇಶಗಳ ಬಿಟ್ಟು ಬದುಕಲಾರೆ. ನಿನ್ನ ದೇಶಕ್ಕೆ ಬಂದು ಅತ್ತ ಅಲ್ಲೂ ಇರಲಾರದ, ಇಲ್ಲೂ ಬರಲಾರದ ಸ್ಥಿತಿಗಿಂತ. ನಿನ್ನ ಮನದಲ್ಲಿ ಒಂದು ನೆನಪಾಗಿ ಇದ್ದು ಬಿಡುವೆ" ಎಂದು ಬಿಟ್ಟಳು. !

"ಸರಿ ನಿನ್ನಿಷ್ಟ ಹುಡುಗಿ" ಎಂದು ಅವಳ ಪಾದವನ್ನೊಮ್ಮೆ ನೋಡಿ ಮುಖವನ್ನು ದಿಟ್ಟಿಸಿದ. ಅವನ ಮನವನ್ನು ಅರಿತವಳಂತೆ ಕಾಲಿನ ಗೆಜ್ಜೆಯೊಂದನ್ನು ಬಿಚ್ಚಿ ಅವನ ಕೈಗಿತ್ತಿದ್ದಳು. ಅವನ ಕಣ್ಣಂಚಿನಿಂದ ಜಾರಿದ ಹನಿಯೊಂದು ಅವನ ಕೈಯಲ್ಲಿದ್ದ ಗೆಜ್ಜೆಯ ಮೇಲೆ ಬಿದ್ದಿತ್ತು. ಅದೇ ಕೊನೆಯ ಬಾರಿ ಎಂಬಂತೆ ಅವಳ ಮುಖ ನೋಡಿ,ನುಸುನಕ್ಕು ಹೊರಟು ಬಿಟ್ಟಿದ್ದ ನೀಲಿ ಕಂಗಳ ಹುಡುಗ. .! ಅವನ ಜೀಬಿನಲ್ಲಿ ಬೆಚ್ಚಗೆ ಕುಳಿತ 'ಒಂಟಿ ಗೆಜ್ಜೆ' ಘಲ್ ಘಲ್ ಎಂದು ಸಣ್ಣಗೆ ಗುನುಗುತ್ತಿತ್ತು. !

ಆ ದಿನ ಅವನು ಡೈರಿಯಲ್ಲಿ ಬರೆದದ್ದಿಷ್ಟು:"ಬಣ್ಣಗಳ ದೇಶದಿಂದ ಮರಳಿದ್ದೇನೆ ಹೊಸ ಹುಡುಗನಾಗಿ.ಒಂದಿಷ್ಟು ನೆನಪು, ಒಡೆದ ಹೃದಯ ಮತ್ತು ಒಂಟಿ ಕಾಲ್ಗೆಜ್ಜೆಗಳೊಂದಿಗೆ."

ಹಾಗೆ ಹಲವು ವಸಂತ-ಶಿಶಿರಗಳು ಉರುಳಿದ್ದವು. ಅವನ ಬದುಕಿನಲ್ಲೂ ಬದಲಾವಣೆಯಾಗಿತ್ತು. ಆಯುರ್ವೇದದ ಪ್ರಸಿದ್ಧ ಯುವ ವೈದ್ಯನಾಗಿದ್ದ ನೀಲಿ ಕಂಗಳ ಹುಡುಗ. ಅವನಲ್ಲಿ ಇನ್ನೂ ಭಾರತೀಯ ಸಂಸ್ಕೃತಿ ಪ್ರತಿಫಲಿಸುತ್ತಿತ್ತು. ಹೊಂಗೂದಲಿನ ಹುಡುಗಿಯೊಬ್ಬಳ ಆಗಮನವಾಗಿತ್ತು ಅವನ ಬದುಕಿನಲ್ಲಿ. ಮದುವೆಯಾಗಿ ಒಂದು ಮಗುವೂ ಆಗಿತ್ತು. ಆದರೂ ಒಂಟಿ ಗೆಜ್ಜೆಯ ನಾದ ಅವನ ಕಿವಿಯಲ್ಲಿ ಅನುರಣಿಸುತ್ತಿತ್ತು .

ಗಡಿಬಿಡಿಯ ಜೀವನದಲ್ಲಿ ಕಳೆದುಹೋದಂತಿದ್ದ ಅವನಿಗೆ, ಮತ್ತೊಮ್ಮೆ ಭಾರತಕ್ಕೆ ಬರಬೇಕೆಂದೆನಿಸಿತ್ತು. ಕುಟುಂಬದೊಂದಿಗೆ ಹೊರಟು ಬಿಟ್ಟಿದ್ದ. ಒಂಟಿ ಗೆಜ್ಜೆಯನ್ನು ಎತ್ತಿ ಜೇಬಿನೊಳಗೆ ಇಟ್ಟಿದ್ದ. ಇಂದು ಮತ್ತದೇ ಶಿವಾಲಯದ ಮುಂದೆ ದಶಕವೊಂದರ ನಂತರ ನಿಂತಿದ್ದವನಿಗೆ ಎಲ್ಲ ನೆನಪಾಯಿತು. ಒಮ್ಮೆ ಜೀಬಲ್ಲಿದ್ದ 'ಒಂಟಿ ಗೆಜ್ಜೆ'ಯನ್ನೊಮ್ಮೆ ಮುಟ್ಟಿ ನೋಡಿದ,ನಕ್ಕು ಬಿಟ್ಟ.

ಅಷ್ಟರಲ್ಲಿ ಹಿಂದಿನಿಂದ ಮತ್ತೆ ತೇಲಿ ಬಂದಿತ್ತು ಘಲ್ ಘಲ್ ನಾದ. ಒಮ್ಮೆ ಹೃದಯ ಸ್ತಭ್ದವಾದ ಅನುಭವ. ನಿಧಾನಕ್ಕೆ ಹಿಂತಿರುಗಿ ನೋಡಿದ. ಅವನ ಐದರ ಹರೆಯದ ಹುಡುಗ ಓಡೋಡಿ ಬರುತ್ತಿದ್ದ . "ಆ ದಡದಂಚಿನ ಪುಟ್ಟ ಹುಡುಗಿಯ ಕಾಲಲ್ಲಿತ್ತು.ಕೇಳಿದೆ ಒಂದನ್ನು ಕೊಟ್ಟು ಬಿಟ್ಟಳು ನನಗೆ. ತುಂಬಾ ಚೆಂದಕಿದೆ. ನಿನ್ನ ಜೇಬಲ್ಲಿ ಇಟ್ಟುಬಿಡು." ಎಂದು ಪುಟ್ಟ ಗೆಜ್ಜೆಯೊಂದನು ಕೊಟ್ಟ. ನೀಲಿ ಕಂಗಳ ವಿದೆಶೀಯನಿಗೆ ಇದು ಕನಸೋ, ನನಸೋ, ಕಾಕತಾಳೀಯವೋ ತಿಳಿಯಲಿಲ್ಲ. ಸುಮ್ಮನೆ ನೋಡಿ ಜೇಬಿನಲ್ಲಿ ಇಟ್ಟ.



ಬಣ್ಣಗಳ ದೇಶ, ಬದುಕಿನ ಹೊಸತನವನ್ನು ಮತ್ತೊಮ್ಮೆ ತಂದು ಕೊಟ್ಟಿತ್ತವನಿಗೆ. ಹೊಸ ಜೀವನೋತ್ಸಾಹದ ಖುಷಿಯಲ್ಲಿ ಸಮುದ್ರದ ದಂಡೆಯಲಿ ಕುಟುಂಬದೊಂದಿಗೆ ನಡೆಯುತ್ತಿದ್ದ ನೀಲಿ ಕಣ್ಣಿನವ . ಜೇಬಿನೊಳಗಿನ ಒಂಟಿ ಗೆಜ್ಜೆಯೂ ಜೊತೆ ಸಿಕ್ಕ ಸಂಭ್ರಮದಲ್ಲಿತ್ತು. ಘಲ್ ಘಲ್.......!

Wednesday, November 3, 2010

ಅರಣ್ಯ ಮತ್ತು ನದಿ

ಬಹಳ ದಿನಗಳಿಂದ ನನ್ನ ಮನದಲ್ಲಿ ಕುಳಿತಿದ್ದ ಅನುವಾದಿತ ಕವನವಿದು. Jalal al-Din Rumi ಯವರು ಬರೆದ ಇಂಗ್ಲಿಷ್ ಕವನ 'Forest and River' ಬಹಳ ದಿನದಿಂದ ನನ್ನ ಮನದಲ್ಲಿ ಅಚ್ಚೊತ್ತಿತ್ತು.ರುಮಿ ಓರ್ವ ಪರ್ಷಿಯನ್ ಕವಿ ಹಾಗೂ ಸೂಫಿ ಸಂತ. ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಅವರು ಬರೆದ ಕವನಗಳು ಹಲವು. ಅದೆಲ್ಲೋ ಅಚಾನಕ್ ಆಗಿ ಸಿಕ್ಕ ಈ ಕವನ ಅದೇನೋ ಮೋಡಿ ಮಾಡಿ ಬಿಟ್ಟಿತ್ತು ನನ್ನ ಮೇಲೆ..! ಕವನದ ಭಾವ ನನ್ನನ್ನು ಕಾಡುತ್ತಿತ್ತು. ಅಲ್ಲಮ ಪ್ರಭುಗಳ ವಚನಗಳ ನೆನಪಿಸುವ ಸಾಲುಗಳು, ಪ್ರಕೃತಿಯ ಸುಂದರ ವರ್ಣನೆಯೊಂದಿಗೆ ಮನುಸ್ಯನ ಮನೋ-ಸಹಜ ನಡವಳಿಕೆ ಥಳುಕು ಹಾಕಿ ಕೊಂಡಿರುವುದು ವಿಶೇಷ. ಮೂಲ ಕವಿಗೆ ನಮಿಸುತ್ತಾ, ಅನುವಾದಿಸಿದ್ದೇನೆ. ಓದಿ ಹೇಗಿದೆ ಹೇಳಿ :





ಅರಣ್ಯ ಭೋರ್ಗರೆವ ನದಿಗೆ ಹೇಳಿತು
'ನಾನು ನೀನಾಗಬೇಕಿತ್ತು' ಎಂದು.
"ಸದಾ ಸಾಗುತ ರಮಣೀಯ ದೃಶ್ಯ ಸವಿಯುತ
ಕೊನೆಗೆ ಅಖಂಡ ಜಲರಾಶಿಯನು ಸೇರುವ
ನಿನ್ನ ಪಯಣ ಅದೆಷ್ಟು ಚೆನ್ನ .!
ಲವಲವಿಕೆ, ಉತ್ಸಾಹ ಜೀವ ಚೈತನ್ಯ,
ನಿರಂತರ ಹರಿಯುತ
ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಕಂಗೊಳಿಸುವ ನೀನು ಧನ್ಯ ..!
ನನ್ನ ನೋಡು ನೀನು ಒಮ್ಮೆ
ಭೂಮಿಯ ಬಂಧನದಲ್ಲಿ ಸಿಲುಕಿದ
ಮೌನದಲ್ಲೇ ಮುದಿಯಾಗುವ
ಮೌನದಲ್ಲೇ ಒಣಗಿ ನಶಿಸುವ
ಸತ್ತ ನಂತರ ಬೊಗಸೆ ಬೂದಿಯ ಹೊರತು
ಇನ್ನೇನೂ ಉಳಿಯದ ಬರಡು ನಾನು ..!"

ನದಿಯು ಉತ್ತರಿಸಿತು ಅರಣ್ಯದ ಪ್ರಶ್ನೆಗೆ,
" ಅರ್ಧ ಮಲಗಿ, ಅರ್ಧ ಎಚ್ಚೆತ್ತು
ಏಕಾಂತವ ಅನುಭವಿಸುವ ಅರಣ್ಯವೇ
ನನಗೆ ನಿನ್ನಂತೆ ಇರಬೇಕು ಎಂಬ ಆಸೆ,
ಬೆಳದಿಂಗಳ ರಾತ್ರಿಯಲಿ ಕಂಗೊಳಿಸುವ,
ವಸಂತದ ಚೆಲುವನ್ನು ಪ್ರತಿಫಲಿಸುವ
ಪ್ರೇಮಿಗಳಿಗೆ ನೆರಳಿನ ತಾಣವನ್ನು ನೀಡುವ
ನೀನು ಧನ್ಯ ..!
ಪ್ರತಿ ವರುಷ ಹೊಸ ಚಿಗುರಿನ ಹೊಸತನ,
ನಿನ್ನ ಬದುಕಿನ ಪರಿ ಅನನ್ಯ.
ಜೀವನವೆಲ್ಲ ಬರೀ ಓಟದಲ್ಲೇ ಕಳೆವ ನಾನೆಲ್ಲಿ ?
ನಾನು ನನ್ನಿಂದಲೇ ದೂರ ಓಡುತ್ತೇನೆ..!
ಗೊಂದಲದ ಭಾವದೊಂದಿಗೆ ಸಾಗುತ್ತದೆ ನನ್ನ ಓಟ ..!
ಕೊನೆಗೆ ನಾನು ಪಡೆಯುವುದಾದರೂ ಏನನ್ನು ?
ಒಂದು ಕ್ಷಣವೂ ಬಿಡುವು -ಶಾಂತಿಯಿಲ್ಲದ
ಒಂದು ನಿಷ್ಪ್ರಯೋಜಕ ಓಟದ ಹೊರತು ?"

ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ
'ನದಿ ಮತ್ತು ಅರಣ್ಯ'....!